ತುಳು ಚಿತ್ರರಂಗಕ್ಕಿರುವ ಅಗಾಧ ಮಾರ್ಕೆಟನ್ನು ಶೋಧಿಸಿದ ‘ಗಿರಿಗಿಟ್’ ಸಿನೆಮಾಕ್ಕೆ ಅಭಿನಂದನೆಗಳು
ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ – ಬುಡ್ಕುಲೊ ಇ-ಪತ್ರಿಕೆ www.Budkulo.com
ತುಳುನಾಡು ಅಥವಾ ಕರಾವಳಿಯ ಕೋಸ್ಟಲ್‍ವುಡ್ ಈಗ ಬಹಳಷ್ಟು ಸದ್ದು ಮಾಡುತ್ತಿದೆ. ಸಮಾಧಾನಕರ ಸಂಗತಿ ಎಂದರೆ, ಅದು ಈ ಹಿಂದಿನಂತೆ ವಿವಾದ, ಘರ್ಷಣೆ ಅಥವಾ ವೈಫಲ್ಯಗಳಿಗಾಗಿ ಅಲ್ಲ. ಹೌದು, ಕೋಸ್ಟಲ್‍ವುಡ್‍ನಲ್ಲೀಗ ಯಶಸ್ಸಿನದ್ದೇ ಧ್ಯಾನ, ಅದೇ ನೆನಕೆ, ಅದೇ ಕನವರಿಕೆ. ಅದಕ್ಕೆ ಕಾರಣ ತುಳು ಚಿತ್ರ ‘ಗಿರಿಗಿಟ್’ ನೆಟ್ಟ ಅಸಾಧಾರಣ ಮೈಲಿಗಲ್ಲು. ಸ್ವತಃ ಚಿತ್ರಕ್ಕೆ ದುಡಿದವರಿಗೇ ಈ ಮಟ್ಟಿನ ಯಶಸ್ಸು ದೊರಕೀತೆಂಬ ಕಲ್ಪನೆ ಇರಲಿಲ್ಲ. ಅಂತಹ ದೊಡ್ಡ ಗೆಲುವು, ಅಪಾರ ಜನಮನ್ನಣೆ ಮತ್ತು ಅದ್ಭುತ ಗಳಿಕೆಯನ್ನು ಈ ಚಿತ್ರ ಸಂಪಾದಿಸಿದೆ.
‘ಚಲನಚಿತ್ರವೊಂದು ಹಿಟ್ ಆಗುವುದು ಮತ್ತು ಗಲ್ಲಾಪೆಟ್ಟಿಗೆಯನ್ನು ಸೂರೆಗೈಯುವುದು ದೊಡ್ಡ ಸಂಗತಿಯೇ’ ಎಂದು ಯಾರಾದರೂ ಕೇಳಬಹುದು. ಇಂದಿನ ಮಟ್ಟಿಗೆ ಅದು ದೊಡ್ಡ ಸಂಗತಿಯೇ. ಯಾಕೆಂದರೆ ಬಹಳಷ್ಟು ದೊಡ್ಡ ಬಜೆಟ್‍ನ, ಸ್ಟಾರ್‌ಗಳ ಬಹು ನಿರೀಕ್ಷಿತ ಚಿತ್ರಗಳೇ ವಿಫಲವಾದ ದಾಖಲೆ ಭಾರತದಲ್ಲಿದೆ. ದೇಶದಲ್ಲಿ ವರ್ಷಕ್ಕೆ ಬಿಡುಗಡೆಯಾಗುವ ಸಾವಿರಾರು ಚಿತ್ರಗಳಲ್ಲಿ ಸಾಫಲ್ಯ ಕಾಣುವ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ಆದರೆ ಇಲ್ಲಿ ದೊಡ್ಡ ಸಂಗತಿಯೆನ್ನಿಸುವುದು ಇಂತಹ ಯಶಸ್ಸು ಸ್ಥಳೀಯ ಭಾಷೆಯ ಚಿತ್ರವೊಂದಕ್ಕೆ ದೊರಕಿದುದಕ್ಕಾಗಿ.
ತುಳು ಚಿತ್ರರಂಗದಲ್ಲೀಗ ಸಕಾರಾತ್ಮಕ ಮತ್ತು ಹುಮ್ಮಸ್ಸಿನ ವಾತಾವರಣ ಸೃಷ್ಟಿಯಾಗಿದೆ. ಕಳೆದ ಹಲವು ವರ್ಷಗಳಿಂದ ಬಹಳಷ್ಟು ತುಳು ಚಿತ್ರಗಳು ಪ್ರದರ್ಶನ ಕಂಡರೂ ಹೇಳಿಕೊಳ್ಳುವಂತಹ ಯಶಸ್ಸು ಮತ್ತು ಗಳಿಕೆ ಯಾವ ಚಿತ್ರಕ್ಕೂ ಆಗಿರಲಿಲ್ಲ (ಅದನ್ನು ಅವರೇ ಒಪ್ಪಿಕೊಂಡಿದ್ದಾರೆ). ಯಶಸ್ಸಿನ ಮಾತು ಬಿಡಿ, ಕೆಲ ಚಿತ್ರಗಳಂತೂ ಪ್ರೇಕ್ಷಕರಿಂದ ಉಗಿಸಿಕೊಂಡಿದ್ದೇ ಹೆಚ್ಚು. ಈ ನಡುವೆ ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತೆ ಉದ್ಭವಿಸಿ ಕಣ್ಮರೆಯಾದ ತುಳು ಚಿತ್ರಗಳ ಸಂಖ್ಯೆಯೂ ಬಹಳಷ್ಟಿತ್ತು. ಇದು ಎಲ್ಲಿಯವರೆಗೆ ಪರಿಣಾಮ ಬೀರಿತ್ತೆಂದರೆ ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವವರು ತುಳು ಸಿನೆಮಾಗಳನ್ನು ವೀಕ್ಷಿಸಬಾರದೆಂಬ ನಿರ್ಧಾರಕ್ಕೆ ಬಂದಿದ್ದರಲ್ಲಿ ಆಶ್ಚರ್ಯವಿಲ್ಲ. (ನನ್ನದೂ ಅದೇ ನಿಲುವಾಗಿತ್ತು). ಹಾಗಂತ ಎಲ್ಲವೂ ನಕಾರಾತ್ಮಕವೇನೂ ಆಗಿರಲಿಲ್ಲ. ಬಹಳಷ್ಟು ಉತ್ತಮ, ವಿಭಿನ್ನ ಚಿತ್ರಗಳೂ ತುಳುವಿನಲ್ಲಿ ಬಂದು ವೀಕ್ಷಕರ ಮನ ಮೆಚ್ಚಿದ್ದೂ ಇದೆ.
ವಾಸ್ತವವಾಗಿ, ಚಲನಚಿತ್ರ ನಿರ್ಮಾಣವೆಂದರೆ ತಮಾಷೆಯ ಸಂಗತಿಯಲ್ಲ. ಹಲವು ಲಕ್ಷಗಳಿಂದ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಚಿತ್ರಗಳು ಪರದೆ ಮೇಲೆ ಬಂದಾಗ ಅವು ಜನರನ್ನು ಆಕರ್ಷಿಸದಿದ್ದಲ್ಲಿ ಏನು ಪ್ರಯೋಜನ? ಹಾಗಾದಾಗ ವೀಕ್ಷಕರಿಗೆ ನಿರಾಶೆ, ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುವುದರ ಜೊತೆಗೆ ದೊಡ್ಡ ಆಘಾತವಾಗುವುದು ನಿರ್ಮಾಪಕರಿಗೆ. ಅಪಾರ ನಷ್ಟಕ್ಕೊಳಗಾದ ನಿರ್ಮಾಪಕರು ಮತ್ತೆ ಮೇಲೇಳಬೇಕಾದರೆ ಪವಾಡವೇ ನಡೆಯಬೇಕು.
ಯಾರೇ ಒಪ್ಪಲಿ ಬಿಡಲಿ, ಇಂತಹ ಪರಿಸ್ಥಿತಿ ತುಳು ಚಿತ್ರರಂಗದಲ್ಲಿ ಖಂಡಿತವಾಗಿ ಇತ್ತೆನ್ನುವುದು ಸತ್ಯ. ಇಂತಹ ಸನ್ನಿವೇಶದಲ್ಲಿ ನಿಜಕ್ಕೂ ದೊಡ್ಡ ಪವಾಡವೇ ನಡೆದಿದೆ. ಕೋಸ್ಟಲ್‍ವುಡ್‍ನಲ್ಲೀಗ ಯಶಸ್ಸಿನ ಲೆಕ್ಕಾಚಾರಗಳದ್ದೇ ಮಾತುಕತೆ. ಇದಕ್ಕೆ ಕಾರಣ, ತೆರೆಗೆ ಅಪ್ಪಳಿಸಿದ ದಿನದಿಂದಲೇ ‘ಗಿರಿಗಿಟ್’ ಚಿತ್ರ ಸಂಪಾದಿಸಿದ ಜನಪ್ರಿಯತೆ ಮತ್ತು ಅದು ಉಂಟು ಮಾಡಿದ ಸೆನ್ಸೇಶನ್. ಸುನಾಮಿಯಂತೆ ಜನರು ಥಿಯೇಟರ್‌ಗಳಿಗೆ ಲಗ್ಗೆಯಿಟ್ಟು ಚಿತ್ರ ನೋಡುತ್ತಿದ್ದಾರೆ. ಅದೇನೂ ಆರಂಭದ ಟ್ರೆಂಡ್ ಆಗಿರಲಿಲ್ಲ. ದಿನಗಳೆದಂತೆ ಹೆಚ್ಚೆಚ್ಚು ಜನರು ಚಿತ್ರ ನೋಡಲು ಆಗಮಿಸಲಾರಂಬಿಸಿದರು. ನಾಡಿನ ಟಾಕೀಸ್‍ಗಳಿಗೆ ಇದೊಂದು ಬಂಪರ್ ಇಳುವರಿ ಎನ್ನಲೂಬಹುದು. ಇಂದಿಗೆ ಈ ಚಿತ್ರ ಅಮೋಘ 6ನೇ ವಾರಕ್ಕೆ ಕಾಲಿಟ್ಟಿದೆ. ಆದರೂ ‘ಗಿರಿಗಿಟ್’ ನೋಡುವವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲವೆಂದರೆ ಅದರ ಜನಪ್ರಿಯತೆ ಎಷ್ಟಿದೆಯೆಂಬುದನ್ನು ತಿಳಿಯಬಹುದು. ಜನರ ನಿರೀಕ್ಷೆಯ ಮಟ್ಟವೂ ಎಷ್ಟೆಂದು ಅರಿವಾಗುತ್ತದೆ.
ಬಹುಶಃ ಇಂತಹ ಒಂದು ಬ್ರೇಕ್‍ಗಾಗಿ ತುಳು ಚಿತ್ರರಂಗ ಕಾಯುತ್ತಿತ್ತೆನಿಸುತ್ತದೆ. ಕೋಟಿ ರೂಪಾಯಿ ಗಳಿಕೆ ದಾಟಿದ ಮೊದಲ ಚಿತ್ರವೆಂಬ ದಾಖಲೆ ಕೇವಲ ಆರಂಭವಷ್ಟೇ. ಮೊದಲ ಕೆಲವೇ ದಿನಗಳಲ್ಲಿ ‘ಗಿರಿಗಿಟ್’ ಚಿತ್ರ ಕೋಟಿ ಸಂಪಾದನೆ ಮಾಡಿತ್ತೆಂದರೆ ಅದು ನಿಜಕ್ಕೂ ಅತ್ಯದ್ಭುತ ದಾಖಲೆಯೇ ಹೌದು. ಊರು-ಪರವೂರಿನಲ್ಲಿ, ದೇಶ-ವಿದೇಶಗಳಲ್ಲಿ ಚಿತ್ರವು ತೆರೆ ಕಂಡಿದ್ದು ಇನ್ನೂ ನವವಧುವಿನಂತೆ ವಿಜೃಂಭಿಸುತ್ತಿದೆ, ಪ್ರೇಕ್ಷಕರನ್ನು ಆಹ್ವಾನಿಸುತ್ತಿದೆ. ಮತ್ತಷ್ಟು ದಾಖಲೆಗಳನ್ನು ರಚಿಸುತ್ತಾ ಅದ್ವಿತೀಯ ತುಳು ಚಿತ್ರವೆಂಬ ಗರಿಮೆಯನ್ನು ‘ಗಿರಿಗಿಟ್’ ಹೆಮ್ಮೆಯಿಂದ ಬಾಚಿಕೊಂಡಿದೆ.
ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ಇಲ್ಲಿ ಉಲ್ಲೇಖಿಸಬೇಕಾದ ಸಂಗತಿಯೊಂದಿದೆ. ಅದೆಂದರೆ, ಇದುವರೆಗೆ ತುಳು (ಹಾಗೂ ಕೊಂಕಣಿ ಮತ್ತಿತರ ಸ್ಥಳೀಯ ಭಾಷೆಯ) ಚಲನಚಿತ್ರಗಳ ಮಾರ್ಕೆಟ್ ಬಹಳ ಚಿಕ್ಕದು, ತುಂಬಾ ಸೀಮಿತವೆಂಬ ಮಾಮೂಲಿ ಅಳಲು ಕೇಳಲ್ಪಡುತ್ತಿತ್ತು. ಅದೇ ಸವಕಲು ರಾಗವನ್ನು ಹಾಡುತ್ತಾ, ಅದನ್ನೇ ನೆಪವನ್ನಾಗಿಸಿಕೊಳ್ಳುತ್ತಾ ತಮ್ಮ ಅಸಾಮರ್ಥ್ಯವನ್ನು ಮುಚ್ಚಿಡುವ ಪ್ರಯತ್ನವನ್ನು ಕೆಲವರು ಮಾಡಿದ್ದುಂಟು. ತಮ್ಮಲ್ಲಿ ಕ್ರಿಯಾಶೀಲತೆಯಿಲ್ಲವೆಂಬುದನ್ನು ಒಪ್ಪಿಕೊಳ್ಳದ ಜನರಷ್ಟೇ ಇಂತಹ ವಿಷಾದ ರಾಗ ಹಾಡುವುದು. ಇದು ತುಳು ಮಾತ್ರವಲ್ಲ, ಕನ್ನಡ ಚಿತ್ರರಂಗಲ್ಲಿಯೂ ಕಂಡು ಬರುವ ಒಂದು ಕೆಟ್ಟ ಚಾಳಿ.
ಇಷ್ಟೆಲ್ಲಾ ನಿರ್ಬಂಧಗಳಿರುವ ‘ಮಾರ್ಕೆಟ್’ನಲ್ಲೀಗ ಹೇಗೆ ಅಲ್ಲೋಲಕಲ್ಲೋಲ ಉಂಟಾಯಿತು? ಸೀಮಿತ ಜನರನ್ನಷ್ಟೇ ತಲುಪುವ ಸಾಧನವಾಗಿದ್ದ ತುಳು ಚಿತ್ರರಂಗವೀಗ ಗಡಿ, ದಡ, ಪರಿಧಿಗಳನ್ನು ದಾಟಿ ದಶದಿಕ್ಕುಗಳಿಗೆ ಹರಡಿದ್ದು ಹೇಗೆ? ಪಶ್ಚಿಮ ಘಟ್ಟದಲ್ಲಿ ಭೋರ್ಗರೆದು ಸುರಿದ ಮಳೆಯಿಂದುಂಟಾದ ಪ್ರವಾಹಕ್ಕೆ ಹಳ್ಳಿ, ಪಟ್ಟಣಗಳೇ ಕೊಚ್ಚಿ ಹೋದಂತೆ, ಚಿತ್ರವೊಂದು ಜನಸಾಗರವನ್ನು ಪ್ರವಾಹದೋಪಾದಿಯಲ್ಲಿ ಚಿತ್ರಮಂದಿರಗಳಿಗೆ ಕರೆ ತಂದದ್ದು ಹೇಗೆ? ಹಾಲಿವುಡ್, ಬಾಲಿವುಡ್‍ನಿಂದ ಹಿಡಿದು ದಕ್ಷಿಣ ಭಾರತದ ಬೃಹತ್ ಚಿತ್ರರಂಗಗಳೆದುರು ಕಂಗಾಲಾದ ಸಣಕಲು ಕಡ್ಡಿಯಂತೆ ಬಡಕಲಾಗಿದ್ದ ಕೋಸ್ಟಲ್‍ವುಡ್ ಒಮ್ಮಿಂದೊಮ್ಮೆಗೇ ‘ಬಾಹುಬಲಿ’ಯಂತಾಗುವಷ್ಟರ ಮಟ್ಟಿಗೆ ಮೈಸೆಟೆದು ನಿಂತು ಕಂಗೊಳಿಸಿದ್ದು ಹೇಗೆ?
ಹೌದು, ಈ ಎಲ್ಲಾ ಪ್ರಶ್ನೆಗಳ ಉತ್ತರದಲ್ಲಿ ಅಡಗಿದೆ ತುಳು ಮತ್ತು ಇತರ ಸ್ಥಳೀಯ ಚಿತ್ರರಂಗಗಳ ಭವಿಷ್ಯ. ಇನ್ನು ಮುಂದಾದರೂ ಕೋಸ್ಟಲ್‍ವುಡ್‍ನ ಜನರು ಎಂದಿನ ನೆಪಗಳನ್ನು, ಹಳಸಲು ಕಾರಣಗಳನ್ನು ನೀಡುತ್ತಾ ಕೈಲಾಗದವರು ಮೈಪರಿಚಿಕೊಂಡರೆಂಬಂತೆ ಪರಿಗಣಿಸಿಕೊಳ್ಳುವುದು ಬೇಡ. ಒಳ್ಳೆಯ ತುಳು ಚಿತ್ರಕ್ಕೆ ಕನಿಷ್ಠ ಒಂದೆರಡು ಕೋಟಿ ಗಳಿಸುವಷ್ಟಾದರೂ ಸಾಮರ್ಥ್ಯ ಇದೆಯೆಂಬ ವಾಸ್ತವಾಂಶವನ್ನು ಅರಿತುಕೊಂಡಲ್ಲಿ ಮತ್ತು ಆ ಸ್ಫೂರ್ತಿಯಿಂದ ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು ಕಾರ್ಯತತ್ಪರರಾದಲ್ಲಿ ತುಳು ಚಿತ್ರರಂಗವು ಹೆಮ್ಮೆಯಿಂದ ಮೆರೆದಾಡಬಹುದು. ಅದರಿಂದ ಪ್ರೇಕ್ಷಕಕರಿಗೂ ಸುಖ, ಹಣ ಹೂಡಿದವರಿಗೂ ಲಾಭ ಖಚಿತ.
ಆದರೆ ಅದನ್ನು ಸಾಧಿಸಬೇಕಾದರೆ ಸಾಧ್ಯವಾದಷ್ಟೂ ಕ್ರಿಯಾಶೀಲ ಮತ್ತು ಅತ್ಯುತ್ತಮ ಚಿತ್ರಗಳನ್ನು ತಯಾರು ಮಾಡುವುದು ಅತ್ಯಂತ ಅಗತ್ಯ. ಕಳಪೆ ಚಿತ್ರಗಳಿಂದ ಸಾಧಿಸುವುದಕ್ಕಿಂತಲೂ ಕಳೆದುಕೊಳ್ಳುವುದೇ ಹೆಚ್ಚು. ಅದರ ಬದಲು ಒಂದೊಳ್ಳೆಯ ಸದಭಿರುಚಿಯ, ಜನರು ಕುಟುಂಬದೊಂದಿಗೆ ನೋಡಬಲ್ಲ ಲವಲವಿಕೆಯ ಚಿತ್ರಗಳನ್ನು ದೊರಕಿಸಿದಲ್ಲಿ ಪ್ರತಿಯೊಬ್ಬರಿಗೂ ಖಂಡಿತಾ ಶ್ರೇಯಸ್ಕರ.
ಮಂಗಳೂರಿನಲ್ಲಿ ದಿನವೊಂದಕ್ಕೆ ಹತ್ತಿಪ್ಪತ್ತು ಚಿತ್ರಗಳು ನೂರರಿಂದ ಇನ್ನೂರರಷ್ಟು ಪ್ರದರ್ಶನಗಳನ್ನು ಕಾಣುತ್ತವೆ. ಕಳೆದ ಕೆಲ ತಿಂಗಳಿಂದ ಒಂದಲ್ಲಾ ಒಂದು ಬೃಹತ್ ಬಜೆಟ್‍ನ, ದೊಡ್ಡ ತಾರಾಗಣದ ಚಿತ್ರ ಭಾರತದಾದ್ಯಂತ ತೆರೆ ಕಾಣುತ್ತಿದೆ. ಭಾರತೀಯ ಚಿತ್ರಗಳಷ್ಟೇ ಅಲ್ಲದೆ ವಿದೇಶೀ ಚಿತ್ರಗಳು ಅದರಲ್ಲೂ ಅತ್ಯದ್ಭುತ ಹಾಲಿವುಡ್ ಸಿನೆಮಾಗಳೂ ಇಲ್ಲಿ ಬಂದು ವಿಜೃಂಭಿಸಿ ಗಲ್ಲಾಪೆಟ್ಟಿಗೆಯನ್ನು ದೋಚಿ ಹೋಗುತ್ತಿವೆ. ದರ್ಶನ್ ನಟನೆಯ ‘ಕುರುಕ್ಷೇತ್ರ’, ಪ್ರಭಾಸ್ ನಟನೆಯ ‘ಸಾಹೋ’ ಮತ್ತು ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರಗಳ ಎಡೆಯಲ್ಲಿಯೂ ಹಲವು ಚಿತ್ರಗಳು ಸದ್ದಿಲ್ಲದೆ ಜನರ ಮೆಚ್ಚುಗೆಯನ್ನು ಪಡೆದಿವೆ. ಈ ಎಲ್ಲಾ ಚಿತ್ರಗಳಿಗೆ ಅವುಗಳದೇ ಆದ ಪ್ರೇಕ್ಷಕ ಗಣವಿದೆ. ಇಂತಹ ಗಿಜಿಗುಟ್ಟುವ ಮಾರುಕಟ್ಟೆಯಲ್ಲಿ ತುಳು ಚಿತ್ರವೊಂದು ರಾಜಾಧಿರಾಜನಂತೆ ಮೆರೆಯುತ್ತಾ ಜೈತ್ರಯಾತ್ರೆಯನ್ನು ಅದ್ಧೂರಿಯಾಗಿ ಮುನ್ನಡೆಸಿಕೊಂಡು ಬಂದಿದೆ ಎಂದರೆ ಮೆಚ್ಚಬೇಕಾದ ಸಂಗತಿಯದು. ತುಳುನಾಡಿನ ಸಮಸ್ತರೂ ಹೆಮ್ಮೆ ಪಡುವ ಸಂದರ್ಭವೂ ಹೌದು.
ಬೇರೆಲ್ಲಾ ಬಹಳಷ್ಟು ಪ್ರಮುಖ ವಿಚಾರಗಳನ್ನು ಚರ್ಚಿಸುವುದಕ್ಕಿಂತ ಮೊದಲು ‘ಗಿರಿಗಿಟ್’ ಚಿತ್ರತಂಡದ ಎಲ್ಲರಿಗೂ ‘ಬುಡ್ಕುಲೊ’ ಇ-ಪತ್ರಿಕೆಯು ಅಭಿನಂದನೆಗಳನ್ನು ಸಲ್ಲಿಸುತ್ತದೆ. ಬಹುಜನರು ನೋಡಿ ನಕ್ಕು ನಗುತ್ತಾ ಆಹ್ಲಾದಿಸುವಂತಹ ಸದಭಿರುಚಿಯ ಚಿತ್ರ ಒದಗಿಸಿದಕ್ಕಾಗಿ ನಿರ್ಮಾಪಕ, ನಿರ್ದೇಶಕರಾದಿಯಾಗಿ ಪ್ರತಿಯೊಬ್ಬರಿಗೂ ಶುಭಾಶಯಗಳು.
ಕೆಲ ತುಳು ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದ ನಾನು, ಹಲವು ಚಿತ್ರಗಳನ್ನು ನೋಡಿ ಜಿಗುಪ್ಸೆಕೊಂಡಿದ್ದೆ. ನಾನು ನೋಡಲು ಬಾಕಿಯಾಗಿದ್ದ ಹಾಲಿವುಡ್ ಚಿತ್ರ ‘ದ ಲಯನ್ ಕಿಂಗ್’ ವೀಕ್ಷಿಸಲು ಆಗಸ್ಟ್ 22ರಂದು ಬಿಗ್ ಸಿನೆಮಾಸ್‍ನಲ್ಲಿದ್ದಾಗ ‘ಗಿರಿಗಿಟ್’ ಸಂಗೀತ ನಿರ್ದೇಶಕರಲ್ಲೊಬ್ಬರಾದ ನನ್ನ ಮಿತ್ರ ಜೋಯೆಲ್ ರೆಬೆಲ್ಲೊ ‘ಗಿರಿಗಿಟ್’ ಚಿತ್ರವನ್ನೊಮ್ಮೆ ನೋಡಲು ಕೇಳಿಕೊಂಡರು. ನಾನೆಷ್ಟು ಚೂಸಿ ಎಂಬುದನ್ನು ತಿಳಿದಿರುವ ಜೋಯೆಲ್ ನನ್ನನ್ನು ಒತ್ತಾಯಪಡಿಸಲಿಲ್ಲವಾದರೂ ಚಿತ್ರವು ನಿರಾಶೆಯನ್ನಂತೂ ಮಾಡುವುದಿಲ್ಲ, ನೋಡಿ ನನ್ನ ಅಭಿಪ್ರಾಯ ತಿಳಿಸಲು ಹೇಳಿದಾಗ, ಮತ್ತು ಆತನೂ ಸಹ ಬಹಳ ಚೂಸಿಯೆಂಬುದನ್ನು ತಿಳಿದಿದ್ದ ನನಗೆ ‘ಗಿರಿಗಿಟ್’ ನೋಡಲು ಮನಸ್ಸಾಯಿತು. ಚಿತ್ರ ನೋಡಿದ ನಂತರ ಬರೆಯಲು ಸಾಕಷ್ಟು ಪ್ರೇರಣೆ ದೊರಕಿತ್ತಾದರೂ, ಹಲವು ಕಾರಣಗಳಿಂದಾಗಿ ಬರೆಯಲಾಗಿರಲಿಲ್ಲ. ಇದೀಗ ಅದು ಕೈಗೂಡಿದೆ. ಬರೆಯುತ್ತಾ ಕುಳಿತಾಗ ಮತ್ತಷ್ಟು ವಿಚಾರಗಳು ಮನ ಹೊಕ್ಕಿವೆ, ಹೊಕ್ಕುತ್ತಿವೆ. ಅವುಗಳನ್ನು ನಿಮ್ಮ ಮುಂದೆ ಸಾದರಪಡಿಸುತ್ತಿರುವೆ.
(ಮುಂದುವರೆಯಲಿದೆ)