ಯಾರಾಗಲಿದ್ದಾರೆ ಉತ್ತರ ಪ್ರದೇಶಕ್ಕೆ ನೂತನ ದೊರೆ?
2014ರ ಲೋಕಸಭಾ ಚುನಾವಣೆಯೆಂಬ ಫೈನಲ್‍ಗೆ ಮುನ್ನ ಮೊದಲ ಸೆಮಿಫೈನಲ್ ಕಾದಾಟ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಸ್ತಿತ್ಯಂತರಗಳಿಗೆ ದಿಕ್ಸೂಚಿಯಾಗಬಲ್ಲ ಈ ಚುನಾವಣೆಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಉತ್ತರ ಪ್ರದೇಶದ ಚುನಾವಣೆ. ಲೋಕಸಭಾ ಚುನಾವಣೆಗೆ ಪಕ್ಷಗಳು ಧೂಳು ಕೊಡವಿ ಅಣಿಯಾಗುತ್ತಿರುವ ಹೊತ್ತಿನಲ್ಲಿ ಅದಕ್ಕೊಂದು ಫೈರಿಂಗ್ ಶುರುವಾತ್ ಕೊಡುವ ಶಕ್ತಿ ಹೊಂದಿರುವ ಈ ಚುನಾವಣೆಯ ಬಗ್ಗೆ ಈ ಹೊತ್ತಿನ ವಿಶ್ಲೇಶಣೆ ಇದು. ರಾಷ್ಟ್ರೀಯ ಪಕ್ಷಗಳ ತಾಕತ್ತು ಮತ್ತು ಪ್ರಾದೇಶಿಕ ಪಕ್ಷಗಳ ಬಲವನ್ನು ಸಾಬೀತುಪಡಿಸಬಲ್ಲ ಈ ಚುನಾವಣೆ ರಾಜಕೀಯ ಪಂಡಿತರ ವಿಶ್ಲೇಶಣೆಗೆ ಉತ್ತಮ ಆಹಾರ ನೀಡುತ್ತಿದೆ. ಬನ್ನಿ ಒಂದು ರೌಂಡ್ ಯು.ಪಿ.ಗೆ ಹೋಗಿ ಬರೋಣ.
2014ರ ಲೋಕಸಭಾ ಚುನಾವಣೆಯೆಂಬ ಫೈನಲ್‍ಗೆ ಮುನ್ನ ಮೊದಲ ಸೆಮಿಫೈನಲ್ ಕಾದಾಟ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಸ್ತಿತ್ಯಂತರಗಳಿಗೆ ದಿಕ್ಸೂಚಿಯಾಗಬಲ್ಲ ಈ ಚುನಾವಣೆಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಉತ್ತರ ಪ್ರದೇಶದ ಚುನಾವಣೆ. ಲೋಕಸಭಾ ಚುನಾವಣೆಗೆ ಪಕ್ಷಗಳು ಧೂಳು ಕೊಡವಿ ಅಣಿಯಾಗುತ್ತಿರುವ ಹೊತ್ತಿನಲ್ಲಿ ಅದಕ್ಕೊಂದು ಫೈರಿಂಗ್ ಶುರುವಾತ್ ಕೊಡುವ ಶಕ್ತಿ ಹೊಂದಿರುವ ಈ ಚುನಾವಣೆಯ ಬಗ್ಗೆ ಈ ಹೊತ್ತಿನ ವಿಶ್ಲೇಶಣೆ ಇದು. ರಾಷ್ಟ್ರೀಯ ಪಕ್ಷಗಳ ತಾಕತ್ತು ಮತ್ತು ಪ್ರಾದೇಶಿಕ ಪಕ್ಷಗಳ ಬಲವನ್ನು ಸಾಬೀತುಪಡಿಸಬಲ್ಲ ಈ ಚುನಾವಣೆ ರಾಜಕೀಯ ಪಂಡಿತರ ವಿಶ್ಲೇಶಣೆಗೆ ಉತ್ತಮ ಆಹಾರ ನೀಡುತ್ತಿದೆ. ಬನ್ನಿ ಒಂದು ರೌಂಡ್ ಯು.ಪಿ.ಗೆ ಹೋಗಿ ಬರೋಣ.
ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಇದೇ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯುತ್ತಿವೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯಗಳ ಕೆಳಮನೆಗಳಿಗೆ ಈ ಚುನಾವಣೆಗಳು ನಡೆಯಲಿವೆ. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ರಾಷ್ಟ್ರ ರಾಜಕಾರಣದ ಮೇಲೆ ಗಂಭೀರ ಹಾಗೂ ನಿರ್ಣಯಾತ್ಮಕ ಪರಿಣಾಮ ಬೀರುವ ಸಾಧ್ಯತೆ, ಅವಕಾಶ ಇರುವುದರಿಂದ ಎಲ್ಲರೂ ಅಲ್ಲಿನ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಕಾರಣದಿಂದಾಗಿ ಉಳಿದ ನಾಲ್ಕು ರಾಜ್ಯಗಳ ಚುನಾವಣೆಗಳ ಬಗ್ಗೆ ಅಷ್ಟೊಂದು ಚರ್ಚೆ ನಡೆಯುತ್ತಿಲ್ಲ, ನಡೆದರೂ ಅವಕ್ಕೆ ಅಷ್ಟೊಂದು ಪ್ರಾಮುಖ್ಯತೆ ಸಿಗುತ್ತಿಲ್ಲ.
ಆನೆ – ಇದು ಈ ಸಲ ಅತ್ಯಂತ ಹೆಚ್ಚು ಪ್ರಚಾರ ಪಡೆದ ವಸ್ತು. ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಚಿಹ್ನೆ ಆನೆ. ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಆಕೆ ರಾಜ್ಯದಾದ್ಯಂತ ಬಿಎಸ್ಪಿ ಸ್ಥಾಪಕ ಕಾನ್ಶೀರಾಮ್ ಹಾಗೂ ತನ್ನದೇ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರ ಜೊತೆ ತನ್ನ ಪಕ್ಷದ ಚಿಹ್ನೆಯಾದ ಆನೆಯ ಬೃಹತ್ ಮೂರ್ತಿಗಳನ್ನು ಅಲ್ಲಲ್ಲಿ ನಿರ್ಮಿಸಿ ನಿಲ್ಲಿಸಿದ್ದು ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡೇ. ಚುನಾವಣೆ ಘೋಷಣೆಯಾದ ಬಳಿಕ ಚುನಾವಣಾ ಆಯೋಗವು ಅವೆಲ್ಲಾ ಮೂರ್ತಿಗಳನ್ನು ಮುಚ್ಚಲು ಆದೇಶ ನೀಡಿ ಅದಕ್ಕೆ ಮತ್ತಷ್ಟು ಪ್ರಚಾರ ದೊರಕಿದಂತಾಗಿದೆ.
ಕೇವಲ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಬಿಎಸ್ಪಿಯನ್ನು ದೇಶದಾದ್ಯಂತ ವಿಸ್ತರಿಸಿ ಹಿಂದುಳಿದ ವರ್ಗಗಳ ಮತ ಬ್ಯಾಂಕನ್ನು ಸ್ಥಾಪಿಸಿ ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಪಾತ್ರ ವಹಿಸುವುದಷ್ಟೇ ಅಲ್ಲ, ಮುಂದೊಂದು ದಿನ ಪ್ರಧಾನ ಮಂತ್ರಿ ಗಾದಿಯನ್ನೂ ಕಬಳಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಮಾಯಾವತಿ ಬಹಳ ವರ್ಷಗಳ ಹಿಂದೆಯೇ ಬಹಿರಂಗಗೊಳಿಸಿದ ದಿಟ್ಟ ರಾಜಕಾರಣಿ. ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗುಗೊಳಿಸಿ ಆಕೆಯ ಪಕ್ಷ 2007ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿದ ಹಿಂದೆ ಆಕೆಯ ಬಹಳಷ್ಟು ಚಾಣಾಕ್ಷ ನಡೆಗಳು, ತಂತ್ರಗಾರಿಕೆಗಳು ಫಲಕಾರಿಯಾಗಿದ್ದೇ ಕಾರಣ. ಆದರೆ ಅಧಿಕಾರದ ಮದವೆಂಬುದು ಎಂತಹವರನ್ನೂ ಆವರಿಸಿ ದಾರಿ ತಪ್ಪಿಸುವಾಗ, ಮೂಲತಃ ಅತ್ಯಂತ ಮಹತ್ವಾಕಾಂಕ್ಷಿಯಾದ ಮಾಯಾವತಿ ತನ್ನದೇ ಪಕ್ಷದ ಸರಕಾರವಿರುವಾಗ ಸರ್ವಾಧಿಕಾರಿಯಂತೆ ಮೆರೆದದ್ದು ಅಚ್ಚರಿ ತರುವ ಸಂಗತಿ ಏನೂ ಅಲ್ಲ.
ಈ ಐದು ವರ್ಷಗಳಲ್ಲಿ ಉತ್ತರ ಪ್ರದೇಶ ಎಷ್ಟು ಅಭಿವೃದ್ಧಿಯಾಯಿತು, ರಾಜ್ಯದ ಜನತೆಗೆ ಎಷ್ಟೊಂದು ಒಳಿತಾಯಿತು ಎನ್ನುವುದು ಒಂದೇ ಉದಾಹರಣೆಯಲ್ಲಿ ಕಂಡುಕೊಳ್ಳಬಹುದು. ಚುನಾವಣೆಗೆ ತಯಾರಾಗುವ ಸಮಯಕ್ಕೆ ಸೂಕ್ತವಾಗಿ ತನ್ನ ಸಾಧನೆಯಿಂದ ಮತದಾರರಲ್ಲಿಗೆ ಹೋಗಬೇಕಾದ ಮುಖ್ಯಮಂತ್ರಿ ಮಾಯಾವತಿ ಕೊನೆಯ ಕ್ಷಣದಲ್ಲಿ ಒಂದು ಆಟ ಆಡಿದರು. ಆ ತಂತ್ರವೇ ರಾಜ್ಯವನ್ನು 4 ವಿಭಾಗಗಳಲ್ಲಿ ಹಂಚಿ ವಿಂಗಡಿಸುವ ನಿರ್ಣಯ. ರಾಜ್ಯ ವಿಧಾನಸಭೆಯಲ್ಲಿ ಎಲ್ಲಾ ವಿಪಕ್ಷಗಳನ್ನು ಧಿಕ್ಕರಿಸಿ ಧ್ವನಿಮತದಿಂದ ರಾಜ್ಯವನ್ನು ವಿಭಜಿಸುವ ನಿರ್ಣಯವನ್ನು ಅವಸರದಿಂದ ಕೈಗೊಂಡು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದರ ಹಿಂದೆ ಗೋಚರಿಸುವುದು ಅಸಹಾಯಕತೆ, ಸ್ವಾರ್ಥ ಅಲ್ಲದೆ ಬೇರೆ ಏನೂ ಅಲ್ಲ. ಮತದಾರರ ಬಳಿ ಪುನಃ ಮತ ಯಾಚನೆಗೆ ಹೋಗಲು ತನ್ನ ಬಳಿ ಹೇಳಿಕೊಳ್ಳುವ ಯಾವುದೇ ಸಾಧನೆ ಇಲ್ಲದೇ ಇರುವುದರಿಂದಲೇ ಇಂತಹ ತೆವಲಿನ ಸಾಹಸಗಳಿಗೆ ಆಕೆ ಕೈ ಹಾಕಿದ್ದೆಂದು ಯಾರಿಗೂ ಊಹಿಸದೇ ಇರಲಾಗದು. ಮತದಾರರನ್ನು ಆಮಿಷಕ್ಕೊಡ್ಡಿಯೇ ವಶೀಕರಿಸುವ ಮೂಲಕ ಚುನಾವಣೆಗಳನ್ನು ಗೆಲ್ಲಬೇಕಾದ ಅನಿವಾರ್ಯತೆ, ಸಾಧ್ಯತೆ ಇರುವುದು ನಮ್ಮ ದೇಶದ ದುರಂತ. ಇದು ಎಲ್ಲಾ ಕಡೆಗಳಲ್ಲೂ ನಡೆಯುವಂತಹದ್ದು ಬಹಳಷ್ಟು ಖೇದಕರ.
ಈಗ, ಅಲ್ಲಿ ಚುನಾವಣಾ ರಂಗ ಕಳೆಗಟ್ಟುತ್ತಿದೆ. ರಾಷ್ಟ್ರೀಯ ಪಕ್ಷಗಳಾದ, ಒಂದು ಕಾಲದಲ್ಲಿ ವಿಜೃಂಭಣೆಯಿಂದ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ಎರಡೂ ದೈತ್ಯ ಪಕ್ಷಗಳು ಉತ್ತರ ಪ್ರದೇಶದ ಅಖಾಡದಲ್ಲಿ ಶಕ್ತಿಹೀನ ಸ್ಪರ್ಧಿಗಳು. ಅವುಗಳ ಪ್ರಸ್ತುತ ನಿರೀಕ್ಷೆಯೇ ಅದಕ್ಕೆ ಕೈಗನ್ನಡಿ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳೆರಡೂ ಉತ್ತರ ಪ್ರದೇಶದಲ್ಲಿ ಇಂದು ಹೋರಾಡುತ್ತಿರುವುದು ಚುನಾವಣೆಯಲ್ಲಿ ಗೆದ್ದು ಆಡಳಿತ ನಡೆಸುವ ಸಂಕಲ್ಪದಿಂದ ಖಂಡಿತಾ ಅಲ್ಲ. ಅವಕ್ಕೆ ಅಲ್ಲಿ ತಾವಿನ್ನೂ ಅಸ್ತಿತ್ವ ಉಳಿಸಿಕೊಂಡಿದ್ದೇವೆಂಬುದನ್ನು ಸಾಬೀತುಪಡಿಸುವುದೇ ಪ್ರಾಮುಖ್ಯವಾಗಿದೆ. ಏನೋ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡಿದ್ದೇ ಆದಲ್ಲಿ, ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣಗೊಂಡಲ್ಲಿ (ಅದೇ ಸಾಧ್ಯತೆ ಗೋಚರಿಸುತ್ತಿದೆ) ಸರ್ಕಾರ ರಚನೆಯಲ್ಲಿ ತಮ್ಮದೂ ಒಂದು ಕೈ ತೋರಿಸುವ, ಪಾಲು ಪಡೆಯುವ ದ್ವಿತೀಯ ಇರಾದೆ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಇರುವುದು ಇನ್ನೊಂದು ವ್ಯಂಗ್ಯ, ಅಷ್ಟೇ ವಿಪರ್ಯಾಸ ಕೂಡ.
ಸಮಯಸಾಧಕ ರಾಜಕಾರಣಕ್ಕೆ ಉ.ಪ್ರ. ಹೇಳಿ ಮಾಡಿಸಿದ ರಂಗ ಮಂದಿರ. ಕಾಂಗ್ರೆಸ್ಸಿನ ವೈಭವೋಪೇತ ರಾಜ್ಯಭಾರ ಸ್ವನಿರ್ಮಿತ ತಪ್ಪು ಹೆಜ್ಜೆಗಳಿಂದ ಕೊನೆಗೊಂಡ ನಂತರ ಅಲ್ಲಿ ಶುರುವಾಗಿದ್ದು ಪ್ರಾದೇಶಿಕ ಪಕ್ಷಗಳ ರಾಜ್ಯಭಾರ. ಜನತಾ ಪಕ್ಷವೆಂಬ ಒಂದು ಕಾಲದ ಪರ್ಯಾಯ ಶಕ್ತಿಯಾಗಿ ಉದಯಿಸಿ ಅಷ್ಟೇ ಬೇಗ ಛಿದ್ರವಾಗಿದ್ದ ಬಳಗವು ರಾಜ್ಯಕ್ಕೊಂದರಂತೆ ವಿಭಜನೆಗೊಂಡ ನಂತರ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಉದಯಿಸಿ ಅಧಿಕಾರ ಪಡೆಯಿತು. ಕಾನ್ಶೀರಾಮ್ ಸ್ಥಾಪಿಸಿದ ಬಹುಜನ ಸಮಾಜ ಪಕ್ಷ ಹಾಗೂ ಮಾಡಿಕೊಂಡ ಬಿಜೆಪಿ ಇಲ್ಲಿ ಆಡಳಿತ ನಡೆಸುವ ಅವಕಾಶವನ್ನು ಪಡೆದಿವೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೈಜೋಡಿಸಿದ್ದು ಹೊರತುಪಡಿಸಿ ಎಲ್ಲಾ ಪಕ್ಷಗಳು ಒಂದಲ್ಲೊಂದು ಬಾರಿ ಜೊತೆಯಾಗಿ ಮೈತ್ರಿ ಸರಕಾರ ನಡೆಸಿವೆ. ಕಳೆದ ಬಾರಿ ಬಿಎಸ್ಪಿಗೆ ಬಹುಮತ ಬಂದಿದ್ದರಿಂದಾಗಿ ಸರಕಾರವು ಸ್ಥಿರವಾಗಿ ನಡೆದಿದ್ದು ಒಂದೇ ಆ ರಾಜ್ಯದ ಹೆಗ್ಗಳಿಕೆಯೆನ್ನಬಹುದೇನೋ.
ರಾಮ ಮಂದಿರದ ಅಲೆಯಲ್ಲಿ ರಾಜ್ಯದ ಆಡಳಿತ ವಶಪಡಿಸಿಕೊಂಡ ಬಿಜೆಪಿಯ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಹೆಸರು ಕೆಡಿಸಿ ಕೊಂಡಿದ್ದಷ್ಟೇ ಅಲ್ಲದೆ, ಪಕ್ಷದಿಂದ ನಿರ್ಲಕ್ಷಿಸಲ್ಪಟ್ಟ ನಂತರ ಅಲ್ಲಿ ನೆಲಕಚ್ಚಿದ ಬಿಜೆಪಿ ನಂತರ ಎದ್ದಿದ್ದೇ ಇಲ್ಲ. ಕಾಂಗ್ರೆಸ್ ಪಕ್ಷ 2009ರ ಲೋಕಸಭಾ ಚುನಾವಣೆ ಯಲ್ಲಿ 21 ಸ್ಥಾನಗಳನ್ನು ಗಳಿಸಿದ್ದೇ ಬಹುದೊಡ್ಡ ಸಾಧನೆಯೆಂಬಂತೆ ಮೆರೆದಿದ್ದೇ ಮೆರೆದಿದ್ದು. ಅಲ್ಲೀಗ ಯಾವುದೇ ಪಕ್ಷಕ್ಕೆ ತಾನು ಬಹುಮತ ಪಡೆಯುವ ಭರವಸೆ ಖಂಡಿತಾ ಇಲ್ಲ. ಸದ್ಯದ ಪ್ರಕಾರ, ಎಲ್ಲಾ ವಿಶ್ಲೇಷಣೆ ಗಳಂತೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಪರ್ಧೆ ಇರುವುದು ಬಿಎಸ್ಪಿ ಮತ್ತು ಎಸ್‍ಪಿ ನಡುವೆ. ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಮತ ಗಳಿಕೆಯನ್ನು ಹೆಚ್ಚಿಸಿಕೊಳ್ಳುವುದರತ್ತ ಹೆಚ್ಚಿನ ಗಮನ ನೀಡುತ್ತಿವೆ. ಅವುಗಳಿಗೆ ಈ ಚುನಾವಣೆ ಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕೆಂಬ ಆಕಾಂಕ್ಷೆಯಿದ್ದರೂ, ಅದಕ್ಕಿಂತಲೂ ಹೆಚ್ಚಿನ ಮುತುವರ್ಜಿ ಇರುವುದು ಮುಂದಿನ ಲೋಕಸಭಾ ಚುನಾವಣೆಗೆ ರಂಗಸಜ್ಜಿಕೆ. ಹೀಗಾಗಿ ಇಲ್ಲಿ ಕಾಂಗ್ರೆಸ್, ಬಿಜೆಪಿಗಳು ಮೂರನೇ ಸ್ಥಾನಕ್ಕಷ್ಟೇ ಪೈಪೆÇೀಟಿ ನಡೆಸುವ ಹಂತದಲ್ಲಿವೆ.
ಕೇಂದ್ರದಲ್ಲಿ ಸಮ್ಮಿಶ್ರ ಸರಕಾರ ನಡೆಸುತ್ತಿರುವ ಕಾಂಗ್ರೆಸ್‍ಗೆ ಟಿಎಂಸಿಯ ಮಮತಾ ಬ್ಯಾನರ್ಜಿಯ ಉಪಟಳ ದಿನೇ ದಿನೇ ಹೆಚ್ಚುತ್ತಿರುವಾಗ ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಜರೂರತ್ತು ತುಂಬಾ ಇದೆ. ಕಾಂಗ್ರೆಸ್ ಹಾಗೂ ಅಜಿತ್ ಸಿಂಗ್‍ರ ರಾಷ್ಟ್ರೀಯ ಲೋಕದಳ ಪಕ್ಷಗಳು ಮೈತ್ರಿ ನಡೆಸಿ ಚುನಾವಣೆಗೆ ನಿಂತಿವೆ. ಕಳೆದ ಸಲ ಕೇವಲ 22 ಸ್ಥಾನಗಳನ್ನಷ್ಷೇ ಗೆದ್ದಿದ್ದ ಕಾಂಗ್ರೆಸ್ ಈ ಮೈತ್ರಿಯಿಂದಾಗಿ ಪ್ರಸ್ತುತ ಚುನಾವಣೆಯಲ್ಲಿ 50ಕ್ಕಿಂತ ಹೆಚ್ಚು ಅಥವಾ ಜಂಟಿಯಾಗಿ 75ರಿಂದ 100 ಸ್ಥಾನಗಳನ್ನು ಗೆದ್ದಿದ್ದೇ ಆದಲ್ಲಿ (ಅಂತಹ ಪವಾಡದ ನಿರೀಕ್ಷೆಯಲ್ಲಿ ಖುದ್ದು ಕಾಂಗ್ರೆಸ್ ಮುಖಂಡರೂ ಇಲ್ಲ) ಮುಂದಿನ ಸರಕಾರ ರಚನೆಯಲ್ಲಿ ಕಾಂಗ್ರೆಸ್‍ನ ಕೈ ಪ್ರಮುಖ ಪಾತ್ರ ವಹಿಸುವುದಂತೂ ಖಚಿತ. ಅಷ್ಟೇ ಅಲ್ಲದೆ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಬೆಂಬಲ ಗಳಿಸುವುದಕ್ಕಾಗಿ ಈ ಮೂಲಕ ಹೆಚ್ಚಿನ ಆಸ್ಪದ ಕಂಡುಕೊಳ್ಳುವುದರ ಮೂಲಕ ಮಮತಾ ಬ್ಯಾನರ್ಜಿಗೆ ಸಡ್ಡು ಹೊಡೆಯುವ ಉತ್ಸುಕತೆ ತೋರಿಸಬಹುದು.
ಸದ್ಯದ ಅಂದಾಜಿನಂತೆ ಕಾಂಗ್ರೆಸ್ ಮತ್ತು ಮುಲಾಯಂರ ಎಸ್‍ಪಿಗಳ ಚುನಾವಣೋತ್ತರ ಮೈತ್ರಿಯ ಸಾಧ್ಯತೆ ಕಂಡು ಬರುತ್ತಿದೆ. ಕಾಂಗ್ರೆಸ್-ಬಿಎಸ್ಪಿ ಮೈತ್ರಿಯನ್ನೂ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡರೆ ಅದೂ ಸಹ ಸರಕಾರ ರಚನೆಯಲ್ಲಿ ಪಾಲುಗೊಳ್ಳುವ ಅವಕಾಶ ಉಜ್ವಲವಾಗಿದೆ. ಸದ್ಯಕ್ಕೆ ಎಸ್‍ಪಿ ಹಾಗೂ ಬಿಎಸ್ಪಿ ಎರಡೂ ಬಿಜೆಪಿಯನ್ನು ವಿರೋಧಿಸುತ್ತಿವೆಯಾದರೂ ಬಿಜೆಪಿಗೆ ಅಧಿಕಾರ ಮತ್ತು ಮೈತ್ರಿ ಪಕ್ಷಗಳ ಅಗತ್ಯತೆ, ಅನಿವಾರ್ಯತೆ ಇರುವುದರಿಂದ ಯಾವುದೇ ರಾಜಿಗೂ ಅದು ಸಿದ್ಧವಾಗಿದೆ. ಎಲ್ಲರ ನಿರೀಕ್ಷೆ ತಲೆಕೆಳಗಾಗುವಂತೆ ಒಂದು ವೇಳೆ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡರೆ ಈ ಎಲ್ಲಾ ಅಂದಾಜಿನ ಲೆಕ್ಕಾಚಾರಗಳು ಮಣ್ಣುಪಾಲಾಗುವ ಜೊತೆಗೆ ಸೋತವರಿಗೆ ತಮ್ಮ ಭವಿಷ್ಯ ಮಸುಕಾಗುವ ವಾಸ್ತವವನ್ನು ಅರಿಯಲು ಉತ್ತಮ ಸಂದರ್ಭ ಕೂಡಿ ಬರಲಿದೆ. ಚುನಾವಣಾ ರಂಗ ಈಗಾಗಲೇ ಕಳೆಗಟ್ಟಿದ್ದು ಕೆಲವೇ ದಿನಗಳಲ್ಲಿ ಎಲ್ಲರ ಹಣೆಬರಹ ತಿಳಿಯಲಿದೆ.
ಸಮೀಕ್ಷೆ ರಹಿತ ಚುನಾವಣೆ
ಚುನಾವಣೆಯಲ್ಲಿ ಮತದಾರರು ಏನು ನಿರ್ಣಯ ಕೈಗೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಏನೇನು ಬೆಳವಣಿಗೆಗಳು ನಡೆಯಲಿವೆ, ಆ ಮೂಲಕ ಯಾರನ್ನು ಮತ ದಾರರು ಆಯ್ಕೆ ಮಾಡುತ್ತಾರೆ ಎಂಬುದನ್ನು ಮಾರ್ಚ್ 6ರ ಫಲಿತಾಂಶ ಹೇಳಲಿದೆ. ಅಲ್ಲಿಯವರೆಗೆ ರಾಜಕೀಯ ದೊಂಬರಾಟ ಹಾಗೂ ಸಾಕಷ್ಟು ಮನರಂಜನೆ ಆ ರಾಜ್ಯದ ಹಾಗೂ ಇಡೀ ದೇಶದ ಜನರಿಗೆ ದೊರಕುವುದಂತೂ ಖಂಡಿತ. ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸಿರುವುದರಿಂದಾಗಿ ಚುನಾವಣಾ ಪೂರ್ವ ಸಮೀಕ್ಷೆಗಳಿಂದ ಮುಕ್ತವಾದ ಮೊದಲ ದೊಡ್ಡ ಮಟ್ಟದ ಚುನಾವಣೆಗಳು ಈ ಬಾರಿ ನಡೆಯುತ್ತಿವೆ. ಹಾಗಾಗಿ ಫಲಿತಾಂಶ ಬರುವವರೆಗೆ ಯಾವುದೇ ರೀತಿಯ ಮುನ್ಸೂಚನೆ, ಟ್ರೆಂಡ್ ಬಗ್ಗೆ ಚರ್ಚೆ, ವರದಿಗಳಿಲ್ಲ. ಕೊನೆಯ ಹಂತದ ಚುನಾವಣೆ ಮುಗಿದ ದಿನ ಹೊರ ಬರಲಿರುವ ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ) ಬಹುತೇಕ ಫಲಿತಾಂಶವನ್ನು ಹತ್ತಿರದಿಂದ ಬಯಲಿಗೆಳೆಯುವ ಸಾಧ್ಯತೆಯಿತ್ತು. ಆದರೆ ಇತ್ತೀಚೆಗಷ್ಟೇ ಮತಗಟ್ಟೆ ಸಮೀಕ್ಷೆಯನ್ನೂ ಸಹ ಚುನಾವಣಾ ಆಯೋಗವು ನಿರ್ಬಂಧಿಸಿದೆ. ಹಾಗಾಗಿ ಮಾಧ್ಯಮಗಳಿಗೆ, ವಿಶ್ಲೇಶಕರಿಗೆ ಕಡಿವಾಣ ಬಿದ್ದಿದೆ. ಮಾತ್ರವಲ್ಲ, ಮತದಾರರಿಗೂ ಆಮಿಷ, ಪ್ರಭಾವಗಳಿಂದ ವಿಮುಕ್ತಿ ಸಿಕ್ಕಿದೆ.
(Originally published on February 19, 2012)