ಸಿನೆಮಾ ಪರದೆಯಲ್ಲಿ ‘ಕಿಶೋರ ಚರಿತ’

ಟೊನಿ ಫೆರೊಸ್, ಜೆಪ್ಪು

Posted on : August 4, 2014 at 1:51 PM

ಪರಮ ಶ್ರೇಷ್ಠ ಗಾಯಕ, ‘ಸಂಪೂರ್ಣ ಕಲಾಕಾರ’ ಕಿಶೋರ್ ಕುಮಾರ್ ಅವರು ಹುಟ್ಟಿದ ದಿನವಾದ ಇಂದು (ಆಗಸ್ಟ್ 4) ಅವರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಚಿತ್ರ ನಿರ್ದೇಶಕ ಅನುರಾಗ್ ಬಸು ಅವರು ಕಿಶೋರ್ ದಾ ಜೀವನ ಕಥೆಯನ್ನಾಧರಿಸಿದ ಚಿತ್ರವೊಂದನ್ನು ತಯಾರಿಸುತ್ತಿದ್ದಾರೆ. ತಮ್ಮ ‘ಬರ್ಫಿ’ ಚಿತ್ರದಲ್ಲಿ ರಾಜ್ ಕಪೂರ್-ಚಾರ್ಲಿ ಚಾಪ್ಲಿನ್ ಶೇಡ್ ಇರುವ ಪಾತ್ರ ಮಾಡಿದ್ದ ರಣ್‍ಬೀರ್ ಕಪೂರನ್ನು ಅನುರಾಗ್ ಕಿಶೋರ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ರಣ್‍ಬೀರ್‍ಗೆ ಇದೊಂದು ಚಾಲೆಂಜಿಂಗ್ ಪಾತ್ರ. ಕಿಶೋರ್ ಅವರ ವೈವಿಧ್ಯಮಯ ವ್ಯಕ್ತಿತ್ವವನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ತರುವುದು ಸಲೀಸಲ್ಲ. ಅದಕ್ಕಾಗಿ ರಣ್‍ಬೀರ್ ವ್ಯಾಪಕ ರಿಸರ್ಚ್ ಮಾಡುತ್ತಿದ್ದಾರೆ ಎಂದು ಸುದ್ದಿ. ಕಿಶೋರ್ ಅವರ ನಾಲ್ವರು ಹೆಂಡತಿಯರ ಪೈಕಿ ಒಬ್ಬರಾದ ಮಧುಬಾಲಾ ಅವರ ಪಾತ್ರವನ್ನು ಕತ್ರಿನಾ ಕೈಫ್ ಮಾಡುವರೆಂಬ ಸುದ್ದಿ ಇದೆ.

kishore-kumar
ಚಿತ್ರಕಥೆಯ ಮೇಲೆ ಹೆಚ್ಚು ಒತ್ತುಕೊಟ್ಟಿರುವ ನಿರ್ದೇಶಕ ಬಸು ಅವರು ಇದೇ ಕಾರಣಕ್ಕೆ ಚಿತ್ರೀಕರಣವನ್ನು ಮುಂದೂಡಿದ್ದಾರೆ. ಇಲ್ಲವಾದಲ್ಲಿ ಈಗಾಗಲೇ ಈ ಚಿತ್ರ ತೆರೆ ಕಾಣಬೇಕಿತ್ತು. ಹಿಂದಿ ಸಿನೆಮಾ ಕ್ಷೇತ್ರದ ದಂತಕಥೆಯಾದ ಕಿಶೋರ್ ಕುಮಾರ್ ಅವರ ಬದುಕಿಗೆ ಚಿತ್ರಕಥೆಯಿಂದ ಸಂಪೂರ್ಣ ನ್ಯಾಯ ದೊರಕದ ಹೊರತು ಚಿತ್ರೀಕರಣಕ್ಕೆ ಕೈ ಹಾಕುವುದಿಲ್ಲ ಎಂದು ನಿರ್ದೇಶಕರು ನಿರ್ಧರಿಸಿದ ಕಾರಣ, ಈ ಚಿತ್ರಕ್ಕೂ ಮುಂಚೆ ಅವರ `ಜಗ್ಗ ಜಾಸೂಸ್’ ಎಂಬ ಚಿತ್ರ ತಯಾರಾಗಲಿದೆ. ಈ ಚಿತ್ರದಲ್ಲಿಯೂ ರಣ್‍ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದಾರೆ.

ranbir-kishore kishore-madhubala Katrina-Ranbir In different moods

ಕಿಶೋರ್ ಅವರದು Method in Madness. ಹುಚ್ಚುಚ್ಚಾಗಿ ವರ್ತಿಸುತ್ತಿದ್ದರೂ ಅದರಲ್ಲಿಯೂ ಒಂದು ಶಿಸ್ತಿರುತ್ತಿತ್ತು. ಅದು ಅವರ ನಟನೆ, ಗಾಯನದಲ್ಲಿ ಸ್ಪಷ್ಟವಾಗಿ ತೋರುತ್ತಿತ್ತು. ಅದು ಹಾಸ್ಯಾಭಿನಯ ಇರಲಿ, ಕುಣಿತವಿರಲಿ, ಹಾಡಿರಲಿ, ಅವರದು ಕರಾರುವಾಕ್ಕಾದ ಟೈಮಿಂಗ್.

Kishore Kumar Google-Doodle
ಕಿಶೋರ್ ಕುಮಾರ್ ಅವರ 85ನೇ ಹುಟ್ಟುಹಬ್ಬದಂದು ಗೂಗಲ್ ರಚಿಸಿದ ಡೂಡಲ್ (ಆಗಸ್ಟ್ 4)

ಕಿಶೋರ್ ಅವರ ಬಗ್ಗೆ ಚಿತ್ರವಿಚಿತ್ರ ಕಥೆಗಳು ಹಿಂದಿ ಚಿತ್ರರಂಗದ ಅಂಗಳದಲ್ಲಿ ಹರಿದಾಡ್ತಾ ಇರ್ತವೆ. ಒಂದೆರಡು ಉಲ್ಲೇಖಿಸುತ್ತೇನೆ:

  • ‘ಯಾರಾನಾ’ ಚಿತ್ರದ ಎವರ್‍ಗ್ರೀನ್ ಹಾಡು ‘ಚೂ ಕರ್ ಮೆರೆ ಮನ್ ಕೊ’ ರೆಕಾರ್ಡಿಂಗ್ ಮಾಡುವ ಮುಂಚೆ, ಸಂಗೀತ ನಿರ್ದೇಶಕ ರಾಜೇಶ್ ರೋಶನ್ ಕಿಶೋರ್ ಅವರಿಗೆ ಬಹಳ ಆರಾಮವಾಗಿ ಹಾಡಲು ಸೂಚಿಸಿದರಂತೆ. ಅದನ್ನ ಕೇಳಿದ್ದೆ ತಡ ಕಿಶೋರ್ ಅವರು ಒಂದು ಮಂಚ ತರಿಸಿ, ಅದರ ಮೇಲೆ ಆರಾಮ ಮಾಡುತ್ತಾ ಹಾಡನ್ನು ಹಾಡಿದ್ರಂತೆ!
  • ಕಿಶೋರ್ ಅವರು ಮಹಾಜಿಪುಣ. ಲೆಕ್ಕದಲ್ಲಿ ಪಕ್ಕಾ. ಒಂದು ಸಲ ನಿರ್ಮಾಪಕರು ಪೂರ್ತಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅರ್ಧ ಮುಖಕ್ಕೆ ಮೇಕಪ್ ಬಳಿದು ಸೆಟ್‍ಗೆ ಹೋಗಿದ್ದರಂತೆ!!

ಅಂತೂ ಕಿಶೋರ ಚರಿತ ತೆರೆಯಲ್ಲಿ ಹೇಗೆ ಮೂಡಿ ಬರುತ್ತದೆ ಎಂಬುದೇ ದೊಡ್ಡ ಕುತೂಹಲ. ಕಾದು ನೋಡೋಣ.

Leave a comment

Your email address will not be published. Required fields are marked *