ವರ್ಣಸ್ವಪ್ನಗಳಲ್ಲಿ ಸಪ್ನಾ ನೊರೊನ್ಹ
ಬಾನಿನಲ್ಲಿ ಹಾರಾಡುವ ಹಕ್ಕಿಗೂ ನೀರಿನಲ್ಲಿ ಈಜಾಡುವ ಮೀನಿಗೂ ತನ್ನದೇ ಆದಂತಹ ಸೀಮಿತ ವ್ಯಾಪ್ತಿಯ ಸ್ವಚ್ಛಂದ ಬದುಕಿದೆ. ಆ ಬದುಕಿನಲ್ಲಿ ಸುಖ ಕಾಣುವ ವಾತಾವರಣಗಳನ್ನು ಸ್ವಯಂ ಸೃಷ್ಟಿಸಿಕೊಂಡಾಗಲೇ ಸಂತೃಪ್ತ ಸಂದರ್ಭಗಳಿಗೆ ಪೂರಕ ಪಥವಾಗುವುದು. ಮಂಗಳೂರಿನ ಕಲಾವಿದೆ ಸಪ್ನಾ ನೊರೊನ್ಹರವರು ತಮ್ಮ ವರ್ಣ ಬದುಕಿನ ದಾರಿಯಲಿ,್ಲ ಅಭಿವ್ಯಕ್ತದ ಸಶಕ್ತ ಸೂರಿನಲ್ಲಿ ತಮ್ಮದೇ ಆದಂತಹ ಸ್ವಯಂ ಚೌಕಟ್ಟನ್ನು ಕಟ್ಟಿಕೊಂಡು ಸಾಗುತ್ತಿರುವವರು. ತಮ್ಮ ವರ್ಣಾಭಿವ್ಯಕ್ತ ಪಥದಲ್ಲಿ ವಸ್ತು ವಿಷಯ, ಸಾಂಕೇತಿಕ ಪ್ರತಿಮೆ, ಕಲ್ಪನೆಗಳ ಹೂರಣ, ಒಳ ತಿರುವುಗಳ ಹರವುಗಳನ್ನು ಸಂದರ್ಭಕ್ಕನುಗುಣವಾಗಿ, ಸಂವೇದನಕ್ಕನುಗುಣವಾಗಿ ಕುಂಚದಲ್ಲಿ ಸಾದರಪಡಿಸುವರು. ಆಂತರಿಕ ಹಾಗೂ ಬಾಹ್ಯದೃಷ್ಟಿಯ ನೋಟಗಳಿಂದ, ಒಳ ಮನಸ್ಸಿನ ತನ್ಮಯತೆಗೆ ಕ್ರಿಯಾಶೀಲತೆಯನ್ನು ಬಳಸಿಕೊಂಡು ತತ್ವ ಹಾಗೂ ಸಿದ್ಧಾಂತಗಳನ್ನು ರೂಪಿಸಿಕೊಂಡು ಕಲಾಕೃತಿಗಳ ಅರ್ಥವಂತಿಕೆಯನ್ನು ವೃದ್ಧಿಸುತ್ತಿದ್ದಾರೆ. ತನ್ನ ಅಂತಚಃಕ್ಷುವಿನ ವಿಭಿನ್ನ ಮಜಲುಗಳ ಸಾದೃಶ್ಯಗಳನ್ನು ಸಾಕಾರಗೊಳಿಸುತ್ತಾ ವಸ್ತುನಿಷ್ಠ ಹಾಗೂ ವ್ಯಕ್ತಿನಿಷ್ಠ ವಾಸ್ತವತಾವಾದಗಳನ್ನು ಕೃತಿರೂಪಕ್ಕಿಳಿಸುತ್ತಾ ವಾಸ್ತವ ಚಿತ್ರಣಗಳಿಗೆ ತನ್ನ ಕುಂಚ ಸ್ಪರ್ಶದ ವಿಭಿನ್ನ ರೂಪಕಗಳನ್ನು ಚಿತ್ರಿಸುತ್ತಿರುವರು. ತನ್ನ ಪರಿಕಲ್ಪನೆಯ ಕಲಾಕೃತಿಗಳು ಯಾವ ತಾತ್ವಿಕ ನೆಲೆಯಲ್ಲಿ ಉಳಿದುಕೊಂಡರೂ ಅದರ ಮೂರ್ತ ಹಾಗೂ ಅಮೂರ್ತತೆಯನ್ನು ವೀಕ್ಷಕರಿಗೆ ಸುಲಭವಾಗಿ ಸಂವಹನವಾಗುವಂತೆ ಚಿತ್ರಿಸಬಲ್ಲರು. ವೈಚಾರಿಕ ಆಯಾಮಗಳು, ನಿಸರ್ಗ ಚಿತ್ರಣಗಳು, ಗ್ರಾಮೀಣ ಪರಿಸರದ ಸೊಬಗು ಹಾಗೂ ಅಲ್ಲಿನ ಸೃಜನಾತ್ಮಕ ಕ್ರಿಯಾಶೀಲತೆ, ತುಳುನಾಡಿನ ಸಾಂಸ್ಕøತಿಕ ಪ್ರತೀಕಗಳನ್ನು ಕೃತಿರೂಪಕ್ಕಿಳಿಸಿ ತನ್ನ ಕಲಾವೈಶಿಷ್ಟ್ಯತೆಯನ್ನು ಗುರುತಿಸಿಕೊಂಡಿದ್ದಾರೆ. ತುಳುನಾಡಿನ ದೈವಕೋಲ, ದಸರಾ ಹುಲಿ ನೃತ್ಯ, ಕೋಳಿ ಅಂಕ, ಭತ್ತದ ಕೊಯಿಲು, ಜಾತ್ರೆ – ಉತ್ಸವ, ಬೆಸ್ತರು ಮತ್ತು ಹಾಯಿದೋಣಿ ಮುಂತಾದ ವಿಷಯಗಳಲ್ಲಿ ಸಪ್ನಾರವರು ರಚಿಸಿದ ಕಲಾಕೃತಿಗಳು ವೀಕ್ಷಕರ ಮೆಚ್ಚುಗೆ ಪಡೆದಿರುತ್ತವೆ.
ಅಕ್ರಿಲಿಕ್ ಹಾಗೂ ತೈಲವರ್ಣದಲ್ಲೇ ಕಲಾಕೃತಿಗಳನ್ನು ರಚಿಸುವ ಇವರು ಕಾಲೇಜು ಶಿಕ್ಷಣದ ನಂತರ ತನ್ನೊಳಗೆ ಗುಹ್ಯವಾಗಿದ್ದ ಕಲಾಪ್ರತಿಭೆಯನ್ನು ಬಾಹ್ಯಗೊಳಿಸಲು ಸೇರಿದ್ದು ಬಿ.ಜಿ.ಯಂ. ಆರ್ಟ್ ಸ್ಕೂಲಿಗೆ. ಬಿ.ಜಿ.ಯಂ.ನ ಬಿ.ಜಿ. ಮಹಮ್ಮದ್‍ರವರಿಂದ ಕಲಾ ತರಬೇತಿಯನ್ನು ಪಡೆದು ಒಂದು ಹಂತಕ್ಕೆ ಕಲಾವಿದೆಯಾಗಿ ಬೆಳೆದವರು.
ಕಲಾಕೃತಿಗಳನ್ನು ರಚಿಸುತ್ತಾ ತನ್ನ ಕಲಾ ಬದುಕಿನ ಚೌಕಟ್ಟನ್ನು ವಿಕಸನಗೊಳಿಸುತ್ತಾ ಕಲೆಯಲ್ಲಿ ನುರಿತವರಾಗಿ ಕಲಾವಿದರೊಂದಿಗೆ ಬೆರೆತವರಾಗಿ ‘ಸಂಕೀರ್ಣತೆ’ಯಿಂದ ಸಂಪೂರ್ಣವಾಗಿ ಹೊರ ವ್ಯಾಪಿಸಿದವರಾಗಿರುತ್ತಾರೆ. ಹಲವಾರು ಚಿತ್ರಕಲಾ ಶಿಬಿರಗಳಲಿ,್ಲ ಚಿತ್ರಕಲಾ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಭಾಗವಹಿಸಿರುತ್ತಾರೆ. 15 ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ, ಎರಡು ತನ್ನ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿರುವರಲ್ಲದೆ, 9 ಕಲಾ ಶಿಬಿರಗಳಲ್ಲಿ ಭಾಗವಹಿಸಿರುತ್ತಾರೆ. ತನ್ನ ಗುರುವನ್ನು ನೆನಪಿಸುವ ಅಂಗವಾಗಿ ಜಿ. ಮಹಮ್ಮದ್‍ರವರ ಸ್ಮರಣಾರ್ಥವಾಗಿ ‘ನೀಲ ಅಲೆಗಳು’ ಎಂಬ ತನ್ನ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮಾಡಿರುವರು. ಕರಾವಳಿ ಚಿತ್ರಕಲಾ ಚಾವಡಿಯ ಜೊತೆ ಕಾರ್ಯದರ್ಶಿ ಯಾಗಿ ಕುಡ್ಲ ಕಲಾಮೇಳದಲ್ಲಿ ಹಾಗೂ ಗಾಂಧಿ ಪಾರ್ಕ್‍ನಲ್ಲಿ ಆಯೋಜಿಸಿದ ‘ವರ್ಣವನಿತಾ’ ಕಾರ್ಯಕ್ರಮದಲ್ಲಿ ಪ್ರಮುಖ ಸಂಘಟಕರಾಗಿ ಕಾರ್ಯ ನಿರ್ವಹಿಸಿರುವರು. ‘ಆರ್ಟ್ ಫಾರ್ ಪೀಸ್, ಹಾರ್ಮೊನಿ, ಸೃಷ್ಟಿ-ಸ್ಥಿತಿ-ಲಯ, ಕುಂಚ ಕಹಳೆ, ವಿಶ್ವ ಕೊಂಕಣಿ ಕಲಾಮೇಳ, ಆಶುವರ್ಣ ದರ್ಶನ, ಅಳಿಕೆ ಕನ್ನಡ ಸಾಹಿತ್ಯ ಸಮ್ಮೇಳನ, ಬಾಲಭಾರತ್ ಸೃಜನೋತ್ಸವ, ವರ್ಣವನಿತಾ, ವರ್ಣನಂದಿನಿ ಮುಂತಾದ ಕಲಾಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿರುತ್ತಾರೆ.
ಕಲೆಯನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿಸಿರುವ ಕುಲಶೇಖರದ ಸಪ್ನಾ ನೊರೊನ್ಹಾ ಹೆಚ್ಚು ಪ್ರಚಾರದಲ್ಲಿಲ್ಲ. ಹಲವು ಪ್ರದರ್ಶನಗಳಲ್ಲಿ ಅವರ ಪೈಂಟಿಂಗ್‍ಗಳು ಪ್ರದರ್ಶನ ಕಂಡಿವೆ. ಅವರ ಪೈಟಿಂಗ್ ಬಯಸುವವರು ಅವರನ್ನು 9845790877 ಅಥವಾ noronhasapna@yahoo.co.in ಮುಖಾಂತರ ಸಂಪರ್ಕಿಸಬಹುದು.
(ದಿನೇಶ್ ಹೊಳ್ಳ ಅವರು ಪ್ರಸಿದ್ಧ ಕಲಾವಿದರು, ಬರಹಗಾರರು ಹಾಗೂ ಹವ್ಯಾಸಿ ಪತ್ರಕರ್ತರು. ಚಾರಣ ಮತ್ತು ಗಾಳಿಪಟ ರಚನೆ ಮತ್ತು ಹಾರಾಟ ಅವರ ಪ್ರಮುಖ ಹವ್ಯಾಸಗಳು. ‘ಟೀಮ್ ಮಂಗಳೂರು’ ಇದರಲ್ಲಿ ಸಕ್ರಿಯರಾಗಿದ್ದಾರೆ.)
(Originally published on June 06, 2012)