Latest News

ಕರ್ನಾಟಕದ ಸ್ವಾಭಿಮಾನಿಗಳೇ ರಾಜಕೀಯ ಬಿಟ್ಟು ಕನ್ನಡಿಗರ ನೆಚ್ಚಿನ ‘ನಂದಿನಿ’ಯನ್ನು ಸಂರಕ್ಷಿಸಿ

Budkulo Media Network

Posted on : January 2, 2023 at 9:36 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಬರಹ: ಡೊನಾಲ್ಡ್ ಪಿರೇರಾ, ಸಂಪಾದಕರು, ಬುಡ್ಕುಲೊ ಇ-ಪತ್ರಿಕೆ www.Budkulo.com

ಓದುಗರಿಗೆ ಸೂಚನೆ: ಇದು ರಾಜಕೀಯ ಲೇಖನವಲ್ಲ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಬಗೆಗಿನ ಕಳಕಳಿಯ ಕುರಿತಾದ ವಸ್ತುನಿಷ್ಠ ಅಭಿಪ್ರಾಯ ಮತ್ತು ನಿಷ್ಪಕ್ಷಪಾತ ಆಗ್ರಹ. ಯಾವುದೇ ಪೂರ್ವಾಗ್ರಹವಿಲ್ಲದೇ ಇದನ್ನು ಓದಬೇಕೆಂದು ವಿನಂತಿ. -ಲೇಖಕ

‘ಕನ್ನಡಿಗರು ಸ್ವಾಭಿಮಾನಶೂನ್ಯರು’ ಎಂಬುದು ಹಳೆಯ ದೂಷಣೆ! ಇದು ಸತ್ಯವೆನ್ನುವುದಕ್ಕೆ ನಮ್ಮಲ್ಲಿ ಹಲವಾರು ನಿದರ್ಶನಗಳಿವೆ. ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಹೆಚ್ಚು ಕಳವಳಕಾರಿ ಎನ್ನುವುದು ಆಗಿಂದಾಗ್ಗೆ ರೂಪಿತವಾಗಿದೆ. ಇದು ನಿಜಕ್ಕೂ ಖೇದಕರ.

ಕರ್ನಾಟಕದ ಹಾಲು ಒಕ್ಕೂಟ ಕೆ.ಎಂ.ಎಫ್. ಮತ್ತು ಗುಜರಾತಿನ ಅಮೂಲ್ ನಡುವಿನ ಒಪ್ಪಂದ ಅಥವಾ ವಿಲೀನದ ವಿಚಾರ ಈ ನಿಟ್ಟಿನಲ್ಲಿ ಹೆಚ್ಚು ಆತಂಕಕಾರಿ ಮತ್ತು ಆಘಾತಕಾರಿಯಾಗಿದೆ. ಕೇಂದ್ರ ಸಚಿವ ಮತ್ತು ಬಿಜೆಪಿಯ ಬಾಸ್‍ಗಳಲ್ಲಿ ಒಬ್ಬರಾದ ಅಮಿತ್ ಶಾ ಮೊನ್ನೆಯಷ್ಟೇ ಈ ಬಗ್ಗೆ ಪ್ರಸ್ತಾವಿಸಿ ಗಮನ ಸೆಳೆದಿದ್ದಾರೆ. ಸಹಜವಾಗಿ ಅದಕ್ಕೆ ವಿರುದ್ಧವಾಗಿ ಧ್ವನಿಯೆದ್ದಿದೆ ಮತ್ತು ಪರವಾಗಿಯೂ ಸ್ಪಷ್ಟನೆಗಳು ಬಂದಿವೆ.

ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯವು ಚುನಾವಣೆಯ ಹೊಸ್ತಿಲಲ್ಲಿರುವುದರಿಂದ ರಾಜಕೀಯ ಲಾಭಕ್ಕಾಗಿ ಆಯಾ ಪಕ್ಷಗಳು ಈ ವಿವಾದವನ್ನು ಬಳಸುವುದು ಸ್ವಾಭಾವಿಕ. ವಿರೋಧಿಗಳಿಗೆ ಇದೊಂದು ಪ್ರಮುಖ ಅಸ್ತ್ರವಾಗಿ ಲಭ್ಯವಾಗಿದ್ದರೆ, ಪ್ರತಿಕೂಲ ಪರಿಣಾಮದ ಅರಿವಿರುವುದರಿಂದ ಆಡಳಿತ ಪಕ್ಷ ಬಿಜೆಪಿ ಇದನ್ನು ಜನರ ಆಕ್ರೋಶಕ್ಕೆಡೆಯಾಗದಂತೆ ನೋಡಿಕೊಳ್ಳುವತ್ತ ಗಮನ ನೀಡಿದೆ. ಸದ್ಯದ ಸಂದರ್ಭದಲ್ಲಿ ಅಮಿತ್ ಶಾ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಗೆ ಆಸ್ಪದ ಕೊಟ್ಟಿರುವುದಂತೂ ನಿಜ.

ಆದರೆ ಇದು ಕೇವಲ ಹೇಳಿಕೆ ನೀಡಿ ತೇಪೆ ಹಚ್ಚುವುದರಿಂದ ಮುಕ್ತಾಯವಾಗುವ ವಿಷಯವೇ? ಖಂಡಿತಾ ಅಲ್ಲ. ಇದು ಮತ್ತೊಂದು ಅಪಾಯಕಾರಿ ಬೆಳವಣಿಗೆಯತ್ತ ದಾಪುಗಾಲು ಎಂಬುದರಲ್ಲಿ ಸಂಶಯವಿಲ್ಲ. ಅಮಿತ್ ಶಾ ಅವರು ಕೆ.ಎಂ.ಎಫ್. ಅನ್ನು ಅಮೂಲ್ ಜೊತೆ ವಿಲೀನಗೊಳಿಸುವ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡಿಲ್ಲ. ಅದನ್ನೇ ಬಿಜೆಪಿ ನಾಯಕರು ಪ್ರಧಾನವಾಗಿ ಸಮರ್ಥಿಸುತ್ತಿದ್ದಾರೆ. ಆದರೆ ಕೇಂದ್ರ ಸಹಕಾರಿ ಸಚಿವರು ಈ ಬಗ್ಗೆ ಮಾತನಾಡಿರುವುದು ಇದೇ ಮೊದಲ ಬಾರಿಯೇನಲ್ಲವಲ್ಲ?

ಸಹಕಾರ ಸಂಸ್ಥೆಗಳು ರಾಜ್ಯಗಳ ಆಡಳಿತಕ್ಕೊಳಪಟ್ಟಿವೆ. ಮೋದಿ ಸರಕಾರ ಇತ್ತೀಚೆಗಷ್ಟೇ ಸಹಕಾರ ಇಲಾಖೆಯನ್ನು ಸ್ಥಾಪಿಸಿ ಅದನ್ನು ಅಮಿತ್ ಶಾರ ಸುಪರ್ದಿಗೊಪ್ಪಿಸಿದೆ. ಅಮಿತ್ ಶಾ ಕೊಡುವ ಹೇಳಿಕೆಗಳಿಗೆ ಒಂದು ಇರಾದೆಯಂತೂ ಖಂಡಿತಾ ಇರುತ್ತದೆ. ಜೊತೆಗೆ, ಹಲವು ಗುರಿಗಳೂ ಇದ್ದೇ ಇರುತ್ತವೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದಲ್ಲಿ ಅವರ ಪ್ರಭಾವ ತಿಳಿದಿರುವವರಿಗೆ, ಮತ್ತು ಇಲ್ಲಿಯವರೆಗಿನ ಹಿನ್ನೆಲೆ ನೆನಪಿದ್ದರೆ, ಅವರು ಹೇಳುವುದನ್ನು ಖಂಡಿತಾ ಮಾಡಿಯೇ ಮಾಡುತ್ತಾರೆ ಎಂಬುದರ ಅರಿವಿರಲೇಬೇಕು.

ಅದರಿಂದಾಗಿಯೇ ‘ನಂದಿನಿ’ಯ ಭವಿಷ್ಯದ ಬಗ್ಗೆ ನಾವು ಆಲೋಚಿಸಬೇಕಿರುವುದು. ನಂದಿನಿ ಇವತ್ತು ರಾಜ್ಯ ಮಾತ್ರವಲ್ಲ ದೇಶ ವಿದೇಶಗಳಲ್ಲೂ ಹೆಸರುವಾಸಿಯಾದ ಬ್ರಾಂಡ್. ಅದು ನಾಡಿನ ರೈತರ ಹೆಮ್ಮೆಯ ಲಾಂಛನವೆಂದರೂ ಸರಿಯೇ.

ಭಾರತದಲ್ಲಿ ಸಹಕಾರ ತತ್ವದಡಿ ರೂಪಿತವಾದ ಒಂದು ಮಹತ್ವದ ಒಕ್ಕೂಟ ಕೆ.ಎಂ.ಎಫ್. ಅದರ ಉತ್ಪನ್ನವಾದ ನಂದಿನಿ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಕ್ಕೆ ಕಿಂಚಿತ್ತೂ ಕಡಿಮೆಯಿಲ್ಲದಂತೆ ಜನಾನುರಾಗಿಯಾಗಿದೆ. ಎಂಎನ್‍ಸಿಗಳ ಉತ್ಪನ್ನಕ್ಕಿಂತಲೂ ನಂದಿನಿಯ ಉತ್ಪನ್ನಗಳು ಹೆಚ್ಚು ನಂಬಲರ್ಹ, ಶುದ್ಧ ಮತ್ತು ಆರೋಗ್ಯಕರವಾಗಿವೆ. ಕೇಂದ್ರ ಗೃಹ ಸಚಿವರೂ ಗುಜರಾತಿನವರೂ ಆಗಿರುವ ಅಮಿಶಾ ಕಣ್ಣು ಈ ನಂದಿನಿ ಮೇಲೆ ಬಿದ್ದಿರುವುದು ಇದೇ ಮೊದಲಿಗೆ ಅಲ್ಲ. ಅದರರ್ಥ ಅವರು ಒಂದು ನಿರ್ಧಾರಕ್ಕೆ ಬಂದೇ ಆಗಾಗ ಇಂತಹ ಹೇಳಿಕೆ ನೀಡುತ್ತಿದ್ದಾರೆಂಬುದನ್ನು ಅರ್ಥೈಸಿಕೊಳ್ಳಬೇಕಿದೆ.

ಇದೇ ಕೇಂದ್ರ ಸರಕಾರ ಈ ಹಿಂದೆ ಏನೇನೆಲ್ಲಾ ಮಾಡಿದೆಯೆಂಬುದನ್ನು ಕನ್ನಡಿಗರು ಮರೆಯುವಂತಿಲ್ಲ. ಪಕ್ಷ ಯಾವುದೇ ಇರಲಿ ಕೇಂದ್ರದ ಮುಂದೆ ಕನ್ನಡ ನಾಡನ್ನು ಪ್ರತಿನಿಧಿಸುವ ರಾಜಕಾರಣಿಗಳು ಸದಾ ತಲೆ ಬಗ್ಗಿಸಿಕೊಂಡೇ ಬಂದಿದ್ದಾರೆ. ಅಪರೂಪಕ್ಕೆಂಬಂತೆ ಕೆಲವೇ ಕೆಲ ನಾಯಕರು ದೃಢವಾಗಿ ನಿಂತಿದ್ದರು. ಅಂತಹ ಇಂದಿರಾ ಗಾಂಧಿಯವರಿಗೇ ಸೆಡ್ಡು ಹೊಡೆದ ಅನೇಕ ಗಣ್ಯ ನಾಯಕರು ಕರ್ನಾಟಕದಲ್ಲಿ ಇದ್ದರು. ಆಕೆಯ ಬೆಂಬಲಿಗರಾಗಿದ್ದ ದೇವರಾಜ ಅರಸರೇ ಕೊನೆಗೆ ಇಂದಿರಾರನ್ನು ವಿರೋಧಿಸಿ ರಾಜಕಾರಣ ಮಾಡಿದ್ದಾರೆ. ಆದರೆ ಕಳೆದ ಕೆಲ ದಶಕಗಳಲ್ಲಿ ಕರ್ನಾಟಕದ ಬಹುತೇಕ ನಾಯಕರು ಕೇಂದ್ರದ ಅಥವಾ ತಮ್ಮ ಪಕ್ಷದ ಹೈಕಮಾಂಡ್ ಮುಂದೆ ವಿಧೇಯ ವಿದ್ಯಾರ್ಥಿಗಳಂತೆ ತಲೆ ಬಗ್ಗಿಸಿದ್ದೇ ಹೆಚ್ಚು. ಈಗಿನ ಅನೇಕರು ಗುಲಾಮರಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರಿಂದ ರಾಜ್ಯಕ್ಕೆ ನಷ್ಟವೇ ಹೆಚ್ಚು.

ಕೇಂದ್ರದಲ್ಲಿ ಬಿಜೆಪಿ ಪ್ರಬಲವಾದ ನಂತರ ಕರ್ನಾಟಕದ ಬಿಜೆಪಿ ಸ್ವಂತಿಕೆ ಕಳೆದುಕೊಂಡು ಕೇವಲ ಕೇಂದ್ರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಾ ಬಂದಿದೆ. ಪ್ರಬಲ ವರ್ಚಸ್ಸು ಹೊಂದಿದ್ದ ಯಡಿಯೂರಪ್ಪನವರೇ ಕೇಂದ್ರ ನಾಯಕರ ಮುಂದೆ ಮಂಡಿಯೂರಬೇಕಾಯಿತು. ಇಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರಂತೂ ಬಿಜೆಪಿ ಮತ್ತು ಆರೆಸ್ಸೆಸ್ಸಿನ ರಬ್ಬರ್ ಸ್ಟ್ಯಾಂಪ್ ಎಂಬುದನ್ನು ಜನಸಾಮಾನ್ಯರೂ ಬಲ್ಲರು. ಮೋದಿ ಸರಕಾರ ಬಂದ ಮೇಲೆ ಕರ್ನಾಟಕದ ಒಂದೊಂದೇ ಪ್ರಮುಖ ಸಂಸ್ಥೆಗಳನ್ನು ಆಪೋಷನ ತೆಗೆದುಕೊಂಡಾಗ ಕರ್ನಾಟಕದಲ್ಲಿ ಕಂಡು ಬಂದ ಪ್ರತಿರೋಧ ತೀರಾ ಕ್ಷೀಣ. ಬಿಜೆಪಿ ನಾಯಕರು ಅದನ್ನು ವಿರೋಧಿಸುವುದು ಬಿಡಿ, ಸಮರ್ಥಿಸಿದ್ದೇ ಹೆಚ್ಚು!

ಅದನ್ನು ನೆನಪಿಸಿಕೊಂಡರೆ, ಕೆಎಂಎಫ್ ಇಂದಲ್ಲಾ ನಾಳೆ ಗುಜರಾತಿನ ಅಮೂಲ್ ಕಂಪೆನಿಗೆ ಎರವಾಗುವ ಅಪಾಯ ತಪ್ಪಿದ್ದಲ್ಲ ಎಂಬ ಭೀತಿ ಮೂಡುತ್ತದೆ. ಕೇಂದ್ರದವರು ಏನೇ ಮಾಡಿದರೂ, ಹೇಳಿದರೂ ಅದಕ್ಕೆದುರಾಗಿ ಬಿಜೆಪಿಯ ನಾಯಕರು ಸದ್ದೇ ಹೊರಡಿಸದಷ್ಟು ಅಸಹಾಯಕರೂ ನಿಷ್ಕ್ರಿಯರೂ ನಿರ್ಲಜ್ಜರೂ ಎಂಬುದು ಬೆಳಕಿನಷ್ಟೇ ಸತ್ಯ. ಕರುನಾಡಿನಲ್ಲಿ ರಣಕೇಕೆ ಹಾಕುವ ಕೆಲ ಜನಪ್ರಿಯ ಮುಖಂಡರೂ ಕೇಂದ್ರದವರ ಮುಂದೆ ಬಾಲ ಮಡಚುವ ಪರಿಸ್ಥಿತಿ ಇದೆಯೆಂದಾದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು? ಜನಸಾಮಾನ್ಯರು ಏನು ಮಾಡಿಯಾರು?

ಇದೇ ಅಮಿತ್ ಶಾ ಮೂಗಿನಡಿಯಲ್ಲಿನ ಪ್ರಸ್ತುತ ಮೋದಿ ಸರಕಾರದಿಂದ ಕನ್ನಡ ಮತ್ತು ಕರ್ನಾಟಕಕ್ಕೆ ಆದ ಅನ್ಯಾಯಗಳು ಒಂದೇ ಎರಡೇ? ಕನ್ನಡಿಗರ ಆತ್ಮಾಭಿಮಾನದ ಸಂಕೇತವಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ಅದನ್ನು ಉಳಿಸುವಲ್ಲಿ ಬಿಜೆಪಿ ಸೇರಿದಂತೆ ಕರ್ನಾಟಕದ ರಾಜಕಾರಣಿಗಳ ಅಥವಾ ಇತರರ ಕೊಡುಗೆಯೇನು? ಕನಿಷ್ಠ ಆ ಬಗ್ಗೆ ಸಾಂಕೇತಿಕ ಹೋರಾಟವನ್ನಾದರೂ ಮಾಡಲಾಯಿತೇ? ಉತ್ತರ ತೀರಾ ಚಿಂತಾಜನಕ!

ಇದನ್ನು ಪಕ್ಷಾತೀತವಾಗಿ ನೋಡಬೇಕಿದೆ. ರಾಜ್ಯದ ಒಳಿತಿಗಾಗಿ ಪರಾಮರ್ಶಿಸಬೇಕಾಗಿದೆ.

ಅದರ ನಂತರ ಕರ್ನಾಟಕಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಮ್ಮೆಯ ಸ್ಥಾನ ನೀಡಿದ್ದ ರಾಷ್ಟ್ರೀಕೃತ ಬ್ಯಾಂಕ್‍ಗಳಾಗಿದ್ದ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕಾರ್ಪೋರೇಶನ್ ಬ್ಯಾಂಕ್‍ಗಳನ್ನು ಬೇರೆ ಬ್ಯಾಂಕ್‍ಗಳೊಂದಿಗೆ ವಿಲೀನಗೊಳಿಸಲಾಯಿತು. ವೈಭವದಿಂದ ಕಂಗೊಳಿಸುತ್ತಿದ್ದ, ಲಾಭ ಗಳಿಸುತ್ತಿದ್ದ ಬ್ಯಾಂಕ್‍ಗಳನ್ನೂ ಕಳೆದುಕೊಳ್ಳುವುದೆಂದರೇನು?! ಅದಕ್ಕೆಷ್ಟು ವಿರೋಧ ವ್ಯಕ್ತವಾಯಿತು? ಇದೀಗ ಕೇವಲ ಕೆನರಾ ಬ್ಯಾಂಕ್ ಒಂದೇ ಉಳಿದುಕೊಂಡಿದೆ. ದೇಶದ ಹೆಮ್ಮೆಯ ಸಂಕೇತಗಳಾಗಿದ್ದ ಎಚ್.ಎಂ.ಟಿ. ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಚರಿತ್ರೆಯ ಪುಟ ಸೇರಿವೆ.

ಇಂತಹ ಅಮೂಲ್ಯ ಸಂಸ್ಥೆಗಳನ್ನು ಉಳಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತದರ ಮುಖಂಡರು ಎಷ್ಟು ನಿಯತ್ತು ತೋರಿಸಿದ್ದಾರೆ? ಪ್ರಾಮಾಣಿಕವಾಗಿ ಹೋರಾಡಿದ್ದಾರೆ? ಊಹುಂ… ಕೇವಲ ರಾಜಕೀಯ ಲಾಭದ ಹೇಳಿಕೆಗಳನ್ನು ನೀಡಿದ್ದೇ ಅವರ ಮಹತ್ವದ ಕೊಡುಗೆ. ಅದು ಬಿಟ್ಟರೆ ಪ್ರಾಮಾಣಿಕ ಅನಿಸಿಕೆ ವ್ಯಕ್ತಪಡಿಸುವಷ್ಟೂ ಧೈರ್ಯ ನಮ್ಮ ನಾಡಿನ ರಾಜಕಾರಣಿಗಳಲ್ಲಿ ಇಲ್ಲವಲ್ಲ!

ಇದನ್ನೆಲ್ಲಾ ಗಮನಿಸಿದಾಗ ನಾಳೆ ‘ನಂದಿನಿ’ಯೂ ಇನ್ನಿಲ್ಲವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅದೇ, ಇಂತಹ ವಿಚಾರಗಳು ಪಕ್ಕದ ಕೇರಳ ಮತ್ತು ತಮಿಳುನಾಡಿನಲ್ಲಿ ಆಗಿದ್ದರೆ ಅಲ್ಲಿನ ಎಲ್ಲಾ ಪಕ್ಷಗಳು ಮತ್ತು ಸಾರ್ವಜನಿಕರು ಒಂದಾಗಿ ಪ್ರತಿಭಟಿಸುತ್ತಿದ್ದರು. ಅವರ ಒಗ್ಗಟ್ಟಿಗೆ ಕೇಂದ್ರದವರು ತಲೆ ಬಾಗಲೇಬೇಕಾದ ಪರಿಸ್ಥಿತಿ ಇದೆ. ಮಹಾರಾಷ್ಟ್ರದ ರಾಜಕಾರಣಿಗಳು ಹಲವು ವಿಚಾರಗಳನ್ನು ಮುಂದಿಟ್ಟು ಕನ್ನಡಿಗರನ್ನು ಕೆಣಕುವ, ಬಾಧಿಸುವ ಹಲವು ಕ್ರಮಗಳನ್ನು ಕೈಗೊಂಡಾಗಲೂ ನಮ್ಮಲ್ಲಿ ಒಗ್ಗಟ್ಟು ಮೂಡಿದ್ದೇ ಇಲ್ಲ. ಅಷ್ಟೊಂದು ಪುಟ್ಟ ರಾಜ್ಯ ಗೋವಾದ ಮುಂದೆಯೂ ನಮ್ಮವರು ಮಂಡಿಯೂರುತ್ತಾರೆಂದರೆ, ಅದಕ್ಕಿಂತ ನಾಚಿಕೆಗೇಡು ಬೇರೇನಿದೆ?

ಕೆಲವೇ ಕೆಲವು ಉದಾಹರಣೆ ನೋಡಿ. ಮಂಗಳೂರಿನ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ದರ್ಜೆಗೇರಬೇಕಾದರೆ ಹಲವು ದಶಕಗಳೇ ಬೇಕಾದವು. ಅದರ ನಂತರ ಕೆಲವೇ ವರ್ಷಗಳಲ್ಲಿ ಕೇರಳದ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಸ್ಥಾಪನೆಯಾಗಿ ಮಂಗಳೂರಿನ ವ್ಯವಹಾರಕ್ಕೆ ಏಟು ಕೊಡುತ್ತಿದೆ! ರಸ್ತೆ ಯೋಜನೆಗಳಾಗಲೀ, ಬಂದರು ಅಥವಾ ರೈಲ್ವೇ ಯೋಜನೆಗಳಾಗಲೀ ಕರ್ನಾಟಕದಲ್ಲಿ ಆಮೆ ವೇಗದಿಂದ, ಕುಂಟುತ್ತಾ ಸಾಗುತ್ತವೆ. ಇದೆಲ್ಲಾ ನಮ್ಮ ನಾಡಿನ ನಾಯಕರ ಸಾಧನೆಗಳು!

ವಿಲೀನ ಬೇಡ – ಜನ ಸಾಮಾನ್ಯರ ಅಭಿಪ್ರಾಯ

“ಅಮೂಲ್ ಜೊತೆ ಕೆಎಂಎಫ್-ನಂದಿನಿಯ ವಿಲೀನ ಪ್ರಸ್ತಾಪಕ್ಕೆ ಏನಂತೀರಿ?” ಎಂದು ಕೆಲವರನ್ನು ಕೇಳಿದಾಗ ಅವರು ನೀಡಿದ ಅಭಿಪ್ರಾಯ ಇಂತಿದೆ:

ಮಂಗಳೂರಿನ ಜನಪರ ಹೋರಾಟಗಾರ ಎಂ.ಜಿ. ಹೆಗಡೆಯವರು, “ಈ ರೀತಿ ವಿಲೀನ ಮಾಡುವುದರಿಂದ ಕರ್ನಾಟಕದ ಜನಸಾಮಾನ್ಯರ ಸಂಪತ್ತಾಗಿರುವ ಮತ್ತು ಉದ್ಯಮವಾಗಿರುವ ಕೆಎಂಎಫ್ ಗುಜರಾತ್ ಉದ್ಯಮಿಗಳ ಪಾಲಾಗುತ್ತದೆ. ಸಹಕಾರಿ ಚಳವಳಿಯೊಂದರ ಅಂತ್ಯವಾಗುತ್ತದೆ. ಹಾಲು ಮತ್ತಿತರ ಉತ್ಪನ್ನಗಳ ಬೆಲೆ ಗಗನಕ್ಕೆ ಏರುತ್ತದೆ. ಅದು ಶೋಷಣೆಗೆ ದಾರಿಯಾಗುತ್ತದೆ” ಎನ್ನುತ್ತಾರೆ.

“ಇದು ಕೇಂದ್ರ ಸರ್ಕಾರದ ಉದ್ಧಟತನ ಮತ್ತು ಸರ್ವಾಧಿಕಾರಿ ಧೋರಣೆ. ಇಷ್ಟಕ್ಕೂ ಲಾಭದಲ್ಲಿರುವ ಕೆಎಂಎಫ್ ಅನ್ನು ವಿಲೀನಗೊಳಿಸಲು ಕಾರಣ ಏನು, ಅದರಿಂದ ಕರ್ನಾಟಕದ ಜನರಿಗೆ ಲಾಭವೇನು ಎಂದೂ ಮೋದಿ ಸರ್ಕಾರ ಹೇಳಬೇಕು. ಇದು ಅಮಿತ್ ಶಾ ತಮ್ಮ ಊರಿನ ವ್ಯವಹಾರಸ್ಥರ ನಡುವೆ ಒಪ್ಪಂದ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಸಂಚಿನ ಒಂದು ಭಾಗ” ಎಂಬುದಾಗಿ ಹೆಗಡೆಯವರು ಆರೋಪಿಸುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ನಿತ್ಯ ಚೇತನ್, “ಸಹಕಾರಿ ಕ್ಷೇತ್ರದಲ್ಲಿ ವಿಲೀನ ಪ್ರಕ್ರಿಯೆ ಎನ್ನುವುದು ತಪ್ಪು ಮಾತ್ರವಲ್ಲ, ಸಂವಿಧಾನ ವಿರೋಧಿ ನಡೆ. ಸಂವಿಧಾನದ ಮೂಲ ತತ್ವಗಳಲ್ಲಿ ಒಂದಾದ ‘ವಿಕೇಂದ್ರೀಕರಣ’ ತತ್ವವು ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ರಂಗಗಳಲ್ಲಿ ಅನಿವಾರ್ಯವಾಗಿದೆ. ಸ್ವಾತಂತ್ರ ಪೂರ್ವದಿಂದ ಇಲ್ಲಿಯವರೆಗೂ ವಿಕೇಂದ್ರೀಕರಣ ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದು ಸಹಕಾರಿ ಕ್ಷೇತ್ರದಲ್ಲಿ. ವಸ್ತುಸ್ಥಿತಿ ಹೀಗಿರುವಾಗ ಕೆ.ಎಂ.ಎಫ್ ಅನ್ನು ಅಮೂಲ್‍ಗೆ ವಿಲೀನಗೊಳಿಸುವುದು ಅಪ್ರಸ್ತುತ. ಅದಲ್ಲದೆ ಕಾರ್ಪೋರೇಟೀಕರಣದ ಅಡಿಯಾಳಾಗಿರುವ ಗುಜರಾತಿನ ರಾಜಕೀಯ ಮಾಡೆಲ್‍ಗೆ ನಮ್ಮ ಕೆ.ಎಂ.ಎಫ್ ಸಂಸ್ಥೆಯನ್ನು ಅಡಿಯಾಳಾಗಿಸುವ ಸರಕಾರದ ಈ ನಡೆ ಖಂಡಿತವಾಗಿಯೂ ದೊಡ್ಡ ತಪ್ಪು ಹೆಜ್ಜೆ” ಎನ್ನುತ್ತಾರೆ.

ಎಲ್ಲಾ ವಿಚಾರಗಳ ಬಗ್ಗೆ ಫೇಸ್‍ಬುಕ್‍ನಲ್ಲಿ ತಮ್ಮ ಮನದಾಳದ ಮಾತುಗಳನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುವ, ಅದರಲ್ಲೂ ಮೋದಿಯವವರನ್ನು ಸದಾ ಬೆಂಬಲಿಸುವ ಶ್ರೀಮತಿ ಜ್ಯೋತಿ ಉಮೇಶ್ ಅವರು ಅಮೂಲ್ ಜೊತೆ ಕೆಎಂಎಫ್‍ನ ವಿಲೀನ ಬೇಡವೆನ್ನುತ್ತಾರೆ. ಕೊಂಕಣಿ ಲೇಖಕಿ, ಕೆಚ್ಚೆದೆಯಿಂದ ತಮ್ಮ ಅಭಿಪ್ರಾಯ ಪ್ರತಿಪಾದಿಸುವ ಶ್ರೀಮತಿ ಅಸುಂತಾ ಡಿಸೋಜ, ಈ ಕ್ರಮವನ್ನು ಖಂಡಿಸಿ, “ಎಲ್ಲವನ್ನೂ ವಿಲೀನಗೊಳಿಸೋದು, ಹೆಸರು ಬದಲಾಯಿಸೋದೇ ಈ ಸರಕಾರದ ಸಾಧನೆಯಾಗಿದೆ” ಎಂದು ಠೀಕಿಸಿದ್ದಾರೆ.

ಕನ್ನಡಿಗರ ಅಸ್ಮಿತೆ ಮತ್ತು ಮೈಲುಗಲ್ಲು ಉಳಿಯಲಿ

ಕೆಲವರ ಪ್ರಕಾರ ಅಮುಲ್ ಜೊತೆ ಕೆಎಂಎಫ್ ವಿಲೀನಗೊಂಡರೆ ತಪ್ಪೇನಿಲ್ಲ. ಮಾರುಕಟ್ಟೆ ದೊಡ್ಡದಾಗುವುದರಿಂದ ಲಾಭ ಹೆಚ್ಚಾಗುತ್ತದೆಯಲ್ಲವೇ ಎನ್ನುತ್ತಾರೆ ಅವರು. ಎರಡು ಬೃಹತ್ ಸಂಸ್ಥೆಗಳು ಪರಸ್ಪರ ಸಹಕರಿಸಿದರೆ ಒಳಿತೇ ಅಲ್ಲವೇ ಎಂದೂ ಹೇಳುವವರಿದ್ದಾರೆ. ಅಮೂಲ್ ಮತ್ತು ನಂದಿನಿ ಇನ್ನಷ್ಟು ಬೆಳೆದು ಎರಡೂ ಸಂಸ್ಥೆಗಳು ಮತ್ತದರ ಸದಸ್ಯರಿಗೆ ಹೆಚ್ಚಿನ ಲಾಭ ತರುವ ಒಪ್ಪಂದ ಕೈಗೊಂಡರೆ ವಿರೋಧ ಯಾಕೆ ಎನ್ನುವವರೂ ಇದ್ದಾರೆ.

ಆದರೆ ಇದು ಅಷ್ಟು ಸರಳ ಸಂಗತಿಯಲ್ಲವೇ ಅಲ್ಲ. ಅಮುಲ್ ಮತ್ತು ಕೆಎಂಎಫ್ ಎರಡೂ ಇಂದು ನಿನ್ನೆಯ ಸಂಸ್ಥೆಗಳಲ್ಲ. ಇಷ್ಟು ವರ್ಷ, ದಶಕಗಳಲ್ಲಿ ಅವನ್ನು ಕಟ್ಟಿ ಬೆಳೆಸಲಾಗಿದೆ. ಭಾರತೀಯರಿಗೆ ಅಮುಲ್ ಹೇಗೆ ಅಭಿಮಾನದ ಸಂಕೇತವೋ ಅದಕ್ಕಿಂತ ಹೆಚ್ಚಾಗಿ ನಂದಿನಿ ಎಂಬುದು ಕರ್ನಾಟಕದ ಪ್ರತಿಯೊಬ್ಬರ ಹೆಮ್ಮೆಯ ಹೆಗ್ಗುರುತು. ಅಷ್ಟಕ್ಕೂ ಸಹಕಾರ ತತ್ವದಡಿ ಸ್ಥಾಪನೆಯಾದ ಸಂಸ್ಥೆಗಳನ್ನು ವಿಲೀನಗೊಳಿಸುವ ಆಲೋಚನೆಯೇ ಅಪ್ರಜಾಸತ್ತಾತ್ಮಕ ಮತ್ತು ನಿರಂಕುಶ ಮನೋಭಾವದ್ದು.

ಪರಸ್ಪರ ಸಹಕಾರ ಒಳ್ಳೆಯದೇ. ಉದ್ದೇಶ ಅಷ್ಟಕ್ಕೇ ಸೀಮಿತವೆಂದಾದಲ್ಲಿ ಯಾರೂ ತಕರಾರು ಮಾಡಲಾರರು. ಆದರೆ ಅಮಿತ್ ಶಾ ಹೇಳಿಕೆಯನ್ನು ನಂಬುವುದು ಕಷ್ಟ. ಯಾಕೆಂದರೆ ಅವರು ಪ್ರತಿನಿಧಿಸುವ ಸರ್ಕಾರ ಇದುವರೆಗೆ ಕೈಗೊಂಡ ಹಲವು ಕ್ರಮಗಳು ನಿರಂಕುಶ ಮತ್ತು ಏಕಪಕ್ಷೀಯವೆಂಬ ವಾಸ್ತವವನ್ನು ಮರೆಯುವಂತಿಲ್ಲ. ಭಾಷಾ ನೀತಿಯಿಂದ, ಬ್ಯಾಂಕಿಂಗ್, ಟ್ಯಾಕ್ಸ್ ಸೇರಿದಂತೆ ಹಲವು ಮಹತ್ವದ ವಿಚಾರಗಳಲ್ಲಿ ಕೇಂದ್ರವು ರಾಜ್ಯಗಳನ್ನು ಒಕ್ಕೂಟ ನಿಯಮಕ್ಕೆ ವ್ಯತಿರಿಕ್ತವಾಗಿ ನಡೆಸಿಕೊಂಡಿದೆ. ಇದು ಕಾಂಗ್ರೆಸ್ ಕಾಲದಲ್ಲೂ ಇತ್ತು. ಆದರೆ ಬಿಜೆಪಿ ಕಾಲದಲ್ಲಿ ಅದು ಹದ್ದು ಮೀರಿದೆ. ಮೋದಿ ಸರಕಾರದ ಇದುವರೆಗಿನ ಧೋರಣೆಗಳು, ಕೈಗೊಂಡ ಕ್ರಮಗಳು ಇದನ್ನು ಸಾಬೀತುಪಡಿಸುತ್ತವೆ.

ಈಗಾಗಲೇ ಕನ್ನಡ ಮಣ್ಣಿನ ಕಂಪನ್ನು ದೇಶ-ಪ್ರಪಂಚದಾದ್ಯಂತ ಬೀರಿ ಕರ್ನಾಟಕಕ್ಕೆ ಪ್ರತಿಷ್ಠೆ ತಂದು ಕೊಟ್ಟಿದ್ದ ಹಲವು ಸಂಸ್ಥೆಗಳನ್ನು ಪ್ರಸ್ತುತ ಕೇಂದ್ರ ಸರಕಾರವು ಹೇಳ ಹೆಸರಿಲ್ಲದಂತೆ ಮಾಡಿದೆ. ಅಮಿತ್ ಶಾ ಅವರು ಈ ಹಿಂದೆ ಹಲವಾರು ವಿಚಾರಗಳಲ್ಲಿ ನೀಡಿದ ಹೇಳಿಕೆ ಮತ್ತು ಅವರ ಸರ್ಕಾರದ ನೀತಿ, ನಿರ್ಧಾರಗಳು ಈ ಹಿನ್ನೆಲೆಯಲ್ಲಿ ಮಹತ್ವ ಪಡೆಯುತ್ತವೆ. ಇತರ ರಾಜ್ಯಗಳಿಗಿಂತ ಕರ್ನಾಟಕದ ಬಗ್ಗೆ ಹೆಚ್ಚು ಉಡಾಫೆ ಮನೋಭಾವ ಕೇಂದ್ರ ಸರ್ಕಾರಕ್ಕೆ ಇದೆ. ಅದು ಬಿಜೆಪಿಯ ಧೋರಣೆಯೂ ಆಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಬಿಜೆಪಿ ಸರ್ಕಾರ, ನಮ್ಮ ಜನಪ್ರತಿನಿಧಿಗಳು ಮತ್ತು ನಾಯಕರ ವರ್ತನೆಯೂ ರಾಜ್ಯದ ಹಿತಕ್ಕೆ ಪೂರಕವಾಗಿಲ್ಲದಿರುವುದು ಆತಂಕಕಾರಿ.

ನಮ್ಮ ರಾಜಕಾರಣಿಗಳು ರಾಜ್ಯಕ್ಕಾಗಿ ಒಂದಾಗುವುದೇ ಇಲ್ಲ. ತಮ್ಮ ಸ್ವಾರ್ಥವೇ ಹೆಚ್ಚಿನವರಿಗೆ ಆದ್ಯತೆ. ಆಡಳಿತ, ವಿಪಕ್ಷಗಳೆಂಬ ತಾರತಮ್ಯವಿಲ್ಲದೆ ನಾಡಿನ ಎಲ್ಲಾ ಪಕ್ಷಗಳ ಹಣೆಬರಹ ಇಷ್ಟೇ. ಸ್ವಾಭಿಮಾನ, ರಾಜ್ಯದ ಹಿತಕ್ಕಿಂತ ವೈಯಕ್ತಿಕ ಸ್ವಾರ್ಥವೇ ನಮ್ಮ ಬಹುತೇಕ ಮುಖಂಡರ ಹೆಗ್ಗಳಿಕೆ. ನಮ್ಮ ನಾಡಿನ ದೊಡ್ಡ ದುರಂತವಿದು.

ಕೆಎಂಎಫ್ ಆಗಲೀ ನಂದಿನಿಯಾಗಲೀ ಕನ್ನಡಿಗರ, ಕರ್ನಾಟಕದ ಐಡೆಂಟಿಯಾಗಿಯೇ ಉಳಿಯಬೇಕು. ಅದಕ್ಕೆ ಧಕ್ಕೆ ತರುವ ಯಾವುದೇ ಕ್ರಮವನ್ನು ಎಲ್ಲಾ ಪಕ್ಷಗಳೂ ವಿರೋಧಿಸಬೇಕು. ಜನರೂ ಅಂತಹ ಕ್ರಮಗಳನ್ನು ಖಡಾಖಂಡಿತವಾಗಿ ಪ್ರತಿಭಟಿಸಬೇಕು. ಅಗತ್ಯ ಬಿದ್ದಲ್ಲಿ ಬೀದಿಗಿಳಿದು ಹೋರಾಡಬೇಕು. ಇಲ್ಲದಿದ್ದರೆ ಕನ್ನಡದ ಮತ್ತಷ್ಟು ಸಂಕೇತಗಳು ಮರೆಯಾಗುವ, ಕರ್ನಾಟಕದ ಇನ್ನಷ್ಟು ಹೆಗ್ಗುರುತುಗಳು ನಾಶವಾಗುವ ಅಪಾಯ ತಪ್ಪಿದ್ದಲ್ಲ. ಅದನ್ನು ತಪ್ಪಿಸಬೇಕೆಂದರೆ ಎಲ್ಲರೂ ಸ್ವಾಭಿಮಾನ ಮೈಗೂಡಿಸಿಕೊಂಡರಷ್ಟೇ ಸಾಲದು, ಯಾವುದೇ ಮತ್ತು ಯಾರದೇ ಅನ್ಯಾಯ, ಅನೀತಿಗಳನ್ನು ತಡೆದು ನಿಲ್ಲುವ ಶಕ್ತಿಯನ್ನೂ ಗಳಿಸಿಕೊಳ್ಳಬೇಕು. ಕನ್ನಡಿಗರ ತಾಕತ್ತು, ಕನ್ನಡ ಮಣ್ಣಿನ ಶಕ್ತಿಯನ್ನು ಪ್ರದರ್ಶಿಸಬೇಕು.

Send Feedback to: budkuloepaper@gmail.com

Like us at: www.facebook.com/budkulo.epaper
Join our Budkulo Club in Clubhouse

ಇದೇ ಲೇಖಕರ ಹಿಂದಿನ ಪ್ರಮುಖ ಬರಹಗಳು:

ಘಟ್ಟದ ತಪ್ಪಲಿನ ಕೃಷಿ ತಪಸ್ವಿ: ದೇವರಾಯ ರಾವ್

ತಮಿಳುನಾಡನ್ನು ಹಳ್ಳಕ್ಕಿಳಿಸಿದರೇ ಜಯಲಲಿತ?

ಟಿಪ್ಪುವಿನಿಂದ ಧರೆಗುರುಳಿದ ಆ 25 ಚರ್ಚುಗಳ ಪಟ್ಟಿ

Leave a comment

Your email address will not be published. Required fields are marked *

Latest News