Latest News

ಸ್ಮಾರ್ಟ್ ಮಂಗಳೂರಿನಲ್ಲಿವೆ ಯಮಲೋಕದ ಹೆಬ್ಬಾಗಿಲುಗಳು!

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : December 2, 2015 at 12:56 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಸಾಲ ತಂದ ನೂರಾರು ಕೋಟಿ ರೂಪಾಯಿಗಳಿಂದ ನಿರ್ಮಿಸಲಾದ ಮಂಗಳೂರಿನ ಕಾಂಕ್ರೀಟ್ ರಸ್ತೆಗಳ ನೈಜ ಸ್ಥಿತಿ ಹೇಗಿದೆಯೆಂಬುದನ್ನು ಈ ಹಿಂದಿನ ಲೇಖನಗಳ ಜೊತೆಗಿನ ಚಿತ್ರಗಳನ್ನು ನೋಡಿ ನಿಮಗೆ ತಿಳಿದಿದೆಯಲ್ಲಾ? ಅಬ್ಬಾ, ಎಷ್ಟೊಂದು ಭಯಾನಕ ರಸ್ತೆಗಳೆಂದು ನೀವು ಹುಬ್ಬೇರಿಸಿರಲೂಬಹುದು.

Budkulo_Mangaluru Roads_04_T1ಆದರೆ, ವಾಸ್ತವವೇನೆಂದರೆ ನೀವು ಮಂಗಳೂರಿನ ಈ ಕಾಂಕ್ರೀಟ್ ರಸ್ತೆಗಳಲ್ಲಿ ಒಂದು ಸುತ್ತು ಹೋಗಿ ಬಂದರೆ ಹೋದಲ್ಲೆಲ್ಲಾ ಮತ್ತು ಕಂಡಲ್ಲೆಲ್ಲಾ ಇವೇ ಅವಾಂತರಗಳೂ. ಎಲ್ಲಾ ಕಡೆಯೂ ಅಷ್ಟೇ. ಎಲ್ಲೋ ಅಲ್ಲೊಂದು ಇಲ್ಲೊಂದು ಕಡೆ ಬಿಟ್ಟರೆ ಎಲ್ಲಿಯೂ ಫುಟ್‍ಪಾತ್ ಇಲ್ಲ, ಚರಂಡಿ ವ್ಯವಸ್ಥೆಯಿಲ್ಲ. ಫಿನಿಶಿಂಗ್ ಕೆಲಸವೆಂಬುದೇ ಕಾಣುವುದಿಲ್ಲ. ಪಾದ ಒಂದು ಇಂಚು ಆಯ ತಪ್ಪಿ ಬಿದ್ದರೆ ಮತ್ತೆ ನೀವು ಕಣ್ಣು ಬಿಡುವುದು ಯಮಲೋಕದಲ್ಲಿಯೇ! ಅಂತಹ ಅದ್ಭುತ ಮರಣ ಗುಂಡಿಗಳನ್ನು ನಿರ್ಮಿಸಿ ಕೊಟ್ಟಿದೆ ಮಂಗಳೂರಿನ ನಗರಪಾಲಿಕೆ!

ಬಹು ದುಬಾರಿಯಾದ ಈ ರಸ್ತೆಗಳು ಇಷ್ಟೊಂದು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣವಾಗಿದ್ದನ್ನು ನೋಡುವಾಗ ಕೋಪ ಕೆರಳುತ್ತದೆ. ಆದರೆ ಏನು ಮಾಡುವುದು, ಮಂಗಳೂರಿನ ಬುದ್ಧಿವಂತ ನಾಗರಿಕರು ತಾವುಂಟು, ತಮ್ಮದುಂಟು ಎನ್ನುವ ಮನಸ್ಥಿತಿಯವರು. ರಸ್ತೆ ಹೇಗೇ ಇರಲಿ, ಯಾರಿಗೇನೇ ಆಗಲಿ ತಾನು ಸುರಕ್ಷಿತನಿದ್ದರೆ ಸಾಕೆಂಬ ಮನೋಭಾವ! ಅದಕ್ಕೇ ಹೀಗೆ.

ಬಹುಶ ನಮ್ಮ ದೇಶದಲ್ಲಿಯೇ ಅತ್ಯಂತ ದುಬಾರಿ ವೆಚ್ಚದಿಂದ ನಿರ್ಮಿಸಲಾದ ಈ ರಸ್ತೆಗಳು ಜನರ ಜೀವಕ್ಕೂ ಅಷ್ಟೇ ದುಬಾರಿಯೆನಿಸಿವೆ. ಅತ್ಯಂತ ಅಪಾಯಕಾರಿ ಕಾಮಗಾರಿ ಈ ರಸ್ತೆಗಳದ್ದು.

ಮಂಗಳೂರಿನ, ಅಂದರೆ ಕರಾವಳಿಯ ಜನರು ಪ್ರಪಂಚದ ಎಲ್ಲೆಡೆ ವಾಸಿಸುತ್ತಿದ್ದಾರೆ. ಇಲ್ಲಿಟಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಕೂಡ ಬಹಳಷ್ಟು ಉತ್ತಮವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರು ಅಭಿವೃದ್ಧಿಗೊಂಡ ರಾಷ್ಟ್ರಗಳಿಗೆ ಸಮ! ಇಲ್ಲಿಗೆ ಅಷ್ಟೊಂದು ದುಡ್ಡು ಹರಿದು ಬರುತ್ತದೆ, ಇಲ್ಲಿಯೂ ಉತ್ಪತ್ತಿಯಾಗುತ್ತದೆ.

Budkulo_Mangaluru Roads n Brands_01 (11)

ಮಂಗಳೂರು, ಬಹಳಷ್ಟು ಬ್ರಾಂಡ್‍ಗಳ ತವರೂರು. ಬ್ಯಾಂಕ್‍ಗಳ ತೊಟ್ಟಿಲು. ಬಹಳಷ್ಟು ದೊಡ್ಡ ದೊಡ್ಡ ಉದ್ದಿಮೆಗಳು, ಸಂಸ್ಥೆಗಳು ಇಲ್ಲಿ ಹುಟ್ಟಿ ದೇಶದಾದ್ಯಂತ ಬೆಳೆದಿವೆ. ಸಮುದ್ರ ಸಂಪರ್ಕ, ರೈಲ್ವೇ ಮತ್ತು ವಾಯು ಸಂಪರ್ಕ ಇರುವ ಅಪರೂಪದ ನಗರವಿದು. ಇಲ್ಲಿನ ನಾಗರೀಕತೆಯೂ ಹಿಂದಿನಿಂದಲೂ ಸಾಕಷ್ಟು ಮುಂದುವರಿದಿತ್ತು. ಹಾಗಾಗಿ ಮಂಗಳೂರು ಅಭಿವೃದ್ಧಿ ಕಂಡಿದೆ, ಪ್ರಗತಿ ಹೊಂದಿದೆ.

ಆದರೆ, ಹೇಳಲು ತುಂಬಾ ಮುಜುಗರವಾಗುವ ಮತ್ತು ನಾಚಿಕೆ ಪಡಬೇಕಾದ ವಿಷಯವೆಂದರೆ ಇಲ್ಲಿನ ರಸ್ತೆಗಳದ್ದು. ಇನ್ನೂ ಶೈಶವಾವಸ್ಥೆಯಿಂದ ಮೇಲೆ ಬಂದಿಲ್ಲ. ದುಡ್ಡಿಗೇನೂ ಕೊರತೆ ಇಲ್ಲ. ಕೋಟ್ಯಾಂತರ ರೂಪಾಯಿ ಹಣ ಬಂದು ಇಲ್ಲಿನ ರಸ್ತೆಗಳಲ್ಲಿ ಹರಿದು ಹೋಗಿದೆ. ಆದರೆ ರಸ್ತೆಗಳ ಆರೋಗ್ಯ ಮಾತ್ರ ಸುಧಾರಣೆಯಾಗಿಲ್ಲ. ಕೇವಲ ಕಾಂಕ್ರೀಟ್ ಸುರಿದು ಬಿಟ್ಟರೆ ಅದನ್ನು ಸುಧಾರಣೆಯೆನ್ನಲಾದೀತೆ? ಅದೂ ಹತ್ತು ಪಟ್ಟು ಹೆಚ್ಚು ವೆಚ್ಚ ಮಾಡಿ?

ಎರಡು ತಿಂಗಳ ಹಿಂದೆ ಮಂಗಳೂರಿನ ರಸ್ತೆಗಳ ದುರವಸ್ತೆಯ ವಾಸ್ತವ ಚಿತ್ರಣ, ಸಮಗ್ರ ದರ್ಶನವನ್ನು ನಿಮಗೆ ಕೊಡಲಾಗಿತ್ತು. ಅದರ ಭಾಗವಾಗಿ, ಅಂದರೆ ಬೇರೆ ಬೇರೆ ವಿಚಾರ, ಕೋನಗಳ ಕುರಿತಾಗಿ ಮತ್ತಷ್ಟು ಸರಣಿ ಲೇಖನಗಳನ್ನು ಪ್ರಕಟಿಸುವವರಿದ್ದೆವು. ಆದರೆ, ಇಷ್ಟೊಂದು ಘನ ಘೋರ ಸ್ಥಿತಿಯಲ್ಲಿರುವ ರಸ್ತೆಗಳ ಚಿತ್ರವನ್ನು ಎಷ್ಟೊಂದು ಪ್ರಕಟಿಸುವುದು, ನಮ್ಮ ನಗರದ ಬಗ್ಗೆ ನಾವೇ ನಕಾರಾತ್ಮಕ ವರದಿ ಮಾಡುತ್ತಿದ್ದೇವಲ್ಲಾ ಎಂದ ಗೊಂದಲ, ಹಿಂಜರಿಕೆ ನಮಗುಂಟಾಯಿತು. ಇಲ್ಲಿನ ಜನರಿಗೆ ಕಿಂಚಿತ್ತೂ ಬೇಸರ, ಆಡಳಿತ ನಡೆಸುವವರಿಗೆ ಯಾವುದೇ ಪಶ್ಚಾತ್ತಾಪವಿಲ್ಲದಿರುವಾಗ ಎಷ್ಟೊಂದು ಸಲ ವರದಿ ಮಾಡಿ ಏನು ಪ್ರಯೋಜನವೆಂಬ ನಿರಾಶೆ ಸಹ ನಮಗಾಗಿತ್ತು. ಹಾಗಾಗಿ ತೆಗೆದ ಮತ್ತಷ್ಟು ಚಿತ್ರಗಳನ್ನು ಪ್ರಕಟಿಸಲಿಲ್ಲ.

Budkulo_Mangaluru Roads n Brands_01 (12)Budkulo_Mangaluru Roads n Brands_01 (10)

ಆದರೆ ಇದೀಗ ರಸ್ತೆಗಳ ಪರಿಸ್ಥಿತಿ ಮತ್ತಷ್ಟು ಹಾನಿಗೊಳಗಾಗಿದೆ. ಕೆಲವು ಕಡೆ ಫುಟ್‍ಪಾತ್, ದುರಸ್ತಿ ಕಾಮಗಾರಿ ಕುಂಟುತ್ತಾ ನಡೆಯುತ್ತಿದೆ. ನಮ್ಮ ಪ್ರಶ್ನೆಯೇನೆಂದರೆ, ತಿಂಗಳುಗಟ್ಟಲೆ, ಆರು ತಿಂಗಳಿಂದ ವರ್ಷದ ತನಕ, ಪ್ರಮುಖ ರಸ್ತೆಗಳನ್ನು ಮುಚ್ಚಿ ಕಾಂಕ್ರಿಟೀಕರಣ ನಡೆಸಲಾಗುತ್ತದೆ. ವಿಪರ್ಯಾಸವೆಂದರೆ, ಸಂಚಾರಕ್ಕೆ ಮುಕ್ತಗೊಳಿಸಿದ ಅಂಥಾ ರಸ್ತೆಗಳು ಕಾಂಕ್ರೀಟ್‍ಗೊಳಿಸಲ್ಪಟ್ಟಿವೆಯೇ ಹೊರತು ಸುರಕ್ಷಿತವಾಗಿ ಮಾಡಿರುವುದೇ ಇಲ್ಲ. ಕೆಲ ತಿಂಗಳ ನಂತರ ಮತ್ತೆ ಕಾಮಗಾರಿ ನಡೆಸುವುದು, ಲಕ್ಷಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ರಸ್ತೆಗಳನ್ನು ಮತ್ತೆ ಕೊರೆದು, ಕತ್ತರಿಸಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದು ಇತ್ಯಾದಿ ನಡೆದೇ ಇರುತ್ತದೆ. ಹಾಗಾದರೆ ಇಷ್ಟು ದೊಡ್ಡ ಕಾಮಗಾರಿಗಳನ್ನು ಯಾಕೆ ಅಷ್ಟೊಂದು ಅವ್ಯವಸ್ಥಿತವಾಗಿ ನಡೆಸುತ್ತಾರೆ? ಅದಕ್ಯಾಕೆ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡೂ ಕೆಲಸ ಪೂರ್ತಿಯಾಗುವುದಿಲ್ಲ? ಯಾಕೀ ಅನಾಗರಿಕ ಯೋಜನೆಗಳು?

ನಾವೀಗ, ಮಂಗಳೂರಿನ ಕೆಲವು ಪ್ರಮುಖ ಬ್ರಾಂಡ್‍ಗಳೆಂದು ಕರೆಸಿಕೊಳ್ಳುವ ಸಂಸ್ಥೆಗಳ ಬಳಿ ತೆರಳುವ. ಮಂಗಳೂರಿಗೆ ಹೆಮ್ಮೆ ತಂದು ಕೊಟ್ಟ ಸಂಸ್ಥೆಗಳ ಮುಂದಿನ ರಸ್ತೆಗಳ ಪರಿಸ್ಥಿತಿ ಹೇಗಿದೆಯೆಂದು ನೋಡೋಣ. ಗಣ್ಯರು, ಪ್ರಮುಖರು ಇಲ್ಲಿಗೆಲ್ಲಾ ಭೇಟಿ ನೀಡುತ್ತಾರೆ, ಹಾಗಾಗಿ ಇಲ್ಲಿನ ರಸ್ತೆಗಳು ಅದ್ಭುತವಾಗಿ ನಳನಳಿಸುತ್ತಿವೆಯೆಂದು ನೀವು ಭಾವಿಸಿದ್ದರೆ, ಅದು ನಿಮ್ಮ ಭ್ರಮೆಯಷ್ಟೇ!

ಇಲ್ಲಿದೆ ನೋಡಿ ವಾಸ್ತವ!

ಕಾರ್ಪೋರೇಶನ್ ಬ್ಯಾಂಕ್ ಹೆಡ್ ಆಫೀಸ್ ಎದುರು ನರಕ ದರ್ಶನ

ಭಾರತದ ಬೃಹತ್ ಬ್ಯಾಂಕ್‍ಗಳಲ್ಲಿ ಒಂದಾದ ಕಾರ್ಪೋರೇಶನ್ ಬ್ಯಾಂಕಿನ ಮುಖ್ಯ ಕಚೇರಿ ಮಂಗಳೂರಿನಲ್ಲಿದೆ. ಪಾಂಡೇಶ್ವರದಲ್ಲಿರುವ ಈ ಕಚೇರಿಗೆ ವಿಐಪಿಗಳು, ಗಣ್ಯರು, ವಿದೇಶೀಯರು ಬಹಳ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ನಗರದ ಮುಖ್ಯ ಸ್ಥಳದಲ್ಲಿದೆ ಇದು. ಸನಿಹದಲ್ಲಿ ಜಿಲ್ಲಾಧಿಕಾರಿ ಕಚೇರಿ ಇದೆ. ಪೊಲೀಸ್ ಮುಖ್ಯ ಕಚೇರಿಯಿಂದ ಬಹುತೇಕ ಎಲ್ಲಾ ಇಲಾಖೆಗಳ ಕಚೇರಿಗಳು ಇದರ ಅಕ್ಕಪಕ್ಕದಲ್ಲಿವೆ. ಟೆಲಿಕಾಂ ಕಚೇರಿಗಳು (ದೂರವಾಣಿ, ಅಂಚೆ), ಪುರಾತನ ರೊಸಾರಿಯೋ ಚರ್ಚ್, ಬಂದರು ಇದರ ಒಂದು ಕಿ.ಮೀ. ಸರಹದ್ದಿನಲ್ಲಿವೆ. ಇದೀಗ ಇದರ ಮುಂದುಗಡೆಯೇ ಬೃಹತ್ ಶಾಪಿಂಗ್ ಮಾಲ್ ತಲೆ ಎತ್ತಿದೆ.

ಖ್ಯಾತಿಗೆ ತಕ್ಕಂತೆ ಘನವಾದ, ಹಿರಿದಾದ ಈ ಬ್ಯಾಂಕ್‍ನ ಮುಖ್ಯ ಕಚೇರಿಗೆ ಯಾರದರೂ ಬರುವವರಿದ್ದಾರೆ ಅವರನ್ನು ಸ್ವಾಗತಿಸುವುದು ಏನು ಗೊತ್ತಾ? ಉಸಿರು ಬಿಗಿ ಹಿಡಿಯಿರಿ!

ಗಬ್ಬೆದ್ದು ನಾರುವ ಗಾರ್ಬೇಜ್!

Budkulo_Mangaluru Roads n Brands_01 (1)

Budkulo_Mangaluru Roads n Brands_01 (14)

ಹೌದು. ಮೇಲಿನ ಚಿತ್ರದಲ್ಲಿ ಕಾಣುವುದು ಪ್ರತಿದಿನದ ನೋಟ. ಹೊಸಬರು, ಗಣ್ಯರು ಕಾರಿನಲ್ಲಿ ನಗರದ ಅಂದ ಹುಡುಕಲು ಹೊರಗಿಣುಕಿದರೆ, ಕಾಣುವುದು ಇದೇ. ಅಂಥಾ ಕಾರ್ಪೋರೇಶನ್ ಬ್ಯಾಂಕಿನ ಮುಖ್ಯ ಕಚೇರಿಯ ಮುಂದುಗಡೆಯೇ ಈ ರೀತಿಯಾದರೆ ಇನ್ನು ಬೇರೆಲ್ಲಾ ಹೇಗಿದ್ದೀತು? ಮಂಗಳೂರಿನ ನಗರಪಾಲಿಕೆ ಮತ್ತದರ ಜೊತೆಗೆ ಇಲ್ಲಿನ ಜನರು ಮತ್ತು ಈ ಬ್ಯಾಂಕಿನ ಜವಾಬ್ದಾರಿ ಹೇಗಿದೆಯೆಂಬುದರ ಟಿಪಿಕಲ್ ಸ್ಯಾಂಪಲ್ ಇದು.

ದೀಪದ ಕೆಳಗೆ ಕತ್ತಲು ಎಂದು ಇಂಥದಕ್ಕೇ ಅಲ್ಲವೇ ಹೇಳುವುದು?

ಅತ್ತಾವರ ಕೆಎಂಸಿ ಆಸ್ಪತ್ರೆ ಮುಂದಿದೆ ಯಮಲೋಕದ ರಹದಾರಿ!

ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಗೆ ದಿನನಿತ್ಯ ಸಾವಿರಾರು ಜನರು – ರೋಗಿ, ಉದ್ಯೋಗಿ, ಸಂಬಂಧಿಗಳು ಮತ್ತಿತರರು ಭೇಟಿ ನೀಡುತ್ತಿರುತ್ತಾರೆ. ಇದನ್ನು ಸಂಪರ್ಕಿಸುವ ಪ್ರಮುಖ ರಸ್ತೆ (ಹಂಪನಕಟ್ಟೆ – ನಂದಿಗುಡ್ಡ) ಕಾಂಕ್ರೀಟೀಕರಣಗೊಂಡಿದೆ. ಇದನ್ನೂ ನಗರಪಾಲಿಕೆಯೇ ನಿರ್ಮಿಸಿದ್ದು ತಾನೇ, ಹಾಗಾಗಿ ಅದರ ಬದಿಯಲ್ಲಿ ಅಲ್ಲಲ್ಲಿ ಬಗೆ ಬಗೆಯ ಮರಣಗುಂಡಿಗಳಿವೆ! ಹೋಗಲಿ ಆಸ್ಪತ್ರೆ ಬಳಿಯಲ್ಲೇನಾದರೂ ಪರಿಸ್ಥಿತಿ ಕ್ಷೇಮಕರವೆ? ಊಹೂಂ…! ಇಲ್ಲಿ ಮತ್ತಷ್ಟು ಭಯಾನಕವಾಗಿದೆ.

Budkulo_Mangaluru Roads n Brands_01 (3) Budkulo_Mangaluru Roads n Brands_01 (6) Budkulo_Mangaluru Roads n Brands_01 (5) Budkulo_Mangaluru Roads n Brands_01 (4) Budkulo_Mangaluru Roads n Brands_01 (7) Budkulo_Mangaluru Roads n Brands_01 (2)

ಚಿತ್ರ ನೋಡಿ ನಿಮಗೆ ಗೊತ್ತಾಗಿರಬೇಕಲ್ಲಾ? ಆಸ್ಪತ್ರೆ ಬಿಡಿ, ಇಲ್ಲೊಂದು ಪೋಸ್ಟ್ ಬಾಕ್ಸ್ ಇದೆಯಲ್ಲಾ, ಇದಕ್ಕೇನಾದರೂ ಗಿರಾಕಿಗಳು ಬಂದರೆ ಅವರ ಗತಿ ಚಿಂತಾಜನಕವಾಗುವ ಸಂಭವವಿದೆ. ಪೆಟ್ಟಿಗೆಗೆ ಪತ್ರ ಹಾಕಿ ಹಿಂದುರುಗಿದರೆ ಅವರು ಶೀದಾ ಆಸ್ಪತ್ರೆಯಲ್ಲಿ ಭರ್ತಿಯಾಗಬೇಕು. ಎಷ್ಟು ಚಂದ ಅಲ್ಲವೆ?

ಹೋಟೆಲ್ ಮೋತಿಮಹಲ್ ಮುಂದೆ ಪ್ರಪಾತ ವೈಭವ!

ಹಂಪನಕಟ್ಟೆಯಿಂದ ಫಳ್ನೀರ್ ಕಡೆಗಿನ ರಸ್ತೆ ಮಂಗಳೂರಿನ ಮತ್ತೊಂದು ಪ್ರಮುಖ ರಸ್ತೆ. ಇಲ್ಲಿಯೂ ಕೋಟಿಗಟ್ಟಲೆ ಹಣ ವೆಚ್ಚ ಮಾಡಿ, ತಿಂಗಳುಗಟ್ಟಲೆ ಬಂದ್ ಮಾಡಿ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ರಸ್ತೆ ಸುಂದರವಾಗಿದೆಯೆಂದು ನೀವೇನಾದರೂ ಆಕ್ಸಿಲರೇಟರನ್ನು ಅದುಮಿದರೆ ನಿಮ್ಮ ವಾಹನವೇ ಕಾಣೆಯಾಗಿ ಬಿಡುವ ಅದ್ಭುತ ಸನ್ನಿವೇಶಗಳು ಈ ರಸ್ತೆಯಲ್ಲಿವೆ! ಪಾದಚಾರಿಗಳಂತೂ ಈ ರಸ್ತೆಯಲ್ಲಿ ನಡೆದಾಡುವುದಕ್ಕಿಂತ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೇ ಲಾಯಕ್ಕು. ಹಾಗಿದೆ ಇದರ ಅಂಚುಗಳು. ಅಂಥಾ ರೋಚಕ ರಸ್ತೆಯಿದು!

Budkulo_Mangaluru Roads n Brands_01 (13) Budkulo_Mangaluru Roads n Brands_01 (9) Budkulo_Mangaluru Roads n Brands_01 (8)

ಚಿತ್ರದಲ್ಲಿ ಕಾಣುವಂತೆ, ಮೋತಿಮಹಲ್ ಹೋಟೆಲಿನ ವಿರುದ್ಧಕ್ಕಿರುವ ರಸ್ತೆಯ ಅಂಚು ನೋಡಿ. ಅತ್ಯಂತ ಸುರಕ್ಷಿತವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಗಳಿಗೆ ಗೋಣಿಚೀಲಗಳ ರಕ್ಷಣಾ ಕೋಟೆಯನ್ನು ಕಟ್ಟಲಾಗಿದೆ! ಆಹಾ! ನಮ್ಮ ಮಂಗಳೂರಿನ ನಗರಪಾಲಿಕೆಗೆ ಎಂತೆಂಥಾ ಪ್ರಶಸ್ತಿಗಳನ್ನು ಕೊಡಬೇಕಲ್ವಾ?!

ರಕ್ತ ಪರೀಕ್ಷೆಗೆ ಬಂದರೆ ಸೊಂಟ ಮುರಿತ ಉಚಿತ!

Budkulo_Mangaluru Roads n Brands_01

ಮೋತಿಮಹಲ್ ಹೋಟೆಲಿನ್ ಸನಿಹದಲ್ಲಿಯೇ, ಅಂದರೆ ಈ ಗೋಣಿಚೀಲಗಳಿಂದ ಸಂರಕ್ಷಿಸಲ್ಪಟ್ಟ ರಸ್ತೆಯ ಹತ್ತಿರ ನಗರದ ಪ್ರಮುಖ ಲ್ಯಾಬ್ ಒಂದಿದೆ. ಇಲ್ಲಿಗೂ ಪ್ರತಿದಿನ ನೂರಾರು ಜನರು ಬೆಳ್ಳಂಬೆಳಗ್ಗೆಯಿಂದಲೇ ತಮ್ಮ, ತಮ್ಮವರ ಆರೋಗ್ಯ ಪರೀಕ್ಷೆಗೆಂದು ಬರುತ್ತಾರೆ. ಬೇರೆ ಕಡೆಯಂತೆ ಇಲ್ಲೇನೂ ಜಾಗದ ಅಡಚಣೆಯಿಲ್ಲ. ಕಟ್ಟಡ ಮತ್ತು ರಸ್ತೆಯ ನಡುವೆ ಸ್ಥಳಾವಕಾಶವಿದ್ದು ವ್ಯವಸ್ಥಿತವಾಗಿ ಫುಟ್‍ಪಾತ್ ನಿರ್ಮಿಸಬಹುದು. ಆದರೆ ಇಲ್ಲೇನಾಗಿದೆ ನೋಡಿ. ಯಾರಿಗೂ ಬೇಸರವಿಲ್ಲ, ಪಶ್ಚಾತ್ತಾಪವಿಲ್ಲ. ಆರೋಗ್ಯ ಪರೀಕ್ಷೆಗೆಂದು ಬರುವ ಜನರು, ಅದರಲ್ಲೂ ವಯಸ್ಸಾದವರು ಇಲ್ಲಿ ಲ್ಯಾಬ್ ಸೇರುವ ಬದಲು ಕಾಲು ಜಾರಿ ಬಿದ್ದರೆ ಸೊಂಟ ಮುರಿದು ಸೀದಾ ಆಸ್ಪತ್ರೆಗೆ ಆಂಬುಲೆನ್ಸ್‍ನಲ್ಲಿ ಹೋಗಬೇಕಾದೀತು. ಅತ್ಯಂತ ನಾಗರಿಕ, ಸುಶಿಕ್ಷಿತ ಜನರಿರುವ ನಗರದಲ್ಲಿ ಇಂತಹ ಪರಿಸ್ಥಿತಿ. ಇದು ಮಂಗಳೂರಿನಲ್ಲಿ ಮಾತ್ರ ದೊರಕುವ ಸೌಲಭ್ಯ. ಅನ್ಯತ್ರ ಅಲಭ್ಯ!

ವರದಿ, ವಿಶ್ಲೇಷಣೆ, ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ – ಬುಡ್ಕುಲೊ

(ಭಾಗ – 5ರಲ್ಲಿ ಮುಂದುವರಿಯಲಿದೆ)

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

ಭಾಗ – 1: ಸ್ವಚ್ಛ ಮಂಗಳೂರು ಓಕೆ; ವಿಕೃತ ಮಂಗಳೂರು ಏಕೆ?
ಭಾಗ – 2: ಬುದ್ಧಿವಂತರ ರಾಜಧಾನಿ; ಎಡವಟ್ಟು ರಸ್ತೆಗಳ ಪುಣ್ಯಕ್ಷೇತ್ರ
ಭಾಗ – 3: ಸ್ಮಾರ್ಟ್ ಮಂಗಳೂರು: ಮೃಗೀಯ ರಸ್ತೆಗಳ ತವರೂರು

Leave a comment

Your email address will not be published. Required fields are marked *

Latest News