ಬಿ.ಕೆ. ಹರಿಪ್ರಸಾದ್ ಅವರೇ ಸಿದ್ಧರಾಮಯ್ಯನವರ ಪಂಚೆಯೊಳಗೆ ಇಣುಕುವುದನ್ನು ಬಿಟ್ಟು ಕರಾವಳಿಯಲ್ಲಿ ಕಾಂಗ್ರೆಸ್‍ಗೆ ಶಕ್ತಿ ನೀಡಿ
ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು – Budkulo.com
ಮೊನ್ನೆ ಮೊನ್ನೆಯ ವರೆಗೆ ನಿಷ್ಠಾವಂತ ಕಾಂಗ್ರೆಸ್ಸಿಗನೆಂದೇ ಕರೆಸಿಕೊಂಡಿದ್ದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಇದೀಗ ಕಾಂಗ್ರೆಸ್ ವಿರುದ್ಧವೇ ಡೈನಮೈಟ್‍ನಂತಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ನನ್ನ ಮೊದಲ ಪ್ರಶ್ನೆ: ಹರಿಪ್ರಸಾದ್ ಅವರೇ ನೀವು ಯಾರ ಮತ್ತು ಯಾವುದರ ಪ್ರತಿನಿಧಿ?!? ಉತ್ತರಿಸಿ ನೋಡೊಣ.
ಜಸ್ಟ್ ಒಂದು ಸನ್ನಿವೇಶವನ್ನು ಅಂದಾಜಿಸೋಣ.
ಪುತ್ತೂರಿನಲ್ಲಿ ಕಟ್ಟರ್ ಬಿಜೆಪಿ ಕಟ್ಟಾಳುವಾಗಿದ್ದ ಅರುಣ್ ಕುಮಾರ್ ಪುತ್ತಿಲ ತನ್ನನ್ನು ಕಡೆಗಣಿಸಿದ್ದಕ್ಕೆ ಸಿಡಿದೆದ್ದು ಬಂಡಾಯ ಸ್ಪರ್ಧೆ ಮಾಡಿ 61628 ಮತಗಳನ್ನು ಗಳಿಸಿ ಕೇವಲ 4295 ಮತಗಳ ಅಂತರದಲ್ಲಿ ಸೋತರು. ಅಂದರೆ ಪಕ್ಷ, ಪರಿವಾರ ಮುಂತಾದ ಯಾವುದೇ ಸವಲತ್ತು, ಅನುಕೂಲ, ಫಾಯಿದೆಗಳಿಲ್ಲದೇ ಏಕಾಂಗಿಯಾಗಿ, ತನ್ನ ಸ್ವಂತ ಶಕ್ತಿಯಿಂದ ಈ ಮಟ್ಟಿನ ಸಾಧನೆ ಮಾಡಿದರು. ಅದೇ ಪುತ್ತೂರಿನಲ್ಲಿ ಹಿಂದೆ ಬಿಜೆಪಿಯಿಂದ ಅವಮಾನಿತರಾಗಿದ್ದಕ್ಕೆ ಇದೇ ರೀತಿಯಲ್ಲಿ ಬಂಡಾಯ ನಿಂತು ಶಕುಂತಳಾ ಶೆಟ್ಟಿಯವರು ಆ ಕಾಲಕ್ಕೇ 25 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು.
ಓದುಗರೇ, ನೀವೇ ಹೇಳಿ ಬಿ.ಕೆ. ಹರಿಪ್ರಸಾದ್ ಅವರು ಇದೇ ರೀತಿ ಪಕ್ಷ ಬಿಟ್ಟು ಸ್ವಂತ ಬಲದಿಂದ ಚುನಾವಣೆಗೆ ನಿಂತರೆ ಎಷ್ಟು ಮತಗಳನ್ನು ಗಳಿಸಿಯಾರು? ಇದೀಗ ಜಾತಿ ಜಾತಿ ಎಂದು ಹಲುಬುವ ಹರಿಪ್ರಸಾದ್, ತಮ್ಮದೇ ಜಾತಿಯವರು ನಿರ್ಣಾಯಕವಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಂಟಿಯಾಗಿ ಚುನಾವಣೆಗೆ ನಿಂತರೆ ಎಷ್ಟು ಮತ ಗಳಿಸಿಯಾರು? ಅಬ್ಬಬ್ಬಾ ಅಂದರೆ 5000 ಅಥವಾ 10000 ಅಥವಾ ಸ್ವಲ್ಪ ಹೆಚ್ಚು! ಅಷ್ಟು ಬಂದರೂ ಅದು ಮಹತ್ಸಾಧನೆಯೇ ಸರಿ. ಅಲ್ಲವೇ?
ಈ ವಿಷಯ ಯಾಕಂದ್ರೆ, ಹರಿಪ್ರಸಾದ್‍ರ ಇತ್ತೀಚಿನ ನೀಚ ನಡವಳಿಕೆ ಮತ್ತು ಹೀನ ಮಾತುಗಳು, ಅವರ ಯೋಗ್ಯತೆ ಏನೆಂಬುದನ್ನು ಸಾಬೀತುಪಡಿಸುತ್ತಿವೆ. ಉತ್ತರದಾಯಿತ್ವದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಾ ಕೇವಲ ರಾಜ್ಯಸಭಾ ಸದಸ್ಯನಾಗಿಯೇ ಅಧಿಕಾರ ಅನುಭವಿಸುತ್ತಿದ್ದ ಹರಿಪ್ರಸಾದ್ ಕೆಲವೊಮ್ಮೆ ಲೋಕಸಭೆಗೆ ಚುನಾವಣೆಗೆ ನಿಂತದ್ದಿದೆ. ಆದರೆ ಗೆಲುವು ಬಿಡಿ, ಒಳ್ಳೆಯ ಸ್ಪರ್ಧೆಗೂ ಆತ ಲಾಯಕ್ಕೆನಿಸಿರಲಿಲ್ಲ. ರಾಜ್ಯಸಭಾ ಸ್ಥಾನವೂ ಕೈಕೊಟ್ಟ ಮೇಲೆ ಮತ್ತೆ ಹಿಂಬಾಗಿಲಿನಿಂದ ರಾಜ್ಯ ರಾಜಕಾರಣಕ್ಕೆ ಬಂದು ವಿಧಾನ ಪರಿಷತ್ ಪ್ರವೇಶಿಸಿದರು. ಅಲ್ಲಿ ವಿರೋಧ ಪಕ್ಷದ ನಾಯಕನಾಗಿ ಸ್ವಲ್ಪ ಸದ್ದು ಮಾಡಿದರು. ಅದೂ ಕೇವಲ ಮಾತಿನ ಗದ್ದಲವಷ್ಟೇ. ನಿಜವಾದ ತಾಕತ್ತಿದ್ದಿದ್ದರೆ ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಿ ಗೆದ್ದಿರಬೇಕಾಗಿತ್ತು. ಹಾಗೆ ಆಗಿದ್ದಿದ್ದರೆ ಹರಿಪ್ರಸಾದ್‍ರ ಮಂತ್ರಿ ಸ್ಥಾನಕ್ಕೆ ಯಾರೂ ಅಡ್ಡಗಾಲಾಗುತ್ತಿರಲಿಲ್ಲ.
ಸಚಿವನಾಗುವ ಅರ್ಹತೆ ಕಳೆದುಕೊಂಡು ಬತ್ತಲಾದ ನಾಯಕ!?
ಇದೀಗ ನಿರೂಪಿತವಾದ ಸತ್ಯವೇನೆಂದರೆ ಮಂತ್ರಿಯಾಗುವ ಅರ್ಹತೆಯನ್ನೇ ಹರಿಪ್ರಸಾದ್ ಹೊಂದಿರಲಿಲ್ಲವೆಂಬುದು. ಅದನ್ನು ಅವರು ಕೈಯಾರೆ ನಿರೂಪಿಸಿದ್ದಾರೆ. ಅದರಿಂದಾಗಿ ಅವರ ಮೇಲೆ ಉಂಟಾಗಿದ್ದ ಅಲ್ಪಸ್ವಲ್ಪ ಕರುಣೆಯೂ ತೊಳೆದು ಹೋಗಿದೆ.
ತನ್ನ ಜಿಗುಪ್ಸೆ ಮತ್ತು ಅಸಹನೆಯನ್ನು ನಿರಂತರವಾಗಿ ಕಾರಿಕೊಳ್ಳುತ್ತಿರುವ ಹರಿಪ್ರಸಾದ್ ಮೊನ್ನೆಯಂತೂ ತೀರಾ ಕೀಳಾಗಿ ಮಾತನಾಡಿದ್ದಾರೆ. ಅದನ್ನು ಬಾಲಿಶವೆನ್ನಲಾಗದು. ತನ್ನನ್ನು ಸಚಿವನನ್ನಾಗಿ ಮಾಡದ್ದಕ್ಕೆ ಮುಖ್ಯಮಂತ್ರಿಯವರಿಗೆ ಧನ್ಯವಾದ ಹೇಳಿದ್ದಾರೆ! ನೀವೇ ಹೇಳಿ, ಇವರನ್ನು ಮಂತ್ರಿ ಮಾಡಬೇಕಿದ್ದ ಮುಖ್ಯಮಂತ್ರಿ ಯಾರು? ಅದು ಸಿದ್ಧರಾಮಯ್ಯನವರೇ ತಾನೇ! ಹಾಗಾಗಿ ಹರಿಪ್ರಸಾದ್‍ರು ನಿಂದಿಸಿದ್ದು ಸಿಎಂ ಸಿದ್ಧರಾಮಯ್ಯನವರನ್ನೇ ಅಲ್ಲವೇ?
ಸಿದ್ಧರಾಮಯ್ಯನವರೇನೋ ಮುತ್ಸದ್ಧಿತನದಿಂದ ತನ್ನ ಹೆಸರು ಹೇಳಿಲ್ಲವೆಂಬ ಕಾರಣ ನೀಡಿ ಠೀಕೆಗೆ ಉತ್ತರಿಸದೆ ಜಾಣತನ ಮೆರೆದಿದ್ದಾರೆ. ಆದರೆ ತನಗೆ ಸಚಿವ ಸ್ಥಾನ ಸಿಗದೇ ಇರಲು ಸಿದ್ಧರಾಮಯ್ಯರೇ ಏಕೈಕ ಕಾರಣವೆಂಬಂತೆ ಸತತವಾಗಿ ಮೈಪರಚಿಕೊಳ್ಳುತ್ತಿರುವ ಬಿ.ಕೆ.ಎಚ್. ಅವರು ಮೊನ್ನೆಯ ಜಾತಿ ಸಮಾವೇಶವನ್ನು ತನ್ನ ನಂಜು ಕಾರಿಕೊಳ್ಳಲು ಮತ್ತು ಸಿದ್ಧರಾಮಯ್ಯನವರನ್ನು ನಿಂದಿಸಲು ಬಳಸಿಕೊಂಡಿದ್ದು ಅಕ್ಷಮ್ಯ. ಈ ಮೂಲಕ ತನ್ನ ಅಯೋಗ್ಯತೆ ಮತ್ತು ಕೃತಘ್ನತೆಯನ್ನು ಜನರಿಗೆ ತೆರೆದಿಡುವ ಮೂಲಕ ಸ್ವತಃ ನಗೆಪಾಟಲಿಗೀಡಾಗಿದ್ದಾರೆ.
ಬಿ.ಕೆ.ಎಚ್.ಗೆ ಸಚಿವ ಸ್ಥಾನ ಖಂಡಿತಾ ದೊರಕುತ್ತದೆ ಎಂಬುದು ಹಲವರ, ಅದರಲ್ಲೂ ಕರಾವಳಿಯಲ್ಲಿ ಬಹುತೇಕರ ನಿರೀಕ್ಷೆಯಾಗಿತ್ತು. ಅದರಲ್ಲೂ ಬಿಲ್ಲವ ನಾಯಕರೂ, ಮೇಲ್ಮನೆಯಲ್ಲಿ ವಿಪಕ್ಷ ನಾಯಕನಾಗಿಯೂ ಇದ್ದಿದ್ದರಿಂದ ಅವರಿಗೆ ಮಂತ್ರಿ ಪಟ್ಟ ಖಚಿತವೆಂದು ಭಾವಿಸಲಾಗಿತ್ತು. ಆದರೆ ಅದು ಕೈಗೂಡದ ಕಾರಣ ಬಿ.ಕೆ.ಎಚ್. ಅಂದಿನಿಂದಲೇ ರೊಚ್ಚಿಗೆದ್ದು ಹಲವು ಬಾರಿ ಬಾಲಿಶವಾಗಿಯೂ ಅವಿವೇಕತನದಿಂದಲೂ ವರ್ತಿಸಿದ್ದಾರೆ. ಮೊನ್ನೆಯ ಸಮಾವೇಶದಲ್ಲಿ ಅವರಾಡಿದ ಮಾತುಗಳು ತೀರಾ ಕೀಳು ಅಭಿರುಚಿಯವು ಎನ್ನಲು ಯಾವುದೇ ಅಡ್ಡಿಯಿಲ್ಲ.
ಸಡಿಲ ನಾಲಿಗೆಯ ನೀಚ ಮಾತುಗಳೇಕೆ?
ಅಲ್ಲ, ಪಂಚೆಯೊಳಗೆ ಯಾರು ಏನೇನು ಧರಿಸುತ್ತಾರೆಂಬ ಕೆಟ್ಟ ಆಸಕ್ತಿ ಯಾಕೆ ಹರಿಪ್ರಸಾದ್‍ರಿಗೆ? ಸಿದ್ಧರಾಮಯ್ಯನವರ ಚಡ್ಡಿ ಯಾವ ಬಣ್ಣದ್ದು ಎಂಬುದನ್ನು ಪರೀಕ್ಷಿಸಿ ಅದರ ಮೇಲೆ ಅವರ ವ್ಯಕ್ತಿತ್ವ ಅಳೆಯುವ ನಾಲಾಯಕ್ ಜವಾಬ್ದಾರಿ ನಿಮಗೆ ಯಾರು ವಹಿಸಿದ್ದಾರೆ ಮಾರಾಯ್ರೇ? ಸಿದ್ಧರಾಮಯ್ಯನವರು ಕಾಂಗ್ರೆಸ್ಸಿಗೆ ಬಂದು ಎರಡೆರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ನೀವು ನಿಮ್ಮ ಪಕ್ಷದ ಗ್ರಾಮ ಪಂಚಾಯತ್ ಸದಸ್ಯನನ್ನಾದರೂ ಗೆಲ್ಲಿಸಿದ್ದೀರಾ ಹರಿಪ್ರಸಾದ್ ಅವರೇ?!
ಅಷ್ಟಕ್ಕೂ ಜಾತಿಯ ನೆಪವೊಡ್ಡಿ ರಾಜಕಾರಣದ ಮಾತುಗಳನ್ನಾಡುವ ಹರಿಪ್ರಸಾದ್ ಅದಕ್ಕೆ ಎಷ್ಟು ಅರ್ಹರು? ಈ ಮಾತನ್ನು ಈಗ ಕೇಳಲೇಬೇಕಾಗಿದೆ. ತನ್ನನ್ನು ಬಿಲ್ಲವರ ಮಹಾನ್ ನಾಯಕನೆಂಬಂತೆ ತಾನೇ ಪರಿಗಣಿಸಿ ಅದನ್ನು ಲೋಕಕ್ಕೆಲ್ಲಾ ತಿಳಿಸಲು ಒದ್ದಾಡುವವರಂತೆ ವರ್ತಿಸುತ್ತಿರುವ, ಜಾತಿ ಸಂಘಟನೆಯ ನೆಪವೊಡ್ಡಿ ತನ್ನ ನಾಯಕತ್ವವನ್ನು ಸಾಬೀತುಪಡಿಸಲು ಹೆಣಗುತ್ತಿರುವ ಬಿ.ಕೆ.ಎಚ್. ಅವರು ಕನಿಷ್ಟ ಕರಾವಳಿಯಲ್ಲಿ ತಮ್ಮದೇ ಜಾತಿಯ ಮತದಾರರನ್ನು ತನ್ನ ಪಕ್ಷಕ್ಕೆ ಸೆಳೆಯುವಲ್ಲಿ ಎಷ್ಟು ಶ್ರಮಿಸಿದ್ದಾರೆ?
ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಹುತೇಕ ಬಿಲ್ಲವರು ದೂರ ಹೋಗಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ವಾಸ್ತವ ಸತ್ಯ. ಹರಿಪ್ರಸಾದ್‍ಗೆ ಅದು ತಿಳಿದಿಲ್ಲವೇ? ಅಷ್ಟಿದ್ದರೂ ಕಾಂಗ್ರೆಸ್ ಪಕ್ಷವನ್ನು ಕರಾವಳಿಯಲ್ಲಿ ಮೇಲೆತ್ತಲು, ಕನಿಷ್ಠ ಬಿಲ್ಲವರ ಮುಖಾಂತರವಾದರೂ ಶಕ್ತಿ ತುಂಬಿಸಲು ಯಾವ ಘನಂದಾರಿ ಕೆಲಸ ಮಾಡಿದ್ದಾರೆ ಇವರು? ಮೊನ್ನೆಯ ಚುನಾವಣೆಗೆ ಈ ನಿಟ್ಟಿನಲ್ಲಿ ಯಾವ ಜವಾಬ್ದಾರಿ ವಹಿಸಿದ್ದರು? ಅದಕ್ಕೆ ಬೇಕಾದ ಮಿನಿಮಮ್ ಬದ್ಧತೆ ಅವರಲ್ಲಿತ್ತಾ?
ಖಂಡಿತಾ ಇಲ್ಲವೆನ್ನುವುದೇ ಉತ್ತರ. ಕಾಂಗ್ರೆಸ್‍ಗೆ ಬಹುಮತ ಬಂದ ಬಳಿಕ ತನ್ನ ನಾಯಕತ್ವ, ತನ್ನ ಜಾತಿಯೆಂದು ಭೋಂಗು ಬಿಡುತ್ತಿರುವ ಹರಿಪ್ರಸಾದ್‍ರೇ ಕಾಂಗ್ರೆಸ್‍ಗೆ ಶಕ್ತಿ ತುಂಬಲು, ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ಒಟ್ಟುಗೂಡಿಸಲು ನೀವು ಎಷ್ಟು ಶ್ರಮ ಹಾಕಿ ದುಡಿದಿದ್ದೀರಿ? ಬೇರೆಡೆ ಬಿಡಿ, ಕನಿಷ್ಠ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ನೀವೀಗ ಜಾತಿ ಜಾತಿ ಎಂದು ಊಳಿಡುತ್ತಿರುವ ಕಾರಣಕ್ಕಾದರೂ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು, ಪಕ್ಷವನ್ನು ಉದ್ಧಾರ ಮಾಡಲು ಏನೇನು ಕ್ರಮ ಕೈಗೊಂಡಿದ್ದಿರಿ? ಹೇಳಿ ಸರ್.
ಕುಟುಂಬದ ಸದಸ್ಯನನ್ನೇ ಗೆಲ್ಲಿಸಲಾಗದವರು…
ರಾಜ್ಯ, ಜಿಲ್ಲೆ ಬೇಡ, ಕನಿಷ್ಠ ತಮ್ಮ ಕುಟುಂಬದ ಸದಸ್ಯನೇ ಚುನಾವಣೆಗೆ ನಿಂತಿದ್ದ ಬೆಳ್ತಂಗಡಿಯಲ್ಲಾದರೂ ಇವರು ಏನಾದರೂ ಕೆಲಸ ಮಾಡಿದ್ದಾರಾ? ಅದಕ್ಕೂ ಉತ್ತರ ಶೂನ್ಯ. ಇವರ ಸಹೋದರನ ಮಗ ರಕ್ಷಿತ್ ಶಿವರಾಂಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದೇ ಇವರ ಮಹಾನ್ ಸಾಧನೆ. ಅದು ಬಿಟ್ಟರೆ ತಮ್ಮ ಕುಟುಂಬದ ಸದಸ್ಯನನ್ನಾದರೂ ಗೆಲ್ಲಿಸುವುದಕ್ಕೆ ಇವರು ಕಡಿದು ಕಟ್ಟೆ ಹಾಕಿದ್ದು ಏನು? ಅವರೇ ಉತ್ತರಿಸಬೇಕು.
ಇಂತಹ ಅಸಮರ್ಥ ರಾಜಕಾರಣಿ, ಅಯೋಗ್ಯ ನಾಯಕ, ಪ್ರಯೋಜನಕ್ಕೆ ಬಾರದ ಜನಪ್ರತಿನಿಧಿ ತಮ್ಮ ಸ್ವಂತ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ನಿರಂತರವಾಗಿ ಲೇವಡಿ ಮಾಡುವ, ನಿಂದಿಸುವ ಯಾವುದೇ ಅರ್ಹತೆಯನ್ನು ಹೊಂದಿಲ್ಲ. ಸಿದ್ಧರಾಮಯ್ಯನವರೇನೋ ಪ್ರಶ್ನಾತೀತರಲ್ಲ. ಮುಖ್ಯಮಂತ್ರಿಯಾಗಲೀ ಪ್ರಧಾನಿಯೇ ಆಗಿರಲಿ ಅಥವಾ ಇನ್ಯಾರೇ ಆಗಲಿ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಪ್ರಶ್ನಿಸಲ್ಪಡಬೇಕಾದವರೇ. ಠೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಹರಿಪ್ರಸಾದ್‍ರದ್ದು ಠೀಕೆಯೂ ಅಲ್ಲ, ನ್ಯಾಯಯುತ ವಿರೋಧವೂ ಅಲ್ಲ. ಅವರದ್ದು ಕೇವಲ ಕೃತಘ್ನ ಮನಸ್ಥಿತಿ ಮತ್ತು ನಾಲಾಯಕ್ ವ್ಯಕ್ತಿತ್ವದ ಪ್ರದರ್ಶನವಷ್ಟೇ.
ಸಿದ್ಧರಾಮಯ್ಯನವರು ಕೇವಲ ಒಂದು ಜಾತಿಗೆ ಸೀಮಿತರಾದ ನಾಯಕರಲ್ಲ. ಮೊನ್ನೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಟ್ಟು ಕಾರ್ಯತಂತ್ರ ಗೆಲುವಿಗೆ ಕಾರಣ ಹೌದು. ಅದಕ್ಕಿಂತಲೂ ಒಂದು ತೂಕ ಹೆಚ್ಚು ಸಿದ್ಧರಾಮಯ್ಯನವರ ಪ್ರಭಾವ, ವರ್ಚಸ್ಸು ಮತ್ತು ಜನಪ್ರಿಯತೆ ಕಾರಣ. ಇದು, ಕಳೆದ ವರ್ಷದ ಸಿದ್ಧರಾಮೋತ್ಸವದಲ್ಲಿಯೇ ಪ್ರೂವ್ ಆಗಿತ್ತು. ಅಲ್ಲಿಂದಲೇ ಕಾಂಗ್ರೆಸ್ ಮೇಲಿನ ಜನರ ಒಲವು ಹೆಚ್ಚಾಗಿದ್ದು. ಜೊತೆಗೆ ಡಿ.ಕೆ. ಶಿವಕುಮಾರ್ ಸೇರಿದಂತೆ ಒಟ್ಟಾರೆ ಕಾಂಗ್ರೆಸ್ ಪಕ್ಷದ ಅದ್ಭುತ ಸ್ಟ್ರ್ಯಾಟಜಿ ಮತ್ತು ಬದ್ಧತೆಯ ದುಡಿಮೆಯೂ ಕಾರಣ. ಅದೇ ಕಾರಣಕ್ಕೆ 135 + 1 (ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ) ಸ್ಥಾನಗಳಲ್ಲಿ ಗೆಲುವು ದೊರಕಿದ್ದು. ಅದಕ್ಕೆ ಕಳಶವಿಟ್ಟಂತೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ್ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರ ಫ್ಯಾಕ್ಟರ್ ಕೂಡ ನೆರವಾಗಿತ್ತು.
ಈಗ ಹೇಳಿ ಈ ಗೆಲುವಿಗೆ ಬಿ.ಕೆ. ಹರಿಪ್ರಸಾದ್‍ರ ಎಷ್ಟು ಶ್ರಮ, ಸಾಮರ್ಥ್ಯ ಮತ್ತು ದುಡಿಮೆ ಬೆಂಬಲವಾಗಿತ್ತು? ಎಷ್ಟು ಸ್ಥಾನಗಳಲ್ಲಿ ಬಿ.ಕೆ.ಎಸ್. ಪ್ರಭಾವಶಾಲಿಯಾಗಿದ್ದರು? ಶೂನ್ಯ ಹೊರತುಪಡಿಸಿ ಬೇರೆ ಉತ್ತರವಿದೆಯೇ? ತನ್ನ ಸ್ವಂತ ಸಹೋದರನ ಮಗನನ್ನು ಗೆಲ್ಲಿಸುವುದಕ್ಕಾಗಿಯೇ ಕಿಂಚಿತ್ತೂ ಕೆಲಸ ಮಾಡದ ವ್ಯಕ್ತಿ ಇತರರನ್ನು ಗೆಲ್ಲಿಸಲು ದುಡಿಯುತ್ತಾರಾ?
ಇಂತಹ ಹಾಸ್ಯಾಸ್ಪದ ಸಾಧಕನೆಂಬ ಹೆಗ್ಗಳಿಕೆಯ ಬಿ.ಕೆ.ಎಸ್.ಗೆ ಸಚಿವ ಸ್ಥಾನ ಪಡೆಯುವ ಯಾವುದೇ ಅರ್ಹತೆಯಾಗಲೀ ಯೋಗ್ಯತೆಯಾಗಲೀ ಇಲ್ಲವೇ ಇಲ್ಲವೆಂಬುದನ್ನು ಸಾಬೀತುಪಡಿಸಿದ್ದು ಯಾರು ಗೊತ್ತೇ? ಅದು ಸ್ವತಃ ಅವರೇ ನಿರೂಪಿಸಿದ ಸತ್ಯ. ಸಹನೆಯಿಂದ ಸುಮ್ಮನಿದ್ದು ಮುಂದೆ ಬರುವ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುತ್ತಾ, ಪಕ್ಷಕ್ಕಾಗಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುವ ಆಸ್ಥೆ ವಹಿಸಿದ್ದಿದ್ದರೆ ಜನರ ಮತ್ತು ಪಕ್ಷದ ಹಿರಿಯರ ಮನಸ್ಸಿನಲ್ಲಿ ಸಾಕಷ್ಟು ಗೌರವ ಮತ್ತು ಒಲುಮೆ ಗಳಿಸಬಹುದಿತ್ತು. ಆದರೀಗ ಆ ಎಲ್ಲಾ ಅರ್ಹತೆ, ಅವಕಾಶಗಳನ್ನು ಸ್ವತಃ ಅವರೇ ಕಳೆದುಕೊಂಡಿದ್ದಾರೆ.
ಸಿದ್ಧರಾಮಯ್ಯನವರೇ ಹರಿಪ್ರಸಾದ್‍ಗೆ ಸಚಿವ ಸ್ಥಾನ ತಪ್ಪಿಸಿದ್ದು ಹೌದಾಗಿದ್ದರೆ ಅದು ನಿಜಕ್ಕೂ ಅತ್ಯುತ್ತಮ ನಿರ್ಧಾರವೇ ಆಗಿತ್ತು ಎಂಬುದನ್ನೀಗ ಹರಿಪ್ರಸಾದ್‍ರೇ ರುಜುವಾತುಪಡಿಸಿದ್ದಾರೆ. ಎಲ್ಲಾ ಬಿಟ್ಟು ಇದೀಗ ಜಾತಿ ಜಾತಿ ಎಂದು ಊಳಿಡುವ ಬಿ.ಕೆ.ಎಚ್. ತಮ್ಮದೇ ಜಾತಿಗೆ ಏನು ಕೊಡುಗೆ ಕೊಟ್ಟಿದ್ದಾರೆಂಬುದನ್ನು ಅವರೇ ಹೇಳಬೇಕು. ಸಿದ್ಧರಾಮಯ್ಯನವರ ವ್ಯಕ್ತಿತ್ವಕ್ಕೆ ಚ್ಯುತಿಯುಂಟಾಗುವಂತೆ ಕಿರುಚುವುದನ್ನು ಬಿಟ್ಟು, ಕೀಳು ನುಡಿಗಳಿಂದ ತಮ್ಮನ್ನೇ ಬೆತ್ತಲು ಮಾಡುವುದನ್ನು ನಿಲ್ಲಿಸಿ ಬಿ.ಕೆ.ಎಚ್. ಅವರು, ಕನಿಷ್ಠ ಕರಾವಳಿಯಲ್ಲಾದರೂ ಕಾಂಗ್ರೆಸ್ ಪಕ್ಷವನ್ನು ಮೇಲಕ್ಕೆತ್ತಲು ಶ್ರಮಿಸಬೇಕು. ಅಂತಹ ಯೋಗ್ಯತೆ, ಸಾಮರ್ಥ್ಯವಿಲ್ಲವೆಂದಾದಲ್ಲಿ ಕನಿಷ್ಠ ಸುಮ್ಮನಿರಬೇಕು. ಅದೂ ಆಗದಿದ್ದರೆ ಪಕ್ಷ ತೊರೆದು, ರಾಜಕೀಯ ನಿವೃತ್ತಿಯಾಗುವುದೇ ಒಳ್ಳೆಯದು. ಅದು ಬಿಟ್ಟು ಸ್ವಪಕ್ಷಕ್ಕೆ ಹಾನಿ ಮಾಡುವ ಕೃತಘ್ನತೆ ಬೇಡ.
ಕರಾವಳಿಯಲ್ಲಿ ಕಾಂಗ್ರೆಸ್ ಅಧಃಪತನಕ್ಕೆ ಯಾರು ಕಾರಣ?
ತಾನು ಸಚಿವನಾಗಲು ಅರ್ಹ ಎಂದೇ ಅವರ ಅಂಬೋಣವಾಗಿದ್ದರೆ ಮುಂದಿನ ಲೋಕಸಭಾ ಚುನಾಣೆಗೆ ಅವರ ಕೊಡುಗೆ ಏನು ಎಂಬುದು ಮುಖ್ಯವಾಗಬೇಕು. ಕರಾವಳಿಯಲ್ಲಿ ಇಂತಹ ಅತಿರಥ ಮಹಾರಥರಿದ್ದೂ ಕಾಂಗ್ರೆಸ್ ಪಕ್ಷ ಯಾಕೆ ಹೀನಾಯ ಸ್ಥಿತಿಯಲ್ಲಿದೆ? ಲೋಕಸಭೆ, ಅಸೆಂಬ್ಲಿ ಚುನಾವಣೆ ಬಿಡಿ, ಪಂಚಾಯತ್ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಹರಸಾಹಸ ಪಡಬೇಕಿದೆ. ಇದು ಯಾರ ಕೊಡುಗೆ? ಇದನ್ನು ಯಾರು ಸರಿಪಡಿಸಬೇಕು?
ಕಳೆದ ಬಾರಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆದ ಮೇಲೆ ಅಜಾತಶತ್ರು, ಶುದ್ಧಹಸ್ತ ನಾಯಕರೆಂದೇ ಎಲ್ಲರೂ ಪರಿಗಣಿಸುವ, ಅತ್ಯಂತ ನಿಷ್ಠಾವಂತ ಕಾಂಗ್ರೆಸ್ಸಿಗ ಎಂದೇ ಕರೆಸಿಕೊಳ್ಳುವ ಜನಾರ್ದನ ಪೂಜಾರಿಯವರು ಮುಖ್ಯಮಂತ್ರಿ ಆಗಿದ್ದ ಸಿದ್ಧರಾಮಯ್ಯನವರನ್ನು ಸದಾ ಠೀಕಿಸುತ್ತಿದ್ದರು. ಅದೂ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರ ಮುಂದೆ! ಅದು ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಕೊನೆಗೆ ಅವರನ್ನು ಕಾಂಗ್ರೆಸ್ ಕಚೇರಿಯಿಂದ ದೂರವಿಡಲಾಯಿತು. ಅಷ್ಟಕ್ಕೂ ಸುಮ್ಮನಾಗದ ಅವರು ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸುವುದನ್ನು ಮುಂದುವರಿಸಿ ಮತ್ತೆ ಸಿದ್ಧರಾಮಯ್ಯನವರನ್ನು ಹೀಗಳೆಯಲು, ಕಾಲೆಳೆಯಲು, ದೂಷಿಸಲು ತಮ್ಮ ಶಕ್ತಿ ಸಾಮರ್ಥ್ಯವನ್ನು ಮೀಸಲಿಟ್ಟರು.
ಇದೀಗ ಬಿ.ಕೆ. ಹರಿಪ್ರಸಾದ್ ಆ ಹೊಣೆಗಾರಿಕೆಯನ್ನು ನಿಷ್ಠೆಯಿಂದ ಹೊತ್ತುಕೊಂಡಿದ್ದಾರೆಂದು ಕಾಣುತ್ತದೆ. ಸರಕಾರ ರಚನೆಯಾದ ದಿನದಿಂದ ಬಿ.ಕೆ.ಎಚ್. ಆಡುತ್ತಿರುವ, ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಆತ ಪಕ್ಷ ಮತ್ತು ಸರಕಾರಕ್ಕೆ ಡ್ಯಾಮೇಜ್ ಮಾಡುವ ಇರಾದೆಯನ್ನೇ ಹೊಂದಿದ್ದಾರೆನ್ನುವಂತೆ ಕಾಣುತ್ತದೆ.
ಲೋಕಸಭಾ ಚುನಾವಣೆಗೆ ದ.ಕ. ಅಭ್ಯರ್ಥಿಯಾಗಿ ಗೆದ್ದು ತೋರಿಸಿ
ಬಿ.ಕೆ. ಹರಿಪ್ರಸಾದ್‍ರೇ, ನೀವು ನಿಮ್ಮನ್ನು ಅಷ್ಟೊಂದು ದೊಡ್ಡ ನಾಯಕ ಮತ್ತು ಸಮರ್ಥ ಮುಂದಾಳು ಎಂಬುದಾಗಿ ಪರಿಗಣಿಸುತ್ತೀರಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ತೋರಿಸಿ. ಅದಾಗದಿದ್ದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆ ವಹಿಸಿಕೊಳ್ಳಿ. ಹಾಗೆ ಮಾಡಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅದು ನಿಮ್ಮ ತಾಕತ್ತು ಏನೆಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟಂತೆ ಆಗುತ್ತದೆ. ಆಮೇಲೆ ನಿಮ್ಮನ್ನು ಸಚಿವನನ್ನಾಗಿಸದಿದ್ದರೆ ಹೋರಾಟ ಮಾಡಿ, ನಾವೆಲ್ಲರೂ ನಿಮ್ಮನ್ನು ಬೆಂಬಲಿಸುತ್ತೇವೆ.
ಅದಾಗದಿದ್ದರೆ, ಸುಮ್ಮನೇ ನಿಮ್ಮ ಅಡಗುದಾಣದಲ್ಲಿ ವಿಶ್ರಾಂತಿ ಪಡೆದುಕೊಳ್ಳಿ. ಎಂದಿನಂತೆ ಕಾಂಗ್ರೆಸ್ ಗೆಲುವಿಗೆ ದುಡಿಯುವವರಿದ್ದಾರೆ. ಅವರ ತಂಟೆಗೆ ಹೋಗದೆ ನಿದ್ದೆ ಮಾಡಿ. ನಾಲಿಗೆ ಹರಿಬಿಟ್ಟು ನಿಮ್ಮ ವ್ಯಕ್ತಿತ್ವವನ್ನು ಧೂಳೀಪಟ ಮಾಡಬೇಡಿ. ಹಾಗೆ ಮಾಡಿ ನಿಮ್ಮ ಅಧಃಪತನವನ್ನು ನೀವೇ ಆಹ್ವಾನಿಸಬೇಡಿ.
ಬುಡ್ಕುಲೊ ಕನ್ನಡ ವಾಟ್ಸಪ್ ಗ್ರೂಪ್‍ಗೆ ಭರ್ತಿಯಾಗಿ:
https://chat.whatsapp.com/CxzVPIf7DAIBDtNI53fgme
ಬುಡ್ಕುಲೊ ಕೊಂಕ್ಣಿ ವಾಟ್ಸಪ್ ಗ್ರೂಪಾಕ್ ಭರ್ತಿ ಜಾಂವ್ಕ್ ಲಿಂಕ್ https://chat.whatsapp.com/GVbz61zjpZa8PN1wE7YSSL
Send your Feedback to: budkuloepaper@gmail.com










