ಚರ್ಚ್ ಎಟ್ಯಾಕ್: ಆ ದಿನ ಮಂಗಳೂರಿನ ಕ್ರೈಸ್ತರು ರೌಡಿಗಳಂತೆ ವರ್ತಿಸಿದ್ದರೇ?

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : July 18, 2016 at 6:43 PM

ಕೆಲವು ಘಟನೆಗಳು ಹಾಗೆಯೇ. ಎಂದೋ ಒಮ್ಮೆ ಘಟಿಸುತ್ತವೆ, ಆದರೆ ಅದರ ನೆನಪು ಮತ್ತೆ ಮತ್ತೆ ಧುತ್ತೆಂದು ಮರುಕಳಿಸುತ್ತದೆ. ಅಸಹಜವಾಗಿ ಸತ್ತವರ ಪೋಸ್ಟ್‍ಮಾರ್ಟಮ್ ಒಂದೇ ಬಾರಿ ಮಾಡುವುದುಂಟು. ಆದರೆ ಕೆಲವೊಮ್ಮೆ ವಿಶೇಷ ಪ್ರಕರಣಗಳಲ್ಲಿ ಯಾವಾಗಲೋ ಹೂತವರನ್ನು ಸಮಾಧಿಯಿಂದ ಹೊರ ತೆಗೆದು ಮತ್ತೆ ಪೋಸ್ಟ್‍ಮಾರ್ಟಮ್ ಅಥವಾ ಡಿಎನ್‍ಎ ಮುಂತಾದ ಪರೀಕ್ಷೆಗಳನ್ನು ಮಾಡುತ್ತಾರಲ್ಲಾ, ಹಾಗೆ.

2008ರಲ್ಲಿ ಮಂಗಳೂರಿನಲ್ಲಿ ನಡೆದ ಚರ್ಚ್ ದಾಳಿ ಸಹ ಅದೇ ರೀತಿಯ ಒಂದು ಘಟನೆ. ಮಂಗಳೂರಿನ ಹೆಸರು ವಿಶ್ವದಾದ್ಯಂತ ರಣಭೇರಿ ಬಾರಿಸಲು ಕಾರಣವಾದ ಈ ಘಟನೆ ಚರ್ಚ್ ಎಟ್ಯಾಕ್ ಎಂದೇ ಕುಖ್ಯಾತಿ ಪಡೆದಿತ್ತು.

ಈಗ ಮತ್ತೆ ಅದರ ಪುನರ್ ಮಂಥನ ನಡೆಯುತ್ತಿದೆ.

ಮಂಗಳೂರಿನ ಪೊಲೀಸ್ ಅಧಿಕಾರಿ, ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಎಂ.ಕೆ. ಗಣಪತಿ ಇದಕ್ಕೆ ಕಾರಣ. ಅವರ ಆಕಸ್ಮಿಕ ಸಾವು ಈ ಚರ್ಚ್ ದಾಳಿ ಪ್ರಕರಣಕ್ಕೆ ಮರು ಜೀವ ನೀಡಿದೆ. ಬಹುಶಃ ಜೀವಂತವಿರುವಾಗ ಸಾಕಷ್ಟು ಬಸವಳಿದಿದ್ದ ಗಣಪತಿಯವರ ಆತ್ಮ ಕೂಡ ಅದೇ ರೀತಿ ವಿಲಿವಿಲಿ ಒದ್ದಾಡುತ್ತಿರಬೇಕೇನೋ.

ಅದಕ್ಕೆ ಅವರು ನಿಜಕ್ಕೂ ಅರ್ಹರು ಎಂಬುದು ಖಂಡಿತಾ ಕುಹಕದ ಮಾತಲ್ಲ. ಅದಕ್ಕೆ ಬೇಕಾದ ಸಂಪೂರ್ಣ ಬಳುವಳಿಯನ್ನು, ಕೊಡುಗೆಯನ್ನು ಅವರು ನೀಡಿದ್ದರಿಂದಲೇ ಈ ರೀತಿ ಹೇಳಬೇಕಾಗುತ್ತದೆ.

Budkulo_Church Attack_Mangaluru_01

ಆ ಸಂಗತಿ ಬದಿಗಿರಿಸಿ, ಮುಖ್ಯವಾದ ವಿಚಾರದತ್ತ ಈ ಲೇಖನವನ್ನು ಹೊರಳಿಸುತ್ತೇನೆ. 2008ರ ಸಪ್ಟೆಂಬರ್ 14 ಮತ್ತು 15ರಂದು ಮಂಗಳೂರಿನಲ್ಲಿ ಕ್ರೈಸ್ತರು ರೌಡಿಗಳಂತೆ ವರ್ತಿಸಿದ್ದರೆಂದು ಸಾಕಷ್ಟು ಬಾರಿ ಉಲ್ಲೇಖವಾಗಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯ ಬಳಿಕ ಈ ಬಗ್ಗೆ ಕೆಲವರು ಪುಂಖಾನುಪುಂಖವಾಗಿ ಬರೆದಿದ್ದಾರೆ, ಹೇಳಿಕೆ ನೀಡಿದ್ದಾರೆ. ಕೆಲವರಂತೂ ಚರ್ಚಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳೂ ಸಹ ಗಲಭೆ ನಡೆಸಿದ್ದಾರೆ, ಪೊಲೀಸರಿಗೆ ಹೊಡೆದಿದ್ದಾರೆಂದು ಹೇಳಿದ್ದಾರೆ.

ನಿಜಕ್ಕೂ ಹಾಗೆ ಆಗಿತ್ತೇ? ಸದಾ ಶಿಸ್ತಿನಿಂದ, ಶಾಂತಿಯಿಂದ ವರ್ತಿಸುತ್ತಿದ್ದ ಕ್ರೈಸ್ತರು ಅಂದು ಒಮ್ಮಿಂದೊಮ್ಮೆಲೆ ರೌಡಿಗಳಾಗಿ, ಪುಂಡರಾಗಿ ಬಿಟ್ಟರೆ? ಹಾಗಾಗಿದ್ದಕ್ಕೆ ಕಾರಣವಾದರೂ ಏನು? ಇಂತಹ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರವನ್ನೂ ಪಡೆಯುವುದು ಅಗತ್ಯವಲ್ಲವೆ?

ಊಹುಂ! ಖಂಡಿತಾ ಇಲ್ಲ. ಕ್ರೈಸ್ತರು ಆ ಎರಡು ದಿನ ಖಂಡಿತಾ ಕಾನೂನು ಬಾಹಿರವಾಗಿ ನಡೆದಿರಲೂ ಇಲ್ಲ, ರೌಡಿಗಳಾಗಿ ಪರಿವರ್ತನೆಯಾಗಿದ್ದೂ ಇಲ್ಲ. ಹಾಗೆ ನಡೆದಿದೆ ಎಂದು ದೂಷಿಸುವ ಎಲ್ಲಾ ಆರೋಪಗಳು ಅಪ್ಪಟ ಸುಳ್ಳುಗಳು. ಸತ್ಯವನ್ನು ಮರೆಮಾಚಿ, ತನಗೆ ಬೇಕಾದಂತೆ ಸುಳ್ಳನ್ನು ಸತ್ಯವೆಂದು ಬಿಂಬಿಸುವ ಕೆಲವರ ಪ್ರಯತ್ನಗಳವು, ಅಷ್ಟೆ!

ಯಾರು ಹಾಗೆ ಮಾಡಿದ್ದು ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಒಂದೇ – ಸಂಘ ಪರಿವಾರ ಮತ್ತವರ ಪಟಾಲಾಂ.

ಈಗ ಮೊದಲು, ಚರ್ಚ್ ಎಟ್ಯಾಕ್ ಎಂದು ವಿಶ್ವ ಪ್ರಸಿದ್ಧಿ ಗಳಿಸಿದ ಈ ಚರ್ಚ್ ದಾಳಿ ಯಾಕೆ ಅಷ್ಟೊಂದು ಪ್ರಚಾರ ಪಡೆಯಿತು ಎಂಬ ಮೂಲ ಪ್ರಶ್ನೆಯ ಉತ್ತರದಲ್ಲೇ ಎಲ್ಲಾ ಸಂಗತಿಗಳೂ ಅಡಗಿವೆ. ಹೌದು, ಅಂದು ಯಾವುದೇ ಚರ್ಚ್‍ನ ಮೇಲೆ ದಾಳಿಯಾಗಿಲ್ಲ, ಅದರಲ್ಲೂ ಕಥೊಲಿಕ್ ಕ್ರೈಸ್ತರ ಪ್ರಾರ್ಥನಾ ಮಂದಿರಗಳನ್ನು ಗುರಿಯಾಗಿಸಿ ದಾಳಿ ನಡೆದಿಲ್ಲವೆಂದು ಕೆಲವರು ಹೇಳುತ್ತಾರೆ. ಇದು ನಿಜವೂ ಹೌದು. ಆದರೆ ಸಂಪೂರ್ಣ ಸತ್ಯವಲ್ಲ.

ಅಂದು ಕಥೊಲಿಕರ ಚರ್ಚ್‍ಗೆ ದಾಳಿ ನಡೆದಿರಲಿಲ್ಲವಾದರೂ ಮುಂದಿನ ಅಹಿತಕರ ಘಟನೆಗಳು ನಡೆಯಲು ಕಥೊಲಿಕರ ಮಿಲಾಗ್ರಿಸ್ ಚರ್ಚ್ ದಾಳಿಗೊಳಗಾಗಿದೆ ಎಂಬ ಸುದ್ದಿಯೇ ಕಾರಣವಾಗಿತ್ತು.

24×7 ಸುದ್ದಿ ಮಾಧ್ಯಮಗಳು ತಂದಿಡುವ ಎಡವಟ್ಟುಗಳು ಕೆಲವಲ್ಲ. ಈ ಚರ್ಚ್ ದಾಳಿ ಮತ್ತದರ ಮುಂದಿನ ಬೆಳವಣಿಗೆಗಳು ನಡೆಯಲು ಟಿವಿ ಚಾನೆಲ್ ಒಂದರ ಮೂರ್ಖತನವೂ ಬಹಳ ನೆರವಾಗಿದೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ.

ಅಂದು ನಿಜಕ್ಕೂ ನಡೆದ ಘಟನೆಗಳೇನು, ಅವು ಹೇಗೆ ಸಂಭವಿಸಿದವು ಎಂಬುದರ ಪ್ರತ್ಯಕ್ಷದರ್ಶಿಯಾಗಿದ್ದ ನನಗೆ ಅವೆಲ್ಲವನ್ನು ಹೇಳುವ ಸಂದರ್ಭ ಈಗ ಮೂಡಿದೆ. ಹಾಗಾದರೆ ಆ ಎರಡು ದಿನಗಳಲ್ಲಿ ಏನೇನು ನಡೆಯಿತು ಎಂಬುದನ್ನು ತಿಳಿಸುತ್ತೇನೆ, ಓದಿ.

ಅಂದು ಭಾನುವಾರ. 2008 ಸಪ್ಟೆಂಬರ್ 14.

ಆಗ ಇಂದಿನಂತೆ ಸುದ್ದಿ ಚಾನೆಲ್‍ಗಳ ಸಂತೆ ಇರಲಿಲ್ಲ. ಟಿವಿ9 ಬಿಟ್ಟರೆ ಇತರ ಕೆಲ ಚಾನೆಲ್‍ಗಳು ನಿಗದಿತ ಸಮಯದಲ್ಲಿ ಮಾತ್ರ ಸುದ್ದಿ ಪ್ರಸಾರ ಮಾಡುತ್ತಿದ್ದವು. ಹಲವಾರು ವರ್ಷಗಳಿಂದ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ದಿನಕ್ಕೆ ಮೂರು ಬಾರಿ ಹತ್ತು ನಿಮಿಷ, ಅರ್ಧ ಗಂಟೆಯ ಸುದ್ದಿ ಪ್ರಸಾರವಾಗುತ್ತಿದ್ದ ಕಾಲ ಕಳೆದು ದಿನವಿಡೀ ಸುದ್ದಿ ಪ್ರಸಾರ ಮಾಡುವ ಟಿವಿ ಚಾನೆಲ್‍ಗಳು ಆರಂಭವಾಗಿದ್ದ ಕಾಲವದು. ಕನ್ನಡದಲ್ಲಿ ಟಿವಿ9 ಅಂತಹ ಮೊದಲ ಚಾನೆಲ್. ದಿನದ ಹಗಲು ಹೊತ್ತಿನಲ್ಲಿ, ಚಕ್ಕನೆಂದು ಯಾವುದೋ ಸುದ್ದಿಯ ವೀಡಿಯೋ ಪ್ರಸಾರವಾಗುವುದೆಂದರೆ ಕುತೂಹಲ ಮೂಡಿಸುವುದು ಸಹಜ. ಕ್ಷಿಪ್ರಗತಿಯಲ್ಲಿ ಟಿವಿ9 ಕರ್ನಾಟಕದ ಮನೆ ಮನೆಗಳಲ್ಲಿ ಸ್ಥಾನ ಆಕ್ರಮಿಸಿತು.

Budkulo_Church Attack_Mangaluru_02

ಪತ್ರಿಕೆ, ಮಾಧ್ಯಮ ರಂಗದಲ್ಲಿ ಕೆಲಸ ಮಾಡುವ ನಾನು ಹೆಚ್ಚಾಗಿ ನೋಡುತ್ತಿದ್ದದ್ದೂ ಸುದ್ದಿ ಚಾನೆಲ್‍ಗಳನ್ನೇ. ಎಂದಿನಂತೆ ಬೆಳಿಗ್ಗೆ ನಾನು ಟಿವಿ ನೋಡುತ್ತಿರಬೇಕಾದರೆ ಮಂಗಳೂರಿನಲ್ಲಿ ಚರ್ಚ್ ಮೇಲೆ ದಾಳಿ ಎಂದು ಸ್ಕ್ರಾಲಿಂಗ್ ಬರಲಾರಂಭಿಸಿತು. ಸ್ವಲ್ಪ ಹೊತ್ತಿನ ನಂತರ ವಿಶುವಲ್ ಗಳು ತೆರೆಯ ಮೇಲೆ ವಿಜೃಂಭಿಸಲಾರಂಭಿಸಿದವು. ಅದನ್ನು ನೋಡಿದಾಗ ಅಚ್ಚರಿಯ ಜೊತೆಗೆ ಆಘಾತವೂ ಆಯಿತು. ಮಿಲಾಗ್ರಿಸ್ ಚರ್ಚ್ ಮೇಲೆ ದಾಳಿ ಎಂಬ ಟೈಟಲ್ ಜೊತೆಗೆ, ಶಿಲುಬೆಯ ಮೇಲಿನ ಯೇಸುಕ್ರಿಸ್ತರ ಮೂರ್ತಿಯನ್ನು ಧ್ವಂಸಗೊಳಿಸಿದ ಮತ್ತು ಪವಿತ್ರ ಪರಮ ಪ್ರಸಾದವನ್ನು ನೆಲಕ್ಕಪ್ಪಳಿಸಿದ್ದ ಚಿತ್ರಗಳು ಪ್ರಸಾರವಾಗುತ್ತಿದ್ದವು.

ವಿಷಯ ಗಂಭೀರವಾಗಿದೆಯೆಂದು ಆಗಲೇ ನನಗನಿಸಿತು.

ನನಗನಿಸಿದ್ದು ನಿಜವೇ ಆಗಿತ್ತು. ಆಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಒಂದು ಮಾತು ಹೇಳಬೇಕು. ಬಹಳಷ್ಟು ಜನರಿಗೆ ಯಾವುದೇ ಚರ್ಚ್ ಪುಡಿಯಾಗಿಲ್ಲ, ಕಥೊಲಿಕರ ಚರ್ಚ್‍ಗಳ ಮೇಲೆ ದಾಳಿಯಾಗಿಲ್ಲ, ಹಾಗಿದ್ದರೂ ಮೊತ್ತ ಮೊದಲ ಬಾರಿಗೆ ಸಮಗ್ರ ಕಥೊಲಿಕ್ ಜನಾಂಗ ರೊಚ್ಚಿಗೆದ್ದಿದ್ದು ಯಾಕೆ ಎಂಬ ಗೊಂದಲ ಈಗಲೂ ಇರಬಹುದು. ವಿಷಯದ ಗಾಂಭೀರ್ಯತೆ ಕ್ರೈಸ್ತರಿಗೆ ಹೊರತು ಇತರರಿಗೆ ಆಗದೇ ಇದ್ದುದು ಆಶ್ಚರ್ಯಜನಕವೇನೂ ಅಲ್ಲ.

ಒಂದು ವೇಳೆ, ಯಾರೋ ಕ್ರೈಸ್ತರೋ ಮುಸಲ್ಮಾನರೋ ಹಿಂದೂ ದೇವಸ್ಥಾನವೊಂದಕ್ಕೆ ನುಗ್ಗಿ, ಗರ್ಭಗುಡಿಗೆ ಪ್ರವೇಶ ಮಾಡಿ ಹಿಂದೂಗಳು ಭಕ್ತಿ, ಶ್ರದ್ಧೆಯಿಂದ ಪೂಜಿಸುವ ದೇವರ ವಿಗ್ರಹವನ್ನು ಒಡೆದು ನೆಲಕ್ಕೆ ಹಾಕಿ ಅಲ್ಲಿನ ಪವಿತ್ರ ವಸ್ತುಗಳನ್ನು ಧ್ವಂಸಗೊಳಿಸಿದಲ್ಲಿ ಹೇಗಾದೀತು? ಅಂತಹ ದೇವಸ್ಥಾನವು ಪ್ರಮುಖ, ಪ್ರಸಿದ್ಧವಾಗಿದ್ದೇ ಆದಲ್ಲಿ ಪರಿಸ್ಥಿತಿ ಹೇಗಿದ್ದೀತು? ಉದಾಹರಣೆಗೆ ಹೇಳುವುದಾದರೆ, ಕದ್ರಿಯ ಮಂಜುನಾಥ ದೇವಸ್ಥಾನ ಅಥವಾ ಮಂಗಳಾದೇವಿಯ ದೇವಸ್ಥಾನದಲ್ಲಿ ಇಂತಹ ಘಟನೆ ನಡೆದು ಮಾಧ್ಯಮಗಳಲ್ಲಿ ವರದಿಯಾದರೆ ಹಿಂದೂಗಳ ಪ್ರತಿಕ್ರಿಯೆ ಹೇಗಿದ್ದೀತು?

ಹಿಂದೂಗಳಷ್ಟೇ ಅಲ್ಲ, ಧರ್ಮಶ್ರದ್ಧೆ ಇರುವ ಯಾರಿಗೂ ಕೂಡ ಇಂತಹದನ್ನು ಸಹಿಸಲು ಸಾಧ್ಯವಾಗದು. ಒಂದು ವೇಳೆ ಹಾಗೆ ನಡೆದು ಮಾಧ್ಯಮಗಳಲ್ಲಿ ವರದಿಯಾಯಿತೆಂದುಕೊಳ್ಳೋಣ, ಆಗ ಮಂಗಳೂರಿನ, ಕರಾವಳಿಯಲ್ಲಿರುವ ಮಾತ್ರವಲ್ಲ ಪ್ರಪಂಚದಾದ್ಯಂತ ನೆಲೆಸಿರುವ ಇಲ್ಲಿನ ಎಲ್ಲಾ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುವುದಿಲ್ಲವೆ? ಅಷ್ಟೇ ಅಲ್ಲ, ಕರಾವಳಿಯ ಮಾತ್ರವಲ್ಲ ಕರ್ನಾಟಕದ, ದೇಶದ ಎಲ್ಲಾ ಹಿಂದೂಗಳೂ ಇದನ್ನು ಸಹಿಸಲಾರರೂ. ದೇಶವೇ ಅಲ್ಲೋಲಕಲ್ಲೋಲವಾದೀತು, ಏನೇನು ನಡೆದೀತು ಎಂಬುದನ್ನು ಊಹಿಸಲೂ ಆಗದು. ಅಲ್ಲವೆ?

ಚರ್ಚ್ ದಾಳಿಯ ವೇಳೆ ಸಂಭವಿಸಿದ್ದೂ ಇದೇ. ಹೌದು. ಅಂದು ಮಾಧ್ಯಮಗಳಲ್ಲಿ ಯೇಸುಕ್ರಿಸ್ತನ ಭಗ್ನವಾಗಿದ್ದ ಮೂರ್ತಿ ಮತ್ತು ಇತರ ಚಿತ್ರಗಳನ್ನು ನೋಡಿದಾಕ್ಷಣ ಪ್ರಪಂಚದಾದ್ಯಂತ ನೆಲೆಸಿರುವ ಕರಾವಳಿಯ ಕ್ರೈಸ್ತರು ಆಘಾತಕ್ಕೊಳಗಾಗಿದ್ದರು. ಅದು ವಿಚಿತ್ರವಾದುದೇನೂ ಅಲ್ಲ. ಸಹಜವಾದದ್ದೇ. ಆ ಚಿತ್ರಗಳನ್ನು ನೋಡಿ, ನಡೆದಿರಬಹುದಾದ ಘಟನೆಯನ್ನು ಕಲ್ಪಿಸಿ ಯಾವುದೇ ಭಕ್ತಾದಿಯೂ ರೋಷಗಳ್ಳದೇ ಇರಲು ಸಾಧ್ಯವಿರಲಿಲ್ಲ. ಬೆಂಕಿಗೆ ತುಪ್ಪ ಸುರಿದಂತೆ ಅದಾಗಲೇ ಮಾಧ್ಯಮಗಳಲ್ಲಿ ಈ ಚಿತ್ರ, ವರದಿಗಳು ಪ್ರವಾಹದಂತೆ ಅಪ್ಪಳಿಸಿ, ಪ್ರಭಾವ, ಪರಿಣಾಮ ಬೀರಲಾರಂಭಿಸಿದ್ದವು.

ಹೌದು, ದಕ್ಷಿಣ ಕನ್ನಡದ ಕಥೊಲಿಕ್ ಕ್ರೈಸ್ತರು ಬೀದಿಗಿಳಿದಿದ್ದರು. ಅದು ನಿಜಕ್ಕೂ ಕರುಣಾಜನಕ ಸ್ಥಿತಿ. ಭಾನುವಾರವಾಗಿದ್ದರಿಂದ ಬಹುತೇಕರು ಪೂಜೆಗೆ ಚರ್ಚಿಗೆ ಬಂದಿರುತ್ತಾರೆ ಅಥವಾ ಮನೆಯಿಂದ ಹೊರಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಇಂತಹ ಘಟನೆ ನಡೆದರೆ ಕೇಳಬೇಕೆ?

ಅದು ಬಜರಂಗದಳದವರು ನಡೆಸಿದ ವ್ಯವಸ್ಥಿತ ದಾಳಿ. ಅದರಲ್ಲಿ ಮುಚ್ಚಿಡುವಂಥದ್ದು, ಗುಟ್ಟಾಗಿರುವುದೇನೂ ಇರಲಿಲ್ಲಿ. ಬಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್ ಅವರೇ ಬಹಿರಂಗವಾಗಿ ಅದನ್ನು ತಾವೇ ಸಂಘಟಿತವಾಗಿ ನಡೆಸಿದ ದಾಳಿ ಎಂದು ಒಪ್ಪಿಕೊಂಡ ಮೇಲೆ ಬೇರೆ ಸಾಕ್ಷಿ ಏನು ಬೇಕಿತ್ತು?

ಆದರೆ ಅವರಿಂದ ಒಂದು ಸಣ್ಣ ಎಡವಟ್ಟು ನಡೆದಿತ್ತು. ಅದು ಮಾತ್ರ ತುಂಬಾ ತುಂಬಾ ದುಬಾರಿಯಾಗಿ ಪರಿಣಮಿಸಿತ್ತು. ಅಂದು ದಕ್ಷಿಣ ಕನ್ನಡದಲ್ಲಿ ದಾಳಿಗೆ ಕಥೊಲಿಕ್ ಕ್ರೈಸ್ತರ ಚರ್ಚ್‍ಗಳಾಗಲೀ, ಇತರ ಪ್ರಾರ್ಥನಾ ಮಂದಿರಗಳನ್ನಾಗಲೀ ಗುರಿಯಾಗಿರಿಸಿರಲಿಲ್ಲ! ಆದರೆ, ಅವರಿಂದ ಒಂದು ಎಡವಟ್ಟಾಗಿತ್ತು. ಮಿಲಾಗ್ರಿಸ್ ಚರ್ಚ್‍ನ ಸನಿಹದಲ್ಲಿರುವ ಎಡೋರೇಶನ್ ಮಿನಿಸ್ಟ್ರಿ ಎಂಬುದು ಕಥೊಲಿಕರದ್ದೆಂದು ಅವರಿಗೆ ತಿಳಿದಿರಲಿಲ್ಲ! ಅಲ್ಲೇ ನಡೆದಿತ್ತು ದಾಳಿ ಮತ್ತು ಅದೇ ಸಾಕಾಯಿತು ಇಷ್ಟೆಲ್ಲಾ ರಂಪಾಟವಾಗಲು!

ಫಳ್ನೀರಿನ ರಸ್ತೆ ಬದಿಯ ಎಡೋರೇಶನ್ ಮಿನಿಸ್ಟ್ರಿ ಕಥೊಲಿಕರದ್ದೇ ಆಗಿತ್ತು. ಅಲ್ಲಿ ಯಾವುದೇ ಹೊತ್ತಿನಲ್ಲಿ ಭಕ್ತಾದಿಗಳು ಹೋಗಿ ಪ್ರಾರ್ಥನೆ, ಜಪ ಮಾಡುತ್ತಾರೆ. ಆದರೆ ಅಲ್ಲಿ ಕೆಲ ಅತಿರೇಕದ ವರ್ತನೆಗಳು ನಡೆಯುತ್ತಿದ್ದವು. ಅವೆಂದರೆ ಪ್ರಾರ್ಥನೆ ಮಾಡುತ್ತಾ ಜೋರಾಗಿ ಕಿರುಚುವುದು, ಮೈಮೇಲೆ ನಿಯಂತ್ರಣ ಕಳೆದುಕೊಂಡಂತೆ ವರ್ತಿಸುವುದು. ಇವು ಸಾಮಾನ್ಯವಾಗಿ ಕಥೊಲಿಕ್ ಚರ್ಚ್‍ಗಳಲ್ಲಿ ಕಾಣಿಸುವುದಿಲ್ಲ (ಎಂದಾದರೊಮ್ಮೆ ರಿಟ್ರೀಟ್‍ಗಳು ನಡೆದಾಗ ಹಾಗೆ ವರ್ತಿಸುತ್ತಾರೆ). ಇಲ್ಲಿಗೆ ಕ್ರೈಸ್ತರಲ್ಲದವರೂ ಹಾಜರಾಗುವುದುಂಟು. ಹಾಗಾಗಿ ಇದು ಮತಾಂತರ ನಡೆಸುವುದರಲ್ಲಿ ಮುಂಚೂಣಿಯಲ್ಲಿದ್ದ ಕೆಲ ಕ್ರೈಸ್ತ ಪಂಗಡಗಳ ಕೇಂದ್ರವಿರಬೇಕೆಂದು ಹಿಂದೂ ಸಂಘಟನೆಗಳವರು ತಪ್ಪಾಗಿ ಭಾವಿಸಿದ್ದರು. ಅದಕ್ಕಾಗಿಯೇ ಇದನ್ನು ಟಾರ್ಗೆಟ್ ಮಾಡಿಕೊಂಡಿದ್ದರು.

ಈ ಒಂದು ತಪ್ಪು ಬಹಳ ಪ್ರಮಾದಕರವಾಗಿ ಪರಿಣಮಿಸಿದ್ದೇ ಅಲ್ಲದೆ, ಎರಡು ದಿನ ನಡೆದ ಅಷ್ಟೆಲ್ಲಾ ರಾದ್ಧಾಂತಗಳಿಗೆ ಮೂಲವಾಯಿತು.

ಎಡೋರೇಶನ್ ಮಿನಿಸ್ಟ್ರಿಯಲ್ಲಿ ನಡೆಸಿದ ದಾಳಿಯಿಂದಾಗಿ ಉಂಟಾಗಿದ್ದ ಧ್ವಂಸ ಕಾರ್ಯವನ್ನು ಯಾರೋ ನೋಡಿದಾಕ್ಷಣ ಮಿಲಾಗ್ರಿಸ್ ಚರ್ಚ್‍ಗೆ ಓಡಿ ಹೋಗಿ ಇತರರಿಗೆ ಹೇಳಿ ಮುಗಿಸಬೇಕಾದರೆ ಚರ್ಚಿನ ಗಂಟೆಗಳು ಅನಿಯಂತ್ರಿತವಾಗಿ ಹೊಡೆದುಕೊಳ್ಳಲಾರಂಭಿಸಿದ್ದವು. ಅಷ್ಟೇ ಸಾಕಾಯಿತು. ಜನಪ್ರವಾಹ ಅಲ್ಲಿಗೆ ನುಗ್ಗಿತು.

ಚರ್ಚಿನಲ್ಲಿ ಸಾಮಾನ್ಯವಾಗಿ ಬಾರಿಸುವ ಗಂಟೆಗಳು ಸಮಯ ಮತ್ತು ಸಂದರ್ಭವನ್ನು ತಿಳಿಸುತ್ತವೆ. ಮರಣ ಸಂಭವಿಸಿದಾಗ ಅಕಾಲಿಕವಾಗಿ ಬಾರಿಸುವ ಗಂಟೆ ಕೇಳಿಯೇ ಜನರಿಗೆ ಸಾವಿನ ಸೂಚನೆ ದೊರಕುತ್ತದೆ. ಹೀಗೆ ಅನಿಯಮಿತವಾಗಿ ಗಂಟೆ ಬಾರಿಸುತ್ತಿದ್ದಾರೆಂದರೆ ಏನೋ ಅವಘಡ ಅಥವಾ ದುರ್ಘಟನೆ ನಡೆದಿದೆಯೆಂದೇ ಅರ್ಥ. ಹಾಗೆ, ಸೆಪ್ಟೆಂಬರ್ 14ರ ಆ ಭಾನುವಾರ ಬೆಳಿಗ್ಗೆ ಮಿಲಾಗ್ರಿಸ್ ಚರ್ಚಿನಿಂದ ಕೇಳಿ ಬಂದ ಅಂತಹ ಘಂಟಾ ನಾದವನ್ನು ಕೇಳಿ ಬೆಚ್ಚಿ ಬಿದ್ದ ಮಂಗಳೂರಿನ ಕ್ರೈಸ್ತರು ಅಲ್ಲಿಗೆ ಧಾವಿಸಿ ಬಂದಿದ್ದರು.

ಬಂದು ನೋಡಿದರೆ ಕಂಡಿದ್ದೇನು? ತಮ್ಮ ದೇವರಾದ ಯೇಸುಕ್ರಿಸ್ತರ ಕೈ ಕಾಲು ಮುರಿದು ಹಾಕಿದ್ದನ್ನು, ತಾವು ಪವಿತ್ರವಾಗಿ ಪೂಜಿಸುವ ಪರಮ ಪ್ರಸಾದವನ್ನು ಕಿತ್ತು ನೆಲಕ್ಕೆ ಬಿಸಾಡಿರುವುದನ್ನು, ಮೃಗೀಯವಾಗಿ, ವಿಕಾರವಾಗಿ ನಡೆಸಿದ ಅನಾಹುತಗಳನ್ನು ನೋಡಿದರೆ ಯಾವ ಕ್ರೈಸ್ತನಿಗೆ ರೋಷ ಉಕ್ಕುವುದಿಲ್ಲ? ಅಲ್ಲಿ ಹಾಗೇ ಆಯಿತು.

ಕ್ರೈಸ್ತರ ಸ್ಥಿತಿ ಕರುಣಾಜನಕವಾಗಿತ್ತು ಎಂದು ಹೇಳಿದೆನಲ್ಲಾ, ಅದು ಇಲ್ಲಿಯೇ ಶುರುವಾಗಿದ್ದು. ಹೀಗೆ ಮಿಲಾಗ್ರಿಸ್ ಬಳಿ ಸೇರಿದ ಕ್ರೈಸ್ತ ಭಕ್ತ ಜನರಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಆಗಮಿಸುತ್ತಿದ್ದ ಜನರ ಸಂಖ್ಯೆಯೂ ಏರುತ್ತಿತ್ತು. ಎಡೋರೇಶನ್ ಮಿನಿಸ್ಟ್ರಿಯ ಎದುರುಗಡೆ ಮಿಲಾಗ್ರಿಸ್ ಸಭಾಂಗಣವಿದೆ. ಅದರ ಮುಂದುಗಡೆ ಖಾಲಿ ಜಾಗದಲ್ಲಿ ಮತ್ತು ಏರುತ್ತಿದ್ದ ಜನರ ಸಂಖ್ಯೆಯಿಂದಾಗಿ ಮುಖ್ಯ ರಸ್ತೆಯಲ್ಲಿ ಜನಸಾಗರ ಸೇರಿತು. ಸುದ್ದಿ ಅದಾಗಲೇ ವಿಶ್ವದಾದ್ಯಂತ ಪಸರಿಸಿದ್ದರಿಂದ ವಾತಾವರಣ ಬಿಸಿಯೇರುತ್ತಿತ್ತು! ಹೀಗೆ ರಸ್ತೆಯಲ್ಲಿ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದೆ, ರಸ್ತೆಯನ್ನೇ ಮುಚ್ಚಬೇಕಾಯಿತು.

ಇತ್ತ ನೆರೆದ ಕ್ರೈಸ್ತರನ್ನು ಸಂಭಾಳಿಸುವ, ಧೈರ್ಯ ನೀಡುವ, ಮಾರ್ಗದರ್ಶನ ಕೊಡುವ ಮುಖಂಡನೇ ಇರಲಿಲ್ಲ.

ಬಿ.ಎಸ್. ಯಡಿಯೂರಪ್ಪನವರ ಸರಕಾರ ರಾಜ್ಯದಲ್ಲಿ ಪ್ರತಿಷ್ಠಾಪಿತವಾಗಿತ್ತು. ಕರಾವಳಿಯಲ್ಲಿಯೂ ಬಿಜೆಪಿಯದ್ದೇ ಪಾರುಪತ್ಯ. ಕ್ರೈಸ್ತರಿಗೆ ರಾಜಕೀಯ ಮತ್ತು ಸಾಮಾಜಿಕ ನಾಯಕರೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಿಕ್ಕು ತಪ್ಪಿದಂತಾಗಿದ್ದ, ಏನು ಮಾಡಬೇಕು, ಹೇಗೆ ಮುಂದುವರಿಯಬೇಕೆಂದು ಅರಿಯದೆ ಪರಿತಪಿಸುತ್ತಿದ್ದ ಕ್ರೈಸ್ತರು ಅಕ್ಷರಶಃ ಬೀದಿ ಪಾಲಾಗಿದ್ದರು.

ನಿಜ. ಕ್ರೈಸ್ತರು ರಸ್ತೆಯನ್ನಾಕ್ರಮಿಸಿದ್ದರು, ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮಾಡಲು ಆರಂಭಿಸಿದ್ದರು. ಅವರನ್ನು ಸಂತೈಸುವ, ಸಮಾಧಾನಪಡಿಸುವ ಮುಖಂಡನೊಬ್ಬನ ಕೊರತೆ ಅಲ್ಲಿ ಕಾಡುತ್ತಿತ್ತು. ಅದು ಘೋರವಾಗಿ ಎದ್ದು ಕಾಣುತ್ತಿತ್ತು. ಈ ಪರಿಸ್ಥಿತಿಯಲ್ಲಿ ರಾಜಕೀಯ ಪ್ರವೇಶ ಪಡೆಯಿತು. ಅಲ್ಲಿಗೆ ಎಲ್ಲವೂ ದಿಕ್ಕು ತಪ್ಪಿತು! ಅನಾಹುತಕ್ಕೆ ಎಡೆ ಮಾಡಿ ಕೊಟ್ಟಿತು.

ಹೌದು. ಆಘಾತದಿಂದ ತತ್ತರಿಸಿದ್ದ, ರೋಷದಿಂದ ಬುಸುಗುಡುತ್ತಿದ್ದ, ಚಿಂತೆಯಿಂದ ವ್ಯಾಕುಲಗೊಂಡು ಮುಂದಿನ ದಾರಿ ಕಾಣದೆ ಅಲ್ಲಿ ನೆರೆದಿದ್ದ ಕ್ರೈಸ್ತರ ಗುಂಪಿಗೆ ನಾಯಕತ್ವ ಕಾಡುತ್ತಿತ್ತು. ಅಷ್ಟರಲ್ಲಿ ಎಲ್ಲೋ ದೂರದಲ್ಲಿದ್ದ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಓಡೋಡಿ ಬಂದರು. ಮೊದಲೇ ಬಿಜೆಪಿ ಸರಕಾರದ ಆಡಳಿತ. ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರೆಲ್ಲಾ ಬಿಜೆಪಿಯವರೇ. ಅದರಿಂದಾಗಿ ಜಿಲ್ಲಾಡಳಿತವೂ ಬಿಜೆಪಿಯ ಆಣತಿಯಂತೆಯೇ ನಡೆಯುತ್ತಿತ್ತೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಅಷ್ಟರಲ್ಲಿ ಮಾನ್ಯ ಐವನ್ ಡಿಸೋಜರವರು ಶಾಸಕರಾದ ರಮಾನಾಥ ರೈ, ಯು.ಟಿ. ಖಾದರ್ ಸೇರಿದಂತೆ ಕಾಂಗ್ರೆಸ್ಸಿನ ನಾಯಕರನ್ನು ಕರೆಸಿಯಾಗಿತ್ತು. ಅವರೆಲ್ಲಾ ರಸ್ತೆಯಲ್ಲಿ ಜನರ ಜೊತೆ ಧರಣಿ ಕುಳಿತರು. ಅಲ್ಲಿಗೆ ಕೇವಲ ಒಂದು ಧರ್ಮದ ಭಕ್ತ ಜನರ ಪ್ರತಿಭಟನಾ ಧರಣಿಯು ರಾಜಕೀಯ ರಂಗನ್ನು ಪಡೆದುಕೊಂಡಾಗಿತ್ತು.

ಅದು ಬಿಜೆಪಿ ಸರಕಾರಕ್ಕೆ ಕಣ್ಣು ಕುಕ್ಕುವಂತೆ ಮಾಡಿತು. ಜಿಲ್ಲಾಡಳಿತ ಈ ಬೆಳವಣಿಗೆಯನ್ನು ಗಮನಿಸುತ್ತಾ, ಪ್ರತಿಭಟನೆಯನ್ನು ಹತ್ತಿಕ್ಕಲು ಪ್ಲ್ಯಾನಿಂಗ್ ನಡೆಸಲಾರಂಭಿಸಿತ್ತು.

ಅದರ ಪರಿಣಾಮವೇ, ಕ್ರೈಸ್ತರು ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿದ್ದು!

(ಯಾಕೆ, ಹೇಗೆ ಎಂಬಿತ್ಯಾದಿ ವಿವರಗಳನ್ನು ನಾಳೆ ಓದಿ)

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

Like our Facebook Page: www.facebook.com/budkulo.epaper