ಮತಾಂತರವೆಂಬ ಮಿಥ್ಯಾರೋಪ ಮತ್ತು ಲೆಕ್ಕ ತಪ್ಪಿದ ಚರ್ಚ್ ದಾಳಿ
2008ರ ಸೆಪ್ಟೆಂಬರ್‍ನಲ್ಲಿ ನಡೆದ ಚರ್ಚ್ ದಾಳಿ ಸಂದರ್ಭ ಮತ್ತು ತದ ನಂತರ ಕೇಳಿ ಬಂದ ಬಹು ದೊಡ್ಡ ಆರೋಪವೆಂದರೆ ಕ್ರೈಸ್ತರಿಂದ ನಡೆಯುವ ಮತಾಂತರದ ಬಗ್ಗೆ. ನಿಮಗೆ ನೆನಪಿರಬಹುದು, ದಾಳಿ ನಡೆಸಿದ ಹಿಂದೂ ಸಂಘಟನೆಗಳವರು ಮತ್ತವರ ಬೆಂಬಲಿಗರು, ನಿರ್ದೇಶಕರು ಎಲ್ಲಾ ಸೇರಿ, ಯಾವುದೋ ಕ್ರೈಸ್ತ ಪಂಗಡದವರು ಒಂದು ಪುಸ್ತಕವನ್ನು ಮುದ್ರಿಸಿ ಅದರಲ್ಲಿ ಹಿಂದೂ ದೇವಿ-ದೇವರುಗಳನ್ನು ಅವಹೇಳನ ಮಾಡಿ, ಕೀಳಾಗಿ ಚಿತ್ರಿಸಲಾಗಿದೆ ಎಂದು ಆಪಾದಿಸಿದ್ದರು ಮತ್ತು ಅದನ್ನು ಚರ್ಚ್ ದಾಳಿಗೆ ಸಮರ್ಥನೆಯನ್ನಾಗಿ ಬಳಸಿದ್ದರು.
ಟಿವಿ9 ಚಾನೆಲ್‍ನ ಸ್ಟುಡಿಯೋದಲ್ಲಿ ಬಜರಂಗ ದಳದ ಸಂಚಾಲಕ ಮಹೇಂದ್ರ ಕುಮಾರ್ ಗಟ್ಟಿಯಾಗಿ ಪ್ರತಿಪಾದಿಸಿದ್ದೂ ಇದನ್ನೇ.
ನಾನಿಲ್ಲಿ ಬರೆಯುತ್ತಿರುವುದು ಮಂಗಳೂರಿನಲ್ಲಿ ಜರಗಿದ ಚರ್ಚ್ ದಾಳಿ ಮತ್ತದರ ನಂತರದ ಬೆಳವಣಿಗೆಗಳ ಬಗ್ಗೆ ಮಾತ್ರ. ಹಾಗಾಗಿ ಈ ಮತಾಂತರವೆಂಬ, ಹಿಂದೂ ಸಂಘಟನೆಗಳು ಮತ್ತು ಬಹಳಷ್ಟು ವ್ಯಕ್ತಿಗಳು, ಬರಹಗಾರರು ಮತ್ತು ಪತ್ರಕರ್ತರು ತುಂಬಾ ದೊಡ್ಡದಾಗಿ ಬೊಬ್ಬಿರಿಯುವ ‘ಮತಾಂತರ’ ಪಿಡುಗಿನ ಬಗೆಗೆ ಬರೆಯಲಾಗದು. ಅದರ ಬಗ್ಗೆ ಬೇರೆ ಸಂದರ್ಭದಲ್ಲಿ ಬರೆಯುತ್ತೇನೆ. ನಾನು ಈ ಲೇಖನದಲ್ಲಿ ಬಳಸುವ ಮತಾಂತರದ ವಿಚಾರ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮತ್ತು ಹೆಚ್ಚೆಂದರೆ ಕರ್ನಾಟಕ ರಾಜ್ಯಕ್ಕೆ ಸೀಮಿತ.
ಮಂಗಳೂರಿನ ಚರ್ಚ್ ದಾಳಿಯಲ್ಲಿ ತಾವು ಕೇವಲ ಮತಾಂತರ ಮಾಡುವ ಪಂಗಡಗಳ ಪ್ರಾರ್ಥನಾ ಸ್ಥಳಗಳಿಗೆ ಮಾತ್ರ ಹಲ್ಲೆ ಮಾಡಿದ್ದು, ಕಥೊಲಿಕರ ಚರ್ಚುಗಳಿಗೆ ಯಾವುದೇ ಹಲ್ಲೆ ಮಾಡಿಲ್ಲವೆಂದು ದಾಳಿಕೋರರು ಹೇಳಿಕೊಂಡಿದ್ದರು. ಅವರಿಗೆ ತಾವು ಎಸಗಿದ ಬಹು ದೊಡ್ಡ ಪ್ರಮಾದ ಅರಿವಾಗುವಾಗ ತುಂಬಾ ತಡವಾಗಿತ್ತು ಎಂದು ಈ ಹಿಂದೆ ಹೇಳಿದ್ದೆನಲ್ಲ. ಆ ವಿಚಾರವನ್ನು ಸ್ವಲ್ಪ ವಿವರವಾಗಿ ತಿಳಿದುಕೊಳ್ಳುವುದು ಅವಶ್ಯ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಆಸುಪಾಸಿನ ಹಲವು ಜಿಲ್ಲೆಗಳಲ್ಲಿ ನೆಲೆಸಿರುವ ಕ್ರೈಸ್ತರಲ್ಲಿ ಕಥೊಲಿಕ್ ಜನಾಂಗದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಲ್ಲಲ್ಲಿ, ಪ್ರಮುಖವಾಗಿ ಮಂಗಳೂರಿನಲ್ಲಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ನರೂ ಸಾಧಾರಣ ಸಂಖ್ಯೆಯಲ್ಲಿದ್ದಾರೆ. ಸಾಮಾನ್ಯವಾಗಿ ಇವರ್ಯಾರೂ ಕಂಡ ಕಂಡವರನ್ನು ಮತಾಂತರ ಮಾಡುವ ಗೋಜಿಗೆ ಹೋಗುವುದಿಲ್ಲ. ಕಥೊಲಿಕರಲ್ಲಿ ಮತಾಂತರ ಮಾಡುವ ಅಗತ್ಯವಂತೂ ಇಲ್ಲ (ಹಿಂದೆ ಆಗಿದ್ದು ಬೇರೆ ವಿಚಾರ). ಅವರಿಗೆ ನೋಡಿಕೊಳ್ಳಲು ತಮ್ಮದೇ ಸಾಕಷ್ಟು ವಿಚಾರಗಳಿವೆ.
ಆದರೆ ಅಣಬೆಗಳಂತೆ ಹುಟ್ಟಿಕೊಂಡ ಕೆಲವು ಕ್ರಿಶ್ಚಿಯನ್ ಪಂಗಡಗಳು ತಲೆಹಿಡುಕರಂತೆ ಕಂಡ ಕಂಡ ಮನೆಗೆ ನುಗ್ಗಿ, ದಾರಿಯಲ್ಲಿ ಸಿಕ್ಕಿದವರನ್ನು ಪುಸಲಾಯಿಸಿ, ತಲೆ ಕೆಡಿಸಿ ಮತಾಂತರ ಮಾಡುವುದಿದೆ. ಇವರನ್ನು ಕಂಡರೆ ಹಿಂದೂಗಳಿಗೆ ಮಾತ್ರವಲ್ಲ, ಸ್ವತಃ ಕಥೊಲಿಕ್ ಕ್ರೈಸ್ತರಿಗೂ ಆಗುವುದಿಲ್ಲ. ಇಂಥ ಕೆಲ ವ್ಯಕ್ತಿಗಳು ಅಥವ ಕೆಲವೇ ಜನರ ಒಂದು ಗುಂಪು/ಪಂಗಡದವರು ಮಾಡುವ ಹಲ್ಕಾ ಕೆಲಸಗಳಿಂದ ಇಡೀ ಕ್ರೈಸ್ತ ಜನಾಂಗಕ್ಕೆ, ಪ್ರತ್ಯೇಕವಾಗಿ ಬಹಳಷ್ಟು ಸಂಖ್ಯೆಯಲ್ಲಿರುವ ಕಥೊಲಿಕರಿಗೆ ಕೆಟ್ಟ ಹೆಸರು ಬಂದದ್ದಿದೆ, ಮುಜುಗರವಾಗಿದ್ದೂ ಇದೆ. ಹಾಗೆ ನೋಡಿದರೆ ಕಥೊಲಿಕರಿಗೆ ಇಂತಹ ಮತಾಂತರಿ ಪಂಗಡಗಳು ಬಹು ದೊಡ್ಡ ಶತ್ರುಗಳೂ ಹೌದು (ಚರ್ಚ್ ದಾಳಿಯ ನಂತರ ಅವರ ಬಗ್ಗೆ ಕರುಣೆ ಮೂಡಿದೆ!).
ಮಹೇಂದ್ರ ಕುಮಾರ್ ಟಿವಿ ಚಾನೆಲಿನ ಸ್ಟುಡಿಯೊದಲ್ಲಿ ತನ್ನ ಸಂಘಟನೆಯ ಹುಡುಗರು ವ್ಯವಸ್ಥಿತವಾಗಿ ಯೋಜಿಸಿ ಇಂತಹ ಮತಾಂತರ ಮಾಡುವ ಕೇಂದ್ರಗಳ ಮೇಲೆ ದಾಳಿ ಮಾಡಿದ್ದು ಹೌದೆಂದು ಒಪ್ಪಿದ್ದು ನಿಮಗೆ ಗೊತ್ತಿದೆ. ಆದರೆ, ಮಿಲಾಗ್ರಿಸ್ ಚರ್ಚ್ ಬಳಿಯ ಎಡೋರೇಶನ್ ಮಿನಿಸ್ಟ್ರಿ ಎಂಬ ಕಥೊಲಿಕ್ ಧರ್ಮಭಗಿನಿಯರು ನಡೆಸುವ ಪ್ರಾರ್ಥನಾ ಕೇಂದ್ರವನ್ನು ದಾಳಿಗೀಡು ಮಾಡಿರದೇ ಹೋಗಿದ್ದಲ್ಲಿ, ಆ ದಿನದ ಸರಣಿ ದಾಳಿಗಳು ಪ್ರಚಾರಕ್ಕೆ ಬರುತ್ತಲೇ ಇರಲಿಲ್ಲ. ಯಾಕೆಂದರೆ ಅದಕ್ಕೆ ಸ್ವತಃ ಕಥೊಲಿಕ್ ಕ್ರೈಸ್ತರೇ ಮಹತ್ವ ನೀಡುತ್ತಿರಲಿಲ್ಲ. ಮತ್ತು ಹಾಗೆ ದಾಳಿಗೊಳಗಾದ ಮತಾಂತರಿ ಪಂಗಡ/ವ್ಯಕ್ತಿಗಳು ಅದನ್ನು ದೊಡ್ಡ ವಿಷಯವನ್ನಾಗಿ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಅವರು ಹಾಗೆ ಮಾಡಿದ್ದೇ ಆಗಿದ್ದಲ್ಲಿ ಅವರಿಗೇ ತಿರುಗುಬಾಣವಾಗುತ್ತಿತ್ತು. ತಮ್ಮ ಅಕ್ರಮ ಚಟುವಟಿಕೆಗಳನ್ನು ಒಪ್ಪಿಕೊಂಡಂತೆ, ಪ್ರದರ್ಶಿಸಿದಂತೆ ಆಗುತ್ತಿತ್ತು. ಹಾಗಾಗಿ ಅಂದಿನ ಹಲ್ಲೆಗಳು ಸಣ್ಣದಾಗಿ ಪ್ರಚಾರ ಪಡೆಯುತ್ತಿದ್ದವೇ ಹೊರತು, ದಾಳಿ ಮಾಡಿದವರಿಗೂ ಯಾವುದೇ ಸಂಚಕಾರ ಉಂಟಾಗುತ್ತಿರಲಿಲ್ಲ.
ಮಹೇಂದ್ರ ಕುಮಾರ್ ಮತ್ತವರ ‘ಹುಡುಗರು’ ಅಂದುಕೊಂಡಿದ್ದೂ ಅದನ್ನೇ.
ಆದರೆ, ಅವರ ಗ್ರಹಚಾರ ಕೆಟ್ಟು ಹೋಗಿತ್ತು. ಅದರಿಂದಾಗಿ ಅವರು ಮಾಡಬಾರದ್ದನ್ನು ಮಾಡಿ ಬೇಡದ್ದನ್ನು ಅನುಭವಿಸಬೇಕಾಗಿ ಬಂತು.
ಅಷ್ಟಕ್ಕೂ ಎಡೋರೇಶನ್ ಮಿನಿಸ್ಟ್ರಿಯನ್ನು ಮತಾಂತರ ಮಾಡುವ ಕೇಂದ್ರ ಎಂದು ಅವರು ಪರಿಗಣಿಸಿದ್ದು ಯಾಕೆ? ಅದಕ್ಕೂ ಉತ್ತರವಿದೆ.
ಎಡೋರೇಶನ್ ಮಿನಿಸ್ಟ್ರಿಗೆ ಕ್ರೈಸ್ತರಲ್ಲದೇ ಹಿಂದೂಗಳೂ ಬಂದು ದೇವರಲ್ಲಿ ಬೇಡಿಕೊಳ್ಳುವುದಿದೆ. ಭಕ್ತರಿಗೆ ಯಾವ ದೇವರಾದರೇನು, ತಮ್ಮ ಬೇಡಿಕೆ ಈಡೇರಿಸಿಕೊಳ್ಳುವುದೇ ಅವರಿಗೆ ಮುಖ್ಯ. ತಮ್ಮ ದೇವರನ್ನು ಪ್ರಾರ್ಥಿಸುವುದರ ಜೊತೆಗೆ ಬೇರೆಯವರ ದೇವರನ್ನೂ ಪ್ರಾರ್ಥಿಸುವುದು ಅನಿವಾರ್ಯ ಸಂದರ್ಭಗಳಲ್ಲಿ ಜನರು ಕೈಗೊಳ್ಳುವ ಕ್ರಮ. ಅವರ ಕಷ್ಟ, ತೊಂದರೆ, ದುಃಖ ಅವರಿಗಿರುತ್ತದೆ. ಅದನ್ನು ಬೇರೆಯವರು ತಮಾಷೆ ಮಾಡಬಹುದು, ಹೀಯಾಳಿಸಬಹುದು. ಬೇಡುವ ಭಕ್ತನಿಗೆ/ಭಕ್ತೆಗೆ ತಾವಾಯಿತು ತಾನು ನಂಬುವ ದೇವರಾಯಿತು. ಅದರಲ್ಲಿ ತಪ್ಪೇನಿದೆ, ಅಲ್ಲವೆ? ಅದರ ಉಸಾಬರಿ ಇನ್ನೊಬ್ಬರಿಗ್ಯಾಕೆ?
ಸಂಕಷ್ಟದಲ್ಲಿದ್ದಾಗ ಮನುಷ್ಯನಿಗೆ ದೇವರನ್ನು ಆಶ್ರಯಿಸುವುದು ಅಂತಿಮ ದಾರಿ. ತಮ್ಮ ಧರ್ಮವನ್ನು ಎಷ್ಟೇ ಸಂಪ್ರದಾಯಬದ್ಧವಾಗಿ ನಂಬಿ, ಪಾಲಿಸುವ ಜನರೂ ಸಹ ಅನಿವಾರ್ಯ ಸಂದರ್ಭಗಳಲ್ಲಿ ತಾವು ಹಿಂದೆ ಠೀಕಿಸಿದ್ದ, ವಿರೋಧಿಸಿದ್ದ ಧರ್ಮಗಳ ದೇವಾಲಯಗಳಿಗೆ ಹೋಗಿ ಪೂಜಿಸುವುದು, ಹರಕೆ ಹಾಕುವುದೂ ಇದೆ. ಕರಾವಳಿಯಲ್ಲೇ ಇರುವ ಕೆಲವು ಪ್ರಮುಖ ಪುಣ್ಯಕ್ಷೇತ್ರಗಳಿಗೆ ಎಲ್ಲಾ ಧರ್ಮ, ಜಾತಿಯವರೂ ಹರಕೆ ಹಾಕಲು, ಬೇಡಲು, ಪ್ರಾರ್ಥಿಸಲು, ಪೂಜಿಸಲು, ಕೃತಜ್ಞತೆ ಸಮರ್ಪಿಸಲು ಆಗಮಿಸುವ ಪರಂಪರೆಯೇ ಇದೆ.
ಕಾರ್ಕಳದ ಅತ್ತೂರಿನ ಸಂತ ಲಾರೆನ್ಸರ ಇಗರ್ಜಿ, ಉಳ್ಳಾಲದ ದರ್ಗಾ, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಗಳಿಗೆ ಆಯಾ ಧರ್ಮದವರ ಜೊತೆಗೆ ಇತರ ಧರ್ಮೀಯರೂ ಭಕ್ತಾದಿಗಳಾಗಿ ಆಗಮಿಸುತ್ತಾರೆ. ಹಾಗೆ ಹೋಗುವವರನ್ನು ತಡೆಯಲಾದೀತೆ?
ನನಗೊಬ್ಬ ಹಿರಿಯ ಮಿತ್ರರಿದ್ದಾರೆ. ಅವರು ಶುದ್ಧ ಬ್ರಾಹ್ಮಣ, ಖಡಕ್ ಸಂಪ್ರದಾಯವಾದಿ. ದೊಡ್ಡ ಸರಕಾರಿ ಹುದ್ದೆಯಲ್ಲಿದ್ದವರು. ವ್ಯವಹಾರದ ನಿಮಿತ್ತ ನನ್ನ ಅವರ ಗೆಳೆತನ ಒಂದು ದಶಕದ್ದು. ಅವರಿಗೆ ನಾನೆಂದರೆ ತುಂಬಾ ಇಷ್ಟ, ಪ್ರೀತಿ. ಅವರ ಮನೆಯಲ್ಲಿ ಜರಗುವ ಧಾರ್ಮಿಕ ಕಾರ್ಯಗಳಿಗೂ ನನ್ನನ್ನು ಆಹ್ವಾನಿಸುತ್ತಾರೆ. ಅಂಥಾ ಕಾರ್ಯಕ್ಕೆ ನಾನು ಹೋದಾಗ, ಮುಜುಗರದಿಂದ ದೂರದಲ್ಲಿ ನಿಂತುಕೊಂಡು ನೋಡುತ್ತಿರಬೇಕಾದರೆ, ಡೊನಾಲ್ಡ್ ಅವರೇ ಬನ್ನಿ ಬನ್ನಿ ಎಂದು ಕೈ ಹಿಡಿದು ಕರೆದುಕೊಂಡು ಹೋಗುವಷ್ಟು ಆತ್ಮೀಯತೆ ಅವರದು. ನಾನು ಮೀನು ಮಾಂಸ ತಿನ್ನುವವನಾಗಿದ್ದರಿಂದ ನನಗೆ ಸಂಕೋಚ. ಆದರೆ ಅವರಿಗೆ ಹಾಗೆ ಅನಿಸುವುದಿಲ್ಲ. ಯಾವುದೇ ಅಭ್ಯಂತರವಿಲ್ಲದೆ ಎಲ್ಲರ ಎದುರಿನಲ್ಲೇ ತಮ್ಮ ಪಕ್ಕಕ್ಕೇ ನನ್ನನ್ನು ಕೂರಿಸಿ ಊಟ ಮಾಡಿಸುತ್ತಾರೆ. ನಗರದಲ್ಲಿದ್ದಾಗ ಹೋಟೆಲಿನಲ್ಲಿ ನನ್ನ ಜೊತೆ ಊಟ ಅಥವಾ ಚಹಾ ಸೇವಿಸದಿದ್ದರೆ ಅವರಿಗೆ ಸಮಾಧಾನವಾಗುವುದಿಲ್ಲ. ಇಂತಹ ಹಲವು ಗೆಳೆಯರು ನನಗಿರುವುದು ನನ್ನ ಅತ್ಯಂತ ಸಂತೃಪ್ತಿಯ ಸಂಗತಿಗಳಲ್ಲೊಂದು.
ಈ ಹಿರಿಯ ವ್ಯಕ್ತಿ ಸಂಪ್ರದಾಯವಾದಿ ಬ್ರಾಹ್ಮಣರಾದರೂ ಅವರು ಈ ಅತ್ತೂರಿನ ಇಗರ್ಜಿಗೆ ವರ್ಷಂಪ್ರತಿ ಹರಕೆ ಸಂದಾಯ ಮಾಡುತ್ತಾರೆ. ಯಾಕೆ ಗೊತ್ತೆ?
ಬಹಳ ಹಿಂದೆ ಅವರ ಮಗುವೊಂದು ಯಾವುದೋ ಕೆಟ್ಟ ಅಭ್ಯಾಸವನ್ನು ಶುರು ಹಚ್ಚಿಕೊಂಡು ಅದನ್ನು ಎಷ್ಟೇ ಪ್ರಯತ್ನ ಮಾಡಿದರೂ ಬಿಟ್ಟಿರಲಿಲ್ಲವಂತೆ. ಏನೇನೆಲ್ಲಾ ಮಾಡಿದರೂ ವ್ಯರ್ಥವಾಗಿ ತಂದೆ ತಾಯಿಯವರಿಗೆ ಚಿಂತೆ, ವ್ಯಾಕುಲತೆ ಆವರಿಸಿತ್ತಂತೆ. ಯಾವುದೇ ಕ್ರಮ ಕೈಗೊಂಡರೂ ಆ ಮಗು ತನ್ನ ಅಭ್ಯಾಸ ಬಿಡುತ್ತಿರಲಿಲ್ಲವಂತೆ. ಅದರ ಆರೋಗ್ಯದ ಚಿಂತೆಯಲ್ಲಿ ಹೆತ್ತವರು ಬಸವಳಿದಾಗ ಯಾರೋ ‘ಅತ್ತೂರಿನ ಇಗರ್ಜಿಯಲ್ಲಿ ಹರಕೆ ಹಾಕಿದರೆ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಸಲಹೆ ನೀಡಿದರಂತೆ. ಅವರಿಗೆ ತಮ್ಮ ಮಗುವನ್ನು ಬಾಧಿಸುತ್ತಿರುವ ತೊಂದರೆ ನಿವಾರಣೆಯಾಗುವುದೇ ಮುಖ್ಯವಾಗಿತ್ತು.
ಹಾಗೆ ಅವರು ಅತ್ತೂರಿನ ಸಂತ ಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ಹರಕೆ ಸಲ್ಲಿಸಿದೊಡನೆ ಅವರ ಮಗುವಿನ ಕೆಟ್ಟ ಚಟ ನಿಂತು ಹೋಯಿತಂತೆ. ದೊಡ್ಡದೊಂದು ಅಪಾಯದಿಂದ ಪಾರಾದ ಸಂತೋಷ ಅವರಿಗೆ. ಅಂದಿನಿಂದ ವರ್ಷಂಪ್ರತಿ ಅತ್ತೂರಿನ ಇಗರ್ಜಿಗೆ ಹರಕೆ ಸಲ್ಲಿಸಿ ತಮ್ಮ ಕೃತಜ್ಞತೆ ಸಲ್ಲಿಸುತ್ತಾರೆ.
ಈಗ ಹೇಳಿ, ಇದನ್ನು ಪ್ರಶ್ನಿಸಲು ಸಾಧ್ಯವೇ? ಹೀಗೆ ಮಾಡುವವರನ್ನು ಯಾರಾದರೂ ಹೀಗಳೆಯಬಹುದು, ನಿಂದಿಸಬಹುದು. ಆದರೆ, ಯಾವತ್ತಾದರೂ ಒಂದು ದಿನ ಹಾಗೆ ಠೀಕಿಸಿದವರಿಗೂ ಸಂದರ್ಭ ಬಂದಾಗ ತಾನು ವಿರೋಧಿಸಿದ್ದನ್ನೇ ಮಾಡುವ ಅಗತ್ಯ ಬರಲೂಬಹುದು.
ನೀವು ಹಿಂದೂಗಳಾಗಿದ್ದಲ್ಲಿ, ಕೊರಗಜ್ಜನ ಬಗ್ಗೆ ತಿಳಿದೇ ಇರುತ್ತೀರಿ. ಕರಾವಳಿಯಲ್ಲಿ ಹಿಂದೂಗಳಲ್ಲಿ ಜಾತಿಗೊಂದು, ಪಂಗಡಕ್ಕೊಂದು ದೇವ, ದೇವತೆ, ದೈವಗಳಿವೆ. ಸರಕಾರದ ಬಳಿ ಬೇರೆ ಬೇರೆ ಅಗತ್ಯಗಳಿಗೆ ಬೇರೆ ಬೇರೆ ಇಲಾಖೆಗಳಿರುವಂತೆ ಭಕ್ತಾದಿಗಳಿಗೂ ಬೇರೆ ಬೇರೆ ಇರಾದೆಗಳಿಗೆ ದೇವರುಗಳಿವುದನ್ನು ನೀವು ತಿಳಿದೇ ಇರುತ್ತೀರಿ. ವಿಘ್ನ ನಿವಾರಣೆಗೆ ಗಣಪತಿ, ದುಡ್ಡು-ಐಶ್ವರ್ಯಕ್ಕಾಗಿ ಲಕ್ಷೀದೇವಿ, ವಿದ್ಯೆಗೆ ಸರಸ್ವತಿ ದೇವಿ ಇದ್ದಾರೆ. ಆಯಾ ಅಗತ್ಯ, ಕಾರಣಗಳಿಗಾಗಿ ಅವರನ್ನು ಎಕ್ಸ್‍ಕ್ಲೂಸಿವ್ ಆಗಿ ಪೂಜಿಸುವುದು ಭಕ್ತಾದಿಗಳ ನಂಬಿಕೆ, ಧರ್ಮ.
ಹಾಗೆಯೇ, ವಸ್ತುವೊಂದು ಕಳೆದು ಹೋಯಿತೆನ್ನಿ ಆಗ ಸಾಮಾನ್ಯವಾಗಿ ಕೊರಗಜ್ಜನಿಗೊಂದು ಹರಕೆ ಹಾಕಿದರೆ ಆಯಿತು, ಕಳೆದು ಹೋದ ವಸ್ತು ಖಂಡಿತಾ ಸಿಗುತ್ತದೆ ಎಂಬ ನಂಬಿಕೆ, ಭರವಸೆ ಭಕ್ತರದ್ದು. ಇದನ್ನು ನನಗೆ ಆತ್ಮೀಯರೊಬ್ಬರು ಹೇಳಿದಾಗ, ಕೊರಗಜ್ಜನ ಮಹಾತ್ಮೆ ಏನು ಎಂದು ತಿಳಿಯಿತು.
ಇದೂ ಸಹ ಆಯಾ ಭಕ್ತಾದಿಗಳ ನಂಬಿಕೆ ಮತ್ತು ಭಕ್ತಿಗೆ ಸಂಬಂಧಿಸಿದ್ದು. ಕ್ರಿಶ್ಚಿಯನ್ನರು, ಮುಸ್ಲಿಮರೂ ತಮ್ಮ ಅಮೂಲ್ಯ ವಸ್ತುವೊಂದು ಕಳೆದು ಹೋದಾಗ ಕೊರಗಜ್ಜನ ಆಶ್ರಯ ಪಡೆದಲ್ಲಿ, ಹರಕೆ ಇಟ್ಟಲ್ಲಿ ಆಶ್ಚರ್ಯವೇನಿಲ್ಲ. ಇದನ್ನು ಇನ್ನೊಬ್ಬರು ಪ್ರಶ್ನಿಸುವ ವಿಚಾರವೇ ಬರುವುದಿಲ್ಲ. ಅವರವರ ನಂಬಿಕೆ, ಭಕ್ತಿ ಅವರವರಿಗೆ.
ಅಂದರೆ ಮನುಷ್ಯ ತನ್ನ ಬೇಡಿಕೆಗಳಿಗಾಗಿ, ಸಂಕಷ್ಟ ನಿವಾರಣೆಗಾಗಿ, ಒಳಿತಿಗಾಗಿ, ಶ್ರೇಯಸ್ಸಿಗಾಗಿ ತನ್ನನ್ನೇ ಸಮರ್ಪಿಸಿಕೊಂಡು ದೇವರುಗಳನ್ನು ಬೇಡಿಕೊಳ್ಳುತ್ತಾನೆ. ಹೆಚ್ಚಿನ ಗ್ಯಾರಂಟಿಗೆ ಇರಲಿ ಎಂದುಕೊಂಡು ಬೇರೆ ಧರ್ಮದ ದೇವರನ್ನೂ ಆತ ಪ್ರಾರ್ಥಿಸಿದಲ್ಲಿ ತಪ್ಪೇನಿದೆ? ಅದು ಆತನ ಇಚ್ಛೆ, ಹಕ್ಕು ಮತ್ತು ಸ್ವಾತಂತ್ರ್ಯ.
ಇದೇ ರೀತಿ ಕೆಲವು ಹಿಂದೂಗಳು ಮತ್ತು ಬೇರೆ ಧರ್ಮದವರು ಮಿಲಾಗ್ರಿಸ್ ಬಳಿಯ ಎಡೋರೇಶನ್ ಮಿನಿಸ್ಟ್ರಿಗೆ ಬಂದು ಪ್ರಭು ಯೇಸುಕ್ರಿಸ್ತನನ್ನು, ಮಾತೆ ಮರಿಯಳನ್ನು ಪ್ರಾರ್ಥಿಸಿದಲ್ಲಿ ಯಾರಿಗೇನು ತೊಂದರೆ? ಅದು ಅವರ ನಂಬಿಕೆ, ಭಕ್ತಿ. ಅವರ ಅಗತ್ಯಕ್ಕಾಗಿ ಅವರು ಹಾಗೆ ಮಾಡುತ್ತಾರೆ. ಅದರಿಂದ ಇನ್ನೊಬ್ಬರಿಗೇನು ನಷ್ಟ? ಅಲ್ಲವೆ?
ಇದನ್ನು ಮತಾಂತರವೆಂದು ಯಾರಾದರೂ ಕರೆದರೆ ಅದವರ ಮಾನಸಿಕತೆಯನ್ನು ತೋರ್ಪಡಿಸುತ್ತದೆ, ಅಷ್ಟೆ.
ಆದರೆ, ಈ ಧರ್ಮದ ಹೆಸರಿನಲ್ಲಿ ವಿಕಾರ ಚಿಂತನೆಗಳನ್ನು ಯಾರ್ಯಾರಿಂದಲೋ ತಲೆಗೇರಿಸಿಕೊಂಡ, ಅದರ ನಶೆಯಲ್ಲಿ ಸಂಸ್ಕಾರ ರಹಿತ ಕೆಲಸಗಳನ್ನೇ ಮಾಡಿಕೊಂಡು, ದಾರಿ ತಪ್ಪಿದ ಕೆಲವರಿಗೆ ಇದನ್ನೆಲ್ಲಾ ಅರ್ಥ ಮಾಡುವ ಸಂಸ್ಕøತಿ, ವಿವೇಚನೆ ಎಲ್ಲಿಂದ ಬರಬೇಕು ಹೇಳಿ!? ಅವರಲ್ಲಿ ಹೆಚ್ಚಿನವರು ವಿದ್ಯೆಯನ್ನು ಅರ್ಧದಲ್ಲಿ ಬಿಟ್ಟವರು, ಸರಿಯಾದ ಉದ್ಯೋಗವಿಲ್ಲದವರು, ವ್ಯಕ್ತಿತ್ವವಿಲ್ಲದವರು. ಜೀವನದಲ್ಲೊಂದು ಗುರಿ, ದಿಕ್ಕು ದೆಸೆ ಇಲ್ಲದ ಅಂಥವರನ್ನು ಪುಸಲಾಯಿಸಿ ಅಥವ ದುರುಪಯೋಗಿಸಿ ಅವರಿಂದ ಅನೈತಿಕ ಚಟುವಟಿಕೆ ಮಾಡಿಸುವ ಗುರುಗಳು ದೊರೆಯುವುದರಲ್ಲಿ ಅನುಮಾನವಿಲ್ಲ.
ಇಂಥವರಿಗೆ ದೇವರು, ಧರ್ಮ, ಸಂಸ್ಕøತಿ, ಸಂಸ್ಕಾರಗಳೆಂದರೆ ಏನೆಂದು ತಿಳಿದೀತು? ನಾಗರಿಕತೆ, ಮನುಷ್ಯತ್ವ, ಸಭ್ಯತೆಗಳ್ಯಾವುದನ್ನು ಕೇಳಿಯೂ ತಿಳಿದುಕೊಂಡಿರದ ಇವರಿಗೆ ಗುಂಪಿನಲ್ಲಿದ್ದಾಗ ಭಂಡ ಧೈರ್ಯವಂತೂ ಇದ್ದೇ ಇರುತ್ತದೆ.
ಇಂತಹದೇ ವ್ಯಕ್ತಿತ್ವದ, ಮಾನಸಿಕತೆಯ ಪುಂಡರು ಎಡೋರೇಶನ್ ಮಿನಿಸ್ಟ್ರಿ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಹಿಸ್ಟೀರಿಕ್ ಆಗಿ ಅಲ್ಲಿ ಕಂಡ ದೇವರುಗಳ ವಿಗ್ರಹಗಳನ್ನು, ಮೂರ್ತಿ ಮತ್ತು ಪೂಜನೀಯ ಸಾಮಗ್ರಿಗಳನ್ನು ಪುಡಿಗಟ್ಟಿ, ಧ್ವಂಸಗೊಳಿಸಿ ವಿಕೃತ ಆನಂದದಿಂದ ವಿಜೃಂಭಿಸಿ ಸಂಭ್ರಮ ಪಟ್ಟರು. ಮಾಡಿದ್ದು ನೀಚ ಕೆಲಸವಾದರೂ ತಾವೇನೋ ಅಶ್ವಮೇಧಯಾಗದಲ್ಲಿ ದಿಗ್ವಿಜಯ ಗಳಿಸಿದಂತೆ ನಲಿದಾಡಿದರು.
ಆದರೆ ಅದೇ ಕ್ಷಣ ಅವರ ಗೃಹಗತಿ ಕೆಟ್ಟು ಹೋಗಿತ್ತು, ಅದು ಅವರಿಗೆ ಗೊತ್ತಿರಲಿಲ್ಲ.
ಆ ಕ್ಷಣದಿಂದ ಕಂಡು ಕೇಳರಿಯದ ಘಟನೆಗಳು, ಬೆಳವಣಿಗೆಗಳು ಮಂಗಳೂರಿನ ನೆಲದಲ್ಲಿ ನಡೆದು ಹೋದವು. ಇಲ್ಲಿನ ಘಟನೆಗಳು ಪ್ರಪಂಚದಾದ್ಯಂತ ಅಲ್ಲೋಲ ಕಲ್ಲೋಲ ಉಂಟು ಮಾಡಿದವು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಬಿಜೆಪಿ ಸರಕಾರ ಅಲ್ಲಾಡಿ ಹೋಯಿತು ಮಾತ್ರವಲ್ಲ ಸರಕಾರ ಉರುಳುವ ಅಂಚಿಗೂ ಬಂದಿತ್ತು.
ಮಂಗಳೂರಿನಲ್ಲಿ ಆ ಒಂದು ವಾರ ನಡೆದ ಪತ್ರಿಕಾಗೋಷ್ಠಿಗಳಿಗೆ, ದೇಶದಾದ್ಯಂತದಿಂದ ಬೇಟಿ ನೀಡಿದ ವಿಐಪಿಗಳಿಗೆ ಲೆಕ್ಕವಿಲ್ಲ. ಅವೆಲ್ಲಾ ಮುರಿಯಲಾಗದ ದಾಖಲೆಗಳು. ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡ, ಮುಖ್ಯಸ್ಥರೆಲ್ಲಾ ಬೆವರಿಳಿಸಿಕೊಂಡರು. ಸರ್ವ ಧರ್ಮ ಸೌಹಾರ್ದ ಸಭೆಗಳು ಮೇಲಿಂದ ಮೇಲೆ ನಡೆದವು.
ಯಾಕೆ ಗೊತ್ತಾ, ಅಂದು ಘಾಸಿಗೊಳಗಾಗಿದ್ದು ಕರಾವಳಿಯಲ್ಲಿ ಶತಮಾನಗಳಿಂದ ನೆಲೆಸಿ, ಪ್ರಪಂಚದಾದ್ಯಂತ ನೆಲೆಸಿರುವ ಕೊಂಕಣಿ ಕಥೊಲಿಕ್ ಕ್ರೈಸ್ತರು. ಅವರ ಆರಾಧ್ಯ ದೇವರಾದ ಯೇಸು ಕ್ರಿಸ್ತರ ಪ್ರತಿಮೆಯನ್ನು ಆ ರೀತಿ ಧ್ವಂಸಗೊಳಿಸದೇ ಹೋಗಿದ್ದರೆ, ಪವಿತ್ರ ಪರಮ ಪ್ರಸಾದವನ್ನು ಆ ರೀತಿ ನೆಲಕ್ಕೆ ಎಸೆಯದೇ ಹೋಗಿದ್ದಲ್ಲಿ ಕಥೊಲಿಕ್ ಕ್ರೈಸ್ತರು ನಿದ್ದೆಯಿಂದ ಏಳುತ್ತಿರಲಿಲ್ಲ. ದಾಳಿ ಮಾಡಿದವರು ಮತ್ತು ಮಾಡಿಸಿದವರು ಕನಸಿನಲ್ಲೂ ಊಹಿಸಿರದ ಪರಿಣಾಮವದು.
ಅಷ್ಟೆಲ್ಲಾ ಗಲಾಟೆ, ಪ್ರಚಾರ, ಸುದ್ದಿ, ರಂಪಾಟವಾದಾಗ ರಾಜ್ಯದ ಅಂದಿನ ಗೃಹ ಸಚಿವ ಉಡುಪಿಯ ವಿ.ಎಸ್. ಆಚಾರ್ಯರು, ‘ಯಾಕೆ ಇಷ್ಟೊಂದು ಗಲಾಟೆ? ಅಂತಹದ್ದೇನಾಗಿದೆ? ಒಂದೇ ಒಂದು ಹೆಣ ಉರುಳಿಲ್ಲ. ಆದರೂ ಇಷ್ಟೊಂದು ಬೊಬ್ಬೆ ಯಾಕೆ?’ ಎಂದು ಉದ್ಗರಿಸಿದ್ದರು. ಬಿಡಿ, ಹೆಣದ ಮೇಲೆಯೂ ರಾಜಕೀಯ ನಡೆಸುವ ಪಕ್ಷಕ್ಕೆ ಸೇರಿದವರು ಅಲ್ವಾ, ಹಾಗಾಗಿ ಅವರಿಗೆ ಹೇಗೆ ಗೊತ್ತಾದೀತು ಕ್ರೈಸ್ತರಿಗಾದ ಆಘಾತ, ನೋವು ಮತ್ತು ಆತಂಕ.
ಆ ಭಾನುವಾರದ ಬೆಳಗ್ಗಿನ ನೀಚ ಕೃತ್ಯ ಮತ್ತು ತದ ನಂತರ ದಿನವಿಡೀ ನಡೆದ ನಾಟಕಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿರಿ. ಮರು ದಿನ ಕುಲಶೇಕರ, ವಾಮಂಜೂರು ಮತ್ತು ಪೆರ್ಮನ್ನೂರು ಚರ್ಚಿನಲ್ಲಿ ರಾದ್ಧಾಂತ, ಗಲಭೆ, ರಾಧ್ಧಾಂತ ನಡೆಯಿತಲ್ಲಾ ಅದಕ್ಕೂ ಬಹಳ ಕಾರಣಗಳಿದ್ದವು.
ಬೆಳಿಗ್ಗೆ ಮಿಲಾಗ್ರಿಸ್ ಚರ್ಚಿನಲ್ಲಿ ಮತ್ತು ಆಚೀಚಿನ ಕೆಲವು ಚರ್ಚುಗಳಲ್ಲಿ ಆತಂಕದ ಧ್ವನಿ ಸಾರುವ ಘಂಟೆಗಳ ಆಕ್ರಂದನ ಕೇಳಿಸಿತ್ತಲ್ಲಾ. ಆ ಸಂಜೆಯೂ ಮಂಗಳೂರಿನ ಬಹಳಷ್ಟು ಕಥೊಲಿಕ್ ಕ್ರೈಸ್ತರು ಎಸ್ಸೆಮ್ಮೆಸ್ ಸಂದೇಶಗಳನ್ನು ಪರಸ್ಪರ ತುರ್ತಾಗಿ ಕಳುಹಿಸಿ ಬಹುತೇಕ ಇಗರ್ಜಿ ಬಾಗಿಲಿನಲ್ಲಿ ಬಂದು ಸೇರಿದ್ದರು!
(ಯಾಕಾಗಿ ಎಂಬುದನ್ನು ನಾಳೆ ತಿಳಿದುಕೊಳ್ಳಿ)
ಭಾಗ 1: ಚರ್ಚ್ ಎಟ್ಯಾಕ್: ಆ ದಿನ ಮಂಗಳೂರಿನ ಕ್ರೈಸ್ತರು ರೌಡಿಗಳಂತೆ ವರ್ತಿಸಿದ್ದರೇ?
ಭಾಗ 2: ಮೌನ ರೋದನಗೈಯುತ್ತಿದ್ದ ಕ್ರೈಸ್ತರನ್ನು ರೊಚ್ಚಿಗೆಬ್ಬಿಸಿದ್ದು ಯಾರು?
ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com