ಪ್ರಾದೇಶಿಕ ಪಕ್ಷಗಳ ಅಡಿಪಾಯ ಆಪತ್ತಿನಲ್ಲಿ!?

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : December 9, 2016 at 6:44 PM

ಅಧಿಕಾರ, ಹಣಕ್ಕಾಗಿ ಮನುಷ್ಯ ಎಷ್ಟೊಂದು ಸಂವೇದನಾರಹಿತನಾಗುತ್ತಾನೆಂಬುದಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರು ನಿಧನರಾದ ಮತ್ತು ಆ ಘಳಿಗೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಚೆನ್ನೈನ ಅಧಿಕಾರ ಕೇಂದ್ರಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳೇ ಸಾಕ್ಷಿ. ಜಯಲಲಿತ ಅವಿವಾಹಿತರಾಗಿದ್ದರಿಂದ ಮತ್ತು ಪಕ್ಷದಲ್ಲಿ ತನ್ನ ಉತ್ತರಾಧಿಕಾರಿಯನ್ನು ತಯಾರಿಸದೇ ಹೋದ ಕಾರಣ ಅವರ ಅಕಾಲಿಕ ಅನಾರೋಗ್ಯ ಮತ್ತು ಮರಣದಿಂದಾಗಿ ಆಡಳಿತ ಪಕ್ಷವಾದ ಎಐಎಡಿಎಂಕೆಯಲ್ಲಿ ಅನಿಶ್ಚಿತತೆಯ ಕಂಪನಗಳೆದ್ದಿವೆ. ಪಕ್ಷ ಮತ್ತು ಸರಕಾರದಲ್ಲಿ ಜಯಾರ ಬಹುಕಾಲದ ಆಪ್ತ ಗೆಳತಿ ಶಶಿಕಲಾರ ಹಸ್ತಕ್ಷೇಪದ ಬಗ್ಗೆ ಬಹಳಷ್ಟು ವರದಿಯಾಗಿತ್ತು. ಇದೀಗ ಜಯಾರ ಮರಣ ಕಾಲಕ್ಕೆ ಅದು ಮತ್ತಷ್ಟು ನಿಚ್ಚಳವಾಗಿದೆ.

ಜಯಲಲಿತಾರ ಸಾವು ಸಂಭವಿಸಿ ಅದು ಘೋಷಣೆಯಾಗುವ ಮುನ್ನವೇ ಆಡಳಿತ ಶಾಸಕಾಂಗ ಪಕ್ಷದ ಸುಪರ್ದಿಯನ್ನು ತನ್ನ ಕೈಗೆ ತೆಗೆದುಕೊಳ್ಳಲು ಶಶಿಕಲಾ ಸಂಚು ರೂಪಿಸಿದ್ದರೆಂಬ ಸ್ಫೋಟಕ ವರದಿ ಮಾಧ್ಯಮಗಳಲ್ಲಿ ವರದಿಯಾದೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿಯವರ ಆಕಸ್ಮಿಕ ಸಾವು ಸಂಭವಿಸಿದಾಗಲೂ ಅಲ್ಲಿ ಅಧಿಕಾರಕ್ಕಾಗಿ ಹೋರಾಟ ನಡೆದಿತ್ತು. ಅಧಿಕಾರಕ್ಕಾಗಿ ಇಂತಹ ಕಚ್ಚಾಟಗಳು, ಷಡ್ಯಂತ್ರಗಳು ಮಾನವನ ಚರಿತ್ರೆಯ ಆದಿ ಕಾಲದಿಂದಲೂ ನಡೆದಿವೆ. ಇದ್ದುದರಲ್ಲಿ ಕಾಂಗ್ರೆಸ್ ಪಕ್ಷವೇ ಈ ವಿಷಯದಲ್ಲಿ ಗೊಂದಲರಹಿತವೆಂದು ಹೇಳಬಹುದು. ನೆಹರು, ಇಂದಿರಾರ ಕುಟುಂಬವೇ ಆ ಪಕ್ಷವನ್ನು ಆಳುತ್ತಾ ಬಂದಿದೆ, ಮತ್ತದನ್ನು ಆ ಪಕ್ಷದವರೆಲ್ಲರೂ ಅನೂಚಾನವಾಗಿ ಶಿರಸಾವಹಿಸಿ ಅನುಮೋದಿಸಿಕೊಂಡು ಬಂದಿರುವುದರಿಂದ ಅಲ್ಲಿ ಅತ್ಯುನ್ನತ ಅಧಿಕಾರಕ್ಕಾಗಿ ಇತರರು ಕನಸು ಮನಸಿನಲ್ಲಿಯೂ ಆಸೆ ಪಡುವಂತಿಲ್ಲ!

ಬಹುಶಃ ಜಯಾರಿಗೆ ಕುಟುಂಬ, ಸಂತಾನವಿದ್ದಿದ್ದರೆ ನಿಸ್ಸಂಶಯವಾಗಿ ಉತ್ತರಾಧಿಕಾರಕ್ಕೆ ಇತರರು ಪ್ರಯತ್ನ ಪಡುವ ಸಂಭವವಿರಲಿಲ್ಲ.

budkulo_regional-parties_01

ನಾನೀಗ ಜಯಲಲಿತಾರ ಸಾವಿನಿಂದ ಭಾರತದ ಪ್ರಾದೇಶಿಕ ಪಕ್ಷಗಳ ಭವಿಷ್ಯದ ಬಗ್ಗೆ ಉದ್ಭವಿಸಿದ ಸಂಶಯ, ಆಪತ್ತಿನ ಬಗೆಗಿನ ವಿಚಾರವನ್ನು ಹೇಳುತ್ತಿದ್ದೇನೆ. ಇದು ನನಗೆ ಯಾವತ್ತೂ ಚಿಂತನೆಗೆ ಹಚ್ಚಿದ್ದ ವಿಚಾರ. ಜಯಾರ ಸಾವು ಮತ್ತಿತರ ಬೆಳವಣಿಗೆಗಳು ಈ ಚಿಂತನೆಯನ್ನು ಮತ್ತಷ್ಟು ಬಲಪಡಿಸಿದೆ.

ಸ್ವಾತಂತ್ರ್ಯಾ ನಂತರ ಬಹಳ ದಶಕಗಳ ಕಾಲ ಭಾರತದಲ್ಲಿ ಏಕ ಪಕ್ಷದ ಆಡಳಿತವಿತ್ತು. ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿ ಮತ್ತವರ ಏಕಚಕ್ರಾಧಿಪತ್ಯ (ಪಕ್ಷ ಮತ್ತು ಸರಕಾರದಲ್ಲಿ) ಅವರ ಶತ್ರುಗಳ ಸಂಖ್ಯೆಯನ್ನು ವೃದ್ಧಿಸಿತಷ್ಟೇ ಅಲ್ಲ ಅವರೆಲ್ಲಾ ಜೊತೆ ಸೇರಲು ಸಹಕಾರಿಯಾಯಿತು. ತತ್ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಾಗಿ, ಉಳಿದೆಲ್ಲಾ ಪಕ್ಷಗಳು ಸೇರಿ ಸಮ್ಮಿಶ್ರ ಸರಕಾರವನ್ನು ಸ್ಥಾಪಿಸಿದವು. ಆದರೆ ಆ ಒಗ್ಗಟ್ಟು ತಾತ್ಕಾಲಿಕವಾಗಿತ್ತು. ಇಂದಿರಾರನ್ನು ಹಣಿಯುವ ಮಹದುದ್ದೇಶವೇ ಅವರನ್ನು ಒಂದುಗೂಡಿಸಿತ್ತು. ನಂತರ ಮತ್ತೊಂದು ದಶಕ ಕಾಂಗ್ರೆಸ್ಸಿನದೇ ಅಧಿಪತ್ಯ ಮುಂದುವರೆಯಿತು.

1989ರ ಲೋಕಸಭಾ ಚುನಾವಣೆ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತು. ಕಾಂಗ್ರೆಸ್ಸಿನ ವಿರೋಧಿಗಳೆಲ್ಲರೂ ಮತ್ತೆ ಒಂದಾದರು. ಅಲ್ಲಿಯ ತನಕ ಅಧಿಕಾರವೆಂಬುದು ಕೇವಲ ಕನಸಷ್ಟೇ ಎಂದುಕೊಂಡಿದ್ದ ಬಿಜೆಪಿಯು ಪ್ರವರ್ಧಮಾನಕ್ಕೆ ಬಂದ ಸಂದರ್ಭವದು. ಜನತಾ ಪರಿವಾರ ಆಗಾಗ ಹೆಸರು ಬದಲಾಯಿಸಿಕೊಳ್ಳುತ್ತಾ ಬಂದು ಆಗ ಜನತಾ ದಳವಾಗಿ ವಿ.ಪಿ. ಸಿಂಗ್‍ರ ನೇತೃತ್ವದಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಬಲಿಷ್ಠವಾಗಿ ಹೊರಹೊಮ್ಮಿತ್ತು. ಹಿಂದಿನಂತೆಯೇ, ಮತ್ತೊಮ್ಮೆ ಈ ಎಲ್ಲಾ ಪಕ್ಷಗಳು ಒಂದುಗೂಡಿ ಸರಕಾರ ರಚಿಸಿದ್ದು, ಮಗದೊಮ್ಮೆ ಆಂತರಿಕ ಭಿನ್ನಾಭಿಪ್ರಾಯ, ಕಚ್ಚಾಟದಿಂದ ಸರಕಾರ ಪತನವಾಗಿದ್ದು ಮತ್ತೊಂದು ಕಥೆ.

ಪ್ರಾದೇಶಿಕ ಪಕ್ಷಗಳಿಗೆ ಶುಕ್ರದೆಸೆ ಆರಂಭವಾಗಿದ್ದೇ ಆಗ. ಹೇಗೆ ಕಾಂಗ್ರೆಸ್ ಪಕ್ಷದಿಂದ ಹೊರ ಬಂದ ನಾಯಕರು ತಮ್ಮದೇ ಪಕ್ಷಗಳನ್ನು ಸ್ಥಾಪಿಸಿಕೊಳ್ಳುತ್ತಿದ್ದರೋ, ಅದೇ ರೀತಿ ಜನತಾ ದಳವು ಕವಲುಗಳಾಗಿ ಬೇರ್ಪಟ್ಟಿತು. ರಾಜ್ಯಕ್ಕೊಬ್ಬ ಮುಖಂಡನಂತೆ ಆ ಪಕ್ಷವು ವಿದಳನಗೊಂಡು ಆಯಾ ರಾಜ್ಯಗಳಲ್ಲಿ ಬೇರೆಯದೇ ಹೆಸರಿನ ಜನತಾ ಪಕ್ಷದ ಶಾಖೆಗಳು ಆರಂಭವಾದವು.

ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಜನತಾ ದಳ ಬಲಿಷ್ಠ ನೆಲೆಯನ್ನು ಪಡೆದುಕೊಂಡಿತು. ದೇವೇಗೌಡರು ಅಲ್ಪಕಾಲಕ್ಕೆ ಪ್ರಧಾನಿಯಾಗಿ ಅಧಿಕಾರದಿಂದ ಕೆಳಗಿಳಿಸಲ್ಪಟ್ಟ ನಂತರ ಆಯಾ ರಾಜ್ಯದಲ್ಲಿ ಜನತಾ ದಳ ವಿಭಜಿಸಲ್ಪಟ್ಟಿತು. ಹೀಗೆ ಹೆಚ್ಚಿನ ರಾಜ್ಯಗಳಲ್ಲಿ ಬೇರೆಯದೇ ಹೆಸರಿನ ಜನತಾ ಪಕ್ಷದ ಪಳೆಯುಳಿಕೆಗಳಂತೆ ಪ್ರಾದೇಶಿಕ ಪಕ್ಷಗಳು ಉದಯಿಸಿದವು.

budkulo_indira-gandhi budkulo_morarji-desai

ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್‍ರ ಆರ್‍ಜೆಡಿ, ಒಡಿಶಾದಲ್ಲಿ ಬಿಜು ಪಟ್ನಾಯಕ್‍ರ ಪುತ್ರ ನವೀನ್ ಪಟ್ನಾಯಕ್ ಅವರ ಬಿಜೂ ಜನತಾ ದಳ, ಕರ್ನಾಟಕದಲ್ಲಿ ದೇವೇಗೌಡರ ಜಾತ್ಯತೀತ ಜನತಾದಳ ಮುಂತಾದ ಪಕ್ಷಗಳು ಆಯಾ ರಾಜ್ಯಗಳ ನಾಯಕರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲ್ಪಟ್ಟವು. ಬಿಹಾರದಲ್ಲಿ ಮತ್ತೆ ವಿಭಜನೆಯಾಗಿ, ಲಾಲೂ ಯಾದವರಿಂದ ಪ್ರತ್ಯೇಕಗೊಂಡು ನಿತೀಶ್ ಕುಮಾರ್, ಶರದ್ ಯಾದವ್ ಅವರ ಮುಂದಾಳತ್ವದಲ್ಲಿ ಸಂಯುಕ್ತ ಜನತಾ ದಳ ಜನಿಸಿತು.

ಅದೊಂದು ಕಡೆಯಾದರೆ ಅದಾಗಲೇ ಜನಿಸಿ, ಬಲಿಷ್ಠವಾಗಿದ್ದ ಪಕ್ಷಗಳೆಂದರೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ, ಆಂಧ್ರದಲ್ಲಿ ತೆಲುಗು ದೇಶಂ, ಮಹಾರಾಷ್ಟ್ರದಲ್ಲಿ ಬಾಳ ಠಾಕ್ರೆ ಸ್ಥಾಪಿಸಿದ ಶಿವಸೇನೆ, ಉತ್ತರ ಪ್ರದೇಶದಲ್ಲಿ ಕಾನ್ಶೀರಾಂ ಹುಟ್ಟು ಹಾಕಿದ ಬಹುಜನ ಸಮಾಜ ಪಕ್ಷ (ಅದನ್ನು ಮಾಯಾವತಿಯವರು ಮುನ್ನಡೆಸುತ್ತಿದ್ದಾರೆ), ಬಂಗಾಳ ಹಾಗೂ ಕೇರಳ ಮತ್ತಿತರೆಡೆ ಕಮ್ಯುನಿಸ್ಟ್ ಪಕ್ಷಗಳು ರಾಜ್ಯಭಾರ ನಡೆಸುತ್ತಿದ್ದವು. ರಾಜೀವ್ ಗಾಂಧಿ ನಿಧನಾನಂತರ, ಕಾಂಗ್ರೆಸ್ ಪಕ್ಷದ ಬಹಳಷ್ಟು ಪ್ರಾದೇಶಿಕ ಮುಖಂಡರು ತಮ್ಮದೇ ಅಸ್ತಿತ್ವವನ್ನು ಸ್ಥಾಪಿಸಲು ಆರಂಭಿಸಿದರು. ತಮಿಳುನಾಡಿನಲ್ಲಿ ಜಿ.ಕೆ. ಮೂಪನಾರ್ (ಪಿ. ಚಿದಂಬರಂ ಅವರ ಜೊತೆ ಹೋಗಿದ್ದರು), ಮಹಾರಾಷ್ಟ್ರದಲ್ಲಿ ಶರದ್ ಪವಾರ್ (ಅವರ ಜೊತೆ ಪಿ.ಎ. ಸಂಗ್ಮಾ ಹೋಗಿದ್ದರು), ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮುಂತಾದವರು ಪ್ರತ್ಯೇಕ ಪಕ್ಷಗಳನ್ನು ಸ್ಥಾಪಿಸಿಕೊಂಡರು. ಅಲ್ಲದೆ ಹರಿಯಾಣ ಮತ್ತಿತರೆಡೆಯೂ ಇಂತಹ ಬೆಳವಣಿಗೆಗಳಾದವು.

ಹೀಗೆ ಬೇರ್ಪಡೆಗೊಂಡು ತಮ್ಮದೇ ಪಕ್ಷ ಸ್ಥಾಪಿಸಿ ಯಶಸ್ವಿಯಾದವರು ಕೆಲವರಷ್ಟೇ. ಅವರಲ್ಲಿ ಶರದ್ ಪವಾರ್‍ರಂಥ ಅವಕಾಶವಾದಿ ರಾಜಕಾರಣಿ, ತನ್ನ ಅಸ್ತಿತ್ವ ಉಳಿಸಿಕೊಂಡು ಮತ್ತೆ ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಅನುಭವಿಸಿದರು.

budkulo_jayalalitha_politics_02

ಇತ್ತೀಚಿನ ವರ್ಷಗಳಲ್ಲಿ ತೆಲಂಗಾಣದಲ್ಲಿ ಕೆ.ಸಿ. ಚಂದ್ರಶೇಖರರ ತೆಲಂಗಾಣ ರಾಷ್ಟ್ರ ಸಮಿತಿ ಕಾಂಗ್ರೆಸ್ ಪಕ್ಷದ ಎಡವಟ್ಟುಗಳಿಂದ ಲಾಭ ಗಳಿಸಿಕೊಂಡು ಅಧಿಕಾರ ಗಳಿಸಿದೆ. ಆಂಧ್ರ ಪ್ರದೇಶದ ವಿಭಜನೆಯನ್ನು ಪ್ರಹಸನವನ್ನಾಗಿಸಿಕೊಂಡ ತಪ್ಪಿಗೆ ಅವಿಭಜಿತ ಆಂಧ್ರದಾದ್ಯಂತ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದ್ದು ಇನ್ನೊಂದು ವಿಪರ್ಯಾಸ.

ಮತ್ತೊಂದು ಅನಿರೀಕ್ಷಿತ ಮತ್ತು ಅತಿ ವೇಗದ ಬೆಳವಣಿಗೆಯೆಂದರೆ ಭ್ರಷ್ಟಾಚಾರದ ವಿರುದ್ಧದ ಆಕ್ರೋಶವನ್ನು, ಆಂದೋಲನವನ್ನು ದಿನ ಬೆಳಗಾಗುವುದರೊಳಗೆ ರಾಜಕೀಯ ರಂಗಕ್ಕೆ ಕೊಂಡೊಯ್ದು ಎಲ್ಲರನ್ನು ಅಚ್ಚರಿಗೆ ಕೆಡವಿದ ಆಮ್ ಆದ್ಮಿ ಪಕ್ಷ. ಅದರ ಮುಖಂಡ ಅರವಿಂದ ಕೇಜ್ರಿವಾಲ್ ಎಲ್ಲರ ಎಣಿಕೆಗಳನ್ನು ತಪ್ಪಾಗಿಸಿ ಒಮ್ಮಿಂದೊಮ್ಮೆಲೆ ದೆಹಲಿಯ ಮುಖ್ಯಮಂತ್ರಿಯಾಗಿದ್ದನ್ನು ಮರೆಯಲಾಗದು.

ಹೀಗೆ, ದೇಶದ ಅರ್ಧದಷ್ಟು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳ ಸಖ್ಯ ಅಗತ್ಯವಿಲ್ಲದೆ ಪ್ರಾದೇಶಿಕ ಪಕ್ಷಗಳು ರಾಜ್ಯಭಾರ ನಡೆಸುತ್ತಾ ಬಂದಿವೆ.

ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಸಂಗತಿಯೇನೆಂದರೆ ಹೆಚ್ಚಿನ ಕಡೆ ಪಕ್ಷದ ಸಂಪೂರ್ಣ ಅಧಿಕಾರ ಏಕ ವ್ಯಕ್ತಿಗಳ ಮತ್ತವರ ಕುಟುಂಬದ ಸದಸ್ಯರ ಕೈಯಲ್ಲಿರುವುದು. ವಿಪರ್ಯಾಸವೆಂದರೆ ಈ ಎಲ್ಲಾ ನಾಯಕರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡೇ ಮುನ್ನೆಲೆಗೆ ಬಂದವರು! ರಾಜಕೀಯ, ಅಧಿಕಾರದ ಸಖ್ಯ ಅನುಭವಿಸಿಕೊಂಡ ನಂತರ ಅವರೆಲ್ಲರೂ ಅದೇ ಚಾಳಿಯನ್ನು ಬೆಳೆಸಿಕೊಂಡರು. ಬಿಜೆಪಿಯ ಬಹಳಷ್ಟು ನಾಯಕರೂ ಇದನ್ನು ಪಾಲಿಸಿಕೊಂಡು ಬಂದಿದ್ದಾರೆ!

ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಅಂತ್ಯವೆಂಬುದು ಇರುತ್ತದೆ. ರಾಜಕಾರಣವೂ ನಿಂತ ನೀರಲ್ಲ. ವಯಸ್ಸು ಯಾರನ್ನೂ ಬಿಡುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳ ಭವಿಷ್ಯವೇನು, ಅವುಗಳ ಅಸ್ತಿತ್ವ ಹೇಗಿದ್ದೀತೆಂಬುದನ್ನು ಪರಿಗಣಿಸಬೇಕಾಗುತ್ತದೆ. ಜಯಲಲಿತಾರ ಸಾವು ಇದನ್ನು ಮತ್ತಷ್ಟು ದೃಢಪಡಿಸುತ್ತದೆ.

budkulo_karunanidhi_politics

ಡಿಎಂಕೆಯ ವಯೋವೃದ್ಧ ಸೇನಾನಿ ಕರುಣಾನಿಧಿಯವರ ಇಡೀ ಕುಟುಂಬವೇ ಪಕ್ಷವನ್ನು ಸುಪರ್ದಿಯಲ್ಲಿ ತೆಗೆದುಕೊಂಡಿದೆ. ಆದರೆ ಅವರೊಳಗೆಯೇ ಅಧಿಕಾರಕ್ಕಾಗಿನ ಕಚ್ಚಾಟ ಆ ಪಕ್ಷವನ್ನು ಹೈರಾಣಾಗಿಸಿದೆ. ಆದರೂ ತಂದೆಯ ಕೃಪಾಕಟಾಕ್ಷ ಸ್ಟಾಲಿನ್‍ಗಿರುವುದರಿಂದ ಇನ್ನೊಂದು ತಲೆಮಾರಿನ ವರೆಗೆ ಡಿಎಂಕೆಯ ಭವಿಷ್ಯಕ್ಕೆ ಕುಂದಾಗದೆನ್ನಬಹುದು. ಆದರೆ ಜಯಲಲಿತಾರವರು ಹುಟ್ಟು ಹಾಕಿದ ಅನಿಶ್ಚಿತತೆ, ಅಂಧಕಾರ, ಉತ್ತರಾಧಿಕಾರಿರಾಹಿತ್ಯವು ಎಐಎಡಿಎಂಕೆ ಪಕ್ಷವನ್ನು ಬಹಳ ವರ್ಷಗಳ ತನಕ ಕಂಗಾಲು ಮಾಡುವುದರಲ್ಲಿ, ಹೈರಾಣಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವರು ತನ್ನ ಪುತ್ರ ಅಖಿಲೇಶ್‍ರನ್ನು ಪಕ್ಷದ ಭವಿಷ್ಯವೆಂದು ಪ್ರತಿಷ್ಠಾಪಿಸಿದರು. ಆದರೆ ಅಖಿಲೇಶ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರೂ ಎಳಸುತನದಿಂದಲೇ ಪಕ್ಷ, ಸರಕಾರವನ್ನು ಮುನ್ನಡೆಸಿದ್ದಾರೆ. ಆ ಪಕ್ಷದಲ್ಲೂ ಕುಟುಂಬದೊಳಗಿನ ಕಚ್ಚಾಟ ಎಂತಹ ಮಟ್ಟಕ್ಕೆ ಹೋಗಿತ್ತೆನ್ನುವುದನ್ನು ಮೊನ್ನೆ ಮೊನ್ನೆಯೇ ಕಂಡಿದ್ದೇವೆ.

ಬಹುಜನ ಸಮಾಜ ಪಕ್ಷದ ಮಾಯಾವತಿಯವರೂ ಅವಿವಾಹಿತರು. ಅವರ ನಂತರ ಆ ಪಕ್ಷವನ್ನು ಮುನ್ನಡೆಸುವವರು ಯಾರೆಂಬುದು ಕಂಡು ಬಂದಿಲ್ಲ. ಹೀಗೆ ಏಕವ್ಯಕ್ತಿ ರಾಜ್ಯಭಾರ ನಡೆಸಿದ, ಅಸ್ತಿತ್ವದಲ್ಲಿರುವ ಬಹುತೇಕ ಪ್ರಾದೇಶಿಕ ಪಕ್ಷಗಳ ಘಟಾನುಘಟಿ ರಾಜಕಾರಣಿಗಳ ಸುಪರ್ದಿಯಲ್ಲಿರುವ ಪಕ್ಷಗಳ ಭವಿಷ್ಯವೇನು? ವಿಚಿತ್ರವೆಂದರೆ, ಪ್ರಜಾಪ್ರಭುತ್ವದ ಕೃಪೆಯಲ್ಲಿ ಹುಟ್ಟಿಕೊಂಡ ಹೆಚ್ಚಿನ ಪಕ್ಷಗಳು ಕುಟುಂಬಗಳ ಸ್ವತ್ತಾಗಿ ಪರಿಣಮಿಸಿದ್ದು. ಹಿಂದೆ ಆಳಿದ್ದ ರಾಜರುಗಳ ಕುಟುಂಬಗಳಂತೆ ಹೆಚ್ಚಿನ ಪಕ್ಷಗಳು ಒಂದೇ ಕುಟುಂಬದ ಆಸ್ತಿಯಂತೆ ಬದಲಾಗಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ, ಕಳಂಕವೇ ಹೌದು. ಪ್ರಜಾಪ್ರಭುತ್ವದ ನೈಜ ಆಶಯ ಈ ಮೂಲಕ ಹಳ್ಳ ಹಿಡಿದಿದೆ ಎನ್ನಬಹುದು.

budkulo_devegowda-n-vp-singh budkulo_regional-parties_03 budkulo_regional-parties_02

ಪ್ರಾದೇಶಿಕ ಪಕ್ಷಗಳಿಂದ ಆಯಾ ರಾಜ್ಯಗಳಿಗೆ ಉಂಟಾದ ಲಾಭ ನಷ್ಟಗಳ ವಿಚಾರ ಬೇರೆ. ಆದರೆ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದರೆ ಈ ಪಕ್ಷಗಳ ಮುಂದಿನ ದಾರಿ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಬಲಿಷ್ಠ ನಾಯಕರುಗಳು ಇತರ ನಾಯಕರ ಬೆಳವಣಿಗೆಯನ್ನು ಸಹಿಸಿದ ನಿದರ್ಶನಗಳು ಬಹಳ ಕಡಿಮೆ. ಇತರರ ಏಳಿಗೆ, ಪಕ್ಷದೊಳಗೆ ಉಳಿದವರು ಪ್ರಗತಿ ಹೊಂದುವುದು, ಬೇರೆ ನಾಯಕರು ಉದಯಿಸುವುದನ್ನು ಹೆಚ್ಚಿನವರು ಸಹಿಸುವುದಿಲ್ಲ. ಅಂತಹವರನ್ನು ಚಿವುಟಲು, ಮುಗಿಸಲು ಪ್ರಯತ್ನಿಸಿದ್ದೇ ಹೆಚ್ಚು. ಆದರೆ ಅದರ ಪರಿಣಾಮವನ್ನು ಅವರು ಅನುಭವಿಸಲೇಬೇಕು. ಕಾಲ ಎಲ್ಲರ ಕಾಲೆಳೆಯುತ್ತದೆ ಎನ್ನುವುದು ಇದಕ್ಕೇ.

ಜಯಲಲಿತಾರವರು ಎಷ್ಟೇ ಬಲಿಷ್ಠ, ದಿಟ್ಟ ನಾಯಕಿಯಾಗಿದ್ದರೇನು ಬಂತು, ಎಂಜಿಆರ್ ಅವರಿಗೆ ಉತ್ತರಾಧಿಕಾರಿಯಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದರೇನು, ಈಗ ಆ ಪಕ್ಷದ ಮುಂದಿನ ಹಾದಿಯೇ ದುರ್ಗಮವಾಗಿದೆ. ಅದು ಆಕೆಯೇ ತಂದುಕೊಂಡ ದುರ್ಗತಿ. ತಾನೇ ಸರ್ವಸ್ವವಾಗಿರಬೇಕು ಎಂಬ ದುರಾಸೆ, ಅತೀವ ಸ್ವಾರ್ಥ ಇಂತಹ ಸ್ಥಿತಿಗತಿಯನ್ನು ತಂದುಕೊಳ್ಳುತ್ತದೆ. ಇದರಿಂದಾಗಿ ಜಯಲಲಿತಾರ ಪ್ರತಿಷ್ಠೆಗೇ ಹಾನಿಯುಂಟಾಗಿದೆ. ಒಳ್ಳೆಯ ನಾಯಕರು ಇಂತಹದಕ್ಕೆ ಅವಕಾಶ ನೀಡುವುದಿಲ್ಲ.

ನಮ್ಮ ರಾಜ್ಯದಲ್ಲಿಯೇ ನೋಡುವುದಾದರೆ, ಜೆಡಿಎಸ್ ಪಕ್ಷ ಅಲಿಖಿತವಾಗಿ ದೇವೇಗೌಡರ ಕೌಟುಂಬಿಕ ಪಕ್ಷವೆಂದರೆ ಇಲ್ಲವೆನ್ನುವವರಾರು? ದೇವೇಗೌಡರೇನೋ ಪಕ್ಷವನ್ನು ಸಮರ್ಥವಾಗಿ, ಈ ಇಳಿ ವಯಸ್ಸಿನಲ್ಲಿಯೂ ದೃಢವಾಗಿ ಮುನ್ನಡೆಸುತ್ತಿದ್ದಾರೆ. ಇದು ನಿಜಕ್ಕೂ ಅಚ್ಚರಿ ಮತ್ತು ಅವರ ಗಟ್ಟಿತನ, ಹಿರಿತನ ಮತ್ತು ಸಾಮಥ್ರ್ಯ ಮೆಚ್ಚಬೇಕಾದದ್ದೇ. ಆದರೆ ಕುಮಾರಸ್ವಾಮಿಗೆ ಅವರ ಕಾಲು ಭಾಗದಷ್ಟು ಗಾಂಭೀರ್ಯತೆ, ಶಿಸ್ತು ಇದ್ದಂತಿಲ್ಲ. ಅಲ್ಲಿಯೂ ಸಹ ಇತರ ನಾಯಕರನ್ನು ಸಹಿಸಿದ ದಾಖಲೆಗಳಿಲ್ಲ. ಅದರಿಂದಾಗಿಯೇ ಅಲ್ಲವೇ, ಬಲಿಷ್ಠ ಜನನಾಯಕರಾದ ಸಿದ್ಧರಾಮಯ್ಯನವರು ಆ ಪಕ್ಷವನ್ನು ತೊರೆದು ಸದಾ ವಿರೋಧಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡಿದ್ದು! (ಅದರಿಂದ ಅವರಿಗೆ ಒಳಿತಾದದ್ದು ಮಹತ್ತರ ಸಂಗತಿಯೇ).

ಸದ್ಯಕ್ಕೆ ಕಂಡು ಬರುವ ಒಂದು ಸಾಧ್ಯತೆಯೆಂದರೆ, ಎಲ್ಲೆಲ್ಲಾ ಹೀಗೆ ಪ್ರಮುಖ ಪಕ್ಷಗಳು ತಮ್ಮ ಸ್ವಯಂಕೃತಾಪರಾಧದಿಂದ ಅಧಃಪತನಕ್ಕೀಡಾಗುತ್ತಿವೆಯೋ ಅಲ್ಲೆಲ್ಲಾ ಬಿಜೆಪಿಯು ವ್ಯವಸ್ಥಿತವಾಗಿ ಕಾಲೂರುತ್ತಿದೆ. ಪಕ್ಷ ಸಂಘಟನೆಯ ವಿಚಾರದಲ್ಲಿ ಬಿಜೆಪಿಗೆ ಇರುವ ಎಡ್ವಾಂಟೇಜ್‍ಗಳು ಬೇರೆ ಪಕ್ಷಗಳಿಗೆ ಇಲ್ಲ. ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಸಹಿತ ಕಿತ್ತೊಗೆಯುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅದಕ್ಕೆ ಕಾಂಗ್ರೆಸ್ ಪಕ್ಷದ ದೇಣಿಗೆಯೇ ಅಧಿಕ ಕಾರಣ. ಅದೇ ರೀತಿ, ಪ್ರಸ್ತುತ ತಮಿಳುನಾಡಿನಲ್ಲಿ ಜಯಲಲಿತಾರ ಅನುಪಸ್ಥಿತಿಯಲ್ಲಿ ಉಂಟಾಗಲಿರುವ ಅನಿಶ್ಚಿತತೆಯ, ಅರಾಜಕತೆಯ ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಪಡೆಯಲಿರುವುದರಲ್ಲಿ ಸಂಶಯವಿಲ್ಲ.

ಒಟ್ಟಿನಲ್ಲಿ ಸುಮಾರು ಕಾಲು ಶತಮಾನದ ಕಾಲ ದೇಶದ ರಾಜಕಾರಣದಲ್ಲಿ ವಿಜೃಂಭಣೆಯಿಂದ, ಭವ್ಯವಾಗಿ ಕಂಗೊಳಿಸಿದ್ದ ಪ್ರಾದೇಶಿಕ ಪಕ್ಷಗಳು ತಾವಾಗಿಯೇ ಅವಸಾನವನ್ನು ಆಹ್ವಾನಿಸುವ ಅಪಾಯಕ್ಕೆ ತಲುಪಿರುವುದು ವಿಪರ್ಯಾಸ ಮತ್ತು ಖೇದಕರ.

Send your opinion, views & feedback to: budkuloepaper@gmail.com
Like our Facebook Page: www.facebook.com/budkulo.epaper
ತಮಿಳರು, ತಮಿಳುನಾಡನ್ನು ಹಳ್ಳಕ್ಕಿಳಿಸಿದರೇ ಜಯಲಲಿತ?

Leave a comment

Your email address will not be published. Required fields are marked *