ಸ್ಮಾರ್ಟ್ ಮಂಗಳೂರು: ಮೃಗೀಯ ರಸ್ತೆಗಳ ತವರೂರು
ಸಾಲ ತಂದ ನೂರಾರು ಕೋಟಿ ರೂಪಾಯಿಗಳಿಂದ ನಿರ್ಮಿಸಲಾದ ಮಂಗಳೂರಿನ ಕಾಂಕ್ರೀಟ್ ರಸ್ತೆಗಳ ನೈಜ ಸ್ಥಿತಿ ಹೇಗಿದೆಯೆಂದು ನಿನ್ನೆಯ ಲೇಖನದ ಜೊತೆಗಿನ ಚಿತ್ರಗಳನ್ನು ನೋಡಿ ನಿಮಗೆ ತಿಳಿಯಿತಲ್ಲಾ? ಅಬ್ಬಾ, ಎಷ್ಟೊಂದು ಚಿತ್ರಗಳೆಂದು ನೀವು ಹುಬ್ಬೇರಿಸಿರಲೂಬಹುದು.
ಆದರೆ, ವಾಸ್ತವವೇನೆಂದರೆ ನೀವು ಮಂಗಳೂರಿನ ಈ ಕಾಂಕ್ರೀಟ್ ರಸ್ತೆಗಳಲ್ಲಿ ಒಂದು ಸುತ್ತು ಹೋಗಿ ಬಂದರೆ ಹೋದಲ್ಲೆಲ್ಲಾ ಮತ್ತು ಕಂಡಲ್ಲೆಲ್ಲಾ ಇವೇ ಅವಾಂತರಗಳೂ. ಎಲ್ಲಾ ಕಡೆಯೂ ಅಷ್ಟೇ. ಎಲ್ಲೋ ಅಲ್ಲೊಂದು ಇಲ್ಲೊಂದು ಕಡೆ ಬಿಟ್ಟರೆ ಎಲ್ಲಿಯೂ ಫುಟ್‍ಪಾತ್ ಇಲ್ಲ, ಚರಂಡಿ ವ್ಯವಸ್ಥೆಯಿಲ್ಲ. ಫಿನಿಶಿಂಗ್ ಕೆಲಸವೆಂಬುದೇ ಕಾಣುವುದಿಲ್ಲ. ಕಾಲು ಒಂದು ಇಂಚು ಆಯ ತಪ್ಪಿದರೆ ಮರಣ ಗುಂಡಿಗೆ ಬೀಳುವುದು ನಿಶ್ಚಿತ. ಬಹು ದುಬಾರಿಯಾದ ಈ ರಸ್ತೆಗಳು ಇಷ್ಟೊಂದು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ್ದನ್ನು ನೋಡುವಾಗ ಕೋಪ ಕೆರಳಿ ಬರುತ್ತದೆ. ಆದರೆ ಏನು ಮಾಡುವುದು, ಮಂಗಳೂರಿನ ಬುದ್ಧಿವಂತ ನಾಗರಿಕರು ತಾವುಂಟು, ತಮ್ಮದುಂಟು ಎನ್ನುವ ಮನಸ್ಥಿತಿಯವರು. ರಸ್ತೆ ಹೇಗೇ ಇರಲಿ, ಯಾರಿಗೇನೂ ಆಗಲಿ ತಾನು ಸುರಕ್ಷಿತನಿದ್ದರೆ ಸಾಕೆಂಬ ಮನೋಭಾವ! ಅದಕ್ಕೇ ಹೀಗಾಗಿದೆ.
ಬಹುಶ ನಮ್ಮ ದೇಶದಲ್ಲಿಯೇ ಅತ್ಯಂತ ದುಬಾರಿ ವೆಚ್ಚದಿಂದ ನಿರ್ಮಿಸಲಾದ ಈ ರಸ್ತೆಗಳು ಜನರ ಜೀವಕ್ಕೂ ಅಷ್ಟೇ ದುಬಾರಿಯೆನಿಸಿವೆ. ಅತ್ಯಂತ ಅಪಾಯಕಾರಿ ಕಾಮಗಾರಿ ಈ ರಸ್ತೆಗಳದ್ದು.
ಅದನ್ನೆಲ್ಲಾ ವಿವರಿಸಿ ಹೇಳುವುದಕ್ಕಿಂತ ಸೀದಾ ತೋರಿಸುವುದೇ ಉತ್ತಮ. ಹಾಗಾಗಿ ನಿಮಗಿಂದು ಇನ್ನಷ್ಟು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ. ನೋಡಿ, ಕಣ್ತುಂಬಿಕೊಳ್ಳಿ ಮಂಗಳೂರಿನ ಶ್ರೀಮಂತ ವೈಭವವನ್ನು!
ಇಂದಿನ ಚಿತ್ರಗಳಲ್ಲಿ ಕಾಂಕ್ರೀಟ್ ರಸ್ತೆಗಳಲ್ಲದೇ ಎಂದಿನ ಡಾಮರು ಹಾಕಿ (ಕಿತ್ತು ಹೋದ) ರಸ್ತೆಗಳೂ ಪ್ರದರ್ಶನಕ್ಕಿವೆ. ಇದು ಮಂಗಳೂರಿನ ಸ್ಮಾರ್ಟ್ ನಾಗರಿಕರಿಗೆ, ಸವಾರರಿಗೆ, ಚಾಲಕರಿಗೆ, ಪ್ರಯಾಣಿಕರಿಗೆ ಮತ್ತು ಪಾದಾಚಾರಿಗಳಿಗೆ 24×7 ಅನುಭವ. ದಶಕಗಳಿಂದ ಇದೇ ಪಾಡು, ಅರ್ಥಾತ್ ನಾಯಿಪಾಡು. ಇದು ಮಂಗಳೂರಿನ ಹಣೆಬರಹ!
ಈಗ ಹೇಳಿ ಮಂಗಳೂರು ಎಂಬುದು ನಗರವೇ ಅಥವಾ ನರಕವೇ?
ಇನ್ನೊಂದು ಸಂಗತಿಯಿದೆ. ನಗರಪಾಲಿಕೆಯವರು ಬಾಚಿ ಬಾಚಿ ಸಾಲ ತಂದು ನಿರ್ಮಿಸುವ ಈ ಕಾಂಕ್ರೀಟ್ ರಸ್ತೆಗಳಿಗೆ 100 ವರ್ಷದ ಗ್ಯಾರಂಟಿಯೇನೋ ನೀಡಲಾಗುತ್ತದೆ. ಆದರೆ ತಿಂಗಳುಗಟ್ಟಲೆ ರಸ್ತೆ ಬಂದ್ ಮಾಡಿ ನಿರ್ಮಿಸಿದ ಈ ಗಟ್ಟಿಮುಟ್ಟಾದ ರಸ್ತೆಗಳನ್ನು ಕೆಲವೇ ತಿಂಗಳಲ್ಲಿ ಮತ್ತೆ ಕತ್ತರಿಸಿ ತೆಗೆದು ಇನ್ನೇನೋ ಬಾಕಿಯುಳಿದ ಕಾಮಗಾರಿ ತೀರಿಸಿ ಮತ್ತೆ ಹೊಸದಾಗಿ ಕಾಮಗಾರಿ ನಡೆಸುವ ಸಂಪ್ರದಾಯವೂ ಇದೆ.
ಯಾರಿಗೇನಾದರೇನಂತೆ ಅಲ್ಲವೆ? ಇಲ್ಲಿನ ಜನರೇ ಅಲ್ಲವೇ ಮುಂದಿನ ವರ್ಷಗಳಲ್ಲಿ ಇದರ ಸಾಲ ಮತ್ತದರ ಬಡ್ಡಿ ಕಟ್ಟಬೇಕಾದದ್ದು. ಮಂಗಳೂರಿನ ನಗರಪಾಲಿಕೆಗೆ ಎಷ್ಟೊಂದು ಬುದ್ಧಿವಂತಿಕೆಯಿದೆ, ತಿಳಿಯಿತಲ್ಲಾ!?
(ಭಾಗ – 4ರಲ್ಲಿ ಮುಂದುವರಿಯಲಿದೆ)
ಭಾಗ – 1: ಸ್ವಚ್ಛ ಮಂಗಳೂರು ಓಕೆ; ವಿಕೃತ ಮಂಗಳೂರು ಏಕೆ?
ಭಾಗ – 2: ಬುದ್ಧಿವಂತರ ರಾಜಧಾನಿ; ಎಡವಟ್ಟು ರಸ್ತೆಗಳ ಪುಣ್ಯಕ್ಷೇತ್ರ
Copyright @ www.budkulo.com