ಷಂಡ ಕಾಂಗ್ರೆಸ್ V/s ಢೋಂಗಿ ಬಿಜೆಪಿ = ಅಧಿವೇಶನ ಬಲಿ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : August 13, 2015 at 10:58 AM

ಮುಂಗಾರು ಮಳೆ ಸರಿಯಾಗಿ ಸುರಿಯದಿದ್ದರೇನಂತೆ, ಮೋಡಗಳು ಕರಗಿ ವರ್ಷಧಾರೆಯ ಆರ್ಭಟ ಕೇಳದಿದ್ದರೇನಂತೆ, ನಾಲ್ಕು ವಾರಗಳಿಂದ ಒಂದು ಸುದ್ದಿ ದೇಶದಾದ್ಯಂತ ಸುರಿಮಳೆಗೈದಿತು, ಮಾಧ್ಯಮಗಳಲ್ಲಿ ಗದ್ದಲವೆಬ್ಬಿಸಿತು.

ಸಂಸತ್ತಿನ ಮುಂಗಾರು ಅಧಿವೇಶನ ಪೂರ್ತಿಯಾಗಿ ಕೊಚ್ಚಿ ಹೋಗಿದ್ದೇ ಈ ಸುದ್ದಿ.

Parliament Sessionನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ತಮ್ಮನ್ನು ತಾವು ಅಪ್ರತಿಮ ದೇಶಭಕ್ತರೆಂದೂ, ಉಳಿದವರೆಲ್ಲರೂ ನಾಲಾಯಕರೂ, ಕ್ಷುಲ್ಲಕರೂ ಎಂಬ ಮನಸ್ಥಿತಿ ಹೊಂದಿದವರನ್ನು ಹೊರತುಪಡಿಸಿ, ಇತರರ್ಯಾರಿಗೂ ಸಂಸತ್ತಿನ ಈ ಅಧಿವೇಶನದ ಸಂಗತಿ, ನಾಟಕಗಳು ಹೊಸದೇನೂ ಅಲ್ಲ.

ಬಿಜೆಪಿಗೆ ಇದೊಂಥರಾ ಮಾಡಿದ್ದುಣ್ಣೋ ಮಹಾರಾಯ ಎಂಬಂಥಾ ಪರಿಸ್ಥಿತಿ. ಕೃತಿಗಿಂತ ಮಾತೇ ದೊಡ್ಡದು ಎಂದು ನಂಬಿಕೊಂಡು, ಅದನ್ನೇ ಕಾಯಾ, ವಾಚಾ, ಮನಸಾ ಪರಿಪಾಲಿಸಿಕೊಂಡು ಬಂದ ಪಕ್ಷ ಭಾರತೀಯ ಜನತಾ ಪಾರ್ಟಿ. ಇದೀಗ ಅಧಿವೇಶನ ವ್ಯರ್ಥವಾಗಿದ್ದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವೆಂದು ದೂರುತ್ತಾ ಊಳಿಡುತ್ತಿದೆ.

ಇದೀಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವ, ವಾಗ್ಮಿ ಅರುಣ್ ಜೇಟ್ಲಿಯವರು ಇದನ್ನೇ ಪುಷ್ಟೀಕರಿಸುತ್ತಾ, ಮುಂದಿನ ದಿನಗಳಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ.

Rahul Gandhi_P Sonia Gandhi Sushma Swaraj_P

ಅಲ್ಲಿಗೆ, ಕಳೆದ ಹತ್ತು ವರ್ಷ ತನು ಮನ ಧನವನ್ನರ್ಪಿಸಿ ಭ್ರಷ್ಟಾಚಾರದ ವಿರುದ್ಧ ಎಲ್ಲಾ ಮಾರ್ಗಗಳನ್ನು ಅನುಸರಿಸಿ ಹೋರಾಡಿದ ಬಿಜೆಪಿಗೆ ಪ್ರಸ್ತುತ ಭ್ರಷ್ಟಾಚಾರವೆಂದರೇನೆಂದೇ ಮರೆತು ಹೋಗಿರುವುದು ಸ್ಷಷ್ಟ.

ಬಿಡಿ, ಕಾಂಗ್ರೆಸ್ ಪಕ್ಷದ ಹಣೆಬರಹ ಎಲ್ಲರಿಗೂ ತಿಳಿದಿರುವುದೇ. ಅತ್ಯಂತ ಹೀನಾಯವಾಗಿ ಚುನಾವಣೆ ಎದುರಿಸಿದ ಆ ಪಕ್ಷ 44 ಸ್ಥಾನ ಗಳಿಸಿದ್ದೇ ಪುಣ್ಯವೆನ್ನಬೇಕು. ಅದರ ಕಥೆ ಮುಗಿಯಿತು, ಕಾಂಗ್ರೆಸ್ಸನ್ನು ನಾವು ಅಳಿಸಿಬಿಟ್ಟೆವು ಎಂಬ ಅಹಂಕಾರ ಬಿಜೆಪಿ ನೇತಾರರಿಗೆ ಅಮರಿಕೊಂಡಿತು. ಅದಕ್ಕೆ ತಕ್ಕಂತೆ ನಿರಂತರ, ಅವಮಾನಕರ ಸೋಲಿನ ಸರಪಣಿ ಮುಂದುವರಿದಾಗಲೂ ಪಾಠ ಕಲಿಯದ ಕಾಂಗ್ರೆಸ್ ಪಕ್ಷ ಅಪ್ರಸ್ತುತವಾಗುವ ಹಂತಕ್ಕೆ ಬಂದಿದ್ದೂ ಸತ್ಯವೇ.

ಆದರೀಗ ಮುಖ್ಯವಾದ ವಿಷಯ ಕಣ್ಣ ಮುಂದಿರುವುದು ಭ್ರಷ್ಟಾಚಾರದ್ದು. ನಯವಂಚನೆಯೆಂಬುದು ಬಿಜೆಪಿಯ ಡಿಎನ್‍ಎಯಲ್ಲಿರುವುದನ್ನು ಆ ಪಕ್ಷ ಹಲವಾರು ಬಾರಿ ಸಾಬೀತು ಪಡಿಸಿದೆ. ಈಗ ನಡೆದಿರುವುದು ಅದರ ಮತ್ತೊಂದು ಅಧ್ಯಾಯ ಅಷ್ಟೇ. ಎಂದರೆ, ಜನರನ್ನು ವಂಚಿಸುವುದು, ಮೂರ್ಖಪಡಿಸುವುದಲ್ಲಿ ಬಿಜೆಪಿಯ ಎಬಿಲಿಟಿ ಎದುರು ಅಂಥಾ ಅನುಭವಿ ಕಾಂಗ್ರೆಸ್ಸೇ ಏನೂ ಅಲ್ಲ.

ಹಿಂದಿನ ಎರಡು ಲೋಕಸಭಾ ಅವಧಿಗಳಲ್ಲಿ ಬಿಜೆಪಿಯು ವಿರೋಧ ಪಕ್ಷವಾಗಿ ಹೇಗೆ ನಡೆದುಕೊಂಡಿತ್ತೆಂಬುದನ್ನು ಬಿಜೆಪಿಯವರಷ್ಟೇ ಮರೆತು ಹೋಗಿರಬಹುದು. ಅದರಲ್ಲೂ ಯುಪಿಎ ದ್ವಿತೀಯ ಸರಕಾರ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷವಾಗಿ ಬಿಜೆಪಿ ತಿಕ್ಕಲುತಲವನ್ನಷ್ಟೇ ಪ್ರದರ್ಶಿಸಿತ್ತು. ಸಾಲದ್ದಕ್ಕೆ ಸಾಲು ಸಾಲು ಹಗರಣಗಳು ದಿನಕ್ಕೊಂದರಂತೆ ಸರಕಾರದ ವಿರುದ್ಧ ಅಸ್ತ್ರಗಳನ್ನಾಗಿ ಪ್ರಯೋಗಿಸಲು ಬಿಜೆಪಿಗೆ ನೆರವಾಯಿತು. ಅದನ್ನೇ ಹಿಡಿದುಕೊಂಡು ಯಾವುದೇ ಅಧಿವೇಶನವನ್ನು ಸರಿಯಾಗಿ ನಡೆಸಲು ಬಿಡದ ಚರಿತ್ರೆ ಮತ್ತು ಚಾರಿತ್ರ್ಯ ಹೊಂದಿರುವ ಬಿಜೆಪಿ ಈಗ ಲಬೋ ಲಬೋ ಎಂದು ಕೂಗಾಡುವುದನ್ನು ನೋಡಿದರೆ ಅದರ ಬಗ್ಗೆ ಕನಿಕರವೂ ಮೂಡದು.

ಅಷ್ಟಕ್ಕೂ ಭ್ರಷ್ಟಾಚಾರ, ಭ್ರಷ್ಟಾಚಾರವೆಂದು ಆಕಾಶ ಭೂಮಿ ಒಂದು ಮಾಡಿದ ಬಿಜೆಪಿ ಈಗ ಅದರ ಬಗ್ಗೆ ತುಟಿಯನ್ನೇ ಅಲ್ಲಾಡಿಸುತ್ತಿಲ್ಲವಲ್ಲಾ?

ಸದ್ಯ ವ್ಯರ್ಥವಾಗಿ ಮುಕ್ತಾಯಗೊಂಡ ಮುಂಗಾರಿನ ಸಂಸತ್ ಅಧಿವೇಶನ ಹಳ್ಳ ಹಿಡಿಯಲು ದಾರಿ ನಿರ್ಮಿಸಿದ್ದೇ ಬಿಜೆಪಿ. ದೇಶಭ್ರಷ್ಟ ಲಲಿತ್ ಮೋದಿಗೆ ಖುಷಿ ಖುಷಿಯಾಗಿ ಸಹಕಾರ, ಸಹಾಯ ಮಾಡಿದ್ದು ಇದೇ ಬಿಜೆಪಿಯ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ. ಇನ್ನೊಂದು ಕಡೆ ದೇಶವೆಂದೂ ಕಂಡು ಕೇಳರಿಯದ ಭಯಾನಕ ವ್ಯಾಪಂ ಹಗರಣ (50ಕ್ಕೂ ಮಿಕ್ಕಿ ಸಾಕ್ಷಿಗಳು ಕೊಲೆಗೈಯಲ್ಪಡುತ್ತಾರೆಂದರೆ ಯಾವ ಥ್ರಿಲ್ಲರ್ ಕಾದಂಬರಿಗೂ ಅದ್ಭುತವಾದ ಸಾಧನೆಯೇ ಅಲ್ಲವೆ?) ನಡೆದರೂ ಸಂಭಾವಿತನಂತೆ ವರ್ತಿಸುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್. ಈ ಮೂವರ ಮೇಲೆ ಗುರುತರ ಆರೋಪ ಕಳೆದೆರಡು ತಿಂಗಳುಗಳಿಂದ ಕೇಳಿ ಬರುತ್ತಿದೆ. ಆದರೆ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಇಂತಹ ಸಂದರ್ಭಗಳಲ್ಲೆಲ್ಲಾ ಲೋಕವನ್ನೇ ಅಲ್ಲಾಡಿಸುವಂತೆ ರಂಪಾಟ ನಡೆಸುತ್ತಿದ್ದ ಬಿಜೆಪಿ ಈಗ ಮಾತ್ರ ಉಲ್ಟಾ ಹೊಡೆಯುತ್ತಿದೆ.

Sushma Swaraj_Lalit Modi Vasundhara Raje_Lalit Modi Vyapam_MP

2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಚಿಗುರಿಕೊಂಡು, ಬಿಜೆಪಿ ಹಳ್ಳ ಹಿಡಿದ ಮೇಲೆ ಬಿಜೆಪಿ ಹಿಡಿದ ದಾರಿ ನಯವಂಚಕತನದ್ದಷ್ಟೇ. ಕೇವಲ ಧರ್ಮ ಮತ್ತು ಕೋಮು ವಿಷಯಗಳನ್ನೇ ಹಿಡಿದುಕೊಂಡು ಜನರಿಂದ ತಿರಸ್ಕರಿಸಲ್ಪಟ್ಟ ಬಿಜೆಪಿ ಅನುಸರಿಸಿದ್ದು ಅಡ್ಡದಾರಿಯನ್ನೇ ಹೊರತು ಜನರ ಮನ ಗೆಲ್ಲುವುದಲ್ಲ. ಅಂಥ ಯಾವುದೇ ಪ್ರಯತ್ನ ಮಾಡಿರದ ಬಿಜೆಪಿ ಐದು ವರ್ಷ ಹೇತ್ಲಾಂಡಿ ವಿರೋಧ ಪಕ್ಷವಾಗಿಯೇ ನಡೆದುಕೊಂಡಿತ್ತು. ಅದು ವ್ಯರ್ಥಗೊಳಿಸಿದ ಕಲಾಪ, ಹಳ್ಳ ಹಿಡಿಸಿದ ಅವಧಿಯನ್ನೊಮ್ಮೆ ನೆನಪಿಸುವುದೊಳಿತು.

ಹಾಗೆ ಸಂಸತ್ತಿನ ಅಧಿವೇಶನವನ್ನು ವಿಘ್ನಪಡಿಸಿ, ಸಂಸತ್ತಿನ ಹೊರಗೂ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದ ಬಿಜೆಪಿಗೆ ಈಗ ಒಮ್ಮಿಂದೊಮ್ಮೆಲೇ, ಕಲಾಪಗಳಿಗೆ ಇತರರು ಅಡ್ಡಿಪಡಿಸುವುದು ಮಹಾಪರಾಧವೆಂಬಂತೆ ಕಾಣಿಸುವುದು ಢೋಂಗಿತನವಲ್ಲದೆ ಇನ್ನೇನು?

ಅಷ್ಟಕ್ಕೂ ಯುಪಿಎ ಸರಕಾರವಿರುವಾಗ ಹೆಜ್ಜೆ ಹೆಜ್ಜೆಗೂ ರಾಜೀನಾಮೆ ಕೇಳುತ್ತಾ ಬೊಬ್ಬಿರಿಯುತ್ತಿದ್ದ ಬಿಜೆಪಿ, ತನ್ನ ಮಂತ್ರಿ ಮಹೋದಯರುಗಳು ಗಂಭೀರ ಅಪವಾದಕ್ಕೀಡಾಗಿ, ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪಗಳು ದೇಶದ ಮುಂದೆ ಪ್ರದರ್ಶಿಸಲ್ಪಡುವಾಗಲೂ ತಾನೇ ಸರಿ ಎಂಬಂತೆ ದುರುಳತನದಿಂದ ವರ್ತಿಸುವುದು ಅಕ್ಷಮ್ಯ ಹಾಗೂ ನಾಚಿಕೆಗೇಡು. ಅದೂ ಭಾಗಿಯಾದವರು ತಮ್ಮ ಪಾತ್ರವನ್ನು ಒಪ್ಪಿಕೊಂಡೂ ಸಹ ಅಧಿಕಾರಕ್ಕೆ ಅಂಟಿಕೊಂಡಿರುವುದು ದುರುಳತನವಲ್ಲದೆ ಮತ್ತೇನು?

ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಕೇಳಿದ್ದು ಇದನ್ನೇ. ಹಾಗೆ ನೋಡಿದರೆ ಗುರುತರ ಆರೋಪಕ್ಕೀಡಾದವರು ರಾಜೀನಾಮೆ ಕೊಡಬೇಕೆಂಬ ಬೇಡಿಕೆ ಬಿಜೆಪಿಯಿಂದಲೇ ಮೊದಲು ಬರಬೇಕಿತ್ತು. ಅಂತಹ ಸಾಚಾತನ ಅದರಿಂದ ನಿರೀಕ್ಷಿಸುವುದು ಮುಠ್ಠಾಳತನವೇ ಸರಿ. ತನ್ನ ಚರಿತ್ರೆಯನ್ನೊಮ್ಮೆ ನೆನಪಿಸಿಕೊಳ್ಳಬೇಕಿತ್ತು ಬಿಜೆಪಿ. ಆದರೆ ಎರಡು ನಾಲಿಗೆಯ ಬಿಜೆಪಿ ವರ್ತಿಸಿದ್ದು ಶುದ್ಧ ಢೋಂಗಿತನವನ್ನಷ್ಟೇ.

ಕಾಂಗ್ರೆಸ್ಸಿಗೂ ಹಗೆ ತೀರಿಸಬೇಕಿತ್ತು. ಕಬಡ್ಡಿಯಲ್ಲಿ ಬಲಿಷ್ಠ ರೈಡರ್‍ನನ್ನು ಹಿಡಿಯಲಾಗದೆ ಔಟಾದ ಆಟಗಾರ ತಾನು ಹೇಗೂ ಹೊರಗೆ ಎಂಬುದರ ಅರಿವಿದ್ದೂ ರೈಡರ್ ಬಳಿ ಬಂದು ಎಳೆಯುವುದು, ದೂಡುವುದು ಮಾಡಿದಂತೆ ಕಾಂಗ್ರೆಸ್ಸಿನ ಪರಿಸ್ಥಿತಿ. ಬಹುಶಃ ಕಾಂಗ್ರೆಸ್ಸನ್ನು ಅದರ ಸಂಖ್ಯೆ ನೋಡಿ ಕೀಳಂದಾಜಿಸಿದ್ದು ಬಿಜೆಪಿಯ ಪ್ರಮಾದವೆನಿಸುತ್ತದೆ. ತನಗೆ ಹೇಗೂ ಬಹುಮತವಿರುವುದರಿಂದ ಯಾರೂ ಏನೂ ಮಾಡಲಾಗದು ಎಂಬ ಅಹಂಗೊಳಗಾಗಿ ಸರಿಯಾಗಿ ಪೆಟ್ಟು ತಿನ್ನಬೇಕಾಯಿತು.

ಈ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಜುಗಲ್‍ಬಂದಿ ಹೊಸದೇನಲ್ಲ. ವಾಜಪೇಯಿ ಸರಕಾರವಿದ್ದಾಗಲೂ ಕಾಂಗ್ರೆಸ್ ಹಟ ಸಾಧಿಸಿ, ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್‍ರ ರಾಜೀನಾಮೆ ಪಡೆದಿತ್ತು (ಶವಪೆಟ್ಟಿಗೆ ಹಗರಣ). ತದ ನಂತರ ಯುಪಿಎ ಅವಧಿಯಲ್ಲಿ ಬಿಜೆಪಿ ಅದನ್ನೇ ಮಾಡಿತ್ತು. ಅದೇ ಪರಂಪರೆ ಮತ್ತೆ ಮುಂದುವರಿಯುತ್ತಿದೆ. ನಷ್ಟ ಮಾತ್ರ ದೇಶಕ್ಕೆ.

Narendra Modiಭ್ರಷ್ಟಾಚಾರವೆನ್ನುವುದು ಯಾವುದೇ ಪಕ್ಷದ ಜನ್ಮಸಿದ್ಧ ಹಕ್ಕು ಅಲ್ಲ. ಅಂದರೆ ಕಾಂಗ್ರೆಸ್ಸನ್ನು ಭ್ರಷ್ಟಾಚಾರಿ ಎಂದು ಹೀಗಳೆಯುವ ಬಿಜೆಪಿ ಮಾಡುವುದೂ ಅದನ್ನೇ. ಇನ್ನೊಂದು ಪ್ರಮುಖ ವಿಷಯವಿದೆ. ಈ ಸುಷ್ಮಾ ಸ್ವರಾಜ್ ಇದ್ದಾರಲ್ಲಾ, ಆಕೆಯೊಬ್ಬ ನಿಸ್ಸೀಮ ನಟಿ, ಅಪ್ರತಿಮ ಅವಕಾಶವಾದಿ. ಹಿಂದೆ ಬಳ್ಳಾರಿಯಲ್ಲಿ ದೊರೆಯುತ್ತಿದ್ದ ಪೊಗದಸ್ತಾದ ‘ವರ’ ‘ಕಾಣಿಕೆ’ಗಳನ್ನು ಸ್ವೀಕರಿಸಲು ಪ್ರತಿವರ್ಷ ಬಂದು ರೆಡ್ಡಿ ಪರಿವಾರದಿಂದ ‘ಅಮ್ಮಾ’ ಎಂದು ಕರೆಸಿಕೊಂಡು ತೇಗುತ್ತಿದ್ದ ಈಕೆ, ಅದೇ ರೆಡ್ಡಿಗಳು ಜೈಲಿಗೆ ಸೇರಿ, ಸಿಬಿಐ ಖೆಡ್ಡಾಕ್ಕೆ ಬಿದ್ದಾಗ, ತಾನು ಅವರ ‘ಅಮ್ಮ’ ಅಲ್ಲವೇ ಅಲ್ಲಾ, ಅವರು ತನ್ನ ಮಕ್ಕಳೇ ಅಲ್ಲಾ ಎಂದು ಲಜ್ಜೆಗೆಟ್ಟು ಹೇಳಿಕೆ ನೀಡಿದ್ದು ನೆನಪಿರಬಹುದು. ಅದು ಕೇವಲ ತನ್ನ ಒಳಿತಿಗೆ ಅಷ್ಟೆ. ಬೇಕಾದರೆ, ತದನಂತರ ಆಕೆ ಸೋನಿಯಾ ಗಾಂಧಿ ಬಳಿ ಯಾಕೆ ‘ರಾಜಿ’ ಮಾಡಿಕೊಂಡಳೆಂಬುದನ್ನು ಕೆದಕಿದರೆ ಸತ್ಯ ತಿಳಿಯುತ್ತದೆ. ಇಂಥವರನ್ನು ಸಾಚಾ ಎಂದು ನಂಬುವವರು ಮೂರ್ಖರಷ್ಟೇ. ರಾಜ್ಯದ ಹಿಂದಿನ ಬಿಜೆಪಿ ಸರಕಾರವಿದ್ದಾಗ ಆಕೆ ವಶೀಲಿಬಾಜಿ ನಡೆಸಿ ತನ್ನ ಗಂಡನನ್ನು ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ವಕೀಲರನ್ನಾಗಿ ನೇಮಿಸಲು ಯಶಸ್ವಿಯಾಗಿದ್ದಳು. ಲಲಿತ್ ಮೋದಿಗೆ ಸಹಾಯ ಮಾಡಿದ್ದು ವಿಶೇಷವೇನೂ ಅಲ್ಲ.

ಬಿಜೆಪಿಯ ಸಂಸ್ಕೃತಿ ಎಂಥದೆಂದರೆ, ಹೋದಲ್ಲಿ ಬಂದಲ್ಲಿ ಭ್ರಷ್ಟಾಚಾರ ಸೇರಿದಂತೆ ಎಲ್ಲಾ ಕೆಡುಕುಗಳ ವಿರುದ್ಧ ಭಾಷಣ ಬಿಗಿದುಕೊಳ್ಳುವುದು. ತನಗೆ ಅಧಿಕಾರ ಸಿಕ್ಕಿದಾಗ ತಾನೂ ಅದನ್ನೇ ಮಾಡುವುದು. ಸಿಕ್ಕಿ ಬಿದ್ದರೆ, ಯಾರಾದರೂ ಪ್ರಶ್ನಿಸಿದರೆ, ತಕ್ಷಣ ‘ಅವರು ಹಾಗೆ ಮಾಡಿದ್ದಾರೆ, ಇವರು ಇಷ್ಟು ಮಾಡಿದ್ದಾರೆ, ಮತ್ತೊಬ್ಬರು ಅಷ್ಟು ಮಾಡಿದ್ದಾರೆ’ ಎಂದು ವಾದಿಸುತ್ತಾರೆ. ತಾನು ಸಾಚಾ, ಸಂತ, ಸುಭಗನೆಂದು ಹೇಳಿಕೊಂಡು, ಅಧಿಕಾರ ಸಿಕ್ಕಾಗ ವಿರುದ್ಧವಾದುದನ್ನೇ ಮಾಡುವುದು, ಮತ್ತು ಅದನ್ನು ಹೇಗಾದರೂ ಸಮರ್ಥಿಸುವುದು ಬಿಜೆಪಿಯ ಜಾಯಮಾನ. ಕರ್ನಾಟಕದ ಬಿಜೆಪಿಯಂತು ಇದಕ್ಕೆ ಚಿನ್ನದಂಥ ಉದಾಹರಣೆ!

ಕಳೆದ ಅಧಿವೇಶನದ ಸಮಯದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಪತ್ತೆಯಾಗಿದ್ದರು. ಕೊನೆಗೆ 56 ದಿನಗಳ ಕಾಲ ನಿಗೂಢ ರಜೆ ಅನುಭವಿಸಿ ಬಂದು ಹೇಳಿಕೆ ಕೊಟ್ಟು ಸುದ್ದಿ ಮಾಡಿದರು. ಈಗಿನ ಅಧಿವೇಶನವಂತೂ ಸಂಪೂರ್ಣವಾಗಿ ಕೊಚ್ಚಿ ಹೋಯಿತು. ಕೊನೆಯ ದಿನ ಮಾತ್ರ ರಾಹುಲ್ ಮತ್ತು ಸುಷ್ಮಾ ನಡುವೆ ವಾಗ್ಯುದ್ದ ನಡೆಯಿತು. ಈತ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ್ದೇನೆಂದರೆ ಕಾಂಗ್ರೆಸ್ ಪಕ್ಷವನ್ನು ಸಾಧ್ಯವಾದಷ್ಟು ನಿರ್ಮೂಲನೆ ಮಾಡುವುದು!

ಆದರೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ, ಚುನಾವಣೆ ಗೆದ್ದ ಪ್ರಧಾನಿ ನರೇಂದ್ರ ಮೋದಿ ಮಾತ್ರ ಮೌನವೃತದಲ್ಲಿದ್ದಾರೆ! ಹೋದಲ್ಲಿ ಬಂದಲ್ಲಿ ‘ಚುನಾವಣಾ ಭಾಷಣ’ ಮಾಡಿಕೊಂಡೇ ಜನರನ್ನು ಮರುಳು ಮಾಡುವ ಮೋದಿ ಸಾಹೇಬರು, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಂಪು ಕೋಟೆ ಮೇಲಿನಿಂದ ಮತ್ತೆ ಕಾಂಗ್ರೆಸ್ಸಿನ ಜನ್ಮ ಜಾಲಾಡಲು ಬೇಕಾದ ಅತ್ಯುತ್ತಮ ಕಾರಣ, ನೆಪಗಳನ್ನು ಕಾಂಗ್ರೆಸ್ ಪಕ್ಷವೇ ದಯಪಾಲಿಸಿದೆ. ಕಾಂಗ್ರೆಸ್ ಪಕ್ಷ ಇದನ್ನು ಹೇಗೆ ಎದುರಿಸುತ್ತದೆ ನೋಡಬೇಕು.

Leave a comment

Your email address will not be published. Required fields are marked *