Latest News

ಘಟ್ಟದ ತಪ್ಪಲಿನಲ್ಲೊಬ್ಬ ಕೃಷಿ ತಪಸ್ವಿ: ಬಿ.ಕೆ. ದೇವರಾಯ ರಾವ್

Budkulo Media Network

Posted on : September 6, 2014 at 7:17 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ವರದಿ: ವಿಕ್ಟರ್ ಕಡಂದಲೆ ಹಾಗೂ ಟೋನಿ ಫೆರೊಸ್ ಜೆಪ್ಪು
ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

DSC_1136ಕರಾವಳಿ ಕರ್ನಾಟಕದ ಜನರೆಲ್ಲಾ – ಜಾತಿ, ಧರ್ಮ, ಸುಶಿಕ್ಷಿತ -ಅಶಿಕ್ಷಿತ, ರಾಜಕಾರಣಿ, ಅಧಿಕಾರಿ, ಬಡವ-ಬಲ್ಲಿದ, ಗುಡಿಸಲು ಜೀವಿ-ಬಂಗಲೆ ವಾಸಿ – ಹೀಗೆ ಯಾವುದೇ ಭೇದ-ಭಾವ, ಅಂತರ-ಪಕ್ಷಪಾತವಿಲ್ಲದೆ ಎಲ್ಲರಿಗೂ ಊಟಕ್ಕೆ ಬೇಕಾಗಿರುವುದು ಅನ್ನ. ಅನ್ನ ದೊರೆಯಬೇಕಾದರೆ ಅಕ್ಕಿ ಬೇಕು. ಅಕ್ಕಿ ಸಿಗಬೇಕಾದರೆ ಭತ್ತ ಬೆಳೆಯಲೇಬೇಕು. ಮತ್ತು ಮುಖ್ಯವಾಗಿ, ಭತ್ತ ಬೆಳೆಯಬೇಕಾದರೆ ಗದ್ದೆಗಳಿರಬೇಕು.

ಆದರೆ… ಆಧುನಿಕತೆಯ ನೆಪವೋ, ಆಲಸ್ಯವೋ, ಕೃಷಿಯ ಬಗೆಗಿನ ತಾತ್ಸಾರವೋ, ದುಡಿಯುವ ಆಳುಗಳ ಅಭಾವವೋ, ಕೈಗಾರಿಕೀಕರಣ, ರಿಯಲ್ ಎಸ್ಟೇಟ್ ಉದ್ಯಮದ ಪ್ರಭಾವವೋ… ಒಟ್ಟಾರೆ ಇವೆಲ್ಲವುಗಳ ಪರಿಣಾಮವಾಗಿ ಭತ್ತದ ಗದ್ದೆಗಳು ಮಾಯವಾಗುತ್ತಿವೆ. ಇರುವ ಗದ್ದೆಗಳು ಪಡೀಲು ಬಿದ್ದಿವೆ. ಮುಗಿಲೆತ್ತರದ ಕಟ್ಟಡಗಳು, ಮಾಲಿನ್ಯಕಾರಕ ಕಾರ್ಖಾನೆಗಳು, ಕೈಗಾರಿಕೆ-ಸ್ಥಾವರಗಳು ಫಲವತ್ತಾದ ಭೂಮಿ (ಗದ್ದೆ) ಯನ್ನು ನುಂಗುತ್ತಿವೆ.

ಆದರೆ ಸಂಪೂರ್ಣವಾಗಿ ನಿರಾಶರಾಗಬೇಕಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರಂತೆ ಆಶಾಕಿರಣಗಳಾಗಿ ಗೋಚರಿಸುವವರೂ ಇದ್ದಾರೆ. ಹೌದು, ನಾವು ನಿಮ್ಮನ್ನು ಅಂಥಹ ಒಬ್ಬ ಆಶಾವಾದಿಯ ಬಳಿಗೆ ಕರೆದೊಯ್ಯುತ್ತಿದ್ದೇವೆ. ಅವರು ಕೇವಲ ಕೃಷಿಕ ಮಾತ್ರವಲ್ಲ. ಅವರು ನಿಜವಾಗಿ ಒಬ್ಬ ಕೃಷಿ ತಪಸ್ವಿ. ಅವರ ಹೆಸರು ಬಂಗಾಡಿ ಕಿಲ್ಲೂರು ದೇವರಾಯ ರಾವ್.

70ರ ವಯಸ್ಸಿನ ತರುಣ, ಶ್ವೇತ ವಸ್ತ್ರಧಾರಿ. ಅಗತ್ಯಕ್ಕೆ ತಕ್ಕಷ್ಟು ಮಾತು, ಅಪಾರ ಜೀವನಾನುಭವ, ದುಡಿಮೆಯಲ್ಲೇ ದೇವರನ್ನು ಕಂಡ ಕೃಷಿ ಸಾಧಕರು ಅವರು. ಯಶಸ್ವಿ ಸಾವಯವ ಕೃಷಿಕ ದೇವರಾಯ ರಾಯರು ನಮಗೊಂದು ಆದರ್ಶ. ಕೃಷಿ ಮಾಡಬೇಕೆನ್ನುವವರಿಗೆ ಅವರು ದಾರಿ ದೀವಿಗೆ.

ಬನ್ನಿ ನಮ್ಮೊಂದಿಗೆ. ನಿಮ್ಮನ್ನು ಅವರ ಬಳಿಗೆ, ಅವರ ಕೃಷಿ ಜಮೀನಿಗೆ, ಅವರೊಡನೆ ಸಂವಾದಕ್ಕೆ ಕರೆದೊಯ್ಯುತ್ತಿದ್ದೇವೆ.

* * * * *      * * * * *      * * * * *

ಅದೊಂದು ಭಾನುವಾರ. ಮಂಗಳೂರಿನಿಂದ ನಾವು ಮೂವರು – ವಿಕ್ಟರ್ ಕಡಂದಲೆ, ಟೋನಿ ಫೆರೊಸ್ ಹಾಗೂ ಡೊನಾಲ್ಡ್ ಪಿರೇರಾ – ಮುಂಚಿತವಾಗಿ ಸಮಯ ನಿಗದಿಪಡಿಸಿಕೊಂಡು ದೇವರಾಯರ ಕೃಷಿ ಭೂಮಿಗೆ ಭೇಟಿ ಕೊಡಲು ತೆರಳಿದೆವು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ (ಉಜಿರೆ – ಚಿಕ್ಕಮಗಳೂರು ರಸ್ತೆ) ಪೇಟೆಯಿಂದ ಎಡಕ್ಕೆ ದಿಡುಪೆಗೆ ಹೋಗುವ ರಸ್ತೆಯಲ್ಲಿ 10 ಕಿ.ಮೀ. ತೆರಳಿದರೆ ಒಂದು ಸಾಧಾರಣ ತೊರೆ ಸಿಗುತ್ತದೆ. ಅದಕ್ಕೆ ಕಟ್ಟಿರುವ ಸೇತುವೆ ದಾಟಿ ಬಲಕ್ಕೆ ತಿರುಗಿ ಅರ್ಧ ಕಿ.ಮೀ. ಸಾಗಿದಾಗ ದೇವರಾಯರ ಕೃಷಿ ಕ್ಷೇತ್ರ ಸಿಗುತ್ತದೆ. ಅಲ್ಲಿ ಪ್ರವೇಶಿಸಿದಂತೆಯೇ ಅವರ ಮನೆ ಎದುರಾಗುತ್ತದೆ.

ನಾವು ಮನೆಗೆ ಹೋದಾಗ ನಗುಮೊಗದಿಂದ ನಮ್ಮನ್ನು ಸ್ವಾಗತಿಸಿದವರು ದೇವರಾಯರ ಧರ್ಮಪತ್ನಿ ಶಾರದಮ್ಮನವರು. ಬೆಲ್ಲ-ನೀರು ಕೊಟ್ಟು ನಮ್ಮನ್ನವರು ಸತ್ಕರಿಸಿದರು. ಆ ಹೊತ್ತಿನಲ್ಲಿ ದೇವರಾಯರು ಗದ್ದೆಯಲ್ಲಿ ಬೀಜ ಬಿತ್ತಲು ತೆರಳಿದ್ದರು. ಅವರನ್ನು ಭೇಟಿಯಾಗಲು ನಾವು ತೆರಳುತ್ತಿದ್ದಂತೆ, ಕೆಲಸ ಮುಗಿಸಿ ಅವರು ಮನೆಗೆ ಹಿಂತಿರುಗುತ್ತಿದ್ದವರು ದಾರಿಯಲ್ಲೇ ಎದುರುಗೊಂಡರು. ಅಲ್ಲಿಂದಲೇ ನಮ್ಮನ್ನು ಅವರು ಅವರ ಕರ್ಮಭೂಮಿಯ ಪರಿಚಯ ಮಾಡಲು ಕರೆದುಕೊಂಡು ಹೋದರು.

DSC_1252
ಮೊದಲೊಂದು ಸಂಗತಿ ನಿಮಗೆ ಹೇಳಲೇಬೇಕು. ನಿಮಗೀಗಾಗಲೇ ಈ ಸ್ಥಳ ಎಲ್ಲಿರಬಹುದೆಂದು ಅಂದಾಜಾಗಿರಬೇಕಲ್ಲವೆ? ಗೊತ್ತಾಗದಿದ್ದರೆ ಇಲ್ಲಿ ಕೇಳಿ. ಸ್ವರ್ಗಕ್ಕೆ ಮೂರೇ ಗೇಣು ಅಂಥಾರಲ್ಲಾ, ಅಂಥಾ ಸ್ಥಳವಿದು. ಸ್ವಿಜರ್‍ಲ್ಯಾಂಡ್, ಕಾಶ್ಮೀರ, ಡಾರ್ಜಿಲಿಂಗ್ ಅಂತೆಲ್ಲಾ ರುದ್ರ ರಮಣೀಯ ಜಾಗಗಳಿವೆಯಲ್ಲ. ಹಾಗೆ. ಅಷ್ಟು ದೂರ ಹೋಗಬೇಕಾಗಿಲ್ಲ. ನಮ್ಮ ಸುತ್ತಮುತ್ತಲೇ ಅಂಥಹ ಸ್ಥಳಗಳಿವೆ. ಹೌದು. ಈ ಜಾಗ ಪಶ್ಚಿಮ ಘಟ್ಟದ ಬುಡದಲ್ಲಿಯೇ ಇದೆ. ದಿಡುಪೆ ಎಂಬ ಕುಗ್ರಾಮದ ಬಗ್ಗೆ ನೀವು ಕೇಳಿರಬಹುದು. ಅದು ಇಲ್ಲಿಂದ ಸ್ವಲ್ಪ ದೂರದಲ್ಲಿದೆ.

ಈ ನಮ್ಮ ದೇವರಾಯರ ಕೃಷಿ ಭೂಮಿಯ ದಕ್ಷಿಣಕ್ಕೆ ಬಲ್ಲಾಳರಾಯನ ದುರ್ಗವಿದ್ದರೆ, ಪೂರ್ವಕ್ಕೆ ಎರ್ಮಾಯಿ ಜಲಪಾತ, ಉತ್ತರಕ್ಕೆ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ‘ಏಳುಹೊರೆ ಹಳ್ಳ’ ಹೊಳೆ ಇದೆ. ದೇವರಾಯರ ಮನೆಯ ಮುಂಬಾಗಿಲಿನಿಂದ ನೋಡಿದರೆ ಪಶ್ಚಿಮ ಘಟ್ಟ (ಬಲ್ಲಾಳರಾಯನ ದುರ್ಗ) ದರ್ಶನವಾಗುತ್ತದೆ. ಅವರ ಜಮೀನಿನ ಯಾವುದೇ ಭಾಗದಲ್ಲಿ ನಿಂತರೂ ಮೂರು ಸುತ್ತಲೂ ಕಾಣುವ ಪರ್ವತಗಳು ಅದ್ಭುತ ದೃಶ್ಯಾವಳಿಗಳು. ಅದರಲ್ಲೂ ಮಳೆಗಾಲದ ಮೋಡಗಳ ಸುಂದರ ನರ್ತನವನ್ನು ನೋಡುವುದು ಇನ್ನಷ್ಟು ಆಹ್ಲಾದಕರ.

DSC_1025 DSC_1021  DSC_1012 DSC_1005 DSC_0996 DSC_0976

ಕುದುರೆಮುಖ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಬಂಗಾಡಿ – ಕಿಲ್ಲೂರು ಗ್ರಾಮದಲ್ಲಿ ದೇವರಾಯರ ಅಜ್ಜನಿಗೆ 3000 ಮುಡಿ ಅಕ್ಕಿ ಗೇಣಿಗೆ ಬರುತ್ತಿತ್ತಂತೆ. ಅಷ್ಟೊಂದು ದೊಡ್ಡ ಜಮೀನುದಾರರಾಗಿದ್ದರು ಅವರು. ತಂದೆಗೆ 110 ಎಕರೆ ಜಮೀನಿತ್ತಂತೆ. ಸದರಿ ದೇವರಾಯರ ಬಳಿ 30 ಎಕರೆ ಜಮೀನಿದೆ. ಅದರಲ್ಲಿ ಸೊಪ್ಪು ಗೊಬ್ಬರ (ಹಸಿರೆಲೆ ಗೊಬ್ಬರ) ದಟ್ಟವಾಗಿರುವ ಕಾಡು ಇದೆ. 1988ರ ತನಕ 5 ಜೊತೆ ಎತ್ತು, 2 ಜೊತೆ ಕೋಣಗಳನ್ನು ಹೊಂದಿ ಉಳುಮೆ ಮಾಡಿಕೊಂಡಿದ್ದರು. 25 ವರ್ಷಗಳ ಹಿಂದೆ ಟಿಲ್ಲರ್ ಕೊಂಡಿದ್ದರು. ಅದು ಈಗಲೂ ಸುಸ್ಥಿತಿಯಲ್ಲಿದ್ದು, ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ತಮ್ಮ 20ರ ಹರೆಯದಲ್ಲಿ ತಂದೆಯನ್ನು ಕಳೆದುಕೊಂಡ ದೇವರಾಯರು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದರೆ, ಶಾರದಮ್ಮನವರು ಪತಿಯ ಕೃಷಿ ಕಾರ್ಯಗಳಿಗೆ ಸಹಕರಿಸುತ್ತಾ ಮನೆ ಕೆಲಸ ಮಾಡುತ್ತಾರೆ. ಪ್ರಸ್ತುತ ಅವರ ಬಳಿ 20ಕ್ಕೂ ಮಿಕ್ಕಿ ದನಗಳಿವೆ. ಹಾಲು ಸಿಗುತ್ತದೆ. ಸೆಗಣಿ ಗೋಬರ್ ಗ್ಯಾಸ್‍ಗೆ ಬಳಸುತ್ತಾರೆ, ಅಡುಗೆಗೆ ಅದನ್ನೇ ಬಳಸುತ್ತಾರೆ. ಫಲವತ್ತಾದ ಗೊಬ್ಬರವನ್ನು ಗದ್ದೆ, ತೋಟ, ತರಕಾರಿ ಗಿಡಗಳಿಗೆ ಬಳಸುತ್ತಾರೆ. ಇವರದು ವಿಷರಹಿತ, ರಾಸಾಯನಿಕ ರಹಿತ ಕೃಷಿ ಉತ್ಪನ್ನಗಳು. ನೀರಾವರಿಗಾಗಿ ನದಿ ನೀರು ಹಾಗೂ 36 ಅಡಿ ವ್ಯಾಸ, 18 ಅಡಿ ಆಳದ ಬಾವಿ ಇದ್ದು, ಎರಡು ಪಂಪ್‍ಸೆಟ್ ಹೊಂದಿದ್ದಾರೆ.

DSC_1048 DSC_1248 DSC_1249 DSC_1250 DSC_1254

1961ರಲ್ಲಿ ಪಿಯುಸಿ ಕಲಿತೊಡನೆ ಭಾರತೀಯ ವಾಯು ಸೇನೆಯಲ್ಲಿ ಉದ್ಯೋಗದ ಆಹ್ವಾನ ಅವರಿಗೆ ಬಂದಿತ್ತಂತೆ. ಆದರೆ ಕೃಷಿಯನ್ನೇ ತನ್ನ ಉದ್ಯೋಗವನ್ನಾಗಿ ಅವರು ಆಯ್ಕೆ ಮಾಡಿಕೊಂಡಿದ್ದರು. ಬೆಳ್ತಂಗಡಿಯ ಶಾಸಕ ವಸಂತ ಬಂಗೇರ ಮತ್ತು ದೇವರಾಯರು ಕ್ಲಾಸ್‍ಮೇಟ್‍ಗಳು. ಆದರೆ ಇದುವರೆಗೆ ಯಾವುದೇ ಕಾರಣಕ್ಕಾಗಿ, ಎಂಥಹ ಅಗತ್ಯ, ಕಷ್ಟಕರ ಪರಿಸ್ಥಿತಿಯಲ್ಲಾಗಲೀ ಅವರ (ಎಂಎಲ್‍ಎ) ಬಳಿ ಅಥವಾ ಇನ್ನಾರ ಬಳಿಯಾಗಲೀ ಕೈ ಮುಗಿದು ಬೇಡಿಕೊಂಡಿಲ್ಲವೆಂದು ಅವರು ಸ್ವಾಭಿಮಾನದಿಂದ ಹೇಳುತ್ತಾರೆ.

ದಿನಂಪ್ರತಿ ಮುಂಜಾನೆ ಐದೂವರೆಗೆ ಎದ್ದೇಳುವ ದೇವರಾಯರು ಒಂದು ಗಂಟೆ ಯೋಗ ಮಾಡುತ್ತಾರೆ. ತರುವಾಯ ತನ್ನ ಕೃಷಿ ಕ್ಷೇತ್ರದಲ್ಲಿ ಸುತ್ತಾಡಿ ಬಂದು ಸ್ನಾನ, ಪೂಜೆ ಮಾಡಿದ ನಂತರ ಗಂಜಿ ಊಟ. ಚಹಾ, ಕಾಫಿಯನ್ನು ಅವರು ಸೇವಿಸುವುದಿಲ್ಲ.

ಅವರದು ವರ್ಷಪೂರ್ತಿ ದುಡಿಮೆ. ತಿರುಗಾಟ ಕಡಿಮೆ. “ಕೃಷಿಕ ಕೃಷಿಯೊಂದಿಗೆ ಒಡನಾಟ ಇಟ್ಟುಕೊಂಡಿರಬೇಕು. ಆಲಸಿಗಳಿಗೆ ಮತ್ತು ತಿರುಗಾಡುತ್ತಾ, ಅಂಗಡಿ ಬಾಗಿಲಲ್ಲಿ ಕುಳಿತು ಬ್ರೇಕಿಂಗ್ ನ್ಯೂಸ್ ಓದುವವರಿಗೆ ಕೃಷಿ ಸಲ್ಲದು. ನನಗೆ ಯಾವುದೇ ಕಾಯಿಲೆ ಇಲ್ಲ. ನನ್ನದು ಸಂತೃಪ್ತ ಜೀವನ. ವರ್ಷಪೂರ್ತಿ ಉಣ್ಣಲು ನನ್ನದೇ ಭೂಮಿಯಲ್ಲಿ ನಾನೇ ಬೆಳೆದ ರೋಗ ರುಜಿನ ಮುಕ್ತ, ವಿಷ ಮುಕ್ತ ಅಕ್ಕಿ ನನ್ನಲ್ಲಿದೆ. ಭತ್ತವನ್ನು ನಮ್ಮದೇ ಹಲ್ಲರ್‍ನಲ್ಲಿ ಅಕ್ಕಿ ಮಾಡುವುದು ನಮ್ಮ ವಿಶೇಷತೆ. ಚಾಪೆ ಇದ್ದಷ್ಟೇ ಕಾಲು ಚಾಚಿ ಬದುಕುವ ನನಗೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ” ಎನ್ನುತ್ತಾರೆ ಅವರು, ಸಂತೃಪ್ತಿಯಿಂದ.

DSC_1259 DSC_1263 DSC_1161 DSC_1180 DSC_1182

ದೇವರಾಯರ ಉವಾಚಗಳು:

  • ನನಗೆ ಹಣ ಮಾಡಬೇಕು, ಆಸ್ತಿ ಬದುಕು ಮಾಡಬೇಕೆಂಬ ಸ್ವಾರ್ಥವಿಲ್ಲ. ನನ್ನಲ್ಲಿ ಇರುವುದರಲ್ಲಿ ನಾನು ಸಂಪೂರ್ಣ ತೃಪ್ತನಾಗಿದ್ದೇನೆ.
  • ಕೇರಳದ ಮಲಯಾಳಿಯೋರ್ವ ಜಾಗ ಮಾರುತ್ತೀರೋ ಎಂದು ಕೇಳಿ ಬಂದಿದ್ದರು. ಮಾರಬಹುದಿತ್ತು. ಮಾರಿದರೆ ಕೋಟಿಗಟ್ಟಲೇ ಸಿಗುತ್ತಿತ್ತು. ನನ್ನ ಕೃಷಿ ಭೂಮಿಯೆಲ್ಲ ರಬ್ಬರ್’ಮಯವಾಗುತ್ತಿತ್ತು. ದುಡ್ಡಿಗಾಗಿ ಫಲವತ್ತಾದ ಭೂಮಿ ಮಾರಲು ನನ್ನ ಮನಸ್ಸು ಒಪ್ಪಲಿಲ್ಲ.
  • ಕೈ ಕೆಸರಾದರೇನೇ ಬಾಯಿ ಮೊಸರಾಗುವುದು. ಇದೇ ಕೃಷಿ ಜೀವನ.
DSC_1134
‘ಆಧ್ಯಾತ್ಮಿಕತೆಯ ತುತ್ತ ತುದಿ ನಾಸ್ತಿಕತೆ. ನಾಸ್ತಿಕತೆಯ ಪರಮ ತುದಿ ಆಸ್ತಿಕತೆ. ಆಧ್ಯಾತ್ಮಿಕತೆ ಅಗತ್ಯ. ಆದರೆ ಅದೇ ಶಾಶ್ವತವಲ್ಲ’ – ದೇವರಾಯರಾವ್ ನುಡಿಮುತ್ತು
  • ನನಗೆ ರೇಡಿಯೋ ಇಷ್ಟ. ಟಿ.ವಿ. ಸಮಯ ವ್ಯರ್ಥ ಮಾಡುತ್ತದೆ. ನಾನು ಮೂರ್ಖರ ಪೆಟ್ಟಿಗೆಯಿಂದ ದೂರ.
  • ಭತ್ತ ಸಹನಾಶೀಲೆ. ಭತ್ತ ಬೆಳೆದವನಿಗೆ ನಷ್ಟವಿಲ್ಲ. ಭೂಮಿ ನಾವು ಬಿತ್ತಿದ್ದಕ್ಕಿಂತ ಹೆಚ್ಚು ಫಲ ನೀಡುತ್ತದೆ. ಒಂದು ವರ್ಷ ಫಸಲಲ್ಲಿ ಹೆಚ್ಚು ಕಮ್ಮಿಯಾದರೂ ಮರು ವರ್ಷ ಅದು ತುಂಬಿ ತುಳುಕುವುದು.
  • ಯುವ ಜನಾಂಗ ಮತ್ತು ಕೃಷಿ ಕೂಲಿಗಳು ಪೇಟೆಯತ್ತ, ಬೀಡಿ-ಬೀಜದ ಉದ್ಯಮದತ್ತ ಆಕರ್ಷಿತರಾಗಿದ್ದಾರೆ. ಇವರು ಮಣ್ಣಿನ ವೈರಿಗಳಾಗುತ್ತಿರುವುದು ದುರಂತವೇ ಸರಿ.
DSC_1116
‘ನಾನು ಕರ್ಮವನ್ನು ನಂಬುತ್ತೇನೆ. ವೈದ್ಯನಾದವನು ವೈದ್ಯ ವೃತ್ತಿ ಮಾಡಬೇಕು. ಕೃಷಿಕನು ಕೃಷಿಕನ ಕೆಲಸ ಮಾಡಬೇಕು’
  • ಸರಕಾರ ಶಿಫಾರಸು ಮಾಡುವ ಹೈಬ್ರಿಡ್ ಭತ್ತ ರೋಗಗ್ರಸ್ತ ಎಂದು ತಿಳಿದ ಮೇಲೂ ನಮ್ಮ ಗದ್ದೆಯಲ್ಲೇಕೆ ಬೆಳೆಸಬೇಕು?
  • ನನ್ನಷ್ಟು ಸತ್ವಭರಿತ ಆಹಾರವನ್ನು ದೇಶದ ರಾಷ್ಟ್ರಪತಿ, ಪ್ರಧಾನಿ ಸಹ ಉಣ್ಣುವುದಿಲ್ಲ.
  • ಸ್ಥಳೀಯ ಬೀಜದ ಅಕ್ಕಿ ಸತ್ವಭರಿತ, ರುಚಿಯುಕ್ತ, ಆರೋಗ್ಯದಾಯಕ. ಸ್ಥಳೀಯ ತಳಿಗಳಿಗೆ ರೋಗ ಬಾಧಿಸದು. ಸ್ಥಳೀಯ ಭತ್ತ ಬೆಳೆಸುವುದರಿಂದ ದನ ಕರುಗಳಿಗೆ ಸಾಕಷ್ಟು ಬೈಹುಲ್ಲು ಲಭಿಸುತ್ತದೆ.
  • ಭಾರತ ಕೃಷಿ ಪ್ರಧಾನ ದೇಶ. ನಾಡಿನ ಬೆನ್ನೆಲುಬಾಗಿರುವ ನೇಗಿಲ ಯೋಗಿಯನ್ನು ಕೇಳುವವರೇ ಇಲ್ಲವಲ್ಲ!
  • ನನ್ನದು ಬೆಳಿಗ್ಗೆ ಒಂದು ಗಂಟೆ ದೇವರ ಪೂಜೆ. ದಿನವಿಡೀ ದುಡಿಮೆಯೇ ದೇವರು ನನ್ನ ಪಾಲಿಗೆ.
  • ಬಂಗಾಡಿ, ಮಿತ್ತಬಾಗಿಲು ಗ್ರಾಮಗಳು ಭತ್ತದ ಕಣಜಗಳಾಗಿದ್ದವು. ಪ್ರಸ್ತುತ ಜನರು ವಿವಿಧ ಆಮಿಷಗಳಿಗೆ ಬಲಿಯಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯತೊಡಗಿದ್ದಾರೆ. ಅಕ್ಕಿಯನ್ನು ಹೊರಗಡೆಯಿಂದ ತರಬೇಕಾದ ದುಸ್ಥಿತಿ ಒದಗಿದೆ.
  • ‘ಬಂಗಾಡಿ ಪೋಂಡ ಬಂಜರ ಉಣೊಲಿ’ (ಬಂಗಾಡಿಗೆ ಹೋದರೆ ಹೊಟ್ಟೆ ತುಂಬಾ ಉಣ್ಣಬಹುದು); ‘ಬೆನ್ನಿ ಬೆಂದ್‍ಂಡ ಬಂಜಿಗ್ ಬರಗಾಲ ಇಜ್ಜಿ’ (ಬೇಸಾಯ ಮಾಡಿದರೆ ಹೊಟ್ಟೆಗೆ ಕಡಿಮೆಯಾಗದು). ಆದರೆ ಈಗ ಈ ನಾಣ್ಣುಡಿಗಳು ನಮ್ಮನ್ನೇ ಅಣಕಿಸುತ್ತವೆ.
  • ರಾಸಾಯನಿಕ ಕೃಷಿ ಹೆಚ್ಚು ನೀರು ಬಳಸುತ್ತದೆ. ಆದರೆ ಸಾವಯವ ಕೃಷಿ ಕಡಿಮೆ ನೀರಿನಲ್ಲಿ ಬಾಳುತ್ತದೆ.
  • ರಾಸಾಯನಿಕ ಕೃಷಿಕನಿಗೆ ಸನ್ಮಾನ, ಬಿರುದು. ಸಾವಯವ ಕೃಷಿಕನಿಗೆ….?
  • ನಾನು ಬಾಲ್ಯ, ಯೌವನದಲ್ಲಿ ಮನೆಯಲ್ಲೇ ಕುಟ್ಟಿದ ಅವಲಕ್ಕಿ, ಬೆಲ್ಲ, ಕೊಬ್ಬರಿ ತಿನ್ನುತ್ತಿದ್ದೆ. ಈಗಲೂ ನಾನು 60 ಕೆ.ಜಿ. ಭಾರ ಹೊರಬಲ್ಲೆ.
ದೇವರಾಯರ ಭತ್ತ ಕೃಷಿಯ ವಿಶೇಷತೆಗಳು:

ಪ್ರಸ್ತುತ ಇವರ ಗದ್ದೆಗಳಲ್ಲಿ ನೂರಕ್ಕೂ ಮಿಕ್ಕಿದ ತಳಿಗಳು ರಾರಾಜಿಸುತ್ತಿವೆ.

60 ದಿನಗಳಿಂದ 185 ದಿನಗಳಲ್ಲಿ ಕಟಾವಿಗೆ ಬರುವ ತಳಿಗಳು ಇವರಲ್ಲಿವೆ.

ಒಂದೇ ಗದ್ದೆಯಲ್ಲಿ 52 ವಿಭಿನ್ನ ತಳಿಯ ಭತ್ತ ಬೆಳೆದ ಇವರಲ್ಲಿ 100ಕ್ಕೂ ಹೆಚ್ಚು ಭತ್ತದ ತಳಿಗಳ ಸಂಗ್ರಹವಿದೆ.

ತಳಿಗಳು:

ಕಾಯಾಮೆ, ರಾಜ ಕಾಯಾಮೆ, ಸುಗ್ಗಿ ಕಾಯಾಮೆ, ಗಂಧಸಾಲೆ, ಮಸ್ಸೂರಿ, ಅಲ್ದಂಡೆ, ಹಲ್ಲಿಂಗ, ಕವಳ ಕಣ್ಣು, ಜೀರಿಗೆ ಸಣ್ಣ, ದೊಡ್ರ, ಕೊಳಕೆ ದೊಡ್ರ, ಮೊರಡ್ಡ, ಕಳಮೆ, ಬಾಸ್ಮತಿ, ಬಾಸ್ಮತಿ ಉದ್ದ, ಮಸ್ಕತಿ, ಮೀಸೆ ಭತ್ತ, ಅಜಿಪಸಾಲೆ, ಪೀಟ್‍ಸಾಲೆ, ತೊನ್ನೂರು, ಕುಂದಪುಲ್ಲನ್, ಅದೇನ್ ಕೇಳ್ತೆ, ಕರಿದಡಿ, ಗುಲ್ವಾಡಿ ಸಣ್ಣ, ಗಿಡ್ಡ ಭತ್ತ, ಬಿಳಿ ನೆಲ್ಲು, ಮೈಸೂರು ಮಲ್ಲಿಗೆ, ಕುಟ್ಟಿ ಕಾಯಾಮೆ, ಕರಿಯ ಜೇಬಿ, ಉಬರ್‍ಮುಂಡ, ರಸ್ಕದಂ, ಚಾರೆ, ಅತಿಕಾಯ, ಅತಿಕಾರಯ, ನಾಗಾಭತ್ತ, ಕಣ್ವ, ಕಾಮಧಾರಿ, ಕುಮೇರು, ಅಜ್ಜಿಗ, ಕಂಡ್ರೆಕುಟ್ಟಿ-ಬಿಳಿ, ಕಂಡ್ರೆಕುಟ್ಟಿ ಕಜೆ, ರತನ್‍ಸಾರ, ಗಿರಿಸಣ್ಣ, ಥೈಲ್ಯಾಂಡ್, ಮಣಿಪುರ ನೀಲಿ, ಬಿಳಿ ನೆಲ್ಲು, ಸಬಿತ, ತನು, ಕುರುವ, ಪಿಂಗಾರ, ಪುತ್ತೂರ್ದ ಮುತ್ತು, ಸೇಲಂ ಸಣ್ಣ, ಐಆರ್-8, ಬಿಳಿ ಜಯ, ಕಜೆ ಜಯ, ಅನ್ನಪೂರ್ಣ, ರತ್ನಚೂಡಿ, ಮಹಾವೀರ, ಭದ್ರ, ಶಕ್ತಿ, ಸಿದ್ದಸಣ್ಣ, ಅಜಿಪ, ಎಲ್‍ಬೇರ್, 65 ನಂಬರ್ ಬಿಳಿ, ಉತ್ತರ ಪ್ರದೇಶದ ವಿವಿಧ 18 ತಳಿಗಳು.

DSC_1015DSC_1032

ಯಾವ ತಳಿ ಯಾವ ಬೆಳೆಗೆ ಸೂಕ್ತ, ಅದರಲ್ಲಿರುವ ಮದ್ದಿನ ಗುಣಗಳೇನು ಎಂಬುದು ಅವರಿಗೆ ತಿಳಿದಿದೆ. ಬೆಳ್ತಿಗೆ ಅಕ್ಕಿ ತಳಿ, ಕುಚುಲಕ್ಕಿ ತಳಿ, ದೋಸೆಗೆ ಬೇಕಾದ ತಳಿ, ಪರಿಮಳ ತಳಿ, ಹೆಚ್ಚು ಭತ್ತ ನೀಡುವ ತಳಿ, ಕಾಳು ಉದುರದ ತಳಿ, ಹೆಚ್ಚು ತೂಕದ ಕಾಳಿನ ತಳಿ, ಮೆತ್ತಗೆ ಹೆಚ್ಚು ಬೈಹುಲ್ಲು ನೀಡುವ ತಳಿ, ವೈದಿಕ ಮತ್ತು ಔಷಧಕ್ಕೆ ಬಳಸಲ್ಪಡುವ ತಳಿ, ನೀರನ್ನು ಹೆಚ್ಚು ನಿರೀಕ್ಷಿಸುವ ‘ಸತ್ಯದ ಬೆಳೆ’ಯು ಇವರ ಗದ್ದೆಯಲ್ಲಿ ಕಾಣ ಸಿಗುತ್ತದೆ.

ಭತ್ತ, ತೆಂಗು, ಅಡಿಕೆ, ತರಕಾರಿ, ಸುಮಾರು 50 ಬಗೆಯ ಹಲಸಿನ ತಳಿಗಳು, 50ಕ್ಕೂ ಮಿಕ್ಕಿದ ಮಾವು, ಪುನರ್ಪುಳಿ ಮತ್ತಿತರ ಹಣ್ಣಿನ ಮರಗಳು ಅವರ ಜಾಗದಲ್ಲಿವೆ. ನೈಸರ್ಗಿಕ ಅರಣ್ಯ ಅವರ ಹಿತ್ತಲಿನಲ್ಲಿದೆ.

ಅವರು ಸಾಕುತ್ತಿರುವುದು ಹಳ್ಳಿ ಹಸುಗಳನ್ನು. ಅವರ ಮನೆ ಮತ್ತು ಹಟ್ಟಿ ಸಾಂಪ್ರದಾಯಿಕ ಕಟ್ಟಡಗಳು. ಅವರು ನಡೆಯುವುದು ಬರಿಗಾಲಿನಲ್ಲಿಯೇ. ಮೊಬೈಲನ್ನು ಬಳಸುವುದೇ ಇಲ್ಲ. ಅವರ ಅಳಿಯ ಕಾರು ಹೊಂದಿದ್ದಾರೆ. ಅವರೇ ಹೇಳುವಂತೆ, “ಅವರಲ್ಲಿ ಕಾರು ಇದೆ, ನನ್ನಲ್ಲಿ ಕಾಲು ಇದೆ”. ಸಾಲ ರಹಿತ, ಸಬ್ಸಿಡಿಗೆ ಆಸೆ ಪಡದ ಕೃಷಿಕರಿವರು. ಪ್ರಚಾರಪ್ರಿಯರಲ್ಲ. ಅವರ ಸಾಧನೆ ಗುರುತಿಸಿ ಹಲವು ಕಡೆ (ಖಾಸಗಿಯವರಿಂದ) ಸನ್ಮಾನ-ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.

ದೇವರಾಯರ ಬಳಿಯಿರುವ ಭತ್ತದ ಬೀಜದ ವೈಶಿಷ್ಟ್ಯತೆಗಳು:

ವಿವಿಧ ಬೆಳೆಗಳಿಗೆ, ಅಂದರೆ ಕಾರ್ತಿ, ಸುಗ್ಗಿ, ಕೊಳಕೆಗೆ ತಕ್ಕಂತೆ ವಿವಿಧ ಭತ್ತದ ತಳಿಗಳು ಅವರಲ್ಲಿವೆ.

ರಾಜ ಕಾಯಾಮೆ – 180 ದಿನಗಳು. ಎತ್ತರಕ್ಕೆ ಬೆಳೆಯುತ್ತದೆ. ತಿಂಡಿ ಮಾಡಲು, ಬೆಳ್ತಿಗೆ ಅಕ್ಕಿ ಮಾಡುವುದಕ್ಕೆ ಉತ್ತಮ.

ಮಸ್ಸೂರಿ – 175 ದಿನ. ಬೆಳ್ತಿಗೆ ಅಕ್ಕಿ. ದೋಸೆಗೆ ಉತ್ತಮ.

DSC_1094 DSC_1102
ಗಂಧಸಾಲೆ – 185 ದಿನ. ಪರಿಮಳಭರಿತ ಭತ್ತ/ಅಕ್ಕಿ. ಬೆಳ್ತಿಗೆ, ಪಲಾವ್, ಪಾಯಸಕ್ಕೆ ಉತ್ತಮ.

ಬಾಸ್ಮತಿ – 120 ದಿನ. ಪರಿಮಳಭರಿತ, ಬೆಳ್ತಿಗೆ.

DSC_1105ಮೊರಡ್ಡ – 90 ದಿನ. ದೊಡ್ಡ ಗಾತ್ರದ ಅಕ್ಕಿ. ಮೂರೂ ಬೆಳೆಗಳಿಗಾಗುತ್ತದೆ.

ಕುಂದಪುಲ್ಲನ್ – ಸಣ್ಣ ಅಕ್ಕಿ (ಕೊತ್ತಂಬರಿ ಗಾತ್ರ). ಪರಿಮಳದ್ದು.

ತೊನ್ನೂರು – 90 ದಿನ. ಕಜೆ ಅಕ್ಕಿ.

ಕರಿದಡಿ – 160 ದಿನ. ಕುಂದಾಪುರ ಮೂಲದ್ದು. ಕಜೆ.

ಮಸ್ಕತಿ – 115 ದಿನ. ಉಕ್ಡೊ, ಬೆಳ್ತಿಗೆ ಮಾಡಬಹುದು. ಬಹಳ ಸಮಯ ಬಾಳ್ವಿಕೆ ಬರುವ ಅಕ್ಕಿ.

ಕಣ್ವ – 120 ದಿನ. ಕುಚ್ಚುಲಕ್ಕಿ.

ಸಮುಂಗ – ಅವಲಕ್ಕಿ ಮಾಡಲು ಉತ್ತಮ.

ಸುಗ್ಗಿ ಕಾಯಾಮೆ – 130 ದಿನ. ಪಟ್ಲ ಗದ್ದೆಗಳಿಗೆ ಉತ್ತಮ. ಸುಗ್ಗಿ ಬೆಳೆಗೂ ಆಗುತ್ತದೆ. ಕಡಿಮೆ ಗೊಬ್ಬರ ಸಾಕು. ಇದರ ಗಂಜಿ ರುಚಿಕರ.

ಕರಿಯ ಬೇಬಿ – 135 ದಿನ. ರುಚಿಕರ. ಕುಚ್ಚುಲಕ್ಕಿ/ಕಜೆ ಅಕ್ಕಿ. ಬೈ ಉತ್ತಮ ಹುಲ್ಲು ದೊರೆಯುತ್ತದೆ.

ಟ್ರೆಕ್ಕಿಂಗ್ ಮಾಡಲು ಚಾರಣಿಗರಿಗೆ ಚಾಲೆಂಜಿಂಗ್ ಸ್ಪಾಟ್

ದಿಡುಪೆ ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು. ಈಗಲಾದರೂ ಮೂಲ ಸೌಕರ್ಯಗಳಲ್ಲಿ ವಿಶೇಷ ಸುಧಾರಣೆಯಾಗಿಲ್ಲ. ಅದನ್ನೆಲ್ಲಾ ಮರೆಯುವಂತೆ ಮಾಡುವುದು ಇಲ್ಲಿನ ಪ್ರಾಕೃತಿಕ ಸಂಪತ್ತು. ಅತ್ಯಂತ ಶ್ರೀಮಂತವಾದ ಪ್ರಕೃತಿ ಸೌಂದರ್ಯ ಇಲ್ಲಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವುದು ಈ ರಮಣೀಯತೆಗೆ ಮೂಲ ಕಾರಣ. ಎಲ್ಲಿ ನೋಡಿದರಲ್ಲಿ ಹಸಿರಿನ ಹೊದಿಕೆ. ನಿಸರ್ಗ ರಮಣೀಯ ದೃಶ್ಯಗಳು. ದಟ್ಟವಾದ ಅರಣ್ಯ, ಬೆಟ್ಟ, ಪರ್ವತಗಳು ಹಾಗೂ ನೀರಿನಿಂದ ತೊಯ್ದ ನೆಲ. ನೋಡುವವನ ಕಣ್ಣಿಗೆ ಹಬ್ಬವೇ ಹಬ್ಬ. ‘ದಿಡುಪೆ ಫಾಲ್ಸ್’ ಎಂದೇ ಕರೆಸಿಕೊಳ್ಳುವ ಆನಡ್ಕ ಜಲಪಾತ ಅತ್ಯಂತ ಆಕರ್ಷಣೆಯ ಕೇಂದ್ರ. ಪ್ರಕೃತಿಯನ್ನು ಸವಿಯಬೇಕೆನ್ನುವವರು, ಟ್ರೆಕ್ಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ಸ್ಥಳವಿದು. ಮಳೆಗಾಲದಲ್ಲಿ ಎಚ್ಚರ ವಹಿಸಬೇಕಾಗುತ್ತದೆ. ತಂಪಾದ ಪ್ರದೇಶ – ಎಚ್ಚರ ತಪ್ಪಿದರೆ ಜಿಗಣೆಗಳು ರಕ್ತ ಹೀರುತ್ತವೆ.

WG Mountain

DSC_1196
ಮನೆಯ ಅಂಗಳದಲ್ಲಿ ಚಾಪೆ ನೇಜಿ – ದೇವರಾಯ ರಾಯರ ಮತ್ತೊಂದು ವಿಶಿಷ್ಟತೆ

DSC_1194 DSC_1174

DSC_1303
ಪತ್ನಿ ಶಾರದಮ್ಮನವರೊಂದಿಗೆ ದೇವರಾಯ ರಾವ್
DSC_0956
ದೇವರಾಯರ ಹೊಸಿಲಿನಿಂದ ಕಾಣುವ ಬಲ್ಲಾಳರಾಯನ ದುರ್ಗ

Clouds_01

Clouds_02
ಮೋಡಗಳು ಪರ್ವತವನ್ನು ಆವಾಹಿಸುವ ಕ್ಷಣಗಳು
Devara_poses
ಸಂವಾದದಲ್ಲಿ ತೊಡಗಿರುವ ಕೃಷಿ ತಪಸ್ವಿಯ ವಿವಿಧ ಭಂಗಿಗಳು
DSC_1071
ಸಂದರ್ಶಕರಿಗೆ ಕೃಷಿಕನಿಂದ ಭತ್ತ ತಳಿಗಳ ಮಾಹಿತಿ – ದರ್ಶನ

DSC_1309

Gadai Fator
ವಿಶ್ವದ ಅದ್ಭುತ, ಬೆಳ್ತಂಗಡಿಯ ಹೆಮ್ಮೆ – ಗಡಾಯಿ ಕಲ್ಲು. ಬೆಳ್ತಂಗಡಿ ಪ್ರವೇಶಿಸುವವರಿಗೆ ಸ್ವಾಗತಿಸುವ ಭವ್ಯ ಕಲ್ಲಿನ ಪರ್ವತ. ಹಿನ್ನೆಲೆಯ ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಮಳೆಗಾಲದ ಮೋಡಗಳಿಂದ ಮರೆಯಾಗಿದೆ.

ದೇವರಾಯರನ್ನು ಸಂಪರ್ಕಿಸಲು ಇಚ್ಛಿಸುವವರು ಅವರ ವಿಳಾಸ ಮತ್ತು ಫೋನ್ ನಂಬರ್ ಬೇಕಿದ್ದಲ್ಲಿ ನಮಗೆ ಇಮೇಲ್ ಮಾಡಿ: budkuloepaper@gmail.com

(ಈ ಲೇಖನದಲ್ಲಿನ ಯಾವುದೇ ಮಾಹಿತಿ, ವಿವರ ಮತ್ತು ಚಿತ್ರಗಳನ್ನು ಅನುಮತಿಯಿಲ್ಲದೆ ಬಳಸುವುದು ನಿಷಿದ್ಧ. ಕಾಪಿರೈಟ್ ಕಾಯಿದೆ ಅನ್ವಯವಾಗುತ್ತದೆ.)

Copyright @ www.budkulo.com

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

Like us at: www.facebook.com/budkulo.epaper

1 comment

Leave a comment

Your email address will not be published. Required fields are marked *

Latest News