Latest News

ಶಿರ್ವಾ ಪ್ರಕರಣ: ಫಾ. ಮಹೇಶ್ ಬರೆದಿದ್ದ ಪರ್ಸನಲ್ ಡೈರಿ ಮತ್ತು ‘ಡೆತ್ ನೋಟ್’ ಎಲ್ಲಿ ಮಾಯವಾದವು?!

Budkulo Media Network

Posted on : March 11, 2020 at 11:23 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಒಂದು ಲೆಕ್ಕದಲ್ಲಿ ಹೇಳುವುದಾದರೆ ಇದೊಂದು ನಿಜಕ್ಕೂ ಬಹು ವಿಚಿತ್ರ ಪ್ರಸಂಗ. ಬಹುಶಃ ಎಲ್ಲೂ ಹೀಗೆ ನಡೆದಿಲ್ಲವೆನಿಸುತ್ತದೆ. ಫಾ. ಮಹೇಶ್ ಡಿಸೋಜ ಅವರು ಅಸಹಜ ಸಾವಿಗೀಡಾಗಿ ಇಂದಿಗೆ ಭರ್ತಿ ಐದು ತಿಂಗಳು ಸಂದವು. ಶಿರ್ವಾದ ಡೊನ್ ಬೊಸ್ಕೊ ಸಿಬಿಎಸ್‍ಇ ಶಾಲೆಯ ಕ್ರಿಯಾಶೀಲ ಪ್ರಾಂಶುಪಾಲರಾಗಿದ್ದ, ಜನರ ಮತ್ತು ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದ ಧರ್ಮಗುರು ತಥಾ ಶಿಕ್ಷಕ ಫಾ. ಮಹೇಶ್ ಡಿಸೋಜ ಇದ್ದಕ್ಕಿದ್ದಂತೆ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದನ್ನು ಅರಗಿಸಿಕೊಳ್ಳಲು ಬಹುತೇಕರಿಗೆ ಇಂದಿಗೂ ಸಾಧ್ಯವಾಗಿಲ್ಲ.

ವಿಚಿತ್ರ ಪ್ರಸಂಗವೆಂದದ್ದೇಕೆಂದರೆ, ಬೇರೆ ಸಾವಿನ ಪ್ರಕರಣಗಳಂತೆ ಇಲ್ಲಿ ಯಾರು ಕೂಡಾ ತಪ್ಪಿಸಿಕೊಂಡಿಲ್ಲ ಅಥವಾ ಪರಾರಿಯಾಗಿಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಿತಸ್ಥರಾದವರು ಪರಾರಿಯಾಗುವುದು ಸಹಜ. ಅಂತಹವರು ನೇರವಾಗಿ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ. ಶಿಕ್ಷೆಗೆ ಹೆದರಿ ಅಪರಾಧಿಗಳು ಅವಿತುಕೊಳ್ಳುವುದು ಮಾಮೂಲು. ಆದರೆ ಶಿರ್ವಾದ ಪ್ರಕರಣದಲ್ಲಿ ಹಾಗೆ ಆಗಿರಲಿಲ್ಲ. (ಕೆಲವರು ಕೆಲ ದಿನ ‘ಅವಿತು’ಕೊಂಡಿದ್ದರು ಎಂಬ ಸುದ್ದಿಯಿತ್ತು!).

Fr Mahesh_Whr is Persona Diary

ಐದು ತಿಂಗಳಾದರೂ ಫಾ. ಮಹೇಶ್ ಸಾವಿನ ಪ್ರಕರಣದ ತನಿಖೆ ಮುಗಿದಿಲ್ಲ! ನಿಜಕ್ಕೂ ಅಷ್ಟೊಂದು ಸಂಕೀರ್ಣ ಪ್ರಕರಣವಿದಾಗಿರಬಹುದೇ ಎಂಬುದೇ ಆಶ್ಚರ್ಯಕರ ಸಂಗತಿ. ತನಿಖೆಯನ್ನು ಮುಕ್ತಾಯಗೊಳಿಸಲು ಫೊರೆನ್ಸಿಕ್ ಲ್ಯಾಬ್‍ನ ವರದಿ ಬರಲು ತಡವಾಗಿತ್ತೆನ್ನುವುದೇನೋ ನಿಜ. ಮಹತ್ತರ ಸಾಕ್ಷ್ಯವಾಗಬೇಕಾಗಿದ್ದ ಫಾ. ಮಹೇಶ್‍ರ ಮೊಬೈಲ್ ಫೋನ್‍ನ ವಿವರಗಳು ಕೊನೆಗೂ ಸಿಗಲೇ ಇಲ್ಲ (ಐಫೋನ್‍ನ ವಿವರಗಳನ್ನು ಇತರರಿಗೆ ಕೊಡಲಾಗುವುದಿಲ್ಲವೆಂಬ ಆ್ಯಪಲ್ ಕಂಪೆನಿಯ ನಿಮಯದ ಕಾರಣ) ಎಂಬುದು ಸದ್ಯ ಜನರ ಬಾಯಿಯಲ್ಲಿ ಓಡಾಡುತ್ತಿರುವ ಮಾತು. ಆದರೆ ಲಭ್ಯ ಇತರ ಸಾಕ್ಷ್ಯಾಧಾರಗಳ ಅನುಸಾರ ಓರ್ವನನ್ನು ಈಗಾಗಲೇ ಪೊಲೀಸರು ಬಂಧಿಸಿ, ಪ್ರಕರಣವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಕುತೂಹಲದ ಬೆಳವಣಿಗೆಯೆಂದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ಮಜಲಿನ ತನಿಖೆ ಸದ್ಯ ಪ್ರಗತಿಯಲ್ಲಿದೆ. ಶಿರ್ವಾದ ಕೆಲ ವ್ಯಕ್ತಿಗಳು ನೀಡಿದ ದೂರಿನನ್ವಯ ಮತ್ತೊಂದು ಸುತ್ತಿನ ವಿಚಾರಣೆ ನಡೆಯುತ್ತಿದೆ. ಕಾಪು ವೃತ್ತ ನಿರೀಕ್ಷಣಾಧಿಕಾರಿ ಮಹೇಶ್ ಪ್ರಸಾದ್ ಅವರೇ ಈ ತನಿಖೆಯನ್ನು ನಡೆಸುತ್ತಿದ್ದಾರೆ. ಈ ತನಿಖೆ ಎಲ್ಲಿಗೆ ಬಂದು ತಲುಪುತ್ತದೆ, ಏನೇನು ಸತ್ಯಗಳು, ನಿಗೂಢ ಸಂಗತಿಗಳು ಹೊರ ಬರುತ್ತವೆಯೆಂದು ತಿಳಿದುಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ.

ಈ ನಡುವೆ, ‘ಬುಡ್ಕುಲೊ’ ಇ-ಪತ್ರಿಕೆಗೆ ಹಲವು ವಿಷಯಗಳು ತಿಳಿದು ಬಂದಿವೆ. (ಪತ್ರಿಕೆ/ಮಾಧ್ಯಮಗಳಿಗೆ ಅವರದೇ ಆದ ಸುದ್ದಿ/ಮಾಹಿತಿ ಮೂಲಗಳಿರುತ್ತವೆಯೆಂಬುದನ್ನು ನಮ್ಮ ಓದುಗರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ). ಇವೇನೂ ಹೊಸ ಸಂಗತಿಗಳೂ, ಗುಪ್ತ ಮಾಹಿತಿಯೂ ಅಲ್ಲ. ಎಲ್ಲವನ್ನೂ ಸಂಬಂಧಪಟ್ಟವರು ತನಿಖೆಯ ವೇಳೆ ಅಧಿಕಾರಿಗಳಿಗೆ ವಿವರಿಸಿದ್ದಾರೆ. ಅದನ್ನೇ ನಮಗವರು ತಿಳಿಸಿದ್ದಾರೆ.

Fr Mahesh_Whr is DNote

ಅಕ್ತೋಬರ್ 11, 2019ರಂದು ರಾತ್ರಿ ವೇಳೆಗೆ ಫಾ. ಮಹೇಶ್‍ರ ಸಾವಿನ ಘಟನೆ ನಡೆದಿತ್ತು. ಹೆಚ್ಚಿನ ಜನರಿಗೆ ಆ ಸುದ್ದಿ ತಿಳಿದಿದ್ದು ಮರುದಿನ ಬೆಳಿಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರವೇ. ಆ ಆಘಾತಕಾರಿ ಸುದ್ದಿಯನ್ನು ಹೆಚ್ಚಿನ ಜನರು ನಂಬಲು ತಯಾರಿರಲಿಲ್ಲ. ಏಕೆಂದರೆ ಆ ವರದಿಗಳ ಪ್ರಕಾರ ಫಾ. ಮಹೇಶ್ ಅವರದ್ದು ಆತ್ಮಹತ್ಯೆಯಾಗಿತ್ತು.

ಫಾ. ಮಹೇಶ್ ಡಿಸೋಜ ಅವರು ಆತ್ಮಹತ್ಯೆ ಮಾಡುವಂತಹ ವ್ಯಕ್ತಿಯೇ ಆಗಿರಲಿಲ್ಲ!

ಜನರು ಹಾಗೆ ನಂಬಲು, ಭಾವಿಸಲು ಸಕಾರಣಗಳಿದ್ದವು. ಮೊದಲನೆಯದು ಅವರ ವ್ಯಕ್ತಿತ್ವ. ದ್ವಿತೀಯವಾಗಿ, ಆ ದುರ್ಘಟನೆಯ ನಂತರದ ಬೆಳವಣಿಗೆಗಳು ಜನರಲ್ಲಿ ಸುಲಭವಾಗಿ ಸಂಶಯ ಮೂಡಲು ಕಾರಣವಾಗಿದ್ದವು. ಅದಕ್ಕಿಂತಲೂ ಮುಖ್ಯವಾಗಿ, ಫಾ. ಮಹೇಶ್ ಅವರ, ನೇತಾಡುತ್ತಿದ್ದ ಮೃತದೇಹದ, ಫೋಟೋಗಳು ಜನರಲ್ಲಿ ಅಸಂಖ್ಯವಾದ ಸಂಶಯಗಳನ್ನು ಹುಟ್ಟು ಹಾಕಿದ್ದವು. ಕ್ಷಣಮಾತ್ರದಲ್ಲಿ ಪ್ರಪಂಚದಾದ್ಯಂತ ಮಾಹಿತಿ ತಲುಪಿಸಬಲ್ಲ ಸಾಮಾಜಿಕ ಜಾಲತಾಣಗಳ ಮುಖಾಂತರ ಆ ಚಿತ್ರಗಳು ಅಸಂಖ್ಯ ಜನರನ್ನು ತಲುಪಿದ್ದವು. ಆ ಚಿತ್ರಗಳೂ ಮತ್ತವನ್ನು ಹಿಂಬಾಲಿಸಿ ಬಂದ ಜನರ ಸಂಶಯ, ಕುತೂಹಲಗಳು ಸಾರ್ವಜನಿಕರಲ್ಲಿ ಮತ್ತಷ್ಟು ಗೊಂದಲ, ಗುಮಾನಿ ಮೂಡಿಸಿದ್ದವು.

Fr Mahesh DSouzaಅದೆಲ್ಲ ಕಾರಣದಿಂದ, ಇಂದಿಗೂ ಹೆಚ್ಚಿನ ಜನರದ್ದು, ಫಾ. ಮಹೇಶ್ ಅವರದು ಆತ್ಮಹತ್ಯೆ ಅಲ್ಲವೆಂಬುದೇ ಭಾವನೆಯಾಗುಳಿದೆ. ತದನಂತರ ನಡೆದ ಕೆಲ ಬೆಳವಣಿಗೆಗಳು, ಸಂಬಂಧಪಟ್ಟ ವ್ಯಕ್ತಿಗಳ ವರ್ತನೆ, ಹೇಳಿಕೆಗಳು ಈ ಸಂಶಯಗಳನ್ನು ಪುಷ್ಟೀಕರಿಸಿದವು ಹಾಗೂ ಸಂಗತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಲು ನೆರವಾದವೇ ಹೊರತು ಯಾವುದೇ ಸಕಾರಾತ್ಮಕ ಪರಿಹಾರ ದೊರಕಿಸಲಿಲ್ಲ. ಹಲವರ ನಡವಳಿಕೆಗಳು ತಪ್ಪಿತಸ್ಥ ಮನೋಭಾವದಿಂದ ಕೂಡಿದ್ದವೆಂಬುದನ್ನು ಜನರು ಅರ್ಥೈಸಿಕೊಂಡರು. ಹಾಗಾಗಿ ಫಾ. ಮಹೇಶ್ ಆತ್ಮಹತ್ಯೆ ಮಾಡಿಲ್ಲ; ಅವರನ್ನು ‘ಮುಗಿಸ’ಲಾಗಿದೆಯೆಂದೇ ಜನರು ಭಾವಿಸುವಂತಾಯಿತು. (ಆ ನಡುವೆ ಬಹಿರಂಗವಾದ ಅನಾಮಿಕ ಪತ್ರವು ಜನರ ಸಂಶಯ ಮತ್ತಷ್ಟು ಬಲಗೊಳ್ಳುವಂತೆ ಪುಷ್ಟಿ ನೀಡಿತು).

ಇದೀಗ, ವಿಚಾರಣೆ ಒಂದು ಹಂತಕ್ಕೆ ಬಂದಿದ್ದು, ಸಾಂದರ್ಭಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ, ಫಾ. ಮಹೇಶ್‍ರನ್ನು ಆತ್ಯಹತ್ಯೆಗೆ ಪ್ರಚೋದಿಸಿದ್ದಾರೆಂಬ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಅಲ್ಲಿಗೆ, ಈ ತನಿಖೆಯ ಪ್ರಕಾರ, ಫಾ. ಮಹೇಶ್ ಆತ್ಮಹತ್ಯೆ ಮಾಡಿದ್ದಾರೆಂಬ ನಿರ್ಧಾರಕ್ಕೆ ಬರಲಾಗಿದೆ.

ಈ ಹಿಂದೆಯೇ, ‘ಬುಡ್ಕುಲೊ’ ಇ-ಪತ್ರಿಕೆಗೆ ನಂಬಲರ್ಹ ಮೂಲಗಳಿಂದ ತಿಳಿದು ಬಂದ ಪ್ರಕಾರ, ಫಾ. ಮಹೇಶ್ ಅವರದ್ದು ಆತ್ಮಹತ್ಯೆಯೇ ಆಗಿತ್ತು ಎಂಬುದಾಗಿ ಅಂದಾಜು ತೇಲಿ ಬಂದಿತ್ತು. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಪ್ರಕಾರ ಅದು ಆತ್ಮಹತ್ಯೆಯೇ ಆಗಿರಬೇಕೆಂಬ ಅಭಿಪ್ರಾಯಕ್ಕೆ ಬರಲಾಗಿತ್ತು. ಆದರೆ ಎಲ್ಲರಿಗೂ ಕಾಡುತ್ತಿದ್ದ ಮೂಲ ಪ್ರಶ್ನೆ ಏನಾಗಿತ್ತೆಂದರೆ, ‘ಫಾ. ಮಹೇಶ್ ಆತ್ಮಹತ್ಯೆಯ ಕಠಿಣ ನಿರ್ಧಾರಕ್ಕೆ ಬರಲು ಕಾರಣವೇನು?’ ಎಂಬುದಾಗಿತ್ತು.

ಹೌದು, ಆ ಕಾರಣ ಇಂದಿಗೂ ತಿಳಿದು ಬಂದಿಲ್ಲ; ಸಂಶಯ ಸಂಪೂರ್ಣ ನಿವಾರಣೆಯಾಗಿಲ್ಲ. ಯಾಕೆಂದರೆ, ಫಾ. ಮಹೇಶ್ ಅವರನ್ನು ಹತ್ತಿರದಿಂದ ಬಲ್ಲ, ಅವರ ಬಹು ಆತ್ಮೀಯ ಜನರಿಗೆ, ಫಾ. ಮಹೇಶ್ ಅವರು ಸಾಕಷ್ಟು ಸಮಯದಿಂದ ನೊಂದುಕೊಂಡಿದ್ದರೆಂಬ ಸಂಗತಿ ತಿಳಿದಿತ್ತು. ಕುಟುಂಬದ ಸದಸ್ಯರೂ, ಆಪ್ತ ಮಿತ್ರರೂ ಅದನ್ನು ದೃಢಪಡಿಸಿದ್ದಾರೆ. ಆದರೆ ಅವರ ಸಾವು ಅಚಾನಕ್ಕಾಗಿ ಬಂದೆರಗಿತ್ತು.

Fr Mahesh_Shirva Report (5)

ತನಿಖಾಧಿಕಾರಿಗಳ ಪ್ರಕಾರ, ಎಫ್.ಎಸ್.ಎಲ್. ರಿಪೋರ್ಟ್ ಆಧಾರದಲ್ಲಿ, ಫಾ. ಮಹೇಶ್ ಅವರನ್ನು ಅಕ್ಟೋಬರ್ 11ರಂದು, ಸದ್ಯ ಬಂಧಿತನಾಗಿರುವ ಆರೋಪಿ, ಆತ್ಮಹತ್ಯೆ ಮಾಡುವಂತೆ ಬಲವಾದ ಪ್ರೇರಣೆ ನೀಡಿದ ಸಂಗತಿ ಬಯಲಾಗಿದೆ. ಗಮನಾರ್ಹ ಸಂಗತಿಯೇನೆಂದರೆ, ಆ ವ್ಯಕ್ತಿ ಮಾತನಾಡಿದ್ದೂ ಫಾ. ಮಹೇಶ್ ಆತ್ಮಹತ್ಯೆ ಮಾಡಿದ್ದೂ ಒಂದಕ್ಕೊಂದು ತಾಳೆಯಾಗುತ್ತದೆ! ಅದೇ ಘಟನೆಯಿಂದ, ಬಲವಾದ ಸಾಕ್ಷ್ಯ ಲಭ್ಯವಿರುವ ಕಾರಣ ಆ ವ್ಯಕ್ತಿ ಇದೀಗ ಕಂಬಿ ಎಣಿಸುವಂತಾಗಿದೆ.

ಆದರೆ, ಅಷ್ಟಕ್ಕೇ ಈ ಪ್ರಕರಣ ಸಮಾಪ್ತಿಯಾದೀತೇ?

ಇದೇ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಕಾರಣಗಳೂ ಇವೆ. ಖಂಡಿತವಾಗಿ, ಪ್ರತ್ಯಕ್ಷವಾಗಿ ಫಾ. ಮಹೇಶ್ ಅವರನ್ನು ಬಲ್ಲ ಸಾವಿರಾರು ಜನರಿದ್ದಾರೆ. ಅಲ್ಲದೆ ಅವರಿಗೆ ತುಂಬಾ ಆಪ್ತವಾಗಿದ್ದ ಹಲವು ಜನರೂ ಇದ್ದಾರೆ. ಅವರೆಲ್ಲರಿಗೆ ಬಹಳ ಸಮಯದಿಂದ ಫಾ. ಮಹೇಶ್‍ರ ತೊಳಲಾಟಗಳು, ವೇದನೆ-ಆತಂಕಗಳು, ಅಸಹಾಯತೆ, ಸಮಸ್ಯೆ-ಸಂಕಷ್ಟಗಳ ಅರಿವಿತ್ತು. ಕೊನೆಯ ಕ್ಷಣದಲ್ಲಿ ಏನೇ ಕುಮ್ಮಕ್ಕು ದೊರೆತು ತರಾತುರಿಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದು ಹೌದಾಗಿದ್ದೇ ಆದರೂ, ಆ ನಿರ್ಧಾರ ಒಮ್ಮಿಂದೊಮ್ಮೆಗೆ ಬಂದಿದ್ದಲ್ಲ ಎಂಬುದಾಗಿ ಅವರ ಅಚಲ ನಂಬಿಕೆ.

ಖಾಸಗಿ ಡೈರಿ ಎಲ್ಲಿ ಹೋಯಿತು? ಡೆತ್ ನೋಟ್ ಸಿಕ್ಕಿಲ್ಲವೇ?

ಫಾ. ಮಹೇಶ್‍ರಿಗೆ ಆಪ್ತವಾಗಿದ್ದ ವ್ಯಕ್ತಿಗಳಿಂದ ‘ಬುಡ್ಕುಲೊ’ ಇ-ಪತ್ರಿಕೆಗೆ ತಿಳಿದು ಬಂದ ಪ್ರಕಾರ, ಫಾ. ಮಹೇಶ್ ಅವರು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದರು ಮತ್ತು ತಮ್ಮ ದೈನಂದಿನ ಜೀವನವನ್ನು ಡೈರಿಯಲ್ಲಿ ಬರೆದಿಡುತ್ತಿದ್ದರು. ಇದನ್ನು ದೃಢಪಡಿಸುವಂತೆ, ಡೊನ್ ಬೊಸ್ಕೊ ಶಾಲೆಯಲ್ಲಿ ಫಾ. ಮಹೇಶ್ ಬರೆದಿದ್ದ ಡೈರಿ ಪೊಲೀಸರಿಗೆ ದೊರೆತಿದ್ದು, ಅದರಲ್ಲಿ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ನಮೂದಿಸಿದ್ದಾರೆಂದು ತಿಳಿದು ಬಂದಿದೆ. ಗಮನಾರ್ಹ ಸಂಗತಿಯೆಂದರೆ ಶಾಲೆಗೆ ಸಂಬಂಧಿಸಿದ ಕಚೇರಿಯಲ್ಲಿದ್ದ ಡೈರಿ ಪೊಲೀಸರ ಕೈಗೆ ಸಿಕ್ಕಿದೆಯಾದರೂ, ಅವರ ಖಾಸಗಿ ಡೈರಿ ಮಾತ್ರ ಪತ್ತೆಯಾಗಿಲ್ಲ!

ನಮ್ಮ ವಿಶ್ವಸನೀಯ ಮೂಲಗಳ ಪ್ರಕಾರ, ಫಾ. ಮಹೇಶ್ ಅವರು ಕೇವಲ ಪರ್ಸನಲ್ ಡೈರಿಯನ್ನು ಮಾತ್ರ ಬರೆಯುತ್ತಿರಲಿಲ್ಲ. ಅವರು ತಮ್ಮ ಜೀವನದ ಘಟನೆಗಳನ್ನು, ಮುಖ್ಯ ವಿಚಾರಗಳನ್ನು, ತುಮುಲಗಳನ್ನು, ಬೆಳವಣಿಗೆಗಳನ್ನು ವೀಡಿಯೋ ರೂಪದಲ್ಲಿಯೂ ದಾಖಲಿಸಿಡುತ್ತಿದ್ದರು (VLog ರೂಪದಲ್ಲಿ). ಅದನ್ನವರು ತಮ್ಮ ಮೊಬೈಲ್ ಫೋನ್‍ನಲ್ಲಿ ದಾಖಲಿಸಿಡುತ್ತಿದ್ದರು. ಅಷ್ಟೇ ಅಲ್ಲ ತಮ್ಮ ಆಪ್ತರಿಗೆ ಆ ಬಗ್ಗೆ ಮಾಹಿತಿಯನ್ನೂ ಅವರು ನೀಡಿದ್ದಾರಂತೆ. (ನಮಗೆ ತಿಳಿದು ಬಂದಿರುವ ಪ್ರಕಾರ, ಆ ಕೆಲ ವೀಡಿಯೋಗಳು ಲ್ಯಾಪ್‍ಟಾಪ್‍ನಲ್ಲಿಯೂ ಇವೆಯಂತೆ).

ಈ ಎಲ್ಲಾ ಸಂಗತಿಗಳನ್ನು ಅರಿತುಕೊಂಡಾಗ ಮತ್ತೊಂದು ಸಂಗತಿ ಎದುರಾಗುತ್ತದೆ. ಅದೆಂದರೆ ಫಾ. ಮಹೇಶ್ ಡಿಸೋಜ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿಲ್ಲವೇ ಎಂಬುದು. ಅಲ್ಲಲ್ಲಿ ಆತ್ಮಹತ್ಯೆ ಪ್ರಕರಣಗಗಳು ವರದಿಯಾಗುತ್ತಲೇ ಇರುತ್ತವೆ. ಸಾಮಾನ್ಯವಾಗಿ ಹೆಚ್ಚು ವಿದ್ಯೆಯಿಲ್ಲದವರೂ ಸಹ ತಮ್ಮ ಸಾವಿಗೆ ಕಾರಣ ಅಥವಾ ಆತ್ಮಹತ್ಯೆಯ ನಿರ್ಧಾರವನ್ನು ಬರೆದಿಟ್ಟು ಸಾಯುತ್ತಾರೆ. ಇತ್ತೀಚೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದ ವ್ಯಕ್ತಿ ಬರೆದಿದ್ದ ಡೆತ್ ನೋಟ್ ಸೇತುವೆ ಮೇಲಿದ್ದ ಅವರ ವಾಹನದಲ್ಲಿ ಪತ್ತೆಯಾಗಿತ್ತು.

Fr Mahesh_Shirva Report (13)

ಅಷ್ಟೊಂದು ವ್ಯವಸ್ಥಿತವಾಗಿ ಬದುಕಿದ್ದ ಫಾ. ಮಹೇಶ್ ಅವರು ಡೆತ್ ನೋಟ್ ಬರೆದಿರಬೇಕೆಂಬುದು ಜನರ ನಂಬಿಕೆ. ಈ ನಂಬಿಕೆಯಲ್ಲಿ ತಪ್ಪೇನೂ ಇಲ್ಲ. ಅದರಲ್ಲೂ ಅವರನ್ನು ಹತ್ತಿರದಿಂದ ಬಲ್ಲ ವ್ಯಕ್ತಿಗಳಿಗೆ ಅವರು ಖಾಸಗಿ ಡೈರಿ ಬರೆಯುತ್ತಿದ್ದುದರ, ವೀಡಿಯೋ ಮಾಡಿಡುತ್ತಿದ್ದ ಸಂಗತಿ ತಿಳಿದಿತ್ತು. ಅಲ್ಲದೆ ಶಾಲೆಯ ವಿಚಾರಗಳನ್ನೂ ಸವಿವರವಾಗಿ ಅಚ್ಚುಕಟ್ಟಾಗಿ ದಾಖಲಿಸುತ್ತಿದ್ದುದೂ ತಿಳಿದಿತ್ತು. ಅಂತಹ ವ್ಯಕ್ತಿ ಎಲ್ಲರನ್ನು ಬಿಟ್ಟು ತೆರಳುವಾಗ ಅದಕ್ಕೊದಗಿದ ಕಾರಣಗಳನ್ನು ಹೇಳದೇ ಹೇಗೆ ಹೋಗುತ್ತಾರೆಂಬುದು ಅವರನ್ನು ಕಾಡುವ ಪ್ರಶ್ನೆ. ಕಾರಣಗಳನ್ನು ಹೇಳದಿದ್ದರೂ ಕನಿಷ್ಠ ಒಂದೆರಡು ವಾಕ್ಯಗಳಲ್ಲಿ ವಿದಾಯದ ಮಾತುಗಳನ್ನು ಬರೆದಿಡುವಷ್ಟೂ ಪುರುಸೊತ್ತು, ಆಸಕ್ತಿ ಆ ಸುಶಿಕ್ಷಿತ ವ್ಯಕ್ತಿಗಿರಲಿಲ್ಲವೇ? ಇದು ಮಹತ್ವದ ಪ್ರಶ್ನೆ.

ಹಾಗಾದರೆ ಫಾದರ್ ಮಹೇಶ್ ಡಿಸೋಜಾರ ಖಾಸಗಿ ಡೈರಿ ಎಲ್ಲಿದೆ ಅಥವಾ ಎಲ್ಲಿಗೆ ಹೋಯಿತು? ಡೆತ್ ನೋಟ್ ಬರೆದಿದ್ದಾರೋ ಇಲ್ಲವೋ ದೃಢಪಟ್ಟಿಲ್ಲ. ನಮಗೆ ತಿಳಿದು ಬಂದ ಪ್ರಕಾರ ಫಾ. ಮಹೇಶ್‍ರಿಗೆ ಬಂಧಿತ ವ್ಯಕ್ತಿ ಫೋನ್‍ನಲ್ಲಿ ಗದರಿಸಿದ ನಂತರ ಹೆಚ್ಚಿನ ಸಮಯ ಅವರು ತಮ್ಮ ವಸತಿ ಕೋಣೆಯಲ್ಲಿರಲಿಲ್ಲ. ಫೋನ್ ಕಾಲ್ ಸಮಯ ಮತ್ತು ಚರ್ಚ್ ನಿವಾಸದ ಸಿಸಿಟಿವಿ ಫೂಟೇಜ್ ಪ್ರಕಾರ ಫಾ. ಮಹೇಶ್ ಅವರು ಹೆಚ್ಚು ಸಮಯ ಅಲ್ಲಿರದೆ, ಶಾಲೆಯ ಕಚೇರಿಗೆ ತೆರಳಿದ್ದಾರೆ. ಅಂದರೆ ಅವರು ತಮ್ಮ ಮನೆಯ ಕೋಣೆಯಲ್ಲಿ ಡೆತ್ ನೋಟ್ ಬರೆದಿಡುವ ಸಾಧ್ಯತೆ ಕಡಿಮೆ ಅಥವಾ ಇಲ್ಲ.

ಓಕೆ. ಆದರೆ ಅವರು ಶಾಲಾ ಕಚೇರಿಗೆ ಹೋದ ಮೇಲೆ ಬರೆದಿಟ್ಟಿಲ್ಲವೆಂದು ಹೇಳುವುದು ಹೇಗೆ? ಮೊದಲೇ, ಶಾಲೆಯ ಸಿಸಿಟಿವಿಗಳು ಸ್ಥಗಿತವಾಗಿದ್ದವೆಂದು ಹೇಳಲಾಗಿದೆ. ಅಲ್ಲದೆ ಅವರು ನೇಣು ಹಾಕಿಕೊಂಡ ನಿಖರ ಸಮಯ ತಿಳಿದು ಬಂದಿದೆಯೋ ಗೊತ್ತಿಲ್ಲ. ಕನಿಷ್ಠ ಒಂದೆರಡೋ ಅಥವಾ ನಾಲ್ಕೈದೋ ಲೈನ್‍ಗಳ ಡೆತ್ ನೋಟ್ ಬರೆದಿಡುವಷ್ಟೂ ವ್ಯವಧಾನ ಅಥವಾ ಇಚ್ಛೆ ಅವರಿಗಿಲ್ಲದೇ ಹೋಯಿತೇ? ಅಷ್ಟೊಂದು ಜಿಗುಪ್ಸೆ, ನಿರಾಸೆ ಅವರನ್ನು ಕಾಡಿತ್ತೇ? ಅಥವಾ ಈ ಹಿಂದೆಯೇ ಡೈರಿ, ವೀಡಿಯೋ ಮತ್ತಿತರ ರೂಪದಲ್ಲಿ ತಾನು ದಾಖಲಿಸಿಕೊಂಡಿದ್ದ ವಿಚಾರಗಳು, ತನ್ನ ಸಾವನ್ನು ನಿರ್ದೇಶಿಸಿದ ಕಾರಣಗಳನ್ನು ವಿವರಿಸಲು ಸಾಕು ಎಂಬ ಭರವಸೆ ಅವರದಾಗಿದ್ದಿರಬಹುದೇ? ದೇವರೇ ಬಲ್ಲರು.

ಪರ್ಸನಲ್ ಡೈರಿ ಎಲ್ಲಿ ಮರೆಯಾಯಿತು? ಯಾರಿಂದ?

ಇದೀಗ ಮುಖ್ಯ ವಿಚಾರವೆಂದರೆ ಪರ್ಸನಲ್ ಡೈರಿಯದ್ದು. ಫಾ. ಮಹೇಶ್ ಪರ್ಸನಲ್ ಡೈರಿ ಬರೆಯುತ್ತಿದ್ದ ಬಗ್ಗೆ ಬಹಳ ಜನರಿಗೆ ಗೊತ್ತಿದೆ. ಅಂದ ಮೇಲೆ ಅದರಲ್ಲಿ ಅವರು ಖಂಡಿತಾ ತಮ್ಮ ಜೀವನದ ಹೆಚ್ಚಿನ ಸಂಗತಿಗಳನ್ನು ದಾಖಲಿಸಿಟ್ಟದ್ದಾರೆಂಬುದು ಖಚಿತ. ಸಾಕಷ್ಟು ಸಮಯ ಅವರು, ತಮ್ಮ ಆಪ್ತರೊಂದಿಗೆ ಬಿಟ್ಟರೆ, ಏಕಾಂಗಿಯಾಗಿರುತ್ತಿದ್ದರು ಅಥವಾ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಏಕಾಂತದಲ್ಲಿ ಅವರು ಡೈರಿ ಮತ್ತು ವೀಡಿಯೋ ದಾಖಲೀಕರಣ ಮಾಡುತ್ತಿದ್ದರು. ಮೊಬೈಲ್ ಅಂತೂ ಹೇಗೂ ತರೆಯಲಾಗುವುದಿಲ್ಲವೆಂದಾಯಿತು. ಆದರೆ ಡೈರಿ ಪುಸ್ತಕವನ್ನು ತೆರೆದು ನೋಡಿದರೆ ಎಲ್ಲವೂ ಮುಕ್ತವಾಗಿ ತಿಳಿಯುತ್ತದೆ. ಆದರೆ ಡೈರಿ ಮಾತ್ರ ಮಂಗಮಾಯವಾಗಿದೆ?!

Fr Mahesh_Shirva Report (6)

ಹಾಗಾದರೆ ಆ ಡೈರಿ ಎಲ್ಲಿ ಕಣ್ಮರೆಯಾಯಿತು? ಸಂಬಂಧಪಟ್ಟವರನ್ನು ಕೇಳಿದಾಗ, ಪೊಲೀಸರಿಗೆ ಶಾಲಾ ಕಚೇರಿಯಲ್ಲಿದ್ದ ಡೈರಿ ಪುಸ್ತಕ ದೊರೆತಿದೆಯೆಂದಿದ್ದಾರೆ. ಅಂದರೆ ಖಾಸಗಿ ಡೈರಿ ಸಿಕ್ಕಿಲ್ಲವೆಂದಾಯಿತು! ಅದು ಯಾಕೆ ಸಿಕ್ಕಿಲ್ಲ? ಅದನ್ನು ಅವರು (ಫಾ. ಮಹೇಶ್) ಯಾರಿಗೂ ಸಿಗದಂತೆ ಗುಪ್ತವಾಗಿ ಅಡಗಿಸಿಟ್ಟಿದ್ದರೇ?

ಇಲ್ಲಿ ಮುಖ್ಯ ವಿಚಾರವೊಂದಿದೆ. ಬಹುಶಃ ಪೊಲೀಸರು ಅದರ ಜಾಡನ್ನು ಪತ್ತೆ ಹಚ್ಚಿದರೆ ಗುಪ್ತ ಸಂಗತಿಗಳು ಹೊರ ಬಂದಾವು. ಫಾ. ಮಹೇಶ್ ತಮ್ಮ ತಂದೆಯ ಸ್ಕಾರ್ಪಿಯೋ ವಾಹನವನ್ನು ಬಳಸುತ್ತಿದ್ದರು. ಫಾ. ಮಹೇಶ್ ನಿಧನದ ತರುವಾಯ, ಅವರ ಅಂತ್ಯಸಂಸ್ಕಾರಕ್ಕೆ ಬರುವುದಕ್ಕಾಗಿ ಮನೆಯವರು ಶಿರ್ವಾ ಚರ್ಚ್‍ಗೆ ಕರೆ ಮಾಡಿ ತಮ್ಮ ವಾಹನ ಬೇಕೆಂದು ಬೇಡಿಕೆಯಿಟ್ಟಿದ್ದರು. ಅದಕ್ಕೆ ತಕ್ಷಣ ಸ್ಪಂದಿಸಿ, ಅವರ ವಾಹನವನ್ನು ಅಲ್ಲಿಂದ ಮಣಿಪಾಲದ ಅವರ ಮನೆಗೆ ಕಳುಹಿಸಲಾಗಿತ್ತು.

ಅಲ್ಲಿ ಮಲಗಿದೆ ಬಿಂದು!

ಹೌದು. ಫಾ. ಮಹೇಶ್ ಬಳಸುತ್ತಿದ್ದ ವಾಹನದ ಕೀ ಖಂಡಿತವಾಗಿ ಅವರದೇ ರೂಮಿನಲ್ಲಿ ಇಡುತ್ತಿದ್ದರೆಂಬುದನ್ನು ಯಾರು ಕೂಡಾ ಹೇಳಬಹುದು. ಅವರ ಆ ಖಾಸಗಿ ವಸ್ತುವನ್ನು ಅವರ ಅನುಪಸ್ಥಿತಿಯಲ್ಲಿ ಅವರ ಖಾಸಗಿ ಸ್ಥಳದಿಂದ ತೆಗೆದುಕೊಳ್ಳಲು ಸಾಧ್ಯವಾಗುವಾಗ, ಅಲ್ಲಿದ್ದ ಇತರ ವಸ್ತುಗಳು ಕಣ್ಣಿಗೆ ಕಾಣುವುದಿಲ್ಲವೇ; ಕೈಗೆ ಸಿಗುವುದಿಲ್ಲವೇ? ಅಥವಾ ಹುಡುಕಿದಾಗ ಇತರ ವಸ್ತುಗಳನ್ನು ವಶಪಡಿಸುವುದು ಸುಲಭವಲ್ಲವೇ? ಯಾಕೆಂದರೆ, ಹಲವು ದಿನಗಳ ಕಾಲ ಆ ಸ್ಥಳ ಮುಕ್ತವಾಗಿತ್ತು, ಅಲ್ಲವೇ!? ಆ ಸಮಯದಲ್ಲಿ ಏನೇನೂ ಘಟಿಸಬಹುದಲ್ಲವೇ!? (ಪೊಲೀಸರು ಫಾ. ಮಹೇಶ್‍ರ ಕೊಠಡಿಗಳನ್ನು ಲಾಕ್ ಮಾಡಿದ್ದು ಯಾವಾಗ?!).

ಇವೆಲ್ಲ ಸಂಶಯ, ಅನುಮಾನಗಳು ಜನರಿಗಿವೆ. ಅದರಲ್ಲೂ ಶಿರ್ವಾದ ಸಾರ್ವಜನಿಕರಿಗೂ ಪ್ರತ್ಯೇಕವಾಗಿ ಕ್ರೈಸ್ತ ಬಾಂಧವರಿಗೆ ಬಹಳಷ್ಟು ಕಾಡುತ್ತಿವೆ. ಕುಟುಂಬದವರೂ ಆಪ್ತರೂ ಇವೇ ಚಿಂತೆಯಲ್ಲಿ ಬೆಂದಿದ್ದಾರೆ. ದಕ್ಷ, ಅನುಭವಿ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುವ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್‍ರು ಈ ಕಗ್ಗಂಟುಗಳನ್ನು ಯಶಸ್ವಿಯಾಗಿ ಬಿಡಿಸಿ ಪ್ರಕರಣದ ಸತ್ಯಾಸತ್ಯತೆಯನ್ನು ಜನರ ಮುಂದಿಡುತ್ತಾರೆಂಬ ಭರವಸೆ ಜನರಿಗಿದೆ. ಫಾ. ಮಹೇಶ್ ಅವರ ಸಾವಿನ ನೈಜ ಕಾರಣಗಳು ಹೊರ ಬರುತ್ತವೆಯೆಂಬ ದೃಢ ನಂಬಿಕೆ ಜನರದ್ದಾಗಿದೆ.

Send Feedback to: budkuloepaper@gmail.com
Like us at: www.facebook.com/budkulo.epaper
Visit and Watch Videos in our YouTube Channel

2 comments

  1. Budkulo you are busy writing articles on imaginery subjects where no facts have been found. How you know he has written a personal Diary?. When its personal then if the priest was that disciplined , if he had written also he wouldnt have informed anyone about personal diary. If he has informed anyone that means its not personal.

    Also why dont you enlighten us about the facts found so far? What messages were exchanged between the priest and the Lady?

  2. ನಿಮ್ಮ ಈ ಲೇಖನ ಚೆನ್ನಾಗಿದೆ
    ಧನ್ಯವಾದಗಳು

Leave a comment

Your email address will not be published. Required fields are marked *

Latest News