ಫಲಿಸಲಿದೆಯೇ ರಾಹುಲ್ ಕಿ ರಾಜ್‍ನೀತಿ?

ಡೊನಾಲ್ಡ್ ಪಿರೇರಾ, ಬೆಳ್ತಂಗಡಿ

Posted on : April 12, 2014 at 4:42 AM

(ಉತ್ತರ ಪ್ರದೇಶ ಚುನಾವಣಾ ಲೇಖನದ ಮುಂದುವರಿದ ಭಾಗ)

UP_Election 05ರಾಹುಲ್ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕಿಳಿದಾಗಿನಿಂದಲೂ, ಅಂದರೆ ಸುಮಾರು ಏಳು ವರ್ಷಗಳಿಂದಲೂ, ಉತ್ತರ ಪ್ರದೇಶದಲ್ಲಿ ನರಸತ್ತ ಕಾಂಗ್ರೆಸ್‍ಗೆ ಆಕ್ಸಿಜನ್ ನೀಡಿ ಅದರ ನರನಾಡಿಗಳಲ್ಲಿ ಮತ್ತೆ ಜೀವ ತುಂಬಿಸಲು ಹರ ಸಾಹಸ ಪಟ್ಟಿದ್ದು ಇದುವರೆಗೆ ಹೇಳುವಂತಹ ಫಲಿತಾಂಶವನ್ನು ನೀಡಿಲ್ಲ. 2007ರಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಅಧಿಕಾರದಲ್ಲಿದ್ದ ಮುಲಾಯಂ ಸಿಂಗ್ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಸಾಕಷ್ಟು ಪ್ರಚಾರ ಪಡೆದು ತೀವ್ರ ಕ್ಯಾಂಪೇಯ್ನ್ ನಡೆಸಿದರು. ಅದು ಜನರಲ್ಲಿ ಪರಿಣಾಮ ಬೀರಿತೋ ಇಲ್ಲವೋ ಯಾರಿಗೆ ಗೊತ್ತು. ಆದರೆ ಸರಕಾರದ ವಿರುದ್ಧ ಸತತ ಆರೋಪ, ಠೀಕೆ ಮಾಡಿದ್ದರಿಂದ ಮುಲಾಯಂ ಸಿಂಗ್‍ಗೆ ಅಧಿಕಾರ ನಷ್ಟವೇನೋ ಆಯಿತು. ಆದರೆ ಅದರ ಲಾಭವಾಗಿದ್ದು ಕಾಂಗ್ರೆಸ್‍ಗೆ ಅಲ್ಲ. ಬದಲಾಗಿ ಮಾಯಾವತಿಯ ಬಿಎಸ್‍ಪಿಗೆ ಮತಗಳು ನೇರವಾಗಿ ಹರಿದು ಬಂದವು. ಹೀಗಾಗಿ ಮುಲಾಯಂ ಸರಕಾರ ಕಿತ್ತೊಗೆಯುವ ರಾಹುಲ್ ಗಾಂಧಿಯ ಪ್ರಯತ್ನ ಫಲ ನೀಡಿದರೂ ಅದರಿಂದ ಕಾಂಗ್ರೆಸ್‍ನ ಸ್ಥಿತಿಯೇನೂ ಉದ್ಧಾರವಾಗಲಿಲ್ಲ.

2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹಳಷ್ಟು ಲಾಭ ಪಡೆಯಿತು. ತನ್ನ ಸ್ಥಾನ ಗಳಿಕೆಯನ್ನು 2004ರಲ್ಲಿದ್ದ 9ರಿಂದ 21ಕ್ಕೆ ಹೆಚ್ಚಿಸಿಕೊಂಡು ಕಾಂಗ್ರೆಸ್ ಕೇಂದ್ರದಲ್ಲಿ ಬಲಿಷ್ಠವಾಯಿತು. ಅದರ ನೇರ ಲಾಭ, ಹಿರಿಮೆ ರಾಹುಲ್ ಗಾಂಧಿಗೆ ಕೊಡುವುದರಲ್ಲಿ ಎಲ್ಲರೂ ಆತುರ ತೋರಿದರು – ಕಾಂಗ್ರೆಸ್ ಮುಖಂಡರು, ಮಾಧ್ಯಮಗಳು ಹಾಗೂ ವಿಶ್ಲೇಶಕರು. ಬಹುಶಃ ಮತದಾರರು ಕಾಂಗ್ರೆಸ್ ಅನ್ನು ಕೇಂದ್ರದಲ್ಲಿ ಹೆಚ್ಚು ಇಷ್ಟಪಟ್ಟರು ಮತ್ತು ರಾಜ್ಯದಲ್ಲಿ ಅದರ ಸ್ಥಿತಿಗತಿ ಚಿಂತಾಜನಕವಿರುವುದರಿಂದ ರಾಜ್ಯದಲ್ಲಿ ಆಯ್ಕೆ ಬಂದಾಗ ಕಾಂಗ್ರೆಸ್ ಅನ್ನು ಗಮನದಲ್ಲಿಡಲಿಲ್ಲವೆಂದು ವಿಶ್ಲೇಶಿಬಹುದೇನೋ.

ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಹಲವು ಪರಿಣಾಮಗಳಿಗೆ ಆಸ್ಪದ ಕೊಡುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಬೇಕಾದಷ್ಟು ಲೆಕ್ಕಾಚಾರಗಳನ್ನು ರಾಜಕೀಯ ಪಕ್ಷಗಳು ಹಾಗೂ ವಿಶ್ಲೇಶಕರು ಮಾಡುತ್ತಿದ್ದಾರೆ. ಪ್ರಮುಖವಾಗಿ ಪ್ರಚಾರದಲ್ಲಿರುವ ಕಾಂಗ್ರೆಸ್‍ನ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿಯ ಪ್ರಭಾವ ಮತ್ತು ಸಾಮಥ್ರ್ಯ. ಕಳೆದ ಹಲವಾರು ವರ್ಷಗಳಿಂದ ಉತ್ತರ ಭಾರತದಾದ್ಯಂತ ಪಕ್ಷದ ಸಂಘಟನೆಗೆ ಪ್ರಾಮುಖ್ಯತೆ ನೀಡಿ, ಕೋಮಾವಸ್ಥೆಗೆ ಜಾರಿದ್ದ ಕಾಂಗ್ರೆಸ್ ಪಕ್ಷವನ್ನು ಮರು ಜೀವ ನೀಡಿ ನಡೆದಾಡಲು ಮಾಡುವಂತೆ ಬಹಳಷ್ಟು ಕನಸು ಕಂಡು ಆ ನಿಟ್ಟಿನಲ್ಲಿ ತುಂಬಾ ಶ್ರಮ ಪಟ್ಟಿದ್ದರೂ ಈವರೆಗೆ ಅದರಿಂದ ಯಶಸ್ಸು ದೊರೆತಿಲ್ಲ. ಅದು ಅಷ್ಟು ಸುಲಭವೂ ಅಲ್ಲ. ಪ್ರಾದೇಶಿಕ ಪಕ್ಷಗಳ ಹೊಡೆತಕ್ಕೆ ನಲುಗಿ ಹೋಗಿರುವ ಸಂಘಟನೆಯಿಂದ ಕಾರ್ಯಕರ್ತರನ್ನು, ನಾಯಕರನ್ನು ಸಜ್ಜುಗೊಳಿಸುವುದು ಕಠಿಣ ಕಾರ್ಯ. ಕನಿಷ್ಠ ಉ.ಪ್ರ.ದಲ್ಲಿ ಇಷ್ಟು ವರ್ಷಗಳ ಪ್ರಯತ್ನದಿಂದಾಗಿ ಹಾಗೂ ಮೊದಲ ಬಾರಿಗೆ ರಾಜ್ಯದಲ್ಲಿ ಎಲ್ಲಾ ಜಾತಿ, ಪಂಗಡಗಳಿಂದ, ಬೇರೆ ಪಕ್ಷಗಳಿಂದ ಮುಖಂಡರನ್ನು ಸೆಳೆದುಕೊಂಡು ಬಹಳ ದೊಡ್ಡ ರಿಸ್ಕ್ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಚುನಾವಣಾ ಅಖಾಡಕ್ಕೆ ನಿಲ್ಲಿಸಿದ್ದು ರಾಹುಲ್ ಗಾಂಧಿಯ ಪ್ರಮುಖ ತಂತ್ರಗಾರಿಕೆ. ಅದಕ್ಕೆ ಬಹಳಷ್ಟು ಭಂಡ ಧೈರ್ಯ ಬೇಕು. ಆದರೆ ಬಿಎಸ್ಪಿ ಮತ್ತು ಎಸ್‍ಪಿಗಳ ಪ್ರಭಾವ, ಮುಷ್ಠಿಯಿಂದ ಮತದಾರರನ್ನು ವಶೀಕರಿಸಿ, ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಇದೆಲ್ಲಾ ಎಷ್ಟು ಪ್ರಯೋಜನಕಾರಿ ಎಂಬುದನ್ನು ಫಲಿತಾಂಶ ಬಂದಾಗಲೇ ಕಂಡುಕೊಳ್ಳಬೇಕು. ಒಂದು ವೇಳೆ ಕಾಂಗ್ರೆಸ್ ಪಕ್ಷ ಇಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಸರಾಸರಿ ಮತಗಳಿಕೆಯಲ್ಲಿ ಅಭಿವೃದ್ಧಿ ಗಳಿಸಿದರೆ ಅದರ ಶ್ರೇಯಸ್ಸನ್ನೆಲ್ಲಾ ರಾಹುಲ್‍ಗೆ ಎಲ್ಲರೂ ಕಟ್ಟುವುದು ಶತಸ್ಸಿದ್ಧ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಉತ್ತರ ಪ್ರದೇಶವನ್ನು ರಾಹುಲ್ ಸುಪರ್ದಿಗೆ ಕೊಟ್ಟು ಮಹತ್ತರ ಪ್ರಯೋಗಕ್ಕೆ ಕೈ ಹಾಕಿದಂತಿದೆ. ಇಲ್ಲಿ ಯಶಸ್ಸು ಸಿಕ್ಕಿದಲ್ಲಿ ಕಾಂಗ್ರೆಸ್‍ಗೆ ರಾಷ್ಟ್ರದಾದ್ಯಂತ ಹುಮ್ಮಸ್ಸು, ಚೈತನ್ಯ ತುಂಬಿಸುವುದಲ್ಲಿ ಸಂಶಯವಿಲ್ಲ. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ತಲೆ ಎತ್ತಿಕೊಂಡು, ಹೆಮ್ಮೆಯಿಂದ ಅಣಿಯಾಗುವುದರಲ್ಲಿ, ಆ ಮೂಲಕ ವಿರೋಧಿಗಳಿಗೆ ಬಿಸಿ ತುಪ್ಪವಾಗುವುದಕ್ಕೆ ಶಕ್ತಿ ಪಡೆದುಕೊಳ್ಳುತ್ತದೆ.

ಒಂದು ವೇಳೆ ಹಾಗಾಗದೆ, ಕಾಂಗ್ರೆಸ್ ಸ್ಥಿತಿ ಕಳಪೆಯಾಗಿ, ಹೇಳಿಕೊಳ್ಳುವಂತಹ ಉತ್ತಮ ಸಾಧನೆ ಕಂಡು ಬರದಿದ್ದಲ್ಲಿ ವಿರೋಧ ಪಕ್ಷಗಳನ್ನು ಬಿಡಿ, ಸ್ವತಃ ಕಾಂಗ್ರೆಸ್ ಪಕ್ಷದಿಂದಲೂ ರಾಹುಲ್ ಗಾಂಧಿ ಮುಜುಗರ, ಠೀಕೆಗಳನ್ನು ಎದುರಿಸಬೇಕಾದೀತು. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಗೆ ತಯಾರಾಗುವಾಗ ಕಾಂಗ್ರೆಸ್ ಪಕ್ಷಕ್ಕೆ ಆಕ್ಷಿಜನ್ ಬದಲು ತಣ್ಣೀರು ಸುರಿದಂತಾದೀತು. ಕಾಂಗ್ರೆಸ್‍ನ ಸೋಲು ವಿರೋಧಿಗಳಿಗೆ, ಅದರಲ್ಲೂ ಬಿಜೆಪಿಗೆ ಬಹಳಷ್ಟು ಅಸ್ತ್ರಗಳನ್ನು ಒದಗಿಸಿ ಕೊಡುವುದು ನಿಸ್ಸಂಶಯ.

UP_Election 06ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ, ರಾಹುಲ್ ತಂಗಿ ಪ್ರಿಯಾಂಕ ಚುನಾವಣಾ ಪ್ರಚಾರದಂಗವಾಗಿ ಪತ್ರಿಕಾ ಗೋಷ್ಠಿಯಲ್ಲಿ ಇತ್ತೀಚೆಗೆ ದಿಟ್ಟವಾಗಿ ಮಾತನಾಡಿದ್ದು ಬಹುಶಃ ಆಕೆಯೂ ಸದ್ಯದಲ್ಲೇ ಕಾಂಗ್ರೆಸ್‍ನ ಮುಖ್ಯ ಗಾದಿಗೆ ಬಂದು ಕೂರುವ ಸಾಧ್ಯತೆಯಿರಬಹುದೇ ಎಂಬ ತರ್ಕಕ್ಕೆ ಚಾಲನೆ ನೀಡಿದೆ.

ಅದೇ ರೀತಿ ಬಿಜೆಪಿಗೂ ಈ ಚುನಾವಣೆ ಮಹತ್ತರವಾದದ್ದು. ಅದರ ಸೋಲು ಗೆಲುವು ಆ ಪಕ್ಷದ ಮೇಲೂ, ವಿರೋಧಿ ಪಕ್ಷಗಳ ಮೇಲೂ ಪರಿಣಾಮ ಬೀರುವುದು ಖಚಿತ. ರಾಷ್ಟ್ರೀಯ ಪಕ್ಷಗಳ ಸಾಧನೆ ಕಳಪೆಯಾಗಿ ಪ್ರಾದೇಶಿಕ ಪಕ್ಷಗಳೇ ವಿಜೃಂಭಿಸಿದಲ್ಲಿ ಮುಂದಿನ ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಪಕ್ಷಗಳ ಹಂಗಿನಲ್ಲಿಯೇ ಉಳಿಯುವ ಅಪಾಯವೂ ತಪ್ಪಿದ್ದಲ್ಲ. ಆ ಮೂಲಕ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಅಸ್ಥಿರ ಸರ್ಕಾರಗಳ ಯುಗ ಮುಂದುವರಿಯುತ್ತಾ ಇರುತ್ತದೆ ಮತ್ತು ಅಭಿವೃದ್ಧಿ ಎಂಬುದು ಕನಸಾಗಿಯೇ ಉಳಿದು ಭಾರತ ಕುಂಟುತ್ತಾ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತದಾರರು ಇವನ್ನೆಲ್ಲಾ ಯೋಚಿಸು ತ್ತಾರೆಯೆ? ಹೆಚ್ಚಿನ ಮತದಾರರು ಆಮಿಷಕ್ಕೊಳಗಾಗಿಯೇ ಮತ ಚಲಾಯಿಸುವುದು ನಮ್ಮ ದೇಶದಲ್ಲಿನ ಹಕೀಗತ್ತು ಎಂಬುದನ್ನು ಅಲ್ಲಗಳೆಯುವ ಧೈರ್ಯ ಯಾರಿಗಿದೆ? ಹೀಗಿರುವಾಗ ಯಾವುದೇ ಚುನಾವಣೆಯಿಂದ ರಾಜ್ಯಕ್ಕೆ, ದೇಶಕ್ಕೆ ಒಳಿತಾಗುತ್ತದೆಂಬುದನ್ನು ಭ್ರಮಿಸುವುದೂ ಸಹ ಸಿನಿಕತನವಲ್ಲದೆ ಮತ್ತೇನು? ಚುನಾವಣೆ ಆಯೋಗ ಬಹಳಷ್ಟು ಕಟ್ಟುನಿಟ್ಟಾಗಿರುವುದೊಂದೇ ಈ ದೇಶದ ಸೌಭಾಗ್ಯವೆಂದೆನ್ನಬಹುದು.

(Originally published on February 19, 2012)

Leave a comment

Your email address will not be published. Required fields are marked *