ನೇತ್ರಾವತಿ ಬಲಿ! ಪಶ್ಚಿಮ ಘಟ್ಟಕ್ಕೆ ಕೊಡಲಿ! ವಂಚಕ ಆಡಳಿತದ, ದ್ರೋಹಿ ರಾಜಕಾರಣಿಗಳ ವಿರಾಟ್ ದರ್ಶನ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : August 10, 2015 at 3:38 PM

Ethinahole_Tಪರಶುರಾಮನ ಸೃಷ್ಟಿಯ ನಾಶ ಸನ್ನಿಹಿತ!

ಇದೇನೂ ಅಚ್ಚರಿಯ ಅಥವಾ ಅನಿರೀಕ್ಷಿತ ಸಂಗತಿಯಲ್ಲ. ಅನಪೇಕ್ಷಿತವಂತೂ ಹೌದು.

ತುಳುನಾಡು ಅಥವ ಅವಿಭಜಿತ ದಕ್ಷಿಣ ಕನ್ನಡ (ಕಾಸರಗೋಡು ಸೇರಿ) ಕರಾವಳಿಯ ಒಂದಿಡೀ ಪ್ರದೇಶವನ್ನು ಪರಶುರಾಮನು ಸೃಷ್ಟಿಸಿದನೆಂಬ ಪ್ರತೀತಿ ಇದೆ. ಇಲ್ಲಿನ ಜನರಿಗೆ ಅದರ ಬಗ್ಗೆ ಹೆಮ್ಮೆಯೂ ಇದೆ. ಈ ಹೆಮ್ಮೆಯ ನಾಡಿನ ಜನರಿಗೆ ಬುದ್ಧಿವಂತರೆಂಬ ಹಣೆಪಟ್ಟಿಯೂ ಇದೆ. ಎಲ್ಲೇ ಹೋದರೂ ದ.ಕ.ದ ಜನರಿಗೆ ವಿಶಿಷ್ಟ ಮನ್ನಣೆ, ಗೌರವ ಸಿಕ್ಕಿದ್ದೂ ಸತ್ಯ. ತಾವು ಬುದ್ಧಿವಂತರೆಂಬ ಹೆಮ್ಮೆಯೋ, ಅಹಂಕಾರವೋ ಅಥವಾ ಮುಗ್ಧತೆಯೋ, ಮೌಢ್ಯವೋ… ಒಟ್ಟಿನಲ್ಲಿ ಇಲ್ಲಿನ ಜನ ಮೈಮರೆತದ್ದು ಹೆಚ್ಚಾಗಿ ಇದೀಗ ಗಂಭೀರ ಅಪಾಯಕ್ಕೆ ಒಡ್ಡಿಕೊಂಡಿರುವ ಬಗ್ಗೆ ಕಿಂಚಿತ್ತೂ ತಿಳಿದುಕೊಳ್ಳದೇ ಹೋಗಿದ್ದು ಸಹಸ್ರಮಾನದ ವಿಪರ್ಯಾಸ!

ಅಪಾಯ ಗಂಭೀರ ಮಾತ್ರವಲ್ಲ, ಘೋರವಾಗಿದೆ. ಪ್ರಾಣಸಂಕಟ ಮಾತ್ರವಲ್ಲದೇ ನಾಡಿಗೆ ನಾಡೇ ಮರುಭೂಮಿಯಾಗುವತ್ತ ದಕ್ಷಿಣ ಕನ್ನಡ ಜಿಲ್ಲೆ ದಾಪುಗಾಲಿಟ್ಟಿದೆ. ಆದರೆ ಬುದ್ಧಿವಂತ ಜನರಿಗೆ ಮಾತ್ರ ಅದರ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ!

Dinesh Holla_Ethinahole_Press Meet

ಈ ನಡುವೆ, ಮೊತ್ತ ಮೊದಲು ಮೂಡುವ ಸಂಶಯ ಏನೆಂದರೆ, ನಾವು ನಿಜಕ್ಕೂ ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಅಥವಾ ನಿರಂಕುಶ ಆಡಳಿತಕ್ಕೊಳಪಟ್ಟಿದ್ದೇವೆಯೇ ಎಂಬುದು.

ಗೊಂದಲಕ್ಕೊಳಗಾಗಬೇಡಿ. ವಿಷಯ ಅದೇ ಎತ್ತಿನಹೊಳೆ ಯೋಜನೆ ಮತ್ತದರ ವಾಸ್ತವ ಸಂಗತಿಗಳು.

ಪ್ರಕೃತಿಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಯಾವುದೋ ಮೂರ್ಖರಿಂದ ತಯಾರಿಸಲ್ಪಟ್ಟ ಯೋಜನೆಯೊಂದು ಇದೀಗ ವಿಶ್ವದ ಅತ್ಯಂತ ವಿಶಿಷ್ಟ ನೈಸರ್ಗಿಕ ತಾಣವಾದ ಪಶ್ಚಿಮ ಘಟ್ಟವನ್ನೇ ಬುಡಮೇಲು ಮಾಡುವುದರ ಜೊತೆ, ನಿತ್ಯ ನೀರಾಶ್ರಯಕ್ಕೊಳಪಟ್ಟಿದ್ದ ಕರಾವಳಿ ಪ್ರದೇಶವನ್ನು ಮರಳುಗಾಡು ಮಾಡುವತ್ತ ಮೈಲುಗಟ್ಟಲೆ ಹಾದಿ ಕ್ರಮಿಸಿಯಾಗಿದೆ.

Ethinahole Waterful places (4) Ethinahole Waterful places (1)
Ethinahole Waterful places Ethinahole Reality (12)Ethinahole Waterful places (3)

ನಿಜ. ನೇತ್ರಾವತಿ ತಿರುವು ಯೋಜನೆಯನ್ನು ದಕ್ಷಿಣ ಕನ್ನಡದ ಜನರಿಗೆ ಮಂಕುಬೂದಿ ಎರಚುವುದಕ್ಕೋಸ್ಕರ ಎತ್ತಿನಯೊಳೆ ಯೋಜನೆ ಎಂದು ಹೆಸರು ಬದಲಾಯಿಲಾಯಿತು. ಅಲ್ಲಿಗೆ ಬುದ್ಧಿವಂತ ಜನರು ಆಕಳಿಸುತ್ತಾ ಮತ್ತೆ ನಿದ್ರೆಗೆ ಜಾರಿದರು. ವಾಸ್ತವ ಏನೆಂದರೆ, ಈ ಮಾರಕ ಯೋಜನೆ ರಾಕ್ಷಸ ನಡೆಯನ್ನು ಆರಂಭಿಸಿ ಪಶ್ಚಿಮ ಘಟ್ಟದ ಅಮೂಲ್ಯ ಅರಣ್ಯ ಸಂಪತ್ತನ್ನು ನಾಶಪಡಿಸಿ, ಪ್ರಕೃತಿಯ ಕಗ್ಗೊಲೆ ನಡೆಸುತ್ತಾ ಸಾವಿರಾರು ಎಕರೆ ಕೃಷಿ ಭೂಮಿ, ನೀರಾವರಿ ಪ್ರದೇಶವನ್ನು ಸ್ವಾಹಾ ಮಾಡುತ್ತಾ ಮುನ್ನಡೆದಿದೆ.

ಬುದ್ಧಿವಂತರ ರಾಜಧಾನಿ ಮಂಗಳೂರಿನ ಜನರು ಕುಡಿಯವ ನೀರಿಗೆ ಅರಬ್ಬಿ ಸಮುದ್ರವನ್ನೇ ಆಶ್ರಯಿಸಬೇಕಾದ ಕಾಲ ಸನಿಹಕ್ಕೆ ಬಂದಿದೆ!

ನಮಕ್ ಹರಾಮ್ ರಾಜಕಾರಣಕ್ಕೆ ಪಕ್ಕಾ ಗಾಡ್‍ಫಾದರ್‍ಗಳಂತಿರುವ ಎಂ. ವೀರಪ್ಪ ಮೊಯ್ಲಿ ಮತ್ತು ಸದಾನಂದ ಗೌಡ ಎಂಬ ಮಾಜಿ ಮುಖ್ಯಮಂತ್ರಿಗಳಿಬ್ಬರು, ತಮ್ಮನ್ನು ಬೆಳೆಸಿದ, ಸಾಕಿ ಸಲಹಿದ ನಾಡು ಮತ್ತು ಜನರಿಗೆ ತಮ್ಮ ಸ್ವಾರ್ಥಕ್ಕಾಗಿ ಹೇಗೂ ದ್ರೋಹ ಬಗೆಯಬಹುದೆಂಬುದನ್ನು ನಿರೂಪಿಸಿದ ಯೋಜನೆಯಿದು (ಅವರಿಗೆ ಇಲ್ಲಿನ ಮತದಾರರ ಹಂಗೇ ಇಲ್ಲ!). ನೇತ್ರಾವತಿ ಒಣಗಿದರೂ, ಪಶ್ಚಿಮ ಘಟ್ಟ ನೆಗೆದುಬಿದ್ದು ಹೋದರೂ ಅವರಿಗೆ ಯಾವುದೇ ಚಿಂತೆ ಇದ್ದಂತಿಲ್ಲ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಇಲ್ಲಿನ ಇತರ ರಾಜಕಾರಣಿಗಳ ಹಣೆಬರಹವೂ ಅಷ್ಟಕ್ಕಷ್ಟೇ.

ತಾವು ಬುದ್ಧಿವಂತರೆಂದುಕೊಂಡ ದಕ್ಷಿಣ ಕನ್ನಡದ ಸಮಸ್ತ ಜನತೆ, ಊರಿನ ಹಾಗೂ ಪರವೂರಿನ ಎಲ್ಲರನ್ನೂ ಸೇರಿಸಿ, ಹೇಗೆ ಮೂರ್ಖರಾಗಿದ್ದಾರೆಂದರೆ ಅವರಿಗದನ್ನು ವಿವರಿಸಿದರೆ ನಂಬುತ್ತಾರೆಯೇ ಎಂಬುದು ಯಕ್ಷ ಪ್ರಶ್ನೆ.

Ethinahole Reality (9) Ethinahole Reality (8) Ethinahole Reality (6)

ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ ಎಂಬ ರಸ್ತೆ ದಶಕಗಳಿಂದ ನಾಯಿಪಾಡಾಗಿ, ರಾತ್ರಿಯಿಡೀ ಸೊಂಟ ಉಳುಕಿಸಿ, ಗಂಟೆಗಟ್ಟಲೆ ರಸ್ತೆಯಲ್ಲೇ ಬಸ್ಸಿನೊಳಗೆ ರಾತ್ರಿ ಕಳೆದು ಶಪಿಸುತ್ತಾ ತಮ್ಮ ನೆಲೆ ಸೇರಿಕೊಂಡ ಬುದ್ಧಿವಂತ ಜನರಿಗೆ ಅದರ ನೆನಪಾಗುವುದು ಮತ್ತೊಮ್ಮೆ ಅದೇ ರಸ್ತೆಯಲ್ಲಿ ಸಂಚರಿಸುವಾಗಲೇ. ಇಂತಹ ನಿಕೃಷ್ಟ ನಾಗರಿಕ ಜವಾಬ್ದಾರಿಯ (ಸಿವಿಕ್ ಸೆನ್ಸ್) ಜನಸಂಕುಲಕ್ಕೆ ಏನು ದೊರೆಯಬೇಕೋ ಅದೇ ದೊರೆಯುತ್ತಿದೆ!

ಆಘಾತಕಾರಿ ಸಂಗತಿಯೆಂದರೆ ಈ ಜನರಿಗೆ ಈಗಲೂ ಯಾವುದೇ ಚಿಂತೆಯಿಲ್ಲ. ಆತಂಕವಂತೂ ಇಲ್ಲವೇ ಇಲ್ಲ!

ಹೀಗಿರುವಾಗ ನಡೆಯಬೇಕಾದ್ದೇ ನಡೆಯುತ್ತಿದೆ.

ಹತ್ತಿಪ್ಪತ್ತು ವರ್ಷಗಳಲ್ಲಿ ಹಲವು ಬಾರಿ ತಿಂಗಳುಗಟ್ಟಲೇ ರಸ್ತೆ ಬಂದ್ ಮಾಡಿ ರಿಪೇರಿ ಮಾಡದ ರಸ್ತೆಯನ್ನು ಈ ಬಾರಿ ಮುಕ್ಕಾಲು ವರ್ಷ ಬಂದ್ ಮಾಡಲಾಯಿತು. ಕಾರಣ, ಕಾಂಕ್ರೀಟ್ ಹಾಕಿ ಶಾಶ್ವತ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಈ ದೀರ್ಘ ಸಮಯ ಬೇಕಾಗುತ್ತದೆ ಎಂದು ಹೇಳಲಾಯಿತು. ಒಪ್ಪತಕ್ಕ ವಿಚಾರವೇ. ಏಳು ತಿಂಗಳು ಹೆದ್ದಾರಿ ಬಂದ್ ಮಾಡಿ ಇದೀಗ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕೇವಲ ಒಂದು ತಿಂಗಳಿಗೆ ಮಾತ್ರ!

ಮತ್ತೆ ಇನ್ನೊಂದು ಆರೇಳು ತಿಂಗಳು ಮುಚ್ಚಲಾಗುತ್ತದೆಯಂತೆ! ಪ್ರಪಂಚದಲ್ಲಿ ಎಲ್ಲೂ ಕಾಣದ ರೀತಿ ಇದು. ಅದು ಬೇರೆ ವಿಚಾರ.

ಇಷ್ಟಕ್ಕೂ ಇದರ ಹಿಂದೆ ನಿಗೂಢ ಕಾರಣವಿದೆ. ಬುದ್ಧಿವಂತರನ್ನು ಮಂಗ ಮಾಡುವ ಹೂರಣವಿದೆ.

ಅದೇ, ಎತ್ತಿನಹೊಳೆ ಯೋಜನೆ ಎಂಬ ಸೈಂಧವ ರಾಕ್ಷಸೀ ಕೃತ್ಯ.

ಇದನ್ನು ನಾನಂತೂ ಯೋಜನೆ ಎಂದು ಹೇಳಲಾರೆ.

Ethinahole Reality (13)

Ethinahole Reality (4) Ethinahole Reality (7) Ethinahole Reality (5)

ಪ್ರಜಾಪ್ರಭುತ್ವದಲ್ಲಿ ಯಾವುದೇ ಯೋಜನೆ ಜಾರಿಯಾಗುವುದು ಬಿಡಿ, ಅಂತಹ ಯೋಜನೆಯ ತಯಾರಿಗೂ ಮುನ್ನ ಹಲವಾರು ಸಂಗತಿಗಳನ್ನು ಪಾಲಿಸಬೇಕಾಗುತ್ತದೆ. ಕಾನೂನು, ನೀತಿ, ನಿಯಮಗಳ ಜೊತೆ ಯೋಜನೆಯ ಅಗತ್ಯ, ಸಾಧಕ ಬಾಧಕ ಪರಿಣಾಮಗಳ ಬಗ್ಗೆ, ದೂರದೃಷ್ಟಿಯ ವಿಚಾರಗಳು, ಖರ್ಚು ವೆಚ್ಚ, ಅವಧಿ, ಸಾಧ್ಯತೆ ಮುಂತಾದ ಹತ್ತು ಹಲವು ಅಗತ್ಯ, ಪ್ರಾಸೆಸ್‍ಗಳನ್ನು ಪೂರೈಸಬೇಕಾಗುತ್ತದೆ.

ಆದರೆ ಈ ರಾಕ್ಷಸ ಸ್ವರೂಪಿ ಅತ್ಯಾಚಾರಿ ಯೋಜನೆಗೆ ಇದೆಲ್ಲಾ ಏನೂ ಬೇಕಾಗಿಲ್ಲ.

ಇದು ಕೇವಲ ಅತ್ಯಾಚಾರ ಮಾತ್ರವಲ್ಲ, ಕೊಲೆ. ಅದೂ ಸಾಮೂಹಿಕ ಹತ್ಯಾಕಾಂಡ, ಬರ್ಬರ ಮಾರಣಹೋಮ, ಭೀಭತ್ಸ ಹಿಂಸೆ.

ಪ್ರಕೃತಿಯ ಮೇಲೆ ನಡೆಯುವ ಹಲ್ಲೆಯನ್ನು ಯಾವ ಮನುಷ್ಯ ಒಪ್ಪಿಕೊಳ್ಳುತ್ತಾನೆಯೋ ಅವನಲ್ಲಿ ರಾಕ್ಷಸತನವಿದೆಯೆಂದೇ ಅರ್ಥ. ಇಂತಹ ರಾಕ್ಷಸೀತನ, ಪಾಶವೀತನ ಈ ಎತ್ತಿನಹೊಳೆ ಯೋಜನೆಯಲ್ಲಿ ದರ್ಶನವಾಗಿದೆ. ಇದರ ವಿರಾಟ್ ರೂಪ ನಿಮಗಿಲ್ಲಿ ಕೊಡಲಾಗಿದೆ.

ಕಳೆದ ಶನಿವಾರ (8-8-2015) ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ಸಹ್ಯಾದ್ರಿ ಸಂರಕ್ಷಣಾ ಸಂಚಯ’ ಜನತೆಯೆದುರು ತೆರೆದಿಟ್ಟ ವಾಸ್ತವವಿದು. ಜಿಲ್ಲೆಯ ಮಂತ್ರಿಗಳು, ಶಾಸಕರು, ಜನಪ್ರತಿನಿಧಿಗಳೆಲ್ಲಾ ತಮಗೆ ಏನೂ ಗೊತ್ತಿಲ್ಲ, ಯಾವುದರ ಪರಿವೆಯೂ ಇಲ್ಲವೆಂಬಂತೆ ನಟಿಸುತ್ತಿದ್ದರೆ, ಪ್ರಕೃತಿ ಪ್ರೇಮಿ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ನೇತೃತ್ವದ ತಂಡವೊಂದು ಸಕಲೇಶಪುರಕ್ಕೆ ಹೋಗಿ, ಎತ್ತಿನಹೊಳೆಯ ಪರಿಸರದಲ್ಲಿ ಮಾಹಿತಿ, ವಿವರ ಸಂಗ್ರಹಿಸಿ ಪತ್ರಕರ್ತರಿಗೆ ಹಂಚಿದೆ, ಜನರಿಗೆ ತಿಳಿಸುವುದಕ್ಕಾಗಿ. ಮರುದಿನ ಇದರ ವರದಿಯೂ ಪತ್ರಿಕೆ, ಮಾಧ್ಯಮಗಳಲ್ಲಿ ಬಂದಿದೆ. ಪರಿಣಾಮ, ಯಥಾವತ್ – ಶೂನ್ಯ.

ಪ್ರಮುಖ ವಿಚಾರವೆಂದರೆ ಇಲ್ಲಿನ ರಾಜಕಾರಣಿಗಳು, ಮಂತ್ರಿ ಮಹೋದಯರೆಲ್ಲಾ ನಿಶ್ಚಿಂತರಾಗಿ ತಿರುಗಾಡುತ್ತಿದ್ದಾರೆ. ಜನರು ಯಾವತ್ತೂ ತಮ್ಮನ್ನು ಏನೂ ಕೇಳುವುದಿಲ್ಲ ಎಂಬುದರ ವಾಸ್ತವಿಕ ಅನುಭವ ಅವರಿಗಿರುವಾಗ ಚಿಂತೆಯೇಕೆ, ಭಯವೇಕೆ? ಅಲ್ಲವೇ?!

ಸಹ್ಯಾದ್ರಿ ಸಂರಕ್ಷಣಾ ಸಂಚಯ ತೆರೆದಿಟ್ಟ ವಾಸ್ತವ ನಿಜಕ್ಕೂ ಆಘಾತಕಾರಿ ಸಂಗತಿಗಳನ್ನು ಬಯಲು ಮಾಡಿದೆ. ಕರ್ನಾಟಕದಲ್ಲಿ ಗೂಂಡಾ ರಾಜ್ಯ ಆಡಳಿತದಲ್ಲಿದೆಯೇನೋ ಎಂಬ ಭೀತಿ ಕಾಡದೇ ಇರದು, ಅಂತಿದೆ ನಡೆದ, ನಡೆಯುತ್ತಿರುವ ಘಟನೆಗಳು, ಸಂಗತಿಗಳು.

Ethinahole paper cuttings

Ethinahole paper cuttings (1) Ethinahole paper cuttings (4) Ethinahole paper cuttings (3) Ethinahole paper cuttings (2)

ಮಳೆಗಾಲದಲ್ಲಿ ಪಶ್ಚಿಮ ಘಟ್ಟ ಹಾಗೂ ಕರಾವಳಿಯ ನದಿಗಳಲ್ಲಿ ಹರಿಯುವ ನೀರು ಸಮುದ್ರ ಸೇರಿ ವ್ಯರ್ಥವಾಗುತ್ತದೆ ಎಂಬ ಯೋಚನೆಯೂ ಪರಮ ಮೌಢ್ಯತನದ್ದು. ಇದೇ ವಾದವನ್ನಿಟ್ಟುಕೊಂಡು ಸಕಲೇಶಪುರದ ಬಳಿಯ ಎತ್ತಿನಹೊಳೆ ಪ್ರದೇಶದಲ್ಲಿ ಸಂಗ್ರಹವಾಗುವ ನೀರನ್ನು ರಾಕ್ಷಸ ಯಂತ್ರಗಳಿಂದ ಎತ್ತಿ ಬೆಂಗಳೂರು, ಕೋಲಾರ ಕಡೆ ಸಾಗಿಸುವ ಈ ಆರೋಪಿತ ಯೋಜನೆ, ಶುದ್ಧ ಮನಸ್ಸಿನಲ್ಲಿ ಆರಂಭವಾಗಿಲ್ಲವೆನ್ನುವುದು ನಿಶ್ಚಿತ. ಸೂಕ್ಷ್ಮ, ಅಮೂಲ್ಯ ಹಾಗೂ ವಿಶಿಷ್ಟವಾದ ಪಶ್ಚಿಮ ಘಟ್ಟದ ಒಡಲನ್ನು ಕ್ರೂರವಾಗಿ ಬಗೆದು, ವೃಕ್ಷಸಂಹಾರದ ಜೊತೆ ಪರಿಸರ ನಾಶ, ಕೃಷಿಭೂಮಿಯ ಆಪೋಶನ ತೆಗೆದುಕೊಂಡು ನಿರ್ದಯವಾಗಿ ನಡೆಸುವ ಈ ಯೋಜನೆ ಯಾರಿಗೂ ಒಳಿತು ತಾರದು. ಪಡೆದುಕೊಳ್ಳುವುದೇನಿದ್ದರೂ, ಪ್ರಕೃತಿ ಮಾತೆಯ ಶಾಪವಷ್ಟೇ!

ಅಷ್ಟೇ ಅಲ್ಲ, ಸ.ಸಂ.ಸಂ. ಆರೋಪಿಸುವಂತೆ ಇಲ್ಲಿ ಯಾವುದೇ ನೀತಿ, ನಿಯಮ, ಕಾನೂನಿನ ಪಾಲನೆಯಾಗಿಲ್ಲ. ನರರಾಕ್ಷಸರಂತೆ ಕೇವಲ ಧನಬಲ ಮತ್ತು ಬಾಹುಬಲದಿಂದ ಭೂಮಿಯ ಆಕ್ರಮಣ ನಡೆದಿದೆ ಎಂಬುದು ಗುಟ್ಟಿನ ಸಂಗತಿಯಲ್ಲ. ಅಮಾನವೀಯವಾಗಿ ಅರಣ್ಯ ನಾಶ, ಭೂಮಿಯ ಮೇಲೆ ಅನಾಚಾರ, ಅತ್ಯಾಚಾರದ ಜೊತೆಗೆ ವಿರೋಧಿಸಿದವರನ್ನು ಉಪಾಯವಾಗಿ ದಮನಿಸಿದ್ದು ಕಂಡುಬರುತ್ತದೆ.

ಇದರ ಅರ್ಥವೇನೆಂದರೆ ಇದು ಖಂಡಿತವಾಗಿ ಅಕ್ರಮವಾದ, ಅನ್ಯಾಯದ ಮತ್ತು ಅನಗತ್ಯವಾದ ಹೇಯ ಯೋಜನೆ.

ಇಂಥಾ ಯೋಜನೆಯನ್ನು ಹೇಗಾದರೂ ಜಾರಿಗೊಳಿಸಬೇಕೆಂದು ಬಯಲುಸೀಮೆಯ ರಾಜಕಾರಣಿಗಳ ಛಲ ಒಂದೆಡೆಯಾದರೆ, ತಮ್ಮಿಂದ ಮಾಡುವಂಥದ್ದು, ಸಾಧಿಸುವಂಥದ್ದೂ ಏನೇನೂ ಇಲ್ಲವೆಂಬ ಪರಿವೆಯುಳ್ಳ ಕರಾವಳಿಯ ಕೈಲಾಗದ ರಾಜಕಾರಣಿಗಳು ಇನ್ನೊಂದೆಡೆ.

ಪರಿಣಾಮ ನೈಸರ್ಗಿಕ ಸಂಪತ್ತಿನ ಮಾರಣಹೋಮವಷ್ಟೇ ಅಲ್ಲ, ಸಕಲೇಶಪುರದಿಂದ ಬೆಂಗಳೂರು, ಕೋಲಾರದವರೆಗೆ ನೀರು ಸಾಗಿಸಲು ಕಾಲುವೆ ನಿರ್ಮಾಣಕ್ಕಾಗಿ ಲಕ್ಷಾಂತರ ಜನರ ಒಕ್ಕಲೆಬ್ಬಿಸುವಿಕೆ, ಭೂಮಿ, ಪರಿಸರ ನಾಶ, ಮಾಲಿನ್ಯ ಮತ್ತು ತತ್ಸಂಬಂಧಿ ಸಮಸ್ಯೆಗಳು ಉಚಿತ. ಇತ್ತ, ನೇತ್ರಾವತಿ ನದಿ ಕೆಲವೇ ವರ್ಷಗಳಲ್ಲಿ ಬರಿದಾಗುವುದು ಖಚಿತ.

ಅತ್ತ ಮಳೆಯೂ ಇಲ್ಲ. ಮಾನವ ನಿರ್ಮಿತ ಗ್ಲೋಬಲ್ ವಾರ್ಮಿಂಗ್ ಸಮಸ್ಯೆಯ ಭೀಕರ ಪರಿಣಾಮಗಳು ಪ್ರಪಂಚವನ್ನು ತಲ್ಲಣಗೊಳಿಸಿವೆ. ಇದೇ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಬರಬೇಕಾದ ಮಳೆಯೂ ಬಂದಿಲ್ಲ. ಇಷ್ಟೆಲ್ಲಾ ಇರುವಾಗ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ಬರಿದು ಮಾಡಿ, ಕೊನೆಗೆ ಘಟ್ಟದ ಮೇಲಿನವರಿಗೂ ನೀರಿಲ್ಲ, ಘಟ್ಟದ ಕೆಳಗಿನವರಿಗೂ ಉಳಿಗಾಲವಿಲ್ಲದಂತೆ ಮಾಡುವ ಘನ ಉದ್ದೇಶದ ಈ ಮಾರಕ ಯೋಜನೆಯನ್ನು ಜನರು ಒಗ್ಗೂಡಿ ವಿರೋಧಿಸದಿದ್ದರೆ ಹೇಗಾದೀತು? ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ನೀರೂ ಇರದು, ವಾಸಯೋಗ್ಯ ಪರಿಸರವೂ ಇಲ್ಲವಾದೀತು.

ಕೆಲ ದಿನಗಳ ಹಿಂದೆ ಇದೇ ರೀತಿಯ ಪ್ರಕೃತಿ ನಾಶದ ಸ್ಯಾಂಪಲ್ ಒಂದು ಮಂಗಳೂರಿನ ಜನರನ್ನು ತಟ್ಟಿತ್ತು. ವರ್ಷವಿಡೀ ನೀರಾಶ್ರಯವಿರುವ, ಹಿಂದೆ ಗದ್ದೆಗಳಿಂದ ನಳನಳಿಸುತ್ತಿದ್ದ, ಹೆದ್ದಾರಿ ಯೋಜನೆಯಿಂದ ಕೃಷಿ ನಿರ್ನಾಮವಾಗಿ ಕಾಂಕ್ರೀಟ್ ಕಾಡಾಗಿ ‘ಮತಾಂತರ’ಗೊಂಡಿರುವ ಒಂದು ಸುಂದರ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ ಜಖಂಗೊಂಡು ಮಂಗಳೂರಿಡೀ ಐದು ದಿನಗಳ ಕಾಲ ನೀರಿಲ್ಲಿದೆ ಒದ್ದಾಡಿತ್ತು. ಹತ್ತಿಪ್ಪತ್ತು ಅಡಿ ನೀರು ತುಂಬಿದ ಗದ್ದೆಗಳಿಗೆ ಕಲ್ಲು, ಕಾಂಕ್ರೀಟ್ ಸುರಿದು ಆಕರ್ಷಕ ಸೈಟ್, ಕಟ್ಟಡ ಕಟ್ಟುವ ಪ್ರಕ್ರಿಯೆಯಲ್ಲಿ ಈ ಪೈಪ್‍ಗಳು ಜಖಂಗೊಂಡಿದ್ದವು.

ವಿಷಯವೇನೆಂದರೆ, ಭರದಿಂದ ಸುರಿಯುತ್ತಿದ್ದ ಮಳೆಯ ನಡುವೆಯೂ ತುಂಬಿ ತುಳುಕುವ ನೀರಿನ ಸಂಗ್ರಹವಿದ್ದೂ ಲಕ್ಷಾಂತರ ಜನರು ನೀರಿಲ್ಲದೆ ನಾಯಿಪಾಡು ಅನುಭವಿಸಿದರು. ಹಾಗಿರುವಾಗ, ನೀರೇ ಇಲ್ಲ, ಅಂದರೆ ಮಳೆಯೂ ಇಲ್ಲದೆ, ನದಿಯೂ ಬರಡಾಗಿ ಬಿಟ್ಟರೆ, ಆಗಿನ ಪರಿಸ್ಥಿತಿಯನ್ನು ಒಂದು ಕ್ಷಣವಾದರೂ ಎಷ್ಟು ಜನ ಅಂದಾಜಿಸಿದರು? ದೇವರೇ ಬಲ್ಲ.

Ethinahole Reality (3) Ethinahole Reality (2) Ethinahole Reality Ethinahole Reality (1)

ದಕ್ಷಿಣ ಕನ್ನಡದ ಜನರಿಗೆ ದೈವಭಕ್ತಿ ಹೆಚ್ಚು. ಸಾಲದ್ದಕ್ಕೆಂಬಂತೆ ಇಲ್ಲಿರುವ, ಎಲ್ಲಾ ಧರ್ಮ, ಜಾತಿಗಳವರ ದೇವಾಲಯಗಳು, ದೈವಸ್ಥಾನಗಳು, ಗುಡಿ, ಮಂದಿರಗಳೂ ಸಾವಿರಾರು. ಬಹುಶಃ ಇಲ್ಲಿನ ಜನರ ಮುಂದಿನ ಪೀಳಿಗೆಯವರು ನೀರಿಗಾಗಿ, ಮಳೆಗೋಸ್ಕರ ಪ್ರಾರ್ಥಿಸುತ್ತಾ, ಪೂಜಿಸುತ್ತಾ, ಹರಕೆ ಹೊತ್ತು, ವೃತ ಮಾಡಿಕೊಂಡು ಆಕಾಶ ನೋಡುತ್ತಾ ಕುಳಿತುಕೊಳ್ಳಬೇಕಾದೀತೇನೋ. ಯಾಕೆಂದರೆ, ಇಂದಿನ ಪೀಳಿಗೆಯ ಬಹುತೇಕರಿಗೆ ನೀರಿನ ಬಗ್ಗೆಯಾಗಲೀ, ಪ್ರಕೃತಿಯ ಮೇಲಾಗಲೀ, ಭವಿಷ್ಯದ ಬಗೆಗಾಗಲೀ ಚಿಂತೆ, ಯೋಚನೆ ಎಂಬುದಂತೂ ಇದ್ದಂತೆ ಕಾಣುವುದಿಲ್ಲ. ಎಲ್ಲೆಲ್ಲಿಯೂ ಕಾಂಕ್ರೀಟ್ ಕಾಡು ಬೆಳೆಸುತ್ತಾ ಇರುವುದನ್ನು ನೋಡಿದರೆ ಯಾರಿಗಾದರೂ ಹೀಗೇ ಅನಿಸುವುದು ಸಹಜ.

ಇನ್ನೊಂದು ಅತಿ ಮುಖ್ಯ ವಿಚಾರವಿದೆ. ಇಷ್ಟೆಲ್ಲಾ ಸರ್ಕಸ್ ಮಾಡಿ, ಜನರನ್ನು ದಾರಿ ತಪ್ಪಿಸಿ, ವಂಚಿಸಿ, ಪ್ರಕೃತಿಯನ್ನು ಹಾಗೂ ಜನರ ತೆರಿಗೆಯ ಹಣವನ್ನು ಲೂಟಿ ಮಾಡಿ ಕೊಂಡೊಯ್ಯುವ ನೀರಿದೆಯಲ್ಲಾ, ಅದು ಜನರಿಗೆ ಕುಡಿಯುವುದಕ್ಕೆ ಅಂತೂ ಅಲ್ಲವೇ ಅಲ್ಲವಂತೆ. ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಕೇಂದ್ರ ಸಚಿವರೇ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಹೀಗೆ ಕೊಂಡೊಯ್ಯುವ ನೀರು ಕೇವಲ ಕೈಗಾರಿಕೆಗಳಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲ್ಪಡುವುದಂತೆ. ಕುಡಿಯಲಿಕ್ಕೆ ಅಲ್ಲ. ಅಷ್ಟೇ ಅಲ್ಲ, ಈ ಯೋಜನೆಗೆ ಬೇಕಾದ ಅನುಮತಿಯನ್ನು ಪಡೆದುಕೊಂಡಿಲ್ಲವೆಂದೂ ಆ ಸಚಿವರು ಹೇಳಿದ್ದಾರೆ.

ಹಾಗಾದರೆ, ಪಶ್ಚಿಮ ಘಟ್ಟಕ್ಕೆ ಕೊಡಲಿಯಿಟ್ಟು, ನೇತ್ರಾವತಿಯನ್ನು ಬಲಿಗೊಟ್ಟು, ಭೂಮಿಯ ಒಡಲಿಗೆ ಕೊಳ್ಳಿಯಿಟ್ಟು, ನಿಸರ್ಗದ ನಾಶ-ವಿನಾಶ-ಮಾರಣಹೋಮ ನಡೆಸಿ ಸಿಗುವ ಕೇವಲ 9 ಟಿಎಂಸಿ (24 ಟಿಎಂಸಿ ನೀರು ಸಿಗುವುದೇ ಇಲ್ಲವಂತೆ) ನೀರನ್ನು ಅಪಹರಿಸುವ ಹುನ್ನಾರದ ಹಿಂದಿರುವ ರಹಸ್ಯವಾದರೂ ಏನು?

ಕೇಳದೇ ಇದ್ದರೆ ದಕ್ಷಿಣ ಕನ್ನಡದ ಬುದ್ಧಿವಂತರಿಗೆ ಉಳಿಗಾಲವಿಲ್ಲ.

Video 1:  Know the truth

 

Video 2:  Destruction of farm land

 

Video 3:  Reality check

 

Video 4:  Path for pipes

 

Video 5:  Pipes stock

 

Video 6:  Construction of Dam

 

Video 7:  Pipes

 

Video 8:  Pipes

 

Video 9:

 

Video 10:

 

Video 11:

(ಕೃಪೆ: ಇಲ್ಲಿನ ಚಿತ್ರಗಳು, ವೀಡಿಯೋ ಮತ್ತು ಮಾಹಿತಿ ಒದಗಿಸಿದವರು: ಸಹ್ಯಾದ್ರಿ ಸಂರಕ್ಷಣಾ ಸಂಚಯ, ಮಂಗಳೂರು)

Send Feedback to: budkuloepaper@gmail.com

Like us at: www.facebook.com/budkulo.epaper

3 comments

  1. First of all we should try to satisfy the water needs of farmers in Dakshina Kannada and Udupi districts by planning to provide water facility for their drinking purpose and for cultivation. There is no water here for drinking as well as for cultivation in high lying areas. Our politicians are busy in overplanning not in planning for the needs of local people

  2. Parashurama srhstiya e bhoomiyannu rakshane madalu yavude thyagakku sidda. edara virudda horadabeku jilleya yella janarige karapatravannu hanchabeku. yojaneyannu nillisuva Tanaka bandh nadesabeku

Leave a comment

Your email address will not be published. Required fields are marked *