ಕಾರ್ಮೆಲ್ ಗುಡ್ಡದಲ್ಲಿ ಮಹಾ ಜಾತ್ರೆ: ಬಾಲಯೇಸುವಿನ ಭಕ್ತಾದಿಗಳಿಗೆ ಸಡಗರದ ಸಂಭ್ರಮೋತ್ಸವ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : January 12, 2019 at 2:34 PM

ಮಂಗಳೂರು: ಮನುಷ್ಯ ಮತ್ತು ದೇವರ ಸಂಬಂಧವೇ ಅಂತಹದ್ದು. ಹುಟ್ಟಿದಂದಿನಿಂದ ಪ್ರತಿಯೊಬ್ಬ ಮನುಷ್ಯನಿಗೆ, ದೇವರೆಂಬ ದೈವೀ ಶಕ್ತಿಯು ಅತ್ಯಂತ ಬಲಶಾಲಿಯೂ ಸರ್ವಾಂತರ್ಯಾಮಿಯೂ ಎಂಬುದಾಗಿ ಕಲಿಸಲಾಗುತ್ತದೆ. ಮಾನವನು ದೈವೀ ಇಚ್ಛೆಯ ಎದುರು ತೃಣ ಸಮಾನ ಎಂಬುದನ್ನು ಮನುಷ್ಯ ಕ್ರಮೇಣ ಅರಿತುಕೊಳ್ಳುತ್ತಾನೆ. ಅದರಲ್ಲೂ ಜೀವನದ ಜಂಜಾಟಗಳಲ್ಲಿ, ಜವಾಬ್ದಾರಿಗಳಲ್ಲಿ ವ್ಯಸ್ತನಾದಾಗ ದೇವರ ಅಗತ್ಯ, ಆತನ ಕರುಣೆ, ಕೃಪೆಗೆ ಪಾತ್ರನಾಗುವುದರ ಅಗತ್ಯದ ಅರಿವು ಮನುಷ್ಯನಿಗೆ ಸಹಜವಾಗಿ ಉಂಟಾಗುತ್ತದೆ. ಭಾರತದಂತಹ ಕೋಟಿ ಕೋಟಿ ದೇವರುಗಳಿರುವ ನಾಡಿನಲ್ಲಿಯಂತೂ ಇದು ಎಲ್ಲೆಡೆಗಿಂತ ಬಹಳಷ್ಟು ಪಟ್ಟು ಹೆಚ್ಚು.

ಇಂತಹ ಪರಿಸ್ಥಿತಿಯಲ್ಲಿ ಮಾನವನಿಗೆ ನೆರವಾಗಲು ಸಾವಿರಾರು ದೇವರುಗಳು, ದೇವತೆಗಳು, ದೈವಗಳು ಮುಂತಾದ ಶಕ್ತಿಗಳು ಸದಾ ಸಿದ್ಧವಾಗಿರುತ್ತವೆ. ಮನುಷ್ಯನಿಗಾದರೋ ಒಂದೇ ದೇವರಿಂದ ತೃಪ್ತನಾಗುವಷ್ಟು ಉದಾರ ಮನಸ್ಸು, ತೃಪ್ತಿ ಎಲ್ಲಿಂದ ಬರಬೇಕು ಅಲ್ಲವೇ? ಆಯಾ ಅಗತ್ಯಗಳಿಗೆ, ವಿವಿಧ ಬೇಡಿಕೆಗಳಿಗೆ, ಆಸೆ-ಇಚ್ಛೆಗಳಿಗಾಗಿ ಆತನಿಗೆ ಹಲವಾರು ಐಕಾನಿಕ್ ದೇವರುಗಳಿದ್ದಾರೆ. ಧರ್ಮ-ಜಾತಿ-ಪಂಗಡ ಯಾವುದಾದರೇನು, ಮನುಷ್ಯನಿಗೆ ತನ್ನಾಸೆ ನೆರವೇರುವುದು, ತನ್ನ ಕಷ್ಟ-ಸಂಕಷ್ಟಗಳಿಂದ ಮುಕ್ತಿ ಪಡೆಯುವುದೇ ಅಂತಿಮ ಗುರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಆತ ಹುಡುಕಿಕೊಂಡು ಹೋಗುವ ದೈವೀ ಶಕ್ತಿಗಳಿಗೆ ಯಾವುದೇ ಧರ್ಮ-ಜಾತಿಯ ಕಟ್ಟಳೆ ಅಡ್ಡಿಯಾಗುವುದಿಲ್ಲ, ಇತಿ-ಮಿತಿಗಳು ಬಾಧಿಸುವುದಿಲ್ಲ.

ಅಂತಹ ಪರಮ ಶಕ್ತಿಯುಳ್ಳ, ಅಗಾಧ ಆಕರ್ಷಣೆಯುಳ್ಳ ಮತ್ತು ಉತ್ಕಟ ಭಕ್ತಿ-ನಂಬಿಕೆಗಳಿಗೆ ಬಾಧ್ಯರಾದ ದೈವೀ ಶಕ್ತಿಯೊಂದು ಮಂಗಳೂರಿನಲ್ಲಿ ನೆಲೆಯೂರಿದೆ. ಈ ಶಕ್ತಿ ಪುಟ್ಟ ಬಾಲಕನೊಬ್ಬನ ರೂಪದಲ್ಲಿದೆ. ಯಕಃಶ್ಚಿತ್ ಬಾಲಕನೊಬ್ಬ ಅದ್ಭುತ ಪವಾಡ ಪುರುಷನಾಗಿ ಮಾರ್ಪಟ್ಟ ಈ ಚರಿತ್ರೆಯು ಮಂಗಳೂರಿಗೆ ಸಾವಿರಾರು, ಲಕ್ಷಾಂತರ ಭಕ್ತಾದಿಗಳನ್ನು ಸೆಳೆಯುವಲ್ಲಿ ಶಕ್ತವಾಗಿದೆ. ವರ್ಷಂಪ್ರತಿ ಸ್ಥಳೀಯ ಹಾಗೂ ದೂರದೂರಿನಿಂದ ಅಸಂಖ್ಯಾತ ಭಕ್ತಾದಿಗಳನ್ನು ಪ್ರೀತಿ ಪೂರ್ವಕವಾಗಿ ತನ್ನತ್ತ ಬರಸೆಳೆಯುವ ಸೂಜಿಗಲ್ಲಿನ ಈ ದೈವೀ ಶಕ್ತಿ ಬೇರೆ ಯಾವುದೂ ಅಲ್ಲ, ಅದು ಬಿಕರ್ನಕಟ್ಟೆಯ ಕಾರ್ಮೆಲ್ ಗುಡ್ಡದಲ್ಲಿರುವ ಪುಣ್ಯಕ್ಷೇತ್ರದಲ್ಲಿ ನೆಲೆ ನಿಂತಿರುವ ಬಾಲಯೇಸು.

ಹೌದು. ನಿಜಕ್ಕೂ ಹೇಳಬೇಕೆಂದರೆ ಇಂದು ಬಿಕರ್ನಕಟ್ಟೆಯ ಈ ಬಾಲಯೇಸುವಿನ ಪ್ರಸಿದ್ಧಿಯನ್ನು ಪದಗಳಲ್ಲಿ ವರ್ಣಿಸಬೇಕಾದ ಅಗತ್ಯವಿಲ್ಲ. ಲಕ್ಷಾಂತರ ಜನರ ಭಾವ-ಭಕುತಿಗೆ ಎಣೆಯಿಲ್ಲದ, ಸಾಟಿಯಿಲ್ಲದ ಕೃಪೆದೋರಿದ ಈ ಬಾಲಯೇಸುವಿನ ಮಹಿಮೆಯನ್ನು ವರ್ಣಿಸುವ, ವಿವರಿಸುವ ಅಗತ್ಯವಿಲ್ಲ. ಅವೆಲ್ಲಾ ಈ ಭಕ್ತಾದಿಗಳು ಸ್ವತಃ ಅನುಭವಿಸಿದ, ದೃಢೀಕರಿಸಿದ ಸಂಗತಿಗಳು. ಭಕ್ತಾದಿಗಳ ಅನುಭೂತಿ, ಅನುಭಾವ ಅವರ್ಣನೀಯ. ಅವನ ಮನಸ್ಸಿನ, ಹೃದಯದೊಳಗಿನ ಸಂತೃಪ್ತಿ, ಸಂತೋಷ ಅರಿಯಲು ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಬೇಕಿಲ್ಲ, ಅವರ ಮುಖದ ಮೇಲಿನ, ಕಣ್ಣುಗಳಲ್ಲಿನ, ತುಟಿಗಳಲ್ಲಿನ ಸಂತೃಪ್ತ ಭಾವವೇ ಸಾಕು.

ಇಂದು ಮಂಗಳೂರಿನ ಹೆಸರು ದಶದಿಕ್ಕುಗಳಿಗೆ ಸಕಾರಾತ್ಮಕ ವಿಚಾರಕ್ಕೆ ಪಸರಿಸಿದೆಯೆಂದಾದರೆ ಅದರಲ್ಲಿ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದ ಮಹಿಮೆಯೂ ಒಂದೆನ್ನಬಹುದು. ಹಲವು ದಶಕಗಳಿಂದ ಸಣ್ಣ ಮಟ್ಟದಲ್ಲಿ ಇಲ್ಲಿದ ಪ್ರಾರ್ಥನಾ ಮಂದಿರದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ನೆರವೇರುತ್ತಾ ಬಂದಿವೆ. 1996ರಲ್ಲಿ ಇಲ್ಲಿ ವಿನೂತನ ವಾಸ್ತುಶಿಲ್ಪದ, ವಿಶಿಷ್ಟ ರಚನೆಯ ನೂತನ ದೇವಾಲಯ ವಿದ್ಯುಕ್ತವಾಗಿ ಆರಂಭಗೊಂಡ ನಂತರ ಇಲ್ಲಿನ ಕ್ಷೇತ್ರ ಮಹಿಮೆ, ಕಾರಣಿಕ ಶಕ್ತಿ ಸಾವಿರ ಪಟ್ಟು ಹೆಚ್ಚಿತು. ತದನಂತರ ಕೇವಲ ಕ್ರೈಸ್ತರಲ್ಲದೆ, ಹಿಂದೂಗಳೂ ಇತರೆಲ್ಲಾ ಧರ್ಮದವರೂ ಇಲ್ಲಿಗೆ ಆಗಮಿಸಲು ಆರಂಭಿಸಿದರು. ಮುಗ್ಧ ಮುಖದ, ಸ್ನಿಗ್ಧ ನಗುವಿನ ಬಾಲಯೇಸುವಿನ ಭಕ್ತಿ-ಪರವಶತೆಗೊಳಗಾದರು.

ಸೌಹಾರ್ದತೆಯ ಕೇಂದ್ರ ಬಿಂದು ಬಾಲಯೇಸುವಿನ ಪುಣ್ಯಕ್ಷೇತ್ರ

ಇಂದಿನ ಯುಗದಲ್ಲಿ ಮನುಷ್ಯನಿಗೆ ಭ್ರಷ್ಟನಾಗಲು, ಶಾಂತಿ ಕಳೆದುಕೊಳ್ಳಲು ಕಾರಣಗಳು, ನೆಪಗಳು ನೂರಾರಿವೆ. ಶತ ಶತಮಾನಗಳಿಂದ ಈ ನಾಡಿನಲ್ಲಿ ಜನರು ಅನ್ಯೋನ್ಯತೆಯಿಂದ, ಭ್ರಾತೃತ್ವತೆಯಿಂದ ಪರಸ್ಪರ ಸಹಕಾರದಿಂದ ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿದ್ದರು. ಆದರೆ ಯಾವಾಗ ಸ್ವಾರ್ಥ ರಾಜಕೀಯದ ಕಬಂಧಬಾಹುಗಳು ವಿಸ್ತರಿಸಿ ಜನರ ನಿದ್ದೆಗೆಡಿಸಲು ಆರಂಭಿಸಿದವೋ ಇಲ್ಲಿನ ಶಾಂತಿ, ಸಮಾಧಾನ ಕದಡಲು ಪ್ರಾರಂಭವಾಯಿತು. ಆದರೂ, ಜನರು ಮಾತ್ರ ತಮ್ಮಷ್ಟಕ್ಕೆ ಮೊದಲಿಂತೆ ಬಾಳಲು ಪ್ರಯತ್ನಪಡುತ್ತಾ ಎಂದಿನಂತೆ ಪ್ರೀತಿ, ಸಹೋದರತ್ವಕ್ಕೆ ಮಹತ್ವ ನೀಡುತ್ತಾ ಬಾಳುತ್ತಿದ್ದಾರೆ.

ಅಂತಹ ಸಹೋದರತ್ವ, ಸಹಬಾಳ್ವೆ ಮತ್ತು ಸೌಹಾರ್ದತೆಗೆ ಮುಕುಟಮಣಿಯಿದ್ದಂತೆ ಬಾಲಯೇಸುವಿನ ಪುಣ್ಯಕ್ಷೇತ್ರವಿಂದು ಕಂಗೊಳಿಸುತ್ತಿದೆ. ಹಾಗೆ ನೋಡಿದರೆ, ಜನರು ಯಾವುದೇ ಧರ್ಮ-ಜಾತಿ-ಭಾಷೆಗೆ ಸೇರಿದವರಿರಬಹುದು, ಆದರೆ ಸಾರ್ವಜನಿಕವಾಗಿ ಎಲ್ಲರೂ ಒಂದೇ ಎಂಬಂತೆ ಬಾಳುತ್ತಾ ಬಂದಿದ್ದಾರೆ. ಇದಕ್ಕೆ ಚರಿತ್ರೆಯೇ ಇದೆ. ಸಾಮಾನ್ಯವಾಗಿ ಯಾವುದೇ ಧರ್ಮಕ್ಕೆ ಸಂಬಂಧಿಸಿದ ಧರ್ಮ ಕೇಂದ್ರ, ದೇವಳಗಳಿಗೆ ಆಯಾ ಧರ್ಮದವರು ಮಾತ್ರವಲ್ಲ ಇತರ ಜಾತಿ-ಧರ್ಮದ ಜನರೂ ಭಕ್ತಾದಿಗಳಾಗಿ ಆಗಮಿಸುತ್ತಾರೆ. ಇದಕ್ಕೆ ಉದಾಹರಣೆ ನೀಡುವುದಾದರೆ ಕಾರ್ಕಳದ ಅತ್ತೂರಿನ ಸಂತ ಲಾರೆನ್ಸರ ಪುಣ್ಯಕ್ಷೇತ್ರ, ಧರ್ಮಸ್ಥಳ ಸೇರಿದಂತೆ ಹಲವು ದೇವಸ್ಥಾನಗಳು, ಉಳ್ಳಾಲ, ಕಾಜೂರಿನ ದರ್ಗಾಗಳು ಎಲ್ಲಾ ಧರ್ಮೀಯರನ್ನೂ ಆಕರ್ಷಿಸುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಇಂದು ಅತಿ ದೊಡ್ಡ ಆಕರ್ಷಣೆಯೆಂದರೆ ಅದು ಬಿಕರ್ನಕಟ್ಟೆಯ ಬಾಲಯೇಸುವಿನ ದೇವಾಲಯ.

ಮುಗ್ಧ ಮಗುವಿನ ರೂಪದ, ಮಾನವ ಕುಲದ ಉದ್ಧಾರಕ್ಕಾಗಿ ಜನಿಸಿದ ಕ್ರಿಸ್ತನ ಒಂದು ಅವತಾರವೇ ಈ ಬಾಲಯೇಸು. ಯೂರೋಪಿನ ಪ್ರಾಗ್‍ನಲ್ಲಿ ಪ್ರತೀತಿಗೆ, ಖ್ಯಾತಿಗೆ ಒಳಪಟ್ಟ ಈ ಬಾಲಯೇಸುವಿನ ದೈವೀ ಶಕ್ತಿ ನಂತರ ಪ್ರಪಂಚದಾದ್ಯಂತ ತಲುಪಿ, ಜನರ ನಂಬಿಕೆಗೆ ಪಾತ್ರವಾಯಿತು. ಕಾರ್ಮೆಲೈಟ್ ಪಂಥಕ್ಕೆ ಸೇರಿದ ಮಂಗಳೂರಿನ ಈ ಧರ್ಮ ಕೇಂದ್ರದಲ್ಲಿ ಇದೇ ಬಾಲಯೇಸುವಿನ ಆರಾಧನೆ ಪ್ರಾರಂಭವಾಗಿ, ಕ್ರಮೇಣ ಇದೊಂದು ಅತೀ ಪ್ರಮುಖ ಪ್ರಾರ್ಥನಾ ಕೇಂದ್ರವಾಗಿ, ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿತು. ವರ್ಷಗಳಿಂದ ಕ್ರೈಸ್ತರಷ್ಟೇ ಅಲ್ಲದೆ, ಇತರ ಧರ್ಮದ ಅಸಂಖ್ಯಾತ ಭಕ್ತಾದಿಗಳನ್ನೂ ಹಸನ್ಮುಖದಿಂದ, ತೆರೆದ ಬಾಹುಗಳಿಂದ ಮುಕ್ತವಾಗಿ ತನ್ನ ಬಳಿ ಸ್ವಾಗತಿಸುವ ಬಾಲಯೇಸುವಿನ ಮಹಿಮೆ ಅಪಾರ, ವರ್ಣಿಸಲಸದಳ. ಕರಾವಳಿಯಲ್ಲಿ ಅತೀ ಅಗತ್ಯವಾದ ಸೌಹಾರ್ದತೆಯ ಕಂಪನ್ನು ಬೀರುತ್ತಾ ಸರ್ವಜನಾಂಗದ ಶಾಂತಿಯ ತೋಟವಾಗಿ ಈ ಪುಣ್ಯಕ್ಷೇತ್ರ ಖ್ಯಾತಿ ಪಡೆದಿದೆ.

ಭಕ್ತಾದಿಗಳಿಗೆ ದೇವರ ಕೃಪೆಯ ಜೊತೆಗೆ ಅನ್ನಸಂತರ್ಪಣೆ

ಹಾಗೆ ನೋಡಿದರೆ, ಭಾರತದಲ್ಲಿ ಹಿಂದೂ ದೇವಸ್ಥಾನಗಳಲ್ಲಿ, ಆಗಮಿಸಿದ ಭಕ್ತಾದಿಗಳಿಗೆ ದೇವರ ದರ್ಶನದ ಬಳಿಕ ಅನ್ನಸಂತರ್ಪಣೆ ನಡೆಯುವುದು ಶತಮಾನಗಳಿಂದ ರೂಢಿಯಲ್ಲಿರುವ ಆಚರಣೆ. ಇದು ಭಕ್ತಾದಿಗಳಿಗಷ್ಟೇ ಸೀಮಿತವಾಗದೆ ಪ್ರವಾಸಿಗರಿಗೂ ಲಭ್ಯ. ಎಂದಿನಂತೆ, ಈ ದೇವಳಗಳಲ್ಲಿನ ಅನ್ನಸಂತರ್ಪಣೆಯೂ ಎಲ್ಲಾ ಧರ್ಮ-ಜಾತಿಗಳವರಿಗೆ ಮುಕ್ತವಾಗಿ ದೊರಕುತ್ತದೆ.

ಆದರೆ ಕ್ರೈಸ್ತ ದೇವಾಲಯಗಳಲ್ಲಿ ಇಂತಹ ರೂಢಿಯಿಲ್ಲ. ಅದಕ್ಕೊಂದು ಅಪವಾದವೆಂಬಂತೆ, ಮಂಗಳೂರಿನ ಬಾಲಯೇಸುವಿನ ಈ ಪುಣ್ಯಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಮಧ್ಯಾಹ್ನದ ಹೊತ್ತು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಭಾಗ್ಯ ದೊರಕುತ್ತಿದೆ. ಪ್ರತಿ ವರ್ಷ ಜನವರಿಯಲ್ಲಿ ಇಲ್ಲಿನ ವಾರ್ಷಿಕ ಹಬ್ಬದ ಪ್ರಯುಕ್ತ ಈ ಅನ್ನಸಂತರ್ಪಣೆ ನೀಡುವ ಸಂಪ್ರದಾಯ ಜಾರಿಯಲ್ಲಿದೆ. ಜನವರಿ 14 ಮತ್ತು 15ರಂದು ನಡೆಯುವ ವಾರ್ಷಿಕ ಉತ್ಸವದ ಪ್ರಯುಕ್ತ ಹಿಂದಿನ 9 ದಿನಗಳು ನೊವೆನಾ (ವಿಶೇಷ ಪ್ರಾರ್ಥನೆ), ಪೂಜೆ, ಆರಾಧನೆಗಳು ದಿನವಿಡೀ ನಡೆಯುತ್ತವೆ. ಈ ಒಂಭತ್ತು ದಿನಗಳಂದು ಮಧ್ಯಾಹ್ನ 12ರಿಂದ 3 ಗಂಟೆಯ ವರೆಗೆ ನೆರೆದ ಎಲ್ಲಾ ಭಕ್ತಾದಿಗಳಿಗೆ ಊಟ (ಸಸ್ಯಾಹಾರಿ) ವನ್ನು ಒದಗಿಸಲಾಗುತ್ತದೆ. ಹಿಂದೂ ದೇವಳಗಳಲ್ಲಿ ಹೇಗೆ ಭಕ್ತಾದಿಗಳು ಪವಿತ್ರ ಪ್ರಸಾದವಾಗಿ ಅಲ್ಲಿ ದೊರೆಯುವ ಊಟವನ್ನು ಸೇವಿಸುತ್ತಾರೋ, ಬಾಲಯೇಸುವಿನ ಮಂದಿರದಲ್ಲೂ ಅದೇ ರೀತಿ ಭಕ್ತಾದಿಗಳಿಗೆ ಇದು ಪವಿತ್ರ ಪ್ರಸಾದವೇ ಆಗಿದೆ.

ಈ ನೊವೆನಾದ ದಿನಗಳಲ್ಲಿ ಸ್ಥಳೀಯ ಜನರ ಜೊತೆಗೆ ದೂರದೂರುಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಅವರಿಗೆ ಈ ಸುಂದರ ಪ್ರಾಕೃತಿಕ ತಾಣದಲ್ಲಿ ದೈವಿಕ ಶಕ್ತಿಯ ಅನುಭವವಾಗುವುದರ ಜೊತೆಗೆ ಹಸಿದ ಹೊಟ್ಟೆಗೆ ಆಹಾರವೂ ಲಭಿಸುತ್ತದೆ. ಸುತ್ತಲೂ ಭವ್ಯವಾದ, ರಮಣೀಯವಾದ ಪರಿಸರ ಮತ್ತು ಮರ-ಗಿಡಗಳಿಂದ ಕೂಡಿದ ತಂಪಾದ ಪ್ರದೇಶವಿದಾಗಿದ್ದು ಪ್ರಾರ್ಥನೆಗೆ ಹೇಳಿ ಮಾಡಿಸಿದ ಸ್ಥಳ. ಪ್ರಾರ್ಥನೆಗೆ ಅಗತ್ಯವಾದ ಏಕಾಂತದ, ಪ್ರಶಾಂತ ತಾಣವಿದು. ಬೆಟ್ಟದ ತುತ್ತ ತುದಿಯಲ್ಲಿರುವ ಈ ಪುಣ್ಯಕ್ಷೇತ್ರದ ಬೀಡು ಭಕ್ತಾದಿಗಳಿಗೆ ಸೌಂದರ್ಯ ಮತ್ತು ಭಕ್ತಿಯ ಭಾವವನ್ನು ಸ್ವಾಭಾವಿಕವಾಗಿ ಒದಗಿಸುತ್ತದೆ. ತನ್ಮೂಲಕ ಬಾಲಯೇಸುವೆಂಬ ಮಹಾನ್ ದೈವೀ ಶಕ್ತಿಯೊಂದಿಗೆ ನೇರವಾಗಿ ಸಂವಾದ ನಡೆಸಲು ಪ್ರೇರೇಪಿಸುತ್ತದೆ. ದೇವರ ಕೃಪೆಗೆ ಪಾತ್ರರಾಗಲು ಇದೊಂದು ಪ್ರಶಸ್ತ ತಾಣ.

ಪ್ರಸ್ತುತ ವಾರ್ಷಿಕ ಹಬ್ಬದ ಸಡಗರ, ಸಂಭ್ರಮ ಈಗಾಗಲೇ ಮುಗಿಲು ಮುಟ್ಟಿದೆ. ನಾಳೆ, ಜನವರಿ 13ರಂದು, ಭಾನುವಾರ ನೊವೆನಾದ ಕೊನೆಯ ದಿನವಾಗಿದ್ದು, 14ರ ಸೋಮವಾರ ಮತ್ತು 15ರ ಮಂಗಳವಾರದಂದು ಮಹಾ ಉತ್ಸವ ಜರಗಲಿದೆ. ಈ ದಿನಗಳಲ್ಲಿ ಕೊಂಕಣಿ ಸೇರಿದಂತೆ ಕನ್ನಡ, ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ಪೂಜೆ, ಪ್ರಾರ್ಥನೆಗಳು ನಡೆಯುತ್ತವೆ.

ಎಲ್ಲರಿಗೂ ಬಾಲಯೇಸುವಿನ ವಾರ್ಷಿಕ ಮಹೋತ್ಸವದ ಶುಭಾಶಯಗಳು. ಎಲ್ಲಾ ಭಕ್ತಾದಿಗಳಿಗೂ ಬಾಲಯೇಸು ಪ್ರೀತಿಯಿಂದ ಕೃಪೆದೋರಿ ಹರಸಲಿ, ಶಾಂತಿ, ಸಮೃದ್ಧಿ, ಐಶ್ವರ್ಯವನ್ನೊದಗಿಸಲೆಂದು ಹಾರೈಸುತ್ತೇವೆ.

Send Feedback to: budkuloepaper@gmail.com
Like us at: www.facebook.com/budkulo.epaper

Leave a comment

Your email address will not be published. Required fields are marked *