ಕೋವಿಡ್-19 ಪ್ರಯೋಗಾಲಯದ ವರದಿಗಳಲ್ಲಿ ಗೊಂದಲ ಮತ್ತು ವಾಸ್ತವಿಕತೆ

ಡಾ. ಎಡ್ವರ್ಡ್ ನಜರೆತ್

Posted on : August 23, 2020 at 11:59 AM

ಒಂದು ಪ್ರಯೋಗಾಲಯದಿಂದ ದೊರೆತ ಕೊರೊನ ರೋಗಿಯ ಪಾಸಿಟಿವ್ ವರದಿ ಇನ್ನೊಂದು ಪ್ರಯೋಗಾಲಯದಲ್ಲಿ ನೆಗೆಟಿವ್ ಬರುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಇದರ ಹಿಂದೆ ಕೆಲವರ ಕೈವಾಡವಿರಬಹುದೆಂದು ಜರೆಯುವವರೂ ಇದ್ದಾರೆ.

Edward Nazarethಯಾವುದೇ ಪ್ರಯೋಗಾಲಯದಿಂದ ಬರುವ ವರದಿಗಳು ಪ್ರತಿ ಬಾರಿಯೂ ಸರಿಯಾಗಿರುವುದಿಲ್ಲ. ರಕ್ತ ಪರೀಕ್ಷೆಯ ವರದಿಗಳಲ್ಲಿ ಹೆಚ್ಚು ಕಮ್ಮಿಯಾಗುವುದು ಮಾತ್ರವಲ್ಲ, ಕೆಲವೊಂದು ಬಾರಿ ಕ್ಯಾನ್ಸರ್ ಪೀಡಿತ ಅಂಗಾಂಶದಲ್ಲಿ ‘ಕ್ಯಾನ್ಸರಿನ ಯಾವುದೇ ಲಕ್ಷಣಗಳಿಲ್ಲ’ ಎಂದು ವರದಿ ಬರುವುದೂ ಇದೆ. ಆದರೆ ಇಂತಹ ಗೊಂದಲದ ವರದಿಗಳು ಅಪರೂಪವಾಗಿದ್ದು, ವ್ಯಕ್ತಿಯ ರೋಗ ಲಕ್ಷಣಗಳಿಗೆ ತಾಳೆಯಾಗದೇ ಇದ್ದಂತಹ ಸಂದರ್ಭಗಳಲ್ಲಿ ಮತ್ತೊಮ್ಮೆ ತಪಾಸಣೆ ಮಾಡಲು ವೈದ್ಯರು ಸೂಚಿಸಿವುದು ಸಾಮಾನ್ಯವಾಗಿರುತ್ತದೆ. ಈ ದಿನಗಳಲ್ಲಿ ದೈನಂದಿನ ಕೊರೊನಾ ಕಾಯಿಲೆಗೆ ಸಂಬಂಧಪಟ್ಟಂತೆ ನೂರಾರು ಮಂದಿಯ ಗಂಟಲ ದ್ರವವನ್ನು ವೈರಾಣುವಿನ ಪತ್ತೆಗಾಗಿ ತಪಾಸಣೆ ಮಾಡುವುದರಿಂದ ಗೊಂದಲದ ವರದಿಗಳು ಹೆಚ್ಚಾಗಿವೆಯೇ ಹೊರತು, ತಪ್ಪು ವರದಿಗಳ ಪ್ರಮಾಣ ವಾಸ್ತವಿಕವಾಗಿ ಜಾಸ್ತಿಯಾದಂತಿಲ್ಲ.

Covid-19_1

ಕಾಯಿಲೆಗೆ ಸಂಬಂಧಪಟ್ಟ ಪ್ರಯೋಗಾಲಯದ ಅಥವಾ ಕ್ಷ-ಕಿರಣದ ಯಾವುದೇ ತಪಾಸಣೆಯು ನೂರಕ್ಕೆ ನೂರರಷ್ಟು ನಿಖರವಾಗಿರುವುದಿಲ್ಲವಾದುದರಿಂದ, ವೈದ್ಯಕೀಯ ಪರೀಕ್ಷೆಯನ್ನು ಎರಡು ಮಾನದಂಡಗಳ ಮೂಲಕ ತಿಳಿಯಲಾಗುತ್ತದೆ – ತಪಾಸಣೆಯ ಸೂಕ್ಷ್ಮತೆ-(sensitivity) ಮತ್ತು ನಿರ್ದಿಷ್ಟತೆ (specificity). ಸೂಕ್ಷ್ಮತೆಯೆಂದರೆ ತಪಾಸಣೆಯ ಶೇಕಡಾವಾರು ಸ್ವಷ್ಟತೆ – ಸಮಸ್ಯೆಯಿದ್ದ 100 ಮಂದಿ ರೋಗಿಗಳಲ್ಲಿ 90 ಮಂದಿಯಲ್ಲಿ ಕಾಯಿಲೆಯನ್ನು ಪತ್ತೆ ಹಚ್ಚುವಲ್ಲಿ ಒಂದು ತಪಾಸಣೆ ಯಶಸ್ವಿಯಾದರೆ ಅದರ ಸೂಕ್ಷ್ಮತೆ 90% ಎಂದಾಯಿತು. ಇನ್ನುಳಿದ 10 ಮಂದಿಯಲ್ಲಿ ಈ ತಪಾಸಣೆಯಿಂದ ರೋಗ ಪತ್ತೆಯಾಗುವುದಿಲ್ಲ. ಒಂದು ತಪಾಸಣೆಯ ನಿರ್ದಿಷ್ಟತೆಯಲ್ಲಿ 100 ಮಂದಿ ರೋಗವಿಲ್ಲದವರಲ್ಲಿ ಎಷ್ಟು ಮಂದಿಯಲ್ಲಿ ರೋಗವಿಲ್ಲವೆಂಬ ವರದಿ ಬರುತ್ತದೆಯೆಂದು ತಿಳಿಯುತ್ತದೆ. ಒಂದು ಪರೀಕ್ಷೆಯು 95% ನಿರ್ದಿಷ್ಟವಾದುದು ಎಂದರೆ ರೋಗವಿಲ್ಲದ 100 ಮಂದಿಯಲ್ಲಿ 95 ಮಂದಿಯಲ್ಲಿ ರೋಗವಿಲ್ಲವೆಂದೂ, 5 ಮಂದಿಯಲ್ಲಿ ರೋಗವಿದೆ ಎಂದೂ ತಿಳಿಸುತ್ತದೆ ಎಂದರ್ಥ. ಹೀಗೆ ರೋಗವಿಲ್ಲದವರಲ್ಲಿ ರೋಗವಿದೆಯೆಂದು ವರದಿಯಾದರೆ ಅದನ್ನು ‘false positive’ ಎಂದೂ, ರೋಗವಿದ್ದರೂ ಅದನ್ನು ತಪಾಸಣೆಯು ಪತ್ತೆ ಹಚ್ಚುವಲ್ಲಿ ವಿಫಲವಾದರೆ ಅದನ್ನು ‘false negative’ ಎಂದೂ ಹೇಳಲಾಗುತ್ತದೆ.

ಕೋವಿಡ್-19 ತಪಾಸಣೆಯಲ್ಲಿ ನ್ಯೂನ್ಯತೆಗಳು

ಪ್ರಸ್ತುತ ನಮ್ಮ ದೇಶದಲ್ಲಿ ಕೊವಿಡ್-19 ಸೋಂಕು ಪತ್ತೆ ಹಚ್ಚಲು RT-PCR Test ಮತ್ತು Rapid Antigen Test ಎಂಬ ಎರಡು ತಪಾಸಣೆಗಳನ್ನು ಅಧಿಕೃತವಾಗಿ ಮಾನ್ಯ ಮಾಡಲಾಗಿದೆ. ಇದರಲ್ಲಿ RT-PCR Test ಮೊದಲಿಂದಲೂ ಬಳಸಲಾಗುತ್ತಿದ್ದು, ಹೆಚ್ಚಿನ ಪ್ರಯೋಗಾಲಯಗಳಲ್ಲಿ ವೈರಾಣುವನ್ನು ಪತ್ತೆ ಹಚ್ಚಲು ಇದನ್ನೇ ಉಪಯೋಗಿಸಲಾಗುತ್ತದೆ. RT-PCR ಪರೀಕ್ಷೆಯ ಪ್ರಕ್ರಿಯೆಗೆ ಕನಿಷ್ಠ 5 ಗಂಟೆಗಳು ತಗಲುತ್ತಿದ್ದು, ಸ್ಯಾಂಪಲ್ ಕೊಟ್ಟ ನಂತರ ತಪಾಸಣೆಯ ವರದಿ ಬರಲು ಕನಿಷ್ಟ 24 ಗಂಟೆಗಳಾದರೂ ಬೇಕಾಗುತ್ತವೆ. ತಪಾಸಣೆಯ ಒತ್ತಡದ ಮೇಲೆ ಹೊಂದಿಕೊಂಡು, ಹೆಚ್ಚಿನ ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಸೇರಿದ ಪ್ರಯೋಗಾಲಯಗಳಲ್ಲಿ ತಪಾಸಣೆಯ ವರದಿ ಬರಲು ನಾಲ್ಕೈದು ದಿನಗಳು ಬೇಕಾಗುತ್ತವೆ.

Covid-19_3

Rapid Antigen Test ತಪಾಸಣೆಯ ವರದಿಯನ್ನು ಒಂದು ಗಂಟೆಯೊಳಗಾಗಿ ಪಡೆಯಬಹುದಾಗಿದೆ. ತಪಾಸಣೆಯಿಂದಾಗುವ ವಿಳಂಬವನ್ನು ತಡೆಯುವುದಕ್ಕಾಗಿ Rapid Antigen Test ಪರೀಕ್ಷೆಯನ್ನು ಬಳಸಬಹುದಾಗಿದ್ದರೂ, ಇದರಲ್ಲಿ ಸೋಂಕು ಇದ್ದರೂ ಇಲ್ಲವೆಂಬ ವರದಿಗಳು ಬರುವ ಸಾಧ್ಯತೆಗಳು ಹೆಚ್ಚು. ಸದ್ಯಕ್ಕೆ ಈ ಎರಡೂ ತಪಾಸಣೆಗಳಿಂದ ನೂರಕ್ಕೆ ನೂರು ಸರಿಯಾದ ವರದಿಗಳನ್ನು ನಿರೀಕ್ಷೆ ಮಾಡಲಾಗುವುದಿಲ್ಲ.

ಸ್ಯಾಂಪಲ್ ಪಡೆಯುವುದು

ಮೇಲಿನ ಎರಡೂ ಪರೀಕ್ಷೆಗಳಲ್ಲಿ ತಪಾಸಣೆ ಮಾಡಬೇಕಾದ ವ್ಯಕ್ತಿಯ ಗಂಟಲಿನ ದ್ರವವನ್ನು ತಪಾಸಣೆಗೆ ಬಳಸಲಾಗುತ್ತದೆ. ಈ ದ್ರವವನ್ನು ಪಡೆಯುವುದಕ್ಕಾಗಿ, ವ್ಯಕ್ತಿಯ ಮೂಗಿನ ಮೂಲಕ ಸಪೂರವಾದ ನಳಿಗೆಯ ತುದಿಗೆ ದ್ರವವನ್ನು ಹೀರುವ ಸ್ವ್ಯಾಬ್ (ಹೀರುಮೆತ್ತೆ) ಇರುವ ಒಂದು ಸಾಧನವನ್ನು ತೂರಿಸಿ, ಅದನ್ನು ಮೂಗಿನ ಹಿಂಬಾಗದ ಗಂಟಲಿಗೆ ತಾಗಿಸಿ ಅಲ್ಲಿಂದ ದ್ರವವನ್ನು ಸಂಗ್ರಹಿಸಬೇಕಾಗುತ್ತದೆ. ಹೀರುಮೆತ್ತೆ ಸರಿಯಾದ ಜಾಗಕ್ಕೆ ತಾಗಿದೇಯೋ ಇಲ್ಲವೋ ಎಂಬುದು ಅಂದಾಜಿನ ಮೇಲೆ ಹೊಂದಿಕೊಂಡಿರುವುದರಿಂದ, ಅನೇಕ ಬಾರಿ ಗಂಟಲಿನ ಬದಲಾಗಿ ಮೂಗಿನ ಯಾವುದೋ ಭಾಗದಿಂದ, ಅಥವಾ ಗಂಟಲಿನ ಮುಂಬಾಗದಿಂದ ದ್ರವವನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಸೂಕ್ತವಾದ ಭಾಗದಿಂದ ದ್ರವವನ್ನು ಪಡೆಯದಂತಹ ಸಂದರ್ಭಗಳಲ್ಲಿ ತಪಾಸಣೆಯಲ್ಲಿ ವೈರಸ್ ಸೋಂಕು ಇಲ್ಲವೆಂದು ವರದಿ ಬರುವ ಸಾಧ್ಯತೆಯಿದೆ.

Covid-19_5

ಅನೇಕ ಪ್ರಯೋಗಾಲಯಗಳಲ್ಲಿ, ಪಡೆದ ಸ್ಯಾಂಪಲುಗಳನ್ನು ಅಂದೇ ತಪಾಸಣೆಗೆ ಒಳಪಡಿಸಲೂ ಸಾಧ್ಯವಾಗದಷ್ಟು ಸ್ಯಾಂಪಲ್‍ಗಳು ಜಮೆಯಾಗುತ್ತವೆ. ಹೀಗೆ ಜಮೆಯಾದ ಸ್ಯಾಂಪಲುಗಳನ್ನು ತಪಾಸಣೆಗೆ ಒಳಪಡಿಸುವವರೆಗೆ ಸೂಕ್ತವಾಗಿ ಸಂರಕ್ಷಿಸಿ ಇಡಬೇಕು. ಎಲ್ಲೋ ಸಂಗ್ರಹಿಸಿದ ಸ್ಯಾಂಪಲನ್ನು ಮತ್ತೆಲ್ಲಿಗೋ ಕಳುಹಿಸಬೇಕಾಗುತ್ತದೆ. ಇಂತಹ ವ್ಯವಸ್ಥೆಗಳಲ್ಲಿ ಅನೇಕ ಕಡೆ ಹೆಚ್ಚು ಕಡಿಮೆಯಾಗಿ ಸ್ಯಾಂಪಲ್‍ಗಳಲ್ಲಿರುವ ವೈರಾಣು ನಾಶವಾಗಿ, ಫಲಿತಾಂಶ ‘ಇಲ್ಲ’ ಎಂದು ಬರುವ ಸಾಧ್ಯತೆಯಿದೆ.

ತಪ್ಪು ವರದಿ ಬರಲು ಸ್ಯಾಂಪಲ್ ಪಡೆಯುವ ಮತ್ತು ಅದನ್ನು ತಪಾಸಣೆಗೆ ಒಳಪಡಿಸುವವರೆಗಿನ ಸಮಸ್ಯೆಗಳು ಪ್ರಮುಖ ಕಾರಣವಾಗಿರುತ್ತವೆ. ಪ್ರಯೋಗಾಲಯದ ಸಾಮನ್ಯ ತಪ್ಪು ವರದಿಗೆ ಸರಿ ಸುಮಾರು 70% ಸೂಕ್ತವಾದ ಸ್ಯಾಂಪಲ್ ಪಡೆಯದೇ ಇರುವುದೇ ಕಾರಣವಾಗಿರುತ್ತದೆ.

ಯಂತ್ರ ಮತ್ತು ಮಾನವ ದೋಷ

ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ಯಾವುದೇ ಒಂದು ತಪಾಸಣೆಗೆ ದಿನಕ್ಕೆ ಹೆಚ್ಚೆಂದರೆ ಹತ್ತಿಪ್ಪತ್ತು ಸ್ಯಾಂಪಲ್‍ಗಳು ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಪ್ರಯೋಗಾಲಯದಲ್ಲಿ ಯಂತ್ರಗಳ ದೋಷದಿಂದ ಸುಮಾರು 13%ರಷ್ಟು, ಫಲಿತಾಂಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದರಿಂದ 20%ದಷ್ಟು ವರದಿಗಳ ಎಡವಟ್ಟಿಗೆ ಕಾರಣವಾಗುತ್ತವೆ. ಈಗ ಕೋವಿಡ್19 ಸೋಂಕು ತಪಾಸಣೆ ಮಾಡುವ ಪ್ರಯೋಗಾಲಯಗಳಲ್ಲಿ ದಿನವೊಂದಕ್ಕೆ 400ರಿಂದ 600ರ ವರೆಗೆ ಸ್ಯಾಂಪಲ್‍ಗಳನ್ನು ತಪಾಸಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಯಂತ್ರದಿಂದ ದೋಷವಾಗುವುದಿಲ್ಲ ಅಂದುಕೊಂಡರೂ, ಫಲಿತಾಂಶವನ್ನು ನೊಂದಾಯಿಸಿ ಅದನ್ನು ಸಂಬಂಧಪಟ್ಟವರಿಗೆ ತಿಳಿಸುವಾಗ ತಪ್ಪಾಗುವುದೂ ಇದೆ.

Covid-19_2

ಸ್ಯಾಂಪಲ್ ತಪಾಸಣೆಗೆ ಪಡೆಯುವಾಗಲೂ ಎಡವಟ್ಟು ಆಗುವುದಿದೆ. ಅನೇಕ ಮಂದಿ ಬೇರೆ ಯಾರದೋ ಮೊಬೈಲ್ ನಂಬರ್ ಕೊಟ್ಟಿರುತ್ತಾರೆ, ಇತ್ತೀಚಿಗೆ ಮೈಸೂರಿನಲ್ಲಿ ತಪಾಸಣೆಗೆ ಬಂದ ವ್ಯಕ್ತಿ ಜಿಲ್ಲಾಧಿಕಾರಿಯದ್ದೇ ಮೊಬೈಲ್ ನಂಬರ್ ಕೊಟ್ಟಿದ್ದು, ವರದಿ ಪಾಸಿಟಿವ್ ಬಂದು ಗೊಂದಲವಾದದ್ದಿದೆ. ಮತ್ತೆ ಕೆಲವು ಕಡೆ ಒಂದೇ ಹೆಸರಿನವರೂ ಅನೇಕರಿರುತ್ತಾರೆ. ಹೀಗೆ ಯಂತ್ರ ಮತ್ತು ಮಾನವವನ ದೋಷದಿಂದ ವರದಿಯಲ್ಲಿ ತಪ್ಪಾಗುವುದನ್ನು, ಒಬ್ಬರ ವರದಿ ಇನ್ನೊಬ್ಬರಿಗೆ ಹೋಗುವುದನ್ನು ಸಂಪೂರ್ಣವಾಗಿ ತಡೆಯಲಾಗುವುದಿಲ್ಲ.

ದೋಷರಹಿತವಾಗಿಲ್ಲ

ಕೋವಿಡ್19 ಸೋಂಕು ತಪಾಸಣೆಗೆ ಬಳಸುವ RT-PCR ತಪಾಸಣೆ ಇದ್ದ ತಪಾಸಣೆಗಳಲ್ಲಿ ಉತ್ತಮವಾದುದೇ ಹೊರತು ಅದು ಸಂಪೂರ್ಣವಾಗಿ ದೋಷರಹಿತವಾಗಿರುವುದಿಲ್ಲ. ಬೇರೆ ಬೇರೆ ಕಡೆ ವಿದೇಶಗಳಲ್ಲಿ ನಡೆದ ಸಂಶೋಧನೆಗಳಿಂದ ವೈರಸ್ ಸೋಂಕು ತಗಲಿದ್ದರೂ ಸುಮಾರು 29% ವರೆಗೆ ಸೋಂಕು ಇಲ್ಲವೆಂದೂ (false negative), 17%ದಷ್ಟು ಸೋಂಕು ಇಲ್ಲದವರಲ್ಲಿ ಸೋಂಕು ಇದೆಯೆಂದು (false-positive) ಫಲಿತಾಂಶ ಬರುವ ಸಾಧ್ಯತೆಯಿದೆಯೆಂದು ತಿಳಿದು ಬಂದಿರುತ್ತದೆ. ಹೀಗೆ ತಪ್ಪು ವರದಿ ಬರಲು ಗಂಟಲಿನಿಂದ ತಪಾಸಣೆಗೆ ಸ್ವ್ಯಾಬ್ ಪಡೆಯುವಾಗ ಆಗಬಹುದಾದ ನ್ಯೂನತೆ ಹೊರತುಪಡಿಸಿ ಇತರ ಅನೇಕ ಕಾರಣಗಳೂ ಇವೆ.

ಸಾಮಾನ್ಯವಾಗಿ ತಪಾಸಣೆಗೆ ಬಳಸುವ ಕಿಟ್‍ನಲ್ಲಿ ಯಾವುದೇ ದೋಷಗಳು ಇಲ್ಲದಂತೇ ಪದೇ ಪದೇ ಪರಿಷ್ಕರಿಸಿ, ಉತ್ತಮವಾದ ಕಿಟ್‍ನ್ನು ತಪಾಸಣೆಗೆ ಸಿದ್ಧಪಡಿಸುತ್ತಾರೆ. ಇದಕ್ಕೆ ಕೆಲವೊಂದು ಬಾರಿ ಅನೇಕ ವರ್ಷಗಳೇ ಹಿಡಿಯಬಹುದಾಗಿದೆ. ಆದರೆ ಈ ಬಾರಿ ಕೋವಿಡ್19 ವೈರಾಣುವಿನ ಪತ್ತೆಗಾಗಿ ತಯಾರಿಸಿದ ಕಿಟ್‍ಗಳನ್ನು ಈ ಥರದ ದೀರ್ಘಾವಧಿವರೆಗೆ ತಪಾಸಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ. ವೈರಾಣು ವೇಗವಾಗಿ ಹರಡುತ್ತಿದ್ದುದರಿಂದ ತಪಾಸಣೆಯ ಕಿಟ್‍ಗಳನ್ನು ಅವಸರದಿಂದಲೇ ಬಿಡುಗಡೆ ಮಾಡಬೇಕಾಗಿ ಬಂದಿದೆ.

ಸೋಂಕು ಮತ್ತು ತಪಾಸಣೆ

ಸೋಂಕಿತ ವ್ಯಕ್ತಿಯ ಸನಿಹಕ್ಕೆ ಬಂದ ಕೂಡಲೇ ಸ್ಯಾಂಪಲ್ ಸಂಗ್ರಹಿಸಿದರೆ ಫಲಿತಾಂಶ ತಪ್ಪಾಗಿ ಬರಬಹುದಾಗಿದೆ. ಕೆಲವೊಂದು ಬಾರಿ ಸೋಂಕು ತಗಲಿದರೂ ಮೊದಲು ವೈರಸ್‍ಗಳ ಪ್ರಮಾಣ (viral load) ಕಡಿಮೆಯಿದ್ದು ಗಂಟಲಿನ ದ್ರವದಲ್ಲಿ ಅವು ಸಿಗದೇ ಇರಬಹುದು. ಒಂದೆರಡು ದಿನಗಳಲ್ಲಿ ಪತ್ತೆಯಾಗಬಹುದು. ಆಗ ಮೊದಲಿನ ತಪಾಸಣೆಯಲ್ಲಿ ಇಲ್ಲವೆಂದೂ, ತದ ನಂತರದ ತಪಾಸಣೆಯಲ್ಲಿ ಪಾಸಿಟಿವ್ ಎಂದೂ ವರದಿ ಬರುವ ಸಾಧ್ಯತೆಯಿದೆ. ವೈರಸ್ ಸೋಂಕು ತಗಲಿದ ನಾಲ್ಕನೇ ದಿನ ಸುಮಾರು 67% ಮಂದಿಯಲ್ಲಿ ತಪಾಸಣೆಯ ಫಲಿತಾಂಶ ನೆಗೆಟಿವ್ ಬರಬಹುದು. ರೋಗದ ಲಕ್ಷಣಗಳು ಕಂಡು ಬಂದಾಗಲೂ 38% ಮಂದಿಯಲ್ಲಿ ವೈರಾಣು ಪತ್ತೆಯಾಗದೇ ಇರಬಹುದು. ವೈರಾಣು ತಗಲಿದ ಎಂಟನೇ ದಿನಕ್ಕೆ 20% ಮಂದಿಯಲ್ಲಿ ವೈರಾಣು ದೇಹದಲ್ಲಿ ನಾಶವಾಗುವ ಸಾಧ್ಯತೆಯಿದೆ. ಹೀಗೆ ಅನೇಕ ಬಾರಿ ಸೂಕ್ತವಾದ ದಿನಗಳಲ್ಲಿ ಸ್ಯಾಂಪಲ್ ಪಡೆಯದೇ ಇದ್ದರೆ ಫಲಿತಾಂಶದಲ್ಲಿ ನ್ಯೂನ್ಯತೆ ಬರಬಹುದು.

Covid-19_4

ಮನುಷ್ಯನ ದೇಹದೊಳಗೆ ಸೇರಿದ ಕೋವಿಡ್19 ವೈರಾಣು ಸುಮಾರು 10 ದಿನಗಳಿಂದ 21 ದಿನಗಳೊಳಗೆ ದೇಹದಲ್ಲಿ ನಾಶವಾಗುತ್ತದೆ. ಅದರೂ ಕೆಲವೊಂದು ಬಾರಿ ಮೂರು ನಾಲ್ಕು ವಾರಗಳ ಅನಂತರವೂ ಗಂಟಲಿನ ದ್ರವದಲ್ಲಿ ವೈರಾಣು ಇದೆ ಎಂದು ಫಲಿತಾಂಶ ಬಂದದ್ದಿದೆ. ವೈರಾಣು ಹೋದರೂ ವೈರಾಣುವಿನ RNAಯ ಸ್ವಲ್ಪಾಂಶವಿದ್ದರೂ RT-PCR ತಪಾಸಣೆಯಲ್ಲಿ ಕಂಡು ಬರುವುದಿದೆ. ಇದನ್ನೇ ವೈರಾಣುವಿನಿಂದ ಮತ್ತೆ ಸೋಂಕು ತಗಲಿದೆ ಎಂದು ಭಾವಿಸಲು ಕಾರಣವಾಗಬಹುದು. ಈ ತಪಾಸಣೆಗಳು ಸತ್ತ ವೈರಾಣುವನ್ನೂ (dead RNA) ಪತ್ತೆಹಚ್ಚಬಲ್ಲವು.

ವಾಸ್ತವಿಕತೆಯನ್ನು ಸ್ವೀಕರಿಸುವುದು

ಸದ್ಯಕ್ಕೆ RT-PCR ತಪಾಸಣೆ ಮಾತ್ರ ಕೋವಿಡ್19 ವೈರಾಣುವಿನ ಪತ್ತೆಗಾಗಿ ಇರುವ ಸ್ವೀಕರಿಸಬಹುದಾದ ಒಂದೇ ಪರೀಕ್ಷೆ. Rapid antigen ತಪಾಸಣೆಯು ಶೀಘ್ರವಾಗಿ ವೈರಾಣುವಿನ ಸೋಂಕನ್ನು ಪತ್ತೆ ಮಾಡಬಲ್ಲದು. ಈ ತಪಾಸಣೆಯಲ್ಲಿ ಪಾಸಿಟಿವ್ ಬಂದರೆ ಅದನ್ನು ವೈರಾಣು ಇದೆಯೆಂದು ಪರಿಗಣಿಸಬಹುದಾಗಿದೆ. ಆದರೆ ನೆಗೆಟಿವ್ ಬಂದರೆ ವೈರಾಣು ಇಲ್ಲ ಎಂದು ಹೇಳಲು ಬರುವುದಿಲ್ಲ. ವೈರಾಣುವಿಲ್ಲ ಎಂದು ಧೃಡಪಡಿಸಲು ಮತ್ತೆ RT-PCR ಪರೀಕ್ಷೆ ಮಾಡಬೇಕಾಗುತ್ತದೆ.

ಇನ್ನು ಆಂಟಿಬಾಡಿಸ್ ತಪಾಸಣೆಯೂ ಇದೆ. ಇದು ವೈರಾಣುವಿನ ಸೋಂಕು ಆಗಿತ್ತೇ ಎಂಬುದನ್ನು ಪತ್ತೆ ಹಚ್ಚಬಲ್ಲದು ವಿನಃ, ವ್ಯಕ್ತಿಯ ದೇಹದಲ್ಲಿ ತಪಾಸಣೆಯ ಸಂದರ್ಭದಲ್ಲಿ ವೈರಾಣುಗಳಿವೆಯೋ ಇಲ್ಲವೋ ಎಂದು ನಿರ್ಧರಿಸಲು ಉಪಯೋಗಕ್ಕೆ ಬರುವುದಿಲ್ಲ. ಸದ್ಯ ಈ ತಪಾಸಣೆಯನ್ನು ಎಷ್ಟು ಮಂದಿಯ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಬಲ್ಲ ಆಂಟಿಬಾಡಿಸ್ ಇವೆ ಎಂಬುದನ್ನು ಕಂಡುಹಿಡಿಯಲು ಮಾತ್ರ ಬಳಸಬಹುದಾಗಿದೆ.

ಕೋವಿಡ್19 ವೈರಾಣುವಿನ ಸೋಂಕು ತಗಲಿದ್ದರೂ ಫಲಿತಾಂಶ ನೆಗೆಟಿವ್ ಬಂದರೂ, ಸೋಂಕು ತಗಲುವವರು ವಹಿಸಿಕೊಳ್ಳುವ ಮುಂಜಾಗ್ರತೆಗಳನ್ನು ಪಾಲಿಸಿ ರೋಗದ ಲಕ್ಷಣಗಳೇನಾದರೂ ಕಂಡು ಬರುತ್ತವೆಯೋ ಎಂದು ಕಾದು ನೋಡುವುದು ಒಳಿತು. ಫಲಿತಾಂಶ ಪಾಸಿಟಿವ್ ಬಂದರೂ ಸುಮಾರು 80% ಮಂದಿಯಲ್ಲಿ ರೋಗದ ಲಕ್ಷಣಗಳು ಇರುವುದಿಲ್ಲವಾದುದರಿಂದ, ನೆಗೆಟಿವ್ ಫಲಿತಾಂಶಕ್ಕಾಗಿ ಮತ್ತೆ ಮತ್ತೆ ತಪಾಸಣೆ ಮಾಡಿಸುವುದು ಸೂಕ್ತವಲ್ಲ. ಕೆಲವೊಂದು ಬಾರಿ ಒಂದೆರಡು ದಿನಗಳಲ್ಲೇ ನೆಗೆಟಿವ್ ಬರುವ ಸಾಧ್ಯತೆಯಿದೆ. ರೋಗ ಲಕ್ಷಣಗಳಿಲ್ಲದಿದ್ದರೂ, ರಿಪೋರ್ಟ್ ನೆಗೆಟಿವ್ ಬಂದರೂ ಸೋಂಕು ತಗಲಿದ ಸಾಧ್ಯತೆಗಳಿದ್ದರೆ ಮುಂಜಾಗ್ರತೆ ವಹಿಸುವುದು ಜಾಣತನ.

ಲೇಖಕರಾದ ಡೊ. ಎಡ್ವರ್ಡ್ ನಜ್ರೆತ್ ಅವರು ಮಂಗಳೂರಿನ ಪ್ರಸಿದ್ಧ ಆರ್ಥೋಪೆಡಿಕ್ ಸರ್ಜನ್; ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ. ಅವರು ಕೊಂಕಣಿಯ ಪ್ರಮುಖ ಸಾಹಿತಿಯಾಗಿದ್ದು 150ಕ್ಕೂ ಹೆಚ್ಚು ಸಣ್ಣ ಕಥೆ ಮತ್ತು ಸಹಸ್ರಾರು ವೈದ್ಯಕೀಯ ಮತ್ತಿತರ ಲೇಖನಗಳನ್ನು ಬರೆದಿದ್ದಾರೆ.

Send Feedback to: budkuloepaper@gmail.com
Like us at: www.facebook.com/budkulo.epaper