ಕೊಂಕಣಿ ಭವನ ಶಿಲಾನ್ಯಾಸ: ಕೊಂಕಣಿ ಕ್ರೈಸ್ತರ ಕಡೆಗಣನೆ ಅಕ್ಷಮ್ಯ, ಖಂಡನಾರ್ಹ
ನಿರೂಪಣೆ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ, ಬುಡ್ಕುಲೊ ಇ-ಪತ್ರಿಕೆ
ಕರ್ನಾಟಕದ ಕೊಂಕಣಿ ಜನರ ಬಹು ವರ್ಷಗಳ ಕನಸೊಂದು ಸಾಕಾರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದರ ಜೊತೆಗೇ ವ್ಯವಸ್ಥಿತ ಅನ್ಯಾಯದ ಸಂಚು ಸಹ ಬಹಿರಂಗವಾಗಿದೆಯೇ? ಹೌದು ಎನ್ನುತ್ತಿದೆ ಆಮಂತ್ರಣ ಪತ್ರ!
ಕರ್ನಾಟಕ ಸರಕಾರವು ಕೊಂಕಣಿ ಭಾಷೆಗೂ ಒಂದು ಅಕಾಡೆಮಿ ಸ್ಥಾಪಿಸಿದ್ದು ಎಲ್ಲರಿಗೂ ತಿಳಿದಿದೆ. ಅದಕ್ಕೆ 25 ವರ್ಷಗಳ ಸಂಭ್ರಮವೂ ಜರಗಿದೆ. ಕನ್ನಡ ನಾಡಿನ ಕೊಂಕಣಿ ಸಮುದಾಯಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದಾಗಿ ಸಾಕಷ್ಟು ಒಳಿತಾಗಿದೆ. ಬಹಳಷ್ಟು ಉತ್ತಮ ಕಾರ್ಯ ಯೋಜನೆಗಳು ಮತ್ತು ಕೊಂಕಣಿ ಬರಹಗಾರರು, ಕಲಾವಿದರು ಮುಂತಾದವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಶಸ್ತಿ, ಪುರಸ್ಕಾರಗಳಿಂದ ಗೌರವಿಸಿದೆ, ಸಾಧಕರನ್ನು ಸನ್ಮಾನಿಸಿದೆ.
ಅಕಾಡೆಮಿಗೆ ತನ್ನದೇ ಆದ ಭವನದ ಅಗತ್ಯ ಕಂಡುಕೊಂಡ ಹಿಂದಿನ ಅಧ್ಯಕ್ಷರುಗಳು ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದರಿಂದ ಪ್ರಸ್ತುತ ಕೊಂಕಣಿ ಭವನದ ಕನಸು ನನಸಾಗುವ ಸಂದರ್ಭ ಒದಗಿ ಬಂದಿದೆ. ಸ್ಥಳ ಮಂಜೂರಾತಿಗೊಂಡು ಭವನದ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಮುಹೂರ್ತವೂ ಕೈಗೂಡಿದೆ. ಇದು ಕೊಂಕಣಿ ಮಾತನಾಡುವ ಎಲ್ಲಾ ಪಂಗಡಗಳ ಜನರಿಗೆ ಸಂತಸವನ್ನುಂಟು ಮಾಡುವ ಸುದ್ದಿ. ಆದಷ್ಟು ಬೇಗ ಭವನವು ನಿರ್ಮಾಣಗೊಂಡು ಕೊಂಕಣಿಯ ಏಳಿಗೆಗಾಗಿ ಮಹತ್ತರ ಕೊಡುಗೆ ನೀಡುವುದನ್ನು ಕಾಣಲು ಜನರು ಕಾತರರಾಗಿದ್ದಾರೆ.
ಈ ಸಂತೋಷದ ಸಂಗತಿಯ ನಡುವೆ, ಆಮಂತ್ರಣ ಪತ್ರಿಕೆ ನೋಡಿದಾಗ, ಒಂದು ರೀತಿಯ ಅಸಮಾಧಾನದ ಕೂಗು ಸಹ ಭುಗಿಲೆದ್ದಿದೆ. ಎಲ್ಲರಿಗೂ ತಿಳಿದಿರುವ ಸತ್ಯವೇನೆಂದರೆ ಕರ್ನಾಟಕ ಮಾತ್ರವಲ್ಲದೆ ಇಡೀ ರಾಷ್ಟ್ರ ಮತ್ತು ವಿದೇಶಗಳಲ್ಲಿಯೂ ಸಹ ಕೊಂಕಣಿಯನ್ನು ಅತ್ಯಂತ ಪ್ರೀತಿ, ನಿಷ್ಠೆಯಿಂದ ಸಾಕಿ ಸಲಹಿದವರು ಕ್ರೈಸ್ತರು. ಗೋವಾ, ಕರ್ನಾಟಕ, ಮುಂಬೈ ಸೇರಿದಂತೆ ಎಲ್ಲೆಡೆ ಕೊಂಕಣಿ ಕೃಷಿಯ ಕೈಂಕರ್ಯವನ್ನು ಅತೀ ಹೆಚ್ಚು ಮಾಡಿದ್ದು ಕೊಂಕಣಿ ಕಥೊಲಿಕ್ ಸಮುದಾಯದವರು.
ಕೊಂಕಣಿಯನ್ನು ಸಾಕಿ ಸಲಹುವುದೆಂದರೇನು? ಕೇವಲ ಮನೆಯಲ್ಲಿ, ಸಮುದಾಯದಲ್ಲಿ ತಮ್ಮ ಭಾಷೆಯನ್ನು ಮಾತನಾಡುವುದರಿಂದಷ್ಟೇ ಒಂದು ಭಾಷೆ ಸಮೃದ್ಧಗೊಳ್ಳುವುದಿಲ್ಲ. ಸಾಹಿತ್ಯ, ಕಲೆ, ಸಂಗೀತ ಸಾಂಸ್ಕøತಿಕ ಕ್ಷೇತ್ರ, ಪತ್ರಿಕೋದ್ಯಮ ಸೇರಿದಂತೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಒಂದು ಭಾಷೆಯನ್ನು ಬಳಸಿ, ಬೆಳೆಸುವುದೇ ಆಯಾ ಭಾಷೆಯನ್ನು ಶ್ರೀಮಂತಗೊಳಿಸಿದಂತೆ. ಕೊಂಕಣಿಯ ಮಟ್ಟಿಗೆ ಈ ಎಲ್ಲಾ ಕ್ಷೇತ್ರಗಳಲ್ಲಿ ಕೊಂಕಣಿ ಭಾಷೆಯನ್ನು ಒಂದು ಸಮೃದ್ಧ ಮತ್ತು ಬಲಿಷ್ಠ ಶಕ್ತಿಯನ್ನಾಗಿ ಮಾರ್ಪಡಿಸಿದ್ದು (ಬಹುತೇಕ 90-95%ದಷ್ಟು) ಕ್ರೈಸ್ತರೆನ್ನುವುದು ನಿರ್ವಿವಾದದ ಸಂಗತಿ. ಇದನ್ನು ಎಲ್ಲರೂ ಒಪ್ಪುತ್ತಾರೆ.
ಹಾಗಂತ ಇಲ್ಲಿ ಧರ್ಮವನ್ನು ಬೆರೆಸುವ ಸಂಗತಿಯಂತೂ ಇಲ್ಲವೇ ಇಲ್ಲ. ಕರ್ನಾಟಕದಲ್ಲಿ, ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಕೊಂಕಣಿ ಒಂದು ಸಮೃದ್ಧ ಭಾಷೆ. ಕರ್ನಾಟಕದಲ್ಲೂ ಹಲವು ಧರ್ಮ, ಜಾತಿ, ಪಂಗಡಗಳ ಜನರು ಕೊಂಕಣಿ ಮಾತೃಭಾಷೆಯವರಿದ್ದಾರೆ. 42 ಪಂಗಡಗಳನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಕ್ರೈಸ್ತರು, ಸಾರಸ್ವತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತರ ಪಂಗಡಗಳ ಜನರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಸಾಹಿತ್ಯದಿಂದ ಪತ್ರಿಕೋದ್ಯಮದ ವರೆಗೆ, ಸಂಗೀತದಿಂದ ಸಾಂಸ್ಕøತಿಕ ಕ್ಷೇತ್ರಗಳ ವರೆಗೆ ಕೊಂಕಣಿಯನ್ನು ಕಳೆದ ಶತಮಾನದಿಂದ ಶ್ರೀಮಂತಗೊಳಿಸುವುದರ ಜೊತೆಗೆ ಕೊಂಕಣಿಯ ಬಾಳ್ವಿಕೆ ಮತ್ತು ಪ್ರಗತಿಗಾಗಿ ನಿಸ್ಸಂಶಯವಾಗಿ ಶ್ರಮಿಸಿ, ನಾಯಕತ್ವವನ್ನು ವಹಿಸಿಕೊಂಡು ಬಂದಿದ್ದು ಕ್ರೈಸ್ತ ಸಮುದಾಯದ ಜನರು.
ಅಷ್ಟೇ ಅಲ್ಲ, ಧಾರ್ಮಿಕವಾಗಿಯೂ ಕ್ರೈಸ್ತರು ಕೊಂಕಣಿಯನ್ನೇ ಅಧಿಕೃತವಾಗಿ ಬಳಸುತ್ತಿರುವುದರಿಂದ ಅವರ ಜೀವನದಲ್ಲಿ ಕೊಂಕಣಿ ಕೇವಲ ಮಾತೃಭಾಷೆಯಷ್ಟೇ ಅಲ್ಲದೆ ಉಸಿರುಸಿರಿನಲ್ಲೂ ಅದು ಜೀವಂತವಾಗಿದೆ, ಜಾಗೃತವಾಗಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿಯೇ ಇದಕ್ಕೆ ಬೇಕಾದಷ್ಟು ಸಾಕ್ಷ್ಯ, ರುಜುವಾತುಗಳಿವೆ. ಆದರೆ ದುರ್ದೈವದ ಸಂಗತಿಯೇನೆಂದರೆ ಕಳೆದ ಕೆಲ ವರ್ಷಗಳಿಂದ ಇದೇ ಅಕಾಡೆಮಿಯು ಕ್ರೈಸ್ತರ ಕೊಡುಗೆಯನ್ನು ಕಡೆಗಣಿಸಿದಂತೆ ವರ್ತಿಸುತ್ತಿರುವುದು. ಪ್ರಸ್ತುತ ಸಮಿತಿಯು ರಚನೆಗೊಂಡಾಗಲೇ ಇದು ನಿಚ್ಚಳವಾಗಿ ಸಾಬೀತಾಗಿತ್ತು. ಈ ಹಿಂದೆ ಕ್ರೈಸ್ತ ಸಮುದಾಯದಿಂದ ಹಲವರು ಅಕಾಡೆಮಿಯ ನೇತೃತ್ವ ವಹಿಸಿ ಅಗಾಧವಾಗಿ ದುಡಿದಿದ್ದಾರೆ. ಇತರ ಸಮುದಾಯದವರೂ ಸಾಂಗತ್ಯವನ್ನು ನೀಡುವುದರ ಜೊತೆಗೆ ನೇತೃತ್ವವನ್ನೂ ವಹಿಸಿದ್ದಾರೆ. ಆದರೆ ಪ್ರಸ್ತುತ ಸಮಿತಿಯಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ಸದಸ್ಯನಿಗೆ ಅವಕಾಶವಿರಲಿಲ್ಲ!
ಈ ಬಗ್ಗೆ ಸ್ವಲ್ಪ ಮಟ್ಟಿಗೆ ಅಪಸ್ವರ ಕೇಳಿ ಬಂದಿದ್ದರೂ, ಎಲ್ಲವನ್ನೂ ಸಹಿಸುವ ಗುಣದ ಮತ್ತು ಪ್ರತಿಭಟನೆಯಲ್ಲಿ ಸದಾ ನಿರಾಸಕ್ತಿ ಮನೋಭಾವ ತೋರುವ ಕ್ರೈಸ್ತರು ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ನಂತರ ಅಕಾಡೆಮಿ ನಡೆಸಿದ ಪ್ರಮುಖ ಕಾರ್ಯಕ್ರಮಗಳಲ್ಲಿ ಈ ತಾರತಮ್ಯ ಮುಂದುವರಿಯುತ್ತಾ ಬಂತು. ಇದೀಗ ಅತೀ ದೊಡ್ಡ ಸಂಭ್ರಮದ ಒಂದು ಕಾರ್ಯಕ್ರಮವನ್ನು ಕ್ರೈಸ್ತ ಸಮಾಜವನ್ನು ಹೊರಗಿಟ್ಟು ನಡೆಸುವ ಮಟ್ಟಕ್ಕೆ ಬಂದಿದೆ. ಇದು ನಿಜಕ್ಕೂ ದುರಂತ ಹಾಗೂ ಖೇದಕರ ಬೆಳವಣಿಗೆ.
ಇಲ್ಲಿರುವ ಆಮಂತ್ರಣ ಪತ್ರವನ್ನು ಗಮನಿಸಿ. ಮೇಲ್ನೋಟಕ್ಕೆ ಹಾಲಿ ಜನಪ್ರತಿನಿಧಿಗಳನ್ನು ಆಮಂತ್ರಿಸಲಾಗಿದೆಯಷ್ಟೇ ಎಂದು ತೋರಬಹುದು. ಸಭಾ ಕಾರ್ಯಕ್ರಮದ ಪಟ್ಟಿಯಲ್ಲಿ ಕ್ರೈಸ್ತರ ಅನುಪಸ್ಥಿತಿ ಎದ್ದು ಕಾಣುವುದರ ಜೊತೆಗೆ ಆಮಂತ್ರಿತರೆಲ್ಲರೂ ಬಿಜೆಪಿಯವರೇ ಎಂಬುದು ಕಾಕತಾಳೀಯ ಖಂಡಿತಾ ಅಲ್ಲ! ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯದ ಶಾಸನಸಭೆಗೆ ಆಯ್ಕೆಯಾದ ಕಾಂಗ್ರೆಸ್ ಜನಪ್ರತಿನಿಧಿಗಳೂ ಇದ್ದಾರಲ್ಲವೇ? ಅವರ ಹೆಸರು ಯಾಕಿಲ್ಲ ಆಮಂತ್ರಿತರಲ್ಲಿ? ಕೇವಲ ಆಡಳಿತ ಪಕ್ಷದವರು ಮಾತ್ರ ಮುಖ್ಯ, ಇತರರು ಅಲ್ಲವೆಂದೇ?
ಕೊಂಕಣಿ ಭವನದ ಶಿಲಾನ್ಯಾಸವೇನೂ ಒಮ್ಮಿಂದೊಮ್ಮೆಗೇ ಮೂಡಿ ಬಂದಿದ್ದಲ್ಲವಲ್ಲ? ಈ ಭವನದ ಕನಸು ಕಂಡವರಿದ್ದಾರೆ, ಅದಕ್ಕಾಗಿ ಹಕ್ಕೊತ್ತಾಯ ಮಂಡಿಸಿದವರಿದ್ದಾರೆ. ಅದನ್ನು ಸಾಕಾರಗೊಳಿಸುವುದಕ್ಕೆ ಶ್ರಮಿಸಿದವರೂ ಬಹಳ ಜನರಿದ್ದಾರೆ. ಇವರಲ್ಲಿ ಬಹುತೇಕರು ಕ್ರೈಸ್ತರೇ ಆಗಿದ್ದಾರೆ ಎಂಬುದು ಉಲ್ಲೇಖನೀಯ. ಕಳೆದೊಂದು ದಶಕದಿಂದ ಕೊಂಕಣಿ ಭವನ ಬೇಕೆಂಬ ಕೋರಿಕೆಯ ಜೊತೆಗೆ ಅದನ್ನು ನಿರ್ಮಾಣಗೊಳಿಸಲು ಬೇಕಾದ ಏರ್ಪಾಡುಗಳೇನೂ ರಾತ್ರಿ ಹಗಲಲ್ಲಿ ಆಗಿದ್ದಲ್ಲವಲ್ಲ? ಹಾಗಿರುವಾಗ ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರಿಗೆ ಇದೆಲ್ಲಾ ಮರೆತು ಹೋಯಿತೇ? ಅಥವಾ ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆಯೇ? ಇಂತಹ ಹಲವು ಸಂಶಯಗಳನ್ನು ಕೊಂಕಣಿ ಸಾಹಿತಿಗಳು ವ್ಯಕ್ತಪಡಿಸಿದ್ದಾರೆ.
ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಪ್ರೊಟೊಕಾಲ್ ಪಾಲಿಸುವುದು ಮುಖ್ಯ. ಆದರೆ ಅದರಲ್ಲೂ ಹಲವು ಪ್ರಮಾದಗಳಾಗಿವೆ. ಸಾಮಾನ್ಯವಾಗಿ ಜಿಲ್ಲಾಧಿಕಾರಿಯ ಹೆಸರು ಆಮಂತ್ರಣ ಪತ್ರದಲ್ಲಿರುತ್ತದೆ. ಅದು ಕಾಣೆಯಾಗಿದೆ. ಆಮಂತ್ರಣ ಪತ್ರ ನೋಡಿದವರಿಗೆ ಅದು ಬರೀ ಬಿಜೆಪಿಮಯವಾಗಿದೆ ಎಂದನಿಸಿದರೆ ಖಂಡಿತಾ ತಪ್ಪಾಗಲಾರದು. ಯಾಕೆಂದರೆ ಕೇವಲ ಆಡಳಿತ ಪಕ್ಷದ ಜನಪ್ರತಿನಿಧಿಗಳೇ ರಾರಾಜಿಸುತ್ತಿದ್ದಾರೆ. ಜಿಲ್ಲೆಯ ಹೊರಗಿನ ಶಾಸಕರೂ ಇದ್ದಾರೆ. ಆದರೆ ಜಿಲ್ಲೆಯಲ್ಲಿಯೇ ಕಾಂಗ್ರೆಸ್ಸಿನ ಮೂವರು ಶಾಸಕರಿದ್ದಾರೆ (ಎಂಎಲ್‍ಎ ಯು.ಟಿ. ಖಾದರ್, ಎಂಎಲ್‍ಸಿಗಳಾದ ಹರೀಶ್ ಕುಮಾರ್ ಮತ್ತು ಡಾ. ಮಂಜುನಾಥ್ ಭಂಡಾರಿ), ಅವರ್ಯಾರೂ ಆಮಂತ್ರಿತರ ಪಟ್ಟಿಯಲ್ಲಿಲ್ಲ. ಇದು ಕಾಕತಾಳೀಯವೇ? ಅಥವಾ ‘ಡೆಲಿಬರೇಟ್’ ಅವಗಣನೆಯೇ?
ಈ ಹಿಂದೆ ಅಕಾಡೆಮಿಯ ಮಾಜಿ ಅಧ್ಯಕ್ಷರೆಲ್ಲರನ್ನೂ ಗೌರವಿಸಿ ಅವರಿಗೆ ವೇದಿಕೆಯಲ್ಲಿ ಸ್ಥಾನ ಕಲ್ಪಿಸುವ ಸಂಪ್ರದಾಯವಿತ್ತು. ಕೇವಲ ಮಾಜಿ ಅಧ್ಯಕ್ಷರು ಎಂಬ ಕಾರಣಕ್ಕೆ ಮಾತ್ರವಲ್ಲ, ಕೊಂಕಣಿ ಭವನ ಸಾಕಾರಗೊಳಿಸಲು ಬಹಳಷ್ಟು ಶ್ರಮಿಸಿದ್ದ ರಾಯ್ ಕ್ಯಾಸ್ಟೆಲಿನೊ ಅವರನ್ನಾದರೂ ಪರಿಗಣಿಸಬಹುದಿತ್ತು. ಕೊಂಕಣಿಗೆ ಅವರ ಕೊಡುಗೆ ಬಹಳಷ್ಟಿದೆ. ಸಮುದಾಯ, ಭಾಷೆಗಾಗಿ ತನು-ಮನ-ಧನ ಅರ್ಪಿಸಿರುವ ಅವರ ಬದ್ಧತೆ ಶ್ಲಾಘನೀಯ. ಅಲ್ಲದೆ ಕ್ರೈಸ್ತ ಸಮುದಾಯದ ಓರ್ವ ಪ್ರಮುಖ ಸಾಮಾಜಿಕ ಮುಖಂಡರೂ ಅವರಾಗಿದ್ದಾರೆ. ಕೊಂಕಣಿಯನ್ನೇ ಉಸಿರಾಡುವ, ಕೊಂಕಣಿಯನ್ನು ಬೆಳೆಸುವಲ್ಲಿ ಮಹತ್ತರ ಕೊಡುಗೆ ನೀಡಿರುವ ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ಬಿಶಪರನ್ನಾದರೂ ಆಮಂತ್ರಿಸಬಹುದಿತ್ತು. ಅಂತೂ ಕ್ರೈಸ್ತರು ಈ ನೆಲದಲ್ಲಿ ಇಲ್ಲವೇ ಇಲ್ಲವೆಂಬ ಭಾವನೆ ಬರಿಸುವಂತಹ ಈ ಕಾರ್ಯಕ್ರಮದ ಆಯೋಜನೆ ಪಕ್ಷಪಾತತನದಿಂದ ಕೂಡಿರುವುದು ಅಕ್ಷಮ್ಯ. ಇದರಿಂದಾಗಿ ಕ್ರೈಸ್ತ ಸಮುದಾಯಕ್ಕೆ ನೋವು ಮಾತ್ರವಲ್ಲ ಅವಮಾನವೂ ಆಗಿದೆ ಎಂದು ಬಹಳ ಲೇಖಕರು, ಕಲಾವಿದರು ಬೇಸರಿಸಿದ್ದಾರೆ.
ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಅವರಲ್ಲಿ ಮಾತನಾಡಿಸಿದಾಗ, ಕ್ರೈಸ್ತ ಸಮುದಾಯದವರನ್ನು ಸಭಾ ಕಾರ್ಯಕ್ರಮಕ್ಕೆ ಆಮಂತ್ರಿಸದಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಪ್ರಮಾದವಾಗಿದೆ, ಕ್ಷಮೆ ಕೇಳುತ್ತೇನೆ’: ಅಧ್ಯಕ್ಷರ ಹೇಳಿಕೆ
ಈ ಬಗ್ಗೆ ಬಹಳಷ್ಟು ಕೊಂಕಣಿ ಲೇಖಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದನ್ನವರು ಸಂಬಂಧಿತರಿಗೆ ಲಿಖಿತವಾಗಿ ಸಲ್ಲಿಸಿದ್ದಾರೆ. ಈ ಬಗ್ಗೆ ‘ಬುಡ್ಕುಲೊ’ ಇ-ಪತ್ರಿಕೆ ಅಕಾಡೆಮಿ ಅಧ್ಯಕ್ಷರಾದ ಡಾ. ಜಗದೀಶ್ ಪೈ ಅವರನ್ನು ಮಾತನಾಡಿಸಿತು. “ಕ್ರೈಸ್ತರನ್ನು ಕಡೆಗಣಿಸುವ ಪ್ರಮೇಯವೇ ಇಲ್ಲ. ಸರಕಾರಿ ಶಿಷ್ಟಾಚಾರವನ್ನು ಪರಿಗಣಿಸಿ ಆಮಂತ್ರಿತರನ್ನು ಆಯ್ಕೆ ಮಾಡಲಾಗಿದೆ. ಹಾಗೆ ನೋಡಿದರೆ ಕೊಂಕಣಿಯಲ್ಲಿ ಹಲವಾರು ಪಂಗಡಗಳಿವೆ. ಎಲ್ಲರಿಗೂ ವೇದಿಕೆಯಲ್ಲಿ ಅವಕಾಶ ನೀಡಿದರೆ ಸಮಯದ ಪಾಲನೆ ಕಷ್ಟ. ಯಾರನ್ನೂ ಉದ್ದೇಶಪೂರ್ವಕವಾಗಿ ಕಡೆಗಣಿಸಿಲ್ಲ…” ಎಂದು ಅವರು ಹೇಳಿದರು. ಆದರೆ ಶಿಷ್ಟಾಚಾರ ಪಾಲನೆಯಲ್ಲಿಯೂ ತಪ್ಪುಗಳಾಗಿವೆಯಲ್ಲ ಎಂದಾಗ, “ನೀವು ಹೇಳಿದಂತೆ ಜಿಲ್ಲಾಧಿಕಾರಿಯವರ ಹೆಸರು ಬಿಟ್ಟು ಹೋಗಿದೆ. ಅದೇ ರೀತಿ ಇತರ ಶಾಸಕರ ಹೆಸರು ಬಿಟ್ಟು ಹೋಗಿದೆ. ಅದು ನಮ್ಮಿಂದಾದ ಪ್ರಮಾದ. ಅದಕ್ಕಾಗಿ ಕ್ಷಮೆ ಕೋರುತ್ತೇನೆ” ಎಂದು ಸ್ಪಷ್ಟೀಕರಣ ನೀಡಿದರು.
ಇತರ ಜಿಲ್ಲೆಯ ಶಾಸಕರ ಹೆಸರನ್ನು ಪ್ರಸ್ತಾಪಿಸಿ, ಡಾ. ಪೈ, “ಶಾಸಕ ಸಿ.ಟಿ. ರವಿ ಅವರು ನಾನು ಅಧ್ಯಕ್ಷನಾದ ಬಳಿಕ ಕೊಂಕಣಿಗಾಗಿ ಬಹಳಷ್ಟು ಕೊಡುಗೆ ನೀಡುವಲ್ಲಿ ಶ್ರಮಿಸಿದ್ದಾರೆ. ಅದೇ ರೀತಿ ಕೊಂಕಣಿಗಾಗಿ ಕೆಲಸ ಮಾಡಿದ ಶಾಸಕ ಪ್ರತಾಪಸಿಂಹ ನಾಯಕ್ ಅವರನ್ನು ಆಮಂತ್ರಿಸಲಾಗಿದೆ” ಎಂದು ಸಮರ್ಥಿಸಿಕೊಂಡರು.
ನೀವು ಅಧ್ಯಕ್ಷರಾಗಿ ಆಯ್ಕೆಯಾದಾಗ ಸಮಿತಿಯಲ್ಲಿ ಕ್ರೈಸ್ತ ಸಮುದಾಯದಿಂದ ಒಬ್ಬನೇ ಒಬ್ಬ ಸದಸ್ಯನನ್ನೂ ನೇಮಿಸಿರಲಿಲ್ಲ. ಇಂತಹ ಹಲವು ದೃಷ್ಟಾಂತಗಳಿವೆ ಎಂದು ಅವರಿಗೆ ನೆನಪಿಸಿದಾಗ, “ಅಕಾಡೆಮಿಯ ಅಧ್ಯಕ್ಷನಾಗಿ ಸರಕಾರ ನನ್ನನ್ನು ನೇಮಿಸಿದಾಗ ನನಗೇ ಅಚ್ಚರಿಯಾಗಿತ್ತು. ನಾನು ನಿರೀಕ್ಷಿಸಿರಲಿಲ್ಲ. ಅಲ್ಲದೆ ನನ್ನನ್ನೂ ಸೇರಿಸಿದಂತೆ ಎಲ್ಲಾ ಸದಸ್ಯರನ್ನು ನೇಮಿಸಿದ್ದು ಸರಕಾರ. ಅದರಲ್ಲಿ ನನ್ನ ಕೈವಾಡವಿರಲಿಲ್ಲ. ಕ್ರೈಸ್ತರನ್ನು ಪ್ರತಿನಿಧಿಸುವವರು ಒಬ್ಬರೂ ಇಲ್ಲದ್ದಕ್ಕೆ ನನಗೂ ಆಕ್ಷೇಪವಿತ್ತು. ನಾನದನ್ನು ಸಂಬಂಧಿತ ಸಚಿವ, ಜನಪ್ರತಿನಿಧಿಗಳಿಗೆ ತಿಳಿಸಿದ್ದೇನೆ. ಕ್ರೈಸ್ತರನ್ನು ಕೈಬಿಟ್ಟದ್ದು ತಪ್ಪು. ಆದರೆ ಅದರಲ್ಲಿ ನನಗೆ ಯಾವುದೇ ಅಧಿಕಾರವಿರಲಿಲ್ಲ. ಕೊನೆಗೆ ಓರ್ವರನ್ನು ಕೋಆಪ್ಟ್ ಸದಸ್ಯರನ್ನಾಗಿಸಿದೆವು” ಎನ್ನುತ್ತಾರೆ ಡಾ. ಜಗದೀಶ್ ಪೈ.
ಕಳೆದ ಎರಡು ವರ್ಷಗಳಲ್ಲಿ ಕೊಂಕಣಿ ಭವನಕ್ಕಾಗಿ ತಾನು ಸಾಕಷ್ಟು ಶ್ರಮಿಸಿದ್ದೇನೆ ಎನ್ನುವ ಡಾ. ಪೈ, “ನನಗಿನ್ನು ಆರು ತಿಂಗಳ ಅವಧಿ ಇದೆ. ಶಿಲಾನ್ಯಾಸ ಕಾರ್ಯಕ್ರಮ ಕೊನೆಯ ಘಳಿಗೆಯಲ್ಲಿ ತೀರ್ಮಾನಿಸಿದ್ದು. ಇಲಾಖೆಯ ಸಚಿವರ ಹಾಜರಾತಿ ಮುಖ್ಯ. ಅವರು ಸಾಕಷ್ಟು ನೆರವು ನೀಡಿದ್ದಾರೆ. ಕೆಲವರ ಹೆಸರು ಬಿಟ್ಟು ಹೋಗಿದ್ದಕ್ಕೆ ವಿಷಾದಿಸುತ್ತೇನೆ. ಕ್ರೈಸ್ತರನ್ನು ‘ಡೆಲಿಬರೇಟ್ಲಿ’ ಅವಗಣಿಸಿಲ್ಲ. ಈ ಹಿಂದಿನ ಕಾರ್ಯಕ್ರಮಗಳಿಗೆ ಮಾಜಿ ಅಧ್ಯಕ್ಷರಿಗೆಲ್ಲಾ ಕರೆದಿದ್ದೇವೆ. ಶಿಲಾನ್ಯಾಸ ಕಾರ್ಯಕ್ರಮ ಸಣ್ಣದು. ಭವನ ನಿರ್ಮಾಣಗೊಂಡಾಗ ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸುತ್ತೇವೆ. ಅಂದು ಖಂಡಿತವಾಗಿ ಕ್ರೈಸ್ತರ ಪ್ರತಿನಿಧಿಗಳಿರುತ್ತಾರೆ” ಎಂದು ಹೇಳಿದರು. ಎಂದಿನಂತೆ ಕ್ರೈಸ್ತರ ಬೆಂಬಲ ಕೊಂಕಣಿಯ ಬೆಳವಣಿಗೆಗೆ ಅಗತ್ಯವೆಂದು ಅವರು ಪುನರುಚ್ಚರಿಸಿದರು.
ಕೊಂಕಣಿ ಭವನ ಬೇಗನೆ ನಿರ್ಮಾಣವಾಗಲಿ. ಭಾಷೆಯ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಸೂಕ್ತ ಗೌರವ, ಸ್ಥಾನಮಾನ ದೊರಕಲಿ ಎಂದು ‘ಬುಡ್ಕುಲೊ’ ಆಶಿಸುತ್ತದೆ. ಯಾರದೇ ಅವಗಣನೆ, ಕಡೆಗಣನೆ ಇನ್ನು ಮುಂದಾದರೂ ಆಗದಿರಲಿ ಎಂದು ಬಯಸುತ್ತೇವೆ.
Send Feedback to: budkuloepaper@gmail.com