Latest News

ಮೌನ ರೋದನಗೈಯುತ್ತಿದ್ದ ಕ್ರೈಸ್ತರನ್ನು ರೊಚ್ಚಿಗೆಬ್ಬಿಸಿದ್ದು ಯಾರು?

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : July 19, 2016 at 1:55 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

(ಹಿಂದಿನ ಸಂಚಿಕೆಯಿಂದ)

ಭಾನುವಾರ, ಸೆಪ್ಟೆಂಬರ್ 14, 2008.

ಅಂದು ಬೆಳಿಗ್ಗೆ ನೆರೆದ ಜನರು ಮಿಲಾಗ್ರಿಸ್ ಸಭಾಂಗಣದೆದುರು ಧರಣಿ ಕುಳಿತಿದ್ದರು. ದಿಕ್ಕುಗಾಣದಂತಾಗಿದ್ದ ಆ ಗುಂಪನ್ನು ಸರಿಯಾಗಿ ನಿರ್ವಹಿಸುವ, ದಾರಿ ತೋರಿಸುವ ಒಬ್ಬನೇ ಒಬ್ಬ ನಾಯಕನಿರಲಿಲ್ಲ. ಅಲ್ಲೂ ಇರಲಿಲ್ಲ, ಬೇರೆಲ್ಲಿಯೂ ಇರಲಿಲ್ಲ. ಪ್ರತಿಯೊಂದಕ್ಕೂ ಪಾದ್ರಿಗಳನ್ನೇ ಆಶ್ರಯಿಸುವ ಜನರಿಗೆ, ಇಗರ್ಜಿಯಿಂದ ಹೊರಗೆ ಇಂತಹ ವಿಷಯಗಳಲ್ಲಿ ಮಾರ್ಗದರ್ಶನ ಮಾಡುವ ಸಾಮಾಜಿಕ ಅಥವಾ ರಾಜಕೀಯ ಮುಖಂಡರ ಅಗತ್ಯವಿತ್ತು. ಕನಿಷ್ಠ ಇಂತಹ ಸಂದರ್ಭಗಳಲ್ಲಿ ಕಾನೂನು ಮತ್ತಿತರ ಅಗತ್ಯ ಸಂಗತಿಗಳನ್ನು ತಿಳಿಸುವ ವೃತ್ತಿಪರರೂ ಇರಲಿಲ್ಲ.

ಆದರೆ, ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಅಲ್ಲಿ ಸೇರಿದ್ದ ಕ್ರೈಸ್ತರು ಧರಣಿ ಕುಳಿತಾಗ, ಸಿಕ್ಕಿದ ಅವಕಾಶವನ್ನು ಬಿಡಬಾರದೆಂದು ಕೆಲವರು ಭಾಷಣ ಕೊಡಲು ಆರಂಭಿಸಿದರು. ಮುಂದಿನ ದಾರಿ ಏನೆಂಬುದನ್ನು ನಿರ್ಧರಿಸುವ ಬದಲು ಗುಂಪಿನಲ್ಲಿ ಗೋವಿಂದ ಎಂಬಂತೆ ಕೆಲವರು ಅಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಲು ಪ್ರಯತ್ನಿಸಿದರು. ಮಾತನಾಡುತ್ತಿದ್ದ ಒಬ್ಬರಂತೂ ತಮ್ಮ ಆಪ್ತ ರಮಾನಾಥ್ ರೈಯವರನ್ನು ಹೊಗಳುವ ಭರದಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಂತೆ ಮಾಡಿ ಬಿಟ್ಟರು. ಆ ಭರದಲ್ಲಿ ಬಿಜೆಪಿಯವರನ್ನು ತೆಗಳಲಾಯಿತು. ಜನರೇನೋ ಆತನನ್ನು ಬಲಾತ್ಕಾರದಿಂದ ಕುಳಿತುಕೊಳ್ಳುವಂತೆ ಮಾಡಿದರು.

ಆದರೆ ಅಷ್ಟರಲ್ಲಿ ಕ್ರೈಸ್ತ ಭಕ್ತಾದಿಗಳ ಪ್ರತಿಭಟನಾ ಧರಣಿಗೆ ರಾಜಕೀಯ ಪ್ರವೇಶಿಸಿತ್ತು. ಕಾಂಗ್ರೆಸ್ಸಿನ ಶಾಸಕರು, ಐವನ್ ಡಿಸೋಜ ಮುಂತಾದವರ ಹಾಜರಿಯಂತೂ ಸರಕಾರಕ್ಕೆ ಕಣ್ಣು ಕುಕ್ಕುವಂತೆ ಮಾಡಿತು. ಹೀಗಾಗಿ ಕ್ರೈಸ್ತರ ನೋವು, ಅಳಲು, ದುಃಖ ಮರೆಯಾಗಿ, ಗೌಣವಾಗಿ ಮಾಮೂಲಿ ರಾಜಕೀಯವೇ ಪ್ರಮುಖ ಸಂಗತಿಯಾಯಿತು. ಇದರಿಂದಾಗಿ ಕ್ರೈಸ್ತರಿಗಾದ ಅನ್ಯಾಯವನ್ನು ಸೂಕ್ತವಾಗಿ ಪ್ರದರ್ಶಿಸುವ, ಸರಕಾರದ ಗಮನಕ್ಕೆ ತರುವ ಪ್ರಯತ್ನ ವಿಫಲವಾಯಿತು.

ಹೇಗೂ ಬಿಜೆಪಿಯದ್ದೇ ಸರಕಾರವಿತ್ತು. ಆಡಳಿತದ ಪ್ರಮುಖರೂ ಅದೇ ಮನಸ್ಥಿತಿಯವರಾಗಿದ್ದರು. ಮಧ್ಯಾಹ್ನದ ನಂತರ ಪ್ರತಿಭಟನೆಯ ಬಲ ಹೆಚ್ಚಾಗುತ್ತಿದ್ದಂತೆ, ಕ್ರೈಸ್ತರ ಆಕ್ರೋಶ, ನೋವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದೆ, ನಡೆದಿರುವ ಸಂಗತಿಯ ಗಾಂಭೀರ್ಯತೆಯನ್ನು ಗಮನಿಸದೆ, ಅದನ್ನೊಂದು ಕೇವಲ ರಾಜಕೀಯ ಪ್ರತಿಭಟನೆಯೆಂಬಂತೆ ಪರಿಗಣಿಸಲಾಯಿತು.

ಅಷ್ಟೆ. ಪ್ರತಿಭಟನೆಯನ್ನು ಮಟ್ಟ ಹಾಕುವ ವ್ಯವಸ್ಥಿತ ತಯಾರಿ ನಡೆದಾಗಿತ್ತು.

Budkulo_Mangaluru_Church Attack_04 Budkulo_Mangaluru_Church Attack_03

ಜನರು ಮಾತ್ರ ಇದರ ಅರಿವಿಲ್ಲದೆ, ಮತ್ತಷ್ಟು ಆತಂಕದಿಂದ ನೋವು ತೋಡಿಕೊಳ್ಳುತ್ತಿದ್ದರು. ಅವರ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳುವವರು, ಮೂಕ ರೋದನೆಯನ್ನು ಆಲಿಸುವವರು ಯಾರೂ ಬರಲೇ ಇಲ್ಲ.

ಅಷ್ಟರಲ್ಲಿ ಮಿಕಗಳ ಬೇಟೆ ಶುರುವಾಗಿತ್ತು.

ಹೌದು, ಪ್ರಜಾಪ್ರಭುತ್ವದ ಅಡಿಯಲ್ಲಿಯೇ ಸರ್ವಾಧಿಕಾರಿಗಳಂತೆ ಜನರ ದಮನ ಮಾಡಲು ಕಾರ್ಯಾರಂಭವಾಗಿತ್ತು. ಜಿಲ್ಲಾಡಳಿತವು ಜನರಿಗೆ ಸಾಂತ್ವನ ಕೊಡುವ, ಪರಿಹಾರ ಒದಗಿಸುವ ಬದಲು ಅವರನ್ನು ಕುಳಿತಲ್ಲಿಂದಲೇ ನಿರ್ದಯವಾಗಿ ತೆರವುಗೊಳಿಸಲು ನಿರ್ಧರಿಸಿಯಾಗಿತ್ತು.

ತಮ್ಮ ಗಮನಕ್ಕೆ ಬಾರದೆ ಏನೇನು ನಡೆಯುತ್ತಿದೆಯೆಂಬುದು ಧರಣಿ ಮಾಡುತ್ತಿದ್ದ ಕ್ರೈಸ್ತ ಜನರಿಗೆ ತಿಳಿಯಲೇ ಇಲ್ಲ. ವ್ಯವಸ್ಥಿತವಾಗಿ ಅವರನ್ನು ಮಟ್ಟ ಹಾಕುವ ತಯಾರಿ ನಡೆದಿತ್ತು.

ಒಮ್ಮಿಂದೊಮ್ಮೆಲೆ ಸಿಡಿಯಿತು ಅಶ್ರುವಾಯು! ಒಂದಂತೂ ಸೀದಾ ಒಬ್ಬ ಧರ್ಮಭಗಿನಿಯ ಕಣ್ಣಿಗೇ ತಾಗಿತು. ಅವರು ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರು. ಲಾಠಿಯ ಪೆಟ್ಟು ಎಲ್ಲೆಂದರಲ್ಲಿ ಮೈಮೇಲೆ ಬೀಳಲಾರಂಭಿಸಿತ್ತು. ಅನಿರೀಕ್ಷಿತವಾಗಿ ಪೊಲೀಸರ ಅಕ್ರಮಣ ಕಂಡು ಜನರು ಭಯಭೀತಿಗೊಳಗಾದರು, ಚೆಲ್ಲಾಪಿಲ್ಲಿಯಾದರು.

ಫಳ್ನೀರ್ ರಸ್ತೆಯನ್ನು ಎರಡೂ ಕಡೆಗಳಿಂದ ಪೊಲೀಸರು ಮುಚ್ಚಿದ್ದರು. ಜನರು ತಪ್ಪಿಸಿಕೊಂಡು ಹೋಗದಂತೆ ಪೊಲೀಸರ ವಾಹನಗಳನ್ನು ಅಡ್ಡವಾಗಿಟ್ಟಿದ್ದರು. ಜನರ ಅರಿವಿಗೆ ಬಾರದೆ ಅವರನ್ನು ಸದೆಬಡಿಯಲು ಆಡಳಿತ ಕ್ರಮ ಕೈಗೊಂಡಿತ್ತು. ಶತ್ರುಗಳನ್ನು, ಕ್ರಿಮಿನಲ್‍ಗಳನ್ನು ಬಂಧಿಸಲು, ಮುಗಿಸಲು ಯೋಜನೆ ರೂಪಿಸಿದಂತೆ ಮುಗ್ಧ ಜನರನ್ನು ಸದೆಬಡಿಯಲು ಪೊಲೀಸರು ಕಾರ್ಯಾರಂಭ ಮಾಡಿದ್ದರು.

ಆದರೆ ಪೋಲೀಸರು ಅಂದುಕೊಂಡಂತೆ ನಡೆಯಲಿಲ್ಲ. ಹಲವಾರು ವರ್ಷಗಳಿಂದ ಕ್ರೈಸ್ತರ ಮೇಲೆ ಅಲ್ಲಲ್ಲಿ ನಡೆಯುತ್ತಿದ್ದ ಹಲ್ಲೆ, ಹಿಂಸೆ, ಆಕ್ರಮಣಗಳನ್ನು ಕಂಡು ಕೇಳಿದ್ದ ಮಂಗಳೂರಿನ ಕ್ರೈಸ್ತರಿಗೆ ತಮ್ಮ ದೇವಾಲಯದ ಮೇಲೆಯೇ ಹೀಗೆ ಅಸಹನೀಯವಾಗಿ ಹಲ್ಲೆ ಮಾಡಿದ್ದು ಸಹಿಸಲಾಗಿರಲಿಲ್ಲ. ಅದನ್ನು ವಿರೋಧಿಸಲು, ತಮ್ಮ ಕೂಗು ಇತರರಿಗೆ ಕೇಳಿಸಲೆಂದು ಶಾಂತಿಯುತವಾಗಿ ಜನರು ಸೇರಿದ್ದರಷ್ಟೆ. ಅಪರಾಧಿಗಳನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರಿಗೆ ಆಡಳಿತ ಭರವಸೆ ಕೊಟ್ಟಿದ್ದರಷ್ಟೇ ಸಾಕಾಗುತ್ತಿತ್ತು. ಜನರು ಅಲ್ಲಿಂದ ಎದ್ದು ಸಮಾಧಾನದಿಂದ ತಮ್ಮ ಮನೆಗಳಿಗೆ ಹೋಗಿರುತ್ತಿದ್ದರು.

ಅವರಿಗೊಂದು ಸಾಂತ್ವನ ಬೇಕಿತ್ತು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವ ಭರವಸೆ ಬೇಕಿತ್ತು. ಅಷ್ಟೆ.

ಆದರೆ ಆಗಿದ್ದೇ ಬೇರೆ.

ಅವರ ನೋವನ್ನು ಬಗೆಹರಿಸುವುದನ್ನು ಬಿಟ್ಟು, ಅವರನ್ನೇ ಅಪರಾಧಿಗಳಂತೆ ಪರಿಗಣಿಸಿದ್ದು ಜಿಲ್ಲಾಡಳಿತದ ದೊಡ್ಡ ಪ್ರಮಾದ. ಅಲ್ಲದೆ ಅವರನ್ನು ನಟೋರಿಯಸ್ ಕ್ರಿಮಿನಲ್‍ಗಳಂತೆ ಮಟ್ಟ ಹಾಕಲು ಪ್ರಯತ್ನಿಸಿದ್ದು ಕಾನೂನು ಬಾಹಿರ, ಅಪ್ರಜಾಸತ್ತಾತ್ಮಕ ಕ್ರಮವಾಗಿತ್ತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಶಾಂತಿಯುತವಾಗಿ ತಮ್ಮ ಅಳಲು, ನೋವು ಪ್ರದರ್ಶಿಸುತ್ತಿದ್ದವರನ್ನು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ, ದಮನ ಮಾಡಲು ಯೋಚಿಸಿದ್ದೇ ಸರಕಾರದ ಬಹು ದೊಡ್ಡ ಅಪರಾಧ!

ಒಮ್ಮಿಂದೊಮ್ಮೆಲೆ ತಮ್ಮನ್ನು ಪೊಲೀಸರು ಗುರಿ ಮಾಡಿಕೊಂಡು ಅಶ್ರುವಾಯು ಪ್ರಯೋಗಿಸಿ, ಲಾಠಿ ಬೀಸುತ್ತಿದ್ದುದನ್ನು ಕಂಡ ಜನರು ಗಾಬರಿಗೊಂಡು, ಹೆದರಿ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಆದರೆ ಅವರಿಗೆಲ್ಲಿ ಹೋಗಲಿಕ್ಕಾಗುತ್ತದೆ? ಹೋಗಲಿಕ್ಕಿರುವ ಆಯಕಟ್ಟಿನ ಜಾಗಗಳಲ್ಲೆಲ್ಲಾ ಭದ್ರ ಕೋಟೆಯಂತೆ ಪೊಲೀಸರು ವಾಹನಗಳನ್ನು ನಿಲ್ಲಿಸಿದ್ದರು. ಮಹಿಳೆಯರು, ಮಕ್ಕಳೆನ್ನದೆ ಕೈಗೆ ಸಿಕ್ಕಿದವರನ್ನು ಪೊಲೀಸರು ತಮ್ಮ ಆಜನ್ಮ ವೈರಿಗಳಂತೆ, ಕೋಪ, ಹಗೆ ತೀರಿಸುವಂತೆ ಹೊಡೆಯುತ್ತಿದ್ದರು.

ಅದೇ ಸಾಕಾಯಿತು. ಹೊಸದೊಂದು ಚರಿತ್ರೆ ನಿರ್ಮಾಣವಾಗಿತ್ತು.

ಮೊತ್ತ ಮೊದಲ ಬಾರಿಗೆ ಪೊಲೀಸರು ತಮ್ಮ ಜೀವ ಉಳಿಸಿಕೊಳ್ಳಲೆಂಬಂತೆ ಕಾಲು ಕಿತ್ತು ಓಡುತ್ತಿದ್ದರು! ಮುಗ್ಧ ಜನರನ್ನು ಸುಲಭವಾಗಿ ಹೊಡೆದುರುಳಿಸಲು ಬಂದಿದ್ದ ಪೊಲೀಸರು ಅದು ಹೇಗೆ ತಾವೇ ಬಚಾವಾಗಲು ಪಲಾಯನ ಮಾಡಿದರು? ಈ ದೃಶ್ಯಗಳನ್ನು ಟಿವಿ ಚಾನೆಲ್‍ಗಳಲ್ಲಿ ನೋಡಿದ ಜನರೆಲ್ಲಾ ಬೇಸ್ತು ಬಿದ್ದಿದ್ದರು. ಪೊಲೀಸರೇ ಎದ್ದೆನೋ ಬಿದ್ದೆನೋ ಎಂಬಂತೆ ಓಡಿ ಹೋಗುವ ಅಪರೂಪದ ದೃಶ್ಯವನ್ನು ಅವರು ನೋಡುತ್ತಿದ್ದರು. ಬೇರೆಲ್ಲೂ ಕಂಡಿರದ ದೃಶ್ಯಾವಳಿಗಳು ಅವು.

ಇದು ಹೇಗಾಯಿತು ಅಂತೀರಾ?

ಪತ್ರಕರ್ತ, ಈಗಿನ ಮೈಸೂರು-ಕೊಡಗಿನ ಲೋಕಸಭಾ ಸದಸ್ಯ ಪ್ರತಾಪ್ ಸಿಂಹರವರು ಯಾವಾಗಲೂ ತಮ್ಮ ಲೇಖನಗಳಲ್ಲಿ, ಹಿಂದೂಗಳು ಕೇವಲ ಪ್ರತಿಕ್ರಿಯೆ ನೀಡುವವರು ಎಂದು ವಾದಿಸುತ್ತಿರುತ್ತಾರೆ. ಅಂದರೆ ಭಾರತದಲ್ಲಿ ಹಿಂದೂಗಳ ಮೇಲೆ (ಇತರರು) ಆಕ್ರಮಣ, ಅನ್ಯಾಯ, ಹಲ್ಲೆ, ಹಿಂಸೆ ಮಾಡುವಾಗಲಷ್ಟೇ ಹಿಂದೂಗಳು ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರತಿ ದಾಳಿ ಮಾಡುತ್ತಾರೆ ಎನ್ನುವುದು ಅವರ ವಾದ. ಹಿಂದೂಗಳು ತಾವಾಗಿ ದಾಳಿ ಮಾಡಲು ಹೋಗುವುದಿಲ್ಲ, ಬೇರೆಯವರು ದಾಳಿ ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬುದು ಅವರ ಸ್ಪಷ್ಟ ನುಡಿ.

ಇಲ್ಲೂ ಹಾಗೇ ಆಗಿತ್ತು. ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಹಿಂದೂ ಮೂಲಭೂತವಾದಿ ಸಂಘಟನೆಗಳ ಯುವಕರು ದಾಳಿ ಮಾಡಿದ್ದನ್ನು ಪ್ರತಿಭಟಿಸಲು ಧರಣಿ ಮಾಡುತ್ತಿದ್ದ ಕ್ರೈಸ್ತರು ಮೌನ ರೋದನ ಮಾಡುತ್ತಿದ್ದರಷ್ಟೆ. ಅವರೇನೂ ತಲವಾರು, ಬಂದೂಕುಗಳನ್ನು ಹಿಡಿದುಕೊಂಡು ದಾಳಿ ಮಾಡಲು ಬಂದಿರಲಿಲ್ಲ. ಆದರೆ ಹಾಗೆ ಅಸಹಾಯಕರಾಗಿದ್ದವರ ಮೇಲೆ ವ್ಯವಸ್ಥಿತವಾಗಿ ಪೊಲೀಸರು ದಾಳಿ ಮಾಡಿದ್ದನ್ನು ಆಶ್ಚರ್ಯಕರವಾಗಿ ನೋಡಿ ಬಸವಳಿದ ಕೆಲ ಕ್ರೈಸ್ತ ಯುವಕರು ಬೇರೆ ದಾರಿ ಕಾಣದೆ ನೋಡ ನೋಡುತ್ತಿದ್ದಂತೆ ಪ್ರತಿ ದಾಳಿ ಮಾಡಿದರು.

ಅಷ್ಟೇ ಆಗಿದ್ದು. ತಮ್ಮ ಜನಾಂಗದ ಮೇಲೆ ಅನ್ಯಾಯದ ಮೇಲೆ ಅನ್ಯಾಯ ನಡೆಯುತ್ತಿರುವುದನ್ನು ಕಂಡು ಕ್ರುದ್ಧರಾದ ಕೆಲ ಯುವಕರು ಅಲ್ಲೇ ಪಕ್ಕದಲ್ಲಿದ್ದ ಸ್ಮಶಾನಕ್ಕೆ ಹೋಗಿ ಅಲ್ಲಿ ಕೈಗೆ ಸಿಕ್ಕಿದ ವಸ್ತುಗಳನ್ನು ಪೊಲೀಸರತ್ತ ಎಸೆದರು. ಪೊಲೀಸರು, ಕ್ರೈಸ್ತರು ಶಾಂತಿಪ್ರಿಯ ಜನರು, ಪ್ರತಿಭಟನೆ ಮಾಡಲಿ ಗೊತ್ತಿರದ ಮುಗ್ಧರೆಂದು ತಿಳಿದು ಚಿಂತೆಯಿಲ್ಲದೆ ಅವರನ್ನು ಹೊಡೆಯಲು ಬಂದಿದ್ದರು. ಆದರೆ ಬಿಸಿ ರಕ್ತದ ಯುವಜನರ ಈ ಪ್ರತಿಕ್ರಿಯೆ ಅವರಿಗಷ್ಟೇ ಅಲ್ಲ, ಸ್ವತಃ ಕ್ರೈಸ್ತರಿಗೂ ಅನಿರೀಕ್ಷಿತವಾಗಿತ್ತು.

ಅಲ್ಲಿಗೆ ಪರಿಸ್ಥಿತಿ ಹತೋಟಿ ಮೀರಿಯಾಗಿತ್ತು. ಹೆಚ್ಚಿನ ಯುವಕರು ಪ್ರತಿ ದಾಳಿ ಮಾಡಲು ಸೇರಿದರು. ಪೊಲೀಸರನ್ನು ಹಿಂದಟ್ಟಿದರು. ಯೋಧರಂತೆ ಮುನ್ನುಗ್ಗುತ್ತಿದ್ದ ಪೊಲೀಸರು ಶಾಲಾ ಮಕ್ಕಳಂತೆ ಹೆದರಿ ಹಿಂದಕ್ಕೋಡಿದ್ದನ್ನು ಇಡೀ ರಾಜ್ಯದ ಜನ ನೋಡಿ ಆಶ್ಚರ್ಯಪಟ್ಟರು. ಗುಂಪು ಸೇರಿದ ಯುವಕರು ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸಿದರು.

ಕ್ರೈಸ್ತರು ಮಾಡಿದ್ದ ತಪ್ಪು ಇಷ್ಟೇ. ಅಲ್ಲಿಗೆ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕ್ರೈಸ್ತರು ಆಕ್ರಮಣ ಮಾಡಿದರು, ದಾಳಿ ನಡೆಸಿದರು, ಪ್ರಾಣಕ್ಕೆ ಸಂಚಕಾರ ತಂದರು, ಕಾನೂನು ಕೈಗೆ ತೆಗೆದುಕೊಂಡರು ಎಂಬುದೇ ಪ್ರಮುಖ ಸುದ್ದಿಯಾಗಿ ಪರಿವರ್ತನೆಯಾಯಿತು. ಬೆಳಗ್ಗಿನಿಂದ ನಡೆದಿದ್ದ ಘಟನೆಗಳಿಗೆ ಬೇರೆಯದೇ ಆಯಾಮ ದೊರೆಯಿತು. ಅಲ್ಲಿಯ ತನಕ ಕ್ರೈಸ್ತರ ಪರವಾಗಿ ಸುದ್ದಿ ಬಿತ್ತರಿಸುತ್ತಿದ್ದ ಮಾಧ್ಯಮಗಳೂ ಒಮ್ಮಿಂದೊಮ್ಮೆಲೆ ಕ್ರೈಸ್ತರ ವಿರುದ್ಧ ನಿಲುವು ತೆಗೆದುಕೊಂಡರು. ಮಾಧ್ಯಮ ಪ್ರತಿನಿಧಿಗಳಿಗೆ ನಡೆದುದೇನು ಎಂಬುದು ಸ್ಪಷ್ಟವಾಗಿ ಗೊತ್ತಿದ್ದರೂ, ಮಾಧ್ಯಮ ಕೇಂದ್ರಗಳಿಂದ ಕೇವಲ ಕ್ರೈಸ್ತರ ತಪ್ಪುಗಳನ್ನು ಎತ್ತಿ ತೋರಿಸಿ ಕ್ರೈಸ್ತರು ಗೂಂಡಾಗಳಂತೆ ವರ್ತಿಸಿದರು, ರೌಡಿಗಳಾಗಿ ನಡೆದುಕೊಂಡರೆಂದು ಪ್ರಚಾರ ಮಾಡಿದರು.

ಬೆಳಗ್ಗಿನ ಘಟನೆ ಬದಿಗೆ ಸರಿದು, ಕ್ರೈಸ್ತರು ಹಿಂಸಾತ್ಮಕವಾಗಿ ವರ್ತಿಸಿದ್ದೇ ಬ್ರೇಕಿಂಗ್ ನ್ಯೂಸ್ ಆಯಿತು!

ಆದರೆ ಶಾಂತಿಯುತವಾಗಿ ಧರಣಿ ಕುಳಿತು ಆತಂಕದಿಂದ, ಭಯದಿಂದ ಕಂಗಾಲಾಗಿದ್ದ ಕ್ರೈಸ್ತ ಜನರನ್ನು, ಮಕ್ಕಳು ಮಹಿಳೆಯರು ವೃದ್ಧರೆನ್ನದೆ ಮೃಗೀಯವಾಗಿ ಹೊಡೆದು ಪೊಲೀಸರು ದುಂಡಾವರ್ತನೆ ನಡೆಸಿದ್ದನ್ನು ಮಾಧ್ಯಮಗಳು ಮರೆಮಾಚಿ ವರದಿ ಮಾಡಿದ್ದರು. ಮೊದಲೇ ಆಘಾತದಿಂದ ತತ್ತರಿಸಿದ್ದ ಜನರನ್ನು ಹೀಗೆ ಭಯೋತ್ಪಾದಕರನ್ನು ಹೊಸಕಿ ಹಾಕುವಂತೆ ಬೆಂಡೆತ್ತಲು ಕ್ರಮ ಕೈಗೊಂಡ ಜಿಲ್ಲಾಡಳಿತದ ಅಕ್ರಮ, ಅನ್ಯಾಯವನ್ನು ಎತ್ತಿ ತೋರಿಸದೆ, ಕ್ರೈಸ್ತರೇ ತಾವಾಗಿ ಗೂಂಡಾತನ ಪ್ರದರ್ಶಿಸಿದರೆಂಬಂತೆ ದೊಡ್ಡದಾಗಿ ತೋರಿಸಲಾಯಿತು.

ಮತಾಂತರ ಮಾಡುವವರೆಂಬ ಆರೋಪದ ಜೊತೆಗೆ, ಕ್ರೈಸ್ತರನ್ನು ಕಾನೂನು ಕೈಗೆ ತೆಗೆದುಕೊಳ್ಳುವ ಗೂಂಡಾಗಳೆಂಬ ಆಪಾದನೆಯೂ ಅಂಟಿಕೊಂಡಿತು.

ಸಂಘ ಪರಿವಾರಕ್ಕೆ ಬೇಕಿದ್ದದ್ದೂ ಅದೇ!

(ಮತ್ತೇನಾಯಿತು, ಸೋಮವಾರದ ಗಲಭೆ, ಹಿಂಸೆ ಹೇಗೆ ನಡೆಯಿತು ಎಂಬುದನ್ನು ನಾಳೆ ಓದಿ)

ಭಾಗ 1: ಚರ್ಚ್ ಎಟ್ಯಾಕ್: ಆ ದಿನ ಮಂಗಳೂರಿನ ಕ್ರೈಸ್ತರು ರೌಡಿಗಳಂತೆ ವರ್ತಿಸಿದ್ದರೇ?

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

Like our Facebook Page: www.facebook.com/budkulo.epaper

Leave a comment

Your email address will not be published. Required fields are marked *

Latest News