ಸುಖಮಯ ದುರಂತ! ಅಪಘಾತಕ್ಕೀಡಾದರೂ ವಿಮಾನ ಸುರಕ್ಷಿತವಾಗಿ ಇಳಿಯಿತು, ಜನರೂ ಬಚಾವಾದರು!!
ವಿಮಾನ ಅಪಘಾತದ ಭೀಕರತೆಯನ್ನು ಮೊನ್ನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ದುರಂತದಲ್ಲಿ ನಾವೆಲ್ಲವೂ ನೋಡಿದ್ದೇವೆ. ಸರಿಯಾಗಿ 15 ವರ್ಷಗಳ ಹಿಂದೆ ಇಂತಹದೇ ಭೀಕರ ಅಪಘಾತ ಮಂಗಳೂರಿನಲ್ಲಿ ನಡೆದಿತ್ತು. ವಿಮಾನ ದುರಂತ ಎಂದರೆ ನಿಜಕ್ಕೂ ಭೀಭತ್ಸಕರ ದೃಶ್ಯಗಳನ್ನು ನೋಡಬೇಕಾಗುತ್ತದೆ. ಅಗಾಧ ಗಾತ್ರದ ವಿಮಾನ ಹಾರಲು ಬಹಳಷ್ಟು ಇಂಧನ ಬೇಕಾಗುತ್ತದೆ. ಆ ಇಂಧನವೇ ಅಪಘಾತದ ಸಮಯದಲ್ಲಿ ವಿಮಾನ ಹೊತ್ತಿ ಉರಿಯಲು ಕಾರಣವಾಗುತ್ತದೆ.
ಮೊನ್ನೆಯ ಅಪಘಾತದಲ್ಲಿ ಓರ್ವ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಹೊರ ಬಿದ್ದು ಬಚಾವಾಗಿದ್ದು ಬಿಟ್ಟರೆ, 241 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮವಾಗಿದ್ದಾರೆ. ಅಷ್ಟೇ ಅಲ್ಲದೆ, ವಿಮಾನ ಬಿದ್ದ ಸ್ಥಳದಲ್ಲಿದ್ದವರೂ ಮಡಿದಿದ್ದಾರೆ. ಮಂಗಳೂರಿನ ಅಪಘಾತದಲ್ಲಿ ವಿಮಾನದ ರೆಕ್ಕೆ ಮುರಿದಿದ್ದರಿಂದ 8 ಜನರು ಬಚಾವಾಗಿ, ಉಳಿದ 158 ಜನರು ಸುಟ್ಟು ಕರಕಲಾಗಿದ್ದರು. ಸಾಮಾನ್ಯವಾಗಿ ವಿಮಾನ ಅಪಘಾತವೆಂದರೆ ಇಂತಹ ದುರಂತ ತಪ್ಪಿದ್ದಲ್ಲ. ಅಂತಹ ಗಟ್ಟಿ ಅದೃಷ್ಟವಿದ್ದಲ್ಲಿ ಮಾತ್ರ ವಿಮಾನ ಪ್ರಯಾಣಿಕರು ಬಚಾವಾಗಲು ಸಾಧ್ಯ.
ಅಂತಹ ಅತ್ಯಪರೂಪದ, ನಂಬಲು ಕಷ್ಟಕರವಾದ, ಅದೃಷ್ಟದ ಜೊತೆಗೆ ಪೈಲಟ್ನ ಸಮಯಪ್ರಜ್ಞೆ ಮತ್ತು ಅಮೋಘ ಸಾಹಸದಿಂದ, ಅವಘಡಕ್ಕೀಡಾದ ವಿಮಾನವು ಕ್ಷೇಮಕರವಾಗಿ ಬಚಾವಾದ ಕಥೆ ಇದು. 2009ರಲ್ಲಿ ನಡೆದ ಈ ಘಟನೆ ಅತ್ಯಂತ ವಿಸ್ಮಯಕರವೂ, ವಿಮಾನಯಾನದ ಚರಿತ್ರೆಯಲ್ಲಿ ಅತೀ ಮಹತ್ವದ ಬೆಳವಣಿಗೆಯಾಗಿಯೂ ದಾಖಲಾಗಿದೆ.
ಅದೇ, ಹಡ್ಸನ್ ವಿಮಾನ ದುರಂತ! Hudson Air Crash.
ಹೌದು. 16 ವರ್ಷಗಳ ಹಿಂದೆ ಅಮೆರಿಕದ ನ್ಯೂಯಾರ್ಕ್ನಲ್ಲಿ ಈ ಘಟನೆ ನಡೆದಿತ್ತು. 2009ರ ಜನವರಿ 15ರಂದು ಗಗನಕ್ಕೇರಿದ ಕೆಲವೇ ಕ್ಷಣಗಳಲ್ಲಿ ಆ ವಿಮಾನಕ್ಕೆ ಹಕ್ಕಿಗಳ ಹಿಂಡು ಎದುರಾಗಿತ್ತು. ಕೂಡಲೇ ಎರಡೂ ಎಂಜಿನ್ಗಳು ಸ್ತಬ್ದವಾದವು. ವಿಮಾನ 3000ಕ್ಕಿಂತಲೂ ಹೆಚ್ಚು ಅಡಿ ಮೇಲೆ ಇತ್ತು. ತುರ್ತು ಲ್ಯಾಂಡಿಂಗ್ ಮಾಡುವ ಪ್ರಯತ್ನ ನಡೆಸಿದರೂ, ಅದು ಸಾಧ್ಯವಾಗಲಿಲ್ಲ. ಆದರೂ ವಿಮಾನ ಕ್ಷೇಮವಾಗಿ ಲ್ಯಾಂಡ್ ಆಗಿತ್ತು, ನೆಲದ ಮೇಲಲ್ಲ, ನೀರಿನ ಮೇಲೆ!!! Most successful ditching in aviation history ಎಂದು ತಜ್ಷರು ಇದನ್ನು ಬಣ್ಣಿಸಿದ್ದರು. ಪ್ರಪಂಚದಾದ್ಯಂತ ಬಹಳಷ್ಟು ಚರ್ಚೆ ಮತ್ತು ಸಂಶೋಧನೆಗೆ ಈ ಘಟನೆ ಈಡಾಯಿತು.
ನಿಮಿಷ ಕಳೆಯುವುದರಲ್ಲಿ ಹಕ್ಕಿಗಳ ಡಿಕ್ಕಿ!
ಅಂದು ಮಧ್ಯಾಹ್ನ ಸುಮಾರು ಮೂರುವರೆ ಗಂಟೆಗೆ ನ್ಯೂಯಾರ್ಕ್ನ ಲಾ-ಗಾರ್ಡಿಯಾ ವಿಮಾನ ನಿಲ್ದಾಣದಿಂದ ಯುಎಸ್ ಏರ್ವೇಸ್ ಫ್ಲೈಟ್ 1549 ವಿಮಾನವು ತನ್ನೊಡಲಲ್ಲಿ 155 ಜನರನ್ನು ಹೊತ್ತು ಟೇಕ್ಆಫ್ ಆಗಿತ್ತಷ್ಟೇ. ಅದರ ಕ್ಯಾಪ್ಟನ್ 57 ವರ್ಷದ ಚೆಸ್ಲಿ ಸಲ್ಲಿ ಸಲ್ಲನ್ಬರ್ಗರ್ ಮತ್ತು ಫಸ್ಟ್ ಆಫೀಸರ್ ಜೆಫ್ರಿ ಬಿ. ಸ್ಕೈಲ್ಸ್ ಕರ್ತವ್ಯದಲ್ಲಿದ್ದರು. ಒಂದು ನಿಮಿಷದಲ್ಲಿ, ಅಂದರೆ ವಿಮಾನ 700 ಅಡಿ ಎತ್ತರ ತಲುಪಿದಾಗ, ಮೊದಲ ವರದಿಯನ್ನು ಕಳುಹಿಸಲಾಗಿತ್ತು. 3000 ಅಡಿ ತಲುಪುವಾಗ ಕೆನಡಾ ಗೂಸ್ ಹಕ್ಕಿಗಳ ಹಿಂಡು ಎದುರಾಯಿತು. ಕ್ಷಣಮಾತ್ರದಲ್ಲಿ ಹಕ್ಕಿಗಳು ಡಿಕ್ಕಿಯಾಗಿ ಎಂಜಿನ್ಗಳಲ್ಲಿ ಬೆಂಕಿ ಕಾಣಿಸಿಕೊಂಡು ಕೂಡಲೇ ಎರಡೂ ಎಂಜಿನ್ಗಳು ವಿಫಲವಾದವು.
ಕೂಡಲೇ ಪೈಲಟ್ ಇಂಜಿನ್ ಮತ್ತೆ ಸ್ಟಾರ್ಟ್ ಮಾಡಲು ಮಾಡಿದ ಯತ್ನ ಸಫಲವಾಗಲಿಲ್ಲ. “ಹಕ್ಕಿಗಳು ಬಡಿದಿವೆ. ಎರಡೂ ಇಂಜಿನ್ ಫೈಲ್ ಆಗಿವೆ. ನಾವು ಲಾ-ಗಾರ್ಡಿಯಾಗೆ ಮರಳುತ್ತಿದ್ದೇವೆ” ಎಂದು ಕ್ಯಾಪ್ಟನ್ ಏರ್ ಟ್ರಾಫಿಕ್ ಕಂಟ್ರೋಲ್ಗೆ ಕರೆ ಮಾಡಿ ತುರ್ತು ಸಂದೇಶ ಕಳಿಸಿದರು. ಲಾ-ಗಾರ್ಡಿಯಾದ 3ನೇ ರನ್ವೇಯಲ್ಲಿ ವಿಮಾನದ ತುರ್ತು ಲ್ಯಾಂಡಿಂಗ್ ಮಾಡಬಹುದೆಂಬ ಸೂಚನೆ ದೊರಕಿತು. ಆದರೆ ಮರು ಕ್ಷಣವೇ ಕ್ಯಾಪ್ಟನ್ ಸಲ್ಲಿ, “ನನಗದು ಸಾಧ್ಯವಿಲ್ಲ” ಎಂದರು. ವಿಮಾನವು ತಕ್ಷಣ ಎಡಕ್ಕೆ ತಿರುಗಿತು.

ಎಂಜಿನ್ ಸ್ತಬ್ದವಾದರೂ ವಿಮಾನ 19 ಸೆಕೆಂಡುಗಳ ಕಾಲ ಮೇಲಕ್ಕೇರಿತ್ತು. ನಂತರ ಕೆಳಮುಖವಾಗಿ ಹೆಚ್ಚು ವೇಗವಾಗಿ ಮುನ್ನುಗ್ತುತ್ತಿತ್ತು. ಕ್ಯಾಪ್ಟನ್ ಸಲ್ಲಿಯ ಮೆದುಳು ಮಿಂಚಿನ ವೇಗದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಏನೇ ಮಾಡುವುದಿದ್ದರೂ ಕೆಲವೇ ಸೆಕೆಂಡುಗಳ ಸಮಯವಷ್ಟೇ ಉಳಿದಿತ್ತು. ಎಲ್ಲರ ಜೀವ ಹೋಗುವ ಸಾಧ್ಯತೆಯಿತ್ತು. ಆದರೆ ಕ್ಯಾ. ಸಲ್ಲಿಯ ಮನಸ್ಸಿನಲ್ಲಿದ್ದದ್ದು ಒಂದೇ – ‘ಯಾರಿಗೂ ಯಾವುದೇ ತೊಂದರೆಯಾಗದೆ ಎಲ್ಲರನ್ನೂ ಸುರಕ್ಷಿತವಾಗಿ ಉಳಿಸುವುದು’ – ಇದೊಂದೇ ಚಿಂತೆ. ಶರವೇಗದಲ್ಲಿ ಆತ ನ್ಯೂಜೆರ್ಸಿ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವ ಸಾಧ್ಯತೆಯನ್ನೂ ವಿಚಾರಿಸಿದರು. ಆದರೆ ಅದೂ ಅಸಾಧ್ಯವೆಂದು ಕಂಡುಕೊಂಡ ಕ್ಯಾಪ್ಟನ್, ತಾನು ಹಡ್ಸನ್ ನದಿಯ ಕಡೆಗೆ ವಿಮಾನವನ್ನು ಒಯ್ಯುತ್ತೇನೆಂದು ಹೇಳಿದರು.
ಹಡ್ಸನ್ ನದಿಯೆಂಬ ಆಪತ್ಬಾಂಧವ!
ಹಡ್ಸನ್ ನದಿ 315 ಮೈಲು ಉದ್ದವಿದ್ದು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಮಧ್ಯೆ ಗಡಿಯಂತೆ ಹರಿಯುತ್ತದೆ. ಸಣ್ಣ ನದಿಯಾದರೂ ವಿಶಾಲವಾಗಿದ್ದು, ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಕ್ಯಾಪ್ಟನ್ ವಿಮಾನವನ್ನು ಹಡ್ಸನ್ ನದಿಯತ್ತ ತಿರುಗಿಸುತ್ತಿದ್ದಾಗಲೇ ಕ್ರೂ ಮೆಂಬರ್ಗಳಿಗೆ ಏನೇನು ಮಾಡಬೇಕೆಂಬುದನ್ನು ತ್ವರಿತವಾಗಿ ತಿಳಿಸಿದ್ದರು. ಪ್ರಯಾಣಿಕರಿಗೆ ಈಗಾಗಲೇ ಅಪಾಯದ ಅರಿವಾಗಿತ್ತು. ಹಕ್ಕಿಗಳ ಬಡಿದಾಟ ಮತ್ತು ನಂತರದ ಶಬ್ದಗಳಿಂದ ಅವರಿಗೆ ಅಗಿರಬಹುದಾದ ಅಪಘಾತದ ಅಂದಾಜು ಲಭಿಸಿತ್ತು.
ಕ್ಯಾಪ್ಟನ್ ಮತ್ತು ಸಿಬಂದಿಗಳು ಪ್ರಯಾಣಿಕರಲ್ಲಿ ಧೈರ್ಯ ತುಂಬಿಸಿದರು ಮತ್ತು ತುರ್ತಾಗಿ ಮಾಡಬೇಕಾದುದನ್ನು ತಿಳಿಸಿದರು.
150 ಮೈಲು ವೇಗದಲ್ಲಿದ್ದ ವಿಮಾನವನ್ನು ಪೈಲಟ್ ಮ್ಯಾನ್ಹಟನ್ ಬಳಿ ನದಿಯಲ್ಲಿ ಇಳಿಸಿದರು. ನಂತರ ಆತ ಹೇಳಿದ್ದರು: “ನನಗೆ ಲಭಿಸಿದ ತರಬೇತಿಯ ಕಾರಣ, ಜನರನ್ನು ಉಳಿಸಲು ಸುಲಭವಾಗುವ ಹಾಗೆ ದೋಣಿಗಳಿದ್ದ ಜಾಗದ ಹತ್ತಿರವೇ ವಿಮಾನವನ್ನು ಇಳಿಸಿದೆ.”
ದೇವರಾದ ಕ್ಯಾಪ್ಟನ್ ಚೆಸ್ಲಿ ಸಲ್ಲಿ ಸಲ್ಲನ್ಬರ್ಗರ್
ಕ್ಯಾಬಿನ್ ಕ್ರೂ ಸದಸ್ಯರು ಎಲ್ಲಾ ಪ್ರಯಾಣಿಕರನ್ನು ತುರ್ತು ಬಾಗಿಲ ಮೂಲಕ ಹೊರ ತರಲು ಪ್ರಾರಂಭಿಸಿದರು. ಓರ್ವ ಪಯಣಿಗ ವೀಲ್ಚೇರಿನಲ್ಲಿದ್ದ. ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ ವಿಮಾನವು ನಿಧಾನವಾಗಿ ಮುಳುಗಲಾರಂಭಿಸಿತ್ತು. ಉದ್ವೇಗದಲ್ಲಿದ್ದ ಓರ್ವ ಪ್ರಯಾಣಿಕ ಗಡಿಬಿಡಿಯಿಂದ ಹಿಂದಿನ ಬಾಗಿಲನ್ನು ತೆರೆದಿದ್ದರಿಂದ ಇನ್ನಷ್ಟು ನೀರು ಒಳಗೆ ನುಗ್ಗಿತು. ನೀರಿನಲ್ಲಿ ಮುಳುಗುತ್ತಿದ್ದ ವಿಮಾನದಿಂದ ಎಲ್ಲರನ್ನು ರಕ್ಷಿಸಿದ ಮೇಲೂ ಕ್ಯಾಪ್ಟನ್ ಚೆಸ್ಲಿ ಎರಡು ಬಾರಿ ವಿಮಾನದೊಳಗೆ ಪ್ರವೇಶಿಸಿ ಯಾರೂ ಒಳಗೆ ಉಳಿದಿಲ್ಲವೆಂಬುದನ್ನು ಖಚಿತಪಡಿಸಿ, ಕೊನೆಯವರಾಗಿ ಮೇಲೆ ಬಂದರು.

ಕೊರೆಯುವ ಚಳಿಯಿಂದ ಕೂಡಿದ ಅಲ್ಲಿನ ವಾತಾವರಣದಲ್ಲಿ, ತಂಪು ನೀರಿನಲ್ಲಿ ನಿಲ್ಲುವುದೂ ಕಠಿಣಕರವಾಗಿತ್ತು. ಗಾಳಿ -2 ಡಿಗ್ರಿ ಸೆಂಟಿಗ್ರೇಡ್ ಮತ್ತು ನೀರು 2 ಡಿಗ್ರಿ ಸೆಂಟಿಗ್ರೇಡ್ನಷ್ಟಿತ್ತು. ಹೆಚ್ಚಿನ ಜನರು ವಿಮಾನದ ರೆಕ್ಕೆಗಳ ಮೇಲೆ ಹತ್ತಿ ನಿಂತರು. ಕೆಲವರು ವಿಮಾನ ಸ್ಫೋಟವಾಗಬಹುದೆಂದು ಭೀತಿಗೊಳಗಾಗಿ ನೀರಿಗೆ ಹಾರಿ ಈಜಿ ದೂರ ಸರಿದರು.
ತ್ವರಿತವಾಗಿ ಅಲ್ಲಿ ತಲುಪಿದ ರಕ್ಷಣಾ ಸಿಬಂದಿ ಎಲ್ಲರನ್ನೂ ಬಚಾವು ಮಾಡಿದರು ಮತ್ತು ಅಗತ್ಯವಿದ್ದವರಿಗೆ ತುರ್ತು ಚಿಕಿತ್ಸೆಯನ್ನೂ ಒದಗಿಸಿದರು.
6 ನಿಮಿಷ: ತ್ವರಿತಗತಿಯ ಅದ್ಭುತ ಕಾರ್ಯಾಚರಣೆ
ಅಷ್ಟರಲ್ಲಾಗಲೇ ಕ್ಯಾಪ್ಟನ್ ಚೆಸ್ಲಿಯ ಸೂಚನೆಯಂತೆ ಕಂಟ್ರೋಲ್ ರೂಮ್ ಮತ್ತು ಇತರ ಅಗತ್ಯ ವ್ಯವಸ್ಥೆಗಳು ತುರ್ತಾಗಿ ಕಾರ್ಯಾಚರಣೆ ಪ್ರಾರಂಭಿಸಿದ್ದವು. ವಿಮಾನ ಇಳಿಯುವ ಜಾಗದಲ್ಲಿ ಕ್ಯಾಪ್ಟನ್ ನಿರ್ದೇಶನದ ಮೇರೆಗೆ, ಕೇವಲ 4 ನಿಮಿಷಗಳಲ್ಲಿ 30 ಆ್ಯಂಬುಲೆನ್ಸ್ಗಳು, 140 ಫೈರ್ ಎಂಜಿನ್ಗಳು, ಹಡಗುಗಳು, ಪೊಲೀಸರ 2 ಹೆಲಿಕಾಪ್ಟರ್ಗಳು, ಕೋಸ್ಟ್ಗಾರ್ಡ್ ಟೀಮ್ ಮತ್ತು ಇತರ ತುರ್ತು ಅಗತ್ಯದ ಸವಲತ್ತುಗಳು ತಯಾರಾಗಿದ್ದವು. ಇತರ 30 ಆ್ಯಂಬುಲೆನ್ಸ್ಗಳೂ ಬೇರೆ ಸಂಸ್ಥೆಗಳಿಂದ ಒದಗಿಸಲಾಗಿ ಅಲ್ಲಿಗೆ ತಲುಪಿದ್ದವು.

ನಂಬ್ತೀರಾ, ಇಷ್ಟೆಲ್ಲಾ ನಡೆದದ್ದು ಕೇವಲ 6 ನಿಮಿಷಗಳಲ್ಲಿ! ಅತ್ಯಾಶ್ಚರ್ಯಕರವಲ್ಲವೇ? ನಂಬಲು ನಿಜಕ್ಕೂ ಕಷ್ಟಕರವೇ. ಆದರೆ ಇದು ನಿಜ, ಸತ್ಯ ಸಂಗತಿ. ಅದರಿಂದಾಗಿಯೇ ವೈಮಾನಿಕ ಚರಿತ್ರೆಯಲ್ಲಿಯೇ ಈ ವಿಸ್ಮಯಕರ ಘಟನೆಯನ್ನು ‘ಆಶ್ಚರ್ಯ’ ಎಂದು ಹೆಸರಿಸಲಾಗಿದೆ. ವಿಮಾನ ಅಪಘಾತಗಳೆಂದರೆ ವಿಮಾನದ ಜೊತೆಗೆ ಪ್ರಯಾಣಿಕರೂ ಸುಟ್ಟು ಹೋಗುವುದು ಸಾಮಾನ್ಯ. ಆದರೆ ಈ ಅಪಘಾತ ‘ಸುಖಾಂತ್ಯ’ ಕಂಡಿದ್ದು, ಒಂದು ಚಾರಿತ್ರಿಕ ಘಟನೆಯಾಗಿ ದಾಖಲಾಗಿದೆ.
ಕ್ರೈಸಿಸ್ ಮ್ಯಾನೇಜ್ಮೆಂಟ್ ಅಂದರೆ ಬಿಕ್ಕಟ್ಟು ನಿರ್ವಹಣೆಗಾಗಿ ಇದನ್ನು ಅಪ್ರತಿಮ ನಿದರ್ಶವೆಂಬುದಾಗಿ ಪ್ರಪಂಚದಾದ್ಯಂತ ಬಣ್ಣಿಸಲಾಗಿದೆ. ‘ಹಡ್ಸನ್ ಏರ್ ಕ್ರ್ಯಾಶ್’ ಅಂತಹ ಶ್ಲಾಘನೆಗೆ ಒಳಗಾದ ಅಪೂರ್ವ ಘಟನೆ.
ಇಡೀ ಘಟನೆಯಲ್ಲಿ 78 ಜನರಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಐವರಿಗೆ ಸ್ವಲ್ಪ ಗಂಭೀರ ಸ್ವರೂಪದ ಗಾಯವಾಗಿತ್ತು. ಯಾವುದೇ ಜೀವಹಾನಿಯಾಗಿರಲಿಲ್ಲ. ಘಟನೆಯಿಂದ ಹಲವರಿಗೆ ಮಾನಸಿಕ ಆಘಾತ ಉಂಟಾದ ಕಾರಣ ಅವರನ್ನು ಕೌನ್ಸೆಲಿಂಗ್ಗೆ ಒಳಪಡಿಸಲಾಗಿತ್ತು.
ಆ ಸುರಕ್ಷಿತ ಮತ್ತು ಯಶಸ್ವಿ ಕಾರ್ಯಾಚರಣೆಗಾಗಿ ಕ್ಯಾಪ್ಟನ್ ಚೆಸ್ಲಿ ಸಲ್ಲಿ ಸಲ್ಲನ್ಬರ್ಗರ್ ಮತ್ತವರ ಸಂಗಡಿಗರಿಗೆ ಪ್ರಪಂಚದಾದ್ಯಂತ ಶ್ಲಾಘನೆ ಮತ್ತು ಸನ್ಮಾನ ದೊರೆಯಿತು. ಅಂದಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಮತ್ತು ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಬರಾಕ್ ಒಬಾಮಾ ಕ್ಯಾಪ್ಟನ್ ಮತ್ತು ತಂಡದ ಧೈರ್ಯ ಮತ್ತು ಸಾಹಸವನ್ನು ಹೊಗಳಿದ್ದರು. ‘ಗಿಲ್ಡ್ ಆಫ್ ಏರ್ ಪೈಲಟ್ಸ್ ಎಂಡ್ ಏರ್ ನೇವಿಗೇಟರ್ಸ್’ ಜನವರಿ 22, 2009ರಂದು ಇವರನ್ನು ಸನ್ಮಾನಿಸಿ ‘ಮಾಸ್ಟರ್ಸ್ ಮೆಡಲ್’ ಕೊಟ್ಟು ಗೌರವಿಸಿ, “ಸ್ಪ್ಲಿಟ್ ಸೆಕೆಂಡುಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಮತ್ತು ತುರ್ತು ಸಂದರ್ಭದಲ್ಲಿ ನಿರ್ವಹಿಸಿದ ರೀತಿ ಒಂದು ‘ಪಠ್ಯ ಪುಸ್ತಕ’ವಾಗಿದೆ ಮತ್ತು ನಡೆದುಕೊಂಡ ರಕ್ಷಣಾ ಕಾರ್ಯ ಶ್ಲಾಘನೀಯ” ಎಂದು ಬಣ್ಣಿಸಿ, ಪ್ರಶಂಸೆ ವ್ಯಕ್ತಪಡಿಸಿತು.
ಹೀಗೆ, ಹಡ್ಸನ್ ನದಿಯ ಕಾರಣ ಮತ್ತು ಪೈಲಟ್ ಹಾಗೂ ಅವರ ತಂಡದ ತ್ವರಿತ ಕಾರ್ಯಾಚರಣೆಯಿಂದಾಗಿ ನೆಲಕ್ಕೆ ಅಪ್ಪಳಿಸಿ ಭಸ್ಮವಾಗಬಹುದಾಗಿದ್ದ ವಿಮಾನವು ನೀರಿಗಿಳಿದು ಎಲ್ಲರೂ ಸುರಕ್ಷಿತವಾಗಿ ಬದುಕುಳಿದರು. ಅಂತಹ ಕ್ಲಿಷ್ಟ ಮತ್ತು ಅಪಾಯಕರ ಸನ್ನಿವೇಶದಲ್ಲಿಯೂ ಧೃತಿಗೆಡದೆ ಎಲ್ಲರನ್ನೂ ಬಚಾವು ಮಾಡಬೇಕೆಂಬ ಸಂಕಲ್ಪದಿಂದ ಅತ್ಯದ್ಭುತವಾಗಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸಂಭವನೀಯ ದುರಂತವನ್ನು ಸಹನೀಯ ಘಟನೆಯನ್ನಾಗಿಸಿದ ಕ್ಯಾಪ್ಟನ್ ಚೆಸ್ಲಿ ಸಲ್ಲಿಯವರಿಗೆ ಎಷ್ಟು ನಮನ ಸಲ್ಲಿಸಿದರೂ ಕಡಿಮೆಯೇ.
ಅಷ್ಟು ಮಾತ್ರವಲ್ಲ, ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಸಾರ್ವಜನಿಕ ಸೇವೆಯಲ್ಲಿರುವ ಚಾಕಚಕ್ಯತೆ, ಶಿಸ್ತು ಮತ್ತು ಸಾಮರ್ಥ್ಯ ಹಾಗೂ ತುರ್ತು ಸಂದರ್ಭಗಳಲ್ಲಿ, ಕ್ಲಿಷ್ಟ-ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕಿಂಚಿತ್ತೂ ಧೃತಿಗೆಡದೆ, ಧೈರ್ಯ ಮತ್ತು ವೇಗದಿಂದ ಕಾರ್ಯನಿರ್ವಹಿಸುವ ರೀತಿ ನಿಜಕ್ಕೂ ಅದ್ಭುತ ಮತ್ತು ಮಾದರಿ. ಅಷ್ಟು ಕಡಿಮೆ ಸಮಯದಲ್ಲಿ ಅಷ್ಟೆಲ್ಲಾ ವ್ಯವಸ್ಥೆಯನ್ನು ಚೂರೂ ಎಡವಟ್ಟಿಲ್ಲದೆ ನಿರ್ವಹಿಸಿದ ರೀತಿ ನಿಜಕ್ಕೂ ಅಮೋಘ.
ಇದೇ ಘಟನೆಯನ್ನು ಆಧರಿಸಿ ಒಂದು ಹಾಲಿವುಡ್ ಸಿನೆಮಾ ತಯಾರಾಗಿದ್ದು ನಿಮಗೆ ತಿಳಿದಿರಬಹುದು. ಕ್ಲೈಂಟ್ ಈಸ್ಟ್ವುಡ್ ನಿರ್ದೇಶಿಸಿದ ‘Sully: Miracle on the Hudson’ ಸಿನೆಮಾದಲ್ಲಿ ಟಾಮ್ ಹ್ಯಾಂಕ್ಸ್ ಪೈಲಟ್ ಸಲ್ಲಿಯ ಪಾತ್ರದಲ್ಲಿ ನಟಿಸಿದ್ದರು.
ಎಲ್ಲಿಯೂ ವಿಮಾನ ಅಪಘಾತಗಳು ನಡೆಯದಿರಲಿ ಮತ್ತು ಏನಾದರೂ ಆದರೆ ಅದು ಮೇಲಿನಂತೆ ಸುಖಾಂತ್ಯಗೊಳ್ಳಲಿ ಎಂದು ನಾವು ಹಾರೈಸೋಣ.
Send your Feedback to: budkuloepaper@gmail.com