ಜಾತಿ ರಾಜಕೀಯ: ಬರಗೆಟ್ಟ ಬಿಜೆಪಿಗೆ ಮತಿಗೆಟ್ಟ ಕಾಂಗ್ರೆಸಿಗರೇ ಟಾನಿಕ್!?
ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು – ಬುಡ್ಕುಲೊ ಇ-ಪತ್ರಿಕೆ
‘ಬರಗೆಟ್ಟ’ ಬಿಜೆಪಿ ಎಂಬ ಮಾತು ಯಾಕೆ ಅಂತೀರಾ? ಇದನ್ನು ಸ್ವತಃ ಹಿರಿಯ ಬಿಜೆಪಿ ನಾಯಕರಾದ ಸಚಿವ ಆರ್. ಅಶೋಕ್ರೇ ಹೇಳಿದ್ದು! ಬೆಂಗಳೂರಿನಲ್ಲಿ ‘ಇಂಡಿಯಾ ಟುಡೇ’ ಸಂವಾದದಲ್ಲಿ ನಟಿ ರಮ್ಯಾ, ತನಗೆ ಬಿಜೆಪಿಯಿಂದ ಆಫರ್ ಬಂದಿದ್ದು ಮಂತ್ರಿ ಮಾಡುವ ಭರವಸೆಯನ್ನೂ ನೀಡಿದ್ದರು ಎಂದಿದ್ದಕ್ಕೆ ಅಶೋಕ್ ಕೊಟ್ಟ ಕೌಂಟರ್ ಮಾತಿನಲ್ಲಿ ಈ ಪದವನ್ನು ಬಳಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರೇ ತನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದಾಗಿ ರಮ್ಯಾ ತಿಳಿಸಿದ್ದರು.
ಕಾಂಗ್ರೆಸ್ನಿಂದ ಎಂ.ಪಿ.ಯಾಗಿದ್ದ ರಮ್ಯಾ ಅವರನ್ನು ಆಹ್ವಾನಿಸುವಷ್ಟು ‘ಬಿಜೆಪಿ ಬರಗೆಟ್ಟಿಲ್ಲ’ ಎಂದಿದ್ದಾರೆ ಅಶೋಕ್. ಯಾರೂ ರಮ್ಯಾ ಅವರನ್ನು ಬಿಜೆಪಿಗೆ ಕರೆದಿಲ್ಲ ಎಂದು ಹೇಳಿರುವ ಅಶೋಕ್ ಒಂದೇ ಸುಳ್ಳು ಹೇಳುತ್ತಿದ್ದಾರೆ, ಅಥವಾ ಅವರಿಗೆ ನಡೆದ ಸಂಗತಿ ತಿಳಿದಿಲ್ಲ ಎಂದೇ ಅರ್ಥ. ತಿಂಗಳ ಹಿಂದೆಯೇ ಬಿಜೆಪಿ ಸಂಸದ ಪ್ರತಾಪ್ ಸಿಂಹ ರಮ್ಯಾ ಜೊತೆ ತೆಗೆದುಕೊಂಡಿದ್ದ ಫೊಟೊ ಹಂಚಿಕೊಂಡಿದ್ದರು. ಕಾಂಗ್ರೆಸ್ ಪಕ್ಷ ಮತ್ತದರ ನಾಯಕರನ್ನು ತೆಗಳುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಪ್ರತಾಪ್ ಸಿಂಹರೇ, ಅದೇ ಕಾಂಗ್ರೆಸ್ಸಿನಲ್ಲಿದ್ದ ರಮ್ಯಾರ ಜೊತೆ ಫೊಟೊ ತೆಗೆಸಿಕೊಂಡು ಸಾರ್ವಜನಿಕವಾಗಿ ಹಂಚಿದ್ದಾರೆ ಎಂದರೆ ಅದು ಬಹುಶಃ ರಮ್ಯಾ ಬಿಜೆಪಿ ಸೇರುವ ಪ್ರಕ್ರಿಯೆ ಜಾರಿಯಲ್ಲಿದೆ ಎಂಬುದನ್ನೇ ಸೂಚಿಸುತ್ತಿತ್ತು.
ಹಾಗಿರುವಾಗ, ಅಶೋಕ್ ಅವರು ‘ಏನೂ ಆಗಿಯೇ ಇಲ್ಲ’ ಎನ್ನುವುದೇ ಅಚ್ಚರಿ. ನಿರೀಕ್ಷಿಸಿದಂತೆ ರಮ್ಯಾ ಬಿಜೆಪಿಗೆ ಹೋಗದೆ, ಕಾಂಗ್ರೆಸ್ನ ಸ್ಟಾರ್ ಪ್ರಚಾರಕರಾಗಿದ್ದಾರೆ. ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ರಮ್ಯಾ ತನಗೆ ಬಿಜೆಪಿಗೆ ಸೇರಲು ಪ್ರಯತ್ನ ನಡೆದಿದ್ದರ ಬಗ್ಗೆ ಹೇಳಿದ್ದಾರೆ. ರಮ್ಯಾರನ್ನು ಬಿಜೆಪಿಗೆ ಸೇರಿಸುವ ಪ್ರಶ್ನೆಯೇ ಇಲ್ಲ ಎನ್ನುವ ಭರದಲ್ಲಿ, ಅಶೋಕ್ ಅವರು ‘ಬಿಜೆಪಿ ಅಷ್ಟು ಬರಗೆಟ್ಟಿಲ್ಲ’ ಎಂದಿದ್ದಾರೆ. ಅಂದರೆ ಬಿಜೆಪಿ ಬರಗೆಟ್ಟಿದೆ ಎಂಬುದನ್ನು ಅವರೇ ಒಪ್ಪಿದಂತಾಯಿತು. ಎಷ್ಟು ಬರಗೆಟ್ಟಿದೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಇತರರ ಹೇಳಿಕೆಗಳನ್ನು ತಿರುಚುವುದರಲ್ಲಿ, ತನಗೆ ಬೇಕಾದಂತೆ ವ್ಯಾಖ್ಯಾನಿಸುವುದರಲ್ಲಿ ನಿಪುಣರಾಗಿರುವ ಬಿಜೆಪಿಯವರು, ಅಶೋಕ್ ಹೇಳಿದಂತೆ ತಮ್ಮ ಪಕ್ಷ ಎಷ್ಟು ಬರಗೆಟ್ಟಿದೆ ಎಂಬುದನ್ನು ತಿಳಿಸಬೇಕು.
ಇನ್ನು ಕಾಂಗ್ರೆಸ್ ಪಕ್ಷದ ಅವಸ್ಥೆ… ‘ಕಾಂಗ್ರೆಸನ್ನು ಸೋಲಿಸುವುದು ಕಾಂಗ್ರೆಸ್ಸಿಗರೇ’ ಎಂಬುದು ಹಳೆಯ ಮಾತು. ಅದು ನಿಜಕ್ಕೂ ಸತ್ಯ. ಕಳೆದೊಂದು ದಶಕದಲ್ಲಿ ನಿರಂತರವಾಗಿ ಸೋತು ಸುಣ್ಣವಾದರೂ ಕಾಂಗ್ರೆಸ್ಸಿಗರು ಇನ್ನೂ ಬುದ್ಧಿ ಕಲಿತಿಲ್ಲ ಎಂಬುದಕ್ಕೆ ನೂರಾರು ನಿದರ್ಶನಗಳಿವೆ. ಇದಕ್ಕೆ ತಾಜಾ ಉದಾಹರಣೆ ಸಿದ್ಧರಾಮಯ್ಯನವರ ‘ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟರು’ ಎಂಬ ಹೇಳಿಕೆ.
2014ರ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಮುಂಚೂಣಿಗೆ ಬಂದ ನಂತರದ ಚುನಾವಣೆಗಳನ್ನು ಒಮ್ಮೆ ನೆನಪಿಸಿ. ಬಿಜೆಪಿಯ ಪ್ರಚಂಡ ಗೆಲುವಿಗೆ ಕಾಂಗ್ರೆಸ್ಸಿಗರೇ ಕಾರಣರಾಗಿದ್ದನ್ನು ಮರೆಯಲಿಕ್ಕಾಗದು. ಬಿಜೆಪಿಗೆ ಚುನಾವಣಾ ಸಮಯದಲ್ಲಿ ಆಪದ್ಭಾಂಧವರಂತೆ ಕಾಂಗ್ರೆಸ್ ನಾಯಕರೇ ಎಡವಟ್ಟು ಹೇಳಿಕೆಗಳನ್ನು ನೀಡಿ ಕೈ ಸುಟ್ಟುಕೊಳ್ಳುತ್ತಾ ಬಂದಿದ್ದಾರೆ.
2014ರಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮೋದಿಯವರನ್ನು ‘ಚಾಯ್ವಾಲಾ’ ಎಂದು ಅಣಕಿಸಿದ್ದರು. ಚಹಾ ಮಾರುವವರು ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಠೀಕಿಸಿದ್ದರು. ಸ್ವತಃ ಮೋದಿಯವರು ಇದನ್ನು ತನಗೆ ಮಾಡಿದ ಅವಹೇಳನ ಎಂಬುದಾಗಿ ಭರ್ಜರಿಯಾಗಿ ಪ್ರಚಾರ ನಡೆಸಿದರು. ಚಾಯ್ವಾಲಾ ಎಂಬ ನಿಂದನೆಯನ್ನೇ ಚಾಲೆಂಜ್ ಆಗಿ ಪರಿವರ್ತಿಸಿ, ‘ಚಾಯ್ ಪೇ ಚರ್ಚಾ’ ನಡೆಸಿ ಜನರ ಅನುಕಂಪ ಗಳಿಸಿ, ಅದನ್ನು ಬಿಜೆಪಿಯ ಪ್ರಚಂಡ ಗೆಲುವಿಗೆ ಬಳಸುವಲ್ಲಿ ಯಶಸ್ವಿಯಾದರು.
2017ರಲ್ಲಿ ಗುಜರಾತ್ ಅಸೆಂಬ್ಲಿಗೆ ಚುನಾವಣೆ ನಡೆಯಿತು. ಮೋದಿಯವರು ಪ್ರಧಾನಿಯಾಗಿ ದೆಹಲಿಗೆ ಹೋದ ಬಳಿಕ ಗುಜರಾತಿನಲ್ಲಿ ನಾಯಕತ್ವದ ಕೊರತೆಯಿಂದ ಬಿಜೆಪಿ ಚುನಾವಣೆ ಸೋಲುವ ಹಂತಕ್ಕೆ ತಲುಪಿತ್ತು. ಮುಖ್ಯಮಂತ್ರಿಗಳನ್ನು ಬದಲಿಸುತ್ತಾ ಬಂದ ಬಿಜೆಪಿ, ಚುನಾವಣೆಯಲ್ಲಿ ಸೋಲುವುದು ಖಚಿತ ಮತ್ತು ಕಾಂಗ್ರೆಸ್ ಅಲ್ಲಿ ಗೆಲ್ಲುವ ಸಾಧ್ಯತೆಯಿರುವುದನ್ನು ಹಲವು ಸಮೀಕ್ಷೆಗಳು ಹೇಳಿದ್ದವು. ನಿಜಕ್ಕೂ ಅಲ್ಲಿ ಕಾಂಗ್ರೆಸ್ ತುಂಬಾ ಗಟ್ಟಿ ಹೋರಾಟ ನೀಡಿತ್ತು. ಗೆಲುವಿಗೆ ಸನಿಹವೂ ಬಂದಿತ್ತು.
ಆದರೆ, ಕಾಂಗ್ರೆಸ್ಸನ್ನು ಅಲ್ಲಿ ಮುಳುಗಿಸಿದ್ದು ಇದೇ ಮಣಿಶಂಕರ್ ಅಯ್ಯರ್! ಹೌದು. ಪ್ರಧಾನಿ ಮೋದಿಯವರನ್ನು ಮತ್ತೆ ಕೆಣಕಿದ್ದ ಅಯ್ಯರ್, ‘ನೀಚ್ ಕಸಮ್ ಕಾ ಆದ್ಮಿ’ ಎಂದು ನಿಂದಿಸಿದ್ದರು. ಹಾಗೆ ಹೇಳಲು ಅವರಿಗೆ ಏನೇ ಕಾರಣವಿದ್ದಿದ್ದರೂ, ಚುನಾವಣೆಯ ಸಮಯದಲ್ಲಿ ಅಂತಹ ಹೇಳಿಕೆ ಆತ್ಮಹತ್ಯಾಕಾರಿ ಎಂದೇ ಹೇಳಬಹುದು. ಸೋಲಿನ ದವಡೆಯಲ್ಲಿದ್ದ ಬಿಜೆಪಿಗೆ ಗುಜರಾತ್ನಲ್ಲಿ ತೀವ್ರ ಮುಖಭಂಗದಿಂದ ಪಾರಾಗಲು ‘ನೀಚ್ ಆದ್ಮಿ’ ಮಾತು ನೆರವಾಯಿತು. ಮೋದಿಯವರು ಅದನ್ನು ಸಂತೋಷದಿಂದ ಭರ್ಜರಿಯಾಗಿ ಸದ್ಬಳಕೆ ಮಾಡಿಕೊಂಡರು. ‘ತಾನು ಬಡತನದ ಹಿನ್ನೆಲೆಯ, ಹಿಂದುಳಿದ ವರ್ಗದ ವ್ಯಕ್ತಿ. ಹಾಗಾಗಿ ತನ್ನನ್ನು, ತನ್ನ ಜಾತಿಯನ್ನು ಕಾಂಗ್ರೆಸ್ ನಾಯಕರು ನೀಚರು ಎಂದು ಅವಮಾನಿಸಿದ್ದಾರೆ’ ಎಂಬುದಾಗಿ ಮೋದಿ ಮತ್ತು ಬಿಜೆಪಿ ಪ್ರಚಂಡವಾಗಿ ಪ್ರಚಾರ ನಡೆಸಿ ಅಲ್ಪ ಬಹುಮತ ಗಳಿಸಿ ಮತ್ತೆ ಅಧಿಕಾರ ಪಡೆದಿತ್ತು. ಗೆಲುವಿನತ್ತ ದಾಪುಗಾಲು ಇಟ್ಟಿದ್ದ ಕಾಂಗ್ರೆಸ್ ಮತ್ತೆ ಕಂಗೆಟ್ಟಿತ್ತು.
2015ರ ಬಿಹಾರ ಚುನಾವಣೆಯಲ್ಲಿ, ಬಿಜೆಪಿ ಸಖ್ಯ ತೊರೆದು ಆರ್ಜೆಡಿ-ಕಾಂಗ್ರೆಸ್ ಜೊತೆ ಹೋಗಿದ್ದ ನಿತೀಶ್ ಕುಮಾರ್ ವಿರುದ್ಧ ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆಯೂ ಇದೇ ರೀತಿಯದ್ದು. ಬಿಹಾರ ಅಸ್ಮಿತೆಯನ್ನು ಮೋದಿ ಕೀಳಾಗಿಸಿದ್ದಾರೆಂದು ಭರ್ಜರಿಯಾಗಿ ಪ್ರಚುರಪಡಿಸಲಾಯಿತು. ಆ ಚುನಾವಣೆಯಲ್ಲಿ ಬಿಜೆಪಿ ಸೋತು ಮಹಾಘಟ್ಬಂಧನ್ ಭರ್ಜರಿ ಗೆಲುವು ದಾಖಲಿಸಿತ್ತು.
ಕಳೆದ ವರ್ಷ ಮತ್ತೆ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಇದೇ ರೀತಿ ನೆರವಿಗೆ ಬಂದಿತ್ತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹುಮ್ಮಸ್ಸಿನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರನ್ನು ‘ರಾವಣ’ನಿಗೆ ಹೋಲಿಸಿದ್ದಾರೆ ಎಂಬ ಹೇಳಿಕೆ ಕಾಂಗ್ರೆಸ್ಗೆ ಮುಳುವಾಯಿತು. ಹೇಗೂ ಅಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ನಿಶ್ಚಿತವಾಗಿತ್ತು. ಖರ್ಗೆಯವರ ಹೇಳಿಕೆಯ ಲಾಭ ಪಡೆದ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ್ದು ಮಾತ್ರವಲ್ಲ, ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಗಳಿಸುವುದಕ್ಕೂ ಅಸಾಧ್ಯವಾಯಿತು.
ಇದು ಕಾಂಗ್ರೆಸ್ಸಿನ ಚರಿತ್ರೆ. ಅಷ್ಟಿದ್ದರೂ ಕಾಂಗ್ರೆಸ್ಸಿಗರು ಪಾಠ ಕಲಿಯುತ್ತಿದ್ದಾರಾ ಎಂದರೆ ಇಲ್ಲವೇ ಇಲ್ಲ! ಅದು ಬಾಣಲೆಯಿಂದ ಬೆಂಕಿಗೆ ಎಂಬಂತೆ ದಿನೇ ದಿನೇ ಮತ್ತಷ್ಟು ಅಧಃಪತನಕ್ಕೀಡಾಗುತ್ತಾ ಬಂದಿದೆ. ಇದು ಎಲ್ಲಿಯವರೆಗೆ ಎಂದರೆ ರಾಹುಲ್ ಗಾಂಧಿ ಲೋಕಸಭಾ ಸ್ಥಾನವನ್ನೇ ಕಳೆದುಕೊಳ್ಳಬೇಕಾಗಿ ಬಂತು! ‘ಮೋದಿ’ ಜಾತಿಗೇ ಅವಮಾನಿಸಿದ್ದಾರೆ ಎಂದು ಬಿಜೆಪಿಯವರು ಕೋರ್ಟಿಗೆ ಹೋಗಿ, ರಾಹುಲ್ ಗಾಂಧಿಗೆ ಮಾನಹಾನಿಕರ ಕೇಸಿನಲ್ಲಿ 2 ವರ್ಷದ ಶಿಕ್ಷೆಯಾಗಿ, ಸದ್ಯ ಅವರು ಮಾಜಿ ಎಂಪಿಯಾಗಿದ್ದಾರೆ. ಅಧಿಕೃತ ಬಂಗಲೆಯಿಂದಲೂ ಹೊರ ಬಿದ್ದಿದ್ದಾರೆ.
ಇದೀಗ ಸಿದ್ಧರಾಮಯ್ಯನವರ ಸರದಿ. ಕರ್ನಾಟಕದ ಈ ಚುನಾವಣೆಯಂತೂ ತುಂಬಾ ಜಿದ್ದಾಜಿದ್ದಿನದ್ದಾಗಿದೆ. ಉರಿಯುವ ಸೆಖೆಯಲ್ಲಿ ಚುನಾವಣೆಯ ಕಾವಿನಿಂದ ಎಲ್ಲಾ ಪಕ್ಷದವರೂ ಬೆಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಎಲ್ಲಾ ಅವಕಾಶಗಳು ಕೈ ತುಂಬಾ ಇದ್ದರೂ, ಕಾಂಗ್ರೆಸ್ಸಿಗರ ಹಳೆಯ ಚಾಳಿ ಮಾತ್ರ ನಿಲ್ಲುವುದೇ ಇಲ್ಲ. ಗೆಲ್ಲುವ ಅವಕಾಶಗಳನ್ನು ಕಳೆದುಕೊಳ್ಳುವುದರಲ್ಲಿ ಕಾಂಗ್ರೆಸ್ಸಿಗರು ತುಂಬಾ ನಿಸ್ಸೀಮರು. 2018ರ ಚುನಾವಣೆಯನ್ನೂ ಸಹ ಕಾಂಗ್ರೆಸ್ ಸೋತಿದ್ದು ತನ್ನದೇ ಎಡವಟ್ಟು ಕೈಂಕರ್ಯಗಳಿಂದ.
ಇದೀಗ ಆಡಳಿತ ಬಿಜೆಪಿ ಭ್ರಷ್ಟಾಚಾರ ಮತ್ತು ಇತರ ಹಗರಣಗಳಿಂದಾಗಿ ಮುಖಭಂಗಕ್ಕೊಳಗಾಗಿದ್ದು, ಕಾಂಗ್ರೆಸ್ಸಿಗೆ ಗೆಲ್ಲಲು ಪರಿಸ್ಥಿತಿ ಅನುಕೂಲಕರವಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿಯೇ ಅವರು ತಮ್ಮ ಕಾಲಿಗೆ ತಾವೇ ಕೊಡಲಿಯೇಟು ಹಾಕುವುದು. ಲಿಂಗಾಯತ ಸಮುದಾಯದಿಂದ ಅನೇಕ ಪ್ರತಿಷ್ಠಿತ ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಇನ್ನಷ್ಟು ಶಕ್ತಿ ತುಂಬುವಂತೆ ಮಾಡಿದೆ. ಆದರೆ ಇಂತಹ ಆತಂಕದ ಸನ್ನಿವೇಶದಲ್ಲಿಯೇ ಸಿದ್ಧರಾಮಯ್ಯನವರ ಹೇಳಿಕೆಯನ್ನು ಬಿಜೆಪಿಯವರು ತುಂಬು ಹೃದಯದಿಂದ ಲಾಭಕ್ಕೆ ಬಳಸುತ್ತಿದ್ದಾರೆ.
ಟಿವಿ9 ಪತ್ರಕರ್ತ ಕೇಳಿದ ಪ್ರಶ್ನೆ ಸ್ಪಷ್ಟವಾಗಿತ್ತು. ಅದಕ್ಕೆ ಸಿದ್ಧರಾಮಯ್ಯನವರು ಸೂಕ್ತ ಉತ್ತರವನ್ನೇ ನೀಡಬಹುದಿತ್ತು. ಲಿಂಗಾಯತ ಮುಖ್ಯಮಂತ್ರಿಯ ವಿಚಾರ ಮುನ್ನೆಲೆಯಲ್ಲಿರುವಾಗ ಕಾಂಗ್ರೆಸ್ಸಿನ ನಿಲುವೇನು ಎಂಬ ವಿಷಯಕ್ಕೆ ಎಷ್ಟು ಅದ್ಭುತ ಉತ್ತರ ನೀಡಬಹುದಿತ್ತು. ಆದರೆ ಏನು ಮಾಡೋಣ, ಬಾಯಿ ಚಪಲ, ಎಲುಬಿಲ್ಲದ ನಾಲಿಗೆ! ಠೀಕಿಸುವ ಭರದಲ್ಲಿ ಅಪದ್ಧ ಮಾತನಾಡಿದ್ದಾರೆ ಸಿದ್ಧರಾಮಯ್ಯನವರು. ಅವರಿನ್ನೂ ಪೆನ್ನಿನಲ್ಲಿ ಬರೆದು ಪತ್ರಕರ್ತರು ರಿಪೋರ್ಟ್ ಮಾಡುವ ಕಾಲದಲ್ಲಿಯೇ ಇರುವಂತೆ ಕಾಣುತ್ತದೆ. ಲೈವ್ ಕ್ಯಾಮರಾ ಯುಗವನ್ನಿನ್ನೂ ಅವರು ಗಂಭೀರವಾಗಿ ಪರಿಗಣಿಸಿದಂತೆ ತೋಚುತ್ತಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಠೀಕಿಸುವುದು ಉಚಿತವೇ. ಆದರೆ ಕೇಳಿದ ಪ್ರಶ್ನೆಗೆ ಒಳ್ಳೆಯ ಉತ್ತರವನ್ನು ನೀಡಬಹುದಿತ್ತು. ಆದರೆ ಸಿದ್ಧರಾಮಯ್ಯನವರು ಮೈಮರೆತು ಏನೋ ಹೇಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಂಡಾಯ, ಹಿರಿಯ ನಾಯಕರ ಪಕ್ಷತ್ಯಾಗ, ಭ್ರಷ್ಟಾಚಾರ ಮತ್ತಿತರ ಆರೋಪಗಳಿಂದ ಬಸವಳಿದಿರುವ ಬಿಜೆಪಿಗೆ ಸಿದ್ಧರಾಮಯ್ಯನವರ ಈ ಹೇಳಿಕೆ ಟಾನಿಕ್ನಂತೆ ದೊರಕಿದೆ. ಕಾಂಗ್ರೆಸ್ಸಿಗರ ಮೇಲೆ ಮುಗಿಬೀಳಲು ಈ ಹೇಳಿಕೆ ಬಿಜೆಪಿಗೆ ನೆರವಾಗಿದೆ.
ಆರ್. ಅಶೋಕ್ ಅವರು ಹೇಳಿದಂತೆ ಬಿಜೆಪಿಯು ಕರ್ನಾಟಕದಲ್ಲಿ ಬರಗೆಟ್ಟಿರುವುದಂತೂ ನಿಜ. ಅಂತಹ ಶೋಚನೀಯ ಸ್ಥಿತಿಯಲ್ಲಿರುವ ಪಕ್ಷಕ್ಕೆ ‘ಮುಳುಗುವವನಿಗೆ ಹುಲುಕಡ್ಡಿಯ ಆಸರೆ’ ಎಂಬಂತೆ ಸಿದ್ಧರಾಮಯ್ಯನವರ ಹೇಳಿಕೆಯನ್ನು ಬಳಸಿ, ಕಾಂಗ್ರೆಸ್ ಪಕ್ಷವನ್ನು ಲಿಂಗಾಯತರ ವಿರುದ್ಧ ತೋರ್ಪಡಿಸುವಲ್ಲಿ ಭಯಂಕರವಾಗಿ ಮುಗಿಬಿದ್ದಿದ್ದಾರೆ ಬಿಜೆಪಿ ನಾಯಕರು. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಕಾಲವೇ ಹೇಳಬೇಕು.
ಒಟ್ಟಿನಲ್ಲಿ, ಕಾಂಗ್ರೆಸ್ ಪಕ್ಷ ತನ್ನ ಸೋಲಿಗೆ ತಾನೇ ರಣವೀಳ್ಯ ನೀಡುವುದರಲ್ಲಿ ಪಳಗಿದೆ ಎಂಬುದಂತೂ ನಿಜ. ಇಂತಹ ಮುಜುಗರ, ಹೀನಾಯ ಪರಿಸ್ಥಿತಿಯನ್ನು ಕಾಂಗ್ರೆಸ್ ಮುಖಂಡರೇ ಸೃಷ್ಟಿಸುವುದರಲ್ಲಿ ಸಿದ್ಧಹಸ್ತರು. ಅಷ್ಟು ಮಾತ್ರವಲ್ಲ, ಡ್ಯಾಮೇಜ್ ಕಂಟ್ರೋಲ್ ಮಾಡುವ ಕ್ರಮವೇ ಕಾಂಗ್ರೆಸ್ನಲ್ಲಿಲ್ಲ. ಬಿಜೆಪಿಯವರು ಯಾವುದೇ ಹೇಳಿಕೆಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವುದರಲ್ಲಿ ನಿಸ್ಸೀಮರು. ಆದರೆ ಕಾಂಗ್ರೆಸ್ಸಿಗರು ತಮ್ಮ ತಪ್ಪುಗಳನ್ನು ಸರಿಪಡಿಸುವುದಕ್ಕೂ ಸದಾ ಹಿಂದೆ. ಅದೇ ಕಾರಣಕ್ಕೆ ಸತತ ಸೋಲಿಗೆ ಒಳಗಾಗಿದ್ದಾರೆ.
ಕರ್ನಾಟಕದ ಈ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ಸಿಗೆ ನೂರಾರು ಕಾರಣಗಳಿರುವುದಂತೂ ಸತ್ಯ. ಬಿಜೆಪಿಯ ಪ್ರಯೋಗಗಳು ಅದಕ್ಕೇ ತಿರುಗುಬಾಣವಾಗುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ಸಿಗರು ತಮ್ಮ ದಾರಿಗೇ ಕಲ್ಲು ಹಾಕುವ ಪರಿ ನೋಡಿದರೆ ಆಶ್ಚರ್ಯವಾಗುತ್ತಿದೆ. ಮತಿಗೆಟ್ಟ ಹೇಳಿಕೆ ನೀಡುವ ಚಾಳಿ ಬಿಡುವ ಲಕ್ಷಣವೇ ಕಾಂಗ್ರೆಸ್ಸಿಗರಲ್ಲಿ ಇದ್ದಂತಿಲ್ಲ.
ಕೊನೆಗೆ ಮೂಡುವ ಪ್ರಶ್ನೆ – “ಕಾಂಗ್ರೆಸ್ಸಿಗರು ಗೆಲ್ಲುವುದಕ್ಕಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಸೋಲುವುದಕ್ಕಾಗಿಯೇ ಹವಣಿಸುತ್ತಿದ್ದಾರಾ?!”
ನೀವೇನಂತೀರಿ?
Send your Feedback to: budkuloepaper@gmail.com