ಹಿಡಿತ ತಪ್ಪಿದ ಮಾಧ್ಯಮವನ್ನು ಯಾಕೆ ನಿಯಂತ್ರಿಸಬಾರದು?
ಲೇಖಕ: ಡೊನಾಲ್ಡ್ ಪಿರೇರಾ, ಕೃಪೆ: ಕನ್ನಡ ಪ್ರಭ, ದಿನಾಂಕ 25-11-2011
ಈ ಲೇಖನವು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ದಿನಾಂಕ 21-11-2011ರಂದು ಪ್ರಕಟವಾಗಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಲೇಖನಕ್ಕೆ ಪ್ರತಿಕ್ರಿಯೆಯಾಗಿತ್ತು.
ರಾಷ್ಟ್ರಮಟ್ಟದ ರಾಜಕಾರಣಿಗಳಲ್ಲಿ ನಾನು ಮೆಚ್ಚುವ ಕೆಲವೇ ಕೆಲವು ಮುಖಂಡರಲ್ಲಿ ಅರುಣ್ ಜೇಟ್ಲಿ ಒಬ್ಬರು. ಇತರ ಹಲವು ಚಿಲ್ಲರೆ ಮಾತನಾಡುವ ರಾಜಕಾರಣಿಗಳಿಗಿಂತ ಅವರು ಭಿನ್ನರು, ಉತ್ತಮ ವಾಗ್ಮಿ, ಸ್ಥಿತಪ್ರಜ್ಞರೆಂಬ ಕಾರಣಕ್ಕಾಗಿ. ಈ (ಕನ್ನಡ ಪ್ರಭ, 21 ನವೆಂಬರ್, 2011) ಪತ್ರಿಕೆಯಲ್ಲಿ ಸೋಮವಾರ ಪ್ರಕಟವಾದ ಅವರ ಲೇಖನ ಓದುವ ಮುಂಚೆಯೇ ತಲೆಬರಹ ನೋಡಿ ಇವರೆಲ್ಲೋ ಎಡವಿದ್ದಾರೆಂಬಂತೆ ಅನಿಸಿತು, ಓದಿದಂತೆ ಅದು ನಿಖರವಾಯಿತು.
‘ಯಾವುದೇ ಒಂದು ವಿಚಾರದ ಬಗ್ಗೆ ಮಾತನಾಡುವಾಗ ಪ್ರತಿಯೊಬ್ಬ ವ್ಯಕ್ತಿಯೂ ಸಹ ವಸ್ತುನಿಷ್ಠವಾಗಿರಬೇಕಾಗುತ್ತದೆ’ ಎಂದು ತಾವೇ ಹೇಳಿಕೊಂಡು ಆರಂಭಿಸಿದ ತಮ್ಮ ಲೇಖನದಲ್ಲಿ ಅವರು ಸ್ಪಷ್ಟವಾಗಿ ಪಕ್ಷಪಾತತನ ತೋರಿಸಿ, ನಿಷ್ಪಕ್ಷಪಾತತನದಲ್ಲಿ ಎಲ್ಲೋ ಎಡವಿದ್ದಾರೆಂದೆನ್ನಿಸುತ್ತದೆ.
‘ಮಾಧ್ಯಮಗಳಿಗೆ ಓದುಗರು ಮತ್ತು ವೀಕ್ಷಕರೇ ದೊರೆಗಳು. ಮಾಧ್ಯಮಗಳ ರಿಮೋಟ್ ಇರುವುದು ಆತನ ಕೈಯಲ್ಲೇ. ನಾನು ಆತನನ್ನೇ ನಂಬುತ್ತೇನೆ’ ಎಂಬಂತಹ ಬಾಲಿಶ ಮಾತುಗಳನ್ನು ಜೇಟ್ಲಿಯವರಿಂದ ನಾನು ನಿರೀಕ್ಷಿಸಿರಲಿಲ್ಲ. “ಕೇವಲ ಜನರಿಂದ ಚುನಾಯಿತನಾಗಿದ್ದಾನೆ/ಳೆ ಎಂಬ ಕಾರಣಕ್ಕೆ ಒಬ್ಬ ಅಪರಾಧಿಯನ್ನು ಸಾಚಾ ಎಂದು ಪರಿಗಣಿಸಲಾಗದು” ಎಂದು ಕೆಲ ವರ್ಷಗಳ ಹಿಂದೆ ಮದ್ರಾಸ್ ಹೈಕೋರ್ಟ್, ಜಯಲಲಿತಾ ಪ್ರಕರಣದಲ್ಲಿ ಒಂದು ಆದೇಶ ನೀಡಿತ್ತು. ರಾಜಕಾರಣಿಗಳು ಚುನಾವಣೆಯಲ್ಲಿ ಆಯ್ಕೆಯಾದ ಮಾತ್ರಕ್ಕೆ ಅವರು ನಡೆಸಿದ ಪಾತಕಗಳಿಂದ ಅವರು ಮುಕ್ತರಾಗಲು ಸಾಧ್ಯವಿಲ್ಲವೆಂಬ ಸ್ಪಷ್ಟ, ಅತ್ಯಗತ್ಯ, ಅನಿವಾರ್ಯವಾದ ವಿಶ್ಲೇಷಣೆ ಅದು. ಆದರೆ ಅದನ್ನು ಎಷ್ಟು ಜನ ರಾಜಕಾರಣಿಗಳು ಪಾಲಿಸಿದ್ದಾರೆ, ಪಾಲಿಸುತ್ತಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ, ಅಷ್ಟೇ ಸ್ಪಷ್ಟವಾಗಿ.
ಹೀಗಿರುವಾಗ ಮಾಜಿ ಕೇಂದ್ರ ಸಚಿವರೂ, ಕಾನೂನು ಪರಿಣತರೂ ಆದ ಅರುಣ್ ಜೇಟ್ಲಿಯವರು, ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶರು ನೀಡಿದ ಹೇಳಿಕೆಗೆ ಯಾಕೆ ಇಷ್ಟು ಅಪ್ರಬುದ್ಧವಾಗಿ ಪ್ರತಿಕ್ರಿಯಿಸುತ್ತಾರೆ? ನ್ಯಾಯಮೂರ್ತಿ ಕಾಟ್ಜು ಅವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾದ ಮಾತ್ರಕ್ಕೆ ತಮ್ಮ ಧೋರಣೆ, ನಿಷ್ಠೆಯನ್ನು ಮಾಧ್ಯಮಗಳಿಗೆ ಅಡವಿಡಬೇಕೆಂಬುದು ಇದರ ಅರ್ಥವೇ? ಕಾಟ್ಜು ಅವರು ನ್ಯಾಯಾಧೀಶರಾಗಿದ್ದವರು. ಕೋರ್ಟ್‍ನಲ್ಲಿ ಶಿಕ್ಷೆ ನೀಡುವಾಗ, ತಮ್ಮ ಮುಂದೆ ಅಪರಾಧ ಸಾಬೀತಾದವರನ್ನು ಉದ್ದೇಶಿಸಿ ಮಾತನಾಡುವಾಗ ಮುದ್ದು ಮಕ್ಕಳ ಜೊತೆ ಮಾತನಾಡುವಂತೆ ನಡೆದುಕೊಳ್ಳಲಿಕ್ಕಾಗುತ್ತದೆಯೆ? ಎಲ್ಲಾ ಭರವಸೆಗಳನ್ನು ಕಳೆದುಕೊಂಡ ದೇಶದ ನಾಗರಿಕರಿಗೆ ಭದ್ರ, ಬಲಿಷ್ಠ ಭರವಸೆಯನ್ನು ಉಳಿಸಿಕೊಂಡಿರುವುದು ನ್ಯಾಯಾಂಗ ಮಾತ್ರ (ಅಲ್ಲೂ ಭ್ರಷ್ಟಾಚಾರವಿರುವುದು ನಿಜ). ನ್ಯಾಯಾಲಯಗಳು ನ್ಯಾಯ ತೀರ್ಮಾನ, ಆದೇಶ ಕೊಡುವುದರ ಜೊತೆಗೆ ವಿಶ್ಲೇಷಣಾಯುಕ್ತ ಅಭಿಪ್ರಾಯಗಳನ್ನೂ ಹೇಳುತ್ತಾ ಬಂದಿರುವುದು ಕೆಲ ವರ್ಷಗಳಿಂದೀಚಿನ ಬೆಳವಣಿಗೆ. ಹಲವಾರು ನಿದರ್ಶನಗಳಲ್ಲಿ ನ್ಯಾಯಾಧೀಶರು ನೀಡಿದ ಬಹಳಷ್ಟು ಒಬ್ಸರ್ವೇಶನ್‍ಗಳು ತುಂಬಾ ಉತ್ತಮ, ಪ್ರಯೋಜನಕಾರಿ, ಪರಿಣಾಮಕಾರಿಯಾದಂತವು. ಇಂತಹ ಹಿನ್ನೆಲೆಯಿಂದ ಬಂದ ನ್ಯಾಯಮೂರ್ತಿ ಕಾಟ್ಜು ಅವರು ಕುರುಡರೂ ಅಲ್ಲ, ಕಿವುಡರೂ ಅಲ್ಲ. ಮಾಧ್ಯಮಗಳ ಹಣೆಬರಹ ಚೆನ್ನಾಗಿ ಅರಿತಿದ್ದರಿಂದಾಗಿಯೇ ಅಷ್ಟು ಕಟುಮಾತುಗಳಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಸದಾ ಭ್ರಮೆಯಲ್ಲೇ ಇರುವ ಮಾಧ್ಯಮದ ಮಂದಿಗೆ ಅವರ ಹೇಳಿಕೆ ಚುಚ್ಚಿದಂತಾಗಿದ್ದರೆ ಇತರರು ಯಾಕೆ ತಲೆಕೆಡಿಸಿಕೊಳ್ಳಬೇಕು.
ಹಾಗಂತ ನಾನಿಲ್ಲಿ ವಾದ ಮಾಡುತ್ತಿರುವುದು ಕಾಟ್ಜು ಅವರು ಹೇಳಿದ್ದೆಲ್ಲವನ್ನೂ ಪಾಲಿಸಬೇಕು ಎಂಬುದಕ್ಕಾಗಿ ಅಲ್ಲ. ಅವರಾದರೋ ಸರ್ವೋಚ್ಛ ನ್ಯಾಯಾಲಯದ ನ್ಯಾಯಧೀಶರಾಗಿದ್ದವರು. ಸಾಮಾನ್ಯ ಜನರು, ಅದರಲ್ಲೂ ಮಾಧ್ಯಮ/ಪತ್ರಿಕಾ ಪ್ರಪಂಚದ ಚಟುವಟಿಕೆಗಳ ಬಗ್ಗೆ ತಿಳಿಯದವರು ಮಾಧ್ಯಮ ಲೋಕವನ್ನು ಹೇಗೆ ಬಣ್ಣಿಸುತ್ತಾರೆ? ಅವರ ಅಭಿಪ್ರಾಯವನ್ನು ಕೇಳುವವರಾರು, ಹೇಳಿಕೆಯನ್ನು ದಾಖಲಿಸುವವರು ಯಾರು? ಮಾಧ್ಯಮ/ಪತ್ರಿಕೆಗಳು ನಾಗರಿಕ ಸಮಾಜದಲ್ಲಿ ಅನಿವಾರ್ಯ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನ್ನುವುದು ಖಂಡಿತಾ ಸರಿ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳು, ಪ್ರತ್ಯೇಕವಾಗಿ ಟಿವಿ ಸುದ್ದಿ ವಾಹಿನಿಗಳು, ನಡೆದುಕೊಳ್ಳುತ್ತಿರುವ ರೀತಿ ಎಷ್ಟು ಸರಿ ಇದೆ? ಅವುಗಳ ಅವಸರದ, ವಿಕೃತ ತೀಟೆಗಳಿಂದಾಗಿ ಎಷ್ಟು ಜನರಿಗೆ ಸಮಸ್ಯೆಯಾಗಿಲ್ಲ? ಒಳ್ಳೆಯದನ್ನು ಪ್ರತಿಬಿಂಬಿಸಬೇಕಾದ, ಪ್ರೋತ್ಸಾಹಿಸಬೇಕಾದ ಮಾಧ್ಯಮಗಳೇ ಎಡವಿದಲ್ಲಿ, ಕೆಟ್ಟ ದಾರಿಯನ್ನು ಹಿಡಿದಲ್ಲಿ ನಿಯಂತ್ರಿಸಬೇಕಾದವರು ಯಾರು? ಜೇಟ್ಲಿಯಂತಹವರು, ಇನ್ನಿತರ ಸಾಮಥ್ರ್ಯವಂತರಷ್ಟೇ ಕಾನೂನು ಪ್ರಕ್ರಿಯೆಗಳ ಹಿಂದೆ ಓಡಾಡಬಹುದು. ಜನಸಾಮಾನ್ಯರಿಗೆ ಅದೆಲ್ಲಾ ಸಾಧ್ಯವಾಗುವಂತಹದ್ದೆ?
ಸ್ಥಳೀಯ ಚಾನೆಲ್‍ಗಳನ್ನು ಬಿಡಿ, ನ್ಯಾಶನಲ್ ಚಾನೆಲ್‍ಗಳೆಂದು ಕರೆಸಿಕೊಳ್ಳುವ ಟಿವಿ ಚಾನೆಲ್‍ಗಳು ಎಷ್ಟು ಸಾಚಾ? ಅದರಲ್ಲೂ ಇಂಗ್ಲಿಷ್ ಚಾನೆಲ್‍ಗಳಂತೂ ಹೇಳುವುದೇ ಬೇಡ. ಅವರ ಭಾಷೆ, ವೇಷಭೂಷಣ, ಶೈಲಿ ಮಾತ್ರ ಇಂಗ್ಲಿಷ್. ಅಭಿರುಚಿಗಳು ಮಾತ್ರ ಪಕ್ಕಾ ಸ್ಥಳೀಯ ಪೀತ ಪತ್ರಿಕೋದ್ಯಮ್ಮಕ್ಕಿಂತ ಕಡಿಮೆ ಇಲ್ಲ. ಕನ್ನಡ ವಾಹಿನಿಗಳದೊಂದು ರೀತಿಯಾದರೆ, ಇವರದು ಇನ್ನೊಂಥರಾ. ದೇಶದಲ್ಲಿ ಪ್ರತಿದಿನ ಎಷ್ಟು ಬಾಲಕಿಯರು, ಮಹಿಳೆಯರು ಅತ್ತ್ಯಾಚಾರಕ್ಕೊಳಗಾಗುತ್ತಾರೆ, ಹತ್ಯೆಯಾಗುತ್ತಾರೆ ಎಂಬುದು ಪತ್ರಿಕೆಗಳಲ್ಲೇನೋ ಅಂಕಿ ಅಂಶದ ರೂಪದಲ್ಲಿ ವರದಿಯಾಗಬಹುದು. ಆದರೆ ಈ ರಾಷ್ಟ್ರೀಯ ಚಾನೆಲ್‍ಗಳಿಗೆ ಬ್ರೇಕಿಂಗ್ ನ್ಯೂಸ್ ಆಗುವುದು, ನಿರಂತರ್ ಸುದ್ದಿ ಮಾಡಲು ಕಾಣುವುದು ಕೇವಲ ಶ್ರೀಮಂತರ, ಸೆಲೆಬ್ರಿಟಿಗಳ ಚಿಲ್ಲರೆ ಸಂಗತಿಗಳು ಮಾತ್ರ. ಬೇಕಿದ್ದರೆ ನೋಡಿ ದೇಶದಲ್ಲೆಲ್ಲಾದರೂ ಬಡವರ, ಸಾಮಾನ್ಯರ ಸಾಮೂಹಿಕ ಸಾವು, ಕ್ರೈಮ್ ನಡೆದರೆ ಅದಿವರಿಗೆ ಪ್ರಾಮುಖ್ಯವೇ ಅಲ್ಲ. ಅದೇ ಯಾವುದೋ ಒಬ್ಬ ಸುಂದರ ಮುಖದ, ವರ್ಣದ, ಮಾಡರ್ನ್ ವಸ್ತ್ರ ಧರಿಸಿದ ಹೆಣ್ಣಾದರೆ, ಅದೂ ಶ್ರೀಮಂತ ವರ್ಗದ್ದಾದರೆ ಅದಿವರಿಗೆ ನ್ಯೂಸ್ ಆಫ್ ದ ಡೇ. ಪ್ರತಿದಿನವೂ ಅದರದ್ದೇ ಅಪ್‍ಡೇಟ್. ಚರ್ಚೆಗಳೇನು, ವಿಶೇಷ ವರದಿಗಳೇನು? ಅದೇ ಇತರರ ಘಟನೆಗಳಿಗೆ ಇವರು ನಿರ್ಲಿಪ್ತರು, ಕುರುಡರು. ಇವರ ಕ್ಯಾಮರಾಗಳು ಅಂತವರನ್ನು ನೋಡುವಾಗಲೇ ಅಟೋಮ್ಯಾಟಿಕ್ ಆಗಿ ಸ್ವಿಚ್‍ಆಫ್ ಆಗುತ್ತವೇನೋ ಅಂದುಕೊಳ್ಳಬೇಕು.
ಮಾಧ್ಯಮಗಳು ಸಂಪೂರ್ಣವಾಗಿ ಸಾಚಾ ಇವೆ, ಇರಬೇಕು ಎಂದು ಇವತ್ತು ಯಾರೂ ಹೇಳುತ್ತಿಲ್ಲ. ಎಷ್ಟೆಂದರೂ ಅವರಿಗೂ ಒಂದು ನಿರ್ದಿಷ್ಟ ತತ್ವಗಳ ಬಗ್ಗೆ ಓಲೈಕೆ, ಆಮಿಷ ಇದ್ದೇ ಇರುತ್ತವೆ – ರಾಜಕೀಯ, ಜಾಹೀರಾತು, ಟಿಆರ್‍ಪಿ ಮುಂತಾದವುಗಳು. ಅಷ್ಟೇ ಅಲ್ಲದೆ, ಜನಸಾಮಾನ್ಯರೂ ಕೂಡ ಮಾಧ್ಯಮಗಳು ಹೇಳಿದ್ದೇ ಸತ್ಯ, ವೇದವಾಕ್ಯವೆಂದು ನಂಬುವ ಮೂರ್ಖತನವನ್ನು ಎಂದೋ ಕಳೆದುಕೊಂಡಿದ್ದಾರೆ. ಆದರೂ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಹಲವಾರು ವಿಚಾರಗಳಿಗೆ ಬಾಧ್ಯಸ್ಥರಾಗಿರಬೇಕೆಂಬುದನ್ನು ಮರೆಯಬಾರದು. ಮಾಧ್ಯಮಗಳೇ ಸ್ವಾರ್ಥಕ್ಕೆ ಬಲಿಯಾದರೆ, ಅಸಭ್ಯ, ಅಸಹ್ಯ ನಡವಳಿಕೆಗಳನ್ನು ಅನುಸರಿಸಿದರೆ, ವಿವೇಚನೆಯಿಲ್ಲದೆ ನಡೆದುಕೊಂಡರೆ ಅವರನ್ನು ತಿದ್ದುವವರು ಯಾರು? ರಾಜಕಾರಣಿಗಳು ಎಂದಾದರೂ ಸ್ವಾರ್ಥರಹಿತ ಕೆಲಸ ಮಾಡುತ್ತಾರೆಯೆ?
ರಾಜಕಾರಣಿಗಳಂತೂ ತಮ್ಮ ಕೆಟ್ಟ ಚಾರಿತ್ರ್ಯವನ್ನು ಮಾಧ್ಯಮಗಳು ಬಯಲುಗೊಳಿಸಿದಾಗಲೂ ಸಹ ಅದನ್ನು ತಮಗನುಕೂಲಕರವೆಂದೇ, ಅದು ತಮ್ಮ ಪ್ರಚಾರಕ್ಕೆ ಲಾಭಕರವೆಂದು ಭಾವಿಸುವ ದಿನಗಳಿವು. ಇತರರು ಹಾಗೆಯೆ? ಕಾನೂನು ಪ್ರಕ್ರಿಯೆಗಳು ತನ್ನಿಂತಾನೇ ನಡೆಯುವುದಿಲ್ಲ. ಯಾರೋ ಕೆಲವರು ನ್ಯಾಯಾಲಯಗಳ ಮೊರೆ ಹೋಗಬಹುದು. ಸಾರ್ವಜನಿಕರು ಯಾರ ಬಳಿ ದೂರು ನಿವೇದಿಸಿಕೊಳ್ಳುವುದು. ಮಾಧ್ಯಮಗಳ ಅತಿರೇಕ, ಅನ್ಯಾಯ, ಪಕ್ಷಪಾತತನ ಮಿತಿಮೀರಿದರೆ ನಾಗರಿಕ ಸಮಾಜದ ಗತಿ ಏನು? ಇಂದು ಸರ್ಕಾರದ ಅತ್ತ್ಯುನ್ನತ ಹುದ್ದೆಗಳಾದ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಜೊತೆ, ತನಿಖಾ ಸಂಸ್ಥೆಗಳು, ನ್ಯಾಯಧೀಶರನ್ನು ಸಹ ಲೋಕಾಯುಕ್ತ, ಜನಲೋಕಪಾಲ್ ಸಂಸ್ಥೆಗಳ ನಿಯಂತ್ರಣಕ್ಕೆ ಸೇರಿಸಬೇಕೆಂಬ ಬೇಡಿಕೆ ಕೇಳಿ ಬರುವಾಗ, ಮಾಧ್ಯಮಗಳು ಮಾತ್ರ ಪ್ರಶ್ನಾತೀತವಾಗಿರಬೇಕೆಂದು ಬಯಸುವುದು ಯಾಕೆ? ಅದು ನ್ಯಾಯಬದ್ಧವೆ? ಮಾಧ್ಯಮ ಸ್ವಾತಂತ್ರ್ಯ ಬೇರೆ, ನಿಯಂತ್ರಣ ಬೇರೆ. ಮಾಧ್ಯಮಗಳು ವಿವೇಚನೆ ಕಳೆದುಕೊಂಡಾಗ, ಹದ್ದುಮೀರಿ ವರ್ತಿಸಿದಾಗ, ಮಿತಿಮೀರಿದಾಗ ಅವರನ್ನು ಕೇಳುವವರು ಯಾರೂ ಇರಬಾರದೆಂದಾದ ಮೇಲೆ, ನಾಳೆ ರಾಜಕಾರಣಿಗಳನ್ನೂ, ಸರಕಾರವನ್ನೂ, ನ್ಯಾಯಾಲಯಗಳನ್ನೂ ಕೇಳುವವರು, ಪ್ರಶ್ನಿಸುವವರು ಇರಬಾರದೆಂಬ ಕೂಗೂ ಕೇಳಿಬರಲಿಕ್ಕಿಲ್ಲವೇ? ಪ್ರಜಾಪ್ರಭುತ್ವವನ್ನು ದುರುಪಯೋಗಿಸಿಕೊಳ್ಳುವವರಿಗೆ ಸರಿಯಾದ ಶಾಸ್ತಿ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆಯಲ್ಲವೇ? ತಮ್ಮ ಹಕ್ಕುಗಳಿಗಾಗಿ ಕಾದಾಡುವವರು ತಮ್ಮ ಕರ್ತವ್ಯಗಳ ಬಗ್ಗೆಯೂ ಪ್ರಜ್ಞೆ ಬೆಳೆಸಿಕೊಂಡಿರಬೇಕಲ್ಲ?
(Published in Kannada Prabha, 25th November, 2011)