ಅಕ್ಕಿಯೇ ಏಕೆ ಸಿಎಂ ಸಿದ್ಧರಾಮಯ್ಯನವರೇ, ರಾಗಿ, ಗೋಧಿ, ಜೋಳವನ್ನೂ ಕೊಡಿ
ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗಮನಕ್ಕೆ – ಜನರ ಪರವಾಗಿ ಬಹಿರಂಗ ಬೇಡಿಕೆ
ಚುನಾವಣೋತ್ಸವ ಎಂಬ ಅದ್ಭುತ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಮಹಾ ವಿಜಯ ಸಾಧಿಸಿದ ತರುವಾಯ ಮತ್ತೊಮ್ಮೆ ಸರಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಿಮಗೆ ಅಭಿನಂದನೆಗಳು. ಸಾಮಾನ್ಯ ಜನರು ನಿಮ್ಮನ್ನು ಬಡವರ ಭಾಗ್ಯ ದೇವತೆ ಎಂದೇ ಭಾವಿಸುತ್ತಾರೆ. ನಿಮ್ಮ ಹಲವು ಜನಪರ ಯೋಜನೆಗಳು ಅದಕ್ಕೆ ಕಾರಣ.
ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಇದೀಗ 10 ಕೆಜಿ ಅಕ್ಕಿಯ ಅನ್ನಭಾಗ್ಯ ಯೋಜನೆಗೆ ದಾರಿ ಸುಗಮಗೊಳಿಸಿದ್ದೀರಿ. ಆದರೆ 5 ಕೆಜಿ ಹೆಚ್ಚುವರಿ ಅಕ್ಕಿ ಸಕಾಲದಲ್ಲಿ ಹೊಂದಿಸಿಕೊಳ್ಳಲು ಆಗದ ಕಾರಣ ಅಕ್ಕಿಗೆ ಬದಲಾಗಿ ಕೆಜಿಗೆ ರೂ. 34ರಂತೆ ಓರ್ವ ವ್ಯಕ್ತಿಗೆ ತಿಂಗಳಿಗೆ ರೂ. 170 ಕೊಡುವ ನಿರ್ಧಾರಕ್ಕೆ ಬಂದಿದೆ ನಿಮ್ಮ ಸರಕಾರ. ಇದು ಯುಕ್ತವೂ ಸೂಕ್ತವೂ ಆಗಿದೆ. ಬೇಕಾದಷ್ಟು ಅಕ್ಕಿ ಸಂಗ್ರಹ ಆದ ಮೇಲೆ ಹಣದ ಬದಲು ಅಕ್ಕಿಯನ್ನೇ ಕೊಟ್ಟರಾಯಿತು.
ಆದರೆ ಎಷ್ಟು ಸಮಯ ಹೀಗೆ ಹಣವನ್ನು ಕೊಡುತ್ತೀರಿ? ಹಾಗೆ ನೋಡಿದರೆ ಹೊರಗಿನಿಂದ ಅಕ್ಕಿ ತರುವುದು ಸುಲಭದ ಮಾತಲ್ಲ, ನಿಜ. ರೂ. 34 ಕೆಜಿ ಅಕ್ಕಿಗೆ ಕೊಟ್ಟರೂ ಸಾಗಾಣಿಕೆ, ಪ್ಯಾಕೇಜಿಂಗ್, ದಾಸ್ತಾನು, ಸರಬರಾಜು ಮುಂತಾಗಿ ಇನ್ನೆಷ್ಟು ದುಡ್ಡು ಬೇಕಾಗುತ್ತದೋ ಅದು ನಿಮಗೆ ಚೆನ್ನಾಗಿ ಗೊತ್ತಿದೆ. ಆ ನಿಟ್ಟಿನಲ್ಲಿ ನೇರವಾಗಿ ಹಣವನ್ನೇ ಜನರಿಗೆ ಪಾವತಿಸುವುದು ಸರಕಾರದ ಬೊಕ್ಕಸಕ್ಕೆ ಲಾಭಕರವೇ ಎನ್ನಬಹುದು.
ಆದರೂ, ಹಣವನ್ನು ನೇರವಾಗಿ ಜನರ ಕೈಗೆ ಹೆಚ್ಚು ಸಮಯ ಕೊಡುವ ಬದಲು ಇತರ ಪ್ರಾಯೋಗಿಕ ಮಾರ್ಗೋಪಾಯಗಳತ್ತ ಗಮನ ಹರಿಸುವುದು ಒಳ್ಳೆಯದು. ಅದು ಅಗತ್ಯವೂ ವಿವೇಚನಾಯುಕ್ತವೂ ಆಗುತ್ತದೆ. ಯಾಕೆಂದರೆ ರಾಜ್ಯದಲ್ಲಿರುವ ಎಲ್ಲಾ ಜನರೂ ಕೇವಲ ಅಕ್ಕಿಯನ್ನಷ್ಟೇ ಆಹಾರಕ್ಕೆ ಬಳಸುವುದಿಲ್ಲವಲ್ಲ?
ನಿಮಗೆ ಗೊತ್ತೇ ಇದೆ, ನಿಮ್ಮ ಮೈಸೂರು ಕಡೆ ಹೆಚ್ಚಿನ ಜನರು ರಾಗಿ ಬಳಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಬೇಡಿಕೆ ಹೆಚ್ಚಿದೆ. ಅದೇ ರೀತಿ ಬಹಳ ಜನರು ಗೋಧಿಯನ್ನೂ ಬಳಸುತ್ತಾರೆ. ನಗರಗಳಲ್ಲಂತೂ ಎಲ್ಲಾ ವಿಧದ ಜನರು ವಾಸಿಸುತ್ತಾರೆ. ದಿನದ ಮೂರು ಹೊತ್ತು ತಿಂಡಿ, ಊಟ ಮುಂತಾಗಿ ಕೇವಲ ಅಕ್ಕಿಯ ಪದಾರ್ಥಗಳನ್ನಷ್ಟೇ ಎಲ್ಲಾ ಜನರು ಸೇವಿಸುವುದಿಲ್ಲ. ಹಾಗಿರುವಾಗ ಕೇವಲ ಅಕ್ಕಿಯನ್ನಷ್ಟೇ ಒದಗಿಸಬೇಕು, ಅದೂ ಅಕ್ಕಿ ಲಭ್ಯವಿಲ್ಲದ ಸಮಯದಲ್ಲಿ, ಎನ್ನುವ ತುರ್ತು ಅನಗತ್ಯವಲ್ಲವೇ?
ಈಗಂತೂ ಸಕ್ಕರೆ ಕಾಯಿಲೆ ಇಲ್ಲದ ವ್ಯಕ್ತಿ ಇರುವ ಕುಟುಂಬ ಅಪರೂಪ. ಬಹಳಷ್ಟು ಜನರು ಡಯಾಬಿಟಿಸ್ ಹೊಂದಿದ್ದಾರೆ. ಅಂತಹವರಿಗೆ ಅಕ್ಕಿ ಹೆಚ್ಚು ಬೇಕಾಗಿಲ್ಲ. ಅವರು ಪರ್ಯಾಯ ಆಹಾರ, ಅಂದರೆ ರಾಗಿ, ಗೋಧಿ, ಜೋಳ, ಧಾನ್ಯಗಳು ಮುಂತಾದವನ್ನು ಬಳಸುತ್ತಾರೆ. ಇಂತಹ ಜನರು ಸಾಧ್ಯವಾದಷ್ಟು ಮಟ್ಟಿಗೆ ಅಕ್ಕಿಯ ಉಪಯೋಗವನ್ನು ಕಡಿಮೆ ಮಾಡುತ್ತಿದ್ದಾರೆ. ಜನರಿಗೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಸಹಜ.
ಹೀಗಿರುವಾಗ ಸರಕಾರ 5 ಕೆಜಿ ಅಕ್ಕಿಯ ಜೊತೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನೇ, ಅಥವಾ ಹಣವನ್ನು, ಕೊಡುವುದರ ಬದಲಾಗಿ ಆಯಾ ಜನರಿಗೆ ಬೇಕಾದ ಇತರ ವಸ್ತುಗಳನ್ನು ಒದಗಿಸುವುದು ಸೂಕ್ತವಲ್ಲವೇ ಮುಖ್ಯಮಂತ್ರಿಯವರೇ? ಇದು ಕೇವಲ ಜನರಿಗೆ ಮಾತ್ರ ಅನುಕೂಲ ಮಾಡಿ ಕೊಡುವುದಿಲ್ಲ, ಬದಲಾಗಿ, ಆಯಾ ಬೆಳೆಗಳನ್ನು ಬೆಳೆಯುವವರಿಗೆ ಪ್ರೋತ್ಸಾಹದಾಯಕವೂ ಲಾಭಕರವೂ ಆಗುತ್ತದೆ. ಇತರ ಧವಸ ಧಾನ್ಯಗಳನ್ನೂ ಈ ಪಟ್ಟಿಗೆ ಸೇರ್ಪಡಿಸಬಹುದು. ಹಾಗೆ ಮಾಡುವುದರಿಂದ ರಾಜ್ಯದ ಬೆಳೆಗಾರರಿಗೂ ನೇರವಾಗಿ ಲಾಭ ದೊರಕಿಸಬಹುದು.
ರಾಜ್ಯದ ಒಟ್ಟಾರೆ ಅಭಿವೃದ್ಧಿಗೂ ಇದು ದೊಡ್ಡ ಕಾಣಿಕೆ ನೀಡುವಂತಾಗುತ್ತದೆ.
ಈ ನಿಟ್ಟಿನಲ್ಲಿ ತಮ್ಮ ಸರಕಾರ, ಸಂಬಂಧಿತ ಸಚಿವರು ಮತ್ತು ಅಧಿಕಾರಿಗಳು ಪರಾಮರ್ಶೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬಂದಲ್ಲಿ ಎಲ್ಲರಿಗೂ ಒಳಿತು ಮಾಡಿದಂತೆ ಆಗುತ್ತದೆ. ಅಲ್ಲದೆ ಅಕ್ಕಿಯ ಅಭಾವದ ಸಮಸ್ಯೆಯನ್ನು ಪರಿಹರಿಸಿದಂತೆಯೂ ಆಗುತ್ತದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದು ನೈಜ ಅರ್ಥದಲ್ಲಿ ಸಾಕಾರಗೊಳ್ಳುತ್ತದೆ. ‘ಸರ್ವೇ ಜನಃ ಸುಖಿನೋ ಭವಂತು’ ಎನ್ನುವುದನ್ನು ಜಾರಿಗೊಳಿಸಿದ ಸಾರ್ಥಕತೆ ನಿಮಗೂ ಕಾಂಗ್ರೆಸ್ ಸರ್ಕಾರಕ್ಕೂ ದೊರಕುತ್ತದೆ.
ನೂತನ ಸರಕಾರಕ್ಕೆ ಶುಭ ಕೋರುತ್ತಾ, ನಿಮ್ಮ ಸಿದ್ದು 2.0 ಸರಕಾರ ಕರ್ನಾಟಕವು ಒಳ್ಳೆಯ ಕಾರಣಗಳಿಗಾಗಿ ಸದಾ ಕಾಲ ನೆನಪಿನಲ್ಲಿಡುವಂತಹ ಕಾರ್ಯಗಳನ್ನು ಮಾಡಲಿ ಎಂದು ಆಶಿಸುತ್ತೇನೆ.
ಡೊನಾಲ್ಡ್ ಪಿರೇರಾ
ಸಂಪಾದಕ – ಬುಡ್ಕುಲೊ ಇ-ಪತ್ರಿಕೆ Budkulo.com
Send your Feedback to: budkuloepaper@gmail.com