ಹಳ್ಳಿ ಬಂದ್
ಪಾಲ್ದಟ್ಟೆ ಇಡೀ ಜಿಲ್ಲೆಯಲ್ಲೇ ಹೆಸರಾಂತ ಹಳ್ಳಿ. ಈ ಹಳ್ಳಿಯ ಜನರು ಈ ಕಾಲದಲ್ಲೂ ಶಾಂತಿ ಸಮಾಧಾನದಿಂದ ಬಾಳುವ ನಿವಾಸಿಗಳು. ಇವರು ಆಟೋಟಗಳಲ್ಲಿ ಬಹಳ ಆಸಕ್ತಿ ಉಳ್ಳವರು. ಈ ಹಳ್ಳಿಯಲ್ಲೇ ವಾಸಿಸುವ ಪೆದ್ರಾಮರು ಚಿಕ್ಕಂದಿನಿಂದಲೂ ಕ್ರಿಕೆಟ್‍ನ ಸಣ್ಣ ಕಿಲಾಡಿ. ಈ ಆಟದಲ್ಲಿ ಬಹಳ ಆಸಕ್ತಿಯುಳ್ಳವರು. ಕಳೆದ ಕೆಲವು ವರ್ಷಗಳಿಂದ ಉದ್ಯೋಗದ ನಿಮಿತ್ತ ಬ್ಯುಸಿ ಇದ್ದುದರಿಂದ ಮತ್ತು ಭಾನುವಾರ ರಜಾದಿನವಾದರೂ ಆಡಲು ಮೈದಾನ ಸಿಗುತ್ತಿರಲಿಲ್ಲ. ಈ ದಿನಗಳಲ್ಲಿ ಮೈದಾನದಲ್ಲಿ ಮದುವೆ, ಸಂಭ್ರಮ, ನಾಟಕ, ರಾಜಕೀಯ ಮುಖಂಡರ ಸಭೆ, ಭಾಷಣ ಇತ್ಯಾದಿ ಯಾವಾಗಲೂ ಇರುತ್ತಿದ್ದವು. ಅಲ್ಲದೆ ಆತನ ಮಿತ್ರರೂ ರಜಾದಿನದಂದು ಸಂಬಂಧಿಕರ ಭೇಟಿ, ಪಿಕ್ನಿಕ್‍ಗಳಿಂದಾಗಿ ಬಿಡುವು ಪಡೆಯುತ್ತಿರಲಿಲ್ಲ. ಇವರು ಹೆಚ್ಚಾಗಿ ಕ್ರಿಕೆಟನ್ನು ವೀಕ್ಷಿಸಿದ್ದು ಟಿ.ವಿ.ಯಲ್ಲಿ ಮತ್ತು ತಾಲೂಕ್ ಬಂದ್, ರಾಜ್ಯ ಬಂದ್ ಮತ್ತು ಫೆರ್ನಾಂಡಿಸರ ಭಾರತ್ ಬಂದ್ ಇದ್ದಾಗ ಮಾತ್ರ. ಅದೂ ಸಹ ಮೈದಾನದಲ್ಲಿ ಅಲ್ಲ. ಆಗಾಗ ಬಂದ್‍ನ ಪರಿಣಾಮವಾಗಿ ನಿರ್ಜನವಾಗಿದ್ದ ರಸ್ತೆಯಲ್ಲಿ ಇವರಂತಹ ಅಟ್ಟುಪೊಟ್ಟು ಆಟಗಾರರು ಕ್ರಿಕೆಟನ್ನು ಆಡುತ್ತಿದ್ದಾಗ ಮಾತ್ರ.
ಪೆದ್ರಾಮರು ಮತ್ತು ಇವರ ಮಿತ್ರರಾದ ಪಕ್ಕು, ಗಿಚ್ಚಾ, ಗಬ್ರು, ಲಾದ್ರು, ಸಂತು, ಅಂತು, ರಾಮು, ಶ್ರೀಧರ, ಹರೀಶ, ಯಾಶೀನ್, ಮನ್ಸೂರ್, ಜೆಫ್ರಿ, ಅಲೆಸ್ ಹಾಗೂ ಮೋಲಿ, ಸಿಂತಿ ಮತ್ತು ಕುಂತಿ ಎಂದು ಸುಮಾರು 20 ಆಟಗಾರರನ್ನು ಒಟ್ಟುಗೂಡಿಸಿ ಕ್ರಿಕೆಟ್ ಮ್ಯಾಚನ್ನು ಆಡುವುದೆಂದು ಹಾಗೂ ಇದಕ್ಕಾಗಿ ಮಾರ್ಗವು ನಿರ್ಜನವಾಗಿರಲು ಒಂದು ದಿನದ ‘ಹಳ್ಳಿ ಬಂದ್’ಗೆ ಕರೆ ಕೊಡುವುದೆಂದು ಆಲೋಚನೆಯನ್ನು ಮಾಡಿದರು.
ಪೆದ್ರಾಮರ ಈ ಸೂಚನೆಯನ್ನು ಕೇಳಿದ ಇವರ ಮಿತ್ರರು ಮೊದಲು ಉತ್ಸಾಹ ತೋರಿಸಲಿಲ್ಲವಾದರೂ, ‘ಟ್ವೆಂಟಿ-20’ ಪಂದ್ಯವೆಂದು ತಿಳಿದಾಗ ನಿಂತಲ್ಲೇ ಕೈಕಾಲುಗಳನ್ನು ಎತ್ತಿ, ತಿರುಗಿಸಿ, ಬೀಸಿ ಬ್ಯಾಟಿಂಗ್, ಬೌಲಿಂಗ್, ಕ್ಯಾಚಿಂಗ್ ಮಾಡಲು ಆರಂಭಿಸಿದರು. ಯಾಕೆಂದರೆ, ಇವರು ಕ್ರಿಕೆಟ್ ಆಡದೆ ಹಲವು ವರ್ಷಗಳೇ ಸಂದಿದ್ದವು. ಚಿಕ್ಕಂದಿನಲ್ಲಿ ಶಾಲೆಯಲ್ಲಿ ಮತ್ತು ಗಲ್ಲಿಗಳಲ್ಲಿ ಆಡಿದ್ದರು. ಜೊತೆಗೆ ಕಬಡ್ಡಿ, ಕುಟ್ಟಿದೊಣ್ಣೆ, ಬಿಲ್ಲಿಸ್, ಕುಂಟಾಟ, ಜಿಬಿಲಿ ಇತ್ಯಾದಿ ಆಟಗಳನ್ನೂ ಆಡಿದ್ದವರು. ಈಗ ಟೆಸ್ಟ್, 50 ಓವರಿನ ಕ್ರಿಕೆಟ್ ಆಟದಲ್ಲಿ ‘ಸಿಲೆಕ್ಷನ್’, ‘ಫಿಕ್ಸಿಂಗ್’ ಹಾಗೂ ‘ಎಕ್ಸ್‍ಪೆರಿಮೆಂಟ್’ನಿಂದಾಗಿ ಭಾರತವು ನಡು ನಡುವೆ ಒಂದೊಂದು ಮ್ಯಾಚನ್ನು ಜಯಿಸುತ್ತಿತ್ತು. ಈಗ ಐಸಿಎಲ್ ಮತ್ತು ಐಪಿಎಲ್ ಟ್ವೆಂಟಿ-20ಯ ಕ್ರಿಕೆಟ್‍ನಿಂದ ಕೋಟಿ ಕೋಟಿ ರೂಪಾಯಿಗಳ ಅದೃಷ್ಟವೇ ಬಂದುದರಿಂದ ಮತ್ತು ಇದರಲ್ಲಿ ಸಿನೆಮಾ ತಾರೆಯರು, ಉದ್ಯಮಿಗಳು ಹಾಗೂ ‘ಚಿಯರ್ ಲೀಡರ್ಸ್’ ಕ್ರಿಕೆಟನ್ನು ಇನ್ನಷ್ಟು ಆಕರ್ಷಕ ಹಾಗೂ ಪ್ರಸಿದ್ಧ ಮಾಡಿದ್ದಾರೆ. ಇದನ್ನು ತಿಳಿದ ರಾಜಕಾರಣಿಗಳು ಈಗ ‘ವೋಟ್‍ಬ್ಯಾಂಕ್ ಕ್ರಿಕೆಟ್’ನ್ನೂ ಆರಂಭಿಸಿದ್ದಾರೆ. ಈ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಗಲ್ಲಿ ಕ್ರಿಕೆಟ್ ಲೋಕಪ್ರಿಯ ಮಾಡಲು ಪೆದ್ರಾಮರ ಈ ಸೂಚನೆಯನ್ನು ಎಲ್ಲರೂ ಸ್ವಾಗತಿಸಿದರು. ಪಾಲ್ದಟ್ಟೆಯ ಮುಖ್ಯರಸ್ತೆಯನ್ನು ಖಾಲಿ ಮಾಡಲು ಒಂದು ದಿನದ ಹಳ್ಳಿ ಬಂದನ್ನು ಆಚರಿಸಲು ತಯಾರಿಯು ಶುರುವಾಯಿತು. ರಾತ್ರಿ ಸುಮಾರು 11 ಗಂಟೆಗೆ ತನ್ನ ಕೆಲವು ಮಿತ್ರರನ್ನು ಒಟ್ಟುಗೂಡಿಸಿ ಹಳ್ಳಿಯ ಮುಖ್ಯ ಜಾಗಗಳಲ್ಲಿ ‘ಇವತ್ತು ಹಳ್ಳಿ ಬಂದ್’ ಎಂದು ಬರೆದ ಪೆÇೀಸ್ಟರ್‍ಗಳನ್ನು ಅಲ್ಲಲ್ಲಿ ಅಂಟಿಸಿದರು ಮತ್ತು ಬಂದನ್ನು ಯಶಸ್ವಿಗೊಳಿಸಲು ಹಳ್ಳಿಯ ಜನರ ಸಹಕಾರವನ್ನು ಕೋರಿದರು.
ಈ ಹಳ್ಳಿಯ ಪರಿಧಿಯೊಳಗೆ ವಾಹನಗಳು ಬರದಂತೆ ಅಲ್ಲಲ್ಲಿ ಕಲ್ಲುಗಳನ್ನು ರಸ್ತೆಗೆ ಅಡ್ಡ ಹಾಕಿದರು. ಹಿಂದಿನ ಬಂದ್‍ನ ಸಮಯದಲ್ಲಿ ಅರ್ಧ ಸುಟ್ಟು ಉಳಿದ ಟಯರ್‍ಗಳನ್ನು ಅಲ್ಲಲ್ಲಿ ಇಟ್ಟು ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟರು. 5-6 ಗೋಣಿ ಚೀಲ ಬೂದಿಯನ್ನು ರಸ್ತೆಯಲ್ಲಿ ಮತ್ತು ಅಂಗಡಿಗಳ ಎದುರು ಅಲ್ಲಲ್ಲಿ ಚೆಲ್ಲಿದರು. ಕೆಲವು ಬುಟ್ಟಿ ಗಾಜಿನ ಚೂರುಗಳನ್ನು ಅಲ್ಲಲ್ಲಿ ಬಿಸಾಡಿದರು. ಮನೆಯಲ್ಲಿ ಅಡುಗೆ ಮಾಡಲೆಂದು ತಂದಿರಿಸಿದ ಕರ್ಮರದ ಸೋಂಟೆಗಳನ್ನು ಅಲ್ಲಲ್ಲಿ ಬಿಸಾಡಿದರು. 4-5 ಗೋಣಿಚೀಲ ಕಲ್ಲುಗಳನ್ನು, ಈ ವಠಾರದಲ್ಲಿ ಕಲ್ಲು ತೂರಿಕೆಯಾಗಿದೆ ಎಂದು ಕಾಣುವಂತೆ ಅಲ್ಲಲ್ಲಿ ಎಸೆದರು. ಈ ಹಳ್ಳಿಯಲ್ಲಿ ಭಾರೀ ಗಲಾಟೆಯಾಗಿದೆ, ಮಾರಾಮಾರಿಯಾಗಿದೆ, ಎಲ್ಲವೂ ಸುಟ್ಟು ಬೂದಿಯಾಗಿದೆ ಎಂದು ಅನುಮಾನದ, ಭಯಭೀತಿಯ, ಹೆದರಿಸುವ, ಸಂಶಯದ ಘಟನೆ ನಡೆದಿದೆ ಎಂಬಂತಹ ವಾತಾವರಣ ಸೃಷ್ಟಿಸಿದ ಪೆದ್ರಾಮ್ ಮತ್ತು ಮಿತ್ರರು ಬೇರಾರಿಗೂ ತಮ್ಮ ಈ ಕೆಲಸ ತಿಳಿಯದಂತೆ ತಮ್ಮ ಮನೆಗಳಿಗೆ ಬಂದು ಕುಂಭಕರ್ಣನಂತೆ ಗಾಢನಿದ್ರೆಯಲ್ಲಿ ಮುಳುಗಿದರು.
ಮರುದಿನ ಮುಂಜಾನೆ ದಿನಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಹುಡುಗರು ಮತ್ತು ಹಾಲನ್ನು ವಿತರಿಸುವ ಸ್ವ-ಸಹಾಯ ಸಂಘದ ಸ್ತ್ರೀಯರು ಹಳ್ಳಿಯಲ್ಲಿ ಕಂಡ ಈ ಪರಿಸ್ಥಿತಿಯನ್ನು ನೋಡಿ ತಕ್ಷಣ ಪ್ರತಿಯೊಬ್ಬರಿಗೆ ಸುದ್ದಿ ತಲುಪಿಸಿದರು. ‘ಇವತ್ತು ಹಳ್ಳಿ ಬಂದ್’ ಎಂಬ ಸುದ್ದಿ ಬೆಂಕಿಯ ಜ್ವಾಲೆಯಂತೆ ಹರಡಿತು. ‘ಭಾರೀ ಗಲಾಟೆಯಾಗಿದೆ, ಮಾರಾಮಾರಿಯಾಗಿದೆ, ಎಷ್ಟು ಜನ ಸತ್ತಿದ್ದಾರೆಂದು ತಿಳಿದಿಲ್ಲ, ಅಲ್ಲಲ್ಲಿ ಬೆಂಕಿ ಹಚ್ಚಿದ್ದಾರೆ, ಎಲ್ಲಾ ಸುಟ್ಟು ಭಸ್ಮವಾಗಿದೆ, ನಾಶವಾಗಿದೆ, ಅಂಗಡಿ ಮತ್ತು ವಾಹನಗಳನ್ನು ಪುಡಿ ಮಾಡಿದ್ದಾರೆ, ಇನ್ನೂ ಸಹ ಹೆಚ್ಚು ಗಲಾಟೆಯಾಗುವ ಸಂಭವವಿದೆ…’ ಎಂಬಂತೆ ಒಬ್ಬೊಬ್ಬರು ಮಾತಾಡಿಕೊಂಡರು.
ಹಳ್ಳಿಯಲ್ಲಾದ ಗಲಾಟೆಯ, ಭಯಭೀತ ಸುದ್ದಿಯನ್ನು ಕೇಳಿದ ಜನರು ಗಾಬರಿಯಾದರು ಮತ್ತು ಮನೆಯ ಹೊರಗೆ ಕಾಲಿಡಲು ಹೆದರಿದರು. ವಾಹನ ಸಂಚಾರವು ಸ್ಥಗಿತಗೊಂಡಿತು. ಅಂಗಡಿಯವರಿಗೆ, ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಧೈರ್ಯ ಸಾಲದಾಯಿತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂಜರಿದರು. ಈ ಪರಿಸ್ಥಿತಿಯಲ್ಲಿ ಪೆÇಲೀಸರು ಬಂದೋಬಸ್ತಿಗೆ ಹಳ್ಳಿಯಲ್ಲಿ ಗೋಚರಿಸಿದರು. ಹಳ್ಳಿಯಿಡೀ ಖಾಲಿ ಖಾಲಿಯಾಗಿ ಕಂಡಿತು ಮತ್ತು ಕಫ್ರ್ಯೂ ಹಾಕಿದ್ದಾರೆ ಎಂಬಂತೆ ಗೋಚರವಾಗುತ್ತಿತ್ತು. ಏನೋ ಭಾರೀ ಗಲಭೆಯಾಗಿದೆ, ಇನ್ನೂ ದೊಡ್ಡ ಗಲಾಟೆಯಾಗುವ ಸಾಧ್ಯತೆಯಿದೆಯೆಂಬಂತಹ ವಿಷಮ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇವತ್ತು ಯಾಕೆ ಬಂದ್, ಗಲಾಟೆ ಯಾಕಾಗಿದೆ, ಮುಖ್ಯವಾಗಿ ಈ ಬಂದ್‍ಗೆ ಕಾರಣವೇನೆಂದು ಯಾರಿಗೂ ತಿಳಿಯದಾಯಿತು. ಒಬ್ಬೊಬ್ಬರು ಒಂದೊಂದು ಕಾರಣವನ್ನು ಊಹಿಸುತ್ತಿದ್ದರು. ಗಾಸಿಪ್‍ಗಳು, ಅನುಮಾನಾಸ್ಪದ ಸಂಗತಿಗಳು ಮೊಬೈಲ್‍ನಲ್ಲಿ ಎಸ್‍ಎಂಎಸ್ ಮೂಲಕ ಮೂಲೆ ಮೂಲೆಗೆ ಕ್ಷಣಾರ್ಧದಲ್ಲಿ ತಲುಪುತ್ತಿದ್ದವು. ಒಬ್ಬನು ಜಾತಿಯ ಗಲಾಟೆ ಎಂದರೆ ಇನ್ನೊಬ್ಬನು ಓಟಿನ ಕಾರ್ಡಿನಲ್ಲಿದ್ದ ತಪ್ಪುಗಳಿಗೆ ಎನ್ನುತ್ತಿದ್ದನು. ಕೆಲವರು ಗೋಹತ್ಯೆ ವಿರೋಧವಾಗಿ ಎಂದು ಹೇಳಿದರೆ, ಇನ್ನೂ ಕೆಲವರು ಹಂದಿಯನ್ನು ಕತ್ತರಿಸಿದ್ದಕ್ಕೆ ಎಂದು ಮಾತಾಡಿಕೊಳ್ಳುತ್ತಿದ್ದರು. ಮತ್ತೆ ಕೆಲವರು ಹುಡುಗಿಯನ್ನು ಚುಡಾಯಿಸಿದ್ದಕ್ಕೆಂದು ಪಿಸು ಮಾತನಾಡುತ್ತಿದ್ದರೆ, ಇನ್ನು ಕೆಲವರು ಹುಡುಗಿಯು ಪರಾರಿಯಾಗಿದ್ದಕ್ಕೆ ಎನ್ನುತ್ತಿದ್ದರು. ಈ ಬಂದ್‍ನ ನಿಜವಾದ ಕಾರಣವು ಏನೆಂದು ಯಾರಿಗೂ ತಿಳಿಯಲಿಲ್ಲ. ಏನೇ ಆಗಲಿ, ಬಂದ್ ಮಾತ್ರ್ ಯಶಸ್ವಿಯಾಯಿತು ಮತ್ತು ಕ್ರಿಕೆಟ್ ಆಡಲು ಮುಖ್ಯ ರಸ್ತೆಯು ಖಾಲಿ ಆಯಿತು!
ಇದೇ ಹೇಳಿ ಮಾಡಿಸಿದ ಸಂದರ್ಭವೆಂಬಂತೆ ಪೆದ್ರಾಮ್ ಮತ್ತು ಅವರ ಮಿತ್ರರು ಬ್ಯಾಟ್ ಬಾಲ್ ಹಿಡಿದು ಬರ್ಮುಡ ಚಡ್ಡಿ, ಟಿಶರ್ಟ್, ತಲೆ ಮೇಲೆ ಟೊಪ್ಪಿಗೆಯನ್ನು ಧರಿಸಿ ಕ್ರಿಕೆಟ್ ಆಡಲು ಭಾರೀ ಗತ್ತಿನಿಂದ ಮುಖ್ಯ ರಸ್ತೆಗೆ ಬಂದರು. ರಸ್ತೆಯ ಎರಡು ಕಡೆ ಸ್ಟಂಪ್ ಹೂತರು. ಹತ್ತು ಜನರ ಎರಡು ಪಂಗಡಗಳನ್ನು ಮಾಡಿದರು. ಪೆದ್ರಾಮರ ಪಂಗಡದಲ್ಲಿ ಮೋಲಿಯನ್ನು ಮತ್ತು ಗಿಚ್ಚಾರ ಪಂಗಡದಲ್ಲಿ ಸಿಂತಿ, ಕುಂತಿಯವರಿಗೆ ಸ್ಥಾನ ದೊರೆಯಿತು. ಹೀಗೆ 20 ಓವರಿನ ಪಂದ್ಯ ಪೆÇಲೀಸರ ಮತ್ತು ರಿಕ್ಷಾ ಚಾಲಕರ ವಿಸಿಲಿನಿಂದ ಪ್ರಾರಂಭವಾಯಿತು.
ಈ ಪಂದ್ಯಕ್ಕೆ ರಿಕ್ಷಾ, ಕಾರು, ಬಸ್ ಚಾಲಕರು ಹಾಗೂ ಕಂಡಕ್ಟರರು, ಮಕ್ಕಳು, ಕಾನೂನನ್ನು ರಕ್ಷಿಸುವ ಕೆಲವು ಪೊಲೀಸರು ಕೂಡಾ ವೀಕ್ಷಕರಾದರು. ಟೆನ್ನಿಸ್ ಚೆಂಡಾದ್ದರಿಂದ ಅಂಡರ್‍ಹ್ಯಾಂಡ್ ಬೌಲಿಂಗ್ ಮತ್ತು ಒಂದು ಪಿಚ್ಚಿನಲ್ಲಿ ಔಟ್ ಮಾಡಬಹುದೆಂದು ಪೆದ್ರಾಮರು ತಿಳಿಸಿದರು. ಪೆದ್ರಾಮರ ಪಂಗಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 47 ರನ್ ಬಾರಿಸಿ ಆಲೌಟಾದರು. ಗಿಚ್ಚಾರವರ ಪಂಗಡದವರು 8 ವಿಕೆಟ್ ಕಳೆದುಕೊಂಡು 19.4 ಓವರ್‍ಗಳಲ್ಲಿ 48 ರನ್ ಬಾರಿಸಿ ಗೆದ್ದರು. ಅತ್ಯಧಿಕ 17 ರನ್ ಹೊಡೆದು 4 ವಿಕೆಟ್ ಪಡೆದ ಸಿಂತಿಯನ್ನು ‘ವುಮನ್ ಒಫ್ ದಿ ಬಂದ್’ ಎಂದು ಘೋಷಿಸಿದರು. ಹೇಗೆ ಮಂಗನ ಆಟವಾದ ನಂತರ ನೆರೆದಿದ್ದ ಜನರಿಂದ ಹಣವನ್ನು ವಸೂಲಿ ಮಾಡುತ್ತಾರೋ ಹಾಗೆ ಪ್ರೇಕ್ಷಕರಿಂದ ಸುಮಾರು ರೂ. 64.50 ಜಮಾಯಿಸಿ ಸಿಂತಿಗೆ ಬಹುಮಾನವಾಗಿ ಕೊಡಲಾಯಿತು.
ಈ ಬಂದ್‍ನ ಪರಿಣಾಮವಾಗಿ ಅಪರಾಹ್ನ ಪಾಲ್ದಟ್ಟೆ ಹಳ್ಳಿಯ ಜನರಿಗೆ ಬೆಂಬಲ ಕೊಡಲು ಆಸುಪಾಸಿನ ಇತರ ಹಳ್ಳಿಗಳೂ ಬಂದ್ ಆಚರಿಸಿದವು. ಮೊಬೈಲ್ ಫೋನ್, ಎಸ್‍ಎಂಎಸ್ ಮೂಲಕ ಕೆಲವು ಅನುಮಾನದ, ಅರ್ಥವಿಲ್ಲದ, ಭಯಭೀತಿ ಮೂಡಿಸುವ ಸುದ್ದಿಗಳು ಸರಸರನೆ ಹರಡುತ್ತಿದ್ದವು. ಅಲ್ಲಿ 6 ಹೊಡೆದರು, ಇಲ್ಲಿ 4 ಬಾರಿಸಿದರು, 8 ಜನರನ್ನು ಹಿಡಿದರು, ಒಬ್ಬನು ಜೋರಾಗಿ ಹೊಡೆದನು, ಕೆಲವರು ಓಡುವಾಗ ಬಿದ್ದರು, ಹಲವರಿಗೆ ಹಿಡಿಯುವಾಗ ಬಿದ್ದು ಪೆಟ್ಟಾಯಿತು… ಹೀಗೆ ಗಲಾಟೆಯ, ಸಂಶಯದ, ಭೀತಿಯ ವಾತಾವರಣ ಮತ್ತಷ್ಟು ವಿಷಮವಾಯಿತು. ಪೆÇಲೀಸರು ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಿದರು. ಪರಿಸ್ಥಿತಿ ಇನ್ನೂ ಕೆಟ್ಟಿತು. ಅಲ್ಲಲ್ಲಿ ವಾಹನಗಳನ್ನು ಪುಡಿ ಮಾಡಿದರು, ಸುಟ್ಟು ಹಾಕಿದರು. ಅಂಗಡಿಗಳನ್ನು ಧ್ವಂಸಗೊಳಿಸಿದರು. ಅಲ್ಲಲ್ಲಿ ಮಾರಾಮಾರಿ ಶುರುವಾಯಿತು. ಕೆಲವರ ಹತ್ಯೆ ಸಹಾ ಮಾಡಲಾಯಿತು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಅಸಾಧ್ಯವಾಯಿತು ಮತ್ತು ಗಂಭೀರ ಪರಿಸ್ಥಿತಿ ತಲೆದೋರಿತು. ಹತೋಟಿ ಮೀರಿತು. ಮಾರನೆ ದಿನ ಜಿಲ್ಲಾ ಬಂದ್‍ಗೆ ಕರೆ ಕೊಡಲಾಯಿತು. ಶಾಂತಿಯುತವಾಗಿ ಇದ್ದ ಪಾಲ್ದಟ್ಟೆಯ ಒಂದು ಹಳ್ಳಿ ಹೊರತು ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ 3 ದಿನದ ಕರ್ಫ್ಯೂ ಜಾರಿ ಮಾಡಲಾಯಿತು.
ಶಾಂತಿ ಸ್ಥಾಪನೆ, ವಿಚಾರಣೆ ಮತ್ತು ಬಂದ್‍ನ ನಿಜವಾದ ಕಾರಣವನ್ನು ಅಧ್ಯಯನ ಮಾಡಲು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸಮಾಧಾನ ಸಮಿತಿ ರಚಿಸಲಾಯಿತು. ಹೆದರಿ ಮೂಲೆಯಲ್ಲಿದ್ದ ಸದಸ್ಯರು ಮತ್ತು ರಾಜಕೀಯ ಪಕ್ಷದ ಮುಖಂಡರು ಜಿಲ್ಲೆಯಲ್ಲಿ ಸಮಾಧಾನ, ಶಾಂತಿ ಮರಳಿದ ಬಳಿಕ ಮೈದಾನಿಗೆ ಇಳಿದರು. ಒಬ್ಬರನ್ನೊಬ್ಬರು ದೂರಲು ಶುರು ಮಾಡಿದರು. ಆದರೆ ಸರಕಾರವು ಈ ಬಂದ್‍ನ, ಗಲಾಟೆಯ ವಿಚಾರಣೆ ಮಾಡಲು ಮತ್ತು ಮೂಲ ಕಾರಣವನ್ನು ಪತ್ತೆ ಹಚ್ಚಲು, ತಪ್ಪಿತಸ್ಥರನ್ನು ಕಂಡುಹಿಡಿಯಲು ಇಂಟೆಲಿಜೆನ್ಸ್‍ಗೆ ತನಿಖೆಗೆ ಆದೇಶಿಸಿತು.
ಈ ಬಂದ್‍ನ ಪರಿಸ್ಥಿತಿಯು ಇಷ್ಟು ಭಯಾನಕ ರೂಪ ತಾಳುವುದೆಂದು ಕನಸಿನಲ್ಲೂ ಅಂದಾಜಿಸಿರದ ಪೆದ್ರಾಮರು ಹೆದರಿದರು ಮತ್ತು ನರಿಯಂತೆ ಮನೆಯಲ್ಲೇ ಅಡಗಿ ಕೂತರು. ಇವರ ಇಡೀ ಕ್ರಿಕೆಟ್ ಪಂಗಡದ ಸದಸ್ಯರೂ ಸಹ ಮನೆಯ ಹೊರಗೆ ಗೋಚರಿಸಲಿಲ್ಲ.
ಗೂಢಚಾರಿಗಳ ವಿಚಾರಣೆ ಮುಂದುವರಿದಂತೆ ಕೆಲವು ಸುಳಿವುಗಳ ಆಧಾರದಲ್ಲಿ ಪೆದ್ರಾಮರನ್ನು ಬಂಧಿಸಲಾಯಿತು. ಇವರನ್ನು ವಿಚಾರಣೆಗೆ ಒಳಪಡಿಸುವಾಗ ತನಗೆ ಏನೂ ಗೊತ್ತಿಲ್ಲವೆಂದರು. ಪೆÇಲೀಸರ ಹೊಡೆತಗಳು ರಪ್ಪನೆ ಕುತ್ತಿಗೆಗೆ, ಬೆನ್ನಿಗೆ, ಪಕ್ಕೆಗೆ ಬೀಳುವಾಗ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ ರಾಟೆಯಲ್ಲಿ ನೇತಾಡಿಸುತ್ತೇವೆ ಎಂದು ಬೆದರಿಸಿದಾಗ ಪೆದ್ರಾಮರು ಸತ್ಯ ಸಂಗತಿ ಹೇಳಲು ಬಾಯಿ ಬಿಟ್ಟರು!
ಕ್ರಿಕೆಟ್ ಆಡಲು ಮನಸ್ಸಾದುದರಿಂದ ಮತ್ತು ಆಟವಾಡಲು ಮಾರ್ಗ ಖಾಲಿ ಇಡುವುದಕ್ಕಾಗಿ ‘ಹಳ್ಳಿ ಬಂದ್’ ಮಾಡಿದ್ದು ಮತ್ತು ಹೇಗೆ ಮತ್ತು ಏನೆಲ್ಲಾ ಮಾಡಿದ್ದೆಂದು ಸತ್ಯವನ್ನೇ ನುಡಿದರು. ಇವರ ಮಾತನ್ನು ನಂಬಲು ಅಸಾಧ್ಯವೆಂದು ಪರಿಗಣಿಸಿದ ತನಿಖಾಧಿಕಾರಿಗಳು ಪೆದ್ರಾಮರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರು. ಸೋಡಿಯಂ ಪೆಂತೊಥಾಲ್ ಟ್ರುತ್ ಸೆರಾಮಿನ ಇಂಜೆಕ್ಷನನ್ನು ಕೊಡಿಸಿದರು. ಸತ್ಯ ಹೊರ ಹಾಕಲು ಒಂದರ ಮೇಲೆ ಒಂದು ಪ್ರಶ್ನೆಯನ್ನು ಕೇಳಿದರು.
“ನಿಮ್ಮ ಹೆಸರೇನು?”
“ಪೀಟರ್ ಯಾನೆ ಪೆದ್ರಾಮ್.”
“ಹಳ್ಳಿ ಬಂದನ್ನು ನೀವು ಮಾಡಿದ್ದಾ?”
“ಹೌದು”
“ಯಾಕೆ?”
“ಕ್ರಿಕೆಟ್ ಆಟ ಆಡಲು ಮಾರ್ಗವು ಖಾಲಿ ಬೇಕಿತ್ತು.”
“ಬೂದಿ ಎಲ್ಲಿದ್ದು?”
“ಬೂದಿ ನಮ್ಮ ಬಚ್ಚಲು ಮನೆಯಿಂದ ತಂದದ್ದು.”
“ಟಯರ್‍ಗಳು?”
“ಟಯರುಗಳು ಫೆರ್ನಾಂಡಿಸರು ಕರೆದ ‘ಭಾರತ್ ಬಂದ್’ನಂದು ಅರ್ಧ ಸುಟ್ಟು ಉಳಿದದ್ದು.”
“ಗಾಜಿನ ಚೂರುಗಳು ಎಲ್ಲಿಯವು?”
“ನಾನು ಮತ್ತು ನನ್ನ ಮಿತ್ರರು ಕಂಟ್ರಿ ಸಾರಾಯಿಯನ್ನು ಕುಡಿದು ಜಾಸ್ತಿಯಾಗಿ ದಾಂಧಲೆ ಮಾಡಿ, ಸಾರಾಯಿ ಬಾಟಲಿ ಮತ್ತು ಸೋಡಾ ಬಾಟಲಿಗಳನ್ನು ಒಡೆದು ಚೂರು ಮಾಡಿದವುಗಳು.”
“ಸೋಂಟೆ ಮತ್ತು ಕಲ್ಲುಗಳನ್ನು ಅಲ್ಲಲ್ಲಿ ಹಾಗೆ ಯಾಕೆ ಬಿಸಾಡಿದಿರಿ?”
“ಗಲಾಟೆ, ಕಲ್ಲು ತೂರಾಟ ಮತ್ತು ಮಾರಾಮಾರಿ ಆಗಿದೆ ಎಂದು ಭಯ ಹುಟ್ಟಿಸಲು.”
“ನೀವು ಒಸಾಮ ಬಿನ್ ಲಾಡೆನ್ ಅಥವಾ ಬೇರೆ ಯಾವುದೇ ಭಯೋತ್ಪಾದಕರು, ಭೂಗತ ಪಾತಕಿಗಳ ಪಂಗಡಕ್ಕೆ ಸೇರಿದವರೆ?”
“ನಾನು ಒಬ್ಬ ಸಾಮಾನ್ಯ ನಿವಾಸಿ ಮತ್ತು ದೇಶದ ಒಳ್ಳೆಯ ಪ್ರಜೆ.”
“ಮೋಲಿ, ಸಿಂತಿ ಮತ್ತು ಕುಂತಿಯವರನ್ನು ಯಾಕೆ ಕ್ರಿಕೆಟ್ ಪಂಗಡಕ್ಕೆ ಸೇರಿಸಿದ್ದು?” (ಈ ಪ್ರಶ್ನೆಯನ್ನು ಮೊದಲ ವಿಚಾರಣೆಯಲ್ಲಿ ಕೇಳಿರಲಿಲ್ಲ).
“ಅವರು ನನ್ನ ಪ್ರೀತಿಯ ಸ್ನೇಹಿತೆಯರು. ಈ ವಿಷಯವನ್ನು ದಯವಿಟ್ಟು ನನ್ನ ಹೆಂಡತಿಗೆ ಮಾತ್ರ ತಿಳಿಸಬೇಡಿ, ಪ್ಲೀಸ್!”
ಇಂಟೆಲಿಜೆನ್ಸ್‍ನವರು ಪೆದ್ರಾಮರು ಈ ಮೊದಲು ಕೊಟ್ಟ ಉತ್ತರಗಳನ್ನು ಮಂಪರು ಪರೀಕ್ಷೆಯ ಉತ್ತರಗಳೊಂದಿಗೆ ಹೋಲಿಸಿದಾದ, ಪೆದ್ರಾಮರು ಸತ್ಯವನ್ನೇ ಹೇಳಿದ್ದಾರೆಂದು ರುಜುವಾತಾಯಿತು. ಆದರೂ ಪೆದ್ರಾಮರ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲು ಅವರನ್ನು ಆಸ್ಪತ್ರೆಗೆ ಕಳುಹಿಸಿದರು. ಇವರು ಮಾನಸಿಕವಾಗಿ ಆರೋಗ್ಯವಾಗಿದ್ದಾರೆಂದು ರಿಪೋರ್ಟ್ ಬಂತು. ಎಚ್ಚರಿಕೆ ಕೊಟ್ಟು, ಮುಚ್ಚಳಿಕೆ ಬರೆಸಿದ ನಂತರ ಪೆದ್ರಾಮರನ್ನು ಮನೆಗೆ ಕಳುಹಿಸಲಾಯಿತು.
ರಾಜಕೀಯ ಪಕ್ಷಗಳ ಮುಖಂಡರು ಪೆದ್ರಾಮರ ಹಳ್ಳಿ ಬಂದ್‍ನ ಯೋಜನೆ, ಆಯೋಜನೆ, ನಿರ್ವಹಣೆಯನ್ನು ಮೆಚ್ಚಿದರು. ಇವರ ಈ ದೊಡ್ಡ ಕಾರುಬಾರಿಗೆ ಶುಭಾಶಯ ಸಲ್ಲಿಸಲು ಅವರ ಮನೆಗೆ ಬಂದರು. ಅವರೆಲ್ಲರೂ ಪೆದ್ರಾಮರ ಸಾಮಥ್ರ್ಯ, ಸಾಹಸ, ಸಾಧನೆ, ಬಂದ್ ಯಶಸ್ವಿಯಾಗಿ ನಡೆಸಿದ್ದಕ್ಕೆ ಶ್ಲಾಘಿಸಿ, ಹಾರ ತುರಾಯಿ ಹಾಕಿದರು. ತಮ್ಮ ರಾಜಕೀಯ ಪಕ್ಷಕ್ಕೆ ಸೇರಲು ಆಮಂತ್ರಿಸಿದರು. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡುವ ಆಶ್ವಾಸನೆಯನ್ನೂ ಕೊಟ್ಟರು!
ಪೆದ್ರಾಮರು ಮಾತ್ರ ಪೊಲೀಸರಿಂದ ತಿಂದ ಹೊಡೆತಗಳನ್ನು ಜ್ಞಾಪಿಸಿದಾಗ ಒಂದೇ ಸವನೆ, ಇದ್ದಕ್ಕಿದ್ದಂತೆ ಹುಚ್ಚರಂತೆ ವರ್ತಿಸುತ್ತಿದ್ದರು ಮತ್ತು ಬಂದ್, ಕ್ರಿಕೆಟ್, ಪೊಲೀಸ್ ಎಂಬ ಪದಗಳನ್ನು ಕೇಳುವಾಗ ಸ್ಮೃತಿ ತಪ್ಪಿ ಬೀಳುತ್ತಿದ್ದರು!
(ಲೇಖಕರು ಮುಂಬೈ ಹಾಗೂ ಬಗ್ದಾದ್‍ನಲ್ಲಿ ಉದ್ಯೋಗದಲ್ಲಿದ್ದವರು. ಕೊಂಕಣಿ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅವರ 100ಕ್ಕೂ ಹೆಚ್ಚಿನ ಕಥೆ, ಲೇಖನಗಳು ವಿವಿಧ ಪತ್ರಿಕೆ, ವೆಬ್‍ಸೈಟ್‍ಗಳಲ್ಲಿ ಪ್ರಕಟವಾಗಿವೆ. 2007ರಲ್ಲಿ ಅವರ ಬರಹಗಳ ಸಂಕಲನ ‘ಹಾಂವ್ ತೆಂ ಆನಿ ತಿಂ’ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.)
(Originally published on June 06, 2012)