ಟಿಪ್ಪುವಿನಿಂದ ಧರೆಗುರುಳಿದ ಆ 25 ಚರ್ಚುಗಳ ಪಟ್ಟಿ ಮತ್ತು ಅಂದಿನ ಕರಾಳ ಹತ್ಯಾಕಾಂಡದ ವಿವರ
ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ
ಟಿಪ್ಪು ಸುಲ್ತಾನನು 1784ರಲ್ಲಿ, ಅಂದರೆ ರಾಜನಾಗಿ ಅಧಿಕಾರಕ್ಕೇರಿದ ಒಂದೇ ವರ್ಷದಲ್ಲಿ ಮಂಗಳೂರು ಸೇರಿದಂತೆ ಸಮಸ್ತ ಕರಾವಳಿ ಭಾಗದ ಕ್ರೈಸ್ತರನ್ನು ದಮನಿಸಲು, ನಾಶಪಡಿಸಲು ಮತ್ತು ತನ್ನ ಸುಪರ್ದಿಯಲ್ಲಿಡಲು ಯೋಜನೆ ರೂಪಿಸಿದ. ಅದರ ಪರಿಣಾಮವಾಗಿ ಕನಸು ಮನಸಿನಲ್ಲೂ ಊಹಿಸದ ಕರಾಳ ಯುಗವನ್ನು ಕರಾವಳಿಯ ಕ್ರೈಸ್ತರು ಕಾಣಬೇಕಾಗಿದ್ದಷ್ಟೇ ಅಲ್ಲದೆ, ಅತ್ಯಂತ ಭೀಕರ ಕ್ರೌರ್ಯ, ಹಿಂಸೆ, ಕಷ್ಟ ನಷ್ಟಗಳಿಗೆ ಅವರು ಒಳಗಾಗಬೇಕಾಯಿತು.
ವಿಶೇಷವೆಂದರೆ ಅಂದು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕು ಸಾಗಿಸುತ್ತಿದ್ದ ಸಹಸ್ರಾರು ಕ್ರೈಸ್ತರನ್ನೇ ಅವರು ಕನಸು ಮನಸಿನಲ್ಲಿಯೂ ಊಹಿಸದ ಅಪರಾಧಗಳಿಗಾಗಿ ಭೀಕರವಾಗಿ ಶಿಕ್ಷಿಸಲಾಗಿತ್ತು. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ! ಮಂಗಳೂರು ಪಟ್ಟಣದ ಕೆಲವೇ ಕೆಲವು ಶ್ರೀಮಂತ ಮನೆತನದ ಕ್ರೈಸ್ತರು ಟಿಪ್ಪುವಿನ ವಿರುದ್ಧ ಬ್ರಿಟಿಷರ ಪರವಾಗಿ ವರ್ತಿಸಿರಬಹುದು. ಒಂದು ವೇಳೆ ಹಾಗೆ ನಡೆದಿದ್ದೇ ಆಗಿದ್ದಲ್ಲಿ ತಪ್ಪಿತಸ್ಥರನ್ನು ಮಾತ್ರ ಶಿಕ್ಷಿಸಬೇಕಾಗಿತ್ತು. ಆದರೆ ತಮ್ಮಷ್ಟಕ್ಕೆ ತಾವಾಯಿತು ತಮ್ಮ ದುಡಿಮೆಯಾಯಿತು ಎಂಬಂತೆ ಜೀವಿಸುತ್ತಿದ್ದ, ಬಹುತೇಕ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಮುಗ್ಧ ಜನರೆಲ್ಲರನ್ನೂ ಬಂಧಿಸಿ ಅತ್ಯಂತ ಬರ್ಬರವಾಗಿ ನಡೆಸಿಕೊಂಡು ಶ್ರೀರಂಗಪಟ್ಟಣಕ್ಕೆ ಕರೆದೊಯ್ಯಲಾಯಿತು. ಈ ಹಾದಿಯಲ್ಲಿ ಮೂರನೇ ಎರಡರಷ್ಟು ಜನರ ಹರಣವಾಗಿತ್ತು.
ಟಿಪ್ಪುವಿನ ವಿಕೃತ ಕ್ರೌರ್ಯ, ಅಸಹಿಷ್ಣುತೆಗೆ ಸಾಕ್ಷಿಯೆಂಬಂತೆ ಕ್ರೈಸ್ತರೆಲ್ಲರನ್ನೂ ಕರಾವಳಿಯಿಂದ ತೆರವುಗೊಳಿಸಿದ ಕೂಡಲೇ ಇಲ್ಲಿದ್ದ ಚರ್ಚುಗಳೆಲ್ಲವನ್ನೂ ನಾಶಗೊಳಿಸಲಾಯಿತು. ಆಗಿನ ಕಾಲದಲ್ಲಿ ಅಂದರೆ 1784ರ ಹೊತ್ತಿಗೆ ಕರಾವಳಿ ಪ್ರದೇಶದಲ್ಲಿ 27 ಚರ್ಚುಗಳು ತಲೆಯೆತ್ತಿ ನಿಂತಿದ್ದವು. ಆ 27 ಚರ್ಚುಗಳಲ್ಲಿ ಬಹುತೇಕ ಈಗಿನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೆ ಕೆಲವು ಉತ್ತರ ಕನ್ನಡ ಜಿಲ್ಲೆ ಮತ್ತದರ ಆಸುಪಾಸಿನಲ್ಲಿದ್ದವು. (ಮಲಬಾರ್ ಪ್ರದೇಶದ ಚರ್ಚ್‍ಗಳ ಲೆಕ್ಕ ಇದರಲ್ಲಿಲ್ಲ).
ಆ 27 ಚರ್ಚುಗಳಲ್ಲಿ ಫರಂಗಿಪೇಟೆಯ ನೇತ್ರಾವತಿ ನದಿ ಬದಿಯ ಗುಡ್ಡೆಯಲ್ಲಿದ್ದ ಮೊಂತೆ ಮಾರಿಯಾನೊ ಪ್ರಾರ್ಥನಾ ಮಂದಿರವೂ ಸೇರಿತ್ತು. ಇದು ಪಾದರಿಯಾಗುವ ವಿದ್ಯಾರ್ಥಿಗಳ ತರಬೇತಿ ಶಾಲೆಯಾಗಿತ್ತು (ಸೆಮಿನರಿ). ಇನ್ನೊಂದು ವಿಶೇಷವೇನೆಂದರೆ, ಈ ಮಂದಿರದ ಮುಖ್ಯಸ್ಥರಾಗಿದ್ದ ಫಾದರ್ ಜೋಕಿಂ ಮಿರಾಂದಾರವರು ಹೈದರಾಲಿಯ ಆಪ್ತ ಸ್ನೇಹಿತರಾಗಿದ್ದರು ಮತ್ತು ಅವರ ಬಗ್ಗೆ ಹೈದರಾಲಿಗೆ ಬಹಳ ಗೌರವ, ಆದರವಿತ್ತು. ಆದರೆ ಅವನ ಮಗ ಟಿಪ್ಪು ಮಾತ್ರ ಅದಕ್ಕೆ ತದ್ವಿರುದ್ಧನಾಗಿದ್ದ.
ವ್ಯವಸ್ಥಿತ ಸಂಚು ಹೂಡಿ ಕ್ರೈಸ್ತರನ್ನು ನಿಬ್ಬೆರಗಾಗುವ ರೀತಿಯಲ್ಲಿ ಬಂಧಿಸಿ ಕರಾವಳಿಯಾದ್ಯಂತದಿಂದ ಅವರನ್ನು ನಿವಾರಿಸುವ ಯೋಜನೆಯ ಜೊತೆಗೆ ಅಲ್ಲಿದ್ದ ಎಲ್ಲಾ ಚರ್ಚುಗಳನ್ನು ಕೆಡವಲೂ ಆಜ್ಞೆ ಹೊರಡಿಸಲಾಗಿತ್ತು. ಸದ್ಯ ಆಗಿನ ಕಾಲದಲ್ಲಿದ್ದ ಚರ್ಚುಗಳು ಯಾವುವು ಎಂಬುದನ್ನು ನೋಡೋಣ. (ಕೆಲ ಎಡಬಿಡಂಗಿಗಳು ಆಗ ಇಲ್ಲಿ ಬೆರಳೆಣಿಕೆಯ ಚರ್ಚುಗಳಷ್ಟೇ ಇದ್ದವು, ಮತ್ತು, ಟಿಪ್ಪು ಚರ್ಚ್‍ಗಳನ್ನು ಒಡೆದು ಹಾಕಿರಲೇ ಇಲ್ಲವೆಂದು ಲೊಚಗುಡುತ್ತವೆ! ನಿಜಕ್ಕೂ ಅದು ಅವರ ವ್ಯಕ್ತಿತ್ವದಷ್ಟೇ ಹಾಸ್ಯಾಸ್ಪದ ಹೇಳಿಕೆ).
1784ರಲ್ಲಿ ಅಸ್ತಿತ್ವದಲ್ಲಿದ್ದ ಚರ್ಚುಗಳು:
1. ರೊಸಾರಿಯೊ ಚರ್ಚ್, ಮಂಗಳೂರು, (ಸ್ಥಾಪನೆ – 1568)
2. ಮಾತೆ ಮರಿಯಳ ಚರ್ಚ್, ಉಳ್ಳಾಲ, (ಸ್ಥಾಪನೆ – 1568)
3. ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್, ಒಮ್ಜೂರ್-ಅರ್ಕುಳ, ಸ್ಥಾಪನೆ – 1568 (ಈ ಚರ್ಚ್ 1623ರಲ್ಲಿ ಬಂಗರಾಯರಿಂದ ನೀಡಲ್ಪಟ್ಟ ಜಾಗಕ್ಕೆ ಸ್ಥಳಾಂತರವಾಗಿ, ಹೋಲಿ ಫ್ಯಾಮಿಲಿ ಚರ್ಚ್ ಆಗಿ ಬದಲಾಯಿತು)
4. ರೊಸಾರಿಯೊ ಚರ್ಚ್, ಕುಂದಾಪುರ, (ಸ್ಥಾಪನೆ – 1570)
5. ಮಾತೆ ಮರಿಯಳ ಚರ್ಚ್, ಗಂಗೊಳ್ಳಿ, (ಸ್ಥಾಪನೆ – 1629)
6. ಮಿಲಾಗ್ರಿಸ್ ಚರ್ಚ್, ಮಂಗಳೂರು, (ಸ್ಥಾಪನೆ – 1680)
7. ಮಿಲಾಗ್ರಿಸ್ ಚರ್ಚ್, ಕಲ್ಯಾಣಪುರ, ಉಡುಪಿ, (ಸ್ಥಾಪನೆ – 1680)
8. ಸಂತ ಜೋಸೆಫ್ ಚರ್ಚ್, ಪೇಜಾವರ, (ಸ್ಥಾಪನೆ – 1680)
9. ಹೋಲಿ ರಿಡೀಮರ್ ಚರ್ಚ್, ಆಗ್ರಾರ್, ಬಂಟ್ವಾಳ (ಸ್ಥಾಪನೆ – 1702)
10. ಬಾಲ ಯೇಸು ಚರ್ಚ್, ಬಂಟ್ವಾಳ, (ಸ್ಥಾಪನೆ – 1702)
11. ರೆಮೆದಿಯಮ್ಮನ ಚರ್ಚ್, ಕಿರೆಂ (ಐಕಳ), (ಸ್ಥಾಪನೆ – 1740)
12. ಆರೋಗ್ಯ ಮಾತೆಯ ಚರ್ಚ್, ಶಿರ್ವಾ, (ಸ್ಥಾಪನೆ – 1750)
13. ಸಂತ ಲಾರೆನ್ಸ್ ಚರ್ಚ್, ಅತ್ತೂರು, ಕಾರ್ಕಳ, (ಸ್ಥಾಪನೆ – 1759)
14. ಹೋಲಿ ಕ್ರಾಸ್ ಚರ್ಚ್, ಹೊಸಬೆಟ್ಟು, ಮೂಡಬಿದ್ರಿ, (ಸ್ಥಾಪನೆ – 1761)
15. ಮೋಂತೆ ಮರಿಯಾನೊ ಚರ್ಚ್, ಫರಂಗಿಪೇಟೆ
16. ಹೋಲಿ ಕ್ರಾಸ್ ಚರ್ಚ್, ಬೈಂದೂರು, (ಸ್ಥಾಪನೆ – 1783)
17. ದೇವರ ಮಾತೆ ಚರ್ಚ್, ಮೊಗರ್ನಾಡು, (ಸ್ಥಾಪನೆ – 1775)
18. ಮಾತೆ ಮರಿಯಮ್ಮನವರ ಚರ್ಚ್, ಮೂಲ್ಕಿ, (ಸ್ಥಾಪನೆ – 1783)
19. ಸಂತ ಪೀಟರ್ ಚರ್ಚ್, ಬಾರ್ಕೂರು/ಪೇತ್ರಿ (ಸ್ಥಾಪನೆ – 1783)
20. ಸೈಂಟ್ ಫಿಲಿಪ್ ನೆರಿ ಚರ್ಚ್, ಬಸ್ರೂರು, (ಸ್ಥಾಪನೆ – 1570)
ಉಳಿದ ಚರ್ಚ್‍ಗಳು ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ, ಬೆಳಗಾವಿ ಮುಂತಾದ ಕಡೆಗಳಲ್ಲಿದ್ದವು. ಅವುಗಳ್ಯಾವುವೆಂದರೆ:
1. ಹೊನ್ನಾವರ
2. ಕುಮಟಾ
3. ಚಂದೋರ್ (ಚಂದಾವರ)
4. ಸುಂಕೇರಿ
5. ಗುಲ್ಮೋನಾ
6. ನಗರ (ಬಿದನೂರು)
7. ಸುರಾಲ್ (ಬೆಳಗಾವಿ)
ಈ ಎಲ್ಲಾ ಚರ್ಚ್‍ಗಳು ಟಿಪ್ಪು ಸುಲ್ತಾನನ ರಾಜ್ಯಭಾರ ಪ್ರಾರಂಭವಾಗುವ ಮೊದಲೇ ಅಸ್ತಿತ್ವದಲ್ಲಿದ್ದ ಚರ್ಚ್‍ಗಳು. ಕೇರಳದ ಮಲಬಾರ್‌ನಲ್ಲಿಯೂ ಆತನಿಂದ ಕೆಲವು ಚರ್ಚ್‍ಗಳು ನಾಶವಾಗಿವೆ. (ಅವುಗಳ ವಿವರ ದೊರೆತಿಲ್ಲ).
ಕನ್ನಡ ಕರಾವಳಿಯಲ್ಲಿ ಸ್ಥಾಪನೆಯಾದ ಮೊತ್ತ ಮೊದಲ ಚರ್ಚ್ ಮಂಗಳೂರಿನ ಪಾಂಡೇಶ್ವರದಲ್ಲಿರುವ ರೊಸಾರಿಯೋ ಚರ್ಚ್. 1568ರಲ್ಲಿ ಇದರ ಸ್ಥಾಪನೆಯಾಗಿದ್ದು, ಈ ಪ್ರದೇಶದ ಮೊತ್ತ ಮೊದಲ ಕ್ರೈಸ್ತ ಪ್ರಾರ್ಥನಾ ಮಂದಿರವಾಗಿತ್ತು. ಪೋರ್ಚುಗೀಸರು ಸಮುದ್ರ ದಾರಿಯಲ್ಲಿ ಮಂಗಳೂರನ್ನು ಪ್ರವೇಶಿಸಿ ಈಗಿನ ಹಳೆ ಬಂದರಿನ ಪಕ್ಕದಲ್ಲಿ ಚರ್ಚ್ ಕಟ್ಟಿಸಿ ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಪ್ರಸ್ತುತ ಇರುವ ಚರ್ಚ್‍ನ ಕಟ್ಟಡವು ನೂರು ವರ್ಷಗಳ ಹಿಂದಿನದಾಗಿದೆ. ರೊಸಾರಿಯೊ ಚರ್ಚ್ ನಂತರ ಕ್ಯಾಥೆಡ್ರಲ್ ಆಗಿ ಮೇಲ್ದರ್ಜೆಗೇರಿತು. 1915ರಲ್ಲಿ ನಿರ್ಮಾಣವಾದ ಈಗಿನ ಚರ್ಚ್ ಕಟ್ಟಡದ ಶತಮಾತೋತ್ಸವವು 2015ರಲ್ಲಿ ನಡೆದಿತ್ತು. ಇದೀಗ 106 ವರ್ಷಗಳಾಗಿವೆ. ರೊಸಾರಿಯೋ ಚರ್ಚ್ ಸ್ಥಾಪನೆಯಾಗಿ 453 ವರ್ಷಗಳು ಸಂದಿವೆ.
ಗಮನಿಸಬೇಕಾದ ಸಂಗತಿಯೆಂದರೆ, ಆಗಿನ ಬಹುತೇಕ ಚರ್ಚ್‍ಗಳಿಗೆ ಜಾಗ ಒದಗಿಸಿದ್ದು ಕೆಳದಿ ನಾಯಕರು. ಅವರು ಅಥವಾ ಅವರ ಮೂಲಕ ಸ್ಥಳೀಯ ಆಡಳಿತ ನೋಡಿಕೊಳ್ಳುತ್ತಿದ್ದ ಸಾಮಂತರು ಕ್ರೈಸ್ತರಿಗೆ ಇಗರ್ಜಿ ಕಟ್ಟಲು ಸ್ಥಳ ನೀಡಿದ್ದರು. ಮತ್ತೊಂದು ಕುತೂಹಲದ ಸಂಗತಿಯೆಂದರೆ ಹೇಗೆ ಬಿದನೂರು ಕೋಟೆಯ ಮುಂಬಾಗಿಲ ಎದುರಲ್ಲೇ ಚರ್ಚ್ ಇತ್ತೋ (ಪೋರ್ಚುಗೀಸ್ ಅಧಿಕಾರಿಗಳಿಗಾಗಿ ವಿಜಯನಗರದಲ್ಲೂ ಚರ್ಚ್ ಕಟ್ಟಲಾಗಿತ್ತು), ಶ್ರೀರಂಗಪಟ್ಟಣದಲ್ಲೂ ಫ್ರೆಂಚ್ ಜನರಲ್‍ಗಳಿಗಾಗಿ ಹೈದರ್ ಚರ್ಚ್ ಕಟ್ಟಿಸಿದ್ದನಂತೆ.
ಪ್ರಾರ್ಥನೆಗಾಗಿ ತಂಗಿದ್ದವರಿಗೆ ಕಾದಿತ್ತು ಬರಸಿಡಿಲು
ಕುತೂಹಲದ ಸಂಗತಿಯೆಂದರೆ ಅಷ್ಟೊಂದು ಕ್ರೈಸ್ತರನ್ನು ಏಕಕಾಲದಲ್ಲಿ ಹೇಗೆ ಸೆರೆ ಹಿಡಿದರೆಂಬ ಸಂಗತಿ. ಇದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಕ್ರೈಸ್ತರು ತುಂಬಾ ಆಳವಾದ ಧಾರ್ಮಿಕ ನಂಬಿಕೆಯವರು. ಆ ಕಾಲದಲ್ಲಿನ ಕ್ರೈಸ್ತರ ಧಾರ್ಮಿಕ ಶ್ರದ್ಧೆ ಅಪಾರವಾದುದಾಗಿತ್ತು. ಕಾಲ್ನಡಿಗೆಯಲ್ಲಿಯೇ ಮೈಲುಗಟ್ಟಲೆ ದೂರವನ್ನು ಕ್ರಮಿಸಿ ಭಾನುವಾರದ ಪೂಜೆ ಮತ್ತು ಹಬ್ಬಗಳ ಪೂಜೆಗಾಗಿ ಚರ್ಚಿಗೆ ಆಗಮಿಸುತ್ತಿದ್ದರು. ಅತಿ ದೂರದವರು ಹಿಂದಿನ ದಿನವೇ ಸಾಯಂಕಾಲದೊಳಗೆ ಬಂದು ತಂಗುತ್ತಿದ್ದರು.
ಹೇಳಿ ಕೇಳಿ ಕ್ರೈಸ್ತರು ಹೆಚ್ಚಾಗಿ ಅಮಾಯಕರು. ಕ್ಷಮಾ ಗುಣದವರೂ, ಸಹನಾಶೀಲರೂ, ಶಾಂತಿಪ್ರಿಯರೂ ಆಗಿದ್ದರು. ಅದೇ ಕಾರಣಕ್ಕೆ ಕೆಳದಿ ನಾಯಕರಿಂದ ಹಿಡಿದು ಎಲ್ಲಾ ರಾಜ ವಂಶಸ್ಥರು ಕ್ರೈಸ್ತರಿಂದಾಗಿ ನೆಮ್ಮದಿಯ, ನಿಶ್ಚಿಂತೆಯ ದಿನಗಳನ್ನು ಕಳೆದಿದ್ದರು. ಕ್ರೈಸ್ತರಿಂದ ಯಾವುದೇ ಸಮಸ್ಸೆ ಅವರಿಗೆದುರಾಗಿರಲಿಲ್ಲ. ಬಹುಶಃ ಇದೇ ಸ್ವಭಾವವನ್ನು ಟಿಪ್ಪು ದುರುಪಯೋಗಿಸಿಕೊಂಡ.
ಬೇಸಿಗೆ ಆರಂಭವಾಗುವ ಹೊತ್ತಿಗೆ ಕ್ರೈಸ್ತರಿಗೆ ಬಹು ಮುಖ್ಯವಾದ ಕಪ್ಪು ದಿನಗಳು (ಲೆಂಟ್) ಆರಂಭವಾಗುತ್ತವೆ. ಯೇಸುಕ್ರಿಸ್ತರ ಮರಣ ಮತ್ತು ಪುನರುತ್ಥಾನದ ಆಚರಣೆಯ ಹಬ್ಬಕ್ಕೆ ತಯಾರಿಯಾಗಿ ಉಪವಾಸ, ತ್ಯಾಗ ಭಕ್ತಿಯ 40 ದಿನಗಳ ಕಾಲ ವಿಶೇಷ ಅವಧಿಯನ್ನಾಚರಿಸಲಾಗುತ್ತದೆ. ಅದರ ಆರಂಭ ಆಶ್ ವೆಡ್ನಸ್‍ಡೇ (ಂsh Weಜಟಿesಜಚಿಥಿ) ದಿನದಿಂದ, ಅಂದರೆ ಬುಧವಾರದಿಂದ ಪ್ರಾರಂಭಿಸಲಾಗುತ್ತದೆ. ಆ ದಿನ ತೀರಾ ಅಶಕ್ಯರನ್ನು ಹೊರತು ಎಲ್ಲರೂ ಚರ್ಚಿಗೆ ಆಗಮಿಸಿ ಪವಿತ್ರ ಪೂಜಾವಿಧಿಯಲ್ಲಿ ವಿನೀತರಾಗಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.
ಟಿಪ್ಪು ಸುಲ್ತಾನನು ಈ ದಿನವನ್ನೇ ತನ್ನ ಪೈಶಾಚಿಕ ಯೋಜನೆಗಾಗಿ ಆಯ್ದುಕೊಂಡಿದ್ದ. ಕಾಡು ಮೇಡು ಅಲೆದು, ದೂರ ದೂರದ ಮನೆಗಳಲ್ಲಿ ಜನರನ್ನು ಬಂಧಿಸುವ ಮಾತು ಅತ್ಯಂತ ಕ್ಲಿಷ್ಟಕರ ಮತ್ತು ಬಹುತೇಕ ಅಸಾಧ್ಯದ ಮಾತು. ಹಾಗೆ ಕ್ರಮ ಕೈಗೊಂಡಿದ್ದೇ ಆದಲ್ಲಿ ಜನರಿಗೆ ಸುದ್ದಿ ತಲುಪಿ ಬಂಧನ ಪ್ರಕ್ರಿಯೆಯೇ ಉಲ್ಟಾಪಲ್ಟಾ ಆಗುವ ಸಾಧ್ಯತೆಯಿತ್ತು. ಸೈನಿಕರಿಗೂ ಅದು ತುಂಬಾ ಅಪಾಯಕಾರಿ ಆಗುತ್ತಿತ್ತು. ಅದರ ಬದಲಾಗಿ ಅನಾಯಾಸವಾಗಿ ಇಡೀ ಜನಾಂಗವೇ ತಮ್ಮ ತಮ್ಮ ಪ್ರಾರ್ಥನಾ ಮಂದಿರಗಳಲ್ಲಿ, ನಿರಾಯುಧವಾಗಿ ಜಮಾವಣೆಗೊಂಡಾಗ ಅವರನ್ನು ಸುತ್ತುವರೆದು ಸೆರೆ ಹಿಡಿಯುವುದು ಸೈನಿಕರಿಗೆ ಬಾಳೆ ಹಣ್ಣು ಸುಲಿದಷ್ಟೇ ಸಲೀಸು. ಹಾಗಾಗಿ ಅಂದಿನ ಆ ದಿನಕ್ಕಾಗಿ ಟಿಪ್ಪುವಿನ ರಕ್ಕಸ ಸೈನಿಕರು ಹೊಂಚು ಹಾಕಿ ಕಾಯುತ್ತಿದ್ದರು. ಮುಗ್ಧ ಕ್ರೈಸ್ತರಿಗೆ ಅದರ ಕಿಂಚಿತ್ತೂ ಸುಳಿವು ಲಭ್ಯವಾಗಿರಲಿಲ್ಲ.
ಕ್ರೈಸ್ತರೆಲ್ಲರನ್ನೂ ಬಂಧಿಸಬೇಕು ಮತ್ತು ಚರ್ಚ್‍ಗಳನ್ನೆಲ್ಲಾ ಕೆಡವಿ ನಾಶಗೊಳಿಸಬೇಕೆಂಬ ಟಿಪ್ಪುವಿನ ಫರ್ಮಾನು ಆತನ ಅಧಿಕಾರಿಗಳಿಗೆ ತಲುಪಿದ್ದು 1784ರ ಫೆಬ್ರವರಿ 24ರಂದು ಮಂಗಳವಾರ.
ಹೀಗೆ, 1784ರ ಫೆಬ್ರವರಿ 25ರಂದು ಬೆಳ್ಳಂಬೆಳಗ್ಗೆ ಹಕ್ಕಿಗಳ ಚಿಲಿಪಿಲಿ ಸದ್ದು ಮುಕ್ತಾಯವಾಗುತ್ತಿದ್ದಂತೆಯೇ ಕನ್ನಡ ಕರಾವಳಿಯಾದ್ಯಂತ ಜನರ ಆಕ್ರಂದನ, ರುದ್ರ ರೋದನ ಮಾರ್ದನಿಸಿತು. ಅವರ ಯಾತನೆಯು ಅರಬ್ಬಿ ಸಮುದ್ರದಿಂದ ಹಿಡಿದು ಪಶ್ಚಿಮ ಘಟ್ಟಗಳ ವರೆಗೆ ಮಾರ್ದನಿಸಿತು. ಕಿಂಚಿತ್ತೂ ಮುನ್ಸೂಚನೆಯಿಲ್ಲದೇ ನಡೆದ ಘಟನೆಯಿಂದ ಜನರು ತತ್ತರಿಸಿದ್ದರು. ವ್ಯವಸ್ಥಿತ ಯೋಜನೆಯೊಡನೆ ಶಸ್ತ್ರಸಜ್ಜಿತರಾಗಿ ಬಂದಿದ್ದ ಸೈನಿಕರ ಮುಂದೆ ಮುಗ್ಧ ಕ್ರೈಸ್ತರು ಶರಣಾಗಲೇಬೇಕಾಯಿತು.
ಫೆಬ್ರವರಿ 24ರ ಸಂಜೆ ಚರ್ಚುಗಳಲ್ಲಿ ದೂರದೂರಿನಿಂದ ಬಂದಿದ್ದ ಕ್ರೈಸ್ತರು ರಾತ್ರೆ ಕಳೆಯುತ್ತಿದ್ದರು. ಅವರೆಲ್ಲರನ್ನೂ ಬಂಧಿಸುವುದು ಸೈನಿಕರಿಗೆ ಸುಲಭದ ಕೆಲಸವಾಗಿತ್ತು. ಮರು ದಿನ ಮುಂಜಾನೆಯ ಹೊತ್ತಿಗೆ ಇನ್ನುಳಿದವರು, ಹತ್ತಿರದವರು, ಚರ್ಚಿಗೆ ಆಗಮಿಸಿದಾಗ ಅವರನ್ನೂ ಬಂಧಿಸಲಾಗಿತ್ತು. ಚರ್ಚುಗಳಲ್ಲಿ ಪಾದರಿಗಳೇ ಇರಲಿಲ್ಲ.
ಹೀಗೆ ಮಕ್ಕಳು, ಗರ್ಭಿಣಿಯರು, ವೃದ್ಧರು, ಅಶಕ್ಯರು ಸೇರಿದಂತೆ ಸಿಕ್ಕ ಸಿಕ್ಕವರನ್ನೆಲ್ಲಾ ನಿರ್ದಯವಾಗಿ ಕೂಡಿ ಹಾಕಿ ಅವರನ್ನು ಶ್ರೀರಂಗಪಟ್ಟಣಕ್ಕೆ ಕಾಲ್ನಡಿಗೆಯಲ್ಲಿ ಒಯ್ಯಲು ಗುಂಪುಗೂಡಿಸಲಾಯಿತು. ಮಂಗಳೂರು ಬಂಟ್ವಾಳದ ಆಸುಪಾಸಿನ ಚರ್ಚುಗಳಿಂದ ಬಂಧಿಸಲ್ಪಟ್ಟವರನ್ನು ಬೆಳ್ತಂಗಡಿಯ ಗಡಾಯಿಕಲ್ಲಿನ ಬಳಿ ಕೂಡಿಸಲಾಯಿತು. ಇದೇ ರೀತಿ ಬೇರೆಡೆಯಿಂದ ಆಯಾ ಪ್ರದೇಶದ ಜನರನ್ನು ಹತ್ತಿರದ ಘಾಟಿಗಳಿಂದ ಘಟ್ಟ ಹತ್ತಿಸಿ ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ನಡೆಸಿಕೊಂಡು ಹೋಗಲಾಯಿತು.
ನೆತ್ತರಕೆರೆಯಲ್ಲಿ ಹರಿಯಿತು ರಕ್ತದ ಕೋಡಿ!
ಬಂಧನದ ನಂತರ ನಡೆದ ಘಟನೆಗಳದ್ದೇ ಒಂದು ಪ್ರತ್ಯೇಕ ಅಧ್ಯಾಯ. ಭೀಭತ್ಸಕತೆಯ ವಿರಾಟ್ ಯಾಗವನ್ನೇ ನಡೆಸಿದರು ಟಿಪ್ಪುವಿನ ಸೈನಿಕರು ಮತ್ತು ಅಧಿಕಾರಿಗಳು. ಗಟ್ಟಿಮುಟ್ಟಾಗಿದ್ದ, ಧೈರ್ಯವಂತ ಯುವಕರು, ಪುರುಷರು ಮತ್ತು ಕೆಲ ಮಹಿಳೆಯರು ಪ್ರತಿಭಟಿಸಿದರು. ಹಾಗೆ ಪ್ರತಿಭಟಿಸಿದವರನ್ನೆಲ್ಲಾ ಭೀಕರವಾಗಿ ಚಿತ್ರಹಿಂಸೆ ಕೊಟ್ಟು ವಧಿಸಲಾಯಿತು.
ಇದಕ್ಕೆ ಅತಿ ದೊಡ್ಡ ಸಾಕ್ಷ್ಯಾಧಾರವಾಗಿ, ಇಂದಿಗೂ ಮೂಕರೋದನಗೈಯುತ್ತಿರುವ ‘ನೆತ್ತರಕೆರೆ’ ಹಳೆಯ ಕಥೆಯನ್ನು ಹೇಳುತ್ತಿದೆ. ಮಂಗಳೂರಿನಿಂದ ಬಿ.ಸಿ. ರೋಡ್ ಕಡೆಗೆ ಹೋಗುವ ಹೈವೇಯಲ್ಲಿ, ಫರಂಗಿಪೇಟೆಯ ಬಳಿಕ ಸಿಗುವ ಮಾರಿಪಳ್ಳದಿಂದ ಎಡಕ್ಕೆ ಪೊಳಲಿಗೆ ಹೋಗುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಈ ನೆತ್ತರಕೆರೆ ಸಿಗುತ್ತದೆ. ಅದೊಂದು ನೀರಿನ ಕೆರೆಯಾಗಿತ್ತು. ಅಲ್ಲಿ ಅಂದು ನೂರಾರು ಜೀವಗಳು ಕತ್ತರಿಸಲ್ಪಟ್ಟು ಹುತಾತ್ಮರಾದವು.
ಅದಕ್ಕೂ ಕಾರಣ ಬಹಳ ಸರಳ. ಟಿಪ್ಪುವಿನಂತೆಯೇ ಆತನ ಸೈನಿಕರು ಮತಾಂಧರೂ, ಕಾಮಾಂಧರೂ, ಕ್ರೂರಿಗಳೂ ಆಗಿದ್ದರು. ನೆತ್ತರಕೆರೆಯ ವಿಶಾಲ ಜಾಗದಲ್ಲಿ ಬಂಧಿಸಲ್ಪಟ್ಟವರ ಜಮಾವಣೆ ಮಾಡಲಾಗಿತ್ತು. ಟಿಪ್ಪುವಿನ ಸೈನಿಕರಿಗೆ ಕ್ರೈಸ್ತ ಯುವತಿ, ಸ್ತ್ರೀಯರನ್ನು ಕಂಡು ಸುಮ್ಮನೆ ಕೂರಲಾಗಲಿಲ್ಲ. ಅವರೊಳಗಿದ್ದ ಕಾಮ ರಕ್ಕಸ ಸ್ಫೋಟಗೊಂಡಿದ್ದ! ಸಿಕ್ಕ ಸುವರ್ಣಾವಕಾಶವನ್ನು ಬಿಟ್ಟಾರೆಯೇ ಅವರು? ಕಂಡ ಕಂಡ ಹೆಣ್ಣು ದೇಹಗಳ ಮೇಲೆ ರಾಕ್ಷಸರು ಮುಗಿಬಿದ್ದರು. ತಮ್ಮ ಕಣ್ಣೆದುರಲ್ಲೇ ತಂಗಿ, ಅಕ್ಕ, ಹೆಂಡತಿ, ತಾಯಿ ಸೇರಿದಂತೆ ಕುಟುಂಬಸ್ಥರ ಮೇಲಿನ ಬರ್ಬರ ಅತ್ಯಾಚಾರವನ್ನು ಕಂಡ ಪುರುಷರು ರೊಚ್ಚಿಗೆದ್ದರು. ಅವರ ಕೈಗಳನ್ನು ಕಟ್ಟಿ ಹಾಕಿದ್ದರೂ ಕಾಲುಗಳು ಸ್ವತಂತ್ರವಾಗಿದ್ದವು. ಅವರ ಕ್ರೋಧ ಮಿತಿ ಮೀರಿದಾಗ ಕೆಲವರು ಕಾಲುಗಳಿಂದಲೇ ಹೊಡೆದಾಡಿದರು.
ಒಂದೆಡೆ ಕಾಮೋದ್ರೇಕದಿಂದ ಉನ್ಮಾದರಾಗಿದ್ದ ರಾಕ್ಷಸರಿಗೆ ಕ್ರೈಸ್ತ ಪುರುಷರು ಪ್ರತಿಭಟಿಸಿದ್ದನ್ನು ಸಹಿಸಲಾಗಲಿಲ್ಲ. ಕೂಡಲೇ ಅವರು ತಮ್ಮ ತಲವಾರುಗಳಿಂದ ಕಂಡ ಕಂಡವರನ್ನೆಲ್ಲಾ ಕೊಚ್ಚಿ ಹಾಕಿದರು. ಅಲ್ಲೊಂದು ನರಮೇಧವೇ ನಡೆದು ಹೋಯಿತು. ಆ ಹತ್ಯಾಕಾಂಡದಲ್ಲಿ ಕೊಚ್ಚಿ ಹಾಕಲ್ಪಟ್ಟ ದೇಹಗಳು ರಾಶಿಯಲ್ಲಿ ನೆಲಕ್ಕುರುಳಿದವು. ಅವುಗಳಿಂದ ಹರಿದ ರಕ್ತದ ಪ್ರವಾಹ ಪಕ್ಕದಲ್ಲಿಯೇ ಇದ್ದ ಕೆರೆಗೆ ಧಾವಿಸಿತು. ಸಂಜೆಯೊಳಗೆ ಆ ಕೆರೆ ರಕ್ತದಿಂದ ತುಂಬಿ ಕೆಂಪಾಗಿ ಹೋಗಿತ್ತು. ತಂಪಾಗಿದ್ದ ಶುದ್ಧ ನೀರಿನಲ್ಲಿ ಮಾನವರ ಬಿಸಿ ರಕ್ತ ಲೀನವಾಯಿತು. ಭೀಕರ ಮಾರಣಹೋಮಕ್ಕೆ ಆ ಕೆರೆ ಜೀವಂತ ಸಾಕ್ಷಿಯಾಗಿ, ಮೂಕ ರೋದನಗೈಯುತ್ತಿತ್ತು. ಆ ಹೃದಯವಿದ್ರಾವಕ ದೃಶ್ಯಕ್ಕೆ ಪರಿಸರವೆಲ್ಲಾ ಸ್ತಂಭೀಭೂತವಾಗಿತ್ತು.
ಹಾಗೆ ಅಂದಿನಿಂದ ಆ ಕೆರೆಯು ನೆತ್ತರು ತುಂಬಿದ ಕೆರೆ, ನೆತ್ತರು ಹರಿದ ಕೆರೆ ಎಂಬುದಾಗಿ ಜನರಿಂದ ಗುರುತಿಸಲ್ಪಟ್ಟು ಕ್ರಮೇಣ ಅದಕ್ಕೆ ನೆತ್ತರಕೆರೆ ಎಂಬ ನಾಮಕರಣ ಶಾಶ್ವತವಾಯಿತು. ಈಗಲೂ ಅದೇ ಹೆಸರಿನಿಂದ ಅಧಿಕೃತವಾಗಿ ಆ ಜಾಗ ಗುರುತಿಸಲ್ಪಡುತ್ತಿದೆ.
ಹೀಗೆ ದಕ್ಷಿಣ ಕನ್ನಡದ ಅಲ್ಲಲ್ಲಿ ಲೆಕ್ಕವಿಲ್ಲದಷ್ಟು ಕ್ರೈಸ್ತರ ನೆತ್ತರು ಹರಿದು ಹೋಗಿದೆ. ತುಳುನಾಡಿನಲ್ಲಿ ಗ್ಯಾಲನ್‍ಗಟ್ಟಲೆ ರಕ್ತ ಬಸಿದು ಹೋಗಿದೆ. ಪಶ್ಚಿಮ ಘಟ್ಟದ ದಟ್ಟಾರಣ್ಯದ ದಾರಿಯಲ್ಲೆಲ್ಲಾ ಕ್ರೈಸ್ತರ ಕೂಗು, ರೋದನ ಮುಗಿಲು ಮುಟ್ಟಿದೆ ಮತ್ತು ದಾರಿಯಲ್ಲೆಲ್ಲಾ ರಕ್ತದ ಸಿಂಚನವಾಗಿದೆ. ಎಷ್ಟೇ ಭೀಕರ ಶಿಕ್ಷೆಯ ಅರಿವಿದ್ದರೂ ಸೆರೆಯಿಂದ ಬಿಡಿಸಿಕೊಳ್ಳುವ ಸಾಹಸಕ್ಕೆ ಹಲವರು ಪ್ರಯತ್ನಪಟ್ಟರು. ಕೆಲವರು ಅಲ್ಲಲ್ಲಿ ತಪ್ಪಿಸಿಕೊಂಡರು. ಹೀಗೆ ಶ್ರೀರಂಗಪಟ್ಟಣದ ಹಾದಿಯಲ್ಲಿನ ಹಲವು ಜಿಲ್ಲೆಗಳಲ್ಲಿ ಕ್ರೈಸ್ತರು ನೆಲೆ ನಿಂತರು. ಕೊಡಗು, ಚಿಕ್ಕಮಗಳೂರು, ಹಾಸನ ಮುಂತಾದ ಕಡೆಗಳಲ್ಲಿ ಹೀಗೆ ತಪ್ಪಿಸಿಕೊಂಡಿದ್ದ ಕ್ರೈಸ್ತರನೇಕರು ವಾಸಿಸಲಾರಂಭಿಸಿದರು. (ಅಂತಹ ಕುಟುಂಬಗಳು ಈಗಲೂ ಅಲ್ಲಲ್ಲಿ ಇವೆ).
ಹಲವು ಕ್ರೈಸ್ತರು ಮುಸಲ್ಮಾನರಾದರು!
ಸೆರೆಯಾಳಾಗಿದ್ದ ಹೆಚ್ಚಿನ ಹುಡುಗಿಯರು, ಮಹಿಳೆಯರನ್ನೆಲ್ಲಾ ಮುಸ್ಲಿಮರು ತಮ್ಮ ಕಾಮತೃಷೆಗೆ ಬಳಸಿಕೊಂಡರು. ಒಪ್ಪದವರನ್ನು ಅತ್ಯಾಚಾರ ಮಾಡಲಾಯಿತು. ಪುರುಷರನ್ನು ಒತ್ತಾಯದಿಂದ ಮುಸ್ಲಿಮರಾಗಿಸಿದರು. ಹಲವರು ಕಣ್ಣ ಮುಂದೆಯೇ ನಡೆಯುತ್ತಿದ್ದ ಘೋರ ಹಿಂಸಾಚಾರಕ್ಕೆ ಹೆದರಿ ಒಲ್ಲದ ಮನಸ್ಸಿನಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಹೀಗೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವರಿಗೆ ಹಲವು ರಿಯಾಯಿತಿ, ವಿನಾಯಿತಿಗಳು ದೊರೆಯುತ್ತಿದ್ದರಿಂದ ಆಮಿಷಕ್ಕೊಳಗಾದವರೂ ಮುಸ್ಲಿಮರಾದರು. ಆದರೂ ಬಹಳಷ್ಟು ಕ್ರೈಸ್ತರು ಏನೇ ಕಷ್ಟ, ಹಿಂಸೆ ಎದುರಾದರೂ ಅದನ್ನೆದುರಿಸಿ ತಮ್ಮ ಧರ್ಮಕ್ಕೆ ನಿಷ್ಠೆಯಿಂದಿದ್ದರು. ತಾವು ನಂಬುವ ಪವಿತ್ರ ಶಿಲುಬೆಯ ಮೇಲಿನ ನಿಷ್ಠೆಯನ್ನು ಗಟ್ಟಿಯಾಗಿ ಉಳಿಸಿಕೊಂಡರು. ಅದೇ ಕಾರಣಕ್ಕೆ ಬಹಳಷ್ಟು ಕ್ರೈಸ್ತರು ಭಯಾನಕ ಕ್ರೌರ್ಯಕ್ಕೆ ಒಳಗಾಗಿ ಜೀವ ಕಳೆದುಕೊಂಡರು.
ಕ್ರೈಸ್ತರನ್ನು ಬಂಧಿಸುವ ಮೊದಲು ಚರ್ಚುಗಳನ್ನು ನೋಡಿಕೊಂಡಿದ್ದ ಪಾದರಿಗಳನ್ನು ಗಡೀಪಾರು ಮಾಡಲಾಗಿತ್ತು (ಕೆಲವರು ಅಡಗಿಕೊಂಡಿದ್ದರೆಂದು ಹೇಳಲಾಗಿದೆ). ಅವರೆಲ್ಲರೂ ಗೋವಾದಿಂದ ಬಂದಿದ್ದ ಪೋರ್ಚುಗೀಸರಾಗಿದ್ದರು. ಫರಂಗಿಪೇಟೆಯ ಫಾದರ್ ಜೋಕಿಂ ಮಿರಾಂದಾರನ್ನು ತನ್ನ ತಂದೆಯೊಡನೆ ಅವರಿಗಿದ್ದ ಆತ್ಮೀಯತೆಯ ಹೊರತಾಗಿಯೂ ರಾಜ್ಯದಿಂದ ಹೊರ ಹಾಕಿದ ಟಿಪ್ಪು ಸುಲ್ತಾನ್ (ತಲ್ಲಿಚೇರಿಗೆ ಗಡೀಪಾರು ಮಾಡಿದ). ಟಿಪ್ಪು ಸರಕಾರದಲ್ಲಿ ಕೆಲಸ ಮಾಡುತ್ತಿದ್ದವರು, ಸೈನಿಕರಾಗಿದ್ದವರು ಮತ್ತು ಆಹಾರ ಪದಾರ್ಥ, ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡುವವರು – ಹೀಗೆ ಏನಾದರೊಂದು ಸಂಬಂಧ, ವ್ಯವಹಾರ, ನಂಟು ಹೊಂದಿದ್ದ ಕ್ರೈಸ್ತರ ಕುಟುಂಬಗಳನ್ನು ಬಂಧಿಸದೇ ವಿನಾಯಿತಿ ನೀಡಲಾಗಿತ್ತು. ಹಾಗಾಗಿ ಅಲ್ಪ ಪ್ರಮಾಣದಲ್ಲಿಯಾದರೂ ಕೆಲ ಕ್ರೈಸ್ತರು ಭೀಕರ ಕ್ರೌರ್ಯದಿಂದ ಬಚಾವಾದರು.
ಕೆಲವರು, ಪ್ರತ್ಯೇಕವಾಗಿ ಮಕ್ಕಳು, ಹಿಂದೂಗಳ ಮನೆಗಳಲ್ಲಿ ಹಿಂದೂಗಳಂತೆ ಮಾರ್ಪಟ್ಟು ಉಳಿದುಕೊಂಡರು. ಕೆಲವರು ಮುಸ್ಲಿಮರ ವೇಷ ಧರಿಸಿ ತಪ್ಪಿಸಿಕೊಂಡಿದ್ದೂ ಇದೆ.
ಟಿಪ್ಪು ಸುಲ್ತಾನನ ಕರಾಳತನಕ್ಕೆ ಇಲ್ಲಿನ 27 ಚರ್ಚುಗಳು ಕೆಂಗಣ್ಣಿಗೆ ಗುರಿಯಾಗಿದ್ದವು. ಆದರೆ ಹೊಸಬೆಟ್ಟುವಿನ ಒಂದು ಚರ್ಚು ಸುರಕ್ಷಿತವಾಗಿ ಉಳಿದು ಉಳಿದೆಲ್ಲಾ ಚರ್ಚುಗಳನ್ನು ಧರಾಶಾಹಿ ಮಾಡಲಾಗಿತ್ತು. ಮೂಡಬಿದರೆಯ ಜೈನರಾದ ಚೌಟ ಅರಸರಿಗೆ ತನ್ನ ಆಳ್ವಿಯಲ್ಲಿದ್ದ ಕ್ರೈಸ್ತರ ಮೇಲೆ ತುಂಬಾ ಪ್ರೀತಿ ಆದರವಿತ್ತು. ಯಾಕೆಂದರೆ ಕ್ರೈಸ್ತರು ಪ್ರಾಮಾಣಿಕರೂ, ನಿಷ್ಠಾವಂತರೂ, ಕುಶಲ ಕರ್ಮಿಗಳೂ, ಅತ್ಯುತ್ತಮ ಕೃಷಿಕರೂ, ಮೈ ಬಗ್ಗಿ ದುಡಿಯುವವರೂ ಆಗಿದ್ದರು. ಅವರಿಂದ ಒಳ್ಳೆಯ ಬೆಳೆ, ಉತ್ಪನ್ನಗಳು, ಕಂದಾಯ ದೊರಕುತ್ತಿತ್ತು. ಆದುದರಿಂದ ಟಿಪ್ಪುವಿನ ಮನವೊಲಿಸಿ ಆತ ತನ್ನ ಪ್ರಾಂತ್ಯದಲ್ಲಿದ್ದ ಏಕೈಕ ಚರ್ಚನ್ನು ಉಳಿಸಲು ಶ್ರಮಪಟ್ಟಿದ್ದರಿಂದ ಹೊಸಬೆಟ್ಟುವಿನ ಚರ್ಚಿಗೆ ಯಾವುದೇ ಹಾನಿಯಾಗಿರಲಿಲ್ಲ. ತನಗೆ ಕಪ್ಪ ಕಂದಾಯ ಸಲ್ಲಿಸುವ ಆ ಆರಸನ ಮನವಿಯನ್ನು ಅಂಗೀಕರಿಸುವುದೂ ಸಹ ಟಿಪ್ಪುವಿಗೆ ಅನಿವಾರ್ಯವಾಗಿತ್ತು. ಆ ಕಾರಣದಿಂದ ಹೊಸಬೆಟ್ಟುವಿನ ಚರ್ಚ್ ಟಿಪ್ಪುವಿನ ಆಕ್ರಮಣಕ್ಕೆ ಒಳಗಾಗಲಿಲ್ಲ. ಆದರೆ ಕ್ರೈಸ್ತರನ್ನು ಅಲ್ಲಿಂದಲೂ ಬಂಧಿಸಲಾಗಿತ್ತು.
ಮಂಗಳೂರಿನ ಮಿಲಾಗ್ರಿಸ್ ಚರ್ಚನ್ನು ಕೆಡವಿ ಅದರ ಕಲ್ಲು, ಮರಮಟ್ಟುಗಳನ್ನು ಬಳಸಿ ಬಾವುಟಗುಡ್ಡೆಯಲ್ಲಿನ ಮಸೀದಿಯನ್ನು ಸ್ಥಾಪಿಸಲಾಗಿತ್ತು. ಕಿನ್ನಿಗೋಳಿ ಬಳಿಯ ಕಿರೆಂ ಚರ್ಚ್‍ನ ಮಾಡು, ಹಂಚುಗಳನ್ನು ತೆಗೆದ ನಂತರ ಅಲ್ಲಿನ ಬಂಟ ಮನೆತನಗಳವರು ತಮ್ಮ ಧೈರ್ಯ, ಶೌರ್ಯ, ಚಾಕಚಕ್ಯತೆಯಿಂದ ಕಟ್ಟಡ ಉರುಳಿಸದಂತೆ ತಡೆದಿದ್ದರು. ಅದಕ್ಕೆ ಕೃತಜ್ಞತೆಯಾಗಿ ಪರಂಪರಾಗತವಾಗಿ ಆ ಮನೆತನಗಳವರನ್ನು ಕಿರೆಂ ಚರ್ಚಿನ ವಾರ್ಷಿಕ ಹಬ್ಬದಂದು ಇಂದಿಗೂ ಗೌರವಿಸಲಾಗುತ್ತದೆ.
ಕಿರೆಂ ಚರ್ಚಿನ ಮಾಡಿನ ಸಾಮಾಗ್ರಿಗಳನ್ನು ಮೂಲ್ಕಿಯಲ್ಲಿನ ಶ್ರೀಮಂತ ಮುಸ್ಲಿಮನೊಬ್ಬನ ಬಂಗಲೆ ನಿರ್ಮಿಸಲು ಬಳಸಲಾಯಿತು.
ಅಂತೂ 1799ರಲ್ಲಿ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸೋತು ಹತನಾದ ನಂತರ ಸುಮಾರು ಹತ್ತು ಸಾವಿರದಷ್ಟು ಸಂಖ್ಯೆಯಲ್ಲಿ ಬದುಕುಳಿದಿದ್ದ ಕೆನರಾ ಕ್ರೈಸ್ತರು ಶ್ರೀರಂಗಪಟ್ಟಣದಿಂದ ಸ್ವಾತಂತ್ರ್ಯ ಪಡೆದುಕೊಂಡು 15 ವರ್ಷಗಳ ಕರಾಳ ಜೀವನದಿಂದ ಮುಕ್ತಿ ಪಡೆದು ಕರಾವಳಿಗೆ ಮರಳಿದರು. ಇಲ್ಲಿಗೆ ಬಂದು ನೋಡಿದರೆ ಅವರ ಜಮೀನು, ಆಸ್ತಿಯನ್ನೆಲ್ಲಾ ಮುಸ್ಲಿಮ್ ಮತ್ತು ಇತರ ಜಾತಿಯವರು ಸ್ವಾಧೀನಪಡಿಸಿಕೊಂಡಿದ್ದರು. ಹೆಚ್ಚಿನದನ್ನು ಟಿಪ್ಪುವಿನ ಆಜ್ಷೆ ಮೇರೆಗೆ ಕಬಳಿಸಲಾಗಿತ್ತು. ಬ್ರಿಟಿಷ್ ಸರಕಾರದ ಜಿಲ್ಲಾಧಿಕಾರಿಯು ಸಮಿತಿ ರಚನೆ ಮಾಡಿ ಜಮೀನು ಕಳೆದುಕೊಂಡವರ ವಿವರ ಸಂಗ್ರಹಿಸಿ ಬಹುತೇಕರಿಗೆ ಮರಳಿ ತಮ್ಮ ಆಸ್ತಿಪಾಸ್ತಿ ದೊರಕುವಂತೆ ಕ್ರಮ ಕೈಗೊಂಡರು.
ಧರೆಗುರುಳಿದ್ದ ತಮ್ಮ ನೆಚ್ಚಿನ ಪ್ರಾರ್ಥನಾ ಮಂದಿರಗಳನ್ನು ಆಯಾ ಸ್ಥಳಗಳ ಕ್ರೈಸ್ತರು ಕ್ರಮೇಣ ಮರು ಸ್ಥಾಪಿಸಿದರು. ಹೀಗೆ ಮಾನವ ಕುಲದಲ್ಲಿ ಕಪ್ಪು ಚುಕ್ಕೆಯಾಗಿರುವ ಟಿಪ್ಪು ಸುಲ್ತಾನನ ಕರಾಳ ಶಾಸನಕ್ಕೆ ಬಲಿಯಾದ ಅಧ್ಯಾಯದಿಂದ ಕೊಂಕಣ ಪ್ರದೇಶದ ಕ್ರೈಸ್ತರು ಕ್ರಮೇಣ ಹೊರ ಬಂದರು.
ಮುಗ್ಧ ಜನರನ್ನು ಅನ್ಯಾಯವಾಗಿ ಹಿಂಸಿಸಿ, ಕೊಂದು ಹತ್ಯಾಕಾಂಡ ನಡೆಸಿದ ಟಿಪ್ಪು ಸುಲ್ತಾನನು ಜೀವಂತವಾಗಿರುವಾಗ ಹೇಗೂ ಶಾಂತಿ ಸಮಾಧಾನದಿಂದ ಬದುಕಿರಲಿಲ್ಲ. ಸತ್ತ ನಂತರ ಇಷ್ಟೊಂದು ವರ್ಷಗಳು ಸಂದರೂ ಆತನ ಪಾಪ ಆತನ ಆತ್ಮವನ್ನೂ ಬಿಡದೆ ಕಾಡುತ್ತಿದೆ. ಮಾಡಿದ್ದುಣ್ಣೊ ಮಹರಾಯ ಎನ್ನುವುದು ಇದಕ್ಕೇ ಅಲ್ಲವೆ!
Send Feedback to: budkuloepaper@gmail.com
Like us at: www.facebook.com/budkulo.epaper
Join our Budkulo Club in Clubhouse
Also Read: ⇓
Nice articles