Latest News

ಸಮೀಕ್ಷೆಗಳೆಂಬ ಪ್ರಹಸನ: ಮಾಧ್ಯಮಗಳಿಗೆ ಕಪಾಳಮೋಕ್ಷ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : November 12, 2015 at 10:00 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಮೊನ್ನೆ, ನವೆಂಬರ್ 8ರಂದು ಬೆಳಿಗ್ಗೆ ಬಿಹಾರದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಅರ್ಧ ಗಂಟೆ ಕಳೆದಿತ್ತಷ್ಟೇ. ಎನ್‍ಡಿಟಿವಿಯ ಪ್ರಣಯ್ ರಾಯ್ ದೇಶದ ಸೀನಿಯರ್ ಪತ್ರಕರ್ತ ಮತ್ತು ಪಳಗಿದ ಚುನಾವಣಾ ವಿಶ್ಲೇಶಕರು. ಎಂದಿನ ವಿಶ್ವಾಸದಲ್ಲಿ, ಪರದೆ ಮೇಲೆ ಏರುತ್ತಿದ್ದ ಅಂಕಿ ಅಂಶಗಳ ಗ್ರಾಫ್ ನೋಡಿದ್ದೇ ತಡ ಆತ ಬಿಜೆಪಿಯ ನಾಯಕರೊಬ್ಬರನ್ನು ಅಭಿನಂದಿಸಿ, ಬಿಹಾರದಲ್ಲಿ ಬಿಜೆಪಿಯು ಸರಕಾರ ರಚಿಸುತ್ತದೆ ಎಂದು ಘೋಷಿಸಿಯೇ ಬಿಟ್ಟರು!

Budkulo_Opinion Polls 2ಕರ್ನಾಟಕದಲ್ಲೂ ನ್ಯೂಸ್ ಚಾನೆಲ್‍ಗಳ ಸಂತೆಯೇ ಇದೆ. ಒಂದು ಚಾನೆಲ್ ಕಳೆದ ಕೆಲವು ಚುನಾವಣೆಗಳ ಸಂದರ್ಭದಲ್ಲಿ, ಫೋನ್‍ನಲ್ಲಿ ಕರೆ ಮಾಡಿ ನಿಮ್ಮ ಆಯ್ಕೆ ತಿಳಿಸಿ ಎಂದು ಕರೆ ಕೊಟ್ಟಿತು. ನಿಗದಿತ ‘ಸಮಯ’ದಿಂದ ಲೀಲೆ ಆರಂಭವಾಗಿಯೇ ಬಿಟ್ಟಿತು. ಇಂತಿಂತಹ ಕ್ಷೇತ್ರದ ಇಂತಿಂತಹ ಅಭ್ಯರ್ಥಿಗೆ ಇಷ್ಟು ಮತಗಳು ಎಂದು ಮೇಲೇರುತ್ತಿರುವ ಆತನ ಗ್ರಾಫ್ ತೋರಿಸುತ್ತಾ ಘೋಷಿಸಲಾಗುತ್ತಿತ್ತು. ಅದರ ಆಧಾರದಲ್ಲಿ, ಇಂತಿಂತಹ ಪಕ್ಷ ಇಷ್ಟು ಸ್ಥಾನಗಳನ್ನು ಪಡೆಯುತ್ತದೆ, ಪಡೆದಿದೆ (ಪಡೆಯಬಹುದು ಅಲ್ಲ) ಎಂದೇ, ಅಂದರೆ ತಾವು ಹೇಳಿದಂತೆಯೇ ಚುನಾವಣಾ ಫಲಿತಾಂಶವೂ ಇರುತ್ತದೆಯೆಂಬ ದರ್ಪದಿಂದ ವರ್ತಿಸುತ್ತಿದ್ದರು ಅದರ ನಿರೂಪಕರು. ಪ್ಯಾನೆಲ್ ಡಿಸ್ಕಶನ್‍ನಲ್ಲಿ, ಕಡಿಮೆ ಸ್ಥಾನ ಬಂದ ಪಕ್ಷದ ಪ್ರತಿನಿಧಿಗೆ ಛೀಮಾರಿ ಬೇರೆ!

ಕೆಲವೊಂದು ಚಾನೆಲ್‍ಗಳು ನಿರ್ದಿಶ್ಟ ಪಕ್ಷದ ಪರವಾಗಿಯೇ ಚುನಾವಣಾ ಆರಂಭದಿಂದ ವಾದಿಸಿ, ಪ್ರಚಾರ ಕೊಡುತ್ತಾ ಬಂದಿರುವುದನ್ನು ನಾವು ನೆನಪಿಸಬಹುದು. ಇದರ ಹಿಂದಿನ ‘ಧೋರಣೆ’ ಎಂತಹದು ಎಂಬುದನ್ನು ಅರಿತುಕೊಳ್ಳದವರು ಯಾರೂ ಇಲ್ಲ ಬಿಡಿ!

Budkulo_Opinion Polls n Reality 8ತಂತ್ರಜ್ಞಾನದ ಬೆಳವಣಿಗೆಯಿಂದ ಮಾಧ್ಯಮಗಳ ಪ್ರಭಾವವೂ ಹೆಚ್ಚಾಯಿತು. ಮುಂದುವರಿದ ರಾಷ್ಟ್ರಗಳಲ್ಲಿರುವಂತೆ ಇಲ್ಲಿಯೂ ಸಮೀಕ್ಷೆಗಳ ಯುಗ ಆರಂಭವಾಯಿತು. ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸಬೇಕೆಂಬ ಕೂಗೂ ಬಹಳ ಹಳೆಯದು. ಈ ನಿಟ್ಟಿನಲ್ಲಿ ಬಹಳಷ್ಟು ವಾದ, ವಿವಾದ, ಕಾನೂನು ಸಮರಗಳಾಗಿ, ಪ್ರಜಾತಾಂತ್ರಿಕ ರಾಷ್ಟ್ರದಲ್ಲಿ ಜನರ ಅಭಿಪ್ರಾಯ ಮಂಡನೆಯ ಹಕ್ಕನ್ನು ದಮನಿಸುವಂತಿಲ್ಲವೆಂಬ ಅಂಶವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಕೆಲವು ನಿಬಂಧನೆಗಳನ್ನು ಚುನಾವಣಾ ಆಯೋಗ ವಿಧಿಸಿ, ಈ ಸಮೀಕ್ಷೆಗಳ ನಾಗಾಲೋಟಕ್ಕೆ ಬ್ರೇಕ್ ಹಾಕಿತ್ತು.

ಅದರ ನಂತರ ಚುನಾವಣೆ ಘೋಷಣೆಯಾದಂದಿನಿಂದ ಚುನಾವಣೆ ಮುಕ್ತಾಯವಾಗುವವರೆಗೆ ಯಾವುದೇ ಸಮೀಕ್ಷೆ ಪ್ರಕಟಿಸಬಾರದೆಂಬ ಆದೇಶವಿದ್ದರೂ, ತಾವು ರಂಗೋಲಿ ಕೆಳಗೆ ತೂರುವವರು ಎಂಬಂತೆ ಬೇರೆ ಬೇರೆ ರೂಪಗಳ ಸಮೀಕ್ಷೆ ಪ್ರಕಟಿಸಲಾಗುತ್ತಿದೆ (ಚುನಾವಣೆ ನಡೆಯುತ್ತಿರುವಾಗಲೇ). ಮತಗಟ್ಟೆ ಸಮೀಕ್ಷೆಗೆ ನಿರ್ಬಂಧ ಹಾಕಿದ ನಂತರ ಚುನಾವಣೋತ್ತರ ಸಮೀಕ್ಷೆ ಬಂತು (ಎಕ್ಸಿಟ್ ಪೋಲ್ ಹೋಗಿ ಪೋಸ್ಟ್ ಪೋಲ್).

ಇಂತಹ ಸಮೀಕ್ಷೆಗಳಿಂದಾಗಿ ತಾವು ತಲೆಕೆಡಿಸಿಕೊಳ್ಳುವುದಿಲ್ಲವೆಂದು ಎಷ್ಟೇ ಬಡಬಡಾಯಿಸಿದರೂ ರಾಜಕೀಯ ಪಕ್ಷಗಳು ಪ್ರಭಾವಕ್ಕೊಳಗಾಗಿದ್ದು ಸತ್ಯ. ಸಮೀಕ್ಷೆಗಳ ವರದಿ ನೋಡಿ ತಮ್ಮ ತಂತ್ರಗಾರಿಕೆಯನ್ನು ಬದಲಾಯಿಸಿಕೊಂಡ ಎಷ್ಟೋ ಉದಾಹರಣೆಗಳಿವೆ. ಬಹಳಷ್ಟು ಸಲ ಸಮೀಕ್ಷೆಗಳು ಜನರ ಮೂಡ್ ಹೇಗಿದೆಯೆನ್ನುವುದನ್ನು ಸ್ಪಷ್ಟವಾಗಿ ತೋರಿಸಿ ಕೊಟ್ಟಿದ್ದೂ ಇದೆ.

ಆದರೆ, ಕ್ರಮೇಣ ಈ ಸಮೀಕ್ಷೆಗಳ ಅರಚಾಟ, ಹುಚ್ಚಾಟಗಳೆಲ್ಲಾ ಅತಿಯಾದವು. ಮಾಧ್ಯಮಗಳ ಸ್ಪರ್ಧೆ ಇದರ ವರ್ಧನೆಗೆ ಕಾರಣವಾಯಿತು. ಜನರೂ ಮನರಂಜನೆಯನ್ನು ಆನಂದಿಸಿದರು.

Budkulo_Opinion Polls n Reality 7 Budkulo_Opinion Polls n Reality 9

ಕೆಲವೊಮ್ಮೆ ಸಮೀಕ್ಷೆಗಳ ಅಂದಾಜು ಸರಿಯಾಗಿದ್ದಿದ್ದರಿಂದ, ಮುಂದೆ ತಮ್ಮ ಸಮೀಕ್ಷೆಯ ಪ್ರಕಾರವೇ ಚುನಾವಣಾ ಫಲಿತಾಂಶವೂ ಇರುತ್ತದೆಯೆಂಬ ಅಹಂಕಾರವೂ ಹೆಚ್ಚಾಯಿತು. ಸಮೀಕ್ಷೆಯ ನೆಪದಲ್ಲಿ ರಾಜಕೀಯ ಪಕ್ಷಗಳಿಂದ, ನಾಯಕರಿಂದ ಏನೆಲ್ಲಾ ಪಡೆಯಲಾಗಿದೆಯೆಂಬುದನ್ನು ಅರ್ಥ ಮಾಡುವಂತೆ ಕೆಲವು ಸಮೀಕ್ಷೆಗಳ ರೀತಿ, ವರದಿ ಇದ್ದದ್ದನ್ನೂ ಕಂಡಿದ್ದೇವೆ. ಪೇಯ್ಡ್ ನ್ಯೂಸ್ ಎಂಬುದು ಇದರ ಒಂದು ಭಾಗ!

ಭಾರತದಂತಹ ಬಹು ಸಂಸ್ಕøತಿ ಮತ್ತು ವೈವಿಧ್ಯತೆಯ ದೇಶದಲ್ಲಿ ಇಂತಹ ಸಮೀಕ್ಷೆಗಳ ಸ್ಥಾನ, ಪ್ರಭಾವ ಮತ್ತು ಪರಿಣಾಮ ನಿಜಕ್ಕೂ ಹೇಗಿರುತ್ತದೆ? ಸಾವಿರ ಜನರಿರುವ ಒಂದು ಊರಿನಲ್ಲಿ ಪೇಟೆ ಬದಿಯಲ್ಲಿ ಸಿಕ್ಕಿದ ಯಾರೋ ಕೆಲವರಿಂದ (ಒಂದಿಬ್ಬರು ಅಥವಾ ನಾಲ್ವರು) ಇಡೀ ಊರಿನ ಜನರ ಅಭಿಪ್ರಾಯ, ತೀರ್ಮಾನ ಏನೆಂಬುದನ್ನು ಕಂಡುಕೊಳ್ಳಲು ಸಾಧ್ಯವೇ?

ಕೆಲವು ಮ್ಯಾಗಜಿನ್‍ಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಕೆಲವೊಮ್ಮೆ ತಮ್ಮ ಹಾಜರಿ ತೋರ್ಪಡಿಸಲು, ಮತ್ತೆ ಕೆಲವರು ಸೇಲ್ ಹೆಚ್ಚಿಸಲು ಎಂಥೆಂಥಾ ಸಮೀಕ್ಷೆಗಳನ್ನು ಪ್ರಕಟಿಸಿದ್ದಿದೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ, ಮಾಲ್‍ಗಳಲ್ಲಿ ಓಡಾಡುವ ಕೆಲ ತರುಣ/ತರುಣಿಯರನ್ನು ‘ನೀವು ಮದುವೆಗೆ ಮುಂಚೆ ಸೆಕ್ಸ್ ನಡೆಸಲು ಬಯಸುತ್ತೀರಾ?’ ಎಂದು ಕೇಳಿ ಅವರಿಂದ ಪಡೆದ ಉತ್ತರಗಳನ್ನು ಹರಡಿ ಇಡೀ ದೇಶದ ಯುವ ಜನಾಂಗ ಏನು ಇಚ್ಛಿಸುತ್ತದೆಯೆಂದು ಪ್ರಕಟಿಸಿ ಸಂಚಲನ ಮೂಡಿಸಿದ್ದನ್ನು ನಾವೆಲ್ಲಾ ಗಮನಿಸಿದ್ದೇವೆ.

Budkulo_Opinion Polls n Reality 4 Budkulo_Opinion Polls n Reality

ಚುನಾವಣಾ ಸಮೀಕ್ಷೆಗಳೂ ಬಹುತೇಕ ಹೀಗೆಯೇ ಎನ್ನಲಡ್ಡಿಯಿಲ್ಲ. ತಮ್ಮ ತಮ್ಮೊಳಗೆ ಸ್ಪರ್ಧೆ ಏರ್ಪಟ್ಟ ನಂತರ ಈ ಸಮೀಕ್ಷೆಗಳು ಸುಧಾರಣೆ ಕಂಡು, ಹೆಚ್ಚು ಪ್ರಾಯೋಗಿಕವಾಗುವ ನಿಟ್ಟಿನಲ್ಲಿ ಪ್ರಗತಿ ಕಂಡವು. ಇದರಿಂದಾಗಿ, ಎಲ್ಲಾ ಸಮೀಕ್ಷೆಗಳು ಒಂದೇ ರೀತಿಯಲ್ಲಿಲ್ಲದಿದ್ದರೂ, ಎಲ್ಲವುಗಳ ಎವರೇಜ್‍ನ ಆಧಾರದಲ್ಲಿ ನಿಖರ ಫಲಿತಾಂಶಕ್ಕೆ ಹತ್ತಿರವಾದ ಸಮೀಕ್ಷೆಗಳು ಬಂದದ್ದೂ ಇವೆ. ಕೆಲವೊಮ್ಮೆ ತಾವು ಸಂಗ್ರಹಿಸಿದ ಅಂಕಿ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕೆಲವು ಮಾಧ್ಯಮಗಳು ತಮ್ಮ ಸಮೀಕ್ಷೆಗಳನ್ನು ಮರು ಪ್ರಕಟಿಸಿದ್ದೂ ಇದೆ. ಇಂತಹ ಸಮೀಕ್ಷೆಗಳು, ಮೊದಲು ಪ್ರಕಟಿಸಿದುದಕ್ಕಿಂತ ಭಿನ್ನವಾಗಿದ್ದೂ ಇದೆ. ಪ್ರತ್ಯೇಕವಾಗಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಹೀಗೆ ಆಗಿದೆ. ಬ್ರೇಕಿಂಗ್ ನ್ಯೂಸಿನ ಧಾವಂತದಲ್ಲಿ ಅವಸರದಲ್ಲಿ ಪ್ರಕಟಿಸಿದ ಸಮೀಕ್ಷೆಗಿಂತ, ಒಂದೆರಡು ದಿನಗಳ ನಂತರ ಪ್ರಕಟಿಸಿದ ಸಮೀಕ್ಷೆಯಲ್ಲಿ ಸುಧಾರಣೆ ಕಂಡದ್ದಿದೆ (ಕೊನೆಯ ಸುತ್ತಿನ ಮತದಾನ ಮತ್ತು ಮತ ಎಣಿಕೆಗೆ ದಿನಗಳ ಅಂತರ ಇದ್ದಲ್ಲಿ ಹೀಗೆ ಮಾಡಲು ಸಾಧ್ಯ. ಮೊನ್ನೆ ಎನ್‍ಡಿಟಿವಿ ಹೀಗೇ ಮಾಡಿತ್ತು).

ಆದರೆ ನಿಜಕ್ಕೂ ಮತದಾರರ ಅಂತರಾಳವನ್ನು ಈ ಸಮೀಕ್ಷೆಗಳು ತಿಳಿದುಕೊಳ್ಳಲು ಸಾಧ್ಯವೇ?

ಹೌದು ಅಥವಾ ಇಲ್ಲವೆಂದು ಹೇಳಬಹುದು.

ಆಡಳಿತದಲ್ಲಿದ್ದ ಸರಕಾರ ಜನರ ಒಲವನ್ನು ಕಳೆದುಕೊಂಡಿದೆಯಾ, ಗಳಿಸಿಕೊಂಡಿದೆಯಾ ಎನ್ನುವುದನ್ನು ತಿಳಿದುಕೊಳ್ಳುವುದು ಸಾಮಾನ್ಯ ಜನರಿಗೂ ಕೆಲವೊಮ್ಮೆ ಕಷ್ಟದ ಸಂಗತಿಯಲ್ಲ. ಉದಾಹರಣೆಗೆ, ಕರ್ನಾಟಕದ ಕಳೆದ ಬಿಜೆಪಿ ಸರಕಾರ ತನ್ನ ಎಡವಟ್ಟುಗಳಿಂದಾಗಿ ದೇಶದಾದ್ಯಂತ ಛೀಮಾರಿಗೊಳಪಟ್ಟಿತ್ತು. ಬೇರೆಯವರೇ ಏಕೆ, ಸ್ವತಃ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ (2013ರಲ್ಲಿ) ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಪ್ರಚಾರಕ್ಕೆ ಬರಲೂ ಇಚ್ಛಿಸಿರಲಿಲ್ಲ. ಏಕೆಂದರೆ ಇಲ್ಲಿನ ಬಿಜೆಪಿ ಸರಕಾರ ಅಷ್ಟೊಂದು ‘ಪ್ರಸಿದ್ಧಿ’ ಪಡೆದಿತ್ತು. ಅಂತಹ ಪಕ್ಷ ಚುನಾವಣೆಯಲ್ಲಿ ಗೆಲ್ಲುತ್ತದೆಯೆಂದು ಯಾವ ಮೂರ್ಖ ತಾನೆ ಹೇಳಿಯಾನು? ಅದಕ್ಕಾಗಿ ಸಮೀಕ್ಷೆ ನಡೆಸಬೇಕೆ?

ಅದೇ ರೀತಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸೋಲುತ್ತದೆ ಎಂಬ ಬಗ್ಗೆ ಯಾರಿಗೂ ಅನುಮಾನಗಳಿರಲಿಲ್ಲ. ಆದರೆ ಇಂತಹ ಸನ್ನಿವೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಬರಹುದೆಂಬ ಕಾತರ, ಕುತೂಹಲವಿರುತ್ತದೆ.

Budkulo_Opinion Polls n Reality 6 Budkulo_Opinion Polls n Reality 5

ಇಂತಹ ವಾತಾವರಣದಲ್ಲಿ ಸಮೀಕ್ಷೆಗಳು ಹೆಚ್ಚು ಯಶಸ್ವಿಯಾಗಿವೆ. ಆದರೆ, ಅದರ ಮತ್ತಿನಲ್ಲಿ ತೇಲಿ ಹೋದ ಸಮೀಕ್ಷೆಗಳನ್ನು ನಡೆಸುವ ಮತ್ತು ಅದನ್ನು ಪ್ರಕಟಿಸುವ ಮಾಧ್ಯಮಗಳಿಗೆ ಪಿತ್ತ ನೆತ್ತಿಗೇರಿ ಅಹಂಕಾರ, ಮದ ಜಾಸ್ತಿಯಾಯಿತು. ಎಲ್ಲಿಯವರೆಗೆಂದರೆ ತಾವು ಪ್ರಕಟಿಸುವ ಸಮೀಕ್ಷೆಯೇ ವಾಸ್ತವ, ಅದೇ ಸತ್ಯವೆಂಬಂತೆ ವರ್ತಿಸಲಾರಂಭಿಸಿದವು, ಊಳಿಡಲಾರಂಭಿಸಿದವು. ಅಂದರೆ, ಚುನಾವಣೆ ನಡೆಸುವ ಅಗತ್ಯವೇ ಇಲ್ಲ, ತಾವು ಏನು ವರದಿ ಮಾಡಿದ್ದೇವೋ, ಪ್ರಕಟಿಸುತ್ತೇವೋ ಅದೇ ಜನರ ಆಯ್ಕೆ ಎಂಬ ಮಟ್ಟಿಗಿನ ಮೈಂಡ್‍ಸೆಟ್ ಅವುಗಳದಾಯಿತು. ಟಿವಿಗಳ ನಿರೂಪಕರಂತೂ ಚುನಾವಣಾ ಆಯೋಗದ ಅಗತ್ಯವೇ ಇಲ್ಲವೆಂಬಂತೆ ಬೊಬ್ಬಿರಿಯುತ್ತಿದ್ದರು.

ಆದರೆ ಬಿತ್ತು ನೋಡಿ ಧರ್ಮದೇಟು!

ಒಂದಲ್ಲ, ಎರಡಲ್ಲ. ಕಳೆದ ಕೆಲವು ವರ್ಷಗಳಿಂದ ದೇಶದಾದ್ಯಂತ ಯಾವುದೇ ಸಮೀಕ್ಷೆಗಳು ಜನರ ತೀರ್ಪನ್ನು ಗುರುತಿಸುವಲ್ಲಿ ಯಶಸ್ವಿಯಾಗಿಲ್ಲ. ಅಪವಾದವೆಂಬಂತೆ, ಒಂದೆರಡು ಸಮೀಕ್ಷೆಗಳು (ಅದರಲ್ಲಿ ಚಾಣಕ್ಯ ಟುಡೇ ಮೊದಲ ಸಾಲಿನಲ್ಲಿದೆ) ಉಳಿದವುಗಳಿಗಿಂತ ತುಂಬಾ ಭಿನ್ನವಾಗಿ ಆದರೆ ಜನರ ತೀರ್ಮಾನಕ್ಕೆ ಸನಿಹದಲ್ಲಿ ಮೂಡಿಬಂದದ್ದೂ ಇದೆ.

ಆದರೆ ಮೊನ್ನೆ ನಡೆದ ಬಿಹಾರದ ಚುನಾವಣೆ ಮಾತ್ರ ಈ ಸಮೀಕ್ಷೆಗಳಿಗೆ ಸ್ಮಶಾನದ ದಾರಿಯನ್ನು ತೋರಿಸಿದೆ.

ಈ ಬಾರಿ ‘ಚಾಣಕ್ಯ’ನ ಸಮೀಕ್ಷೆ ಸಹ ತದ್ವಿರುದ್ಧವಾಗಿದ್ದು ವಿಶೇಷ! (ಅದಕ್ಕಾಗಿ ಅದು ಕ್ಷಮೆ ಯಾಚಿಸಿದೆ). ಎಲ್ಲಾ ಸಮೀಕ್ಷೆಗಳು, ಮೊದಲಿನಿಂದಲೂ ಬಿಹಾರದಲ್ಲಿ ತುರುಸಿನ ಸ್ಪರ್ಧೆಯಿದೆ, ಯಾರೇ ಗೆದ್ದರೂ ಕೂದಲೆಳೆಯ ಅಂತರದಲ್ಲಿ ಎಂದೇ ಹೇಳಿಕೊಂಡಿದ್ದವು. ಅದರ ಆಧಾರದಲ್ಲಿ ನಡೆದ ಚರ್ಚೆಗಳೇನು, ಅಂದಾಜುಗಳೇನು! ಈ ನಂಬಿಕೆ ಎಷ್ಟು ಗಟ್ಟಿಯಾಗಿತ್ತೆಂದರೆ, ನೈಜ ಫಲಿತಾಂಶಕ್ಕೆ ಸರಿಯಾದ, ನಿಖರವಾದ ಸಮೀಕ್ಷೆಯನ್ನು ಒಂದು ಸಂಸ್ಥೆ ತಯಾರಿಸಿ ಕೊಟ್ಟಿದ್ದರೂ ಅದನ್ನು ಪ್ರಕಟಿಸಲು ಪ್ರಖ್ಯಾತ ಚಾನೆಲ್ ನಿರಾಕರಿಸಿತ್ತು! (ಆ ಸಂಸ್ಥೆ ಕೊನೆಗೆ ತನ್ನ ಸಮೀಕ್ಷೆಯನ್ನು ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿತ್ತು. ಬಹುಶಃ ಮುಂದಿನ ಚುನಾವಣೆಗಳಲ್ಲಿ ಆ ಸಂಸ್ಥೆಗೆ ಡಿಮಾಂಡ್ ಬರುವುದರಲ್ಲಿ ಸಂಶಯವಿಲ್ಲ).

ಆದರೆ ಬಿಹಾರದ ಮತದಾರರು ಯಾವುದೇ ಸದ್ದಿಲ್ಲದೆ ಎಲ್ಲರನ್ನು, ಅಂದರೆ ಸಮೀಕ್ಷೆ ನಡೆಸುವವರನ್ನು, ಮಾಧ್ಯಮಗಳನ್ನು, ರಾಜಕೀಯ ಪಕ್ಷ ಮತ್ತು ನೇತಾರರನ್ನು ಹಾಗೂ ಜನರೆಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ. ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾರೆ.

ಇದು ಅತ್ಯಂತ ಶ್ರೇಯಸ್ಕರ ಬೆಳವಣಿಗೆ. ಇದು ತುಂಬಾ ಅಗತ್ಯವಾಗಿತ್ತು. ಪ್ರಜಾಪ್ರಭುತ್ವದ ಅರ್ಥ, ಮಹತ್ವ ಮತ್ತು ಅಗತ್ಯವನ್ನು ಈ ಫಲಿತಾಂಶ ಮತ್ತಷ್ಟು ಮನವರಿಕೆ ಮಾಡಿ ಕೊಟ್ಟಿದೆ. ಪ್ರಜಾಪ್ರಭುತ್ವವೆಂದರೇನೆಂಬುದರ ಅರ್ಥವನ್ನು ಸಾಮಾನ್ಯ ಜನರು ದೇಶದ ರಾಜಕೀಯ ಪಂಡಿತರಿಗೆ ಕಲಿಸಿ ಕೊಟ್ಟಿದ್ದಾರೆ. ಇದಕ್ಕಿಂತ ಸಂತಸದ, ಹೆಮ್ಮೆಯ ಸಂಗತಿ ಮತ್ತೇನಿದೆ?

ಇದೇನೂ ಅನಿರೀಕ್ಷಿವಲ್ಲ. ಹೊಸ ಬೆಳವಣಿಗೆಯೂ ಅಲ್ಲ. ಆದರೆ ನಮ್ಮ ಅಹಂಕಾರಿ ಮಾಧ್ಯಮದ ಮಂದಿಗೆ ಇದನ್ನು ಅರಿಯುವ ಬುದ್ಧಿಯಿರಲಿಲ್ಲವಷ್ಟೇ. ಕಳೆದ ದೆಹಲಿ ಚುನಾವಣೆಯೂ ಹೀಗೇ ಆಗಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಬಹುಮತ ದೊರೆಯಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ, ಸ್ವತಃ ಬಿಜೆಪಿಗೆ. ಅದರ ಇನ್ನೊಂದು ಪ್ರಮುಖ ಸಂಗತಿಯೆಂದರೆ, ಹಿಂದಿನ ಬಾರಿ 206 ಸ್ಥಾನಕ್ಕೇರಿದ್ದ ಕಾಂಗ್ರೆಸ್ ಪಕ್ಷ ನೂರಕ್ಕಿಂತ ಕಡಿಮೆ ಸ್ಥಾನಕ್ಕೆ ಜಾರಬಹುದೆಂಬ ಊಹೆಯೂ ಯಾರಿಗೂ ಇರಲಿಲ್ಲ. ಆದರೆ ಅದು 50 ಸ್ಥಾನಗಳನ್ನು ಗೆಲ್ಲುವುದಕ್ಕೂ ಸಾಧ್ಯವಾಗಲಿಲ್ಲ. ಇದನ್ನು ಯಾವ ಸಮೀಕ್ಷೆಯೂ ಹೇಳಿರಲಿಲ್ಲ.

ಹಾಗಾದರೆ ಚುನಾವಣಾ ಫಲಿತಾಂಶಗಳು ರಾತ್ರಿ ಹಗಲಾಗುವುದರೊಳಗೆ ನಿರ್ಧರಿಸಲ್ಪಡುತ್ತವೆಯಾ?

ಖಂಡಿತಾ ಇಲ್ಲಾ. ಅದು ನಿಧಾನ ಬೆಳವಣಿಗೆ. ಅಂತಹ ಅನೂಹ್ಯ, ಅದ್ಭುತ ಬೆಳವಣಿಗೆಗಳು ನಡೆದಲ್ಲಿ ಅಂತಿಮ ಕ್ಷಣದಲ್ಲಿ ಏರುಪೇರಾಗುವ ಸಂಭವ ಇಲ್ಲದಿಲ್ಲ. ಆದರೆ ಇಂದಿನ ಕಾಲದಲ್ಲಿ ಅದು ಸಾಧ್ಯವಿಲ್ಲದ ಮಾತು.

ಮತ್ತೊಂದು ವಿಚಾರವಿದೆ. ಕಳೆದ ಕೆಲವು ದಶಕಗಳಿಂದ ಬಹುತೇಕ ರಾಜ್ಯಗಳಲ್ಲಿ ನೇರ ಮುಖಾಮುಖಿ, ಪೈಪೋಟಿಯೆಂಬುದೇ ಇರಲಿಲ್ಲ. ದೊಡ್ಡ ರಾಜ್ಯಗಳಲ್ಲಿ ತ್ರಿಕೋನ, ಚತುಷ್ಕೋನ ಸ್ಪರ್ಧೆ ನಡೆಯುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಫಲಿತಾಂಶವನ್ನು ಅಂದಾಜಿಸುವುದು ತುಂಬಾ ತ್ರಾಸದಾಯಕ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಬಿ.ಎಸ್.ಪಿ.ಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿದ ಸಂದರ್ಭದಲ್ಲಿ ಮತಗಳ ವಿಭಜನೆಯಾಗುತ್ತಿತ್ತು. ಕಳೆದ ವರ್ಷದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲೂ ನಾಲ್ಕು ಪಕ್ಷಗಳು ಪರಸ್ಪರ ಸೆಣಸಿದ್ದವು. ಅಂತಹ ಕಡೆ ಗೆಲ್ಲುವ ಅಭ್ಯರ್ಥಿಗೆ ಪ್ರತಿಯೊಂದು ಮತವೂ ಮುಖ್ಯವಾಗುತ್ತದೆ. ಅಂತರ ಕಡಿಮೆಯಾಗಿ, ಕೆಲವೊಮ್ಮೆ ಅದೃಷ್ಟವಂತರಷ್ಟೇ ಗೆಲ್ಲುವ ಸಾಧ್ಯತೆಗಳಿರುತ್ತಿದ್ದವು.

ಆದರೆ, ರಾಜಕೀಯ ಮತ್ತು ಚುನಾವಣೆಗಳಲ್ಲಿ ವರ್ಷಗಳಿಂದ ಪಳಗಿದ್ದ ಮಾಧ್ಯಮಗಳವರಿಗೆ, ವಿಶ್ಲೇಶಕ, ನಿರೂಪಕರಿಗೆ ಈ ಬಾರಿ ಒಂದು ಬಹು ಮುಖ್ಯ ಸಂಗತಿ ಗಮನಕ್ಕೇ ಬಾರದೇ ಹೋದಂತಿತ್ತು. ಅದೇನೆಂದರೆ, ಬಿಹಾರದಲ್ಲಿ ಈ ಸಲ ನೇರ ಮುಖಾಮುಖಿ ಏರ್ಪಟ್ಟಿತ್ತು. ಒಂದು ಕಡೆ ಬಿಜೆಪಿ ನೇತೃತ್ವದ ಎನ್.ಡಿ.ಎ.ಯಾದರೆ, ಮುಖ್ಯಮಂತ್ರಿಯಾಗಿದ್ದ ಜೆಡಿಯು, ಲಾಲೂ ಪ್ರಸಾದರ ಆರ್.ಜೆ.ಡಿ. ಮತ್ತು ಕಾಂಗ್ರೆಸ್ ಜೊತೆ ಸೇರಿ ನಿರ್ಮಿಸಿದ್ದ ಮಹಾ ಮೈತ್ರಿಕೂಟ ಮತ್ತೊಂದು ಕಡೆ. ಬದ್ಧ ವೈರಿಗಳಾಗಿದ್ದ ಲಾಲೂ ಮತ್ತು ನಿತೀಶ್ ಕುಮಾರ್ ಮೈತ್ರಿ ಮಾಡಿಕೊಂಡಿದ್ದು ಕೊನೆಯ ಕ್ಷಣದಲ್ಲಿ ಅಲ್ಲ. ಇದನ್ನು ಮಾಧ್ಯಮದವರು, ಸಮೀಕ್ಷಕರು ವಿಶೇಷವಾಗಿ ಪರಿಗಣಿಸಿರಲಿಲ್ಲವೆನಿಸುತ್ತದೆ.

ಸಮೀಕ್ಷೆಯೆಂದರೆ ಜನರ ಅಭಿಪ್ರಾಯಕ್ಕಿಂತ ತಮ್ಮ ಗ್ರಹಿಕೆಯೇ ಮೇಲು ಎಂಬ ವರ್ತನೆ ಬಹುತೇಕರಲ್ಲಿತ್ತು. ಸಾಕಷ್ಟು ಬಾರಿ ತಮ್ಮ ಸಮೀಕ್ಷೆಗಳು ವಿಫಲವಾಗಿದ್ದರೂ ತಾವು ಹೇಳಿದ್ದೇ ಸರಿ ಎಂಬ ಅಹಂಭಾವ ಬಹುತೇಕ ಮಾಧ್ಯಮಗಳಿಗಿತ್ತು. ಅವಕ್ಕೀಗ ಸರಿಯಾಗಿಯೇ ಕಪಾಳಮೋಕ್ಷವಾಗಿದೆ. ಮುಟ್ಟಿ ನೋಡಿಕೊಳ್ಳುವಂತೆ ಅವುಗಳಿಗೆ ಜನರ ಸಂದೇಶ ರವಾನೆಯಾಗಿದೆ.

ಅಷ್ಟಕ್ಕೂ ಬಿಹಾರದ ಚುನಾವಣೆ ನಿಜಕ್ಕೂ ಸಂಕೀರ್ಣವಾಗಿತ್ತೆ?

Budkulo_Opinion Polls n Reality 3 Budkulo_Opinion Polls n Reality 2

ಫಲಿತಾಂಶ ನೋಡಿದರೆ ಹಾಗೇನೂ ಇರಲಿಲ್ಲವೆಂದು ಎದ್ದು ಕಾಣುತ್ತದೆ. ಬಹು ಹಂತಗಳ ಚುನಾವಣೆ ಇದಾಗಿತ್ತು. ಆದರೆ ಮಾಧ್ಯಮಗಳಲ್ಲಿ ಬಂದಂತೆ, ಸಮೀಕ್ಷೆಗಳು ಹೇಳಿದಂತಹ ವಾತಾವರಣ ಅಲ್ಲಿರಲೇ ಇಲ್ಲವೆಂಬುದನ್ನು ಫಲಿತಾಂಶವನ್ನು ಪರಿಶೀಲಿಸಿದಾಗ ಕಂಡು ಬರುತ್ತದೆ. ಎಲ್ಲಾ ಸ್ತರಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಏಕ ರೀತಿಯದಿತ್ತು. ಅಂದರೆ ಎರಡೂ ಕೂಟಗಳ ನಡುವಿನ ಮತಗಳ, ಸ್ಥಾನಗಳ ಅಂತರ ಸಮಾನವಾಗಿತ್ತು. ಅಂದರೆ ಸಮೀಕ್ಷೆ, ಮಾಧ್ಯಮಗಳ, ಅಬ್ಬರದ ಪ್ರಚಾರ ಇದ್ಯಾವುದರ ಪ್ರಭಾವ, ಪರಿಣಾಮ ಮತದಾರರ ಮೇಲೆ ಆಗಿಲ್ಲವೆನ್ನುವದನ್ನು ಇದು ಸಾಬೀತುಪಡಿಸುತ್ತದೆ.

ಅಂದರೆ ಮತದಾರರು ತಮ್ಮ ನಿರ್ಣಯವನ್ನು ಮೊದಲೇ ಕೈಗೊಂಡಿದ್ದರೆಂಬುದು ಸ್ಪಷ್ಟ. ಎಲ್ಲರೂ ಹೇಳಿಕೊಳ್ಳುವಂತೆ ಜಿದ್ದಾಜಿದ್ದಿನ ಕಾಳಗವೇ ನಡೆದಿಲ್ಲ, ಅಂತಹ ಯಾವುದೇ ಸನ್ನಿವೇಶ ಮತದಾರರ ಮುಂದಿರಲೇ ಇಲ್ಲ.

ಹಾಗಾದರೆ ತಿಳಿದು ಬರುವುದೇನು? ಇದೆಲ್ಲಾ ಕೇವಲ ಮಾಧ್ಯಮಗಳ ಮತ್ತು ಕೆಲ ವರ್ಗದ ಜನರ ತಿಳುವಳಿಕೆ ಅಥವಾ ತೋರ್ಪಡಿಸುವಿಕೆ ಮಾತ್ರವಾಗಿತ್ತು. ನಿಜವಾಗಿ ಹೇಳಬೇಕೆಂದರೆ, ಮತದಾರರನ್ನು, ಜನರನ್ನು ಹಗುರವಾಗಿ ಪರಿಗಣಿಸಿದ್ದು ಇಲ್ಲಿ ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವದ ಕೀಳಂದಾಜಿಸುವಿಕೆ ಎಂದರೆ ಇದೇ. ನಿಜಕ್ಕೂ ಒಂದು ರಾಜ್ಯದಲ್ಲಿನ ವಾಸ್ತವ ಚಿತ್ರಣವೇನು, ಪರಿಸ್ಥಿತಿಯೇನು ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ, ತಾವೇ ಎಲ್ಲ, ತಾವೇ ಅಂತಿಮವೆಂದು ತಿಳಿದುಕೊಂಡಿದ್ದರ ಫಲ.

ಅದಕ್ಕೆ ತಕ್ಕ ಶಾಸ್ತಿಯಾಗಿದೆ.

ಆದರೆ, ಅಲ್ಲಿನ ಪರಿಸ್ಥಿತಿಯನ್ನು ನಿಜಕ್ಕೂ ನಿಖರವಾಗಿ, ಸರಿಯಾಗಿ ಅರ್ಥ ಮಾಡಿಕೊಂಡಿದ್ದು ಲಾಲೂ ಪ್ರಸಾದ್ ಯಾದವ್ ಒಬ್ಬರೇ. ಲೋಕಸಭಾ ಚುನಾವಣೆಯ ಪಾಠ ಮತ್ತು ಭವಿಷ್ಯದ ಬಗೆಗಿನ ಚಿಂತನೆಯನ್ನು ಹೆಚ್ಚು ಪ್ರಾಯೋಗಿಕವಾಗಿ ಲಾಲೂ ಮಾಡಿದ್ದರು. ಮತದಾರರ ನಿಲುವು, ಅಂತರಾಳ, ಒಲವು ಮತ್ತು ಯೋಚನೆಯನ್ನು ಅವರೊಬ್ಬರೇ ಸರಿಯಾಗಿ ಗ್ರಹಿಸಿದ್ದು ಮತ್ತು ಅದಕ್ಕೆ ಬೇಕಾದಂತೆ ವ್ಯೂಹ ರಚಿಸಿ, ಆ ನಿಟ್ಟಿನಲ್ಲಿ ಬದ್ಧತೆಯಿಂದ ದುಡಿದದ್ದು. ಮಹಾ ಮೈತ್ರಿಕೂಟವನ್ನು ಮುರಿಯಲು ನಾನಾ ರೀತಿಯಲ್ಲಿ ಬಿಜೆಪಿ ಪ್ರಯತ್ನಪಟ್ಟಿತ್ತು. ಅದಕ್ಕೆಲ್ಲಾ ಸೊಪ್ಪು ಹಾಕದೆ, ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಹೋರಾಡಿದ್ದು ಲಾಲೂ ಪ್ರಸಾದ್ ಯಾದವ್‍ರ ಜಾಣ್ಮೆ, ಅನುಭವವನ್ನು ತೋರಿಸುತ್ತದೆ. ಮುಖ್ಯಮಂತ್ರಿ ಸ್ಥಾನ ನಿತೀಶ್ ಕುಮಾರ್‍ಗೆ ಬಿಟ್ಟು ಕೊಟ್ಟು, ಸಮಾನ ಸ್ಥಾನಗಳನ್ನು ಅವೆರಡೂ ಪಕ್ಷಗಳು ಹಂಚಿಕೊಂಡಿದ್ದು ಸಹಕಾರ ಮನೋಭಾವನೆ, ಕೊಡು ಕೊಳ್ಳುವ ವಿಚಾರದಲ್ಲಿ ತೋರಿಸಿದ ಉದಾರತೆ, ಅವರ ಮೈತ್ರಿಕೂಟದ ಗಟ್ಟಿತನಕ್ಕೆ ಸಾಕ್ಷಿ. ಹಾಗೆ ನೋಡಿದರೆ ಕಾಂಗ್ರೆಸ್ ಸ್ಪರ್ಧಿಸಿದ 41 ಸ್ಥಾನಗಳಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಸುಮಾರು 15, ಉಳಿದ ಅಭ್ಯರ್ಥಿಗಳು ಜೆಡಿಯು ಮತ್ತು ಆರ್‍ಜೆಡಿ ಪಕ್ಷದವರು ಎಂಬುದನ್ನು ಕೇಳಿದಾಗ ಮೈತ್ರಿಕೂಟದ ಒಗ್ಗಟ್ಟು, ಸ್ಟ್ರ್ಯಾಟಜಿ ಮತ್ತು ಪ್ಲ್ಯಾನಿಂಗ್ ಎಷ್ಟು ವ್ಯವಸ್ಥಿತವಾಗಿತ್ತೆನ್ನುವುದು ಕಂಡುಬರುತ್ತದೆ.

ಇನ್ನೊಂದು ಬದಿಯಲ್ಲಿ ದಿಕ್ಕೆಟ್ಟ ಎನ್‍ಡಿಎ ಹೋರಾಡುತ್ತಿತ್ತು. ಕೇವಲ ಹಿಂದಿನ ಲೋಕಸಭಾ ಚುನಾವಣೆಯ ಹ್ಯಾಂಗೋವರ್, ಪ್ರಧಾನಿ ಮೋದಿಯವರ ಪ್ರಭಾವದಿಂದಾಗುವ ಮ್ಯಾಜಿಕ್‍ನ ಭರವಸೆ ಮತ್ತು ಅಪಪ್ರಚಾರವನ್ನೇ ನೆಚ್ಚಿಕೊಂಡಿದ್ದ ಬಿಜೆಪಿ ಚುನಾವಣೆಗೇ ಮೊದಲೇ ಉತ್ಸಾಹ ಕಳೆದುಕೊಂಡಿತ್ತೆಂಬುದು ಈಗ ಬಹಿರಂಗವಾಗುತ್ತಿದೆ.

ಹಾಗಾದರೆ ಇದೆಲ್ಲಾ ಗ್ರೌಂಡ್ ರಿಯಾಲಿಟಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಧ್ಯಮಗಳು, ಸಮೀಕ್ಷೆ ನಡೆಸುವವರು ವಿಫಲರಾದರೇ? ಅಥವಾ ಜಾಣ ಕುರುಡುತನ ಪ್ರದರ್ಶಿಸಿದವೇ? ಇರಬಹುದು, ಇಲ್ಲದಿರಲೂಬಹುದು. ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ಒಂದು ರಾಜ್ಯದ ಚುನಾವಣೆಯನ್ನು ಅತಿಯಾಗಿ ಪ್ರತಿಷ್ಠೆಯಾಗಿಸಿದ್ದು, ಅನಗತ್ಯವಾಗಿ ದೇಶದಾದ್ಯಂತ ಗಮನ ಸೆಳೆಯುವಂತೆ ಮಾಡಿದ್ದು ಅವೀಗ ಹಳಿ ತಪ್ಪಿದಂತಾಗಿದೆ. ಇದೆಲ್ಲದರ ಪರಿಣಾಮವೆಂದರೆ, ಗರ್ವದಿಂದ ಬೀಗುತ್ತಿದ್ದ, ಹೆಮ್ಮೆಯಿಂದ ಮೆರೆಯುತ್ತಿದ್ದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಎಲ್ಲದರ ಹೊಡೆತವನ್ನು ತಿನ್ನಬೇಕಾಗಿದ್ದು. ಬಿಜೆಪಿಯೂ ಕೇವಲ ಪ್ರಚಾರ (ಅಪಪ್ರಚಾರವೇ ಹೆಚ್ಚಿತ್ತು), ಮಾಧ್ಯಮಗಳನ್ನೇ ನೆಚ್ಚಿಕೊಂಡಿದ್ದು ಅದರ ಸೋಲನ್ನು ಅಗಾಧಗೊಳಿಸಿತಷ್ಟೇ.

ಒಟ್ಟಿನಲ್ಲಿ, ಮತದಾನವೆಂದರೆ ಅದು ಮತದಾರ ತೀರ್ಪು, ಜನರೇ ಅಂತಿಮವೆಂಬುದನ್ನು ತುಂಬಾ ಗಟ್ಟಿಯಾಗಿ ತೋರ್ಪಡಿಸಿದ ಚುನಾವಣೆಯಿದು. ಪ್ರಜಾಪ್ರಭುತ್ವದ ಆಶಯವನ್ನು ಇನ್ನಷ್ಟು ಬಲಗೊಳಿಸುವುದರ ಜೊತೆಗೆ, ಅದರ ಮಹತ್ವ, ಅಗತ್ಯವನ್ನು ಎಲ್ಲರಿಗೂ ತೋರಿಸಿ ಕೊಟ್ಟ ಚುನಾವಣೆಯಿದು. ಅದಕ್ಕಾಗಿ ಅಲ್ಲಿನ ಜನತೆ ಅಭಿನಂದನಾರ್ಹರು.

ಬಿಹಾರದಲ್ಲಿ ಎಂದಿಗಿಂತ ಸ್ವಲ್ಪ ಹೆಚ್ಚು (67%) ಮತದಾನವಾಗಿದೆ. ಕರ್ನಾಟಕಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ. ಬಿಹಾರ ಹಿಂದುಳಿದ ರಾಜ್ಯ, ಬಡವರು, ಅನಕ್ಷರಸ್ಥರು ಹೆಚ್ಚು. ಆದರೂ ಈ ವರ್ಗದ ಜನರೇ ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ. ಅವರಿಗಿರುವ ಪ್ರಬುದ್ಧತೆ, ತಿಳುವಳಿಕೆ ನಗರ ಪ್ರದೇಶಗಳ ಜನರಿಗಿಲ್ಲವೆಂಬುದು ನಾಚಿಕೆಗೀಡು. ವಿದ್ಯಾವಂತರು, ಅನುಕೂಲಸ್ಥರೆಂದುಕೊಂಡವರು ಕೇವಲ ಸಿನಿಕರಂತೆ ವ್ಯವಸ್ಥೆಯನ್ನು ದೂರುವುದಷ್ಟೇ, ಚುನಾವಣೆ ದಿನದ ರಜೆಯನ್ನು ಮಜಾ ಮಾಡಲಿಕ್ಕೆ ಬಳಸುತ್ತಾರೆನ್ನುವುದು ನಿಜಕ್ಕೂ ಲಜ್ಜಾಸ್ಪದ ಸಂಗತಿ. ಅಂಥವರು ಬಿಹಾರದ ಜನರಿಂದ ಕಲಿಯುವುದು ಬಹಳಷ್ಟಿದೆ.

Send Feedback to: budkuloepaper@gmail.com
Like us at: www.facebook.com/budkulo.epaper

Leave a comment

Your email address will not be published. Required fields are marked *

Latest News