ಮಹಾ ಸಾಹಸ: ಬರಿಗೈಯಲ್ಲಿ ಬೆಳ್ತಂಗಡಿಯ ಗಡಾಯಿಕಲ್ಲು ಏರಿದ ಕೋತಿರಾಜ್
ವರದಿ, ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು – ಬುಡ್ಕುಲೊ ಇ-ಪತ್ರಿಕೆ
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿಂದು ಮಹಾ ಸಾಹಸವೇ ನೆರವೇರಿತು. ಜಗತ್ ಪ್ರಸಿದ್ಧ ಏಕಶಿಲಾ ಪರ್ವತವಾದ ಗಡಾಯಿಕಲ್ಲಿನ ತೆರೆದ ಮೈಯನ್ನು ಬರಿಗೈಯಲ್ಲಿ ಏರುವುದರ ಮೂಲಕ ಕೋತಿರಾಜ್ ಎಂದೇ ಪ್ರಸಿದ್ಧರಾಗಿರುವ ಜ್ಯೋತಿರಾಜ್ ಅವರು ಅಪೂರ್ವ ಸಾಹಸವನ್ನೇ ಮೆರೆದಿದ್ದಾರೆ. ಜೊತೆಗೆ ಚರಿತ್ರೆಯನ್ನೇ ನಿರ್ಮಿಸಿದ್ದಾರೆ. ಈ ಮಹಾ ಸಾಹಸವನ್ನು ಮೆರೆದ ಮೊದಲಿಗರಾಗಿ ಮೈಲಿಗಲ್ಲು ನೆಟ್ಟಿದ್ದಾರೆ.
ಜೋಗ ಜಲಪಾತ, ಚಿತ್ರದುರ್ಗದ ಕೋಟೆ ಸೇರಿದಂತೆ ಕಡಿದಾದ ಕೋಟೆ, ಕಲ್ಲಿನ ಬೆಟ್ಟ ಮತ್ತು ಕಟ್ಟಡಗಳನ್ನು ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೇ ಬರಿಗೈಯಲ್ಲಿ ಏರುವುದರ ಮೂಲಕ ಈಗಾಗಲೇ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಗಡಾಯಿಕಲ್ಲನ್ನು ಏರುತ್ತಾರೆಂಬ ಸುದ್ದಿ ತಿಳಿದು ಬೆಳ್ತಂಗಡಿಯ ಜನರು ಕುತೂಹಲಗೊಂಡಿದ್ದರು, ನಾಡಿನ ಚಾರಣಿಗರು ಪುಳಕಿತಗೊಂಡಿದ್ದರು. ಇಂದು, ಫೆಬ್ರವರಿ 12ರಂದು ಬೆಳಿಗ್ಗೆ ಅವರು ಈ ಸಾಹಸ ಮೆರೆದು ದಿಗ್ವಿಜಯಗೈದಿದ್ದಾರೆ.
ಕಳೆದ ಕೆಲವು ದಿನಗಳಿಂದ ತಮ್ಮ ತಂಡದ ಜೊತೆ ಬೆಳ್ತಂಗಡಿಯಲ್ಲಿ ಬೀಡುಬಿಟ್ಟಿದ್ದ ಜ್ಯೋತಿರಾಜ್, ಅಗತ್ಯ ಪೂರ್ವ ತಯಾರಿ ನಡೆಸಿದ್ದರು. ಇಂದು ಗಡಾಯಿಕಲ್ಲಿನ ಬುಡದಲ್ಲಿರುವ ಚಂದ್ಕೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಟ್ಟದ ಅಪಾಯಕಾರಿಯಾದ ತೆರೆದ ಬದಿಯಲ್ಲಿ ಏರುವ ಸಾಹಸ ಪ್ರಾರಂಭಿಸಿದರು. ಕೇವಲ ಎರಡು ಗಂಟೆಗಳಲ್ಲಿ ಅವರು ನೆರೆದಿದ್ದ ನೂರಾರು ಜನರ ಹರ್ಷೋದ್ಗಾರ, ಚಪ್ಪಾಳೆ ಮತ್ತು ಶಿಳ್ಳೆಗಳ ಜಯಘೋಷದೊಂದಿಗೆ ಗಡಾಯಿಕಲ್ಲಿನ ತುತ್ತ ತುದಿಯನ್ನು ತಲುಪಿದರು.
ಹಿನ್ನೆಲೆಯಲ್ಲಿ ರಾರಾಜಿಸುವ ಪಶ್ಚಿಮ ಘಟ್ಟದ ಕುದುರೆಮುಖ ಪರ್ವತಶ್ರೇಣಿಯ ಮುಂದೆ ಭವ್ಯವಾಗಿ ರಾರಾಜಿಸುವ ಏಕಶಿಲಾ ಬೆಟ್ಟ ಗಡಾಯಿಕಲ್ಲು ಸಮುದ್ರ ಮಟ್ಟದಿಂದ 1700 ಅಡಿ ಎತ್ತರವಿದೆ. ಜ್ಯೋತಿರಾಜ್ ಅವರು ಬೆಳ್ತಂಗಡಿ ಪೇಟೆಗೆ ಮುಖ ಮಾಡಿರುವ ಬರಿಮೈಯಲ್ಲಿರುವ ಗಡಾಯಿಕಲ್ಲಿನ ಅತ್ಯಂತ ಕಡಿದಾಗಿರುವ ಬದಿಯನ್ನು ಏರುತ್ತಾ ಸಾಗಿದರು. ಒಟ್ಟು 1200 ಅಡಿ ಎತ್ತರದ ಈ ಬದಿಯನ್ನು ಅವರು ಬರಿಗೈಯಲ್ಲಿ ಏರಿದರಾದರೂ, ಸುರಕ್ಷತಾ ನಿಯಮ ಪಾಲಿಸಬೇಕಾಗಿದ್ದರಿಂದ ರೋಪ್‍ನ ಸಹಾಯ ಪಡೆದಿದ್ದರು.
ಮಂಕಿಮ್ಯಾನ್ ಎಂದೇ ವಿದೇಶಗಳಲ್ಲಿ ಪರಿಚಿತರಾಗಿರುವ ಜ್ಯೋತಿರಾಜ್ ಗಡಾಯಿಕಲ್ಲಿನ ತುದಿ ಏರಿದ ನಂತರ ಕನ್ನಡ ಬಾವುಟವನ್ನು ಹಾರಿಸಿ ಸಂಭ್ರಮಿಸಿದರು. ಈ ಸಂಭ್ರಮದ ಕ್ಷಣಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನೂರಾರು ಜನರು ಕಣ್ತುಂಬಿಸಿಕೊಂಡರು.
ಚಾರಿತ್ರಿಕ ಹೆಗ್ಗುರುತಾಗಿರುವ ಗಡಾಯಿಕಲ್ಲು
ಬೆಳ್ತಂಗಡಿ ಪಟ್ಟಣದಲ್ಲಿ ವಿರಾಜಮಾನವಾಗಿರುವ ಗಡಾಯಿಕಲ್ಲಿಗೆ ಸಾಗಲು 8 ಕಿ.ಮೀ. ರಸ್ತೆ ಸಂಪರ್ಕವಿದೆ. ಹಲವಾರು ಶತಮಾನಗಳ ಕಾಲದಿಂದ ಈ ಕಲ್ಲಿನ ಪರ್ವತವು ಐತಿಹಾಸಿಕ ಪಾತ್ರವನ್ನೂ ನಿರ್ವಹಿಸಿದೆ. ಮೈಸೂರು ಸಂಸ್ಥಾನ ಹೈದರಾಲಿಯ ಸುಪರ್ದಿಗೆ ಬಿದ್ದ ನಂತರ ಈ ಪ್ರದೇಶವೂ ಅವನ ವಶವಾಯಿತು. ಫ್ರೆಂಚರೊಂದಿಗೆ ಗೆಳೆತನ ಹೊಂದಿದ್ದರಿಂದಾಗಿ ಫ್ರೆಂಚ್ ಇಂಜಿನಿಯರ್‌ಗಳ ಮೂಲಕ ಗಡಾಯಿಕಲ್ಲಿನ ತುದಿಯನ್ನೇರಲು ಕಲ್ಲನ್ನು ಕೊರೆದು ದಾರಿ ಮಾಡಲಾಗಿತ್ತು. ಟಿಪ್ಪುವಿನ ಕಾಲದಲ್ಲಿ ಇದು ಅತ್ಯಂತ ಆಯಕಟ್ಟಿನ ರಕ್ಷಣಾ ಕೋಟೆಯಾಗಿ ಮಾರ್ಪಾಡಾಗಿತ್ತು. ಇದರ ತುದಿಯಲ್ಲಿ ಕಟ್ಟಿದ ಕೋಟೆ, ಕಟ್ಟಡಗಳು ಇಂದಿಗೂ ಉಳಿದಿವೆ. ಕೆಲವು ಫಿರಂಗಿಗಳನ್ನೂ ನೋಡಬಹುದು. ಅಲ್ಲದೆ ತಳದಲ್ಲಿಯೂ ಕೋಟೆಯ ದ್ವಾರ ಭದ್ರವಾಗಿ ನಿಂತಿದೆ. ಕಾಲದ ಹೊಡೆತಕ್ಕೆ ಇವೆಲ್ಲವೂ ಘಾಸಿಗೊಂಡರೂ ಗತವೈಭವವನ್ನು ಇಂದಿಗೂ ಸಾರುತ್ತಿವೆ.
ಟಿಪ್ಪು ನಡೆಸಿದ ಕ್ರೈಸ್ತರ ನರಮೇಧಕ್ಕೆ ಮೂಕ ಸಾಕ್ಷಿ
ಗಡಾಯಿಕಲ್ಲು ಮತ್ತು ಕೆನರಾ ಕ್ರೈಸ್ತರಿಗೆ ಅವಿನಾಭಾವ ಸಂಬಂಧವಿದೆ. ಮಂಗಳೂರಿನ ಕೆಲವೇ ಕೆಲವರು ಬ್ರಿಟಿಷರಿಗೆ ವ್ಯಾಪಾರದಲ್ಲಿ ಸಹಕರಿಸಿದರೆಂಬ ಕಾರಣಕ್ಕೆ ಕುಪಿತಗೊಂಡಿದ್ದ ಟಿಪ್ಪು ಕ್ರೈಸ್ತರ ಮೇಲೆ ಹಗೆತನ ಹೊಂದಿದ್ದ. ತಂದೆಯ ಮರಣಾನಂತರ ಅಧಿಕಾರ ಪಡೆದ ಕೂಡಲೇ ಟಿಪ್ಪು ಕೈಗೊಂಡ ಮಹತ್ತರ ಕೆಲಸವೇ ಕ್ರೈಸ್ತರನ್ನು ನಿರ್ಮೂಲನ ಮಾಡುವ ಕರಾಳ ಯೋಜನೆ. ಮಂಗಳೂರಿನ ಶ್ರೀಮಂತ ಮನೆತನದ ಕೆಲವರು ಬ್ರಿಟಿಷರೊಂದಿಗೆ ವ್ಯಾಪಾರ ಸಂಬಂಧವಿಟ್ಟುಕೊಂಡಿದ್ದು ಟಿಪ್ಪು ಕಾಲದಲ್ಲಿ ಅಲ್ಲ, ಬದಲಾಗಿ ಹೈದರಾಲಿ ಮಂಗಳೂರನ್ನು ಗೆಲ್ಲುವ ಮೊದಲು. ತನ್ನ ಎಳೆಯ ಪ್ರಾಯದಲ್ಲಿ ಇದನ್ನು ತಿಳಿದುಕೊಂಡಿದ್ದ ಟಿಪ್ಪು ಕ್ರೈಸ್ತರ ಬಗ್ಗೆ ದ್ವೇಷಪೂರಿತ ನಿಲುವು ಕೈಗೊಂಡಿದ್ದ. ಅದೇ ಕಾರಣಕ್ಕೆ ಅಧಿಕಾರ ಸಿಕ್ಕಿದೊಡನೆ ಕ್ರೈಸ್ತರ ಮೇಲೆ ಮುಗಿ ಬಿದ್ದಿದ್ದ.
ಬ್ರಿಟಿಷರಿಗೆ ನಿಷ್ಠರಾಗಿ ಟಿಪ್ಪುಗೆ ದ್ರೋಹ ಬಗೆದಿದ್ದರಾ ಕ್ರೈಸ್ತರು? Listen to Clubhouse Talk
ತನ್ನ ಸರಕಾರದೊಡನೆ ಸಂಬಂಧ, ಸಂಪರ್ಕ ಹೊಂದಿದ್ದ ಕೆಲವರನ್ನಷ್ಟೇ ಹೊರತುಪಡಿಸಿ, ಇತರೆಲ್ಲಾ ಕ್ರೈಸ್ತರನ್ನು ಕ್ರೂರವಾಗಿ ಬಂಧಿಸಿ ಶ್ರೀರಂಗಪಟ್ಟಣಕ್ಕೆ ಸಾಗಿಸಲು ಟಿಪ್ಪು ಆದೇಶಿಸಿದ್ದ. ಜೊತೆಗೆ ಚರ್ಚುಗಳೆಲ್ಲವನ್ನೂ ಕೆಡವಲಾಗಿತ್ತು. ಬೆಳ್ತಂಗಡಿಯ ಗಡಾಯಿಕಲ್ಲಿನ ತಪ್ಪಲಿನಲ್ಲಿ ಅವನ ಸೈನ್ಯದ ಠಾಣೆಯಿತ್ತು. ಬಂಧನದಲ್ಲಿದ್ದ ಹಲವು ಕ್ರೈಸ್ತರು ದಾರಿಯಲ್ಲಿ ಟಿಪ್ಪುವಿನ ಸೈನಿಕರ ಅತ್ಯಾಚಾರ, ಕ್ರೌರ್ಯವನ್ನು ಪ್ರತಿಭಟಿಸಿದ್ದರಿಂದ ಅವರನ್ನು ಈ ಠಾಣೆಯಲ್ಲಿ ಶಿಕ್ಷೆಗೊಳಪಡಿಸಲಾಗುತ್ತಿತ್ತು. ಅಂತಹವರನ್ನು ಭೀಕರವಾಗಿ ಹಿಂಸಿಸಿ ಇದೇ ಗಡಾಯಿಕಲ್ಲಿನ ಮೇಲೆ ಕೊಂಡೊಯ್ದು ತಳ್ಳಿ ಕೊಲ್ಲಲಾಗುತ್ತಿತ್ತು. ಆ ಸ್ಥಳವನ್ನು ಫಾಶಿ ಗುಂಡಿ ಎಂದೇ ಕರೆಯಲಾಗುತ್ತದೆ. ಇಲ್ಲಿ ಹಲವು ಅಮಾಯಕ ಕ್ರೈಸ್ತರನ್ನು ಟಿಪ್ಪು ಸಾಯಿಸಿದ್ದ.
ಕೊಂಕಣಿ ಸಾಹಿತ್ಯದಲ್ಲಿಯೂ ರಾರಾಜಿಸುವ ಗಡಾಯಿಕಲ್ಲು
ಚಾರಿತ್ರಿಕ ಮಹತ್ವ ಗಳಿಸಿಕೊಂಡ ಗಡಾಯಿಕಲ್ಲು ಕೊಂಕಣಿ ಸಾಹಿತ್ಯದಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಕೊಂಕಣಿಯಲ್ಲಿ ಚಾರಿತ್ರಿಕ ಸಾಹಿತ್ಯದ ಪಿತಾಮಹರೆಂದೇ ಖ್ಯಾತರಾಗಿದ್ದ ವಿ.ಜೆ.ಪಿ. ಸಲ್ಡಾನ್ಹ ಅವರು ಒಟ್ಟು 14 ಚಾರಿತ್ರಿಕ ಕಾದಂಬರಿಗಳನ್ನಲ್ಲದೆ ಇತರ ಸಾಹಿತ್ಯವನ್ನೂ ರಚಿಸಿದ್ದಾರೆ. ಟಿಪ್ಪುವಿನ ಆಕ್ರಮಣದ ಹಿನ್ನೆಲೆಯಿರುವ ಕಾದಂಬರಿಗಳಲ್ಲಿ ಈ ಗಡಾಯಿಕಲ್ಲು ಪ್ರಮುಖ ಪಾತ್ರ ವಹಿಸುತ್ತದೆ. ಅದ್ಭುತ ಸಾಹಿತಿಯಾಗಿದ್ದ ಅವರು ತಮ್ಮ ರೋಚಕ, ಸಾಹಸಮಯ ಕೃತಿಗಳಲ್ಲಿ ಗಡಾಯಿಕಲ್ಲು ಸೇರಿದಂತೆ ಹಲವು ಐತಿಹಾಸಿಕ ತಾಣಗಳನ್ನು ಬಳಸಿ ವರ್ಣಿಸಿದ್ದಾರೆ.
ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿರುವ ಬೆಳ್ತಂಗಡಿಯ ಈ ಗಡಾಯಿಕಲ್ಲನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ಏರುವುದರ ಮೂಲಕ ಜ್ಯೋತಿರಾಜ್ ಅವರು ಇದನ್ನು ಇನ್ನಷ್ಟು ಹೆಸರುವಾಸಿಯಾಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
Send Feedback to: budkuloepaper@gmail.com
Like us at: www.facebook.com/budkulo.epaper
Join our Budkulo Club in Clubhouse
ನೀವು ಓದಲೇಬೇಕಾದ ಲೇಖನ 👇