ವೈಭವಯುತ ಕೆ.ಎಸ್. ರಾವ್ ರಸ್ತೆಯಲ್ಲಿದೆ ವೈಕುಂಠಕ್ಕೆ ದಾರಿ!
ಕಾರ್ನಾಡ್ ಸದಾಶಿವ ರಾವ್ ರಸ್ತೆ ಮಂಗಳೂರಿನ ಅತ್ಯಂತ ಪ್ರತಿಷ್ಠಿತ ರಸ್ತೆ. ಬೆಂಗಳೂರಿನ ಎಂ.ಜಿ. ರಸ್ತೆಗೆ ಹೋಲಿಸಬಹುದಾದ ಈ ಕೆ.ಎಸ್. ರಾವ್ ರಸ್ತೆ ಹಂಪನಕಟ್ಟೆ ವೃತ್ತದಿಂದ ನವಭಾರತ ವೃತ್ತದ ವರೆಗೆ ಸುಮಾರು ಒಂದು ಕಿ.ಮೀ. ಉದ್ದಕ್ಕಿದೆ. ಈಗ ಹಲವು ರಸ್ತೆಗಳು ಅಭಿವೃದ್ಧಿಗೊಂಡು ಗಿಜಿಗುಡುತ್ತಿವೆಯಾದರೂ, ಬಹಳ ಹಿಂದಿನಿಂದ ನಗರದಲ್ಲಿ ಜನಸಂದಣಿಯಿಂದಿರುತ್ತಿದ್ದುದು ಈ ಕೆ.ಎಸ್. ರಾವ್ ರಸ್ತೆ ಮಾತ್ರ. ಹಂಪನಕಟ್ಟೆ, ಮಾರ್ಕೆಟ್‍ಗೆ ಹೊಂದಿಕೊಂಡಿರುವುದರ ಜೊತೆಗೆ ಪ್ರತಿಷ್ಠಿತ ಕಟ್ಟಡ, ಅಂಗಡಿಗಳು, ಹೋಟೆಲು, ಟಾಕೀಸುಗಳೂ ಈ ರಸ್ತೆಯಲ್ಲಿದ್ದದ್ದೇ ಕಾರಣ.
ಈಗಂತೂ ಈ ರಸ್ತೆ ನಗರದ ಬೇರೆಲ್ಲಾ ರಸ್ತೆಗಳಿಗೆ ರಾಜನಂತಿದೆ. ಸಿಟಿ ಸೆಂಟರ್ ತೆರೆದ ನಂತರ ಇಲ್ಲಿನ ಗತ ವೈಭವ ಮತ್ತೆ ಮರಳಿದೆ. ಅದರ ಜೊತೆಗೆ ಹಲವು ಪ್ರತಿಷ್ಠಿತ ಶೋರೂಮ್‍ಗಳು ಈ ರಸ್ತೆಯುದ್ದಕ್ಕೂ ತೆರೆದುಕೊಂಡ ಮೇಲೆ ಇಲ್ಲಿನ ಜನಸಂದಣಿ, ವಾಹನಗಳ ಸಾಂದ್ರತೆ ಹೆಚ್ಚಿದೆ.
ಈ ರಸ್ತೆಯನ್ನೂ ಕಾಂಕ್ರಿಟೀಕರಣಗೊಳಿಸಿದೆ ಮಂಗಳೂರು ನಗರಪಾಲಿಕೆ. ಮನಪಾದ ಕೆಲಸ, ಕಾಮಗಾರಿಗಳೆಂದರೆ ಅಲ್ಲೊಂದು ಟ್ರೇಡ್‍ಮಾರ್ಕ್ ಇರಲೇಬೇಕು. ಅದೇನೆಂದರೆ, ಅದು ನಡೆಸುವ ಯಾವುದೇ ಕಾಮಗಾರಿ ಫಿನಿಶಿಂಗ್ ಹೊಂದಿರುವುದಿಲ್ಲ. ರಸ್ತೆಗಳಂತೂ ಎಲ್ಲೂ ಪರಿಪೂರ್ಣ ಕಾಮಗಾರಿಯಾಗಿರುವುದೇ ಇಲ್ಲ. ಕೆ.ಎಸ್. ರಾವ್ ರಸ್ತೆಗೇಕೆ ವಿನಾಯಿತಿ?! ಅಲ್ಲವೆ? ಹಾಗಾಗಿ ಇಲ್ಲೂ ಕೂಡ ಅದರ ಬಹಳಷ್ಟು ಸ್ಯಾಂಪಲ್‍ಗಳಿವೆ. ಕೆಲವನ್ನು ಇಲ್ಲಿ ನೋಡಿ.
ಕಳೆದ ಹಲವಾರು ತಿಂಗಳುಗಳಿಂದ ಸಿಟಿ ಸೆಂಟರ್ ಮುಂದೆ ವಿಚಿತ್ರವಾದ ಪರಿಸ್ಥಿತಿಯೊಂದು ಉದ್ಭವವಾಗಿದೆ. ಇಂದಿಗೂ ಅದು ಹಾಗೇ ಇದೆ. ಬಿಶಪ್ ಹೌಸ್ ಕಡೆಯಿಂದ ಬರುತ್ತಾ, ಸಿಟಿ ಸೆಂಟರ್ ಬಳಸಿ ಬಾವುಟ ಗುಡ್ಡೆಗೆ ಹೋಗುವ ರಸ್ತೆ ಜೋಡಣೆಯಾಗುವಲ್ಲಿ ನಡೆಸಿದ ಚರಂಡಿ ಕಾಮಗಾರಿಗೆ ಲಕ್ವಾ ಬಡಿದಿದೆ! ಮಳೆ ಬಂದರಂತೂ ಇಲ್ಲಿ ಕೊಚ್ಚೆ ನೀರು ಹುಚ್ಚೆದ್ದು ಕುಣಿದು ರಸ್ತೆಗೆ ಉಮ್ಮಳಿಸುತ್ತದೆ. ನಡೆದುಕೊಂಡು ಹೋಗುವುದು ಬಿಡಿ, ದೊಡ್ಡ ವಾಹನಗಳಿಗೂ ಇಲ್ಲಿ ಸಾಗುವುದು ಕಠಿಣವಾಗಿ ಬಿಡುತ್ತದೆ.
ಸಿಟಿ ಸೆಂಟರ್ ಎದುರು ಹುಚ್ಚೆದ್ದು ಕುಣಿಯುವ ಚರಂಡಿ
ಇಂತಹ ಪ್ರತಿಷ್ಠಿತ, ಶ್ರೀಮಂತ, ನೂರಾರು ಕೋಟಿ ರೂಪಾಯಿ ಸುರಿದು ನಿರ್ಮಿಸಿದ ಸಿಟಿ ಸೆಂಟರ್‍ನಂತಹ ಮಾಲ್‍ಗಳ ಹೆಬ್ಬಾಗಿಲಿನಲ್ಲೇ ಇಂತಹ ಸ್ಥಿತಿಯಿದೆಯೆಂದರೆ, ಇನ್ನು ಬಡವರ, ಸಾಮಾನ್ಯರ ಮನೆ, ಕಟ್ಟಡದ ಮುಂದೆ ಹೇಗಿರಬಹುದು? ನಗರಪಾಲಿಕೆ ಬಿಡಿ, ಅದರ ಹಣೆಬರಹ ಅಷ್ಟೇ. ದಿನಂಪ್ರತಿ ಸಾವಿರಾರು ಗ್ರಾಹಕರನ್ನು ಸೆಳೆಯುವ ಈ ಮಾಲ್‍ನವರಿಗಾದರೂ ಒಂಚೂರು ಬೇಸರವೆಂಬುದೇ ಇಲ್ಲವೇ? ಈ ಪರಿಸ್ಥಿತಿಯನ್ನು ಯಾಕೆ ಹೀಗೆಯೇ ಬಿಟ್ಟಿದ್ದಾರೆಂಬುದೇ ಅರ್ಥವಾಗುತ್ತಿಲ್ಲ.
ಇದಕ್ಕೆಲ್ಲಾ ಕಳಶವಿಟ್ಟಂತೆ ಇಲ್ಲೊಂದು ವಿಚಿತ್ರವಿದೆ. ಚಿತ್ರದಲ್ಲಿ ಕಾಣುವಂತೆ, ಕಳೆದ ಹಲವು ತಿಂಗಳುಗಳಿಂದ ಇದು ಹೀಗೆಯೇ ಇದೆ. ಸಾವಿರಾರು ವಾಹನಗಳು, ಜನರು ಓಡಾಡುವ ದಾರಿಯಲ್ಲಿ ಕಿಂಚಿತ್ತೂ ಬದಲಾವಣೆ, ಸುಧಾರಣೆ ಕಾಣದ ಈ ಸ್ಥಿತಿಯನ್ನು ನೋಡಿದರೆ ಮಂಗಳೂರಿನಲ್ಲಿ ಯಾರಿಗೆಂದರೆ ಯಾರಿಗೂ ಕಿಂಚಿತ್ತೂ ಭಾವನೆ, ಆಲೋಚನೆಗಳೇ ಇಲ್ಲವೇ ಎಂಬ ಸಂಶಯ ಮೂಡುತ್ತದೆ.
ಬಹುಶ ಇಲ್ಲಿ ಅಮೂಲ್ಯ ನಿಧಿಯನ್ನು ಹೂತಿಡಲಾಗಿದೆಯೆ?
ಸಿಸಿ ಟಿವಿ ಹೊಂದಿರುವ ಅಂಗಡಿ, ಶೋರೂಮ್‍ಗಳಿಗೂ ಕಳ್ಳರು ನಿರ್ಭೀತಿಯಿಂದ ನುಗ್ಗಿ ದರೋಡೆ, ಕಳ್ಳತನ ಮಾಡುವ ಕಾಲವಿದು. ಹಾಗಾದರೆ ಅಮೂಲ್ಯ ವಸ್ತು, ಸಂಪತ್ತು, ನಿಧಿಯನ್ನು ಎಲ್ಲಿ ಬಚ್ಚಿಡುವುದು? ಹಿಂದಿನ ಕಾಲದಲ್ಲಿ ನೆಲದಲ್ಲಿ, ದೇವಸ್ಥಾನ, ಕಟ್ಟಡಗಳ ಅಡಿಯಲ್ಲಿ ನಾಣ್ಯ, ಚಿನ್ನವನ್ನೆಲ್ಲಾ ಬಚ್ಚಿಡುತ್ತಿದ್ದರಲ್ಲವೆ, ಅದರ ನೆನಪಾಗಿ ಬಹುಶ ಮಂಗಳೂರು ನಗರಪಾಲಿಕೆಯವರೋ ಅಥವಾ ಸಿಟಿ ಸೆಂಟರ್ ಮಾಲ್‍ನವರೋ ಅದೇ ಐಡಿಯಾವನ್ನು ಬಳಸಿ ಇದರಡಿಗೆ ಅತ್ಯಮೂಲ್ಯ ನಿಧಿಯಲ್ಲಿ ಬಚ್ಚಿಟ್ಟಿದ್ದಾರೇನೋ!
ನೀವು ಎಷ್ಟೇ ಭದ್ರ ಕಟ್ಟಡವನ್ನು ಕಟ್ಟಿದರೂ ಕಳ್ಳತನದಿಂದ ಪೂರ್ತಿ ಬಚಾವ್ ಎನ್ನಲಾಗದ ದಿನಗಳಿವಲ್ಲವೆ? ಇಲ್ಲಿ, ಚಿತ್ರದಲ್ಲಿ ಕಾಣುವಂತೆ, ಮುಕ್ತವಾದ ಸ್ಥಳದಲ್ಲಿ ಹೀಗೆ ಕೇರ್‍ಲೆಸ್ ಆಗಿ ಏನನ್ನಾದರೂ ಇಟ್ಟು ಹೋದರೆ ಚಿಂತೆಯೇ ಇಲ್ಲ! ಯಾರಿಗೂ ಸಂಶಯವಿಲ್ಲ. ಗುರುತಿಗಾಗಿ ಕೆಲವು ವಸ್ತುಗಳನ್ನಿಟ್ಟರಾಯಿತು. ಮಂಗಳೂರಿನ ನಾಗರಿಕರು ಎಂಥವರೆಂದರೆ ರಸ್ತೆಯ ಮೇಲೆ ಯಾರಾದರೂ ಬಂಡೆಯನ್ನಿಟ್ಟು ಹೋದರೆ ಎಲ್ಲರೂ ಶಪಿಸುವವರೇ ಹೊರತು ಅದನ್ನು ತೆಗೆಯಬೇಕೆಂಬ ಯೋಚನೆಯೇ ಅವರಿಗೆ ಮೂಡುವುದಿಲ್ಲ. ಅದೇ ಲಾಜಿಕ್ ಇಲ್ಲಿ ಬಳಸಿರಬಹುದು. ನಿಧಿಯೂ ಸುರಕ್ಷಿತ, ಅದನ್ನು ಕಾಪಾಡಲು ಖರ್ಚೇ ಇಲ್ಲ! ಹೇಗಿದೆ ಐಡಿಯಾ?!
ಇನ್ನು, ಸಿಟಿ ಸೆಂಟರ್‍ನ ಆಸುಪಾಸಿನಲ್ಲಿ ಈ ರಸ್ತೆಯ ಸ್ಥಿತಿ ಹೇಗಿದೆಯೆಂದು ನೋಡಿದರೆ ಆಘಾತವಾಗುತ್ತದೆ. ಸಾವಿರಾರು ವೀಕ್ಷಕರು ಸಿನೆಮಾ ನೋಡಲು ಬರುವ ಜೋಡಿ ಟಾಕೀಸುಗಳು ಇಲ್ಲಿವೆ. ಅದರ ಅಕ್ಕ ಪಕ್ಕದಲ್ಲಿ, ಮತ್ತಷ್ಟು ಮುಂದೆ ಚಲಿಸಿದಾಗ ಕಾಣುವ ರಸ್ತೆಯ ನೋಟ ಹೇಗಿದೆ ನೋಡಿ ಇಲ್ಲಿನ ಚಿತ್ರಗಳಲ್ಲಿ. ವಾಹನಗಳೇನೋ ರಸ್ತೆಯಲ್ಲಿ ಮುನ್ನುಗ್ಗಿ ಹೋಗುತ್ತವೆ. ನಡೆದಾಡುವ ಜನರಂತೂ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು, ಪರಮೇಶ್ವರರನ್ನು ಮನದಲ್ಲಿ ಪ್ರಾರ್ಥಿಸುತ್ತಾ ಕ್ಷಣ ಕ್ಷಣಕ್ಕೂ ಭೀತಿಯಿಂದ ಮುನ್ನಡೆಯಬೇಕು. ಹಾಗಿದೆ ರಸ್ತೆಯ ಅಂಚು. ಚೂರು ಹೆಚ್ಚು ಕಮ್ಮಿಯಾದರೂ ಸೇರುವುದು ವೈಕುಂಠಕ್ಕೇ!
ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನೆದುರು ಬಲಿಗಾಗಿ ಕಾಯುತ್ತಿದೆ ವಿದ್ಯುತ್ ಕಂಬ
ಸಹಕಾರ ಕ್ಷೇತ್ರದ ಹಿರಿಯ, ಮುಂಚೂಣಿ ಬ್ಯಾಂಕ್ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮುಖ್ಯ ಕಚೇರಿ ಇದೇ ರಸ್ತೆಯಲ್ಲಿದೆ. ಇದರ ಹೊಚ್ಚ ಹೊಸ ಕಟ್ಟಡವೊಂದು ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿದೆ. ನಗರಕ್ಕೆ ಅಂದ ಕೊಡುವ ಈ ನಳನಳಿಸುವ ಕಟ್ಟಡದ ಮುಂದುಗಡೆಯೇ ಇರುವ ವಿದ್ಯುತ್ ಕಂಬವೊಂದು ಇಂದೋ ನಾಳೆಯೋ ಮುರಿದು ಬೀಳುವ ಹಂತದಲ್ಲಿದೆ. ಇಲ್ಲಿ ತೆಗೆದ ಚಿತ್ರ ಮೂರು ತಿಂಗಳ ಹಿಂದಿನದು. ಇಂದಿಗೂ ಆ ಕಂಬ ಅದೇ ಪರಿಸ್ಥಿತಿಯಲ್ಲಿದೆ.
ಯೌವುದೋ ಘನ ವಾಹನವೊಂದು ಡಿಕ್ಕಿ ಹೊಡೆದು ಕಂಬಕ್ಕೆ ಹಾನಿಯಾಗಿದೆ. ಬಹುತೇಕ ಮುರಿದು ಹೋಗಿರುವ ಈ ಕಂಬ ಹೀಗೇ ಬಿಟ್ಟರೆ ಇಂದಲ್ಲ ನಾಳೆ ಯಾರನ್ನಾದರೂ ಬಲಿ ತೆಗೆದುಕೊಳ್ಳುವುದು ನಿಶ್ಚಿತ. ಇಲ್ಲಿನ ರಸ್ತೆಯಲ್ಲಿ ಸಾವಿರಾರು ವಾಹನಗಳಷ್ಟೇ ಅಲ್ಲದೆ, ಹತ್ತಿರದ ಶಾಲೆ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ವಿದ್ಯುತ್ ಇಲಾಖೆ ಮತ್ತು ಬ್ಯಾಂಕಿನವರು ಈಗಲೇ ಎಚ್ಚೆತ್ತುಕೊಂಡು ಈ ಕಂಬವನ್ನು ಬದಲಾಯಿಸಿ, ಸಂಭಾವ್ಯ ಅಪಾಯ, ಅಪಘಾತವನ್ನು ತಪ್ಪಿಸಿಕೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ವೈಕುಂಠ ಸಮಾರಾಧನೆಗೆ ಈ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಿಕೊಳ್ಳಬೇಕಾದೀತು.
ವರದಿ, ವಿಶ್ಲೇಷಣೆ, ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ – ಬುಡ್ಕುಲೊ
(ಭಾಗ – 6ರಲ್ಲಿ ಮುಂದುವರಿಯಲಿದೆ)
ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com
ಭಾಗ – 1: ಸ್ವಚ್ಛ ಮಂಗಳೂರು ಓಕೆ; ವಿಕೃತ ಮಂಗಳೂರು ಏಕೆ?
ಭಾಗ – 2: ಬುದ್ಧಿವಂತರ ರಾಜಧಾನಿ; ಎಡವಟ್ಟು ರಸ್ತೆಗಳ ಪುಣ್ಯಕ್ಷೇತ್ರ
ಭಾಗ – 3: ಸ್ಮಾರ್ಟ್ ಮಂಗಳೂರು: ಮೃಗೀಯ ರಸ್ತೆಗಳ ತವರೂರು
ಭಾಗ – 4: ಸ್ಮಾರ್ಟ್ ಮಂಗಳೂರಿನಲ್ಲಿವೆ ಯಮಲೋಕದ ಹೆಬ್ಬಾಗಿಲುಗಳು!