ರಾಮ ಮಂದಿರ ನಿರ್ಮಾಣದ ವಿರೋಧಿಗಳು ಅಧರ್ಮಿಗಳಲ್ಲವೇ?
ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ – ಬುಡ್ಕುಲೊ ಇ-ಪತ್ರಿಕೆ www.Budkulo.com
ಮೊನ್ನೆ, ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ಕಟ್ಟುವುದಕ್ಕೆ ದೇಶದ ಪ್ರಧಾನಿಯವರು ಭೂಮಿ ಪೂಜೆ ನೆರವೇರಿಸಿದರು. ಆ ಮೂಲಕ ಕೋಟ್ಯಂತರ ಭಾರತೀಯರ ಬಹು ದೀರ್ಘ ಕಾಲದ ಕನಸೊಂದು ಕೈಗೂಡುವ ಮಹತ್ಕಾರ್ಯಕ್ಕೆ ಚಾಲನೆ ದೊರಕಿತು. ಇತಿಹಾಸದಲ್ಲಿ ನಲುಗಿದ ಸಹಸ್ರಾರು ಹಿಂದೂ ದೇಗುಲಗಳಲ್ಲೊಂದಾಗಿದ್ದರೂ, ಅಯೋಧ್ಯೆಯು ರಾಮನ ಜನ್ಮಭೂಮಿಯಾಗಿದ್ದರಿಂದ, ದಾಳಿಕೋರ ಬಾಬರನಿಂದ ಕೆಡವಲ್ಪಟ್ಟ ಅಲ್ಲಿದ್ದ ರಾಮ ಮಂದಿರವು ಪ್ರತಿ ಹಿಂದೂ ಭಕ್ತಾದಿಗಳ ಹೃದಯದಲ್ಲಿ ಮಹತ್ತರ ಸ್ಥಾನವನ್ನಲಂಕರಿಸಿಕೊಂಡಿತ್ತು. ನೂರಾರು ವರ್ಷಗಳ ವಿವಾದ ಮತ್ತು ನ್ಯಾಯಾಲಯಗಳಲ್ಲಿನ ಹೋರಾಟಕ್ಕೆ ಮುಕ್ತಿ ದೊರೆತು ಕೊನೆಗೂ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ.
ಇಷ್ಟೇ ಆಗಿದ್ದರೆ ಅದರಲ್ಲಿ ಚರ್ಚೆ ಮಾಡುವಂಥದ್ದೂ ವಾದ-ವಿವಾದಕ್ಕೆ ಎಡೆ ಕೊಡುವಂಥದ್ದೂ ಏನೂ ಇರುತ್ತಿರಲಿಲ್ಲ. ದೇವಳದ ನಿರ್ಮಾಣ ಕಾರ್ಯವು ಸಂಪೂರ್ಣವಾಗಿ ಧಾರ್ಮಿಕ ಕಾರ್ಯವಾಗುತ್ತದೆ. ಆದರೆ ಈ ನಿದರ್ಶನದಲ್ಲಿ ಅದು ರಾಜಕೀಯ ಸಂಗತಿಯೂ ಆಗಿ ಬಿಟ್ಟಿದೆ! ಅದೇ ಕಾರಣಕ್ಕೆ ದೇಶಾದ್ಯಂತ ಹಲವರಿಂದ ವಿರೋಧ, ಆಕ್ಷೇಪ ವ್ಯಕ್ತವಾಗಿದೆ. ಸಾಕಷ್ಟು ಜನರು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.
ಈ ಎಲ್ಲದರ ಕೇಂದ್ರ ಬಿಂದುವಾಗಿ, ದೇಶದ ಪ್ರಧಾನಿಯೊಬ್ಬರು ಒಂದು ನಿರ್ದಿಷ್ಠ ಧರ್ಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಅವರು ತಾನು ಸಮಸ್ತ ದೇಶವಾಸಿಗಳ ಪರವಾಗಿ ಆ ಕ್ರಿಯೆಯನ್ನು ನಿರ್ವಹಿಸುತ್ತಿದ್ದೇನೆಂದು ಹೇಳಿದ್ದು ವಿರೋಧಿಗಳ ಪ್ರತಿಭಟನೆಗೆ ಪ್ರಮುಖ ಕಾರಣ. ಸಾಲದ್ದಕ್ಕೆ ಕೇಂದ್ರ ಸರಕಾರದ ಜೊತೆ ಉತ್ತರ ಪ್ರದೇಶದ ಸರಕಾರ, ಮುಖ್ಯವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಈ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದದ್ದು ವಿರೋಧಿಗಳ ನಿದ್ದೆಗೆಡಿಸಿದೆ!
ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವನ್ನು ತನ್ನ ಮುಖ್ಯ ಅಜೆಂಡಾವಾಗಿಸಿಕೊಂಡ ಮೇಲೆಯೇ ಬಿ.ಜೆ.ಪಿ.ಯು ಭಾರತದ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು. ಅದು ಸತ್ಯ. ಅದನ್ನೇ ವಿರೋಧಿಗಳು ಕೋಮುವಾದವೆಂದು ಜರೆದದ್ದು. ಅಲ್ಲಿಂದೀಚೆಗೆ ರಾಷ್ಟ್ರದಾದ್ಯಂತ ಬಿಜೆಪಿಯು ನಾಗಾಲೋಟದಿಂದ ಮುನ್ನಡೆದಿದೆ, ಮಾತ್ರವಲ್ಲ ಅದರ ಎದುರಾಳಿ ಪಕ್ಷಗಳು ನೆಲಕಚ್ಚುತ್ತಾ ಬಂದಿವೆ.
ಅದು ಎಲ್ಲಿಯವರೆಗೆ ಪರಿಣಾಮಕಾರಿಯಾಯಿತೆಂದರೆ, ರಾಮ ಜನ್ಮಭೂಮಿ ವಿವಾದ ಭುಗಿಲೇಳುವ ಮುನ್ನ ಕೇವಲ 2 ಲೋಕಸಭಾ ಸದಸ್ಯರನ್ನು ಹೊಂದಿದ್ದ ಬಿಜೆಪಿ ಪ್ರಸ್ತುತ 300ಕ್ಕೂ ಹೆಚ್ಚು ಸಂಸದರನ್ನು ಜನರಿಂದ ಆಯ್ಕೆಗೊಳಿಸಿ ಬೀಗುತ್ತಿದ್ದರೆ, ಅಂದು 400ಕ್ಕೂ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷವಿಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಹೊಂದುವ ಸಾಮರ್ಥ್ಯವನ್ನೂ ಸತತ ಎರಡನೇ ಬಾರಿಗೆ ಕಳೆದುಕೊಂಡಿದೆ! ಆ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದುಸ್ವಪ್ನವಾಗಿ ಕಾಡುತ್ತಿದ್ದ ಕಮ್ಯುನಿಸ್ಟ್ ಪಕ್ಷಗಳು ನೆಲೆ ಕಳೆದುಕೊಂಡು ತಮ್ಮ ಅಸ್ತಿತ್ವ ಅಳಿದು ಹೋಗುವ ಭೀತಿಯಲ್ಲಿವೆ. ಇದು ಭಾರತದ ರಾಜಕಾರಣದಲ್ಲಿ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕಂಡು ಬಂದ ಮಹಾನ್ ಪಲ್ಲಟ; ಚರಿತ್ರೆಯೂ ಹೌದು.
ಅಲ್ಲಿಂದ ಇಂದಿನವರೆಗೆ ಏನೆಲ್ಲಾ ನಡೆದು ಹೋಗಿದೆಯೆಂಬುದು ನಮ್ಮ ಓದುಗರಿಗೆ ನೆನಪಿರಬಹುದು. ಭಾರತದ ಪ್ರತಿ ನಾಡಿನಲ್ಲಿ ಹಿಂದೂ, ಜೈನ ಮತ್ತು ಬೌದ್ಧ ಧರ್ಮದ ಭವ್ಯ ದೇಗುಲಗಳು ಕಂಗೊಳಿಸುತ್ತಿದ್ದವು. ಆದರೆ ದುಸ್ವಪ್ನದ ರೀತಿಯಲ್ಲಿ ಪಶ್ಚಿಮದ ದಿಕ್ಕಿನಿಂದ ನುಸುಳಿದ ಮುಸಲ್ಮಾನರ ದಾಳಿಗೆ ಬಹಳಷ್ಟು ದೇವಾಲಯಗಳು ಧ್ವಂಸವಾಗಿ, ಅವುಗಳ ಅವಶೇಷಗಳಿಂದ ಅದೇ ಸ್ಥಳದಲ್ಲಿ ಮಸೀದಿಗಳೆದ್ದವು. (ನಂತರ ಯೂರೋಪಿನಿಂದ ಬಂದ ಕ್ರೈಸ್ತರೂ ಅದೇ ರೀತಿ ನಡೆದುಕೊಂಡರು). ಹಾಗೆ ನಾಶವಾದ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಅಯೋಧ್ಯೆಯ ರಾಮ ಮಂದಿರವೂ ಒಂದಾಗಿತ್ತು. ಅದನ್ನು ಒಡೆದು ಬಾಬರನ ಪ್ರತಿನಿಧಿ ಮೀರ್ ಬಾಕಿ ಅಲ್ಲಿ ಬಾಬರಿ ಮಸೀದಿ ಕಟ್ಟಿದ್ದ.
ಮಂದಿರ ವಿವಾದ ಮುಂಚೂಣಿಯಲ್ಲಿದ್ದಾಗ, 1992ರ ಡಿಸೆಂಬರಿನಲ್ಲಿ, ಪಾಳು ಬಿದ್ದಿದ್ದ ಬಾಬರಿ ಮಸೀದಿಯನ್ನು ಕೆಡವಲಾಯಿತು. ಹೌದು, ಆ ಮಸೀದಿ ಎಂದೋ ಪಾಳು ಬಿದ್ದು, ಮುಸ್ಲಿಮರಿಂದಲೇ ತಿರಸ್ಕರಿಸಲ್ಪಟ್ಟಿತ್ತು. ರಾಮ ಜನ್ಮಭೂಮಿಯ ಹಕ್ಕಿನ ಕುರಿತು ದಶಕಗಟ್ಟಲೆ ಕಾಲ ಕೋರ್ಟುಗಳಲ್ಲಿ ವ್ಯಾಜ್ಯ ನಡೆದು ಕಳೆದ ವರ್ಷ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ತೀರ್ಪು ಹೊರ ಬಿತ್ತು. ಅಲ್ಲಿಗೆ ಆ ಕುರಿತ ವಿವಾದ ಸಮಾಪ್ತಿಯಾಯಿತು.
ಆ ಮೂಲಕ ಹಿಂದೂಗಳ ಬಹಳ ದೊಡ್ಡ ಇಚ್ಛೆಯಾಗಿದ್ದ ರಾಮ ಮಂದಿರದ ಸ್ಥಾಪನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತು. ವಾಸ್ತವವೇನೆಂದರೆ, ಅದು ಹೊಸ ಮಂದಿರದ ನಿರ್ಮಾಣವೇನೂ ಅಲ್ಲ. ಹಿಂದೆ ಅಲ್ಲಿಯೇ ಇದ್ದ ಮಂದಿರವನ್ನು ಧ್ವಂಸಗೊಳಿಸಿ ಶತಮಾನಗಳ ಕಾಲ ಅದರ ಅಸ್ತಿತ್ವವನ್ನು ಅಲ್ಲಗಳೆಯಲಾಗಿತ್ತಲ್ಲವೇ, ಅದನ್ನೀಗ ಮರು ಸ್ಥಾಪನೆ ಮಾಡಲಾಗುತ್ತಿದೆಯೆಂಬುದು ಹಿಂದೂ ಭಕ್ತಾದಿಗಳ ಭಾವನೆ. ಖಂಡಿತವಾಗಿ ಈ ಭಾವನೆ ಸತ್ಯವೂ ಹೌದು, ಒಪ್ಪುವಂಥದ್ದೂ ಹೌದು. ಅದನ್ನು ಗೌರವಿಸುವುದು ಎಲ್ಲರಿಗೂ ಶ್ರೇಯಸ್ಕರ.
ಈಗ, ಪ್ರಸ್ತುತ ವಿವಾದದ ಕುರಿತು ಬರುವುದಾದರೆ, ಮೊನ್ನೆ ಪ್ರಧಾನಿ ಮೋದಿ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ್ದನ್ನು ಖಂಡಿಸುವವರ ನೈಜ ಕಾರಣವೇನೆಂದು ತಿಳಿದುಕೊಳ್ಳಬೇಕಾಗುತ್ತದೆ. ಖಂಡಿತವಾಗಿ ಇದು ಅನುಕೂಲಸಿಂಧು ರಾಜಕಾರಣವೇ ಹೊರತು ಬೇರೇನೂ ಅಲ್ಲ. ಸ್ಪಷ್ಟವಾಗಿ ಹೇಳುವುದಾದರೆ, ಅದು ಪೂರ್ವಗ್ರಹ ಪೀಡಿತ ಮನೋಭಾವದಿಂದ ಉದ್ಭವಿಸಿದ ಅನೈತಿಕ ವಿರೋಧ! ಹೆಸರಿಗಷ್ಟೇ ಅಥವಾ ತೋರಿಕೆಗಷ್ಟೇ ಸಂವಿಧಾನ, ಜಾತ್ಯತೀತೆಯ ಉಲ್ಲೇಖ.
ಹೌದು. ಈ ವಿರೋಧ ಕೇವಲ ಬಿಜೆಪಿ ಮತ್ತು ಮುಖ್ಯವಾಗಿ ಸಂಘ ಪರಿವಾರದ ವಿರುದ್ಧದ ಆಕ್ರೋಶ, ಅಸಹನೆ ಮತ್ತು ಅತೃಪ್ತಿ. ಯಾಕೆಂದರೆ, ಈ ವಿರೋಧ ವ್ಯಕ್ತಪಡಿಸಿದವರ ಹಿನ್ನೆಲೆ ಮತ್ತು ಅವರ ಸಿದ್ಧಾಂತ, ವಾದ ಮಂಡನೆಗಳನ್ನೆಲ್ಲಾ ಪರಿಗಣಿಸಿದರೆ, ಅವರು ಕೇವಲ ರಾಜಕೀಯ ಕಾರಣಕ್ಕಾಗಿಯಷ್ಟೇ ತಮ್ಮ ಹತಾಶೆಯನ್ನು ಹೊರ ಹಾಕಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಅವರ ಪ್ರಕಾರ ಪ್ರಧಾನಿ ಮೋದಿ ಸಮಸ್ತ ದೇಶದ ಪ್ರತಿನಿಧಿ. ಅವರಿಗೆ ಎಲ್ಲಾ ಧರ್ಮಗಳೂ ಸಮಾನ. ಹಾಗಿರುವಾಗ ಕೇವಲ ಒಂದು ಧರ್ಮದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರು ಭಾಗವಹಿಸುವುದು ಅವರಿಗೆ ಅಕ್ಷಮ್ಯವಾಗಿ, ಸಂವಿಧಾನ ವಿರೋಧಿಯಾಗಿ ಕಂಡು ಬರುತ್ತದೆ! (ಅಂದರೆ ಹಿಂದೂ ಧರ್ಮದ ವಿಚಾರದಲ್ಲಿ ಮಾತ್ರ!). ಒಂದು ವೇಳೆ ಇದೇ ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿಯೋ ಅಥವಾ ಬೇರೆ ಕಡೆ ಒಂದು ಮಸೀದಿ ಅಥವಾ ಚರ್ಚ್‍ನ ಭೂಮಿ ಪೂಜೆ ಇಲ್ಲವೇ ಉದ್ಘಾಟನಾ ಕಾರ್ಯಕ್ಕೆ ಹಾಜರಾಗಿದ್ದಿದ್ದರೆ ಇವರೆಲ್ಲಾ ಇದೇ ರೀತಿಯ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರೇ?
ಖಂಡಿತವಾಗಿ ಇಲ್ಲ, ನಿಸ್ಸಂಶಯವಾಗಿ ಇಲ್ಲ!
ಅದನ್ನೆಲ್ಲಾ ಬಿಡಿಸಿ, ವಿವರವಾಗಿ ಹೇಳುವ ಅಗತ್ಯವಂತೂ ಇಲ್ಲ. ಆದರೂ ಒಂದು ಉದಾಹರಣೆ ಕೊಡುವುದಾದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಜೀರ್ಣೋದ್ಧಾರಗೊಂಡ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಉದ್ಘಾಟನೆಯನ್ನು (1991ರಲ್ಲಿ) ನೆರವೇರಿಸಿದ್ದರು. ಅದನ್ನು, ಅಂದು, ಅಥವಾ ಇಂದಾದರೂ, ಇದೇ ವಿರೋಧಿಗಳು ಆಕ್ಷೇಪಿಸಿದ್ದಾರೆಯೇ? ವಿರೋಧಿಸಿದ್ದಾರೆಯೇ? ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗಲೇ ಇದೇ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಬೀಗೆ ತೆರೆಸಿದ್ದರು ಮತ್ತು ಅಲ್ಲಿ ಹಿಂದೂಗಳಿಗೆ ಪೂಜೆಗೆ ಅನುವು ಮಾಡಿಕೊಟ್ಟಿದ್ದರು. ಅಲ್ಲದೆ ರಾಮ ಮಂದಿರದ ಶಿಲಾನ್ಯಾಸವನ್ನೂ ನೆರವೇರಿಸಿದ್ದರು ಎಂದು ವರದಿಗಳು ಹೇಳುತ್ತವೆ.
ಆಗೇನಾದರೂ ಈ ವಿರೋಧಿಗಳು ಪ್ರತಿಭಟಿಸಿದ್ದು, ಆಕ್ಷೇಪಿಸಿದ್ದು ಯಾರಿಗಾದರೂ ತಿಳಿದಿದೆಯೇ?
ಹಾಗಾದರೆ ಯಾಕೆ ಈ ಆಷಾಢಭೂತಿತನ? ಯಾಕೆ ಕೇವಲ ಹಿಂದೂ ಧರ್ಮದ ವಿಚಾರ-ಆಚರಣೆಗಳಿಗೆ ಮಾತ್ರ ಈ ವಿರೋಧಿಗಳು ಕೆಂಗಣ್ಣು ಬೀರುತ್ತಿರುತ್ತಾರೆ? ಅಂಥಹದೇ ವಿಚಾರಗಳನ್ನು ಅಲ್ಪಸಂಖ್ಯಾತ ಧರ್ಮಗಳವರು ನಡೆಸಿದರೆ ಯಾಕೆ ಇವರು ವಿರೋಧ ವ್ಯಕ್ತಪಡಿಸುವುದಿಲ್ಲ? – ಇವು ಕೋಟ್ಯಂತರ ಜನರ ಪ್ರಶ್ನೆಗಳು. ಸಂಬಂಧಿಸಿದವರು ಇವುಗಳಿಗೆ, ಪ್ರಾಮಾಣಿಕವಾಗಿ, ಉತ್ತರಿಸಿಯಾರೇ?
ಅದೆಲ್ಲಾ ಬಿಡಿ, 1986ರ ಫೆಬ್ರವರಿಯಲ್ಲಿ ಕ್ರೈಸ್ತರ ಜಗದ್ಗುರು ದ್ವಿತೀಯ ಪೋಪ್ ಜಾನ್ ಪಾವ್ಲ್ ಭಾರತಕ್ಕೆ ಭೇಟಿ ನೀಡಿದ್ದರು. ಅವರನ್ನು ಅಧಿಕೃತವಾಗಿ ಭಾರತದ ಪ್ರಧಾನಿ ರಾಜೀವ್ ಗಾಂಧಿಯವರು ಸಪತ್ನೀಕರಾಗಿ ಸ್ವಾಗತಿಸಿದ್ದರಲ್ಲವೇ? ಅದೂ ಸಹ ಸಂವಿಧಾನ ವಿರೋಧಿಯಾಗಿತ್ತೇ? ಆಗದನ್ನು ಯಾರಾದರೂ ವಿರೋಧಿಸಿದ್ದರೇ? ಈಗಲಾದರೂ, ಪ್ರಧಾನಿ ಮೋದಿಯವರನ್ನು ವಿರೋಧಿಸಿದವರು, ರಾಜೀವ್ ಗಾಂಧಿಯವರ ಈ ಕೃತ್ಯವನ್ನೂ ವಿರೋಧಿಸುವರೇ?
ಇದಿಷ್ಟೇ ಬಂಡವಾಳ ಮತ್ತು ಮೂಲ ಕಾರಣ, ಈ ಉಗ್ರ ಪ್ರತಾಪಿಗಳದ್ದು. ಅವರಿಗೆ ಧರ್ಮ ಮತ್ತು ರಾಜಕೀಯದ ನಡುವಿನ ಸ್ಪಷ್ಟ ವ್ಯತ್ಯಾಸವೇ ಇನ್ನೂ ತಿಳಿದಿಲ್ಲ. ಕೇವಲ ವಿರೋಧಕ್ಕಾಗಿ ವಿರೋಧ. ಅದನ್ನು ಬಿಟ್ಟು ವಿವೇಚನೆ, ಸಂಯಮ, ನಿಷ್ಪಕ್ಷಪಾತವಾದ ಚಿಂತನೆ, ವಾಸ್ತವದ ಪರಿಗಣನೆ ಮತ್ತು ಉದಾರ ಮನೋಸ್ಥಿತಿ ಇವರಿಗೆ ಇದ್ದಂತಿಲ್ಲ. ಅದನ್ನು ಅವರೇ ತಮ್ಮ ಮಾತು, ಕೃತಿಗಳ ಮೂಲಕ ನಿರಂತರವಾಗಿ ಸಾಬೀತುಪಡಿಸುತ್ತಲೇ ಬಂದಿದ್ದಾರೆ.
ಹಿಂದೂಗಳಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕಲ್ಲವೇ?
ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ, ಅಯೋಧ್ಯೆಯಲ್ಲಿ ರಾಮ ಮಂದಿರದ ಪುನರ್ ನಿರ್ಮಾಣವು ಕೇವಲ ಹಿಂದೂಗಳ ಮಾತ್ರವಲ್ಲ, ಸಮಸ್ತ ಭಾರತೀಯರ ಸ್ವಾಭಿಮಾನದ ಪ್ರತೀಕವೇ ಆಗಿದೆ. ಐನೂರು ವರ್ಷಗಳಿಂದ ಹಿಂದೂಗಳಿಗಾದ ಅವಮಾನ, ನೋವು ವರ್ಣಿಸಲಸದಳ. ರಾಜಕೀಯ ಗಲಾಟೆ, ಸ್ವಾರ್ಥ ಏನೇ ಆಗಿದ್ದರೂ, ಶ್ರೀರಾಮನ ಭಕ್ತಾದಿಗಳ ಹಕ್ಕು, ಸ್ವಾಭಿಮಾನಕ್ಕೆ ಎಳ್ಳಷ್ಟೂ ಚ್ಯುತಿ ತರಬಾರದು. ಈ ರಾಮ ಮಂದಿರದ ಮರು ನಿರ್ಮಾಣ ಆರಂಭವಾಗಿದ್ದು ದೇಶದ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲಷ್ಟೇ ಎಂಬುದನ್ನು ಯಾರೂ ಮರೆಯಬಾರದು.
ಹಾಗಿರುವಾಗ, ಮಂದಿರ ನಿರ್ಮಾಣ ಯಾವುದೇ ರೀತಿಯಲ್ಲಿ ಅಕ್ರಮ ಅಥವಾ ಅಸಾಂವಿಧಾನಿಕವಾಗುವುದಿಲ್ಲ. 500 ವರ್ಷಗಳಿಂದ ಅನುಭವಿಸಿದ ದ್ರೋಹ, ವಂಚನೆ, ಸಹಿಸಿದ ನೋವು, ಆಘಾತ ಮತ್ತು ನಷ್ಟಗಳಿಂದ ಪರಿಹಾರವನ್ನಂತೂ ಪಡೆಯಲಾಗುವುದಿಲ್ಲ. ಕನಿಷ್ಠ ತಮ್ಮ ಆರಾಧ್ಯ ದೇವನಿಗೆ, ಅದೂ ಎಲ್ಲಾ ವಿವಾದಗಳು ಇತ್ಯರ್ಥವಾದ ಮೇಲೆ, ಭಕ್ತಾದಿಗಳಿಗೆ ತಮ್ಮಿಚ್ಛೆಯ ಮಂದಿರವನ್ನು ಕಟ್ಟಲು ಎಲ್ಲಾ ಅರ್ಹತೆ, ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆ ಅಧಿಕಾರವನ್ನು ಕಿತ್ತುಕೊಳ್ಳಲು ಯಾರೆಂದರೆ ಯಾರಿಗೂ ಸಾಧ್ಯವಿಲ್ಲ. ಅಗತ್ಯವಂತೂ ಇಲ್ಲವೇ ಇಲ್ಲ.
ಇಷ್ಟು ವರ್ಷಗಳ ಅನ್ಯಾಯವನ್ನು ಅವಡುಗಚ್ಚಿ ಸಹಿಸಿಕೊಂಡ ಹಿಂದೂ ಬಾಂಧವರಿಗೀಗ ದೇಶದ ಕಾನೂನು ಮತ್ತು ಸಂವಿಧಾನವೇ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ ಮೇಲೆ, ಕನಿಷ್ಠ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸಿಯಾದರೂ ಪ್ರತಿಯೊಬ್ಬರೂ ಸಂತೋಷ ವ್ಯಕ್ತಪಡಿಸಬೇಕಿತ್ತು. ಪಕ್ಷಾತೀತವಾಗಿ, ಧರ್ಮಾತೀತವಾಗಿ, ರಾಜಕೀಯವನ್ನು ಮರೆತು ಸಹೃದಯದಿಂದ ಬೆಂಬಲ ನೀಡಬೇಕಿತ್ತು. ರಾಜಕೀಯ ಎಂದಿಗೂ ಇದ್ದದ್ದೇ. ಕೋಟ್ಯಂತರ ಜನರ ಭಕ್ತಿಯ, ಪರವಶತೆಯ ವಿಚಾರಗಳನ್ನು ಕೆಣಕುವುದು, ಹೀಯಾಳಿಸುವುದು, ಯಾವುದೋ ರಾಜಕೀಯ ಪ್ರತಿಸ್ಪರ್ಧಿಗಳ ಮೇಲಿನ ಹಗೆಯನ್ನು, ಯಾವುದೋ ಸಂಘಟನೆ/ವ್ಯಕ್ತಿಗಳ ಮೇಲಿನ ದ್ವೇಷ-ಅಸಮಾಧಾನವನ್ನು ಹಿಡಿದುಕೊಂಡು ಸಾಮಾನ್ಯ ಜನರ ನಂಬಿಕೆಗಳನ್ನು ಘಾಸಿಗೊಳಿಸಲು ವ್ಯರ್ಥ ಪ್ರಯತ್ನ ಪಡುವವರು ತಮ್ಮ ಕುತ್ಸಿತ ಮನೋಭಾವವನ್ನು ಜಗಜ್ಜಾಹೀರುಗೊಳಿಸುತ್ತಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನವೇ ಜನರಿಗೆ ಒದಗಿಸಿರುವಾಗ ನಿರ್ದಿಷ್ಠ ಧರ್ಮದಾಚರಣೆಗಳನ್ನು ಖಂಡಿಸುವುದು, ಜನರ ನಂಬಿಕೆಯನ್ನು ಆಕ್ಷೇಪಿಸುವುದು, ವಿರೋಧಿಸುವುದು ಸಂವಿಧಾನ ವಿರೋಧಿಯಲ್ಲವೇ? ಕೆಲವರ ಧರ್ಮವನ್ನು ಪ್ರಶ್ನಿಸುವುದು, ಅವರ ನಂಬಿಕೆಗಳಿಗೆ ಘಾಸಿಯಾಗುವಂಥದ್ದನ್ನು ಮಾಡುವುದು ಧರ್ಮವೋ ಅಧರ್ಮವೋ? ವ್ಯತಿರಿಕ್ತವಾಗಿ, ಕೆಲವು ಧರ್ಮದವರು ಏನೇ ಅನ್ಯಾಯ, ಅನಾಚಾರ ಮಾಡಿದರೂ ಬೆಂಬಲಿಸುವ ಅಥವಾ ಸಮ್ಮತಿಸುವ ದುರ್ಬುದ್ಧಿ ಏಕಿವರಿಗೆ? ಈ ನಿಟ್ಟಿನಲ್ಲಿ ‘ಅತೃಪ್ತರು’ ಆಲೋಚಿಸಬೇಕಾಗಿದೆ. ರಾಜಕೀಯ ಮಾತನಾಡುವ ನಿಟ್ಟಿನಲ್ಲಿ ಸಾಮಾನ್ಯ ಜನರ ಭಾವನೆಗಳನ್ನು ನೋಯಿಸುವುದು ತೀರಾ ಅಕ್ಷಮ್ಯ ಮಾತ್ರವಲ್ಲ ಅದು ಪ್ರಜಾಪ್ರಭುತ್ವದ ಧೋರಣೆಯೂ ಅಲ್ಲ. ಬೌದ್ಧಿಕ ದಿವಾಳಿತನವನ್ನಷ್ಟೇ ಅದು ಜಾಹೀರುಪಡಿಸುತ್ತದೆ.
ಮಂದಿರದ ಬಗ್ಗೆ ಹತ್ತು ಜನರು ಏನಂತಾರೆ?
ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿದೆ. ಎಂದಿನಂತೆ ವಿರೋಧಿಗಳು ತಮ್ಮ ಆಕ್ಷೇಪದ ಕಹಳೆಯನ್ನು ಊದಿದ್ದಾರೆ. ಅವರದು ನಿರಂತರ ರೋದನೆ. ಅವರ ಅಸಹನೆಗೆ ಮದ್ದಿಲ್ಲ. ಆದರೆ ಜನರು ಏನೆಂತಾರೆ ಎಂಬುದನ್ನು ತಿಳಿದುಕೊಳ್ಳಲು ನಾವು ಬಯಸಿದೆವು. ಆ ನಿಟ್ಟಿನಲ್ಲಿ ಕೆಲವರನ್ನು ನಾವು ವಿಚಾರಿಸಿದಾಗ ಅವರು ತಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿದ್ದಾರೆ. ಅವರಲ್ಲಿ ಪ್ರಸಿದ್ಧ ವ್ಯಕ್ತಿಗಳೂ ಇದ್ದಾರೆ. ಅವರು ಏನೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬುದನ್ನು ಮುಂದಿನ ಭಾಗದಲ್ಲಿ ಪ್ರಕಟಿಸುತ್ತೇವೆ.
Very good article you wrote donyji. Really this is research based article. I think some peoples doubt will be cleared.
ನಿಮ್ಮ ಈ ಲೇಖನ (ಅನಿಸಿಕೆ) ಚೆನ್ನಾಗಿ ಮೂಡಿ ಬಂದಿದೆ.