ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಸರ್ವ ಧರ್ಮೀಯರು ಒಗ್ಗೂಡಿ ಶ್ರಮಿಸಲು ಎನ್‌ಆರ್‌ಐ ಉದ್ಯಮಿ ಮೈಕಲ್ ಡಿಸೋಜ ಕರೆ
ವರದಿ: ಡೊನಾಲ್ಡ್ ಪಿರೇರಾ
ಚಿತ್ರಗಳು: ಸ್ಟ್ಯಾನ್ಲಿ ಬಂಟ್ವಾಳ್, ಬಿಕರ್ನಕಟ್ಟೆ
ಮಂಗಳೂರು: ಭಾರತ ದೇಶವನ್ನು ಸಮೃದ್ಧವಾಗಿ ಕಟ್ಟಲು ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅಗತ್ಯ ಎಂದು ಎನ್‌ಆರ್‌ಐ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿಸೋಜ ಕರೆ ನೀಡಿದ್ದಾರೆ. ದೇಶಪ್ರೇಮ, ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವತೆಯ ಧರ್ಮವು ಮುಖ್ಯ ಎಂದು ಅವರು ಪ್ರತಿಪಾದಿಸಿದರು.
ಅವರು ಮಂಗಳೂರಿನ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಆಶ್ರಯದಲ್ಲಿ, ಕುಲಶೇಖರ ಹೋಲಿಕ್ರಾಸ್ ಕೋರ್ಡೆಲ್ ಚರ್ಚ್‌ನ ಸಹಕಾರದಲ್ಲಿ ಮಂಗಳವಾರ ಕುಲಶೇಖರದ ಕಲ್ಪನೆ ಮೈದಾನದಲ್ಲಿ ನಡೆದ ‘ಬೆಳಕಿನ ಹಬ್ಬ ದೀಪಾವಳಿ ಸಮಾರಂಭ 2024’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅತಿಥಿಯಾಗಿದ್ದ ಚಿತ್ರನಟ ಅರವಿಂದ್ ಬೋಳಾರ್ ಮಾತನಾಡಿ, ದೀಪಾವಳಿಯು ಖುಷಿಯ, ಎಲ್ಲಾ ಧರ್ಮದವರು ಆಚರಿಸುವ ಹಬ್ಬವಾಗಿದೆ, ಸೌಹಾರ್ದತೆಯನ್ನು ಪಸರಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶ್ಲಾಘಿಸಿದರು.
ಅತಿಥಿಯಾಗಿದ್ದ ಬಿಕರ್ನಕಟ್ಟೆ ಅಹ್ಸನುಲ್ ಮಸಾಜಿದ್ ಸದಸ್ಯರಾದ ಸರ್ಫುದ್ದೀನ್ ಬಿ.ಎಸ್. ಮಾತನಾಡಿ, ಭಾರತವು ಶತಮಾನಗಳಿಂದ ಶಾಂತಿ ಮತ್ತು ಒಳಿತು ಮಾಡಲು ಪ್ರೋತ್ಸಾಹಿಸಿದ ಬಹುತ್ವದ ನೆಲ, ವಿವಿಧತೆಯೇ ಏಕತೆ ಎಂದು ಸಂದೇಶ ನೀಡಿದರು. ದೇಶದ ಪ್ರಗತಿಗೆ ಎಲ್ಲಾ ಧರ್ಮಗಳ ಕೊಡುಗೆ ಇದೆ ಎಂದರು. ಮಂಗಳೂರಿಗೆ ಶಾಂತಿಯ, ಸೌಹಾರ್ದತೆಯ ಹಣೆಪಟ್ಟಿ ತರುವಲ್ಲಿ ಎಲ್ಲರೂ ಶ್ರಮಿಸಿ ಕರಾವಳಿಯ ಅಭಿವೃದ್ಧಿ ಹೆಚ್ಚಿಸಲು ಕರೆ ನೀಡಿದರು.
ಹಬ್ಬಗಳು ದೇಶದ ಸಮೃದ್ಧಿಯನ್ನು ಹೆಚ್ಚಿಸುವ ಅವಕಾಶ ಒದಗಿಸುತ್ತವೆ ಎಂದ ಕೊರ್ಡೆಲ್ ಚರ್ಚಿನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಶುಭಾಶಂಸನೆಗೈದರು.
ಮದರ್ ತೆರೆಸಾ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಮಾತನಾಡಿ, ವ್ಯತ್ಯಾಸ, ಭಿನ್ನತೆಗಳನ್ನು ಅರ್ಥ ಮಾಡಿ ಸಂಭ್ರಮಿಸಲು ಕರೆ ನೀಡಿದರು. ಪ್ರೀತಿಯಿಂದಲೇ ಸಹಬಾಳ್ವೆ ಸಾಧ್ಯ, ಸರ್ವರ ಒಗ್ಗಟ್ಟಿನಿಂದಲೇ ನಾಡು, ರಾಷ್ಟ್ರ ಕಟ್ಟಲು ಸಾಧ್ಯವೆಂದರು.
ಸ್ಥಳೀಯ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಶ್ರೀ ಧರ್ಮಶಾಸ್ತಾ ಮಂದಿರ ಟ್ರಸ್ಟ್ (ರಿ) ಜ್ಯೋತಿನಗರ ಕುಲಶೇಖರದ ಅಧ್ಯಕ್ಷ ವಕೀಲ ರಾಮಪ್ರಸಾದ್ ಎಸ್. ಮಾತನಾಡಿದರು. ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೋನ್ಸಾ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಬಿಕರ್ನಕಟ್ಟೆ ಅಹ್ಸನುಲ್ ಮಸಾಜಿದ್ ಅಧ್ಯಕ್ಷ ಸಯ್ಯದ್ ಮಹಮ್ಮದ್ ಸಯೀದ್ ಉಪಸ್ಥಿತರಿದ್ದರು.
ಮದರ್ ತೆರೆಸಾ ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶಿಷ್ಟವಾಗಿ ದೀಪವನ್ನು ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಫಾ. ವಾಲ್ಟರ್ ಅಲ್ಬುಕರ್ಕ್ ಎಸ್‍ಜೆ ಗಾಯನ ವೃಂದ, ಮಂಗಳೂರು ಹಾಗೂ ಕಲಾ ಸರಸ್ವತಿ ಡ್ಯಾನ್ಸ್ ಅಕಾಡೆಮಿ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮನೋಜ್ ವಾಮಂಜೂರ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾಲ್ಫಿ ಡಿಸೋಜ ನಡೆಸಿ ಕೊಟ್ಟರು. ಕೊರ್ಡೆಲ್ ಚರ್ಚಿನ ಉಪಾಧ್ಯಕ್ಷೆ ರೂತ್ ಸಿಲ್ವಿಯಾ ಕ್ಯಾಸ್ತೆಲಿನೊ ಧನ್ಯವಾದ ಸಮರ್ಪಿಸಿದರು.
Send your Feedback to: budkuloepaper@gmail.com