ಸಂಕುಚಿತ ಮಂಗಳೂರು V/s ವಿಶಾಲ ದಕ್ಷಿಣ ಕನ್ನಡ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : August 11, 2014 at 8:38 AM

ಕಳೆದ ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ಚರ್ಚೆಯಾದ ಒಂದು ಅಸಹಜ ಮತ್ತು ಅಸಂಬದ್ಧ ಸಂಗತಿಯೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸುವ ಕುರಿತಾದದ್ದು. ಒಮ್ಮಿಂದೊಮ್ಮೆಲೇ ಈ ಸಂಗತಿಯು ಮೇಲೆ ಬಿದ್ದುದರ ರಹಸ್ಯವೇನೋ ಇನ್ನೂ ಸರಿಯಾಗಿ ಬಯಲಾಗಿಲ್ಲ. ಪತ್ರಿಕೆಗಳಲ್ಲಿ ಈ ಕುರಿತು ಬಹಳಷ್ಟು ಚರ್ಚೆಯಾಯಿತು. ಸಂತಸದ ಸಂಗತಿಯೆಂದರೆ, ಬಹುತೇಕ ಜನರು ಈ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದು. ಹೆಚ್ಚಿನವರಿಗೆ ‘ದಕ್ಷಿಣ ಕನ್ನಡ’ವೆಂಬುದು ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಕೊನೆಗೆ ಜಿಲ್ಲಾಧಿಕಾರಿಯವರು ಜಿಲ್ಲೆಯ ಹೆಸರು ‘ದಕ್ಷಿಣ ಕನ್ನಡ’ವೇ ಆಗಿರುವುದು ಸ್ವಾಭಾವಿಕವೆಂಬ ಸಂದೇಶ ಸರಕಾರಕ್ಕೆ ಸಲ್ಲಿಸಿದ್ದಾರೆಂಬ ವರದಿ ಬಂತು. ಅಲ್ಲಿಗೆ ಆ ಚರ್ಚೆ ಮುಗಿದಿದೆ, ಸದ್ಯಕ್ಕೆ.

Mangalore_naturally

ಆದರೆ, ತೀರಾ ಕ್ಷುಲ್ಲಕವಾದ ಈ ಬೆಳವಣಿಗೆಯ ಹಿಂದೆ ಯಾರ ಕೈವಾಡವಿತ್ತು, ಅದರ ಹಿಂದಿನ ಕಾರಣ ಅಥವಾ ಹುನ್ನಾರವೇನು ಎಂಬುದರ ಬಗ್ಗೆ ಹೆಚ್ಚಿನ ಗಮನವನ್ನು ಯಾರೂ ಕೊಟ್ಟಂತಿಲ್ಲ. ಪ್ರಮುಖ ಪತ್ರಿಕೆಗಳು ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿವೆ ಮತ್ತು ಆ ನಿಟ್ಟಿನಲ್ಲಿ ಈ ಪ್ರದೇಶದ ಚರಿತ್ರೆಯ ಬಗ್ಗೆ ಒಂದಷ್ಟು ಸಂಗತಿಗಳ ಮೆಲುಕು ಹಾಕುವಿಕೆ ನಡೆಯಿತು. ಅದರಲ್ಲೂ ಎಲ್ಲರ ಒಕ್ಕೊರಲ ಅಭಿಪ್ರಾಯ ಸ್ಪಷ್ಟವಾಗಿ ಮೂಡಿ ಬಂದದ್ದು ವಿಶೇಷ – ‘ದಕ್ಷಿಣ ಕನ್ನಡ’ವೇ ಜಿಲ್ಲೆಯ ಹೆಸರಾಗಿರಬೇಕೆಂಬುದು. ಅದು ಅತ್ಯಂತ ಸ್ವಾಗತಾರ್ಹ ಮತ್ತು ಅಪೇಕ್ಷಣೀಯ.

ಜಿಲ್ಲೆಯ ಮತ್ತು ಕರಾವಳಿ ಭಾಗದ ಹೊರಗಿನವರು ಕೆಲವೊಮ್ಮೆ ಮಂಗಳೂರು ಜಿಲ್ಲೆ ಎಂದು ಹೇಳುವುದುಂಟು. ಕೆಲ ಸುದ್ದಿ ಚಾನೆಲ್‍ಗಳಲ್ಲಿ ಜಿಲ್ಲೆ ಮತ್ತು ಒಂದು ನಗರಕ್ಕಿರುವ ವ್ಯತ್ಯಾಸ ಅರಿಯದ ಪತ್ರಕರ್ತರು, ಸಂಪಾದಕರು ಇರುತ್ತಾರೆಂಬುದು ಶೋಚನೀಯವೇ ಸರಿ. ಹಾಗಾಗಿ ಟಿ.ವಿ. ಚಾನೆಲ್‍ಗಳಲ್ಲಿ ‘ಮಂಗಳೂರು ಜಿಲ್ಲೆ’ ಎಂಬ ಉದ್ಘೋಷ ಕಳೆದ ಕೆಲವಾರು ವರುಷಗಳಿಂದ ಕೇಳಿ ಬಂದು, ಅದನ್ನೇ ಅಭ್ಯಾಸ ಮಾಡಿಕೊಂಡ ಜನರೂ ಇರಬಹುದು.

mangalore_port mapಮಂಗಳೂರು ಎಂಬುದು ನಗರವೇ, ಪಟ್ಟಣವೇ ಅಥವಾ ಹಳ್ಳಿಯೇ ಎಂಬುದು ಚರ್ಚಾಸ್ಪದ ವಿಚಾರ. ವಾಸ್ತವವೇನೆಂದರೆ ಈ ನಮ್ಮ ಮಂಗಳೂರಿನ ಇತಿಹಾಸದ ಬಗ್ಗೆ ವಿಶೇಷವಾದ ಉಲ್ಲೇಖಗಳಿಲ್ಲ. ಜನರಿಗೂ ಅದರ ಬಗ್ಗೆ ಕುತೂಹಲವಿದ್ದಂತಿಲ್ಲ. ಹಾಗೆ ನೋಡಿದರೆ ಮಂಗಳೂರು ಎಂಬುದು ಚರಿತ್ರೆಯಲ್ಲಿ ಪ್ರಮುಖವಾದ ಯಾವುದೇ ಗಮನಾರ್ಹವಾದ ಸ್ಥಾನ ಪಡೆದುಕೊಂಡದ್ದು, ಪಾತ್ರ ನಿರ್ವಹಿಸಿದ್ದು ಅಷ್ಟಾಗಿ ಕಂಡು ಬಂದಿಲ್ಲ. ಈ ಮಂಗಳೂರು ಅಸ್ತಿತ್ವ ಮತ್ತು ಪ್ರಾಮುಖ್ಯತೆ ಪಡೆದುಕೊಂಡಿದ್ದೇ ಏಕೈಕ ಕಾರಣಕ್ಕಾಗಿ – ಅದರ ಭೌಗೋಳಿಕ ಲಕ್ಷಣಗಳಿಂದಾಗಿ. ಆ ಕಾರಣ ನಿಸರ್ಗದತ್ತವಾದುದು. ಅಂದರೆ ಇಲ್ಲಿನ ಮನುಷ್ಯರಾದವರಿಂದ ಅಂತೂ ಖಂಡಿತಾ ಅಲ್ಲ. ನೈಸರ್ಗಿಕವಾಗಿ ನಿರ್ಮಾಣವಾಗಿದ್ದ ಬಂದರಿನಿಂದಾಗಿಯೇ ಮಂಗಳೂರಿಗೆ ಮಹತ್ವ ಬಂತು ಮತ್ತು ಕಾಲಾನಂತರದಲ್ಲಿ ಇಲ್ಲಿನ ಬೆಳವಣಿಗೆಗೆ, ಅಭಿವೃದ್ಧಿಗೆ ಮೂಲವಾಯಿತು.

ಮಂಗಳೂರು ಎಂಬ ಸ್ಥಳ ಒಂದು ವೇಳೆ ಎರಡು ನದಿಗಳ ತಪ್ಪಲಿನಲ್ಲಿ, ಅದೂ ಸಮುದ್ರದ ದಡದಲ್ಲಿ, ಇಲ್ಲದೇ ಹೋಗಿದ್ದಿದ್ದರೆ, ಅದರ ಹೆಸರು ಕೂಡಾ ಯಾರಿಗೂ ತಿಳಿಯುತ್ತಿರಲಿಲ್ಲ. ಪಶ್ಚಿಮ ಘಟ್ಟದಿಂದ ಉಗಮವಾಗಿ ಕರಾವಳಿ ಪ್ರದೇಶದಲ್ಲಿ ಹರಿದು ಸಮುದ್ರ ಸೇರುವಲ್ಲಿ ಒಂದುಗೂಡುವ ಎರಡು ನದಿಗಳ – ನೇತ್ರಾವತಿ ಮತ್ತು ಫಲ್ಗುಣಿಗಳ – ಸಂಗಮ ಸ್ಥಳದಲ್ಲಿ ಇರುವ ಏಕೈಕ ಕಾರಣಕ್ಕೆ ಈ ಸ್ಥಳಕ್ಕೆ ಮಹತ್ವ ಬಂತು. ಈ ಆಯಕಟ್ಟಿನ ಜಾಗ ಮನುಷ್ಯ ವಾಸಕ್ಕೂ ಮತ್ತು ಇತಿಹಾಸದಾದ್ಯಂತ ಕಂಡು ಬರುವಂತೆ ಸೇನಾ ಮತ್ತು ವ್ಯಾವಹಾರಿಕ ಕಾರಣಗಳಿಗಾಗಿ ಪ್ರಾಮುಖ್ಯತೆಯನ್ನು ಪಡೆದಿತ್ತು. ಅದೆಲ್ಲಾ ಕೂಡಿ ಬಂದಿದ್ದು ಕೇವಲ ನೈಸರ್ಗಿಕವಾಗಿಯಷ್ಟೇ ಹೊರತು, ಮಂಗಳೂರಿನ ಯಾವುದೇ ಗಂಡಸಾಗಲೀ, ಹೆಂಗಸಾಗಲೀ ಇಲ್ಲಿ ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲವೆನ್ನಬಹುದು.

mangalore_port

ನೀವೇ ಹೇಳಿ, ಮಂಗಳೂರಿನಲ್ಲಿ ಯಾರಾದರೂ ಅರಸನಾಗಲೀ, ಸಾಮಂತನಾಗಲೀ ಇದ್ದರೇ? ವಿಶಿಷ್ಟ ಸಂಗತಿಯೇನೆಂದರೆ, ಇದೇ ಸ್ಥಳದಲ್ಲಿ, ಅಂದರೆ ನದಿ-ಸಮುದ್ರ ಸಂಗಮವಾದ ಅಳಿವೆ ಬಾಗಿಲಿನ ಇನ್ನೊಂದು ಪಕ್ಕದಲ್ಲಿ ಹುಟ್ಟಿ, ಆಳ್ವಿಕೆ ನಡೆಸಿ ಇತಿಹಾಸದಲ್ಲಿ ರೋಚಕ, ಸಾಹಸಮಯ ಅಧ್ಯಾಯ ಬರೆದು ಅಮರಳಾಗಿದ್ದು ಒಬ್ಬ ಹೆಣ್ಣು ಮಗಳು – ಉಳ್ಳಾಲದ ರಾಣಿ ಅಬ್ಬಕ್ಕ. ಸಾವಿರಾರು ವರ್ಷಗಳ ಇತಿಹಾಸದಲ್ಲಿ ಭರತ ಖಂಡದಲ್ಲಿ ಬಂದು ಹೋದ ಸಾವಿರಾರು ರಾಜ ಮಹಾರಾಜರ ಬಗ್ಗೆ ಓದಿ ತಿಳಿದಿದ್ದೇವೆ. ಅದರಲ್ಲೂ ಕರ್ನಾಟಕದ ಚರಿತ್ರೆಯಂತೂ ಇಡೀ ಭಾರತದ ಚರಿತ್ರೆಗಿಂತ ಹೆಚ್ಚು ರೋಚಕವಾಗಿತ್ತು. ವಿಪರ್ಯಾಸವೆಂದರೆ ಅದೇ ರಾಜ್ಯದ ಭಾಗವಾದ ಈ ಪ್ರದೇಶದಲ್ಲಿ ಹೇಳುವಂತಹ ರಾಜರಾಗಲೀ, ಅರಸು ಮನೆತನವಾಗಲಿ ಇರಲೇ ಇಲ್ಲ! (ಅಲ್ಲಲ್ಲಿ ಸಣ್ಣ ಪುಟ್ಟ ಸಾಮಂತರಿದ್ದರು, ಆದರೆ ಮಂಗಳೂರಿನಲ್ಲಲ್ಲ). ಇಲ್ಲಿಯವರದೇನಿದ್ದರೂ ಬೇರೆಯವರಿಂದ ಆಳಿಸಿಕೊಂಡಂತಹ ಚರಿತ್ರೆ. ಅದೇ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿದೆ.

ಯಾವುದೇ ನಾಡಿಗೆ, ದೇಶಕ್ಕೆ ಹೋಗಿ, ಅಲ್ಲೆಲ್ಲಾ ಪ್ರದೇಶಗಳಿರುತ್ತವೆ. ಅದು ಸಹಜವಾಗಿ ನೈಸರ್ಗಿಕ ಕಾರಣಗಳಿಂದಾಗಿರುತ್ತದೆ. ಅದೇ ರೀತಿ ಪಶ್ಚಿಮ ಘಟ್ಟಗಳು ನಿರ್ಮಿಸಿಕೊಂಡ ಸರಹದ್ದಿನಿಂದಾಗಿ, ಪಶ್ಚಿಮಾಭಿಮುಖವಾಗಿ ಸಮುದ್ರ ತಟದ ತನಕದ ಭೂ ಪ್ರದೇಶಗಳನ್ನು ವಿವಿಧ ಪ್ರದೇಶಗಳನ್ನಾಗಿ ಗುರುತಿಸಲಾಗುತ್ತದೆ. ದಕ್ಷಿಣದಲ್ಲಿ, ಮಲಯಾಳಂ ಭಾಷೆಯ ಜನರಿರುವ ಪ್ರದೇಶ ಮಲಬಾರ್, ನಂತರ ತುಳುನಾಡು, ಕೊಂಕಣ, ಮರಾಠಾ ಪ್ರದೇಶಗಳಿವೆ. ಹೀಗೆ ಕೇರಳದ ತುದಿಯಿಂದ ಗುಜರಾತ್‍ನ ಅಂಚಿನವರೆಗೆ ಬೇರೆ ಬೇರೆ ಹೆಸರಾಂತ ಪ್ರದೇಶಗಳು ಹೆಸರುವಾಸಿಯಾಗಿವೆ.

mangalore_oldನಾವೀಗ ನಮ್ಮ ನಾಡಿಗೆ ಬರೋಣ. ಕೇರಳದ ಉತ್ತರ ಭಾಗದಿಂದ ಉತ್ತರಕ್ಕೆ ಪ್ರಸ್ತುತ ಉಡುಪಿಯ ತನಕದ ಈ ಪ್ರದೇಶವನ್ನು ಮೂಲಭೂತವಾಗಿ ತುಳುನಾಡು ಎಂದು ಕರೆಯಲಾಗುತ್ತದೆ. ಅದು ಅತ್ಯಂತ ಸಹಜವಾದ ಹೆಸರು. ಇದು ಪರಶುರಾಮನ ಸೃಷ್ಟಿ ಎಂಬ ಪ್ರತೀತಿ ಬಲು ಪ್ರಸಿದ್ಧ. ರಾಜಕೀಯ, ಆಡಳಿತಾತ್ಮಕ ಕಾರಣಗಳಿಂದಾಗಿ ಹುಟ್ಟಿಕೊಂಡ ಗಡಿಗಳಿಂದಾಗಿ, ಅಂದರೆ ಜಿಲ್ಲೆ, ತಾಲೂಕು ಮುಂತಾದವು, ಈ ಪ್ರದೇಶವನ್ನು ವಿಂಗಡಿಸಲಾಯಿತು. ಅದು ಕಾಲಾಂತರದಲ್ಲಿ ನಡೆದು ಬಂದ ಪ್ರಕ್ರಿಯೆ. ಹೀಗೆ ಹುಟ್ಟಿಕೊಂಡಂತವೇ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು. ಕನ್ನಡ ಮಾತನಾಡುವ ಅಷ್ಟೊಂದು ಜಿಲ್ಲೆಗಳಲ್ಲಿ ಯಾವುದೂ ಕೂಡ ಕನ್ನಡ ಹೆಸರಿನ ಜಿಲ್ಲೆಗಳಿಲ್ಲ ಮತ್ತು ತುಳು ಮತ್ತು ಕೊಂಕಣಿ ಮಾತನಾಡುವ ಪ್ರದೇಶಗಳೆರಡಕ್ಕೆ ಕನ್ನಡ ಜಿಲ್ಲೆಗಳೆಂಬ ಹೆಸರನ್ನೇ ಯಾಕೆ ಇಡಲಾಯಿತೆಂಬುದು ಕುತೂಹಲಕಾರಿ ಸಂಗತಿ.

ಈ ಲೇಖನದ ಪ್ರಮುಖ ವಿಷಯಕ್ಕೆ ಬರುವುದಾದರೆ, ಅವಿಭಜಿತ ಅಥವಾ ವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಪರ್ಯಾಯವಾಗಿ ಹೆಸರೆಂಬುದಿದ್ದರೆ ಅದು ‘ತುಳುನಾಡು’ ಮಾತ್ರ. ಆದರೆ ವಾಸ್ತವಿಕವಾಗಿ ತುಳುನಾಡು ದಕ್ಷಿಣ ಕನ್ನಡಕ್ಕಿಂತಲೂ ವಿಸ್ತಾರವಾದ ಪ್ರದೇಶ. ಈಗ ಉಡುಪಿಯು ಪ್ರತ್ಯೇಕ ಜಿಲ್ಲೆಯಾಗಿರುವುದರಿಂದ ಉಳಿದುಕೊಂಡ ದಕ್ಷಿಣ ಕನ್ನಡವು ಅತ್ಯಂತ ಸಹಜವಾಗಿ ಮತ್ತು ಸೊಗಸಾಗಿ ದಕ್ಷಿಣ ಕನ್ನಡವೇ ಆಗಿದೆ ಮತ್ತು ಅದೇ ಅದಕ್ಕೆ ಸೂಕ್ತ ಹೆಸರು. ಮಂಗಳೂರು ಎಂಬುದು ವಿಶಾಲ ದಕ್ಷಿಣ ಕನ್ನಡದ ಭೂಪಟದಲ್ಲಿ ಕಂಡು ಬರುವ ಒಂದು ಪಟ್ಟಣವೇ ಹೊರತು, ಇಡೀ ಜಿಲ್ಲೆಯನ್ನು ಆಕ್ರಮಿಸುವಂತಹ ಅಥವಾ ಆವರಿಸಿಕೊಳ್ಳುವಂತಹ ಯಾವುದೇ ಹೆಚ್ಚುಗಾರಿಕೆ ಮಂಗಳೂರಿಗಿಲ್ಲ. ಅದೊಂದು ಜಿಲ್ಲಾ ಕೇಂದ್ರ ಮಾತ್ರ. ಅದೇ ಕಾರಣಕ್ಕೆ ಬೆಳೆಯುತ್ತಿರುವ ನಗರವಷ್ಟೇ. ಹೀಗಿರುವಾಗ ಅದ್ಯಾವ ಮೂರ್ಖರು ಮತ್ತು ಅಧಿಕಪ್ರಸಂಗಿಗಳು ಯಾಕಾಗಿ ದಕ್ಷಿಣ ಕನ್ನಡದ ಹೆಸರು ಬದಲಾಯಿಸಬೇಕೆಂದು ಹಠ ಹಿಡಿದಿದ್ದಾರೋ ಕಂಡುಕೊಳ್ಳಬೇಕಾಗಿದೆ. ಅಷ್ಟೇ ಅಲ್ಲ, ದಕ್ಷಿಣ ಕನ್ನಡವೆಂಬ ದೊಡ್ಡ ಜಿಲ್ಲೆಯನ್ನು ಯಾವುದೇ ಹೆಚ್ಚುಗಾರಿಕೆಯನ್ನು ಪಡೆದುಕೊಂಡಿಲ್ಲದ ಒಂದು ಅವ್ಯವಸ್ಥಿತ ಪಟ್ಟಣದ ಹೆಸರಿನಿಂದ ಕರೆಯುವುದೆಂದರೆ ಅದು ನಿಜವಾಗಿಯೂ ವಿಪರ್ಯಾಸ, ಅನ್ಯಾಯ ಮತ್ತು ಮೌಢ್ಯವೇ ಸರಿ. ಸದ್ಯ, ಅಂತಹ ಅನಾಹುತವಾಗುವುದನ್ನು ತಡೆಯಲಾಗಿದೆಯಂತೆ. ಮುಂದೇನೋ?!

ಚಿತ್ರ ಕೃಪೆ: ಇಂಟರ್‍ನೆಟ್

1 comment

Leave a comment

Your email address will not be published. Required fields are marked *