ಪ್ಲಸ್ ಪಾಯಿಂಟ್: ಅದ್ಭುತ ನಟರು ತುಳು ಚಿತ್ರರಂಗದ ಶ್ರೀಮಂತ ಆಸ್ತಿ ಹಾಗೂ ಜನಾಕರ್ಷಣೆಯ ಕೇಂದ್ರಬಿಂದು
ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ – ಬುಡ್ಕುಲೊ ಇ-ಪತ್ರಿಕೆ www.Budkulo.com
(ಕಳೆದ ಸಂಚಿಕೆಯಿಂದ ಮುಂದುವರಿದಿದೆ)
ಮಂಗಳೂರು: ತುಳು ಚಲನಚಿತ್ರಗಳಿಗಿರುವ ಮಾರ್ಕೆಟ್ ಬಹಳ ಸಣ್ಣದು ಎಂಬ ಮಾನಸಿಕ ಸಂಕೋಲೆಯಿಂದ ಹೊರ ಬರಲು ‘ಗಿರಿಗಿಟ್’ ಸಿನೆಮಾ ಬರಬೇಕಾಯಿತು. ಬಿಡುಗಡೆಯಾದ ಒಂದೂವರೆ ತಿಂಗಳ ಬಳಿಕವೂ ದಣಿವರಿಯದ ಮದಗಜದಂತೆ ಥಿಯೇಟರ್ಗಳಲ್ಲಿ ಹಿಂದಿನ ದಾಖಲೆಗಳೆಲ್ಲವನ್ನೂ ಧೂಳೀಪಟಗೊಳಿಸಿ ಮತ್ತಷ್ಟು, ಮಗದಷ್ಟು ದಾಖಲೆಗಳನ್ನು ತನ್ನ ಸುಪರ್ದಿಗೆ ಸೇರಿಸಿಕೊಳ್ಳುತ್ತಾ ‘ಗಿರಿಗಿಟ್’ ಚಿತ್ರವು ಜೈತ್ರಯಾತ್ರೆಯನ್ನು ಮುಂದುವರಿಸಿದೆ. ಇದು ನಿಜಕ್ಕೂ ನಂಬಲಸಾಧ್ಯವಾದ ವಾಸ್ತವವೆಂದರೆ ತಪ್ಪಾಗದು. ಯಾಕೆಂದರೆ ಇಂತಹದು ಈ ಹಿಂದೆ ಘಟಿಸಿರಲಿಲ್ಲ.
ಕಳೆದ ಸಂಚಿಕೆಯಲ್ಲಿ ಹೇಳಿದಂತೆ, ‘ಗಿರಿಗಿಟ್’ ಚಿತ್ರವು ತುಳು ಸಿನೆಮಾಭಿಮಾನಿಗಳ ಸಂಖ್ಯೆ ಎಷ್ಟಿದೆ ಮತ್ತು ತುಳು ಚಿತ್ರಗಳ ಮಾರ್ಕೆಟ್ ಸಾಮರ್ಥ್ಯ ನಿಜಕ್ಕೂ ಎಷ್ಟು ಅಗಾಧ, ವಿಸ್ತಾರವಾಗಿದೆಯೆಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟಿದೆ. ಹಲವಾರು ಕಾರಣಗಳಿಂದ ಉಂಟಾಗಿದ್ದ ಒಂದು ರೀತಿಯ ನಕಾರಾತ್ಮಕತೆಯ ವಾತಾವರಣದಿಂದ ಮುಕ್ತಿ ಹೊಂದಲು ತುಳು ಚಿತ್ರರಂಗಕ್ಕೆ ‘ಗಿರಿಗಿಟ್’ ಸಿನೆಮಾದ ಯಶಸ್ಸು ಹೊಸ ಹುಮ್ಮಸ್ಸು ಮತ್ತು ಶಕ್ತಿ ನೀಡಿದೆಯೆಂದರೆ ತಪ್ಪಾಗದು.
ಅದೇ ಧಾಟಿಯಲ್ಲಿ ಯೋಚಿಸುವಾಗ, ತುಳು ಚಲನಚಿತ್ರರಂಗದ ಹಲವು ಪ್ಲಸ್ ಪಾಯಿಂಟ್ಗಳು ಕಣ್ಣಿಗೆ ರಾಚುತ್ತವೆ. ತುಳು ಭಾಷೆಯೆಂಬುದು ಬಹಳಷ್ಟು ಜನರಿಗೆ ಮಾತೃಭಾಷೆಯಾಗಿರಬಹುದು. ಆದರೆ, ಮಾತೃಭಾಷೆ ಬೇರೆಯದೇ ಇದ್ದರೂ ಅಷ್ಟೇ ಪ್ರೀತಿಯ ಭಾಷೆಯನ್ನಾಗಿ ತುಳುವನ್ನು ಸ್ವೀಕರಿಸಿರುವವರ, ಮಾತನಾಡುವವರ ಸಂಖ್ಯೆ ಹಲವು ಲಕ್ಷಗಳಲ್ಲಿದೆ. ತುಳುನಾಡು ಅಥವಾ ಈಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಆಸುಪಾಸು ಸೇರಿ) ಹಲವು ಕಾರಣಗಳಿಗಾಗಿ ವಿಶಿಷ್ಟ ನಾಡು. ಅಂತಹ ವಿಶಿಷ್ಟತೆಗಳಲ್ಲಿ ಹಲವು ಭಾಷೆಗಳ ಸಂಗಮವೂ ಒಂದು. ‘ತುಳು’ ಎಂಬ ಒಂದು ಅದ್ಭುತ ಶಕ್ತಿ ಇಲ್ಲಿನ ಜನರನ್ನು ಎಲ್ಲೆಲ್ಲಿಯೂ, ಯಾವಾಗಲೂ ಒಂದುಗೂಡಿಸಬಲ್ಲದು. ಅದು ತುಳುನಾಡಿನ ಮಹಾಶಕ್ತಿ ಮತ್ತು ತುಳುವರ ಅನನ್ಯತೆ.
ಇಂತಹ ನಾಡಿನಲ್ಲಿ ಸದ್ಯ ತುಳು ಚಲನಚಿತ್ರಗಳು ಬಹಳ ಸದ್ದು ಮಾಡುತ್ತಿವೆ. ಹಿಂದೆ ತುಳು ನಾಟಕಗಳು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದವು. ಮಂಗಳೂರಿನಲ್ಲಂತೂ ಪ್ರತಿ ವಾರ ನಾಟಕಗಳ ಹಬ್ಬವಿರುತ್ತಿತ್ತು. ಅಭಿಮಾನಿಗಳಿಗೆ ಅವು ಅದ್ಭುತ ರಸದೌತಣವನ್ನು ಉಣಬಡಿಸುತ್ತಿದ್ದವು. ಕಾಲ ಸಂದಂತೆ ನಾಟಕಗಳಿಂದ ಚಲನಚಿತ್ರಗಳಿಗೆ ಆ ಚಟುವಟಿಕೆಗಳು ವರ್ಗಾವಣೆಯಾಗಿವೆ. ಮಹತ್ವದ ಸಂಗತಿಯೆಂದರೆ ಹಲವು ವರ್ಷಗಳ ಕಾಲ ನಾಟಕಗಳ ಮೂಲಕ ತುಳು ಭಾಷಾಭಿಮಾನಿಗಳನ್ನು, ಪ್ರೇಕ್ಷಕರನ್ನು ರಂಜಿಸಿದ ಕಲಾವಿದರೇ ಇದೀಗ ಚಿತ್ರಗಳ ಮೂಲಕ ಮತ್ತಷ್ಟು ವಿಜೃಂಭಣೆಯಿಂದ ಮನರಂಜನೆ ಒದಗಿಸುತ್ತಿದ್ದಾರೆ.
ಹೌದು. ದಶಕಗಟ್ಟಲೆ ರಂಗಭೂಮಿಯಲ್ಲಿ ದುಡಿದ ಬಹಳಷ್ಟು ಕಲಾವಿದರು, ಅದರಲ್ಲೂ ಸ್ಟಾರ್ ನಟರು, ಕಳೆದ ಕೆಲ ವರ್ಷಗಳಿಂದ ಸಿನೆಮಾಗಳಲ್ಲಿ ಮಿಂಚುತ್ತಿದ್ದಾರೆ. ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್ ಮತ್ತು ಭೋಜರಾಜ್ ವಾಮಂಜೂರ್ – ಈ ನಾಲ್ವರು ಕಲಾವಿದರು ತುಳು ರಂಗಭೂಮಿ ಮತ್ತು ಚಿತ್ರರಂಗದ ನಿಜವಾದ ಪಿಲ್ಲರ್ಗಳೆಂದರೆ ತಪ್ಪಾಗದು. ಈ ನಾಲ್ವರು ನಟರು ರಂಗದ ಮೇಲೆಯೇ ಇರಲಿ ಅಥವಾ ಪರದೆಯ ಮೇಲೆಯೇ ಇರಲಿ, ವಿಜೃಂಭಿಸುತ್ತಿದ್ದರೆ ಅದು ಪ್ರೇಕ್ಷಕ-ವೀಕ್ಷಕರಿಗೆ ಹಬ್ಬವೋ ಹಬ್ಬ. ಅದಕ್ಕೆ ಕಾರಣ ಈ ನಟರ ಅದ್ಭುತ ನಟನಾ ಸಾಮರ್ಥ್ಯವಷ್ಟೇ ಅಲ್ಲ, ಪ್ರೇಕ್ಷಕರು ಅವರ ಮೇಲೆ ಇಟ್ಟಿರುವ ಅಪಾರ ಅಭಿಮಾನ, ಪ್ರೀತಿ ಮತ್ತು ಗೌರವವೂ ಕಾರಣ.
ಖಂಡಿತವಾಗಿ, ತುಳು ಕಲಾವಿದರಿಗೆ (ಇಲ್ಲಿನ ಇತರ ಭಾಷೆಗಳದ್ದೂ ಅದೇ ಕಥೆ) ಬೇರೆ ನಟರಿಗಿಂತ ಹೆಚ್ಚುವರಿಯಾದ ಒಂದು ಶಕ್ತಿ ಇದೆ. ಅದನ್ನು ಎಡ್ವಾಂಟೇಜ್ ಎನ್ನುವುದು ಸೂಕ್ತ. ಅದು, ನಮ್ಮ ಜನರಲ್ಲಿರುವ ವಿಶೇಷ ಗುಣ – ಭಾವನಾತ್ಮಕತೆ. ಹೌದು. ತುಳು ಸಿನೆಮಾಗಳನ್ನು ನೋಡುವ ಪ್ರೇಕ್ಷಕರಲ್ಲಿ ಬಹಳಷ್ಟು ಜನರು ಈ ಹಿನ್ನೆಲೆಯನ್ನುಳ್ಳವರೇ. ಆಯಾ ನಟರ ಅಪ್ಪಟ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರು ತೆರೆಯ ಮೇಲೆ ಬರುವುದನ್ನೇ ಕಾಯುತ್ತಿರುತ್ತಾರೆ. ತೆರೆಯ ಮೇಲೆ ತಮ್ಮಿಷ್ಟದ ನಟರನ್ನು ಕಂಡರೆ ಅವರಿಗದೇನೋ ಸಾರ್ಥಕತೆ. ಸಿನೆಮಾದಲ್ಲಿನ ಕಥೆ ಮತ್ತಿತರ ಬೇರೇನೇ ವಿಚಾರಗಳು ಅವರಿಗೆ ನಗಣ್ಯ. ಇಂತಹ, ಒಂದು ರೀತಿಯ ಮುಗ್ಧ ಮನಸ್ಥಿತಿಯಿಂದುಂಟಾದ ಪ್ರೇಮ, ಬೇರೆ ಯಾವ ಕಡೆ ಕಾಣ ಸಿಕ್ಕೀತು?
ಅದೇ ಕಾರಣಕ್ಕೆ ಮೇಲೆ ಹೆಸರಿಸಿದ ತುಳುವಿನ ಅತಿರಥ ಮಹಾರಥ ನಟರಲ್ಲಿ ಯಾರೊಬ್ಬರೂ ಇಲ್ಲದ ಚಿತ್ರಗಳಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸುಲಭ ಸಾಧ್ಯವಿಲ್ಲ. ಹಾಗಾಗಬೇಕೆಂದರೆ ಅದರಲ್ಲಿ ನಿಜಕ್ಕೂ ವಿಭಿನ್ನತೆಯಿರಬೇಕು, ವಿಶೇಷತೆಯಿರಬೇಕು. ಮನರಂಜನೆಯೇ ಪ್ರಧಾನವಾಗುಳ್ಳ ಚಿತ್ರಗಳಲ್ಲಿ ಈ ಕಲಾವಿದರು ಇಲ್ಲವೆಂದರೆ, ಅವರ ಸ್ಥಾನವನ್ನು ತುಂಬಬಲ್ಲಂತಹ ಸಮರ್ಥ ಮತ್ತು ಜನಪ್ರಿಯ ಕಲಾವಿದರಿಂದಷ್ಟೇ ಸಾಧ್ಯ. ಸದ್ಯದ ಮಟ್ಟಿಗೆ ತುಳು ಪ್ರೇಕ್ಷಕರು ಪಡೀಲ್-ಕಾಪಿಕಾಡ್-ಬೋಳಾರ್-ವಾಮಂಜೂರ್ ಎಂಬ ಚತುರ್ಮುಖ ನಟಸಾರ್ವಭೌಮರನ್ನು ಬಿಟ್ಟುಕೊಡಲು ಸರ್ವಥಾ ಸಿದ್ಧರಿಲ್ಲ.
ಅದಕ್ಕೇ ನಾನು ಹೇಳಿದ್ದು, ತುಳುವಿನಲ್ಲಿ, ಸದ್ಯದ ಪರಿಸ್ಥಿತಿಯಲ್ಲಿ ಇಂತಹ ನಟರನ್ನು ಹೊರತುಪಡಿಸಿದ ಚಿತ್ರಗಳನ್ನು ಕಲ್ಪಿಸಲೂ ಸಾಧ್ಯವಿಲ್ಲ. ಯಾಕೆಂದರೆ, ತುಳು ಚಿತ್ರಾಭಿಮಾನಿಗಳ ನಿರೀಕ್ಷೆಯಲ್ಲಿರುವಂತಹ ಅತಿ ದೊಡ್ಡ ಸಂಗತಿಗಳಲ್ಲಿ ಕಲಾವಿದರೇ ಎಲ್ಲಕ್ಕಿಂತಲೂ ಪ್ರಮುಖರು. ಇಂತಹ ಕಲಾವಿದರೇ ತುಳು ಚಿತ್ರಗಳ ಮಟ್ಟಿಗೆ ಮೊತ್ತ ಮೊದಲ ಬಂಡವಾಳ. ಉಳಿದದ್ದೆಲ್ಲಾ ಆಮೇಲಿನದ್ದು.
ಹಾಗಂತ, ಈ ಮೇಲಿನ ನಾಲ್ವರು ನಟರನ್ನಷ್ಟೇ ವೈಭವೀಕರಿಸುವ ಉದ್ದೇಶ ನನ್ನದಲ್ಲ. ಎಲ್ಲರಿಗೂ ಪರಿಚಿತರು ಮತ್ತು ಅವರು ಸಾಕಷ್ಟು ಹಿರಿಯರೂ ಅನುಭವಿಗಳೂ ಮತ್ತು ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರು ಎಂಬ ಕಾರಣಕ್ಕೆ ಅವರನ್ನು ಉದಾಹರಿಸಿದೆನಷ್ಟೇ. ನಾನು ನಿಜಕ್ಕೂ ಹೇಳ ಹೊರಟಿರುವುದೇನೆಂದರೆ, ಪ್ರೇಕ್ಷಕರನ್ನು ಸಿನೆಮಾ ಮಂದಿರಗಳಿಗೆ ಕರೆದು ತರಬಲ್ಲ ಸಾಮರ್ಥ್ಯವಿರುವ ನಟರು ತುಳು ಚಿತ್ರರಂಗದ ದೊಡ್ಡ ಆಸ್ತಿ ಮತ್ತು ಪ್ರಮುಖ ಶಕ್ತಿಯೆಂಬ ವಾಸ್ತವವನ್ನು ಹೇಳಿಕೊಳ್ಳುವುದು. ಸದ್ಯದ ಮಟ್ಟಿಗೆ ಇಂತಹ ನಟರನ್ನು ಹೊರತುಪಡಿಸಿ ಕೇವಲ ಕಥಾವಸ್ತು, ಕಥೆ ಮತ್ತು ನಿರೂಪಣೆ ಸೇರಿದಂತೆ ಇತರ ಸಂಗತಿಗಳಿಂದಲೇ ಓಡಬಲ್ಲಂತಹ ಸಿನೆಮಾ ರೂಪಿಸುವುದು ತುಳುವಿನಲ್ಲಿ ನಿರೀಕ್ಷಿಸುವಂತಿಲ್ಲ. (ಪಡ್ಡಾಯಿಯಂತಹ ಶ್ರೇಷ್ಠ ಸಿನೆಮಾ ಕೂಡ ತುಳುವಿನಲ್ಲಿಯೇ ಬಂದಿದೆಯೆಂಬುದನ್ನು ಮರೆಯುವಂತಿಲ್ಲ. ಆದರೆ ಅಂತಹ ಸಿನೆಮಾಗಳನ್ನು ಥಿಯೇಟರ್ಗಳಲ್ಲಿ ಯಶಸ್ವಿಯಾಗಿ ಓಡಿಸುವ ಕಾಲವೂ ಬರಬೇಕಿದೆ).
ಖುಷಿಯ ಸಂಗತಿಯೆಂದರೆ, ಮೇಲೆ ಹೇಳಿದ ಸೀನಿಯರ್ ಕಲಾವಿದರ ಸಾಲಿಗೆ ಬಹಳಷ್ಟು ಹಿರಿಯ ಮತ್ತು ಕಿರಿಯ ಕಲಾವಿದರು ಸೇರ್ಪಡೆಯಾಗಿದ್ದಾರೆ. ಪಾತ್ರ ಎಷ್ಟೇ ಸಣ್ಣದಿದ್ದರೂ ಪ್ರೇಕ್ಷಕರನ್ನು ಭರಪೂರವಾಗಿ ರಂಜಿಸುವ, ನಕ್ಕು ನಗಿಸುವ ಪ್ರತಿಭೆಯನ್ನು ಹೊಂದಿರುವ ಅನೇಕ ನಟರು ತುಳು ಚಿತ್ರರಂಗದಲ್ಲಿದ್ದಾರೆ. ಸತೀಶ್ ಬಂದಲೆ ಅಂತಹ ನಟರಲ್ಲಿ ಪ್ರಮುಖರು. ಈ ಸಾಲಿನಲ್ಲಿ ಇನ್ನೂ ಅನೇಕರಿದ್ದಾರೆ.
ಪ್ರತಿಭೆ ಮತ್ತು ಬದ್ಧತೆಯುಳ್ಳ ಕಲಾವಿದರಿಗೆ ಈಗ ಅವಕಾಶಗಳಿಗೆ ಬರಗಾಲವಿಲ್ಲ. ನೇರವಾಗಿ ಸಿನೆಮಾ ರಂಗಕ್ಕೆ ಪ್ರವೇಶ ಪಡೆಯುವ ಅವಕಾಶ ಎಲ್ಲರಿಗೂ ದೊರಕುವುದಿಲ್ಲ. ಆದರೆ ಅದಕ್ಕಾಗಿ ನಿರಾಶೆಪಡುವ ಕಾಲ ಇದಲ್ಲ. ಟಿವಿ ಚಾನೆಲ್ಗಳು ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸುವ ಮತ್ತು ಆ ಮೂಲಕ ಅಭಿಮಾನಿಗಳನ್ನು ಸೃಷ್ಟಿಸುವ ಸುಸಂದರ್ಭ ಇಂತಹ ಆಸಕ್ತ ಕಲಾವಿದರಿಗೆ, ಪ್ರತಿಭಾವಂತರಿಗೆ ಬಹಳಷ್ಟು ದೊರಕುತ್ತವೆ. ಅಂತಹ ವಿಧಾನಗಳ ಮೂಲಕ ಮುನ್ನೆಲೆಗೆ ಬಂದ ಹಲವು ಕಲಾವಿದರು, ನಟರು ನಮ್ಮೆದುರೇ ಇದ್ದಾರೆ.
ಮತ್ತೊಂದು ಮುಖ್ಯ ವಿಚಾರವೇನೆಂದರೆ, ತುಳು ಸಿನೆಮಾಗಳನ್ನು ನೋಡುವ ಬಹುತೇಕರು ತಾವು ‘ತುಳು’ ಸಿನೆಮಾ ಪ್ರೇಕ್ಷಕರೆಂಬುದನ್ನು ಮನದಲ್ಲಿಟ್ಟುಕೊಂಡೇ ಸಿನೆಮಾ ಮಂದಿರಕ್ಕೆ ಬಂದಿರುತ್ತಾರೆ. ‘ತುಳು’ ಎಂದರೆ ಅದೊಂದು ಭಾವನೆ. ಬೇರೆ ಯಾವುದೇ ಭಾಷೆಯ, ಇಂಡಸ್ಟ್ರಿಯ ಚಿತ್ರಗಳನ್ನು ನೋಡಿದ ಪ್ರೇಕ್ಷಕನಾಗಿದ್ದರೂ ಸಹ, ತುಳು ಸಿನೆಮಾ ನೋಡುವಾಗ ಆ ಪ್ರೇಕ್ಷಕ ತುಳುವನೇ ಆಗಿರುತ್ತಾನೆ. ಆತನ ಅಪೇಕ್ಷೆ, ನಿರೀಕ್ಷೆ ಮತ್ತು ಅಂದಾಜುಗಳೆಲ್ಲಾ ತುಳು ವಿಚಾರಗಳದ್ದೇ ಆಗಿರುತ್ತದೆ. ಅದೇ ಕಾರಣಕ್ಕೆ ಬೇರೆಲ್ಲಾ ಲಾಜಿಕ್ಗಳು ಇಲ್ಲಿ ನಗಣ್ಯ! (ಇದರ ಬಗ್ಗೆ ಸಾಕಷ್ಟು ವಿಚಾರಗಳಿವೆ, ಮುಂದೆ ಬರೆಯುತ್ತೇನೆ).
ಸದ್ಯ, ನಾನಿಲ್ಲಿ ಬರೆಯುತ್ತಿರುವ ಲೇಖನಮಾಲೆ, ತುಳು ಚಿತ್ರರಂಗದ ಬಗ್ಗೆ ಸಕಾರಾತ್ಮಕ ಅಭಿಪ್ರಾಯದಿಂದ ಕೂಡಿರುವುದೂ, ಕ್ರಿಯಾತ್ಮಕ ಭವಿಷ್ಯವನ್ನು ಅಪೇಕ್ಷಪಟ್ಟದ್ದೂ ಆಗಿದೆ. ‘ಗಿರಿಗಿಟ್’ ಸಿನೆಮಾ ಇಂತಹ ಭವ್ಯ ಭವಿಷ್ಯಕ್ಕೆ ಮುನ್ನುಡಿಯಿಟ್ಟಿದೆ. ಆದರೆ, ತುಳು ಚಿತ್ರರಂಗ, ಕೇವಲ ಜನಪ್ರಿಯತೆಯನ್ನೇ ಮಾನದಂಡವನ್ನಾಗಿಟ್ಟುಕೊಂಡು ಹೆಚ್ಚು ಕಾಲ ಮುನ್ನಡೆಯಲು ಸಾಧ್ಯವಿಲ್ಲ. ದೀರ್ಘ ಕಾಲ ಮನಸ್ಸನ್ನಾಕ್ರಮಿಸುವಂತಹ ಚಿತ್ರಗಳೂ ಇಲ್ಲಿ ಬರಬೇಕು. ಕೇವಲ ಜನಪ್ರಿಯತೆ, ಕಾಮಿಡಿ ಮತ್ತು ಸ್ಟಾರ್ ನಟರ ಇಮೇಜ್ಗಳನ್ನೇ ಆಶ್ರಯಿಸುವ ಸದ್ಯದ ಟ್ರೆಂಡ್ ಇದೇ ರೀತಿ ಮುಂದುವರಿದಲ್ಲಿ ಏಕತಾನತೆಗೆ ಸಿಲುಕುವ ರಿಸ್ಕ್ ಕೂಡಾ ಇದೆ. ತುಳುವಿನಲ್ಲೂ ಅದ್ಭುತ ಸಿನೆಮಾಗಳು ತಯಾರಾಗಬೇಕು. ಆ ನಿಟ್ಟಿನಲ್ಲಿ ನನ್ನ ವಿಚಾರಗಳನ್ನು ಮುಂದಿನ ಸಂಚಿಕೆಗಳಲ್ಲಿ ವ್ಯಕ್ತಪಡಿಸುತ್ತೇನೆ.
(ಮುಂದುವರಿಯಲಿದೆ)