ಎತ್ತಿನಹೊಳೆ ಯೋಜನೆಯ ವಿರುದ್ಧ ನಾನು ಹೋರಾಡುತ್ತೇನೆ: ಐವನ್ ಡಿಸೋಜ
ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ – ಬುಡ್ಕುಲೊ.com
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕರಾವಳಿಯ ಕ್ರಿಯಾಶೀಲ ಕಾಂಗ್ರೆಸ್ಸಿಗರಲ್ಲಿ ಮುಂಚೂಣಿಯಲ್ಲಿರುವವರು. ಜನಪರ ಹೋರಾಟ, ಪಕ್ಷಕ್ಕಾಗಿ ಬೀದಿಗಿಳಿಯಲು ಸದಾ ಮುಂದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗಳೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕ್ರೈಸ್ತರಿಗೆ ಮೀಸಲು. ಐದು ವರ್ಷ ಹಗಲಿರುಳು ಪಕ್ಷಕ್ಕಾಗಿ ದುಡಿದ ಐವನ್‍ಗೆ ಕಳೆದ ಬಾರಿ ಟಿಕೆಟ್ ಸಿಗಲಿಲ್ಲ. ಭಾವೀ ಎಂಎಲ್‍ಎ ಎಂದೇ ಹೇಳಿಕೊಂಡಿದ್ದ ಅವರೀಗ ಎಂಎಲ್‍ಸಿ. ಅದರ ನಂತರ ಸ್ಪರ್ಧೆಗೆ ಬಿದ್ದವರಂತೆ ಐವನ್ ಕೆಲಸ ಮಾಡುತ್ತಿದ್ದಾರೆಯೆ? ಇತ್ತೀಚೆಗೆ ಅವರನ್ನು ಸಂದರ್ಶಿಸಿದಾಗ ನಾನಾ ವಿಚಾರಗಳ ಬಗ್ಗೆ ಪ್ರಶ್ನಿಸಲಾಯಿತು. ಮಂಗಳೂರಿನ ಅಭಿವೃದ್ಧಿ, ಸ್ಮಾರ್ಟ್ ಸಿಟಿಯ ಕನಸು, ರಾಜ್ಯ ರಾಜಕೀಯ ಮತ್ತು ಎತ್ತಿನಹೊಳೆ ಯೋಜನೆಯ ಬಗ್ಗೆ ಕೂಲಂಕಷವಾಗಿ ಕೇಳಲಾಯಿತು. ಕೊಂಕಣಿಯಲ್ಲಿ ಪ್ರಕಟವಾದ ಸಂದರ್ಶನದ ಕನ್ನಡಾನುವಾದ ಇಲ್ಲಿದೆ. ಓವರ್ ಟು ಐವನ್ ಡಿಸೋಜ.
ಮೊದಲ ಭಾಗ: ಸ್ಮಾರ್ಟ್ ಸಿಟಿ ಮಂಗಳೂರು
ಬುಡ್ಕುಲೊ: ಮಂಗಳೂರು ಸ್ಮಾರ್ಟ್ ಸಿಟಿಯಾಗಲು ಆಯ್ಕೆಯಾಗಿದೆ. ಇದರಿಂದ ಎಂತಹ ಪ್ರಗತಿಯನ್ನು ನಾವು ನಿರೀಕ್ಷಿಸಬಹುದು? ಇಲ್ಲಿನ ಮೂಲ ಸೌಕರ್ಯಗಳಂತೂ ನಿಕೃಷ್ಠ ಸ್ಥಿತಿಯಲ್ಲಿವೆ. ಅತಿ ಕೆಟ್ಟ ರಸ್ತೆಗಳು, ಫುಟ್‍ಪಾತ್‍ಗಳಿಲ್ಲ, ಚರಂಡಿ ಅವ್ಯವಸ್ಥೆ…
ಐವನ್ ಡಿಸೋಜ: ನಮ್ಮ ಚಿಂತನೆ ಏನೆಂದರೆ, ಕೇವಲ ರಸ್ತೆಗಳ ಅಭಿವೃದ್ಧಿಯಷ್ಟೇ ಅಲ್ಲ. ರಸ್ತೆಗಳ ಬಗ್ಗೆ ಹೇಳುವುದಾದರೆ, ಮಂಗಳೂರಿನ ಬಹುತೇಕ ರಸ್ತೆಗಳು ಅಭಿವೃದ್ಧಿಗೊಂಡಿವೆ. ಕೆಲವು ಕಡೆ ನಾನಾ ಅಡ್ಡಿಗಳಿಂದ ಸಮಸ್ಯೆಗಳಾಗಿವೆ. ಸರಿಯಾದ ಫುಟ್‍ಪಾತ್‍ಗಳಿಲ್ಲದಿರುವುದು ನಿಜ. ಇದೆಲ್ಲಾ ನಮ್ಮ ಗಣನೆಯಲ್ಲಿದೆ.
ಬುಡ್ಕುಲೊ: ಮುಂದಿನ ಅಭಿವೃದ್ಧಿ ಯಾವ ರೀತಿ ಇರಲಿದೆ?
ಐವನ್ ಡಿಸೋಜ: ಸ್ಮಾರ್ಟ್ ಸಿಟಿ ಹೇಗೆಂದರೆ, ಇಲ್ಲೀಗ ರಸ್ತೆ ಅಗಲಗೊಳಿಸಲು ಜಾಗ ಇಲ್ಲದಿರುವುದರಿಂದ, ಅಮೆರಿಕದಲ್ಲಿರುವಂತೆ ರೋಡ್ ಓವರ್ ರೋಡ್ ಮಾಡುವ ಆಲೋಚನೆ ಇದೆ. ಅಲ್ಲಿ ಹೀಗೆ ಒಂದು ರಸ್ತೆಯ ಮೇಲೆ ಮೂರು, ನಾಲ್ಕು ರಸ್ತೆಗಳನ್ನು ನಿರ್ಮಿಸಲಾಗಿದೆ. ಅಲ್ಲಿ ತಾಂತ್ರಿಕತೆ ಬೆಳವಣಿಗೆಯಾಗಿದೆ. ಅದೇ ರೀತಿ, ಮಂಗಳೂರಿನಲ್ಲಿ ಎಲ್ಲೆಲ್ಲಾ ಜಾಗದ ಕೊರತೆಯಿದೆಯೋ ಅಲ್ಲಿ ರೋಡ್ ಓವರ್ ರೋಡ್ ನಿರ್ಮಿಸಬಹುದು. ಮೋನೋ ರೈಲಿನ ಬಗ್ಗೆಯೂ ಯೋಚಿಸಲಾಗುತ್ತಿದೆ. ನಮ್ಮಲ್ಲಿ ಮೋನೋ ರೈಲನ್ನು ರಸ್ತೆಯ ಮೇಲೆ ಅಳವಡಿಸಲಾಗಿದೆ. ಅಮೆರಿಕ ಸೇರಿದಂತೆ ಮುಂದುವರಿದ ದೇಶಗಳಲ್ಲಿ ಭೂಗತವಾಗಿ ರೈಲು ಸಂಪರ್ಕವಿದೆ. ಸ್ಟೇಶನ್‍ಗಳಿರುವಲ್ಲಿ ಸಬ್‍ವೇಗಳಿವೆ. ಅಲ್ಲಿ ಪಾರ್ಕಿಂಗ್‍ಗಾಗಿಯೇ ಕಾಂಪ್ಲೆಕ್ಸ್‍ಗಳಿವೆ. ನಮ್ಮಲ್ಲಿ ಅದಕ್ಕೆ ಜಾಗವಿಲ್ಲ, ಪಾರ್ಕಿಂಗ್‍ಗೆ ಸ್ಥಳವಿಲ್ಲ. ನಗರವೆಂಬುದು ಬರೀ ಹಂಪನಕಟ್ಟೆಯಲ್ಲಿ ಕೇಂದ್ರೀಕೃತವಾಗಿರಬಾರದು. ನಗರ, ಹೊರಭಾಗಗಳಿಗೆ ವಿಸ್ತರಣೆಯಾಗಬೇಕು. ಕಣ್ಣೂರು, ಅಡ್ಯಾರ್‍ನಿಂದ ಬಿ.ಸಿ. ರೋಡ್, ಬಂಟ್ವಾಳದವರೆಗೆ ನಗರವನ್ನು ಬೆಳೆಸಬಹುದು. ಅಲ್ಲಿಯವರೆಗೂ ನಗರಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಬಹುದು.
ಬುಡ್ಕುಲೊ: ಆ ವಿಷಯಕ್ಕೆ ಬರುವುದಾದರೆ, ದಶಕಗಳ ಹಿಂದೆಯೇ ಇಲ್ಲಿ ಜಿಲ್ಲಾಧಿಕಾರಿಯಾಗಿದ್ದ ಭರತ್‍ಲಾಲ್ ಮೀನಾರವರು ಈ ಬಗ್ಗೆ ಶ್ರಮಿಸಿ, ಕ್ರಮ ಕೈಗೊಂಡಿದ್ದರು. ನಮ್ಮಲ್ಲಿ ಎಲ್ಲರಿಗೂ ಎಲ್ಲವೂ ಹಂಪನಕಟ್ಟೆಯಲ್ಲಿಯೇ ಇರಬೇಕು, ದೊರಕಬೇಕು! ಹಾಗಾಗಿ ಈ ಯೋಜನೆಗೆ ಬಹಳ ವಿರೋಧ, ಪ್ರತಿರೋಧ ಕಂಡು ಬಂದಿತ್ತು. ಇಂತಹ ಸಂಗತಿಗಳನ್ನು ಹೇಗೆ ಎದುರಿಸುತ್ತೀರಿ?
ಐವನ್ ಡಿಸೋಜ: ಒಂದು ಕಾಲದಲ್ಲಿ ಅಂತಹ ಮನಸ್ಥಿತಿ ಇದ್ದದ್ದು ನಿಜ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಪಡೀಲಿನಲ್ಲಿ ನಿರ್ಮಾಣವಾಗುತ್ತಿದೆ. ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಬೊಂದೆಲ್‍ನಲ್ಲಿ ನಿರ್ಮಿಸಲಾಗುವುದು (ಅದನ್ನು ಬೈಕಂಪಾಡಿಯಲ್ಲಿ ಕಟ್ಟುವ ಯೋಜನೆ ಇತ್ತು). ಎಪಿಎಂಸಿ ಮಾರ್ಕೆಟ್‍ಯಾರ್ಡ್ ಈಗಾಗಲೇ ಬೈಕಂಪಾಡಿಗೆ ಹೋಗಿದೆ. ಬಂದರು ಪ್ರದೇಶದಲ್ಲಿ ವ್ಯಾಪಾರ ಮಾಡುವವರು ಅಲ್ಲಿಗೆ ತೆರಳಲಿದ್ದಾರೆ. ಬಸ್ಸು ನಿಲ್ದಾಣ ಪಂಪ್‍ವೆಲ್‍ಗೆ ಸ್ಥಳಾಂತರಗೊಳ್ಳುತ್ತಿದೆ. ಆಗ ನಗರದೊಳಗಿನ ಒತ್ತಡ ನಿವಾರಣೆಯಾಗುತ್ತದೆ. ಆರ್‍ಟಿಒ ಕಚೇರಿ ವಾಮಂಜೂರಿನ ತಿರುವೈಲ್‍ಗೆ ಹೋಗಲಿದೆ. ಲೈಸೆನ್ಸ್ ಟ್ರ್ಯಾಕ್ ಮುಡಿಪುವಿನಲ್ಲಿ ಆರಂಭವಾಗಿದೆ. ತೊಕ್ಕೊಟ್ಟನ್ನು ನಗರಪಾಲಿಕೆಗೆ ಸೇರಿಸುವ ಯೋಜನೆ ಇದೆ. ಬಜ್ಪೆ/ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳೂರು ಸ್ಮಾರ್ಟ್ ಸಿಟಿ ಪರಿಧಿಗೆ ಸೇರಿಸಬೇಕೆಂದು ನಾನು ಸಲಹೆ ನೀಡಿದ್ದೇನೆ. ಮರವೂರಿನ ಸೇತುವೆಯನ್ನು ಚತುಷ್ಪಥವನ್ನಾಗಿಸುವ ಯೋಜನೆಯಿದೆ. ಅದಕ್ಕಾಗಿ ನಾನು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದ್ದೆ, ಸರಕಾರ ಮಂಜೂರಾತಿ ನೀಡಿ ರೂ. 28 ಕೋಟಿ ಒದಗಿಸಿದೆ. ಅದು ಸರ್ಕಾರದ ಮುಂದಿರುವ ಯೋಜನೆ. ಇದೆಲ್ಲಾ ಸಾಧ್ಯವಾಗುವಾಗ ನಗರ ಎಲ್ಲೆಡೆ ವಿಸ್ತರಿಸಲಿದೆ.
ಮಂಗಳೂರಿನ ರೈಲ್ವೇ ನಿಲ್ದಾಣವೊಂದು ಮಾತ್ರ ಈಗಿರುವಲ್ಲಿಯೇ ಇರಲಿದೆ. ಅದನ್ನು ವಿಶ್ವ ದರ್ಜೆಯನ್ನಾಗಿ ಅಭಿವೃದ್ಧಿಗೊಳಿಸಬೇಕಿದೆ. ಅಲ್ಲೀಗ 40 ಎಕರೆ ಜಾಗವಿದೆ. ಹೆಚ್ಚುವರಿ 100 ಎಕರೆ ಜಾಗವನ್ನು ಸೇರ್ಪಡಿಸಿದಲ್ಲಿ ವಿಶ್ವ ದರ್ಜೆಯ ನಿಲ್ದಾಣವಾಗಿಸಬಹುದು. ಆರ್‍ಟಿಒ ಮತ್ತಿತರ ಕಚೇರಿಗಳು ಇಲ್ಲಿಂದ ಬೇರೆಡೆಗೆ ಹೋಗುವಾಗ ದೊರಕುವ ಸ್ಥಳವನ್ನು ಇದಕ್ಕಾಗಿ ಬಳಸಬಹುದು. ಆಗ ಮಂಗಳೂರನ್ನು ಝೋನಲ್ ಮತ್ತು ಡಿವಿಶನ್ ಮಾಡಲು ಸಾಧ್ಯವಾಗುತ್ತದೆ.
ಬುಡ್ಕುಲೊ: ಕಂಕನಾಡಿ ಸ್ಟೇಶನ್…?
ಐವನ್ ಡಿಸೋಜ: ಅದು ಹತ್ತಿರವೇ ಇದೆಯಲ್ವೇ? ಎರಡನ್ನೂ ಒಂದುಗೂಡಿಸಿ ವಿಶ್ವ ದರ್ಜೆಯ ನಿಲ್ದಾಣವನ್ನಾಗಿಸುವುದು ನನ್ನ ಕನಸು. ಇದನ್ನು ಸ್ಮಾರ್ಟ್ ಸಿಟಿಯಲ್ಲಿ ತರಬೇಕಿದೆ. ಇದರ ಅಭಿವೃದ್ಧಿಯ ಯೋಜನೆಯನ್ನು ನಾಲ್ಕು ವರ್ಷ ಹಿಂದೆಯೇ ಘೋಷಿಸಲಾಗಿದೆ. ಆದರೆ ಐದು ರೂಪಾಯಿಯ ಕೆಲಸವೂ ನಡೆದಿಲ್ಲ. ಈ ಬಗ್ಗೆ ನಮ್ಮ ಲೋಕಸಭಾ ಸದಸ್ಯರಿಗೆ ನಾನು ಒತ್ತಾಯ ಮಾಡಿದ್ದೇನೆ. ಸಾಕಷ್ಟು ಕೆಲಸ ಮಾಡಬೇಕಿದೆ, ಅದಾಗಿಲ್ಲ. ಇದುವರೆಗೆ ಸರ್ವೆ ಸಹ ನಡೆದಿಲ್ಲ.
ಬುಡ್ಕುಲೊ: ಸ್ಮಾರ್ಟ್ ಸಿಟಿಯ ಪ್ರಕ್ರಿಯೆ ಹೇಗೆ ಆರಂಭವಾಗಿದೆ?
ಐವನ್ ಡಿಸೋಜ: ಮೊದಲು ವಿಶನ್ ತಯಾರಿಸುವುದು, ನಂತರ ಪ್ರಕ್ರಿಯೆ ಶುರುವಾಗುತ್ತದೆ. ಕೇಂದ್ರ ಸರಕಾರ ಆರಂಭಿಸುವ 100 ಸ್ಮಾರ್ಟ್ ಸಿಟಿಗಳಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಆರು ನಗರಗಳಲ್ಲಿ ಮಂಗಳೂರು ಸಹ ಸೇರಿದೆ. ನಮ್ಮ ವಿಶನ್‍ಅನ್ನು ಸರಕಾರದ ಮುಂದಿಡಲಾಗುವುದು.
ಬುಡ್ಕುಲೊ: ಅದರ ನಂತರ ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ತಾನೆ?
ಐವನ್ ಡಿಸೋಜ: ಹೌದು. ನಾವೀಗ ಏನೆಲ್ಲಾ, ಹೇಗೆಲ್ಲಾ ಆಗಬೇಕೆಂಬುದನ್ನು ಮಂಡಿಸಿದ್ದೇವೆ. ಪ್ರಮುಖವಾಗಿ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಬೇಕು. ಟೂರಿಸಂ ಬೆಳೆಯಬೇಕು, ಅದಕ್ಕಾಗಿಯೇ ನಗರದೊಳಗೆ ಪ್ರತ್ಯೇಕ ಬಸ್ಸುಗಳನ್ನು ಹಾಕಬೇಕು. ಅದಕ್ಕಾಗಿ ಟ್ರಾಫಿಕ್ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು.
ಬುಡ್ಕುಲೊ: ಅಯ್ಯೋ, ಇಲ್ಲಿ ಟ್ರಾಫಿಕ್‍ನದ್ದೇ ಪ್ರಮುಖ ಸಮಸ್ಯೆಯಲ್ಲವೇ?
ಐವನ್ ಡಿಸೋಜ: ಹೌದು. ಟ್ರಾಫಿಕ್ ಒತ್ತಡವಿದೆ. ಅದನ್ನು ನಿವಾರಿಸಲು ರಿಂಗ್ ರಸ್ತೆ ನಿರ್ಮಾಣವಾಗಬೇಕು. ದೊಡ್ಡ ವಾಹನಗಳು ನಗರ ಪ್ರವೇಶಿಸಬಾರದು. ಹೆದ್ದಾರಿಗಳನ್ನು ಸಂಪರ್ಕಿಸಿ ಹೊರ ವಲಯದಿಂದಲೇ ಸಂಚರಿಸುವಂತಿರಬೇಕು.
ಬುಡ್ಕುಲೊ: ಅದು ದೊಡ್ಡ ವಾಹನಗಳಿಗಾಯಿತು. ಆದರೆ ಇಲ್ಲಿ ನಗರದೊಳಗೆಯೇ ವಾಹನಗಳ ದಟ್ಟಣೆಯಿದೆ, ಪ್ರತಿದಿನ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಲ್ಲಾ?
ಐವನ್ ಡಿಸೋಜ: ಅದಕ್ಕಾಗಿ ಸಣ್ಣ ವಾಹನಗಳಿಗೆ ಪ್ರೋತ್ಸಾಹ ನೀಡಬೇಕು. ಡಬಲ್ ಡೆಕ್ಕರ್ ಬಸ್ಸುಗಳನ್ನು ಹಾಕಿದರೆ ಹೆಚ್ಚಿನ ಜನರಿಗೆ ಪ್ರಯಾಣಿಸಬಹುದು. ಆಗ ಬಸ್ಸುಗಳ ಸಂಖ್ಯೆ ಕಡಿಮೆಗೊಳಿಸಬಹುದು. ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಿಸಬೇಕು. ಕೆಲ ಪ್ರದೇಶಗಳಲ್ಲಿ ನಿರ್ದಿಷ್ಟ ವಾಹನಗಳನ್ನು ನಿರ್ಬಂಧಿಸಬೇಕಿದೆ. ಅಗತ್ಯವಿರುವೆಡೆ ಏಕಮುಖ ಸಂಚಾರ ಮಾಡಬೇಕು. ಮಂಗಳೂರು ನಗರ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿಲ್ಲವಾದ ಕಾರಣ ಈ ಎಲ್ಲಾ ಸಮಸ್ಯೆಗಳು ಉಂಟಾಗಿವೆ.
ಬುಡ್ಕುಲೊ: ಇಲ್ಲಿ ಫುಟ್‍ಪಾತ್‍ಗಳೇ ಇಲ್ಲವಲ್ಲ? ನಗರದಲ್ಲಿ ಫುಟ್‍ಪಾತ್ ಅತ್ಯಗತ್ಯ. ಜನರಿಗಂತೂ ನಡೆದಾಡಲಿಕ್ಕೇ ಸಾಧ್ಯವಿಲ್ಲ. ರಸ್ತೆ ಕಾಂಕ್ರಿಟೀಕರಣಗೊಂಡಿದೆ ನಿಜ. ಆದರೆ ರಸ್ತೆಯಂಚಿನಲ್ಲಿ ಒಂದಿಂಚು ತಪ್ಪಿದರೆ ಪ್ರಪಾತಕ್ಕೇ ಬೀಳಬೇಕು. ಜೀವಕ್ಕೇ ಅಪಾಯ. ಯಾಕೆ ಹೀಗೆ?
ಐವನ್ ಡಿಸೋಜ: ಹೌದು. ಪಾದಾಚಾರಿಗಳಿಗೆ ಫುಟ್‍ಪಾತ್ ಅವಶ್ಯ.
ಬುಡ್ಕುಲೊ: ಒಂದು ಮನೆ ನಿರ್ಮಿಸುವಾಗ ಎಲ್ಲವೂ ಮೊದಲೇ ನಿಶ್ಚಿತವಾಗುತ್ತದೆ. ಪಂಚಾಂಗ, ಗೋಡೆ, ಮಾಡು, ಬಾಗಿಲು, ಕಿಟಕಿಯಿಂದ ಹಿಡಿದು ಎಲ್ಲವನ್ನೂ ಮೊದಲೇ ಪ್ಲಾನ್ ಮಾಡಲಾಗುತ್ತದೆ. ಕಾಂಟ್ರಾಕ್ಟ್ ಪಡೆದವನು ಅದನ್ನೆಲ್ಲಾ ಕಟ್ಟಿ ಕೊಡುತ್ತಾನೆ. ಆದರೆ ಇಲ್ಲಿ, ರಸ್ತೆಗೆ ಕಾಂಕ್ರೀಟ್ ಸುರಿಯುವ ಕಾಮಗಾರಿ ಮಾತ್ರ ನಡೆಯುತ್ತದೆ. ಫುಟ್‍ಪಾತ್, ಚರಂಡಿ ನಿರ್ಮಿಸುತ್ತಿಲ್ಲ. ಯಾವ ರೀತಿಯ ಪ್ಲ್ಯಾನಿಂಗ್ ಇದು?!
ಐವನ್ ಡಿಸೋಜ: ನಮ್ಮ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ಲೋಪವಾಗಿದೆ.
ಬುಡ್ಕುಲೊ: ಯಾಕೆ ಹೀಗೆ?
ಐವನ್ ಡಿಸೋಜ: ರಸ್ತೆ ಕಾಂಕ್ರೀಟೀಕರಣಗೊಳಿಸುವಾಗ ಕೇವಲ ರಸ್ತೆಗೆ ಕಾಂಕ್ರೀಟ್ ಹಾಕುವ ಯೋಜನೆಯನ್ನು ಮಾತ್ರ ಮಾಡಲಾಗಿದೆ. ಫುಟ್‍ಪಾತ್, ಚರಂಡಿ ವ್ಯವಸ್ಥೆಯ ಎಸ್ಟಿಮೇಶನ್ ನಡೆದಿಲ್ಲ. ನೀವು ಹೇಳಿದಂತೆ ಹಲವು ಜನರು ನಮಗೆ ಹೇಳಿದ್ದಾರೆ. ರಸ್ತೆ ನಿರ್ಮಾಣ ಕೆಲಸದಲ್ಲಿ ಲಾಭವಿದ್ದಿದ್ದರಿಂದ ಅದು ಮಾತ್ರ ಆಯಿತು. ಫುಟ್‍ಪಾತ್, ಚರಂಡಿ ವ್ಯವಸ್ಥೆ ನಿರ್ಮಿಸುವುದು ಕಷ್ಟದ ಕೆಲಸ, ಅದರಲ್ಲಿ ಲಾಭವಿಲ್ಲವೆಂದು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಮುಂದಿನ ಕಾಮಗಾರಿಗಳಲ್ಲಿ ಎಲ್ಲವನ್ನು ಮೊದಲೇ ಯೋಜಿಸುತ್ತೇವೆ. ಹಿಂದೆ ನಡೆದ ತಪ್ಪನ್ನು ಸರಿಪಡಿಸುತ್ತೇವೆ. ಹಿಂದೆ ಲೋಪಗಳಾಗಿವೆ, ಅದನ್ನು ನಾನು ಒಪ್ಪುತ್ತೇನೆ. ಅದನ್ನು ಸರಿಪಡಿಸುತ್ತಿದ್ದೇವೆ.
ಬುಡ್ಕುಲೊ: ಅಂದ್ರೆ, ಇದನ್ನೆಲ್ಲಾ ಸರಿಪಡಿಸಲಾಗುವುದೇ?
ಐವನ್ ಡಿಸೋಜ: ಹೌದು, ಖಂಡಿತ. ಆಗ್ಲೇಬೇಕು. ಬಿಶಪ್ ಹೌಸ್‍ನ ಮುಂದೆ ನೋಡಿ, ಫುಟ್‍ಪಾತ್ ನಿರ್ಮಾಣ ಮಾಡಿಯಾಗಿದೆ. ಹಂಪನಕಟ್ಟೆ ಮತ್ತು ಇತರ ಕಡೆಗಳಲ್ಲಿ ಕಾಮಗಾರಿ ಸಾಗುತ್ತಿದೆ. ಕೆಲ ಕಡೆಗಳಲ್ಲಿ ರಸ್ತೆ ಇದೆ, ಫುಟ್‍ಪಾತ್‍ಗೆ ಜಾಗವೇ ಇಲ್ಲ. ಜಾಗದ ಕೊರತೆ ಇದೆ. ಸೈಂಟ್ ಆಗ್ನೆಸ್ ಸ್ಪೆಶಲ್ ಸ್ಕೂಲ್ ಬಳಿ ಫುಟ್‍ಪಾತ್ ನಿರ್ಮಾಣವಾಗುತ್ತಿದೆ. ಎಲ್ಲಿ ಜಾಗವಿಲ್ಲವೋ ಅಲ್ಲಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಕಂಕನಾಡಿಯಿಂದ ಜೆಪ್ಪುವರೆಗಿನ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಕೆಲಸ ನಡೆಯುತ್ತಿದೆ.
ದ್ವಿತೀಯ ಭಾಗ: ರಾಜ್ಯ ರಾಜಕೀಯ ಮತ್ತು ಸರಕಾರ
ಬುಡ್ಕುಲೊ: ಕರ್ನಾಟಕ ಸರಕಾರ ಸಂವೇದನೆಯನ್ನು ಕಳೆದುಕೊಂಡಿದೆಯೆಂಬ ಆರೋಪ ದಿನಂಪ್ರತಿ ಕೇಳಿ ಬರುತ್ತಿದೆ. ರೈತರ ಆತ್ಮಹತ್ಯೆಗಳು, ಅತ್ಯಾಚಾರ, ಅಪರಾಧಗಳು ಹೆಚ್ಚುತ್ತಿವೆ. ಇವೆಲ್ಲದಕ್ಕೆ ಸರಕಾರ ಸ್ಪಂದಿಸುವ ರೀತಿ ನಿರಾಶಾದಾಯಕವಾಗಿದೆಯಲ್ವೆ?
ಐವನ್ ಡಿಸೋಜ: ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ತುಂಬಾ ದುಃಖದ ಸಂಗತಿ. ಅದಕ್ಕೆ ಸರಕಾರ ಕಾರಣವಲ್ಲ…
ಬುಡ್ಕುಲೊ: ರೈತರ ಆತ್ಮಹತ್ಯೆಯೊಂದೇ ಅಲ್ಲ, ಐಎಎಸ್ ಅಧಿಕಾರಿ ಡಿ.ಕೆ. ರವಿಯ ಸಾವು, ಮೊನ್ನೆ ಪೊಲೀಸ್ ಅಧಿಕಾರಿ ಜಗದೀಶ್ ಹತ್ಯೆಯಾಯಿತು. ಇದಕ್ಕೆಲ್ಲಾ ಸರಕಾರ ಸ್ಪಂದಿಸಿದ ರೀತಿ ಶೋಚನೀಯ. ಜನರನ್ನು ಫೇಸ್ ಮಾಡುವ ವಿಷಯದಲ್ಲಿ ಸರಕಾರ ದುರ್ಬಲವೆನಿಸುತ್ತಿದೆ!
ಐವನ್ ಡಿಸೋಜ: ಇಲ್ಲ. ಮಾಧ್ಯಮಗಳಲ್ಲಿ ನಮ್ಮ ಸರಕಾರದ ಬಗ್ಗೆ ಸರಿಯಾಗಿ ವರದಿಯಾಗುತ್ತಿಲ್ಲ. ನಮ್ಮ ಯೋಜನೆಗಳ, ಕೈಗೊಂಡ ಕಾರ್ಯಕ್ರಮಗಳ ಸರಿಯಾದ ಪ್ರಚಾರ ನಡೆದಿಲ್ಲ. ಮಾಧ್ಯಮಗಳಲ್ಲಿ ಸರಕಾರದ ಬಗ್ಗೆ ನಕಾರಾತ್ಮಕ ಪ್ರಚಾರ ನಡೆಯುತ್ತಿದೆಯೆಂದು ನನಗನಿಸುತ್ತಿದೆ.
ಬುಡ್ಕುಲೊ: ಅದೆಲ್ಲಾ ಹೊರಗಿನ ವಿಷಯವಾಯಿತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಆಪಾದನೆ, ಠೀಕೆ ಕೇಳಿ ಬಂದಾಗ ಸಹ ಕಾಂಗ್ರೆಸಿನ ಮಂತ್ರಿಗಳು ಬಾಯಿ ಬಿಚ್ಚುತ್ತಿಲ್ಲ. ಸಿಎಂ ಏಕಾಂಗಿಯಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ!
ಐವನ್ ಡಿಸೋಜ: ಮಾಧ್ಯಮಗಳಲ್ಲಿ ಸರಿಯಾಗಿ ಫೋಕಸ್ ಆಗುತ್ತಿಲ್ಲ. ಸಿಎಂ ಬಳಿ ನಾನು ಬಹಳ ಸಲ ‘ಕೇವಲ ಎಂಜಿನ್ ಚೆನ್ನಾಗಿದ್ದರೆ ಸಾಕಾಗದು, ಬಸ್ಸಿನ ಬಾಡಿಯೂ ಗಟ್ಟಿಯಿರಬೇಕು. ಇಲ್ಲದಿದ್ದರೆ ಅಪಾಯ ಸಂಭವಿಸುತ್ತದೆ’ ಎಂದು ಹೇಳಿದ್ದಿದೆ. ನಮ್ಮಲ್ಲಿ ನೂರು ಶೇಕಡ ಸರಿಯಾಗಿದೆ ಎಂದು ನಾನು ಹೇಳುತ್ತಿಲ್ಲ. ನಮ್ಮಲ್ಲಿಯೂ ಕೆಲ ಲೋಪಗಳಿರುವುದು ನಿಜ. ಸರಕಾರದ ಚಿಂತನೆ ಸರಿಯಾಗಿದೆ, ಕಾರ್ಯಕ್ರಮಗಳು ಚೆನ್ನಾಗಿವೆ. ಜನರಿಗೆ ಏನು ಆಶ್ವಾಸನೆ ಕೊಟ್ಟು ಅಧಿಕಾರ ಪಡೆದೆವೋ ಅದನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ.
ಬುಡ್ಕುಲೊ: ಅದರಿಂದ ಏನು ಪ್ರಯೋಜನವಾಯಿತು? ಸಿದ್ಧರಾಮಯ್ಯ ಸರಕಾರ ಜನರಿಗೆ ಹಲವು ‘ಭಾಗ್ಯ’ ಯೋಜನೆಗಳನ್ನು ಕೊಟ್ಟಿತು. ಹಿಂದಿನ ಯುಪಿಎ ಸರಕಾರವೂ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿತು. ಗೇಮ್ ಛೇಂಜರ್ ಎಂದು ಕರೆಯಲ್ಪಟ್ಟ ಫುಡ್ ಸೆಕ್ಯುರಿಟಿ ಬಿಲ್ ಬಂತು. ಆದರೆ ಚುನಾವಣೆಯಲ್ಲಿ ಅವೆಲ್ಲಾ ಪ್ರಯೋಜನಕ್ಕೇ ಬರಲಿಲ್ಲ. ಬೆಂಗಳೂರು ಮಹಾ ನಗರಪಾಲಿಕೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿಲ್ಲ. ನಿಮ್ಮ ಯೋಜನೆಗಳು ಜನರನ್ನು ತಲುಪುತ್ತಿಲ್ಲವೇ ಅಥವಾ ಮತಗಳನ್ನು ತಂದು ಕೊಡುತ್ತಿಲ್ಲವೇ?
ಐವನ್ ಡಿಸೋಜ: ಯುಪಿಎ ಕಾಲದಲ್ಲಿ ಪ್ರಪಂಚದಾದ್ಯಂತ ಆರ್ಥಿಕ ಕುಸಿತ ಸಂಭವಿಸಿದರೂ, ಡಾ. ಮನ್‍ಮೋಹನ್ ಸಿಂಗ್ ಸರಕಾರವು ಭಾರತದಲ್ಲಿ ಅದರ ಪರಿಣಾಮ ಉಂಟಾಗದಂತೆ ಮಾಡಿದರು. ಭಾರತೀಯ ಆರ್ಥಿಕತೆ ಸ್ಥಿರವಾಗಿತ್ತು. ಆದರೆ ನರೇಂದ್ರ ಮೋದಿಯವರು ಉತ್ತಮವಾಗಿ ಮಾರ್ಕೆಟಿಂಗ್ ಮಾಡಿದ್ದರಿಂದ ಬಿಜೆಪಿ ಗೆದ್ದಿತು.
ಬುಡ್ಕುಲೊ: ಕಾಂಗ್ರೆಸ್ ಯಾಕೆ ಮಾರ್ಕೆಟಿಂಗ್‍ನಲ್ಲಿ ಹಿಂದೆ ಬಿದ್ದಿದೆ?
ಐವನ್ ಡಿಸೋಜ: ನಿಜ, ಮಾರ್ಕೆಟಿಂಗ್‍ನಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ. ಆ ದಿಶೆಯಲ್ಲಿ ನಾನು ಇತ್ತಿಚೆಗೆ ನಮ್ಮ ತರುಣರನ್ನು ಸೋಶಿಯಲ್ ಮೀಡಿಯಾದ ಮಹತ್ವ ಮತ್ತು ಬಳಕೆಗೆ ಒತ್ತು ಕೊಡಲು ಹೇಳಿದ್ದೇನೆ.
ಬುಡ್ಕುಲೊ: ತಕ್ಷಣ ಚುನಾವಣೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟವಲ್ಲವೆ?
ಐವನ್ ಡಿಸೋಜ: ಹಾಗೇನಿಲ್ಲ. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇಬ್ಬರೂ ಒಟ್ಟಿಗೆ ಗೆದ್ದ ಸ್ಥಾನಗಳು 26 ಸಾವಿರ. ಆದರೆ ಕಾಂಗ್ರೆಸ್ 32 ಸಾವಿರ ಸ್ಥಾನ ಗೆದ್ದಿದೆ. ಡಿಸೆಂಬರ್‍ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ. ಜನರು ಮತ ಚಲಾಯಿಸುವಾಗ ಸರಕಾರದಿಂದ ತಮಗೆ ಏನು ಪ್ರಯೋಜನವಾಗಿದೆ, ಯಾವೆಲ್ಲಾ ಯೋಜನೆಗಳಾಗಿವೆ ಎಂಬುದನ್ನು ಪರಿಗಣಿಸುತ್ತಾರೆ.
ಬುಡ್ಕುಲೊ: ಆದರೆ ಬೆಂಗಳೂರಿನಲ್ಲಿ ಅದು ಪ್ರಯೋಜನಕ್ಕೆ ಬಾರಲಿಲ್ಲ!
ಐವನ್ ಡಿಸೋಜ: ನೋಡಿ, ಬೆಂಗಳೂರಿನಲ್ಲಿ ಬಹಳಷ್ಟು ಗೊಂದಲ ನಿರ್ಮಾಣವಾಗಿತ್ತು. ಅಲ್ಲಿ ಬಿಜೆಪಿಯೇ ಆಡಳಿತದಲ್ಲಿತ್ತು. ನಗರಪಾಲಿಕೆಯನ್ನು ವಿಭಜಿಸುವಲ್ಲಿನ ಗೊಂದಲ, ಅನಿಶ್ಚಿತತೆ, ನ್ಯಾಯಾಲಯದಲ್ಲಿದ್ದ ಕೇಸ್, ನಮ್ಮ ಬಗ್ಗೆ ಅಪಪ್ರಚಾರ ಇತ್ಯಾದಿಗಳೆಲ್ಲಾ ಪ್ರಭಾವ ಬೀರಿತು. ಆದರೆ ಕೊನೆಗೆ ನಾವೇ ಅಧಿಕಾರ ಗಳಿಸಿದ್ದೇವೆ.
ಬುಡ್ಕುಲೊ: ಆದರೆ ಅದು ಅಡ್ಡ ಹಾದಿಯ ಮೂಲಕವಲ್ಲವೆ?
ಐವನ್ ಡಿಸೋಜ: ಇಲ್ಲ. ಯಾರಿಗೂ ಸ್ಪಷ್ಟ ಬಹುಮತ ದೊರೆತಿರಲಿಲ್ಲ. ಬಿಜೆಪಿಗೆ ಅಗತ್ಯ ಸ್ಥಾನಗಳು ಸಿಕ್ಕಿರಲಿಲ್ಲ. ಜೆಡಿಎಸ್‍ನವರು ಬೆಂಬಲ ನೀಡಿದ್ದರಿಂದ ನಮಗೆ ಅಧಿಕಾರ ದೊರೆಯಿತು. ಜನಾದೇಶವೇ ಹಾಗಿತ್ತು. ನಾವೇನೂ ಜನಾದೇಶದ ವಿರುದ್ಧ ಹೋಗಿಲ್ಲ. ಪ್ರಜಾತಾಂತ್ರಿಕವಾಗಿಯೇ ನಾವು ಅಧಿಕಾರಕ್ಕೇರಿದ್ದು.
ಬುಡ್ಕುಲೊ: ಅದು ಟೆಕ್ನಿಕಲಿ ಕರೆಕ್ಟ್ ಎಂದಷ್ಟೇ ಹೇಳಬಹುದು…
ಐವನ್ ಡಿಸೋಜ: ಖಂಡಿತ. ಅಲ್ಟಿಮೇಟ್ಲಿ ಇಟ್ಸ್ ನಂಬರ್ ಗೇಮ್. ಸ್ಪರ್ಧೆಯಲ್ಲಿ ನಾವು ಗೆದ್ದೆವು.
ಬುಡ್ಕುಲೊ: ನಿಮ್ಮ ಸರಕಾರ ಎರಡೂವರೆ ವರ್ಷ ಪೂರೈಸಿದೆ. ಸಂಪುಟ ವಿಸ್ತರಣೆ ಮುಂದೂಡುತ್ತಲೇ ಇದೆ. ನಿಗಮ ಮಂಡಳಿ ಮತ್ತಿತರ ನೇಮಕಾತಿಗಳು ನಡೆದೇ ಇಲ್ಲ. ಯಾಕಿಷ್ಟು ತಡ? ಪಕ್ಷಕ್ಕಾಗಿ ದುಡಿದವರಿಗೆ, ಶ್ರಮಿಸಿದವರಿಗೆ ಅಧಿಕಾರ ಸಿಗುತ್ತಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುವುದಿಲ್ಲವೆ?
ಐವನ್ ಡಿಸೋಜ: ಈ ಬಗ್ಗೆ ಸರಕಾರದ ಮೇಲೆ ನಾವು ಬಹಳ ಸಲ ಒತ್ತಡ ಹಾಕಿದ್ದೇವೆ. ಎಲ್ಲೋ ಒಂದು ಕಡೆ ಸಮನ್ವಯದ ಕೊರತೆಯಾಗಿದೆ. ಕಾರ್ಯಕರ್ತರಿಗೆ, ಮುಖಂಡರಿಗೆ ಬೇಸರವಾಗಿರುವುದು ನಿಜ.
ಬುಡ್ಕುಲೊ: ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವೆ ಘರ್ಷಣೆ ನಡೆಯುತ್ತಿದೆಯೆ?
ಐವನ್ ಡಿಸೋಜ: ಇಲ್ಲ, ಅದೆಲ್ಲಾ ಏನೂ ಇಲ್ಲ. ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಗೊಂದಲ, ಅಸಮಾಧಾನ ಉಂಟಾಗಬಹುದೆಂಬ ಕಾರಣಗಳಿಂದ ತಡವಾಗಿದೆ. ಈಗ ನೇಮಕಾತಿ ಮಾಡಲು ಸೂಕ್ತ ಸಮಯ.
ಬುಡ್ಕುಲೊ: ದೇಶದಾದ್ಯಂತ ಕಾಂಗ್ರೆಸ್ ಈಗ ಚಿಂತಾಜನಕ ಪರಿಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯವೊಂದೇ ಕಾಂಗ್ರೆಸ್ ಕೈಯಲ್ಲಿರುವ ದೊಡ್ಡ ರಾಜ್ಯ. ಇಲ್ಲೂ ಅಧಿಕಾರ ಕಳೆದುಕೊಂಡರೆ ನಿಮಗೆ ದಿಕ್ಕುದೆಸೆಯಿಲ್ಲದಂತಾದೀತು!
ಐವನ್ ಡಿಸೋಜ: ಇದೊಂದು ತಾತ್ಕಾಲಿಕ ಪರಿಸ್ಥಿತಿಯಷ್ಟೇ. ಚರಿತ್ರೆಯಲ್ಲಿ ಹಲವು ಬಾರಿ ಕಾಂಗ್ರೆಸ್ ಸೋತಿದೆ, ಮತ್ತೆ ಅಧಿಕಾರಕ್ಕೆ ಬಂದಿದೆ.
ಬುಡ್ಕುಲೊ: ಆವಾಗ ಸಮರ್ಥ ನಾಯಕತ್ವವಿತ್ತು!
ಐವನ್ ಡಿಸೋಜ: ನಮಗೀಗ ಸೋನಿಯಾ ಗಾಂಧಿಯವರ ನಾಯಕತ್ವವಿದೆ. ಅವರ ನೇತೃತ್ವದಲ್ಲಿ ಎರಡು ಯುಪಿಎ ಸರಕಾರಗಳನ್ನು ನೀಡಿದ್ದೇವೆ. 80% ರಾಜ್ಯಗಳು ಕಾಂಗ್ರೆಸ್ ಕೈಯಲ್ಲಿದ್ದವು. ನಮಗೀಗ ಹಿನ್ನಡೆಯಾಗಿದೆ, ನಾನದನ್ನು ಒಪ್ಪುತ್ತೇನೆ. ಯುಪಿಎ ಸರಕಾರದ ಮಿತ್ರ ಪಕ್ಷಗಳು ನಡೆಸಿದ ಭ್ರಷ್ಟಾಚಾರ, ಅದನ್ನು ಸರಿಯಾಗಿ ನಿರ್ವಹಿಸದೇ ಇದ್ದದ್ದು, ನಮ್ಮನ್ನು ಸಮರ್ಥಿಸಿಕೊಳ್ಳಲು ವಿಫಲವಾಗಿದ್ದು, ಸರಕಾರದ ಯೋಜನೆಗಳು ಜನರಿಗೆ ತಲುಪದೇ ಹೋದದ್ದು, ನಮ್ಮ ಕಾರ್ಯಕರ್ತರನ್ನು ಕ್ರಿಯಾಶೀಲರನ್ನಾಗಿಡದೇ ಹೋದದ್ದು ಮತ್ತು ಅತಿಯಾದ ಆತ್ಮವಿಶ್ವಾಸ, ಹೇಗಿದ್ದರೂ ನಾವೇ ಅಧಿಕಾರಕ್ಕೇರುತ್ತೇವೆ ಎಂಬ ಮನೋಭಾವ – ಇವೆಲ್ಲಾ ಕಾರಣಗಳಿಂದಾಗಿ ನಾವು ಸೋತು ಹೋದೆವು. ಅದರಿಂದಾಗಿ ನಾವು ಸಾಕಷ್ಟು ಕಲಿತುಕೊಂಡಿದ್ದೇವೆ.
ಬುಡ್ಕುಲೊ: ಪಕ್ಷದ ಪುನಶ್ಚೇತನ ಹೇಗೆ ನಡೆಯುತ್ತಿದೆ?
ಐವನ್ ಡಿಸೋಜ: ನಾವು ಪಾಠ ಕಲಿತಿದ್ದೇವೆ. ಪಕ್ಷವನ್ನು ತಳಮಟ್ಟದಲ್ಲಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ.
ಬುಡ್ಕುಲೊ: ಕಾಂಗ್ರೆಸ್ಸಿನಲ್ಲಿ ಭಟ್ಟಂಗಿತನಕ್ಕೇ ಹೆಚ್ಚು ಮಾನ್ಯತೆ, ಬೆಲೆ ಅಲ್ವೇ? ಹೈಕಮಾಂಡ್ ಜೊತೆ ಯಾರು ಚೆನ್ನಾಗಿ ಸಂಪರ್ಕದಲ್ಲಿದ್ದಾರೋ ಅವರದೇ ಬೇಳೆ ಬೇಯುತ್ತೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಹಗಲಿರುಳು ದುಡಿದವರಿಗೆ ಬೆಲೆಯಿಲ್ಲ. ಕಾಂಗ್ರೆಸ್ ಪಕ್ಷ ಯಾವಾಗ ಇದನ್ನೆಲ್ಲಾ ಸರಿಪಡಿಸಿಕೊಳ್ಳುತ್ತೆ? ಸುಧಾರಣೆ ಸಾಧ್ಯವೇ?
ಐವನ್ ಡಿಸೋಜ: ಕಾಂಗ್ರೆಸ್ ಒಂದು ಮಾಸ್ ಪಾರ್ಟಿ. ಬಹಳ ದೊಡ್ಡ ಪಕ್ಷ. ಇಂಥದೆಲ್ಲಾ ಸಮಸ್ಯೆಗಳಿವೆ, ಇಲ್ಲವೆನ್ನಲಾರೆ. ಅದರಿಂದಾಗಿ ಪಕ್ಷದ ಮೇಲೆ ಪರಿಣಾಮವೂ ಆಗಿದೆ. ನಮ್ಮದು ಕೇಡರ್ ಬೇಸ್ಡ್ ಪಕ್ಷವಲ್ಲ, ನಮ್ಮದು ಮಾಸ್ ಬೇಸ್ಡ್ ಪಕ್ಷ. ನಮ್ಮಲ್ಲಿ ಹತ್ತು ಇಪ್ಪತ್ತೈದು ವರ್ಷ ಪಕ್ಷಕ್ಕಾಗಿ ದುಡಿದೂ ಅಧಿಕಾರ ಸಿಗದವರು ಇದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸರಿಯಾಗಲಿದೆ.
ಬುಡ್ಕುಲೊ: ಸಂಪುಟ ವಿಸ್ತರಣೆಯಲ್ಲಿ ಕ್ರೈಸ್ತರಿಗೆ ಅವಕಾಶ ದೊರಕಬಹುದೇ?
ಐವನ್ ಡಿಸೋಜ: ಕೆ.ಜೆ. ಜಾರ್ಜ್ ಈಗಾಗಲೇ ಸಚಿವಗಿದ್ದಾರೆ. ನಮಗೂ ಅವಕಾಶವಿದೆ.
ಮೂರನೇ ಭಾಗ: ಎತ್ತಿನಹೊಳೆಯೆಂಬ ದುರುಳ ಯೋಜನೆ
ಬುಡ್ಕುಲೊ: ಎತ್ತಿನಹೊಳೆ ಯೋಜನೆ ವಿರುದ್ಧ ಜಿಲ್ಲೆಯಾದ್ಯಂತ ವಿರೋಧ, ಪ್ರತಿಭಟನೆ ನಡೆಯುತ್ತಿದೆ. ನಿಮ್ಮ ಧೋರಣೆಯೇನು?
ಐವನ್ ಡಿಸೋಜ: ನೋಡಿ, ಎತ್ತಿನಹೊಳೆ ಯೋಜನೆ ಆರಂಭಿಸಿದ್ದು ಬಿಜೆಪಿ ಸರಕಾರ. ಅವರೇ ಮಂಜೂರಾತಿ ದೊರಕಿಸಿದ್ದು…
ಬುಡ್ಕುಲೊ: ಯಾರೇ ಆರಂಭಿಸಿರಬಹುದು. ಆದರೀಗ ನಿಮ್ಮದೇ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರದಲ್ಲಿದೆಯಲ್ಲಾ…?
ಐವನ್ ಡಿಸೋಜ: ಈ ಯೋಜನೆ ಅವರೇ ಬೀಜ ಹಾಕಿ ನೆಟ್ಟ ಗಿಡ. ಈಗದು ಬೆಳೆದಿದೆ. ಅದನ್ನು ಕತ್ತರಿಸಿ ತೆಗೆಯಬೇಕೆಂದು ಅವರೇ ಹೇಳುತ್ತಿದ್ದಾರೆ. ನನ್ನ ಪ್ರಾಮಾಣಿಕ ಅಭಿಪ್ರಾಯವೇನೆಂದರೆ, ನಾನು ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ, ನನಗನಿಸುತ್ತೆ ಕುಡಿಯುವ ನೀರಿನ ಯೋಜನೆಗೆ ಇಂತಹ ಬೃಹತ್ ಯೋಜನೆಯ ಅಗತ್ಯವಿಲ್ಲ. 13,000 ಕೋಟಿ ರೂಪಾಯಿ ವೆಚ್ಚ ಮಾಡಿ ಇಲ್ಲಿನ ನೀರನ್ನು ಅಲ್ಲಿಗೆ ತೆಗೆದುಕೊಂಡು ಹೋಗುವ ಅವಶ್ಯಕತೆಯಿಲ್ಲ. ಡಿಪಿಆರ್‍ನಲ್ಲಿ ತೋರಿಸಿರುವಷ್ಟು ನೀರು ಅಲ್ಲಿ ದೊರಕುವುದೇ ಇಲ್ಲ.
ಬುಡ್ಕುಲೊ: ಇಷ್ಟೊಂದು ದೊಡ್ಡ ಯೋಜನೆಯನ್ನು ಆರಂಭಿಸುವಾಗ ಪಾಲಿಸಬೇಕಾದ ಕ್ರಮಗಳನ್ನು ಸರಕಾರ ಕೈಗೊಂಡಿಲ್ಲವಲ್ಲ?
ಐವನ್ ಡಿಸೋಜ: ಅದನ್ನು ಆಗಿನ ಶಾಸಕರು ವಿಧಾನ ಮಂಡಲದಲ್ಲಿ ಚರ್ಚಿಸಬೇಕಾಗಿತ್ತು. ಆಗಿನ ಸರಕಾರ ಅದನ್ನು ಮಾಡಿದೆ. ಯೋಜನೆಯಲ್ಲಿ ತೋರಿಸಿದಷ್ಟು ನೀರು ಸಿಗುವುದಿಲ್ಲ ಎಂಬ ಅಂಶ ಈಗ ನಮ್ಮ ಮುಂದಿದೆ. ಮೊನ್ನೆ 19ಕ್ಕೆ ಖುದ್ದು ಮುಖ್ಯಮಂತ್ರಿಗಳೇ ಸಭೆ ಕರೆದಿದ್ದರು, ದಸರಾ ಹಬ್ಬದಿಂದಾಗಿ ಮುಂದೂಡಲಾಗಿದೆ. ಸಿಎಂ ಅವರೇ ಸಭೆ ನಡೆಸಬೇಕೆಂದು ನಾವು ಒತ್ತಡ ಹಾಕಿದ್ದೆವು. ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆದ ನಂತರ, ಮಂಗಳೂರಿನಲ್ಲೂ ಸಭೆ ನಡೆಸುತ್ತೇವೆ.
ಬುಡ್ಕುಲೊ: ಸಂಘ ಸಂಸ್ಥೆಗಳ ಸಭೆ ಯಾವಾಗ?
ಐವನ್ ಡಿಸೋಜ: ಅವರೆಲ್ಲಾ ಇಲ್ಲಿಯೇ, ಜಿಲ್ಲೆಯಲ್ಲಿಯೇ ಸಭೆ ನಡೆಯಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಏರ್ಪಡಿಸುತ್ತೇವೆ.
ಬುಡ್ಕುಲೊ: ಪ್ರಮುಖ ಸಂಗತಿಯೇನೆಂದರೆ, ಅಲ್ಲಿ ಪಶ್ಚಿಮ ಘಟ್ಟದ ಮೇಲೆ ಹಲ್ಲೆ, ಅತ್ಯಾಚಾರ ನಡೆಯುತ್ತಿದೆ. ಪ್ರಕೃತಿಯನ್ನು ಧ್ವಂಸ ಮಾಡಲಾಗುತ್ತಿದೆ. ಕಾನೂನು, ನಿಯಮಗಳ ಪಾಲನೆಯೇ ನಡೆಯುತ್ತಿಲ್ಲ. ಬೇಕಾದ ಅನುಮತಿಯೂ ಸಿಕ್ಕಿಲ್ಲ. ಸರಕಾರವೇ ಹೀಗೆ ಮಾಡುವುದು ಸರಿಯಲ್ಲ. ಜನರೆಲ್ಲಾ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿರುವಾಗ ಯೋಜನೆಯನ್ನು ಯಾಕೆ ನಿಲ್ಲಿಸುತ್ತಿಲ್ಲ? ಇದೇನೂ ತುರ್ತಿನ ಯೋಜನೆಯಲ್ಲ. ಕಾಮಗಾರಿ ನಡೆದು ನೀರು ಸಾಗಿಸುವುದೇನಿದ್ದರೂ ಹತ್ತು ಹದಿನೈದು ವರ್ಷಗಳ ನಂತರವಷ್ಟೇ. ಹಟ ಹಿಡಿದಂತೆ ಸರಕಾರ ಕಾಮಗಾರಿಯನ್ನು ಮುಂದುವರಿಸುತ್ತಿದೆ. ಯಾಕೆ ಹೀಗೆ?
ಐವನ್ ಡಿಸೋಜ: ಹಟ ಹಿಡಿದಂತೆ ಮಾಡ್ತಾ ಇಲ್ಲ…
ಬುಡ್ಕುಲೊ: ಚೆನ್ನೈನ ಹಸಿರು ಪೀಠ ತಡೆಯಾಜ್ಷೆ ನೀಡಿತ್ತು, ಅದರ ಪಾಲನೆಯಾಗಿಲ್ಲ. ಕಾಮಗಾರಿ ನಡೆಯುತ್ತಾ ಇದೆ. ಅಲ್ಲಿನ ಸ್ಥಳೀಯ ಜನರಿಗೂ ಯೋಜನೆ ಬಗ್ಗೆ ಏನು ಎತ್ತ ಎಂಬುದೇ ತಿಳಿದಿಲ್ಲ. ತಮ್ಮ ಜಮೀನಿನಲ್ಲಿ ರಾಕ್ಷಸಾಕಾರದ ಪೈಪ್ ಬಿದ್ದುಕೊಂಡಿರುವವರಿಗೂ ಏನು ನಡೆಯುತ್ತಿದೆಯೆಂಬುದರ ಮಾಹಿತಿಯೇ ಇಲ್ಲ. ಒಂದು ಪ್ರಜಾಪ್ರಭುತ್ವದಲ್ಲಿ ಹೀಗೂ ನಡೆಯುತ್ತದೆ ಅಂದರೆ!? ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಲ್ಲವೆ?
ಐವನ್ ಡಿಸೋಜ: ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಲಿಕ್ಕಾಗದು. ಈ ಯೋಜನೆಯನ್ನು ಪ್ರಜಾಸತ್ತಾತ್ಮಕವಾಗಿ ಮಂಜೂರು ಮಾಡಲಾಗಿದೆ. ಚುನಾಯಿತ ಜನಪ್ರತಿನಿಧಿಗಳು ವಿಧಾನ ಮಂಡಲದಲ್ಲಿ ಒಪ್ಪಿಗೆ ಕೊಟ್ಟ ಯೋಜನೆಯಿದು. ಸದ್ಯದ ಸಂಗತಿಯೇನೆಂದರೆ, ಜನರ ವಿರೋಧವಿದ್ದಾಗಲೂ ಸಹ ಯೋಜನೆಯನ್ನು ಯಾಕೆ ನಿಲ್ಲಿಸಿಲ್ಲ ಎಂಬುದು. ಅದನ್ನು ಬಿಟ್ಟರೆ ಬೇರೆ ಏನೂ ಅಕ್ರಮ ನಡೆದಿಲ್ಲ.
ಬುಡ್ಕುಲೊ: ದಕ್ಷಿಣ ಕನ್ನಡದ ರಾಜಕಾರಣಿಗಳು, ಜನಪ್ರತಿನಿಧಿಗಳು, ಸಚಿವರು ಯಾರೂ ಯಾಕೆ ಈ ಬಗ್ಗೆ ಬಾಯಿ ಬಿಡುತ್ತಿಲ್ಲ?
ಐವನ್ ಡಿಸೋಜ: ಮಾತನಾಡಿದ್ದರಿಂದಲೇ ತಾನೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದು? ಯೋಜನೆಯನ್ನು ಯಾವಾಗಲೋ ಆರಂಭಿಸಲಾಗಿದೆ. ಮಂಜೂರಾತಿ ಕೊಟ್ಟು, ಟೆಂಡರ್ ಕರೆದು, ಹಡ ಬಿಡುಗಡೆಯಾಗಿದೆ. ಹೀಗಿದ್ದರೂ ಸಹ, ಮೊನ್ನೆ ಇಲ್ಲಿ ಒಂದು ಸಭೆ ಕರೆಯಲಾಗಿತ್ತು. ಮುಖ್ಯಮಂತ್ರಿಗಳೂ ಸಭೆ ಕರೆದಿದ್ದಾರೆ. ಇದಕ್ಕೆ ನಾವು ಒತ್ತಡ ಹಾಕಿದ್ದೇ ಕಾರಣ. ನಮ್ಮ ಪ್ರಯತ್ನ ನಾವು ನಡೆಸುತ್ತಿದ್ದೇವೆ.
ಬುಡ್ಕುಲೊ: ಅಲ್ಲಿನವರ, ಅಂದರೆ ಯೋಜನೆ ಬೇಕೆನ್ನುವವರ ಸಂಖ್ಯೆ ಹೆಚ್ಚಿದೆ, ನಮ್ಮದೇನೂ ನಡೆಯುವುದಿಲ್ಲ, ನಾವು ಸಂಖ್ಯೆಯಲ್ಲಿ ನಗಣ್ಯವೆಂಬಂತೆ ಇಲ್ಲಿನ ಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ!
ಐವನ್ ಡಿಸೋಜ: ಹೌದು. ಅಲ್ಲಿನವರ ಸಂಖ್ಯಾ ಬಲ ಹೆಚ್ಚಿರುವುದರಿಂದ ಅವರ ಮಾತಿಗೆ ಹೆಚ್ಚು ಬಲವಿದೆ ಎಂದು ಅವರು ಹೇಳಿದ್ದು.
ಬುಡ್ಕುಲೊ: ಇಲ್ಲಿನ ಜನಪ್ರತಿನಿಧಿಗಳು ತಮ್ಮ ಜನರಿಗೋಸ್ಕರ ಹೋರಾಡಬೇಕಲ್ಲವೆ? ಅದು ಅವರ ಕರ್ತವ್ಯ ಅಲ್ಲವೇನು!?
ಐವನ್ ಡಿಸೋಜ: ಹೌದು. ನಮ್ಮ ಜಿಲ್ಲೆಗೆ ಅನ್ಯಾಯವಾಗುವುದನ್ನು ನಾವು ವಿರೋಧಿಸುತ್ತೇವೆ. ನಮ್ಮ ಜನರಿಗೆ ತೊಂದರೆ ಮಾಡಿ ಅಲ್ಲಿನವರಿಗೆ ನೀರು ಕೊಡುವುದಕ್ಕೆ ನಮ್ಮ ವಿರೋಧವಿದೆ. ಅವರಿಗೆ ನೀರು ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ನೀರು ತೆಗೆದುಕೊಂಡು ಹೋಗಲಿ. ಆದರೆ ನಮಗೆ ಸಮಸ್ಯೆಯಾಗಬಾರದು ಎಂದೇ ನಾವು ಹೇಳುತ್ತಿರೋದು.
ಬುಡ್ಕುಲೊ: ಹಾಗಾದ್ರೆ ಐವನ್ ಡಿಸೋಜ ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಡುತ್ತಾರಾ?
ಐವನ್ ಡಿಸೋಜ: ಯೆಸ್. ಖಂಡಿತ. ಮುಂದಿನ ಅಧಿವೇಶನದಲ್ಲಿ ನಾನು ಮಾತನಾಡುತ್ತೇನೆ. ಈ ಬಗ್ಗೆ ನಾನೀಗಾಗಲೇ ಪ್ರಶ್ನೆಯನ್ನು ಕಳಿಸಿದ್ದೇನೆ. ಎತ್ತಿನಹೊಳೆ ಯೋಜನೆ ವಿರುದ್ಧ ಇಲ್ಲಿ ನಡೆದ ಪ್ರತಿಭಟನೆ, ಹೋರಾಟ, ವಿರೋಧಗಳ ಬಗ್ಗೆ ವಿವರವಾಗಿ ವರದಿ ಮಾಡಿದ್ದು, ಸರಕಾರದ ಗಮನಕ್ಕೆ ತಂದಿದ್ದೇನೆ.
ಬುಡ್ಕುಲೊ: ಜನಪ್ರತಿನಿಧಿಗಳ ಸಭೆ ಯಾವಾಗ?
ಐವನ್ ಡಿಸೋಜ: ಸದ್ಯದಲ್ಲಿ ನಡೆಯಲಿದೆ.
ನಾಲ್ಕನೇ ಭಾಗ: ಮಂಗಳೂರಿನ ಕ್ರೈಸ್ತರು ಮತ್ತು ರಾಜಕೀಯ
ಬುಡ್ಕುಲೊ: ಮಂಗಳೂರಿನ ಕ್ರೈಸ್ತರಲ್ಲಿ ಕಳೆದೆರಡು ದಶಕಗಳಿಂದ ಚುನಾಯಿತ ಪ್ರತಿನಿಧಿಗಳಿರಲಿಲ್ಲವೆಂಬ ಕೂಗು ಇತ್ತು. ಈಗ ಇಬ್ಬರು ಶಾಸಕರಿದ್ದಾರೆ. ಎಂಎಲ್‍ಎ ಜೆ.ಆರ್. ಲೋಬೊ ಮತ್ತು ಎಂಎಲ್‍ಸಿ ಐವನ್ ಡಿಸೋಜ ನಡುವೆ ಏನಾದರೂ ಭಿನ್ನಾಭಿಪ್ರಾಯ, ಮನಸ್ತಾಪ, ತಿಕ್ಕಾಟ ನಡೆಯುತ್ತಿದೆಯೆ? ಅಥವಾ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದೀರಾ?
ಐವನ್ ಡಿಸೋಜ: ತಿಕ್ಕಾಟ? ಯಾಕಾಗಿ? ತಿಕ್ಕಾಟದ ಪ್ರಶ್ನೆಯೇ ಇಲ್ಲ. ಅವರು ಅವರ ಕೆಲಸ ಮಾಡುತ್ತಿದ್ದಾರೆ, ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಅವರು ಅಸೆಂಬ್ಲಿಯಲ್ಲಿದ್ದಾರೆ, ನಾನು ಕೌನ್ಸಿಲ್‍ನಲ್ಲಿದ್ದೇನೆ.
ಬುಡ್ಕುಲೊ: ನಿಮ್ಮಿಬ್ಬರ ನಡುವೆ ಸಂಬಂಧ ಚೆನ್ನಾಗಿದೆಯೆ?
ಐವನ್ ಡಿಸೋಜ: ಖಂಡಿತಾ ಹೌದು. ನಾವಿಬ್ರೂ ನಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೇವೆ. ನಮ್ಮದೇನು ಕೆಲಸವೋ ಅದನ್ನು ಮಾಡುತ್ತಿದ್ದೇವೆ. ಯಾರು ಏನು ಬೇಕಾದ್ರೂ ಮಾತನಾಡಬಹುದು. ಅದೆಲ್ಲಾ ಇದ್ದಿದ್ದೇ. ನನಗೀಗ ಹೇಳಲು ಸಂತೋಷವಾಗುವುದೇನೆಂದರೆ, ಮಂಗಳೂರಿನ ಕ್ರೈಸ್ತರ ರಾಜಕೀಯ ಬಲವೀಗ ಹೆಚ್ಚಾಗಿದೆ. ಏಳು ಕಾರ್ಪೋರೇಟರ್‍ಗಳು, ಒಬ್ಬಾಕೆ ಮೇಯರ್, ಒಬ್ಬರು ಎಂಎಲ್‍ಎ ಮತ್ತು ಒಬ್ಬರು ಎಂಎಲ್‍ಸಿ. ನಮ್ಮವರೇ ಒಬ್ಬ ಎಂಪಿ ಕೂಡ ಇದ್ದಾರೆ. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರೂ ಮಂಗಳೂರಿಗರೇ. ಸ್ಥಳಿಯ ಸಂಸ್ಥೆಗಳಿಂದ ಹಿಡಿದು ವಿಧಾನಸಭೆ, ಪರಿಷತ್ ಮತ್ತು ಪಾರ್ಲಿಮೆಂಟ್‍ವರೆಗೂ ನಮ್ಮ ಪ್ರತಿನಿಧಿಗಳಿದ್ದಾರೆ. ಇದು ನಮ್ಮ ರಾಜಕೀಯ ಸಾಮಥ್ರ್ಯ ಬಲಿಷ್ಠಗೊಂಡಿರುವುದಕ್ಕೆ ಸಾಕ್ಷಿ.
ಬುಡ್ಕುಲೊ: ರಾಜ್ಯ ಸರಕಾರ ಕ್ರೈಸ್ತರಿಗೆ ಒದಗಿಸಿದ ನಿಧಿಯ ಗತಿಯೇನು? ಜನರ ಪ್ರಯೋಜನಕ್ಕೆ ಅದು ವೆಚ್ಚವಾಗುತ್ತಿದೆಯಾ (ಅಥವಾ ಕೇವಲ ಚರ್ಚ್ ಕಟ್ಟಡ, ಭವನಗಳಿಗಷ್ಟೇ ಖರ್ಚಾಗುತ್ತಿದೆಯಾ?)
ಐವನ್ ಡಿಸೋಜ: ಅದರಲ್ಲಿ 130 ಕೋಟಿ ಇದೆ. ಸ್ಕಾಲರ್‍ಶಿಪ್‍ಗೆ ಕೊಡಲಾಗುತ್ತಿದೆ. ನಿಜಕ್ಕೂ ಹೇಳಬೇಕೆಂದರೆ ನಮ್ಮಲ್ಲಿ ಧಾರಾಳ ದುಡ್ಡು ಇದೆ, ಆದರೆ ಅರ್ಹ ಅಭ್ಯರ್ಥಿಗಳೇ ಇಲ್ಲ! ಕ್ರೈಸ್ತರ ಅಭಿವೃದ್ಧಿಗೆಂದು ಸರಕಾರ ಕೊಟ್ಟ ಹಣಕಾಸಿನ ನೆರವು ಪಡೆಯಲು ಜನರು ಮುಂದಾಗುತ್ತಿಲ್ಲ. ಉನ್ನತ ಶಿಕ್ಷಣಕ್ಕಾಗಿ, ವಿದೇಶಗಳಲ್ಲಿ ಕಲಿಯುವುದಕ್ಕಾಗಿ ನೆರವು ನೀಡುತ್ತಿದ್ದೇವೆ. ನಿಧಿಯೇನೋ ಇದೆ, ಪಡೆಯುವವರೇ ಇಲ್ಲ. ಅರಿವು ಯೋಜನೆಯಡಿ ಉನ್ನತ ಶಿಕ್ಷಣದ ಅಭ್ಯರ್ಥಿಗಳಿಗೆ ಕಾಲೇಜುಗಳಿಗೆ ನೇರವಾಗಿ ಫೀಸ್ ಪಾವತಿಯಾಗುತ್ತದೆ. ಆದಷ್ಟು ಜನರು ಇದರ ಸದುಪಯೋಗ ಪಡೆಯಬೇಕು. ಆಸಕ್ತರು ನನ್ನನ್ನು ಸಂಪರ್ಕಿಸಿದಲ್ಲಿ ಈ ಬಗ್ಗೆ ನೆರವು, ಮಾರ್ಗದರ್ಶನ ಒದಗಿಸುತ್ತೇನೆ.
ಬುಡ್ಕುಲೊ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿನ ವಿಧಾನಸಭಾ ಅಭ್ಯರ್ಥಿ ಯಾರು – ಜೆ.ಆರ್. ಲೋಬೊ ಅಥವಾ ಐವನ್ ಡಿಸೋಜ?
ಐವನ್ ಡಿಸೋಜ: ಅದು ಪಕ್ಷದ ತೀರ್ಮಾನ. ನಾವಿಬ್ಬರೂ ಅರ್ಹರಿದ್ದೇವೆ. ಅವರಿಗೆ ಸಿಕ್ಕಿದರೂ ನನಗೆ ಸಿಕ್ಕಿದರೂ ಸಂತೋಷ. ನಾವಿಬ್ಬರೂ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಅದಲ್ಲದೆ, ಮುಂದೆ ಲೋಕಸಭಾ ಚುನಾವಣೆಯೂ ಇದೆ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ನಾವೆಲ್ಲಾ ಜೊತೆಯಾಗಿ, ಸೌಹಾರ್ದಯುತವಾಗಿ ಜನರಿಗಾಗಿ, ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ.
Feedback: budkuloepaper@gmail.com
good interview.