ರಾಹುಲ್ ದ್ರಾವಿಡ್: ಮರೆಯಾದ ಮಹಾ ಗೋಡೆ

ಡೊನಾಲ್ಡ್ ಪಿರೇರಾ, ಬೆಳ್ತಂಗಡಿ

Posted on : April 12, 2014 at 5:23 AM

ಪ್ರತಿಯೊಬ್ಬರಿಗೆ ನನ್ನದು, ನಮ್ಮದು, ನಮ್ಮವರು ಎಂದರೆ ಏನೋ ಒಂಥರಾ ಅಟ್ಯಾಚ್‍ಮೆಂಟ್. ಅದೇ ರೀತಿ ಕರ್ನಾಟಕದ ಯಾವುದೇ ತಂಡವೆಂದರೆ ಅದು ಗೆಲ್ಲಬೇಕೆಂಬ ಹಪಾಹಪಿ. ರಣಜಿ ಟ್ರೋಫಿ ನಡೆಯುತ್ತಿರುವಾಗ ಪತ್ರಿಕೆಗಳಲ್ಲಿ ಆಗಾಗ ಒಂದು ಹೆಸರು ನನಗೆ ಆಕರ್ಷಕವೆನಿಸುತ್ತಿತ್ತು. ಆ ಹೆಸರು ಪ್ರತಿ ಬಾರಿ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುವಾಗ ನನಗೆ ಇನ್ನೂ ಹೆಚ್ಚು ಅಭಿಮಾನ. ಕರ್ನಾಟಕ ತಂಡದ ಆಟದಲ್ಲಿ ಆ ವ್ಯಕ್ತಿ ಹೆಚ್ಚು ಹೆಚ್ಚು ಸಾಧನೆ ಮಾಡಲಿ ಎಂಬ ನಿರಂತರ ಹಾರೈಕೆ.

ಆ ಹೆಸರೇ ರಾಹುಲ್ ದ್ರಾವಿಡ್.

Rahul-Dravid-02

ಆತನಿಂದಾಗಿಯೇ ನಾನು ಕಿಂಚಿತ್ತೂ ಇಷ್ಟಪಡದಿದ್ದ ಕ್ರಿಕೆಟ್ ಎಂಬ ರಾಕ್ಷಸ ಆಟದ ಮೇಲೆ ಆಸಕ್ತಿ ಬೆಳೆಸಿದೆ. ನೋಡ ನೋಡುತ್ತಿದ್ದಂತೆಯೇ ಆತ ಬೆಳೆದ ಎತ್ತರ ಅಸಾಮಾನ್ಯ. ರಾಹುಲ್ ದ್ರಾವಿಡ್ ಎಂದರೆ ನಿಷ್ಠೆಗೆ ಪರ್ಯಾಯ ಶಬ್ದ. ತಂಡಕ್ಕೋಸ್ಕರ ಆಡುವ ಅಪರೂಪದ ಆಟಗಾರ.

ನನ್ನ ಪ್ರಕಾರ ಕ್ರಿಕೆಟ್ ಎಂಬುದು ಕ್ರೀಡೆಯೇ ಅಲ್ಲ, ಅದೊಂದು ಮತಿಗೆಟ್ಟ ಆಟ. ಜೂಜು. ಕ್ರಿಕೆಟಿಗೆ ಪ್ರಮುಖ ಪ್ರಾಶಸ್ತ್ಯ ಇರುವ ತನಕ ನಮ್ಮ ದೇಶ ಕ್ರೀಡೆಯಲ್ಲಿ ಮಾತ್ರವಲ್ಲ ಬೇರಾವುದೇ ವಿಷಯಗಳಲ್ಲಿ ಮುಂದುವರಿಯುವುದು ಅಸಾಧ್ಯವೆಂದೇ ನನ್ನ ಭಾವನೆ. ಅಷ್ಟೊಂದು ದ್ವೇಷಿಸುವ ಕ್ರಿಕೆಟನ್ನು ನಾನು ಗಮನಿಸಲು, ಅದರೆಡೆಗೆ ನೋಡುವಂತಾಗಲು ಕಾರಣವಾಗಿದ್ದೇ ದ್ರಾವಿಡ್. ಆತನ ಸಾಧನೆಗೆ ಹೋಲಿಕೆಯಿಲ್ಲ, ಪರ್ಯಾಯವಿಲ್ಲ. ಆದರೂ ಆತನಿಗೆ ಸಿಗಬೇಕಾದ ಸೂಕ್ತ ಗೌರವ ದೊರೆಯದೇ ಹೋದದ್ದು ಅತ್ಯಂತ ಬೇಸರದ ಸಂಗತಿ. ಕಾಯಕವೇ ಕೈಲಾಸವೆಂಬಂತೆ ಆಡಿದ, ಯಾವುದೇ ಕೀರ್ತಿ, ಪ್ರಚಾರಕ್ಕೆ ಆಶಿಸದ ಶ್ರೇಷ್ಠ ವೃತ್ತಿಪರ ಕ್ರಿಕೆಟಿಗನೊಬ್ಬನಿದ್ದಾನೆಂದರೆ ಆತ ದ್ರಾವಿಡ್ ಮಾತ್ರ. ತಂಡಕ್ಕೆ ಅನಿವಾರ್ಯ ಆಸರೆಯಾಗಿ 21 ವರ್ಷಗಳ (ಪ್ರಥಮ ದರ್ಜೆ) ಕ್ರಿಕೆಟ್ ಬಾಳ್ವೆಗೆ ನಿವೃತ್ತಿ ಘೋಷಿಸಿದ ದ್ರಾವಿಡ್ ಎಲ್ಲರಿಗೂ ಮಾದರಿ.

Rahul-Dravid-01

ನಿಸ್ವಾರ್ಥವಾಗಿ ಎಷ್ಟೆಲ್ಲಾ ಸಾಧನೆ ಮಾಡಿದರೂ ಆತನಿಗೆ ದೊರೆತದ್ದು ಕಹಿಯೇ ಹೆಚ್ಚು. ನಮ್ಮ ಮಾಧ್ಯಮಗಳಿಗೆ ಹಾಗೂ ಆಡಳಿತಗಾರರಿಗೆ ಗ್ಲಾಮರ್‍ನ ಹುಚ್ಚು. ಅವರಿಗೆ ದ್ರಾವಿಡ್ ಇಷ್ಟವಾಗುವುದಾದರೂ ಯಾಕೆ ಅಲ್ವೇ? ಹೇಗೂ ಸಚಿನ್ ತೆಂಡುಲ್ಕರ್ ಒಬ್ಬನಿದ್ದರೆ ಸಾಕಲ್ವೇ? ದಾಖಲೆಗಳಿಗಾಗಿಯೇ ಆಡುವ, ತನ್ನ ಲಾಭಕ್ಕೋಸ್ಕರವೇ ಎಲ್ಲವನ್ನೂ ಪರಿಗಣಿಸುವ ಸ್ವಾರ್ಥಿ ಸಚಿನ್‍ನ ಮುಂದೆ ಪಾಪ ದ್ರಾವಿಡ್‍ನಂತಹವರ ಬೆಲೆ ಅರ್ಥ ಮಾಡಿಕೊಳ್ಳುವವರಾದರೂ ಎಲ್ಲಿಂದ ಬರಬೇಕು? 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆಯಲ್ಲಿ ನಿರಂತರ ಫಿಟ್‍ನೆಸ್ ಕಾಪಾಡಿಕೊಂಡು ಬಂದ, ತಂಡಕ್ಕೆ ಸದಾ ಆಸರೆಯಾಗಿದ್ದ ರಾಹುಲ್ ದ್ರಾವಿಡ್, ಇತ್ತೀಚೆಗೆ ಒಂದು ಕೆಟ್ಟ ಸರಣಿಯ ನಿರ್ವಹಣೆಗಾಗಿ ನಿವೃತ್ತಿ ಘೋಷಿಸಲೇಬೇಕಾಗಿ ಬಂದದ್ದು ದುರಂತ. ವಿದೇಶದಲ್ಲಿ ನಿರಂತರ 8 ಟೆಸ್ಟ್‍ಗಳನ್ನು ಕಳೆದುಕೊಂಡಿದ್ದಕ್ಕೆ ಭಾರತದ ಎಲ್ಲಾ ಆಟಗಾರರೂ ಸಮಾನ ಜವಾಬ್ದಾರರಾಗಿರುವಾಗ, ಕೇವಲ ದ್ರಾವಿಡ್ ಮೇಲೆ ಆ ಹೊಣೆ ಹೊರಿಸುವುದು ಅಕ್ಷಮ್ಯ ಅಪರಾಧವಲ್ಲವೆ?

ಲಾಡ್ರ್ಸ್‍ನಲ್ಲಿ ಮೊದಲ ಟೆಸ್ಟ್‍ನಲ್ಲೇ ದ್ರಾವಿಡ್‍ಗೆ ಅದೃಷ್ಟವು ಚೆಲ್ಲಾಟವಾಡಿತು. ಅದು ನಿರಂತರ ಮುಂದುವರಿಯುತ್ತಲೇ ಬಂತು. ಪ್ರತಿ ಬಾರಿ ದ್ರಾವಿಡ್‍ನ ಸಾಧನೆಗೆ ಸೂಕ್ತ ಖ್ಯಾತಿ, ಪ್ರಚಾರ ಸಿಗಲೇ ಇಲ್ಲ. ಈತನ ಸಹಕಾರದಿಂದಲೇ ಇತರರು ಸಾಧನೆ ಮಾಡಲು ಸಾಧ್ಯವಾಯಿತಾದರೂ, ಅದರ ಕ್ರೆಡಿಟ್ ಅವರಿಗೆ ಮಾತ್ರ ಸಂದಿತು. ಸಚಿನ್, ಲಕ್ಷ್ಮಣ್, ಸೆಹವಾಗ್ ಮುಂತಾದ ಘಟಾನುಘಟಿ ಬ್ಯಾಟ್ಸ್‍ಮನ್‍ಗಳು ದೊಡ್ಡ ದೊಡ್ಡ ಮೊತ್ತದ ರನ್ ಕಲೆಹಾಕಿದಾಗ ಅವರಿಗೆ ಜೊತೆಯಾಗಿದ್ದೇ ಈ ದ್ರಾವಿಡ್. ಅವರ ಸಾಧನೆಗೆ ಅದೃಷ್ಟದ ಬೆಂಬಲವಿದ್ದಿದ್ದರಿಂದಾಗಿ ಯಶಸ್ಸಿನ ಶ್ರೇಯಸ್ಸು ಅವರಿಗೆ ಲಭಿಸಿ, ದ್ರಾವಿಡ್ ಎಲೆಮರೆಯ ಕಾಯಿಯಂತೆ ಗೌಣವಾದರು.

Rahul-Dravid-03

ಸಚಿನ್ ಮತ್ತು ದ್ರಾವಿಡ್ ಸಮಕಾಲೀನರಾಗಿದ್ದರಿಂದ ದ್ರಾವಿಡ್‍ಗೆ ಸಿಗಬೇಕಾದ ಸೂಕ್ತ ಗೌರವ, ಪ್ರಾಮುಖ್ಯತೆ ಸಿಗಲಿಲ್ಲವೆಂಬ ವಾದ ಕೇಳಿಬರುತ್ತಿದೆ. ಅದು ನಿಜ. ಆದರೆ ಅದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇಲ್ಲಿ ಪಕ್ಷಪಾತತನ, ಸಹಜ ನ್ಯಾಯ ಪರಿಪಾಲನೆಯ ಕೊರತೆ ಎದ್ದು ಕಾಣುತ್ತದೆ. ಸಚಿನ್‍ಗೆ ಬಹು ಬೇಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆತರೆ, ದ್ರಾವಿಡ್ 5 ವರ್ಷ ರಣಜಿಯಲ್ಲಿ ಕುಟ್ಟುತ್ತಾ ಕುಟ್ಟುತ್ತಾ ಕಾಯಬೇಕಾಯಿತು. ಪ್ರಪಂಚದಲ್ಲಿ ಬೇರೆ ಯಾರಿಗೂ ಸಿಗಲಾರದ ಎಡ್ವಾಂಟೇಜ್ ಒಂದನ್ನು ಗಳಿಸಿರುವ ಸಚಿನ್ ಇನ್ನೂ ಹತ್ತು ವರ್ಷ ಆಡಿದರೂ ಆಶ್ಚರ್ಯವಿಲ್ಲ. ಯಾವುದೇ ಆಟಗಾರನಿಗೆ ತಂಡದಲ್ಲಿ ಸ್ಥಾನ ಗಳಿಸಬೇಕಾದರೆ, ಉಳಿಸಬೇಕಾದರೆ ಫಾರ್ಮ್‍ನಲ್ಲಿರಬೇಕಾಗಿರುವುದು ಪ್ರಥಮ ಅಗತ್ಯ. ಕ್ರಿಕೆಟ್ ಒಂದನ್ನೇ ಪರಿಗಣಿಸಿದರೆ ಅತ್ಯಂತ ಯಶಸ್ವಿ ನಾಯಕರಾಗಿ ತಮ್ಮ ತಂಡವನ್ನು ಎತ್ತರಕ್ಕೆ ಬೆಳೆಸಿದ ಸ್ಟೀವ್ ವೋ, ರಿಕಿ ಪಾಂಟಿಂಗ್, ಸೌರವ್ ಗಂಗೂಲಿ ಇರಲಿ ಅಥವಾ ಬ್ರಿಯಾನ್ ಲಾರಾ ಆಗಿರಲಿ, ಇವರಿಗೆಲ್ಲಾ ಫಾರ್ಮ್ ಕೈಕೊಟ್ಟಾಗ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಯಿತು. ಕೊನೆಗೆ ಅವರನ್ನೆಲ್ಲಾ ಅವಮಾನಕರವಾಗಿ ತಂಡದಿಂದ ಹೊರಗಿಡಲಾಯಿತು. ಆದರೆ ಸಚಿನ್ ತೆಂಡುಲ್ಕರ್‍ಗೆ? ದೇವರೇ ಬಂದರೂ ಆತ ಬಯಸದೆ ಭಾರತ ತಂಡದಲ್ಲಿ ಆತನ ಸ್ಥಾನವನ್ನು ಕಿತ್ತುಕೊಳ್ಳಲು ಅಸಾಧ್ಯವೆಂಬಂತಾಗಿದೆ. ಸಚಿನ್ ಫಾರ್ಮ್‍ನಲ್ಲಿರಲಿ, ಇಲ್ಲದಿರಲಿ, ಆಡಲಿ, ಶೂನ್ಯಕ್ಕೆ ಔಟಾಗಲಿ ಆತ ಎಂದೆಂದಿಗೂ ಪ್ರಮುಖ ಸ್ಥಾನ, ಗೌರವವನ್ನು ಪಡೆಯುತ್ತಾನೆ, ಅದು ತನ್ನ ಆಜನ್ಮ ಸಿದ್ಧ ಹಕ್ಕು ಎಂಬಂತೆ. ನೀವೇ ಹೇಳಿ, ತಂಡದಿಂದ ಹೊರಗುಳಿಯುವ ಕಿಂಚಿತ್ತೂ ಚಿಂತೆಯಿಲ್ಲದ, ಎಂದೆಂದಿಗೂ ತಂಡದಲ್ಲಿ ಅನಾಯಾಸವಾಗಿ ಸ್ಥಾನವನ್ನು ಹೊಂದಬಲ್ಲಂಥ ಒಬ್ಬ ಪ್ರತಿಭಾನ್ವಿತ ಬ್ಯಾಟ್ಸ್‍ಮನ್ ನಿರಂತರವಾಗಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಾ ಹೋಗುವುದರಲ್ಲಿ ಯಾವ ಮಹಾ ಸಾಧನೆಯಿದೆ? ಆ ದಾಖಲೆಗಳು ಎಷ್ಟು ಶ್ರೇಷ್ಠ?

ಆದರೆ ದ್ರಾವಿಡ್ ಹಾಗಲ್ಲ. ಆತ ಆಡಿದ ಆಟವೆಲ್ಲಾ ದಾಖಲೆಯಾಗದೇ ಇರಬಹುದು ಅಥವಾ ಆಯಾ ಸಂದರ್ಭಗಳಲ್ಲಿ ಯಾರೂ ಅದಕ್ಕೆ ಪ್ರಾಮುಖ್ಯತೆ ಕೊಡದೇ ಇರಬಹುದು. ಆದರೆ ದ್ರಾವಿಡ್‍ನಂತಹ ಬ್ಯಾಟ್ಸ್‍ಮನ್ ಇಲ್ಲದೇ ಹೋಗುತ್ತಿದ್ದಲ್ಲಿ ಈ ಸಚಿನ್, ಲಕ್ಷ್ಮಣ್‍ರಂಥವರು ಇನ್ನಿಂಗ್ಸ್‍ಗಳನ್ನು ಕಟ್ಟಲು ಆಗುತ್ತಿರಲೇ ಇಲ್ಲ, ರನ್ ಹೊಳೆ ಹರಿಸಲೂ ಆಗುತ್ತಿರಲಿಲ್ಲ. ಅಂಕಿಅಂಶಗಳಿಗಾಗಿ, ದಾಖಲೆಗಳಿಗಾಗಿ ಎಂದೆಂದೂ ಹಂಬಲಿಸದೆ ಆಡಿದ ಏಕೈಕ ಕ್ರಿಕೆಟಿಗ ದ್ರಾವಿಡ್. ಆತ ಪ್ರತಿ ಬಾರಿ ಇಟ್ಟ ಹೆಜ್ಜೆಗಳು ಇಂದಿಗೆ ಮೈಲುಗಲ್ಲಾಗಿವೆ. ದಾಖಲೆಗಳು ಸಹಜವಾಗಿ ಆತನನ್ನು ಹಿಂಬಾಲಿಸಿವೆ. ಇದು ನಿಜವಾದ ಸಾಧನೆ.

ಹಿಂದೊಮ್ಮೆ ಪ್ರಶ್ನೆಗೆ ಉತ್ತರಿಸುತ್ತಾ ‘ನನಗೆ ಅಂಕಿಅಂಶಗಳಲ್ಲಿ ನಂಬಿಕೆಯಿಲ್ಲ. ಅವು ತನ್ನಷ್ಟಕ್ಕೆ ನಿರ್ಮಾಣಗೊಳ್ಳುತ್ತವೆ. ನಾನು ತಂಡಕ್ಕೋಸ್ಕರ ಆಡುತ್ತೇನೆ’ ಎಂದು ಹೇಳಿ ಘನತೆ ಮೆರೆದ ದ್ರಾವಿಡ್, ಶತಕಗಳಿಗಾಗಿ, ದಾಖಲೆಗಳಿಗಾಗಿ ಗಮನ ಕೊಡಲೇ ಇಲ್ಲ. ಸಚಿನ್ ಮತ್ತು ದ್ರಾವಿಡ್‍ಗಿರುವ ಸಹಜ ವ್ಯತ್ಯಾಸ ಮೊನ್ನೆ ಕೂಡಾ ಜಾಹೀರಾಯಿತು. ದ್ರಾವಿಡ್ ನಿವೃತ್ತಿ ಸಂದರ್ಭದಲ್ಲಿ ಪ್ರತಿಯೊಬ್ಬರೂ ದ್ರಾವಿಡ್‍ರನ್ನು ಹೊಗಳಿ, ಕೃತಜ್ಞತೆ, ಅಭಿನಂದನೆ ಸಲ್ಲಿಸುತ್ತಿದ್ದರೆ, ‘ನಾನು ಗಳಿಸಿದ ಹಲವು ಶತಕಗಳಲ್ಲಿ ದ್ರಾವಿಡ್ ಜೊತೆಯಾಗಿದ್ದರು’ ಎಂದು ಹೇಳಿದ ಸಚಿನ್, ತಾನು ಯಾವುದಕ್ಕೆ ಪ್ರಾಶಸ್ತ್ಯ ಕೊಡುತ್ತೇನೆಂಬುದನ್ನು ಸಾಬೀತು ಪಡಿಸಿದರು. ಅಲ್ಲ, ಶತಕ, ಶತಕ, ಶತಕ ಬಿಟ್ಟರೆ ಸಚಿನ್‍ಗೆ ಚಿಂತಿಸಲು, ಮಾತನಾಡಲು ಬೇರೆ ವಿಷಯವೇ ಇಲ್ಲವೇ? ಬಹುಶಃ ದ್ರಾವಿಡ್ ಇಲ್ಲದೆ ಇನ್ನು ಮುಂದೆ ಟೆಸ್ಟ್‍ನಲ್ಲಿ ಶತಕ ಗಳಿಸಲು ಉತ್ತಮ ಜೊತೆಗಾರನಿಲ್ಲ ವೆಂಬ ಚಿಂತೆಯಿರಬೇಕು ಆತನಿಗೆ.

ಅಂತೂ ಇಂತೂ ಮಹಾಗೋಡೆ ಬದಿಗೆ ಸರಿದಿದೆ. ವಿವಿಎಸ್ ಲಕ್ಷ್ಮಣ್ ಸಹ ಸದ್ಯದಲ್ಲೇ ನಿವೃತ್ತಿಗೊಳ್ಳಬಹುದು. ಟೆಸ್ಟ್ ಕ್ರಿಕೆಟ್‍ನಲ್ಲಿ ಈಗಾಗಲೇ ನೆಲ ಕಚ್ಚಿರುವ ಭಾರತ ತಂಡವನ್ನು ಆಧರಿಸುವವರು, ಕಷ್ಟದಿಂದ ಬಚಾವ್ ಮಾಡುವವರು ಯಾರೆಂಬುದು ಯಕ್ಷಪ್ರಶ್ನೆ. ಬಹುಶಃ ಕ್ರಿಕೆಟ್ ತಂಡ ಪ್ರಾಮುಖ್ಯತೆ ಕಳೆದುಕೊಂಡರೆ ದೇಶದ ಇತರ ಕ್ರೀಡೆಗಳಿಗೆ ಜನರು ಗಮನ ನೀಡಿ, ವಿಶ್ವ ಕ್ರೀಡಾರಂಗದಲ್ಲಿ ಭಾರತ ಮುಂಚೂಣಿಗೆ ಬರಲು ಇದು ಸಹಾಯವಾಗಬಹುದೆಂಬುದು ನನ್ನ ದುರಾಸೆ!

ಸುದೀರ್ಘ ಕಾಲ ಕ್ರಿಕೆಟ್‍ನ ಘನತೆ ಹೆಚ್ಚಿಸಿದ, ಭಾರತ ತಂಡಕ್ಕೆ ಆಪತ್ಭಾಂಧವನಾಗಿ ಕೆಚ್ಚೆದೆಯ ಹೋರಾಟ ಸಂಘಟಿಸಿ, ಹಲವಾರು ಸೋಲುಗಳನ್ನು ತಪ್ಪಿಸಿ, ಬಹಳಷ್ಟು ಗೆಲುವನ್ನು ಸಮರ್ಪಿಸಿದ ಅಪ್ರತಿಮ ನಿಷ್ಠಾವಂತ ಕ್ರಿಕೆಟಿಗ ರಾಹುಲ್ ದ್ರಾವಿಡ್‍ಗೆ ಶುಭ ನಮನಗಳು.

ದ್ರಾವಿಡ್, ಸಚಿನ್ & ಗಾವಸ್ಕರ್

ಸಚಿನ್ ಮತ್ತು ದ್ರಾವಿಡ್‍ರನ್ನು ಪ್ರಪಂಚ ನಡೆಸಿಕೊಂಡ ರೀತಿಗೆ ಅತ್ತ್ಯುತ್ತಮ ಉದಾಹರಣೆ ಇದು. ಸುನಿಲ್ ಗಾವಸ್ಕರ್ ಸಹಜವಾಗಿ ಸಚಿನ್‍ನ ಬೆಂಬಲಿಗ, ಮರಾಠಿ ಎಂಬ ಕಾರಣಕ್ಕಾಗಿ. ಬಹುಶಃ ಸಚಿನ್ ಬದಲಿಗೆ ಬೇರೊಬ್ಬರು ತನ್ನ ದಾಖಲೆಗಳನ್ನು ಮುರಿದಿದ್ದರೆ ಗಾವಸ್ಕರ್ ಅಷ್ಟೇನೂ ಇಷ್ಟಪಡುತ್ತಿರಲಿಲ್ಲವೇನೋ. ಆದರೆ ಸಚಿನ್‍ಗೆ ಮಾತ್ರ ಆತ ಯಾವಾಗಲೂ ಹೊಗಳುವುದು ಇದ್ದದ್ದೇ. ಅಭಿಮಾನ ಸಹಜ, ಅಂಧಾಭಿಮಾನ ಮಾರಕ. ಗಾವಸ್ಕರ್ ಕೂಡಾ ಇಂತಹ ಎಳಸು ಮನೋಭಾವ ಪ್ರದರ್ಶಿಸಿದ್ದಕ್ಕೆ ಈ ಪ್ರಕರಣ ಸಾಕ್ಷಿ.

Rahul-Dravid-04

ಐಪಿಎಲ್‍ನಲ್ಲಿ ದ್ರಾವಿಡ್ ಮತ್ತು ಸಚಿನ್ ಪರಸ್ಪರ್ ಎದುರಾಳಿಯಾಗಿ ಆಡುತ್ತಿದ್ದರು. ಅಂದು ದ್ರಾವಿಡ್ ಬ್ಯಾಟಿಂಗ್, ಸಚಿನ್ ಫೀಲ್ಡಿಂಗ್ ಮಾಡುತ್ತಿದ್ದರೆ ಗಾವಸ್ಕರ್ ಕಮೆಂಟ್ರಿ ಕೊಡುತ್ತಿದ್ದರು. ಖಂಡಿತವಾಗಿ ಸಚಿನ್ ಮತ್ತು ದ್ರಾವಿಡ್ ಮೈದಾನದಲ್ಲಿ ಮತ್ತು ಹೊರಗೆ ಸಭ್ಯಸ್ಥರು, ಜಂಟಲ್‍ಮ್ಯಾನ್‍ಗಳು. ಇದರಲ್ಲಿ ದ್ರಾವಿಡ್ ತೂಕ ತುಸು ಹೆಚ್ಚೇ ಎನ್ನಬಹುದು. ಅಂದು ದ್ರಾವಿಡ್ ಬ್ಯಾಟಿನಿಂದ ಅಪ್ಪಳಿಸಲ್ಪಟ್ಟ ಬಾಲ್ ತೆಂಡುಲ್ಕರ್ ಬಳಿ ಬಂತು. ನೆಲದ ಬಳಿ ಬಂದ ಬಾಲ್ ತೆಂಡುಲ್ಕರ್ ಹಿಡಿದು ಕ್ಯಾಚ್ ಎಂಬಂತೆ ಪ್ರದರ್ಶಿಸಿದರು. ಆದರೆ ದ್ರಾವಿಡ್‍ಗೆ ಗೊತ್ತಿತ್ತು ಅದು ಕ್ಯಾಚ್ ಅಲ್ಲವೆಂದು. ಔಟಾದರೂ ಕ್ರೀಸ್‍ನಲ್ಲಿ ನಿಲ್ಲುವಷ್ಟು ಅಸಭ್ಯ, ಸಣ್ಣ ಮನಸ್ಸಿನ ವ್ಯಕ್ತಿ ಅಲ್ಲ ದ್ರಾವಿಡ್. ಆದರೆ ಕಮೆಂಟ್ರಿ ಹೇಳುತ್ತಿದ್ದ ಗಾವಸ್ಕರ್ ನೆತ್ತಿಗೆ ಪಿತ್ತ ಏರಿಯೇ ಬಿಟ್ಟಿತು. ‘ದ್ರಾವಿಡ್ ಸಭ್ಯನಿರಬಹುದು. ತೆಂಡುಲ್ಕರ್‍ನಂತಹ ವ್ಯಕ್ತಿ ಕ್ಯಾಚ್ ಹಿಡಿದಿದ್ದೇನೆಂದು ಹೇಳಿದ ಮೇಲೆಯೂ ಅದನ್ನು ಪ್ರಶ್ನಿಸುವುದು ಸಭ್ಯತನವಲ್ಲ, ದ್ರಾವಿಡ್ ನಡತೆ ಸರಿಯಲ್ಲ. ತೆಂಡುಲ್ಕರ್‍ನ್ನು ಸಂಶಯಿಸುವುದು, ಪ್ರಶ್ನಿಸುವುದು ಸಲ್ಲ’ ಎಂದು ಹೇಳಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ಬರೆಯಲು ಹೊರಟಿದ್ದರು. ಆದರೆ ಸ್ವತಃ ತೆಂಡುಲ್ಕರ್ ನೆಲದ ಮೇಲೆ ಬಿದ್ದ ಬಾಲನ್ನು ಹಿಡಿದು ಕ್ಯಾಚ್ ಎಂಬಂತೆ ತೋರಿಸಿದ್ದು ರೀಪ್ಲೇಯಲ್ಲಿ ತೋರಿಸಲ್ಪಟ್ಟು, 3ನೇ ಅಂಪೈರ್ ದ್ರಾವಿಡ್ ನಾಟೌಟ್ ಎಂದು ಘೋಷಿಸಿದರು. ಇದು ಒಂದು ಸಣ್ಣ ಘಟನೆಯಾಗಿದ್ದರೂ, ಒಟ್ಟಾರೆಯಾಗಿ ದ್ರಾವಿಡ್ ಕ್ರಿಕೆಟ್ ಬಾಳ್ವೆಯಲ್ಲಿ ಇತರರಿಂದ ಹೇಗೆ ನಡೆಸಲ್ಪಟ್ಟರು, ಸಚಿನ್‍ನನ್ನು ಹೇಗೆ ನಡೆಸಲಾಗಿದೆ ಎಂಬುದನ್ನು ಸರಿಯಾಗಿ ಬಿಂಬಿಸುತ್ತದೆ.

(Originally published on March 09, 2012)

Leave a comment

Your email address will not be published. Required fields are marked *