ತೃತೀಯ ರಂಗ: ಭಾರತದ ಪ್ರಗತಿಗೆ ಮಾರಕ
ರಾಜಕೀಯದ ಮತ್ತೊಂದು ಅಧ್ಯಾಯ ಆರಂಭವಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಮುಂದಿನ ಲೋಕಸಭಾ ಚುನಾವಣೆಗೆ ಮೊದಲ ಸೆಮಿಫೈನಲ್ ವಿಜೃಂಭಣೆಯಿಂದ ಆರಂಭವಾಗಿ ವೈಭವಯುತವಾಗಿ ಮುಂದುವರಿದು ನಾಟಕೀಯವಾಗಿ ಅಂತ್ಯ ಕಂಡಿದೆ. ನಿರೀಕ್ಷೆ, ಕಾತರಗಳಿಗೆ ಕೊಡಲಿಯೇಟು ನೀಡಿದ ಮತದಾರರು ತಮ್ಮನ್ನು ಕಡೆಗಣಿಸಿ ಯಾರು ಏನೇ ಆಟ ಆಡಿದರೂ ಪ್ರಯೋಜನವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮೊದಲೇ ನಿಸ್ತೇಜಗೊಂಡಂತಿದ್ದ ಕಾಂಗ್ರೆಸ್ ಮತ್ತು ಬಿಜೆಪಿಗಳೆಂಬ ರಾಷ್ಟ್ರೀಯ ಪಕ್ಷಗಳು ಈಗ ಸೊಂಟ ಮುರಿದುಕೊಂಡಂತೆ ಅಸಹಾಯಕ ಸ್ಥಿತಿಗೆ ಬಂದು ಬಿಟ್ಟಿವೆ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ತಮ್ಮನ್ನು ಬಿಟ್ಟು ಸರಕಾರ ರಚನೆ ಸಾಧ್ಯವಿಲ್ಲವೆಂಬ ತಿರುಕನ ಕನಸು ಕಂಡಿದ್ದ ಬಿಜೆಪಿ, ಕಾಂಗ್ರೆಸ್‍ಗಳೆರಡೂ ಅಲ್ಲಿ ಇನ್ನೊಮ್ಮೆ ಎದ್ದು ನಿಲ್ಲಲು ಹರ ಸಾಹಸಪಡಬೇಕಾದ ಚಿಂತಾಜನಕ ಹಂತಕ್ಕೆ ತಲುಪಿವೆ. ಇತರರ ಸೋಲನ್ನೇ ಹೇಳಿಕೊಂಡು ತಾವು ಗೆದ್ದಿದ್ದೇವೆ ಎಂಬ ಆರ್ತನಾದಕ್ಕಿಳಿದಿವೆ ಈ ಪಕ್ಷಗಳು.
ಕೇವಲ ಮಾಧ್ಯಮ, ಪ್ರಚಾರ ಭರಾಟೆಯಲ್ಲಿ ಚುನಾವಣೆಗೆ ಮುಂಚೆಯೇ ಗೆದ್ದುಕೊಂಡಂತೆ ನಡೆದುಕೊಂಡಿದ್ದ ಪಕ್ಷಗಳಿಗೆ, ನಾಯಕರಿಗೆ ಈಗ ಮುಲಾಮು ಸವರಲೂ ಜನರು ಸಿಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಮಾಯಾವತಿಯ ಭ್ರಷ್ಟಾಚಾರ, ದುಂದುವೆಚ್ಚದಿಂದ ಕಂಗೆಟ್ಟ ಮತದಾರರು ಪರ್ಯಾಯದ ಹುಡುಕಾಟದಲ್ಲಿದ್ದರೆ, ತಮಗೆ ಮತದಾರರು ಅನಾಯಾಸವಾಗಿ ಮತ ನೀಡುತ್ತಾರೆ, ನೀಡಬೇಕೆಂಬ ಭ್ರಮೆಗೆ ಬಿದ್ದ ಕಾಂಗ್ರೆಸ್, ಬಿಜೆಪಿಯ ಅವತಾರ ನೋಡಿದ ನಂತರ, ಮಾಯಾವತಿಯನ್ನು ಮನೆಗೆ ಕಳಿಸಿ ಇದ್ದುದರಲ್ಲಿಯೇ ಉತ್ತಮ ಆಯ್ಕೆಯಾಗಿ ಸಮಾಜವಾದಿ ಪಕ್ಷವನ್ನು ಮರಳಿ ಅಧಿಕಾರಕ್ಕೇರಿಸಿಯೇ ಬಿಟ್ಟರು. ಈ ಮೂಲಕ ಸತತ ಎರಡನೇ ಬಾರಿಗೆ ಉ.ಪ್ರ. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿದ ಪಕ್ಷಗಳು ಅಧಿಕಾರಕ್ಕೇರುವಂತಾಗಿದೆ. ಧರ್ಮ, ಜಾತಿ ಆಧಾರಿತವಾಗಿ ಜನರನ್ನು ಗೊಂದಲಕ್ಕೊಳಪಡಿಸಿ, ಬಂದಷ್ಟು ಲಾಭ ಬರಲಿ ಎಂಬ ಅಯೋಗ್ಯ ಲೆಕ್ಕಾಚಾರದಲ್ಲಿ ಮುಳುಗಿದ್ದ ಬಿಜೆಪಿ, ಕಾಂಗ್ರೆಸ್‍ಗೆ ಬಿದ್ದ ಒದೆ ಕನಿಷ್ಠ ಹತ್ತು ವರ್ಷ ನೆನಪಿನಲ್ಲುಳಿಯುವಂತದ್ದು.
ಪಂಜಾಬ್‍ನಲ್ಲಿ ಎಲ್ಲರ ಎಣಿಕೆಯನ್ನು ಬುಡಮೇಲು ಮಾಡಿ ಅಕಾಲಿದಳ-ಬಿಜೆಪಿ ಮೈತ್ರಿ ಸರಕಾರ ಇನ್ನೊಂದು ಅವಧಿಗೆ ವಿಸ್ತರಿಸಲ್ಪಟ್ಟಿದೆ. ಮಣಿಪುರದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿ ಸತತ 3ನೇ ಬಾರಿಗೆ ಅಧಿಕಾರ ಪಡೆದರೆ, ಗೋವಾದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಕಸದ ಬುಟ್ಟಿಗೆಸೆದ ಮತದಾರ ಪ್ರಭು ಬಿಜೆಪಿಗೆ ಮಣೆ ಹಾಕಿದ. ಉತ್ತರಾಖಂಡದಲ್ಲಿ ಆಳುತ್ತಿದ್ದ ಬಿಜೆಪಿ ಸರಿಯಾಗಿ ಹೊಡೆತ ತಿಂದರೂ ಕಾಂಗ್ರೆಸ್‍ಗೆ ಬಹುಮತ ದೊರೆತಿಲ್ಲ. ಕೇವಲ ಒಂದು ಸ್ಥಾನ ಹೆಚ್ಚು ಪಡೆದ ಕಾಂಗ್ರೆಸ್ ಸರಕಾರ ರಚಿಸಲು ಇತರರನ್ನು ಅವಲಂಬಿಸಬೇಕಾಗಿದೆ, ಬಿಜೆಪಿಯೂ ಆ ಪ್ರಯತ್ನದಲ್ಲಿದೆ.
ಒಟ್ಟಾರೆಯಾಗಿ ಈ ಚುನಾ ವಣೆಯಲ್ಲಿ ಗೆದ್ದದ್ದು ಪ್ರಾದೇಶಿಕ ಪಕ್ಷಗಳು. ದೊಡ್ಡ ರಾಜ್ಯವಾದ ಉ.ಪ್ರ.ದ 403 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟು ಗಳಿಕೆ ನೂರರ ಹತ್ತಿರಕ್ಕೂ ಸುಳಿದಿಲ್ಲ. ಇದನ್ನು ನೋಡಿದರೆ ಅವುಗಳ ಅವಸ್ಥೆ, ಸ್ಥಾನ ಎಂತಹದೆಂಬುದು ಸಾಬೀತಾಗುತ್ತದೆ. ಕಾಂಗ್ರೆಸ್‍ನ ಸೋಲನ್ನು ವೈಭವೀಕರಿಸುವ ಬಿಜೆಪಿ, ಬಿಜೆಪಿಯ ನಷ್ಟವನ್ನು ಎತ್ತಿ ತೋರಿಸುವ ಕಾಂಗ್ರೆಸ್ – ಎಂತಹ ಅಯೋಗ್ಯ ರಾಷ್ಟ್ರೀಯ ಪಕ್ಷಗಳೆಂಬುದನ್ನು ತಾವೇ ತೋರಿಸಿಕೊಡುತ್ತಿವೆ. ಈ ಚುನಾವಣೆಯಲ್ಲಿ ಪ್ರಾದೇಶಿಕ ವ್ಯವಹಾರಗಳದ್ದೇ ಪ್ರಮುಖ ವಿಷಯವಾಗಿದ್ದರಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವುಗಳ ಪರಿಣಾಮ ಅಷ್ಟೊಂದು ಪ್ರಾಮುಖ್ಯತೆ ಪಡೆಯುವ ಅಗತ್ಯವಿಲ್ಲ. ಆದರೆ, ಒಟ್ಟಾರೆಯಾಗಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ಬೇರೂರುವ ಲಕ್ಷಣಗಳು ಕಂಡು ಬಂದಿರುವುದು, ರಾಷ್ಟ್ರೀಯ ಪಕ್ಷಗಳಿಗೆ ದೊಡ್ಡ ಹೊಡೆತ. ಇದರ ಲಕ್ಷಣಗಳು ಈಗಾಗಲೇ ಕಂಡು ಬಂದಿವೆ.
ಏಕ ಪಕ್ಷಗಳ ಸರಕಾರಗಳು ಇತಿಹಾಸವಾಗಿ, ಸಮ್ಮಿಶ್ರ ಸರಕಾರಗಳ ಯುಗ ಯಾವಾಗ ಸುರುವಾಯಿತೋ, ಅಲ್ಲಿಂದಲೇ ಭಾರತದ ರಾಜಕೀಯ ಪತನ ಶುರುವಾಯಿತು. ಅಧಿಕಾರ ನಡೆಸಿ ನಡೆಸಿ ಅಸಡ್ಡೆ ಬೆಳೆಸಿಕೊಂಡ ಕಾಂಗ್ರೆಸ್ ಒಂದೆಡೆಯಾದರೆ, ಕಾಂಗ್ರೆಸನ್ನು ಕೆಡವಲು ಹುಟ್ಟಿಕೊಂಡ ವಿವಿಧ ಪಕ್ಷಗಳು ಜೊತೆಯಾಗಿ, ಕೊನೆಗೆ ಸ್ವಯಂಕೃತ ಅಪರಾಧದಿಂದ ಕಾಂಗ್ರೆಸ್ ಒಂದೊಂದೇ ರಾಜ್ಯಗಳಿಂದ ಕಣ್ಮರೆಯಾದಾಗಿನಿಂದ ವಿವಿಧ ಪಕ್ಷಗಳು ಸರಕಾರ ರಚನೆ ಮಾಡಲು ಸುರುವಾಗಿ, ಇದೀಗ ಕೇಂದ್ರ ಸರಕಾರವನ್ನು ಏಕೈಕ ಪಕ್ಷ ಬಹುಮತದಿಂದ ಆಳುವುದು ಸದ್ಯದ ಮಟ್ಟಿಗೆ ಅಸಾಧ್ಯವೆಂಬ ಪರಿಸ್ಥಿತಿಗೆ ಬಂದು ತಲುಪಿದೆ. ಜನತಾ ಪಕ್ಷ ಕಾಂಗ್ರೆಸ್‍ಗೆ ಪರ್ಯಾಯವಾಗಿ ಬೆಳೆಯುವ ಹಂತಕ್ಕೆ ಬಂದರೂ ನಾಯಕರ ಒಳಜಗಳಗಳಿಂದ ಆ ಪಕ್ಷ ಛಿದ್ರವಾಗಿ ರಾಜ್ಯಕ್ಕೊಬ್ಬರಂತೆ ಒಂದೊಂದು ಪಕ್ಷವನ್ನು ಸ್ಥಾಪಿಸಿದರು. ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಅಲ್ಲೆಲ್ಲಾ ಸಂಪೂರ್ಣ ನಿರ್ನಾಮವಾಯಿತು. ತಮಿಳುನಾಡು ಇದಕ್ಕೆ ಉತ್ತಮ ನಿದರ್ಶನ. ಬಿಜೆಪಿ ಪ್ರವರ್ಧಮಾನಕ್ಕೆ ಬಂದ ನಂತರ ಪ್ರಾದೇಶಿಕ ಪಕ್ಷಗಳಿಲ್ಲದ ಕಡೆ ಕಾಂಗ್ರೆಸ್‍ಗೆ ಪರ್ಯಾಯವಾಗಿ ಬೆಳೆಯಿತು. ಕೆಲವೇ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ, ಹೆಚ್ಚಿನ ರಾಜ್ಯಗಳಲ್ಲಿ ಸ್ಪರ್ಧೆ ಇರುವುದು, ಅಧಿಕಾರ ಹಂಚಿಕೊಂಡಿರುವುದು ಪ್ರಾದೇಶಿಕ ಪಕ್ಷಗಳೇ. ಬಹುಶಃ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೇ ಮುಂಚೂಣಿಯಲ್ಲಿವೆ. ಬೇರೆ ಕಡೆಯಲ್ಲೆಲ್ಲಾ ಇತರ ಪಕ್ಷಗಳೇ ರಾರಾಜಿಸುತ್ತಿವೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಸ್ಪರ್ಧೆಯಿರುವ ರಾಜ್ಯಗಳು ಬೆರಳೆಣಿಕಯಷ್ಟೇ.
ಇದರ ಲಾಭ ಪ್ರಾದೇಶಿಕ ಪಕ್ಷಗಳಿಗೆ, ಬಯಸದೇ ಬಂದ ಭಾಗ್ಯದಂತೆ ಕಂಗೊಳಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಗೆ ಮುಂಚೆ, ಇನ್ನೊಂದು ಅತಂತ್ರ ಸಂಸತ್ ನಿರ್ಮಾಣಗೊಳ್ಳುವ ನಿರೀಕ್ಷೆಯಿಂದಾಗಿ, ಹಳೆಯ ಸುಮಧುರ ನೆನಪುಗಳಿಂದ ಜಾಗೃತಗೊಂಡು ಪುಳಕಗೊಂಡ ಪ್ರಾದೇಶಿಕ ಪಕ್ಷಗಳ ಮುಖಂಡರು ತೃತೀಯ ರಂಗವನ್ನು ಮತ್ತೆ ಹಳಿಗೆ ತರಲು ಪ್ರಯತ್ನಿಸಿದ್ದರು. ನಮ್ಮ ದೇವೇಗೌಡರಿಂದ ಹಿಡಿದು, ಜಯಲಲಿತಾ, ಎಡಪಕ್ಷಗಳು, ತೆಲುಗು ದೇಶಂ, ಬಿಜು ಜನತಾ ದಳ, ಮಾಯಾವತಿ ಮುಂತಾದವರು ಒಂದೆಡೆ ಸೇರಿ ತೃತೀಯ ರಂಗವನ್ನು ಎಬ್ಬಿಸಲು ಪಂಚಾಂಗ ಕಟ್ಟಲು ಹೊರಟಿದ್ದರು. ಅವಕಾಶವಾದಿ ಶರದ್ ಪವಾರ್ ಕಾಂಗ್ರೆಸ್ ಜೊತೆ ಮಂಚ ಹಂಚಿಕೊಂಡಿರುವಾಗಲೇ ತೃತೀಯ ರಂಗದ ಜೊತೆ ಸೆರಗು ಹಂಚಲು ಹೋಗಿ ಕೊನೆಗೆ ಕಾಂಗ್ರೆಸ್‍ನ ಕಟು ಎಚ್ಚರಿಕೆಗೆ ಹೆದರಿ ಪಲಾಯನ ಮಾಡಿದ್ದೂ ರೋಚಕವಾಗಿತ್ತು. ಮತದಾನ ಮುಗಿಯುವ ಹೊತ್ತಿಗೆ ಇವರ ಅಬ್ಬರ ಸಾಕಷ್ಟು ಪ್ರಚಾರ ಗಳಿಸಿತ್ತು.
ಆದರೆ ಫಲಿತಾಂಶ ಮಾತ್ರ ಅವರ ಆಸೆ, ಆಕಾಂಕ್ಷೆ, ದುರಾಸೆಗಳಿಗೆ ಚಪ್ಪಲಿಯೇಟು ನೀಡಿತ್ತು. ದೇಶಕ್ಕೆ ಸ್ಥಿರ, ಪ್ರಗತಿಪರ ಸರಕಾರವೇ ಅಗತ್ಯವೆಂದು ಪರಿಗಣಿಸಿದ ಮತದಾರರು ಕಾಂಗ್ರೆಸನ್ನು ಹೆಚ್ಚು ಬಲಪಡಿಸಿ ಯುಪಿಎಯನ್ನು ಪುನರಾಯ್ಕೆ ಮಾಡಿದ್ದರು. ತೃತೀಯ ರಂಗ ಅದೇ ದಿನ ಸ್ಮಶಾನ ತಲುಪಿತ್ತು.
ಆದರೆ ಕಾಂಗ್ರೆಸ್ ನೇತೃತ್ವದ ಸರಕಾರ ಬರ ಬರುತ್ತಾ ರಾಯನ ಕುದುರೆ ಕತ್ತೆಯಾದಂತಾಗುತ್ತಾ ಬಂದು, ಸರಣಿ ಹಗರಣಗಳಿಂದ ಪ್ರತಿಷ್ಠೆ, ಹೆಸರು ಕೆಡಿಸಿಕೊಂಡು ಅಂಡು ಸುಟ್ಟ ಬೆಕ್ಕಿನಂತಾಗಿರುವಾಗ, ಪ್ರತಿಪಕ್ಷ ಬಿಜೆಪಿಯೂ ಸಹ ಹಲ್ಲಿಲ್ಲದ ಹಾವಿನಂತಾಗಿರುವ ಇಂದಿನ ಪರಿಸ್ಥಿತಿ, ಸ್ಮಶಾನಕ್ಕೆ ಕಳುಹಿಸಲ್ಪಟ್ಟಿದ್ದ ತೃತೀಯ ರಂಗವೆಂಬ ಶವಕ್ಕೆ ಪುನರ್ಜನ್ಮ ಕೊಡಲು ಸೂಕ್ತ ಸಮಯವೆಂದು ತಿಳಿದುಕೊಂಡಿರುವ ವರ್ಗವೊಂದು ಕಾರ್ಯಕ್ಕಿಳಿದಿದೆ. ಸಮಾಜವಾದಿ ಪಕ್ಷ ಹಾಗೂ ಶಿರೋಮಣಿ ಅಕಾಲಿ ದಳಗಳು ಭರ್ಜರಿ ಗೆಲುವು ದಾಖಲಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಇದೇ ಸಾಧನೆಯನ್ನು ದಾಖಲಿಸಿದರೆ ಅದರ ನೇರ ಹೊಡೆತ ತಿನ್ನುವುದು ಕಾಂಗ್ರೆಸ್ ಮತ್ತು ಬಿಜೆಪಿ. ಅಲ್ಲಿಗೆ ಅತಂತ್ರ ಲೋಕಸಭೆ ಉದಯಿಸಿ, ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ವಾಗುತ್ತವೆ. ಅವರೆಲ್ಲಾ ಒಟ್ಟು ಸೇರಿ ಕೊಂಡು ತೃತೀಯ ರಂಗ ನಿರ್ಮಿಸಿ ಚುನಾವಣೆಗೆ ಇಳಿದು ಗಣನೀಯ ಯಶಸ್ಸು ಸಾಧಿಸಿದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಸಾಧ್ಯವೆಂಬ ಲೆಕ್ಕಾಚಾರವೇ ಈ ಬೆಳವಣಿಗೆಗೆ ಪ್ರೇರಣೆ.
ಸದ್ಯದ ಪರಿಸ್ಥಿತಿ ನೋಡಿದರೆ ಈ ಲೆಕ್ಕಾಚಾರ ಕೈಗೂಡುವ ಅವಕಾಶ ಹೆಚ್ಚಿದೆ. ಇಂಗು ತಿಂದ ಮಂಗನಂತಾಗಿರುವ ಕಾಂಗ್ರೆಸ್ ಹಾಗೂ ಮಾಣಿಕ್ಯ ಪಡೆದುಕೊಳ್ಳಬೇಕೆಂಬ ಮಂಗನಂತಾಗಿರುವ ಬಿಜೆಪಿಗಳಿಗೆ ಸ್ವತಃ ತಾವು ಒಳ್ಳೆಯ ಪ್ರದರ್ಶನ ನೀಡುವೆವೆಂಬ ಭರವಸೆ ಇಲ್ಲ. ಸಾಧ್ಯವಾದಷ್ಟು ಹೆಚ್ಚು ಮಿತ್ರ ಪಕ್ಷಗಳನ್ನು ಹೊಂದಿಸಿಕೊಂಡು ತಮ್ಮ ಕೂಟಗಳಿಗೆ ಹೆಚ್ಚಿನ ಬಲ ತರಲು ಶ್ರಮಿಸುವ ಅಸಹಾಯಕ ಪರಿಸ್ಥಿತಿ ಅವುಗಳದು.
ಅದಿರಲಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಗತಿ ಏಕೆ ಬಂತು? ಕೇವಲ ಕೋಮು, ಧಾರ್ಮಿಕ ಭಾವನೆಗಳನ್ನು ಕೆರಳಿಸಿಯೇ ಪ್ರವರ್ಧಮಾನಕ್ಕೆ ಬಂದ ಬಿಜೆಪಿಗೆ, ವಾಜಪೇಯಿ ನಂತರ ಎಲ್ಲರಿಂದಲೂ ಮಾನ್ಯತೆ ಪಡೆಯುವ ನಾಯಕ ದೊರೆಯದಿರುವುದು ದೊಡ್ಡ ಹಿನ್ನಡೆ. ಕಾಂಗ್ರೆಸ್ ಪಕ್ಷಕ್ಕೆ ಬೇರ್ಯಾವ ಶತ್ರುಗಳೂ ಬೇಕೆಂದಿಲ್ಲ. ಕಾಂಗ್ರೆಸ್‍ಗೆ ಕಾಂಗ್ರೆಸ್ಸೇ ದೊಡ್ಡ ಕಂಟಕ. ಮೊನ್ನೆ ಅಪರೂಪಕ್ಕೆಂಬಂತೆ ಮಾಧ್ಯಮಗಳ ಮುಂದೆ ಬಂದ ಸೋನಿಯಾ ಗಾಂಧಿ, ಚುನಾವಣಾ ಸೋಲಿಗೆ ನಾಯಕರು ಹೆಚ್ಚಾಗಿದ್ದೇ ಕಾರಣವೆಂಬುದನ್ನು ಒಪ್ಪಿಕೊಂಡಿದ್ದಾರೆ. ಇದರ ಅರಿವು ಪಕ್ಷ ಪಾತಾಳಕ್ಕಿಳಿದ ಮೇಲೆ ಉಂಟಾಗುತ್ತದೆಯೆಂದಾದರೆ ಹೈಕಮಾಂಡ್ ಸಹ ಅಷ್ಟೇ ಕಳಪೆ ನಿರ್ವಹಣೆ ನೀಡಿದೆಯೆಂದೇ ಅರ್ಥ. ಕಾಂಗ್ರೆಸ್ ಒಳಜಗಳ, ಕಚ್ಚಾಟದ ಲೇಟೆಸ್ಟ್ ಅಧ್ಯಾಯ ಉತ್ತರಾಖಂಡದಲ್ಲಿ ಸುರುವಾಗಿದೆ. 70 ಸದಸ್ಯರ ವಿಧಾನಸಭೆಯಲ್ಲಿ 32 ಸ್ಥಾನ ಪಡೆದ ಕಾಂಗ್ರೆಸ್, 31 ಸ್ಧಾನ ಗೆದ್ದ ಬಿಜೆಪಿ ಸರಕಾರ ರಚಿಸಲು ಕಸರತ್ತು ನಡೆಸುತ್ತಿರುವಾಗ, ಅದಿನ್ನೂ ಖಚಿತವಾಗದಿದ್ದರೂ ನಾಯಕನ ಸ್ಥಾನಕ್ಕಾಗಿ, ಮುಖ್ಯಮಂತ್ರಿಯಾಗಲು ಕಾಂಗ್ರೆಸ್‍ನಲ್ಲಿ ಬಹಿರಂಗ ಕಾದಾಟ ಶುರುವಾಗಿದೆ. ಕಾಂಗ್ರೆಸ್‍ನ ಈ ರೋಗ ಲಕ್ಷಣ ನಿರಂತರ. ಇದನ್ನು ಸರಿಪಡಿಸಲು ಆ ಇಂದಿರಾ ಗಾಂಧಿಯೇ ಎದ್ದು ಬಂದರೂ ಸಾಧ್ಯವಿಲ್ಲ. ಇಂತಹ ಹಲವು ರೋಗಗಳಿಂದ ಬಳಲುತ್ತಿದೆ ಕಾಂಗ್ರೆಸ್. ಇದಕ್ಕೆ ಕರ್ನಾಟಕ ಕಾಂಗ್ರೆಸ್‍ಗಿಂತ ಉತ್ತಮ ಉದಾಹರಣೆ ಬೇರೆ ಬೇಕೆ?
ಹಾಗಾಗಿ ಈ ಸಲ ಖಂಡಿತಾ ತಮ್ಮ ಬೇಳೆ ಬೇಯುತ್ತದೆ ಎಂಬ ವಿಶ್ವಾಸದಲ್ಲಿರುವ ಸೋತ ಹಾಗೂ ಗೆದ್ದ ಪ್ರಾದೇಶಿಕ ಪಕ್ಷಗಳು ಒಂದುಗೂಡುವ ಪ್ರಯತ್ನ ಆರಂಭಿಸಿವೆ. ಪ್ರಾದೇಶಿಕ ಪಕ್ಷಗಳ ಸಮ್ಮಿಶ್ರ ಸರಕಾರಗಳು ಕೇಂದ್ರದಲ್ಲಿ ಅಧಿಕಾರ ಹಿಡಿದಾಗಲೆಲ್ಲಾ ದೇಶದ ಪ್ರಗತಿ, ಅಭಿವೃದ್ಧಿ ಹಿನ್ನಡೆ ಕಂಡಿದೆ. ಅವುಗಳ ಕಚ್ಚಾಟದಿಂದ, ಸ್ವಾರ್ಥ, ದುರಾಸೆಯಿಂದ ಆಡಳಿತ ಕುಸಿದು ಬಿದ್ದಿದೆ, ಮೈತ್ರಿ ಮುರಿದು ಅಕಾಲಿಕ ಚುನಾವಣೆಗಳಿಂದ ದೇಶಕ್ಕೆ ಆರ್ಥಿಕ ನಷ್ಟವಾಗಿದೆ. ಉತ್ತಮ ನಾಯಕತ್ವದ ಕೊರತೆಯಿಂದ ದೇಶವೇ ಬಳಲಿದೆ. ಹೀಗಾಗಿ ಇನ್ನೊಮ್ಮೆ ಕೇವಲ ಸ್ವಾರ್ಥಕ್ಕಾಗಿ ಒಂದುಗೂಡುವ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಅದರಿಂದ ದೇಶವು ಅಧೋಗತಿಗೆ ಇಳಿಯುವುದು ನಿಶ್ಚಿತ.
(Originally published on March 09, 2012)