ನಮ್ಮನ್ನು ಕೇಳುತ್ತಾ ಜನ ತಮ್ಮ ಕಷ್ಟ ಮರೆಯುತ್ತಾರೆ: ಆರ್.ಜೆ. ರಕ್ಷಿತಾ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : February 2, 2016 at 8:10 PM

ಸಂದರ್ಶನ: ಡೊನಾಲ್ಡ್ ಪಿರೇರಾ, ಸಂಪಾದಕ – ಬುಡ್ಕುಲೊ.ಕೊಮ್
ಫೊಟೊ: ಡೊನಾಲ್ಡ್ ಪಿರೇರಾ ಮತ್ತು ಆರ್.ಜೆ. ಎರೊಲ್

RJ Rakshita_T2ಮಾತಿನ ಮಲ್ಲಿ, ಚಾಟರ್ ಬಾಕ್ಸ್ ಎಂದು ಖ್ಯಾತಿ ಪಡೆದಿರುವ ಆರ್.ಜೆ. ರಕ್ಷಿತಾ ನಿರಂತರ 106 ಘಂಟೆಗಳ ಕಾಲ ಆರ್.ಜೆ. ಮ್ಯಾರಥಾನ್‍ನಲ್ಲಿ ಭಾಗವಹಿಸಿ ಲಿಮ್ಕಾ ದಾಖಲೆ ಸೃಷ್ಟಿಸಿದ್ದಾಳೆ. ಮಂಗಳೂರಿನ ಜನಪ್ರಿಯ ಖಾಸಗಿ ಎಫ್.ಎಂ. ಸ್ಟೇಶನ್ ಆಗಿರುವ 92.7 ಬಿಗ್ ಎಫ್.ಎಂ.ನಲ್ಲಿ ನಿರಂತರವಾಗಿ ಪ್ರಸಾರವಾದ ಈ ಮ್ಯಾರಥಾನ್‍ನಿಂದ ಜನತೆಗೆ ಬಹಳಷ್ಟು ಮಾಹಿತಿ ದೊರಕಿದೆ. ಐದು ದಿನಗಳ ಕಾಲ ಸ್ಟುಡಿಯೋದಲ್ಲಿಯೇ ಇದ್ದು ಹಗಲು ರಾತ್ರಿ ನಿರಂತರವಾಗಿ ಮಾತನಾಡಿದ ರಕ್ಷಿತಾ ಮಂಗಳೂರಿನಲ್ಲೀಗ ಜನಜನಿತ ವ್ಯಕ್ತಿ (ಮಂಗಳೂರಿನಲ್ಲಿ ವರ್ಲ್ಡ್ ಫೇಮಸ್ ಎನ್ನಬಹುದು!). ಈ ಅಭಿಯಾನಕ್ಕೆ ಸಾಕಷ್ಟು ಪ್ರಚಾರವೂ ದೊರಕಿದೆ. ಪತ್ರಿಕೆ, ಮಾಧ್ಯಮಗಳು ವರದಿ ಮಾಡಿವೆ. ನಾಲ್ಕೈದು ದಿನಗಳೊಳಗೆ ಆರ್.ಜೆ. ರಕ್ಷಿತಾಳನ್ನು ಕೇಳಿದವರ, ಬಲ್ಲವರ ಸಂಖ್ಯೆ ನೂರು ಪಟ್ಟು ವೃದ್ಧಿಸಿದೆ. ಈ ಸಂದರ್ಭದಲ್ಲಿ ನಮ್ಮ ಓದುಗರಿಗಾಗಿ ರಕ್ಷಿತಾ ಅವರನ್ನು ಸಂದರ್ಶಿಸಿ ಬಿಗ್ ಮ್ಯಾರಥಾನ್, ಆರ್.ಜೆ. ಬದುಕು, ಖಾಸಗಿ ವಿಷಯಗಳು, ಭವಿಷ್ಯದ ಬಗೆಗಿನ ಸಂಗತಿಗಳನ್ನು ಕೇಳಿ ಪಡೆಯಲಾಯಿತು. ಬನ್ನಿ, ಈ ಎಲ್ಲಾ ವಿಚಾರಗಳ ಬಗ್ಗೆ ರಕ್ಷಿತಾ ಏನು ಹೇಳುತ್ತಾರೆ, ಓದಿ ತಿಳಿಯೋಣ.  – ಸಂಪಾದಕ

ಬುಡ್ಕುಲೊ: ರಕ್ಷಿತಾ ಅವರೇ, ಸತತ 106 ಗಂಟೆಗಳ ಆರ್.ಜೆ. ಮ್ಯಾರಥಾನ್ ನಡೆಸಿ ನೀವೀಗ ಬಹಳಷ್ಟು ಖ್ಯಾತಿ ಗಳಿಸಿಕೊಂಡಿದ್ದೀರಿ. ಏನನ್ನಿಸುತ್ತಿದೆ?

ಆರ್.ಜೆ. ರಕ್ಷಿತಾ: ಅಷ್ಟೊಂದು ಸ್ಪೆಶಲ್ ಅಂತೇನೂ ಅನ್ನಿಸುತ್ತಿಲ್ಲ. ಆದ್ರೆ, ಯಾವತ್ತೂ ನಾಲ್ಕು ಗಂಟೆ, ಸಂಜೆ ನಾಲ್ಕರಿಂದ ಎಂಟರವರೆಗೆ, ಮಾತನಾಡುತ್ತಿದ್ದೆ. 92 ಗಂಟೆ ಮಾತನಾಡಿದ ನಂತರ, ಇನ್ನೂ ಮುಂದುವರೆಸೋಣ ಅಂಥನ್ನಿಸಿತು. ನಮ್ಮ ಬಾಸ್ ಪ್ರೋತ್ಸಾಹ ಕೊಟ್ಟರು. ಹೀಗೆ, 106 ಗಂಟೆಗಳ ಕಾಲ ಮಾತನಾಡಿದೆ.

ಬುಡ್ಕುಲೊ: ಇನ್ನೂ ಮುಂದುವರೆಸುವ ಇಚ್ಛೆಯಿತ್ತಾ?

ಆರ್.ಜೆ. ರಕ್ಷಿತಾ: ಹೌದು. ಬೇಜಾರಾಯ್ತು ಕೊನೆ ಕೊನೆಗೆ. ಇಷ್ಟು ದಿನ ಮಾತನಾಡಿ ಮಾತನಾಡಿ ಈಗ ಹೋಗ್ಬೇಕಲ್ಲಾ ಅಂಥ ತುಂಬಾ ಫೀಲಾಗ್ತಾ ಇತ್ತು. ಇಟ್ ವಾಸ್ ಎ ನೈಸ್ ಎಕ್ಸ್‍ಪೀರಿಯೆನ್ಸ್. ಇನ್‍ಫ್ಯಾಕ್ಟ್ ಎ ಗ್ರೇಟ್ ಎಕ್ಸ್‍ಪೀರಿಯೆನ್ಸ್. ಬಿಗ್ ಎಫ್.ಎಂ.ಗೆ ನಾನು ಥ್ಯಾಂಕ್ಸ್ ಹೇಳ್ತೀನಿ. ಯಾಕೆಂದ್ರೆ, ನಾನು ಇಷ್ಟೊಂದು ಮಾತನಾಡ್ತೀನೀಂತ ನನ್ಗೇ ಗೊತ್ತಿರ್ಲಿಲ್ಲ. ನನ್ನಲ್ಲಿರುವ ಆ ಕ್ಯಾಲಿಬರ್‍ಅನ್ನು ತೋರಿಸಿದ್ದು ಬಿಗ್ ಎಫ್.ಎಂ. ಐದು ದಿನ ಸತತವಾಗಿ ಮಾತನಾಡಿದ್ದು… ನನಗಂತೂ ಗೊತ್ತೇ ಆಗ್ಲಿಲ್ಲ. ದಿನಾಲೂ ನಾಲ್ಕು ಗಂಟೆ ಮಾತನಾಡಿ ಮಾತನಾಡಿ ಯಾವಾಗ ಮನೆಗೆ ಹೋಗ್ತೀನಿ ಅಂಥನ್ನಿಸುತ್ತಿತ್ತು. ಅದು ಸಂಜೆ ಹೊತ್ತಲ್ವಾ. ಈ ಐದು ದಿನ ಆಫೀಸಲ್ಲೇ ಇದ್ದೆ. ಮನೆಗೆ ಹೋಗ್ಲಿಕ್ಕಿದೆ ಎಂಬ ಟೆನ್ಶನ್ ಇಲ್ಲ. ಐದು ದಿನ ಇಲ್ಲೇ ಇದ್ದೆ, ಎಲ್ಲೂ ಹೊರಗಡೆ ಹೋಗ್ಲಿಲ್ಲ. ಮೂರು Ad Break ಸಮಯದಲ್ಲಿ ಕುರ್ಚಿಯಲ್ಲೇ ರೆಸ್ಟ್ ತೆಗೊಳ್ತಾ ಇದ್ದೆ.

RJ Rakshita_Budkulo_Interview (9)

ಬುಡ್ಕುಲೊ: ಈ ಕಾನ್ಸೆಪ್ಟ್ ಹೇಗೆ ಬಂದಿತು?

ಆರ್.ಜೆ. ರಕ್ಷಿತಾ: ಐಡಿಯಾದವರ ಕಾನ್ಸೆಪ್ಟ್ ಆಗಿತ್ತದು. ಅವರು ಇಂಟರ್‍ನೆಟ್ ಶೇರಿಂಗ್ ಬಗ್ಗೆ ಕಾನ್ಸೆಪ್ಟ್ ಕೊಟ್ಟಿದ್ರು. ಅದನ್ನು ಬಿಗ್ ಎಫ್.ಎಂ.ನವರು 92 ಗಂಟೆ 7 ನಿಮಿಷ ಸತತವಾಗಿ ಆರ್.ಜೆ. ಮ್ಯಾರಥಾನ್ ಮುಖಾಂತರ ಪ್ರಸ್ತುತಪಡಿಸಿದ್ದಾರೆ. ಇದು ಇಡೀ ಭಾರತದಾದ್ಯಾಂತ ಎಲ್ಲಾ ಬಿಗ್ ಎಫ್.ಎಂ. ಚಾನೆಲ್‍ಗಳಲ್ಲಿ ಪ್ರಸಾರವಾಗಿದೆ. ನಂತರ ಅದನ್ನು 106 ಗಂಟೆಗಳಿಗೆ ವಿಸ್ತರಿಸಲಾಯಿತು.

ಬುಡ್ಕುಲೊ: 106 ಗಂಟೆ ನೀವೊಬ್ರೇ ಮಾತನಾಡಿದ್ದಾ, ಬೇರೆಯವರೂ ಇದ್ದಾರಾ?

ಆರ್.ಜೆ. ರಕ್ಷಿತಾ: ಬೇರೆ ಆರ್.ಜೆ.ಗಳೂ ಮಾತನಾಡಿದ್ದಾರೆ. ನಮ್ಮ ಒಟ್ಟು 45 ಸ್ಟೇಶನ್‍ಗಳಲ್ಲಿ 25ರಲ್ಲಿ ಆರ್.ಜೆ.ಗಳು ಈ ಚಾಲೆಂಜ್‍ಅನ್ನು ಕೈಗೊಂಡು 106 ಗಂಟೆ ಮಾತನಾಡಿದ್ದಾರೆ.

ಬುಡ್ಕುಲೊ: ಇದರ ಉದ್ದೇಶವೇನಾಗಿತ್ತು?

ಆರ್.ಜೆ. ರಕ್ಷಿತಾ: ಐಡಿಯಾದವರ ಆ ಕಾನ್ಸೆಪ್ಟನ್ನು ನಾವು ಆರ್.ಜೆ. ಮ್ಯಾರಥಾನ್ ಮುಖಾಂತರ ಆದಷ್ಟು ಹೆಚ್ಚು ಜನರಿಗೆ ಇಂಟರ್‍ನೆಟ್ ಶೇರಿಂಗ್ ಬಗ್ಗೆ ಅವೇರ್‍ನೆಸ್ ಕ್ರಿಯೇಟ್ ಮಾಡುವುದಕ್ಕಾಗಿ ಬಳಸಿಕೊಂಡೆವು.

RJ Rakshita_Budkulo_Interview (5) RJ Rakshita_Budkulo_Interview (11) RJ Rakshita_Budkulo_Interview (14)


ಬುಡ್ಕುಲೊ: ನಿಮ್ಮ ಅನುಭವ ಹೇಗಿತ್ತು? ಎಷ್ಟು ಜನರ ಜೊತೆ ಮಾತನಾಡಿದ್ರಿ?

ಆರ್.ಜೆ. ರಕ್ಷಿತಾ: ದಿನಕ್ಕೆ ಹತ್ತು ಹನ್ನೆರಡು ಜನರು, ಒಟ್ಟಿಗೆ 53ರಷ್ಟು ಜನರ ಜೊತೆ ಮಾತನಾಡಿದ್ದೇನೆ. ಅದು ಸ್ಟುಡಿಯೊದಲ್ಲಿನ ಮುಖಾಮುಖಿ. ಅದಲ್ಲದೆ ಬಹಳಷ್ಟು ಕೇಳುಗರು ಫೋನ್ ಕಾಲ್ ಮಾಡಿದ್ದಾರೆ. ಕೊನೆ ದಿನವಂತೂ ತುಂಬಾ ಜನರು ಕಾಲ್ ಮಾಡಿದ್ರು. ಮೊದಲ ಎರಡು ದಿನ ಕೂಡ ತುಂಬಾ ಕಾಲ್ಸ್ ಬಂದಿವೆ. ರಾತ್ರಿ ಎರಡೂವರೆ, ಮೂರು ಗಂಟೆ ಹೊತ್ತಿನಲ್ಲಿಯೂ ಕಾಲ್ಸ್ ಬರ್ತಿದ್ವು. ಆ ಹೊತ್ತಿನಲ್ಲಿ ಫೋನ್ ಬರುವ ನಿರೀಕ್ಷೆ ಮಾಡಿರ್ಲಿಲ್ಲ ನಾನು.

ಅದೊಂದು ಅದ್ಭುತ ಅನುಭವ. ತುಂಬಾನೇ ಖುಷಿಯಾಯ್ತು. ರಿಪಬ್ಲಿಕ್ ಡೇ ಬೆಳಿಗ್ಗೆ ಶುರುವಾದಾಗ ನನ್ನ ಸ್ವರದ ಬಗ್ಗೆ ಗ್ಯಾರಂಟಿ ಇರ್ಲಿಲ್ಲ. ನನಗೆ ಆ ಒಂದು ಕೆಪ್ಯಾಸಿಟಿ ಇದೆ, ಐದು ದಿನ ಸತತವಾಗಿ ಮಾತನಾಡಬಹುದು ಅಂಥ ಗೊತ್ತಿರ್ಲಿಲ್ಲ. ತುಂಬಾ ಮಾತನಾಡ್ತೀನಿ ಅಂಥ ಗೊತ್ತಿತ್ತು. ತುಂಬಾ ಮಾತಾಡ್ತೀನಿ, ಆದ್ರೆ ಐದು ದಿನದ ವರೆಗೆ ಮಾತನಾಡ್ಬಹುದು ಅಂಥ ಗೊತ್ತಿರ್ಲಿಲ್ಲ.

ಬುಡ್ಕುಲೊ: ಆರೋಗ್ಯದ ಸಮಸ್ಯೆಯೇನಾದ್ರೂ ಕಾಡಿತ್ತಾ?

ಆರ್.ಜೆ. ರಕ್ಷಿತಾ: ಇಲ್ಲ. ಆರೋಗ್ಯದ ವಿಷಯದಲ್ಲಿ ಯಾವುದೇ ಸಮಸ್ಯೆ ಆಗ್ಲಿಲ್ಲ. ತುಂಬಾನೇ ಕೇರ್‍ಫುಲ್ ಆಗಿದ್ದೆ. ಬಿಸಿ ನೀರು ಕುಡಿಯುತ್ತಿದ್ದೆ. ನಮ್ಮ ಆಫೀಸ್‍ನವರೂ ಗೈಡ್ ಮಾಡ್ತಿದ್ದರು. ಏನು ತಿನ್ನಬಾರದು, ತಿನ್ನಬೇಕು ಇತ್ಯಾದಿಯೆಲ್ಲಾ ಹೇಳಿ ಕೊಡ್ತಿದ್ದರು.

ಬುಡ್ಕುಲೊ: ಮನೆಯನ್ನು ಮಿಸ್ ಮಾಡ್ಕೊಳ್ಳಿಲ್ವಾ?

ಆರ್.ಜೆ. ರಕ್ಷಿತಾ: ಇಲ್ಲಾ… ಇಲ್ಲೇ ಖುಷಿ ಆಗ್ತಿತ್ತು. ದಿನಾ ಎಂಟು ಗಂಟೆಗೆ ಶೋ ಮುಗಿದ ನಂತರ ಮನೆಗೆ ಹೊರುಡುವ ಫೀಲಿಂಗ್ ಇರ್ತಿತ್ತು. ಈ ಐದು ದಿನ ಹೇಗೂ ಇಲ್ಲೇ ಇರೋದಲ್ವಾ ಬೇಗ ಬೇಗ ಮಾಡಿ, ಹೊರಡುವ ಅಗತ್ಯವೇನೂ ಇರ್ಲಿಲ್ಲ. ನಿಧಾನಕ್ಕೆ ಹೋಗೋಣ, ಮಾತನಾಡುತ್ತಾ ಇರ್ತೀನಿ ಅಂಥಾಗ್ತಿತ್ತು.

RJ Rakshita_Budkulo_Interview (15) RJ Rakshita_Budkulo_Interview (12) RJ Rakshita_Budkulo_Interview (6)

ಬುಡ್ಕುಲೊ: ನೀವು ಈ ಶೋವನ್ನು ತುಳುವಿನಲ್ಲಿ ಪ್ರೆಸೆಂಟ್ ಮಾಡಿದ್ರಲ್ಲಾ.

ಆರ್.ಜೆ. ರಕ್ಷಿತಾ: ಹೌದು. ನನ್ನ ಪ್ರತಿದಿನದ ಶೋ ಇರೋದೇ ತುಳುವಿನಲ್ಲಿ. ಸಡನ್ನಾಗಿ ನಾನು ಕನ್ನಡ ಮಾತನಾಡಿದ್ರೆ ಕೇಳುಗರಿಗೆ ಬೇರೆ ಯಾರೋ ಅನ್ನಿಸಬಹುದು. ರಕ್ಷಿತಾ ರಕ್ಷಿತಾ ಥರಾನೇ ಇರ್ಲಿ ಅನ್ನೋದಕ್ಕಾಗಿ ತುಳುವಿನಲ್ಲೇ ಪ್ರೆಸೆಂಟ್ ಮಾಡಿದೆ.

ಬುಡ್ಕುಲೊ: ಇದಕ್ಕೆ ನಿಮ್ಮ ಆಯ್ಕೆ ಹೇಗಾಯಿತು?

ಆರ್.ಜೆ. ರಕ್ಷಿತಾ: ಇಂಥದೊಂದು ಚಾಲೆಂಜ್ ನಮ್ಮೆದುರು ಬಂದಾಗ ಆರ್.ಜೆ. ಎರೊಲ್ ನನ್ನ ಹೆಸರನ್ನು ಸೂಚಿಸಿದ್ರು. ನನಗೂ ಆ ಚಾಲೆಂಜ್ ಖುಷಿಯಾಯ್ತು. ನನ್ನ ಹಿರಿಯ ಅಧಿಕಾರಿಗಳಿಗೆ ನಾನು ಈ ಚಾಲೆಂಜ್ ತಗೋತೀನಿ, ನನ್ನಿಂದ ಇದನ್ನು ಮಾಡ್ಬಹುದು ಎಂದು ಹೇಳಿದೆ.

ಬುಡ್ಕುಲೊ: ನಿಮಗೆ ‘ಚಾಟರ್ ಬಾಕ್ಸ್’ ಎಂದು ಕರೆಯುತ್ತಾರಲ್ಲಾ, ಯಾಕೆ?

ಆರ್.ಜೆ. ರಕ್ಷಿತಾ: ನನ್ನ ಇಬ್ಬರು ಬಾಸ್‍ಗಳು ನನ್ನನ್ನು ಹಾಗೆ ಕರೆದಿದ್ದು. ಮೊದಲಿನ ನನ್ನ ಬಾಸ್ ಅನಿರುದ್ಧ್ ಅಂಥಾ ಇದ್ರು, ಅವರು ಮತ್ತು ನಮ್ಮ ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ಶಿಲ್ಪಾ ಶೆಟ್ಟಿ ಅವರು, ನಾನು ಜಾಸ್ತಿ ಮಾತಾಡ್ತೀನಿ ಅನ್ನೋದಕ್ಕಾಗಿ ಚಾಟರ್ ಬಾಕ್ಸ್ ರಕ್ಷಿತಾ ಎಂದು ಹೆಸರು ಕೊಟ್ಟಿದ್ರು.

ಬುಡ್ಕುಲೊ: ಇಷ್ಟು ಜನರ ಜೊತೆ ನೀವು ಮಾತನಾಡಿದಿರಿ. ಸ್ಪೆಶಲ್ ಅನುಭವವೇನಾದರೂ…?

ಆರ್.ಜೆ. ರಕ್ಷಿತಾ: ಎಕ್ಸಾಕ್ಟ್ಲಿ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಮೀಡಿಯಾದವರು ಹೀಗೆ ಎಲ್ಲರೂ ತಾವು ಇಂಟರ್‍ನೆಟ್‍ನಿಂದ ಪ್ರಯೋಜನ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಹೆಚ್ಚಿನವರು ಪರ್ಸನಲ್ ಅಗತ್ಯಗಳಿಗಾಗಿ ಇಂಟರ್‍ನೆಟ್ ಉಪಯೋಗಿಸ್ತಿದ್ದಾರೆ. ಅದೇ ರೀತಿ ಪ್ರೊಫೆಶನಲ್ಲಾಗಿಯೂ ಯೂಸ್ ಮಾಡ್ತಾರಂತ ಹೇಳಿದ್ದಾರೆ. ಹೆಚ್ಚಿನವರು ಪರ್ಸನಲ್ ಅಗತ್ಯಗಳಿಗೆ ಬಳಸುತ್ತಾರೆ. ತಮಗೆ ಅಪ್ಲಿಕೇಶನ್‍ಗಳ ಉಪಯೋಗ, ಅದರಿಂದಾದ ಫಾಯಿದೆ, ಪರ್ಸನಲ್ ಕಾಂಟ್ಯಾಕ್ಟ್‍ಗೆ ಮತ್ತು ಹೇಗೆ ಹಳೆಯ ಫ್ರೆಂಡ್ಸ್‍ಗಳು ಮತ್ತೆ ಸಂಪರ್ಕಕ್ಕೆ ಸಿಕ್ಕರು ಎಂಬ ಬಗ್ಗೆ ಹೇಳಿದ್ದಾರೆ. ತಮ್ಮ ನೆನಪುಗಳನ್ನು ಹಂಚಿದ್ದಾರೆ.

RJ Rakshita_Budkulo_Interview (4) RJ Rakshita_Budkulo_Interview (3) RJ Rakshita_Budkulo_Interview (13)

ಬುಡ್ಕುಲೊ: ಜನರ ಪ್ರತಿಕ್ರಿಯೆ ಹೇಗಿತ್ತು?

ಆರ್.ಜೆ. ರಕ್ಷಿತಾ: ತುಂಬಾನೇ ಚೆನ್ನಾಗಿತ್ತು. ನಮ್ಮ ವಾಟ್ಸ್ಯಾಪ್‍ನಲ್ಲಿ ತುಂಬಾ ರೆಸ್ಪಾನ್ಸ್ ಬರ್ತಿತ್ತು. ಇಡೀ ದಿನ ನಾನು ಮಾತನಾಡುತ್ತಿದ್ದುದನ್ನು ನೋಡಿ, ಊಟ ಆಯ್ತಾ, ತಿಂಡಿ ಆಯ್ತಾ ಎಂದು ಕಾಳಜಿಯಿಂದ, ಪ್ರೀತಿಯಿಂದ ಸಂದೇಶ ಕಳಿಸ್ತಿದ್ರು. ಊಟ, ತಿಂಡಿ ತಂದು ಕೊಡ್ಬೇಕಾ ಅಂತ ಕೇಳ್ತಾ ಇದ್ರು. ರಾತ್ರಿ, ಹಗಲು ಬಂದ ಎಲ್ಲಾ ಮೆಸೇಜ್‍ಗಳಿಗೆ ರಿಪ್ಲೈ ಮಾಡಿದ್ದೇನೆ. ನನ್ನ ಆಫೀಸಲ್ಲೂ ಅಷ್ಟೆ. ಮೊದಲ ದಿನ ಒಂಥರಾ ಹೆಸಿಟೇಶನ್ ಇತ್ತು. ಎಲ್ರೂ ತುಂಬಾ ಸಪೋರ್ಟ್ ಮಾಡಿದ್ದಾರೆ. ಕಾನ್ಸೆಪ್ಟ್‍ವೈಸ್ ಬೇರೆ ಬೇರೆ ವಿಚಾರಗಳನ್ನು ಕೊಡುವುದು, ಗೆಸ್ಟ್‍ಗಳನ್ನು ಕರೆದುಕೊಂಡು ಬರುವುದು, ಸೂಕ್ತ ವ್ಯಕ್ತಿಗಳನ್ನು ಕರೆಸುವುದು, ಅದರ ಕೋಆರ್ಡಿನೇಶನ್ ತುಂಬಾ ಕರೆಕ್ಟಾಗಿ ಮಾಡಿದ್ದಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ. ನನಗೆ ನನ್ನ ಕೆಲಸದ ಸಂಪೂರ್ಣ ಜವಾಬ್ದಾರಿ ವಹಿಸಲಾಗಿತ್ತು. ನಾನು ಒಬ್ಬಳೇ ಮಾತನಾಡುವುದಕ್ಕಿಂತ, ಗೆಸ್ಟ್‍ಗಳೂ ಮಾತನಾಡಿದ್ದರಿಂದ, ತಮ್ಮ ಅನುಭವ ಅವರು ಹಂಚಿಕೊಂಡಿದ್ದರಿಂದ ಬಹಳಷ್ಟು ಮಾಹಿತಿಯ ವಿನಿಮಯ ಆಗಿದೆ.

ಬುಡ್ಕುಲೊ: ಇಷ್ಟು ಜನರ ಜೊತೆ ಮಾತನಾಡಿದ್ದರಿಂದ ನಿಮಗೆ ತಿಳಿದು ಬಂದ ಹೆಚ್ಚಿನ, ಹೊಸ ವಿಷಯಗಳೇನು?

ಆರ್.ಜೆ. ರಕ್ಷಿತಾ: ನಾನು ಈ ವಿಷಯ ಮಾತನಾಡುವುದಕ್ಕೆ ಮೊದಲು ಬಹಳಷ್ಟು ರೀಸರ್ಚ್ ಮಾಡಿದ್ದೇನೆ. ಇಂಟರ್‍ನೆಟ್‍ನ ಅಗತ್ಯವೇನು, ಅದರ ಪ್ರಾಮುಖ್ಯತೆ ಏನು ಎಂಬುದನ್ನು ಅಧ್ಯಯನ ಮಾಡಿದೆ. ಅದೇ ರೀತಿ ಅದರಿಂದ ಡಿಸ್‍ಅಡ್ವಾಂಟೇಜ್ ಕೂಡ ಇದೆ. ನಿಜವಾಗಿ ಹೇಳ್ಬೇಕಂದ್ರೆ, ಅದನ್ನು ನಾವೇ ಮಾಡಿಕೊಂಡಿರೋದು. ಇಂಟರ್‍ನೆಟ್ ಎಂಬುದು ಡಿಸ್‍ಅಡ್ವಾಂಟೇಜ್ ಅಲ್ವೇ ಅಲ್ಲ. ಇಂಟರ್‍ನೆಟ್ ಶೇರ್ ಮಾಡಿಕೊಂಡ್ರೆ ಒಳ್ಳೆಯದು. ಇನ್ನೊಬರಲ್ಲಿ ಶೇರ್ ಮಾಡಿಕೊಳ್ಳಿ ಎಂದು ಕೇಳುವ ಮುಂಚೆ ನಾನು ಮೊದಲು ಪ್ಲೆಡ್ಜ್ ತೆಗೊಂಡಿದ್ದೇನೆ. ನನ್ನ ಫೋನಿಂದ 150 ಕಾಲ್‍ಗಳನ್ನು ಮಾಡಿದ್ದೇನೆ. ದೇಶದಾದ್ಯಂತ ಇದು ಉತ್ತಮ ಸ್ಪಂದನೆ ಸಿಕ್ಕಿದ್ದು, ಸಚಿನ್ ತೆಂಡುಲ್ಕರ್, ಖ್ಯಾತ ನಟ ನಟಿಯರು, ಸೆಲೆಬ್ರಿಟಿಗಳು ಈ ಪ್ಲೆಡ್ಜ್ ತೆಗೊಂಡಿದ್ದಾರೆ.

ಬುಡ್ಕುಲೊ: ಈ ಪ್ಲೆಡ್ಜ್‍ನಿಂದಾಗುವ ಲಾಭವೇನು? ಯಾರಿಗೆ ಅದು ದೊರಕುತ್ತದೆ?

ಆರ್.ಜೆ. ರಕ್ಷಿತಾ: ಮಕ್ಕಳ ಶಿಕ್ಷಣಕ್ಕಾಗಿ ದುಡಿಯುವ ಎನ್.ಜಿ.ಒ.ಗಳಿಗೆ ಹೋಗುತ್ತದೆ. ಒಂದು ಕಾಲ್‍ಗೆ ಒಂದು ಎಂ.ಬಿ. ಡಾಟಾ ಡೊನೇಟ್ ಮಾಡ್ತಾರೆ. ದೇಶದಾದ್ಯಂತ ಬರುವ ಕಾಲ್‍ಗಳೆಲ್ಲಾ ರೆಜಿಸ್ಟರ್ ಆಗಿ, ಒಂದೊಂದು ಪ್ಲೆಡ್ಜ್‍ಗೆ ಒಂದು ಎಂ.ಬಿ.ಯಂತೆ ಐಡಿಯಾದವರು ಮಕ್ಕಳ ಶಿಕ್ಷಣಕ್ಕಾಗಿ ಹೆಲ್ಪ್ ಮಾಡ್ತಾರೆ.

RJ Rakshita_Budkulo_Interview (11) RJ Rakshita_Budkulo_Interview (10) RJ Rakshita_Budkulo_Interview (2)

ಬುಡ್ಕುಲೊ: ನೀವು ಆರ್.ಜೆ. ಆಗಿದ್ದು ಹೇಗೆ?

ಆರ್.ಜೆ. ರಕ್ಷಿತಾ: ಹಿಂದೆ ನನಗೆ ಸ್ಟೇಜ್ ಫಿಯರ್ ತುಂಬಾ ಇತ್ತು. ಯಾರನ್ನೂ ಫೇಸ್ ಮಾಡಿ ಮಾತಾಡುವಷ್ಟು ಧೈರ್ಯ ಇರ್ಲಿಲ್ಲ. ಹಿಂದಿನಿಂದ ಬೇಕಾದಷ್ಟು ಮಾತಾಡ್ತಿದ್ದೆ. ಆದ್ರೆ ಮುಂದೆ ನಿಂತು ಮಾತಾಡ್ಲಿಕ್ಕೆ ಆಗ್ತಿರ್ಲಿಲ್ಲ. ಸೆಮಿನಾರ್‍ಗಳಲ್ಲಿ ಮಾತನಾಡ್ಲಿಕ್ಕೆ ಭಯಪಡ್ತಿದ್ದೆ. ನನ್ನ ಇಂಟ್ರಡಕ್ಷನ್ ಕೊಡ್ಲಿಕ್ಕೇ ತುಂಬಾ ಭಯವಾಗ್ತಿತ್ತು. ಹೀಗಿರುವಾಗ, ಡಿಗ್ರಿಯಲ್ಲಿ ಕಾಲೇಜ್ ಫೆಸ್ಟ್ ದಿನ ಎಂ.ಸಿ. ಇರ್ಲಿಲ್ಲ. ನನಗೆ ಎಂ.ಸಿ. ಮಾಡ್ಲಿಕ್ಕೆ ಹೇಳಿದ್ರು. ನಾನು ಎಲ್ಲವನ್ನೂ ಪೇಪರ್‍ನಲ್ಲಿ ಬರೆದುಕೊಂಡು ಹೋದೆ. ನನಗೆ ಸೆಕೆಂಡ್ ಪ್ಲೇಸ್ ಬಂತು. ಅಲ್ಲಿ ನನ್ನದು ಸ್ವಂತದ್ದೇನೂ ಇರಲಿಲ್ಲ. ಎಲ್ಲಾ ಪುಸ್ತಕದಿಂದ ಎರವಲು ಪಡೆದಿದ್ದು. ಇಷ್ಟಕ್ಕೇ ಸೆಕೆಂಡ್ ಪ್ಲೇಸ್ ಬರುವಾಗ, ನಾನೇ ನನ್ನಷ್ಟಕ್ಕೆ ಸ್ವಂತದ್ದೇನಾದ್ರೂ ಮಾಡಿದ್ರೆ ಉತ್ತಮ ಅನ್ನಿಸಿತು. ನಾನು ಉಡುಪಿಯಲ್ಲಿ ಕಲಿಯುತ್ತಿದ್ದೆ. ಟಿ.ವಿ. ನೋಡಿಕೊಂಡು ಆಂಕರಿಂಗ್ ಕಲಿಯಲು ಅಲ್ಲಿ ಅವಕಾಶ ಇರಲಿಲ್ಲ, ಹಾಗಾಗಿ ರೇಡಿಯೋ ಕೇಳ್ತಾ ಇದ್ದೆ. ರೇಡಿಯೋ ಕೇಳ್ತಾ ಹೇಗೆ ಮಾತಾಡ್ತಾರೆ ಎಂದೆಲ್ಲಾ ಪಾಯಿಂಟ್ ಮಾಡಿಕೊಳ್ತಿದ್ದೆ. ನಾನೇ ಸ್ಕ್ರಿಪ್ಟ್ ಬರೆದು ಓದ್ತಿದ್ದೆ. ಯಾವುದಾದರೂ ವಿಷಯದ ಮೇಲೆ ಬರೆದು, ನಾನೇ ವಾಯ್ಸ್ ರೆಕಾರ್ಡ್ ಮಾಡ್ತಿದ್ದೆ.

ಬುಡ್ಕುಲೊ: ಆರ್.ಜೆ. ಆಗ್ಬೇಕೆಂಬುದು ನಿಮ್ಮ ಇಚ್ಛೆಯಾಗಿತ್ತೆ?

ಆರ್.ಜೆ. ರಕ್ಷಿತಾ: ಹೌದು. ರೇಡಿಯೋ ಕೇಳಿ ಕೇಳಿಯೇ ನಾನು ಕಲಿತೆ. ನಾನು ಆರ್.ಜೆ. ಆಗಿ ಈಗ ಒಂದು ವರ್ಷ ಒಂದು ತಿಂಗಳು ಆಯ್ತು.

ಬುಡ್ಕುಲೊ: ಇಷ್ಟು ಕಡಿಮೆ ಅವಧಿಯಲ್ಲಿ ನೀವು ಉತ್ತುಂಗಕ್ಕೇರಿದ್ದೀರಿ…

ಆರ್.ಜೆ. ರಕ್ಷಿತಾ: ಹೌದು. ನಾನು ತುಂಬಾ ಅದೃಷ್ಟವಂತೆ. ಏನು ಬಯಸಿದ್ದೆನೋ ಅದು ಸಿಕ್ಕಿತು.

ಬುಡ್ಕುಲೊ: ಮಂಗಳೂರಿನಲ್ಲಿ ಮೂರು ಖಾಸಗಿ ಎಫ್.ಎಂ. ಸ್ಟೇಶನ್‍ಗಳಿವೆ. ನಿಮ್ಮ ನಡುವೆ ಸ್ಪರ್ಧೆ ಇದೆಯಾ?

ಆರ್.ಜೆ. ರಕ್ಷಿತಾ: ನಾವೀಗ ನಂಬರ್ ವನ್ ಸ್ಥಾನದಲ್ಲಿದ್ದೇವೆ. ಹಿಂದೆ ನನಗೆ ಇದ್ದ ಫಾಲೊವರ್‍ಗಳ ಸಂಖ್ಯೆ ಈ ಆರ್.ಜೆ. ಮ್ಯಾರಥಾನ್‍ನಿಂದಾಗಿ ದ್ವಿಗುಣಗೊಂಡಿದೆ. ಜನರು ತಮಗೆ ಬೇಕಾದ, ನೆಚ್ಚಿನ ಆರ್.ಜೆ.ಯನ್ನು ಕೇಳಲು ಬಯಸುತ್ತಾರೆ. ಮೊನ್ನೆ ಜನರು ಐದು ದಿನ ನನ್ನನ್ನು ಕೇಳಿದ್ದಾರೆ. ಮುಂದೆ ನನ್ನ ರೆಗ್ಯುಲರ್ ಶೋಗೆ, ಸಂಜೆ 4ರಿಂದ 8ರ ತನಕ ಅವರು ನನ್ನನ್ನು ಕೇಳಲು ಕಾಯುತ್ತಾರೆ.

ಬುಡ್ಕುಲೊ: ನಿಮಗೆ ಸಿನೆಮಾ ಕ್ಷೇತ್ರದ ಹಲವರೊಂದಿಗೆ ಸಂಪರ್ಕ, ಪರಿಚಯ, ಒಡನಾಟವಿರುತ್ತದೆ. ಸಿನೆಮಾ ಕ್ಷೇತ್ರದಲ್ಲಿ ಅವಕಾಶಗಳೇನಾದರೂ ಹುಡುಕಿಕೊಂಡು ಬಂದಿವೆಯಾ?

ಆರ್.ಜೆ. ರಕ್ಷಿತಾ: ಈಗಾಗಲೇ ನನ್ನ ಒಂದು ಸಿನೆಮಾ ತಯಾರಾಗಿದೆ. ‘ಪಿಲಿಬೈಲ್ ಯಮುನಕ್ಕ’ ತುಳು ಚಿತ್ರದಲ್ಲಿ ನನಗೆ ಸೆಕೆಂಡ್ ಲೀಡ್ ರೋಲ್ ಇದೆ. ಅದರಲ್ಲಿ ನನ್ನದು ಸ್ವಲ್ಪ ವಿಲನ್ ಶೇಡ್. ಅದರ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಎಪ್ರಿಲ್ ಮೇನಲ್ಲಿ ರಿಲೀಸ್ ಇದೆ. ಕನ್ನಡದಲ್ಲಿ ಎರಡು ಚಿತ್ರಗಳಿಗೆ ಆಫರ್ ಬಂದಿದೆ.

ಬುಡ್ಕುಲೊ: ಅಂದ್ರೆ ನೀವು ರೇಡಿಯೊ ಜಾಕಿ ಕೆಲಸ ಬಿಟ್ಟು ನಟನೆಗೆ ಶಿಫ್ಟ್ ಆಗುತ್ತೀರಾ?

ಆರ್.ಜೆ. ರಕ್ಷಿತಾ: ಅದರಲ್ಲಿ ನನಗೆ ಆಸಕ್ತಿ ಇರಲಿಲ್ಲ. ಆಫರ್ ಬಂದಿದ್ದರಿಂದ ಮಾಡೋಣ ಅನ್ನಿಸಿತು. ಅವಕಾಶ ಹುಡುಕಿಕೊಂಡು ಹೋಗುವ ಮಾತೇ ಇಲ್ಲ. ಅವಕಾಶ ಬಂದ್ರೆ ಮಾತ್ರ ಪರಿಶೀಲಿಸುತ್ತೇನೆ.

RJ Rakshita_Budkulo_Interview (8)

ಬುಡ್ಕುಲೊ: ಆರ್.ಜೆ. ಆಗಿ ಏನಾದರೂ ವಿಶೇಷ ಅನುಭವ ಹೇಳಬಹುದಾ?

ಆರ್.ಜೆ. ರಕ್ಷಿತಾ: ಬೇರೆ ಯಾರತ್ರಾನೂ ಹೇಳದ್ದನ್ನು ನಾನು ಮೈಕಲ್ಲಿ ಹೇಳ್ತೀನಿ. ಸೀರಿಯಸ್ ವಿಷಯವಿದ್ರೂ ಅಲ್ಲಿ ನಾನು ಫನ್ನಿಯಾಗಿ ಎಕ್ಸ್‍ಪ್ರೆಸ್ ಮಾಡ್ತೀನಿ. ನನ್ನ ಕೇಳುಗರಿಗೆ ನನ್ನ ಎಲ್ಲಾ ಇಷ್ಟ ಕಷ್ಟಗಳು ಗೊತ್ತಾಗಿ ಬಿಟ್ಟಿದೆ. ನನ್ನ ಫೇವರಿಟ್ ಹೀರೊ ಗೆಸ್ ಮಾಡಿ ಅಂದ್ರೆ ಅವರಿಗೆ ಉತ್ತರ ಗೊತ್ತಿರುತ್ತೆ. ಈ ಒಂದು ವರ್ಷದಲ್ಲಿ ನನ್ನ ಫೇವರಿಟ್‍ಗಳೇನೆಂಬುದೆಲ್ಲಾ ಅವರಿಗೆ ಗೊತ್ತಾಗಿ ಬಿಟ್ಟಿದೆ. ನಂಗೆ ಏನಿಷ್ಟ, ಏನು ತಿನ್ನುತ್ತೇನೆ, ತಿನ್ನಲ್ಲ, ನನ್ನ ಮೆಚ್ಚಿನ ನಟ, ನಟಿ ಯಾರು ಹೀಗೆ ಎಲ್ಲಾ ಅವರಿಗೆ ತಿಳಿದಿದೆ. ನಾನು ನನ್ನ ವಿಚಾರಗಳನ್ನು ರೇಡಿಯೋದಲ್ಲಿ ಶೇರ್ ಮಾಡ್ತೀನಿ.

ಬುಡ್ಕುಲೊ: ನಿಮಗೆ ಮಿಡಿಯುವಂತಹ ಅನುಭವವೇನಾದರೂ ಆಗಿದ್ದಿದೆಯಾ? ವೈಯಕ್ತಿಕ ಸಂಗತಿಗಳನ್ನು ನಿಮ್ಮತ್ರ ಶೇರ್ ಮಾಡ್ತಾರಾ?

ಆರ್.ಜೆ. ರಕ್ಷಿತಾ: ಹೌದು. ತುಂಬಾ ಜನರಿದ್ದಾರೆ. ಗುರುವಾಯನಕೆರೆಯ ಒಬ್ಬರು ಇದ್ದಾರೆ, ಅವರಿಗೆ ಎರಡು ವರ್ಷದಿಂದ ನಡೆಯಲಿಕ್ಕೆ ಆಗ್ತಾ ಇಲ್ಲ. ಅವರು ಇಡೀ ದಿನವನ್ನು ರೇಡಿಯೋ ಕೇಳಿ ಸಮಯ ಕಳೆಯುತ್ತಾರೆ. ಬಿಗ್ ಎಫ್.ಎಂ.ನ ಎಲ್ಲಾ ಶೋಗಳನ್ನು ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಕೇಳುತ್ತಾರೆ. ಅವರಿಗೆ ಪ್ರತಿಯೊಂದು ಅಪ್‍ಡೇಟ್‍ಗಳು ಗೊತ್ತಿರುತ್ತವೆ. ಅವರು ದಿನಾಲೂ ಕಾಲ್ ಮಾಡಿ ಮಾತಾಡ್ತಾರೆ. ನಮ್ಮ ಶೋ ಕೇಳಿ, ನಮ್ಮತ್ರ ಮಾತಾಡಿ ತುಂಬಾ ಖುಶಿಯಾಗುತ್ತದೆ, ತಮ್ಮ ನೋವು ಮರೆತು ಹೋಗುತ್ತೆ ಎಂದು ಅವರು ಹೇಳುತ್ತಿರುತ್ತಾರೆ. ಅದು ತುಂಬಾ ಸ್ಪೆಶಲ್ ಫೀಲಿಂಗ್. ಖುಷಿನೂ ಆಗುತ್ತೆ. ಬಹಳಷ್ಟು ಗೃಹಿಣಿಯರೂ ಕೂಡ ಫೋನ್ ಮಾಡಿ ಮಾತನಾಡುತ್ತಿರುತ್ತಾರೆ.

ಬುಡ್ಕುಲೊ: ಇಷ್ಟೊಂದು ಪಟ ಪಟ ಅಂಥ ಮಾತಾಡ್ತೀರಲ್ಲಾ ಮಾರಾಯ್ರೆ! ಹೇಗೆ?

ಆರ್.ಜೆ. ರಕ್ಷಿತಾ: Actually ನಾನು ಪಾಂಯ್ಟ್ ಮಾಡ್ತೀನಿ ಹೊರತು ಏನು ಮಾತಡ್ಬೇಕಂತ ಪ್ರಿಪೇರ್ ಮಾಡುವುದಿಲ್ಲ. ಅಲ್ಲಿ ಹೋಗಿ ಬಟನ್ ಆನ್ ಮಾಡಿ ಮೈಕ್ ಮುಂದೆ ಕೂತಾಗ ಅದರಷ್ಟಕ್ಕೇ ಏನಾದ್ರೂ ಬಂದು ಬಿಡುತ್ತೆ. ಟಾಪಿಕ್ ಒಂದಿರುತ್ತೆ. ಅದರ ಜೊತೆ ಕೇಳುಗರು ಸೇರಿಕೊಂಡಾಗ ಫ್ಲೊ ಬರುತ್ತೆ. ಏನಾದ್ರೂ ಹೀಗೇ ಮಾತಾಡ್ಬೇಕು ಅಂಥ ತಯಾರಿ ಮಾಡಿಕೊಂಡ್ರೂ ಅಲ್ಲಿ ಹೋದಾಗ ಬೇರೆಯದೇ ಮಾತುಗಳು ಬರುತ್ವೆ.

RJ Rakshita_Budkulo_Interview RJ Rakshita_Budkulo_Interview (7) RJ Rakshita_Budkulo_Interview (1)

ಬುಡ್ಕುಲೊ: ಸಾಮಾನ್ಯವಾಗಿ ಮಂಗಳೂರಿನ ಜನರಿಗೆ ಕನ್ನಡವನ್ನು ಮಾತನಾಡಲು ಬರುವುದಿಲ್ಲ. ಇಲ್ಲಿನವರು ಮಾತನಾಡುವುದನ್ನು ಕೇಳಿದಾಕ್ಷಣ ಮಂಗಳೂರಿನವರೆಂದು ಇತರರು ಕಂಡುಕೊಳ್ಳುತ್ತಾರೆ. ಇಲ್ಲಿನವರಿಗೆ ತುಳು, ಕೊಂಕಣಿ ಮಾತೃಭಾಷೆಯಾಗಿರುವುದರಿಂದ ಅದರ ಪ್ರಭಾವ ಇದ್ದೇ ಇರುತ್ತದೆ. ಇಲ್ಲಿ ಖಾಸಗಿ ಎಫ್.ಎಂ.ಗಳು ಬಂದ ನಂತರ ಚೆನ್ನಾಗಿ ಕನ್ನಡ ಮಾತನಾಡುವ ಆರ್.ಜೆ.ಗಳು ಸೃಷ್ಟಿಯಾಗಿದ್ದಾರೆ. ನೀವು ಕೂಡ ತುಳುವರು. ನಿಮ್ಮ ಕನ್ನಡ ಇಷ್ಟೊಂದು ಸುಂದರ, ಸ್ಪಷ್ಟವಾಗಿರಲು ಕಾರಣವೇನು? ಶಾಲೆಯ ಮಾಧ್ಯಮ ಕನ್ನಡ ಅಥವಾ ಇಂಗ್ಲಿಶ್?

ಆರ್.ಜೆ. ರಕ್ಷಿತಾ: ನಾನು ಕಲಿತದ್ದು ಇಂಗ್ಲಿಶ್ ಮೀಡಿಯಂನಲ್ಲಿ. ನನ್ನ ನೆಚ್ಚಿನ ಸಬ್ಜೆಕ್ಟ್‍ಗಳು ಕನ್ನಡ ಮತ್ತು ಇಂಗ್ಲಿಶ್. ಕನ್ನಡ ಭಾಷಾ ಪರೀಕ್ಷೆಯಲ್ಲಿ ಯಾವಾಗಲೂ ಟಾಪ್ ಬರುತ್ತಿದ್ದೆ. ಕನ್ನಡ ಓಪನ್ ಎಕ್ಸಾಮ್‍ನಲ್ಲಿ ರಾಜ್ಯಕ್ಕೆ ನಾಲ್ಕನೇ Rank ಪಡೆದಿದ್ದೇನೆ. ಕನ್ನಡ ಸಾಹಿತ್ಯವನ್ನು ತುಂಬಾ ಓದುತ್ತಿದ್ದೆ. ಕಥೆಗಳು, ಇತಿಹಾಸ ತುಂಬಾ ಪ್ರಿಯವಾದದ್ದು. ನಾನು ಎರಡು ವರ್ಷದವಳಾಗಿದ್ದಾಗಿನಿಂದಲೇ ಕನ್ನಡ ಮಾತನಾಡುತ್ತಿದ್ದೆ. ಕನ್ನಡದಲ್ಲಿ ಫುಲ್ ಮಾರ್ಕ್ಸ್ ತೆಗೊಳ್ತಿದ್ದೆ. ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ 125ರಲ್ಲಿ 122 ಅಂಕಗಳನ್ನು ಪಡೆದಿದ್ದೇನೆ. ಯಾವುದೇ ತರಬೇತಿಯನ್ನು ಪಡೆದಿಲ್ಲ. ಬೆಂಗಳೂರಿನ ಸಾಕಷ್ಟು ಫ್ರೆಂಡ್ಸ್‍ಗಳಿದ್ದಾರೆ. ಆರ್.ಜೆ. ಆಗಿ, ಸ್ಪೋರ್ಟ್ಸ್ನಿಂದಾಗಿ ಮತ್ತು ಸಿನೆಮಾದವರು ಸೇರಿ ತುಂಬಾ ಫ್ರೆಂಡ್ಸ್ ಇದ್ದಾರೆ. ಅದರ ಪ್ರಭಾವ ನನ್ನ ಕನ್ನಡದ ಮೇಲಾಗಿದೆ.

ಬುಡ್ಕುಲೊ: ನಿಮ್ಮ ಫ್ಯೂಚರ್ ಪ್ಲಾನ್‍ಗಳೇನು?

ಆರ್.ಜೆ. ರಕ್ಷಿತಾ: ಬಿಗ್ ಎಫ್.ಎಂ.ನಲ್ಲೇ ಮುಂದುವರಿಯುವ ಇಚ್ಛೆ ಇದೆ. ಮೂವಿ ಆಫರ್‍ಗಳು ಬರ್ತಾ ಇವೆ. ಬಂದಿದ್ದರಲ್ಲಿ ಚೆನ್ನಾಗಿದ್ದದ್ದನ್ನು ಮಾಡೋಣ ಅಂದ್ಕೊಂಡಿದೀನಿ. ನನಗೆ ಬ್ಯಾಡ್‍ಮಿಂಟನ್, ಬಾಸ್ಕೆಟ್‍ಬಾಲ್‍ನಲ್ಲಿ ತುಂಬಾ ಆಸಕ್ತಿ ಇದೆ. ಬ್ಯಾಡ್‍ಮಿಂಟನ್‍ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದೇನೆ. ಅದರಲ್ಲಿ ಮುಂದೆ ಹೋಗ್ಬೇಕೆಂದಿದೆ.

ಬುಡ್ಕುಲೊ: ಒಂದು ವೇಳೆ ರಕ್ಷಿತಾ ಆರ್.ಜೆ. ಆಗದೇ ಇದ್ದಿದ್ದರೆ ಏನಾಗಿರ್ತಿದ್ರು?

ಆರ್.ಜೆ. ರಕ್ಷಿತಾ: ರಕ್ಷಿತಾ ಆರ್.ಜೆ. ಆಗ್ದೇ ಇದ್ದಿದ್ರೆ ಎಂ.ಬಿ.ಎ. ಅಥವಾ ಎಂ.ಕಾಂ. ಮುಗಿಸಿ ಒಂದಾ ಲೆಕ್ಚರರ್ ಅಥವಾ ಮಾರ್ಕೆಟಿಂಗ್ ಫೀಲ್ಡ್‍ನಲ್ಲಿರ್ತಿದ್ದೆ ಅನ್ನಿಸುತ್ತೆ. ಬಹುಶಃ ಆವಾಗ್ಲೇ ಆರ್.ಜೆ. ಬದಲು ನಟನೆಗೆ ಅವಕಾಶ ಬಂದಿದ್ದಿದ್ರೆ ನಟಿಯಾಗಿರ್ತಿದ್ದೆ ಅನಿಸುತ್ತೆ.

ಬುಡ್ಕುಲೊ: ನಿಮ್ಮ ನೆಚ್ಚಿನ ಆಹಾರ?

ಆರ್.ಜೆ. ರಕ್ಷಿತಾ: ಚಿಕನ್, ಮೀನು.

ಬುಡ್ಕುಲೊ: ನೆಚ್ಚಿನ ನಟ…?

ಆರ್.ಜೆ. ರಕ್ಷಿತಾ: ನನ್ನ favorite actor ನನ್ನ ಫ್ರೆಂಡ್ ರಕ್ಷಿತ್ ಶೆಟ್ಟಿ. ದೀಪಿಕಾ ಪಡುಕೋಣೆ ನನಗೆ ನಟನೆಗೆ ಸ್ಫೂರ್ತಿ. ಫೇವರೆಟ್ ಸಿಂಗರ್ ಕಾರ್ತಿಕ್. ಇವರೆಲ್ಲರ ಜೊತೆ ಇಂಟರ್ಯಾಕ್ಷನ್ ಮಾಡಿದ್ದೇನೆ. ಇದಕ್ಕೆಲ್ಲಾ ಬೇಸ್ ಕೊಟ್ಟಿದ್ದು ಬಿಗ್ ಎಫ್.ಎಂ. ಇಲ್ಲಿ ಬಂದ ಮೇಲೆ ಅವರ ಜೊತೆ ಮಾತನಾಡ್ಲಿಕ್ಕೆ ಅವಕಾಶ ಸಿಕ್ಕಿದೆ.

ಬುಡ್ಕುಲೊ: ಬುಡ್ಕುಲೊ ವೆಬ್‍ಸೈಟಿನ ಓದುಗರಿಗೆ ನಿಮ್ಮ ಸಂದೇಶವೇನು?

ಆರ್.ಜೆ. ರಕ್ಷಿತಾ: ಮಕ್ಕಳಿಗೆ ಅವರು ಇಷ್ಟಪಟ್ಟ ಕ್ಷೇತ್ರದಲ್ಲಿ ಮುಂದುವರಿಯಲಿಕ್ಕೆ ಹೆತ್ತವರು ಸರಿಯಾದ ಮಾರ್ಗದರ್ಶನ ಕೊಡಬೇಕು. ಅವರಿಗೆ ನಾನಾ ಆಸಕ್ತಿ, ಇಚ್ಛೆಗಳಿರುತ್ತವೆ. ಅವರ ಆಯ್ಕೆ ಸರಿಯೋ ತಪ್ಪೋ ಆಗಿರಬಹುದು. ಆದರೆ ಹೆತ್ತವರು ಅವರನ್ನು ಸರಿಯಾಗಿ ಗುರುತಿಸಿ ಸಪೋರ್ಟ್ ಮಾಡಬೇಕು. ಸರಿಯಾದ ಬೆಂಬಲ, ಮಾರ್ಗದರ್ಶನ ಸಿಗದಿದ್ದರೆ ಅವರು ಎಡವುತ್ತಾರೆ. ಹೆತ್ತವರಿಂದ ಸರಿಯಾದ ಮಾರ್ಗದರ್ಶನ, ಧೈರ್ಯ ಸಿಕ್ಕಿದಲ್ಲಿ ಮಕ್ಕಳು ಖಂಡಿತವಾಗಿ ಒಳ್ಳೆಯ ಭವಿಷ್ಯವನ್ನು ಪಡೆಯುತ್ತಾರೆ. ನಾನು ಯಾವಾಗಲೂ ಇದನ್ನೇ ಎಲ್ಲರಿಗೂ ಹೇಳುವುದು.

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

2 comments

  1. ಹೈ ರಕ್ಷಿತಾ …ಹೇಗಿದ್ದೀರಾ…ನಾನು ತುಂಬಾ ಮಾತಾಡ್ತೀನಿ ನನಗೂ RJ ಆಗೋ ಆಸೆ ಕನಸು ….ನಮಗೂ RJ ಆಗೋ ಅವಕಾಶ ಕೊಡಿ…

Leave a comment

Your email address will not be published. Required fields are marked *