ನಾನ್ಯಾಕೆ ದೇಶ ಬಿಡಲಿ?

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : November 27, 2015 at 12:23 PM

Poem_Kannadaಆಕೆ
ಆತನಿಗೆ ಹೇಳಿದಳು
ನಿನ್ನ ಹೆಂಡತಿಯನ್ನು ಬಿಟ್ಟು ಬಾ
ಈತ
ಅದನ್ನು ಮಾಡಿದ
ಒಡಲಲ್ಲಿತ್ತು ಅಸಹಿಷ್ಣುತೆ
ಬಿಟ್ಟೇ ಬಿಟ್ಟ
ಹೆಂಡತಿ ಮಕ್ಕಳನ್ನು
ಈಕೆಯ ಸಂಗವೇ ಹಿತಕರವಲ್ಲವೆ!

ಈಗ
ಆಕೆ
ಮತ್ತೆ ಹೇಳುತ್ತಿದ್ದಾಳೆ
ನಾವೀ ದೇಶವನ್ನು ಬಿಟ್ಟು ಬಿಡೋಣ
ವಿದೇಶದಲ್ಲಿ ನೆಲೆಸೋಣವೇ
ಕೇಳುತ್ತಾಳೆ, ಕೋರುತ್ತಾಳಾಕೆ

ಆದರೆ
ಈತನಿಗದು ಸಾಧ್ಯವೇ?

ಬಿಟ್ಟು ಲಾಭವಿದ್ದೊಡೆ
ಎಲ್ಲವನ್ನೂ ಬಿಡಲಾದೀತು
ಬಿಟ್ಟು ಲಾಭವಿಲ್ಲದೊಡೆ
ಬಿಡಲಾದೀತೆ?

ಇದಲ್ಲವೇ ದೇಶ
ತನ್ನನ್ನು
ಏನೇನಲ್ಲದವನನ್ನು
ಎಲ್ಲವನ್ನೂ ಕೊಟ್ಟು ಸಲಹಿದ್ದು
ಈ ದೇಶದ ಜನರಲ್ಲವೇ
ತನ್ನನ್ನು ಸಾಕಿ ಸಲಹಿ ಎತ್ತರಕ್ಕೇರಿಸಿದ್ದು
ಇದೇ ದೇಶವಲ್ಲವೇ
ತನಗೆ ಅಸ್ತಿತ್ವ ಶ್ರೀಮಂತಿಕೆ ಸ್ಥಾನ ಘನತೆ ಗೌರವ ಕೊಟ್ಟಿದ್ದು
ಬಿಟ್ಟೇನೇ

ಈ ನಾಡಿನಲ್ಲಿ ಏನೇ ಮಾಡಿದರೂ ನಡೆಯುತ್ತದೆ
ಕ್ರಿಯಾಶೀಲತೆಯೆಂದು ಏನನ್ನು ಕುಲಗೆಡಿಸಿದರೂ
ಯಾವುದನ್ನೂ ಅವಮಾನಿಸಿದರೂ
ಮುಕ್ತವಾಗಿ ಸ್ವೀಕರಿಸುವ ಜನರು ಇದೇ ನಾಡಿನವರಲ್ಲವೆ?
ಪೂಜಿಸುವ ಜನರು ಇಲ್ಲಿನವರು
ಏನೋ ಹೇಳಿ ಏನೇನೋ ಪ್ರತಿಕ್ರಿಯೆ ಬಂದರೇನಂತೆ
ಕಬಳಿಸಲು, ಮುಕ್ಕಲು ಇಲ್ಲಲ್ಲದೆ ಬೇರೆ ಎಲ್ಲಿ ಸಾಧ್ಯವಾದೀತು?

ಹೀಗೆಂದು ಮನಸ್ಸು ಹೇಳಲು
ಆಕೆಯ ಮಾತನ್ನು ಪಾಲಿಸಲು ಬೇಡವೆಂದಿದ್ದರೂ
ಅವಳ ಹೇಳಿಕೆಯನ್ನು ಮನಸಾರೆ ಒಪ್ಪುತ
ಬಹಿರಂಗಗೊಳಿಸಿದನಾತ

ದೇಶ ಬಿಟ್ಟರೆ ಏನುಂಟು?
ಜೀವಕ್ಕೂ ಬೆಲೆಯಿಲ್ಲದ ದೇಶಗಳಿವೆ
ಕಾನೂನು ಕಟ್ಟಳೆ ನೀತಿ ನಿಯಮ
ಕಟ್ಟುಪಾಡಿನಿಂದ ಪಾಲಿಸಬೇಕಾದ ರಾಷ್ಟ್ರಗಳಿವೆ
ಉಲ್ಲಂಘನೆ, ಅಪರಾಧಗಳಿಗೆ
ಜೀವನ ಪರ್ಯಂತ ಜೈಲಲ್ಲಿ ಕೊಳೆಸುವ ದೇಶಗಳೂ ಇವೆ

ಆದರೆ
ಈ ನಾಡಿನಲ್ಲಿ
ತಾನೊಬ್ಬ ತಾರೆ
ಇಲ್ಲಿ ಏನು ಬೇಕಾದರೂ ಮಾಡಬಹುದು
ಹೇಗೆ ಬೇಕಾದರೂ ನಡೆದುಕೊಳ್ಳಬಹುದು
ಶಿಕ್ಷೆಯ ಅಂಜಿಕೆಯಿಲ್ಲ
ದಂಡದ ಬೆದರಿಕೆಯಿಲ್ಲ
ಬದಲಾಗಿ
ರಾಜ ಮರ್ಯಾದೆಯೂ ದಕ್ಕುತ್ತದೆ
ನೂರು ಸಾವಿರ ಕೋಟಿಗಳನ್ನು
ಸಲೀಸಾಗಿ ಬಾಚಲೂ ಇಲ್ಲೇ ಅಲ್ಲವೇ ಸಲೀಸು?

ಇಂಥಾ ದೇಶವನ್ನು
ಬಿಟ್ಟು ಬಿಡಲಾದೀತೇ
ಎಂದಿಗೂ ಇಲ್ಲ

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

Leave a comment

Your email address will not be published. Required fields are marked *