Latest News

ಜನಪ್ರತಿನಿಧಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ: ಡಾ. ನಿರಂಜನ್ ರೈ

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : October 6, 2015 at 7:01 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಶತಮಾನಗಳಷ್ಟು ಕಾಲ ಫರಂಗಿಗಳಿಂದ ಆಳ್ವಿಕೆಗೊಳಪಟ್ಟು ಲಕ್ಷಾಂತರ ಜನರ ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ಪಡೆದು, ಪ್ರಜಾಪ್ರಭುತ್ವದ ಆಡಳಿತಕ್ಕೊಳಪಟ್ಟ ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ಇದೆಯಾ ಎಂಬ ಭೀತಿ ನಮ್ಮೆಲ್ಲರನ್ನು ಆಗಾಗ ಕಾಡುವುದುಂಟು. ಆ ಭೀತಿ ನಿಜಕ್ಕೂ ವಾಸ್ತವವೆಂಬುದುರ ಬೃಹತ್ ದೃಷ್ಟಾಂತ ನಮ್ಮೆಲ್ಲರ ಮುಂದೆ ನಿಂತಿದೆ. ನೇತ್ರಾವತಿ ನದಿಯ ಮೂಲಕ್ಕೆ ಕನ್ನ ಹಾಕಿ, ಎತ್ತಿನಹೊಳೆಯಿಂದ ನೀರನ್ನು ಎತ್ತಿ ಸಾಗಿಸುವ ರಾಕ್ಷಸೀ ಯೋಜನೆಯು ಕೇವಲ ದಕ್ಷಿಣ ಕನ್ನಡವನ್ನಷ್ಟೇ ಅಲ್ಲ ಮುಂದಿನ ದಶಕಗಳಲ್ಲಿ ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳನ್ನೆಲ್ಲಾ ಬರಡು ಮಾಡುವ ಆತ್ಮಹತ್ಯಾಕಾರಿ ಕಾಮಗಾರಿಯಾಗಿದೆ. ಇದರ ಬಗ್ಗೆ ಕರಾವಳಿಯಲ್ಲೀಗ ಜಾಗೃತಿ ಮೂಡಿದ್ದು, ಮುಂಚೂಣಿಯಲ್ಲಿ ಹೋರಾಡುತ್ತಿರುವ ಸಂಘಟನೆಗಳ ಮುಖಂಡರು ಡಾ. ನಿರಂಜನ್ ರೈ ಮತ್ತು ದಿನೇಶ್ ಹೊಳ್ಳ. ಕೋಮು ವಿಷಯಗಳನ್ನು ಬಿಟ್ಟು ಬೇರೆಲ್ಲದಕ್ಕೂ ಸದಾ ನಿರ್ಲಿಪ್ತವಾಗಿರುತ್ತಿದ್ದ ದಕ್ಷಿಣ ಕನ್ನಡದ ಜನರನ್ನು ಬಡಿದೆಬ್ಬಿಸಿ, ಸೆಪ್ಟೆಂಬರ್ 15ರಂದು ಉಪ್ಪಿನಂಗಡಿಗೆ ಸೆಳೆದು ತಂದ ಕೀರ್ತಿ ಇವರಿಬ್ಬರದು. ಅಂದು ನಡೆದ ಪ್ರತಿಭಟನೆ ಜನರ ಆಕ್ರೋಶದ ಪ್ರತೀಕವಾಗಿತ್ತು. ಸೆಪ್ಟೆಂಬರ್ 25ರಂದು ಬೆಳ್ತಂಗಡಿಯಲ್ಲಿ ನಗರ ಪಂಚಾಯತ್‍ನ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾನಾಸಕ್ತರ ಸಭೆಗೆ ಬಂದಿದ್ದ ಇವರಿಬ್ಬರನ್ನೂ ಭೇಟಿಯಾಗಿ ಯೋಜನೆಯ ಬಗೆಗಿನ ಮಾಹಿತಿ, ಹೋರಾಟದ ವಿಚಾರ, ಮುಂದಿನ ನಡೆಗಳ ಬಗ್ಗೆ ಸಮಗ್ರವಾಗಿ ‘ಬುಡ್ಕುಲೊ’ ಪ್ರಶ್ನಿಸಿತು. (ಸಹಕಾರ ನೀಡಿದವರು: ಪ್ರಶಾಂತ್ ಡಿಕೋಸ್ತ ಉಪ್ಪಿನಂಗಡಿ).

Budkulo_Nethravathi_Interview_1 (9)

ಬುಡ್ಕುಲೊ: ಡಾ. ನಿರಂಜನ್ ರೈ ಮತ್ತು ದಿನೇಶ್ ಹೊಳ್ಳ ಇಬ್ಬರೂ ಈಗ ಪ್ರಚಾರದಲ್ಲಿದ್ದೀರಿ. ತುಳುನಾಡಿನ ಜನರು, ದಕ್ಷಿಣ ಕನ್ನಡಿಗರು ಎಲ್ಲೆಲ್ಲಿದ್ದಾರೋ ಅಲ್ಲೆಲ್ಲಾ ನೀವು ಪ್ರಸಿದ್ಧಿ ಪಡೆದಿದ್ದೀರಿ. ನೇತ್ರಾವತಿ ತಿರುವು ಯೋಜನೆಯ ವಿರುದ್ಧ ನೀವು ಬಹಳಷ್ಟು ಹೋರಾಟ ನಡೆಸುತ್ತಿದ್ದೀರಿ. ಮೊನ್ನೆ ಸಪ್ಟೆಂಬರ್ 15ಕ್ಕೆ ಉಪ್ಪಿನಂಗಡಿಯಲ್ಲಿ ಹೆದ್ದಾರಿ ತಡೆ ನಡೆಸಿದಿರಿ. ಹೋರಾಟಕ್ಕೆ ಸ್ಪಷ್ಟ ರೂಪುರೇಷೆ ಕೊಟ್ಟಿರಿ. ಬಹಳ ದೊಡ್ಡ ಸಂಖ್ಯೆಯ ಜನರು ರಸ್ತೆಗಿಳಿದು ಪ್ರತಿಭಟಿಸಿದರು. ಅದರ ಪರಿಣಾಮ, ಫಲಿತಾಂಶ, ಪ್ರಯೋಜನಗಳೇನು?

ಡಾ. ನಿರಂಜನ್ ರೈ: ಪ್ರಯೋಜನವೆಂದರೆ, ಮೊತ್ತಮೊದಲನೆಯದಾಗಿ, ಜನಪ್ರತಿನಿಧಿಗಳು ಇಷ್ಟರವರೆಗೆ ಈ ಹೋರಾಟ ಕೇವಲ ಹತ್ತೈವತ್ತು ಜನರು ಮಾತ್ರ ಅಲ್ಲಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿ ಬೇರೆಯವರ ದಾರಿ ತಪ್ಪಿಸುತ್ತಾ ಬಂದಿದ್ದರು. ಅಂದ್ರೆ, ಇದರಲ್ಲಿ ಜನರಿಗೆ ಆಸಕ್ತಿ ಇಲ್ಲ, ಬರೀ ಕೆಲವೇ ಕೆಲವು ಹೋರಾಟಗರರು, ಪರಿಸರಾಸಕ್ತರು ಮಾತ್ರ ನಡೆಸುತ್ತಿರುವ ವಿರೋಧ ಎಂದೇ ಅವರು ಹೇಳಿಕೊಳ್ಳುತ್ತಾ ಬಂದಿದ್ದರು. ಅವರು ಅಸೆಂಬ್ಲಿ ಅಥವಾ ಪಾರ್ಲಿಮೆಂಟಿನಲ್ಲಿ ಈ ಯೋಜನೆಗೆ ಇಲ್ಲಿ ವಿರೋಧವಿದೆ ಎಂದು ಹೇಳಲು, ಸರಕಾರಕ್ಕೆ ತಿಳಿಸಲು ಹಿಂಜರಿಯುತ್ತಿದ್ದರು. ಯಾಕೆಂದರೆ, ಈ ಯೋಜನೆ ಜಾರಿಗೊಳಿಸಲು ಅಲ್ಲಿನವರಿಗಿಂತ ಇಲ್ಲಿನ ನಮ್ಮ ಜನಪ್ರತಿನಿಧಿಗಳೇ ಹೆಚ್ಚು ಆಸ್ಥೆ ವಹಿಸಿದ್ದಾರೆ.

ಬುಡ್ಕುಲೊ: ಅಂದ್ರೆ ಇವರಿಗೇ ಹೆಚ್ಚು ಆಸಕ್ತಿ ಇದೆ?

ಡಾ. ನಿರಂಜನ್ ರೈ: ಹೌದು. ಬೇರೆ ಬೇರೆ ಕಾರಣಗಳಿಂದ. ಆದುದರಿಂದ ಈ ಹೋರಾಟದಿಂದ ಈ ಯೋಜನೆಗಿರುವ ವಿರೋಧ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ, ಪರಿಣಾಮ ಬೀರಿದೆ. ಆ ಕಾರಣದಿಂದ ಜನಪ್ರತಿನಿಧಿಗಳ ಮೇಲೆ ಒತ್ತಡ ಜಾಸ್ತಿಯಾಗಿದೆ. ದ.ಕ. ಜಿಲ್ಲೆಯ ಮೂಲೆ ಮೂಲೆಗಳಿಂದ ಹಾಗೂ ಉಡುಪಿಯಿಂದಲೂ ಜನರು ಬಂದು ಸೇರಿ ಬೀದಿಗಿಳಿದು ಹೋರಾಟಗೈದಿದ್ದರಿಂದ ಜನಸಾಮಾನ್ಯರೂ ಈ ಯೋಜನೆಗೆ ವಿರೋಧವಿರುವುದರ ಸಂದೇಶ ಸ್ಪಷ್ಟವಾಗಿ ಹೊರಹೊಮ್ಮಿದೆ. ಆದ ಕಾರಣ ಜನಪ್ರತಿನಿಧಿಗಳು, ಜನರ ವಿರೋಧವನ್ನು ಪರಿಗಣಿಸಲೇಬೇಕಾಗಿದೆ. ಜನರಿಗೆ ಈ ಹೋರಾಟದಲ್ಲಿ ಆಸಕ್ತಿಯಿಲ್ಲವೆನ್ನುವ ಅವರ ಅನಿಸಿಕೆ ಸುಳ್ಳೆಂಬುದು ಸಾಬೀತಾಗಿದೆ.

Budkulo_Nethravathi_Interview_1 (1)

ಬುಡ್ಕುಲೊ: ಅಂದರೆ, ಅವರ ಮೇಲೆ ಒತ್ತಡ ಬಿದ್ದು, ಅವರು ಏನಾದ್ರೂ ಮಾಡುತ್ತಾರೆ, ಆಗುತ್ತದೆ ಎಂಬ ಸಾಧ್ಯತೆ…?

ಡಾ. ನಿರಂಜನ್ ರೈ: ಹೌದು. ಆಗ್ಲೇಬೇಕಾಗುತ್ತದೆ. ಅವರು ಮಾತಾಡ್ಲೇಬೇಕಾಗ್ತದೆ. ಜನರ ವಿರೋಧವಿರುವಾಗ ಅವರು ಮಾತನಾಡದಿದ್ದರೆ ಅವರು ಜನರಿಗೆ ಅನ್ಯಾಯ, ಮೋಸ ಮಾಡುತ್ತಾರೆಂದೇ ಅರ್ಥ.

ಬುಡ್ಕುಲೊ: ಆದರೆ, ನಮ್ಮ ಜನಪ್ರತಿನಿಧಿಗಳು, ಇಲ್ಲಿನ ಜನರಿಗೆ ಉತ್ತರದಾಯಿತ್ವವಿರುವವರೂ ಸಹ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುತ್ತಿದ್ದಾರೆ. ಈ ಪ್ರತಿಭಟನೆಯ ನಂತರವೂ ಸಹ ಇಲ್ಲಿನ ಜನಪ್ರತಿನಿಧಿಗಳು ಅದೇ ನಿರಾಸಕ್ತಿಯನ್ನು ಮುಂದುವರಿಸಿದ್ದಾರೆ. ಬಾಯಿ ತೆರೆದವರೂ ಸಹ, ತಮಗೇನೂ ಗೊತ್ತಿಲ್ಲ, ಮಾಹಿತಿ ಇಲ್ಲ… ಈ ರೀತಿ ಮಾತನಾಡುತ್ತಿದ್ದಾರಲ್ಲಾ…? ತಮಗೂ ಈ ಯೋಜನೆಗೂ ಸಂಬಂಧವೇ ಇಲ್ಲವೆಂಬಂತೆ ಹೇಳಿಕೆ ಕೊಡುತ್ತಿದ್ದಾರೆ!

ಡಾ. ನಿರಂಜನ್ ರೈ: ಹೌದು. ಅವರು ತಮಗೆ ಅದೆಲ್ಲಾ ಸಂಬಂಧಪಟ್ಟದ್ದೇ ಅಲ್ಲವೆಂದು ಹೇಳುತ್ತಿದ್ದಾರೆ. ಒಂದನೆಯದೆಂದರೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ, ಜಿಲ್ಲೆಗೆ ಸಂಬಂಧಪಟ್ಟ, ಜಿಲ್ಲೆಯ ಜನರಿಗೆ ಆತಂಕ ಹುಟ್ಟಿಸುವ ಇಷ್ಟು ದೊಡ್ಡ ಯೋಜನೆಯೊಂದು ಬೃಹತ್ ಪ್ರಮಾಣದಲ್ಲಿ ಕಾರ್ಯಗತ ಆಗುತ್ತಿರುವಾಗ, ಇವರು ತಮಗೇನೂ ಗೊತ್ತಿಲ್ಲ ಎನ್ನುವುದು ದೊಡ್ಡ ಮೂರ್ಖತನ. ಇದನ್ನವರು ತಿಳಿದುಕೊಂಡಿದ್ದೂ ಹೇಳುತ್ತಿದ್ದಾರೋ, ಗೊತ್ತಿಲ್ಲದಂತೆ ನಟಿಸುತ್ತಿದ್ದಾರೋ ಎಂಬುದನ್ನು ಜನರು ಅರಿತುಕೊಳ್ಳಬೇಕು.

ತಮಗೆ ತಾಂತ್ರಿಕ ಸಂಗತಿಗಳು ಗೊತ್ತಿಲ್ಲ, ತಾಂತ್ರಿಕ ನಿಪುಣರಷ್ಟೇ ಇದರ ಬಗ್ಗೆ ಮಾತಾಡಬೇಕು ಎನ್ನುವುದು ಜಿಲ್ಲೆಯ ಜನರ ಬಗ್ಗೆ ಇವರ ಭಾವನೆ ಹೇಗಿದೆ ಮತ್ತು ಜನರ ಹಿತರಕ್ಷಣೆಯ ಬಗೆಗಿನ ಅವರ ಕಾಳಜಿ ಎಷ್ಟು ಶೂನ್ಯವಾಗಿದೆ ಎನ್ನುವುದನ್ನು ತೋರ್ಪಡಿಸುತ್ತದೆ.

ಎರಡನೆಯದಾಗಿ, ಈ ಜಿಲ್ಲೆಯಲ್ಲಿ ಚುನಾವಣೆಗಳು ವಿಷಯಾಧಾರಿತವಾಗಿ ನಡೆಯುವುದಿಲ್ಲವೆನ್ನುವ ಸ್ಪಷ್ಟ ಅರಿವು ಅವರಿಗಿದೆ. ಅವರಿಗೆ ಬರಬೇಕಾದ ಮತಗಳು ಹೇಗೂ ಬರುತ್ತವೆನ್ನುವುದು ಅವರಿಗೆ ತಿಳಿದಿದೆ. ಇಲ್ಲಿನ ಚುನಾವಣೆಗಳು ವಿಷಯಾಧಾರಿತವಾಗಿ, ಅಂದರೆ ಜನರ ನೀರಿನ ಅವಶ್ಯಕತೆಯಾಗಲೀ, ವಿದ್ಯುತ್ ಮತ್ತಿತರ ಮುಖ್ಯ ಮೂಲ ಸೌಕರ್ಯಗಳ ಬಗೆಗಿನ ವಿಷಯಗಳ ಮೇಲೆ ನಡೆಯುವುದಿಲ್ಲ ಬದಲಾಗಿ ಕೋಮು ಮುಂತಾದ ವಿಚಾರಗಳ ಮೇಲೆ ನಡೆಯುತ್ತದೆ ಎಂಬುದು ಅವರಿಗೆ ಮನದಟ್ಟಾಗಿದೆ. ಹಾಗಾಗಿ ಈ ರೀತಿ ಲೂಸ್ ಟಾಕ್ಸ್ (ಬೇಜವಾಬ್ದಾರಿಯುತ ಹೇಳಿಕೆ) ಮಾಡುತ್ತಿದ್ದಾರೆ.

Budkulo_Nethravathi_Interview_1 (2)

ಬುಡ್ಕುಲೊ: ಹಾಗಾದ್ರೆ ನಿಮ್ಮ ಮುಂದಿನ ದಾರಿ ಏನು? ಮೊನ್ನೆಯಷ್ಟೇ (ಸೆಪ್ಟೆಂಬರ್ 19) ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಕರೆದು ಜನರ ಪ್ರಶ್ನೆಗಳಿಗೆ, ಸಂಶಯಗಳಿಗೆ ಉತ್ತರಿಸುವ ಸಭೆಯನ್ನೇರ್ಪಡಿಸಿದ್ದಿರಿ. ಅದಕ್ಕಾಗಿ ನೀವು ಮೊದಲೇ ತಯಾರಿ ನಡೆಸಿದ್ದಿರಿ. ಆದ್ರೆ ಒಮ್ಮಿಂದೊಮ್ಮೆಲೇ ಅದೇ ದಿನ, ಒಂದು ಗಂಟೆ ಮುಂಚಿತವಾಗಿ ಜಿಲ್ಲಾಡಳಿತ ಅವರನ್ನೆಲ್ಲಾ ಕರೆದು ಅದೇ ವಿಷಯದಲ್ಲಿ ಸಭೆ ನಡೆಸಿತಲ್ಲಾ?

ಡಾ. ನಿರಂಜನ್ ರೈ: ಅದರಿಂದ ಸ್ಪಷ್ಟವಾಗುವುದೇನೆಂದರೆ ಜನರನ್ನು ಫೇಸ್ ಮಾಡಲು ಅವರು ತಯಾರಿಲ್ಲ.

ಬುಡ್ಕುಲೊ: ಅಂದ್ರೆ ಉದ್ದೇಶಪೂರ್ವಕವಾಗಿಯೇ ಅವರು ಆ ಸಭೆ ಕರೆದಿದ್ದು? ನಿಮ್ಮನ್ನು ಬಗ್ಗಿಸುವುದಕ್ಕಾಗಿ, ಬಲ ಮುರಿಯುವುದಕ್ಕಾಗಿಯೇ ಈ ಪ್ರಯತ್ನವೇ?

ಡಾ. ನಿರಂಜನ್ ರೈ: ಖಂಡಿತಾ. ನಮ್ಮ ತಂಡದವರು ‘ಜನಪ್ರತಿನಿಧಿಗಳೇ ಉತ್ತರ ನೀಡಿ’ ಎಂಬ ಕಾರ್ಯಕ್ರಮವನ್ನು 4 ಗಂಟೆಗೆ ಏರ್ಪಡಿಸಿದ್ದೆವು. ಅದಕ್ಕಿಂತ ಒಂದು ಗಂಟೆ ಮುಂಚಿತವಾಗಿ, 3 ಗಂಟೆಗೆ ಆ ಸಭೆಯನ್ನು ಅವರು ಏರ್ಪಡಿಸಿದ್ದಾರೆ. ಅದು ಕೇವಲ 24 ಗಂಟೆಗಳ ಮುಂಚೆಯಷ್ಟೇ ನಿಗದಿಯಾದ ಸಭೆ. ನಮ್ಮ ಸಭೆಗೆ ನಾವೆಲ್ಲರನ್ನು ಕರೆದಿದ್ದೆವು, ಅವರಿಗೆಲ್ಲಾ ಆಮಂತ್ರಿಸಲಾಗಿದೆ. ಅವರಿಗೆಲ್ಲಾ ಈ ಸಭೆ ಇದೆಯೆಂದು ಗೊತ್ತಿತ್ತು. ಆದರೆ ಜಿಲ್ಲಾಡಳಿತ ಕೊನೆಯ ಗಳಿಗೆಯಲ್ಲಿ ಇನ್ನೊಂದು ಸಭೆಯನ್ನು ಕರೆಯುವಾಗ ಅವರೆಲ್ಲಾ ಮುಂಚಿತವಾಗಿ ನಿಗದಿಯಾದ ಸಭೆಯಿರುವುದನ್ನು ಹೇಳಿರಬೇಕಿತ್ತು. ಅವರು ನಮ್ಮೊಂದಿಗೆ, ಜನರಿಗೋಸ್ಕರ ಇರುವುದಾಗಿದ್ದರೆ ಅದನ್ನು ಹೇಳಿ, ಆ ಸಭೆಯ ಬದಲು ಇಲ್ಲಿಗೆ ಬರುತ್ತಿದ್ದರು. ನೋಡಿ, ಇಲ್ಲಿಯೇ ತಿಳಿಯುತ್ತದೆ, ಅವರೆಲ್ಲಾ ಜನರ ಪರವಾಗಿಲ್ಲ ಎನ್ನುವುದು ಸ್ಪಷ್ಟ. ಇದು ಅದಕ್ಕೆ ಸಾಕ್ಷಿ.

Budkulo_Nethravathi_Interview_1 (8)

ಬುಡ್ಕುಲೊ: ಬೆಂಗಳೂರಿನಲ್ಲಿ ಒಂದು ಸಭೆ ಕರೆಯಲಾಗಿದೆ ಎಂಬ ಮಾಹಿತಿ ಇದೆಯಲ್ಲಾ?

ಡಾ. ನಿರಂಜನ್ ರೈ: ಜಿಲ್ಲಾಡಳಿತದ ಆ ಸಭೆ ವಿಫಲವಾಗಿ, ಅವರಿಗೆ ಸಂಪೂರ್ಣ ಮುಖಭಂಗವಾಗಿದೆ. ಆದ ಕಾರಣ ಬೆಂಗಳೂರಿನಲ್ಲಿ ಇನ್ನೊಂದು ಸಭೆ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಯವರು ಘೋಷಿಸಿದರು. ಬೆಂಗಳೂರಿನ ಸಭೆಗೆ ನಮ್ಮ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬೇಕೆಂಬ ಆಹ್ವಾನ ಬಂದಿದೆ.

ಬುಡ್ಕುಲೊ: ಆ ಸಭೆಗೆ ನೀವು ಹೋಗುತ್ತೀರಾ? ಏನು ನಿರ್ಣಯಿಸಿದ್ದೀರಿ?

ಡಾ. ನಿರಂಜನ್ ರೈ: ನಮ್ಮ ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ಸಭೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯ ಕೈಗೊಂಡಿದ್ದೇವೆ. ಯಾಕೆಂದರೆ, ಜಿಲ್ಲೆಗೆ ಸಂಬಂಧಪಟ್ಟ ಚರ್ಚೆಯನ್ನು ಈ ಜಿಲ್ಲೆಯಲ್ಲಿಯೇ ಕೈಗೊಳ್ಳಬೇಕು. ಎರಡನೆಯದಾಗಿ, ಮೊನ್ನೆಯ ಸಭೆಯಲ್ಲಿ ಯೋಜನೆಯ ಬಗೆಗೆ ಕೇಳಿದ ಯಾವುದೇ ಸ್ಪಷ್ಟೀಕರಣಗಳಿಗೆ ಉತ್ತರಿಸಲು ಜಿಲ್ಲೆಯ ಜನಪ್ರತಿನಿಧಿಗಳು ವಿಫಲವಾಗಿಯೂ ಸಹ, ಯೋಜನೆಯನ್ನು ನಿಲ್ಲಿಸಲು ಆಗುವುದಿಲ್ಲವೆನ್ನುವ ಹೇಳಿಕೆ ಕೊಟ್ಟಿದ್ದಾರೆ. ಅಂದರೆ ಮೊದಲೇ ನೀವು ಯೋಜನೆಯನ್ನು ನಿಲ್ಲಿಸುವುದಿಲ್ಲ ಎನ್ನುವ ನಿರ್ಧಾರ ಕೈಗೊಂಡ ನಂತರ ಯಾವ ಉದ್ದೇಶಕ್ಕಾಗಿ ಈ ಮೀಟಿಂಗ್ ಕರೆಯುತ್ತಿದ್ದೀರಿ? ಎಂಬುದು ನಮ್ಮ ಪ್ರಶ್ನೆ. ಅದಕ್ಕೆ ಉತ್ತರವನ್ನು ಅವರು ಬಹಿರಂಗಪಡಿಸಬೇಕು.

ಶಿರಾಡಿ ಘಾಟಿ ನವೀಕರಣ ಎಂಬ ಮೋಸದ ಜಾಲ

ಬುಡ್ಕುಲೊ: ನೀರಾವರಿ ಇಲಾಖೆಯು ಪ್ರಕಟಣೆ ಹೊರಡಿಸಿ ಈ ಯೋಜನೆಯನ್ನು ಸಮರ್ಪಕವಾಗಿ, ಎಲ್ಲಾ ಸರಿಯಾಗಿ ಕೈಗೊಳ್ಳಲಾಗಿದೆ ಎನ್ನುತ್ತಾರಲ್ಲಾ?

ಡಾ. ನಿರಂಜನ್ ರೈ: ಎಲ್ಲಿ ಸರಿಯಾಗಿ ಆಗಿದೆ? ಯೋಜನೆ ಆರಂಭಗೊಳಿಸುವ ಮೊದಲು ಪಬ್ಲಿಕ್ ಹಿಯರಿಂಗ್ ಮಾಡ್ಬೇಕಿತ್ತು, ಅದನ್ನು ಮಾಡಿಲ್ಲ. ಜನರಿಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಯಾಕೆ? ಕಳೆದ ವರ್ಷ ನಮ್ಮ ಹೋರಾಟ ನಡೆಯುತ್ತಿರುವಾಗ ಓಸ್ಕರ್ ಫೆರ್ನಾಂಡಿಸ್ ಅವರು ಮಧ್ಯಸ್ತಿಕೆಗೆ ಬಂದು, ಮುಖ್ಯಮಂತ್ರಿಗಳ ಜೊತೆ ನಮ್ಮನ್ನೆಲ್ಲಾ ಸೇರಿಸಿ ಒಂದು ಸಭೆ ಆಯೋಜಿಸುತ್ತೇನೆ ಎಂದು ಹೇಳಿ ನಮ್ಮೆಲ್ಲರ ವಿವರ ತೆಗೆದುಕೊಂಡು ಹೋಗಿದ್ದರು. ಅದರಿಂದಾಗಿ ಈ ಯೋಜನೆ ನಿಲ್ಲಬಹುದೆಂಬ ಭಾವನೆ ಜನರಲ್ಲಿ ಮೂಡಿತ್ತು.

ಆದರೆ, ನಂತರ ಶಿರಾಡಿ ಘಾಟಿಯನ್ನು ರಿಪೇರಿ ಎಂಬ ಕಾರಣ ಹೇಳಿ ಹೆದ್ದಾರಿಯನ್ನು ಮುಚ್ಚಿ ಜನರನ್ನು ಕತ್ತಲೆಯಲ್ಲಿಟ್ಟು ಎತ್ತಿನಹೊಳೆಯ ಸುತ್ತಮುತ್ತಲಿನ ಜಾಗದಲ್ಲಿ ಬೃಹತ್ ಪೈಪ್‍ಗಳನ್ನು ನಿರ್ಮಾಣ ಮಾಡಿ ಕೂಡಿಟ್ಟಿದ್ದಾರೆ. ಅದಕ್ಕೆ ಬೇಕಾದ ವ್ಯವಸ್ಥೆ ಸದ್ದಿಲ್ಲದೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ಜನರನ್ನು ಕತ್ತಲೆಯಲ್ಲಿಟ್ಟು, ಒಂದು ಸಾರ್ವಜನಿಕ ಪ್ರಾಜೆಕ್ಟನ್ನು ಮುಚ್ಚುಮರೆಯಲ್ಲಿ ನಡೆಸುವ, ಕಳ್ಳರಂತೆ ವ್ಯವರಿಸುವ ಅಗತ್ಯವೇನು? ಇದರ ಬಗ್ಗೆ ಸ್ಪಷ್ಟನೆಯನ್ನು ಕೊಡಬೇಕು ಅವರು.

Budkulo_Nethravathi_Interview_1 (7)

ಬುಡ್ಕುಲೊ: ಹಾಗಾದರೆ ಶಿರಾಡಿ ಘಾಟಿಯನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ಕರಾವಳಿ ಜನರನ್ನು ಮೂರ್ಖ ಮಾಡಲಾಗಿದೆ. ಅಲ್ವಾ?

ಡಾ. ನಿರಂಜನ್ ರೈ: ಹೌದು.

ಬುಡ್ಕುಲೊ: ಅಂದರೆ ಶಿರಾಟಿ ಘಾಟಿಯ ನೆಪದಲ್ಲಿ ಹೆದ್ದಾರಿಯನ್ನು ತಿಂಗಳುಗಟ್ಟಲೆ ಮುಚ್ಚಿ ಎತ್ತಿನಹೊಳೆ ಯೋಜನೆಯನ್ನು ಕದ್ದುಮುಚ್ಚಿ ಕಾರ್ಯಗತ ಮಾಡಲಾಗಿದೆ. ಅಂದರೆ ಇದು ಜನರನ್ನು ವಂಚಿಸಿದಂತೆ ಆಯಿತಲ್ವೇ?

ಡಾ. ನಿರಂಜನ್ ರೈ: ಹೌದು. ಇದು ವಂಚನೆ.

ಬುಡ್ಕುಲೊ: ದಿನೇಶ್ ಹೊಳ್ಳರ ಸಹ್ಯಾದ್ರಿ ಸಂಚಯ ಪಂಗಡದವರು ಎತ್ತಿನಹೊಳೆ ಪ್ರದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದರ ವಿಶ್ವರೂಪ ತೋರಿಸದೇ ಇರುತ್ತಿದ್ದರೆ ಜನರಿಗೆ ಏನೇನೂ ತಿಳಿಯುತ್ತಿರಲಿಲ್ಲ ಅಲ್ಲವೆ? ಜನರು ಬರೀ ಶಿರಾಡಿ ಘಾಟಿಯ ಅಭಿವೃದ್ಧಿ ನಡೆಯುತ್ತಿದೆಯೆಂದೇ ನಂಬಿಕೊಂಡು ಮೋಸ ಹೋಗಿದ್ದಾರೆ…!

ಡಾ. ನಿರಂಜನ್ ರೈ: ಹೌದು. ಮಾಧ್ಯಮಗಳಿಗೆ ಆ ಮಾಹಿತಿ ದೊರೆತ ನಂತರವೇ ಎಲ್ಲರಿಗೂ ನೈಜ ಪರಿಸ್ಥಿತಿಯ ಅರಿವಾಗಿದ್ದು. ಸರಕಾರ ಈ ರೀತಿ ಜನರಿಗೋಸ್ಕರ ಮಾಡುವ, ಜನರ ತೆರಿಗೆಯ ಹಣವನ್ನು ವೆಚ್ಚ ಮಾಡುವ ಯೋಜನೆಯ ಸಂಪೂರ್ಣ ವಿವರವನ್ನು ಜನರಿಗೆ ಕೊಡದೇ ಹೋಗಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ, ಮೋಸ.

ಬುಡ್ಕುಲೊ: ನಮ್ಮಲ್ಲಿ ಪ್ರಜಾಪ್ರಭುತ್ವ ನಿಜಕ್ಕೂ ಇದೆಯೇ ಎಂಬ ಸಂಶಯ ಮೂಡುವ ಪ್ರಸಂಗ…!

ಡಾ. ನಿರಂಜನ್ ರೈ: ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ. ಇದರಲ್ಲಿ ಜನಪ್ರತಿನಿಧಿಗಳು, ಅಧಿಕಾರಶಾಹಿ ಮತ್ತು ಕಾಂಟ್ರಾಕ್ಟರ್‍ಗಳ ಲಾಬಿ ಸೇರಿಕೊಂಡಿದೆ.

ಅಧ್ಯಯನವಿಲ್ಲದ, ಪೂರ್ವಾನುಮತಿಯಿಲ್ಲದ ಮೋಸದ ಯೋಜನೆಯಿದು

Budkulo_Nethravathi_Interview_1 (9)

ಬುಡ್ಕುಲೊ: ಈಗ, ಸದ್ದಿಲ್ಲದೆ ಕಾಮಗಾರಿ ಶುರುವಾಗಿದೆ, ಒಂದೂವರೆ ಸಾವಿರ ಕೋಟಿ ರೂಪಾಯಿ ಖರ್ಚಾಗಿ ಹೋಗಿದೆ. ಹೀಗಿರುವಾಗ ಯೋಜನೆಯನ್ನು ನಿಲ್ಲಿಸುತ್ತಾರೆಯೆ? ಆ ಭರವಸೆ ಇದೆಯೆ?

ಡಾ. ನಿರಂಜನ್ ರೈ: ಖಂಡಿತಾ ಭರವಸೆ ಇದೆ. ಎಷ್ಟು ಕೆಲಸ ಆಗಿದೆ ಎನ್ನುವುದು ಮುಖ್ಯ ಅಲ್ಲ. ಅಲ್ಲಿ ನೀರು ಕಟ್ಟಿ ಹಾಕಿ ಎಷ್ಟೋ ಎಕರೆ ಅರಣ್ಯ ಮುಳುಗಿ ಹೋಗುತ್ತದೆ. ಪಶ್ಚಿಮ ಘಟ್ಟದಲ್ಲಿ ಆ ರೀತಿ ಜಲಾಶಯಗಳನ್ನು ಕಟ್ಟಿ ನೀರನ್ನು ಸಂಗ್ರಹಿಸಿದಲ್ಲಿ ಆಗುವ ಪರಿಣಾಮಗಳೇನೆಂಬುದರ ಬಗ್ಗೆ ಅಧ್ಯಯನ ನಡೆಸಿಲ್ಲ. ಅದಕ್ಕೆ ಬೇಕಾದ ಜಿಯೋಲೋಜಿಕಲ್ ರಿಪೋರ್ಟ್ ಸಿಕ್ಕಿಲ್ಲ. ನಾವು ಹೇಳುತ್ತಿರುವುದು ಪರಿಸರದ ಮೇಲಿನ ಪರಿಣಾಮಗಳ ಬಗ್ಗೆ ಮೊದಲು ಅಧ್ಯಯನ ನಡೆಯಬೇಕೆಂದು. ಸಾಮಾಜಿಕ ಪರಿಣಾಮಗಳ ವರದಿ ಇದರ ಆಧಾರದ ಮೇಲೆ ಬರುವಂಥದ್ದು. ನೀರಿನ ಒರತೆ, ಹರಿವು, ಮಳೆ ಇವುಗಳ ಮೇಲಿನ ಪರಿಣಾಮ ಅಧ್ಯಯನ ಆಗಬೇಕು. ಅದಲ್ಲದೆ ಆನೆ ಕಾರಿಡಾರ್ ಹಾಳಾಗುವಾಗ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ. ಕೃಷಿ ಹಾಳಾಗುತ್ತದೆ. ಇದೆಲ್ಲಾ, ಪರಿಸರದ ಮೇಲಿನ ಪರಿಣಾಮದಿಂದ ಸಾಮಾಜಿಕ ಪರಿಸರದ ಮೇಲಾಗುವ ಪರಿಣಾಮಗಳ ಸಂಪೂರ್ಣ ಅಧ್ಯಯನವಾಗಬೇಕು.

ಬುಡ್ಕುಲೊ: ಸರಿ. ಯಾವುದಾದರೊಂದು ಯೋಜನೆಯನ್ನು ನಿಲ್ಲಿಸಬೇಕಾದರೆ ಅದಕ್ಕೆ ಅಥಾರಿಟಿ ಯಾರು? ಜನರ ಹೋರಾಟ, ಪ್ರತಿಭಟನೆ ಒಂದು ದಿನ ಕಾವು ಕಳೆದುಕೊಳ್ಳಬಹುದು…!?

ಡಾ. ನಿರಂಜನ್ ರೈ: ಒಂದನೆಯದೆಂದರೆ, ಸರಕಾರ ಯಾವ ಯೋಜನೆಯನ್ನೂ ಯಾವುದೇ ಹಂತದಲ್ಲಿ ನಿಲ್ಲಿಸಬಹುದು. ದಕ್ಷಿಣ ಕನ್ನಡದ ಜನರು ಒಗ್ಗಟ್ಟಾಗಿ ಇದನ್ನು ನಿಲ್ಲಿಸಬೇಕೆಂದು ಕೇಳಿದ್ರೆ ಕರ್ನಾಟಕ ಸರಕಾರ ಖಂಡಿತಾ ನಿಲ್ಲಿಸಲೇಬೇಕಾಗುತ್ತದೆ. ನಾವು ಕಾನೂನು ಹೋರಾಟ ಕೂಡಾ ಜೊತೆ ಜೊತೆಗೇ ಮಾಡುತ್ತಿದ್ದೇವೆ.

Budkulo_Nethravathi_Interview_1 (10)

ಬುಡ್ಕುಲೊ: ಮೊನ್ನೆ ಸಚಿವ ಯು.ಟಿ. ಖಾದರ್, ಶಾಸಕಾಂಗದಲ್ಲಿ ಈ ಯೋಜನೆ ಮಂಜೂರಾಗಿದೆ, ನಿಲ್ಲಿಸಲಾಗದು ಎಂದಿದ್ದಾರೆ!

ಡಾ. ನಿರಂಜನ್ ರೈ: ಎಷ್ಟೋ ಯೋಜನೆಗಳನ್ನು ಒಂದು ಸರಕಾರ ಆರಂಭಿಸಿದ್ರೆ ಮುಂದಿನ ಸರಕಾರ ನಿಲ್ಲಿಸಿದ ಉದಾಹರಣೆ ನಮ್ಮ ಮುಂದಿವೆ. ಒಂದು ಸರಕಾರ ಆರಂಭಿಸುವ ಯೋಜನೆಯನ್ನು ಮುಂದೆ ಬರುವ ಸರಕಾರ ನಿಲ್ಲಿಸಿದ, ಮುಂದುವರಿಸದೇ ಇರುವ ದಾಖಲೆ ಬಹಳಷ್ಟಿವೆ. ಆವಾಗ ಶಾಸಕಾಂಗ (ವಿಧಾನ ಮಂಡಲ ಅಥವಾ ಸಂಸತ್ತು) ಅಥವ ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರಕ್ಕೆ ಏನು ಬೆಲೆ ಬಂತು? ಅದನ್ನು ಅವರು ಜನರಿಗೆ ಉತ್ತರಿಸಲಿ.

ಇದಕ್ಕೆ ಒಂದು ಉದಾಹರಣೆಯೆಂದರೆ ಕಳೆದ ಇಪ್ಪತ್ತು ವರ್ಷಗಳಿಂದ ನಡೆಯಲಾಗುತ್ತಿರುವ ವಾರಾಹಿ ಯೋಜನೆ. ಒಂದು ತೊಟ್ಟು ನೀರು ಹರಿಸಲಾಗಿಲ್ಲ ಅಲ್ಲಿ. ಆಗಿನ ಜನರೇಶನ್‍ನವರೇ ಈಗಿಲ್ಲ. ಇಲ್ಲೂ ಕೂಡ ಹೀಗೇ ಆಗೋದು.

ಇದರಲ್ಲಿ ಮುಖ್ಯವಾಗಿರುವ ವಿಚಾರಗಳೆಂದರೆ, ಯೋಜನೆಗೆ ವಿರೋಧ ಯಾಕೆಂದರೆ ಮೊದಲನೆದಾಗಿ ಪ್ರಕೃತಿಯ ನಾಶ ಮತ್ತು ಅದರ ಪರಿಣಾಮ ಪರಿಸರ ಮತ್ತು ನಮ್ಮ ಮೇಲಾಗುವಂಥದ್ದು. ದ್ವಿತೀಯವಾಗಿ, ಜನರ ತೆರಿಗೆಯ ಸಾವಿರಾರು ಕೋಟಿ ಹಣವನ್ನು ಪೋಲು ಮಾಡುತ್ತಿದ್ದಾರೆ.

ಮೂರನೆಯ ವಿಚಾರ, ನೇತ್ರಾವತಿಯ ನೀರಿನ ಮೇಲಿನ ಹಕ್ಕು. ಮೇಲಿನಿಂದ ಹರಿದು ಬರುವ ನೀರಿಗೆ ಕೆಳಗಿನವರಿಗೆ ರೈಪೇರಿಯನ್ ರೈಟ್ಸ್ ಎಂಬುದಿದೆ. ಈ ಹಕ್ಕನ್ನು ನಾವು ಬಿಟ್ಟು ಕೊಟ್ಟಲ್ಲಿ, ಇವತ್ತು 24 ಟಿಎಂಸಿ ನೀರನ್ನು ಕೊಂಡು ಹೋಗಲಿ ಬಿಡಲಿ, ಆ ಹಕ್ಕು ಅವರಿಗೆ ಯಾವತ್ತಿಗೂ ಉಳಿದು ಬಿಡುತ್ತದೆ. ಭವಿಷ್ಯದಲ್ಲಿ ನಮಗೆ ನಮ್ಮ ಯಾವುದೇ ಅಗತ್ಯಗಳಿಗಾಗಿ ನೀರು ಕೇಳುವ ಹಕ್ಕೇ ಇರುವುದಿಲ್ಲ. ಇದು ಕಾನೂನಿನ ಪ್ರಕಾರ ಇರುವ ವ್ಯವಸ್ಥೆ. ಇದು ಬಹಳ ಮುಖ್ಯ ಸಂಗತಿ.

Budkulo_Nethravathi_Interview_1 (5)

ಬುಡ್ಕುಲೊ: ಕಾನೂನು ಹೋರಾಟ ಯಾವ ಪ್ರಕಾರ ನಡೆಯುತ್ತಿದೆ?

ದಿನೇಶ್ ಹೊಳ್ಳ: ಅದೆಲ್ಲಾ ನಡೆಯುತ್ತಾ ಇದೆ. ಈಗಾಗಲೇ ಕೆಲವು ಪಿಐಎಲ್ ಹಾಕಲಾಗಿದೆ. ಸುಪ್ರೀಂ ಕೋರ್ಟ್‍ಗೆ ಹೋಗುವ ಪ್ರಯತ್ನವೂ ನಡೆಯುತ್ತಿದೆ. ಕಾನೂನು ಮತ್ತು ಬೀದಿಗಿಳಿಯುವ ಮೂಲಕ ಹೋರಾಟ ಜತೆ ಜತೆಯಲ್ಲಿಯೇ ನಡೆಯುತ್ತಿದೆ. ಜನರ ಒಂದು ಭಾವನೆ ಏನೆಂದರೆ, ಈಗಾಗಲೇ ಕಾಮಗಾರಿ ಆರಂಭವಾಗಿದೆ, ಈ ಹೋರಾಟಗಳಿಂದ ಪ್ರಯೋಜನವೇನು? ಇದು ನಿಜಕ್ಕೂ ತಪ್ಪು ಭಾವನೆ. ಈಗ ಅಲ್ಲಿ ಆರಂಭವಾದ ಕಾಮಗಾರಿ ಹತ್ತನೇ ಒಂದರಷ್ಟು ಮಾತ್ರ. ಅಣೆಕಟ್ಟು, ಜಲಾಶಯಗಳನ್ನು ಕಟ್ಟುವ ಕಾಮಗಾರಿಯಿಂದ ದೊಡ್ಡ ಮಟ್ಟದಲ್ಲಿ ಹಾನಿ ಆಗಲಿದೆ. ಸದ್ಯ ಚೆಕ್‍ಡ್ಯಾಂ ಕೆಲಸ ನಡೆಯುತ್ತಿದೆ. ಒಂದು ಡ್ಯಾಂನಿಂದ ಇನ್ನೊಂದಕ್ಕೆ ನೀರು ಪಂಪ್ ಮಾಡಲು ಪೈಪ್‍ಗಳನ್ನು ಹಾಕುವಾಗ ಸಾಕಷ್ಟು ಪರಿಸರ ನಾಶ, ಜೈವಿಕ ಬುಡಮೇಲು ಕೃತ್ಯ ನಡೆಯುತ್ತದೆ.

ಬುಡ್ಕುಲೊ: ಕಾನೂನು ಪ್ರಕ್ರಿಯೆಗಳೆಲ್ಲಾ ನಡೆಯುತ್ತಿವೆಯೆ?

ದಿನೇಶ್ ಹೊಳ್ಳ: ಹೌದು. ಆ ಬಗ್ಗೆ ಹೆಚ್ಚು ವಿಷಯ ಬಹಿರಂಗ ಪಡಿಸಲಾಗದು. ಯಾಕೆಂದರೆ ಅವರು ಡಿಪಿಆರ್ ಆಗಾಗ ಬದಲಾವಣೆ ಮಾಡಿದ್ದಾರೆ.

ಡಾ. ನಿರಂಜನ್ ರೈ: ನೋಡಿ, ಡಿಪಿಆರ್ ಅನ್ನು ಆಗಾಗ ಬದಲಾವಣೆ ಮಾಡುವುದು ದೊಡ್ಡ ತಪ್ಪು. ಡಿಪಿಆರ್ ಅವಲಂಬಿಸಿಯೇ ಯಾವುದೇ ಯೋಜನೆಗೆ ಸಮ್ಮತಿ ದೊರೆಯುವುದು. ವಿಧಾನ ಮಂಡಲದಲ್ಲಿಯೂ ಡಿಪಿಆರ್‍ನ ಆಧಾರದ ಮೇಲೆಯೇ ಅನುಮತಿ ದೊರೆಯುವುದು. ಯೋಜನಾ ವೆಚ್ಚ ಮುಂತಾದ ಎಲ್ಲಾ ವಿಚಾರಗಳು ಅದರ ಮೇಲೆಯೇ ನಿರ್ಧರಿತವಾಗುತ್ತವೆ. ಹೀಗೆ ಡಿಪಿಆರ್‍ನ್ನು ಬೇಕಾದ ಹಾಗೆ ಪದೇ ಪದೇ ಬದಲಾಯಿಸುತ್ತಿದ್ದರೆ ಕಾನೂನಿಗೆ, ಶಾಸನಸಭೆಗೆ ಬೆಲೆ, ಮರ್ಯಾದೆ ಎಲ್ಲಿ ಬಂತು? ಅದಕ್ಕೆ ಮಹತ್ವ ಎಲ್ಲಿ ಉಳಿಯಿತು? ಅಂದ್ರೆ, ನೀವು ಅನುಮತಿ ಪಡೆಯುವಾಗ ಒಂದು ಯೋಜನೆ ತೋರಿಸಿ, ಮುಗಿಸುವಾಗ ಬೇರೆಯೇ ಯೋಜನೆ ಆಗಿರುತ್ತದೆ. ಅಂದರೆ ಕರ್ನಾಟಕ ನೀರಾವರಿ ನಿಗಮ ಜನರಿಗೂ ಸರಕಾರಕ್ಕೂ ಮೋಸ ಮಾಡುತ್ತಿದೆ ಎಂದಾಗಲಿಲ್ಲವೆ?

ದಿನೇಶ್ ಹೊಳ್ಳ: ಮೋಸ ಮಾಡಿದೆ ಅದು.

ಬುಡ್ಕುಲೊ: ಹಾಗಾದ್ರೆ ಕೆಎನ್‍ಎನ್‍ಎಲ್‍ನ ಹೇಳಿಕೆ ನಿಮಗೆ ನೆರವಿಗೆ ಬರುತ್ತದೆ?

ಡಾ. ನಿರಂಜನ್ ರೈ: ಹೌದು. ನಾವದನ್ನು ಅಧ್ಯಯನ ಮಾಡುತ್ತಿದ್ದೇವೆ. ಅವರು ತಾವು ಮಾಡಿದ್ದೆಲ್ಲಾ ಸಮರ್ಪಕವಾಗಿದೆ ಎನ್ನುತ್ತಿದ್ದಾರೆ. ಅದರ ನೈಜತೆ ಪರಿಶೀಲಿಸುತ್ತಿದ್ದೇವೆ.

Budkulo_Nethravathi_Interview_1 (4)

ಬುಡ್ಕುಲೊ: ಇಲ್ಲಿನ ಜನಪ್ರತಿನಿಧಿಗಳು ನಿಮಗೆ ಸ್ಪಂದಿಸುತ್ತಿಲ್ಲ, ಸಹಕರಿಸುತ್ತಿಲ್ಲ. ಏನು ಮಾಡುತ್ತೀರಿ?

ದಿನೇಶ್ ಹೊಳ್ಳ: ನೋಡಿ, ನಮಗೆ ಸಾಕಷ್ಟು ಅನುಭವವಾಗಿದೆ. ಅವರಿಂದ ಇನ್ನು ನಿರೀಕ್ಷೆ ಮಾಡುವ ಪ್ರಮೇಯವೇ ಇಲ್ಲ. ಯಾರೂ ಕೂಡ ಯೋಜನೆ ನಿಲ್ಲಿಸುತ್ತೇವೆ ಎಂಬ ಭರವಸೆ ಕೊಟ್ಟಿಲ್ಲ.

ಬುಡ್ಕುಲೊ: ಕೋಲಾರದ ಕಡೆಯ ಜನರಿಗೆ ತಮಗೆ ನೀರು ಕೊಡುವ ಯೋಜನೆಗೆ ವಿರೋಧ ಮಾಡುತ್ತಿದ್ದಾರೆನ್ನುವ ಭಾವನೆ, ಅಪಪ್ರಚಾರ ಇದೆಯಲ್ವೇ?

ದಿನೇಶ್ ಹೊಳ್ಳ: ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಅಲ್ಲಿಯೂ ಹೋರಾಟ ನಡೆಯುತ್ತಿದೆ. ನಿನ್ನೆ ಅಂಥಾ ಸಭೆಯೊಂದು ಅಲ್ಲಿ ನಡೆಯಿತು. ಅವರು ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿದುಕೊಂಡವರು. ವಾಸ್ತವ ಸ್ಥಿತಿ ನೋಡಿದವರೆಲ್ಲಾ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬುಡ್ಕುಲೊ: ಅಲ್ಲಿನ ಜನರಿಗೆ ನಿಮ್ಮ ಸಂದೇಶವೇನು?

ದಿನೇಶ್ ಹೊಳ್ಳ: ಈ ಬಗ್ಗೆ ಅಲ್ಲಿ ಸಾಕಷ್ಟು ಜಾಗೃತಿ ನಡೆದಿದೆ.

ಡಾ. ನಿರಂಜನ್ ರೈ: ಅವರಿಗೆ ನೀರು ಕೊಂಡೊಯ್ಯುವುದಕ್ಕೆ ನಮ್ಮ ಆಕ್ಷೇಪವಿಲ್ಲ.

Budkulo_Nethravathi_Interview_1

ಬುಡ್ಕುಲೊ: ಬೇರೆ ಏನಾದ್ರೂ ಪರ್ಯಾಯ ವ್ಯವಸ್ಥೆ?

ಡಾ. ನಿರಂಜನ್ ರೈ: ಅಲ್ಲಿ ಮಳೆ ನೀರು ಸಂಗ್ರಹಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ರಾಜಸ್ಥಾನದಲ್ಲಿ ಇಲ್ಲಿನ ಕಾಲು ಭಾಗದಷ್ಟು ಮಳೆ ಬೀಳುವ ಜಾಗದಲ್ಲಿ, ಟ್ಯಾಂಕ್, ಜಲಾಶಯಗಳಲ್ಲಿ ಮಳೆ ನೀರನ್ನು ಸಂಗ್ರಹ ಮಾಡಿ ಹಸಿರು ಕ್ರಾಂತಿ ನಡೆಸಿದ್ದಾರೆ. ಅಂಥಾ ಪ್ರಯತ್ನ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮಾಡಿದಲ್ಲಿ ಕುಡಿಯಲು, ಕೃಷಿಗೆ ಸಾಕಷ್ಟು ನೀರು ದೊರೆಯುತ್ತದೆ. ಅದರಿಂದಾಗಿ ಗ್ರೌಂಡ್ ವಾಟರ್ ರೀಚಾರ್ಜ್ ಸಹ ಆಗುತ್ತದೆ, ಮತ್ತು ಅಲ್ಲಿ ನೀರಿನ ಕೊರತೆಯೂ ಕಡಿಮೆಯಾಗುತ್ತದೆ. ಅಂಥಾ ಯಾವುದೇ ಪ್ರಯತ್ನ ಕರ್ನಾಟಕ ಸರಕಾರ ಯಾಕೆ ಮಾಡುತ್ತಿಲ್ಲ?

ಇನ್ನೊಂದೇನೆಂದರೆ, ಹೇಮಾವತಿ ನದಿ ಪೂರ್ವಕ್ಕೆ ಹರಿಯುತ್ತಿದೆ. ಅದರಲ್ಲಿ ಸಾಕಷ್ಟು ನೀರಿದೆ. ಕೈಗಾರಿಕೆಗಳಿಂದ ಅದು ಬಹಳಷ್ಟು ಮಲಿನಗೊಂಡಿದೆ. ಅದನ್ನು ಸ್ವಚ್ಛಗೊಳಿಸಿದರೆ ಸಾಕಷ್ಟು ಉತ್ತಮ ನೀರು ಸಿಗುತ್ತದೆ. ಅದಕ್ಕೆ ಸರಕಾರ ಗಮನ ಕೊಡುತ್ತಿಲ್ಲ. ಇಷ್ಟೊಂದು ಸಾವಿರ ಕೋಟಿ ಹಣ ವ್ಯಯಿಸುವುದಕ್ಕಿಂತ ಸಮುದ್ರದ ಉಪ್ಪು ನೀರು ಸಂಸ್ಕರಿಸುವುದು ಸುಲಭ ಪರಿಹಾರ. ಒಂದೇ ಒಂದು ನದಿ ಇಲ್ಲದ ಸೌದಿ ಅರೇಬಿಯಾದಲ್ಲಿ ಇದನ್ನೇ ಮಾಡುತ್ತಿದ್ದಾರೆ. ಲಭ್ಯವಿರುವ ಅತಿ ಕಡಿಮೆ ಪ್ರಮಾಣದ ಕುಡಿಯುವ ನೀರನ್ನು ಆಶ್ರಯಿಸುವುದಕ್ಕಿಂತ ಇಂಥ ಪರ್ಯಾಯ ದಾರಿ ಕಂಡುಕೊಳ್ಳಬೇಕಾಗಿದೆ.

ಬುಡ್ಕುಲೊ: ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿದೆ. ಇಲ್ಲಿನ ನೀರು, ನೀರಾಶ್ರಯ ಮತ್ತದರ ಮೂಲವನ್ನೇ ನಾಶ ಮಾಡಿದರೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ?

ಡಾ. ನಿರಂಜನ್ ರೈ: ಸ್ಮಾರ್ಟ್ ಸಿಟಿಯ ಮೂಲ ವ್ಯಾಖ್ಯಾನವೆಂದರೆ, ನೀರು, ವಿದ್ಯುತ್ ಮುಂತಾದ ಮೂಲ ಅವಶ್ಯಕತೆಗಳನ್ನು ನಿರಂತರವಾಗಿ ಪೂರೈಸಲಾಗುತ್ತದೆ. ಈಗಲೇ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರವಿರುವಾಗ, ಸ್ಮಾರ್ಟ್ ಸಿಟಿಯಾದಾಗ ಅಷ್ಟೊಂದು ಪ್ರಮಾಣದ ನೀರನ್ನು ಎಲ್ಲಿಂದ ತರುತ್ತೀರಿ? ಇದು ನಮ್ಮ ಪ್ರಶ್ನೆ.

ದಕ್ಷಿಣ ಕನ್ನಡದ ಜನರೀಗ ಎದ್ದು ನಿಂತಿದ್ದಾರೆ!

ಬುಡ್ಕುಲೊ: ಇಲ್ಲಿಯವರೆಗೆ ದಕ್ಷಿಣ ಕನ್ನಡದ ಜನರು ನಿರ್ಲಿಪ್ತರು ಎಂಬ ಆಪಾದನೆ ಇತ್ತು. ಬಹಳಷ್ಟು ವಿಷಯ, ಹೋರಾಟಗಳಲ್ಲಿ ರಾಜ್ಯಕ್ಕೆ ಹೋಲಿಸಿದರೆ ಇಲ್ಲಿನ ಜನರ ನಿಸ್ತೇಜರು, ನಿರ್ಭಾವುಕರು, ಮೌನಿಗಳಾಗಿರುತ್ತಿದ್ದರು. ಬಹುಶಃ ಜಿಲ್ಲೆಯ ಜೀವನದಿ ನೇತ್ರಾವತಿ ದಕ್ಷಿಣ ಕನ್ನಡದ ಜನರಿಗೆ ಒಗ್ಗಟ್ಟಾಗಲಿಕ್ಕೆ ಹಾಗೂ ಬದಲಾವಣೆಗೆ ಒಂದು ಅವಕಾಶ ಒದಗಿಸಿದೆ ಅನಿಸುತ್ತದಲ್ವೆ? ನಿಮ್ಮ ಈ ಹೋರಾಟ ಸಹ ಕರಾವಳಿಯ ಜನರ ಬಗೆಗಿನ ಭಾವನೆಯನ್ನು ಬದಲಾಯಿಸಲು ಕಾರಣವಾಗಿದೆ.

ಡಾ. ನಿರಂಜನ್ ರೈ: ಖಂಡಿತ. ನೇತ್ರಾವತಿ ನದಿಯ ಉಳಿವಿನ ಹೋರಾಟದ ಬಗ್ಗೆ ನನಗೇನನಿಸುವುದೇನೆಂದರೆ, ಮುಂದಿನ ವರ್ಷಗಳಲ್ಲಿ ಜಿಲ್ಲೆಯ ರಾಜಕೀಯ ಸಮೀಕರಣ ಸಂಪೂರ್ಣವಾಗಿ ಬದಲಾಗಲಿದೆ. ಇದುವರೆಗೆ ಎರಡು ಪಕ್ಷಗಳು ಅವರೊಡನೆ ಅಧಿಕಾರವನ್ನು ಅದಲು ಬದಲು ಮಾಡುತ್ತಾ ಅನುಭವಿಸಿ ಬಂದಿದ್ದವು. ಆದರೆ ಈಗ ಜನರಿಗೆ ಜಾಗೃತಿ ಮೂಡಿ ಬರುತ್ತಿದೆ. ಜನರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ, ಡಿಮ್ಯಾಂಡಿಗ್ ಆಗುತ್ತಿದ್ದಾರೆ.

Budkulo_Nethravathi_Interview_1 (5)

ಬುಡ್ಕುಲೊ: ಒಂಥರಾ ಕ್ರಾಂತಿಯೆನ್ನಬಹುದೇನೋ?

ಡಾ. ನಿರಂಜನ್ ರೈ: ಹೌದು. ಇದೊಂಥರಾ ಕ್ರಾಂತಿಯೆಂದೇ ಹೇಳಬಹುದು.

ದಿನೇಶ್ ಹೊಳ್ಳ: ಇಷ್ಟರವರೆಗೆ ಜನರು ತುಂಬೆ ಅಣೆಕಟ್ಟೆಯ ರೀತಿ, ಹೆಚ್ಚುವರಿ ನೀರು ಕೊಂಡೊಯ್ಯುತ್ತಾರೆ ಎಂದೇ ನೇತ್ರಾವತಿ/ಎತ್ತಿನಹೊಳೆ ಯೋಜನೆ ಬಗ್ಗೆ ಅಂದುಕೊಂಡಿದ್ದರು. ಆದರೆ ಎಲ್ಲರಿಗೂ ನಿಜ ಸಂಗತಿ ಮನವರಿಕೆ ಆದ ನಂತರ, ತಮಗೆ ಮೋಸ ಮಾಡುತ್ತಿದ್ದಾರೆ ಎಂಬುದು ಜನರಿಗೆ ಸ್ಪಷ್ಟವಾಗಿದೆ. ಹೀಗಾಗಿ ಜನ ಎಚ್ಚೆತ್ತಿದ್ದಾರೆ. ಉಪ್ಪಿನಂಗಡಿಯಲ್ಲಿ ಜನ ಸೇರಿದ್ದು ಅದರಿಂದಾಗಿಯೇ. ಮೊನ್ನೆ ಮೊನ್ನೆ ಕುಮಾರಧಾರಾದವರೆಗೂ ಬಂದ ವಿಚಾರ ತಿಳಿದ ನಂತರ ಇಡೀ ನೇತ್ರಾವತಿಯ ನೀರನ್ನು ಕೊಂಡೊಯ್ಯುತ್ತಾರೆನ್ನುವ ಸಂಗತಿ ಅರ್ಥವಾಗಿದೆ.

ಬುಡ್ಕುಲೊ: ಹಿಂದೆಯೂ ಬಹಳಷ್ಟು ಯೋಜನೆಗಳಿಗೆ ವಿರೋಧ, ಪ್ರತಿಭಟನೆ ನಡೆದದ್ದಿದೆ. ಕೆಲವು ಕಡೆ ವಿರೋಧಿಸಿದವರು ನಂತರ ಕಾಂಟ್ರಾಕ್ಟ್ ಪಡೆದ ಉದಾಹರಣೆಗಳಿವೆ. ಬಹಳ ಜನ ತಮಗೇನೂ ಮಾಹಿತಿ ಇಲ್ಲ ಎನ್ನುವವರೇ. ಈ ಡಾ. ನಿರಂಜನ್ ರೈ ಮತ್ತು ದಿನೇಶ್ ಹೊಳ್ಳ ಮುಂತಾದವರೇ ಯಾಕೆ ಹೋರಾಡುತ್ತಿದ್ದಾರೆ ಎಂಬ ಸಂಶಯ ಯಾರಿಗೂ ಬರಲೂಬಹುದು. ಇವರ್ಯಾಕೆ ಮುಂಚೂಣಿಯಲ್ಲಿದ್ದು ವಿರೋಧಿಸುತ್ತಿದ್ದಾರೆ ಎಂಬ ಪ್ರಶ್ನೆ ಕೇಳಲೂಬಹುದು. ನೀವೇನಂತೀರಿ?

Budkulo_Nethravathi_Interview_1 (12)

ದಿನೇಶ್ ಹೊಳ್ಳ: ಅಪವಾದಗಳು ಸಹಜ. ಸಂಘಟನೆ, ಹೋರಾಟಗಳೆಂದರೆ ಅದೆಲ್ಲಾ ಸಾಮಾನ್ಯ. ಜಿಲ್ಲೆಯಲ್ಲಿ ಈ ಹಿಂದೆ ಅಂಥ ಕೆಲವು ಘಟನೆಗಳು ನಡೆದ ಕಾರಣ ಯಾರಿಗಾದರೂ ಸಂಶಯ ಬರುವುದು ಸಹಜ. ನಾವು ಒಂದು ಒಳ್ಳೆಯ ಉದ್ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಜನರು ನಮ್ಮ ಜತೆ ಬಂದು ಅದನ್ನು ತಿಳಿದುಕೊಂಡಿದ್ದಾರೆ. ಅಂಥಾ ಮನೋಭಾವ ಜನರಿಗಿಲ್ಲ. ನಾವು ಪಾರದರ್ಶಕರಾಗಿದ್ದೇವೆ.

ಡಾ. ನಿರಂಜನ್ ರೈ: ಒಂದು ವಿಶಯ ನಾನು ಹೇಳುತ್ತೇನೆ. ನೋಡಿ, ನಾವು ಸಾಮಾನ್ಯ ಜನರು. ಹಿಂದೆ ನಾವ್ಯಾವುದೇ ಸಂಘಟನೆಗಳಲ್ಲಿದ್ದವರಲ್ಲ. ನಾವು ಎನ್‍ಜಿಒ ಕೂಡಾ ಅಲ್ಲ, ಪರಿಸರವಾದಿಗಳೂ ಅಲ್ಲ. ನಾವು ಯಾಕೆ ಹೋರಾಡುತ್ತಿದ್ದೇವೆಂದರೆ, ನಮ್ಮ ಊರು ಹಾಳಾಗುತ್ತದೆ, ಪರಿಸರ ನಾಶವಾಗುತ್ತದೆ, ಜನರಿಗೆ ತೊಂದರೆಯಾಗುತ್ತದೆ, ಇವತ್ತಲ್ಲದಿದ್ದರೂ ಹತ್ತು ಹದಿನೈದು ಇಪ್ಪತ್ತು ವರ್ಷದ ನಂತರವಾದರೂ ತೊಂದರೆ ಆಗುತ್ತದೆ ಎಂಬ ದೂರದೃಷ್ಟಿ ನಮಗಿರುವುದರಿಂದ ಈ ಪ್ರತಿಭಟನೆ, ವಿರೋಧ. ಅದನ್ನು ಇವತ್ತು ನಾವು ನಮ್ಮ ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಸುಮ್ಮನೆ ಕುಳಿತರೆ ನಮಗೆ ನಾವೇ ಆತ್ಮದ್ರೋಹ ಬಗೆದಂತೆ ನಮಗನ್ನಿಸುತ್ತದೆ. ಆ ಯೋಚನೆಯಿಂದಾಗಿಯಷ್ಟೇ ನಾವು ಮುಂದೆ ಬಂದಿದ್ದೇವೆ.

ನಾವು ಸಾಮಾನ್ಯ ಜನರೇ. ನಾನೊಂದು ಹಳ್ಳಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುವವನು. ಇವರು ಒಬ್ಬ ಕಲಾವಿದ. ಮಂಗಳೂರಿನಲ್ಲಿ ದುಡಿಯುವವರು. ಹೊಟ್ಟೆ ತುಂಬಿಸುವ ನಮ್ಮ ದೈನಂದಿನ ಹೋರಾಟವನ್ನು ಬಿಟ್ಟು ಈ ಹೋರಾಟಕ್ಕೆ ಧುಮುಕುವ ಅವಶ್ಯಕತೆ ನಮಗಿರಲಿಲ್ಲ. ಆದರೆ ನಮ್ಮ ಸಾಮಾಜಿಕ ಕಳಕಳಿ ಈ ಹೋರಾಟಕ್ಕೆ ನಮ್ಮನ್ನಿಳಿಸಿತು. ಯಾವಾಗ ನಾವು ಆರಿಸಿ ಕಳಿಸಿದ ನಮ್ಮ ಪ್ರತಿನಿಧಿಗಳು ಮಾತನಾಡುತ್ತಿಲ್ಲ, ಮಾತಾಡಬೇಕಾದವರು, ಧ್ವನಿಯಿರುವವರು ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ; ನಮ್ಮ ತಾಯಿ ಸಾಯುತ್ತಿರುವಾಗ ಅಣ್ಣ ತಮ್ಮಂದಿರು ಕೈಕಟ್ಟಿ ಕುಳಿತಿದ್ದಾರೆಂದು ನಾವು ಸುಮ್ಮನೆ ಕುಳಿತುಕೊಳ್ಳಲಿಕ್ಕಾಗುವುದಿಲ್ಲವಲ್ಲ?! ಆ ದೃಷ್ಟಿಯಲ್ಲಿ ನಾವು ಬಂದದ್ದೇ ಹೊರತು ಕೆಲಸವಿಲ್ಲ ಅಂಥ ಬಂದದ್ದಲ್ಲ.

ಬುಡ್ಕುಲೊ: ಸದುದ್ದೇಶಕ್ಕಾಗಿ…

ಡಾ. ನಿರಂಜನ್ ರೈ: ಹೌದು. ಮತ್ತೆ ನಮಗೇನೂ ಇದರಿಂದ ರಾಜಕೀಯ ಭವಿಷ್ಯ ಕಂಡುಕೊಳ್ಳಬೇಕಾಗಿಯೂ ಇಲ್ಲ.

ಬುಡ್ಕುಲೊ: ಈ ಹೋರಾಟದಲ್ಲಿ ನಿಮಗೆ ಬೆದರಿಕೆಗಳೇನಾದರೂ ಬಂದಿವೆಯೆ?

ಡಾ. ನಿರಂಜನ್ ರೈ: ಅಂಥದ್ದೇನೂ ಆಗಿಲ್ಲ. ಕೆಲವರು ಪ್ರಶ್ನೆ ಮಾಡಿದ್ದು ಬಿಟ್ಟರೆ ಹೇಳುವಂಥಾದ್ದೇನೂ ಆಗಿಲ್ಲ.

ನದಿ ಉಳಿಸುವ ಹೋರಾಟ ಧರ್ಮಾತೀತ, ಪಕ್ಷಾತೀತ

ಬುಡ್ಕುಲೊ: ಈ ಹೋರಾಟದಲ್ಲಿ, ಪ್ರತ್ಯೇಕವಾಗಿ ಉಪ್ಪಿನಂಗಡಿಯ ಪ್ರತಿಭಟನೆ ಸಂದರ್ಭ ಕ್ರೈಸ್ತ ಸಮಾಜದಿಂದ ಅಧಿಕೃತವಾಗಿ ಭಾಗವಹಿಸುವಿಕೆ ಕಾಣಲಿಲ್ಲ. ಈ ಬಗ್ಗೆ ಕ್ರೈಸ್ತರಲ್ಲೇ ಬಹಳ ಬೇಸರ ಕಾಣಿಸಿತ್ತು. ನೀವು ಮಂಗಳೂರಿನ ಬಿಶಪ್‍ರನ್ನೂ ಭೇಟಿ ಮಾಡಿ ಆಹ್ವಾನ ನೀಡಿದ್ದೀರಿ. ಆದರೂ…!

ಡಾ. ನಿರಂಜನ್ ರೈ: ನಾವು ಧಾರ್ಮಿಕವಾಗಿ ಬೇರೆ ಬೇರೆ ಧರ್ಮದ ಮುಖಂಡರಿಗೆ ಸಾಂಕೇತಿಕ ಆಹ್ವಾನ ನೀಡಿದ್ದೇವೆ. ಎಲ್ಲರೂ ಸೇರಬೇಕೆಂಬ ಉದ್ದೇಶದಿಂದ. ಅಧಿಕೃತವಾಗಿ ಅವರೆಲ್ಲಾ ಭಾಗವಹಿಸಿದ್ದಾರಾ ಗೊತ್ತಿಲ್ಲ. ಆದರೆ ನಮ್ಮೊಟ್ಟಿಗೆ ಎಲ್ಲಾ ಜಾತಿ, ಧರ್ಮಗಳ ಜನರು ಬಂದಿದ್ದಾರೆ. ಕ್ರೈಸ್ತರೂ ಬಂದಿದ್ದಾರೆ. ನಮ್ಮ ಸಮಿತಿಯಲ್ಲೂ ಕ್ರೈಸ್ತರಿದ್ದಾರೆ. ಅದೇನೂ ದೊಡ್ಡ ವಿಷಯವಲ್ಲ. ಯಾಕೆಂದರೆ, ಯಾವಾಗ ಜನರು ಏಳುತ್ತಾರೆ ಆಗ ಎಲ್ಲಾ ಸಂಘಟನೆಗಳೂ, ಧಾರ್ಮಿಕ ಮುಖಂಡರೂ, ಪಕ್ಷದವರೂ ಅವರ ಹಿಂದೆ ಬರಲೇಬೇಕು. ಜನರಿಗೋಸ್ಕರ ಅವರಿರುವುದೇ ಹೊರತು ಅವರಿಗೋಸ್ಕರ ಜನರಲ್ಲ. ನಮಗೋಸ್ಕರ ಧರ್ಮವಿರುವುದೇ ಹೊರತು ಧರ್ಮಕ್ಕೋಸ್ಕರ ನಾವಲ್ಲ. ಜನರನ್ನು ಉದ್ಧಾರ ಮಾಡಲಿಕ್ಕಾಗಿ ಧರ್ಮ ಇರುವುದು. ಆದ ಕಾರಣ, ಯಾವಾಗ ಜನರಿಗೆ ತೊಂದರೆ ಆಗುತ್ತದೆಯೋ ನಾವೆಲ್ಲಾ ಒಗ್ಗೂಡಿ ಮಾತನಾಡಲೇಬೇಕಾಗುತ್ತದೆ. ಇನ್ನು ಮುಂದೆಯೂ ಜನರೆಲ್ಲಾ ಪಕ್ಷ, ಮತ, ಧರ್ಮ ಭೇದ ಮರೆತು ಒಂದಾಗುತ್ತಾರೆಂಬ ವಿಶ್ವಾಸ ನಮಗಿದೆ. ಈ ಹೋರಾಟ ಧರ್ಮಾತೀತ, ಪಕ್ಷಾತೀತ. ಹಾಗಾಗಿ ಈ ಬಗ್ಗೆ ನಮಗೆ ತಲೆಬಿಸಿ ಇಲ್ಲ.

Budkulo_Nethravathi_Interview_1 (6)

ಬುಡ್ಕುಲೊ: ಸಾಮಾನ್ಯವಾಗಿ ಒಂದು ಪಕ್ಷದ ಸರಕಾರದ ಯೋಜನೆಗೆ ಮತ್ತೊಂದು ಪಕ್ಷ ವಿರೋಧಿಸುವುದು, ಠೀಕಿಸುವುದು ಇರುತ್ತದೆ. ಆದರೆ ಈ ಎತ್ತಿನಹೊಳೆ ಯೋಜನೆಯಲ್ಲಿ ಇಲ್ಲಿನ ಎರಡೂ ಪ್ರಮುಖ ಪಕ್ಷಗಳು ಶಾಮೀಲಾಗಿವೆ. ಮೇಲ್ನೋಟಕ್ಕೆ ಒಬ್ಬರನ್ನೊಬ್ಬರು ದೂಷಿಸುತ್ತಿದ್ದರೂ ಅವರೆಡೂ ಪಕ್ಷಗಳು ಯೋಜನೆಯನ್ನು ಬೆಂಬಲಿಸುತ್ತಿವೆ.

ಡಾ. ನಿರಂಜನ್ ರೈ: ಸನ್ನಿವೇಶ ಹೇಗಿದೆಯೆಂದರೆ, ಒಂದು ಕಡೆ ಸರಕಾರ ಮತ್ತು ಜನಪ್ರತಿನಿಧಿಗಳು. ಇನ್ನೊಂದು ಕಡೆ ಜನರು. ಜನ ವಿರೋಧಿಸುತ್ತಿದ್ದಾರೆ, ಜನಪ್ರತಿನಿಧಿಗಳು ಬೆಂಬಲಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಅವರವರ ರಾಜಕೀಯ ಲಾಭಕ್ಕಾಗಿಯೇ ಆಲೋಚಿಸುತ್ತವೆ. ಕರಾವಳಿಯ ಎರಡು ಜಿಲ್ಲೆಗಳು ಅವರಿಗೆ ಪ್ರಮುಖವಲ್ಲ. ಅಲ್ಲಿನ ನಾಲ್ಕೈದು ಜಿಲ್ಲೆಗಳು ಮುಖ್ಯ. ಇಲ್ಲಿ ಸಾಮಾಜಿಕ ವಿಷಯಗಳಲ್ಲಿ ಚುನಾವಣೆಗಳು ನಡೆಯುವುದಿಲ್ಲ. ಜನರನ್ನು ಹೇಗಾದ್ರೂ ಟ್ಯಾಕಲ್ ಮಾಡುವ ವಿಶ್ವಾಸ ಅವರಿಗಿದೆ.

ದಿನೇಶ್ ಹೊಳ್ಳ: ಇಲ್ಲಿ ಎರಡೂ ಪಕ್ಷಗಳು ಶಾಮೀಲಾಗಿರುವ ಕಾರಣ ಅವು ಸುಮ್ಮನಾಗಿವೆ. ಇನ್ನು ಮುಂದಿನ ಹೋರಾಟದಲ್ಲಿ ನಾವು ಈ ರಾಜಕೀಯದವರನ್ನು ದೂರುವುದನ್ನು ಬಿಡಬೇಕು. ದೋಷಾರೋಪಣೆಯನ್ನು ಬಿಟ್ಟು, ಪಕ್ಷಾತೀತವಾಗಿ ನೇತ್ರಾವತಿಯನ್ನು ಉಳಿಸುವ ಹೊಣೆ ನಮ್ಮದು. ಉಪ್ಪಿನಂಗಡಿಯಲ್ಲಿ ಎಲ್ಲ ಪಕ್ಷದವರೂ ಬಂದಿದ್ದಾರೆ. ಎಲ್ಲರೂ ಒಗ್ಗೂಡಿ ಹೋರಾಡುವುದು ಸದ್ಯದ ಅಗತ್ಯ.

ಬುಡ್ಕುಲೊ: ಮುಂದಿನ ಹಾದಿ ಏನು?

ಡಾ. ನಿರಂಜನ್ ರೈ: ಎಲ್ಲರೂ ಒಂದೇ ಉದ್ದೇಶಕ್ಕಾಗಿ ಹೋರಾಟ ಮಾಡುವುದರಿಂದ ಎಲ್ಲರನ್ನು ಒಂದೆಡೆ ಸೇರಿಸಿ ಒಕ್ಕೂಟ ರಚಿಸುತ್ತಿದ್ದೇವೆ. ಅಲ್ಲಲ್ಲಿ ಹೋರಾಟ ನಡೆಯುತ್ತಿದೆ. ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಒಮ್ಮತದಿಂದ ಮಾಡುತ್ತೇವೆ.

ಬುಡ್ಕುಲೊ: ಮುಖ್ಯಮಂತ್ರಿ, ನೀರಾವರಿ ಸಚಿವರನ್ನು ಇಲ್ಲಿಗೆ ಕರೆಸಬಹುದಲ್ವಾ?

ದಿನೇಶ್ ಹೊಳ್ಳ: ಹೌದು. ಜಿಲ್ಲಾಡಳಿತದವರು ಬೆಂಗಳೂರಿನಲ್ಲಿ ನಡೆಯುವ ಸಭೆಯನ್ನು ಎಲ್ಲರೂ ತಿರಸ್ಕರಿಸಿ, ದಕ್ಷಿಣ ಕನ್ನಡ ಅಥವಾ ಸಕ್ಲೇಶಪುರದಲ್ಲಿಯೇ ಸಭೆ ನಡೆಸಬೇಕು.

ಬುಡ್ಕುಲೊ: ಅವರು ಒಪ್ಪುತ್ತಾರಾ?

ಡಾ. ನಿರಂಜನ್ ರೈ: ಜನರು ಎದ್ದರೆ ಎಲ್ಲದಕ್ಕೂ ಅವರು ಮಣಿಯುತ್ತಾರೆ. ಜನರು ಒಗ್ಗಟ್ಟಾಗಬೇಕು.

ಬುಡ್ಕುಲೊ: ‘ಬುಡ್ಕುಲೊ’ ಮುಖಾಂತರ ಜನರಿಗೇನು ಸಂದೇಶ ಕೊಡುತ್ತೀರಿ?

ಡಾ. ನಿರಂಜನ್ ರೈ: ಇವತ್ತು ನಮ್ಮ ತಾಯಿನಾಡಿನ ಮೇಲೆ ಆಪತ್ತು ಬಂದಿದೆ. ನಾವೆಲ್ಲಾ ಅದಕ್ಕೆ ಸ್ಪಂದಿಸಬೇಕು. ಯಾವುದೇ ರೀತಿಯ ಭೇದಭಾವ, ರಾಜಕೀಯವನ್ನು ಬದಿಗಿಟ್ಟು ಒಗ್ಗಟ್ಟಾಗಿ ನಾವಿದನ್ನು ಎದುರಿಸಿದರೆ ಖಂಡಿತವಾಗಿ ಈ ಯೋಜನೆ ನಿಲ್ಲುತ್ತದೆ. ಇದನ್ನು ನಾವು ಸಾಧಿಸಹುದು. ಆಗಲಿರುವ ಅಪಾಯ, ಅನಾಹುತವನ್ನು ತಡೆಗಟ್ಟಬಹುದು.

Feedback: budkuloepaper@gmail.com

ತುಳುವರಿಗೊಂದು ಬಹಿರಂಗ ಪತ್ರ: ಎಂಚ ಇತ್ತಿನ ತುಳುನಾಡ್, ಇತ್ತೆ ಓಡೆಗ್ ಬತ್ತ್‍ದ್ ಎತ್ತ್‍ಂಡ್?

ಸಮಗ್ರ ವರದಿ, ವಿಶ್ಲೇಷಣೆ: ನೇತ್ರಾವತಿ ಬಲಿ! ಪಶ್ಚಿಮ ಘಟ್ಟಕ್ಕೆ ಕೊಡಲಿ! ವಂಚಕ ಆಡಳಿತದ, ದ್ರೋಹಿ ರಾಜಕಾರಣಿಗಳ ವಿರಾಟ್ ದರ್ಶನ

ಕೊಂಕಣಿ ಲೇಖನ: ಕ್ರಿಸ್ತಾಂವಾಂಕ್ ಪಿಯೆಂವ್ಚೆಂ ಉದಕ್ ರೊಮಾಥಾವ್ನ್ ಯೆತಾಗಿ?

1 comment

  1. ಹೋರಾಟದ ಕಾವು ಆರದಿರಲೆಂದು ಹಾರೈಸುತ್ತೇನೆ.

Leave a comment

Your email address will not be published. Required fields are marked *

Latest News