ಸಿಎಎ, ಎನ್‌ಆರ್‌ಸಿಯಿಂದ ಕ್ರೈಸ್ತರಿಗೆ ಯಾವುದೇ ಸಮಸ್ಯೆಯಿಲ್ಲ; ಮಾರ್ಗರೆಟ್ ಆಳ್ವರ ಠೀಕೆ ಅನಗತ್ಯ: ಬಿಜೆಪಿ ಮುಖಂಡ ಜಾಯ್ಲಸ್ ಡಿಸೋಜ
ಸಂದರ್ಶಕ: ಡೊನಾಲ್ಡ್ ಪಿರೇರಾ, ಸಂಪಾದಕ – ಬುಡ್ಕುಲೊ ಇ-ಪತ್ರಿಕೆ www.Budkulo.com
ಕ್ರೈಸ್ತ ಮುಖಂಡ, ಮೂಡುಬಿದ್ರೆಯ ಉದಯೋನ್ಮುಖ ರಾಜಕಾರಣಿ ಜಾಯ್ಲಸ್ ಡಿಸೋಜರನ್ನು ಕರ್ನಾಟಕ ಸರಕಾರ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನೇಮಿಸಿದೆ. ಯುವ ಸಂಘಟನೆಗಳಲ್ಲಿ ದುಡಿದು ಕಳೆದೊಂದು ದಶಕದಿಂದೀಚೆಗೆ ಸಕ್ರಿಯ ರಾಜಕಾರಣಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಮುಖಂಡ ಜಾಯ್ಲಸ್, ಸಣ್ಣ ಪ್ರಾಯದಲ್ಲಿಯೇ ಈ ಗುರುತರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶಿಕ್ಷಣ, ವೈದ್ಯಕೀಯ, ಸಮಾಜ ಸೇವೆ ಕ್ಷೇತ್ರಗಳಲ್ಲಿ ನಾಡಿಗೆ, ರಾಷ್ಟ್ರಕ್ಕೆ ಬಹಳಷ್ಟು ಕೊಡುಗೆ ನೀಡಿರುವ ಕ್ರೈಸ್ತ ಸಮುದಾಯ ಇತರ ಕ್ಷೇತ್ರಗಳಲ್ಲಿ ಹಿಂದಿದೆ. ಈ ನಿಟ್ಟಿನಲ್ಲಿ ಕ್ರೈಸ್ತ ಅಭಿವೃದ್ಧಿ ಮಂಡಳಿ ಬಹಳಷ್ಟು ಪ್ರಯೋಜನಕಾರಿ. ಇದರ ನೇತೃತ್ವವೀಗ ಜಾಯ್ಲಸ್ ಹೆಗಲಿಗೇರಿದೆ.
ಈ ಹಿನ್ನೆಲೆಯಲ್ಲಿ ಜಾಯ್ಲಸ್ ಅವರ ಅನಿಸಿಕೆ, ಮುಂದಿನ ಯೋಜನೆಗಳೇನು ಮತ್ತು ಪ್ರಮುಖ ಪ್ರಚಲಿತ ಸಂಗತಿಗಳ ಬಗೆಗೆ ಅವರ ಅಭಿಪ್ರಾಯಗಳೇನು ಎಂಬುದರ ಬಗ್ಗೆ ‘ಬುಡ್ಕುಲೊ’ ಇ-ಪತ್ರಿಕೆ ಅವರ ಜೊತೆ ಸಂದರ್ಶನ ನಡೆಸಿತು. ಕೊಂಕಣಿಯಲ್ಲಿ ನಡೆಸಿದ ಆ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ಕೊಡಲಾಗಿದೆ.
-ಸಂಪಾದಕ
ಬುಡ್ಕುಲೊ: ಜಾಯ್ಲಸ್ ಡಿಸೋಜ, ಕರ್ನಾಟಕ ಸರಕಾರದ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದೀರಿ. ಸಮಸ್ತ ಕ್ರೈಸ್ತ ಸಮುದಾಯದ ಪರವಾಗಿ ಅಭಿನಂದನೆಗಳು. ನಿಮ್ಮ ರಾಜಕೀಯ ಪ್ರವೇಶ ಹೇಗಾಯಿತು?
ಜಾಯ್ಲಸ್ ಡಿಸೋಜ: ಧನ್ಯವಾದಗಳು. ನನ್ನ ತಂದೆ ನಮ್ಮೂರು ಹೊಸಬೆಟ್ಟು ಮಂಡಲ ಪಂಚಾಯತ್‍ನ ಸದಸ್ಯರಾಗಿದ್ದರು. ಊರಿನಲ್ಲಿ ಅವರು ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದರು. ಅವರ ಪ್ರೇರಣೆಯಿಂದ ಚಿಕ್ಕಂದಿನಿಂದಲೇ ನನಗೆ ರಾಜಕೀಯದಲ್ಲಿ ಆಸಕ್ತಿ ಮೂಡಿತ್ತು. ಯುವ ಸಂಘಟನೆಗಳಲ್ಲಿಯೂ ದುಡಿದಿದ್ದೇನೆ.
ಬುಡ್ಕುಲೊ: ಯುವ ಸಂಘಟನೆಗಳಲ್ಲಿ ಏನೇನು ಕೆಲಸ ಮಾಡಿದ್ದೀರಿ?
ಜಾಯ್ಲಸ್: ಪಿಯುಸಿಯಲ್ಲಿದ್ದಾಗ ವೈ.ಸಿ.ಎಸ್. ಸಂಘಟನೆ ಸೇರಿದೆ. ಅದರ ಕೇಂದ್ರೀಯ ಕಾರ್ಯದರ್ಶಿಯಾಗಿದ್ದೆ. ಫಾ. ಚಾರ್ಲ್ಸ್ ಅದರ ನಿರ್ದೇಶಕರಾಗಿದ್ದರು. ಆಗ ನನಗೆ ಬಹಳ ಅವಕಾಶಗಳು ಸಿಕ್ಕಿವೆ. ಅವಿಭಜಿತ ದಕ್ಷಿಣ ಕನ್ನಡದ ಉದ್ದಗಲಕ್ಕೂ ಓಡಾಡಿದ್ದೇನೆ. ನಂತರ ಐ.ಸಿ.ವೈ.ಎಂ.ಗೆ ಸೇರಿದೆ. ಸ್ಥಳೀಯ ಘಟಕದ ಅಧ್ಯಕ್ಷನಾಗಿ, ವಾರಾಡೊ ಹಂತದಲ್ಲಿ ಹಲವು ಹುದ್ದೆಗಳಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದ್ದೇನೆ. ಆಮೇಲೆ ಕಥೊಲಿಕ್ ಸಭಾದ ಸದಸ್ಯನಾಗಿ ಹಲವು ಹಂತಗಳಲ್ಲಿ ದುಡಿದಿದ್ದೇನೆ. ಮೂಡುಬಿದ್ರೆಯಲ್ಲಿ ನಡೆದ ರಾಜಕೀಯ ಸಮಾವೇಶದ ಕೋಶಾಧಿಕಾರಿಯಾಗಿದ್ದೆ. ನಾನೀಗಲೂ ಆ ಸಂಘಟನೆಯ ಸಕ್ರಿಯ ಕಾರ್ಯಕರ್ತ.
ಬುಡ್ಕುಲೊ: ಬಿ.ಜೆ.ಪಿ.ಗೆ ಹೇಗೆ ಸೇರ್ಪಡೆಯಾದಿರಿ?
ಜಾಯ್ಲಸ್: ನಾನು 9 ವರ್ಷಗಳ ಹಿಂದೆ ಬಿಜೆಪಿಗೆ ಸೇರಿದೆ. ಮೊದಲು ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೆ. ನನ್ನ ಕೆಲಸ ನೋಡಿ ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿದರು. ನಮ್ಮ ಕ್ರೈಸ್ತ ಮುಖಂಡರು ಯಾವಾಗಲೂ, ನಾವು ಒಂದೇ ಪಕ್ಷವನ್ನು ಅವಲಂಬಿಸಿರಬಾರದು, ಇತರ ಪಕ್ಷಗಳಿಗೂ ಸೇರಬೇಕೆನ್ನುತ್ತಿದ್ದರು. ಹಾಗಾಗಿ ನಾನು ನಿರ್ಧಾರ ತೆಗೆದುಕೊಂಡೆ. ಬಿಜೆಪಿಗೆ ಕ್ರೈಸ್ತ ಮುಖಂಡರ ಅವಶ್ಯಕತೆಯಿತ್ತು. ಹಾಗೆ ನಾನು ಬಿಜೆಪಿಗೆ ಭರ್ತಿಯಾದೆ.
ಬುಡ್ಕುಲೊ: ರಾಜಕೀಯಕ್ಕೆ ಸೇರಿದ ಉದ್ದೇಶವೇನು?
ಜಾಯ್ಲಸ್: ಸಮಾಜಕ್ಕೆ ನನ್ನಿಂದೇನಾದರೂ ಕೊಡುಗೆ ನೀಡಬೇಕೆಂಬ ಅಪೇಕ್ಷೆ ನನ್ನಲ್ಲಿತ್ತು. ರಾಜಕೀಯ ಎಂದರೆ ಸಾಮಾಜಿಕ ಸೇವೆ ಮಾಡುವುದು. ರಾಜಕೀಯ ಅಧಿಕಾರವಿದ್ದರೆ ಹೆಚ್ಚಿನದನ್ನು ಸಾಧಿಸಲು ನೆರವಾಗುತ್ತದೆ. ಮಹತ್ತರವಾದುದನ್ನು ಸಾಧಿಸಿ ಸಮಾಜಕ್ಕೆ ನನ್ನ ಸೇವೆ ನೀಡುವುದು ನನ್ನ ಗುರಿ.
ಕ್ರೈಸ್ತರಿಗೆ ಅಪಥ್ಯವಾದ ಬಿಜೆಪಿಯಲ್ಲಿನ ಅನುಭವ…
ಬುಡ್ಕುಲೊ: ಹೆಚ್ಚಿನ ಕ್ರೈಸ್ತರಿಗೆ ಕಾಂಗ್ರೆಸ್ ಈಗಲೂ ನೆಚ್ಚಿನ ಪಕ್ಷ. ಬಿಜೆಪಿ ಎಂದರೆ ಅಷ್ಟಕ್ಕಷ್ಟೆ. ಅಂಥಾ ಜಾರ್ಜ್ ಫೆರ್ನಾಂಡಿಸ್‍ರಿಗೆ ಅವರು ಕಾಂಗ್ರೆಸ್ ವಿರೋಧಿ ಮತ್ತು ಬಿಜೆಪಿ ಜೊತೆಗೆ ಹೋದವರೆಂಬ ಕಾರಣಕ್ಕಾಗಿ ಅವರನ್ನು ಕ್ರೈಸ್ತ ಸಮುದಾಯ ಅಷ್ಟಾಗಿ ಗೌರವಿಸಲಿಲ್ಲ. ಇಂತಹ ಪ್ರತಿಕೂಲ ವಾತಾವರಣದಲ್ಲಿ ನೀವು ಬಿಜೆಪಿ ಸೇರಿದ್ದೀರಿ. ನಿಮ್ಮ ಅನುಭವ ಹೇಗಿದೆ?
ಜಾಯ್ಲಸ್: ನಮ್ಮ ಸಮುದಾಯದಲ್ಲಿ 90% ಜನರು ಮತದಾರರು. 5% ಜನರು ಮಾತ್ರ ರಾಜಕೀಯದಲ್ಲಿರುವವರು (5% ಧಾರ್ಮಿಕ ವರ್ಗದವರು). ಈ 5% ಜನರಲ್ಲಿ ಬಹುತೇಕರು ಕಾಂಗ್ರೆಸ್ಸಿಗರು. ಅವರಷ್ಟೇ ಹೀಗೆ ಹೇಳುವುದು. 90% ಜನರು ಮತದಾನದ ದಿನ ಮಾತ್ರ ರಾಜಕೀಯ ಮಾತನಾಡುವುದು. ನಾನು ಬಹಳ ಸಂಘಟನೆಗಳಲ್ಲಿ ದುಡಿದಿದ್ದೇನೆ. ನನ್ನ ಪರಿಚಯವಿರುವವರು ನನ್ನನ್ನು ವಿರೋಧಿಸಿಲ್ಲ. ನನಗೆ ಬೆಂಬಲ ಸಿಕ್ಕಿದೆ. ರಾಜಕೀಯದ ಜೊತೆಗೆ ಚರ್ಚ್‍ನ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದರಿಂದ ನನಗೆ ಮಾನ್ಯತೆ ಸಿಕ್ಕಿದೆ. ‘ಜಾಯ್ಲಸ್ ನಮ್ಮ ವ್ಯಕ್ತಿ’ ಎಂದವರು ನನ್ನನ್ನು ಪರಿಗಣಿಸಿದ್ದಾರೆ. ಹಾಗಾಗಿ ನನಗೇನೂ ಹೆಚ್ಚಿನ ಸಮಸ್ಯೆಯಾಗಿಲ್ಲ. ಜಾರ್ಜ್ ಫೆರ್ನಾಂಡಿಸ್ ಅವರು ನಮ್ಮ ಸಮಾಜಕ್ಕಾಗಿ ಬಹಳಷ್ಟನ್ನು ಕೊಟ್ಟಿದ್ದಾರೆ. ಅವರಿಗೆ ನೈಜವಾಗಿ ದೊರಕಬೇಕಾದ ಗೌರವ ಸಿಕ್ಕಿಲ್ಲ. ಅವರಿಗೆ ಇನ್ನೂ ಹೆಚ್ಚಿನ ಮನ್ನಣೆ ಕೊಡಬೇಕಾಗಿತ್ತು.
ಬುಡ್ಕುಲೊ: ಬಿಜೆಪಿಯಲ್ಲಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ?
ಜಾಯ್ಲಸ್: ನಾನು ಪಕ್ಷದ ಮೂಡುಬಿದ್ರೆ ವಲಯದಲ್ಲಿ ಕೆಲಸ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುವವರನ್ನು ಬಿಜೆಪಿಯಲ್ಲಿ ಆಹ್ವಾನಿಸಿ ಅವಕಾಶ ಕೊಡುತ್ತಾರೆ. ನನ್ನ ಕೆಲಸವನ್ನು ನೋಡಿಯೇ ಅವರು ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದು. ದ.ಕ. ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷನನ್ನಾಗಿ ಮಾಡಿದರು. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಲು ಮತ್ತು ರಾಜ್ಯದ ಮುಖಂಡರೊಂದಿಗೆ ಬೆರೆಯಲು ಅವಕಾಶ ದೊರೆಯಿತು. ಬಿಜೆಪಿಗೆ ಮತ್ತಷ್ಟು ಹೆಚ್ಚಿನ ಜನರ ಮತ ಪಡೆಯಲು ದುಡಿದಿದ್ದೇನೆ. ಪ್ರಸ್ತುತ ರಾಜ್ಯದ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನನ್ನಾಗಿ ನೇಮಿಸಿದ್ದಾರೆ. ಈ ಹುದ್ದೆಗೆ ಹಲವು ಜನ ಉಮೇದ್ವಾರರಿದ್ದರು. ನನ್ನ ಕೆಲಸ ನೋಡಿ ಪಕ್ಷ ನನ್ನನ್ನು ಆಯ್ಕೆ ಮಾಡಿದೆ. ಬಿಜೆಪಿಯಲ್ಲಿ ನನಗೆ ಒಳ್ಳೆಯ ಅನುಭವವಾಗಿದೆ.
ಬುಡ್ಕುಲೊ: ಯಾವುದೇ ಬೇಧಭಾವ ಮಾಡುವುದಿಲ್ಲವೇ..?
ಜಾಯ್ಲಸ್: ಇಲ್ಲ. ನಮ್ಮಲ್ಲಿನ ಎಲ್ಲಾ ಸಭೆಗಳಲ್ಲಿ ಎಲ್ಲರೂ ಜೊತೆಯಲ್ಲಿ ಕುಳಿತು ಚರ್ಚಿಸುತ್ತೇವೆ. ಯಾರನ್ನೂ ಹೊರಗಿಡುವುದಿಲ್ಲ. ಇತರ ಮೋರ್ಚಾಗಳೊಂದಿಗೆ ಅಲ್ಪಸಂಖ್ಯಾತ ಮೋರ್ಚಾದವರಿಗೂ ಅವಕಾಶ ಸಿಗುತ್ತದೆ. ಅಲ್ಲಿ ರಾಜಕೀಯ ವಿಚಾರಗಳನ್ನು ಚರ್ಚಿಸಲಾಗುತ್ತದೆ. ಪಕ್ಷವನ್ನು ಬಲಪಡಿಸುವ ವಿಚಾರ, ಜನರ ಅವಶ್ಯಕತೆಗಳನ್ನು ತಿಳಿದುಕೊಳ್ಳುವುದು, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಮುಂತಾದ ಸಂಗತಿಗಳನ್ನು ಚರ್ಚಿಸುತ್ತೇವೆ. ಬಿಜೆಪಿಯಲ್ಲಿ ಕ್ರೈಸ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ.
ಬುಡ್ಕುಲೊ: ಬಿಜೆಪಿಯನ್ನು ನಿಯಂತ್ರಿಸುವುದು ಆರ್.ಎಸ್.ಎಸ್. ಬಿಜೆಪಿಗೆ ಅಲ್ಪಸಂಖ್ಯಾತರ ಸಹಕಾರ, ಮತ ಬೇಕು ಎಂಬ ಕಾರಣಕ್ಕಾಗಿ ಅಲ್ಪಸಂಖ್ಯಾತರಿಗೆ ಅಲ್ಲಿ ಅವಕಾಶ ಸಿಗುತ್ತದೆ. ಆದರೆ ದೊಡ್ಡ ಹುದ್ದೆ, ಸ್ಥಾನಗಳಲ್ಲಿ ಅವರಿಗೆ ಅವಕಾಶ ಕೊಡುವುದಿಲ್ಲ. ಕೆಳ ಹಂತದ ಹುದ್ದೆ/ಸ್ಥಾನಗಳಲ್ಲಷ್ಟೇ ಅವರು ತೃಪ್ತಪಡಬೇಕು. ಉದಾಹರಣೆಗೆ, ಎಂಎಲ್‍ಎ ಅಥವಾ ಎಂಪಿ ಚುನಾವಣೆಗೆ ಟಿಕೆಟ್ ಕೊಡುವುದಿಲ್ಲ. ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ನೈಜ ಕಾಳಜಿಯಿಲ್ಲ… ಇಂತಹ ಆರೋಪಗಳು ಕೇಳಿ ಬರುತ್ತವೆಯಲ್ಲವೇ?
ಜಾಯ್ಲಸ್: ಹಾಗೆ ಹೇಳುವುದು ಸರಿಯಲ್ಲ. ಎಂಎಲ್‍ಎ ಚುನಾವಣೆಗೆ ಟಿಕೆಟ್ ಕೊಡುವಾಗ ಗೆಲ್ಲುವ ಸಾಧ್ಯತೆಯನ್ನು ಪರಿಗಣಿಸಬೇಕಾಗುತ್ತದೆ. ಆ ಮಟ್ಟಕ್ಕೆ ನಮ್ಮ ಮುಖಂಡರು ತಯಾರಾಗಿಲ್ಲ. ಬಿಜೆಪಿಯಲ್ಲಿರುವ ಕ್ರೈಸ್ತ ಮತ್ತು ಮುಸ್ಲಿಮ್ ನಾಯಕರು ಆ ಹಂತಕ್ಕಿನ್ನೂ ತಲುಪಿಲ್ಲ. ಗೆಲ್ಲುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳಿದ್ದರೆ ಪಕ್ಷ ಖಂಡಿತಾ ಟಿಕೆಟ್ ನೀಡುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡಲಾಗಿದೆ. ಹಿಂದಿನ ಎನ್‍ಡಿಎ ಸರ್ಕಾರದಲ್ಲಿ ಕೇರಳದ ಕ್ರೈಸ್ತರಾದ ಕೆ.ಜೆ. ಅಲ್ಫೋನ್ಸ್‍ರಿಗೆ ಸಚಿವ ಸ್ಥಾನ ನೀಡಲಾಗಿತ್ತು. ದೊಡ್ಡ ಚುನಾವಣೆಗಳಲ್ಲಿ ಗೆಲ್ಲುವ ಮಾನದಂಡವನ್ನು ಪರಿಗಣಿಸುತ್ತಾರೆ. ಕರಾವಳಿಯಲ್ಲಿ ಜಿಲ್ಲಾ ಪಂಚಾಯತ್, ಎಪಿಎಂಸಿ ಚುನಾವಣೆಗೆ ಕ್ರೈಸ್ತರಿಗೆ ಅವಕಾಶ ಸಿಕ್ಕಿದ್ದು, ಅವರು ಯಶಸ್ವಿಯಾಗಿದ್ದಾರೆ. ಅಲ್ಪಸಂಖ್ಯಾತರಿಗೆ ಅವಕಾಶ ನೀಡಿಲ್ಲವೆನ್ನುವುದು ತಪ್ಪು. ಎಂಎಲ್‍ಎ ಟಿಕೆಟ್ ಪಡೆಯುವ ಮಟ್ಟಕ್ಕೆ ನಮ್ಮ ಮುಖಂಡರು ತಲುಪಿಲ್ಲ. ಅದಕ್ಕಾಗಿ ಪಕ್ಷವನ್ನು ದೂರುವುದು ಸರಿಯಲ್ಲ. ಅಂತಹ ಮಟ್ಟವನ್ನು ತಲುಪಿದಾಗ ಪಕ್ಷ ಖಂಡಿತಾ ಅವಕಾಶ ಕೊಡುತ್ತದೆ.
ಬುಡ್ಕುಲೊ: ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹುದ್ದೆ ನಿಮಗೆ ದೊರೆತಿದೆ. ನಿಮ್ಮ ಕಾರ್ಯ ಯೋಜನೆಗಳೇನು?
ಜಾಯ್ಲಸ್: ನಾನೀಗ ಅಧ್ಯಕ್ಷನಾಗಿದ್ದೇನೆ. ಸದಸ್ಯರ ನೇಮಕ ಇನ್ನಷ್ಟೇ ಆಗಬೇಕಿದೆ. ಪೂರ್ಣ ಸಮಿತಿ ರಚನೆಗೊಂಡ ನಂತರ ಮುಂದಿನ ಕಾರ್ಯ ಯೋಜನೆಗಳನ್ನು ನಿರ್ಧರಿಸುತ್ತೇವೆ. ನಿಧಿಯನ್ನು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬಳಸುವುದಕ್ಕಾಗಿ ಯೋಜಿಸುತ್ತೇವೆ. ಈ ಹಿಂದೆ ಅನುದಾನವನ್ನು ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಳಸಲಾಗಿದೆ. ಇನ್ನೂ ಹೆಚ್ಚಿನ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಗಮನ ನೀಡುತ್ತೇವೆ. ರಾಜ್ಯದ ಇತರ ಪ್ರದೇಶಗಳಿಗೆ, ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ, ಹಣಕಾಸಿನ ನೆರವು ಅಗತ್ಯವಿದೆ. ಅಲ್ಲಿ ಚರ್ಚ್‍ಗಳಿಗೆ ಸರಿಯಾದ ಕಟ್ಟಡಗಳಿಲ್ಲ. ಹಾಸ್ಟೆಲ್‍ಗಳಿಗೆ ನೆರವಿನ ಅಗತ್ಯವಿದೆ.
ನಮ್ಮ ಸಮುದಾಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಆಕರ್ಷಿತರಾಗಲು ಹೆಚ್ಚಿನ ನೆರವು ಅಗತ್ಯವಿದೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಈಗಾಗಲೇ ಈ ನಿಟ್ಟಿನಲ್ಲಿ ತರಬೇತಿ ಕೇಂದ್ರ ಸ್ಥಾಪನೆಯಾಗಿದೆ. ಈ ದಿಸೆಯಲ್ಲಿ ದೊಡ್ಡ ಮಟ್ಟದ ಯೋಜನೆಯ ಅಗತ್ಯವಿದೆ. ಅಲ್ಲದೆ, ಹಳ್ಳಿ, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಆಸ್ಪತ್ರೆ, ಡಿಸ್ಪೆನ್ಸರಿಗಳಿಗೆ ಆರ್ಥಿಕ ನೆರವು ಬೇಕಾಗಿದೆ. ನೆರವಿನ ಅವಶ್ಯಕತೆಯಿರುವ ಶಾಲೆಗಳಿಗೂ ಸಹಾಯ ಮಾಡಬೇಕಾಗಿದೆ. ಬಡ ಜನರಿಗೆ ನೆರವು ನೀಡುವ ಯೋಜನೆಗಳಿಗೆ ಹೆಚ್ಚಿನ ಅನುದಾನ ಕೊಡಬೇಕಾಗಿದೆ.
ಹೆಚ್ಚಿನ ಅನುಕೂಲಕ್ಕಾಗಿ ಮಂಡಳಿಯನ್ನು ನಿಗಮವನ್ನಾಗಿ ಮೇಲ್ದರ್ಜೆಗೇರಿಸುವುದು ಅವಶ್ಯಕ. ನಿಗಮ ಸ್ಥಾಪಿಸುವ ಘೋಷಣೆಯಾಗಿದೆ, ಅದಿನ್ನೂ ಜಾರಿಯಾಗಬೇಕಾಗಿದೆ. ಆ ನಿಟ್ಟಿನಲ್ಲಿ ನಾನು ತುಂಬಾ ಶ್ರಮಿಸುತ್ತಿದ್ದೇನೆ. ನಿಗಮ ಸ್ಥಾಪನೆಯಾದಲ್ಲಿ ಇನ್ನಷ್ಟು ಹೆಚ್ಚಿನ ನೆರವು ಪಡೆಯಲು ಹಾಗೂ ಮತ್ತಷ್ಟು ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. ಬಡ ಮಕ್ಕಳ ಹಾಸ್ಟೆಲ್‍ಗಳಿಗೆ ನೆರವು ನೀಡಬೇಕಾಗಿದೆ.
ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದೇ ಬಿಜೆಪಿ ಸರಕಾರ. ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮುತುವರ್ಜಿಯಿಂದ ಮಂಡಳಿ ಸ್ಥಾಪನೆಗೊಂಡಿತ್ತು. ಈಗ ಅದನ್ನು ನಿಗಮ ಮಾಡುವುದಕ್ಕೆ ಅವರು ಉತ್ಸುಕರಾಗಿದ್ದು, ಕ್ರೈಸ್ತ ಸಮುದಾಯಕ್ಕೆ ಹೆಚ್ಚಿನ ಮಟ್ಟದ ನೆರವು ನೀಡಲು ಅವರು ಬಹಳಷ್ಟು ಗಮನ ಹರಿಸಿದ್ದಾರೆ.
ಕಪಾಲಬೆಟ್ಟದಲ್ಲಿ ಯೇಸು ಮೂರ್ತಿ ಮತ್ತು ರಾಜಕೀಯ…
ಬುಡ್ಕುಲೊ: ಕನಕಪುರದ ಕಪಾಲಬೆಟ್ಟದಲ್ಲಿ ನಿಜಕ್ಕೂ ನಡೆಯುತ್ತಿರುವುದೇನು? ಅಲ್ಲಿ ಯೇಸುವಿನ ಮೂರ್ತಿಯನ್ನು ನಿರ್ಮಿಸುವುದಕ್ಕೆ ಯಾಕೆ ವಿರೋಧ? ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಅಲ್ಲಿಗೆ ಹೋಗಿ ಮಾತನಾಡಿ ಬಂದರಲ್ಲಾ..!
ಜಾಯ್ಲಸ್: ಕಪಾಲಬೆಟ್ಟದಲ್ಲಿ ಯೇಸುವಿನ ಬೃಹತ್ ಮೂರ್ತಿ ಸ್ಥಾಪನೆಯ ಯೋಜನೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೋಗಿದ್ದರು. ಧರ್ಮ ಮತ್ತು ರಾಜಕೀಯ ಬೆರೆಯುವಾಗ ಎಚ್ಚರಿಕೆ ವಹಿಸಬೇಕು. ಯಾವಾಗಲೂ ಒಂದೇ ಪರಿಸ್ಥಿತಿ ಇರುತ್ತದೆ ಎನ್ನಲಾಗದು. ಅಲ್ಲಿನವರು ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಬೇಕಿತ್ತು. ಧಾರ್ಮಿಕ ಕಾರ್ಯಕ್ರಮಗಳಿಂದ ರಾಜಕೀಯವನ್ನು ದೂರವಿರಿಸಬೇಕಿತ್ತು.
ಕಾಂಗ್ರೆಸಿನ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ಮಾಡುವಾಗ ಇತರ ಪಕ್ಷದವರು ರಾಜಕೀಯ ಮಾಡಿದರೆ ತಪ್ಪೇನಿದೆ? ನಮ್ಮ ಧಾರ್ಮಿಕ ವರ್ಗದವರು ಒಂದೇ ಪಕ್ಷಕ್ಕೆ ಪ್ರಾಮುಖ್ಯತೆ ನೀಡುವ ಮುಂಚೆ ಚಿಂತನೆ ನಡೆಸಬೇಕಿತ್ತು. ಎಲ್ಲ ಪಕ್ಷಗಳಿಗೂ ಮನ್ನಣೆ ನೀಡಬೇಕಿತ್ತು. ಡಾ. ಕಲ್ಲಡ್ಕ ಪ್ರಭಾಕರ್ ಭಟ್‍ರನ್ನು ಕರೆದಿದ್ದಕ್ಕೆ ಹೋಗಿ ಕೇವಲ ಭಾಷಣ ಮಾಡಿದ್ದಾರೆ.
ಪೌರತ್ವ ಕಾನೂನು ಮತ್ತು ಕ್ರಿಶ್ಚಿಯನ್ನರ ಆತಂಕ…
ಬುಡ್ಕುಲೊ: ಸಿ.ಎ.ಎ., ಎನ್.ಆರ್.ಸಿ. ಆನಿ ಎನ್.ಪಿ.ಆರ್. ಕುರಿತು ಗೊಂದಲ ಎಲ್ಲಾ ಕಡೆ ವ್ಯಾಪಿಸಿದೆ. ತಮಗೂ ಮುಂದೆ ಅಪಾಯ ಕಾದಿದೆ ಎಂದು ಕ್ರೈಸ್ತರು ಆತಂಕಕ್ಕೊಳಗಾಗಿದ್ದಾರೆ. ಮೊದಲು ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗಿದೆ, ನಂತರದ ಸರದಿ ಕ್ರೈಸ್ತರದ್ದು ಎಂಬುದಾಗಿ ಕೆಲವರು ವಾದಿಸುತ್ತಿದ್ದಾರೆ… ನಿಜ ಸಂಗತಿ ಏನು?
ಜಾಯ್ಲಸ್: ಸಿ.ಎ.ಎ. ಕಾನೂನು ನಮಗ್ಯಾರಿಗೂ ಅಲ್ಲವೇ ಅಲ್ಲ. ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ಮಾತ್ರ ಆ ಕಾನೂನು ಅನ್ವಯಿಸುತ್ತದೆ. ಇಲ್ಲಿ ಯಾರು ನಾಗರಿಕರಾಗಿದ್ದಾರೋ ಅವರಿಗೆ ಅದು ಅನ್ವಯಿಸುವುದಿಲ್ಲ. ಇಲ್ಲಿರುವ ಯಾರಿಗೂ ಏನೂ ಸಮಸ್ಯೆಯಿಲ್ಲ. ಸಂಸತ್ತಿನಲ್ಲಿ ಕಾಯ್ದೆ ಮಂಜೂರಾಗಿ ಕಾನೂನಾಗಿದೆ. ಅದರಲ್ಲಿರುವ ಹಿಂದಿನ ನಿಯಮಗಳನ್ನು ಬದಲಿಸಿಲ್ಲ ಆಥವಾ ತೆಗೆದು ಹಾಕಿಲ್ಲ. ಅವು ಮೂರೂ ಮುಸ್ಲಿಮ್ ರಾಷ್ಟ್ರಗಳು, ನಮ್ಮ ಭಾರತ ಜಾತ್ಯತೀತ ರಾಷ್ಟ್ರ. ಅಫ್ಗಾನಿಸ್ತಾನದಿಂದ ಹಲವಾರು ಕ್ರೈಸ್ತರು ನಿರಾಶ್ರಿತರಾಗಿ ಬಂದಿದ್ದು ಅವರು ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ.
ನಾವೆಲ್ಲಾ ಭಾರತದ ನಾಗರಿಕರಾಗಿ ಯಾರಿದ್ದೇವೋ ಅವರಿಗೆ ಈ ಕಾನೂನು ಖಂಡಿತಾ ಅನ್ವಯಿಸುವುದಿಲ್ಲ. ಯಾರು ಈ ಬಗ್ಗೆ ವಿರೋಧಿಸುತ್ತಿದ್ದಾರೋ ಅವರು ಕೇವಲ ರಾಜಕೀಯ ಕಾರಣಗಳಿಗೋಸ್ಕರ ಮಾತನಾಡುತ್ತಿದ್ದಾರೆ. ಯಾರಿಗೂ ಅನ್ಯಾಯವಾಗುವುದಿಲ್ಲ. ಭಾರತದ ಮುಸ್ಲಿಮರಿಗೂ ಯಾವುದೇ ತೊಂದರೆಯಿಲ್ಲ. ವಿರೋಧ ಪಕ್ಷಗಳಿಗೆ ಅಸ್ತಿತ್ವದ ಸಮಸ್ಸೆ ಕಾಡುತ್ತಿದೆ. ತಮ್ಮ ಅಸ್ತಿತ್ವವನ್ನು ಉಳಿಸುವ ಸಲುವಾಗಿ ಈ ವಿಚಾರಗಳನ್ನು ತೆಗೆದುಕೊಂಡು ಗೊಂದಲ ಸೃಷ್ಟಿಸುತ್ತಿದ್ದಾರೆ. ಅದು ಅವರ ಅನಿವಾರ್ಯತೆ. ಜನರಿಗೆ ಯಾವುದೇ ಸಮಸ್ಯೆಯಾಗದು. ಪೌರತ್ವ ಕಾನೂನನ್ನು ವಿರೋಧಿಸುವವರು ಅದನ್ನು ಓದಿಯೇ ಇಲ್ಲ.
ಬುಡ್ಕುಲೊ: ಎನ್.ಆರ್.ಸಿ. ಎಂದರೇನು? ಇಲ್ಲಿರುವ ಜನರು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕೇ?
ಜಾಯ್ಲಸ್: ಅಸ್ಸಾಂನಲ್ಲಿ ಮಾತ್ರ ಎನ್.ಆರ್.ಸಿ. ಜಾರಿಯಾಗಿದೆ. ಯು.ಪಿ.ಎ. ಸರ್ಕಾರ ಅದನ್ನು ಜಾರಿಗೆ ತಂದಿತ್ತು. ಸುಪ್ರೀಂ ಕೋರ್ಟಿನ ನಿರ್ದೇಶನಾನುಸಾರ ಅಸ್ಸಾಂ ರಾಜ್ಯದಲ್ಲಿ ಅದನ್ನು ಜಾರಿಗೊಳಿಸಲಾಗಿದೆ. ಇಡೀ ದೇಶಕ್ಕೆ ಅಳವಡಿಸಿಲ್ಲ. ಆ ಬಗ್ಗೆ ಸರ್ಕಾರವೇ ಸ್ಪಷ್ಟನೆ ನೀಡಿದೆ. ವಿರೋಧ ಪಕ್ಷಗಳು ಸುಮ್ಮನೆ ಜನರ ನಡುವೆ ಗೊಂದಲ ಹುಟ್ಟಿಸಿ ಸಂಶಯ ಮೂಡಿಸುತ್ತಿವೆ.
ಬುಡ್ಕುಲೊ: ಹಾಗಾದರೆ, ಕ್ರೈಸ್ತ ಸಮುದಾಯದವರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲವೆನ್ನುತ್ತೀರಾ?
ಜಾಯ್ಲಸ್: 100% ಹೆದರುವ ಅಗತ್ಯವಿಲ್ಲ. ಕ್ರೈಸ್ತರು ಮಾತ್ರವಲ್ಲ, ಭಾರತದ ನಾಗರಿಕರಾಗಿರುವ ಯಾರೂ ಸಹ ಖಂಡಿತವಾಗಿ ಆತಂಕಕ್ಕೊಳಪಡಬೇಕಿಲ್ಲ. ಭಾರತೀಯರಿಗೆ ಯಾವುದೇ ಸಮಸ್ಸೆಗಳಿಲ್ಲ.
ಬುಡ್ಕುಲೊ: ಕ್ರೈಸ್ತರ ಪರವಾಗಿ ಬೆಂಗಳೂರಿನ ಆರ್ಚ್ ಬಿಶಪ್ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರಲ್ಲವೇ? ಅದಕ್ಕೇನು ಹೇಳುತ್ತೀರಿ?
ಜಾಯ್ಲಸ್: ಆರ್ಚ್ ಬಿಶಪರ ಮಾತಿಗೆ ನಾನು ಕಮೆಂಟ್ ಮಾಡುವುದಿಲ್ಲ. ಅವರಿಗೆ ಆ ಸಂದರ್ಭದಲ್ಲಿ ತಪ್ಪು ಮಾಹಿತಿ ಸಿಕ್ಕಿರಬಹುದು, ಹಾಗೂ, ಅವರು ಅವಸರ ಮಾಡಿದರೆಂದು ಕಾಣುತ್ತದೆ. ಅದರ ಬದಲು ಸರಿಯಾದ ಮಾಹಿತಿ ಪಡೆದುಕೊಂಡಿರಬೇಕಿತ್ತು ಎಂದು ನನಗೆ ಅನಿಸುತ್ತದೆ.
ಮಾರ್ಗರೆಟ್ ಆಳ್ವರಿಂದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ…
ಬುಡ್ಕುಲೊ: ಉಡುಪಿಯಲ್ಲಿ ಕಥೊಲಿಕ್ ಸಭಾ ಆಯೋಜಿಸಿದ್ದ ಕ್ರೈಸ್ತ ಸಮುದಾಯೋತ್ಸವದಲ್ಲಿ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವರವರು ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರುದ್ಧ ಉಗ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರಲ್ಲಾ…
ಜಾಯ್ಲಸ್: ತಮಗೆ ದೊರೆತ ವೇದಿಕೆಯನ್ನು ಯಾವುದಕ್ಕಾಗಿ ಬಳಸಬೇಕೆಂಬಷ್ಟು ಪ್ರಜ್ಞೆ ಇರದಿದ್ದುದು ಮಾರ್ಗರೆಟ್ ಆಳ್ವರವರ ಸಣ್ಣತನವೆನ್ನಬಹುದು. ಕಥೊಲಿಕ್ ಸಭಾ ಸಮಾವೇಶವನ್ನು ಆಯೋಜಿಸಿದ್ದು ಕ್ರೈಸ್ತ ಸಮುದಾಯದ ವಿಚಾರಗಳ ಬಗ್ಗೆ ಚರ್ಚಿಸಲು. ಅಲ್ಲಿ ಹೋಗಿ ಆಕೆ ಏಕಪಕ್ಷೀಯವಾಗಿ ಮಾತನಾಡಿದ್ದು ಸರಿಯಲ್ಲ. ರಾಜಕೀಯವನ್ನು ಬೇರೆ ಕಡೆ ಮಾತನಾಡಬಹುದಿತ್ತು. ಕ್ರೈಸ್ತ ಸಮಾಜದ ಉನ್ನತ ನಾಯಕಿ ಎಂಬ ಕಾರಣಕ್ಕೆ ಗೌರವಿಸಿ ಆಕೆಯನ್ನು ಅಲ್ಲಿಗೆ ಕರೆಸಿದ್ದರು. ಅಲ್ಲಿ ಆಕೆ ರಾಜಕೀಯ ಮಾತನಾಡಿದ್ದು ತಪ್ಪು. ಅನಗತ್ಯವಾದುದನ್ನು ಆಕೆ ಮಾತನಾಡಿದರು. ಅವರು ದೊಡ್ಡ ಸ್ಥಾನದಲ್ಲಿರಬಹುದು, ಆದರೆ, ಅಲ್ಲಿ ಆಕೆ ತಮ್ಮ ಸಣ್ಣತನವನ್ನು ತೋರ್ಪಡಿಸಿದರು. ಇತರರ ವೇದಿಕೆಯನ್ನು ಆಕೆ ದುರುಪಯೋಗಿಸಿಕೊಂಡರು.
ಬುಡ್ಕುಲೊ: ನೀವೂ ವೇದಿಕೆಯಲ್ಲಿದ್ದಿರಿ. ನಿಮಗೆ ಪ್ರತಿಕ್ರಿಯೆ ಕೊಡಬಹುದಿತ್ತು…
ಜಾಯ್ಲಸ್: ಆ ಬಗ್ಗೆ ನನಗೆ ಹಲವರು ಸಲಹೆ ನೀಡಿದರು. ಆ ಕಾರ್ಯಕ್ರಮವನ್ನು ಕಥೊಲಿಕ್ ಸಭಾದವರು ಆಯೋಜಿಸಿದ್ದರು. ಆ ವೇದಿಕೆಯನ್ನು ದುರ್ಬಳಕೆ ಮಾಡಿ ರಾಜಕೀಯ ಮಾತನಾಡಲು ನಾನು ಇಚ್ಛಿಸಲಿಲ್ಲ. ಹಾಗೆ ಮಾಡುವುದು ನನಗೆ ಸರಿಯೆನಿಸಲಿಲ್ಲ. ಮಾರ್ಗರೆಟ್ ಆಳ್ವರವರು ಬೇಡದ್ದನ್ನು ಮಾತನಾಡಿದ್ದಕ್ಕೆ ಕಥೊಲಿಕ್ ಸಭಾದವರನ್ನು ಹೊಣೆಗಾರರನ್ನಾಗಿ ಮಾಡಲು ಆಗುವುದಿಲ್ಲ. ರಾಜಕೀಯವೇನಿದ್ದರೂ ಧಾರ್ಮಿಕ ಚಟುವಟಿಕೆಗಳ ಹೊರಗೆ ಮಾಡುವಂಥದ್ದು. ಹಾಗಾಗಿ ಅಲ್ಲಿ ನಾನು ಪ್ರತಿಕ್ರಿಯೆ ನೀಡಲಿಲ್ಲ.
ಬುಡ್ಕುಲೊ: ನಿಮ್ಮ ಸರ್ಕಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ, ಕೊಂಕಣಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಅತೀ ಹೆಚ್ಚಿನ ಕೊಡುಗೆ ನೀಡಿದ ಕ್ರೈಸ್ತ ಸಮುದಾಯದ ಒಬ್ಬರನ್ನೂ ಸದಸ್ಯನನ್ನಾಗಿ ನೇಮಿಸಿಲ್ಲದಕ್ಕೆ ವಿರೋಧ ವ್ಯಕ್ತವಾಗಿತ್ತು…
ಜಾಯ್ಲಸ್: ಆ ಬಗ್ಗೆ ಸ್ವಲ್ಪ ಗೊಂದಲ ಉಂಟಾಗಿತ್ತು. ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬುಡ್ಕುಲೊ: ಮಂಗಳೂರು ನಗರಪಾಲಿಕೆ ಚುನಾವಣೆಯಲ್ಲಿ ಕ್ರೈಸ್ತರು ಬಿಜೆಪಿಯನ್ನು ಬೆಂಬಲಿಸಿದ್ದಾರಾ?
ಜಾಯ್ಲಸ್: ಹೌದು. ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲಲು ಕ್ರೈಸ್ತರು ನಮಗೆ ಮತ ನೀಡಿದ್ದೂ ಕಾರಣ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿಯೂ ಕ್ರೈಸ್ತರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.
ಬುಡ್ಕುಲೊ: ನಿಮಗೆ ಕ್ರೈಸ್ತ ಧಾರ್ಮಿಕ ವರ್ಗದ ಸಹಕಾರ ಹೇಗೆ ಸಿಗುತ್ತಿದೆ?
ಜಾಯ್ಲಸ್: ಧಾರ್ಮಿಕ ವರ್ಗದವರ ಸಹಕಾರ ಚೆನ್ನಾಗಿದೆ. ಎಲ್ಲರೂ ನನ್ನನ್ನು ಗುರುತಿಸುತ್ತಿದ್ದಾರೆ. ಉತ್ತಮ ಬೆಂಬಲ ನೀಡುತ್ತಿದ್ದಾರೆ. ಧಾರ್ಮಿಕರು ಸಾರ್ವಜನಿಕರು ಎಂಬ ಬೇಧವೇನಿಲ್ಲ. ಎಲ್ಲರೂ ಕೈ ಜೋಡಿಸಿ ಶ್ರಮಿಸಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ. ನಮ್ಮ ಕ್ರೈಸ್ತ ಸಮುದಾಯ ಹೆಮ್ಮೆ ಪಡುವಂತಹ ಕೆಲಸ ಮಾಡಲು ಶ್ರಮಿಸುತ್ತೇನೆ. ಪ್ರಸ್ತುತ ಮಂಡಳಿಯನ್ನು ನಿಗಮವನ್ನಾಗಿಸುವ ಪ್ರಕ್ರಿಯೆಗಾಗಿ ಹೆಚ್ಚಿನ ಗಮನ ನೀಡುತ್ತಿದ್ದೇನೆ.
ಬುಡ್ಕುಲೊ: ಸರ್ಕಾರಿ ಉದ್ಯೋಗಗಳಲ್ಲಿ, ಉನ್ನತ (ಕೆಎಎಸ್, ಐಎಎಸ್) ಹುದ್ದೆಗಳಲ್ಲಿ ಮತ್ತು ರಾಜಕೀಯದಲ್ಲಿ ಕ್ರೈಸ್ತರ ಪ್ರಾತಿನಿಧ್ಯ ತುಂಬಾ ಅಲ್ಪವಾಗಿದೆ. ಆ ಬಗ್ಗೆ ಎಲ್ಲಾ ಕಡೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸಮಾವೇಶಗಳಲ್ಲಿ ಚರ್ಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸುಧಾರಣೆಯಾಗಲು ನಿಮ್ಮ ಆಲೋಚನೆಗಳೇನು? ನಮ್ಮ ಯುವಜನರನ್ನು ಪ್ರೇರೇಪಿಸಲು ಏನು ಕ್ರಮ ಕೈಗೊಳ್ಳಬಹುದು?
ಜಾಯ್ಲಸ್: ನಾನು ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾದ ಬಳಿಕ, ಕರ್ನಾಟಕ ರಾಜ್ಯ ಕ್ರೈಸ್ತ ಸರಕಾರಿ ನೌಕರರ ಸಂಘದ ಮುಖಂಡರು ನನ್ನೊಡನೆ ಈ ಬಗ್ಗೆ ಚರ್ಚಿಸಿದ್ದಾರೆ. ಯುಪಿಎಸ್ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಸಂಸ್ಥೆಯೊಂದನ್ನು ಪ್ರಾರಂಭಿಸಲು ಅವರು ಆಸಕ್ತರಾಗಿದ್ದಾರೆ. ಅವರಿಗೆ ಸ್ವಾನುಭವ, ಮಾಹಿತಿಯಿದೆ. ಮಂಡಳಿಯಿಂದ ನೆರವು ನೀಡಲು ಕೋರಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡುತ್ತೇನೆ. ನಮ್ಮ ಯುವ ಸಮುದಾಯಕ್ಕೆ ಇಂತಹ ಸಂಸ್ಥೆಯ ಅಗತ್ಯವಿದೆ. ಆ ಮೂಲಕ ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ಸಿಗಲಿದೆ.
Please tell us which are the documents we have to produce to prove our citizenship.