50 ವರುಷ ಶಿಕ್ಷಕಿಯಾಗಿ ನನ್ನ ಅನುಭವ: ಮೇರಿ ಟೀಚರ್‌ರ ಕೊನೆಯ ಬರಹ
ಮೊನ್ನೆ ಶನಿವಾರ ಸಪ್ಟೆಂಬರ್ 23ರಂದು ನಿಧನರಾದ ಬೆಳ್ತಂಗಡಿ ಸಂತ ತೆರೇಸಾ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಸುದೀರ್ಘ 50 ವರ್ಷಗಳ ಕಾಲ ಶಿಕ್ಷಕಿಯಾಗಿ ಜನಾನುರಾಗಿಯಾಗಿದ್ದ, ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯ, ನೆಚ್ಚಿನ ಮೇರಿ ಟೀಚರ್ ಅವರು ಕೆಲ ಸಮಯದ ಹಿಂದೆ ಬರೆದಿದ್ದ ಪುಟ್ಟ ಆತ್ಮ ಚರಿತ್ರೆ ಇದು. ಅದನ್ನು ಇಲ್ಲಿ ಯಥಾವತ್ತಾಗಿ ಕೊಡಲಾಗಿದೆ.
-ಸಂಪಾದಕ
ಮೇಲಿನ ಶೀರ್ಷಿಕೆ ನನ್ನಲ್ಲಿ ಅನೇಕ ಭಾವನೆಗಳನ್ನು ಸಮುದ್ರದ ಅಲೆಗಳು ಪುಟಿದೇಳುವಂತೆ ಮಾಡುತ್ತದೆ. ಪ್ರಥಮತಃ ನನಗೆ ವಿದ್ಯಾ ದಾನ ಮಾಡಿದ ನನ್ನ ಶ್ರೇಷ್ಠ ಗುರುಗಳು, ಒಂದನೇ ತರಗತಿಯಂದ ಎಸ್.ಎಸ್.ಎಲ್.ಸಿ. ವರೆಗೆ ನನ್ನನ್ನು ಬಹಳವಾಗಿ ಪ್ರೇರಣೆ ನೀಡಿ ನಾನೋರ್ವ ಉತ್ತಮ ಮಾನವಳಾಗಿ ಮಾಡಿದವರನ್ನು ನೆನಪಿಸಿ, ಅವರಿಗೆ ಹೃದಯದಿಂದ ದೀರ್ಘ ನಮಸ್ಕಾರ ಮಾಡುತ್ತಿದ್ದೇನೆ. ಅವರಿಗೆ ನಾನೇನೂ ಕಾಣಿಕೆ ಅಥವಾ ಗುರುದಕ್ಷಿಣೆ ನೀಡಲು ಸಾಧ್ಯವಿಲ್ಲ. ಏಕೆಂದರೆ ಅವರ್ಯಾರೂ ಈ ಜಗತ್ತಿನಲ್ಲಿ ಇಲ್ಲ. ದೇವರ ಪಾದವನ್ನು ಅವರು ಸೇರಿ ಆಗಿದೆ.
ಎರಡನೆಯದಾಗಿ ಸಂತ ತೆರೆಸಾ ಪ್ರೌಢ ಶಾಲೆಯಲ್ಲಿ ನಲ್ವತ್ತು ವರ್ಷಗಳಿಂದ ನನ್ನ ಬೋಧನೆಯನ್ನು ತಾಳ್ಮೆಯಿಂದ ಆಲಿಸಿ ಕಲಿತು, ಜ್ಞಾನಿಗಳಾಗಿ ಬೆಳೆದ ನನ್ನ ಸಹಸ್ರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಮ್ರತೆಯಿಂದ ಸಮಸ್ಕರಿಸುತ್ತಾ ಅವರಿಂದ ನನ್ನ ವ್ಯಕ್ತಿತ್ವದಲ್ಲಿಯೂ ವಿದ್ಯಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಆಗಿದೆ ಎಂದು ದೃಢಪಡಿಸುತ್ತಿದ್ದೇನೆ.
ಮೊದಲಾಗಿ ನಾನು ಶಿಕ್ಷಕಿಯಾಗಿ ಸೇರಿದ್ದು ಸಂತ ತೆರೆಸಾ ಬಾಲಕಿಯರ ಪ್ರೌಢ ಶಾಲೆ ಬೆಳ್ತಂಗಡಿ ಇಲ್ಲಿ, 1969ರಲ್ಲಿ. ಬಿ.ಎಡ್. ತರಬೇತಿ ಇಲ್ಲದೇ ನನ್ನನ್ನು ಶಿಕ್ಷಣ ಬೋಧನೆ ಮಾಡುವ ಕ್ಷೇತ್ರಕ್ಕೆ ನನ್ನಲ್ಲಿ ಉತ್ಸಾಹ ಮೂಡಿಸಿ ನನಗೆ ಪ್ರೋತ್ಸಾಹ ಕೊಟ್ಟ ಅರ್ಸುಲೈನ್ ಫ್ರಾನ್ಸಿಸ್ಕನ್ ಕೂಟದ ಧರ್ಮಭಗಿನಿಯರಾದ ವಂದನೀಯ ಕ್ಲಾಡಿಯಾರವರಿಗೆ ನನ್ನ ಕೊನೆ ಇಲ್ಲದ ನಮನಗಳು. 19ರ ವಯಸ್ಸಿನ ನಾನು ಬಲು ಉತ್ಸಾಹದಿಂದ ನನ್ನ ವಿದ್ಯಾರ್ಥಿನಿಯರಿಗೆ ವಿಜ್ಞಾನ ಹಾಗೂ ಇಂಗ್ಲಿಷ್ ಭಾಷೆಯನ್ನು ವಿವರಿಸಿ ಬೋಧಿಸಿದೆ. ಆ ಸಮಯದಲ್ಲಿ ವಿದ್ಯಾರ್ಥಿನಿಯರು ಮಾತ್ರ ಇದ್ದು, ವಿಧೇಯತೆ, ಮೌನತೆ ಆ ಮುಗ್ಧ ಮಕ್ಕಳಲ್ಲಿ ಧಾರಾಳವಾಗಿ ಇತ್ತು.
ಶಾಲೆ ನಡೆಯುವ ರೀತಿ, ವಿವಿಧ ದಾಖಲೆಗಳನ್ನು ಪರಿಶೀಲಿಸಲು ನಮ್ಮ ಶಾಲೆಗೆ ಬಂದ ಮಂಗಳೂರು ವಿದ್ಯಾ ಕ್ಷೇತ್ರದ (D.D.P.I. Office) ಪರಿವೀಕ್ಷಕರು ಬಿ.ಎಡ್. ತರಬೇತಿ ಇಲ್ಲದ ಶಿಕ್ಷಕಿಗೆ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಇಂಗ್ಲಿಷ್ ಬೋಧನೆ ಮಾಡಲು ಕೊಡುವುದು ಸರಿಯಲ್ಲ ಎಂದು ಮುಖ್ಯೋಪಾಧ್ಯಾಯಿನಿಯವರಲ್ಲಿ ತನ್ನ ಅಭಿಪ್ರಾಯ ಸೂಚಿಸಿದಾಗ (ಮಾನ್ಯ ಮುಖ್ಯೋಪಾಧ್ಯಾಯಿನಿ ವಂದನೀಯ ಧರ್ಮಭಗಿನಿ ಕ್ಲಾಡಿಯರವರು) ಆ ಧರ್ಮಭಗಿನಿಯು ನನಗೆ ಆ ಪರಿವೀಕ್ಷಕರ ಎದುರಿನಲ್ಲೇ ಇಂಗ್ಲಿಷ್ ಬೋಧನೆ ಮಾಡಲು ಆಜ್ಞಾಪಿಸಿದರು. ಅಂದಿನ ಪದ್ಯ ಈಗಲೂ ನೆನಪಿದೆ. Where the mind is without fear… ರವೀಂದ್ರನಾಥ್ ಟಾಗೋರರ ದೇಶ ಪ್ರೇಮದ ಗೀತೆಯನ್ನು ನನ್ನಿಂದಾದಷ್ಟು ಪರಿಣಾಮಕಾರಿಯಾಗಿ ವಿವರಿಸಿದೆ. ನನ್ನ ಪಾಠದ ಕೊನೆಯಲ್ಲಿ ಪರಿವೀಕ್ಷಕರ ಅಭಿಪ್ರಾಯ ಹೀಗಿತ್ತು – “ಇಂಗ್ಲಿಷ್ ಬೋಧನೆ ಪರಿಣಾಮಕಾರಿಯಾಗಿದೆ. ಈ ಶಿಕ್ಷಕಿ ಬಿ.ಎಡ್. ಮಾಡಿದರೆ ಅತ್ಯುತ್ತಮ.” ನನ್ನ ಉತ್ಸಾಹ, ಸಂತೋಷ ಗರಿಗೆದರಿತ್ತು. ಜೊತೆಗೆ ಬಿ.ಎಡ್. ಮಾಡಲು ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಿತ್ತು.
ಬಿ.ಎಡ್. ಮಾಡಲು ನನ್ನ ಅಣ್ಣನ ಪ್ರೋತ್ಸಾಹ, ಅಕ್ಕಂದಿರ ಪ್ರಾರ್ಥನೆ, ತಂದೆ ತಾಯಿಯವರ ಆಶೀರ್ವಾದ ಕಾರಣವಾಗಿತ್ತು. ಮೊದಲೇ ಮೂರು ವರುಷದ ಬೋಧನೆ ಮಾಡಿದ ಅನುಭವ ಇದ್ದುದರಿಂದ ಬಿ.ಎಡ್. ಕಲಿಕೆ ಅಷ್ಟೊಂದು ಕಷ್ಟವಾಗಲಿಲ್ಲ. ಸುಮಾರು 100 ಮಂದಿ ತರುಣಿಯರು ಒಟ್ಟು ಸೇರಿ ಬಿ.ಎಡ್. ವ್ಯಾಸಂಗ ಚೆನ್ನಾಗಿ ಮುಗಿಸಿದೆವು. ಬಿ.ಎಡ್.ನಲ್ಲಿ ಅತ್ಯುತ್ತಮ ಫಲಿತಾಂಶ ನನ್ನದಾಯಿತು. ಪರೀಕ್ಷೆಯ ಬರವಣಿಗೆಯಲ್ಲಿಯೂ, ಬೋಧನಾ ಕ್ರಮದಲ್ಲಿಯೂ ನನಗೆ ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಸಿಕ್ಕಿತು.
ಅಂದಿನಿಂದ ನನ್ನ ಬೋಧನಾ ದಿನಚರಿ ಅದೇ ಶಾಲೆಯಾದ ಸಂತ ತೆರೆಸಾ ಪ್ರೌಢ ಶಾಲೆಯಲ್ಲಿಯೇ ಪ್ರಾರಂಭವಾಯಿತು. ಸುಮಾರು 37 ವರುಷ ನಿರಂತರವಾಗಿ ಸಾಗಿತು. ಬಹು ಬೇಗನೇ ಹುಡುಗರ ಆಗಮನದಿಂದ ಸಂತ ತೆರೆಸಾ ಬಾಲಕಿಯರ ಪ್ರೌಢ ಶಾಲೆಯು ಸಂತ ತೆರೆಸಾ ಪ್ರೌಢ ಶಾಲೆಯಾಗಿ ಬದಲಾಯಿತು. ಆರಂಭದಲ್ಲಿ, ‘ಅಯ್ಯೋ, ಹುಡುಗರನ್ನು ಹೇಗೆ ಅಂಕಿತದಲ್ಲಿಡುವುದು? ಅವರಿಗೆ ಪಾಠಗಳ ಬೋಧನೆ ಹೇಗೆ ಮಾಡುವುದು?’ ಎಂಬ ಅಳುಕಿನ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಉದ್ಭವಿಸಿದವು. ಆದರೆ ಆ ಭಯ ಅನಗತ್ಯ ಎಂದು ನನ್ನ ದೀರ್ಘ ಅವಧಿಯಲ್ಲಿ ಮನದಟ್ಟಾಯಿತು. ಹುಡುಗರನ್ನು ಪ್ರೀತಿಯಿಂದ, ತಿಳುವಳಿಕೆಯಿಂದ, ಸರಿಯಾದ ಶಿಸ್ತು ನಡತೆಯಿಂದ ವರ್ತಿಸುವಂತೆ ಮಾಡಬಹುದು ಎಂದು ನನಗೆ ಮನವರಿಕೆಯಾಯಿತು. ಹುಡುಗರ ಆಗಮನದಿಂದ ತರಗತಿಯಲ್ಲಿ ಬೋಧನೆ ಚೆನ್ನಾಗಿ ನಡೆಯುತ್ತಿತ್ತು. ನನ್ನ ಗಟ್ಟಿ ಸ್ವರ ಹಾಗೂ ನನ್ನ ಬೆತ್ತದ ರುಚಿ ಹುಡುಗರನ್ನೂ ಹುಡುಗಿಯರನ್ನೂ ಶಿಸ್ತಿನಲ್ಲಿಡಲು ಸಹಕರಿಸಿತು!
ನನ್ನ ಬೆತ್ತದ ರುಚಿ ಮತ್ತದರ ಪರಿಣಾಮ!
ಇಲ್ಲೊಂದು ಘಟನೆ ನಾನು ಉಲ್ಲೇಖಿಸುತ್ತಿದ್ದೇನೆ. ನನ್ನ ತರಗತಿಯ ವಿದ್ಯಾರ್ಥಿಯೋರ್ವ ಶಾಲೆಗೆ ಹಾಜರಾಗುವ ಬದಲು ಅವನ ಕೌಟುಂಬಿಕ ವ್ಯವಹಾರಕ್ಕಾಗಿ ಕಾಸರಗೋಡಿಗೆ ಹೋದ. ಮಾರನೇ ದಿನ ರಜೆ ಅರ್ಜಿ ತಂದ. “ಸೌಖ್ಯವಿರಲಿಲ್ಲ” ಎಂದು ಬರೆದ ಸುಳ್ಳು ಕಾರಣ ನನ್ನನ್ನು ಕೆಂಡಾಮಂಡಲ ಆಗುವಂತೆ ಮಾಡಿತು. ಅವನ ಎರಡೂ ಅಂಗೈ ಹಾಗೂ ಕೈಗಳಿಗೆ ಸರಿಯಾಗಿ ಪೆಟ್ಟು ಕೊಟ್ಟೆ. ಅನಂತರ ಪಾಠ ಮುಗಿಸಿ ತರಗತಿಯಿಂದ ಹೊರ ನಡೆದೆ. ವಿರಾಮದ ಒಂದು ಅವಧಿ ಮುಗಿದ ನಂತರ ಆ ವಿದ್ಯಾರ್ಥಿ ಏನು ಮಾಡುತ್ತಾನೆ ನೋಡೋಣ ಎಂದು ಅವನ ತರಗತಿಗೆ ಹೋಗಿ ಅವನನ್ನು ಹೊರಗೆ ಕರೆದೆ. ಅವನ ಎರಡೂ ಕೈಗಳ ಬಿಳಿಯ ಚರ್ಮವು ಕೆಂಪು ಕೆಂಪಾಗಿತ್ತು. ನಾನೇ ಹೆದರಿದೆ. ಆಫೀಸು ಕೋಣೆಯಿಂದ ಐಯೋಡೆಕ್ಸ್ ತಂದು ಅವನ ಎರಡೂ ಕೈಗಳಿಗೆ ಸವರಿದೆ. ಆಗ ಅವನು ಹೇಳಿದ ಮಾತು, “ಪರವಾಗಿಲ್ಲ ಟೀಚರ್. ನನ್ನ ತಪ್ಪಿಗಾಗಿ ನೀವು ಹೊಡೆದದ್ದಲ್ಲವೇ?” ಆ ಮಾತುಗಳು ಅವನ ಹಿರಿತನ ನನಗೆ ಸಾಬೀತುಪಡಿಸಿದವು. ಮನದಲ್ಲಿ ಅವನ ಕ್ಷಮಾ ಗುಣ ಅವನನ್ನು ಮೇಲಿನ ಸ್ಥಾನದಲ್ಲಿಟ್ಟಿತು. ಇನ್ನೂ ಮೂರು ನಾಲ್ಕು ಮಂದಿ ಹುಡುಗರಿಗೆ ಇದೇ ರೀತಿ ಪೆಟ್ಟು ಕೊಟ್ಟು ನನ್ನ ಕೋಪವನ್ನು ಹೊರ ಹಾಕಿದ್ದೇನೆ. ಈ ಸನ್ನಿವೇಶಗಳಲ್ಲಿ ನಾನು ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವೆಂದರೆ ನಾನು ಹೊಡೆದಂತಹ ವಿದ್ಯಾರ್ಥಿಗಳನ್ನು ಮಾರನೇ ದಿನ ಕರೆದು ನನಗೆ ಕೋಪ ಬರಲು ಕಾರಣವೇನೆಂದು ಅವರಿಗೆ ತಿಳಿಯಪಡಿಸುತ್ತಿದ್ದೆ. ಹೀಗೆ ಜೋರಾಗಿ ಹೊಡೆದದ್ದು ನನ್ನ ತಪ್ಪು. ಇದರ ಬಗ್ಗೆ ನಾನು ನೊಂದುಕೊಂಡಿದ್ದೇನೆ. ನನ್ನ ಕೋಪಕ್ಕೆ ಬಲಿಯಾದ ಈ ಹುಡುಗರು ಬದುಕಿನಲ್ಲಿ ಯಶಸ್ವಿ ಜೀವನ ನಡೆಸಲಿ ಎಂದು ದೇವರೊಡನೆ ಪ್ರಾರ್ಥಿಸುತ್ತಲೇ ಇದ್ದೇನೆ.
ನನ್ನ ತಪ್ಪಿನ ಬಗ್ಗೆ ಹೇಳಿದಾಗ ನನ್ನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರತಿಭೆಗಳನ್ನು ಹೊರ ತರಲು ನಾನು ಮಾಡಿದ ಪ್ರಯತ್ನ ನನಗೆ ನೆನಪಿಗೆ ಬರುತ್ತಾ ಇದೆ. ನನ್ನ ತರಗತಿಯಲ್ಲಿ ವಿಶೇಷವಾಗಿ ನೀತಿಬೋಧೆಯ ಅವಧಿಯಲ್ಲಿ ಹಾಗೂ ಇಂಗ್ಲಿಷ್ ಕವನದ ಪಠನ, ಒಂದೇ ಮಾತಿನಲ್ಲಿ ಅಥವಾ ರಾಗದಲ್ಲಿ ಹಾಡುವಂತೆ ನಾನು ಪ್ರಯತ್ನಿಸಿದ್ದೇನೆ. ಅನೇಕ ನನ್ನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಬಗ್ಗೆ ನನಗೆ ತಿಳಿಸಿದ್ದಾರೆ. ಖಂಡಿತವಾಗಿಯೂ ನನ್ನ ಶಿಕ್ಷಕ ವೃತ್ತಿಯ ಸಂತೋಷಗಳಲ್ಲಿ ಇದೊಂದಾಗಿದೆ. ಓರ್ವ ವಿದ್ಯಾರ್ಥಿ (ಈಗ ಅವನು ಸ್ಟುಡಿಯೋ ಇಟ್ಟುಕೊಂಡಿದ್ದಾನೆ) ತರುಣನಾಗಿ ನನಗೊಮ್ಮೆ ಸಿಕ್ಕಿದ. ಅವನೇ ಪರಿಚಯ ಮಾಡಿಸಿ ಹೀಗೆ ಹೇಳಿದ: “ಟೀಚರ್ ನೀವು ಮಾಡಿದ ಇಂಗ್ಲಿಷ್ ಪಾಠ ಇಲ್ಲವೇ ಜೀವಶಾಸ್ತ್ರ ಪಾಠ ನನಗೆ ನೆನಪಿಲ್ಲ. ಆದರೆ ನೀತಿಬೋಧೆಯ ಅವಧಿಗೆ ನೀವು ಹೇಳುತ್ತಿದ್ದ ಬುದ್ಧಿವಾದ, ಕಿರು ನಾಟಕಗಳ ಮೂಲಕ ನಮ್ಮಲ್ಲಿ ಅಳವಡಿಸಿದ ಸದ್ಗುಣಗಳು, ದೇವರಲ್ಲಿ ಭಕ್ತಿ, ವಿಶ್ವಾಸವನ್ನು ಸದಾ ನೆನಪಿಸುತ್ತಲೇ ಇದ್ದೇನೆ.”
ಹೀಗೆ ವರುಷಗಳು ಉರುಳಿದವು. 1975ರ ನವೆಂಬರ್‍ನಲ್ಲಿ ನನ್ನ ಮದುವೆಯಾಗಿ ನಾಲ್ಕು ಮಂದಿ ಮಕ್ಕಳು ನನಗೆ ಜನಿಸಿದರು. ನನ್ನವರು ಅವರ ಪ್ರೀತಿ ಹಾಗೂ ಸಹನೆಯಿಂದ ನನಗೆ ಅತ್ಯುತ್ತಮ ಸಾಂಗತ್ಯ ನೀಡಿದ್ದಾರೆ. ನಾಲ್ಕು ಮಂದಿ ಮಕ್ಕಳೂ ಕೂಡಾ ಪದವೀಧರರು ಮಾತ್ರ ಅಲ್ಲ ಉನ್ನತ ಶಿಕ್ಷಣವನ್ನೂ ಪಡೆದರು.
ಇನ್ನು ನನ್ನ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅವರವರ ಜೀವನದಲ್ಲಿ ಯಶಸ್ವಿಯನ್ನು ಪಡೆದು ಅರ್ಥಭರಿತ, ಸ್ವಾರಸ್ಯಪೂರ್ಣ ಜೀವನವನ್ನು ನಡೆಸಲಿ ಎಂದು ಹಾರೈಸುತ್ತೇನೆ. ಇಲ್ಲಿ ನನಗೆ ತುಂಬಾ ತೃಪ್ತಿ ಕೊಡುವ ವಿಚಾರವೆಂದರೆ ನಿವೃತ್ತಿಯಾಗಿ ಎಪ್ಪತ್ತರ ಪ್ರಾಯದಲ್ಲಿ ನಾನಿದ್ದರೂ ನನಗೆ ಭೇಟಿಯಾದ ಎಲ್ಲಾ ನನ್ನ ವಿದ್ಯಾರ್ಥಿಗಳು, ಯಶಸ್ವಿ, ಅರ್ಥಪೂರ್ಣ ಜೀವನ ನಡೆಸುತ್ತಿದ್ದಾರೆ ಎಂದು ತಿಳಿದು ನಾನು ಸದಾ ನಗುನಗುತ್ತಲೇ ಇರುತ್ತೇನೆ. ನಾನು ನನ್ನ ಬಳಿ ಬಂದ ನನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸದಾ ನೆಮ್ಮದಿ, ಶಾಂತಿಯಿಂದ ಬಾಳಲಿ ಎಂದು ಹಾರೈಸುತ್ತೇನೆ. ಶಿಸ್ತುಬದ್ಧ ಜೀವನ ಅವರ ಭವಿಷ್ಯದಲ್ಲಿ ಅವರು ಉತ್ತಮವಾಗಿ ಜೀವಿಸಲು ನೆರವಾಗುವಂತೆ ನಾನು ಕಠಿಣವಾಗಿ ಅವರೊಡನೆ ವರ್ತಿಸಿದ್ದೇನೆ. ಈ ನನ್ನ ನಡತೆಗೆ ಅವರ ಕ್ಷಮೆ ಇರಲೆಂದು ಆಶಿಸುತ್ತೇನೆ.
ನನ್ನ ಮೆಚ್ಚಿನ ಸಹೋದ್ಯೋಗಿಗಳ ನೆನಪು
ಈಗ ಇನ್ನೊಂದು ಪುಟ ತೆರೆಯುತ್ತದೆ. ನನಗೆ ಶಿಕ್ಷಕಿಯಾಗಲು ಪ್ರೇರಣೆ ಕೊಟ್ಟ, ಮಾರ್ಗದರ್ಶನ ನೀಡಿದ ಅರ್ಸುಲೈನ್ ಫ್ರಾನ್ಸಿಸ್ಕನ್ ವಿದ್ಯಾ ಸಂಸ್ಥೆಗೆ, ನನ್ನನ್ನು ಉತ್ತಮ ಶಿಕ್ಷಕಿಯಾಗಿ ರೂಪಿಸಿದ ಮುಖ್ಯೋಪಾಧ್ಯಾಯಿನಿಯವರಾಗಿ ಆಡಳಿತ ಮಂಡಳಿ, ನನ್ನ ಅನೇಕ ಮುಖ್ಯೋಪಾಧ್ಯಾಯಿನಿಯವರಿಗೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ. ಇಲ್ಲೊಂದು ಇನ್ನೊಂದು ಆಳವಾದ ನೆನಪು, ಕೃತಜ್ಞತೆಯಿದೆ. ಪ್ರೀತಿ, ಸಂತೋಷದಿಂದ ಮುಂದಿಡುತ್ತೇನೆ. ನನ್ನ ಜೊತೆ ಅಧ್ಯಾಪಕರಾಗಿ, ತಮ್ಮ ವೈವಿಧ್ಯಮಯ ಬೋಧನೆಯಿಂದ ಈ ಎಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ರೂಪಿಸಿದ ನನ್ನ ಆತ್ಮೀಯ ಸಹೋದ್ಯೋಗಿಗಳನ್ನು ನಾನು ಸದಾ ಶಿರಬಾಗಿ ನಮಿಸುತ್ತೇನೆ. ಅವರ ಸಾಂಗತ್ಯಕ್ಕಾಗಿ ವಿನಯತೆಯಿಂದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಥಟ್ಟನೇ ನೆನಪಿಗೆ ಬರುವುದು ಬಹುಮುಖ ಪ್ರತಿಭೆಯ ಸರ್ ನೀಲಕಂಠ ಭಟ್, ಮುಂಡಾಜೆ ಇವರು. ಇವರು Self made man. ನಳಪಾಕನಾಗಿ ಕೆಲಸ ಮಾಡಿದರೂ ಪರೀಕ್ಷೆಯಲ್ಲಿ ಮುಗ್ಗರಿಸಿದರೂ ಹಠದಿಂದ ಎಸ್.ಎಸ್.ಎಲ್.ಸಿ. ಮುಗಿಸಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದರು. ಅವರು ಬೆಳೆದು ಬಂದ ರೀತಿ ಒಂದು ಯಶೋಗಾಥೆ. ಅವರ ಹೃದಯ ಕೂಡಾ ವಿಶಾಲವಾಗಿದ್ದು, ನನ್ನನ್ನು ಪ್ರೇರೇಪಿಸಿದ ಸದ್ಗುಣಗಳಿಂದ ಕೂಡಿತ್ತು. ಅನೇಕ ಉದಾಹರಣೆಗಳಲ್ಲಿ ಒಂದು ಕೊಡುವುದಾದರೆ ಒಮ್ಮೆ (ನಾವಿಬ್ಬರು ಶಾಲೆಗೆ ಬೆಳಿಗ್ಗೆ ಅಸೆಂಬ್ಲಿಗೆ ತಡ ಮಾಡಿ ಬರುವುದೇ ಜಾಸ್ತಿ) ಮಾನ್ಯ ಸಿಸ್ಟರ್ ಕ್ಲಾಡಿಯಾ ಅವರ ಶಿಸ್ತುಬದ್ಧತೆಯನ್ನು ಉದಾಹರಣೆಯಾಗಿ ಕೊಟ್ಟು ನಾವು ಶಾಲಾ ಅಸೆಂಬ್ಲಿಗೆ ಮಕ್ಕಳಿಗೆ ಶಿಸ್ತಿನ ಮಹತ್ವ ತೋರಿಸಲು ತಡ ಮಾಡದೇ ಅಸೆಂಬ್ಲಿಗೆ ಕ್ಲಪ್ತ ಸಮಯಕ್ಕೆ ಹಾಜರಿರಬೇಕೆಂದು ಕಟ್ಟುನಿಟ್ಟಿನ ಮಾತಿನಿಂದ ಹೇಳುತ್ತಿದ್ದರು. ಆದರೆ ನಾವು ಅವರಿಗೆ ನಿರಾಶೆ ಕೊಟ್ಟಿದ್ದೇ ಜಾಸ್ತಿ. ಒಂದು ದಿನ, ನಾನೇನೋ ಅಸೆಂಬ್ಲಿಗೆ ಬೇಗ ತಲುಪಿದ್ದೆ. ಆದರೆ ನಮ್ಮ ಕನ್ನಡ ಪಂಡಿತರು ಅವರ ದ್ವಿಚಕ್ರ ವಾಹನ ಚಲಾಯಿಸಿ, ಅಸೆಂಬ್ಲಿಗೆ ತಡ ಮಾಡಿ ಸೇರಿದರು. ನಮ್ಮ ಮಾನ್ಯ ಸಿಸ್ಟರ್ ಕ್ಲಾಡಿಯಾ ಕೋಪದಿಂದ ಕಿಡಿಕಿಡಿಯಾಗಿ, ಅವರಿಗೆ ಕಟುವಾಗಿ ಬೈದರು. ಸಾಯಂಕಾಲ ಆಗುವಾಗ ಶ್ರೀ ಕೆ.ಎನ್. ಭಟ್ ನನ್ನ ಹತ್ತಿರ ಬಂದು, “ನಾನು ಮಧ್ಯಾಹ್ನ ಪೇಟೆಗೆ ಹೋಗಿ ಪ್ರಭಾತ್ ಸ್ಟೋರಿಗೆ ಹೋಗಿ ಬಂದೆ” ಅಂದರು. ಮಾತ್ರವಲ್ಲ ಮುಖ್ಯೋಪಾಧ್ಯಾಯಿನಿಯವರ ಮನ ಒಲಿಸಿ ಚಿಕ್ಕ ಚಹಾ ಕೂಟ ಏರ್ಪಡಿಸಲಾಗಿದೆ ಎಂದರು. ಕಾರಣವೇನೆಂದು ಕೇಳಿದಾಗ ಇಂದು ಅವರ ಜನ್ಮ ದಿನ. ಅವರಿಗೆ ಶುಭವನ್ನು ಕಾಣಿಕೆಯ ಮೂಲಕ ಅರ್ಪಿಸಬೇಕು ಎಂದರು. ಸರ್‌ರವರ ವಿಶಾಲ ಮನೋಭಾವ, ಕ್ಷಮಾಗುಣ, ಮಗುವಿನಂತಹ ಮುಗ್ಧತೆ ನಾನೆಂದಿಗೂ ಮರೆಯಲಿಕ್ಕಿಲ್ಲ.
ಇನ್ನೊಮ್ಮೆ ನಾನು ಒಂಬತ್ತನೇ ತರಗತಿಗೆ ಇಂಗ್ಲಿಷ್ ಬೋಧನೆ ಮಾಡುತ್ತಿದ್ದೆ. ಆಂಗ್ಲ ಭಾಷೆಯಲ್ಲಿ ನನ್ನ ವಿದ್ಯಾರ್ಥಿನಿಯರು ಪಾಂಡಿತ್ಯ ಪಡೆಯಬೇಕೆಂದು ನನ್ನ ಆಸೆಯಾಗಿತ್ತು. ಹಾಗಾಗಿ ಕಟ್ಟುನಿಟ್ಟಿನಿಂದ ಅವರೊಡನೆ ನಾನು ಇಂಗ್ಲಿಷ್‍ನಲ್ಲೇ ಮಾತನಾಡುತ್ತಿದ್ದೆ. ಅವರು ನನಗೆ ಇಂಗ್ಲಿಷ್‍ನಲ್ಲಿಯೇ ಉತ್ತರ ಕೊಡಬೇಕೆಂದು ಆಜ್ಞಾಪಿಸಿದ್ದೆ. ಒಮ್ಮೆ ಆಂಗ್ಲ ಭಾಷೆಯ ಕಾಪಿ ಬರೆಯುವ ಅಭ್ಯಾಸವನ್ನು ಎಲ್ಲರ ಕಾಪಿ ಪುಸ್ತಕದಲ್ಲಿ ಕಂಡಾಗ ಒಂದಿಬ್ಬರು ಏನೂ ತಪ್ಪಿಲ್ಲದೆ ಅಚ್ಚುಕಟ್ಟಾಗಿ ಬರೆದಿದ್ದರು. ಅದರಲ್ಲಿ ಗುಲಾಬಿ ಎಂಬವರ ಕೈ ಬರಹ ಬಹಳ ಚೆನ್ನಾಗಿತ್ತು. ಅವಳನ್ನು ಹತ್ತಿರ ಕರೆದು, “Congrats. You have written well. From which school do you come?” ಎಂದು ವಿಚಾರಿಸಿದೆ. ಪಾಪ ಆ ಹುಡುಗಿಗೆ ನನ್ನ ಇಂಗ್ಲಿಷ್ ಪ್ರಶ್ನೆಗಳಿಗೆ ದೀರ್ಘ ಉತ್ತರ ಕೊಡಲಿಕ್ಕಾಗಲಿಲ್ಲ. ಅವಳು ‘ಕುವೆಟ್’ ಎಂದು ಉತ್ತರಿಸಿದಳು. ನಾನು ಆಗ ಇಂಗ್ಲಿಷ್‍ನಲ್ಲಿಯೇ, “You write so beautifully. But why don’t you get good marks in English?” ಎಂದು ಕೇಳಿದೆ. ಅವಳು ಪಾಪ ಕಕ್ಕಾಬಿಕ್ಕಿಯಾಗಿ ತಲೆ ಕೆಳಗೆ ಹಾಕಿ ನಿಂತುಕೊಂಡಳು. ಆ ಪೀರಿಯೆಡ್‍ನ ಗಂಟೆ ಬಾರಿಸಲ್ಪಟ್ಟಿತ್ತು. ನಾನು ಸ್ಟಾಫ್ ರೂಮ್‍ಗೆ ಶಿಕ್ಷಕರ ಕೊಠಡಿಗೆ ಹೋದೆ. ಅಲ್ಲಿ ನನಗೆ ಮೊದಲು ಸಿಕ್ಕಿದ್ದೇ ಶ್ರೀ ಶಿರಾಡಿಸಾಲ್ ಅವರು. ಅವರೊಡನೆ ನಾನು ಹುಡುಗಿಯೊಡನೆ ಇಟ್ಟ ಪ್ರಶ್ನೆಯನ್ನೇ ಕೇಳಿದೆ. ಅವರು ನನಗೆ ಉತ್ತರ ಕೊಡುವ ಬದಲು ಬಿದ್ದು ಬಿದ್ದು ನಕ್ಕರು. ನನಗೆ ಕಸಿವಿಸಿಯಾಯಿತು, ನನ್ನ ನಿರಾಶೆಯನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲವಲ್ಲಾ ಎಂದು. ಅವರ ನಗು ಕಡಿಮೆಯಾದ ನಂತರ ಅವರು ಹೇಳಿದ ಉತ್ತರ ಕೇಳಿ ನಾನೂ ಧಾರಾಳವಾಗಿ ನಕ್ಕೆ. ಅವರು ಹೇಳಿದ್ದು: “ಅಯ್ಯೋ ಮೇರಿ, ಇದು ಹೊರ ದೇಶದ ಕುವೈಟ್ ಅಲ್ಲ. ಇದು ನಮ್ಮ ಶಾಲೆಯ ಪಕ್ಕದಲ್ಲಿರುವ ಗುರುವಾಯನಕೆರೆಯ ಬಳಿಯ ಕುವೆಟ್ಟು ಗ್ರಾಮ.” ನಾನೂ ಬಿದ್ದು ಬಿದ್ದು ನಕ್ಕೆ. ಇಂತಹ ಅನೇಕ ಹಾಸ್ಯಭರಿತ ಘಟನೆಗಳು, ಮಾತುಗಳು ನನ್ನ ಮನದಲ್ಲಿವೆ. ಎಲ್ಲಾ ಬರೆಯಲು ಹೋದರೆ ಹತ್ತು ಪುಸ್ತಕಗಳಲ್ಲ ನೂರಾರು, ಇನ್ನೂರು ಪುಟದ ಪುಸ್ತಕಗಳು ಬೇಕೋ ಏನೋ!
ಒಂದು ಮಾತಂತೂ ನಿಜ. ನನ್ನ ಸಹೋದ್ಯೋಗಿ ಬಂಧುಗಳಿಂದ ನಾನು ತುಂಬಾ ಕಲಿತಿದ್ದೇನೆ. ಇನ್ನೂ ಇತರ ಸಹೋದ್ಯೋಗಿಗಳ ನೆನಪು ಮಾಡುವುದಾದರೆ, ವಿಜ್ಞಾನವೇ ಸರ್ವಸ್ವ ಎಂದು ಭಾವಿಸುತ್ತಿದ್ದ, ಈಗಲೂ ಭಾವಿಸುವ ಸರ್ ಜಾಯ್ ಪಿ.ಪಿ. ಎಲ್ಲಾ ವಿದ್ಯಾರ್ಥಿಗಳು ಅವರ ಪಾಠಕ್ಕೆ ಹಾತೊರೆಯುತ್ತಿದ್ದರು. ಒಂದು ಕಾರಣ ಅವರ ತರಗತಿ ಎಂಬ ಜೈಲಿನಿಂದ ಮಕ್ಕಳೆಲ್ಲಾ ಪ್ರಯೋಗ ಶಾಲೆಗೆ ದೌಡಾಯಿಸುತ್ತಿದ್ದರು. ಬಹಳ ರಸಮಯವಾಗಿ, ಶಿಸ್ತುಬದ್ಧವಾಗಿ ಸೂರ್ಯ ಮತ್ತು ಗ್ರಹಗಳು, ಸಾಂದ್ರತೆ, ಸಾಪೇಕ್ಷ ಸಾಂದ್ರತೆ, ನ್ಯೂಟನ್ನನ ನಿಯಮಗಳು, ಪ್ರಯೋಗಗಳು ಹಾಗೂ ಇನ್ನಿತರ ಜಟಿಲ ವಿಷಯಗಳನ್ನು ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವಂತೆ ಅವರು ಬೋಧನೆ ಮಾಡುತ್ತಿದ್ದರು.
ಮತ್ತೊಬ್ಬರು ನನ್ನ ಸಹೋದ್ಯೋಗಿ ಶ್ರೀ ವೈ. ಮುರುಳೀಧರ್ ರಾವ್. ಇವರು ಪ್ರಾರಂಭದಲ್ಲಿ ಜೀವಶಾಸ್ತ್ರ ಹೇಳಿ ಕೊಟ್ಟರು. ಅವರ ಹಿಂದಿ ಬೋಧನೆ ಮಕ್ಕಳಿಗೆ ರಸದೂಟವಾಗಿರುತ್ತಿತ್ತು. ನಾನು ವಿವರಿಸುವುದಕ್ಕಿಂತ, ನಮ್ಮ ಶಾಲೆಯ ಅವರ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಅನುಭವ ಕೇಳಿದರೆ ಇನ್ನೂ ಅನೇಕ ರಸಮಯ ಘಟನೆಗಳು ನಿಮಗೆ ಗೊತ್ತಾಗುತ್ತವೆ.
ಅನಂತರದ ಸಾಲಿನಲ್ಲಿ ಇರುವವರು ದಿವಂಗತ ತಾರಾಮಲೆ ಟೀಚರ್. ನಮ್ಮ ಶಾಲೆಯಲ್ಲಿ ಅನೇಕ ವರುಷಗಳ ಸಾರ್ಥಕ ಸೇವೆ ಸಲ್ಲಿಸಿ, ತೊಕ್ಕೊಟ್ಟುವಿನ ಚೆಂಬುಗುಡ್ಡೆ ಪ್ರದೇಶದಲ್ಲಿ ಮಕ್ಕಳ ಜೊತೆ ನಿವೃತ್ತರಾಗುವ ತನಕ ಸೇವೆ ಸಲ್ಲಿಸಿದರು. ಇವರದು ಗಂಭೀರ ಸ್ವಭಾವ, ಆದರ್ಶ ಗೃಹಿಣಿ, ಮೆದು ಮಾತು. ಅವರ ಮಕ್ಕಳು ಅವರ ಸಮಾಜ ವಿಜ್ಞಾನದ ವಿವರಣೆ, ಭೂಪಟ, ಭೋಗೋಳ ಎಲ್ಲವನ್ನೂ ಮೌನವಾಗಿ ಆಲಿಸುತ್ತಿದ್ದರು. ಶ್ರೀ ಬೆಲ್ಚಡ್‍ರವರ ಧರ್ಮಪತ್ನಿಯಾಗಿ ಸಾರ್ಥಕ ಜೀವನ ನಡೆಸಿದ್ದಾರೆ. ಎರಡು ವರುಷಗಳ ಹಿಂದೆ ಅವರು ದೈವಾಧೀನರಾದರು ಎಂದು ಹೇಳಲು ಬಹಳ ಬೇಸರ. ಆದರೆ ಒಂದು ತೃಪ್ತಿ. ದೇವರೊಡನೆ ಪ್ರತಿದಿನ ಅವರು ಅವರ ಕುಟುಂಬಕ್ಕಾಗಿ, ನಮಗಾಗಿ, ಪರಿಚಯವಿರುವ ಎಲ್ಲರಿಗಾಗಿ ವಿನಂತಿಸುತ್ತಾರೆ ಎಂಬುದು ಖಂಡಿತ.
ಇನ್ನೂ ಅನೇಕ ಶಿಕ್ಷಕ ಶಿಕ್ಷಕಿಯರು ವೃತ್ತಿ ಬಾಂಧವ್ಯದಿಂದ ನನ್ನೊಟ್ಟಿಗೆ ಪ್ರೀತಿಯ, ಸಹಕಾರದ ಜೀವನ ನಡೆಸಿದ್ದಾರೆ. ಅದರಲ್ಲಿ ಕೆಲವರು ದೇವರ ಪಾದ ಸೇರಿದ್ದಾರೆ. ದೈವಾಧೀನರಾದವರಲ್ಲಿ ಸಿಸ್ಟರ್ ಮಾರಿ ತೆರೆಸಾ ಒಬ್ಬರು. ಅವರು ನಮ್ಮ ಶಾಲೆಯಲ್ಲಿದ್ದಾಗ ಪರಸ್ಪರ ಒಡನಾಟ ಸ್ವಲ್ಪ ಬಿರುಕುಗಳಿಂದ ಕೂಡಿತ್ತು. ಆದರೆ ಅವರಲ್ಲಿ ನಾನು ಬಹಳವಾಗಿ ಮೆಚ್ಚುವ ಗುಣವೆಂದರೆ ಗಣಿತ ಮತ್ತು ವಿಜ್ಞಾನದ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದರು. ಇದರಲ್ಲೇನು ವಿಶೇಷ ಎಂದು ನಿಮಗೆ ಪ್ರಶ್ನೆ ಮೂಡಬಹುದು. ಮಲಯಾಳಂ ಅವರ ತಾಯಿ ಭಾಷೆ ಆಗಿದ್ದರೂ, ಕಾನ್ವೆಂಟಿನಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದರೂ, ಶಾಲೆಯಲ್ಲಿ ಅವರು ಮಕ್ಕಳಿಗೆ ಕನ್ನಡದಲ್ಲಿಯೇ, ನಿಧಾನವಾಗಿ, ಪಾಠ ಹೇಳಿ ಕೊಡುತ್ತಿದ್ದರು. ಗಣಿತದ ಎಷ್ಟೇ ಕ್ಲಿಷ್ಟ ಸಮಸ್ಯೆಗಳಿದ್ದರೂ, ಕ್ಷಣ ಮಾತ್ರದಲ್ಲಿ ಅವುಗಳನ್ನು ಬಿಡಿಸಿ, ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಹೇಳಿ ಕೊಡುತ್ತಿದ್ದರು. ಉಪಕಾರಿ ಮನೋಭಾವದಿಂದ ನಾನಿಲ್ಲಿ ಸ್ಮರಿಸಬೇಕಾದುದು, ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿದ್ದ ನನ್ನ ಸ್ವಂತ ಮಕ್ಕಳಿಗೆ ಜಟಿಲ ಅಥವಾ ಕಠಿಣ ಗಣಿತದ ಸಮಸ್ಯೆಗಳನ್ನು ಅವರಿಗೆ ಅರ್ಥವಾಗುವಂತೆ ಮನದಟ್ಟು ಮಾಡುತ್ತಿದ್ದರು. ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು. “God loves the young and He takes them to be His own.” ಅಂತೆಯೇ ಅವರು ಬಹು ಬೇಗನೇ ದೇವರ ಪಾದ ಸೇರಿದರು.
ಇನ್ನೋರ್ವ ನನ್ನ ಸಹೋದ್ಯೋಗಿ, ನನ್ನ ಆತ್ಮೀಯ ಸಿಸ್ಟರ್ ಸುಶೀಲಾರವರು. ಇಂದವರು ಅರ್ಸುಲೈನ್ ಫ್ರಾನ್ಸಿಸ್ಕನ್ ಸಭೆಯ ಮಹಾ ಮಾತೆ ಆಗಿದ್ದಾರೆ. ಅವರನ್ನು ವಿಶೇಷವಾಗಿ ನೆನಪಿಸುವುದಕ್ಕೆ ಕಾರಣ, ಅವರ ಚಿಂತನೆ ಮತ್ತು ನನ್ನದು ಬಹಳ ಸಾಮ್ಯತೆಯಿಂದ ಕೂಡಿತ್ತು. ಅವರೆಲ್ಲರ ಮನೆತನದ ಪರಿಚಯ ಕೂಡಾ ನನಗಿದೆ. ಅವರ ಕುಟುಂಬಕ್ಕೆ ಅವರ ತಾಯಿಯವರು ಮನೆಯಲ್ಲಿನ್ನು ತಾನು ಓರ್ವ ಕನ್ಯಾಸ್ತ್ರೀ ಎಂದು ತಿಳಿದು, ನನ್ನೊಡನೆ ಅವರಿಗೆ ಬೇಕಾದ ಔಷಧಿಗಳನ್ನು ಕೊಡಲು ವಿನಂತಿಸುತ್ತಿದ್ದರು. ಮಾತಿನ ಮಲ್ಲಿಯಾದ ನನಗೆ ಅದು ಅಮೃತ ಸವಿದಂತೆ. ಹಾಗೆಯೇ ಅನೇಕ ಬಾರಿ ಮುಖ್ಯೋಪಾಧ್ಯಾಯಿನಿಯವರಿಂದ, ನನ್ನ ಸಹೋದ್ಯೋಗಿ ಬಂಧುಗಳಿಂದ ನನ್ನ ಬಗೆಗಿನ ಹರಿತವಾದ ಅಭಿಪ್ರಾಯಗಳು ನನಗೆ ಕೇಳಿ ನಾನು ಬಹಳವಾಗಿ ನೊಂದಿದ್ದಾಗ ಅವರ ಸಾಂತ್ವನದ ಮಾತುಗಳನ್ನು ಕೇಳಿ ನಾನು ತುಂಬಾ ಸಮಾಧಾನದಲ್ಲಿರುತ್ತಿದ್ದೆ.
ಅನೇಕ ವಿದ್ಯಾರ್ಥಿನಿಯರ, ವಿದ್ಯಾರ್ಥಿಗಳ ಜಟಿಲವಾದ ಸಮಸ್ಯೆ ಬಂದಾಗ ಅವರು ನನಗೆ ಜೊತೆ ಕೊಟ್ಟು, ಆ ವಿದ್ಯಾರ್ಥಿಗಳ, ವಿದ್ಯಾರ್ಥಿನಿಯರ ಮನೆಗೆ ಭೇಟಿ ನೀಡಲು ಎಷ್ಟೇ ಕತ್ತಲಾದರೂ ಬರುತ್ತಿದ್ದರು. ಅವರ ಸಮಸ್ಯೆಗಳಿಗೆ ಪರಿಹಾರ ನೀಡಲು ಕನ್ಯಾ ಮಠದಲ್ಲಿರುವ ಸಮಸ್ಯೆಗಳು, ಪರಿಸ್ಥಿತಿಗಳನ್ನು ನಿಭಾಯಿಸಲು ಬುದ್ಧಿ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಬೇಡುತ್ತೇನೆ.
ಹೀಗೆ ಬರೆಯುತ್ತಿರುವಾಗ ನನಗೆ ನೆನಪಿಗೆ ಬರುವುದು ಇನ್ನೋರ್ವ ಮಹಾನ್ ವ್ಯಕ್ತಿ ಮಾನ್ಯ ಶ್ರೀ ಆರ್.ಎನ್. ಭಿಡೆಯವರು. ಅವರೊಂದು ತಳವಿಲ್ಲದ ಸರೋವರದಂತೆ ಅಗಾಧ ಜ್ಞಾನ, ಮಕ್ಕಳನ್ನು ಅರ್ಥ ಮಾಡಿಕೊಳ್ಳುವ ಆಳ ಶಕ್ತಿ ಅವರಲ್ಲಿ ವಿಪುಲವಾಗಿತ್ತು. ನನ್ನ ಅಣ್ಣ ಶ್ರೀ ಎನ್.ಎಂ. ಶೆಣೈಯವರು ಮೆಚ್ಚುವ ಅತೀ ವಿರಳ ವ್ಯಕ್ತಿಗಳಲ್ಲಿ ಇವರೊಬ್ಬರು. ಅವರಿಗೆ ಗೊತ್ತಿಲ್ಲದ ವಿಚಾರಗಳೇ ಇರಲಿಲ್ಲ. ಒಂದು ವೇಳೆ ತಿಳಿಯದಿದ್ದರೂ ಕೂಡಲೇ ಜ್ಞಾನ ಗ್ರಂಥಗಳ (ಎನ್‍ಸೈಕ್ಲೋಪೀಡಿಯಾ) ಸಹಾಯ ಪಡೆದು ವಿವರಣೆ ಕೊಡುತ್ತಿದ್ದರು. ಅವರ ಅತೀ ಸರಳ ಜೀವನದಿಂದಲೂ ನಾನು ಪ್ರೇರಿತಳಾಗಿದ್ದೇನೆ.
ಒಮ್ಮೆ ನನಗೂ ನನ್ನ ಮುಖ್ಯೋಪಾಧ್ಯಾಯಿನಿಯವರಿಗೂ ಭಿನ್ನಾಭಿಪ್ರಾಯ ತಲೆದೋರಿ ಅವರ ಮಾತುಗಳಿಂದ ನಾನು ಬಹಳವಾಗಿ ನೊಂದುಕೊಂಡೆ. ಮಾನ್ಯ ಶ್ರೀ ಕೆ.ಎನ್. ಭಟ್‍ರವರು (ಶ್ರೀ ನೀಲಕಂಠ ಭಟ್) ನನಗೆ ಜೊತೆ ಕೊಟ್ಟು ಮಾನ್ಯ ಶ್ರೀ ಆರ್.ಎನ್. ಭಿಡೆಯವರಲ್ಲಿ ನನ್ನನ್ನು ಕರೆದುಕೊಂಡು ಹೋಗಿ, ನನಗಾದ ನೋವು, ನಾನು ನೊಂದುಕೊಂಡ ಅನುಭವವನ್ನು ಅವರಿಗೆ ತಿಳಿಸಿದರು. ನನ್ನ ಮುಂದಿನ ನಿರ್ಧಾರ, ಬೇಗಲೇ ಬರಲಿರುವ ಸ್ಕೂಲ್ ಡೇಯಲ್ಲಿ ಯಾವುದೇ ರೀತಿಯ ಸಹಕಾರ ತೋರಿಸದೇ ಇರುವುದು, ನಾನು ನನ್ನಷ್ಟಕ್ಕೇ ಇರುವುದು ಎಂದು ತಿಳಿಸಿದೆ. ಆಗ ಅವರು ಕೊಟ್ಟ ಅಭಿಪ್ರಾಯ, ಸೂಚನೆ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿತು. ಅವರು ಹೇಳಿದ್ದು ಇಷ್ಟೇ, “ಮೇರಿಯವರೇ ನಿಮ್ಮ ನೋವು ನನಗೆ ತಿಳಿಯುತ್ತದೆ. ಆ ಪ್ರಕಾರ ನಿಮ್ಮ ನಿರ್ಧಾರ ಸರಿ. ಆದರೆ ನೀವು ಯೋಚಿಸಿ. ಈ ಮುಗ್ಧ ಮಕ್ಕಳು ಅವರ ವಿದ್ಯಾರ್ಥಿ ಜೀವನದಲ್ಲಿ ಇದೇ ಒಂದು ಸಂದರ್ಭವನ್ನು ಅನುಭವಿಸಲಿದ್ದಾರೆ. ಅವರ ಜೀವನ ಪರ್ಯಂತ ಅವರ ಕುಣಿತ, ಇಂಗ್ಲಿಷ್ ನಾಟಕದಲ್ಲಿ ಅವರ ಪಾತ್ರ ಸದಾ ಕಾಲ ನೆನಪಿಸಿ ನಗುವರು. ಈ ಸಂದರ್ಭದಲ್ಲಿ ನೀವು ಅವರನ್ನು ಅದರಿಂದ ವಂಚನೆಗೆ ಒಳಪಡಿಸಿದಂತಾಗುತ್ತದಲ್ಲವೇ?” ಎಂದು ಹೇಳಿದಾಗ ನನ್ನ ಮನ ಪರಿವರ್ತನೆಯಾಯಿತು.
ನನ್ನ ಮಕ್ಕಳಿಂದ ಕಲಿತ ಜೀವನದ ಪಾಠಗಳು
ಇನ್ನೂ ಅನೇಕ ಘಟನೆಗಳು ನನ್ನ ಶಿಕ್ಷಕತನದ ಜೀವನದಲ್ಲಿ ನಡೆದಿವೆ. ಎಲ್ಲವನ್ನೂ ಹೇಳಿದರೆ ಈ ಪುಸ್ತಕ ಸಾಲದು ಹಾಗೂ ನನ್ನ 73 ವರ್ಷಗಳು ಸಾಕಾಗಲಿಕ್ಕಿಲ್ಲ. ನನ್ನ ನಾಲ್ಕು ಮಂದಿ ಮಕ್ಕಳು ಕೂಡಾ ನನಗೆ ಅನೇಕ ಬಾರಿ ಪ್ರೇರಣೆಯಾಗಿದ್ದಾರೆ. ದೊಡ್ಡವಳು ಭಷ್ಮಿ ಅವಳ ಶಾಂತ ಸ್ವಭಾವ, ನಗುಮುಖದ ಮಾತುಕತೆಯಿಂದ ನನಗೆ ಪ್ರೇರಣೆಯಾದರೆ, ನನ್ನ ಮಗ ಬಿಜೊಯ್ ಅವನ ಯೋಚಿಸಿ ತೆಗೆದುಕೊಳ್ಳುವ ನಿರ್ಧಾರಗಳು ಇನ್ನೊಂದು ದಿಕ್ಕಿನಲ್ಲಿ ನನಗೆ ಪ್ರೇರಣೆ ನೀಡುತ್ತಿದ್ದವು. ಮಡಂತ್ಯಾರಿನಲ್ಲಿ ಬಿ.ಕಾಂ. ಹಂತದಲ್ಲಿ ಕಲಿಯುತ್ತಿದ್ದಾಗ, ಮನೆಗೆ ಹಿಂತೆರಳಲು ಬಹಳ ಸಮಯ ತೆಗೆದುಕೊಂಡ. ಕಾಯ್ನ್ ಫೋನ್‍ನಿಂದ ಸಂದೇಶವನ್ನೂ ಕಳುಹಿಸಲಿಲ್ಲ. ನಾನು ಬಹಳ ನೊಂದುಕೊಂಡು ಅವನ ಪ್ರಾಂಶುಪಾಲರಿಗೆ ಮೇಲಿಂದ ಮೇಲೆ ಫೋನ್ ಮಾಡಿ ಅವನ ಬಗ್ಗೆ ವಿಚಾರಿಸಿದೆ. ಅವರು ನನಗೆ, ಅವನು ಅವನ ಗೆಳೆಯರ ಜೊತೆಗೆ ಅಂತರ್ ವಿಶ್ವವಿದ್ಯಾನಿಲಯದ ವಾಲಿಬಾಲ್ ಆಟವನ್ನು ವೀಕ್ಷಿಸುತ್ತಾ ಇದ್ದಾನೆ ಎಂದು ತಿಳಿದುಕೊಂಡು ಮಾಹಿತಿ ನೀಡಿದರು. ನನ್ನ ಮಗನಾದರೋ ನನ್ನ ಅವಸರದ ಗಡಿಬಿಡಿಯ ಚಟುವಟಿಕೆಯಿಂದ ಬಹಳಷ್ಟು ನೊಂದುಕೊಂಡಿದ್ದ. ಜಾಸ್ತಿ ಕೋಪ ತೋರಿಸದೇ, ಸಿಡಿಮಿಡಿಗೊಳ್ಳದೇ, “ಮಮ್ಮಿ ನಾನೀಗ ಬಿ.ಕಾಂ. ಎರಡನೇ ವರ್ಷದಲ್ಲಿ ಕಲಿಯುತ್ತಿದ್ದೇನೆ. ನನ್ನ ಮೇಲೆ ನಿನಗೆ ನಂಬಿಕೆ ಇಲ್ಲವೇ” ಎಂದು ಕೇಳಿದ. ನಾನಂತೂ ಅವನ ಜವಾಬ್ದಾರಿಯ ಉತ್ತರದಿಂದ ಸಂಕೋಚಗೊಂಡೆ. ಆದರೆ ಅವನು ಜಾಸ್ತಿ ಸಿಡಿಮಿಡಿಗೊಳ್ಳದೇ, “ಇನ್ನೊಮ್ಮೆ ಇಂತಹ ಸಂದರ್ಭದಲ್ಲಿ ನಾನು ನೀವಷ್ಟು ತಳಮಳಗೊಳ್ಳದಂತೆ ಕಾಯ್ನ್ ಫೋನ್‍ನಿಂದ ಫೋನ್ ಮಾಡುವೆ” ಎಂದ. ಇಂತಹ ಜವಾಬ್ದಾರಿಯುತ ಮಗನನ್ನು ಪಡೆದಿದ್ದು ನನ್ನ ಭಾಗ್ಯ ಅಲ್ಲವೇ?
ಮೂರನೇ ಮಗಳು ಭಕ್ತಿ. ನೇರ ಮಾತಿನವಳು. ಅವಳಿಗೆ ನನ್ನ ಅಮ್ಮ ಅವರ ಎಲ್ಲಾ ನೆನಪಿನ ಶಕ್ತಿಯನ್ನೂ ಮುಂಗೋಪವನ್ನೂ ಧಾರೆ ಎರೆದು ಕೊಟ್ಟಿದ್ದಾರೆ. 7ನೇ ತರಗತಿಯಲ್ಲಿ ಅವಳು ಕೇಳಿದ ಕನ್ನಡ ಅಥವಾ ಹಿಂದಿ ಪದ್ಯಗಳು, ಅವುಗಳಿಗೆ ಸಂಬಂಧಿಸಿದ ಚಲನಚಿತ್ರ ಅವಳು ಪಟಪಟನೆ ಈಗಲೂ, 40 ವರ್ಷ ದಾಟಿದ ಮೇಲೂ ಎಲ್ಲವನ್ನೂ ಹೇಳುತ್ತಿದ್ದಾಳೆ. ಅವಳ ಜೀವನದಲ್ಲಿ ಶಾಲೆಯಲ್ಲಿ ಇಲ್ಲವೇ ಮನೆಯಲ್ಲಿ ನಡೆದ ಹಿತಕರ ಇಲ್ಲವೇ ಅಹಿತಕರ ಘಟನೆಗಳನ್ನು ಚಾಚೂ ತಪ್ಪದೆ ಅವಳು ಈಗಲೂ ಹೇಳುತ್ತಾಳೆ. ಅವಳ ನೇರ ಮಾತು ನನಗೆ ಹಿಡಿಸಿದೆ ಹಾಗೂ ಅವಳ ಮುಂದೆ ನೇರ ಮಾತಿನಿಂದಲೇ ಮಾತನಾಡಲು ನಾನು ಪ್ರಯತ್ನಪಟ್ಟಿದ್ದೇನೆ. ಕೊನೆಯ ನನ್ನ ಮುದ್ದಿನ ಮಗಳು ಬಿನುತಾ. ನಾನು ನನ್ನ ಅಮ್ಮನಿಗೆ ಅವರ 42ನೇ ವರ್ಷದಲ್ಲಿ ಹುಟ್ಟಿದ ಹಾಗೆ ಬಿನುತಾ ಕೂಡಾ ನನಗೆ ನನ್ನ 42ನೇ ವರ್ಷದಲ್ಲಿ ಹುಟ್ಟಿದಳು. ಅವಳ ಬಾಲ್ಯ ಜೀವನ ಚೆನ್ನಾಗಿ ಸರಿದು ಹೋಯಿತು. ನಾನು ಶಾಲೆಗೆ ಹೋದಾಗ ನನ್ನ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿರುವಾಗ ಅವಳನ್ನು ಪ್ರೀತಿಯಿಂದ ತನ್ನ ಅನುಭವದ ಪ್ರಕಾರ ನನ್ನ ಸಹಾಯಕಿ, ಈಗ ಶ್ರೀಮತಿ ಐರಿನ್ (ಫೆರ್ನಾಂಡಿಸ್) ಮಾಡ್ತಾರವರು ನನಗೆ ನೀಡಿದ ಸಹಾಯ, ನನ್ನ ಮಗಳು ತನ್ನ ಪುಟ್ಟ ತಂಗಿಯನ್ನು ಪ್ರೀತಿಯಿಂದ ನೋಡಿದ ರೀತಿಗೆ ನನಗೆ ಉಪಕಾರ ಸ್ಮರಿಸುವ ಶಬ್ದಗಳೇ ಬರುವುದಿಲ್ಲ.
ಅವಳ ಬಗ್ಗೆ ಎರಡು ಮಾತುಗಳು. ಪ್ರಥಮವಾಗಿ ಅವಳಿಗೆ ಶಾಲೆಗೆ ಹೋಗಲು, ಅವಳ ತರಗತಿಯಲ್ಲಿ ಕುಳಿತುಕೊಳ್ಳಲು ಮನಸ್ಸೇ ಇರಲಿಲ್ಲ. ಅವಳ ಇಬ್ಬರೂ ಅಕ್ಕಂದಿರು ಮತ್ತು ಅಣ್ಣನ ಸಾಂಗತ್ಯದಲ್ಲಿ ಹೇಗೋ ಶಾಲೆಗೆ ಹೋದಳು. ಇಲ್ಲಿ ನನ್ನ ಒಂದು ದೊಡ್ಡ ತಪ್ಪು ಹೇಳಲೇಬೇಕು. ಅವಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆಕಾಯಿ. ನಾನು ಶಿಕ್ಷಕಿಯಾಗಿ ಅವಳಿಗೆ ತಾಳ್ಮೆಯಿಂದ, ಪ್ರೀತಿಯಿಂದ ಆ ಗಣಿತದ ಸಮಸ್ಯೆಗಳ ವಿವರಣೆ ನೀಡಬೇಕಿತ್ತು. ಆದರೆ ನಾನು ಊರಿಗೆಲ್ಲಾ ಉಪಕಾರಿಯಾಗಿ ಅವಳಿಗೆ ಸಮಯ ಕೊಡಲು ಅಸಾಧ್ಯವಾಯಿತು. ಹಾಗಾಗಿ ಪರೀಕ್ಷೆ ಹತ್ತಿರ ಬರುವಾಗ ಅವಳನ್ನು ಸಮೀಪ ಕೂತುಕೊಳ್ಳಿಸಿ ಪೆಟ್ಟಿನ ರುಚಿ ತೋರಿಸಿಯೇ ನಾನು ಅವಳಿಗೆ ಗಣಿತದ ಸಮಸ್ಯೆಗಳನ್ನು ಬಗೆಹರಿಸುವಂತೆ ಮಾಡುತ್ತಿದ್ದೆ. ಹೀಗೆ ತಿಂಗಳ ಪರೀಕ್ಷೆ, ತ್ರೈಮಾಸಿಕ, ವಾರ್ಷಿಕ ಪರೀಕ್ಷೆಗಳು ಬಂದಾಗ, ಬಿನುತಾಳಿಗಂತೂ ಥರ ಥರ ನಡುಗು. ಮಮ್ಮಿಯ ಎಷ್ಟು ಪೆಟ್ಟು ಬೀಳುತ್ತದೋ ಏನೋ ಎಂದು.
ಆದರೆ ದೇವರು ದಯಾಮಯ. ಹೈಸ್ಕೂಲಿನಲ್ಲಿ ಕಲಿಸಿ ನಿವೃತ್ತಳಾಗಲು ಕೆಲವೇ ವರ್ಷಗಳಿದ್ದಾಗ, ಬಹಳ ಅನುಭವಸ್ಥ, ಮಕ್ಕಳ ತಜ್ಞರಾದ ವಂದನೀಯ ಧರ್ಮ ಭಗಿನಿಯೊಬ್ಬರು, ಮಕ್ಕಳನ್ನು ವಿದ್ಯಾಭ್ಯಾಸ ಮಾಡಲು ಇರುವ ವಿವಿಧ ವಿಧಗಳನ್ನು ತಿಳಿಸಿ, ಬೆತ್ತ, ಹೊಡೆತ ಇರಲೇಬಾರದು ಎಂದು ಹೇಳಿದಾಗ, ನನ್ನ ತಲೆಗೆ ಏಟು ಕೊಟ್ಟಂತಾಯಿತು. ಈ ವಿಧಾನವೇ ಸರಿ ಎಂದು ಮೊದಲ ಬಾರಿಗೆ ಆ ನನ್ನ ಮಗಳ ತಿಂಗಳ ಪರೀಕ್ಷೆಗೆ ಗಣಿತ ಕಲಿಸುವಾಗ ಬೆತ್ತವನ್ನೇ ತೆಗೆದಿಟ್ಟೆ. ಗಣಿತದ ಸಮಸ್ಯೆಗಳನ್ನು ಚೆನ್ನಾಗಿ ವಿವರಿಸಿದೆ. ಅವಳಿಗದು ಅರ್ಥವಾಗಿದೆಯೋ ಇಲ್ಲವೋ, ಅವಳು ಉತ್ತೀರ್ಣಳಾಗುತ್ತಾಳೋ ಇಲ್ಲವೋ ಎಂಬ ತವಕ ನನ್ನಲ್ಲಿತ್ತು. ಸಂಜೆ ಮನೆಗೆ ಬಂದಾಗ ಅವಳು ನಸುನಗುತ್ತಾ ನನ್ನನ್ನು ಅಪ್ಪಿಕೊಂಡು ನನಗೆ ಹೇಳಿದ ಮಾತು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು. “ಮಮ್ಮಿ ಇವತ್ತು ನನಗೆ ಗಣಿತ ಕಲಿಸುವಾಗ ಹೊಡೆಯಲೇ ಇಲ್ಲ. ಪೆಟ್ಟಿನ ರುಚಿ ತೋರಿಸಲೇ ಇಲ್ಲ” ಎಂದು ಕುಣಿದಳು. ಅವಳ ಸಂತೋಷ, ಮಾನಸಿಕ ಬಿಡುಗಡೆ ನನ್ನ ಬಗ್ಗೆ ತುಂಬಾ ಬೇಸರ ತರಿಸಿತು.
ಅದೇ ಸಮಯದಲ್ಲಿ LPB ಅಂದರೆ Love for People; Love for Books ಎಂಬ ಪುಸ್ತಕದ ಕಂತೆ ನನಗೆ ಸಿಕ್ಕಿತು. ನಾನು ನನ್ನಲ್ಲಿಯೇ ಮಾಡಿದ ಬದಲಾವಣೆ ‘ಇನ್ನೆಂದಿಗೂ ಬೆತ್ತದ ಉಪಯೋಗ ಮಾಡುವುದಿಲ್ಲ’ ಎಂಬುದಾಗಿತ್ತು. ರಾತ್ರಿ ಮಲಗುವ ಮೊದಲು ಯಾವುದೇ ಫೋನ್ ಕಾಲ್ ಅಥವಾ ಕೆಲಸ ಇದ್ದರೂ, ನನ್ನುಳಿದ ಮಕ್ಕಳಿಗೆ ನನ್ನೊಂದಿಗೆ ಹೇಳಲು ಸಮಸ್ಯೆಗಳಿದ್ದರೂ, ಅವುಗಳನ್ನೆಲ್ಲಾ ಬದಿಗೊತ್ತಿ ನನ್ನ ಈ ಕೊನೆಯ ಮಗಳ ಜೊತೆಗೆ 30 ನಿಮಿಷಗಳಾದರೂ, ಅವಳನ್ನು ನನ್ನ ತೊಡೆಯ ಮೇಲೆ ಕೂತುಕೊಳ್ಳಿಸಿ ಅವಳು ಓದುವಂತೆ ಮಾಡುತ್ತಿದ್ದೆ. ಈ ಕ್ರಮದಿಂದ ಅವಳಲ್ಲಿ ಆದ ಬದಲಾವಣೆ ಆಶ್ಚರ್ಯಕರವಾಗಿತ್ತು. ಅವಳೇ ಆಸಕ್ತಿಯಿಂದ ಕಲಿಯುವಂತೆ ಅದು ಪ್ರೇರೇಪಿಸಿತು. ಬಹು ಬೇಗನೇ ಪಠ್ಯ ವಿಷಯ ಚೆನ್ನಾಗಿ ಅರ್ಥ ಮಾಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಸಲೀಸಾಗಿ ಅವಳು ಕೊಡಲು ಸಾಧ್ಯವಾಯಿತು. ತರಗತಿಯಲ್ಲಿ ಮುಂದಾಳತ್ವ, ಪ್ರಶ್ನೆಗಳಿಗೆ ತಟಕ್ಕನೆ ಅವಳು ಉತ್ತರ ಕೊಟ್ಟು, ಚುರುಕು ವಿದ್ಯಾರ್ಥಿಗಳಲ್ಲಿ ಒಬ್ಬಳೆಂದು ಹೆಸರು ಪಡೆದಳು. ತಾಯಿಯಾಗಿ, 40-45 ವರುಷಗಳ ಕಲಿಸುವಿಕೆಯ ಅನುಭವವಿದ್ದರೂ ಇನ್ನೂ ಎಷ್ಟೋ ಸುಧಾರಣೆಗಳನ್ನು ಮಾಡಬೇಕಿದೆ. ಪೆಟ್ಟು, ಶಿಕ್ಷೆ ದೂರ ಆಗಿ ವಿವಿಧ ರೀತಿಗಳಲ್ಲಿ ಈ ಪುಟಾಣಿಗಳ ಮನಸ್ಸನ್ನು ಜ್ಞಾನದ ಕಡೆ ಆಸಕ್ತಿ ಕೆರಳಿಸಲು ಬಹಳಷ್ಟು ವಿಧಾನಗಳಿವೆ. ನಾವು ಈ ಪುಟ್ಟ, ಬೆಳೆಯುತ್ತಿರುವ ವಿದ್ಯಾರ್ಥಿಗಳ ಮನಸ್ಸನ್ನು ನಮ್ಮೆಡೆಗೆ ಜ್ಞಾನದ ಕಡೆಗೆ ಆಕರ್ಷಿಸುವ ಪ್ರಯತ್ನಗಳನ್ನು ಮಾಡಿ ಜ್ಞಾನದ ತೃಷೆ ಅವರಲ್ಲಿ ಮೂಡುವಂತೆ ಮಾಡಿದರೇನೇ ನಾವು ಸಾರ್ಥಕ ಶಿಕ್ಷಕರಾಗಲು ಸಾಧ್ಯ ಎಂದು ನನಗೆ ಮನದಟ್ಟಾಯಿತು. ಈಗ ನಾನು ನಿವೃತ್ತಳಾಗಿದ್ದರೂ ಈ ದಿಶೆಯಲ್ಲಿ ಶಿಕ್ಷಕರೆಲ್ಲರೂ ಎಚ್ಚೆತ್ತು ಅವರು ಕಲಿಸುತ್ತಿರುವ ಪುಟಾಣಿ ಮನಸ್ಸು ಹಾಗೂ ಹೃದಯಗಳು ಜ್ಞಾನದ ತೃಷೆಯನ್ನು ಅನುಭವಿಸಿ ಅವರವರ ಮನಸ್ಸಿನೊಳಗೆ ಈ ಆಸಕ್ತಿಯನ್ನು ಬೆಳೆಸಿ ಜ್ಞಾನಭರಿತ ವಿದ್ಯಾರ್ಥಿಗಳಾಲಿ ಎಂದು ನಾನು ಹಾರೈಸುತ್ತೇನೆ ಹಾಗೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಬರೀ ಹುಡುಗಿಯರು ಮಾತ್ರ ಪ್ರಾರಂಭದಲ್ಲಿ ನನಗೆ ಬೋಧನೆಗೆ ಸಿಕ್ಕಿದ್ದು ನನ್ನ ಪುಣ್ಯ ಎನಿಸುತ್ತದೆ. ನನ್ನ ಜೋರಾದ ಗೌಜಿ ಮಾತುಗಳಿಗೆ ಪ್ರತಿಕ್ರಿಯೆ ಅವರ ಕಣ್ಣುಗಳಲ್ಲಿ ತುಂಬಿದ್ದ ಕಣ್ಣೀರು. ಅದನ್ನು ನೋಡಿ ನಾನೂ ಸುಮ್ಮನಾಗುತ್ತಿದ್ದೆ. ನನ್ನ ಹಂಬಲದ ಪ್ರಕಾರ ನಾನು ಇಂಗ್ಲಿಷ್ ಕಲಿಸಿದ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸಲೀಸಾಗಿ ಇಂಗ್ಲಿಷಿನಲ್ಲಿ ಸಂಭಾಷಣೆ ಮಾಡಬೇಕೆಂಬುದಾಗಿತ್ತು. ತರಗತಿಯ ಒಳಗೆ ಇಂಗ್ಲಿಷ್ ಮಾತ್ರ ಮಾತನಾಡಬೇಕೆಂದು ಜೋರಾಗಿ ಹೇಳಿದ್ದೆ. ಆ ಪ್ರಕಾರ ಒಬ್ಬಳು ವಿದ್ಯಾರ್ಥಿನಿಗೆ ಗಾಂಧೀಜಿಯವರ ಬಗ್ಗೆ ಇಂಗ್ಲಿಷ್‍ನಲ್ಲಿಯೇ ಏಳೆಂಟು ವಾಕ್ಯ ಮಾತನಾಡಲು ಹೇಳಿದೆ. ಅವಳೋ ಪಾಪ ಥರಥರ ನಡುಗುತ್ತಾ I am Mohandas Karamchand Gandhi ಎಂದು ಹೇಳಿದಳು. ಆ ವಾಕ್ಯ ಅರ್ಥವಾದ ಬೆರಳೆಣಿಕೆಯ ವಿದ್ಯಾರ್ಥಿನಿಯರು ಅವರ ಕರವಸ್ತ್ರ ಬಾಯಿಗೆ ಅಡ್ಡ ಹಿಡಿದು ನಕ್ಕರು. ಆ ಪಾಪದ ವಿದ್ಯಾರ್ಥಿನಿಗೆ ಸುಸ್ತೋ ಸುಸ್ತು. ಪಾಠದ ಅವಧಿ ಮುಗಿದು ಮನೆಗೆ ಹೊರಡುತ್ತಿರುವಾಗ ಆ ವಿದ್ಯಾರ್ಥಿನಿಯನ್ನು ಬೆನ್ನು ತಟ್ಟಿ ನೀನು ಚೆನ್ನಾಗಿ ಕಲಿತು ಅಭ್ಯಾಸ ಮಾಡಿಕೊಂಡು ಬಂದವಳು ತಾನೇ, ಯಾಕೆ ಮುಜುಗರ ಉಂಟಾಯಿತು? ಎಂದು ಕೇಳಿದಾಗ, ಅವಳು ಪಾಪ ಕಣ್ಣೀರ ಕೋಡಿ ಹರಿಸಿ, ಅವಳು ಕಲಿತುಕೊಂಡು ಬಂದ ಗಾಂಧೀಜಿಯವರ ಬಗ್ಗೆ ಹಲವಾರು ವಾಕ್ಯಗಳನ್ನು ಇಂಗ್ಲಿಷ್‍ನಲ್ಲಿ ಪಟ ಪಟ ಎಂದು ಹೇಳಿದಳು. ನಾನು ಅವಳ ಬೆನ್ನು ತಟ್ಟಿ ಹೀಗೆಯೇ ಬಿದ್ದು ಎದ್ದು ಇಂಗ್ಲಿಷಿನಲ್ಲಿ ಉತ್ತಮ ಸಾಧನೆ ಮಾಡು ಎಂದೆ. ಭಯದಿಂದ ಅವಳು ಕಲಿತದ್ದನ್ನೆಲ್ಲಾ ಮರೆತು ಬಿಟ್ಟಿದ್ದಳು. ವಿದ್ಯಾರ್ಥಿಗಳನ್ನು ವಿಪರೀತ ಹೆದರಿಸುವುದು ಸರಿ ಅಲ್ಲ ಎಂದು ನನಗೆ ದೃಢವಾಯಿತು. ಈ ಮುಗ್ಧ ಬಾಲಕಿಯರ ಜೊತೆಗೆ ಕೋಕೋ ಆಟ, ತ್ರೋಬಾಲ್, ಓಟ ಇತ್ಯಾದಿ ನಾನು ಸಲೀಸಾಗಿ ಆಡಿ ಸಂತೋಷಪಡುತ್ತಿದ್ದೆ. ಇಲ್ಲಿ ನನ್ನ ಸಹೋದ್ಯೋಗಿ ಹಾಗೂ ಸ್ನೇಹಿತೆ ವಂದನೀಯ ಧರ್ಮಭಗಿನಿ ಜೆನೆವೆರಾ ಅವರನ್ನು ಪ್ರೀತಿಯಿಂದ ನೆನಪಿಸುತ್ತೇನೆ. ಅನೇಕ ಬಾರಿ ಮುಖ್ಯೋಪಾಧ್ಯಾಯಿನಿಯವರಿಂದ ನನಗೆ ಕಠಿಣ ಮಾತುಗಳು ಸಿಗದ ಹಾಗೆ ಅವರು ನನ್ನನ್ನು ರಕ್ಷಿಸಿದ್ದಿದೆ. ಈಗಲೂ ಅವರನ್ನು ನಾನು ಸಂಪರ್ಕಿಸುತ್ತಲೇ ಇದ್ದೇನೆ.
ಆ ಸಮಯದಲ್ಲಿ ನಮ್ಮ ಹೈಸ್ಕೂಲಿನಲ್ಲಿ ಹೆಣ್ಮಕ್ಕಳಿಗೆ ಮಾತ್ರ ಪ್ರವೇಶವಿತ್ತು. ಅವರ ನಡತೆ, ಕಲಿಯುವುದರಲ್ಲಿ ಅವರ ಆಸಕ್ತಿ ಕಂಡ ಅನೇಕ ಹೆತ್ತವರಿಗೆ ನಮ್ಮ ಗಂಡು ಮಕ್ಕಳು ಕೂಡಾ ಈ ಸಿಸ್ಟರ್‍ಗಳ ಕೈಯಲ್ಲಿ ಉತ್ತಮ ಗುಣ ನಡತೆ, ನಿರಂತರ ಕಲಿಕೆ ಪಡೆದು ಸಮಾಜದಲ್ಲಿ ಅವರೆಲ್ಲ ಅತ್ಯುತ್ತಮ ಪ್ರಜೆಗಳಾಗಬೇಕು, ಹೆಸರು ಪಡೆಯಬೇಕೆಂದು ಮನಸ್ಸಾಗಿ ಮಾನ್ಯ ಅರ್ಸುಲೈನ್ ಸಿಸ್ಟರ್‌ಗಳ ಗೌರವದಿಂದ ಅಭಿಮಾನದಿಂದ ಒತ್ತಡ ಹಾಕಿದರು. ಇದರ ಫಲವಾಗಿ 1981ರಿಂದ ಸಂತ ತೆರೆಸಾ ಬಾಲಿಕೆಯರ ಪ್ರೌಢಶಾಲಾ ಇದ್ದದ್ದು ಸಂತ ತೆರೇಸಾ ಪ್ರೌಢಶಾಲೆ ಎಂದು ತನ್ನ ಹೆಸರನ್ನು ಬದಲಾಯಿಸಿತು.
ಹೊಸತಾಗಿ ಸೇರಿದ ಗಂಡು ಮಕ್ಕಳು ಪ್ರಾರಂಭದಲ್ಲಿ ಮೌನವಾಗಿಯೇ ಇದ್ದರು. ಸಮಯ ಕಳೆದಂತೆ ಅವರ ಹತ್ತು ಹನ್ನೆರಡು ತುಂಟ ಕೆಲಸಗಳು ಗೋಚರವಾದವು. ಇವರನ್ನು ಹಿಡಿತದಲ್ಲಿಡಲು ನಾನು ಉಪಯೋಗಿಸಿದ್ದು ಎರಡೇ ಅಸ್ತ್ರಗಳು. ಒಂದು ನನ್ನ ಗಟ್ಟಿಯಾದ ಜೋರು ಸ್ವರ ಮತ್ತು ಗೌಜಿ. ಮತ್ತೊಂದು ಅಸ್ತ್ರವೆಂದರೆ, ಈ ಗಂಡು ಮಕ್ಕಳ ತಂದೆ ತಾಯಂದಿರಿಗೆ ಚೆನ್ನಾಗಿ ನನ್ನ ಪರಿಚಯವಿತ್ತು. ಹಾಗಾಗಿ ಚೆನ್ನಾಗಿ ವ್ಯಾಸಂಗ ಮಾಡದಿದ್ದರೆ, ತರಗತಿಗೆ ಬಾರದೇ ಇದ್ದರೆ, ನನ್ನ ಮಾತಿಗೆ ಬೆಲೆ ಜಾಸ್ತಿ ಸಿಗುತ್ತಿತ್ತು. ಅವರ ಮುಂದೆಯೇ ನಾನು ಧೈರ್ಯವಾಗಿ ಬೆತ್ತದ ಒಂದೆರಡು ಪೆಟ್ಟುಗಳ ರುಚಿ ತೋರಿಸಲು ಅವರೇ ಮುಕ್ತ ಒಪ್ಪಿಗೆ ಕೊಡುತ್ತಿದ್ದರು. ಆದರೆ ಈಗಂತೂ ಪರಿಸ್ಥಿತಿ ವಿರುದ್ಧವಾಗಿದೆ. ನನ್ನ ಅದೃಷ್ಟಕ್ಕೆ ಶಾಲಾ ಶಿಕ್ಷಕಿಯಾಗಿ ನನ್ನ ಜೀವನ ನಿವೃತ್ತವಾಗಿತ್ತು. ಆದರೆ ಒಂದಂತೂ ಸತ್ಯ. ನಾನೇ ಸ್ವಲ್ಪ ಹೆಚ್ಚಿನ ತಾಳ್ಮೆ, ಮಕ್ಕಳ ಮನೆ ಪರಿಸ್ಥಿತಿ ಇವೆಲ್ಲದಕ್ಕೂ ಹೆಚ್ಚಿನ ಗಮನ ಕೊಟ್ಟಿದ್ದಿದ್ದರೆ ಇನ್ನಷ್ಟು ವಿದ್ಯಾರ್ಥಿಗಳನ್ನು ಚೆನ್ನಾಗಿ ವ್ಯಾಸಂಗಕ್ಕೆ ಪ್ರೋತ್ಸಾಹಿಸಬಹುದಿತ್ತು. ಈಗಂತೂ ಭಗವಂತನಲ್ಲಿ ಪ್ರಾರ್ಥಿಸುವುದು ಒಂದೇ, ನಾನು ಶಿಕ್ಷಕಿಯಾಗಿ ಶಿಕ್ಷೆ, ಪೆಟ್ಟು ಇತ್ಯಾದಿ ಕೊಟ್ಟಿದ್ದೇನೆ ಎಂಬುದು ನಿಜ, ಆದರೆ ಅಂತಹ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಲ್ಲ ತಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಿ, ಸಮಾಜದ ಗಣ್ಯ ವ್ಯಕ್ತಿಗಳಾಗಿ ಸಮಾಜ ಹಿತ ಕಾರ್ಯಗಳನ್ನು ಮಾಡಬೇಕು. ಹಾಗೆಯೇ ಅವರವರ ವ್ಯಕ್ತಿತ್ವವನ್ನು ಬೆಳೆಸಿ, ವೃದ್ಧಿಪಡಿಸಿ ಸಮಾಜವನ್ನು ಅಭಿವೃದ್ಧಿಪಡಿಸುವ ಹಿರಿದಾದ ಜವಾಬ್ದಾರಿಯನ್ನು ಸದಾ ತಮ್ಮ ಜೀವನದ ಗುರಿಯಾಗಿ ಇಡಲೆಂದು ನನ್ನ ಪ್ರಾರ್ಥನೆ ಆಗಿದೆ.
ನಾನು ಉತ್ತಮ, ವಿದ್ವತ್‍ಪೂರ್ಣ ಶಿಕ್ಷಕಿಯಾಗಲು ನಾನು ಪ್ರಯೋಗಿಸಿದ ಮತ್ತೊಂದು ಸಾಧನೆ ಪುಸ್ತಕಗಳನ್ನು ಓದುವ ಅಭ್ಯಾಸ. ಶ್ರೀ ಶಿವರಾಮ ಕಾರಂತರ ಆತ್ಮಚರಿತ್ರೆ, ಬೀಚಿಯವರ ಹರಿತ ಹಾಸ್ಯಭರಿತ ಪುಸ್ತಕಗಳು, ತ್ರಿವೇಣಿಯವರ ಮನೋಜ್ಞ ಕಥೆಗಳು, ಶ್ರೀ ಪರಮಹಂಸ, ವಿವೇಕಾನಂದರ ಅನೇಕ ಹೃದಯ, ಮನಸ್ಸಿಗೆ ನಾಟುವ ಪುಸ್ತಕಗಳು. ಇದರಿಂದ ನನ್ನ ವ್ಯಕ್ತಿತ್ವದ ಬೆಳವಣಿಗೆ ಆಯಿತೆಂಬುದು ಖಂಡಿತ. ಜೊತೆಗೆ ನಾನು ಕೊನೆಯವಳಾಗಿದ್ದು, ನನ್ನ ಹಿರಿಯ ಅಕ್ಕ ಅಣ್ಣಂದಿರ ಮಾರ್ಗದರ್ಶನ, ಅವರ ಜೀವನ ಕ್ರಮ, ಯೇಸುಕ್ರಿಸ್ತರ ಜೀವನ ಚರಿತ್ರೆ, ರಾಮಾಯಣ, ಮಹಾಭಾರತ ಇತ್ಯಾದಿ ನನ್ನ ವ್ಯಕ್ತಿತ್ವ ವಿಕಸನಕ್ಕೆ ಹಿರಿದಾದ ಕಾರಣ ಎಂದರೆ ತಪ್ಪಾಗಲಾರದು.
I too liked Mary teacher too much she was my mom’s friend 😭 RIP teacher 😭
Good to read.
I am lucky to meet Mary when she was doing gardening in her residence.
Her life partner was in IAF with me .
His Name is Sherry Pereira from Badyar.Now I am in my Farmhouse in Badyar.
I need to read more .
Thank you.
Inspirational confession of an accomplished teacher a must for all teachers and school administrators. May help B.Ed students in a constructive way