Latest News

‘ದ್ರೋಹವೇ ನಮ್ಮ ಬಿಸಿನೆಸ್ಸು, ನದಿಯನು ಕೊಲ್ಲೋದೇ ನಮ್ ಪ್ರಾಜೆಕ್ಟು!’

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : October 15, 2015 at 3:56 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಹಾಸ್ಯ ನಾಟಕ; ವಿಡಂಬನಾತ್ಮಕ ಪ್ರಹಸನ

ರಹಸ್ಯ ಸಮಾಲೋಚನೆ

ಕಥೆ, ಚಿತ್ರಕಥೆ, ಸಂಭಾಷಣೆ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

(ಮುಖ್ಯ ಸೂಚನೆ: ಇದೊಂದು ಸಂಪೂರ್ಣ ಕಾಲ್ಪನಿಕ ನಾಟಕ. ಇದರಲ್ಲಿನ ಯಾವುದೇ ಪಾತ್ರ, ಹೆಸರು, ವಿಷಯ, ಸನ್ನಿವೇಶ ಮತ್ತು ಮಾತುಗಳು ಕೇವಲ ಕಾಲ್ಪನಿಕ ಮತ್ತು ಕಾಲ್ಪನಿಕವಷ್ಟೇ!)

Budkulo_Kannada Nataka_T2ಪೆಂಗಳೂರು ಅತ್ಯಾಧುನಿಕ ನಗರ, ಸ್ಮಾರ್ಟ್ ಸಿಟಿ. ಅದರ ಅಜ್ಞಾತ ಸ್ಥಳವೊಂದರ ವೈಭವಯುತ ಬಡಾವಣೆಯಲ್ಲಿನ ಒಂದು ಐಶಾರಾಮಿ ಅಪಾರ್ಟ್‍ಮೆಂಟ್‍ನೊಳಗೆ ಒಂದು ಕಪ್ಪು ಕಾರು ಪ್ರವೇಶಿಸುತ್ತದೆ. ಕಾರಿನೊಳಗೆ ಬುರ್ಖಾ ಹಾಕಿಕೊಂಡ ಇಬ್ಬರು; ಒಬ್ಬರು ಡ್ರೈವರ್ ಸೀಟಿನಲ್ಲಿ, ಮತ್ತೊಬ್ಬರು ಬದಿಯಲ್ಲಿ. ಯಾರಿಗೂ ಕಾಣದ ಸ್ಥಳವೊಂದರಲ್ಲಿ ಪಾರ್ಕ್ ಮಾಡಿ, ಕಾರಿನಿಂದಿಳಿದು ಒಬ್ಬರ ಹಿಂದೊಬ್ಬರು ಲಿಫ್ಟ್‌ನೊಳಗೆ ಸೇರಿ ನಾಲ್ಕನೇ ಮಹಡಿಗೆ ತಲುಪುತ್ತಾರೆ. ಅವರಿಬ್ಬರೂ ಶೀದಾ ಒಂದು ಫ್ಲ್ಯಾಟ್‍ನೊಳಗೆ ಸೇರುತ್ತಾರೆ.

ಅದರ ಸಂಖ್ಯೆ 420.

ಒಬ್ಬರು ಸ್ಮಾರ್ಟ್ ಕಾರ್ಡೊಂದನ್ನು ತುರುಕಿದಾಗ ಬೀಪ್ ಶಬ್ದದೊಂದಿಗೆ ಬಾಗಿಲು ತೆರೆಯುತ್ತದೆ. ಇಬ್ಬರೂ ಒಳಗೆ ಸೇರುತ್ತಾರೆ.

ಒಳ ಸೇರಿದಂತೆ ಬಾಗಿಲು ಧಡಲ್ಲೆಂದು ಮುಚ್ಚುತ್ತಿರಬೇಕಾದರೆ, ಮೈಮೇಲಿದ್ದ ಬುರ್ಖಾಗಳನ್ನು ಕಿತ್ತೆಸೆದ ಇಬ್ಬರೂ ಸಂಭ್ರಮದಿಂದ, ಆವೇಶದಿಂದ, ಉಕ್ಕೇರುವ ಉನ್ಮಾದದಿಂದ ಪರಸ್ಪರ ಬರಸೆಳೆದು, ತಬ್ಬಿಕೊಳ್ಳುತ್ತಾ ಹಾಡುತ್ತಾರೆ.

ನಾನೂ ನೀನೂ ಒಂದಾದ ಮೇಲೆ
ಇನ್ಯಾಕೆ ನಾಚಿಕೆ ಮಾನ ಮರ್ಯಾದೆ?
ಊರನ್ನು ಬಿಟ್ಟು, ಪಲಾಯನ ಮಾಡಿ
ನಾವಿಬ್ಬರೂ ಚುನಾವಣೆ ಗೆಲ್ಲಲಿಲ್ಲವೇ?

ಹಾಡು ಹೇಳುತ್ತಾ ಕುಪ್ಪಳಿಸುತ್ತಾ ನಲಿದು ದಣಿವಾದಾಗ ಕುಳಿತುಕೊಳ್ಳುತ್ತಾರೆ.

ಅವರಿಬ್ಬರೂ ಗಂಡಸರು. ಇಬ್ಬರಿಗೂ ಮೀಸೆ. ಕಿರಿಯನ 32 ಹಲ್ಲುಗಳೂ ಬಾಯಿಯಿಂದ ಹೊರಗೆ ವಿಜೃಂಭಿಸಿದ್ದವು. ಹಿರಿಯ ವ್ಯಕ್ತಿ ಮಾತ್ರ ಸ್ವಲ್ಪ ಬಗ್ಗಿ, ಬಾಗಿಕೊಂಡಿದ್ದರು.

ಅವರಿಬ್ಬರೂ ಮಾಜಿ ಮುಖ್ಯ ಕಂತ್ರಿಗಳು. ಹಿರಿಯನ ಹೆಸರು ಸುಳ್ಳಪ್ಪ ಪೋಯ್ ಲಿ ಯಾನೆ ಸಾಯಿ ತಿ ಅಲಿಯಾಸ್ ಕುಂಯ್ ಕ ಲೀ. ಕಿರಿಯನ ಹೆಸರು ಹಳ್ಳಾನಂದ ಯಾನೆ ಹಲ್ಲಾನಂದ ಅಲಿಯಾಸ್ ದ್ರೋಹಾನಂದ ದೌಡಾ.

(ಇಬ್ಬರೂ ಫ್ರಿಜ್ಜಿನಿಂದ ತೆಗೆದ ಬಾಟಲಿಗಳಿಂದ ನೀರು ಕುಡಿಯುತ್ತಾರೆ. ಹೊಳೆಯುತ್ತಿರುವ ಬಾಟಲಿಗಳಲ್ಲಿ ‘ನೆತ್ತರಾವತಿ’ ಕಂಪೆನಿಯ ಲೇಬಲ್‍ಗಳು ಮಿನುಗುತ್ತಿವೆ. ಗಟಗಟನೆ ನೀರು ಕುಡಿದು, ಸಾವರಿಸಿ ಮಾತಿಗಿಳಿಯುತ್ತಾರೆ).

(ಸಂಭಾಷಣೆ ಆರಂಭ. ಪರಸ್ಪರ ಎದುರು-ಬದುರು ಕುಳಿತಿರುತ್ತಾರೆ. ಜೂನಿಯರ್ ಒಮ್ಮೆ ಕೆಮ್ಮಿ, ಸ್ವರ ಸರಿಪಡಿಸಿಕೊಂಡು, ಸೀನಿಯನರ್‌ನತ್ತ ನೋಡುತ್ತಾ…)

ಹಳ್ಳಾನಂದ: ಎಂಚಿನ ಸಾರ್. ಜನ ಗಲಾಟೆ ಮಲ್ತೊಂದುಲ್ಲೆರ್‍ಗೆ!

ಸುಳ್ಳಪ್ಪ: ಏರ್, ಓಲ್?

ಹಳ್ಳಾನಂದ: ಊರ್‌ಡ್… ಮಾಂತಾ ಜಾಗಲೆಡ್!

ಸುಳ್ಳಪ್ಪ: ಮಲ್ತ್ಂಡಾ? ದಾನೆ ಇತ್ತೆ? ನಿಕ್ಕ್ ದಾಯೆಗ್ ಪೋಡಿಗೆ?

ಹಳ್ಳಾನಂದ: ಸಾರ್ ಎಂಕ್ಲೆನ ಊರುಗ್ ಪೋಯರ ಗೊತ್ತಿಜ್ಜಿ.

ಸುಳ್ಳಪ್ಪ: ಇಂದಂಬೆ….. ಸ್ವಲ್ಪ ಮುಚ್ಕೊಂಡು ಕೂತ್ಕೋ.

ಹಳ್ಳಾನಂದ: ಕಷ್ಟ ಸಾರ್. ತುಟಿ ನೋಯ್ತದೆ.

ಸುಳ್ಳಪ್ಪ: ಹಿ ಹಿ ಹಿ! (ಜೋರಾದ ನಗು). ಇಪ್ಪಡ್ ಇಪ್ಪಡ್. ನೋಡು ಜೂನಿಯರ್, ಹಾಗೆಲ್ಲಾ ಹೆದರಿದ್ರೆ ನಾವು ಮುಂದುವರಿಯಲಿಕ್ಕೆ ಆಗುತ್ತಾ?
ಯಾರು ಏನೇ ಹೇಳಲಿ, ನಾವು ಕೇರ್ ಮಾಡಬಾರದು.

ಹಳ್ಳಾನಂದ: ಹಾಗೆ ನನಗೂ ಭಯ ಇಜ್ಜಿ ಸಾರ್. ಮುಂದೆ ಏನಾದ್ರೂ ತಾಪತ್ರೆ ಆಗಬಹುದಾ….?

ಸುಳ್ಳಪ್ಪ: ರಾಜಕೀಯ ಅಂದ್ರೆ ತಮಾಷೆನಾ? ಇದ್ರಲ್ಲಿ ಸೇರಿದ ಮೇಲೆ ದ್ರೋಹ, ವಂಚನೆ, ಮೋಸ, ಧಗಾ ಎಲ್ಲಾ ಅಟೊಮ್ಯಾಟಿಕ್ ಆಗಿ ಕರಗತ ಆಗಿ ಬಿಡುತ್ತೆ. ನಾನು ನೋಡು, ನನಗೆ ಕೆಲಸ ಕೊಟ್ಟ ಆ ಜನ್ನಪ್ಪಣ್ಣನಿಗೇ ದ್ರೋಹ ಮಾಡಿಲ್ವಾ? ಅವ ಅಲ್ಲಿ ವದರುತ್ತಾ ಇರುತ್ತಾನೆ. ನಾನು ಅವನ ಬಾಯಿಗೆ ಕೋಲು ಹಾಕಿದ್ರೆ ಆತ ಡೋಲು ಬಜಾಯಿಸುತ್ತಾನೆ. ಅದೆಲ್ಲಾ ಇದ್ದದ್ದೇ. ಆತ ಸೋತು ಸೋತೇ ಸುಣ್ಣವಾಗಿದ್ದಾನೆ. ನಾನು ಗೆದ್ದು ಬೀಗುತ್ತಿದ್ದೇನೆ. ನಿಂಗೆಲ್ಲಾ ಗೊತ್ತಲ್ಲಾ! ಇನ್ಯಾಕೆ ಚಿಂತೆ ಮಾರಾಯ?

ಹಳ್ಳಾನಂದ: ಹೆ ಹೆ ಹೆ! (ವಿಕಟ ನಗು). ಅದರಲ್ಲಿ ಮಾತ್ರ ನಿಮಗಿಂತ ನಾನೇ ಚಾಂಪಿಯನ್ ಸಾರ್. ದಾಲಾ ಪಣ್ಲೆ. ಆ ಚಡ್ಡಿಯೂರಪ್ಪನನ್ನು ನಾನು ದ್ರೋಹ ಮಾಡಿದಂತೆ ಇನ್ಯಾರಾದರೂ ಈ ಪ್ರಪಂಚದಲ್ಲಿ ಮಾಡ್ಲಿಕ್ಕುಂಟೊ? ಆತ ನನ್ನನ್ನು ದೇವರ ಎದುರು ಆಣೆ ತೆಗೆದುಕೊಂಡು ನಂಬಿ ಬಿಟ್ಟ. ಕುರ್ಚಿಯನ್ನು ನಾನು ಬಿಡಲೇ ಇಲ್ಲ.

ಸುಳ್ಳಪ್ಪ: ಅದು ಮಾತ್ರ ಹೌದು ಮಾರಾಯಾ, ಗ್ರೇಟ್ ನೀನು. ತ್ರಿಬಲ್ ಧಮಾಕಾ ನಿನ್ನದು.

ಹಳ್ಳಾನಂದ: ಎಂಚ ಪಣ್ಪರ್ ಸಾರ್?

ಸುಳ್ಳಪ್ಪ: ತೂಲಾ, ಒಂದು ಕಡೆ ನೀನು ಅವನಿಗೆ ಸಖತ್ತಾಗಿ ಒದೆ ಕೊಟ್ಟು ನೂಕಿ ಹಾಕಿದೆ. ಆತ ಹಳ್ಳದಿಂದ ಏಳುವ ಹಾಗಿಲ್ಲ….!

ಹಳ್ಳಾನಂದ: ಮತ್ತೆ ನನ್ನ ಹೆಸರು ಏನು..? ಹಳ್ಳಾನಂದ ಎಂಬುದು ಸರಿಯಾಗೇ ಇಟ್ಟಿದ್ದಾರೆ. ಹಳ್ಳಕ್ಕೆ ದೂಡುವುದೇ ನನ್ನ ಕಾಯಕ!

ಸುಳ್ಳಪ್ಪ: ಹೊ ಹೊ ಹೊ!! (ಸಂಭ್ರಮ ಉಕ್ಕೇರಿ ನಗುತ್ತಾ). ಕಂಗ್ರಾಟ್ಸ್, ಕಂಗ್ರಾಟ್ಸ್. ತುಂಬಾ ಎಡ್ಡೆ ಕೆಲಸ ಮಾಡಿದೆ.

ಹಳ್ಳಾನಂದ: ಏನೋ ತ್ರಿಬಲ್ ಅಂದ್ರಲ್ಲಾ? ತ್ರಿಬಲ್ ಎಕ್ಸ್….!?

ಸುಳ್ಳಪ್ಪ: ಅದಲ್ಲವಾ ಮಂಗ! ನೋಡು… ಒಂದು, ನೀನು ಚಡ್ಡಿಯೂರಪ್ಪನಿಗೆ ಬೆನ್ನಿಗೆ ಚೂರಿ ಹಾಕಿದೆ. ಎರಡು, ನೀನು ದೇವರಿಗೂ ವಂಚಿಸಿದೆ. ಮೂರನೆದ್ದು, ನೀನು ಜನರನ್ನೂ ಮೋಸ ಮಾಡಿಬಿಟ್ಟೆ. ಎಂಥಾ ಸಾಧನೆ. ಇಂಥಾ ಯೋಗ ಪಡೆದ ನೀನು ಧನ್ಯ! ಪುಣ್ಯವಂತ!!

ಹಳ್ಳಾನಂದ: ಹಿ ಹಿ ಹಿ (ಹೆಮ್ಮೆಯಿಂದ ಬೀಗುತ್ತಾರೆ. ನಂತರ ನಾಚಿಕೆಯಿಂದ ತಲೆ ಬಾಗಿಸುತ್ತಾರೆ). ಥ್ಯಾಂಕ್ಸ್! ಥ್ಯಾಂಕ್ಸ್ ಸಾರ್. ನೀವಾದ್ರೂ ಮೆಚ್ಚಿದ್ರಲ್ಲಾ! ಸಂತೋಷವಾಯ್ತು.

ಸುಳ್ಳಪ್ಪ: ಅದಿರ್ಲಿ. ಸಯ್ಯಡ್ ಪೂರಾ! ಇತ್ತೆ ಎಂಥದು ಮಾಡುವುದು ಗೊತ್ತಾ? ನಾವು ಇಲ್ಲಿ ಬಂದದ್ದು ಯಾಕೆ ಗೊತ್ತುಂಟಲ್ಲಾ?

ಹಳ್ಳಾನಂದ: ಹಾಂ ಹಾಂ! (ಕುತೂಹಲದಿಂದ, ಆಸಕ್ತಿಯಿಂದ ನೆಟ್ಟಗಾಗುತ್ತಾ) ಪಣ್ಲೆ ಪಣ್ಲೆ ಸಾರ್. ನಮ ಎಂಚಿನೆಗ್‍ಲಾ ಸೈ.

ಸುಳ್ಳಪ್ಪ: ಗುಡ್. ಅವು ಬಾಟ್ಲಿಂಗ್ ಕಂಪೆನಿದ ಟೆಂಡರ್, ಕೊಟೇಶನ್ ಬೇಲೆ ಎಂಚಿನ ಪ್ರೋಗ್ರೆಸ್ ಆವೊಂದುಂಡು?

ಹಳ್ಳಾನಂದ: (ತನ್ನಲ್ಲಿದ್ದ ಬ್ರೀಫ್‍ಕೇಸಿನಿಂದ ಫೈಲ್ ತೆರೆಯುತ್ತಾ) ತೂಲೆ ಸಾರ್. ಈತ್ ವರ್ಕ್ ಆತ್‍ಂಡ್. ಎಲ್ಲಾ ಆಗಿದೆ. ಯಾರಿಗೂ ಗೊತ್ತೇ ಆಗುವುದಿಲ್ಲ. ಮ್ಯಾನುಫ್ಯಾಕ್ಷರಿಂಗ್ ಕೆಲಸ ಕೂಡಾ ಸುರು ಆಗಿದೆ. ಬಾಟಲಿ ಡಿಸೈನ್ ನೋಡಿ ಇದು. ಲೇಬಲ್ ಎಲ್ಲಾ ಪ್ರಿಂಟ್ ಆಗಿವೆ. ನೋಡಿ (ತೋರಿಸುತ್ತಾ), ಎಂಚ ಉಂಡು ಸಾರ್?

ಸುಳ್ಳಪ್ಪ: (ಅರೆ ಮನಸ್ಸಿನಿಂದ ಪರಿಶೀಲಿಸುತ್ತಾ) ನಾಟ್ ಬ್ಯಾಡ್. ಎಂಚಲಾ ಇಪ್ಪಡ್. (ಸೋಫಾಕ್ಕೆ ಒರಗುತ್ತಾ) ಎಂಕ್ಲೆಗ್ ದಾದ ಬೋಡ್? ಕಾಸ್ ಅತ್ತಾ? ಅದು ಬಂದ್ರೆ ಸಾಕು. ಜನರಿಗೆ ನೀರು ಬೇಕು. ಬಾಟಲಿ ಹೇಗಿದ್ರೇನಂತೆ! ನಮ್ಮ ಬ್ರಾಂಡ್ ಮಾತ್ರ್ ಸೇಲ್ ಮಾಡ್ಲಿಕ್ಕೆ ಆರ್ಡರ್ ಕೊಡಿಸ್ಬೇಕು. ಬೇರೆಯವರ ನೀರು ಜನರಿಗೆ ತಲುಪಬಾರದು. ಅವರ ಬಾಟ್ಲಿ ಸೀಜ್ ಮಾಡಿ ನಮ್ಮ ಬಾಟ್ಲಿಗೆ ನೀರು ತುಂಬಿಸಿ ಮಾರಬೇಕು. ನಮ್ಮದೇ ಬ್ರಾಂಡ್, ಅದೊಂದೇ ಬ್ರಾಂಡ್. ಗೊತ್ತಾಯ್ತಲ್ಲಾ ನಿಂಗೆ?

ಹಳ್ಳಾನಂದ: ಮತ್ತೇ..! ಅದರಲ್ಲೆಲ್ಲಾ ನಾನೂ ಪಳಗಿದ್ದೇನೆ. ಚಡ್ಡಿಯೂರಪ್ಪನಿಗೇ ಚಡ್ಡಿ ಜಾರಿಸಿ ಜಾಡಿಸಿದವನು ನಾನು. ಇದೆಲ್ಲಾ ನನಗೆ ಗೊತ್ತಿಲ್ವಾ?

ಸುಳ್ಳಪ್ಪ: ಯಾ, ಯಾ! ಯೇ ಯೇ! ಸೂಪರ್. (ಎದ್ದು ನಿಲ್ಲುತ್ತಾ. ಭಾರೀ ಖುಷಿ ಆಗ್ತಿದೆ ಮಾರಯಾ. ಒಂದು ಹಾಡು ಹಾಕ).

ಹಳ್ಳಾನಂದ: (ಖುಷಿಯಿಂದ) ಹಾಂ. ಹೌದ್ಹೌದು. ಪದ್ಯ ಪಂಡ ಸಂತೋಷ ಆಪುಂಡು (ಎದ್ದು ನಿಲ್ಲುತ್ತಾ).

ದ್ರೋಹವೇ ನಮ್ಮುಸಿರು
ನಾಶವೇ ನಮ್ ಬಸಿರು
ಪಕ್ಷ ದೇಶ ರಾಜ್ಯ ನಾಡು
ನದಿ ಕಾಡು
ಕೊಂದೇ ತಿನ್ನುವೆವು
ಮುಗಿಸಿಯೇ ಬಿಡುವೆವು

(ಮೊದಲು ಜೂನಿಯರ್ ಹಾಡು ನಿಲ್ಲಿಸುತ್ತಾ ಕುಳಿತುಕೊಂಡರು. ಸೀನಿಯರ್ ಇನ್ನೂ ಹಾಡುತ್ತಾ ತಲ್ಲೀನರಾಗಿ, ತನ್ಮಯಗೊಂಡು, ಪರವಶರಾಗಿ ಹೆಜ್ಜೆ ಹಾಕುತ್ತಿದ್ದರು.)

ಹಳ್ಳಾನಂದ: ಸಾರ್ ಸಾರ್! ಅಷ್ಟೊಂದು ಎಕ್ಸೈಟ್ ಆಗ್ಬೇಡಿ. ಕೂತ್ಕೊಳ್ಳಿ. ತಗೊಳ್ಳಿ ನೀರು ಕುಡಿಯಿರಿ (‘ನೆತ್ತರಾವತಿ’ ಮಿನರಲ್ ನೀರಿನ ಬಾಟಲ್ ಕೈಗಿಡುತ್ತಾರೆ).

ಸುಳ್ಳಪ್ಪ: (ಸಾವರಿಸಿ, ನೀರು ಕುಡಿದು ಕುಳಿತುಕೊಳ್ಳುತ್ತಾ) ನನಗೆ ಎಷ್ಟೊಂದು ಖುಷಿ ಗೊತ್ತಾ. ನೊಬೆಲ್ ಪ್ರಶಸ್ತಿ ಸಿಗ್ಬೇಕಾಗಿತ್ತು. ಆದರೂ ಜನ ಗುರುತಿಸುತ್ತಿಲ್ಲಾ.

ಹಳ್ಳಾನಂದ: ನಿಮಗೊಬ್ಬರಿಗೇ ಯಾಕೆ? ನನಗೂ ಕೊಡ್ಬೇಕಲ್ಲಾ. ನಾವಿಬ್ರೂ ಸೇರಿಯೇ ಅಲ್ವಾ ನದಿಯನ್ನು ತಿರುಗಿಸಿದ್ದು! ನಮಗೆ ಜನ್ಮ ನೀಡಿ ಬೆಳೆಸಿ ಸಾಕಿ ಸಲಹಿದ ಊರನ್ನು, ನಾಡನ್ನು, ಜನರನ್ನು ನಾವಿಬ್ರೂ ಒಟ್ಟೊಟ್ಟಿಗೇ ಅಲ್ವಾ ದ್ರೋಹ ಮಾಡಿ, ವಂಚಿಸಿ ಬರಡು ಮಾಡಲು ಹೊರಟಿದ್ದು!? ನಿಮಗೊಬ್ರಿಗೇ ಪ್ರಶಸ್ತಿ ಬೇಕಂದ್ರೆ ಹೇಗೆ? ಇದು ಸರಿಯಲ್ಲ (ಉಗ್ರಗೊಂಡು, ಸೆಟೆದು ಕುಳಿತುಕೊಳ್ಳುತ್ತಾರೆ).

ಸುಳ್ಳಪ್ಪ: ಅದಲ್ಲ ಮಾರಾಯಾ! ನಾನು ಹೇಳ್ತಿರೋದು ಬೇರೆಯೇ….

ಹಳ್ಳಾನಂದ: ಏನು ಬೇರೆ ಸಾರ್…? ನಮಗೆ ಬೇಡದ ಊರನ್ನು ಮುಗಿಸಲು ನಾವಿಬ್ರೂ ಶ್ರಮಿಸಿಲ್ವಾ? ನೀವು ದೂರ ಹೋದಿರಿ, ನಿಮಗೆ ಆ ಜನ್ನಪ್ಪಣ್ಣ ಇರುವ ತನಕ ಅಲ್ಲಿ ಸೀಟಿಲ್ಲ. ಜನರೂ ನಿಮ್ಮನ್ನು ಸತತವಾಗಿ ಸೋಲಿಸಿದ್ರು. ಆ ಸಿಟ್ಟಿನಲ್ಲಿ ನೀವು ಅವರನ್ನೂ ಅಲ್ಲಿನ ಜನರನ್ನೂ ಮುಗಿಸಲು ಪಣ ತೊಟ್ಟಿರಿ. ನಾನೂ ಕೂಡ. ನನಗೂ ಅಲ್ಲಿ ಸೀಟ್ ಉಳಿಯಲಿಲ್ಲ. ಎಲ್ಲೆಲ್ಲಿಗೋ ಓಡಿಸಿದ್ರು. ನಾನು ಬಿಡ್ತೀನಾ? ಆ ಚಡ್ಡಿಯೂರಪ್ಪನಿಗೇ ದ್ರೋಹ ಬಗೆದವನು ನಾನು. ಆತ ನನ್ನನ್ನು ಚಪ್ರಾಸಿ ಎಂದು ತಿಳಿದುಕೊಂಡಿದ್ದ. ನಾನು ಮುಖ್ಯ ಕಂತ್ರಿಯೇ ಆಗಿಬಿಟ್ಟೆ. ಬರೀ ನಂಬಿಕೆ. ನಂಬಿದ್ರೆ ತಾನೇ ದ್ರೋಹ!? ನನ್ನ ಮುಂದೆ ನೀವು ಏನೇನೂ ಅಲ್ಲ. ನನ್ನ ಶೌರ್ಯಕ್ಕೆ ಹತ್ತು ಪ್ರಶಸ್ತಿಗಳು ಒಟ್ಟಿಗೇ ಬರಬೇಕಿತ್ತು. ನನಗಿಲ್ಲದ ಊರು, ಅಲ್ಲಿನ ನೀರು ಯಾಕಿರಬೇಕು? ಹಾಗಾಗಿಯೇ ಅಲ್ವಾ ನಾನೇ ಮೊದಲು ‘ನೆತ್ತರಾವತಿ’ಯನ್ನು ಸದ್ದಿಲ್ಲದೆ, ಸುದ್ದಿಯಿಲ್ಲದೆ ತಿರುಗಿಸಿ ಒಣಗಿಸಲು ಬೇಕಾದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿದ್ದು. ನನ್ನ ಸಾಧನೆ ಮುಂದೆ ನಿಮ್ಮ ಸಾಧನೆ ಅಷ್ಟಕ್ಕಷ್ಟೇ. ಈಗ ಪ್ರಶಸ್ತಿ ನಿಮಗೇ ಸಿಗಬೇಕಿತ್ತು ಎನ್ನುತ್ತೀರಿ. ನೀವು ಹೇಗಿದ್ರೂ ಪ್ರಶಸ್ತಿ ಪಡೆದೇ ತೀರುತ್ತೀರಿ ಅಂಥ ನಂಗೊತ್ತಿಲ್ವಾ? ನನಗೂ ಒಂದು ಪ್ರಶಸ್ತಿ ಕೊಡಿಸುವ ಒಳ್ಳೆಯ ಮನಸ್ಸೇ ನಿಮಗಿಲ್ವಾ? ಎಂಚಿ ಸಾವ್‍ಯೇ! ಏತ್ ಸ್ವಾರ್ಥಿ ಮಾರ್ರೇ ಈರ್..! ಛೆ! (ನಿರಾಶೆಯಿಂದ ಮೈ ಕೊಡವುತ್ತಾರೆ).

ಸುಳ್ಳಪ್ಪ: ಹೊ ಹೋ!!! ಯಾವ್‍ಯಾ ನಿನ್ನ ಪುರಾಣ! (ತಲೆ ಚಿಟ್ಟಾಗಿ, ಕಿವಿ ಮುಚ್ಚುತ್ತಾರೆ. ಕೆಲ ಕ್ಷಣ ದೀರ್ಘ ಮೌನ. ಉಸಿರು ಬಿಡುತ್ತಾ). ಎಂಚಿನ ಪಾತೆರ್ಬಯಾ? ಏತ್ ಪಂಡಲಾ ಈ ಜೂನಿಯರ್, ಗೊತ್ತಾಂಡಾ? ನೆನಪು ದೀಲಾ… (ಒಂದು ಕ್ಷಣ ಜೂನಿಯರ್‍ನನ್ನು ದಿಟ್ಟಿಸುತ್ತಾ ಕಣ್ಣು ಕೆಕ್ಕರಿಸಿ ನೋಡುತ್ತಾರೆ. ನಂತರ ಸಾವರಿಸುತ್ತಾ, ಮುಖದಲ್ಲಿ ಮಂದಹಾಸ ಮಿನುಗಿಸುತ್ತಾ). ತೂಲಾ. ನಾನು ಹೇಳಿದ್ದು ಅದಲ್ಲಾ. ಈ ‘ನೆತ್ತರಾವತಿ’ಯನ್ನು ಕೊಲ್ಲೋ ಪ್ಲ್ಯಾನ್ ಮೊದಲು ನನ್ನದು. ಅಲ್ಲಿಂದ ನೀರು ಈ ಕಡೆ ತಿರುಗಿಸುತ್ತೇವೆಂದು ಹೇಳಿ ಇಲ್ಲಿನವರನ್ನು ಮಂಗ ಮಾಡಿ ಓಟು ಗೆಲ್ಲೋದು ನನ್ನ ಮಾಸ್ಟರ್ ಪ್ಲಾನ್. ಆದರೆ ನನ್ನ ನಿಜವಾದ ಉದ್ದೇಶ ಈ ವಾಟರ್ ಕಂಪೆನಿ. ಅದರಲ್ಲಿ ನನ್ನ ಶೇರ್ ನಿನಗಿಂತ ಹತ್ತು ಪರ್ಸೆಂಟ್ ಜಾಸ್ತಿ. ನೆನಪಿರ್ಲಿ. ಆದ್ರೆ… ನಾನು ಹೇಳಲಿಕ್ಕೆ ಹೋಗಿದ್ದು ಅದು ಅಲ್ಲಾ ಮಾರಾಯಾ. ನೀನ್ಯಾಕೆ ಅಷ್ಟೊಂದು ಕೋಪ ಮಾಡಿದ್ದು?

ಹಳ್ಳಾನಂದ: (ಸಮಾಧಾನಗೊಳ್ಳುತ್ತಾ, ಮುಖ ಒರೆಸುತ್ತಾ) ಹಿ ಹಿ ಹಿ. ಎಂಥದು ಅದು ಸಾರ್. ಬೇರೆ ಏನಾದ್ರೂ ತಿರುಗಿಸುವ ಪ್ಲ್ಯಾನ್ ಉಂಟಾ. ಇದ್ರೆ ಹೇಳಿ. ನಾನು ರೆಡಿ. ನನ್ನ ಹೆಸರೇ ಹಳ್ಳಾನಂದ ದೌಡಾ. ಎಲ್ಲಿಗೆ ಬೇಕಾದರೂ ಓಡುತ್ತೇನೆ. ಯಾರಿಗೆ ಬೇಕಾದರೂ ಹಳ್ಳ ತೋಡುತ್ತೇನೆ..!

ಸುಳ್ಳಪ್ಪ: ಹ ಹಾ! ಹಹ್ಹಹ್ಹ ಹಹ್ಹಹ್ಹಾ!! ಭಯಂಕರ ಹುಶಾರ್ ಮಾರಾಯಾ ನೀನು. ನೋಡ್ಲಿಕ್ಕೆ ಹಲ್ಲಾನಂದ. ನಗ್ತಾ ನಗ್ತಾ ಯಾರನ್ನೂ ಮಂಗ ಮಾಡ್ತೀಯಾ!

ಹಳ್ಳಾನಂದ: ಅದೊಂದು ಹಾಡೇ ಇಲ್ವಾ, ನನಗೆ ತುಂಬಾ ಇಷ್ಟವದು. (ಕೈ ಅಲ್ಲಾಡಿಸುತ್ತಾ ಮೇಲೆ ನೋಡುತ್ತಾ ಹಾಡುತ್ತಾರೆ)

ನಗುತಾ ನಗುತಾ
ಮಾಡು ನೀನು ನಂಬಿಕೆ ದ್ರೋಹ
ಜನರಿಗೆ ಮೋಸ

ಸುಳ್ಳಪ್ಪ: ಸೂಪರ್!

ಹಳ್ಳಾನಂದ: ಹಾಗಂದ್ರಾ? ಅದಕ್ಕೂ ನನ್ನಲ್ಲಿ ಹಾಡಿದೆ (ಪುಳಕಗೊಳ್ಳುತ್ತಾ ಹಾಡುತ್ತಾರೆ)

ನಾನೂ ನೀನೂ ಸೂಪರ್
ನಾವಿಬ್ಬರೂ ಕ್ಲೆವರ್
ದ್ರೋಹದಲ್ಲಿಬ್ರೂ ಮಾಸ್ಟರ್
ನಮ್ಮ ಯೋಜನೆಗಳೆಲ್ಲಾ ಸೂಪರ್
ಕೆರೆ ನದಿ ಅರಣ್ಯವನ್ನೆಲ್ಲಾ ಮಾಡುವೆವು ಪಾಪರ್

ಸುಳ್ಳಪ್ಪ: ತೂಯಿಲೆಕ್ಕ ಅತ್ತ್ ಮಾರಯಾ ಈ. ನೀನು ನನಗಿಂತಾ ಶ್ರೇಷ್ಠ ಸಾಹಿತಿ ಆಗುತ್ತಿ. ಡೌಟೇ ಇಲ್ಲಾ.

ಹಳ್ಳಾನಂದ: ನನಗೂ ಪ್ರಶಸ್ತಿ ಸಿಗಬಹುದಲ್ವಾ ಸಾರ್? ನಿಮಗೆ ಎಂಥೆಥವೋ ಸಿಕ್ಕಿವೆ.

ಸುಳ್ಳಪ್ಪ: ಸಿಗುವುದೆಂತಾ! ಅಂಬಡೆಯಾ? ಅದು ನಾನು ಪಡೆದಿದ್ದು.

ಹಳ್ಳಾನಂದ: ಹೇಗಾದ್ರೇನು? ಸಿಕ್ಕಿದ್ರಾಯ್ತು.

ಸುಳ್ಳಪ್ಪ: ನನಗೆ ನೊಬೆಲ್ ಸಿಕ್ಕಿಲ್ಲಾ ಇನ್ನೂ. ಅದೇ ಬೇಸರ.

ಹಳ್ಳಾನಂದ: ಹೌದಲ್ಲಾ. ಆದ್ರೆ ಅದು ತುಂಬಾ ದೊಡ್ಡ ಪ್ರಶಸ್ತಿ, ಇಂಟರ್‌ನ್ಯಾಶನಲ್. ಅದಕ್ಕೆ ತುಂಬಾ ತುಂಬಾ ಸಾಧನೆ ಮಾಡಬೇಕು. ಸ್ವಲ್ಪ ಕಷ್ಟವಾ ಅಂತಾ?! ಎಂಚಿನ್ ಪಣ್ಪರ್?

ಸುಳ್ಳಪ್ಪ: (ಸೆಟೆದು ನಿಲ್ಲುತ್ತಾ) ಎಂಚಿನಾ! ನಾನು ಮಾಡಿದ ಸಾಧನೆ ಕಡಿಮೆಯಾ? ನದಿ ಮೂಲವನ್ನೇ ನಿರ್ಮೂಲನ ಮಾಡುತ್ತಿದ್ದೇನೆ. ಅದಕ್ಕಿಂತ ದೊಡ್ಡ ಸಾಧನೆ, ಹಿಂದೆ ನಾನೊಂದು ಸಾಗರವನ್ನೇ ಖಾಲಿ ಮಾಡಿದ್ದೇನೆ. ಸರ್ವನಾಶ ಮಾಡಿದ್ದೇನೆ. ಎಕ್ಕುಟ್ಟಿಸಿ ಬಿಟ್ಟಿದ್ದೇನೆ. ಆದರೂ ನನಗೆ ಇನ್ನೂ ಪ್ರಶಸ್ತಿ ಸಿಕ್ಕಿಲ್ಲವೆಂದ್ರೆ ಎಂಥದು?! ರೋಷ ಉಕ್ಕುತ್ತೆ.

ಹಳ್ಳಾನಂದ: (ರೋಮಾಂಚನದಿಂದ) ಎಲ್ಲಿ ಎಲ್ಲಿ ಸಾರ್? ನೀವು ಗುಟ್ಟಿನಲ್ಲಿ ಏನೇನು ಮಾಡ್ತೀರೋ, ಸಾಧಿಸ್ತೀರೋ. ಗೊತ್ತೇ ಆಗಲ್ಲ. ಎನಡ ಪಣ್ಲೆ ಸಾರ್. ಓಲ್, ಎಂಚಿನ ಲಗಾಡಿ ದೆತ್ತ್‌ದಾರ್?

ಸುಳ್ಳಪ್ಪ: ವಾ ಮಲೆಮಂಗಯ ಈ ಒಂಜಿ. ನಿಕ್ಕ್ ಗೊತ್ತಿಜ್ಜಾ? ವ್ಹಾ! ಎಂಕ್ ಇತ್ತೆಲಾ ಥ್ರಿಲ್ ಆಪುಂಡು ಅವೆನ್ ಎನ್ನುನಗಾ! (ಎದ್ದು ನಿಂತು ಕುಪ್ಪಳಿಸುತ್ತಾರೆ. ಆಚೆ ಈಚೆ ಶಪಥ ಹಾಕುತ್ತಾರೆ. ಬಾಟಲಿಯಿಂದ ಗಟಗಟನೆ ನೀರು ಕುಡಿದು ಖಾಲಿಯಾದ ಬಾಟಲಿ ಬಿಸಾಡಿ ಕುಳಿತುಕೊಳ್ಳುತ್ತಾರೆ).

ಹಳ್ಳಾನಂದ: (ಫ್ರಿಜ್‍ನಿಂದ ಮತ್ತೊಂದು ಬಾಟಲಿ ತಂದು ಕೊಡುತ್ತಾ) ಪರ್ಲೆ ಸಾರ್. ನನಲಾ ದಿಂಜ ಬಾಟಲಿ ಉಂಡು.

ಸುಳ್ಳಪ್ಪ: ಹಾಂ ಹಾಂ. ಹೌದು. ಅದೇ ಅಲ್ವಾ ನನ್ನ ಧ್ಯೇಯೋದ್ದೇಶ!? ಖಾಲಿ ಮಾಡುವುದೇ ನನ್ನ ಗುರಿ. ಗುರಿ ತೋಡೋದೇ ನನ್ನ ಧರ್ಮ. ನಿನ್ನ ಕರ್ಮಲಾ ಅವ್ವೇ. ಭಗವದ್ಗೀತೆಯಲ್ಲಿ ಹೇಳಿಲ್ಲವೇ….. (ಒಮ್ಮೆಲೇ ಜ್ಞಾನಿಯಂತೆ, ವೇದಾಂತಿಯಂತೆ, ಮೈಮೇಲೆ ದೇವರು ಬಂದಂತೆ, ನಿಗೂಢ ಶಕ್ತಿಯೊಂದು ಆವಾಹಿಸಿದಂತೆ ಕ್ಷಣ ಕ್ಷಣ ಕಂಪಿಸುತ್ತಾ, ನಡುಗುತ್ತಾ, ಮೈ ಕೈ ಅಲ್ಲಾಡಿಸುತ್ತಾ ಎದ್ದು ನಿಲ್ಲುತ್ತಾರೆ. ಇದನ್ನು ನೋಡಿದ ಜೂನಿಯರ್‌ಗೆ ಹೆದರಿಕೆಯಾಗುತ್ತದೆ. ಆವೇಶಕ್ಕೊಳಗಾದ ಸೀನಿಯರ್ ಏನೇನೋ ಮಂತ್ರ ಪಠಿಸುತ್ತಾ, ಯಕ್ಷಗಾನದ ವೇಷಧಾರಿಯಂತೆ ನರ್ತಿಸಲು ಆರಂಭಿಸುತ್ತಾರೆ. ಮೊದ ಮೊದಲು ಆತ ಏನು ಹೇಳುತ್ತಿದ್ದಾನೆಂದೇ ಜೂನಿಯರ್‌ಗೆ ಅರ್ಥವಾಗಲಿಲ್ಲ. ಕಿವಿಗೊಟ್ಟು ಆಲಿಸಿದರೂ ತಿಳಿಯಲಿಲ್ಲ. ಸೀನಿಯರ್ ಕಣ್ಣು ಮುಚ್ಚುತ್ತಾ ಉಗ್ರಾವತಾರ ತಾಳುತ್ತಾ ಭಯಂಕರ ವೇಗ, ಓಘದಲ್ಲಿ ಹತ್ತು ನಿಮಿಷ ಮಂತ್ರೋಚ್ಛಾರಣೆ ಮಾಡುತ್ತಾರೆ. ನಿಧಾನವಾಗಿ ಸಾವರಿಸುತ್ತಾರೆ. ಮೆಲ್ಲನೆ ಅರ್ಧ ತೆರೆದ ಕಣ್ಣಿನಿಂದ ಜೂನಿಯರ್‌ನನ್ನು ದಿಟ್ಟಿಸುತ್ತಾರೆ. ಜೂನಿಯರ್ ಇಂಗು ತಿಂದ ಮಂಗನಂತೆ, ಅರ್ಥವಾಗದೇ ತಲೆ ಕೆರೆಯುತ್ತಿದ್ದುದನ್ನು ಮನಗಂಡ ಆತ, ಕಣ್ಣು ಮುಚ್ಚುತ್ತಾ ಮತ್ತೆ ನರ್ತಿಸಲಾರಂಭಿಸುತ್ತಾರೆ. ಹಾಗೆಯೇ ಮಂತ್ರಧಾರಣೆ ಮುಂದುವರಿಯುತ್ತದೆ. ಈ ಸಲ ಸ್ವಲ್ಪ ನಿಧಾನವಾಗಿ ಉಚ್ಛರಿಸುತ್ತಾರೆ)

ಕಟ್ಟ ಕಟ್ಟೊಡಂ ಗುರಿಯಿಟ್ಟುಂ ಕೆಡವಿದೆನಾಂ
ಕಂಡ ಕಂಡ ಜಾಗ ಗುಂಡಿಟ್ಟೊಡೆಂ ಗುಂಡಿತೋಡಿದೆನಾಂ
ಶತ್ರುನಾಶಂ ಪರಿಗಣಿಸಿದೊಡೆ ಚಟ್ಟ ಕಟ್ಟುತಾಂ
ವಿರೋಧಿಯಂ ಮುಗಿಸಿ ತೀರೊಡೆ ಸಮಾಧಾನವಿಲ್ಲಂ
ಪಕ್ಷವಂ ಸರ್ವನಾಶಂಗೈಯೊಡೆ ನಾ ನಿದ್ರಿಸಾಂ!

(ಈ ಸಲ ಜೂನಿಯರ್‌ಗೆ ಸ್ವಲ್ಪ ಅರ್ಥವಾದಂತೆನಿಸಿತು. ಆದರೆ ಏನು ಹೇಳಿದ್ದೆಂದೇ ತಿಳಿಯಲಿಲ್ಲ. ಸ್ವಲ್ಪ ಸೂಕ್ಷ್ಮವಾಗಿ ಕಿವಿಗೊಟ್ಟಾಗ ಗುರಿ, ಗುಂಡಿ, ಶತ್ರು, ನಾಶ ಮುಂತಾದ ಶಬ್ದಗಳ ಅರಿವಾಯಿತು. ಈತ ಏನೋ ಗುರಿಯಿಟ್ಟೇ ಮಾತನಾಡುತ್ತಿದ್ದಾನೆಂದು ತಿಳಿದು ರೋಮಾಂಚನವಾಯಿತು. ಅಷ್ಟರಲ್ಲಿ ಸೀನಿಯರ್ ಸಾವರಿಸಿ ಕುಳಿತುಕೊಂಡಿದ್ದರು. ಕಣ್ಣು ಮುಚ್ಚಿಯೇ ಇತ್ತು).

ಸುಳ್ಳಪ್ಪ: ಜೂನಿಯರ್, ನಾನು ಏನು ಹೇಳಿದ್ದು ತಿಳಿಯಿತೆ?

ಹಳ್ಳಾನಂದ: ಇಲ್ಲ ಇಲ್ಲ. ಇಜ್ಜಿ ಸಾರ್.

ಸುಳ್ಳಪ್ಪ: ನನ್ನಷ್ಟು ಪಾಂಡಿತ್ಯ ನಿನಗೆಲ್ಲಿ ಬರಬೇಕು. ಹುಂ! ನೋಡು, ನಾನು ಪರಮಶ್ರೇಷ್ಠ. ನಾನು ಗುರಿಯಿಟ್ಟರೆ ಅದನ್ನು ಸಾಧಿಸಿಯೇ ತೀರುತ್ತೇನೆ. ಶತ್ರುನಾಶವನ್ನೂ ಸಾಧಿಸುತ್ತೇನೆ, ಸ್ವಪಕ್ಷವನ್ನು ಮುಗಿಸುತ್ತೇನೆ. ತಿಳಿಯಿತೇ ಕಲ್ವ?

ಹಳ್ಳಾನಂದ: (ಶತ್ರುನಾಶವೇನೋ ಸರಿ. ಸ್ವಪಕ್ಷ ನಾಶವೆಂದರೇನೆಂದೇ ಆತನಿಗೆ ತಿಳಿಯಲಿಲ್ಲ). ತಿಳಿಯಿತು ಧನಿ, ತಿಳಿಯಿತು. ಆದರೆ ಅದೇನೋ ಸ್ವಪಕ್ಷ ಸ್ವಾಹಾ ಎಂದರೆ ಏನು ಸಾರ್?

ಸುಳ್ಳಪ್ಪ: ಅದಕ್ಕೇ ನಾನು ಹೇಳಿದ್ದು ನೊಬೆಲ್ ಪ್ರಶಸ್ತಿ ಸಿಗಬೇಕಿತ್ತೂಂತ.

ಹಳ್ಳಾನಂದ: (ಮತ್ತೆ ತಲೆ ಕೆರೆತ. ಆತ ಹೇಳಿದಷ್ಟೂ ಈತ ಗಲಿಬಿಲಿ). ಏನಾದ್ರೂ ಹೊಸ ಮಹಾಕಾವ್ಯ ಬರೆದಿದ್ದೀರಾ ಸಾರ್?

ಸುಳ್ಳಪ್ಪ: ಮುಚ್ಚು ನಿನ್ನ ಬಾಯಿ! (ಆತನ ಗರ್ಜನೆ ಕೇಳಿ ಆಶ್ಚರ್ಯಗೊಂಡರು ಜೂನಿಯರ್. ಅಪ್ರಯತ್ನವಾಗಿ ಅವರ ಬಾಯಿ ಮುಚ್ಚಿತು. ತುಟಿಗಳು ಜೆಸಿಬಿಗಳಂತೆ ಹಲ್ಲುಗಳನ್ನು ಆಕ್ರಮಿಸುತ್ತಾ ಕಬಳಿಸಿದವು). ಸಾವ್ ನಿನ್ನ. ನಾನು ಎಷ್ಟೊಂದು ಶ್ರಮಪಟ್ಟು ಎಂಥಾ ಅದ್ಭುತ ಸಾಧನೆಗೈದಿದ್ದು ನಿನಗೆ ಹೇಗೆ ತಿಳಿಯಬೇಕು? ಮೂರ್ಖ. ನನ್ನ ಪಕ್ಷದವರಿಗೇ ಇನ್ನೂ ಗೊತ್ತಾಗಿಲ್ಲ. ಹೊಯ್‍ಕಮಾಂಡ್‍ಗೆ ಇನ್ನೂ ಕೂಡ ವೈ ಇಟ್ ಹ್ಯಾಪಂಡ್, ಹೌ ಇಟ್ ಹ್ಯಾಪಂಡ್ ಎಂಬುದೇ ಅರ್ಥವಾಗಿಲ್ಲ. ನಾನಂತೂ ಸದ್ದಿಲ್ಲದೆ ಎಲ್ಲಾ ಮುಗಿಸಿಬಿಟ್ಟೆ. ಸ್ವಪಕ್ಷನಾಶಂ ಬಿಜಯಂಗೈದೆನೆಂಪೇಳಿದರೆ ನಂಬುವವರಾರಯ್ಯಾ?!

ಹಳ್ಳಾನಂದ: ಹಾಂ…. ಹೂಂ…. ಆದರೆ, ಅದು ಎಂಥ….. (ಟೋಟಲ್ಲಿ ಕನ್‍ಫ್ಯೂಸ್).

ಸುಳ್ಳಪ್ಪ: ಮುಚ್ಚು ಬಾಯಿ. ನಾನು ನೊಬೆಲ್ ಪಡೆದೇ ತೀರುತ್ತೇನೆ. ಆದರೆ ಅದಕ್ಕಿಂತ ಮುಂಚೆ ಇನ್ನೊಂದು ಪ್ಲಾನ್ ಇದೆ.

ಹಳ್ಳಾನಂದ: ಏನು ಏನು ಅದು ಸಾರ್. ನಾನು ಅದರಲ್ಲೂ ಪಾರ್ಟ್‍ನರ್ ಆಗುತ್ತೇನೆ. ಇನ್ವೆಸ್ಟ್ ಮಾಡುವ. ನಮ್ಮ ಸಂತತಿಗೆ ಸಂತತಿಯವರೆಲ್ಲಾ ಕೂತು ಉಣ್ಣಬೇಕು.

ಸುಳ್ಳಪ್ಪ: ಖಂಡಿತಾ. ನೀನಿಲ್ಲದೆ ನಾನುಂಟಾ?

ನೀ ಇರಲು ಜೊತೆಯಲ್ಲಿ
ಕಾಡೆಲ್ಲಾ ಕಡಿದುರುಳಿಸುವ

(ಮತ್ತೆ ಹಾಡುತ್ತಾ ಮೈಮರೆಯುತ್ತಾರೆ. ನಂತರ ಕುಳಿತು ಮಾತು ಮುಂದುವರಿಯುತ್ತದೆ).

ಹೌದು. ನೀನು ಬೇಕು. ಈಗ ನಾವು ‘ನೆತ್ತರಾವತಿ’ಯನ್ನು ತಿರುಗಿಸುತ್ತೇವೆಂದು ಹೇಳಿ ಅಲ್ಲಿ ಪರ್ವತ, ಕಾಡು, ನೀರು ನದಿಯೆಲ್ಲಾ ಮುಕ್ಕಿ ನಮಗೆ ಬೇಕಾದ್ದು ಸಾಧಿಸುವಾಗ ಆ ಕಡೆಯ ಜನರೆಲ್ಲಾ ನೀರಿಲ್ಲದೆ ಈ ಕಡೆಗೆ ವಲಸೆ ಬಂದೇ ಬರಬೇಕು. ಅಲ್ಲಿನ ಊರೆಲ್ಲಾ ಸಮುದ್ರದಲ್ಲಿ ಮುಳುಗುವಾಗ ಅವರೆಲ್ಲಾ ಬದುಕಬೇಕಾದ್ರೆ ಈ ಕಡೆ ಬರ್ತಾರೆ. ಇಲ್ಲಾಂದ್ರೆ ಸಮುದ್ರದಲ್ಲಿ ಸಾಯ್ಲಿ. ನನ್ನ ಹೆಸರೇ ಅನ್ವರ್ಥನಾಮ ತಿಳಿಯತಲ್ಲಾ. ಅದಿರ್ಲಿ. ನನ್ನ ಪ್ಲಾನ್ ಏನು ಗೊತ್ತಾ?

ಹಳ್ಳಾನಂದ: (ಪುಳಕಗೊಳ್ಳುತ್ತಾ) ಏನು ಸಾರ್?

ಸುಳ್ಳಪ್ಪ: ಅಲ್ಲಿಂದ ಬರುವ ಜನರಿಗಾಗಿ ವಸತಿ, ಮನೆ ಕಟ್ಟುವ ಬೃಹತ್ ಯೋಜನೆ. ಅದು ನಿಮ್ಮ ಮೋಠೀ ಸರಕಾರ್ ಮಾಡುತ್ತಲ್ಲಾ. ಅದಕ್ಕಾಗಿ ನಾನು ಮೊದಲೇ ಬೇಕಾದ್ದನ್ನೆಲ್ಲಾ ಮಾಡಿಟ್ಟಿದ್ದೇನೆ. ನಾನೂ ಕೂಡ ಕೇಂದ್ರೀಯ ಕಂತ್ರಿಯಾಗಿದ್ದೆ ನೋಡು.

ಹಳ್ಳಾನಂದ: ಹೌದ್ಹೌದು. ಎಂಥಾ ಜೋಡಿ ನಮ್ಮದು. ನೀವೂ ಮಾಜಿ ಮುಖ್ಯ ಕಂತ್ರಿ, ನಾನೂ ಕೂಡ. ನೀವೂ ಕೇಂದ್ರೀಯ ಕಂತ್ರಿಯಾಗಿದ್ರಿ. ಈಗ ನಾನೂ ಅದೇ. ನಿಮ್ಗೆ ಸಿಕ್ಕಿದ ಇಲಾಖೆನೇ ನನಗೂ ಸಹ ಸಿಕ್ಕಿದೆ. ಎಂಥ ಭಾಗ್ಯವಲ್ವಾ? ಭಾಗ್ಯವಿದು, ಸೌಭಾಗ್ಯವಿದು.

ಸುಳ್ಳಪ್ಪ: ಕಂತ್ರಿ ಭಾಗ್ಯ!?

ಹಳ್ಳಾನಂದ: ಹೌದ್ಹೌದು. ಸೂಪರ್.

ಸುಳ್ಳಪ್ಪ: ಅದೇ, ಆಗ ನಾನು ಎಲ್ಲವನ್ನೂ ರೆಡಿ ಮಾಡಿಟ್ಟಿದ್ದೆ. ಎಂಥದೇ ಕಾಡು, ಪರಿಸರ, ನಿಸರ್ಗ, ಕೃಷಿ ಜಾಗ, ನೀರಾವರಿ ಪ್ರದೇಶ… ಎಂಥದೇ ಇರಲಿ. ನಮಗೆ ಬೇಕಾದ ಹಾಗೆ ಆಕ್ರಮಿಸಿ, ಕಿತ್ತುಕೊಳ್ಳಲು ಹಸಿರು ನಿಶಾನೆ ಪಡೆಯಲು ಅಡ್ಡಿಯಾಗಿದ್ದ ನಿಬಂಧನೆಗಳನ್ನೆಲ್ಲಾ ಕಿತ್ತು ಹಾಕಿದ್ದೇನೆ.

ಹಳ್ಳಾನಂದ: ಹಸಿರಿನ ಉಸಿರುಗಟ್ಟಿಸುವ ಯೋಜನೆ?

ಸುಳ್ಳಪ್ಪ: ನೀನು ಏನೇ ಹೇಳು. ನಾನು ಮಾಡುವುದು ಅದೇ. ನಾವೀಗ ದಕ್ಷಿಣದ ಯೋಜನೆ ಸಕ್ಸೆಸ್‍ಫುಲ್ಲಿ ಮಾಡುತ್ತಿದ್ದೇವೆ. ಇನ್ನೀಗ ಉತ್ತರಕ್ಕೆ ಹೋಗೋಣ. ಉತ್ತರದ ಕಡೆ ನದಿಯೂ ಇಲ್ಲ, ಮಳೆಯೂ ಇಲ್ಲ. ಅಲ್ಲಿಗೆ ಇಲ್ಲಿನ ನದಿಗಳನ್ನು ತಿರುಗಿಸೋಣ. ಏನಂತಿ?

ಹಳ್ಳಾನಂದ: (ಆಶ್ಚರ್ಯದಿಂದ ತೆರೆದ ಬಾಯಿ ಹಾಗೇ ತೆರೆದಿರುತ್ತದೆ. ಸೀನಿಯರ್ ಚಿಟಿಕೆ ಹೊಡೆಯುವಾಗ ಭುಜ ಹಾರಿಸುತ್ತಾ ವಾಸ್ತವಕ್ಕೆ ಮರಳುತ್ತಾರೆ). ವ್ಹಾವ್! ಎಂಥಾ ಸೂಪರ್ ಐಡಿಯಾ ಸಾರ್ ನಿಮ್ಮದು. ಈರೆನ ಮಂಡೆ ಚೊಂಬುಯೇ. ನನಗೆ ಹೊಳೆದಿರಲೇ ಇಲ್ಲ.

ಸುಳ್ಳಪ್ಪ: ಮತ್ತೆ. ನಾನು ಸಾಕ್ಷಾತ್ ದೇವರೇ ಅಲ್ವಾ? ನೀರು ಕರುಣಿಸುವ ಭಗವಂತ! ಅಷ್ಟೇ ಏಕೆ. ಮುಂದೆ ನಾನು ವಿಶ್ವದ ಮಂತ್ರಿಯೂ ಆಗುತ್ತೇನೆ. ಇಲ್ಲಿನ ಎಲ್ಲಾ ನದಿಗಳನ್ನು ತಿರುಗಿಸಿದ ನಂತರ, ವಿಶ್ವಕ್ಕೆಲ್ಲಾ ನೀರು ಒದಗಿಸುತ್ತೇನೆ. (ಜೂನಿಯರ್ ಮತ್ತೆ ಆಶ್ಚರ್ಯದಿಂದ ಕಣ್ಣು ಕಿವಿ ತೆರೆದು ನಿಬ್ಬೆರಗಾಗಿ ನೋಡುತ್ತಾರೆ). ಹೌದು! ನನಗೆ ವಿಶ್ವದ ಎಲ್ಲಾ ಜನರಿಗೆ ನೀರು ಕುಡಿಸುವ ಇರಾದೆಯಿದೆ. ಅಲ್ಲಿ ನೋಡು ಆಫ್ರಿಕಾದಲ್ಲಿ ಎಷ್ಟೋ ದೇಶಗಳಿಗೆ ನೀರಿಲ್ಲ. ನಾನು ವಿಶ್ವಮಂತ್ರಿಯಾಗುತ್ತೇನೆ. ಆಗ ಗಂಗಾ ಯಮುನಾ ಬ್ರಹ್ಮಪುತ್ರ ನದಿಗಳನ್ನೆಲ್ಲಾ ಆಫ್ರಿಕಾ ಖಂಡಕ್ಕೆ ತಿರುಗಿಸಿ ಅಲ್ಲಿನ ಜನರ ದಾಹ ಇಂಗಿಸುತ್ತೇನೆ. ಎಷ್ಟೊಂದು ನೀರು ವ್ಯರ್ಥವಾಗುತ್ತಿದೆ. ನನಗೆ ನೋಡಲಿಕ್ಕೇ ಆಗುವುದಿಲ್ಲ. ರೋಷ ಉಕ್ಕಿ ಬರುತ್ತಿದೆ. ಇಲ್ಲೆಲ್ಲಾ ನೀರು ಸಮುದ್ರಗಳಿಗೆ, ಸಾಗರಗಳಿಗೆ ವ್ಯರ್ಥವಾಗಿ ಹರಿದು ಹೋಗಿ ನಷ್ಟವಾಗುತ್ತಿದೆ. ಹಿಮಾಯಲದಲ್ಲಿನ ಹಿಮವೆಲ್ಲಾ ಕರಗಿ ನೀರೆಲ್ಲಾ ಸೋರಿ ಹೋಗುತ್ತಿದೆ. ಸಲ್ಲದು, ಇನ್ನು ಮುಂದೆ ಇದೆಲ್ಲಾ ನಿಲ್ಲಬೇಕು. ಇಡೀ ಪ್ರಪಂಚವನ್ನೇ ತಿರುಗಿಸುತ್ತೇನೆ. ನಾನೇ ಬ್ರಹ್ಮ, ನಾನೇ ದೈವ. ಸಾಕ್ಷಾತ್ ಪರಮಾತ್ಮ ನಾನು. (ಕಣ್ಣು ಮುಚ್ಚಿ ದೀರ್ಘವಾಗಿ ಉಸಿರಾಟ ಮಾಡುತ್ತಾರೆ. ಪುರಾತನ ಋಷಿಯೊಬ್ಬರು ತಪಸ್ಸಿಗೆ ಕುಳಿತಂತೆ ಜೂನಿಯರ್‍ಗೆ ಕಾಣಿಸುತ್ತದೆ. ಒಂದೆಡೆ ರೋಮಾಂಚನ, ಪುಳಕ. ಮತ್ತೊಮ್ಮೆ ಭಯವೂ ಆಯಿತು. ಕಣ್ತೆರೆದು ಶಾಪ ಕೊಟ್ಟರೆ? ತಪಸ್ವಿಯನ್ನು ಡಿಸ್ಟರ್ಬ್ ಮಾಡದೇ ಇರಲು ಕಷ್ಟಪಟ್ಟು ಕುಳಿತಲ್ಲಿಯೇ ಇದ್ದು, ಉಸಿರಾಟವನ್ನೂ ಸದ್ದಿಲ್ಲದಂತೆ ನಡೆಸುತ್ತಾ ಭೀತಿಗೊಂಡು ಕುಳಿತರು. ಇದೇ ಸ್ಥಿತಿ ಹತ್ತು ನಿಮಿಷಗಳ ವರೆಗೆ ಮುಂದುವರಿಯಿತು. ಅಷ್ಟರಲ್ಲಿ ಮುಂದಿನ ಯೋಜನೆಗಳನ್ನು ಯೋಚಿಸುತ್ತಾ, ಕಲ್ಪಿಸುತ್ತಾ ಜೂನಿಯರ್ ಮೈಮರೆತು ರೋಮಾಂಚನಗೊಳ್ಳುತ್ತಾ ಕನಸಿನಲ್ಲಿ ತೇಲುತ್ತಾ ಇರಬೇಕಾದರೆ, ಸೀನಿಯರ್ ಮತ್ತೆ ಕಳ್ಳನೋಟ ಹರಿಸಿ ಆತನನ್ನು ಗಮಿನಿಸಿದರು. ಕೆಲ ನಿಮಿಷ ಹಾಗೇ ಇದ್ದು ಸೀನಿಯರ್ ಸಡನ್ನಾಗಿ ಸೀನಿದರು. ಬೆಚ್ಚಿ ಬಿದ್ದ ಜೂನಿಯರ್ ಎಚ್ಚೆತ್ತರು).

ಹಳ್ಳಾನಂದ: ಏನು ಹೇಳಬೇಕೆಂದೇ ತೋಚುಜಿ ಎಂಕ್ ಸಾರ್!

ಸುಳ್ಳಪ್ಪ: ಅಷ್ಟೇ ಅಲ್ಲ. ಮಂಗಳ ಗ್ರಹದಲ್ಲಿಯೂ ನೀರಿದೆಯಂತೆ. ಅದ್ಯಾರೋ ನಾಶಪಡಿಸುವವರು ನೋಡಿ ಬಂದಿದ್ದಾರಂತಲ್ಲಾ!

ಹಳ್ಳಾನಂದ: ನಾಶ ಅಲ್ಲಾ ಸಾರ್! ಅದು ನಾಸಾ. ಅಮೆರಿಕದ್ದು.

ಸುಳ್ಳಪ್ಪ: ಯಾರಾದ್ರೇನು, ಯಾವುದಾದ್ರೇನು? ನಮಗೆ ನಾಶವೊಂದೇ ಗುರಿ. ಹಾಂ. ಹೌದು. ಮಂಗಳ ಗ್ರಹದಲ್ಲಿ ಇರುವ ನೀರನ್ನು ಗುರು ಗ್ರಹಕ್ಕೆ ತಿರುಗಿಸುವ ಯೋಜನೆ ಕೈಗೊಳ್ಳುವ. ಗುರು ಗ್ರಹದಲ್ಲಿ ನೀರು ತುಂಬಿದ ನಂತರ ಶನಿ ಗ್ರಹಕ್ಕೆ ನೀರು ಕೊಂಡೊಯ್ಯುವ. ಒಟ್ಟಿನಲ್ಲಿ ನಾವು ವಿಶ್ರಮಿಸಬಾರದು. ಗೊತ್ತಾಂಡತ್ತಾ?!

ಹಳ್ಳಾನಂದ: (ಮೂಕವಿಸ್ಮಿತನಾಗುತ್ತಾರೆ, ಕೆಲ ನಿಮಿಷ ಮೈಮರೆತಿರುತ್ತಾರೆ). ದೇವರೇ, ನೀವು ನಿಜಕ್ಕೂ ಆಧುನಿಕ ಭಗೀರಥ. ನಿಮ್ಮ ಕಾಲಿಗೆ ಬೀಳುತ್ತೇನೆ.

ಸುಳ್ಳಪ್ಪ: ಸುಮ್ನಿರು. ನಿಕ್ಕ್ ಗೊತ್ತಾಪುಜಿ! ನನಗೀಗ ನೊಬೆಲ್ ಪಡೆಯಲು ಕೆಲಸ ಕಾರ್ಯ ಮಾಡಲಿಕ್ಕುಂಟು. ನನ್ನ ಸಾಧನೆ ವಿಶ್ವಕ್ಕೇ ಗೊತ್ತಾಗಬೇಕು. ನಾನು ಎಷ್ಟೊಂದು ಪರಿಶ್ರಮಪಟ್ಟು ಅಂಧ ರಾ ಪ್ರದೇಶದಲ್ಲಿ ನನ್ನ ಪಕ್ಷವನ್ನು ಸರ್ವನಾಶ ಮಾಡಿದ್ದೇನೆ. ಅದಕ್ಕೆ ವಿಶ್ವಮನ್ನಣೆ ಬೇಡವೇ?

ಹಳ್ಳಾನಂದ: (ಏನೋ ಹೊಳೆಯುತ್ತದೆ. ಮನಸ್ಸಿನಲ್ಲಿ ಹಳೆಯ ನೆನಪೊಂದು ಹಾದು ಹೋಗುತ್ತದೆ). ಹೋ! ಹೌದಾ? ಅದು ನಿಮ್ಮ ಕೆಲಸವಾ?

ಸುಳ್ಳಪ್ಪ: ನಿನಗಾದ್ರೂ ತಿಳಿಯಿತಲ್ಲಾ. ನೆನಪಿದೆಯಾ ನಿಂಗೆ? ಅಲ್ಲಿ ನಮ್ಮದೇ ಪಕ್ಷ ಹೆಡೆಯೆತ್ತಿ ರಾಜ್ಯಭಾರ ನಡೆಸುತ್ತಿತ್ತು. ಸತತವಾಗಿ ವಿರೋಧಿಗಳನ್ನೆಲ್ಲಾ ಧೂಳೀಪಟಗೊಳಿಸಿ, ಮಣ್ಣು ಮುಕ್ಕಿಸಿ ನಮ್ಮ ಪಕ್ಷ ಅಲ್ಲಿ ವಿಜೃಂಭಿಸುತ್ತಾ ಮೆರೆದಿತ್ತು. ಆಗ ನಮ್ಮ ಹೊಯ್‍ಕಮಾಂಡ್‍ನವರು ಅಲ್ಲಿನ ಉಸ್ತು‘ವರಿ’ಯನ್ನು ನನಗೆ ಕೊಟ್ಟರು. ಅವರು ‘ವರಿ’ ಎಂದು ನನಗೆ ವಹಿಸಿದ್ದನ್ನು ಶಿರಬಾಗಿ ಸ್ವೀಕರಿಸಿ, ಇನ್ನು ಮುಂದೆ ‘ವರಿ’ಯೇ ಇರಬಾರದೆಂದು ಅಲ್ಲಿ ನಮ್ಮ ಪಕ್ಷವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಗುಡಿಸಿ ಹಾಕಿದೆ. ನಾನು ಹಾಗೆಯೇ. ಪಣ ತೊಟ್ಟರೆ ಸಾಧಿಸಿಯೇ ಸೈ. ಚಟ್ಟ ಕಟ್ಟುವುದೇ. ಅಲ್ಲಿ ನೋಡು, ಈಗ ನಮ್ಮ ಪಕ್ಷವೇ ನಿಸ್ಸಂತಾನವಾಗಿಬಿಟ್ಟಿದೆ. ವರಿಯೇ ಇಲ್ಲ!

ಹಳ್ಳಾನಂದ: ಅದೇನೋ ತೈಲ ಆಂಗಣವೆಂದು ಗಲಾಟೆ ನಡೆಯುತ್ತಿತ್ತಲ್ಲಾ.

ಸುಳ್ಳಪ್ಪ: ಹೌದು ಮತ್ತೆ. ನೆಪ ಯಾವುದಾದರೇನು, ನಾಶವೊಂದೇ ಗುರಿ. ಸರ್ವನಾಶವೇ ಉದ್ದೇಶ. ಈಗ ನೋಡು ಇಬ್ಬರೂ ಹೊಡೆದಾಡಿಕೊಳ್ಳುತ್ತಿದ್ದಾರೆ. ನಮ್ಮ ಪಕ್ಷವಂತೂ ಅಲ್ಲಿ ಸ್ಮಶಾನದಲ್ಲಿಯೂ ಇಲ್ಲ. ಈ ಸಾಧನೆಗೆ ನನಗೆ ನೊಬೆಲ್ ಸಿಗಬೇಕಾ ಬೇಡ್ವಾ?

ಹಳ್ಳಾನಂದ: ಸಿಗಲೇಬೇಕು. ನಾನೂ ಕೂಡ ಶಿಫಾರಸು ಮಾಡುತ್ತೇನೆ. ಆದ್ರೆ ನಿಮ್ಮಷ್ಟಲ್ಲದಿದ್ದರೂ ನಾನೂ ಸಹ ನನ್ನ ಪಕ್ಷ ನೆಲಕಚ್ಚಲು ಬಹಳಷ್ಟು ಶ್ರಮಿಸಿದ್ದೇನೆ. ನಾವು ಪರಸ್ಪರ ಕಚ್ಚಾಡಿ, ಮೂವರು ಜನ ಮುಖ್ಯ ಕಂತ್ರಿಗಳಾಗಿ ಪಕ್ಷವನ್ನು ಸೋಲಿಸಿಯೇ ಬಿಟ್ಟೆವು. ಇದು ಕಡಿಮೆ ಸಾಧನೆಯೆ?

ಸುಳ್ಳಪ್ಪ: ಎಬ್ಬೇ! ಅದೆಂಥಾ ಸಾಧನೆ! ಅದನ್ನೂ ಮೊದಲು ಸಾಧಿಸಿದವ ನಾನೇ ಗೊತ್ತುಂಟಾ? ನಾನೂ ಮುಖ್ಯ ಕಂತ್ರಿ ಆಗಿರಲಿಲ್ಲವೇ? ಆ ಬಂಗಾರಿಯಪ್ಪನಿಗೆ ಚೂರಿ ಹಾಕಿ ಹೊಯ್‍ಕಮಾಂಡಿನಿಂದ ಲಕೋಟೆಯ ಮೂಲಕ ಅಧಿಕಾರ ಪಡೆದವನು ನಾನು. ಎರಡೇ ವರ್ಷದಲ್ಲಿ ನನ್ನ ಪಕ್ಷವನ್ನು ಅತ್ಯಂತ ಪರಿಶ್ರಮಪಟ್ಟು, ಶ್ರದ್ಧೆಯಿಂದ ಸೋಲಿಸಿ, ಆ ಜಾಢ್ಯತೀತ ಜಗಳಾದಳ ಪಕ್ಷಕ್ಕೆ ಅಧಿಕಾರವನ್ನು ಸಮರ್ಪಿಸಿ ಕೊಟ್ಟಿರಲಿಲ್ಲವೇ ನಾನು?

ಹಳ್ಳಾನಂದ: ನೀವು ಸಾಕ್ಷಾತ್ ಭಗವಂತನೇ ಸೈ ಸಾರ್! ನಿಮ್ಮಂತ ನಿಷ್ಠಾವಂತ ಸೋಲಿಗೇಶ್ವರ, ಸರ್ವನಾಶಾಧೀಶ, ದ್ರೋಹಧೀರ ಕಂಠೀರವ ಬೇರೆ ಯಾರೂ ಹುಟ್ಟಿ ಬರಲಿಕ್ಕಿಲ್ಲ. ನಿಮ್ಮ ಕೃಪೆ ನನಗಿದ್ದರೆ ಎರಡನೇ ಸ್ಥಾನಕ್ಕೆ ನಾನೇ ಗಟ್ಟಿಗೊಳ್ಳುತ್ತೇನೆ.

ಸುಳ್ಳಪ್ಪ: ನಿನಗದು ಸಾಧ್ಯ. ನಿನ್ನಲ್ಲಿ ಆ ಅರ್ಹತೆ ತುಂಬಾ ಇದೆ. ಈಗಾಗಲೇ ನೀನೂ ಇಮ್ಮಡಿ ದ್ರೋಹವೀರಾಗ್ರಸೇನ ಬಿರುದು ಪಡೆದಿದ್ದೀಯಾ. ಬಾ ಈಗ ಹಾಡಿ ಕುಣಿಯೋಣ!

ಊರಿಗೊಂದೇ ನೆತ್ತರಾವತಿ
ಕಾಣಿಸುವೆವದಕೆ ಗಂಗಾಗತಿ……

(ಹಾಡು, ಕುಣಿತ. ದಣಿದಾಗ ನೀರಿನ ಬಾಟಲಿ ಖಾಲಿ ಮಾಡುತ್ತಾರೆ. ಮತ್ತೆ ಹಾಡು, ಕುಣಿತ ಮುಂದುವರಿಯುತ್ತದೆ).

ಪ್ರಕೃತಿ ತುಂಬಿದ ಕಾಡಲಿ
ತರುವೆವು ಕೊಡಲಿ ಗುದ್ದಲಿ
ಸಸ್ಯಕಾಶಿ ಘಟ್ಟದಲಿ
ಹರಿಸುವೆವು ಜೆಸಿಬಿ
ಸತ್ರೆ ಸಾಯ್ಲಿ ಗಿಡಮರ
ನಾಶವೊಂದೇ ನಮ್ ಗುರಿ
ಜೀವಹರಣವೇ ಹೆದ್ದಾರಿ

ನೀರೇ ಇಲ್ಲ ಪಂಕಜಾ…

(ತೆರೆ)

Feedback to budkuloepaper@gmail.com

Leave a comment

Your email address will not be published. Required fields are marked *

Latest News