ಕೊಂಕಣಿಯ ಬೆಳವಣಿಗೆಗೆ ಸಹಕಾರ ಅಗತ್ಯ, ಗೊಂದಲ ಬೇಡ: ಅಕಾಡೆಮಿ ಮನವಿ
ಕೊಂಕಣಿಯ ಏಕತೆಗೆ ಎಲ್ಲರ ಸಹಕಾರ ಅಗತ್ಯ. ದೇವನಾಗರಿ, ಕನ್ನಡ, ರೋಮಿ ಎಂದು ಲಿಪಿಗಾಗಿ ಹೋರಾಡಿದರೆ ಕೊಂಕಣಿಗರಲ್ಲೇ ಪ್ರತ್ಯೇಕತೆ ಬಂದು ಒಡಕು ಹುಟ್ಟಿಕೊಳ್ಳುತ್ತದೆ. ಇದು ಭಾಷಾ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆಯೆಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹೇಳಿದ್ದಾರೆ.
ಅವರಿಂದು ಮಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯವು (ಕೇಂದ್ರ) ಸಾಹಿತ್ಯ ಅಕಾಡೆಮಿಯು ಎಲ್ಲಾ ಐದು ಲಿಪಿಗಳ ಕೊಂಕಣಿ ಸಾಹಿತ್ಯವನ್ನು ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ತೀಚೆಗೆ ಸಾಹಿತ್ಯ ಅಕಾಡೆಮಿಯ ಉಪ ನಿಬಂಧನೆಗಳ ಪ್ರಕಾರ ದೇವನಾಗರಿ ಲಿಪಿಗೆ ಮಾತ್ರ ಪುರಸ್ಕಾರ ಎಂಬ ನೆಲೆಯಲ್ಲಿ ವಜಾಗೊಳಿಸಿದೆ. ಮಾನ್ಯ ಉಚ್ಛ ನ್ಯಾಯಾಲಯದ ಆದೇಶವು ಕೇವಲ (ಕೇಂದ್ರ) ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಮಾತ್ರ ಸೀಮಿತವಾಗಿರುತ್ತದೆ.
ಮಾನ್ಯ ನ್ಯಾಯಾಲಯದ ಈ ಆದೇಶವನ್ನು ಮುಂದಿಟ್ಟುಕೊಂಡು ಕೊಂಕಣಿ ಭಾಷೆಯ ಪ್ರಚಾರ ಮತ್ತು ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಕೆಲವರು ದೇವನಾಗರಿ ಮಾತ್ರ ಶ್ರೇಷ್ಟ, ಇತರ ಲಿಪಿಗಳು ಮಿಥ್ಯ ಎಂದು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಇಂಥಾ ಹೇಳಿಕೆಯೊಡನೆ ಕೊಂಕಣಿ ಶಿಕ್ಷಣದಲ್ಲಿ ಗೊಂದಲ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ಕೊಂಕಣಿಯ ಅವನತಿಗೆ ನಾಂದಿ ಹಾಡುವ ಕೆಲಸ. ಇದು ಸಲ್ಲದು. ಇಂಥ ಹೇಳಿಕೆಗಳಿಂದ ಕನ್ನಡ ಲಿಪಿ ಮೂಲಕ ಕೊಂಕಣಿ ಬೆಳೆಸುತ್ತಿರುವ ಸಂಸ್ಥೆಗಳಿಗೆ ಬೇಸರ ತಂದಿದೆ ಎಂದವರು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯು ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿ ಕೊಂಕಣಿ ಭಾಷೆಗಾಗಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಕಾಡೆಮಿಯ ಸಮಿತಿಯು ಕನ್ನಡ ಲಿಪಿಯಲ್ಲಿ ಕೊಂಕಣಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ, ಬೋಧಕರಿಗೆ, ಸಾಹಿತಿಗಳಿಗೆ ಕಲಾವಿದರಿಗೆ, ನಾಟಕಕಾರರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿದೆ. ಅಷ್ಟೇ ಅಲ್ಲದೇ ಅಕಾಡೆಮಿಯು ವಾರ್ಷಿಕವಾಗಿ ನೀಡುವ ಪ್ರಶಸ್ತಿಗಳೂ ಕನ್ನಡ ಲಿಪಿಯ ಪುಸ್ತಕಗಳಿಗೆ ಸಾಹಿತಿಗಳಿಗೆ ಸಲ್ಲುತ್ತಿವೆ. ಪ್ರಸ್ತುತ ಕರ್ನಾಟಕದ ಕರಾವಳಿ ಜಿಲ್ಲೆಗಳ 76 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1189 ವಿದ್ಯಾರ್ಥಿಗಳು ಕೊಂಕಣಿಯನ್ನು ಅಭ್ಯಸಿಸುತ್ತಿದ್ದಾರೆ.
ಅಕಾಡೆಮಿ, ಲಿಪಿಯ ವಿಷಯದಲ್ಲಿ ಭೇದ ಭಾವ ಮಾಡದೇ ಕನ್ನಡ ದೇವನಾಗರಿ, ರೋಮಿ ಲಿಪಿಗಳಲ್ಲಿ ಕೊಂಕಣಿ ಕಾರ್ಯಾಗಾರ ನಡೆಸಲು ಅನುದಾನವನ್ನು ನೀಡುತ್ತಿದ್ದು, ಎಲ್ಲಾ ಲಿಪಿಗಳಿಗೂ ಪ್ರಾತಿನಿಧ್ಯವನ್ನು ನೀಡುತ್ತಿರುವಾಗ ಕೆಲವರ ಇಂಥಾ ಬಾಲಿಶ ಹೇಳಿಕೆಗಳಿಂದ ಕೊಂಕಣಿ ಮಾತೃಭಾಷಿಕ ಸಮುದಾಯಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತಿದೆ. ಕೊಂಕಣಿ ಏಕತೆಗೆ ಎಲ್ಲರ ಸಹಕಾರ ಬೇಕು. ದೇವನಾಗರಿ, ಕನ್ನಡ, ರೋಮಿ ಎಂದು ಲಿಪಿಗಾಗಿ ಹೋರಾಡಿದರೆ ಕೊಂಕಣಿಗರಲ್ಲೇ ಪ್ರತ್ಯೇಕತೆ ಬಂದು ಒಡಕು ಹುಟ್ಟಿಕೊಳ್ಳುತ್ತದೆ. ಇದು ಭಾಷಾ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಒಂದು ಅಲ್ಪಸಂಖ್ಯಾತ ಭಾಷೆಯಾಗಿ ಕೊಂಕಣಿಯನ್ನು ಉಳಿಸುವ ಒಂದು ಅವಕಾಶವನ್ನು ಕರ್ನಾಟಕ ಸರಕಾರವು ತನ್ನ ಆದೇಶ ಸಂಖ್ಯೆ ಇಡಿ 207- ಡಿಜಿಒ-2004, ಬೆಂಗಳೂರು, ದಿನಾಂಕ 13-03-2007 ಪ್ರಕಾರ 6ನೇ ತರಗತಿಯಿಂದ ತೃತೀಯ ಐಚ್ಛಿಕ ಭಾಷೆಯಾಗಿ ಕನ್ನಡ ಮತ್ತು ದೇವನಾಗರಿ ಲಿಪಿಗಳಲ್ಲಿ ಕೊಂಕಣಿ ಕಲಿಸಲು ಆದೇಶ ನೀಡಿದೆ. ಅಕಾಡೆಮಿ ಕೂಡಾ 2 ಲಿಪಿಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಅಕಾಡೆಮಿಯ ವತಿಯಿಂದ ಶಿಕ್ಷಕರ ಕಾರ್ಯಾಗಾರ, ಪಠ್ಯ ಪುಸ್ತಕ ಖರೀದಿ, ವಾರ್ಷಿಕ ಶಿಕ್ಷಕರ ಸಮಾವೇಶ ಹಾಗೂ ಕೊಂಕಣಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ 2 ಲಿಪಿಗಳ ಶಿಕ್ಷಕರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ ಎಂದರು.
ಕೊಂಕಣಿ ಶಿಕ್ಷಣ
ಕಳೆದ 8 ವರ್ಷಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೊಂಕಣಿಯನ್ನು ಕಲಿಯುತ್ತಿದ್ದಾರೆ. 2011-12 ನೇ ಸಾಲಿನಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಕನ್ನಡ ಲಿಪಿಯಲ್ಲಿ ಕೊಂಕಣಿ ಪರೀಕ್ಷೆ ಬರೆಯಲಾಗುತ್ತಿದೆ. ಈ ಸಾಲಿನಲ್ಲಿ 12 ಪ್ರೌಢ ಶಾಲೆಗಳಿಂದ 77 ವಿದ್ಯಾರ್ಥಿಗಳು ಕೊಂಕಣಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಎಪ್ರಿಲ್ 13 ರಂದು ಈ ಸಾಲಿನ ಕೊಂಕಣಿ ಪರೀಕ್ಷೆ ನಡೆಯಲಿದೆ.
ಸದ್ಯದಲ್ಲೇ ಪಿಯುಸಿಗೆ ಸರಕಾರದ ಆದೇಶ ದೊರಕುವ ನಿರೀಕ್ಷೆ
ಮಂಗಳೂರು ವಿಶ್ವವಿದ್ಯಾನಿಲಯದ ಪಾದುವಾ, ರೊಸಾರಿಯೊ ಮತ್ತು ಪೊಂಪೈ ಕಾಲೇಜುಗಳಲ್ಲಿ ಪದವಿಯಲ್ಲಿ ಕೊಂಕಣಿ ಕಲಿಕೆ ಆರಂಭಿಸಲಾಗಿದೆ. ಮುಂದಿನ ಸಾಲಿನಿಂದ ಇನ್ನೂ ಕೆಲ ಕಾಲೇಜುಗಳು ಕೊಂಕಣಿ ಶಿಕ್ಷಣಕ್ಕೆ ಸೇರ್ಪಡೆಗೊಳ್ಳಲಿವೆ. ಸ್ವಾಯತ್ತ ಕಾಲೇಜಾಗಿರುವ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಕಳೆದ 20 ವರ್ಷಗಳಿಂದ ಕೊಂಕಣಿ ಕಲಿಸಲಾಗುತ್ತಿದೆ. ಕಳೆದ ವರ್ಷ ಕೊಂಕಣಿ ಅಕಾಡೆಮಿಯ ಮುತುವರ್ಜಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠವನ್ನು ಆರಂಭಿಸಲಾಗಿದೆ. ಸ್ನಾತಕೋತ್ತರ ಶಿಕ್ಷಣದಲ್ಲಿ ಕೊಂಕಣಿಯನ್ನು ಕಲಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಕೊಂಕಣಿ ಎಂ.ಎ. ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಆಸಕ್ತಿ ತೋರಿದ್ದಾರೆ.
ಕೊಂಕಣಿಯಲ್ಲಿ 41 ಸಮುದಾಯಗಳ, 3 ಧರ್ಮಗಳ, 5 ಲಿಪಿಗಳ, ಹಲವಾರು ಪ್ರಬೇಧಗಳ, ಸಂಸ್ಕøತಿಗಳ ವೈವಿಧ್ಯತೆ ಇದೆ. ಈ ವೈವಿಧ್ಯತೆಯನ್ನು ಉಳಿಸಿ ಬೆಳೆಸಲು ಎಲ್ಲಾ ಕೊಂಕಣಿಗರು ಕೈ ಜೋಡಿಸಬೇಕು. ಕೊಂಕಣಿ ಏಕತೆಯ ಭಾಷೆ, ಆ ಏಕತೆಯನ್ನು ಉಳಿಸಿ ಬೆಳೆಸುವುದು ನಮ್ಮ ಧರ್ಮವಾಗಿದೆ ಎಂದವರು ವಿನಂತಿಸಿದರು.
ಉತ್ತರ ಕನ್ನಡದಲ್ಲಿ ಕೊಂಕಣಿ ಶಿಕ್ಷಣ ಜಾಗೃತಿ ಅಭಿಯಾನ
ಉತ್ತರ ಕನ್ನಡದಲ್ಲಿ ಕೊಂಕಣಿ ಮಾತೃಭಾಷಿಕ ಸಮುದಾಯಗಳು ಹೆಚ್ಚಿದ್ದರೂ, ವಿವಿಧ ಕಾರಣಗಳಿಂದಾಗಿ ಕೊಂಕಣಿ ಕಲಿಕೆ ವೇಗ ಪಡೆದುಕೊಂಡಿಲ್ಲ. ಈ ಕಾರಣದಿಂದ ಕೊಂಕಣಿ ಅಕಾಡೆಮಿಯು ಈ ಸಲ ವಿಶೇಷ ಮುತುವರ್ಜಿ ವಹಿಸಿದೆ. ಕಳೆದ ಸೆಪ್ಟೆಂಬರ್‍ನಲ್ಲಿ ಶಿರಸಿಯಲ್ಲಿ ಕೊಂಕಣಿ ಮಾತೃಭಾಷಿಕ ಶಿಕ್ಷಕರ ದಿನಾಚರಣೆ ಹಮ್ಮಿಕೊಂಡಿತ್ತು. ಇದರಿಂದ ಪ್ರೇರಿತಗೊಂಡ 47 ಶಿಕ್ಷಕರು ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ ಸಹಯೋಗದೊಂದಿಗೆ ಸಂತ ಎಲೋಶಿಯಸ್ ಕಾಲೇಜಿನ ಕೊಂಕಣಿ ಡಿಪ್ಲೋಮಾ ತರಗತಿಗಳಿಗೆ (ದೂರ ಶಿಕ್ಷಣ) ಸೇರ್ಪಡೆಗೊಂಡಿದ್ದಾರೆ.
ನಂತರ ಕಳೆದ ಡಿಸೆಂಬರ್ 09 ಹಾಗೂ 10 ರಂದು ಅಕಾಡೆಮಿಯ ತಂಡವು ಕಾರವಾರದ ಸುಮಾರು 26 ಶಾಲೆಗಳಿಗೆ ಭೇಟಿ ನೀಡಿ ಕೊಂಕಣಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿತು. ಅದರ ಮುಂದುವರಿದ ಭಾಗವಾಗಿ ಮಾರ್ಚ್ 10 ರಿಂದ 15 ವರೆಗೆ ಪುನಃ ಶಾಲೆಗಳಿಗೆ ಭೇಟಿ ನೀಡಲಾಗುವುದು. ಡಿಡಿಪಿಐ, ಬಿಇಒ, ಶಾಲಾಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇವರನ್ನು ಭೇಟಿ ಮಾಡಿ ಕೊಂಕಣಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ರಿಜಿಸ್ಟ್ರಾರ್ ಡಾ. ದೇವದಾಸ ಪೈ, ಸದಸ್ಯರಾದ ಶೇಖರ ಗೌಡ, ಲಾರೆನ್ಸ್ ಡಿಸೋಜ ಹಾಜರಿದ್ದರು.
ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com