ಕರ್ನಾಟಕದ ರಾಜಕಾರಣಿಗಳೇ, ನೀಚ ಬುದ್ಧಿಯನ್ನು ಬಿಟ್ಟು ರಾಜ್ಯಕ್ಕಾಗಿ ಹೋರಾಡಿ
ಇದಕ್ಕಿಂತಲೂ ನಾಚಿಕೆಗೇಡು ಬೇರೇನಿದೆ?
ಅತ್ಯಂತ, ಹೀನಾತಿಹೀನ ಸಂಗತಿಯಿದು. ನೀಚಾತಿನೀಚ ಪರಿಸ್ಥಿತಿಯಿದು.
ನೀವೇ ಹೇಳಿ, ಇಡೀ ಭಾರತದಲ್ಲಿ ಕರ್ನಾಟಕವನ್ನು, ಕನ್ನಡಿಗರನ್ನು ಗಂಭೀರವಾಗಿ ಯಾರಾದರೂ ತೆಗೆದುಕೊಂಡಿದ್ದಾರೆಯೆ? ರಾಷ್ಟ್ರಕ್ಕೆ ಬಹಳ ಹಿಂದಿನಿಂದಲೂ ಮಹತ್ತರ ಕೊಡುಗೆಗಳನ್ನು ನೀಡಿದ ಈ ನಾಡಿಗೆ ಬೇರೆಯವರು ಏನು ಬೆಲೆ ಕೊಡುತ್ತಿದ್ದಾರೆ? ದೇಶದ ರಾಜಧಾನಿಯಲ್ಲಿಯೂ ಕನ್ನಡಿಗರಿಗೆ, ಕರ್ನಾಟಕಕ್ಕೆ ಹೇಳಿಕೊಳ್ಳುವ ಮನ್ನಣೆಯಿಲ್ಲ. ಇತ್ತ ಅಕ್ಕ ಪಕ್ಕದ ರಾಜ್ಯಗಳಿಂದಲೂ ನಮ್ಮ ರಾಜ್ಯಕ್ಕೆ ಆವಾಗಾವಾಗ ಶನಿಕಾಟಗಳು.
ಇವನ್ನೆಲ್ಲಾ ಸಹಿಸಿಕೊಂಡೇ ಕನ್ನಡ ನಾಡು ಹೈರಾಣಾಗಿದೆ.
ಇಂಗ್ಲಿಶಿನಲ್ಲಿ ‘Taken for granted’ ಅಂಥಾರಲ್ಲಾ, ಹಾಗೆ ಇದು. ನಮ್ಮವರ ಉದಾರತೆಯೋ ಉದಾಸೀನತೆಯೋ ಕೈಲಾಗದತನವೋ ಒಟ್ಟಾರೆ ನಮ್ಮ ರಾಜ್ಯಕ್ಕೆ ಎಲ್ಲೆಂದರಲ್ಲಿ ಸೋಲು, ಅವಮಾನ ಮತ್ತು ಅನ್ಯಾಯ.
ಹಿಂದೊಮ್ಮೆ, ಆವಾಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು, ರಾಜ್ಯದ ಪ್ರಮುಖ ಪತ್ರಿಕೆಯೊಂದರ ವಾಚಕರ ವಾಣಿ ವಿಭಾಗದಲ್ಲಿ ಓದುಗರೊಬ್ಬರು ‘ನಮ್ಮ ರಾಜ್ಯದ ಅಧಿಕಾರ ವರ್ಗದಲ್ಲಿರುವುದು ಗಾಂಪರ ಗುಂಪೇ?’ ಎಂದು ಕೇಳಿದ್ದರು. ಅಂದು ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಸತತ ಹಿನ್ನಡೆಯಾಗಿದ್ದರಿಂದ ಬೇಸತ್ತವರೊಬ್ಬರ ವೇದನೆಯಾಗಿತ್ತದು.
ಆ ಪ್ರಶ್ನೆ ಇಂದು ಹೆಚ್ಚು ಪ್ರಸ್ತುತ. ರಾಜ್ಯದ, ರಾಜ್ಯವನ್ನು ಪ್ರತಿನಿಧಿಸುವ ಕಾನೂನು, ಆಡಳಿತ ಮತ್ತಿತರ ವಿಭಾಗಗಳ ಅಧಿಕಾರಿಗಳು, ವಕೀಲರು ಮತ್ತಿತರರು ನಿಯತ್ತಿನಿಂದ ಕೆಲಸ ಮಾಡುತ್ತಿದ್ದಾರೆಯೇ ಎನ್ನುವ ಸಂಶಯ ಮೂಡುತ್ತಿದೆ, ಈ ಎಲ್ಲಾ ಬೆಳವಣಿಗೆಗಳಿಂದ. ಅವರೆಲ್ಲಾ ಗಾಂಪರಂತೆ ವರ್ತಿಸುತ್ತಿದ್ದಾರೆಯೇ ಎಂದು ಕೇಳಿದರೆ ಅದಕ್ಕೆ ಅವರೇ ಕಾರಣ.
ಮೊನ್ನೆಯ ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನೇ ತೆಗೆದುಕೊಳ್ಳಿ. ರಾಜ್ಯದ ಅರ್ಜಿಯನ್ನು ತಳ್ಳಿ ಹಾಕಲು ರಾಜ್ಯ ಮಾಡಿದ ವಾದವೇ ದುರ್ಬಲವಾಗಿದ್ದು ಮತ್ತು ಗೋವಾ ರಾಜ್ಯದವರು ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿದ್ದೇ ಕಾರಣ. ಇಲ್ಲಿಯೇ ತಿಳಿದು ಹೋಯಿತಲ್ಲಾ ನಮ್ಮವರ ಹಣೆಬರಹ!
ಆಗಾಗ ಪತ್ರಿಕೆಗಳಲ್ಲಿ ಬರುವ ಸುದ್ದಿ ಏನೆಂದರೆ ಕೊಲೆಗಾರನೊಬ್ಬನ, ಪಾತಕಿಯೊಬ್ಬನ ಖುಲಾಸೆಯದ್ದು. ಅಪರಾಧಿಯೊಬ್ಬ ಕ್ರಿಮಿನಲ್ ಕೃತ್ಯ ನಡೆಸಿ, ಬಂಧನ, ತನಿಖೆ ಇತ್ಯಾದಿಯೆಲ್ಲಾ ನಡೆದು ವರ್ಷಗಳ ನಂತರ ಕೋರ್ಟಿನಿಂದ ಆತನ ಬಿಡುಗಡೆಯಾಗಿರುತ್ತದೆ. ಇಲ್ಲಿ ನಿಜಕ್ಕೂ ಏನು ನಡೆದಿರುತ್ತದೆಯೆಂದರೆ, ಅಪರಾಧಿ ನಿಜಕ್ಕೂ ಕೊಲೆ ಮಾಡಿದ್ದರೂ, ತೀರ್ಪು ಕೊಡುವ ನ್ಯಾಯಾಧೀಶರು ಆತನನ್ನು ಬಿಡುಗಡೆ ಮಾಡುವುದು ಆತ ಕೊಲೆಗಾರನೆಂದು ಸಾಬೀತುಪಡಿಸುವುದರಲ್ಲಿ ಪೊಲೀಸರು ವಿಫಲವಾಗಿರುವುದರಿಂದಷ್ಟೇ.
ಗೊತ್ತಾಯಿತಲ್ಲ, ನ್ಯಾಯಾಲಯದ ತೀರ್ಪುಗಳು ವಾಸ್ತವಾಂಶವನ್ನು ಪರಿಗಣಿಸಿ ಬರುವುದಲ್ಲ, ಬದಲಾಗಿ ಅದರ ಮುಂದೆ ಮಂಡನೆಯಾಗುವ ಸಾಕ್ಷ್ಯ, ರುಜುವಾತು ಮತ್ತು ವಾದಗಳಷ್ಟೇ ಪ್ರಮುಖ ಎಂಬುದು ಇದರಿಂದ ಸಾಬೀತಾಗುತ್ತದೆ. ವಿಷಯ, ವ್ಯಾಜ್ಯವನ್ನು ಪರಿಣಾಮಕಾರಿಯಾಗಿ, ಸಮರ್ಥವಾಗಿ ಮಂಡಿಸುವ ವಕೀಲರು ಇಲ್ಲಿ ಅತ್ಯಂತ ಪರಿಣಾಮ, ಪ್ರಭಾವ ಬೀರುತ್ತಾರೆ.
ಆದರೆ ಇಲ್ಲಿಯವರೆಗೆ ಹಲವಾರು ವ್ಯಾಜ್ಯಗಳಲ್ಲಿ ಸರ್ವೋಚ್ಛ ನ್ಯಾಯಾಲಯದಿಂದ ಟ್ರಿಬ್ಯುನಲ್‍ಗಳವರೆಗೆ ಕರ್ನಾಟಕಕ್ಕೆ ಮೇಲಿಂದ ಮೇಲೆ ಯಾಕೆ ಸೋಲಾಗುತ್ತಿದೆ? ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದವರು, ಕ್ರಮಗಳನ್ನು ತೆಗೆದುಕೊಳ್ಳಬೇಕಾದವರು ಯಾರು? ಅದರ ಬದಲು ಅಸಡ್ಡೆ, ನಿರ್ಲಕ್ಷ್ಯವೇ ಎದ್ದು ಕಾಣಿಸುತ್ತಿಲ್ಲವೆ?
ಇನ್ನು ನಮ್ಮ ರಾಜಕಾರಣಿಗಳು!
ಕರ್ನಾಟಕದ ಸರ್ವ ಪಕ್ಷಗಳ ರಾಜಕಾರಣಿಗಳದು ನಿಜಕ್ಕೂ ಗಾಂಪರ ಗುಂಪೇ ಸರಿ. ಈ ರಾಜ್ಯಕ್ಕೆ ನ್ಯಾಯ ದೊರಕಿಸಲು ಕೆಲಸ ಮಾಡಿದ, ಮಾಡುತ್ತಿರುವ ಒಬ್ಬನೇ ಒಬ್ಬ ರಾಜಕಾರಣಿಯನ್ನು ಹೆಸರಿಸಿ ನೋಡೋಣ. ಒಬ್ಬರೂ ಸಿಗುತ್ತಿಲ್ಲ! ಅವರಿಗೆ ತಮ್ಮ ರಾಜಕಾರಣವಾಯಿತು, ಅಧಿಕಾರವಾಯಿತು. ಕನಿಷ್ಠ ತಮ್ಮನ್ನು ದಶಕಗಟ್ಟಲೆ ಕಾಲ ಚುನಾಯಿಸಿ ಅಧಿಕಾರ ಕೊಟ್ಟ ಮತಕ್ಷೇತ್ರದಲ್ಲೇ ಒಂಚೂರು ಅಭಿವೃದ್ಧಿ ಕೆಲಸ ನಡೆಸದ ಫುಡಾರಿಗಳು ಇನ್ನು ರಾಜ್ಯಕ್ಕೋಸ್ಕರ ಹೋರಾಡುತ್ತಾರೆಯೆ?
ಆರಂಭದಲ್ಲಿ ಹೇಳಿದೆನಲ್ಲಾ, ನಾಚಿಕೆಗೇಡಿನ ಸಂಗತಿಯೆಂದು. ಇದು ನಮ್ಮ ರಾಜಕಾರಣಿಗಳದು. ದೆಹಲಿಯಲ್ಲಿ ಸರಕಾರದ ಮಟ್ಟದಲ್ಲಿ ಅಥವಾ ತಮ್ಮ ಪಕ್ಷದ ಹೈಕಮಾಂಡ್‍ನೆದುರು ತಲೆ ಎತ್ತಿ ನಿಲ್ಲಬಲ್ಲ, ಎದೆಯುಬ್ಬಿಸಿ ಮಾತನಾಡಬಲ್ಲ ಒಬ್ಬನೇ ಒಬ್ಬ ಮುಖಂಡನನ್ನು ತೋರಿಸಿ ನೋಡೋಣ. ಅದು ಕಾಂಗ್ರೆಸ್ ಇರಬಹುದು ಬಿಜೆಪಿ ಇರಬಹುದು. ಇಲ್ಲಿನವರನ್ನು ಅಲ್ಲಿನ ದೊರೆಗಳು ಮಾತ್ರವಲ್ಲ ಚಪ್ರಾಸಿಗಳು ಸಹ ಕೇರ್ ಮಾಡುವುದಿಲ್ಲ.
ಅಂಥಾ ಯೋಗ್ಯತೆ, ಅರ್ಹತೆ, ಸಾಮರ್ಥ್ಯ ನಮ್ಮ ಕನ್ನಡ ನಾಡಿನ ರಾಜಕೀಯ ಮುಖಂಡರದು. ಇನ್ನು ಇಂಥವರಿಂದ ರಾಜ್ಯಕ್ಕೆ ಏನು ಸೌಭಾಗ್ಯ ದೊರಕೀತು ನೀವೇ ಹೇಳಿ!
ನಮ್ಮ ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ (ಅವಿಭಜಿತ) ರಾಜ್ಯಗಳನ್ನೇ ತೆಗೆದುಕೊಳ್ಳಿ. ಕೇರಳದಲ್ಲಿ ಒಂದು ಯೋಜನೆ ಬರಬೇಕೆಂದರೆ ಅಲ್ಲಿನ ಎಲ್ಲರೂ ತಾವೆಲ್ಲಾ ಒಂದೇ ಪಕ್ಷಕ್ಕೆ ಸೇರಿದವರಂತೆ ತಮ್ಮ ರಾಜ್ಯಕ್ಕಾಗಿ ಹೋರಾಡುತ್ತಾರೆ. ದೆಹಲಿಯ ಸರ್ಕಾರವನ್ನು ಅಲ್ಲಾಡಿಸುತ್ತಾರೆ, ತಮಗೆ ಬೇಕಾದ ಕೆಲಸ ಕಾರ್ಯ, ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಒಂದು ವೇಳೆ ವಿರೋಧ ಮಾಡುವುದಿದ್ದರೂ ಸರಿ, ಅಂದರೆ ಅವರ ರಾಜ್ಯಕ್ಕೆ ಹಾನಿ ಮಾಡಬಲ್ಲ ಯೋಜನೆ ಬೇಡವೆನ್ನುವಾಗಲೂ ಸಹ, ಅವರೆಲ್ಲಾ ಒಂದಾಗಿ, ಒಗ್ಗಟ್ಟಿನಿಂದ, ಒಕ್ಕೊರಲಿನಿಂದ ವಿರೋಧಿಸುತ್ತಾರೆ, ಹೋರಾಡುತ್ತಾರೆ.
ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ. ಉತ್ತರ, ಪಶ್ಚಿಮ, ಪೂರ್ವದ ರಾಜ್ಯಗಳಲ್ಲೂ ಅಲ್ಲಿನ ರಾಜಕಾರಣಿಗಳು ತಮ್ಮ ರಾಜ್ಯಕ್ಕೋಸ್ಕರ ಕೇಂದ್ರ ಸರಕಾರದ ಮುಂದೆ ಒಗ್ಗಟ್ಟಿನ ಬೇಡಿಕೆಗಳನ್ನಿಟ್ಟು ಹೋರಾಡುತ್ತಾರೆ. ಹಾಗಾಗಿ ಅವರ ಬೇಡಿಕೆಗಳನ್ನು ತಿರಸ್ಕರಿಸಲು ಕೇಂದ್ರ ಸರಕಾರಕ್ಕಾಗುವುದಿಲ್ಲ.
ಅದೆಲ್ಲಾ ಬಿಡಿ. ಕೇವಲ ಎರಡೇ ಎರಡು ಲೋಕಸಭಾ ಸ್ಥಾನಗಳಿರುವ, ದೇಶದ ಅತ್ಯಂತ ಪುಟ್ಟ ರಾಜ್ಯವಾದ ಗೋವಾದ ಎದುರು ಸಹ ಇಷ್ಟು ದೊಡ್ಡ, ಶಕ್ತಿವಂತ ಕರ್ನಾಟಕದ ಪರಿಸ್ಥಿತಿ ಕೂಡ ಬಲಹೀನ, ದುರ್ಬಲವಾಗಿದೆ ಎನ್ನುವಾಗ ಮರುಗದೇ ಇರಲಾದೀತೆ? ನಮ್ಮ 28 ಲೋಕಸಭಾ ಸದಸ್ಯರು ಕೇವಲ ಇಬ್ಬರು ಲೋಕಸಭಾ ಸದಸ್ಯರ ಎದುರು ಸೋಲುತ್ತಾರೆಂದರೆ ಅದಕ್ಕಿಂತ ಮಾನಹಾನಿಕರ ಬೇರಿನ್ನೇನಿದೆ?
ಇನ್ನು ಕೇಂದ್ರಾಡಳಿತಕ್ಕೆ ಕರ್ನಾಟಕದ ಬಗ್ಗೆ ಎಂತಹ ಭಾವನೆಯಿದೆ? ಯಾವ ಬೆಲೆಯಿದೆ?
ಕಿಂಚಿತ್ತೂ ಇಲ್ಲ. ಯಾಕೆಂದರೆ, ಅಂತಹ ಯೋಗ್ಯತೆಯನ್ನು ರಾಜ್ಯಕ್ಕೆ ಗಳಿಸಿ ಕೊಡುವ ಯಾವ ಮುಖಂಡರು ರಾಜ್ಯದಲ್ಲಿದ್ದಾರೆ ಹೇಳಿ. ಯಾವುದೇ ಪಕ್ಷವನ್ನೇ ನೋಡಿ, ಅಲ್ಲಿ ತಮ್ಮ ರಾಜ್ಯಕ್ಕಾಗಿ ಶ್ರಮಿಸಬೇಕಾದ, ದುಡಿಯಬೇಕಾದ, ಹೋರಾಡಬೇಕಾದ ಛಾತಿ, ಕ್ಷಮತೆ, ಸಾಮರ್ಥ್ಯವಿರುವವರು ಕಾಣಿಸುತ್ತಾರೆಯೆ?
ಅಷ್ಟಕ್ಕೂ ಅವರಿಗೆ ಅದರ ಅಗತ್ಯವಾದರೂ ಕಂಡುಬಂದದ್ದುಂಟೇ?
ಇಡೀ ದೇಶದ ಮುಂದೆ ಕರ್ನಾಟಕದ ರಾಜಕಾರಣಿಗಳೆಂದರೆ ಜೋಕರ್‍ಗಳಂತೆ ಕಾಣಿಸುತ್ತಾರೆ. ಇಂಥವರನ್ನು ಯಾರಾದರೂ ಯಾವ ಆಧಾರದ ಮೇಲೆ ಗಂಭೀರವಾಗಿ ಪರಿಗಣಿಸುತ್ತಾರೆ, ಅಲ್ಲವೆ?
ಮಣ್ಣಿನ ಮಗನೆಂದು ಕರೆಸಿಕೊಂಡ ದೇವೇಗೌಡರು ಪ್ರಧಾನಿ ಸ್ಥಾನವನ್ನಲಂಕರಿಸಿದ್ದರು. ಅವರು ರಾಜ್ಯಕ್ಕೆ ನೀಡಿದ ಕೊಡುಗೆಯೇನು? (ಯೂರೋಪಿನ ದೇಶವೊಂದರಲ್ಲಿ ಪುಂಡಾಟ ನಡೆಸಿ ಸೆರೆ ಸಿಕ್ಕಿದ ತಮ್ಮ ‘ಕುಮಾರ’ ಪುತ್ರನನ್ನು ಬಿಡಿಸಿಕೊಂಡಿದ್ದೇ ಬಹು ದೊಡ್ಡ ಸಾಧನೆ!?).
ಮಂಗಳೂರಿನಿಂದ ಬೆಂಗಳೂರಿಗೆ ಆಗ ಮೀಟರ್‍ಗೇಜ್ ರೈಲು ಸಂಪರ್ಕವಿತ್ತು. ಪ್ರತಿದಿನ ಅದರಲ್ಲಿ ಪ್ರಯಾಣಿಕರ ಮತ್ತು ಗೂಡ್ಸ್ ರೈಲುಗಳು ಸಂಚರಿಸುತ್ತಿದ್ದವು. ಮಂಗಳೂರಿನಿಂದ ಹಾಸನದ ವರೆಗಿದ್ದ ಮೀಟರ್‍ಗೇಜ್ ಹಳಿಯನ್ನು ಅಭಿವೃದ್ಧಿಪಡಿಸಿ ಬ್ರಾಡ್‍ಗೇಜ್‍ಗೆ ವಿಸ್ತರಿಸಲು ದೇವೇಗೌಡರು ಪ್ರಧಾನಿಯಾಗಿದ್ದಾಗ ಚಾಲನೆ ನೀಡಲಾಗಿತ್ತು.
ಇಂದಿಗೆ ಅದಕ್ಕೆ ಭರ್ತಿ 20 ವರ್ಷಗಳು ಸಂದವು. ಊಹುಂ! ಇಂದಿಗೂ ಮಂಗಳೂರಿನಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕವೇ ಆರಂಭವಾಗಿಲ್ಲ. ಗೊತ್ತಾಯಿತಲ್ಲ ನಮ್ಮ ರಾಜ್ಯದವರ ಹಣೆಬರಹ!
ಆ ಯೋಜನೆ ಘೋಷಣೆಯಾಗಿದ್ದೇ ತಡ ಇದ್ದ ಮೀಟರ್‍ಗೇಜ್ ಹಳಿಗಳನ್ನು ಕಿತ್ತೆಸೆಯಲಾಯಿತು. ಬೇಕೋ ಬೇಡವೋ ಎಂಬಂತೆ ಕುಂಟುತ್ತಾ, ಅತ್ಯಂತ ನಿಧಾನಗತಿಯಲ್ಲಿ ಆ ಕಾಮಗಾರಿ ಸಾಗುತ್ತಾ ಬಂದು, ಇಂದಿಗೂ ಪೂರ್ತಿಯಾಗಿಲ್ಲ! ಬರೋಬ್ಬರಿ ಇಪ್ಪತ್ತು ವರ್ಷಗಳನ್ನು ತೆಗೆದುಕೊಂಡೂ ಸಹ ಕೇವಲ ಹಳಿ ಬದಲಾವಣೆ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೆಂದರೆ ಅದಕ್ಕಿಂತ ನಿಕೃಷ್ಟತೆ ಬೇರೇನಿರಲಿಕ್ಕೆ ಸಾಧ್ಯ? ಇದರಿಂದಾಗಿ ರಾಜ್ಯಕ್ಕೆ, ದೇಶಕ್ಕೆ ಆದ ನಷ್ಟವನ್ನು ಊಹಿಸಲಾದೀತೆ? ಜನರಿಗೆ ಆದ ಅನ್ಯಾಯ, ಮೋಸ, ಸಂಕಷ್ಟಗಳಿಗೆ ಬೆಲೆ ಕಟ್ಟಲಾದೀತೆ?
ಜಾರ್ಜ್ ಫೆರ್ನಾಂಡಿಸ್.
ಮಂಗಳೂರಿನಲ್ಲಿ ಹುಟ್ಟಿದ ಕೊಂಕಣಿಗ, ಕನ್ನಡದ ಕಲಿ. ಅವರೂ ಸಹ ಕೆಲವೇ ತಿಂಗಳುಗಳ ಕಾಲ ರೈಲ್ವೇ ಮಂತ್ರಿಯಾಗಿದ್ದರು. ಆದರೂ ಅವರು ಕೊಂಕಣ ರೈಲು ಮಾರ್ಗವನ್ನು ಕ್ಲಪ್ತ ಸಮಯದಲ್ಲಿ ನಿರ್ಮಾಣ ಮಾಡಲು ಕಾರಣಕರ್ತರಾದರು. ಎಷ್ಟು ವ್ಯತ್ಯಾಸ ನೋಡಿ! ಅಸ್ತಿತ್ವದಲ್ಲಿದ್ದ ರೈಲು ಮಾರ್ಗದ ಹಳಿ ಬದಲಾವಣೆ ಮಾಡಲು ಇಪ್ಪತ್ತು ವರ್ಷಗಳು ಸಾಕಾಗಲಿಲ್ಲ. ಆದರೆ ಅಸ್ತಿತ್ವದಲ್ಲಿಯೇ ಇಲ್ಲದ ಒಂದು ಯೋಜನೆಯನ್ನು, ಅದೂ ಅತ್ಯಂತ ದುರ್ಗಮ ಹಾದಿಯಲ್ಲಿ, ಪಶ್ಚಿಮ ಘಟ್ಟಗಳ ಪರ್ವತ, ಸಮುದ್ರ ತಟದ ವಿಶಾಲ ನದಿಗಳ ಮೂಲಕ, ಅಂದರೆ ಹಲವು ಸುರಂಗ ಮಾರ್ಗಗಳು, ಅತ್ಯಂತ ಅಗಲ, ಎತ್ತರದ ಸೇತುವೆಗಳನ್ನು ಹೊಸದಾಗಿ ರಚಿಸಿಸಬೇಕಾಗಿದ್ದ ಅತ್ಯಂತ ಚಾಲೆಂಜಿಂಗ್, ಮಾಡಲು ಸಾಧ್ಯವೇ ಇಲ್ಲವೆಂದುಕೊಂಡಿದ್ದ ಯೋಜನೆಯೊಂದನ್ನು ಆರು ವರ್ಷಗಳಲ್ಲಿ ಸಂಪೂರ್ಣಗೊಳಿಸಲಾಯಿತು.
ಈ ಎರಡೂ ನಿದರ್ಶನಗಳು ನಮ್ಮ ಭಾರತದಲ್ಲಿಯೇ ನಡೆದವುಗಳು. ಜಾರ್ಜ್ ಫೆರ್ನಾಂಡಿಸ್ ಮತ್ತು ದೇವೇಗೌಡರಿಗೆ ಇರುವ ಕರಾರುವಾಕ್ ವ್ಯತ್ಯಾಸ ಇದರಲ್ಲಿಯೇ ಕಾಣುತ್ತದೆ. ಒಬ್ಬ ನಾಯಕನ ಇಚ್ಛಾಶಕ್ತಿ, ಕರ್ತೃತ್ವ ಶಕ್ತಿ, ಪ್ರಾಮಾಣಿಕತೆ ಅವರು ಕೈಗೊಂಡ ಕೆಲಸದಲ್ಲಿ ಕಾಣಬಹುದು.
ವಿಪರ್ಯಾಸ ಮತ್ತು ದುರದೃಷ್ಟ ನೋಡಿ – ಈ ಜಾರ್ಜ್ ಫೆರ್ನಾಂಡಿಸ್ ಅವರು ಕರ್ನಾಟಕದವರೇ ಆಗಿದ್ದರೂ ಅವರು ಕರ್ನಾಟಕದ ರಾಜಕಾರಣಿಯಾಗಲಿಲ್ಲ. ಅವರು ತಮ್ಮ ನೆಲೆಯನ್ನು ಉತ್ತರಕ್ಕೆ, ಮುಂಬೈ ಮತ್ತು ಬಿಹಾರಕ್ಕೆ ವರ್ಗಾಯಿಸಿದ್ದರು. ನಮ್ಮ ರಾಜ್ಯದ ಅದೃಷ್ಟ ನೋಡಿ! ಇಂತಹ ನಾಯಕನೋರ್ವನನ್ನು ರಾಜ್ಯವು ಗಳಿಸಿಕೊಳ್ಳಲಾಗಲಿಲ್ಲ. ಛೆ!
ಜಾರ್ಜ್ ಫೆರ್ನಾಂಡಿಸ್‍ರಿಂದ ಚಾಲನೆ ಪಡೆದು ಇ. ಶ್ರೀಧರನ್‍ರಿಂದ ಸಮರ್ಥವಾಗಿ ಜಾರಿಗೊಂಡ ಕೊಂಕಣ ರೈಲು ಯೋಜನೆಯ ಫಲವಾದರೂ ನಮ್ಮ ರಾಜ್ಯಕ್ಕೆ ದೊರಕಿತೆ ಎಂದರೆ ಅದೂ ಇಲ್ಲ. ಇದಕ್ಕಾಗಿ ರಾಜ್ಯ ಹಣ, ಭೂಮಿಯನ್ನೊದಗಿಸಿತು. ಆದರೆ ಕೊಂಕಣ ರೈಲ್ವೆ ನಿಗಮದ ಲಾಭವೆಲ್ಲಾ ಕೇರಳೀಯರಿಗೆ! ನಮ್ಮ ರಾಜಕಾರಣಿಗಳ ಯೋಗ್ಯತೆ, ಸಾಧನೆ ನೋಡಿ ಹೇಗಿದೆ!
ಮಂಗಳೂರನ್ನು ಪ್ರತ್ಯೇಕ ವಿಭಾಗ ಮಾಡಬೇಕೆಂಬ ದಶಕಗಳ ಬೇಡಿಕೆ ಇನ್ನೂ ಈಡೇರಿಲ್ಲ. ನಮ್ಮಿಂದ ಕೇಂದ್ರದಲ್ಲಿ ಮಂತ್ರಿಯಾಗುವವರೂ ಪಕ್ಕಾ ಗಾಂಪರಂತೆಯೇ ವರ್ತಿಸುತ್ತಾರೆಯೋ ಹೊರತು ತಮ್ಮ ನಾಡಿಗಾಗಿ ಒಂದು ಶಬ್ದವನ್ನೂ ಮಾತನಾಡುವವರಲ್ಲ.
ಕರ್ನಾಟಕಕ್ಕೆ, ಕನ್ನಡಿಗರಿಗೆ, ಕನ್ನಡ ಭಾಷೆಗೆ ಇಂದು ನಮ್ಮ ರಾಜ್ಯದಲ್ಲಿಯೇ ಏನು ಬೆಲೆ ಉಳಿದುಕೊಂಡಿದೆಯೆಂದು ನಿಮಗೆ ಗೊತ್ತು. ರೈಲ್ವೆ, ಬ್ಯಾಂಕಿಂಗ್‍ನಿಂದ ಹಿಡಿದು ಕೇಂದ್ರದ ಇಲಾಖೆಗಳಲ್ಲಿ, ಖಾಸಗಿ ಬ್ಯಾಂಕ್, ಕಂಪೆನಿ, ಮಾಲ್‍ಗಳು, ರಾಜ್ಯದ ನೆಲ, ಜಲ ಮತ್ತು ಪುಕ್ಕಟೆ ಟ್ಯಾಕ್ಸ್ ಲಾಭ ಪಡೆಯುವ ಸಾಫ್ಟ್‍ವೇರ್ ಕಂಪೆನಿಗಳ ವರೆಗೆ ಕನ್ನಡ ಮತ್ತು ಕರ್ನಾಟಕಕ್ಕೆ ಪಂಗನಾಮ, ಅನ್ಯಾಯ, ಅವಮಾನ, ಮೋಸವೇ ಹೊರತು ಸೂಕ್ತ ಗೌರವ, ಸ್ಥಾನಮಾನವಿಲ್ಲ. ಅದರ ಮೇಲೆ ಅಧಿಕಪ್ರಸಂಗದ, ಹೀಯಾಳಿಕೆ, ನಿಂದನೆಯ ವರ್ತನೆ, ಮಾತುಗಳು.
ಈ ಬೆಳವಣಿಗೆಗಳಿಗೆ ಪ್ರಮುಖ ಕಾರಣವೆಂದರೆ ನಮ್ಮ ಜನರ ಉದಾಸೀನತೆ ಮತ್ತು ನಮ್ಮ ರಾಜಕಾರಣಿಗಳ ನಪುಂಸಕತೆ. ಹಾಗಂತ ಸಮಸ್ಯೆಯೆಲ್ಲಾ ಕೇವಲ ರಾಷ್ಟ್ರೀಯ ಪಕ್ಷಗಳಿಂದ, ಪ್ರಾದೇಶಿಕ ಪಕ್ಷವಿದ್ದಿದ್ದರೆ ಎಲ್ಲಾ ಸರಿ ಹೋಗಿರುತ್ತಿತ್ತೆನ್ನುವುದೂ ಮುಠ್ಠಾಳತನವೇ ಸೈ.
ಕರ್ನಾಟಕದಲ್ಲಿ ಜನತಾ ಸರ್ಕಾರ ಹಲವು ಬಾರಿ ಆಡಳಿತ ನಡೆಸಿದೆ. ಜೆಡಿಎಸ್ ಪಕ್ಷವಂತೂ ದೇವೇಗೌಡರ ಮನೆಯ ಆಸ್ತಿಯಿದ್ದಂತೆ. ಅವರಿಗೆ ವರ್ಷವಿಡೀ ತನ್ನ ಕುಟುಂಬದ ಕೈಗೆ ಪಕ್ಷದ ಮತ್ತು ರಾಜ್ಯದ ಅಧಿಕಾರ ದೊರಕಬೇಕು ಎಂಬುದೇ ಉದಾತ್ತ ಧ್ಯೇಯ ಮತ್ತು ಚಿಂತೆ. ಕರ್ನಾಟಕದಲ್ಲಿ ಹುಟ್ಟಿದ್ದಕ್ಕೆ ನಾಚಿಕೆಯಾಗುತ್ತದೆ ಎಂದ ಈ ಮನುಷ್ಯ, ಕರ್ನಾಟಕಕ್ಕಾಗಿ ಮನ ಮಿಡಿದು ಕೆಲಸ ಮಾಡುತ್ತಾರೆನ್ನುವುದು ತಿರುಕನ ಕನಸು.
ನಮ್ಮ ರಾಜ್ಯದ ಎಲ್ಲಾ ಪಕ್ಷಗಳೂ ಒಂದೇ ಬುದ್ಧಿಯವು. ಅದರ ನಾಯಕರು ನಾಲಾಯಕರು, ಕೈಲಾಗದವರು. ಅವರಿಗೆ ತಮ್ಮ ಮತ್ತು ತಮ್ಮವರ ಹೊಟ್ಟೆ ತುಂಬಿದರಾಯಿತು. ರಾಜ್ಯಕ್ಕೆ, ನಾಡಿಗೆ ಏನಾದರೇನಂತೆ, ಇತರ ರಾಜ್ಯಗಳು ಕರ್ನಾಟಕವನ್ನು ಕಿತ್ತು ತಿಂದರೂ ಅವರಿಗೆ ವ್ಯಥೆಯಿಲ್ಲ, ನಾಚಿಕೆಯೂ ಆಗುವುದಿಲ್ಲ.
ಇನ್ನಾದರೂ ಪರಿಸ್ಥಿತಿ ಸುಧಾರಿಸೀತೆ? ಹಾಗೆ ಆಗಬೇಕಾದರೆ ಜನರು ತಮ್ಮ ಪ್ರತಿನಿಧಿಗಳನ್ನು, ಮುಖಂಡರನ್ನು ಉತ್ತರದಾಯಿಯಾಗುವಂತೆ ಮಾಡಬೇಕು. ಅದು ಅಷ್ಟು ಸುಲಭವೆ?
ಒಂದೇ ಒಂದು ಭರವಸೆಯೆಂದರೆ ಯುವಜನರು.
ಹೌದು. ಈಗಿನ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮುದಾಯ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಜಾಗೃತಿ, ಚಳವಳಿಗೆ ಹೊಸ ರೂಪ ದೊರಕುತ್ತಿದೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಯಬೇಕು. ಕನಿಷ್ಠ ಯುವ ರಾಜಕಾರಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಣೆ, ಬದಲಾವಣೆಯಾಗುವಂತೆ ಶ್ರಮಿಸಬೇಕು.
ಹಾಗಾದರೆ ಮಾತ್ರ ನಮ್ಮ ರಾಜ್ಯದ ಮರ್ಯಾದೆ ಮಣ್ಣುಪಾಲಾಗದೆ ಉಳಿದೀತು.
ನಿಮ್ಮ ಅನಿಸಿಕೆ, ಅಭಿಪ್ರಾಯ ನಮಗೆ ಕಳುಹಿಸಿ: budkuloepaper@gmail.com