Latest News

ಎಂಎಲ್‍ಎಗಳನ್ನೇ ಕದ್ದು, ಸರಕಾರವನ್ನೇ ಹೈಜಾಕ್ ಮಾಡಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿಯವರೇ, ನೀವೇನು ಸುಬಗರೇ?!?

ಡೊನಾಲ್ಡ್ ಪಿರೇರಾ

Posted on : November 21, 2023 at 12:46 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು – Budkulo.com

ವಿದ್ಯುತ್ ‘ಕದ್ದು’ ಸಿಕ್ಕಿ ಬಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ವಿರೋಧಿಗಳಿಂದ ‘ಕರೆಂಟ್ ಕಳ್ಳ’ ಎಂಬ ಬಿರುದನ್ನು ಪಡೆದು ಕುಖ್ಯಾತಿಗೆ ಈಡಾಗಿದ್ದಾರೆ! ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಆರು ತಿಂಗಳು ಸಂದರೂ ಇನ್ನೂ ಸೋತ ದುಃಖದಲ್ಲಿರುವವರಲ್ಲಿ ಕುಮಾರಸ್ವಾಮಿಯೇ ಮೊದಲಿಗರು. ಏನೇನೋ ಕನಸು ಕಟ್ಟಿ, ಅಪಾರ ಭರವಸೆ ಇಟ್ಟುಕೊಂಡಿದ್ದ ಅವರಿಗೆ ತೀರಾ ನಿರಾಶೆಯಾಗಿದ್ದು ಮಾತ್ರವಲ್ಲ ಎಲ್ಲ ಅಪೇಕ್ಷೆ, ನಿರೀಕ್ಷೆಗಳೂ ಭಗ್ನಗೊಂಡಿದ್ದರಿಂದ ಸಂಪೂರ್ಣವಾಗಿ ಭ್ರಮನಿರಸನಗೊಂಡಿದ್ದು ಅವರಿಗಿನ್ನೂ ಕಾಡುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ತನ್ನ ಪ್ರಾಥಮಿಕ ವಿರೋಧಿಗಳು ಅಧಿಕಾರ ಪಡೆದು ರಾರಾಜಿಸುತ್ತಿರುವುದನ್ನು ಅರಗಿಸುವ ಸಾಮರ್ಥ್ಯವಿಲ್ಲದೆ ಅವರು ಮತ್ತಷ್ಟು ಕಂಗೆಟ್ಟಿದ್ದಾರೆ.

ಪ್ರತಿದಿನವೆಂಬಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸರಕಾರ ಮತ್ತು ಕಾಂಗ್ರೆಸ್ ಮುಖಂಡರ ವಿರುದ್ಧ ಸಿಡಿದೇಳುತ್ತಿದ್ದಾರೆ. ಮೊದಲಿಗೆ ಅವರ ಕೋಪ ಸಚಿವ ಚಲುವರಾಯಸ್ವಾಮಿ ಮೇಲೆ ಭುಗಿಲೆದ್ದಿತ್ತು. ಫಲಿತಾಂಶ ಬಂದು ಆರು ತಿಂಗಳಾದರೂ ಕುಮಾರಸ್ವಾಮಿ ವಾಸ್ತವಕ್ಕೆ ಬಂದಂತಿಲ್ಲ. ಅವರ ಆಕ್ರೋಶ, ಹತಾಶೆ ಇನ್ನೂ ಶಮನಗೊಂಡಿಲ್ಲ.

ಅಷ್ಟಕ್ಕೂ ಇತರರತ್ತ ಸದಾ ಆರೋಪ ಹೊರಿಸುತ್ತಾ ಬೆರಳು ತೋರಿಸುವ ಈ ಕುಮಾರಸ್ವಾಮಿ ಏನು ಸುಬಗರೇ? ಸಾಕ್ಷಾತ್ ಸತ್ಯ ಹರಿಶ್ಚಂದ್ರರೇ?

ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರೆಂಬ ಹೆಗ್ಗಳಿಕೆ ಪಡೆದುಕೊಂಡಿರುವ ಕುಮಾರಸ್ವಾಮಿ ‘ಹೇಗೆ’ ಆ ಹುದ್ದೆಗೇರಿದ್ದರು ಎಂಬುದನ್ನು ನೆನಪಿಸಬೇಕಿದೆ. ಸದ್ಯ ‘ವಿದ್ಯುತ್ ಕಳ್ಳ’ ಎಂದು ಲೇವಡಿಗೊಳಗಾಗಿರುವ ಇವರು ಎಂಎಲ್‍ಎಗಳನ್ನೂ ‘ಕದ್ದಿದ್ದರು’ ಮಾತ್ರವಲ್ಲ ಸರಕಾರವನ್ನೇ ‘ಅಪಹರಿಸಿದ್ದರು’ ಎಂಬುದನ್ನು ಮರೆಯಲಾದೀತೇ?

2004ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಆಗ ಬಿಜೆಪಿ ‘ಜಾತ್ಯತೀತ’ ಪಕ್ಷಗಳಿಗೆ ‘ಅಸ್ಪೃಶ್ಯ’ವಾಗಿದ್ದರಿಂದ, ಮತ್ತು ಮುಖ್ಯವಾಗಿ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರ ಪತನಗೊಂಡು ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೇರಿದ್ದರಿಂದ 79 ಸ್ಥಾನ ಗಳಿಸಿದ ಬಿಜೆಪಿ ಏಕಾಂಗಿಯಾಗಬೇಕಾಯಿತು. 65 ಸ್ಥಾನ ಗಳಿಸಿದ ಕಾಂಗ್ರೆಸ್ ಮತ್ತು 58 ಸ್ಥಾನ ಗಳಿಸಿದ ಜೆಡಿಎಸ್ ಹಲವು ದಿನಗಳ ಹಗ್ಗ ಜಗ್ಗಾಟ ನಡೆಸಿ ಸಮ್ಮಿಶ್ರ ಸರಕಾರ ಪ್ರಾರಂಭಿಸಿದ್ದವು. ಹಾಗೆ ಕಾಂಗ್ರೆಸ್ಸಿನ ಧರ್ಮಸಿಂಗ್ ಮುಖ್ಯಮಂತ್ರಿ ಮತ್ತು ಜೆಡಿಎಸ್‍ನಿಂದ ಸಿದ್ಧರಾಮಯ್ಯನವರು ಉಪ ಮುಖ್ಯಮಂತ್ರಿ ಆದರು. ಅದೇ ಸಂದರ್ಭ ಕುಮಾರಸ್ವಾಮಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು (ಅದಕ್ಕೂ ಹಿಂದೊಮ್ಮೆ ಅವರು ಲೋಕಸಭಾ ಸದಸ್ಯರಾಗಿದ್ದರು. ನಂತರ ಮೂರು ಚುನಾವಣೆಗಳಲ್ಲಿ ಸೋತಿದ್ದರು). ಹಾಗೆ ಜೆಡಿಎಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ನೇತೃತ್ವದ ಸರಕಾರ ಪತನಗೊಳಿಸಿದ್ದು ಇದೇ ಕುಮಾರಸ್ವಾಮಿ.

ಮೊದಲು ಸಿದ್ಧರಾಮಯ್ಯನವರನ್ನು ಅಧಿಕಾರದಿಂದ ಇಳಿಸಿ ನಂತರ ಪಕ್ಷದಿಂದ ಹೊರಗೋಡಿಸಲಾಯಿತು. ಅಷ್ಟಕ್ಕೆ ತೃಪ್ತರಾಗದ ಕುಮಾರಸ್ವಾಮಿ ಹಲವು ಅತೃಪ್ತರನ್ನು ಒಂದುಗೂಡಿಸಿ ಇಡೀ ಸರಕಾರವನ್ನೇ ಹೈಜಾಕ್ ಮಾಡಿದರು. ಅವರಿಗೆ ಸಾಥ್ ನೀಡಿದ್ದು ಬಿಜೆಪಿಯ ಯಡಿಯೂರಪ್ಪ, ಅಧಿಕಾರದ ಹಪಾಹಪಿಯಿಂದ. ಹೀಗೆ ಜೆಡಿಎಸ್ ಶಾಸಕರನ್ನು ಪಕ್ಷದ ನಿಲುವಿಗೆ ವಿರುದ್ಧವಾಗಿ ತನ್ನ ಜೊತೆ ‘ಸೆಳೆದುಕೊಂಡು’ ಅಧಿಕೃತ ಸರಕಾರ ಬೀಳಿಸಿ ನಂತರ ಬಿಜೆಪಿ ಜೊತೆಗೂಡಿ ತಾನೇ ಮುಖ್ಯಮಂತ್ರಿಯಾದರು. ಪಕ್ಷಕ್ಕೆ ‘ವಿರುದ್ಧವಾಗಿ’ ನಡೆದುಕೊಂಡರೆಂದು ‘ಆರೋಪಿಸಿ’ ಸ್ವತಃ ಅವರ ತಂದೆ ದೇವೇಗೌಡರು ಕುಮಾರಸ್ವಾಮಿಯನ್ನು ಪಕ್ಷದಿಂದ ‘ಹೊರ ಹಾಕುವ’ ಘೋಷಣೆಯನ್ನೂ ಮೊಳಗಿಸಿದ್ದರು (ಅದು ಕೇವಲ ನಾಟಕವಾಗಿತ್ತೆನ್ನುವುದನ್ನು ಬಹಳ ಜನ ಅರಿತಿದ್ದರು).

ಹಾಗೆ ಎಂಎಲ್‍ಎಗಳನ್ನು ‘ಕಳ್ಳತನ’ ಮಾಡಿ, ಕುತಂತ್ರದಿಂದ ತಾನೇ ಅಧಿಕಾರ ಪಡೆದುಕೊಂಡು ಪರ್ಯಾಯ ಸರಕಾರ ರಚಿಸಿಕೊಂಡ ಕುಮಾರಸ್ವಾಮಿ ಆಮೇಲೆ ಮನ ಬಂದಂತೆ ನಡೆದುಕೊಂಡರು. ಕೊನೆಗೆ ಕೊಟ್ಟ ಮಾತನ್ನು ಧಿಕ್ಕರಿಸಿ ಬಿಜೆಪಿ/ಯಡಿಯೂರಪ್ಪನವರಿಗೆ ವಿಶ್ವಾಸದ್ರೋಹ ಮಾಡಿ ಅಧಿಕಾರ ವಂಚಿಸಿದರು. ‘ವಚನಭೃಷ್ಟ’ ಎಂಬ ಬಿರುದು ಗಳಿಸಿದರು. ಆ ಮೂಲಕ ಬಿಜೆಪಿಯನ್ನು ರಾಜ್ಯದಲ್ಲಿ ಬೇರೂರುವಂತೆ ಮಾಡಿದ್ದೇ ಕುಮಾರಸ್ವಾಮಿ ಮತ್ತು ದೇವೇಗೌಡ.

ಹಾಗೆ ಧರ್ಮಸಿಂಗ್ ಅವರಿಗೂ ಯಡಿಯೂರಪ್ಪನವರಿಗೂ ಮೋಸ ಮಾಡಿ ಅಧಿಕಾರ ವಂಚಿಸಿದ ಖ್ಯಾತಿ ಇದೇ ಕುಮಾರಸ್ವಾಮಿಯವರದ್ದಲ್ಲವೇ? ಉಪ ಮುಖ್ಯಮಂತ್ರಿ ಸ್ಥಾನದಿಂದ ಸಿದ್ಧರಾಮಯ್ಯನವರನ್ನು ಇಳಿಸಿದ್ದು ಯಾವ ಉದ್ದೇಶದಿಂದ? ತನ್ನ ಸ್ವಾರ್ಥಕ್ಕಾಗುವಾಗ ನಿರ್ಭಿಡೆಯಿಂದ ಎಲ್ಲವನ್ನೂ ಗಳಿಸಿ, ಇತರರಿಗೆ ಅನ್ಯಾಯ ಮಾಡುವಾಗ ಎಲ್ಲವನ್ನೂ ಮರೆಯುವುದು ಪ್ರಾಮಾಣಿಕ ರಾಜಕಾರಣವೇ ಕುಮಾರಸ್ವಾಮಿಯವರೇ? ನಿಮ್ಮಲ್ಲಿ ಕನಿಷ್ಠ ನೈತಿಕತೆ ಎಂಬುದಾದರೂ ಇದೆಯೇ?

ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಮಾಡಿದ ದ್ರೋಹವನ್ನೇ ಪ್ರಚಾರಕ್ಕೆ ಬಳಸಿ ಬಿಜೆಪಿಗೆ 110 ಸ್ಥಾನಗಳು ದೊರೆತು ಯಡಿಯೂರಪ್ಪ ಮುಖ್ಯಮಂತ್ರಿಯಾದರು (ಪೂರ್ಣ ಬಹುಮತ ದೊರಕದಿದ್ದರೂ ಪಕ್ಷೇತರರ ಬೆಂಬಲ ಪಡೆದು). ಆಮೇಲೆ ಗಣಿಧಣಿಗಳ ಭ್ರಷ್ಟ ಹಣ ಬಳಸಿ ಶಾಸಕರನ್ನೇ ‘ಖರೀದಿಸಿ’ ಬಿಜೆಪಿ ಬಹುಮತ ಪಡೆದುಕೊಂಡಿದ್ದು ಕರ್ನಾಟಕದ ಚರಿತ್ರೆಯಲ್ಲೇ ಅತ್ಯಂತ ಹೇಯ ಬೆಳವಣಿಗೆ. ಐದು ವರ್ಷ ಮೂರು ಮುಖ್ಯಮಂತ್ರಿಗಳನ್ನು ನೀಡಿ 2013ರಲ್ಲಿ ಬಿಜೆಪಿ ಹೀನಾಯವಾಗಿ ಸೋತು, ಕಾಂಗ್ರೆಸ್ ನಿಚ್ಚಳ ಬಹುಮತ ಪಡೆದು ಮತ್ತೆ ಅಧಿಕಾರಕ್ಕೇರಿತು.

ಹಾಗೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆದರು. ಅದು ಬಹುಶಃ ದೇವೇಗೌಡ ಮತ್ತವರ ಕುಟುಂಬ ಎಂದೆಂದೂ ಬಯಸದ ಬೆಳವಣಿಗೆಯಾಗಿತ್ತು. ಜೆಡಿಎಸ್‍ನಲ್ಲಿ ಎರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ದೇವೇಗೌಡರು ವಂಚಿಸಿದ್ದರೆಂದು ಸಿದ್ಧರಾಮಯ್ಯನವರು ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಪಕ್ಷದಿಂದಲೇ ಕಿತ್ತು ಹಾಕಿದಾಗ ಕಾಂಗ್ರೆಸ್ ಸೇರಿದ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿಯೇ ಬಿಟ್ಟರು. ಐದು ವರ್ಷ ಸೊಗಸಾಗಿ ಅಧಿಕಾರ ನಡೆಸಿದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲುಂಟಾಯಿತು. ಕೇಂದ್ರದಲ್ಲಿ ಮೋದಿ ಸರಕಾರ ಬಲಿಷ್ಠವಾಗಿತ್ತು. ಬಿಜೆಪಿಗೆ 104 ಸ್ಥಾನಗಳೂ, ಕಾಂಗ್ರೆಸ್‍ಗೆ 80 ಮತ್ತು ಜೆಡಿಎಸ್‍ಗೆ 37 ಸ್ಥಾನಗಳೂ ಒಲಿದಿದ್ದವು. ಮತ್ತೊಮ್ಮೆ ಜೆಡಿಎಸ್ ಕಿಂಗ್‍ಮೇಕರ್ ಆಗುವುದರಲ್ಲಿತ್ತು. ಆದರೆ ಯಾರೂ ಊಹಿಸದ ರೀತಿ, ಕೇವಲ ಬಿಜೆಪಿಗೆ ಅಧಿಕಾರ ಸಿಗಬಾರದೆಂಬ ಏಕೈಕ ಕಾರಣದಿಂದ, ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿಯನ್ನೇ ಮುಖ್ಯಮಂತ್ರಿ ಮಾಡಲು ಮುಂದಾಯಿತು. ಅನಾಯಾಸವಾಗಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅದು ಬಯಸದೇ ಬಂದ ಭಾಗ್ಯವಾಗಿತ್ತು. ದೇಶಾದ್ಯಂತ ನಿರಂತರ ಸೋಲಿನಿಂದ ಕಳೆಗುಂದಿದ್ದ ಕಾಂಗ್ರೆಸ್‍ಗೆ ಬಿಜೆಪಿಯನ್ನು ದೂರ ಇಡುವುದು ಮಹತ್ತರ ಉದ್ದೇಶವಾಗಿತ್ತು. ಹಾಗಾಗಿಯೇ ಕಡುವೈರಿ ಸಿದ್ಧರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರು ಸಂತೋಷದಿಂದಲೇ ಜೆಡಿಎಸ್ ಜೊತೆ ಸೇರಿದರು. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಒಪ್ಪಿ, ಅಪ್ಪಿಕೊಂಡರು!

ಹೀಗೆ ಎರಡು ಬಾರಿ ‘ಸಾಂದರ್ಭಿಕ ಶಿಶು’ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಸ್ವಂತ ಬಲದಿಂದಲೂ ಅಲ್ಲ, ಸಾಧನೆಯಿಂದಲೂ ಅಲ್ಲ. ಮೊದಲ ಬಾರಿ ಕುತಂತ್ರ ನಡೆಸಿ, ಹಿಂಬಾಗಿಲ ಮೂಲಕ ಮೂಲಕವೇ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಸ್ವಾರ್ಥವೇ ತನ್ನ ಉಸಿರು, ಅಧಿಕಾರವೇ ತನ್ನ ಗುರಿಯೆಂಬುದನ್ನು ಆಗಲೇ ಸಾಬೀತುಪಡಿಸಿದ್ದರು. ದ್ವಿತೀಯ ಬಾರಿಯೂ ಅವರು ಬಿಜೆಪಿ ಜೊತೆಯೇ ಹೋಗುವ ಸಾಧ್ಯತೆಗಳಿದ್ದವು. ಆದರೆ ಸೋನಿಯಾ ಗಾಂಧಿ ವಿವೇಚನೆಯಿಲ್ಲದೆ ಮತ್ತು ಅನಿವಾರ್ಯವೆಂಬಂತೆ ದೇವೇಗೌಡರನ್ನು ಒಲಿಸಿಕೊಂಡು ಕುಮಾರಸ್ವಾಮಿಯನ್ನು ಅವಸರದಿಂದ ಮುಖ್ಯಮಂತ್ರಿ ಮಾಡಿದ್ದೇ ಹೊರತು ಅದರಲ್ಲಿ ಕುಮಾರಸ್ವಾಮಿಯ ಯೋಗ್ಯತೆ ಕಿಂಚಿತ್ತೂ ಇರಲಿಲ್ಲ. ಹಾಗೆ ಪರಮ ವಿರೋಧಿಯೆನಿಸಿಕೊಂಡಿದ್ದ, ಸ್ವತಃ ತಂದೆಯಿಂದಲೇ ಮಾರು ದೂರ ಇಟ್ಟುಕೊಂಡಿದ್ದ ಬಿಜೆಪಿ ಜೊತೆ ಸೇರಿ ಅಧಿಕಾರದ ಸುಖ ಅನುಭವಿಸಿದ್ದ ಕುಮಾರಸ್ವಾಮಿ ಕಾಂಗ್ರೆಸ್ ಜೊತೆಯೂ ಅಧಿಕಾರ ಅನುಭವಿಸಿದರು.

ಹಾಗಂತ ಒಂದು ಮೆಚ್ಚಬೇಕಾದ ಸಂಗತಿಯೆಂದರೆ ಕುಮಾರಸ್ವಾಮಿಯೇನೂ ಕದ್ದು ಮುಚ್ಚಿ ಹೀಗೆಲ್ಲ ಮಾಡಿದ್ದಲ್ಲ. ಎಲ್ಲವನ್ನು ನೇರವಾಗಿ, ಬಹಿರಂಗವಾಗಿಯೇ ಮಾಡಿದ್ದಾರೆ. ತನಗೆ ತತ್ವ, ಸಿದ್ಧಾಂತ, ಧೋರಣೆಯೆಂಬುದೆಲ್ಲಾ ನಗಣ್ಯ, ಅನಗತ್ಯವೆಂಬುದಾಗಿ ಅವರು ತಮ್ಮ ನಡೆ-ನುಡಿಗಳಿಂದ ರುಜುವಾತುಪಡಿಸುತ್ತಾ ಬಂದಿದ್ದಾರೆ. ಅನುಕೂಲಸಿಂಧು ರಾಜಕಾರಣವನ್ನೇ ಉಸಿರಾಗಿಸಿಕೊಂಡ ರಾಜಕಾರಣಿ ಅವರು.

ಆದರೆ ಬಿಜೆಪಿಯವರು ಮತ್ತೆ ಅನೈತಿಕವಾಗಿ ಸರಕಾರ ಸ್ಥಾಪಿಸಿದ್ದರಿಂದ, ಕುಮಾರಸ್ವಾಮಿ ಬಹು ಬೇಗನೇ, ಮತ್ತೊಮ್ಮೆ, ಅಧಿಕಾರ ಕಳೆದುಕೊಂಡರು. ಅಕ್ರಮವಾಗಿ ಬಹುಮತ ಸಾಧಿಸಿದ್ದರಿಂದ ಬಿಜೆಪಿಗೆ ಜೆಡಿಎಸ್‍ನ ಹಂಗು ಇರಲಿಲ್ಲ. ತನ್ನ ಪಕ್ಷವನ್ನು ‘ಜಾತ್ಯತೀತ’ ಪಕ್ಷವೆಂದೇ ತೋರ್ಪಡಿಸುತ್ತಾ ಅಗತ್ಯ ಬಂದಲ್ಲಿ ಬಿಜೆಪಿ ಜೊತೆ ಸೇರುವ ಹವಣಿಕೆ ಕುಮಾರಸ್ವಾಮಿಯಲ್ಲಿ ಯಾವಾಗಲೂ ಇತ್ತು. ಅದು ಎಲ್ಲರಿಗೂ ಗೊತ್ತಿದ್ದದ್ದೇ.

ಆದರೆ ಮೊನ್ನೆಯ ಅಸೆಂಬ್ಲಿ ಚುನಾವಣೆಯಲ್ಲಿ ಒದಗಿದ ಮರ್ಮಾಘಾತ ಕುಮಾರಸ್ವಾಮಿಯವರನ್ನು ಪೂರ್ಣವಾಗಿ ಕಂಗೆಡಿಸಿದೆ ಎಂಬುದು ಅವರ ನಿರಂತರ ನಡವಳಿಕೆಯಿಂದ ಸಾಬೀತಾಗುತ್ತಿದೆ. ಅವರಿಗೂ, ದೇವೇಗೌಡರಿಗೂ ಈ ಚುನಾವಣೆ ಹಲವು ರೀತಿಯ ಆಘಾತ ನೀಡಿದೆ. ನಿರಾಶೆಯಷ್ಟೇ ಅಲ್ಲದೆ ಕ್ರೋಧ, ಭ್ರಮನಿರಸನಕ್ಕೂ ಕಾರಣವಾಗಿದೆ. ತಮಗೆದುರಾದ ಸೋಲು ಎಷ್ಟು ಅಸಹನೀಯವೋ ಅದಕ್ಕಿಂತಲೂ ಹೆಚ್ಚು ತಮ್ಮ ವಿರೋಧಿಗಳಾದ, ಕಾಂಗ್ರೆಸ್ ಮುಖಂಡರಿಗೆ ಒದಗಿದ ಗೆಲುವು ಇದೆಯಲ್ಲಾ ಅದನ್ನವರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದ ಜೆಡಿಎಸ್ ವರಿಷ್ಠರು ರಾಜ್ಯದ ಮತದಾರರ ತೀರ್ಪಿನಿಂದ ಸಂಪೂರ್ಣವಾಗಿ ವಿಚಲಿತರಾಗಿದ್ದಾರೆ. ಅತ್ತ ಜಾತ್ಯತೀತ ನಿಲುವನ್ನೂ ಜನರು ನಂಬಲಿಲ್ಲ. ಇತ್ತ ಅಲ್ಪಸಂಖ್ಯಾತರ ಪರವೆಂಬ ಒಲವನ್ನೂ ಉಳಿಸಿಕೊಳ್ಳಲಾಗದೆ ಜೆಡಿಎಸ್ ತನ್ನ ಭದ್ರ ನೆಲೆಯಲ್ಲೇ ನೆಲಕಚ್ಚಿದೆ. ಕುಮಾರಸ್ವಾಮಿಯೇನೋ ಗೆದ್ದರು. ಆದರೆ ಅವರ ಮಗ ನಿಖಿಲ್‍ಗೊದಗಿದ ಹೀನಾಯ ಸೋಲು ದೇವೇಗೌಡರ ಕುಟುಂಬಕ್ಕೆ ದೊಡ್ಡ ಹಿನ್ನಡೆ ಮತ್ತು ಅವಮಾನ ಕೂಡ.

ಅಷ್ಟೇ ಆಗಿದ್ದರೆ ಏನೋ ಪರವಾಗಿಲ್ಲ ಎನ್ನಬಹುದಿತ್ತು. ಆದರೆ ತಮ್ಮ ಕಡುವೈರಿಗಳಾದ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಅದ್ಭುತವಾಗಿ ಗೆದ್ದು ವಿಜೃಂಭಿಸಿ ಮತ್ತೆ ಸರಕಾರದ ಚುಕ್ಕಾಣಿ ಹಿಡಿದದ್ದನ್ನು ಕಂಡು ಕುಮಾರಸ್ವಾಮಿಯಾಗಲೀ ದೇವೇಗೌಡರಾಗಲೀ ಕನಸು ಮನಸಿನಲ್ಲೂ ಅರಗಿಸಿಕೊಳ್ಳುವಂಥದ್ದಲ್ಲ. ಹಿಂದೆ ತಮ್ಮದೇ ಪಕ್ಷದಲ್ಲಿದ್ದ ಜಮೀರ್, ಚಲುವರಾಯಸ್ವಾಮಿ ಮುಂತಾದವರು ಸಚಿವರಾಗಿದ್ದು ಅವರ ಅಸಹನೆ ಹೆಚ್ಚಿಸಿತು. ಒಂದೆಡೆ ತಮಗಾದ ಹೀನಾಯ ಸೋಲು, ಒಟ್ಟಾರೆ ಹಿನ್ನಡೆ ಮತ್ತು ಆ ಪರಾಜಯದ ಬೆಂಕಿಗೆ ತುಪ್ಪ ಸುರಿಯುವಂತೆ ಸಿದ್ದು-ಡಿಕೆಶಿಯ ದಿಗ್ವಿಜಯ ಅವರನ್ನು ಸಂಪೂರ್ಣವಾಗಿ ಜಿಗುಪ್ಸೆಗೆ ದೂಡಿತು.

ಜನರಿಂದ ಪೂರ್ಣವಾಗಿ ತಿರಸ್ಕರಿಸಲ್ಪಟ್ಟು, ಇನ್ನು ಐದು ವರ್ಷ ಅಧಿಕಾರ ಇಲ್ಲವೆಂಬುದು ಖಂಡಿತವಾದಾಗ ಬೇರೇನೂ ದಾರಿ ಕಾಣದೆ ಜೆಡಿಎಸ್ ಪಕ್ಷವನ್ನು ಗೌಡರು ಬಿಜೆಪಿ ಜೊತೆಗೆ ‘ಅಧಿಕೃತವಾಗಿ’ ಹೊಂದಾಣಿಕೆ ಮಾಡುವ ಹೆಜ್ಜೆಯಿಟ್ಟಿದ್ದಾರೆ. ಹಿಂದೆ ಕದ್ದು ಮುಚ್ಚಿ ಒಂದಾಗಿ, ತೋರಿಕೆಗೆ ಅದನ್ನು ನಿರಾಕರಿಸುತ್ತಿದ್ದ, ಕಾಂಗ್ರೆಸ್ ಪಕ್ಷದ ಬೆಂಬಲದಿಂದಲೇ ಪ್ರಧಾನಿಯಾಗಿದ್ದ ದೇವೇಗೌಡರು, ಈಗ ಲಜ್ಜೆಯಿಲ್ಲದೆ ಬಿಜೆಪಿಯನ್ನು ಬರಸೆಳೆದಿದ್ದಾರೆ.

ಯಾವುದೇ ಪಕ್ಷಕ್ಕೆ ಬಹುಮತ ಬರದೇ ತಮ್ಮ ಪಕ್ಷಕ್ಕೆ 25ರಿಂದ 35 ಸ್ಥಾನ ಬಂದರೂ ಸಾಕು, ತಾವೇ ಕಿಂಗ್‍ಮೇಕರ್ ಆಗಿ, ಬಿಜೆಪಿ-ಕಾಂಗ್ರೆಸ್‍ಗಳೆರಡನ್ನೂ ಕುಣಿಸಿ, ಮುಂದಿನ ಐದು ವರ್ಷ ಸರಕಾರದಲ್ಲಿ ಹಿಡಿತ ಸಾಧಿಸುವ ಅಪೇಕ್ಷೆ, ನಿರೀಕ್ಷೆ ಹೊಂದಿ ಕನಸಿನ ಸೌಧ ಕಟ್ಟಿದ್ದ ಗೌಡರ ಫ್ಯಾಮಿಲಿಗೆ ಚುನಾವಣೆಯ ಫಲಿತಾಂಶದಿಂದ ಎಂಥಾ ಹೊಡೆತ ಬಿದ್ದಿತ್ತೆಂದರೆ ಅದನ್ನು ಜೀರ್ಣಿಸಲು ಈಗಲೂ ಅವರಿಗೆ ಆಗುತ್ತಿಲ್ಲವೆಂಬುದು ಅವರ ವರ್ತನೆಯಿಂದ ದಿನಂಪ್ರತಿ ಸಾಬೀತಾಗುತ್ತಿದೆ. ಪಂಚ ಗ್ಯಾರಂಟಿಗಳ ದೆಸೆಯಿಂದ ಕಾಂಗ್ರೆಸ್ ಪಕ್ಷ ಮತ್ತಷ್ಟು ಭದ್ರವಾಗುತ್ತಿರುವುದನ್ನು ಅರಿತುಕೊಂಡ ಜೆಡಿಎಸ್ ಧುರೀಣರು ಅಲ್ಪಸಂಖ್ಯಾತರ ಮತಗಳಿನ್ನು ಕೈಗೆಟುಕದ ದ್ರಾಕ್ಷಿ ಎಂಬರಿವಾಗಿ ಬಿಜೆಪಿ ಜೊತೆ ಸೇರಿ ಹಿಂದೂ ಮತ ಬ್ಯಾಂಕ್‍ನಿಂದಾದರೂ ಜೀವಕಳೆ ಗಳಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತುಪಡಿಸಿದರೆ ಮಾಸ್ ಲೀಡರ್ ಮತ್ತು ಪ್ರಭಾವಿ ನಾಯಕರೇ ಇಲ್ಲದಿರುವುದನ್ನು ಪರಿಗಣಿಸಿರುವ ಚಾಣಾಕ್ಷ ಗೌಡರು ಆ ಕೊರತೆಯನ್ನು ತಮ್ಮ ಮಗನಿಗೆ ಅವಕಾಶವಾಗಿ ಗಳಿಸಿಕೊಳ್ಳಲು ಬಿಜೆಪಿಯ ಜೊತೆ ಮೈತ್ರಿಯನ್ನು ಬಳಸಿಕೊಳ್ಳುವ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಬಹುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿಯಾದರೂ ಅಲ್ಪಸ್ವಲ್ಪ ಯಶಸ್ಸು ಪಡೆಯದಿದ್ದರೆ ತಮ್ಮ ಪಕ್ಷಕ್ಕೂ ಕುಟುಂಬಕ್ಕೂ ಅಸ್ತಿತ್ವವೇ ಇಲ್ಲದಾಗುವ ಆತಂಕದಿಂದ ಅವರು ಬಸವಳಿದಿದ್ದಾರೆನ್ನುವುದು ಸ್ಪಷ್ಟ.

ಈ ಹಿಂದೆ ಬಿಜೆಪಿ ಜೊತೆಗಿನ ತೆರೆಯ ಹಿಂದಿನ ಮೈತ್ರಿ ಮತ್ತು ಸಹಕಾರದಿಂದಾಗಿ ತಮ್ಮ ಜಾತ್ಯತೀತ ಇಮೇಜ್‍ಗೆ ಧಕ್ಕೆಯಾಗಿತ್ತೆಂಬಂತೆ ತೋರ್ಪಡಿಸಿ, ದೇಶದ ಜಾತ್ಯತೀತ (ಬಿಜೆಪಿ ವಿರೋಧಿ) ಪಕ್ಷಗಳ ನಾಯಕರ ಸ್ನೇಹ ಉಳಿಸಿಕೊಂಡಿದ್ದ ದೇವೇಗೌಡರು, ಇದೀಗ ಅವೆಲ್ಲವನ್ನು ಸಮುದ್ರಕ್ಕೆಸೆದು ತಮ್ಮ ಹಿತಾಸಕ್ತಿಗಾಗಿ ಬಹಿರಂಗವಾಗಿ ‘ಕೋಮುವಾದಿ’ ಬಿಜೆಪಿ ಜೊತೆ ಕೂಡಿಕೆ ಮಾಡಿಕೊಂಡಿದ್ದಾರೆ! ಅದರಿಂದ ಅವರ ಕುಟುಂಬವೂ ಪಕ್ಷವೂ ಏನನ್ನು ಗಳಿಸುತ್ತದೆ ಎಂಬುದನ್ನು ಕಾಲವೇ, ಅತೀ ಶೀಘ್ರದಲ್ಲಿ, ಉತ್ತರಿಸಲಿದೆ.

1 comment

  1. Rajakeeyakke ilidavaru hecchagina mandhi Ulai Pidhai aata aduvare. Thaanoo adaralli horalaadidaru awanu saanchnembanthe yitharara mele kesarannechuvavare jaasthe. Adhu awara hanebaraha. Yella dodda dodda thimigilagale.

Leave a comment

Your email address will not be published. Required fields are marked *

Latest News