ತಮಿಳರು, ತಮಿಳುನಾಡನ್ನು ಹಳ್ಳಕ್ಕಿಳಿಸಿದರೇ ಜಯಲಲಿತ?

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : December 8, 2016 at 12:54 PM

‘ಅಮ್ಮಾ’ ಖ್ಯಾತಿಯ ಕೆಚ್ಚೆದೆಯ ರಾಜಕಾರಣಿ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಇನ್ನು ನೆನಪಷ್ಟೇ. ವರ್ಣರಂಜಿತ ವ್ಯಕ್ತಿತ್ವ, ವಿವಾದಾತ್ಮಕ ಜೀವನ ಮತ್ತು ದಿಟ್ಟ ನಡೆನುಡಿಯ ಮೂಲಕ ಖ್ಯಾತಿ, ವರ್ಚಸ್ಸನ್ನು ಗಳಿಸಿಕೊಂಡಿದ್ದ ಜಯಲಲಿತ ಭಾರತದ ರಾಜಕೀಯ ರಂಗದಲ್ಲಿ ಹಲವು ವರ್ಷ ಉತ್ತುಂಗದಲ್ಲಿದ್ದವರು, ಮರೆಯಲಾರದಂಥ ಘಟನೆಗಳಿಗೆ ಹೆಸರಾದವರು. ಏಳು ಬೀಳಿನ ಹಾವು ಏಣಿ ಆಟದಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿ ಬಿದ್ದಾಗ ದಣಿದು ಗೆದ್ದಾಗ ಶತ್ರುಗಳನ್ನು ಹಣಿದು ಖ್ಯಾತಿ, ಕುಖ್ಯಾತಿಗಳೆರಡನ್ನೂ ಗಳಿಸಿಕೊಂಡಿದ್ದವರು.

ಜಯಲಲಿತಾರ ಜೀವನ ಮತ್ತು ರಾಜಕೀಯ ಬದುಕು, ಮತ್ತೀಗ ಅವರ ಅಂತ್ಯ ಹಲವು ಪ್ರಶ್ನೆಗಳನ್ನು ಮತ್ತೆ ಮುಂದಿಟ್ಟಿದೆ. ಬಹುತೇಕ ಸರ್ವಾಧಿಕಾರಿಯಂತೆ ಮೆರೆದ ಜಯಲಲಿತಾರು ನಿಜಕ್ಕೂ ತನ್ನ ಪಕ್ಷ ಮತ್ತು ನಾಡಿಗೆ ಒಳಿತನ್ನುಂಟು ಮಾಡಿದ್ದಾರಾ ಎಂಬುದನ್ನು ನಿಷ್ಪಕ್ಷಪಾತವಾಗಿ ಆಲೋಚಿಸಬೇಕಿದೆ. ಹಾಗೆಯೇ ಪ್ರಾದೇಶಿಕ ಪಕ್ಷಗಳ ಮಹತ್ವ ಮತ್ತು ಅವುಗಳ ಭವಿಷ್ಯದ ಬಗ್ಗೆಯೂ ಯೋಚಿಸಬೇಕಾದ ಕಾಲವಿದು. ಜಯಲಲಿತಾರ ಸಾವು ಮತ್ತು ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಮೆಲುಕು ಹಾಕಿದರೆ ನಮ್ಮ ದೇಶದ ರಾಜಕೀಯ ಪಕ್ಷಗಳ ಹಣೆಬರಹವನ್ನು ತಿಳಿದುಕೊಳ್ಳಲು ಸಾಧ್ಯವಿದೆ.

ಹಾಗೆ ನೋಡಿದರೆ, ಅಭಿಮಾನಕ್ಕಿಂತ ಅಂಧಾಭಿಮಾನಕ್ಕೇ ಹೆಸರುವಾಸಿಯಾದ ತಮಿಳು ಜನರು ಅದರಿಂದ ಗಳಿಸಿದ್ದು ಹೆಚ್ಚೋ ಕಳೆದುಕೊಂಡದ್ದು ಹೆಚ್ಚೋ? ತಮಿಳು, ತಮಿಳರೆಂದರೆ ಜೀವ ಬಿಡುವ ಮತ್ತು ತೆಗೆಯುವಂತಹ ಮಟ್ಟಿಗಿನ ಅಂಧಾಭಿಮಾನ ಹೊಂದಿದ್ದಾರೆಂದು ಕರೆಯಲಾದ ತಮಿಳ್ನಾಡಿನ ಜನರನ್ನು ಆಳಿದ್ದು ಕನ್ನಡಿಗರು! ಜಯಲಲಿತ ಮತ್ತು ರಜನೀಕಾಂತ್ ಇದಕ್ಕೆ ಬಹು ದೊಡ್ಡ ಉದಾಹರಣೆ.

 

ತಮಿಳ್ನಾಡಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಳು ಹಲವು ದಶಕಗಳಿಂದ ಪರ್ಯಾಯವಾಗಿ ಆಡಳಿತ ನಡೆಸಿಕೊಂಡು ಬಂದಿವೆ. ಬಹಳಷ್ಟು ವರ್ಷ ಈ ಪರಂಪರೆ ಚಾಲ್ತಿಯಲ್ಲಿತ್ತು. ಆ ದಾಖಲೆಯನ್ನು ಈ ವರ್ಷ ಮುರಿದದ್ದು ಜಯಲಲಿತಾರವರರೇ. ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದಾಗ ಆಡಳಿತ ಪಕ್ಷ ಧೂಳೀಪಟವಾಗಿ, ವಿರೋಧ ಪಕ್ಷ ದಿಗ್ವಿಜಯಗೈಯುತ್ತಾ ಆಡಳಿತಕ್ಕೇರಿದ್ದು ಇಲ್ಲಿಯವರೆಗಿನ ಚರಿತ್ರೆಯಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ, ಆಡಳಿತ ನಡೆಸುತ್ತಿದ್ದ ಪಕ್ಷದ ದುರಾಡಳಿತಕ್ಕೆ ರೋಸಿ ಹೋದ ಮತದಾರರು ಇನ್ನೊಂದು ಪಕ್ಷವನ್ನು ಅನಿವಾರ್ಯವಾಗಿ ನೆಚ್ಚಿಕೊಂಡದ್ದು. ಇದು ನೆಗೆಟಿವ್ ಆಯ್ಕೆ. ಅಂದರೆ ಒಂದು ಪಕ್ಷದ ಸೋಲು ಇನ್ನೊಂದು ಪಕ್ಷಕ್ಕೆ ಗೆಲುವಾಗಿ ಪರಿಣಮಿಸುವುದು. ಕೇರಳ, ಪಂಜಾಬ್‍ಗಳಲ್ಲೂ ಇದೇ ಪ್ರಕ್ರಿಯೆ ಸಾಮಾನ್ಯವಾಗಿದೆ.

ಅಂದರೆ, ಜನರಿಗೆ ಆಯ್ಕೆ ಸೀಮಿತವಾಗಿರುವಾಗ, ಆಡಳಿತ ಪಕ್ಷದ ವಿರೋಧಿ ಮತಗಳು ಇನ್ನೊಂದು ಪಕ್ಷಕ್ಕೆ ಲಾಭದಾಯಕವಾಗುತ್ತದೆ, ಅಷ್ಟೆ. ತ್ರಿಕೋನ, ಚತುಷ್ಕೋನ ಸ್ಪರ್ಧೆ ಇದ್ದಾಗ ಇಂತಹ ಫಲಿತಾಂಶ ಬರಲು ಕಷ್ಟ ಸಾಧ್ಯ. ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ನಾವಿದನ್ನು ನೋಡಿದ್ದೇವೆ.

ತಮಿಳುನಾಡಿನ ವಿಚಾರಕ್ಕೆ ಬಂದಾಗ, ಕರುಣಾನಿಧಿ ಮತ್ತು ಜಯಲಲಿತ ಅವರು ನಿರಂತರವಾಗಿ, ಒಬ್ಬರ ನಂತರ ಇನ್ನೊಬ್ಬರು ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸಿದ್ದಾರೆ. ಅಧಿಕಾರದಿಂದ ಇಳಿಯುವಾಗ ಹೀನಾಯವಾಗಿ ಸೋತಿದ್ದಾರೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳೆರಡರಲ್ಲೂ ಪ್ರತಿಬಾರಿ ಜನರು ಕೇವಲ ಒಂದೇ ಪಕ್ಷವನ್ನು ಸಾರಾಸಗಟಾಗಿ ಬೆಂಬಲಿಸಿ, ಇನ್ನೊಂದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

ಅವೆಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದ್ದು ಈ ವರ್ಷ ನಡೆದ ವಿಧಾನಸಭಾ ಚುನಾವಣೆ. ಜಯಲಲಿತಾರ ಪಕ್ಷ ಬಹುಮತ ಪಡೆದು ಅಧಿಕಾರದಲ್ಲಿ ಮುಂದುವರಿದಿದ್ದು ಹೌದಾದರೂ, ಅದೇನೂ ಅಷ್ಟು ಸುಲಭದ ಗೆಲುವಾಗಿರಲಿಲ್ಲ. ಮೊದಲ ಬಾರಿಗೆಂಬಂತೆ ಡಿಎಂಕೆ ಮತ್ತು ಎಐಎಡಿಎಂಕೆ ಜಿದ್ದಾಜಿದ್ದಿನ ಪ್ರದರ್ಶನ ತೋರ್ಪಡಿಸಿದವು. ಹಿಂದಿನಂತೆ ನಿರ್ದಿಷ್ಟ ಪಕ್ಷ ನಿಚ್ಚಳ ಬಹುಮತ ಪಡೆಯಬಹುದೆನ್ನುವ ಪ್ರಮೇಯವೇ ಇರಲಿಲ್ಲ. ಬಹುತೇಕ ಸಮೀಕ್ಷೆಗಳು ಡಿಎಂಕೆಯೇ ಅಲ್ಪ ಸೀಟುಗಳ ಅಂತರದಲ್ಲಿ ಬಹುಮತ ಪಡೆಯುತ್ತದೆಯೆಂದು ಹೇಳಿದ್ದವು. ಎಕ್ಸಿಟ್ ಪೋಲ್‍ಗಳೂ ಇದನ್ನೇ ಹೇಳಿದ್ದವು. ತಾವೇ ಗೆಲ್ಲುತ್ತೇನೆನ್ನುವ ಆತ್ಮವಿಶ್ವಾಸ ಎರಡೂ ಪಕ್ಷಗಳಲ್ಲಿರಲಿಲ್ಲ. ಆದರೆ ಫಲಿತಾಂಶ ಮಾತ್ರ ವಿಭಿನ್ನವಾಗಿತ್ತು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆನ್ನುವ ಸರದಿ ಡಿಎಂಕೆಯದ್ದಾದರೆ, ಕೂದಲೆಳೆಯಂತರದಲ್ಲಿ ಸೋಲಿನಿಂದ ಬಚಾವಾಗಿದ್ದು ಎಐಡಿಎಂಕೆಯ ಅನುಭವವಾಗಿತ್ತು. ಜಯಲಲಿತಾರವರು ಚುನಾವಣಾ ಅಕ್ರಮವೆಸಗಿದ್ದಾರೆಂದು ಡಿಎಂಕೆಯವರು ಆಪಾದಿಸಿದ್ದೂ ಇದೆ. ಮೊತ್ತಮೊದಲ ಬಾರಿಗೆ ಚುನಾವಣೆಯನ್ನು ರದ್ದುಗೊಳಿಸಿದ ಚಾರಿತ್ರಿಕ ಘಟನೆಯೂ ಅಲ್ಲಿ ನಡೆದು ಹೋಯಿತು.

ನಿಜಕ್ಕೂ ನೋಡಿದರೆ ಆ ಚುನಾವಣೆಯ ಫಲಿತಾಂಶ ಹಲವು ಸಂಗತಿಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದ ಅವಶ್ಯಕತೆಗಳನ್ನು ನೆನಪಿಸಿತು.

 

ಜಯಲಲಿತ ಮತ್ತವರ ಪಕ್ಷ ಅಧಿಕಾರವನ್ನುಳಿಸಿದ್ದು ಹೇಗೆ? ಬರೀ ಮತದಾರರನ್ನು ಓಲೈಸುವ ಕ್ರಮ, ಯೋಜನೆಗಳಿಂದವಷ್ಟೇ ಎನ್ನುವುದು ಸಮಾಧಾನಕರ ಸಂಗತಿಯೆ? ಕೇಂದ್ರದಲ್ಲಿ ಯುಪಿಎ ಸರಕಾರದಲ್ಲಿ ಅತಿ ದೊಡ್ಡ ಹಗರಣಗಳಲ್ಲಿ ಶಾಮೀಲಾಗಿ ಭ್ರಷ್ಟಾಚಾರದ ಆರೋಪಗಳಿಂದ ನಲುಗಿದ್ದ ಡಿಎಂಕೆಗೆ ಅದರಿಂದ ಸಾಕಷ್ಟು ನಷ್ಟವಾಯಿತು. ಅಷ್ಟೇ ಅಲ್ಲದೆ ಡಿಎಂಕೆಯ ಉತ್ತರಾಧಿಕಾರತ್ವಕ್ಕಾಗಿ ಕರುಣಾನಿಧಿ ಕುಟುಂಬದಲ್ಲಿನ ಕಚ್ಚಾಟಗಳು, ಬಹಿರಂಗ ತಿಕ್ಕಾಟಗಳು ಆ ಪಕ್ಷವನ್ನು ಮತ್ತಷ್ಟು ಹಳ್ಳಕ್ಕಿಳಿಸಿದವು. ಅಂತಹ ದುರ್ಬಲ, ಸಂಕಷ್ಟದಲ್ಲಿದ್ದ ವಿರೋಧ ಪಕ್ಷವನ್ನು ಚುನಾವಣೆಯಲ್ಲಿ ಬಹಳ ಸುಲಭವಾಗಿ ಸೋಲಿಸಬಹುದಾಗಿತ್ತು ಜಯಲಲಿತಾರ ಆಡಳಿತ ಪಕ್ಷ.

ಆದರೆ ವಸ್ತುಸ್ಥಿತಿ ಹಾಗಿರಲಿಲ್ಲ. ಅಂತಹ ನಿಕೃಷ್ಟ ಸ್ಥಿತಿಯಲ್ಲಿದ್ದ ಡಿಎಂಕೆ ಪಕ್ಷವು ಚುನಾವಣೆಯಲ್ಲಿ ಪ್ರಚಂಡ ನಿರ್ವಹಣೆ ತೋರಿತು? ಅದು ಹೇಗೆ ಸಾಧ್ಯವಾಯಿತು? ಬಹುಶಃ ಆ ಚುನಾವಣೆ ಆರೇಳು ತಿಂಗಳ ನಂತರ ನಡೆದಿರುತ್ತಿದ್ದರೆ ಖಂಡಿತವಾಗಿ ಜಯಲಲಿತಾರು ಅಧಿಕಾರವನ್ನು ಕಳೆದುಕೊಳ್ಳುತ್ತಿದ್ದರು.

ಅಷ್ಟಕ್ಕೂ, ಜಯಲಲಿತಾರ ಈ ಗೆಲುವಿಗೆ ಕಾರಣಗಳೇನೆಂದು ವಿಶ್ಲೇಷಿಸಿದರೆ, ಅವರ ಮಹತ್ಸಾಧನೆಗಳೇನೂ ಅಲ್ಲವೇ ಅಲ್ಲ. ಬದಲಾಗಿ ಜನರನ್ನು ಮರುಳು ಮಾಡುವ ಯೋಜನೆಗಳೇ ಅಧಿಕ ಪ್ರಮಾಣದಲ್ಲಿ ಆಕೆಗೆ ಅಧಿಕಾರ ಉಳಿಸಿಕೊಳ್ಳಲು ನೆರವಾಗಿದ್ದವು.

ಜಯಲಲಿತಾರ ಸಾಧನೆಗಳೇನೆಂದು ಪರಿಶೀಲಿಸುತ್ತಾ ಹೋದರೆ ಎದ್ದು ಕಾಣುವುದು ಸರ್ವಾಧಿಕಾರ, ಸ್ವಜನ ಪಕ್ಷಪಾತ, ಬ್ರಹ್ಮಾಂಡ ಭ್ರಷ್ಟಾಚಾರ, ಪಕ್ಷದಲ್ಲಿ ಗುಲಾಮಗಿರಿತನವನ್ನು ಪೋಷಿಸಿದ್ದು ಇವೇ ಮುಂತಾದವು. ತಾನೇ ಸರ್ವಸ್ವ, ತನ್ನನ್ನು ಹೊರತು ಬೇರ್ಯಾರೂ, ಬೇರೇನೂ ಮುಖ್ಯವಲ್ಲ, ಮಹತ್ವದ್ದಲ್ಲ ಎಂಬುದೇ ಜಯಲಲಿತಾರ ಧೋರಣೆ, ಸಾಧನೆಯಾಗಿತ್ತು. ಸ್ವಾರ್ಥದ ಮುಂದೆ ಬೇರೇನೂ ಹಿತವಲ್ಲವೆಂಬುದನ್ನು ಆಕೆ ತನ್ನ ನಡೆ ನುಡಿಗಳಿಂದ ಸಾಬೀತುಪಡಿಸಿದ್ದಾರೆ.

ದಶಕಗಟ್ಟಲೆ ಮುಖ್ಯಮಂತ್ರಿಯಾಗಿಯೂ, ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಬೇಕಾದರೆ ಮತದಾರರನ್ನು ಆಕರ್ಷಿಸಲು ಉಚಿತ ಉಡುಗೊರೆ, ಕೊಡುಗೆಗಳನ್ನೇ ಆಶ್ರಯಿಸಬೇಕಾಗಿದೆಯೆಂದರೆ ಅದಕ್ಕಿಂತ ದುರಂತ ಬೇರೇನಿದೆ? ಸ್ವಾತಂತ್ರ್ಯ ಬಂದು ಏಳು ದಶಕ ಕಳೆದ ನಂತರವೂ, ದಶಕಗಟ್ಟಲೆ ಅಧಿಕಾರ ನಡೆಸಿದ ಪಕ್ಷ, ಮುಖಂಡರು ಇನ್ನೂ ಕೂಡ ಬರೀ ಜನಪ್ರಿಯ ಯೋಜನೆ, ಸ್ಕೀಂಗಳಿಂದ ಮತ ಸೆಳೆಯುವ ಅನಿವಾರ್ಯತೆ ಇದೆಯೆಂದರೆ ನಾವೆಲ್ಲಿದ್ದೇವೆ? ಇದು ಚಿಂತನೆ ಮಾಡಬೇಕಾದ ಸಂಗತಿಯಲ್ಲವೆ?

ನಮ್ಮ ರಾಜ್ಯದಲ್ಲೂ ಈ ಸ್ಥಿತಿ ಭಿನ್ನವೇನೂ ಅಲ್ಲ. ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಇಂತಹದೇ ಜನಪ್ರಿಯ ಯೋಜನೆಗಳನ್ನು ಆರಂಭಿಸಿದೆ, ‘ಭಾಗ್ಯ’ ಸರಣಿಯಲ್ಲಿ. ಹಿಂದಿನ ಮುಖ್ಯಮಂತ್ರಿಗಳೂ ಹೀಗೆ ಮಾಡಿದ್ದಾರೆ. ಯಡಿಯೂರಪ್ಪವನರೂ ಇದರಲ್ಲಿ ಬಹಳ ಮುತುವರ್ಜಿ ವಹಿಸಿದ್ದರು. ಬೇರೆಡೆ, ಕೇಂದ್ರದಲ್ಲಿಯೂ ಇದೇ ಪರಿಸ್ಥಿತಿ.

ವಿಪರ್ಯಾಸವೇನೆಂದರೆ ಇಂತಹ ಯೋಜನೆಗಳಿಂದಾಗಿ ಆಡಳಿತ ಪಕ್ಷಗಳಿಗೆ ಲಾಭವಾಗಿದ್ದು ಕಡಿಮೆ. ಅಟಲ್ ಬಿಹಾರಿ ವಾಜಪೇಯಿಯವರ ಎನ್‍ಡಿಎ ಸರಕಾರ ಗಡದ್ದಾಗಿ ‘ಇಂಡಿಯಾ ಶೈನಿಂಗ್’ ಕ್ಯಾಂಪೇನ್ ಮಾಡಿದರೂ ಚುನಾವಣೆಯಲ್ಲಿ ಅದು ಕೈ ಹಿಡಿಯಲಿಲ್ಲ. ಯುಪಿಎ2 ಸರಕಾರ ‘ಫುಡ್ ಸೆಕ್ಯುರಿಟಿ’ ಮತ್ತಿತರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಅದಕ್ಕಂಟಿದ್ದ ನೆಗೆಟಿವ್ ಪ್ರಚಾರದಿಂದ ಧೂಳೀಪಟವಾಯಿತು. ಯುಪಿಎ1 ಸರಕಾರ ನರೇಗಾ ಯೋಜನೆಯಿಂದ ಯಶಸ್ವಿಯಾಗಿ ಅಧಿಕಾರವನ್ನು ಎರಡನೇ ಅವಧಿಗೆ ವಿಸ್ತರಿಸಿಕೊಂಡಿದ್ದೂ ಹೌದು.

ಸಿದ್ಧರಾಮಯ್ಯನವರು ಅನ್ನಭಾಗ್ಯ ಯೋಜನೆಯಿಂದಾಗಿ ಲಾಭ ಕಂಡಿದ್ದು ಕಂಡುಬಂದಿಲ್ಲ. ಬೆಂಗಳೂರಿನ ನಗರಪಾಲಿಕೆ, ನಂತರದ ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ನಿರೀಕ್ಷಿತ ಪ್ರಮಾಣದ ಗೆಲುವು ಕಾಂಗ್ರೆಸಿಗೆ ಸಿಗಲಿಲ್ಲ. ಸ್ವತಃ ಮುಖ್ಯಮಂತ್ರಿಯವರ ತವರು ಮೈಸೂರಿನಲ್ಲಿಯೇ ಕಾಂಗ್ರೆಸ್ ಸೋತಿದೆ.

ಆದರೆ, ಜಯಲಲಿತಾರಿಗೆ ಮಾತ್ರ, ಅವರ ಯೋಜನೆಗಳ ವ್ಯವಸ್ಥಿತ ಜಾರಿಗೊಳಿಸುವಿಕೆಯಿಂದ ಲಾಭವಾಯಿತು. ಅಲ್ಲದೇ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆಯ ಅಸಹಾಯಕ, ಶೋಚನೀಯ ಪರಿಸ್ಥಿತಿಯೂ ಅವರಿಗೆ ಲಾಭದಾಯಕವಾಯಿತು. ಅಷ್ಟಿದ್ದರೂ ಬಹುಮತ ಗಳಿಸಲು ಬಹಳಷ್ಟು ಹೆಣಗಾಡಬೇಕಾಯಿತು. ಸರಳ, ಸುಲಭವೆನ್ನಲಾಗಿದ್ದ ಚುನಾವಣೆಯ ಹೋರಾಟ ದಿನಗಳೆದಂತೆ ಕ್ಲಿಷ್ಟವಾಯಿತು. ಕೆಲವೇ ಸ್ಥಾನಗಳ ಅಂತರದಿಂದ ಡಿಎಂಕೆಗೆ ಸೋಲಾಯಿತು, ಎಐಎಡಿಎಂಕೆಗೆ ಗೆಲುವಾಯಿತು.

ಅಂದರೆ ಜನಪ್ರಿಯ ಯೋಜನೆಗಳು ಎಂಥವೇ ಇದ್ದರೂ ಮತದಾರರನ್ನು ಓಲೈಸುವುದು ಅಷ್ಟು ಸುಲಭವೂ ಅಲ್ಲ, ಕಾರ್ಯ ಸಾಧುವೂ ಅಲ್ಲವೆಂಬುದನ್ನು ನಾವಿಲ್ಲಿ ಕಾಣಬಹುದು.

budkulo_karunanidhi_politics

ಅಷ್ಟಕ್ಕೂ ಜಯಲಲಿತಾರು ತಮ್ಮನ್ನು ಆರಾಧಿಸುತ್ತಿದ್ದ ತಮಿಳುನಾಡಿನ ಜನರಿಗೆ ಏನು ಒಳಿತನ್ನು ಮಾಡಿದರು? ದಿಟ್ಟ ನಾಯಕಿ, ಗಟ್ಟಿ ಆಡಳಿತಗಾರ್ತಿ, ಕೆಚ್ಚೆದೆಯ ರಾಜಕಾರಣಿ, ಸ್ವಾಭಿಮಾನಿಯೆಂದೆಲ್ಲಾ ಖ್ಯಾತಿ ಗಳಿಸಿದ್ದ ಜಯಲಲಿತಾರ ಆಡಳಿತದಲ್ಲಿ ತಮಿಳರಿಗೆ ಎಷ್ಟು ಒಳಿತಾಗಿದೆ? ತಮಿಳುನಾಡು ರಾಜ್ಯ ನಿಜಕ್ಕೂ ಅಭಿವೃದ್ಧಿಯಾಗಿದೆಯೆ? ತನ್ನ ಮತದಾರರಿಗೋಸ್ಕರ ತಾನು ಹುಟ್ಟಿದ ನಾಡಿಗೆ ದ್ರೋಹ ಬಗೆದದ್ದು, ಅನ್ಯಾಯ ಮಾಡಿದ್ದು ಜಯಲಲಿತಾರ ಮಹತ್ಸಾಧನೆಯೆಂದೇ ಹೇಳಬಹುದು. ಕಾವೇರಿ ನೀರಿಗಾಗಿ ಚಂಡಿ ಹಿಡಿದು ಕರ್ನಾಟಕದ ಮೇಲೆ ಯುದ್ಧ ಸಾರಿದ್ದು ಬಹುತೇಕವಾಗಿ ಅಲ್ಲಿನ ಮತದಾರರಿಗೋಸ್ಕರವೇ. ಸ್ವತಃ ಕನ್ನಡತಿ, ಕರ್ನಾಟಕದವರಾಗಿದ್ದೂ ಕನ್ನಡ ಮತ್ತು ಕನ್ನಡಿಗರನ್ನು ಶತ್ರುಗಳಂತೆ ಕಂಡಿದ್ದು, ವರ್ತಿಸಿದ್ದು ಆಕೆಯ ಕೃತ್ರಿಮ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತಿತ್ತು.

ರಾಜ್ಯ ಮತ್ತು ದೇಶದ ಹಿತ ಬಯಸುವವರು, ಈ ಜನಪ್ರಿಯ ಯೋಜನಗಳಿಂದಾಗುವ ಅಪಾಯ, ನಷ್ಟವನ್ನು ಪರಿಶೀಲಿಸಬೇಕು. ತನ್ನ ‘ಅಮ್ಮಾ’ ಹೆಸರಿನ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕೋಸ್ಕರ ಜಯಲಲಿತರವರು ಬೃಹತ್ ಮೊತ್ತದ ಸಾಲವನ್ನು ತೆಗೆದುಕೊಂಡು ತಮಿಳುನಾಡು ಸರ್ಕಾರವನ್ನು ಆಪತ್ತಿಗೆ ಸಿಲುಕಿಸಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಇದು ನಿಜವೆಂದಾದರೆ ಅದರ ಪರಿಣಾಮ ತಮಿಳುನಾಡನ್ನು ತಟ್ಟುತ್ತದೆ, ಕಾಡುತ್ತದೆ. ನಮ್ಮ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜನರ ಹಿತ ಮತ್ತು ನಾಡಿನ ಕ್ಷೇಮವನ್ನು ಬಲಿ ತೆಗೆದುಕೊಳ್ಳಲೂ ಹೇಸುವುದಿಲ್ಲವೆಂಬುದನ್ನು ನೋಡುವಾಗ ಖೇದವಾಗುತ್ತದೆ.

ಜಯಲಲಿತಾರ ಸಾವು ಮತ್ತೊಂದು ಸಂಗತಿಯನ್ನು ಬಯಲಿಗೆಳೆದಿದೆ. ಸರ್ವಾಧಿಕಾರತನ, ಸ್ವಹಿತ, ಇತರರನ್ನು ಬೆಳೆಸದ ನಾಯಕತ್ವಕ್ಕೆ ಮತ್ತೊಂದು ನಿದರ್ಶನ ಜಯಲಲಿತ. ತನ್ನನ್ನು ಬಿಟ್ಟು ಇತರರೆಲ್ಲಾ ನಿಕೃಷ್ಟರು, ಗುಲಾಮರೆಂದೇ ಪರಿಗಣಿಸಿ, ಅದರಂತೆ ನಡೆದುಕೊಂಡಿದ್ದ ಎಂತೆಂತಹ ಅತಿರಥ ಮಹಾರಥರು ನಾಮಾವಶೇಷವಾಗಿ ಹೋಗಿದ್ದನ್ನು ಚರಿತ್ರೆಯಲ್ಲಿ ನಾವು ನೋಡಿದ್ದೇವೆ. ಜಯಲಲಿತಾರವರು ಇಷ್ಟು ವರ್ಷಗಳಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುವಂತಾಗಲು ಎರಡನೇ ಹಂತದ ನಾಯಕರನ್ನು ಬೆಳೆಸಿದ್ದು ಕಾಣುವುದಿಲ್ಲ. ಉಳಿದ ನಾಯಕರೂ ಅಷ್ಟೇ, ತಮ್ಮನ್ನು ತಾವೇ ಗುಲಾಮರಂತೆ, ಜೀತದಾಳುಗಳಂತೆ ತೋರ್ಪಡಿಸಿದರು, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವಂತೆ ವರ್ತಿಸಿದರು.

ಇದು ಎಲ್ಲಾ ರಾಜಕೀಯ ಪಕ್ಷದವರು ಮತ್ತದರ ನಾಯಕರು ಗಂಭೀರವಾಗಿ ಆಲೋಚಿಸಬೇಕಾದ ವಿಚಾರ.

ಮುಂದಿನ ಲೇಖನ:
ಪ್ರಾದೇಶಿಕ ಪಕ್ಷಗಳ ಭವಿಷ್ಯಕ್ಕೆ ಜಯಲಲಿತಾರ ಸಾವಿನ ಸಂದೇಶವೇನು?
Send your opinion, views & feedback to: budkuloepaper@gmail.com
Like our Facebook Page: www.facebook.com/budkulo.epaper

Leave a comment

Your email address will not be published. Required fields are marked *