ನೀತಿಗೆ ಬೆಂಕಿ ಬಿತ್ತು, ಜಾತಿ?

ಬೀChi

Posted on : April 11, 2014 at 2:42 PM

ಬೀChi – ಕನ್ನಡಾಂತ್ಲೊ ಶ್ರೇಷ್ಠ್ ಹಾಸ್ಯ್ ಸಾಹಿತಿ ಆನಿ ವಿಡಂಬನ್‍ಕಾರ್. ಕನ್ನಡಾಚೊ ಜಾರ್ಜ್ ಬರ್ನಾರ್ಡ್ ಶಾ ಮ್ಹಣೊನ್ ತಾಕಾ ವೊಲಾಯ್ಲಾಂ, ತರ್ ತಾಚ್ಯಾ ಅರ್ಹತೆವಿಶಿಂ ದುಸ್ರಿ ಸರ್ಟಿಫಿಕೇಟ್ ಗರ್ಜ್ ನಾಂ. ತಾಚೊ autobiography ‘ನನ್ನ ಭಯಾಗ್ರಫಿ’ ಕನ್ನಡಾಂತ್ ವಿವಾದ್ ಉಟಯಿಲ್ಲೊ ಪುಸ್ತಕ್. ತ್ಯಾ ಸಂದರ್ಭಾರ್ (1976) ಕನ್ನಡ ಸಾರಸ್ವತ್ ಸಂಸಾರಾನ್ ತಾಕಾ ಖೆಂಡ್‍ಲ್ಲೊ, ಎಕ್ದಮ್ ಮಿತಿ ಭಾಯ್ರ್ ಬರಯ್ಲಾಂ ಮ್ಹಣೊನ್. ಆಯ್ಲೆವಾರ್ ಹಾಂವೆಂ ವಾಚುನ್ ಕಾಡ್ತಾನಾ ಮ್ಹಾಕಾ ಭೊಗ್ಲೆಂಕೀ ತಸಲೆಂ ಕಿತೆಂ ಆಸಾ ತಾಂತುಂ ತಿತ್ಲೆಂ ಬೊಬಾಟುಂಕ್ ಮ್ಹಣೊನ್. ಎಕೆಕ್ಲ್ಯಾಕ್ ಎಕೇಕ್ ಥರ್ ಭೊಗುಂಕ್ ಪುರೊ. ಮ್ಹಾಕಾ ಮಾತ್ರ್ ತಾಣೆ ಬರಯಿಲ್ಲೆಂ ಸಾರ್ಕೆಂಚ್ ಆಸಾ ಮ್ಹಣ್ ಭೊಗ್ಲೆಂ. ಮನ್ಶಾ ಜಿಣ್ಯೆವಿಶಿಂ ಸಾರ್ಕೆಂ ವಿಶ್ಲೇಶಣ್, ದಾಕ್ಷೆಣ್ ನಾಸ್ತಾಂ ತಾಣೆಂ ಉಚಾರ್ಲಾಂ. ಆನಿ ತೆಂ ಸತ್ ಮ್ಹಣ್ ರುಜು ಕರುಂಕ್ ತಾಂತ್ಲೊ ಹೊ ಏಕ್ ಭಾಗ್ ಪುರೊ. ದೆಕುನ್‍ಚ್ ಜಾಯ್ಜೆ 17 ವರ್ಸಾಂ ಮ್ಹಣಾಸರ್ ರೀಪ್ರಿಂಟ್ ಜಾಯ್ನಾತ್‍ಲ್ಲೊ ‘ನನ್ನ ಭಯಾಗ್ರಫಿ’ ಪಾಟ್ಲ್ಯಾ 18 ವರ್ಸಾಂನಿ ಚಡ್ತಿಕ್ 10 ಪಾವ್ಟಿಂ ಪ್ರಿಂಟ್ ಜಾಲಾ. ಹೊ ಪುಸ್ತಕ್ ಆಪ್ಣಾಕ್ ತಶೆಂಚ್ ಹೆರಾಂಕ್ ಸಮ್ಜೊಂಕ್ ಜಾಯ್ ಮ್ಹಣ್ ಭೊಗ್ತೆಲ್ಯಾಂನಿಂ ವಾಚಿಜೆಚ್. ವಾಚ್‍ಲ್ಲ್ಯಾ ಹರ್ಯೆಕ್ಲ್ಯಾಕ್ ಜಿವಿತ್ ಅರ್ಥ್ ಕರುಂಕ್ ವ್ಹಡ್ ಪ್ರೇರಕ್. ಬೀChiಚಿ ಶೈಲಿ ವಿಭಿನ್ನ್, ಉತ್ರಾಂಯೀ ವಿಶಿಸ್ಟ್. ಹ್ಯಾ ಪುಸ್ತಕಾಂತ್ಲೊ ಹೊ ಅವಸ್ವರ್ ತುಮ್ಚೆ ಖಾತಿರ್ ಹಾಂಗಾಸರ್ ದಿಲಾ. ವಾಚಾ.

Beechis Biography coverಒಂದು ಹೆಂಣನ್ನು ಹೊಡೆಯಲು ಅದೆಷ್ಟು ಗಂಡುಗಳು ಬೇಕು?

ಆರು ಬಲವಾದ ಗಂಡು ಗೂಂಡಾಗಳು ಸೇರಿದ್ದಾರೆ. ಒಂದು ಹೆಂಣನ್ನು ಕೋಣೆಯೊಳಗೆ ಕೂಡಿ ಕದವಿಕ್ಕಿಕೊಂಡು ಕೋಲು, ಹಸಿದಂಟು, ಬರಿ ಕೈಗಳಿಂದ ಹೊಡೆದದ್ದೂ ಹೊಡೆದದ್ದೇ. ಆ ಹೆಂಣು ‘ಅಯ್ಯಯ್ಯೋ ಸತ್ತೆ’ ಎಂದು ಕೂಗಿಕೊಳ್ಳುತ್ತಿದೆ, ರಸ್ತೆಯವರೆಗೂ ಕೇಳಿಸುತ್ತಿದೆ.

ಇದು ನಡೆದುದು ನಿರ್ಜನ ಪ್ರದೇಶವಾದ ಅಡವಿಯಲ್ಲಲ್ಲ, ಯಾವುದೋ ಹಳ್ಳಿಗಾಡಿನಲ್ಲಲ್ಲ, ಅಥವಾ ಗುಡ್ಡಗಾಡಿನ ಕಾಡು ಜನಾಂಗದಲ್ಲಲ್ಲ. ದೊಡ್ಡ ಊರಿನಲ್ಲಿ, ತಾಲೂಕು ಕಚೇರಿ, ಹೈಸ್ಕೂಲು ಇರುವಂತಹ ಉತ್ತಮ ಜಾತಿಯ ಜನದಲ್ಲಿ, ಆ ಹೆಂಣು ಅದೇ ಪ್ರಥಮ ಜಾತಿಯದು, ಆ ಗಂಡುಗಳೂ ಅದೇ ಪ್ರಥಮ ಜಾತಿಗೆ ಸೇರಿದುವು.

ಒಂದು ಮಾತಂತೂ ಸ್ಪಷ್ಟ – ಆ ಹೆಣ್ಣಿನಿಂದ ಏನೋ ತಪ್ಪಾಗಿದೆ, ಇಲ್ಲದಿದ್ದಲ್ಲಿ ಅಷ್ಟು ಜನ ಸೇರಿ ಅದೇಕೆ ಹೊಡೆದಾರು? ತಪ್ಪಾದರೆ ಪತ್ತೆ ಮಾಡಲು ಪೆÇಲೀಸ್ ಇದೆ. ಸತ್ಯಾಸತ್ಯತೆಯನ್ನು ವಿಚಾರಿಸಿ ಶಿಕ್ಷಿಸಲು ಕೋರ್ಟಿದೆ. ಆದರೆ ಇಲ್ಲಿ? ಆ ಆರು ಗಂಡುಗಳೂ ತಾವೇ ಕೋರ್ಟು, ತಾವೇ ಜೇಲು ಸೂಪರೆಂಟರು. ಏಕೆ? ಆ ಊರಲ್ಲಿ ಪೆÇಲೀಸು, ಕೋರ್ಟು, ಜೇಲು ಇಲ್ಲವೆ? ಎಲ್ಲವೂ ಇವೆ. ಆದರೆ ಆ ಗಂಡುಗಲಿಗಳು ತಾವೇ ಸದ್ಯಕ್ಕೆ ಇವೆಲ್ಲವೂ ಆಗಿದ್ದಾರೆ. ಎಷ್ಟು ನೂರು ವರ್ಷಗಳ ಹಿಂದಿನ ಮಾತಿದು? ನೂರು ವರ್ಷಗಳ ಹಿಂದು ನಾನಿದ್ದೆನೇ? ಕೇವಲ ನಲವತ್ತು ವರ್ಷಗಳಾಗಿರಬಹುದು ಈ ಘಟನೆ ಜರುಗಿ.

ಆ ಹೆಣ್ಣಿನಿಂದ ಆದ ಅಪರಾಧವೇನು? ಈ ಪ್ರಶ್ನೆ ಅಸಂಬದ್ಧವಾದುದಲ್ಲ. ಇದನ್ನು ಉತ್ತರಿಸಬೇದಾದುದು ನನ್ನ ಕರ್ತವ್ಯ. ಕೇವಲ ಆ ಹೆಣ್ಣಿನ ಮೇಲಿನ ಸಹಾನುಭೂತಿಯಿಂದ ಆಕೆಯ ದೋಷವನ್ನು ಮುಚ್ಚಿಟ್ಟು ಅಕ್ರಮವಾಗಿ ಶಿಕ್ಷಿಸುತ್ತಿದ್ದ ಆ ಪುನೀತ ಪುಂಗವರನ್ನು ತೆಗಳುವುದು ತಪ್ಪು, ನಾನೂ ಒಪ್ಪಿಕೊಂಡೆ.

ಯಜಮಾನರಿಗೆ ಮದಿವೆಯಾಯಿತು. ಹುಲಿಯಂತಹ ಮಗ ಹುಟ್ಟಿದ. ಆ ಮಗನಿಗೆ ಇಪ್ಪತ್ತೈದು, ಮೂವತ್ತು ವಯಸ್ಸು ಆಗಿರಬೇಕು. ಅವನಿಗೂ ಹೆಂಡತಿ ಬಂದಳು, ಮಕ್ಕಳೂ ಆದುವು. ಆಗ ಯಜಮಾನರ ಹೆಂಡತಿ ತೀರಿಕೊಂಡಳು.
ಆಗ ಯಜಮಾನರಿಗೆ ಐವತ್ತು, ಐವತ್ತೈದು ಇರಬೇಕು. ಐವತ್ತೈದು ಆದ ಮಾತ್ರಕ್ಕೆ ಇವರಿಗೆ ಮದುವೆ ಬೇಡವೆ? ಸ್ವಂತ ಮನೆ ಇದೆ, ಸಾಕಷ್ಟು ಇರುವವರಿಗೆ ಮನೆಯಲ್ಲೊಬ್ಬ ಹೆಂಡತಿ ಇರದಿದ್ದರೆ ಚೆನ್ನಾಗಿರುತ್ತದೆಯೇ? ಮನೆಯಲ್ಲಿ ಎತ್ತು, ಎಮ್ಮೆ, ಹಸು ಇವೆ. ಇವುಗಳನ್ನೆಲ್ಲ ನೋಡಿಕೊಳ್ಳಲು ಹೆಂಡತಿ ಬೇಡವೆ? ಈ ಕೆಲಸಕ್ಕೆ ಹೆಂಡತಿಯೇ ಏಕೆ ಬೇಕು? ಒಂದು ಆಳನ್ನಿಟ್ಟುಕೊಂಡರೆ ಸಾಕು ಎಂದಾದರೂ ಅನ್ನಬಹುದು. ಅನ್ನುವವರದೇನು ಹೋಯಿತು? ಹೆಂಡತಿ ಎಲ್ಲಕ್ಕೂ ಆಗುತ್ತಾಳೆ, ಮುದುಕನಾಗಲಿ ಮನೆಯಲ್ಲಿ ಒಂದು ಹೆಂಡತಿ ಅನ್ನುವ ಪ್ರಾಣಿ ಬೇಡವೆ? ಹೆಂಡತಿಯೂ ಒಂದು ಪ್ರಾಣಿ, ಅಷ್ಟೇ!

ಈ ಮುದುಕನಿಗೆ ಹೆಣ್ಣು ಕೊಡುವವರಾರು? ಪ್ರಾಯಶಃ ಇದು ಈ ಕಾಲದಲ್ಲಿ ವಿದ್ಯಾವಂತ ಸಮಾಜದಲ್ಲಿ ಯಾರಾದರೂ ಕೇಳಬಹುದಾದ ಪ್ರಶ್ನೆ. ಅನೇಕ ಕಡೆ ಈಗಲೂ ಇಲ್ಲ ಎಂದರೂ ತಪ್ಪಿಲ್ಲ. ಐವತ್ತು ವಯಸ್ಸಿನ ವಿಧುರರು, ವಿದ್ಯಾವಂತರು, ಬುದ್ಧಿವಂತರು ಎಂದೆನಿಸಿಕೊಂಡವರು ಹದಿನೆಂಟು ಇಪ್ಪತ್ತು ವರ್ಷಗಳ ಕನ್ನೆಯರನ್ನು ಮದುವೆಯಾದ ಉದಾಹರಣೆಗಳು ಈಗಲೂ ಇವೆ. ಹೆಸರಿಸುವುದು ಮಾತ್ರ ಬೇಡ, ಕುಂಬಳಕಾಯಿ ಕದ್ದವನು ಭುಜ ಮುಟ್ಟಿಕೊಂಡು ನೋಡಲಿ ಬಿಡಿ.

ಬಡತನಕ್ಕೆ ಮಕ್ಕಳು ಹೆಚ್ಚು ಎಂಬುದು ಜನಸಾಮಾನ್ಯವಾದ ನಂಬಿಕೆ, ಜನದ ನಂಬಿಕೆ ಸಾಮಾನ್ಯವಾಗಿ ತಪ್ಪಿರುತ್ತದೆ ಎಂಬುದು ಸೂಕ್ಷ್ಮ ದೃಷ್ಟಿಗೆ ಕಾಣುವ ಸತ್ಯ. ಬಡತನದಿಂದ ಮಕ್ಕಳು ಹೆಚ್ಚಾಗಲಿಲ್ಲ, ಮಕ್ಕಳು ಹೆಚ್ಚಾದುದರಿಂದ ಬಡತನ ಬಂತು. ಈ ಸತ್ಯ ಅದೇಕೋ ಇಂದೂ ಅನೇಕರಿಗೆ ಹೊಳೆಯಲೊಲ್ಲದು. ಅಂತೂ ಅಲ್ಲೊಬ್ಬ ರಾಯರಿಗೆ ಮಕ್ಕಳು ಹೆಚ್ಚು. ಅದರಲ್ಲೊಂದು ಹಾಳು ಹೆಣ್ಣು ಬೇರೆ.

‘ಅಯ್ಯೋ ಹೆಣ್ಣು ಪೀಡೆ ಹುಟ್ಟಿತೇ?’

ಎಂದು ಉದ್ಗಾರ ತೆಗೆದು ಅಳುವ ವಿದ್ಯಾವಂತ ತಾಯ್ತಂದೆಗಳು ಈಗಲೂ ನಗರಗಳಲ್ಲಿರುವಾಗ, ಆ ಕಾಲದಲ್ಲಿ ಆ ಹಳ್ಳಿಗಳಲ್ಲಿ ಹೆಣ್ಣು ಹೆತ್ತವರ ಪರಿಸ್ಥಿತಿ ಇನ್ನೂ ಎಷ್ಟು ಕಠಿಣತರದ್ದಾಗಿರಬೇಕು? ಅಂದು ಹೆಣ್ಣು ಹುಟ್ಟಿದರೆ ಇಂದು ಕ್ಯಾನ್ಸರ್ ಹುಟ್ಟಿದಂತೆ. ರಾಯರಿಗೆ ಜೀವನದಲ್ಲಿ ಒಂದಾಶೆ – ಹೇಗಾದರೂ ಮಾಡಿ ಆದಷ್ಟು ಬೇಕ ಮಗಳನ್ನು ಯಾವನಾದರೊಬ್ಬ ‘ಯೋಗ್ಯ’ ವರನಿಗೆ ಕಟ್ಟಿ ಕೈತೊಳೆದುಕೊಂಡು ಪಾರಾಗಬೇಕು. ಆದ ಕಾರಣ ಅವರೂ ತಮ್ಮ ಮಗಳಾದ ಕನ್ನೆಗೆ ವರಗಳಿಗಾಗಿ ಹುಡುಕಾಡುತ್ತಿದ್ದರು.

ಮುಪ್ಪಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಆಶೆ – ಮಕ್ಕಳು ಆರೋಗ್ಯರಾಗಿ ಮುಂದು ಹಾಳು ಮಾಡಲು ಹೇರಳವಾಗಿ ಹಣವನ್ನು ಬಿಟ್ಟು ಸಾಯಬೇಕೆಂಬ ಆಶೆ ಕೆಲವರಿಗೆ. ಇನ್ನು ಕೆಲವರಿಗೆ ಕೀರ್ತಿಯನ್ನು ಬಿಟ್ಟು ಕಣ್ಮುಚ್ಚಬೇಕೆಂಬ ಹೆಬ್ಬಯಕೆ. ಲೋಕಕಲ್ಯಾಣಕ್ಕಾಗಿ ಆಸ್ಪತ್ರೆ, ಸ್ಕೂಲು ಮಾಡಿಟ್ಟು ಸತ್ತರೆ ಸ್ವಲ್ಪ ಜನಕ್ಕೆ ತೃಪ್ತಿ. ಅಂತೆಯೇ ಈ ವೃದ್ಧ ಯಜಮಾನರ ಆಕಾಂಕ್ಷೆ ಇನ್ನೊಂದು ಬಗೆಯದು – ಲೋಕೋಪಯೋಕಕ್ಕಾಗಿ ಒಂದು ಪುಟ್ಟ ವಿಧವೆಯನ್ನು ಬಿಟ್ಟು ಸಾಯಬೇಕೆಂಬ ಹಂಬಲವೋ ಏನೋ, ಪಾಪ! ಅಂತೂ ಯಜಮಾನರು ಆ ಪೂರ್ತಿ ಇಳಿ ವಯಸ್ಸಿನಲ್ಲಿ – ಹುಲಿಯಂತಹ ಮಗ, ಸೊಸೆ, ಮೊಮ್ಮಕ್ಕಳಿದ್ದಾಗಲೂ ಮದುವೆಯಾಗಲು ಮನಸ್ಸು ಮಾಡಿದರು. ಹೆಂಣಿನ ತಂದೆಯಾಗಿದ್ದ ಆ ರಾಯರಿಗೂ ಬಾಯಿ ನೀರೊಡೆಯಿತು. ಅಷ್ಟಿಷ್ಟು ಆಸ್ತಿ, ಕೈಯಲ್ಲಿ ಹುದ್ದೆ, ಸಮಾಜದಲ್ಲಿ ಒಂದು ಹಿರಿಯ ಸ್ಥಾನ ಇರುವ ಆ ಯಜಮಾನರು ತಮಗೆ ಅಳಿಯಂದಿರಾಗುವುದು ತಮಗೇ ಹೆಮ್ಮೆ ಅಲ್ಲವೆ?

ಮದುವೆ ಆಗಿ ಹೋಯಿತು – ಯೋಗ್ಯ ವರನ (ವರಾಹನ) ವಯಸ್ಸು ಐವತ್ತೈದು, ಕನ್ಯೆಯ ವಯಸ್ಸು ಒಂಭತ್ತು, ಹೆಚ್ಚಾದರೆ ಹತ್ತು, ಗಂಡು ಮುದಿ ಆಗುವುದೇ ಇಲ್ಲವೆಂದಲ್ಲವೆ ಆಗಿನ ಜನರ ತಿಳುವಳಿಕೆ? ಎರಡು ಹೆತ್ತರಾಯಿತು, ಹೆಣ್ಣು ಬೇಗ ಮುದಿಯಾಗಿ ಹೋಗುತ್ತದೆ. ಆದರೆ ವಯಸ್ಸು? ಅದರ ಆಶೆ ಆಕಾಂಕ್ಷೆಗಳು, ಜೀವನದ ಬಯಕೆಗಳು? ಮನದ ಆಳದಲ್ಲಿ ಹುದುಗಿರುವ ಇಚ್ಛೆ ಕಾಮನೆಗಳು? ಇಷ್ಟೆಲ್ಲ ಯೋಚಿಸುವ ಗೋಜಿಗೆ ಯಾರು ಹೋಗುತ್ತಾರೆ? ಹೆಣ್ಣಿಗೆ ಆತ್ಮವಿಲ್ಲ ಎಂದು ಭದ್ರವಾಗಿ ನಂಬುವ ಉತ್ತಮ ಶ್ರೇಷ್ಠ ಜಾತಿಯವರಲ್ಲವೆ ಅವರು?

ಆ ಪುಟ್ಟ ಹೆಂಡತಿಯ ಗಂಡನಾದ ವೃದ್ಧನು ಯೌವನದ ಮಗನೊಂದಿಗೆ ಒಂದೇ ಮನೆಯಲ್ಲಿರುವುದಾದರೂ ಹೇಗೆ? ಒಂದಿದ್ದ ಮನೆ ಎರಡಾದವು. ಪ್ರಾಯಶಃ ಇದರ ಉಪಯೋಗ ಯಾರಿಗೋ ಆಯಿತು.

ಅಮ್ಮನವರು ಪಟ್ಟಕ್ಕೆ ಬರುವ ಹೊತ್ತಿಗೆ ಅಯ್ಯನವರು ಚಟ್ಟವನ್ನೇರಿದರು ಎಂಬುದು ಒಂದು ಗಾದೆ ಮಾತು. ಇಲ್ಲಿ ಹಾಗಾಗಲಿಲ್ಲ, ಇದು ಸುಳ್ಳಾಯಿತು, ಯಜಮಾನರು ಸಾಯಲಿಲ್ಲ, ಆದರೆ ಬದುಕಿಯೂ ಸತ್ತಂತಿದ್ದರು. ಕಣ್ಣನ್ನು ಮುಚ್ಚಿಕೊಳ್ಳಲು ದೇವರು ಕಣ್ಣಿಗೆ ರೆಪ್ಪೆಯನ್ನೇಕೆ ದಯಪಾಲಿಸಿದ್ದಾನೆ?

ಹೆಣ್ಣಿಗೆ ಶೀಲ ಮುಖ್ಯ ಎಂಬುದು ಎಲ್ಲರ ಅಭಿಪ್ರಾಯ ಹೌದು. ಆದರೆ ಗಂಡಿಗೆ? ಈ ಪ್ರಶ್ನೆ ಅನೇಕರಿಗೆ ಅಷ್ಟು ರುಚಿಸಲಾರದೇನೊ? ಏಕೆಂದರೆ ಹೆಣ್ಣಿಗೆ ಪತಿಯೇ ದೇವರು. ದೇವರು ಅಂದ ಮೇಲೆ ಮುಗಿಯಿತು. ಆತನ ಶೀಲದ ಪ್ರಶ್ನೆಗೆ ಎಳ್ಳಷ್ಟೂ ಇಂಬು ಇಲ್ಲ. ಆಗಲಿ, ವಾದಕ್ಕಾಗಿ ಇವೆಲ್ಲ ಹೆಡ್ಟ ಮಾತುಗಳನ್ನೂ ತಾತ್ಕಾಲಿಕವಾಗಿ ಒಪ್ಪಿಕೊಳ್ಳೋಣ. ಆದರೆ ಇನ್ನೊಂದು ಮಾತು ಹೆಣ್ಣಿಗೆ ಶೀಲ ಮುಖ್ಯ ನಿಜ, ಆದರೆ ಅದು ಶೀಲದಿಂದ ಬಾಳಲು ಸಾಧ್ಯವಾಗುವಂತಹ ಸನ್ನಿವೇಶವನ್ನಾದರೂ ಸೃಷ್ಟಿಸಿ ಕೊಡುವುದು ಸಮಾಜದ ಕರ್ತವ್ಯವಲ್ಲವೇ? ತಾತನ ವಯಸ್ಸಿನ ಗಂಡ, ಮೊಮ್ಮಗಳ ವಯಸ್ಸಿನ ಹೆಂಡತಿ, ಮೇಲೆ ಶೀಲದ ಬಗ್ಗೆ ದೀರ್ಘ ಉಪನ್ಯಾಸ? ಸತಿ ಸಾವಿತ್ರಿಯ ಪುರಾಣ? ಪತಿವ್ರತೆಯರ ಕತೆಗಳು? ಹರಿಕಥೆ ಕೀರ್ತನೆಗಳು ಪಾಪ!

ಸಾಕಿದ ನಾಯಿಗೆ ಸರಿಯಾಗಿ ಅನ್ನ ಹಾಕದಿದ್ದರೆ ಅದು ದೊರೆತ ಏನನ್ನಾದರೂ ತಿಂದು ಹೊಟ್ಟೆ ತುಂಬಿಕೊಳ್ಳುತ್ತದೆ. ಮುದಿ ಯಜಮಾನರ ಪುಟ್ಟ ಹೆಂಡತಿಯ ಕತೆಯೂ ಇದೇ ಆಯಿತು. ಅರವತ್ತರತ್ತ ನೋಡುತ್ತಿದ್ದ ಗಂಡ ಹದಿನೈದರ ಯೌವನದ ಹೊಸ್ತಿಲಲ್ಲಿ ಹೆಜ್ಜೆ ಇಡುತ್ತಿದ್ದ ಹೆಂಡತಿಗೆ ಅದೆಷ್ಟು ಗಂಡ ಆದಾನು? ನಾಯಿ, ಅದು ಇದು ತಿನ್ನಲು ಆರಂಭವಾಯಿತು – ಕಳವಿನಿಂದ. ಪ್ರಾರಂಭದಲ್ಲಿ ಕಳವಿನಿಂದ, ಅನಂತರ ಗಂಡನೇ ‘ಮರ್ಯಾದೆ’ಯಾಗಿ ಅನುಕೂಲಗಳನ್ನು ಮಾಡಿಕೊಟ್ಟ. ಆದರೂ ಆ ಹುಲಿಯಂತಹ ಮಗನ ಭಯ ಮಾತ್ರ ಎಲ್ಲರಿಗೂ ಇತ್ತು.

ಒಂದು ದಿನ ಆ ಮಗನೂ ಕಾಲವಶನಾದ. ಇದರಿಂದಾಗಿ ಆತನ ಪುಟ್ಟ ಚಿಕ್ಕಮ್ಮನ ಹಾದರದ ರೈಲಿಗೆ ಹಸಿರು ದೀಪ ತೋರಿಸಿದಂತಾಯಿತು. ಸರ್ವೇಜನಾಃ ಸುಖಿನೋಭವಂತು! ಪುಂಪಶುಗಳು ಡಾಗಾಡಂಗುರ ಮಡಿಯಿಂದ ಬಂದು ಕಾಮಕೇಳಿಯನ್ನು ಮುಗಿಸಿಕೊಂಡು ಮಡಿಯಿಂದ ಮನೆಗೆ ತೆರಳಿದುವು. ಮಕ್ಕಳಾದವು. ಆ ಪುಟ್ಟ ಹೆಂಡತಿಯ ಕತೆ ಊರಿಗೇ ಗೊತ್ತು, ಗೊತ್ತಿಲ್ಲವೇನೋ ಎಂಬಂತೆ ಆಕೆಯ ಭೂಪ ಗಂಡನ ಗತ್ತು.

ಗಂಡನಲ್ಲದ ಇನ್ನೊಬ್ಬನನ್ನು ತೆಗೆದುಕೊಂಡ ಹೆಣ್ಣಿಗೆ ಅವನು, ಇವನು ಎಂಬ ಕಟ್ಟಳೆ ಏಕೆ? ಜೀವ ಬಯಸಿದಂತೆಲ್ಲ ಹೋರಿಗಳು ಬದಲಾದವು, ಅದು ಹಸುವಿನ ಇಷ್ಟ. ಆ ಎತ್ತು ಬೇಡ ಎಂದನ್ನುವ ಅಧಿಕಾರ ಇನ್ನೊಂದು ಎತ್ತಿಗಿಲ್ಲ. ವೈವಿಧ್ಯತೆಯೇ ಬದುಕಿನ ಮಸಾಲೆ ಎಂಬ ತತ್ತ್ವಕ್ಕೆ ಬಂದು ನಿಂತಿತು ಆ ಹೆಣ್ಣು. ಊರಿಗೆಲ್ಲ ಗೊತ್ತಿದ್ದ ಈ ಗುಟ್ಟನ್ನು ಯಾರೂ ರಟ್ಟು ಮಾಡುವ ಗೋಜಿಗೆ ಹೋಗಲಿಲ್ಲ.

ಹೆಣ್ಣಿಗೆ ಶೀಲ ಮುಖ್ಯ ಎಂದು ಯಾರಾದರೂ ಹೇಳಿದರೆ ಆ ಮಾತಿಗೆ ಒಂದೇ ಅರ್ಥ ಎಂದು ಕಾಣುತ್ತದೆ – ಹಾಗೆಂದು ಹೇಳುವವನ ಹೆಂಡತಿಗೆ ಮಾತ್ರ ಶೀಲ ಮುಖ್ಯ! ಉಳಿದವರ ಹೆಂಡಂದಿರೊಡನೆ ಚಕ್ಕಂದವಾಡುವವರೇ ಈ ಮಾತನ್ನು ಹೇಳುವುದು ಹೆಚ್ಚು.

ಕಾಲ ಉರುಳಿತು. ಆ ಹಾದರದ ಹೆಣ್ಣಿನ ಕತೆ ಏನೂ ಬದಲಾಗಲಿಲ್ಲ. ಆ ಹೆಣ್ಣಿಗೂ ವಯಸ್ಸು ಕೊಂಚ ಇಳಿಮುಖವಾಗುತ್ತ ಬಂತು. ಮುದಿಗಂಡ ಇಂದೋ ನಾಳೆಯೋ ಸತ್ತಾನು ಎಂದಾಕೆಯ ಎಣಿಕೆ. ಆದ ಕಾರಣ ಹೊಸದಾಗಿ ಸಿಕ್ಕಿದ ಒಬ್ಬ ಹಂಗಾಮಿ ಗಂಡನೊಂದಿಗೆ ದೂರದ ಊರಿಗೆ ಪರಾರಿಯಾಗುವ ಹೊಂಚು ಹಾಕಿದಳು. ನಡುರಾತ್ರಿಯಲ್ಲಿ ಮನೆಯಿಂದ ಹೊರಬಿದ್ದಳು ಕೂಡ.

ಇದರ ವಾಸನೆ ಊರಿನ ಮರ್ಯಾದಸ್ತ ಸದ್ಗøಹಸ್ಥರ ಮೂಗಿಗೆ ಅದು ಹೇಗೋ ಬಡಿಯಿತು. ಆ ರಾತ್ರಿಯಲ್ಲಿಯೇ ಕೈದೀಪಗಳನ್ನು ಹಿಡಿದು ಊರೆಲ್ಲ ಬಾಚಿಬಿಟ್ಟರು. ಕಡೆಗೂ ಆ ಹಾದರಗಿತ್ತಿ ಇವರ ಕೈಗೆ ಸಿಕ್ಕುಬಿದ್ದಳು. ಮುನಿಸಿಪಾಲಿಟಿಯವರು ಹುಚ್ಚು ನಾಯಿಯನ್ನು ಹಿಡಿದೆಳೆದು ತರುವಂತೆ ಹಿಡಿದು ತಂದರು. ಕೋಣೆ ಯೊಳಕ್ಕೆ ಕೂಡಿ ದನಕ್ಕೆ ಹೊಡೆಯುವಂತೆ ಹೊಡೆಯಲಾರಂ ಭಿಸಿದರು. ಆರು ಜನ ಗಂಡುಗಳು ಬೇಕೇ ಈ ಮಹಾ ಕಾರ್ಯಕ್ಕೆ?
ಕಡೆಯಲ್ಲಿ ಒಬ್ಬರ ಬಾಯಿಂದ ಬಂದ ಉದ್ವೇಗದ ವಾಣಿ ಸಂದರ್ಭವನ್ನು ಸ್ಪಷ್ಟ ಮಾಡಿತು.

“ಕೀಳು ಜಾತೀ ಸೂಳೇಮಗನ ಜತೆ ಓಡಿ ಹೋಗ್ತೀಯಾ?”

ಎಂತಹ ಚಿನ್ನದಂತಹ ಮಾತು? ಮಾಡುವ ಕೆಲಸ ಎಷ್ಟೇ ಕೀಳಿರಲಿ ಆದರೆ ಆ ಕೆಲಸ ಕೀಳು ಜಾತಿಯವನೊಂದಿಗೆ ಆಗುವುದುಂಟೆ?

ಇಲ್ಲಿ ಇನ್ನೊಂದು ಸತ್ಯಾಂಶವನ್ನು ಹೇಳದಿದ್ದರೆ ಕ್ರಿಯಾಲೋಪದ ಮಹಾಪರಾಧವಾಗುವ ಅಪಾಯವಿದೆ. ಆ ಹಾದರದ ಹೆಣ್ಣನ್ನು ಹೊಡೆ ಯುತ್ತಿದ್ದ ಆ ಆರೂ ಗಂಡುಗಳಿಗೂ ಒಮ್ಮಿಲ್ಲೊಮ್ಮೆ ಅದೇ ಹೆಣ್ಣಿ ನೊಂದಿಗೆ ದೈಹಿಕ ಸಂಬಂಧವಿತ್ತು. ಇಲ್ಲದಿದ್ದಲ್ಲಿ ಇಷ್ಟು ರೋಷಕ್ಕೇನು ಕಾರಣ? ಉತ್ತುಮ ಕುಲದ ಪುಂಗವ ನೀಚರು ಇಷ್ಟು ಇರುವಾಗ ನೀಚ ಜಾತಿಯವನೊಟ್ಟಿಗೆ ಹೋಗುವುದನ್ನು ಅವರು ಸಹಿಸಲು ಸಾಧ್ಯವೇ?

ನೀತಿಗೆ ಬೆಂಕಿ ಬಿತ್ತು, ಜಾತಿ?

ಇದೆಲ್ಲವೂ ಆಯಿತು, ಈ ಕತೆಗೂ ನಿಮ್ಮ ಭಯಾಗ್ರಫಿಗೂ ಏನು ಸಂಬಂಧ ಎಂಬುದು ಯಾರೂ ಕೇಳಬಹುದಾದ ಪ್ರಶ್ನೆ. ಸಂಬಂಧ ಇದೆ, ನಿಕಟವಾದ ಸಂಬಂಧವೂ ಇದೆ, ಆ ಹೆಂಣು ನನಗೆ ಸನಿಯದ ಬಂಧು, ಆ ಆರು ಗಂಡುಗಳಲ್ಲಿ ಕೆಲವರು ನನಗೆ ಸನಿಯದ ಬಂಧುಗಳು.

ಇಲ್ಲಿ ಆದುದು ಎಲ್ಲಿಯೂ ಆಗಬಹುದು, ಮಾನವ ಮನಸ್ಸು ಎಲ್ಲ ಕಡೆಗೂ ಒಂದೇ!

(Originally published on December 24, 2011)

Leave a comment

Your email address will not be published. Required fields are marked *