Latest News

ಮಂಗಳೂರಿನಲ್ಲಿ ಹಿಮಾಲಯಕ್ಕೆ ತೋರಣ ಕಟ್ಟಿದ ಯುವ ಛಾಯಾಗ್ರಾಹಕ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : January 7, 2015 at 10:03 AM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಇದೇ ಭಾನುವಾರ (ಜನವರಿ 4) ದಂದು ಮಂಗಳೂರಿನಲ್ಲಿ ಪತ್ರಕರ್ತ ಮಂಜುನಾಥ್ ಭಟ್ ಅವರ ಛಾಯಾಚಿತ್ರಗಳ ಪ್ರದರ್ಶನ ‘ಹಿಮತೋರಣ’ ನೋಡಲು ಹೋಗಿದ್ದೆ. ಹೋಗಲೇಬೇಕೆಂದುಕೊಂಡು ಹೋಗಿದ್ದೆ. ಸಾಮಾನ್ಯವಾಗಿ ಹೀಗೆ ನಿರೀಕ್ಷೆ ಇಟ್ಟುಕೊಂಡು ಹಾಜರಾಗುವ ಕಾರ್ಯಕ್ರಮ ಅಥವಾ ಪ್ರದರ್ಶನಗಳು ನಿರಾಶೆ ಮೂಡಿಸುವುದು ಹೆಚ್ಚು. ಹಿಮಾಲಯದ ಚಿತ್ರಗಳಾಗಿದ್ದರಿಂದ ನೋಡಲು ಹೆಚ್ಚು ಆಸಕ್ತಿ ಮೂಡಿತ್ತು. ಆ ಆಸಕ್ತಿ ಕೆರಳಲು ಅವರಿಟ್ಟ ‘ಹಿಮತೋರಣ’ ಎಂಬ ಆಕರ್ಷಕ ಹೆಸರು ಪರಿಣಾಮ ಬೀರಿತ್ತು. ಈಗಲೂ ನನ್ನ ಮನಸ್ಸು ಅಲ್ಲಿ ನೋಡಿದ ಚಿತ್ರಗಳನ್ನು ನೆನೆಸುತ್ತಲೇ ಇದೆ.

Manjunath Bhat

ಪ್ರಕೃತಿ – ಎಲ್ಲಿಯದೇ ಇರಲಿ ಅದು ಯಾವತ್ತೂ ಸುಂದರ ಮತ್ತು ಅದ್ಭುತ. ಅದನ್ನು ನೋಡುವ ಮತ್ತು ಆಸ್ವಾದಿಸಬಲ್ಲ ಕಣ್ಣಿಗಳಿಗಷ್ಟೇ ಅದು ಕಾಣುತ್ತದೆ. ಅಂತಹ ಮನಸ್ಸುಳ್ಳವನು ಕಲಾವಿದನೋ, ಬರಹಗಾರನೋ ಅಥವಾ ಛಾಯಾಗ್ರಾಹಕನೋ ಆಗಿದ್ದರೆ ಆತ ತಾನು ನೋಡುವುದನ್ನು ವಿಶಿಷ್ಟವಾಗಿ ಬೇರೆಯವರಿಗೆ ತೋರಿಸಲು ಶಕ್ತನಾಗುತ್ತಾನೆ (ಪೈಂಟಿಂಗ್, ಬರಹ, ಛಾಯಾಚಿತ್ರದ ಮೂಲಕ). ಅದರಲ್ಲೂ ಪಶ್ಚಿಮ ಘಟ್ಟ ಮತ್ತು ಹಿಮಾಲಯದಂಥ ಪರ್ವತ ಶ್ರೇಣಿಗಳು ಎಲ್ಲರಿಗೂ ಒಂದು ಛಾಲೆಂಜ್. ಇಂತಹ ಛಾಲೆಂಜ್ ಅನ್ನು ಗೆದ್ದಿದ್ದಾರೆ ಮಂಜುನಾಥ್ ಭಟ್.

ನನಗೂ ಪ್ರಕೃತಿ ಇಷ್ಟ ಮತ್ತು ಅದನ್ನು ನೋಡುವ, ಸೆರೆಹಿಡಿಯುವ ಹುಚ್ಚು ತುಂಬಾ ಇದೆ. ಹಿಮಾಲಯಕ್ಕೆ ನಾನು ಇದುವರೆಗೂ ಹೋಗಿಲ್ಲ. ಆದರೆ ಭಾನುವಾರ ಆ ಒಂದು ಕೊರತೆ ಅಥವಾ ಕೊರಗು ಸ್ವಲ್ಪ ಮಟ್ಟಿಗೆ ನಿವಾರಣೆಯಾಯಿತು – ಮಂಜುನಾಥ್‍ರ ಚಿತ್ರಗಳನ್ನು ವೀಕ್ಷಿಸಿದ ಬಳಿಕ. ಅಲ್ಲಿದ್ದವು ಕೆಲವೇ ಚಿತ್ರಗಳಾದರೂ, ಎಲ್ಲವೂ ನನ್ನನ್ನು ಸೀದಾ ಹಿಮಾಲಯಕ್ಕೇ ಕರೆದೊಯ್ದವು. ಒಂದೊಂದು ಚಿತ್ರ ವೀಕ್ಷಿಸುತ್ತಿದ್ದಂತೆ ನಾನು ಆಯಾ ಸ್ಥಳಗಳಲ್ಲಿ ಖುದ್ದಾಗಿ ಹಾಜರಾದಂತೆ ಅನಿಸಿತು. ಚಿತ್ರಗಳನ್ನು ನೋಡುತ್ತಾ ನಿಂತು ಆನಂದಿಸಿದೆನಷ್ಟೇ ಅಲ್ಲ ಸ್ವತಃ ನಾನು ಅಲ್ಲಿಯೇ ನಿಂತಿರುವಂತೆ ಅನುಭವವಾಯಿತು. ಅಲ್ಲಿನ ರುದ್ರ ರಮಣೀಯ ದೃಶ್ಯಗಳು, ಭವ್ಯ, ದಿವ್ಯ ಪರ್ವತ ಶ್ರೇಣಿಗಳು, ಪರಿಸರ, ಕೆರೆಗಳು, ಮಾನವ ಸೃಷ್ಟಿಗಳು, ಪ್ರಾಣಿಗಳ, ಹಿಮದ ಬೆರಗಿನ ನೋಟಗಳು ನನ್ನನ್ನು ತುಂಬಾ ಹಿಡಿಸಿದವು, ಮನಸ್ಸೆಲ್ಲಾ ಆವರಿಸಿಬಿಟ್ಟವು.

Manjunath Bhat_Himalaya photos (15) Manjunath Bhat_Himalaya photos 01 Manjunath Bhat_Himalaya photos 02 Manjunath Bhat_Himalaya photos 03 Manjunath Bhat_Himalaya photos 04 Manjunath Bhat_Himalaya photos (1) Manjunath Bhat_Himalaya photos (2) Manjunath Bhat_Himalaya photos (4) Manjunath Bhat_Himalaya photos (5) Manjunath Bhat_Himalaya photos (6) Manjunath Bhat_Himalaya photos (7) Manjunath Bhat_Himalaya photos (10) Manjunath Bhat_Himalaya photos (11)Manjunath Bhat_Himalaya photos Manjunath Bhat_Himalaya photos (14) Manjunath Bhat_Himalaya photos (6)

ಅತ್ಯದ್ಭುತ ಪ್ರಕೃತಿಯ ಸೊಬಗನ್ನು, ಶ್ರೀಮಂತಿಕೆಯನ್ನು, ಶ್ರೇಷ್ಠತೆಯನ್ನು ಅಷ್ಟೇ ಕಲಾತ್ಮಕವಾಗಿ, ಕ್ರಿಯಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಮಂಜುನಾಥ್ ಸೆರೆ ಹಿಡಿದಿದ್ದಾರೆ. ‘ಶಿಲಾಮುಕುಟ’ ಮತ್ತು ‘ದೂರದ ಉದಾರಿ’ ನನ್ನನ್ನು ತುಂಬಾ ಆಕರ್ಷಿಸಿದವು ಮತ್ತು ಕಾಡಿದವು. ವ್ಹಾವ್! ಅದ್ಭುತವನ್ನು ಅತ್ಯದ್ಭುತವಾಗಿ ತೋರಿಸುವುದೆಂದರೆ ಇದೇ.

ಇನ್ನೊಂದು ಸಂತಸದ ಸಂಗತಿಯೆಂದರೆ ಇದೆಲ್ಲಕ್ಕೂ ಕೊಟ್ಟ ಫಿನಿಶಿಂಗ್ ಟಚ್. ಕಲಾತ್ಮಕವಾಗಿ, ಕ್ರಿಯಾತ್ಮಕವಾಗಿ ಪ್ರಸ್ತುತಪಡಿಸಿದ್ದು ನಿಜಕ್ಕೂ ಹೊಗಳಬೇಕಾದ ವಿಚಾರ. ಪ್ರತಿ ಚಿತ್ರಕ್ಕೂ ಕೊಟ್ಟ ಆಕರ್ಷಕ ಟೈಟಲ್, ಕೆಲವಕ್ಕೆ ಕೊಟ್ಟ ಚುಟುಕಾದ, ಅರ್ಥಗರ್ಭಿತ ವಿವರಗಳು ತುಂಬಾ ಪರ್ಫೆಕ್ಟ್ ಆಗಿತ್ತು. ಈ ಕೆಲಸ, ಅಂದರೆ ಟೈಟಲ್ ಮತ್ತು ಕಲಾತ್ಮಕ ಫಿನಿಶಿಂಗ್ ಟಚ್, ಕಲಾವಿದ ದಿನೇಶ್ ಹೊಳ್ಳ ಅವರದು. ಒಟ್ಟಾರೆ ಎಲ್ಲವೂ ಅಚ್ಚುಕಟ್ಟು, ಆಕರ್ಷಕ ಮತ್ತು ತುಂಬಾ ಅಪೀಲಿಂಗ್ ಆಗಿತ್ತು.

ಲೇಖಕ ಮೆಚ್ಚಿದ ಎರಡು ಚಿತ್ರಗಳು

Manjunath Bhat_Himalaya photos_top 1

‘ಶಿಲಾಮುಕುಟ’ವೆಂದು ಹೆಸರಿಸಲಾದ ಈ ಚಿತ್ರ ಒಂದು ಅತ್ಯದ್ಭುತ ಕ್ಷಣವನ್ನು ಸೆರೆ ಹಿಡಿದಿದೆ. ಶಿಲಾ ಪರ್ವತದ ಆಕಾರ ಒಂದು ಆಕರ್ಷಣೆಯಾದರೆ, ಪರ್ವತ ಶ್ರೇಣಿಗಳ ನಡುವಿನ ಸ್ಥಳದಿಂದ ಚಿತ್ರೀಕರಿಸಿರುವುದರಿಂದ ಕಡು ವರ್ಣದ ಗ್ರೌಂಡ್‍ನಿಂದ ಶಿಲಾ ಪರ್ವತ ಎದ್ದು ಕಾಣುತ್ತದೆ. ದಟ್ಟ ವರ್ಣದ ಗಾಂಭೀರ್ಯದ ಮೋಡಗಳು ಕುತೂಹಲಕಾರಿ ಸನ್ನಿವೇಶವನ್ನು ನಿರ್ಮಿಸಿರುವ ಹೊತ್ತಿನಲ್ಲಿ ಸೂರ್ಯನ ಬೆಳಕು ಬಿದ್ದು ಪರ್ವತವನ್ನು ಎದ್ದು ನಿಲ್ಲಿಸಿದಂತಿರಲು, ಹಿಮದ ಹೊದಿಕೆ ಆ ಬೆಳಕನ್ನು ಫಳಫಳಿಸುತ್ತಾ ಇಡೀ ಚಿತ್ರವನ್ನು ರಮಣೀಯವಾಗಿಸಿದೆ. ತುಂಬಾ ಪಾಸಿಟಿವ್ ಫೀಲಿಂಗ್ ಕೊಟ್ಟಿತು ಈ ಚಿತ್ರ ನನಗೆ.

Manjunath Bhat_Himalaya photos_top 2

ದೂರದ ಉ‘ದಾರಿ’ ಹೆಸರಿನ ಈ ಚಿತ್ರವೂ ಅದೇ ಥರಹದ ಫೀಲಿಂಗ್ ಕೊಟ್ಟ ಚಿತ್ರ. ಪರ್ವತ ಶ್ರೇಣಿಯ ನಡುವಿನ ವಿಶಾಲ ದಾರಿ, ಭವಿಷ್ಯದೆಡೆಗೆ ಸ್ವಾಗತಿಸುವಂತಿದೆ. ದಾರಿ ತೆರೆದುಕೊಳ್ಳುವ ರೀತಿಯೇ ಚೆನ್ನಾಗಿದೆ. ಶುಭ್ರ ಮೋಡಗಳು, ದೂರದ ಮಗದೊಂದು ಪರ್ವತ ಶ್ರೇಣಿ ಸ್ಫೂರ್ತಿ ಕೊಡುತ್ತವೆ. ಇನ್ನೊಂದು ವಿಶೇಷವಾದ ಸಂಗತಿಯೆಂದರೆ, ಇಲ್ಲಿ ಎಲ್ಲವೂ ಪ್ರಕೃತಿದತ್ತ. ಮಾನವ ನಿರ್ಮಿತ ವಿಕೃತಿಗಳಿಲ್ಲದೆ ಸ್ವಚ್ಛ, ಸ್ವಚ್ಚಂದ ವಾತಾವರಣ ಮನಸ್ಸು, ದೇಹಕ್ಕೆ ಹಿತ. ನೀರಿನ ಹರಿವೂ ಇದೆ. ನೋಡುತ್ತಾ ನೋಡುತ್ತಾ ಅಲ್ಲಿ ನಡೆದುಕೊಂಡು ಹೋದಂಥ ಅನುಭವವನ್ನು ನಾನು ಕಂಡುಕೊಂಡೆ.

ಬಹುಶಃ ಪ್ರದರ್ಶನಕ್ಕಿಟ್ಟ ಈ ಚಿತ್ರಗಳು ದೊಡ್ಡ ಗಾತ್ರದಲ್ಲಿದ್ದುದರಿಂದ ಇಂಥಾ ಅನುಭವ ನೀಡಲು ಸಹಾಯವಾಯಿತೆನ್ನುವುದು ನಿಜ. ಅದೇ ಚಿತ್ರಗಳನ್ನು ಸಣ್ಣ ಗಾತ್ರದಲ್ಲಿ ನೋಡಿದಾಗ ಆಗುವ ಅನಿಸಿಕೆ ಮತ್ತು ಅನುಭವ ಬೇರೆಯದೇ ರೀತಿಯಲ್ಲಿರುತ್ತದೆ ಎನ್ನುವುದು ಸಹಜ.

ಮಂಜುನಾಥ್‍ರಿಗೆ ಅಭಿನಂದನೆಗಳು. ಪತ್ರಕರ್ತರಾಗಿರುವ ಮಂಜುನಾಥ್ ಪರಿಸರ ಪ್ರೇಮಿ ಮತ್ತು ಚಾರಣಿಗ. ಹವ್ಯಾಸಕ್ಕಾಗಿ ಛಾಯಾಚಿತ್ರ ತೆಗೆಯುವುದು ಅವರ ನೆಚ್ಚಿನ ಚಟುವಟಿಕೆ. ಅವರ ಈ ಅತ್ಯಂತ ಸುಂದರ ಮತ್ತು ಸೊಗಸಾದ ಸಾಧನೆ ಶ್ಲಾಘನೀಯ. ಅವರಿಂದ ಇನ್ನಷ್ಟು ಶ್ರೇಷ್ಠ ಸಾಧನೆ ನಿರೀಕ್ಷಿಸಬಹುದು. ಅವರು ಅದಕ್ಕೆ ಅರ್ಹ. ಅವರಿಂದ ಅದು ಸಾಧ್ಯ ಕೂಡ. ಒಳ್ಳೆಯದಾಗಲಿ ಮಂಜುನಾಥ್. ಹಾಗೆಯೇ ಮಂಜುನಾಥ್‍ರ ಚಿತ್ರಗಳನ್ನು ಮೆಚ್ಚಿ, ಚಿತ್ರ ಪ್ರದರ್ಶನ ಏರ್ಪಡಿಸಲು ಸಕಲ ರೀತಿಯಿಂದ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಶ್ರಮಿಸಿದ ಕಲಾವಿದ ದಿನೇಶ್ ಹೊಳ್ಳ ಕೂಡ ಅಭಿನಂದನಾರ್ಹರು.

(ಇಲ್ಲಿನ ಎಲ್ಲಾ ಚಿತ್ರಗಳು ‘ಹಿಮತೋರಣ’ದಲ್ಲಿ ಪ್ರದರ್ಶಿಸಿದವು ಅಲ್ಲ. ಫೇಸ್‍ಬುಕ್‍ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದಾಗ, ಮಂಜುನಾಥ್ ಅವರು ತಮ್ಮ ಈ ಚಿತ್ರಗಳನ್ನು ನಮ್ಮ ಓದುಗರಿಗೋಸ್ಕರ ಕಳುಹಿಸಿ ಕೊಟ್ಟರು. ಅವರಿಗೆ ಕೃತಜ್ಞತೆಗಳು).

Sunset

Photos Copyright: Manjunath Bhat

1 comment

  1. ಇವು ಛಾಯಾ ಚಿತ್ರಗಳಲ್ಲ, ಕಲಾವಿದನ ಕುಂಚದಲ್ಲಿ (ಕ್ಯಾಮರದಲ್ಲಿ) ಮೂಡಿ ಬಂದ ವರ್ಣ ಚಿತ್ರಗಳು. ಮಂಜುನಾಥ ಭಟ್ಟರಿಗೆ ವಂದನೆಗಳು.

Leave a comment

Your email address will not be published. Required fields are marked *

Latest News