Latest News

ನೇತ್ರಾವತಿ ನದಿ ಒಂದುಗೂಡಿಸಿದ ಮನಗಳನ್ನು ಹಡಬೆ ರಾಜಕಾರಣ ಕುಲಗೆಡಿಸಿತು

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : November 17, 2015 at 1:37 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

Budkulo_Spl Editorial_Nethravathiಶತ ಶತಮಾನಗಳಿಂದ ಸೌಹಾರ್ದದ ನಾಡಾಗಿ, ಬಹುಭಾಷೆಗಳಿಂದ ಕಂಗೊಳಿಸುತ್ತಾ ಶಾಂತಿಯ ತೋಟವಾಗಿದ್ದ ಕನ್ನಡ ಕರಾವಳಿಯ ವಾತಾವರಣವನ್ನು ಕದಡಿಸಿದ್ದು ರಾಜಕೀಯ ಪಕ್ಷಗಳು. ತುಳುನಾಡು ಎಂಬುದು ಯಾವಾಗಲೂ ಎಲ್ಲಾ ರೀತಿಯ ಜನರನ್ನು ಮುಕ್ತವಾಗಿ ಬೆಳೆಸಿ, ಒಗ್ಗಟ್ಟಿನಿಂದ ನೆಲೆಸುವಂತೆ ಮಾಡಿದ ಪುಣ್ಯ ಭೂಮಿ. ಮಾನವೀಯತೆ, ಮುಗ್ಧತೆ, ಪರಸ್ಪರ ನಂಬಿಕೆಗಳು ಇಲ್ಲಿನ ಜನರ ಜೀವನವನ್ನು ನಿರ್ದೇಶಿಸುತ್ತಿದ್ದವು. ಮೊನ್ನೆ ಮೊನ್ನೆಯವರೆಗೆ ಇಂತಹ ವಾತಾವರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾರಾಜಿಸುತ್ತಿತ್ತು.

ಇಂದು?

ಏನಾಗಿದೆ ಈ ನಾಡಿಗೆ? ಮನುಷ್ಯನನ್ನು ಇನ್ನೊಬ್ಬ ಮನುಷ್ಯನಾದವನು ಜಾತಿ, ಧರ್ಮ ನೋಡಿ ಮಿತ್ರತ್ವಕ್ಕಿಂತ ಬದಲಾಗಿ ವೈರತ್ವ ಬೆಳೆಸುವ ಮಟ್ಟಿಗೆ ಕರಾವಳಿಯ ಜನರು ಪ್ರಭಾವಿತರಾಗಿದ್ದಾರೆ ಎಂದರೆ ‘ಹೇಗಿತ್ತು ಹೇಗಾಗಿದೆ’ ಎಂಬಂತಾಗಿದೆ.

ಇದಕ್ಕೆಲ್ಲಾ ಕಾರಣ ಸ್ವಾರ್ಥ ರಾಜಕೀಯ.

ಹೌದು. ವೋಟ್ ಬ್ಯಾಂಕ್ ಎಂಬ ಅನಿಷ್ಠ ಚಿಂತನೆ, ಪದ್ಧತಿ ಯಾವಾಗ ಹಾಸುಹೊಕ್ಕಾಯಿತೋ ಅಂದಿನಿಂದ ಜನರನ್ನು ಯಾವೆಲ್ಲಾ ರೀತಿ, ವಿಧಾನಗಳಿಂದ ವಿಭಜಿಸಲು ಸಾಧ್ಯವೋ ಅದನ್ನೆಲ್ಲಾ ಮಾಡಿದ ನಂತರ ಜನರ ನಡುವೆ ಹಲವು ಕಾರಣಗಳಿಂದ ಅಪನಂಬಿಕೆ, ಅಸಹನೆ, ಶತ್ರುತ್ವ, ದ್ವೇಷ ಬೇರು ಬಿಟ್ಟಿತು. ಇದನ್ನೇ ನಾನು ಹಡಬೆ ರಾಜಕಾರಣವೆನ್ನುವುದು.

ಅದರ ಪರಿಣಾಮವಾಗಿ ಸದಾ ಶಾಂತಿಯಿಂದಿರುತ್ತಿದ್ದ ಊರು ಪಟ್ಟಣಗಳಲ್ಲಿನ ಪರಿಸ್ಥಿತಿ ಬದಲಾಗಿ, ಕ್ಷುಲ್ಲಕ ಕಾರಣಗಳಿಗೂ ಸಹ ಕ್ಷಣಗಳಲ್ಲಿ ಪರಿಸ್ಥಿತಿ ಬಿಗುವಾಗಿದ್ದು, ಪ್ರಕ್ಷುಬ್ಧವಾಗಿದ್ದನ್ನು ನಾವು ಕಾಣಬಹುದು. ಅದರ ಪರಿಣಾಮ ಮಂಗಳೂರಿನ ಹೆಸರು ರಾಷ್ಟ್ರಮಟ್ಟದಲ್ಲಿ, ವಿದೇಶಗಳಲ್ಲೂ ಪರಿಚಿತವಾಯಿತು, ಪ್ರಸಿದ್ಧಿಯಾಯಿತು, ದುರದೃಷ್ಟವಶಾತ್ ಬರೀ ಕೆಟ್ಟ ಕಾರಣಗಳಿಗಾಗಿ.

Budkulo_Editorialಅಂತಹ ಈ ತುಳುನಾಡಿನ ಜನರನ್ನು ಒಂದುಗೂಡಿಸಲು ಪ್ರಕೃತಿಯೇ ಅವಕಾಶವೊಂದನ್ನು ಕರುಣಿಸಿತು. ಇದೇ ಸ್ವಾರ್ಥಿ, ದುರಾಸೆಯ ರಾಜಕಾರಣದ ಫಲವಾದ, ಜಿಲ್ಲೆಯ ಜೀವನದಿಯಾದ ನೇತ್ರಾವತಿಯ ಒಡಲಿಗೆ ಕೊಳ್ಳಿಯಿಟ್ಟು, ಪಶ್ಚಿಮ ಘಟ್ಟವನ್ನು ಬರಡಾಗಿಸಿ ಆ ಮೂಲಕ ನೇತ್ರಾವತಿಯನ್ನು ಆಶ್ರಯಿಸಿದ್ದ ಕರಾವಳಿ ಮಾತ್ರವಲ್ಲದೇ ಇಡೀ ರಾಜ್ಯವನ್ನೇ ಬರಡು ಭೂಮಿಯನ್ನಾಗಿಸುವ ‘ಎತ್ತಿನಹೊಳೆ’ ಯೋಜನೆಯೆಂಬ ರಾಕ್ಷಸೀ ಕಾಮಗಾರಿಯು ತೂಕಡಿಸುತ್ತಿದ್ದ ದಕ್ಷಿಣ ಕನ್ನಡದ ಜನರನ್ನು ಬಡಿದೆಬ್ಬಿಸಿತು. ಇದರ ಪರಿಣಾಮ, ಸಾವಕಾಶವಾಗಿಯಾದರೂ, ಜನರಿಗೆ ತಾವು ವ್ಯವಸ್ಥಿತವಾಗಿ ಮೋಸ ಹೋಗಿದ್ದರ ಅರಿವನ್ನು ನೀಡಿತು. ಹೀಗಾಗಿ, ತಡವಾಗಿಯಾದರೂ ಜನರೆಲ್ಲಾ ಈ ಯೋಜನೆಯನ್ನು ವಿರೋಧಿಸಿ, ಪ್ರತಿಭಟಿಸಿ ತಮ್ಮೆಲ್ಲಾ ಅಂತರ, ಭೇದ ಭಾವಗಳನ್ನೆಲ್ಲಾ ನಿವಾರಿಸಿಕೊಂಡರು, ಒಂದಾದರು. ಕರಾವಳಿಯ ಜನ ಹೇಗಿದ್ದರೂ ತಮ್ಮನ್ನು ಚುನಾಯಿಸುತ್ತಾರೆ, ಯಾವುದೇ ವಾದ, ವಿವಾದಗಳಿರಲಿ, ಅದರಿಂದ ತಮಗೆ ಕಿಂಚಿತ್ತೂ ಬಾಧಕವಾಗದು ಎಂಬುದರ ಅನುಭವದಿಂದ ಬೀಗುತ್ತಿದ್ದ ಇಲ್ಲಿನ ರಾಜಕಾರಣಿಗಳಿಗೆ ಬಿಸಿ ಮುಟ್ಟಿತು. ಜನರ, ಹೋರಾಟಗಾರ ಪ್ರಶ್ನೆ, ಆಗ್ರಹಗಳಿಗೆ ಕಿವುಡಾಗಿದ್ದವರು ಕ್ರಮೇಣ ಕಣ್ಣು ಕಿವಿ ಬಾಯಿ ತೆರೆದು ಪ್ರತಿಕ್ರಿಯಿಸಲಾರಂಭಿಸಿದರು.

ಇದೆಲ್ಲಾ ಜೀವನದಿ ನೇತ್ರಾವತಿಯ ಕೊಡುಗೆಯೆಂದರೆ ಖಂಡಿತ ತಪ್ಪಾಗದು. ಜನರಿಗೆ ಮೊತ್ತ ಮೊದಲಿನ ಆವಶ್ಯಕತೆ ನೀರು, ಆಹಾರ, ಸೂರು, ಪರಿಸರವೇ ಹೊರತು, ರಾಜಕೀಯವಾಗಲೀ, ರಾಜಕಾರಣಿಗಳಾಗಲೀ ಅಲ್ಲವೆಂಬುದು ಜನರಿಗೆ ಮನವರಿಕೆಯಾಗಲು ಈ ಬೆಳವಣಿಗೆ ಸಹಕಾರಿಯಾಯಿತು.

ಪರಿಣಾಮ, ಹಿಂದೂ ಮುಸಲ್ಮಾನ, ಕ್ರೈಸ್ತ ಮತ್ತಿತರ ಧರ್ಮಗಳ ಜನರ ನಡುವೆ ಆಕ್ರಮಿಸಿಕೊಂಡಿದ್ದ, ಅಕ್ರಮ ರಾಜಕೀಯದ ಫಲವಾದ ಅಪನಂಬಿಕೆ, ದ್ವೇಷ, ಹಗೆತನಗಳೆಲ್ಲಾ ಕೊಚ್ಚಿ ಹೋಗಿ ಒಗ್ಗಟ್ಟು ಮೂಡಿತು. ಎಲ್ಲಾ ಧರ್ಮಗಳಿಗಿಂತ ಮಾನವೀಯತೆಯೇ ಶ್ರೇಷ್ಠವೆಂಬ ಪ್ರಜ್ಞೆ ಮೂಡಿತು. ತತ್ಪರಿಣಾಮವಾಗಿ ತಮ್ಮ ಪರಿಸರ, ನಿಸರ್ಗ ಹೇಗೆ ಸ್ವಾರ್ಥಿಗಳಿಗೆ ಬಲಿಯಾಗುತ್ತಿದೆಯೆಂಬುದರ ಪರಿವೆ ಉಂಟಾಯಿತು. ರಕ್ಕಸ ಯೋಜನೆಗಳಿಂದ, ಕೇವಲ ಹಣ ದೋಚುವ ಇರಾದೆಯ ಕಾಮಗಾರಿಗಳಿಂದ ನಾಡನ್ನು ಹೇಗೆ ಬರಿದಾಗಿಸಲಾಗುತ್ತಿದೆ ಎಂಬ ತಿಳುವಳಿಕೆ ಮೂಡಿ ಬಂದಿತು.

ಅದರ ಫಲವಾಗಿಯೇ ನೇತ್ರಾವತಿ ನದಿಯನ್ನು ಉಳಿಸಬೇಕೆಂಬ ಸಂಕಲ್ಪ ಜನರಲ್ಲಿ ಮೂಡಿತು. ಪಶ್ಚಿಮ ಘಟಕ್ಕೆ ಕೊಡಲಿಯಿಟ್ಟು, ಸಮೃದ್ಧ ಪರಿಸರವನ್ನು ವಿನಾಶಗೊಳಿಸುವ ಭೀಕರ ಯೋಜನೆಗಳ ಪರಿಣಾಮವನ್ನು ಊಹಿಸಲು ಸಾಧ್ಯವಾಯಿತು.

ಎತ್ತಿನಹೊಳೆ ಯೋಜನೆಯ ವಿರುದ್ಧ ಜನರು ಒಂದಾಗಿದ್ದೇ ಹೀಗೆ. ತಮ್ಮ ಕಣ್ಣಿಗೆ ಮಣ್ಣೆರಚಿ ಸ್ವಾರ್ಥ ಸಾಧನೆಗೈಯುತ್ತಿದ್ದ ರಾಜಕಾರಣಿಗಳ ನೈಜ ಬಣ್ಣ ಅರಿವಾಗಿ ಜನರೆಲ್ಲಾ ತಮ್ಮನ್ನು, ತಮ್ಮ ನಾಡನ್ನು, ಪರಿಸರವನ್ನು ರಕ್ಷಿಸಲು ಜಾತಿ, ಧರ್ಮದ ಅಂತರ, ಭೇದ ಮರೆತು ಒಂದಾದರು, ಕೈ ಜೋಡಿಸಿ ಹೋರಾಡಿದರು.

ದಕ್ಷಿಣ ಕನ್ನಡದ ಜನರು ಒಗ್ಗಟ್ಟಿಲ್ಲದವರು, ಬಲವಿಲ್ಲದವರು, ಹೋರಾಡಲು ತಾಕತ್ತಿಲ್ಲದವರು, ಯಾವುದಕ್ಕೂ ಪ್ರತಿಕ್ರಿಯೆ ನೀಡದವರು, ಎಲ್ಲಿ ಏನೇ ಆಗಲಿ ಸುಮ್ಮನಿರುವವರು, ಪ್ರತಿಯೊಂದಕ್ಕೂ ನಿರ್ಲಿಪ್ತರು ಎಂಬ ಯಾವೆಲ್ಲಾ ಆರೋಪ, ಆಪಾದನೆಗಳಿದ್ದವೋ, ಭಾವನೆಗಳಿದ್ದವೋ ಅವೆಲ್ಲವನ್ನೂ ಬುಡ ಸಹಿತ ಕಿತ್ತು ಹಾಕುವಂತೆ ಕರಾವಳಿಯ ಜನರು ಒಂದಾದರು, ಹೋರಾಡಿದರು. ಕೇವಲ ಕೋಮು ಸಂಬಂಧಿ ವಿಷಯಗಳಿಗಷ್ಟೇ ಪ್ರತಿಕ್ರಿಯಿಸಿ, ಕಚ್ಚಾಡುತ್ತಿದ್ದ ಜನರನ್ನು ಪ್ರಕೃತಿ ಮಾತೆ ಒಂದುಗೂಡಿಸಿದಳು. ತಾಯಿ ನೇತ್ರಾವತಿ ಜನರಿಗೆ ಜ್ಞಾನೋದಯ ಮಾಡಿಸಿದಳು.

ನಿಜಕ್ಕೂ ಇದೊಂದು ಐತಿಹಾಸಿಕ, ಅದ್ಭುತ ಬದಲಾವಣೆಯಾಗಿತ್ತು. ನಾಡಿಗೆ ನಾಡೇ, ಇಡೀ ತುಳುನಾಡು ತನ್ನ ಮೈಮೇಲೆ ಹೊದ್ದುಕೊಂಡಿದ್ದ ಭ್ರಮೆಯಿಂದ ಮುಕ್ತರಾಗಿದ್ದ ಕ್ಷಣಗಳಿವು.

ದುರಾದೃಷ್ಟ! ಇದೆಲ್ಲಾ ಕೆಲವೇ ದಿನಗಳಿಗೆ ಸೀಮಿತವಾಗಿ ಬಿಟ್ಟಿತೇ ಎಂಬ ಆತಂಕ ಈಗೆದುರಾಗಿದೆ.

ಹೌದು. ಯೌವ ಜಿಲ್ಲೆ ದುರುಳ ರಾಜಕೀಯದ, ಸ್ವಾರ್ಥ ರಾಜಕಾರಣಿಗಳ ಕಪಿಮುಷ್ಠಿಯಿಂದ ಮುಕ್ತಾವಾಗಿಬಿಟ್ಟಿತೆಂಬ ಸೂಚನೆ ನೀಡಿತ್ತೋ, ಅದೇ ಜಿಲ್ಲೆ ಮತ್ತೆ ಕೋಮು ಸಂಘರ್ಷಕ್ಕೆ ಒಳಗಾಗಿಬಿಟ್ಟಿದೆ. ಯಾವ ನೇತ್ರಾವತಿಯ ನೀರನ್ನು ಕುಡಿದು ತಾವೆಲ್ಲಾ ಒಂದೇ ಎಂಬ ಭಾವನೆಗೆ, ಪ್ರಜ್ಞೆಗೆ, ಜಾಗೃತಿಗೆ ಮರಳಿದ್ದ ಕರಾವಳಿಗರು ಇಂದು ತಮ್ಮ ಕಣ್ಣ ಮುಂದೆ ನೆತ್ತರಿನ ಹೊಳೆ ಹರಿಯುವುದನ್ನು ಇಷ್ಟು ಬೇಗ ನೋಡಬೇಕಾಗಿ ಬಂದಿದ್ದು ವಿಪರ್ಯಾಸ ಮತ್ತು ದುರಾದೃಷ್ಟವೇ ಎನ್ನಬೇಕು.

ಇದಕ್ಕೆಲ್ಲಾ ಮತ್ತೆ ಅದೇ ಕಾರಣ, ಭ್ರಷ್ಟ, ಸ್ವಾರ್ಥದ ರಾಜಕಾರಣ. ರಾಜಕೀಯವೆಂಬುದು ಮತ ಗಳಿಕೆಗೋಸ್ಕರ ಜನರ ಜೀವದ ಜೊತೆ ಚೆಲ್ಲಾಡಲೂ ಹಿಂಜರಿಯುವುದಿಲ್ಲವೆನ್ನುವುದರ ಉತ್ತುಂಗದ ನಿದರ್ಶನವಿದು.

ಮೊನ್ನೆ ಮೊನ್ನೆ ಪ್ರೀತಿ, ಕಾಳಜಿಯಿಂದ ಒಂದುಗೂಡಿದ್ದ ಜನರಿಗೆ ಇದರ ಕರಾಳ ಅನುಭವ ಆಗಿಯೇ ಬಿಟ್ಟಿತು. ಅದೂ, ಜನರೆಲ್ಲಾ ಹಬ್ಬಗಳ ಸಂಭ್ರಮದಲ್ಲಿರುವಾಗಲೇ.

ದೀಪಾವಳಿಯ ಬೆಳಕಿನಲ್ಲಿ ಪ್ರಜ್ವಲಿಸಬೇಕಾಗಿದ್ದ ನಾಡು ಭಯದ ವಾತಾವರಣದಲ್ಲಿ ಮಿಂದು ಹೋಯಿತು. ಹಬ್ಬದ ಸಂತೆಯಲ್ಲಿ ಓಡಾಡಬೇಕಾಗಿದ್ದವರು ಮನೆಯಿಂದ ಹೊರಗೆ ಕಾಲಿಡಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಯಿತು. ರಜಾದಿನಗಳ ಸಂಭ್ರಮ ಉಣ್ಣಬೇಕಾದವರು ಕರಾಳ ದಿನಗಳನ್ನೆಣಿಸಬೇಕಾಯಿತು.

ಇದು ದಕ್ಷಿಣ ಕನ್ನಡ ಜಿಲ್ಲೆ (ಪಕ್ಕದ ಜಿಲ್ಲೆಗಳೂ ಸಹ) ಕಳೆದ ವಾರ ಅನುಭವಿಸಿದ ಪರಿಸ್ಥಿತಿ. ಇಂದಿಗೂ ಅಸಹನೀಯ ಪರಿಸ್ಥಿತಿ, ಆತಂಕದ ವಾತಾವರಣ ತಿಳಿಯಾಗಿಲ್ಲ.

ಇದಕ್ಕೆಲ್ಲಾ ಕಾರಣ ಇದೇ ನಿಕೃಷ್ಟ ರಾಜಕಾರಣ. ಇಲ್ಲಿ ಆ ಪಕ್ಷ ಈ ಪಕ್ಷವೆಂಬ ಮಾತೇ ಇಲ್ಲ. ಎಲ್ಲರೂ ಒಂದೇ. ಅವರೆಲ್ಲರಿಗೂ ಬೇಕಾಗಿದ್ದು ಜನರ ರಕ್ತವೆಂಬುದು ಇದರಿಂದ ಸಾಬೀತಾಗುವುದಿಲ್ಲವೆ?

ನಿರ್ದಿಷ್ಠವಾಗಿ ಹೇಳುವುದಾದರೆ, ಕರಾವಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳದ್ದೇ ಕಾರುಬಾರು. ಇತರ ಪಕ್ಷಗಳ ಪಳೆಯುಳಿಕೆಗಳೂ ಕಾಣ ಸಿಗುವುದಿಲ್ಲ ಇಲ್ಲಿ. ನೀವು ಯಾವುದೋ ಒಂದು ಪಕ್ಷದ ಪರವಾಗಿರುವವರಾದರೆ ಎಲ್ಲದಕ್ಕೂ ಇನ್ನೊಂದು ಪಕ್ಷವನ್ನು ದೂರುತ್ತೀರಿ, ಹೊಣೆಗಾರರನ್ನಾಗಿ ಮಾಡುತ್ತೀರಿ. ಬಿಜೆಪಿಯವರಿಗೆ ಎಲ್ಲ ಕೆಟ್ಟತನಕ್ಕೂ ಕಾಂಗ್ರೆಸ್ ಕಾರಣವಾಗಿ ಕಂಡರೆ, ಕಾಂಗ್ರೆಸ್ಸಿಗರಿಗೆ ಎಲ್ಲಾ ಸಮಸ್ಯೆಗಳಿಗೂ ಬಿಜೆಪಿಯೇ ಮೂಲವೆಂದು ಕಾಣುತ್ತದೆ (ಸಾಮಾನ್ಯ ಜನರಿಗೂ ರಾಜಕೀಯದ ಅಮಲು ನೆತ್ತಿಗೇರಿದ್ದರ ಪರಿಣಾಮವಿದು).

ಆದರೆ, ಇವೆರಡೂ ಪಕ್ಷಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಜನರಿಗೆ ಇವರೆಡೂ ಪೀಡೆಗಳೇ! ಅವರ ಆಯುಧಗಳು, ಶಸ್ತ್ರಗಳು, ವಿಧಾನಗಳು ಬೇರೆ ಬೇರೆಯಷ್ಟೇ. ಒಬ್ಬರು ತಲವಾರು ಬಳಸಿದರೆ ಇನ್ನೊಬ್ಬರು ಕೊಡಲಿ ಎತ್ತುತ್ತಾರೆ. ಒಬ್ಬರು ಕಲ್ಲೆತ್ತಿಕೊಂಡರೆ ಮತ್ತೊಬ್ಬರು ಸ್ಫೋಟಕ ಎಸೆಯುತ್ತಾರೆ. ಒಬ್ಬರು ಪಿಸ್ತೂಲು ಹಿಡಿದುಕೊಂಡರೆ ಮತ್ತೊಬ್ಬರು ಬಂದೂಕು ಹಿಡಿದುಕೊಳ್ಳುತ್ತಾರೆ. ಇಷ್ಟೇ ವ್ಯತ್ಯಾಸ.

ಅಂದರೆ, ಎಲ್ಲಾ ರಾಜಕೀಯ ಪಕ್ಷಗಳು ಜನರಿಗೆ ಮಾಡುವುದು ಅನ್ಯಾಯವೇ! ದಕ್ಷಿಣ ಕನ್ನಡದಲ್ಲಿ ನಡೆದ, ನಡೆಯುತ್ತಿರುವ ವಿದ್ಯಮಾನ, ಘಟನೆಗಳನ್ನು ನೋಡಿದವರಿಗೆ ಇಷ್ಟು ಸಿಂಪಲ್ ಲಾಜಿಕ್ ಖಂಡಿತಾ ಅರ್ಥವಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಅವರಿಗೆ ನೆಪಗಳು, ಕಾರಣಗಳು ಯಾವತ್ತೂ ಸಿಗುತ್ತಿರುತ್ತವೆ. ಇದಕ್ಕೆ ಲೇಟೆಸ್ಟ್ ಉದಾಹರಣೆಯೆಂದರೆ ಟಿಪ್ಪು ಜಯಂತಿ.

ಎರಡು ಕೋಮಿನ ಕಾರ್ಯಕರ್ತರು ತಮ್ಮ ನಡುವಿನ ವೈಷಮ್ಯಗಳಿಗೆ, ಹಗೆತನಕ್ಕೆ ತಾವೇ ಬಲಿ ಪಡೆದುಕೊಳ್ಳುತ್ತಾರೆ. ಕೊನೆಗೆ ಬಲಿ ಪಡೆದವರೂ ಬಲಿಯಾಗುತ್ತಾರೆ. ರಾಜಕೀಯವೆನ್ನುವುದು ಇಂತಹದೆಲ್ಲಕ್ಕೂ ನೀರು ಸುರಿದು ಪ್ರೋತ್ಸಾಹಿಸುತ್ತದಷ್ಟೇ. ಪರಿಣಾಮ, ತುಂಬು ಜೀವನ ನಡೆಸಬೇಕಾದ ತರುಣರು ಅಕಾರಣವಾಗಿ, ಅಕಾಲಿಕವಾಗಿ ಯಾರ್ಯಾರಿಗೋಸ್ಕರ ಜೀವ ಕಳೆದುಕೊಳ್ಳುತ್ತಾರೆ.

ಟಿಪ್ಪು ಜಯಂತಿಯಂತಹ ತಪ್ಪು ನಡೆಗಳು ಇಂತಹ ಜ್ವಾಲೆಗಳಿಗೆ ತುಪ್ಪ ಸುರಿಯುವುದಕ್ಕೆ ಸಹಕಾರಿ ಅಷ್ಟೇ.

ಇದರ ಪರಿಣಾಮ ಹೇಗಾಯಿತು ನೋಡಿ. ಬಿಜೆಪಿಯವರಿಗೆ ಕಳೆದು ಹೋಗುತ್ತಿದ್ದ ತಮ್ಮ ಹಿಡಿತ ಮರಳಿ ಪಡೆಯಲು ಕೈ ತುಂಬಾ ಅವಕಾಶಗಳನ್ನು ಕಾಂಗ್ರೆಸ್ ನೀಡಿತು. ಇದರಿಂದಾಗಿ ರಾಜ್ಯದಾದ್ಯಂತ ವಾತಾವರಣ ಕದಡಿ ಹೋಯಿತು. ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಇದು ಅತಿರೇಕಕ್ಕೆ ಹೋಯಿತು.

ಇಲ್ಲಿಯವರೆಗೆ ದಕ್ಷಿಣ ಕನ್ನಡದಲ್ಲಿ ಎಷ್ಟೋ ಬಂದ್‍ಗಳು ನಡೆದಿವೆ. ಮಂಗಳೂರಿನಲ್ಲಿ ಕಫ್ರ್ಯೂ ವಿಧಿಸಿದ್ದೂ ಇದೆ. ಆದರೆ ಅವೆಲ್ಲಕಿಂತ ಹೆಚ್ಚು ಆತಂಕವೆನಿಸುವ ಸಂಗತಿಯೊಂದು ಈ ಬಾರಿ ನಡೆದು ಹೋಯಿತು.

ಪೋಲೀಸರೇ ಸ್ವತಃ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದರು, ಬಂದ್ ಅತ್ಯಂತ ಯಶಸ್ವಿಗೊಳಿಸಲು ಶ್ರಮಿಸಿದರು!

ಮಂಗಳೂರು ಆ ದಿನ (ಶುಕ್ರವಾರ) ಎಂತಹ ಸ್ಥಿತಿಯನ್ನು ಕಂಡಿತ್ತೆಂದರೆ, ಎಂದಿಗೂ ಮುಚ್ಚದ ಬಾಗಿಲುಗಳು, ಶಟರ್‍ಗಳು ಅಂದು ತೆರೆದುಕೊಳ್ಳಲಿಲ್ಲ. ಸಣ್ಣ ಪುಟ್ಟ ಬೀದಿಯ ಅಂಗಡಿಗಳಿಂದ ಹಿಡಿದು, ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ, ಒಳ ರಸ್ತೆ ಹೀಗೆ ಎಲ್ಲೇ ಹೋದರೂ ಪ್ರತಿಯೊಂದು ಕಡೆ ಕಂಡಿದ್ದು ಮುಚ್ಚಿದ ಬಾಗಿಲುಗಳು, ಶಟರ್‍ಗಳೇ. ಅಪವಾದಕ್ಕೂ ಸಹ ಒಂದೇ ಒಂದು ಬಾಗಿಲು ತೆರೆದಿರಲಿಲ್ಲ. ನಗರದಲ್ಲಿ ಜನರೇ ಇಲ್ಲವೇನೋ ಎಂಬಂತಹ ಪರಿಸ್ಥಿತಿ!

ಇದಕ್ಕೆ ಕಾರಣರಾದವರಿಗೆಲ್ಲಾ ಅಭಿನಂದನೆಗಳನ್ನು ಸಲ್ಲಿಸಬೇಕೆ?

ಬಂದ್ ಸಂದರ್ಭ ಕಾರ್ಯಕರ್ತರು ಮತ್ತು ಕಿಡಿಗೇಡಿಗಳು ರಾದ್ಧಾಂತವೆಬ್ಬಿಸುವುದು, ಬಾಗಿಲು ಮುಚ್ಚಿಸುವುದು ಸಾಮಾನ್ಯ. ಆದರೆ ಈ ಸಲ ಪೋಲೀಸರೇ ಮಂಗಳೂರಿನಲ್ಲಿ ಬಲವಂತವಾಗಿ (ಅವರ ಒತ್ತಾಯ, ಕೋರಿಕೆ ಎಂದರೆ ಬಲವಂತವೇ ಅಲ್ಲವೆ?) ಅಂಗಡಿ, ಕಚೇರಿಗಳ ಬಾಗಿಲನ್ನು ಮುಚ್ಚಿಸಿದರು. ಅದೂ ನಗರದಿಂದ ದೂರವಿರುವ ಸಣ್ಣ ಪುಟ್ಟ ಬೀದಿಗಳಲ್ಲಿ ಸಹ!

ಇದನ್ನು ಮುಂಜಾಗ್ರತೆಗಾಗಿ ಕೈಗೊಂಡ ಕ್ರಮವೆಂದು ಸಮರ್ಥಿಸಿಕೊಂಡರೂ, ಇದು ಎಷ್ಟು ಸರಿ? ಹಾಗಾದರೆ ಇಂತಹ ಪರಿಸ್ಥಿತಿಗಳನ್ನು ನಿಯಂತ್ರಿಸಲು, ಕಡಿವಾಣ ಹಾಕಲು ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲವೆ? ಎಲ್ಲೋ ಯಾರೋ ಹೊಡೆದಾಡಿಕೊಂಡರೆ, ಅಪರಾಧಿಗಳು, ಕಿರಾತಕರು ಅನ್ಯಾಯ, ಅಕ್ರಮವೆಸಗುತ್ತಿದ್ದರೆ ಅವರನ್ನು ಹಿಡಿಯುವುದು ಬಿಟ್ಟು ಊರನ್ನೇ ಮುಚ್ಚಿ ಬಿಡುವುದು ಯಾವ ಸಾಧನೆ? ಹಿಂದೆಯೂ ಹೀಗೆ ಮಾಡಿದ ದಾಖಲೆಗಳಿವೆ.

2006ರಲ್ಲಿ ಮಂಗಳೂರಿನಲ್ಲಿ ಒಮ್ಮಿಂದೊಮ್ಮೆಲೇ ಕಫ್ರ್ಯೂ ವಿಧಿಸಿದ್ದು ಹೀಗೆಯೇ. ಕ್ರಿಮಿನಲ್‍ಗಳು, ಕಿಡಿಗೇಡಿಗಳು ಯಾರೆಂಬುದು ಪೊಲೀಸರಿಗೆ ಗೊತ್ತೇ ಇರುತ್ತದೆ. ಅವರನ್ನು ಮಟ್ಟ ಹಾಕುವುದು ಬಿಟ್ಟು ನಗರಕ್ಕಿಡೀ ಶಿಕ್ಷೆ ವಿಧಿಸುವುದು ಎಂತಹ ಪರಾಕ್ರಮ? ಎಲ್ಲಿಯ ತನಕ ಹೀಗೇ ಮಾಡುತ್ತೀರಿ? ನಾಗರಿಕತೆಯ ಲಕ್ಷಣವೇ ಇದು? ಪ್ರಜಾಪ್ರಭುತ್ವವೆಂಬುದು ಬರೀ ಭಾಷಣಗಳಿಗಷ್ಟೇ ಸೀಮಿತವೇ?

ಇಂದು ಮಂಗಳೂರು ಸುದ್ದಿಯಲ್ಲಿರುವುದೇ ಇಂತಹ ಹೀನ ಕಾರಣಗಳಿಗಾಗಿ. ರಾಷ್ಟ್ರ ಮಟ್ಟದಲ್ಲಿ ಮಂಗಳೂರು ಸುದ್ದಿಯಲ್ಲಿದೆಯೆಂದರೆ ಇಲ್ಲಿ ಯಾವುದೋ ಗಲಭೆ, ದುರ್ಘಟನೆ, ಅಹಿತಕರ ಸಂಗತಿ ನಡೆದಿದೆ ಎಂದೇ ಎಲ್ಲರೂ ಭಾವಿಸುವ ಮಟ್ಟಕ್ಕೆ ಹೋಗಿದೆ. ಮಾಧ್ಯಮಗಳಿಗೆ ಮಂಗಳೂರಿನ ಮಹತ್ವ ಇಷ್ಟಕ್ಕೇ ಸೀಮಿತಗೊಂಡಿರುವುದು ಖೇದಕರ. ದೇಶ ವಿದೇಶಗಳಲ್ಲಿ ಮಂಗಳೂರು ಸುದ್ದಿಗೀಡಾಗುವುದು, ಪ್ರಚಾರ ಪಡೆಯುವುದು ಬರೀ ನಕಾರಾತ್ಮಕ ಕಾರಣಗಳಿಗಾಗಿಯೇ ಎಂಬುದು ನಿಜಕ್ಕೂ ಅವಮಾನಕರ. ಸುಶಿಕ್ಷಿತ ಜಿಲ್ಲೆ ನಾಚಿಕೆಪಟ್ಟುಕೊಳ್ಳಬೇಕಾಗಿದೆ.

ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ವಿಚಾರವಿದಲ್ಲವೆ?!

ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸಲು ಹೊರಟವರಂತೂ ಇದನ್ನು ಬಹು ಮುಖ್ಯವಾಗಿ ಚಿಂತನೆ ಮಾಡಬೇಕು. ಇಲ್ಲದಿದ್ದರೆ ಮಂಗಳೂರು ಸ್ಮಾರ್ಟ್ ಸಿಟಿಯಾಗದು, ಕೇವಲ ಡಾರ್ಕ್ ಸಿಟಿಯಾಗಿಬಿಟ್ಟೀತು.

ಕರಾವಳಿಯ ಜನರು ಮತ್ತೆ ಎಚ್ಚರಗೊಳ್ಳಬೇಕಾಗಿದೆ. ಹಡಬೆ ರಾಜಕಾರಣದಿಂದ ಜನರಿಗೆ, ನಾಡಿಗೆ ಯಾವತ್ತೂ ಕೆಡುಕೇ ಹೊರತು ಒಳ್ಳೆಯದಾಗುವುದು ಸಾಧ್ಯವಿಲ್ಲ. ಆದರೆ, ರಾಜಕೀಯ ಪಕ್ಷಗಳಿಗೆ, ಅದರ ನಾಯಕರಿಗೆ ಅದರಿಂದ ಲಾಭವಿರಬಹುದು. ಜನರ ಹೆಣ ಬಿದ್ದರೂ ರಾಜಕೀಯ ಮಾಡುವವರಿಂದ ಜನರಿಗೆ ಏನು ಒಳ್ಳೆಯದಾದೀತು? ಅವರಿಗೆ ಯಾವಾಗಲೂ ಇಂತಹ ಸಂದರ್ಭಗಳು, ತಮ್ಮ ಸ್ವಾರ್ಥಕ್ಕಾಗಿ, ಫಾಯಿದೆಗಾಗಿ ಕೂಡಿ ಬರುತ್ತವೆ (ಇಲ್ಲದಿದ್ದರೇ ಅವರೇ ನಿರ್ಮಿಸಿಕೊಳ್ಳುತ್ತಾರೆ). ಜನರು ಮಾತ್ರ ಮತ್ತೆ ಮತ್ತೆ ಮೂರ್ಖರಾಗುತ್ತಾರೆ, ಅನ್ಯಾಯಕ್ಕೊಳಗಾಗುತ್ತಾರೆ.

ದಕ್ಷಿಣ ಕನ್ನಡದ ಜನರು ಮೈ ಕೊಡವಿ ಇಂತಹ ನಾಟಕ, ವಂಚನೆ, ದ್ರೋಹಗಳಿಂದ ಮುಕ್ತರಾಗಿ, ನೈಜ ವಿಚಾರಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗಮನ ಕೊಡಬೇಕಿದೆ. ಎತ್ತಿನಹೊಳೆ ಯೋಜನೆ ಅವುಗಳಲ್ಲಿ ಮುಖ್ಯವಾದುದು. ಬಹುಶಃ ಈ ಯೋಜನೆಯ ವಿರುದ್ಧ ಜನರೆಲ್ಲಾ ಒಂದಾಗಿದ್ದು ರಾಜಕೀಯ ಪಕ್ಷಗಳಿಗೆ ನಡುಕವುಂಟು ಮಾಡಿದ್ದರಿಂದಲೇ, ಅವರನ್ನು ಒಡೆಯಲು ಈ ಹುನ್ನಾರಗಳೇನೋ ಎಂಬ ಸಂಶಯವೂ ಮೂಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ, ಮತ್ತವರ ಫುಡಾರಿಗಳು ಒಂದಾಗಿ, ಕೈ ಜೋಡಿಸಿ ಎತ್ತಿನಹೊಳೆ ಯೋಜನೆಯ ಮೂಲಕ ರಾಜ್ಯವನ್ನು ನಿಯತ್ತಿನಿಂದ ದೋಚುವುದಕ್ಕೆ ಆರಂಭಿಸಿದ್ದೇ ಈ ಯೋಜನೆಯೆಂಬುದು ಗುಟ್ಟಿನ ಸಂಗತಿಯಲ್ಲವಲ್ಲ! ಹಾಗಾಗಿ ಕೋಮು ವಿಚಾರಗಳ ಮೂಲಕ, ಅಪರಾಧಿ ಕೃತ್ಯಗಳನ್ನು ರಾಜಕೀಯಗೊಳಿಸುವುದರ ಮೂಲಕ ಜನರನ್ನು ಮೂರ್ಖರನ್ನಾಗಿಸಲು, ವಿಭಜಿಸಲು ಹವಣಿಸುತ್ತಿವೆಯೆಂಬುದು ಜನರಿಗೆ ತಿಳಿಯದ ವಿಚಾರವಲ್ಲ.

ತುಳುನಾಡಿನ ಜನರೆಲ್ಲಾ ಸ್ವಾರ್ಥ ರಾಜಕೀಯಕ್ಕೆ ಬಲಿಯಾಗುವುದನ್ನು ಬಿಟ್ಟು ಮತ್ತೆ ಸಹೋದರತ್ವದಿಂದ, ಸೌಹಾರ್ದದಿಂದ ಬಾಳಬೇಕು, ಒಂದಾಗಿ ನಾಡಿನ ಪ್ರಗತಿಗೆ, ಶಾಂತಿಗೆ ದುಡಿಯಬೇಕು. ಇದು ಇಂದಿನ ಅತ್ಯಂತ ಅವಶ್ಯಕ, ಜರೂರಿನ ವಿಚಾರ.

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ:  budkuloepaper@gmail.com

Leave a comment

Your email address will not be published. Required fields are marked *

Latest News