ಸ್ವಚ್ಛ ಮಂಗಳೂರು ಓಕೆ; ವಿಕೃತ ಮಂಗಳೂರು ಏಕೆ?
ಮ್ಯಾಂಗಲೋರ್, ಕೊಡಿಯಾಲ್/ಳ್, ಕುಡ್ಲ, ಮಂಗಳಾಪುರಂ, ಮೈಕಾಲ ಇನ್ನೂ ಮುಂತಾಗಿ ಭಾಷೆಗೊಂದರಂತೆ ಹೆಸರನ್ನು ಪಡೆದಿರುವ ಏಕೈಕ ನಗರವೆಂಬ ಖ್ಯಾತಿಯ ನಮ್ಮ ಮಂಗಳೂರು ನಗರಕ್ಕೆ ಅಂಟಿಕೊಂಡಿರುವ ವಿಪರೀತ ರೋಗಗಳೂ ಹಲವು! ಖ್ಯಾತಿಗೆ ಇದಕ್ಕಂಟಿಕೊಂಡಿರುವ ಉಪನಾಮೆಗಳು ಹಲವು. ಅದಕ್ಕೆಲ್ಲಾ ಗರಿ ಮೂಡಿಸಬಹುದಾದ ಬಿರುದೊಂದು ಇತ್ತೀಚೆಗಷ್ಟೇ ಸೇರಿಕೊಂಡಿದೆ.
ಸ್ವಚ್ಛ ಮಂಗಳೂರು!
ಇತ್ತೀಚೆಗೆ ಪ್ರಕಟವಾದ ಪಟ್ಟಿಯಲ್ಲಿ ಮಂಗಳೂರಿಗೆ ಸ್ವಚ್ಛತೆಯಲ್ಲಿ ದೇಶದಲ್ಲಿಯೇ ಮಹತ್ತರವಾದ ರ್ಯಾಂಕ್ ಲಭಿಸಿದೆ. ಆದರೆ ನಿಜಕ್ಕೂ ಮಂಗಳೂರಿಗೆ ಈ ಹೆಸರು ಯೋಗ್ಯವೇ ಎಂಬುದನ್ನು ಹಲವು ಬಾರಿ ಯೋಚಿಸಬೇಕಾದ ಅನಿವಾರ್ಯತೆಯಿದೆ. ಕರ್ನಾಟಕದ ಇತರ ನಗರ/ಪಟ್ಟಣಗಳಿಗೆ ಹೋಲಿಸಿದರೆ ಮಂಗಳೂರು ಬಹಳ ಸ್ವಚ್ಛವೆಂಬುದು ನಿಜವೇ. ಆದರೆ ಅದಕ್ಕೆ ಇಲ್ಲಿನ ನಾಗರಿಕರಿಗಿಂತ ಪ್ರಾಕೃತಿಕ ಕಾರಣಗಳೇ ಹೆಚ್ಚು!
ಅಂತಿಪ್ಪ ಈ ಮಂಗಳೂರಿನಲ್ಲಿ ಎಂತೆಂಥಾ ಘಟಾನುಘಟಿ ಜನಪ್ರತಿನಿಧಿಗಳು, ರಾಜಕಾರಣಿಗಳಿದ್ದಾರೆ ಗೊತ್ತೇ?
ಲೋಕಸಭಾ ಸದಸ್ಯ: ನಂ. ಒನ್ ಎಂಪಿ – ನಳಿನ್ ಕುಮಾರ್ ಕಟೀಲ್
ವಿಧಾನಸಭಾ ಸದಸ್ಯ: ಅಭಿವೃದ್ಧಿಯ ಹರಿಕಾರ ಜೆ.ಆರ್. ಲೋಬೊ
ಉಸ್ತುವಾರಿ ಸಚಿವ: ಬಂಟ ಸರದಾರ ರಮಾನಾಥ್ ರೈ
ವಿಧಾನ ಪರಿಷತ್ ಸದಸ್ಯರು: ಕ್ಯಾಪ್ಟನ್ ಗಣೇಶ್ ಕಾರ್ಣಿಕ್; ಐವನ್ ಡಿಸೋಜ
ಸ್ಥಳೀಯ, ಆಸುಪಾಸಿನ ಸಚಿವರು: ಯು.ಟಿ. ಖಾದರ್, ಅಭಯಚಂದ್ರ ಜೈನ್
ಸ್ಥಳೀಯ ಶಾಸಕ: ಮೊಯ್ದಿನ್ ಬಾವಾ
ಮಂಗಳೂರು ತಥಾ ಜಿಲ್ಲೆಯನ್ನು ಪ್ರತಿನಿಧಿಸುವ ಇತರ ಘನ ಫುಡಾರಿಗಳು: ಇಬ್ಬರು ಮಾಜಿ ಮುಖ್ಯಮಂತ್ರಿಗಳು – ವೀರಪ್ಪ ಮೊಯ್ಲಿ, ಸದಾನಂದ ಗೌಡ (ಇಬ್ಬರೂ ಹಾಲಿ ಲೋಕಸಭಾ ಸದಸ್ಯರು, ಒಬ್ಬರು ಮಾಜಿ, ಮತ್ತೊಬ್ಬರು ಹಾಲಿ ಕೇಂದ್ರ ಸಚಿವರು), ಸಚಿವ ವಿನಯ ಕುಮಾರ್ ಸೊರಕೆ (ಕಾಪು ಶಾಸಕರು), ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ (ಉಡುಪಿ). ಜಿಲ್ಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರಾದ ಡಜನ್‍ಗಟ್ಟಲೆ ಫುಡಾರಿಗಳಿದ್ದಾರೆ.
ಈ ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಇಬ್ಬರು ಮಂಗಳೂರಿನಲ್ಲಿಯೇ ವಾಸಿಸುತ್ತಿದ್ದಾರೆ – ನಾಗರಾಜ ಶೆಟ್ಟಿ ಹಾಗೂ ಕೃಷ್ಣ ಪಾಲೇಮಾರ್. ಅದಕ್ಕಿಂತಲೂ ಮಿಗಿಲಾಗಿ, ಅತಿರಥ ಮಹಾರಥಿಗಳಂತೆ ಕರಾವಳಿಯ ಇಬ್ಬರು ಕೇಂದ್ರದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ರಾರಾಜಿಸಿದವರಿದ್ದಾರೆ. ಒಬ್ಬರು, ಇಂದಿರಾ, ರಾಜೀವ್ ಗಾಂಧಿ ಸರಕಾರದಲ್ಲಿ ಸಚಿವರಾಗಿದ್ದ ಜನಾರ್ಧನ ಪೂಜಾರಿ. ಮತ್ತೊಬ್ಬರು ಕಾಂಗ್ರೆಸ್ಸಿಗೆ ಯಾರೇ ಹೈಕಮಾಂಡ್ ಆಗಿರಲಿ ಅವರ ಕಿಚನ್ ಕ್ಯಾಬಿನೆಟ್‍ನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸುತ್ತಾ ಬಂದಿರುವ ಹಾಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್. ಈ ಮಹಾಶಯ ಯುಪಿಎ ಸರಕಾರಗಳಲ್ಲಿ ಸಚಿವರಾಗಿದ್ದವರು.
ಇನ್ನು ಇವರಷ್ಟೇ ಮತ್ತು ಇವರಿಗಿಂತಾ ಪ್ರಭಾವಶಾಲಿಯಾಗಿರುವರು ಬೇರೆ ಬೇರೆ ಕ್ಷೇತ್ರಗಳಲ್ಲಿಯೂ, ದೇಶ ವಿದೇಶಗಳಲ್ಲಿಯೂ ಬಹಳಷ್ಟು ಜನರಿದ್ದಾರೆ.
ಹಾಗಾದರೆ ಇಂಥವರೆಲ್ಲರೂ ಇರುವಾಗ, ಅವರ ಕೊಡುಗೆಯಿಂದಾಗಿ ಮಂಗಳೂರು ಸದ್ಯ ಕರ್ನಾಟಕದ ಅತ್ಯಂತ ಸುವ್ಯವಸ್ಥಿತ, ಪ್ರಗತಿ ಹೊಂದಿದ ಸುಂದರ, ಮಾದರಿ ನಗರವಾಗಿರಬಹುದು ಎಂದು ಯಾರಾದರೂ ಅಂದುಕೊಂಡಿರಲೂಬಹುದು!
ಊಹುಂ!
ಅಂತಹಾ ಆಲೋಚನೆ ಮಾಡಿದವನು ಶತಮೂರ್ಖನೇ ಸೈ!
ನಿಜ. ಇವರಿಂದಾಗಿ ಬಹಳಷ್ಟು ಪ್ರಗತಿಯಾಗಿದೆ, ಅಭಿವೃದ್ಧಿಯಾಗಿದೆ. ಅದು ಅವರ ಮತ್ತವರ ಕುಟುಂಬದವರದ್ದು ಮಾತ್ರ! ಈ ನೂರಾರು ಜನನಾಯಕರು, ಫುಡಾರಿಗಳಿಂದ ಕಿಂಚಿತ್ತಾದರೂ ಪ್ರಯೋಜನ ಮಂಗಳೂರಿಗೆ ಒದಗಿರುತ್ತಿದ್ದೇ ಆಗಿದ್ದರೆ ಮಂಗಳೂರು ಇಂದು ಪ್ರಪಂಚದ ಭೂಪಟದಲ್ಲಿ ಮಹತ್ತರ ಸ್ಥಾನವನ್ನು ಪಡೆದಿರುತ್ತಿತ್ತು.
ಇಲ್ಲ. ಖಂಡಿತಾ ಇಲ್ಲ. ಅಂತಹ ಸಾಧ್ಯತೆ ಕೈಗೂಡುವುದು ತಿರುಕನ ಕನಸೇ ಆಗಿರಬಹುದೇನೋ.
ಹಾಗಾದರೆ ಮಂಗಳೂರು ನಿಜವಾಗಿ ಹೇಗಿದೆ? ಪ್ರಪಂಚದ ಯಾವ ಮೂಲೆಯಲ್ಲೂ ಸಹ ಮಂಗಳೂರನ್ನು ಪ್ರತಿನಿಧಿಸುವ ವ್ಯಕ್ತಿ, ಜನರು ಇದ್ದಾರೆ. ಎಲ್ಲರಿಗೂ ಮಂಗಳೂರಿನ ಬಗ್ಗೆ ಭಾವನಾತ್ಮಕ ಸಂಬಂಧವಂತೂ ಇದೆ. ರಾಜ್ಯದಲ್ಲೂ ಮಂಗಳೂರಿನ ಬಗ್ಗೆ, ಇಲ್ಲಿನ ಆಧುನಿಕತೆಯ ಬಗ್ಗೆ ಜನ ಮಾತಾಡುತ್ತಾರೆ. ಹಿಂದಿನಿಂದಲೂ ಮಂಗಳೂರು ದೊಡ್ಡ ನಗರಗಳಿಗೆ ಮತ್ತು ವಿದೇಶಗಳಿಗೆ ಹತ್ತಿರದ, ವೇಗದ ಸಂಪರ್ಕ, ಸಂಬಂಧವನ್ನಿಟ್ಟುಕೊಂಡು ಬಂದಿದ್ದರಿಂದ ಇಲ್ಲಿನ ಜನರೂ ರಾಜ್ಯದ ಇತರೆಡೆಗಳಿಗಿಂತ ಫಾರ್ವರ್ಡ್ ಎಂಬುದು ವಾಸ್ತವವೇ.
ಇಷ್ಟಾಗಿಯೂ ಇಂದಿಗೂ ಸಹ ಮಂಗಳೂರು ನಗರವೆಂಬುದು ಕನಿಷ್ಠ ಮೂಲ ಸೌಕರ್ಯಗಳ ಮಟ್ಟಿಗೆ ತೀರಾ ನಿಕೃಷ್ಟ, ಚಿಂತಾಜನಕ ಪರಿಸ್ಥಿತಿಯಲ್ಲಿದೆಯೆಂದು ಹೇಳಿದರೆ ಅಷ್ಟು ಸುಲಭದಲ್ಲಿ ಯಾರೂ ನಂಬಲಿಕ್ಕಿಲ್ಲ.
ಹೌದಾ? ಮಂಗಳೂರು ಅಷ್ಟೊಂದು ಹಿಂದುಳಿದಿದೆಯಾ ಎಂದು ನೀವು ಕೇಳಿದರೆ, ಉತ್ತರ ನಿಜಕ್ಕೂ ಹೌದು ಎಂಬುದೇ ಆಗಿದೆ. ಇಲ್ಲಿ ನೀಡಲಾಗಿರುವ ಸಾಕ್ಷ್ಯಾಧಾರಗಳು ನಿಮಗೆ ನೈಜತೆಯನ್ನು ದೃಢಪಡಿಸುತ್ತವೆ.
ಒಂದು ಊರು, ಹಳ್ಳಿ ಅಥವಾ ನಗರವೇ ಇರಲಿ, ಅಭಿವೃದ್ಧಿಯ ಕಲ್ಪನೆಯೊಳಗೆ ಬರಬೇಕಾದರೆ ಅದಕ್ಕೆ ಮೊತ್ತ ಮೊದಲು ರಸ್ತೆ ಸಂಪರ್ಕ ಉತ್ತಮವಾಗಿರಬೇಕು. ಉಳಿದದ್ದೆಲ್ಲಾ ಮತ್ತೆ. ಇದು 2015ನೇ ಇಸವಿ. ಇಪ್ಪತ್ತೊಂದನೇ ಶತಮಾನದ 15 ವರ್ಷಗಳು ಆಗಲೇ ಸಂದಿವೆ. ಆದರೆ ಇಷ್ಟೊಂದು ಆಧುನಿಕವೆನಿಸಿರುವ ಮಂಗಳೂರು ನಗರದ ರಸ್ತೆಗಳು ಹೇಗಿವೆ ಎಂದು ಒಮ್ಮೆ ಅವಲೋಕಿಸಿದರೆ ಸಾಕು, ಮಂಗಳೂರು ಎಂಬುದು ನಗರವೇ ಅಥವಾ ನರಕವೇ ಎಂಬ ಸಂಶಯ ಮೂಡುತ್ತದೆ. ಹಾಗಿವೆ ಮಂಗಳೂರಿನ ರಸ್ತೆಗಳ ಸ್ಥಿತಿ.
ಈ ವಿಷಯದಲ್ಲಿ ಮಂಗಳೂರು ನಿಜಕ್ಕೂ ನರಕವೇ!
ಮಂಗಳೂರಿನ ಬಗ್ಗೆ ಏನೇ ಮಾತನಾಡುವ ಮೊದಲು ತಿಳಿದಿರಬೇಕಾದ ಸಂಗತಿ ಏನೆಂದರೆ, ನಿಜಕ್ಕೂ ಮಂಗಳೂರು ಎಂಬುದು ಮೂಲದಲ್ಲಿ ಒಂದು ನಗರವಲ್ಲ. ಒಂದು ವೇಳೆ ಇಲ್ಲಿ ಬಂದರು ಇಲ್ಲದೇ ಹೋಗಿದ್ದಿದ್ದರೆ ಚರಿತ್ರೆಯಲ್ಲಿ ಇದಕ್ಕೆ ಯಾವುದೇ ಬೆಲೆ ಬರುತ್ತಿರಲಿಲ್ಲ. ಇಂದು ಗಗನಚುಂಬಿ ಕಟ್ಟಡಗಳಿಂದ ತುಳುಕುತ್ತಿರುವ ಮಂಗಳೂರಿನ ಪ್ರದೇಶಗಳೆಲ್ಲಾ ಮೊನ್ನೆ ಮೊನ್ನೆಯವರೆಗೆ ಭತ್ತ ಬೆಳೆಯುತ್ತಿರುವ ಗದ್ದೆಗಳಾಗಿದ್ದವು. ಅಂದರೆ, ಮಂಗಳೂರು ಎಂಬುದು ಹಲವು ಹಳ್ಳಿಗಳನ್ನೊಳಗೊಂಡಿರುವ ಒಂದು ಸಮೂಹ. ಅಷ್ಟೇ.
ಜಿಲ್ಲಾ ಕೇಂದ್ರವಾಗಿ ಮಂಗಳೂರು ಪ್ರತಿಷ್ಠಾಪಿತವಾಗಿದ್ದರಿಂದ, ಸಹಜವಾಗಿಯೇ ಈ ಪಟ್ಟಣ ಬೆಳೆದು ವಿಸ್ತರಿಸುತ್ತಾ ಹೋಯಿತು. ಆದರೆ ಅದಕ್ಕೆ ಬೇಕಾದ ವ್ಯವಸ್ಥಿತ ಯೋಜನೆ ಕೈಗೊಳ್ಳಲೇ ಇಲ್ಲ. ಮೊದಲೇ ಇಲ್ಲಿನ ಸ್ಥಳಗಳು ಬೆಟ್ಟ ಗುಡ್ಡಗಳಿಂದಾಗಿ ಕಡಿದಾಗಿರುವಂಥವು. ಪ್ರಪಂಚದಲ್ಲಿ ಎಷ್ಟೋ ನಗರಗಳು ಇದೇ ರೀತಿ ಇವೆ. ಆದರೆ ಮಂಗಳೂರಿನ ಕೊರತೆ ಏನೆಂದರೆ, ಇದು ಅವ್ಯವಸ್ಥಿತವಾಗಿಯೇ ಬೆಳೆದ ಪಟ್ಟಣ. ಅದನ್ನು ಸಾಬೀತುಪಡಿಸಲು ಇಲ್ಲಿನ ರಸ್ತೆಗಳೇ ಅಪ್ರತಿಮ ನಿದರ್ಶನ.
ಮಂಗಳೂರಿಗೆ ಭೇಟಿ ನೀಡುವ ಹೊರಗಿನವರಿಗೆ ಒಂದು ವಿಷಯವಂತೂ ತಿಳಿದಿರುತ್ತದೆ. ಇಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಯಾವುದಾದರೂ ಪ್ರಮುಖ ರಸ್ತೆ, ವೃತ್ತ ಮುಚ್ಚಲ್ಪಟ್ಟಿರುತ್ತದೆ. ವರ್ಷದ ಯಾವುದೇ ಸಮಯದಲ್ಲಿ ನೀವು ಮಂಗಳೂರಿಗೆ ಬನ್ನಿ, ಇಲ್ಲಿ ಒಂದಕ್ಕಿಂತ ಹೆಚ್ಚು ಪ್ರಮುಖ ರಸ್ತೆಗಳನ್ನು ‘ಅಭಿವೃದ್ಧಿ’ಗಾಗಿ ಮುಚ್ಚಲಾಗಿರುತ್ತದೆ. ಒಂದೇ ರಸ್ತೆ ಅಥವಾ ಸರ್ಕಲ್ ಅನ್ನು ಇಷ್ಟೊಂದು ವರ್ಷಗಳಲ್ಲಿ ಹಲವು ಬಾರಿ ಹೀಗೆ ತಿಂಗಳುಗಟ್ಟಲೆ ಮುಚ್ಚಿ ‘ಅಭಿವೃದ್ಧಿ’ ಮಾಡಿದ ದಾಖಲೆ ಇರುವುದು ಬಹುಶಃ ಮಂಗಳೂರಿನ ವಿಶಿಷ್ಟ ಹೆಗ್ಗಳಿಕೆ! ಇದನ್ನು ನೀವು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ.
ಇಂತಹ ಈ ಮಂಗಳೂರಿನ ಪ್ರಸ್ತುತ ದರ್ಶನ ನಿಮಗೆ ದೊರಕಿಸಬೇಕಲ್ಲ! ಅದಕ್ಕಾಗಿ ಇಂದಿನಿಂದ ಮಂಗಳೂರಿನ ರಸ್ತೆಗಳ ಸಮಗ್ರ ದರ್ಶನ ನಿಮಗೆ ಇಲ್ಲಿ ಮಾಡಿಸಲಾಗುತ್ತದೆ. ಪ್ರತಿದಿನ ಭೇಟಿ ನೀಡಿ. ಮಂಗಳೂರಿನ ‘ಅಭಿವೃದ್ಧಿ’ ಹೇಗಾಗಿದೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಿ.
ಇಂದಿನ ಸರದಿ – ಮಂಗಳೂರಿನ ರಸ್ತೆಗಳು ಮೇಲ್ನೋಟಕ್ಕೆ ಹೇಗೆ ‘ಕಂಗೊಳಿಸುತ್ತವೆ’ ಎಂಬುದನ್ನು ತೋರಿಸುತ್ತೇವೆ. ಇಲ್ಲಿ ನೀಡಲಾದ ಚಿತ್ರಗಳು ಕೇವಲ ಸ್ಯಾಂಪಲ್ ಅಷ್ಟೇ. ಮಂಗಳೂರಿಗೆ ಯಾವುದೇ ಕಡೆಯಿಂದ ಪ್ರವೇಶಿಸುವವರಿಗೆ ಆಗುವ ಅನುಭವ ಇದೇ.
ಮಂಗಳೂರಿನ ರಸ್ತೆಗಳು ಪ್ರಯಾಣಿಕರ ನಿದ್ದೆ ಬಿಡಿಸುವ ಹೊಂಡಗಳು
ಪಂಪ್‍ವೆಲ್ ಮೂಲಕ ಮಂಗಳೂರಿಗೆ ಪ್ರವೇಶಿಸುವವರಿಗೆ ಕಂಕನಾಡಿ ತಲುಪುವಾಗಲೇ ಮಂಗಳೂರಿನ ಭೀಕರತೆ ಅನುಭವಕ್ಕೆ ಬಂದಿರುತ್ತದೆ. ಇಲ್ಲಿ ನೋಡಿ ಕರಾವಳಿ ವೃತ್ತ, ಬೆಂದೂರ್‍ವೆಲ್ ವೃತ್ತದ ಬಳಿಯ ರಸ್ತೆಗಳ ಪರಿಸ್ಥಿತಿ.
‘ಅಭಿವೃದ್ಧಿಯ ಹರಿಕಾರ’ನ ಅಂಗಳದಲ್ಲಿಯೇ ಭೀಕರ ದುಸ್ಥಿತಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ನಗರಕ್ಕೆ (ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ) ‘ಅಭಿವೃದ್ಧಿಯ ಹರಿಕಾರ’ರೊಬ್ಬರು ಶಾಸಕರಾಗಿ ಆಯ್ಕೆಯಾದರು. ಕೆ.ಎ.ಎಸ್. ಅಧಿಕಾರಿಯಾಗಿ ದಶಕಗಳ ಕಾಲ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಇವರಿಂದ ನಗರದ ಅಭಿವೃದ್ಧಿಯಾಗುವುದು ಶತಸ್ಸಿದ್ಧ ಎಂದು ನಂಬಿದ ಜನರು ಅವರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದರು. ಅದಾಗಿ ಈಗ ಎರಡು ವರ್ಷ ಕಳೆದು ಹೋಗಿದೆ. ಮಂಗಳೂರಿನ ಸರ್ವ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಜನರು ನಂಬಿದ್ದೇ ಬಂತು! ಇಲ್ಲಿ ನೋಡಿ, ಮಾನ್ಯ ಶಾಸಕರ ಮನೆಯ ಬಳಿಯಲ್ಲೇ ಇರುವ ಪ್ರಮುಖ ರಸ್ತೆಯ ಆರೋಗ್ಯ ಈ ರೀತಿ ಇದೆ!
ಅಂದ ಹಾಗೆ ಇಲ್ಲಿನ ರಸ್ತೆಯ ದುರ್ಗತಿ ಇಂದು ನಿನ್ನೆಯದಲ್ಲ. ಈಗೇನೋ ಕೇಳಿದರೆ, ಕಾಂಕ್ರಿಟೀಕರಣ ನಡೆಯುತ್ತಿದೆ, ಸರಿ ಮಾಡಲಾಗುತ್ತಿದೆ ಎನ್ನಬಹುದು. ಆದರೆ ದಶಕಗಳಿಂದ ಈ ಜಾಗದಲ್ಲಿ, ಅಂದರೆ ನಂತೂರು ವೃತ್ತದಿಂದ ಮಲ್ಲಿಕಟ್ಟೆವರೆಗೆ, ರಸ್ತೆಯೆಂದರೆ ಮರಣಗುಂಡಿಗಳೇ ಇದ್ದ ದಾಖಲೆ ಇದೆ. ಲೋಬೋ ಸಾಹೇಬರು ಅದರ ಪಕ್ಕದ ನಿವಾಸಿಗಳು!
ಬಿಜೆಪಿ ಕಚೇರಿ ಮುಂದೆಯೇ ಇದೆ ದುರಂತ ಕಾಮಗಾರಿ
ಲೋಕಸಭೆಯಲ್ಲಿ ಮಂಗಳೂರನ್ನು ಕಾಂಗ್ರೆಸ್ಸಿನ ಹಿಡಿತದಿಂದ ಬಿಡಿಸಿಕೊಂಡು ಎಷ್ಟು ವರ್ಷಗಳಾಯಿತು ಎಂದು ಬಿಜೆಪಿ ಮುಖಂಡರಿಗೇ ಮರೆತು ಹೋಗಿರಬೇಕು. ಸದ್ಯ ದ್ವಿತೀಯ ಬಾರಿಗೆ ಭರ್ಜರಿ ಮತಗಳಿಂದ ವಿಜಯಿಯಾದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯದ ನಂಬರ್ ವನ್ ಎಂ.ಪಿ. ಹಾಗಾದರೆ ಅವರು ಪ್ರತಿನಿಧಿಸುವ ಪ್ರದೇಶವೆಲ್ಲಾ ರಾಜ್ಯಕ್ಕೇ ನಂಬರ್ ವನ್ ಆಗಿರಬೇಕಲ್ಲಾ? ಹೌದು. ಪ್ರಗತಿಯಲ್ಲಿ ಅಲ್ಲದಿದ್ದರೂ ‘ದುರ್ಗತಿ’ಯಲ್ಲಿ ಖಂಡಿತಾ ಹೌದು. ಅದರ ‘ವಿಶ್ವರೂಪ’ ಅವರ ಕಚೇರಿ ಬಳಿಯಲ್ಲೇ ಇದೆ ನೋಡಿ!
ಮಂಗಳೂರಿನ ನರಕ ದರ್ಶನ, ಎಲ್ಲೆಲ್ಲಿಯೂ ಎಂದೆಂದಿಗೂ!
ಮಂಗಳೂರಿನ ನಿವಾಸಿಗಳಿಗೆ ನಗರದ ರಸ್ತೆಗಳೆಂದರೆ ದುಸ್ವಪ್ನ! ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ಇಲ್ಲಿನ ರಸ್ತೆಗಳನ್ನು ನೋಡಿದ್ದೇನೆ. ಅತ್ಯಂತ ಪ್ರಮುಖ ರಸ್ತೆಗಳು ವರ್ಷವಿಡೀ ಭಯಾನಕ ರೂಪದಲ್ಲಿ ಕಾಡುತ್ತಾ ಮನುಷ್ಯ ಮಾತ್ರವಲ್ಲ, ವಾಹನಗಳನ್ನೂ ಹಿಂಡಿ, ಕಾಡಿದ ಚರಿತ್ರೆ ಇಲ್ಲಿನ ರಸ್ತೆಗಳಿಗಿದೆ. ಶಾಶ್ವತ ಪರಿಹಾರವಾಗಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣವೇನೋ ಆಗಿದೆ. ಅದಂತೂ ಇನ್ನೊಂದು ದುರಂತ ಅಧ್ಯಾಯ. ಅದರ ವಿವರಗಳನ್ನು ಮುಂದಿನ ಕಂತಿನಲ್ಲಿ ನೀಡಲಾಗುವುದು. ಸದ್ಯ ಕಾಂಕ್ರೀಟ್ ಮಾಡಿರದ ರಸ್ತೆಗಳೆಂದರೆ ಇಲ್ಲಿ ಕಾಣಿಸಿದಂತಿರುವವೇ ಎಲ್ಲೆಲ್ಲೂ ಇವೆ. ಕೆಲವೇ ಉದಾಹರಣೆಗಳು ಇಲ್ಲವೆ.
(ಭಾಗ – 2ರಲ್ಲಿ ಮುಂದುವರಿಯಲಿದೆ)
Copyright @ www.budkulo.com
all the best. mangaluru, kudla, kodial. Mangalapuram wow yestu sundaravada hesaruu. Antheye rasthegalu sundaravagali. rastheye naadina bennelubu.
ಭಾರತದಲ್ಲಿ ರಸ್ತೆಗಳಲ್ಲಿ ಅತ್ಯಂತ ಹೆಚ್ಚು ಹೊಂಡಗಳಿರುವ ನಗರಗಳಿಗೆ ಸ್ಪರ್ಧೆ ನಡೆಸಿದರೆ ಮಂಗಳೂರಿಗೆ ಬಹುಮಾನ ಸಿಗುವುದರಲ್ಲಿ ಸಂಶಯವೇ ಇಲ್ಲ. ಮಳೆ ನಿಂತ ಸ್ವಲ್ಪ ದಿನಗಳಲ್ಲಿ ಈ ಹೊಂಡಗಳಿಗೆ ಮಣ್ಣು ತುಂಬಲಾಗುತ್ತದೆ. ಕೆಲವೊಂದು ವಾರಗಳ ನಂತರ ಮಣ್ಣು ತೆಗೆಯದೇ ಡಾಮಾರಿನ ತೇಪೆ ಹಾಕಲಾಗುತ್ತದೆ. ಡಯಾಬೆಟಿಸ್ ಸಮಸ್ಸೆ ಇರುವವರಿಗೆ ಪದೇ ಪದೇ ವಾಸಿಯಾದ ಘಾಯ ಉಲ್ಬಣವಾಗುವಂತೇ ಇಂದು ಇದ್ದ ಹೊಂಡ ಮತ್ತಷ್ಟು ದೊಡ್ಡದಾಗಿ ಮುಂದಿನ ಮಳೆಗಾಲಕ್ಕೆ ಮತ್ತೆ ಕಾಣಸಿಗುತ್ತದೆ. ಸರಿಯಾಗಿ ಡಾಮಾರು ಹಾಕಿದರೆ ಈ ಹೊಂಡಗಳು ಕಾಣಲಾರವು. ನಮ್ಮ ಪಕ್ಕದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯ ಡಾಮಾರು ರಸ್ತೆಗಳು ಯಾಕೆ ಹೊಂಡಮಯವಾಗುವುದಿಲ್ಲ? ಆ ರಸ್ತೆಗಳ ಮೇಲೆ ಮಳೆ ಸುರಿಯುವುದಿಲ್ಲವೇ? ಭಾರವಾದ ವಾಹನಗಳು ಎಲ್ಲಿ ಹೆಚ್ಚು ಓಡುತ್ತವೆ? ನಗರದೊಳಗಿನ ಡಾಮಾರಿನ ರಸ್ತೆಗಳು ಪದೇ ಪದೇ ಯಾಕೆ ಕೆಡುತ್ತವೆ? ಉತ್ತರ ಹುಡುಕುವ ಅಗತ್ಯವಿದೆಯೇ?